ಬರದ ನಾಡಿಗೆ ಭರವಸೆಯ ಬೆಳಕಾದ ಕುಮಾರ
ಮೂರು ಎಕರೆ ಪ್ರದೇಶದಲ್ಲಿ ಬೇರೆ ಬೇರೆ ತಳಿಯ 130 ಸಪೋಟ, 90 ಮಾವು, 40 ಬೆಣ್ಣೆಹಣ್ಣು ಗಿಡಗಳು, 10 ಗಜನಿಂಬೆ, ಅಕರ್ಾ ಸಹನಾ ತಳಿಯ 30 ಸೀತಾಫಲ, 10 ಮೂಸಂಬಿ, 4 ನೇರಳೆ, ಒಂದು ಅಂಜೂರ ಗಿಡ, 25 ತೆಂಗಿನ ಮರಗಳು ಅರಳಿ ಬರಪೂರ ಫಸಲು ನೀಡುತ್ತಾ ಗಿಡಗಳ ಕೆಳಗೆ ಇಟ್ಟಿರುವ ಜೇನುಪೆಟ್ಟಿಗೆಗಳೂ ಆದಾಯದ ಮೂಲವಾಗಿ ಸುಸ್ಥಿರ ಸಮಗ್ರ ಕೃಷಿಗೆ ಮಾದರಿಯಾಗಿ ನೋಡುಗರ ಕಣ್ಮನ ಸೆಳೆಯುತ್ತಿವೆ.
ಚಾಮರಾಜನಗರ :ಗಣಿದಣಿಯ ದೌರ್ಜನ್ಯ, ಕೃಷಿ ಇಲಾಖೆಯ ಭ್ರಷ್ಟಚಾರದ ವಿರುದ್ಧ ಹೋರಾಟ. ಗೆಲುವು ಮತ್ತೆ ಸೋಲು. ವ್ಯವಸ್ಥೆಯ ಬಗ್ಗೆ ಬೇಸರ. ಆದರೂ ಭೂಮಿ ತಾಯಿ ಕೈಬಿಡಲಾರಳು ಎಂಬ ನಂಬಿಕೆ. ಇದು ಬರವನ್ನು ಮಣಿಸಿ ಹಸಿರು ಕ್ರಾಂತಿಮಾಡಿ ಕೃಷಿಯಲ್ಲಿ ಗೆದ್ದು ಮಾದರಿಯಾದ ಸ್ವಾಭಿಮಾನಿ ಯುವಕನ ಸಹಾಸಗಾಥೆ.ಚಾಮರಾಜನಗರ ಜಿಲ್ಲೆ ಸಂತೇಮರಹಳ್ಳಿಯಿಂದ ಕೂಗಳತೆ ದೂರದಲ್ಲಿರುವ ಹೆಗ್ಗವಾಡಿಪುರದ ಶಿವಕುಮಾರಸ್ವಾಮಿ ಓದಿದ್ದು ಟಿಸಿಎಚ್.ಮಾಡುತ್ತಿರುವುದು ಕೃಷಿ. ಬೋರ್ವೆಲ್ನಲ್ಲಿ ಬರುವ ಅರ್ಧ ಇಂಚು ನೀರನ್ನು ಬಳಸಿಕೊಂಡು ಮಳೆಯ ಆಶ್ರಯದಲ್ಲಿ ಇವರು ಕಟ್ಟಿದ ತೋಟ ಬಿರು ಬೇಸಿಗೆಯಲ್ಲೂ ಹಸಿರಿನಿಂದ ಕಂಗೊಳಿಸುತ್ತಿದೆ.
ಮೂರು ಎಕರೆ ಪ್ರದೇಶದಲ್ಲಿ ಬೇರೆ ಬೇರೆ ತಳಿಯ 130 ಸಪೋಟ, 90 ಮಾವು, 40 ಬೆಣ್ಣೆಹಣ್ಣು ಗಿಡಗಳು, 10 ಗಜನಿಂಬೆ, ಅಕರ್ಾ ಸಹನಾ ತಳಿಯ 30 ಸೀತಾಫಲ, 10 ಮೂಸಂಬಿ, 4 ನೇರಳೆ, ಒಂದು ಅಂಜೂರ ಗಿಡ, 25 ತೆಂಗಿನ ಮರಗಳು ಅರಳಿ ಬರಪೂರ ಫಸಲು ನೀಡುತ್ತಾ ಗಿಡಗಳ ಕೆಳಗೆ ಇಟ್ಟಿರುವ ಜೇನುಪೆಟ್ಟಿಗೆಗಳೂ ಆದಾಯದ ಮೂಲವಾಗಿ ಸುಸ್ಥಿರ ಸಮಗ್ರ ಕೃಷಿಗೆ ಮಾದರಿಯಾಗಿ ನೋಡುಗರ ಕಣ್ಮನ ಸೆಳೆಯುತ್ತಿವೆ.
ಇದೆಲ್ಲದ್ದರ ಹಿಂದೆ ಶಿವಕುಮಾರಸ್ವಾಮಿಯ ಎಂಟು ವರ್ಷದ ಶ್ರಮ ಇದೆ.ಕೃಷಿ ಭೂಮಿ ಉಳಿಸಿಕೊಳ್ಳಲು ಗಣಿಗಾರಿಕೆ ವಿರುದ್ಧ ಹೋರಾಡಿದ ಹೆಜ್ಜೆ ಗುರುತುಗಳಿವೆ. ಬದುಕು ಕಲಿಸಿದ ಪಾಠ ಇಂದು ಇವರನ್ನು ಖುಷ್ಕಿ ಭೂಮಿಯ ಕೃಷಿ ವಿಜ್ಞಾನಿಯನ್ನಾಗಿ ರೂಪಿಸಿದೆ. ತಮ್ಮ ತೋಟದ ಜತೆಗೆ ಕೆಸ್ತೂರಿನ ಡಾ.ಹರಿಪ್ರಸಾದ್, ಲೋಕೇಶ್, ಮದ್ದೂರು, ಮುಡಿಗೊಂಡ ಸೇರಿದಂತೆ ಹಲವಾರು ತೋಟವನ್ನು ಕಟ್ಟಿದ್ದಾರೆ. ವಂಡರಬಾಳಿನ ಅಮೃತಭೂಮಿಯ 15 ಎಕರೆ ಪ್ರದೇಶದಲ್ಲಿ 64 ಬಗೆಯ ಹಣ್ಣುಗಳಿರುವ ತಳಿ ಸಂರಕ್ಷಣಾ ಕೇಂದ್ರ ಇವರ ಹಸಿರು ಪ್ರೀತಿಗೆ ಸಾಕ್ಷಿಯಾಗಿದೆ.ಇಲ್ಲಿರುವ ಜಮರ್್ ಪ್ಲಾಸನ್ ಹಾಗೂ ಸಯನ್ ಬ್ಯಾಂಕ್ ( ತಳಿ ಸಂರಕ್ಷಣಾ ಕೇಂದ್ರ ಮತ್ತು ಕಸಿ ಕಟ್ಟಿ ಬೆಳಸಿದ ತೋಟ) ಅನ್ನು ನೋಡಿ ಇಟಲಿಯ ರೈತ ವಿಜ್ಙಾನಿಗಳೇ ನೋಡಿ ಬೆರಗಾಗಿ ಮೆಚ್ಚಿಕೊಂಡಿದ್ದಾರೆ.
ತಮ್ಮ ತೋಟದಲ್ಲಿ ವಿವಿಧ ಹಣ್ಣುಗಳ ಬೆಳೆಯೊಂದಿಗೆ ಮಿಶ್ರ ಬೆಳೆಯಾಗಿ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ. ತಾವು ಕಂಡಿದ್ದು, ಕೇಳಿದ್ದು. ದೇಶದ ವಿವಿಧ ಕೃಷಿ ವಿಶ್ವ ವಿದ್ಯಾನಿಲಯಗಳಿಗೆ ಭೇಟಿ ನೀಡಿದ್ದು. ಮಳೆ ಆಶ್ರಯದ ಅರೆ ಮಲೆನಾಡು ಮತ್ತು ನದಿ, ನಾಲೆಗಳ ನೀರು ಬಳಸಿಕೊಂಡು ಬೇಸಾಯ ಮಾಡುವ ಪ್ರದೇಶಗಳಿಗೆ ಅಧ್ಯಯನ ಪ್ರವಾಸಮಾಡಿ ಕಲಿತ ಜ್ಙಾನದಿಂದ ತಮ್ಮದೇ ಆದ ಒಂದು ಕೃಷಿ ಮಾದರಿಯೊಂದನ್ನು ಶಿವಕುಮಾರ್ ರೂಪಿಸಿಕೊಂಡಿದ್ದಾರೆ.
ಸಂಪೂರ್ಣ ಸಾವಯವ: ಯಾವುದೇ ಬೆಳೆ ಬೆಳೆದರೂ ಅದರ ಕಾಳುಗಳನ್ನಷ್ಟೇ ಪಡೆದುಕೊಂಡು ಉಳಿದ ಭಾಗಗಳನ್ನು ಮುಚ್ಚಿಗೆಯಾಗಿ ಮರಳಿ ಮಣ್ಣಿಗೆ ಸೇರಿಸಲಾಗುತ್ತದೆ. ಅಲ್ಲದೆ ಕೊಟ್ಟಿಗೆ ಗೊಬ್ಬರ, ಗಂಜಲವನ್ನು ಬಳಸಿಕೊಂಡು ಭೂಮಿಯ ತೇವಾಂಶವನ್ನು ಕಾಪಾಡಿಕೊಳ್ಳಲಾಗಿದೆ. ಸುಭಾಷ್ ಪಾಳೇಕರ್ ಅವರ ವಿಧಾನವನ್ನು ಬಳಸಿಕೊಳ್ಳಲಾಗಿದೆ ಎನ್ನುವ ಕುಮಾರ್ ಹೊರಗಿನಿಂದ ಜಮೀನಿಗೆ ಏನನ್ನು ಹಣಕೊಟ್ಟು ತರುವುದಿಲ್ಲ. ರಾಸಾಯನಿಕದಿಂದ ತುಂಬಾ ದೂರ. ತೋಟದಲ್ಲಿ ಹಾಕುವ ಗಿಡಗಳಿಗಷ್ಟೆ ಹಣ ಕೊಟ್ಟು ತರುತ್ತೇನೆ. ಉಳಿದಂತೆ ದ್ವಿದಳ, ಏಕದಳ ಸಸ್ಯಗಳ ನಾಟಿ ಬೀಜವನ್ನು ನಾನೇ ಸಂರಕ್ಷಣೆಮಾಡಿ ಬಳಸುತ್ತೇನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.
ಪೃಕೃತಿಯಲ್ಲಿ ಪ್ರತಿ ಗಿಡದಲ್ಲೂ ಹಣ ಇದೆ. ಕಾಣುವ ಕಣ್ಣುಗಳಿರಬೇಕು. ಮಾರುಕಟ್ಟೆಯ ಬಗ್ಗೆ ಸಾಮಾನ್ಯ ಅರಿವು ಬೆಳೆಸಿಕೊಂಡ ರೈತ ಮಾತ್ರ ನೆಮ್ಮದಿಯ ಸುಸ್ಥಿರ ಬದುಕು ಕಟ್ಟಿಕೊಳ್ಳಬಲ್ಲ ಎನ್ನುವ ಶಿವಕುಮಾರಸ್ವಾಮಿಯ ಜಾಣ್ಮೆ ಕೇಳುಗರನ್ನು ಚಿಂತಿಸುವಂತೆ ಮಾಡುತ್ತದೆ. ಇವರ ತೋಟದಲ್ಲಿರು ಎಂಟು ವರ್ಷದ ಒಂದು ಅಂಜೂರ ಗಿಡ ವಾಷರ್ಿಕ ಹದಿನೇಳು ಸಾವಿರ ಆದಾಯ ತಂದುಕೊಡುತ್ತದೆ.ಒಂದು ಗಿಡ ತನ್ನ ಜೀವಮಾನದಲ್ಲಿ ತನ್ನ ಬೆಳವಣಿಗೆಯ ಶೇಕಡಾ 60 ರಷ್ಟನ್ನು ಉಪಯೋಗಿಸಿಕೊಂಡು ಉಳಿದ ಶೇ.40 ರಷ್ಷನ್ನು ನಮಗೆ ನೀಡುತ್ತದೆ. ಇದನ್ನು ಅರ್ಥಮಾಡಿಕೊಂಡರೆ ಕೃಷಿಯಲ್ಲಿ ಮುಂದಿನದ್ದೆಲ್ಲ ಸುಲಭ. ಯಾವುದೇ ರಾಸಯನಿಕಗಳಿಲ್ಲದೆ, ಕ್ರಿಮಿನಾಶಕ ಔಷಧಗಳ ಹಂಗಿಲ್ಲದೆ ಸಹಜ ಕೃಷಿಮಾಡಿ ಆದಾಯಗಳಿಸಬಹುದು. ಇದನ್ನು ನಮ್ಮ ರೈತರಿಗೆ ಯಾವುದೇ ವಿಶ್ವ ವಿದ್ಯಾನಿಲಯಗಳು ಕಲಿಸಿಕೊಡುತ್ತಿಲ್ಲ. ಮಕ್ಕಳು ಆರೋಗ್ಯವಾಗಿರಲು ಪೌಷ್ಠಿಕ ಆಹಾರ ತಿನ್ನಬೇಕು ಎಂದು ಪಾಠಮಾಡುವ ನಾವು ಅವು ಸಿಗುವ ಅಂಗಡಿಗಳ ಬಗ್ಗೆ ಹೇಳಿಕೊಡುತ್ತೇವೆಯೇ ಹೊರತು ಅದನ್ನು ಬೆಳೆದುಕೊಳ್ಳುವ ವಿಧಾನವನ್ನು ಕಲಿಸಿಕೊಡದೆ ಮಕ್ಕಳನ್ನು ಮಾರುಕಟ್ಟೆ ಸಂಸ್ಕೃತಿಗೆ ತಯಾರುಮಾಡುತ್ತೇವೆ ಎನ್ನುವ ಕುಮಾರ್ ವಿಷಮುಕ್ತ ಆಹಾರ ಬೆಳೆದುಕೊಳ್ಳುವ ಬಗ್ಗೆ ಸಂಪನ್ಮಾಲ ವ್ಯಕ್ತಿಯಾಗಿಯೂ ರಾಜ್ಯದ ಹಲವೆಡೆ ಉಪನ್ಯಾಸ ನೀಡಿದ್ದಾರೆ.
ವಿರೋಧದ ನಡುವೆಯೂ ಕೃಷಿ ಪ್ರೀತಿ : ಇವರ ತಂದೆ ಪುಟ್ಟಪ್ಪ. ಕೊಳ್ಳೆಗಾಲದ ರೇಷ್ಮೆ ಫಿಲಿಚೇರ್ನಲ್ಲಿ ಮೆನೇಜರ್ ಆಗಿದ್ದವರು. ತಾಯಿ ಪುಟ್ಟಲಿಂಗಮ್ಮ. ಮಗ ಓದಿ ಶಿಕ್ಷಕನಾಗಬೇಕು ಎನ್ನುವುದು ಮನೆಯವರ ಆಸೆ.ಆದರೆ ಹುಡುಗನಿಗೆ ಬಾಲ್ಯದಿಂದಲೇ ಧ್ಯಾನ,ಯೋಗ ಮತ್ತು ಕೃಷಿಯಲ್ಲಿ ಆಸಕ್ತಿ. ಮನೆಯವರ ಒತ್ತಾಸೆಗಾಗಿ 2003 ರಲ್ಲಿ ಪ್ರಶಿಕ್ಷಣ ಪದವಿ ಪಡೆದು ಸ್ವಂತ ಊರಿನ ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಾ ಕೃಷಿ ಮಾಡಲು ಮುಂದಾಗುತ್ತಾರೆ.
ಆದರೆ ತಂದೆಗೆ ಇದು ಸುತರಾಂ ಇಷ್ಟ ಇಲ್ಲ. ತಾಯಿಯ ಒತ್ತಡಕ್ಕೆ ಮಣಿದು ಒಂದುವರೆ ಎಕರೆ ಸ್ವಂತ ಜಮೀನಿನ ಜತೆಗೆ ಮತ್ತೆ ಎಂದುವರೆ ಎಕರೆ ಜಮೀನನ್ನು ಖರೀದಿಸಿ ಬೇಸಾಯಮಾಡಲು ಬಿಡುತ್ತಾರೆ. ಮೂರು ಎಕರೆ ಜಮೀನಿನಲ್ಲಿ ಬೋರ್ವೆಲ್ ತೆಗಿಸಿದಾಗ ಅಲ್ಲಿ ಎರಡುವರೆ ಇಂಚು ನೀರು ಬರುತ್ತದೆ. ಅದೇ ವರ್ಷ ಕಬ್ಬು ಬೆಳೆದು ಮೂರುವರೆ ಲಕ್ಷ ರೂಪಾಯಿ ಆದಾಯಗಳಿಸುತ್ತಾರೆ.ಇದರಿಂದಾಗಿ ಜಮೀನು ಖರೀದಿ ಮಾಡಿದ್ದ ಹಣ ಮತ್ತು ಬೋರ್ವೆಲ್ಗೆ ಖಚರ್ುಮಾಡಿದ್ದ ಹಣ ಬಂದಂತಾಯಿತು. ಆಸ್ತಿ ಉಳಿದುಕೊಂಡಿತು ಎಂದು ಲೆಕ್ಕ ಕೊಡುವಾಗ ಇವರ ಅರ್ಥಶಾಸ್ತ್ರದ ಜ್ಞಾನ ಅಚ್ಚರಿ ಮೂಡಿಸುತ್ತದೆ.
ನುಗ್ಗೆ ಬೀಜ ಸಂರಕ್ಷಕ: ನುಗ್ಗೆ ಬೇಸಾಯದಲ್ಲೂ ಹೆಸರು ಮಾಡಿರುವ ಶಿವಕುಮಾರ್, ನಾಟಿ ಬೀಜ ತಯಾರುಮಾಡಿಕೊಳ್ಳಲು ಮಾತ್ರ ನುಗ್ಗೆ ಕೃಷಿ ಮಾಡುತ್ತಾರೆ. ತಮಿಳುನಾಡು ಪೆರಿಯಾಕುಳಂ ಕೃಷಿ ವಿಶ್ವ ವಿದ್ಯಾನಿಲಯ ಸಂಶೋಧಿಸಿರುವ ಪಿಕೆಎಂ 1 ತಳಿ, ಬಾಗಲಕೋಟೆ ಕೃಷಿ ವಿವಿ ಸಂಶೋಧಿಸಿರುವ ಭಾಗ್ಯ ತಳಿ ಹಾಗೂ ಸ್ಥಳೀಯವಾಗಿ ಸಿಗುವ ತಳಿ ಈ ಮೂರನ್ನು ಮಿಶ್ರಮಾಡಿ ಉತ್ಪಾದಿಸುವ ಇವರ ನುಗ್ಗೆ ಬೀಜಗಳು ಈ ಭಾಗದಲ್ಲಿ ಜನಪ್ರೀಯವಾಗಿವೆ.
ಗಣಿ ಕಿರಿಕಿರಿ : ಮೊದಲ ಕಬ್ಬಿನ ಬೆಳೆಯ ಇಳುವರಿಯಿಂದ ಹೆಚ್ಚಿನ ಆದಾಯ ಬಂತು. ಎರಡನೇ ವರ್ಷದಿಂದ ನಷ್ಟ ಆರಂಭವಾಯಿತು. ಕಾರಣ ಗಣಿಗಾರಿಕೆ. ಜಮೀನಿನ ಪಕ್ಕದಲ್ಲೇ ಕರಿಕಲ್ಲು ಗಣಿಗಾರಿಕೆ ಆರಂಭವಾಗುತ್ತದೆ. ಅಲ್ಲಿ 80 ಅಡಿಗೆ ನೀರು ಬರುತ್ತದೆ. ಇಲ್ಲಿ ಎರಡುವರೆ ಇಂಚು ಬರುತ್ತಿದ್ದ ನೀರು ಬರಿ ಒಂದು ಇಂಚಿಗೆ ಬಂದು ನಿಲ್ಲುತ್ತದೆ. ಇದರಿಂದ ಕಬ್ಬು ಬೆಳೆಯಲು ಆಗುವುದಿಲ್ಲ ಎಂಬ ತೀಮರ್ಾನಕ್ಕೆ ಬರುವ ಶಿವಕುಮಾರ್ ರೇಷ್ಮೆ ಕೃಷಿ ಕೈಗೊಳ್ಳುತ್ತಾರೆ. ಆದರೆ ಗಣಿಯಿಂದ ಎದ್ದ ಧೂಳು ಸೊಪ್ಪಿನ ಮೇಲೆಲ್ಲ ಕುಳಿತು ರೇಷ್ಮೆಯಲ್ಲೂ ಅಪಾರ ನಷ್ಟ ಅನುಭವಿಸುವಂತಾಗುತ್ತದೆ.
ಸುತ್ತಮತ್ತ ರೈತರು ಮತ್ತು ಜಿಲ್ಲಾ ರೈತ ಸಂಘದವರ ಸಹಕಾರದೊಂದಿಗೆ ಗಣಿ ವಿರುದ್ಧ ಹೋರಾಟಕ್ಕಿಳಿಯುವ ಶಿವಕುಮಾರ್ ಒಂದು ಹಂತದಲ್ಲಿ ಗಣಿ ನಿಲ್ಲಿಸುವಲ್ಲಿ ಯಶಸ್ವಿಯೂ ಆಗುತ್ತಾರೆ. ಆದರೆ ಜಿಲ್ಲಾಡಳಿತದ ತೀಪರ್ಿನ ವಿರುದ್ಧ ಹೈಕೋಟರ್್ ಮೆಟ್ಟಿಲೇರುವ ಗಣಿದಣಿ ಮತ್ತೆ ಗಣಿ ನಡೆಸಲು ಅನುಮತಿಯೊಂದಿಗೆ ಬರುತ್ತಾನೆ. ಮತ್ತೆ ಹೋರಾಟ. ಕೊಲೆ ಬೆದರಿಕೆ ಬರುತ್ತದೆ. ಗಣಿ ರಾಜ್ಯದ ಪ್ರತಿಷ್ಠಿತ ರಾಜಕಾರಣಿಗೆ ಸೇರಿದ್ದು ಇದರ ವಿರುದ್ಧ ನಮ್ಮ ಹೋರಾಟಕ್ಕೆ ಜಯ ಸಿಗುವುದು ಕಷ್ಟ ಎಂಬ ಸತ್ಯ ಅರಿವಾಗಿರುತ್ತದೆ. ಇದನ್ನೆಲ್ಲ ಕಂಡ ಮನೆಯವರು ಇರುವ ಒಬ್ಬನೇ ಮಗನ ಜೀವಕ್ಕೆ ಅಪಾಯ ಬಂದಿರುವುದನ್ನು ಮನಗಂಡು ಊರು ಬಿಡಿಸಿ ಬಿಳಿಗಿರಿರಂಗನಬೆಟ್ಟದಲ್ಲಿದ್ದ ಸುದರ್ಶನ್ ಅವರ ಶಾಲೆಗೆ ಶಿಕ್ಷಕನನ್ನಾಗಿ ಕಳಿಸಿಬಿಡುತ್ತಾರೆ.
ಕಾಡು ಕಲಿಸಿದ ಕೃಷಿ ಪಾಠ: ಬೆಟ್ಟದಲ್ಲಿ ಪಾಠ ಮಾಡುತ್ತ,ಸೋಲಿಗರೊಂದಿಗೆ ಒಡನಾಡುತ್ತಾ ಕಲಿತದ್ದು ತನ್ನ ಕೃಷಿಜ್ಞಾನವನ್ನು ಹೆಚ್ಚಿಸಿತು. ಕಾಡಿನ ಜನರ ಬದುಕು ಮತ್ತು ಮೌಲ್ಯಗಳು ನನ್ನನ್ನು ಪ್ರಭಾವಿಸಿದವು. ನಾಗರಿಕ ಸಮಾಜದಲ್ಲಿರುವ ವಿಕಾರಗಳು, ಭ್ರಷ್ಟಚಾರ, ವಂಚನೆ ಯಾವುದು ಅಲ್ಲಿ ಇರಲಿಲ್ಲ. ಕಾಡಿನಲ್ಲಿ ಜನಗಣತಿಗೆ ಹೋದಾಗ ಅಲ್ಲಿನ ಜನರನ್ನು ನಿಮಗೆ ನಾಗರಿಕತೆಯಿಂದ ಒಳ್ಳೆಯದಾಗಿದೆಯೇ ಎಂದು ಪ್ರಶ್ನೆಮಾಡಿದಾಗ ಅವರು,ನಾಡಿನ ಜನರ ಬಂದು ನಮಗೆ ಕುಡಿಯುವುದನ್ನು ಕಲಿಸಿದರು, ಸುಳ್ಳು ಹೇಳುವುದನ್ನು, ವಂಚನೆ ಮಾಡುವುದನ್ನು ಕಲಿಸಿದರು ಅಷ್ಟೇ ನಿಮ್ಮಿಂದ ನಮಗಾದದ್ದು ಎಂದು ಹೇಳಿದ್ದು ನಾನು ಬೆಚ್ಚಿ ಬೀಳುವಂತೆ ಮಾಡಿತು ಎನ್ನುವ ಶಿವಕುಮಾರ್. ತಾನು ಕಷ್ಟದಲ್ಲಿರುವ ಬರದ ನಾಡಿನ ರೈತರಿಗೆ ಮಾದರಿಯಾಗುವ ಕೆಲಸ ಮಾಡುವ ನಿಧರ್ಾರಕ್ಕೆ ಬರುತ್ತಾರೆ. ಇಷ್ಟೆಲ್ಲ ನಡೆಯುವಾಗ ಮೂರ್ನಾಲ್ಕು ವರ್ಷ ಕಳೆದು ಗಣಿಯು ಸ್ಥಗಿತಗೊಂಡಿರುತ್ತದೆ.
ಮರಳಿ ಕೃಷಿಗೆ : 2008 ರಲ್ಲಿ ಮನೆಯವರ ವಿರೋಧದ ನಡುವೆಯೂ ಮತ್ತೆ ಕೃಷಿಗೆ ಮರಳುವ ಶಿವಕುಮಾರ್ ಬರಿಗೈಯಲ್ಲಿ, ಕಷ್ಟದ ನಡುವೆ ಕಟ್ಟಿದ ತೋಟ ಇಂದು ಅವರಿಗೆ ಒಂದು ಗೌರವವನ್ನು ತಂದು ಕೊಟ್ಟಿದೆ. ಇವರ ಕೃಷಿ ಬದುಕನ್ನು ವಿರೋದಮಾಡುತ್ತಿದ್ದ ಮನೆಯವರೇ ಇಂದು ಸಾಧನೆಯನ್ನು ಕಂಡು ಸಂತಸ ಪಡುತ್ತಿದ್ದಾರೆ. ಈಗ ಮತ್ತೆ ಎರಡು ಎಕರೆ ಪ್ರದೇಶದಲ್ಲಿ ಅಲಸು ಮತ್ತು ಮೂಸಂಬಿ ಬೆಳೆದು ಪ್ರಯೋಗಮಾಡಲು ಹೊರಟಿರುವ ಕುಮಾರ್ ತಮ್ಮಲ್ಲಿರುವ ಗದ್ದೆಯನ್ನು ಅಪ್ಪನಿಗೆ ವಹಿಸಿ ತಾವು ಮಾತ್ರ ಖುಷ್ಕಿ ಜಮೀನನ್ನು ಪಡೆದು ಹೊಸ ಹೊಸ ಪ್ರಯೋಗದಲ್ಲಿ ತೊಡಗಿದ್ದಾರೆ, ನೂರಾರು ಆಸಕ್ತರು ಅವರ ಮಾರ್ಗದರ್ಶನ ಪಡೆಯುತ್ತಾರೆ.
ಜಿಲ್ಲೆಯ ಕೃಷಿ ಇಲಾಖೆಗೆ ಇಂತಹ ತೋಟಗಳ ಮಾದರಿ ಕಣ್ಣಿಗೆ ಕಾಣಿಸುವುದೇ ಇರುವುದು ಮಾತ್ರ ದುದರ್ೈವದ ಸಂಗತಿ. ಜಿಲ್ಲೆಯಲ್ಲಿ ಬರವನ್ನು ಮಣಿಸಿದ ಯುವಕನ ಇಂತಹ ಕೃಷಿ ಮಾದರಿ,ಸುಸ್ಥಿರ ಸಮಗ್ರ ಸಾವಯವ ಕೃಷಿ ಅನುಕರಣೀಯ.
ಆರಂಭದಲ್ಲಿ ತೋಟಗಾರಿಕೆ ಇಲಾಖೆಯವರು ಪುಕ್ಕಟೆಯಾಗಿ ಕೊಡುತ್ತಿದ್ದ 80 ಸಪೋಟ ಗಿಡಗಳನ್ನು ತಾವೇ ಸ್ವತಃ ಸೈಕಲ್ ಮೇಲೆ ಏರಿಕೊಂಡು ತಂದು ನಾಟಿಮಾಡಿದ ಕುಮಾರ್ ಇದರೊಂದಿಗೆ ಮಿಶ್ರ ಬೆಳೆಯಾಗಿ ಬೆಳದ ದ್ವಿದಳ ಧಾನ್ಯಗಳ ಆದಾಯದಲ್ಲಿ ಮಾವು,ಅಲಸು, ನುಗ್ಗೆ ಮತ್ತಿತರರ ಹಣ್ಣಿನ ಗಿಡಗಳನ್ನು ತಂದು ಹಾಕಿಕೊಂಡು ಅರ್ದ ಇಂಚು ನೀರಿನೊಂದಿಗೆ ಮಳೆಯ ನೀರನ್ನು ಬಳಕೆ ಮಾಡಿಕೊಂಡು ಕಟ್ಟಿರುವ ತೋಟ ಯುವಕರಿಗೆ ಸ್ಫೂತರ್ಿಯ ಕೇಂದ್ರವಾಗಿದೆ. ಆಸಕ್ತರು ಮೊ.9164878302 ಸಂಪಕರ್ಿಸಬಹುದು.
ಕೃಷಿ,ಕೃಷಿಸಾಧಕರ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಬ್ಲಾಗ್ ನಲ್ಲಿ ತಿಳಿಸುತ್ತಿದ್ದೀರಿ ,ಕೃಷಿಪ್ರೀತಿಮೂಡಿಸುವ ನಿಮ್ಮ ಈ ಕಾರ್ಯ ಶ್ಲಾಘನೀಯ.
ಪ್ರತ್ಯುತ್ತರಅಳಿಸಿಧನ್ಯವಾದಗಳು
ಪ್ರತ್ಯುತ್ತರಅಳಿಸಿ