ಸುಸ್ಥಿರ ಬದುಕಿಗೆ ಒಲಿದ ಕ್ಷೀರಸಾಗರ
ಎತ್ತ ನೋಡಿದರತ್ತ ಹಚ್ಚ ಹಸಿರು.ನಾನಾ ಜಾತೀಯ ಹಣ್ಣಿನ ಗಿಡಗಳು. ಅಲ್ಲಲ್ಲಿ ಮುರಿದು ಬಿದ್ದ ದೊಡ್ಡ ದೊಡ್ಡ, ಹಣ್ಣಾದ ಪಚ್ಚಾಬಾಳೆ ಗೊನೆಗಳು. ಸುಮಾರು ನಾಲ್ಕು ಎಕರೆ ಪ್ರದೇಶದ ಸುತ್ತಲ್ಲೂ ಸೋಲಾರ್ ಬೇಲಿ. ತೋಟದ ಅಂಚಿನಲ್ಲಿ ಗ್ಲಿರಿಸಿಡಿಯಾ,ಸಿಲ್ವರ್,ಅಕೇಶಿಯಾ ಹೀಗೆ ನಾನಾ ಜಾತಿಯ ಗಿಡಗಳು. ಹೀಗೆ ತಾವು ಕಳೆದ ನಾಲ್ಕು ವರ್ಷದಿಂದ ಕಟ್ಟಿದ ಹಸಿರು ತೋಟದ ಬಗ್ಗೆ ಪ್ರೀತಿಯಿಂದ, ಅಕ್ಕರೆಯಿಂದ ಪ್ರತಿಗಿಡವನ್ನು ತೋರಿಸುತ್ತಾ ಅದರ ಬಗ್ಗೆ ವಿವರಿಸುತ್ತಾ ನಡೆಯುತ್ತಿದ್ದರು ಕ್ಷೀರಸಾಗರ.
ಅಸಂಘಟಿತ ಕಾಮರ್ಿಕರು, ಭೂ ಸುಧಾರಣೆಯ ಬಗ್ಗೆ ಬೆಂಗಳೂರಿನ ವೈಟ್ಫೀಲ್ಡ್ ಸುತ್ತಮುತ್ತ ಸಿಯೆಡ್ಸ್ ಸಂಸ್ಥೆಯೊಂದಿಗೆ ಸೇರಿಕೊಂಡು ಎಂಟು ವರ್ಷ ಕೆಲಸಮಾಡಿರುವ ಕ್ಷಿರಸಾಗರ ಎಚ್.ಡಿ.ಕೋಟೆ ತಾಲೂಕಿನ ಕಬಿನಿಕಾಲೋನೊಯವರು.ಮಾನಸ ಗಂಗೋತ್ರಿಯಲ್ಲಿ ಮನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಹಾರಾಜ ಕಾಲೇಜಿನಲ್ಲಿ ದೇವನೂರ ಮಹಾದೇವ ಅವರ ಸಹಪಾಠಿಯಾಗಿದ್ದ ಸಾಗರ ತಮಗಿರುವ ಪರಿಸರ ಕಾಳಜಿಯಿಂದಾಗಿಯೇ ಗಿರಿಜನರೊಟ್ಟಿಗೆ ಬಹುಕಾಲ ಕೆಲಸ ಮಾಡಿದರು.ಮೈಸೂರು ಜಿಲ್ಲೆಯಲ್ಲಿ ನಡೆದ ಸಂಪೂರ್ಣ ಸಕ್ಷಾರತ ಆಂದೋಲನದಲ್ಲಿ ಕಾರ್ಯಕ್ರಮ ಸಂಯೋಜನೆಯ ಸಂಪೂರ್ಣ ಹೊಣೆಹೊತ್ತಿದ್ದ ಕ್ಷೀರಸಾಗರ ಗಿರಿಜನರ ಬದುಕು ಬವಣೆ ಕುರಿತು "ಜೇನು ಆಕಾಶದ ಅರಮನೆಯೂ" ಎಂಬ ಕಾದಂಬರಿಯನ್ನು ಭೂ ಸುಧಾರಣೆ ಕುರಿತು "ದಿಕ್ಕು ತಪ್ಪಿದ ಕನರ್ಾಟಕ ಭೂ ಸುಧಾರಣೆ" ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ. ವಿಶೇಷವಾಗಿ ಪಕ್ಷಿ ಮತ್ತು ಪರಿಸರವನ್ನು ಕುರಿತು ಅನೇಕ ಲೇಖನಗಳನ್ನು ಬರೆದಿದ್ದಾರೆ.1984 ರಿಂದ 2002 ರವರೆಗೆ ಫೆಡಿನ ವಿಕಾಸ (ವಿವಿಧ ಕಾಡುಕುರುಬರ ಸಂಘ) ದೊಂದಿಗೆ ಸೇರಿಕೊಂಡು ವಿವಿಧ ಸಂಘಟನೆಗಳೊಂದಿಗೆ ಸೇರಿ ಸುಮಾರು ಎಂಟು ಸಾವಿರ ಎಕರೆ ಭೂಮಿಯನ್ನು ಕಾಡು ಕುರುಬರಿಗೆ ಸಿಗುವಂತೆ ಮಾಡಿದ್ದಾರೆ. ಸಧ್ಯ ಈಗ ಗದ್ದಿಗೆ-ಎಚ್.ಡಿ.ಕೋಟೆ ಮುಖ್ಯರಸ್ತೆಯಲ್ಲಿ ಬರುವ ವಡ್ಡರಗುಡಿ ಬಳಿಯ ತಮ್ಮ ನಾಲ್ಕು ಎಕರೆ ಹಸಿರು ಸಾವಯವ ತೋಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು ವಿವಿಧ ಪ್ರಯೋಗದಲ್ಲಿ ನಿರತರಾಗಿದ್ದಾರೆ.
ಅವರೊಂದಿಗೆ ನಾವು ತೋಟದಲ್ಲಿ ನಿಧಾನವಾಗಿ ಹೆಜ್ಜೆ ಹಾಕುತ್ತಾ ಹೋಗುತ್ತಿದ್ದಂತೆ, ಪಕ್ಕನೇ ಬಿಳಿಯ ಬಣ್ಣದ ಹಕ್ಕಿಯೊಂದು ನಮ್ಮ ಕಣ್ಣಮುಂದೆ ಪುರ್ರನೇ ಹಾರಿ ಹೋಯಿತು.ತಕ್ಷಣ ಅಲ್ಲೇ ನಿಂತ ಕ್ಷೀರಸಾಗರ ತೋಟವನ್ನು ಬಿಟ್ಟು ಆ ಹಕ್ಕಿಯ ಬಗ್ಗೆ ಮಾತನಾಡತೊಡಗಿದರು. ಆ ಹಕ್ಕಿಯನ್ನು ನೋಡಿದ್ರಾ, ಅದು ವೈಟ್ ಬ್ರಾಡ್ ಬುಲ್ ಬುಲ್ ಅಂತ ಅದರ ಹೆಸರು. ಅದು ಇಲ್ಲಿ ಕಾಣಸಿಗುವುದು ಅಪರೂಪ. ಅದು ಇಲ್ಲಿಗೆ ಯಾಕೆ ಬಂದಿರಬಹುದು.ಬಹುಶಃ ಬಾಳೆಯ ಹಣ್ಣುಗಳು ಕೊಳೆತು ಬಿದ್ದಿರುವ ಹಣ್ಣಗಳನ್ನು ತಿನ್ನಲು ಬಂದಿರಬಹುದು.ಮುರ್ನಾಲ್ಕು ದಿನಗಳಿಂದ ನೋಡುತ್ತಿದ್ದೇನೆ ಅದರ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸಬೇಕು ಎಂದರು.
ಪೂರ್ಣಚಂದ್ರತೇಜಸ್ವಿಯವರಂತೆ ಅವರಿಗಿದ್ದ ಪರಿಸರ ಕುತೂಹಲವನ್ನು ಗಮನಿಸಿದ ನಾವು ಸಾರ್ ಇದೆಲ್ಲಾ ಹೇಗಾಯ್ತು, ನೀವು ಕಟ್ಟಿದ ತೋಟದ ಬಗ್ಗೆ ಹೇಳ್ತೀರಾ ಅಂತ ಮೊದಲ ಬಾರಿಗೆ ಮಾತಿಗೆಳೆದವು, ಅವರು ಹೇಳುತ್ತಾ ಹೋದರು...
ಇದು ಸಂಪೂರ್ಣ ನೈಸಗರ್ಿಕ ಕೃಷಿ ತೋಟ. ಇಲ್ಲಿ ಮಾನವ ಮತ್ತು ಯಂತ್ರಗಳ ಹಸ್ತಕ್ಷೇಪ ತುಂಬಾ ಕಡಿಮೆ. ಆರಂಭದಲ್ಲಿ ಗಿಡ ನೆಡುವಾಗ ದನದ ಗೊಬ್ಬರದ ಜೊತೆಗೆ ಬೇವಿನ ಹಿಂಡಿ, ಟ್ರೈಕೋಡಮರ್ಾ ಜೀವಾಣುಗಳನ್ನು ಮಿಶ್ರಣಮಾಡಿ ಪ್ರತಿ ಗಿಡಕ್ಕೂ ನೀಡಲಾಗಿದೆ. ನಂತರ ಮಣ್ಣಿಗೆ ಮುಚ್ಚಿಗೆಯಾಗಿ ಉರುಳಿಯನ್ನು ಭಿತ್ತಿ,ಅದು ಹೂವು ಬಿಡುವ ಹಂತದಲ್ಲಿ ಅಲ್ಲೇ ಉಳುಮೆ ಮಾಡಿ ಮಣ್ಣಿಗೆ ಸೇರಿಸುತ್ತಾ ಬಂದೆ.ಭೂಮಿಯಲ್ಲಿ ತೇವಾಂಶ ಕಾಪಾಡಿಕೊಂಡು ಜೀವಾಣುಗಳ ಸಂಖ್ಯೆಯನ್ನು ಹೆಚ್ಚಿಸಲು ಈ ಕ್ರಮ ಅನುಸರಿಸಲಾಯಿತು.
ಕಳೆದ ಐದು ವರ್ಷಗಳಿಂದ ನಮ್ಮ ಭೂಮಿಗೆ ಯಾವುದೇ ವಿಷಕಾರಿ ಪದಾರ್ಥಗಳನ್ನು ಸೇರಿಸಿಲ್ಲ. ನಮ್ಮದು ಸಂಪೂರ್ಣ ಸಾವಯವ ಕೃಷಿ ತೋಟ.ಇಲ್ಲಿ 140 ತೆಂಗು,1200 ಅಡಿಕೆ, 200 ಸಪೋಟ,125 ನಿಂಬೆ,10 ಬಟರ್ ಪ್ರೂಟ್, 15 ಮೂಸಂಬಿ,12 ಕಿತ್ತಳೆ,15 ವಿವಿಧ ತಳಿಯ ಮಾವು, 500 ಮೆಣಸು ಇದರೊಂದಿಗೆ ವಾಣಿಜ್ಯ ಬೆಳೆಗಳಾಗಿ ನುಗ್ಗೆ ಮತ್ತು ಪಪ್ಪಾಯಿ ಗಿಡಗಳನ್ನು ಸಮಿಶ್ರ ಪದ್ಧತಿ ವಿಧಾನದಲ್ಲಿ ಬೆಳೆಯಲಾಗಿದೆ.
ಇದರಿಂದ ಲಕ್ಷಾಂತರ ಆದಾಯ ಬರುತ್ತಿರಬಹುದು ಎನ್ನುವುದು ನಿಮ್ಮ ನಿರೀಕ್ಷೆ ಆಗಿದ್ದರೆ. ಅದು ಸುಳ್ಳು. ಇದುವರೆಗೂ ನಯಾ ಪೈಸೆ ಆದಾಯ ಬಂದಿಲ್ಲ.ಆರೋಗ್ಯ ಮಾತ್ರ ಸುಧಾರಿಸಿದೆ.ಕಳೆದ ಐದು ವರ್ಷದಿಂದ ಇಲ್ಲಿಯವರೆಗೆ ಒಟ್ಟು ಸುಮಾರು 12 ಲಕ್ಷ ರೂಪಾಯಿಗಳನ್ನು ಖಚ್ಚರ್ುಮಾಡಿದ್ದೇನೆ. ಆರಂಭದಲ್ಲಿ ನೀರಿಗಾಗಿ ಒಂದೆರಡು ಬೋರ್ವೆಲ್ ಕೊರೆಸಿದೆ. ನೀರು ಬರಲಿಲ್ಲ. ಕೊನೆಗೆ ಧೈರ್ಯಮಾಡಿ ಮತ್ತೊಂದು ಬೊರ್ವೆಲ್ ಕೊರೆಸಿದೆ. ಅದರಲ್ಲಿ ಸುಮಾರು ಎರಡುವರೆ ಇಂಚು ನೀರು ಬಂತು. ಇಡೀ ನಾಲ್ಕು ಎಕರೆ ತೋಟದಲ್ಲಿ ಬೆಳೆದು ನಿಂತಿರುವ ಸುಮಾರು ಹದಿನೈದು ವಿವಿಧ ಜಾತಿಯ ಗಿಡಮರಗಳಿಗೆ ಈ ಒಂದೇ ಬೋರ್ವೆಲ್ನಿಂದ ಹನಿ ನೀರಾವರಿಯಲ್ಲಿ ನೀರು ಕೊಡುತ್ತಿದ್ದೇನೆ.ಹನಿ ನೀರಾವರಿಗಿಂತ ಸ್ಪಿಂಕ್ಲರ್ ಪದ್ಧತಿ ಅಳವಡಿಸಿಕೊಂಡರೆ ಒಳ್ಳೆಯದು ಎನ್ನುವುದು ಈಗ ಅನುಭವಕ್ಕೆ ಬಂದಿದೆ.
ಸೋಲಾರ್ ಬೇಲಿ ನಿಮರ್ಾಣ.ಬೋರ್ವೆಲ್ ಮತ್ತು ಬೇರೆ ಬೇರೆ ನರ್ಸರಿಗಳಿಂದ ತಂದು ನೆಟ್ಟಗಿಡಗಳು ಎಲ್ಲಾ ಸೇರಿ 12 ಲಕ್ಷ ರೂಪಾಯಿ ವೆಚ್ಚಮಾಡಿದ್ದೇನೆ. ಈ ವರ್ಷದಿಂದ ಆದಾಯ ನಿರೀಕ್ಷೆಮಾಡಬಹುದು ಎಂದು ಕ್ಷೀರಸಾಗರ ನಕ್ಕರು.
ಬಾಳೆ,ಟೊಮಟೋ,ಹರಿಶಿನ ಹೀಗೆ ನಾನಾ ತೋಟಗಾರಿಕೆ ಬೆಳೆದು ಮೂರು ತಿಂಗಳಲ್ಲಿ ಲಕ್ಷಾಂತರ ರೂಪಾಯಿ ಆದಾಯಗಳಿಸುವ ರೈತರ ಬಗ್ಗೆ ಕೇಳಿದ್ದ ನಮಗೆ ಐದು ವರ್ಷಗಳಿಂದಲ್ಲೂ ನಯಾಪೈಸೆ ಆದಾಯ ಇಲ್ಲದೇ ಬೇಸಾಯ ಮಾಡುತ್ತಿರುವ ಸಾಗರ ನಮ್ಮ ಕಣ್ಣಿಗೆ ವಿಚಿತ್ರವಾಗಿ ಕಂಡರು.ಆದಾಯವಿಲ್ಲದ ಬೇಸಾಯ ಯಾಕೆ? ಖುಶಿಗಾಗಿ, ಫ್ಯಾಶನ್ಗಾಗಿ ಕೃಷಿಮಾಡಿದರೆ ರೈತ ಬದುಕಲು ಸಾಧ್ಯವೇ ಎನ್ನುವುದು ನಮ್ಮ ಪ್ರಶ್ನೆಯಾಗಿತ್ತು.
ಕ್ಷೀರಸಾಗರ್ ವಿವರಿಸುತ್ತಾ ಹೋದರು... ನೋಡಿ ನಾಲ್ಕು ಎಕರೆ ಜಮೀನಿನಲ್ಲಿ ಒಂದು ಕುಟುಂಬ ನೆಮ್ಮದಿಯಿಂದ ಜೀವನ ಮಾಡುವಷ್ಟು ಆದಾಯ ಬಂದೇ ಬರುತ್ತದೆ. ಸುಸ್ಥಿರವಾದ ಕೃಷಿಮಾಡುವಾಗ, ಅದರಲ್ಲೂ ಯಾವುದೇ ರಾಸಾಯನಿಕ,ಕ್ರಮಿನಾಶಕಗಳನ್ನು ಬಳಸದೆ, ಹೊರಸುಳಿಗಳ ಹಂಗಿಲ್ಲದೇ ಜಮೀನಿನಲ್ಲೇ ಬೆಳೆದ ಸೆತ್ತೆ ಸೆದೆ, ಹಸಿರು ಗೊಬ್ಬರಗಳನ್ನು ಬಳಸಿಕೊಂಡು ವ್ಯವಸಾಯ ಮಾಡುವಾಗ ತತ್ಕ್ಷಣದ ಲಾಭವನ್ನು ನಿರೀಕ್ಷೆಮಾಡಬಾರದು.
ಹಾಗಂತ ಬೇಸಾಯಮಾಡುವ ಕುಟುಂಬ ನಷ್ಟಮಾಡಿಕೊಂಡು ಕೃಷಿ ಮಾಡಬೇಕಾಗಿಲ್ಲ.ಆರಂಭದಲ್ಲಿ ನಾನು ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ಮಾತು ಕೇಳಿಕೊಂಡು ಆದಾಯದಲ್ಲಿ ನಷ್ಟ ಅನುಭವಿಸಿದೆ.ಬಾಗಲಕೋಟ ಕೃಷಿ ವಿಶ್ವವಿದ್ಯಾನಿಲಯದವರ ನೂತನವಾಗಿ ಸಂಶೋದನೆ ಮಾಡಿದ್ದ ಭಾಗ್ಯ ತಳಿಯ 600 ನುಗ್ಗೆಗಿಡಗಳನ್ನು ನಾಟಿಮಾಡಿದೆ. ಗಿಡಗಳು ತುಂಬಾ ಹುಲುಸಾಗಿ ಚೆನ್ನಾಗಿ ಬಂದವು. ಆದರೆ 600 ಗಿಡದಲ್ಲಿ ಕೇವಲ ಹತ್ತೇ ಹತ್ತು ಗಿಡಗಳು ಮಾತ್ರ ಕಾಯಿ ಬಿಟ್ಟವು. ಹಾಗೇ ಸೂರ್ಯ ತಳಿಯ ಪಪ್ಪಾಯ ಗಿಡಗಳನ್ನು ಬೆಳೆದು ಹಣ್ಣು ಬಿಡದೇ ನಷ್ಟ ಅನುಭವಿಸಿದೆ.ತಳಿಯ ಆಯ್ಕೆಯಲ್ಲಿ ನಾನು ಸ್ವಲ್ಪ ಮುಂಜಾಗ್ರತೆ ವಹಿಸಿದ್ದರೆ ನಷ್ಟ ತಪ್ಪಿಸಿ ಆದಾಯಗಳಿಸಬಹುದಿತ್ತು.
ನನಗೆ ಬಾರಿ ಹೊಡೆತ ಕೊಟ್ಟದ್ದು ಬಾಳೆ. 2000 ಜಿ 9 ತಳಿಯ ಬಾಳೆಯನ್ನು ನಾಟಿಮಾಡಿ,ಸಾವಯವ ಪದ್ಧತಿಯಲ್ಲೇ ಬೆಳೆಸಿದೆ. ಗಿಡಗಳು ಸಮೃದ್ಧವಾಗಿ ಬೆಳೆದು,ಒಂದೊಂದು ಗೊನೆಗಳು ಕನಿಷ್ಠ 25 ರಿಂದ 30 ಕೆಜಿವರೆಗೂ ಬಂದವು. ಆದರೆ ಈ ಬಾರಿ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬಾಳೆಹಣ್ಣಿಗೆ ಕೇವಲ ಎರಡು ರೂಪಾಯಿ ಬೆಲೆಬಂತು.ಒಂದು ಗೊನೆಯನ್ನು ಕಡಿಯಲು ಆಗುವ ವೆಚ್ಚವೂ ಕೈಗೆ ಬರದಿದ್ದರೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವುದಾದರೂ ಹೇಗೆ?. ಅದಕ್ಕೆ ಒಂದಷ್ಟು ಗೊನೆಗಳನ್ನು ಗಿರಿಜನ ಮಕ್ಕಳ ಶಾಲೆಗೆ ಕಡಿದು ಸ್ವತಃ ನಾನೇ ತೆಗೆದುಕೊಂಡು ಹೋಗಿ ಕೊಟ್ಟು ಬಂದೆ. ಒಂದಷ್ಟು ಗೊನೆಗಳು ಗಿಡದಲ್ಲೇ ಹಣ್ಣಾಗಿ, ಕೊಳೆತು ಪಕ್ಷಿಗಳಿಗೆ ಆಹಾರವಾಗಿ ಮಣ್ಣಿಗೆ ಸೇರಿ ಒಳ್ಳೆಯ ಗೊಬ್ಬರವಾದವು.
ನೆನಪಿರಲಿ,ನಾನು ಇಡೀ ತೋಟವನ್ನು ನೋಡಿಕೊಳ್ಳಲು ಯಾವುದೇ ಕೂಲಿ ಆಳನ್ನು ಅವಲಂಬಿಸಿಲ್ಲ. ಗಿಡ ನೇಡುವಾಗ, ಗೊಬ್ಬರ ಹಾಕುವಾಗ ಅಗತ್ಯ ಬಿದ್ದಾಗಷ್ಟೇ ಆಳನ್ನು ಕರೆದುಕೊಳ್ಳುತ್ತೇನೆ. ಉಳಿದಂತೆ ತೋಟದಲ್ಲಿ ಮಾನವ ಹಸ್ತಕ್ಷೇಪ ಕಡಿಮೆ. ಶೂನ್ಯ ಬಂಡವಾಳದ ನೈಸಗರ್ಿಕ ಕೃಷಿ ಪ್ರತಿಪಾದಕ ಸುಭಾಷ್ ಪಾಳೇಕರ್ ಅವರ ಪ್ರಭಾವಕ್ಕೆ ಒಳಗಾಗಿ ಆರಂಭದ ಒಂದೆರಡು ವರ್ಷ ಗಿಡಗಳಿಗೆ ಜೀವಾಮೃತ ನೀಡಿದೆ. ನಾನು ಯಾವ ಹಸುಗಳನ್ನು ಇಲ್ಲಿ ಸಾಕದೇ ಇರುವುದರಿಂದ ಅದನ್ನು ಮುಂದುವರಿಸಲು ಕಷ್ಟವಾಗಿ ನಿಲ್ಲಿಸಿಬಿಟ್ಟೆ. ಈಗ ಅಗತ್ಯ ಬಿದ್ದಾಗ ಇಡೀ ತೋಟಕ್ಕೆ ಏಕದಳ, ದ್ವಿದಳ ಧಾನ್ಯಗಳನ್ನು ಮಿಶ್ರಣಮಾಡಿ ಭಿತ್ತಿ, ಅದನ್ನೇ ಹಸಿರು ಗೊಬ್ಬರವಾಗಿ ಪವರ್ ಟಿಲ್ಲರ್ನಿಂದ ಉಳುಮೆಮಾಡಿ ಭೂಮಿಗೆ ಸೇರಿಸಿಬಿಡುತ್ತೇನೆ.ಇದಲ್ಲದೇ ಭೂಮಿಯಲ್ಲಿ ಬೆಳೆಯುವ ಸೆತ್ತೆಸೆದೆ, ಗಿಡಗಳ ಎಲೆ ಎಲ್ಲವನ್ನು ಮಣ್ಣಿಗೆ ಮುಚ್ಚಿಗೆಯಾಗಿ ಬಳಸುತ್ತೇನೆ.ವರ್ಷಕ್ಕೆ ಒಂದು ಬಾರಿ ಕೊಟ್ಟಿಗೆ ಗೊಬ್ಬರ ಖರೀದಿಸಿ ಅದಕ್ಕೆ ಬೇವಿನಹಿಂಡಿ, ಟ್ರೈಕೋಡಮರ್ಾ ಜೀವಾಣುಗಳನ್ನು ಮಿಶ್ರಣಮಾಡಿ ಪ್ರತಿ ಗಿಡಗಳಿಗೂ ಕೊಡುತ್ತೇನೆ. ಉಳಿದಂತೆ ಇಲ್ಲಿ ಯಾವುದೇ ಕೆಲಸಗಳು ನಡೆಯುವುದಿಲ್ಲ.
ಈ ವರ್ಷದಿಂದ ಆದಾಯದ ನಿರೀಕ್ಷೆ ಇದೆ. ಪಚ್ಚಾಬಾಳೆ ಎರಡನೇ ಕೂಳೆಗೆ ಏನು ಖಚರ್ುಮಾಡದಿದ್ದರು ಚೆನ್ನಾಗಿದೆ. ಈ ಬಾರಿ ಕನಿಷ್ಟ ಕೆಜಿಗೆ 10 ರಿಂದ 12 ರೂಪಾಯಿ ಸಿಕ್ಕರೂ ಮೂರು ಲಕ್ಷ ರೂಪಾಯಿ ಆದಾಯ ಗ್ಯಾರಂಟಿ. ತೆಂಗು, ಅಡಿಕೆ, ನಿಂಬೆ, ಮೂಸಂಬಿ ಹೀಗೆ ನಾನಾ ಜಾತಿಯ ಹಣ್ಣಿನ ಗಿಡಗಳು ಉತ್ತಮ ಫಸಲು ಬಿಟ್ಟಿದ್ದು ಇವು ಇನ್ನುಮುಂದೆ ನಿರಂತರವಾಗಿ ಆದಾಯ ತಂದು ಕೊಡುವ ಮೂಲಗಳಾಗಿವೆ.
ನಮ್ಮ ರೈತರು ಕನಿಷ್ಟ ಐದು ವರ್ಷ ಹೆಚ್ಚಿನ ಆದಾಯ ನಿರೀಕ್ಷೆ ಮಾಡದೆ,ನೆಮ್ಮದಿಯ ಬದುಕಿಗಾಗುಷ್ಟು ಉತ್ಪನ್ನಗಳನ್ನಾ ಬೆಳೆದುಕೊಂಡು ಹೀಗೆ ಮಿಶ್ರ ಪದ್ಧತಿಯಲ್ಲಿ ಬೇಸಾಯ ಕ್ರಮ ರೂಢಿಸಿಕೊಂಡರೆ ಸುಸ್ಥಿರವಾದ ಬದುಕು ಕಟ್ಟಿಕೊಳ್ಳಬಹುದು. ಕಡಿಮೆ ಖಚರ್ುಮಾಡಿ, ನಿರಂತರವಾಗಿ ಆದಾಯಗಳಿಸುತ್ತಾ ಹೋಗಬಹುದು.ವಿಷಮುಕ್ತ ಆಹಾರ ಬೆಳೆಯುವ ಮೂಲಕ ಪರಿಸರವನ್ನು ಕಾಪಾಡಿಕೊಂಡು,ಉತ್ತಮ ಆರೋಗ್ಯವನ್ನು ಪಡೆಯಬಹುದು. ತಾವು ಬೇಸಾಯ ಮಾಡುವ ಭೂಮಿಯಲ್ಲಿ ಬೆಳೆಯಬಲ್ಲಂತಹ ಹಲವು ಬೆಳೆಗಳನ್ನು ಸಂಯೋಜಿಸಿ ಮಿಶ್ರ ಪದ್ಧತಿಯಲ್ಲಿ, ನೈಸಗರ್ಿಕ ವಿಧಾನದಿಂದ ಬೆಳೆದಾಗ ಮಾತ್ರ ರೈತ ಸಾಲಮುಕ್ತನಾಗಿ ನೆಮ್ಮದಿ ಕಂಡುಕೊಳ್ಳಬಹುದು ಎನ್ನುವುದು ಕ್ಷೀರಸಾಗರ ಅವರ ದೃಢವಾದ ಮಾತು. ಹೆಚ್ಚಿನ ಮಾಹಿತಿಗಾಗಿ 9481321246 ಸಂಪಕರ್ಿಸಬಹುದು. ಚಿನ್ನಸ್ವಾಮಿವಡ್ಡಗೆರ