vaddagere.bloogspot.com

ಸೋಮವಾರ, ಆಗಸ್ಟ್ 22, 2016

ಬರದ ನಾಡಲ್ಲಿ ಮಲೆನಾಡು ಸೃಷ್ಠಿಸಿದ "ವೀರ" ರಾಜು


ನಂಜನಗೂಡು : ಆಧುನಿಕ ಕೃಷಿ ಹಲವು ವಿಕಾರಗಳನ್ನು ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿದೆ.ಕುಲಾಂತರಿ ಬೀಜಗಳನ್ನು ತಂದು ಭಿತ್ತನೆ ಮಾಡುವ ರೈತ ತನಗರಿವಿಲ್ಲದಂತೆ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಕಂಪನಿಗಳ ಕಪಿಮುಷ್ಠಿಗೆ ಸಿಲುಕಿಕೊಳ್ಳುತ್ತಾನೆ. ಹಸಿರು ಕ್ರಾಂತಿ ಪ್ರಣೀತ ಕೃಷಿ ಹೊರಸುಳಿಗಳನ್ನು ಬೇಡುತ್ತಾ ಹೋಗಿ ಕೊನೆಗೆ ರೈತನ ನಾಶಕ್ಕೆ ಕಾರಣವಾಗುತ್ತದೆ.
ನೈಸಗರ್ಿಕ ಕೃಷಿ ಯಾವುದನ್ನು ಹೊರಗಿನಿಂದ ಬೇಡುವುದಿಲ್ಲ. ಇಲ್ಲ ನಾವು ಕಳಚುತ್ತಾ ಹೋಗಬೇಕಾಗುತ್ತದೆ. ಗೊಬ್ಬರ, ಮಾನವ ಶ್ರಮ ಹೀಗೆ ಒಂದೊಂದರ ಬಳಕೆಯನ್ನು ಕಡಿಮೆ ಮಾಡುತ್ತಾ ಹೋಗಬೇಕಾಗುತ್ತದೆ. ಕೃಷಿಯಲ್ಲಿ ಮಾನವ ಶ್ರಮವನ್ನು ಕಡಿಮೆ ಮಾಡುವುದಕ್ಕೆ ನಮ್ಮ ಮೊದಲ ಆದ್ಯತೆ ಎಂದರು ಯಶಸ್ವಿ ನೈಸಗರ್ಿಕ ಕೃಷಿಕ ಎಂ.ಆರ್.ವೀರರಾಜು.
ಎಲ್ಲಡೆ ಬಿಸಿಲಿನ ತಾಪ ಜನ ಜಾನುವಾರುಗಳನ್ನು ಹೈರಾಣಗಿಸಿದೆ. ಏಪ್ರಿಲ್ ತಿಂಗಳು ಕಳೆದು ಮೇ ಆರಂಭವಾದರು ವರುಣನ ಆಗಮನವಾಗಿರಲಿಲ್ಲ. ಬೆಳಗ್ಗೆ ಹತ್ತು ಗಂಟೆಯಿಂದಲ್ಲೇ ನೆತ್ತಿಗೆ ಕುಕ್ಕುವ ರಣ ಬಿಸಿಲಿಗೆ ಜನ ಬೀದಿಗೆ ಬರಲು ಹೆದರುವ ಪರಿಸ್ಥಿತಿ ಇತ್ತು.
ಅಂತಹ ಕಡು ಬೇಸಿಗೆಯಲ್ಲೂ ಅವರ ತೋಟ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿತ್ತು. ನಂಜನಗೂಡು ತಾಲೂಕಿನಂತಹ ಅರೆಮಲೆನಾಡು ಪ್ರದೇಶದಲ್ಲಿರುವ ತೋಟಕ್ಕೆ ಹೋದರೆ ಮಲೆನಾಡಿಗೆ ಹೋದ ಅನುಭವ. ತೆಂಗು, ಅಡಿಕೆ,ಬಾಳೆ, ಕಾಫಿ,ವೀಳ್ಯದೆಲೆ,ಕೋಕೋ ಕಾಡಿನಂತಿರುವ ತೋಟದಲ್ಲಿ ನಡೆದರೆ ಮೃದುವಾದ ಸ್ಪಾಂಜಿನಂತಹ ಮಣ್ಣು ಹಿತಕರ ಅನುಭವ ನೀಡುತ್ತದೆ.
ಭತ್ತ ಬೆಳೆದು ಸತ್ವ ಕಳೆದುಕೊಂಡಿದ್ದ ಭೂಮಿಯ ಪ್ರತಿ ಕಣ ಕಣವೂ ಇಂದು ಸತ್ವಭರಿತವಾಗಿದೆ. ಈಗ ಅಲ್ಲಿ ತೆಂಗು, ಅಡಿಕೆ, ಕಾಫಿಯಂತಹ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗಿದೆ.ಇಂತಹ ಮಲೆನಾಡು ವಾತಾವರಣವನ್ನು ಸೃಷ್ಟಿಸುವಲ್ಲಿ ಕೃಷಿ ಸಾಧಕ ವೀರರಾಜು ಅವರ ಪರಿಶ್ರಮ ಕಣ್ಣಿಗೆ ಕಾಣುತ್ತದೆ. 
ಕೃಷಿಯ ಬಗ್ಗೆ ಅವರಿಗಿರುವ ಪ್ರೀತಿ ಮತ್ತು ಕಾಳಜಿಯಿಂದಾಗಿ ಈಗ ಅಲ್ಲೊಂದು ದ್ವೀಪದಂತಹ ಮಲೆನಾಡೇ ನಿಮರ್ಾಣವಾಗಿದೆ. ವೀರರಾಜು ಅವರು ಮೂಲತಃ ಟಿ.ನರಸೀಪುರ ತಾಲೂಕು ಮಾಡ್ರಹಳ್ಳಿಯವರು. ಪ್ರೊ.ನಂಜುಂಡಸ್ವಾಮಿಯವರ ಸಹೋದರ ಎಂ.ರಾಜಶೇಖರ್ (ಬೆಮೆಲ್ನ ನವೃತ್ತ ಎಜಿಎಂ) ಇವರ ತಂದೆ,ತಾಯಿ ರತ್ನಮ್ಮ. ನಂಜನಗೂಡಿನಿಂದ ಮುಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಲಕ್ಕೆ ತಿರುಗಿಕೊಂಡರೆ ಅರತಲೆ ಎಂಬ ಊರು. ಅಲ್ಲಿ ತಮ್ಮ ಪಾಲಿಗೆ ಬಂದ ಆರು ಎಕರೆ ಗದ್ದೆಯಲ್ಲಿ ಸುಂದರವಾದ ನಿರಂತರ ಆದಾಯತರಬಲ್ಲ ತೋಟವನ್ನು ಕಟ್ಟಿದ್ದಾರೆ.ಮಳೆಗಾಲದಲ್ಲಿ ನೀರಿಗೆ ತೊಂದರೆಯಿಲ್ಲ. ಬೇಸಿಗೆಯಲ್ಲಿ ಇರುವ ಎರಡು ಬೋರ್ವೆಲ್ಗಳಿಂದ ಒಂದುವರೆ ಇಂಚು ನೀರು ಲಭ್ಯ.
275 ತೆಂಗಿನ ಮರಗಳಿಂದ ವಾಷರ್ಿಕ ನಲವತ್ತು ಸಾವಿರ ಕಾಯಿ ಬೀಳುತ್ತವೆ, 500 ಅಡಿಕೆಗಿಡಗಳಿಂದ ವಾಷರ್ಿಕ ಆರರಿಂದ ಏಳು ಕ್ವಿಂಟಾಲ್ ಅಡಿಕೆ ಸಿಗುತ್ತಿದ್ದು ಒಳ್ಳೆಯ ಆದಾಯಗಬರುತ್ತದೆ.ಮಿಶ್ರಬೆಳೆಯಾಗಿ ಬಾಳೆ, ಕೋಕೋ, ಕಾಫಿ ಬೆಳೆಯಲಾಗಿದ್ದು ಈಗ ನಿರಂತರ ಆದಾಯಕ್ಕಾಗಿ ವೀಳ್ಯದೆಲೆಯನ್ನು ನಾಟಿಮಾಡಲಾಗುತ್ತಿದೆ.ತಮ್ಮ ತೋಟದಲ್ಲಿ ಹಾಕಿರುವ ಯಾವುದೇ ಅಡಿಕೆ ಗಿಡಗಳನ್ನು ನರ್ಸರಿಯಿಂದ ಖರೀದಿಮಾಡಿಲ್ಲ.ತಾವು ನೋಡಿದ ಫಲಭರಿತವಾದ ಅಡಿಕೆಮರಗಳಿಂದ ಕಾಯಿಗಳನ್ನು ತಂದು ನರ್ಸರಿಮಾಡಿಕೊಂಡು ನಾಟಿಮಾಡಿಕೊಂಡಿದ್ದಾರೆ.
ಆರಂಭದಿಂದಲ್ಲೂ ರಾಸಾಯನಿಕ ಕೃಷಿಯಿಂದ ದೂರವೇ ಇರುವ ವೀರರಾಜು ಕೊಟ್ಟಿಗೆ ಗೊಬ್ಬರ ಮತ್ತು ಕೃಷಿ ತ್ಯಾಜ್ಯವನ್ನೇ ಬಳಸಿ ಕೃಷಿಮಾಡುತ್ತಾ ಬಂದಿದ್ದರು. ರಾಜ್ಯದಲ್ಲಿ ನೈಸಗರ್ಿಕ ಕೃಷಿಕ ಸುಭಾಶ್ ಪಾಳೇಕರ್ ಕೃಷಿ ಪರಿಚಿತವಾಗುತ್ತಿದ್ದಂತೆ, ಪಾಳೇಕರ್ ಮಾದರಿಯತ್ತ ಆಕಷರ್ಿತರಾದರು. ಇದಕ್ಕಾಗಿ ಮೈಸೂರು, ಅರಸೀಕೆರೆ, ಬೆಂಗಳೂರು ಹೀಗೆ ನಾನಾ ಕಡೆ ನಡೆದ ಪಾಳೇಕರ್ ಅವರ ಶೂನ್ಯ ಬಂಡವಾಳ ಕೃಷಿ ಕಾರ್ಯಾಗಾರಗಳಲ್ಲಿ ಭಾಗವಹಿಸಿ ನೈಸಗರ್ಿಕ ಕೃಷಿಯ ಬಗ್ಗೆ ಅರಿವು ಮೂಡಿಸಿಕೊಂಡರು.
ಪಾಳೇಕಾರ್ ಮಾದರಿ ಕೃಷಿಮಾಡಲು ನಾಟಿತಳಿಯ ದೇಸಿ ಹಸುಗಳನ್ನೇ ಸಾಕಬೇಕು ಎನ್ನುವ ವೀರರಾಜು ತಮ್ಮ ಆರು ಎಕರೆ ಜಮೀನಿಗೆ ಆರು ಹಸುಗಳಿಂದ ಬರುವ ಗೋಮೂತ್ರ ಮತ್ತು ಸಗಣಿಯೇ ಸಾಕಾಗುತ್ತಿದೆ. ಆರಂಭದಲ್ಲಿ ತಮಿಳುನಾಡಿನ ಗುಂಟಾಪುರದಿಂದ ನಾಲ್ಕು ನಾಟಿ ಹಸುಗಳನ್ನು ತಲಾ ಐದು ಸಾವಿರ ರೂಪಾಯಿ ಕೊಟ್ಟು ತರಲಾಗಿತ್ತು. ಈಗ ಅವುಗಳ ಸಂಖ್ಯೆ ಆರಾಗಿದೆ.ಅದರಲ್ಲಿ ಎರಡು ಸಧ್ಯ  ಗರ್ಭಧರಿಸಿವೆ. ಇವುಗಳನ್ನು ನಾವು ಹಾಲಿಗಾಗಿ ಸಾಕಿಲ್ಲ ತೋಟಕ್ಕೆ ಬೇಕಾದ ಜೀವಾಮೃತ ತಯಾರುಮಾಡಿಕೊಳ್ಳುವುದಕ್ಕೆ ಮೊದಲ ಆದ್ಯತೆ ನಂತರ ಹಾಲು, ಮೊಸರು, ತುಪ್ಪಕ್ಕಾಗಿಯೂ ಬಳಸಿಕೊಳ್ಳುತ್ತೇವೆ ಎನ್ನುತ್ತಾರೆ.
ದೊಡ್ಡಹೊಟ್ಟೆ,ಸಣ್ಣಹೊಟ್ಟೆ : ಜಸರ್ಿ ಮತ್ತು ಎಚ್ಎಫ್ ಹಸುಗಳು ಗಾತ್ರದಲ್ಲಿ ದೊಡ್ಡವು. ಅವುಗಳಿಗೆ ದೊಡ್ಡ ಹೊಟ್ಟೆ. ಗಾತ್ರಕ್ಕೆ ತಕ್ಕಂತೆ ಆಹಾರ ಕೊಡಬೇಕು.ಅದಕ್ಕಾಗಿಯೇ ಮೇವು ಬೆಳೆದುಕೊಳ್ಳಬೇಕು. ಅಷ್ಟೇ ಅಲ್ಲದೆ, ಅವುಗಳಿಗೆ ರೋಗನಿರೋಧಕ ಶಕ್ತಿಯೂ ಕಡಿಮೆ. ಅವು ನೀಡುವ ಸಗಣಿ ಮತ್ತು ಮೂತ್ರದಲ್ಲಿ ಜೀವಾಣುಗಳ ಸಂಖ್ಯೆ ಅತಿ ಕಡಿಮೆ. ಇದರಿಂದಾಗಿ ಇವುಗಳ ತ್ಯಾಜ್ಯದಿಂದ ಮಣ್ಣಿಗೆ ಬೇಕಾದ ಪೋಷಕಾಂಶಗಳು ಸಿಗುವುದಿಲ್ಲ.
ನಮ್ಮದೇ ದೇಸಿ ತಳಿಯ ದನಗಳಾದೆ ಸಣ್ಣ ಹೊಟ್ಟೆ ಹೊಂದಿರುತ್ತವೆ.ರೋಗ ನಿರೋಧಕ ಶಕ್ತಿಯೂ ಅಧಿಕವಾಗಿರುತ್ತದೆ.ಕಡಿಮೆ ಮೇವು ತಿಂದು ಪೌಷ್ಠಿಕವಾದ ಹಾಲನ್ನು ನೀಡುತ್ತವೆ. ಇವುಗಳ ಸಗಣಿ ಮತ್ತು ಮೂತ್ರದಲ್ಲಿ ಕೋಟ್ಯಾಂತರ ಜೀವಾಣುಗಳು ಇದ್ದು ಇದರಿಂದ ಜೀವಾಮೃತ ಮಾಡಿಕೊಳ್ಳುವುದರಿಂದ ಮಣ್ಣಿಗೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶಗಳು ದೊರೆಯುತ್ತವೆ. ಎರಡು ದೇಸಿ ಹಸು ಸಾಕುವುದರಿಂದ ಇಪ್ಪತ್ತು ಎಕರೆ ಜಮೀನನ್ನು ಸುಲಭವಾಗಿ ನಿರ್ವಹಿಸಬಹುದು ಎನ್ನುತ್ತಾರೆ.
ಸ್ಪಿಂಕ್ಲರ್ ಉತ್ತಮ: ನೈಸಗರ್ಿಕ ಕೃಷಿಯಲ್ಲಿ ಜೀವಾಮೃತ ಬಳಸಿ ಬೇಸಾಯಮಾಡಲು ಹನಿ ನೀರಾವರಿಗಿಂತ ಸ್ಪಿಂಕರ್ ಸಿಸ್ಟಂ ಒಳ್ಳೆಯದು. ಹನಿ ನೀರಾವರಿ ಪದ್ಧತಿ ಅಳವಡಿಸುವುದರಿಂದ ಮಿಶ್ರ ಬೇಸಾಯ ಕಷ್ಟ. ಸ್ಪಿಂಕ್ಲರ್ ಬಳಸಿ ಜೀವಾಮೃತ ನೀಡುವುದರಿಂದ ಇಡೀ ತೋಟದ ಮಣ್ಣು ಸತ್ವಯುತವಾಗುತ್ತದೆ.ಎಲ್ಲಕ್ಕಿಂತ ಮುಖ್ಯವಾಗಿ ಕಡಿಮೆ ಮಾನವ ಶ್ರಮವನ್ನು ಬೇಡುತ್ತದೆ. ನೂರಾರು ತೋಟಗಳನ್ನು ಸುತ್ತಿ ಬಂದಿರುವ ವೀರರಾಜು ಕೊನೆಗೆ ಅನುಸರಿಸುತ್ತಿರುವುದು ತಮಿಳುನಾಡಿನ ತಾಳವಾಡಿ ಬಳಿ ಇರುವ ಕಲ್ಲುಬಂಡಿಪುರದ ನೈಸಗರ್ಿಕ ಕೃಷಿಕ ಶಕ್ತಿವೇಲು ಮಾದರಿ. ಕಳೆದ ಎರಡು ವರ್ಷಗಳಿಂದ ಶಕ್ತಿವೇಲು ಮಾದರಿಯಲ್ಲಿ ತೋಟಕ್ಕೆ ಜೀವಾಮೃತ ಕೊಡುತ್ತಿದ್ದು ಇದರಿಂದಾಗಿ ತೋಟ ಸದಾ ಹಸಿರಿನಿಂದ ಕೂಡಿದ್ದು ತೇವಾಂಶವನ್ನು ಕಾಪಾಡಿಕೊಳ್ಳುವ ಶಕ್ತಿಯನ್ನು ಬೆಳೆಸಿಕೊಂಡಿದೆ ಎನ್ನುತ್ತಾರೆ.
ಶಕ್ತಿವೇಲು ತಮ್ಮ 15 ಎಕರೆ ತೋಟದಲ್ಲಿ ನೈಸಗರ್ಿಕ ಕೃಷಿಮಾಡುತ್ತಿದ್ದು, ಕಡಿಮೆ ನೀರು ಮತ್ತು ಕಡಿಮೆ ಮಾನವ ಶ್ರಮವನ್ನು ದಕ್ಷತೆಯಿಂದ ಬಳಸಿಕೊಂಡಿದ್ದು ಪ್ರತಿಯೊಬ್ಬ ರೈತರಿಗೆ ಮಾದರಿಯಾಗುವಂತಿದೆ ಎನ್ನುವ ವೀರರಾಜು, ಸುಭಾಶ್ ಪಾಳೇಕರ್ ಅವರ ಮಾದರಿಯೊಂದಿಗೆ ತಾವು ಕಟ್ಟೆಮಳಲವಾಡಿಯ ಎ.ಪಿ.ಚಂದ್ರಶೇಖರ್ ಮತ್ತು ಶಕ್ತಿವೇಲು ಅವರ ಕೃಷಿ ವಿಧಾನಗಳನ್ನು ಅಳವಡಿಸಿಕೊಂಡಿರುವುದಾಗಿ ಹೇಳುತ್ತಾರೆ. ತಮ್ಮ ಜೊತೆ ತೋಟದಲ್ಲಿ ಇಬ್ಬರು ಕಾಮರ್ಿಕರು ಕೆಲಸಮಾಡುತ್ತಾರೆ.ಮಳೆಕಾಲದಲ್ಲಂತೂ ನಮಗೆ ಕೆಲಸವೇ ಇರುವುದಿಲ್ಲ.ಅಷ್ಟರಮಟ್ಟಿಗೆ ನಾವು ಮಾನವ ಶ್ರಮವನ್ನು ಕಡಿಮೆಮಾಡಿಕೊಂಡಿದ್ದೇವೆ ಎನ್ನುತ್ತಾರೆ.
ಮೌಲ್ಯವರ್ಧನೆಯಿಂದ ಆದಾಯ : ಎಳನೀರು ಮತ್ತು ತೆಂಗಿನ ಕಾಯಿಗಳನ್ನು ವೀರರಾಜು ಮಾರಾಟಮಾಡುವುದಿಲ್ಲ. ತೆಂಗನ್ನು ಕೊಬ್ಬರಿ ಮಾಡಿ ನಂತರ ಮಾರಾಟಮಾಡುತ್ತಾರೆ.ತೆಂಗಿನ ಕರಟದಿಂದ ಇದ್ದಿಲು ಮಾಡುತ್ತಾರೆ. ಇದ್ದಿಲ್ಲನ್ನು ಚಿನ್ನಬೆಳ್ಳಿ ವ್ಯಾಪಾರಗಾರರು ತೋಟಕ್ಕೆ ಬಂದು ಖರೀದಿ ಮಾಡುತ್ತಾರೆ. ಇದರಿಂದಲ್ಲೂ ಒಳ್ಳೇಯ ಆದಾಯ ಬರುತ್ತದೆ.
ತೆಂಗಿನ ನಾರು ಮತ್ತು ಬಿದ್ದ ಸೋಗನ್ನು ಮಣ್ಣಿಗೆ ಮುಚ್ಚುಗೆಯಾಗಿ ಬಳಸಿ ತೋಟದಲ್ಲಿ ಸದಾ ತೇವಾಂಶವನ್ನು ಕಾಪಾಡಿಕೊಳ್ಳಲಾಗುತ್ತದೆ. ಏನೇ ಜೀವಾಮೃತ ನೀಡಿದರೂ ಮಣ್ಣಿಗೆ ಬೇಕಾದ ಪೋಷಕಾಂಶಗಳು ಸಿಗಬೇಕಾದರೆ ದ್ವಿದಳ ಮತ್ತು ಎಕದಳ ಧಾನ್ಯಗಳನ್ನು ಬೆಳೆಯಲೇ ಬೇಕು ಎನ್ನುವ ವೀರರಾಜು ,ಅದಕ್ಕಾಗಿಯೇ ನಮ್ಮಲ್ಲಿ ಯಾವುದೇ ಶುಭಸಮಾರಂಭ ನಡೆದರೂ ಏಕದಳ ಮತ್ತು ದ್ವಿದಳ ಧಾನ್ಯಗಳನ್ನು ಮಿಶ್ರಣ ಮಾಡಿ ಮೊಳಕೆಬರಿಸಿ ಪೂಜೆಗೆ ಬಳಸುವಮೂಲಕ ಅದರ ಮಹತ್ವವನ್ನು ತಿಳಿಸುತಿದ್ದರು. ನಮಗೆ ಇದು ಅರ್ಥವಾಗುತ್ತಿಲ್ಲ.
ನೈಸಗರ್ಿಕ ಕೃಷಿಯಲ್ಲಿ ಜೀವಾಮೃತ ಬಲಸುವುದರಿಂದ ಆರಂಭದಲ್ಲಿ ಕಳೆ ಹೆಚ್ಚಾಗಿ ಬರುವುದು ಸಹಜ. ಅದಕ್ಕಾಗಿ ಕಳೆ ಕೊಚ್ಚುವ ಯಂತ್ರವನ್ನು ಬಳಸಿಕೊಳ್ಳುತ್ತೇವೆ.ಸಾಧ್ಯವಾದಷ್ಟು ಮಾನವ ಶ್ರಮವನ್ನು ಕಡಿಮೆ ಮಾಡುವುದರಿಂದ ಮಾತ್ರ ಕೃಷಿ ಕ್ಷೇತ್ರ ಉಳಿಯಬಲ್ಲದು, ಬೆಳೆಯಬಲ್ಲದು ಎನ್ನುತ್ತಾರೆ. ಆಸಕ್ತರು 8762277017 ಇವರನ್ನು ಸಂಪಕರ್ಿಸಬಹುದು 

ಅಮೃತ ಭೂಮಿಯಲ್ಲಿ ನವೀನ ಕೃಷಿ


ಚಾಮರಾಜನಗರ : ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ವಿದ್ಯಾವಂತ ಹುಡುಗರನ್ನು ಹಿರಿಯರು ಬಲವಂತವಾಗಿ ನಗರಕ್ಕೆ ನೂಕುತ್ತಿದ್ದಾರೆ.ತಲೆಮಾರುಗಳ ಅಂತರದಿಂದ ನಮ್ಮ ಕೃಷಿ ಹಳಿತಪ್ಪಿದೆ.ಕಲಿತ ಯುವಕರು ವ್ಯವಸಾಯದ ರೀತಿರಿವಾಜುಗಳನ್ನು ಅರಿತುಕೊಂಡು ಮರಳಿ ಹಳ್ಳಿಗೆ ಬಂದಾಗ ಮಾತ್ರ ಪರಿಸರವೂ ಉಳಿದು,ನಾವು ನೆಮ್ಮದಿಯ ಬದುಕು ಕಟ್ಟಿಕೊಳ್ಳಬಹುದು....ಹೀಗೆ ಎದುರಿಗೆ ಕುಳಿತ ಹುಡುಗ ಹೇಳುತ್ತಾಹೋದ. ನಮ್ಮ ಮತ್ತು ಅವನ ಎದುರು ಕಳೆದ ಆರು ತಿಂಗಳಿನಲ್ಲಿ ಅವನು ರೂಪಿಸಿದ ತೋಟ ಏಪ್ರಿಲ್ನ ಬಿರು ಬೇಗೆಯಲ್ಲೂ ಹಚ್ಚ ಹಸಿರು ತುಂಬಿಕೊಂಡು ನಗುತ್ತಿತ್ತು.
ಸುಸ್ಥಿರ ಕೃಷಿಯ ಮಾದರಿಗಳನ್ನು ಹುಡುಕಿಕೊಂಡು ಹೊರಟ ನಾವು ಬಂದು ನಿಂತಿದ್ದು ಚಾಮರಾಜನಗರದಿಂದ 13 ಕಿ.ಮೀ.ದೂರದ ವಂಡರಬಾಳುವಿನಲ್ಲಿದ್ದ ಅಂತರ ರಾಷ್ಟ್ರೀಯ ಸುಸ್ಥಿರ ಅಭಿವೃದ್ಧಿ ಕೇಂದ್ರ ಫ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿಯವರ ಮಹಾ ಕನಸಿನ "ಅಮೃತ ಭೂಮಿ' ಗೆ. ಬರದ ನಾಡಿನಲ್ಲಿ ಬದುಕುಳಿಯಬಲ್ಲ ಕೃಷಿ ಮಾದರಿಗಳು ನಮಗೆ ಬೇಕಿತ್ತು. ನಮ್ಮ ಸಾವಿರಾರು ಕಿ. ಮೀ ಪಯಣದಲ್ಲಿ ಅಲ್ಲಲ್ಲಿ ನಮ್ಮ ನಾಡಿನ ಯುವಕರು ಮಳೆಯಾಶ್ರಯದಲ್ಲಿ ಕಡಿಮೆ ನೀರು ಬಳಸಿ ಮಿಶ್ರ ಬೇಸಾಯ ಮಾಡುತ್ತಾ, ಹೊಸ ಹೊಸ ಪ್ರಯೋಗಗಳೊಂದಿಗೆ, ಬರದಲ್ಲೂ ಬದುಕುವ ಪಯರ್ಾಯವನ್ನು ಕಟ್ಟಿಕೊಡುತ್ತಿರುವುದು ಕಂಡುಬಂತು.
ಪ್ರೊ.ಎಂ,ಡಿ.ನಂಜುಂಡಸ್ವಾಮಿಯವರು ಅಮೃತಭೂಮಿಯನ್ನು ದೇಸಿತಳಿಯ ಬೀಜಗಳ ಸಂರಕ್ಷಣ ಕೇಂದ್ರವಾಗಿ ಮಾಡುವ ಮಹಾ ಕನಸಿನೊಂದಿಗೆ ಆರಂಭಮಾಡಿದ್ದರು. ಈಗ ಅಲ್ಲಿ ಸದ್ದಿಲ್ಲದೆ ನಾಟಿ ತಳಿಯ ಬೀಜಬ್ಯಾಂಕ್ ಕೆಲಸಮಾಡುತ್ತಿದೆ. ರೈತರಿಗೆ ಇತರ ಕಡೆಗಿಂತ ಕಡಿಮೆ ದರದಲ್ಲಿ ನಾಟಿ ತಳಿಯ ಬೀಜಗಳನ್ನು ಮಾರಾಟಮಾಡುವ ಮೂಲಕ ಅವರನ್ನು ಸ್ವಾವಲಂಭಿ ಕೃಷಿಕರನ್ನಾಗಿ ಮಾಡಲು ಚುಕ್ಕಿನಂಜುಂಡಸ್ವಾಮಿ ಶ್ರಮಿಸುತ್ತಿದ್ದಾರೆ. ಇವರ ಕನಸನ್ನು ಸಾಕಾರಮಾಡಲು ಉತ್ಸಾಹಿ ಯುವಕರ ತಂಡವೊಂದು ಅಲ್ಲಿ ಕೃಷಿನಿರತವಾಗಿದೆ.
ಅಂತಹ ತಂಡದ ಒರ್ವ ಯುವಕ ನವೀನ್. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ,ಇಂಗ್ಲೀಷ್ ಸಾಹಿತ್ಯ ಮತ್ತು ಸೈಕಾಲಜಿ ವಿಷಯದಲ್ಲಿ ಪದವಿ ಮುಗಿಸಿರುವ ನವೀನ್ ಕುಮಾರ್ ಬಿ.ಐ. ಮನಸ್ಸು ಮಾಡಿದ್ದರೆ ಪತ್ರಕರ್ತನಾಗಿ ಅಥವಾ ಯಾವುದಾದರೂ ಕಂಪನಿಯಲ್ಲಿ ನೌಕರಿಗೆ ಸೇರಬಹುದಿತ್ತು. ಆದರೆ ಕೃಷಿಯ ಮೇಲಿನ ಕಾಳಜಿ ಮತ್ತು ಮಣ್ಣಿನ ಮೇಲಿನ ಪ್ರೀತಿ ಅವನನ್ನು ಒಬ್ಬ ಕೃಷಿ ಪಂಡಿತನನ್ನಾಗಿಮಾಡಿದೆ.
ಕೇವಲ ಒಂದು ಎಕರೆ ಹತ್ತು ಗುಂಟೆ ಪ್ರದೇಶದಲ್ಲಿ ನವೀನ್ ಮಾಡುತ್ತಿರುವ ಬೇಸಾಯ ಕೃಷಿ ಪಯರ್ಾಯಗಳನ್ನು ಹುಡುಕುತ್ತಿರುವವರಿಗೆ ಮಾದರಿಯಗಬಲ್ಲದು.
ಆಯಾಯ ಸಮಯದಲ್ಲಿ ಬೆಳೆಯುವ ಬೆಳೆಗಳ ಜತೆಗೆ ದೀರ್ಘಕಾಲ ಇದ್ದು ಆದಾಯ ತಂದು ಕೊಡಬಲ್ಲಂತಹ ಬಾಳೆ, ಅರಿಶಿನ, ಶುಂಠಿಯಂತಹ ವಾಣಿಜ್ಯ ಬೆಳೆಗಳನ್ನು ಸಂಯೋಜನೆಮಾಡಿ ಬೆಳೆದಿರುವುದು ಅಚ್ಚರಿ ಮೂಡಿಸುತ್ತದೆ. ಇದೆಲ್ಲದ್ದರಿಂದ ವಾಷರ್ಿಕ ಮೂರು ಲಕ್ಷ ರೂಪಾಯಿ ಆದಾಯ ನಿರೀಕ್ಷಿಸಿರುವ ನವೀನ್, ಕಡಿಮೆ ನೀರು ಮತ್ತು ಅತಿ ಕಡಿಮೆ ಹಣ ವೆಚ್ಚಮಾಡಿ ಒಂದು ಸಣ್ಣ ಕುಟುಂಬ ನೆಮ್ಮದಿಯಾಗಿ ಬದುಕು ಕಟ್ಟಿಕೊಳ್ಳಬಹುದಾದ ಮಾದರಿಯೊಂದನ್ನು ನಮ್ಮ ಕಣ್ಣಮುಂದೆ ತೋರಿಸುತ್ತಾರೆ.
ಹಿರಿಯರ ವಿರೋಧ : ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಬೆಳವಾಡಿ ಗ್ರಾಮದ ನವೀನ್ಕುಮಾರ್ ಕೃಷಿ ಕುಟುಂಬದಿಂದಲೇ ಬಂದ ಯುವಕ. ಮನೆಯಲ್ಲಿ ಈತನೇ ಮೊದಲ ತಲೆಮಾರಿನ ವಿದ್ಯಾವಂತನಾದ ಕಾರಣ ಮನೆಯವರಿಗೆ ಮಗ ನಗರದಲ್ಲಿ ನೌಕರಿಮಾಡಬೇಕೆಂಬ ಆಸೆ. ಬೇಸಾಯ ನಮ್ಮ ತಲೆಗೆ ಕೊನೆಯಾಗಬೇಕು ಮಗ, ನೀನು ನಗರದಲ್ಲಿ ಯಾವುದಾದದರೂ ನೌಕರಿ ಸೇರಿ ನೆಮ್ಮದಿಯಾಗಿ ಬದುಕಪ್ಪಾ ಎಂಬುದು ತಂದೆ ತಾಯಿಯ ಒತ್ತಾಯ.
ಅಜ್ಜ ಅಜ್ಜಿಯರ ಕಾಲಕ್ಕೆ ನೆಮ್ಮದಿ ತಂದುಕೊಡುತ್ತಿದ್ದ ಬೇಸಾಯ, ತನ್ನ ಅಪ್ಪನ ಕಾಲಕ್ಕೆ ದಿನದಲ್ಲಿ 12 ಗಂಟೆ ದುಡಿದರೂ ಯಾಕೆ ನೆಮ್ಮದಿ ತಂದುಕೊಡುತ್ತಿಲ್ಲ. ಸಾಲದ ಸುಳಿಯಲ್ಲಿ ಸಿಲುಕಿ ಯಾಕೆ ನಲುಗುವಂತೆ ಮಾಡಿದೆ. ಎಂಬೆಲ್ಲ ಪ್ರಶ್ನೆಗಳನ್ನು ತಲೆಯ ತುಂಬಾ ತುಂಬಿಕೊಂಡ ನವೀನ್  ಇದಕ್ಕೆಲ್ಲಾ ಪರಿಹಾರ ಕಂಡುಕೊಳ್ಳಲ್ಲೇ ಬೇಕು ಎಂಬ ಛಲದಿಂದ ಪದವಿ ಮುಗಿಸಿ ಬೇಸಾಯಮಾಡಲು ಮರಳಿ ಊರಿಗೆ ಬರುತ್ತಾರೆ. ಆದರೆ ಮನೆಯವರು ಇವರ ಆಸೆಗೆ ಅಡ್ಡಿಯಾಗುತ್ತಾರೆ. ಕೃಷಿಯಲ್ಲಿ ತೊಡಗಿಸಿಕೊಳ್ಳಲು ತೀವ್ರ ವಿರೋಧ ವ್ಯಕ್ತಪಡಿಸುತ್ತಾರೆ. ಇದರಿಂದ ವಿಚಲಿತರಾದ ನವೀನ್ಗೆ ನೆನಪಾದದ್ದೇ "ಅಮೃತ ಭೂಮಿ".
ವನರಂಗದಿಂದ ಅಮೃತ ಭೂಮಿಗೆ: ಕಳೆದ ವರ್ಷ ಮೈಸೂರಿನ ರಂಗಾಯಣದಲ್ಲಿ ನಡೆದ ವಿಶ್ವ ಮಣ್ಣಿನ ದಿನಾಚರಣೆ ನನ್ನ ಕನಸಿಗೆ ಬಣ್ಣ ತುಂಬಿತು ಎನ್ನುವ ನವೀನ್ ಅಲ್ಲಿ ತಜ್ಙರು ಮಾಡಿದ ಉಪನ್ಯಾಸ ನನಗರಿಯದ ಮಣ್ಣಿನ ಲೋಕವೊಂದನ್ನು ತಿಳಿಸಿಕೊಟ್ಟಿತು. ಅಲ್ಲಿ ಚುಕ್ಕಿ ಅಕ್ಕ ಅವರ ಪರಿಚಯವಾಯಿತು. ವ್ಯವಸಾಯ ಮಾಡಲು ಊರಿಗೆ ಹೋದೆ. ಅಲ್ಲಿ ಮನೆಯವರು ವಿರೋಧ ವ್ಯಕ್ತಪಡಿಸಿದಾಗ ನನಗೆ ನೆನಪಿಗೆ ಬಂದದ್ದು ಚುಕ್ಕಿ ಅಕ್ಕ. ತಕ್ಷಣ ನನ್ನ ಕನಸುಗಳನ್ನು ಅಕ್ಕನೊಂದಿಗೆ ದೂರವಾಣಿಯ ಮೂಲಕ ಹೇಳಿದೆ. ಅಮೃತ ಭೂಮಿಗೆ ಬಂದುಬಿಡು ಎಂದರು. 200 ಕಿ.ಮೀ ದೂರದಿಂದ ಬಂದೆ. ಯಾವತ್ತೂ ನಾನಿಲ್ಲಿ ಏಕಾಂಗಿ ಅನಿಸಿಲ್ಲ. ಆರು ತಿಂಗಳ ಮಟ್ಟಿಗೆ ಇರಲು ಬಂದವನಿಗೆ ಈಗ ಊರಿಗೆ ಹೋಗಲು ಮನಸ್ಸೇ ಬರುತ್ತಿಲ್ಲ. ನನ್ನಂತೆ ಕೃಷಿಯತ್ತ ಆಕಷರ್ಿತವಾದ ಒಂದು ಯುವ ಪಡೆಯೆ ಇಲ್ಲಿ ನನಗೆ ಸಿಕ್ಕಿತು ಎಂದು ಹೂ ನಗೆ ಬೀರುತ್ತಾರೆ.
ಯೋಜಿತ, ವ್ಯವಸ್ಥಿತ :ಬಿಳಿಗಿರಿ ರಂಗನ ಬೆಟ್ಟದ ತಳದಲ್ಲಿ ನೂರಾರು ಎಕರೆ ಪ್ರದೇಶದಲ್ಲಿರುವ ಅಮೃತ ಭೂಮಿ ದೇಸಿ ಜವಾರಿ ತಳಿಯ ಬೀಜ ಸಂರಕ್ಷಣೆಗಾಗಿಯೇ ಬೀಜ ಬ್ಯಾಂಕ್ ಘೋಷಣೆಯೊಂದಿಗೆ ಜನ್ಮ ತಾಳಿದ ಪುಣ್ಯಭೂಮಿ. ಅಲ್ಲಿರುವ ಪ್ರತಿಯೊಬ್ಬರಿಗೂ ಒಂದು, ಎರಡು ಎಕರೆ ಪ್ರದೇಶವನ್ನು ಹಂಚಿಕೆ ಮಾಡಿ ನಿಧರ್ಿಷ್ಟ ಬೆಳೆ ಪದ್ಧತಿಯಲ್ಲಿ ಪ್ರಯೋಗ ಮಾಡಲು ಹೇಳಲಾಗುತ್ತದೆ. ಅದಕ್ಕೆ ಬೇಕಾದ ತರಬೇತಿ ಮತ್ತು ಮಾಹಿತಿಯನ್ನು ಕೊಡಿಸಲಾಗುತ್ತದೆ.
ಇದೆಲ್ಲ ನಡೆಯುವ ಮೊದಲು ಹಲವು ಸುತ್ತಿನ ಸಮಲೋಚನಾ ಸಭೆಗಳು ನಿರಂತರವಾಗಿ ನಡೆದಿರುತ್ತವೆ. ಚುಕ್ಕಿಯವರ ನೇತೃತ್ವದಲ್ಲಿ ಪ್ರತಿ ತಿಂಗಳು ಅಲ್ಲಿ ಕೃಷಿ ಪ್ರಯೋಗದಲ್ಲಿ ತೊಡಗಿಕೊಂಡಿರುವವರ ಜತೆಗೆ ಚಚರ್ೆ, ಸಮಲೋಚನಾ ಸಭೆಗಳನ್ನು ನಡೆಸಲಾಗುತ್ತದೆ. ನಂತರ ಅಮೃತ ಭೂಮಿಯ ಕೋರ್ ಕಮಿಟಿಯಲ್ಲಿ ಸ್ಥಳೀಯ ರೈತ ಮುಖಂಡರು, ಟ್ರಸ್ಟ್ನ ಪದಾಧಿಕಾರಿಗಳು ಎಲ್ಲಾ ಸೇರಿ ಈ ವರ್ಷ ಬೆಳೆಯಬಹುದಾದ ಬೆಳೆ ಮತ್ತು ಬೇಸಾಯ ಕ್ರಮಗಳ ಬಗ್ಗೆ ವಾಷರ್ಿಕ ಯೋಜನೆಯೊಂದು  ಸಿದ್ಧಪಡಿಸುತ್ತಾರೆ. ನಂತರವೇ ವ್ಯವಸಾಯದ ಕೆಲಸ ಕಾರ್ಯಗಳ ಆರಂಭ.
ಎಕರೆ ಒಂದು, ಬೆಳೆ ಹಲವು : ನವೀನ್ ಪಾಲಿಗೆ ಒಂದು ಎಕರೆ ಹತ್ತು ಗುಂಟೆ ಪ್ರದೇಶವನ್ನು ನೀಡಲಾಗಿದೆ. ಅಲ್ಲಿ ಶೂನ್ಯ ಬಂಡವಾಳ ಕೃಷಿ ಸಾಧಕ ಸುಭಾಷ್ ಪಾಳೇಕರ್ ಪದ್ಧತಿಯಲ್ಲಿ ಬಾಳೆ ಕೃಷಿ ಮಾಡಲು ಹೇಳಲಾಗಿದೆ. ಜನವರಿ ಮೊದಲವಾರದಲ್ಲಿ ಆರುವರೆ * ಆರುವರೆ ಅಡಿ ಅಂತರದಲ್ಲಿ ಏಲಕ್ಕಿ ಬಾಳೆಯನ್ನು ನಾಟಿಮಾಡಲಾಗಿದೆ. ಭೂಮಿಗೆ ನೈಟ್ರೋಜನ್ ಸೇರಿಸಲು ಬಾಳೆ ಕಂದಿನ ಬುಡದ ಸುತ್ತಲ್ಲೂ ಅಲಸಂದೆ ಗಿಡ ಬೆಳೆಯಲಾಗಿದೆ. ಪಾಳೇಕರ್ ಪದ್ಧತಿಯಲ್ಲಿ ಜೀವಾಮೃತ ನೀಡುವ ನವೀನ್ ನೀರಿಗಾಗಿ ಸ್ಪಿಂಕ್ಲರ್ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಬಾಳೆಯ ನಡುವೆ ಮುಸುಕಿ ಜೋಳ, ಬೀನ್ಸ್, ಬೆಂಡೆ, ಬೂದು ಗುಂಬಳ, ಸಹಿ ಗುಂಬಳ, ಹರಳು, ಚೆಂಡು ಹೂ, ಕಲ್ಲಂಗಡಿ ಹಾಕುವ ಮೂಲಕ  ಆದಾಯದ ಜತೆಗೆ ಮಣ್ಣಿಗೆ ಜೀವಂತ ಮಲ್ಚಿಂಗ್ ವಿಧಾನವನ್ನು ಮಾಡಿ ಬಹು ಬೆಳೆಯ ಮಿಶ್ರ ಪದ್ಧತಿಗೆ ಆದ್ಯತೆ ನೀಡಿದ್ದಾರೆ. ಇದರಿಂದ ಆಯಾಯ ಕಾಲದಲ್ಲಿ ಬೆಳೆಯುವ ಅಲ್ಪಾವಧಿ ಬೆಳೆಗಳನ್ನು ಹಾಕಿರುವುದರಿಂದ ವರ್ಷಪೂತರ್ಿ ಆದಾಯ ನಿರೀಕ್ಷಿಸಬಹುದು.
ಬೀಜ ಹಾಕುವಾಗಲೂ ನಾಟಿ ತಳಿಯ ಏಕದಳ,ದ್ವಿದಳ ಜವಾರಿ ಬೀಜಗಳನ್ನೇ ಭಿತ್ತನೆ ಮಾಡಲಾಗಿದೆ. ವಾರಕ್ಕೊಮ್ಮೆ ಸಂಜೆ ಸಮಯದಲ್ಲಿ ಜೀವಾಮೃತ, ಹುಳಿ ಮಜ್ಜಿಗೆ, ಅಗ್ನಿ ಅಸ್ತ್ರವನ್ನು ಅಲ್ಟರ್ನೇಟಿವ್ ವಿಧಾನದಲ್ಲಿ ಗಿಡಗಳಿಗೆ ಸಿಂಪರಣೆ ಮಾಡುತ್ತಾರೆ. ಚೆಂಡು ಹೂ ಮತ್ತು ಹರಳು ಹಾಕಿರುವುದರಿಂದ ಸಾಕಷ್ಟು ರೋಗಗಳನ್ನು ತಡೆಯಬಹುದು.ಹೊರಗಿನಿಂದ ಬರುವ ಕೀಟಗಳು ಮೊದಲು ಚೆಂಡು ಹೂ ಮತ್ತು ಹರಳು ಗಿಡದ ಅಗಲವಾದ ಎಲೆಗಳಿಗೆ ಆಕಷರ್ಿತವಾಗುವುದರಿಂದ ಉಳಿದ ಗಿಡಗಳು ಬದುಕಿ ಉಳಿಯುತ್ತವೆ ಎನ್ನುವುದು ಇಲ್ಲಿ ನೋಡಿದರೆ ಗೊತ್ತಾಗುತ್ತದೆ ಎಂದು ಅರಳಿನಿಂತ ತೋಟವನ್ನು ತೋರಿಸುತ್ತಾರೆ.ಅಮೃತ ಭೂಮಿಗೆ ಬಂದ ಮೇಲೆ ಕೃಷಿಯ ಹತ್ತು ಹಲವು ಸಾಧ್ಯತೆಗಳು, ಮಾದರಿಗಳು ಸಿಕ್ಕವು. ಮರಳಿ ಊರಿಗೆ ಹೋಗಿ ಕೃಷಿಮಾಡಲು ಈಗ ದೃಢವಾದ ವಿಶ್ವಾಸಮೂಡಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. ನಾಡಿನ ಉದ್ದಗಲ್ಲಕ್ಕೂ ಇರುವ ನೂರಾರು ನೈಸಗರ್ಿಕ ಕೃಷಿಕರ ಸಂಪರ್ಕದಲ್ಲಿರು ನವೀನ್ ಅವರಿಂದ ಅಮೂಲ್ಯವಾದ ಚುರುಕು ಮೆಣಸಿನಕಾಯಿ, ಕಸ್ತೂರಿ ಅರಿಶಿನ, ಕೆಂಪು ಬೆಂಡೆ, ನಾಮದ ಬಣ್ಣದ ಮುಸುಕಿನ ಜೋಳ, ನೆಂಬೆ ಹೀಗೆ ನಾನಾ ತಳಿಗಳನ್ನು ತರಿಸಿಕೊಂಡು ನಾಟಿ ಮಾಡಿದ್ದಾರೆ. ಇಂತಹ ಯುವಕರಿಂದ ಮಾತ್ರ ನಾಟಿ ತಳಿಯ ಬೀಜಗಳು ಉಳಿದು ನಮ್ಮ ರೈತರನ್ನು ಬದುಕಿಸಬಲ್ಲವು. ಹೆಚ್ಚಿನ ಮಾಹಿತಿಗೆ ಆಸಕ್ತರು ಮೊ.9591066583 ಸಂಪಕರ್ಿಸಬಹುದು.