ಗ್ರಾಮೀಣ ಆರ್ಥಿಕತೆಗೆ ಕುಲಾಂತರಿ ಹೊಡೆತ : ಪಯಾರ್ಯದತ್ತ ರೈತರ ಚಿತ್ತ
# ಬೆಳೆ ಪದ್ಧತಿ ಬದಲಿಸಿಕೊಂಡ ಪ್ರಯೋಗಶೀಲ # ಕಾಡಂಚಿನ ಕರುಣಾಜನಕ ಕತೆ
ರೈತರ ಆದಾಯವನ್ನು ದ್ವಿಗುಣಗೊಳಿಸುವ ಘೋಷಣೆಯೊಂದಿಗೆ ಜಮೀನಿಗೆ ಬಂದ ಕುಲಾಂತರಿ ತಳಿಗಳು ಗ್ರಾಮೀಣ ಆರ್ಥಿಕತೆಯನ್ನು ಕೆಡಿಸಿ ಗುಂಡಾಂತರಮಾಡಿ ರೈತರನ್ನು ಸಾಲದ ಶೂಲಕ್ಕೆ ಸಿಲುಕಿಸಿದ ಕರುಣಾಜನಕ ಕತೆ ಇದು.
ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ಮತ್ತು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಹುತೇಕ ರೈತರು ಬಿಟಿ ಹತ್ತಿ ಬೆಳೆದ ಪರಿಣಾಮ ಅಕ್ಷರ ಸಹ ಬೀದಿಗೆ ಬಿದ್ದಿದ್ದಾರೆ.ಬಿಟಿ ಹತ್ತಿ ಎಂಬ ಕುಲಾಂತರಿ ತಳಿ ರೈತರ ಪಾಲಿನ ಮರಣಶಾಸನವಾಗಿದೆ.
ಈ ಭಾಗದ ರೈತರು ಬೆಳೆ ಪದ್ಧತಿಯನ್ನು ಬದಲಾವಣೆ ಮಾಡಿಕೊಳ್ಳದದಿದ್ದರೆ ಮುಂದೆ ಭಾರೀ ಅಪಾಯ ಕಾದಿದೆ ಎನ್ನುತ್ತಾರೆ ನಂಜನಗೂಡು ತಾಲೂಕು ಹಂಚೀಪುರದ ಪ್ರಯೋಗಶೀಲ ಕೃಷಿಕ ಪ್ರಸಾದ್. ಈಗಾಗಲೇ ಪ್ರೋಟ್ರೆ ಪದ್ಧತಿಯಲ್ಲಿ ಅರಿಶಿನ ಬೆಳೆದು ದಾಖಲೆ ಇಳುವರಿ ಪಡೆದಿರುವ ಪ್ರಸಾದ್ ಅವರನ್ನು ಕಂಡು ಮಾತನಾಡಿಸಿಕೊಂಡು ಬರಲು ಹೋಗಿದ್ದೆ.
ಪ್ರಗತಿಪರ ರೈತನನ್ನು ಹುಡುಕಿಕೊಂಡು ಹೊರಟವನಿಗೆ ಮೊದಲ ಬಾರಿಗೆ ಹಳ್ಳಿಗಳ ಕರಾಳಮುಖ ಕಂಡು ಬೆಚ್ಚಿಬೀಳುವಂತಾಯಿತು. ಹೆಡಿಯಾಲ ಮತ್ತು ಓಂಕಾರ ಅರಣ್ಯ ಪ್ರದೇಶ ವ್ಯಾಪ್ತಿಯ ಕಾಡಂಚಿನ ಪ್ರದೇಶದಲ್ಲಿ ಬರುವ ಗ್ರಾಮೀಣ ಪ್ರದೇಶಗಳ ಆಥರ್ಿಕ ಕುಸಿತದ ಹೆಜ್ಜೆಗುರುತುಗಳನ್ನು ಇಲ್ಲಿ ದಾಖಲಿಸಿದ್ದೇನೆ.
ಹಂಚೀಪುರ ನಂಜನಗೂಡು ತಾಲೂಕಿಗೆ ಸೇರಿದ ಗ್ರಾಮ. ಮೈಸೂರು ಅರಮನೆಗೂ ಹಂಚೀಪುರಕ್ಕೂ ಮರೆಯಲಾಗದ ಬಾಂಧವ್ಯ ಇದೆ. ಮೈಸೂರು ಅರಸರು ಇಲ್ಲಿನ ಕಾಡಿಗೆ ಬೇಟೆ ಆಡಲು ಬರುತ್ತಿದ್ದಾಗ ಗ್ರಾಮದ ಹಿರಿಯರ ಜೊತೆಗೆ ಉತ್ತಮ ಸಂಬಂಧವಿರಿಸಿಕೊಂಡಿದ್ದರು ಎಂದು ಈಗಲೂ ಊರಿನ ಹಿರಿಯರು ನೆನಪುಮಾಡಿಕೊಳ್ಳುತ್ತಾರೆ. ಈ ನೆನಪಿಗೆ ಸಾಕ್ಷಿಯಾಗಿ ರೈತರಿಗೆ ಸಾವಿರಾರು ಎಕರೆ ಕಾವಲ್ ಜಮೀನುಗಳನ್ನು ರಾಜರು ದಾನವಾಗಿಕೊಟ್ಟಿದ್ದಾರೆ.
"ಎಪ್ಪತ್ತರ ದಶಕದಲ್ಲಿ ಇಡೀ ಗ್ರಾಮದ ಆರ್ಥಿಕತೆಗೆ ಚೆನ್ನಾಗಿತ್ತು.ಮಳೆಯಾಶ್ರಯದಲ್ಲಿ ಇಲ್ಲಿನ ರೈತರು ರಾಗಿ,ಜೋಳ, ಉರುಳಿ,ಎಳ್ಳು,ಸೆಣಬು,ಉಚ್ಚೆಳ್ಳು,ಮೆಣಸಿನಕಾಯಿ,ದೇಸಿ ಹತ್ತಿ ಬೆಳೆದುಕೊಂಡು ಆರ್ಥಿಕವಾಗಿ ಸದೃಢರಾಗಿದ್ದರು. ಈಗ ಗ್ರಾಮದಲ್ಲಿರುವ ಎಲ್ಲಾ ಮನೆಗಳು ಎಳ್ಳು,ಜೋಳ,ಉರುಳಿ ಬೆಳೆದು ಕಟ್ಟಿರುವ ದೊಡ್ಡ ಮನೆಗಳು. ಬಿಟಿ ಹತ್ತಿ ಮತ್ತು ಹೊಗೆಸೊಪ್ಪಿನ ಪರಿಣಾಮ ಊರಿನ ಆಥರ್ಿಕತೆಗೆ ದೊಡ್ಡ ಹೊಡೆತ ಬಿತ್ತು.ಕಳೆದ ಇಪ್ಪತ್ತೈದು ವರ್ಷದಿಂದ ಈಚೆಗೆ ಊರಿನಲ್ಲಿ ಒಂದು ಇಟ್ಟಿಗೆಯನ್ನು ಇಟ್ಟು ಗೋಡೆಕಟ್ಟಿಲ್ಲ. ಈಗಿರುವ ಎಲ್ಲಾ ದೊಡ್ಡ ದೊಡ್ಡ ಮನೆಗಳು ಮೂವತ್ತು ವರ್ಷದ ಹಿಂದೆ ಕಟ್ಟಿರುವ ಹಳೆಯ ಮನೆಗಳು.ಹೊಸಮನೆಗಳ ಸುದ್ದಿಯೇ ಇಲ್ಲ. ಪ್ರತಿಯೊಬ್ಬ ರೈತರಿಗೂ ಬ್ಯಾಂಕಿನಲ್ಲಿ ಸಾಲ ಇದೆ.ಆದರೂ ಬಿಟಿ ಹತ್ತಿ ಮತ್ತು ಹೊಗೆಸೊಪ್ಪಿಗೆ ಪಯರ್ಾಯವಾಗಿ ಬೆಳೆ ಪದ್ಧತಿ ಬದಲಾವಣೆ ಮಾಡಿಕೊಳ್ಳಲು ರೈತರು ಮುಂದಾಗುತ್ತಿಲ್ಲ" ಎನ್ನುತ್ತಾರೆ ಪ್ರಸಾದ್.
ಬಿಟಿ ಹತ್ತಿ!.ಹಾಗೆಂದರೇನು ?:ಜೈವಿಕ ತಂತ್ರಜ್ಞಾನ ಶಾಖೆಗಳಲ್ಲಿ ಒಂದಾಗಿರುವ ಸಸ್ಯ `ಅಂಗಾಂಶ"ಕೃಷಿಯ ತತ್ವವನ್ನು ಉಪಯೋಗಿಸಿ ಬೆಳೆಸಿದ ಟ್ರಾನ್ಸ್ ಜೆನಿಕ್ ಸಸ್ಯಗಳು ಕೃಷಿ ಕ್ಷೇತ್ರದಲ್ಲಿ ಸದ್ದು ಮಾಡತೊಡಗಿವೆ. ಕುಲಾಂತರಿ ಸಾಸಿವೆಯೂ ರೈತನ ಮನೆಯ ಬಾಗಿಲು ಬಡಿಯುತ್ತಿದೆ. ಜೈವಿಕ ತಂತ್ರಜ್ಞಾನದ ಛತ್ರಛಾಯೆಯ ಅಡಿಯಲ್ಲಿಅನುವಂಶಿಕೀ ಅಭಿಯಂತಿಕೆಯನ್ನು ಬಳಸಿ ತಯಾರಿಸಿದ ಸಿದ್ಧ ವಸ್ತುವೇ (ಬಯೋ ತಂತ್ರಜ್ಞಾನ) ಬೀ.ಟಿ.ಹತ್ತಿ. ಹೆಚ್ಚು ಲಾಭ, ಕಾಯಿಕೊರಕ ಕೀಟಗಳಿಂದ ಮುಕ್ತಿ, ಕೀಟನಾಶಕ ಉಪಯೋಗದಲ್ಲಿ ಉಳಿತಾಯ,ಅಧಿಕ ಇಳುವರಿ ಎಂಬ ಘೋಷಣೆಯೊಂದಿಗೆ ಮಾರುಕಟ್ಟೆಗೆ ಬಂದ ಈ ಕುಲಾಂತರಿ ತಳಿ ಈಗ ರೈತರನೇ ಬಲಿ ಕೇಳುತ್ತಿರುವುದು ವಿಪರ್ಯಾಸ.
2002 ರಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಬಿಟಿ ಹತ್ತಿ ಕೃಷಿ ವಾಣಿಜ್ಯ ಕಂಪನಿ ಮೊನ್ಸಾಂಟೋ ಅಭಿವೃದ್ಧಿಪಡಿಸಿದ ಕುಲಾಂತರಿ ತಳಿ. ಹತ್ತಿ ಬೆಳೆಗಾರರು ಈಗ ಕುಲಾಂತರಿ ತಳಿಗಳನ್ನು ಕೈ ಬಿಡಬೇಕಾದ ಸಮಯ ಬಂದಿದೆ. ಬಿಟಿ ಹತ್ತಿ ತಳಿ ಪೀಡೆ ಕೀಟಗಳನ್ನು ಎದುರಿಸುವಲ್ಲಿ ಸೋತಿದೆ. ಗುಲಾಬಿ ಕಾಯಿಕೊರಕ ಕೀಟದ ಭಾದೆಗೆ ತುತ್ತಾಗಿರುವ ಈ ಕುಲಾಂತರಿ ತಳಿ ಗ್ರಾಮೀಣ ಆಥರ್ಿಕತೆಗೆ ದೊಡ್ಡ ಒಡೆತ ನೀಡಿದೆ.
ಬಿಟಿ ಹತ್ತಿ ಬೆನ್ನತ್ತಿ : ಪ್ರಸಾದ್ ಬಿಟಿ ಹತ್ತಿಯ ಕರಾಳಮುಖದ ಸ್ವಾನುಭವವನ್ನು ಹೇಳುತ್ತಾಹೋದರು... "ದಶಕದ ಹಿಂದೆ ಬಿಟಿ ಹತ್ತಿ ಬೆಳೆದಾಗ ಎಕರೆಗೆ ಹನ್ನೊಂದು ಕ್ವಿಂಟಾಲ್ ಹತ್ತಿ ಬಂತು. ಯಾವುದೇ ರಸಾವರಿ ಗೊಬ್ಬರ,ಔಷದಿ ಕೊಡದೆ ಇದ್ದರೂ ಉತ್ತಮ ಇಳುವರಿ ಬಂತು. ಎರಡನೇ ವರ್ಷ ಎಂಟು ಕ್ವಿಂಟಾಲ್ ಬಂತು. ಮೂರನೇ ವರ್ಷ ಆರು, ನಂತರ ಕ್ರಮೇಣ ಇಳುವರಿ ಕುಸಿಯುತ್ತಾ ಹೋಗಿ ಈಗ ಎರಡು ಕ್ವಿಂಟಾಲ್ ಹತ್ತಿ ಸಿಗುವುದು ದುರ್ಲಭವಾಗಿದೆ". ಈಗಾದರೆ ರೈತನಿಗೆ ಭಿತ್ತನೆ ಬೀಜ,ಗೊಬ್ಬರಕ್ಕೆ ಮಾಡಿದ ಖಚರ್ು ಬರುವುದಿಲ್ಲ.ರೈತರು ಸಾಲಗಾರರಾಗದೆ ಮತ್ತೇನು ಮಾಡಲು ಸಾಧ್ಯ ಹೇಳಿ ಸಾರ್" ಎನ್ನುತ್ತಾರೆ.
ಪ್ರತಿಯೊಬ್ಬ ರೈತರ ಪರಿಸ್ಥಿತಿಯು ಇದಕ್ಕಿಂತ ಭಿನ್ನವಾಗಿಲ್ಲ ಎನ್ನುವುದು ಅವರು ಕಂಡುಕೊಂಡಿರುವ ಸತ್ಯ. ಕಣ್ಣಿಗೆ ಕಾಣುವಷ್ಟು ದೂರಕ್ಕೂ ಬೆಳೆದು ನಿಂತ ಬಿಟಿ ಹತ್ತಿ ಹೊಲಗಳು ಹೂಕಚ್ಚಿ,ಕಾಯಾಗದೆ ಸೊಪ್ಪನ್ನು ಹೊದ್ದುನಿಂತ ಕಡ್ಡಿಯಂತೆ ಕಾಣುತ್ತವೆ.
ಒಂದು ಎಕರೆ ಹತ್ತಿ ಬೆಳೆಯಲು ಬೀಜ,ಗೊಬ್ಬರ ಸೇರಿದಂತೆ ಕನಿಷ್ಠ ಹತ್ತು ಸಾವಿರ ರೂಪಾಯಿ ವೆಚ್ಚವಾಗುತ್ತದೆ.ಪ್ರತಿ ಕ್ವಿಂಟಾಲ್ ಹತ್ತಿಗೆ ಮಾರುಕಟ್ಟೆಯಲ್ಲಿ ಐದೂವರೆ ಸಾವಿರ ರೂಪಾಯಿ ಇದೆ.ಒಂದು ಕ್ವಿಂಟಾಲ್ ಹತ್ತಿ ಬಿಡಿಸಲು ಸಾವಿರ ರೂಪಾಯಿ ವೆಚ್ಚವಾಗುತ್ತದೆ.ಎಕರೆಗೆ ಎರಡು ಕ್ವಿಂಟಾಲ್ ಹತ್ತಿ ಬಂದರೆ ರೈತ ಬದುಕುವುದಾದರೂ ಹೇಗೆ? ಎನ್ನುವುದು ಅವರ ಪ್ರಶ್ನೆ.
ಭಿತ್ತಿದ ನಾಲ್ಕನೇ ತಿಂಗಳಿನಿಂದ ಹತ್ತಿ ಕೊಯ್ಲಿಗೆ ಬರುತ್ತದೆ. ಎರಡು ತಿಂಗಳು ಕಟಾವಾದ ನಂತರ ಆರು ತಿಂಗಳಿನಲ್ಲಿ ಹತ್ತಿ ಬೇಸಾಯ ಮುಗಿದುಹೋಗುತ್ತದೆ. ಈಗಲೂ ಎಕರೆಗೆ ಏಳೆಂಟು ಕ್ವಿಂಟಾಲ್ ಹತ್ತಿ ಇಳುವರಿ ತೆಗೆಯುವವರು ಇದ್ದಾರೆ.ಆದರೆ ಅವರೆಲ್ಲ ಹೆಚ್ಚು ರಸಾವರಿ ಗೊಬ್ಬರ ಬಳಸಿ,ಕ್ರಿಮಿನಾಶಕ ಸಿಂಪಡಿಸಿ,ಹನಿ ನೀರಾವರಿಯಲ್ಲಿ ಬೆಳೆಯುತ್ತಿರುವ ರೈತರು. ಅಂತಹ ರೈತರೂ ಕೂಡ ಉತ್ಪಾದನಾ ವೆಚ್ಚ ಹೆಚ್ಚಾದ ಪರಿಣಾಮ ಸಾಲದ ಸುಳಿಗೆ ಸಿಲುಕಿ ನರಳುತ್ತಿದ್ದಾರೆ.
ಡಿಸಿಎಚ್,ವಿಜಯಲಕ್ಷ್ಮಿ,ವರಹಾ,ಸುವಿಧಾ,ಜಯಧರದಂತಹ ಸ್ಥಳೀಯ ಹತ್ತಿ ಬೀಜಗಳನ್ನು ಒದಗಿಸುವ ಮೂಲಕ ದೇಸಿ ಮತ್ತು ಸಂಸ್ಕರಣ ತಳಿಗಳಿಗೆ ಸರಕಾರ ಆದ್ಯತೆ ನೀಡಬೇಕು. ಬಿಟಿ ಕುಲಾಂತರಿ ತಳಿಯನ್ನು ಸಂಪೂರ್ಣ ನಿಷೇಧಮಾಡಬೇಕು ಎಂದು ಪ್ರಸಾದ್ ಹೇಳುತ್ತಾರೆ.
ಗುಂಡ್ಲುಪೇಟೆ ತಾಲೂಕಿನ ವೀರನಪುರ ಸುತ್ತಮುತ್ತಲಿನಲ್ಲಿ ಬಿಟಿ ಹತ್ತಿ ಬೆಳೆದ ರೈತರ ಸ್ಥಿತಿ ಇದಕ್ಕಿಂತ ಭಿನ್ನವೇನಿಲ್ಲ.ಅಲ್ಲಿಯೂ ಕೂಡ "ಎಕರೆಗೆ ಒಂದು ಕ್ವಿಂಟಾಲ್ ಹತ್ತಿ ಸಿಗುವುದು ಕಷ್ಟವಾಗಿದೆ.ಭಿತ್ತನೆ ಬೀಜಕ್ಕೆ ತೆತ್ತ ಹಣ ಮತ್ತು ಕೂಲಿಯೂ ಬಾರದೆ ರೈತ ಬೀದಿಗೆ ಬಿದ್ದಿದ್ದಾನೆ.ಯಾವತಳಿ ಎಂದು ಅರಿವೇ ಇಲ್ಲದೆ ಮಾರುಕಟ್ಟೆಯಲ್ಲಿ ಸಿಕ್ಕ ಬಿಟಿ ಹತ್ತಿಯನ್ನು ತಂದು ಬೆಳೆಸಿದ ರೈತ,ಕಾಯಿ ಕಚ್ಚದೆ ಕಡ್ಡಿಯಂತೆ ನಿಂತಿರುವ ಹತ್ತಿ ಗಿಡಗಳನ್ನು ಕಂಡು ಆಕಾಶದತ್ತ ಮುಖಮಾಡಿ ಕಣ್ಣಿರು ಸುರಿಸುತ್ತಿದ್ದಾನೆ" ಎನ್ನುತ್ತಾರೆ ಸಾವಯವ ಕೃಷಿಕ,ತಾಲೂಕು ಕಸಾಪ ಅಧ್ಯಕ್ಷ ಚಿದಾನಂದ.
"ಹೊಗೆ"ಸೊಪ್ಪಿನ ಧಗೆ : ಹತ್ತಿಯನ್ನು ಬಿಟ್ಟರೆ ಈ ಪ್ರದೇಶದಲ್ಲಿ ಹೆಚ್ಚು ವ್ಯಾಪಿಸಿಕೊಂಡಿರುವ ಬೆಳೆ ಹೊಗೆಸೊಪ್ಪು. ಈ ಬೆಳೆ ಬಂದ ಪರಿಣಾಮ ಈ ಭಾಗದಲ್ಲಿ ಕಾಡುನಾಶವಾಗಿದೆ. ಜಮೀನುಗಳಲ್ಲಿದ್ದ ಮರಗಳು ಹೊಗೆಸೊಪ್ಪು ಬೇಯಿಸಲು ಬೆಂಕಿಗೆ ಆಹುತಿಯಾಗಿವೆ. ಮರಗಳು ಕಣ್ಮರೆಯಾದ ಪರಿಣಾಮ ಮಳೆಯೂ ಕಡಿಮೆಯಾಗಿದೆ. ಈ ಹಿಂದೆ 200 ರಿಂದ 300 ಅಡಿಯಲ್ಲಿ ಅಂತರ್ಜಲ ಸಿಗುತ್ತಿತ್ತು.ಈಗ 600 ಅಡಿ ಭೂಮಿಕೊರೆದರೂ ಹನಿ ನೀರಿಲ್ಲ. ಇದಕ್ಕೆಲ್ಲ ಈಗಿರುವ ಕೃಷಿ ಪದ್ಧತಿಗಳೇ ಕಾರಣ ಎನ್ನುವುದು ಪ್ರಸಾದ್ ಅವರ ವಾದ.ಐದಾರು ಎಕರೆ ಪ್ರದೆಶದಲ್ಲಿ ಹೊಗೆಸೊಪ್ಪು ಬೆಳೆಯಲು ಕನಿಷ್ಠ ಮೂರು ಲಕ್ಷ ಉತ್ಪಾದನಾ ವೆಚ್ಚ ಬರುತ್ತಿದೆ. ತಂಬಾಕು ಮಂಡಳಿಯವರೇ ಎಕರೆಗೆ 60 ಸಾವಿರ ರೂಪಾಯಿ ಮೌಲ್ಯದ ರಸಗೊಬ್ಬರ ಕೊಡುತ್ತಾರೆ. ಎಲೆ ಮುರಿದು ಬ್ಯಾರನ್ಗೆ ಕಟ್ಟಲು,ಬೇಯಿಸಲು ಸೌದೆತರಲು,ಬ್ಯಾರನ್ನಿಂದ ಇಳಿಸಿ ಬೇಲ್ ಕಟ್ಟುವುದು ಎಲ್ಲಾ ಸೇರಿ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಪರಿಣಾಮ ಎಕರೆಗೆ ಲಕ್ಷ ರೂಪಾಯಿ ವೆಚ್ಚಮಾಡಿ ತಂಬಾಕು ಬೆಳೆದು ಮಾರಾಟ ಮಾಡಿದರೆ 80 ಸಾವಿರ ಹಣ ಸಿಗುತ್ತದೆ. ಕೈಯಿಂದಲೇ 20 ಸಾವಿರ ನಷ್ಟ ಅನುಭವಿಸಬೇಕಾದ ದಾರುಣ ಸ್ಥಿತಿ ರೈತರದು.
ಇದನ್ನು ಅರಿತ ಶೇಕಡ 50 ರಷ್ಟು ರೈತರು ಈಗ ತಂಬಾಕು ಬೆಳೆಯುವುದಕ್ಕೆ ವಿದಾಯ ಹೇಳಿ ಟೊಮಟೊ,ಅರಿಶಿನ ಮತ್ತಿತರ ತರಕಾರಿ ಬೆಳೆ ಬೆಳೆಯುವುದ ಕಡೆಗೆ ಮುಖಮಾಡಿದ್ದಾರೆ.ಆದರೂ ಬ್ಯಾಂಕುಗಳು ತಂಬಾಕು ಬೆಳೆಯುವ ರೈತರಿಗೆ ಸುಲಭವಾಗಿ ಸಾಲ ನೀಡಿದ ಪರಿಣಾಮ,ಐದಾರು ಎಕರೆ ಜಮೀನು ಇರುವ ರೈತರಿಗೆ ಎಂಟರಿಂದ ಹತ್ತು ಲಕ್ಷ, 30 ಎಕರೆ ಹೊಂದಿರುವ ರೈತರಿಗೆ 50 ರಿಂದ 60 ಲಕ್ಷ ರೂಪಾಯಿ ಸಾಲವಿದೆ ಎನ್ನುತ್ತಾರೆ ಗ್ರಾಮದ ಹಿರಿಯರು.
ಈ ಭಾಗದಲ್ಲಿ ತಂಬಾಕು,ಬಿಟಿ ಹತ್ತಿ,ಅರಿಶಿನ,ಟೊಮಟೊ,ಎಳ್ಳು ಈ ಐದೇ ಬೆಳೆಗಳು ಹೊಲಗಳನ್ನು ಆಕ್ರಮಿಸಿಕೊಂಡಿವೆ. ರೈತರು ಬೆಳೆ ವೈವಿಧ್ಯತೆ ಕಾಪಾಡಿಕೊಂಡು ಸಮಗ್ರ ಪದ್ಧತಿಯಲ್ಲಿ ಬೇಸಾಯ ಮಾಡಲು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅರಿವು ಮೂಡಿಸಬೇಕು.
ಇದು ಕಾಡಂಚಿನ ಪ್ರದೇಶವಾದ ಕಾರಣ ಇಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚು.ಆನೆ, ಚಿರತೆ,ಹಂದಿ,ನವಿಲು,ಜಿಂಕೆ,ಕಡವೆಗಳು ಭಿತ್ತಿದ ಬೆಳೆಯನ್ನು ಉಳಿಸುವುದಿಲ್ಲ.ಆಗಾಗಿ ಸಾಂಪ್ರದಾಯಿಕ ಸ್ಥಳೀಯ ಬೆಳೆ ಬೆಳೆಯುತ್ತಿದ್ದ ರೈತರು ಮೂರು ದಶಕದಹಿಂದೆ ರೈತರು ಬಿಟಿ ಹತ್ತಿ ಮತ್ತು ಹೊಗೆಸೊಪ್ಪಿನ ಬೇಸಾಯಕ್ಕೆ ಶಿಫ್ಟ್ ಆದರು.ಈಗ ಆ ಕೃಷಿಯೇ ರೈತರ ಪಾಲಿನ ಮರಣಶಾಸನವಾಗಿರುವುದು ದುರಂತವಾಗಿದೆ. ತಮಾಷೆ ಎಂದರೆ ಮೊದಲು ಆನೆಗಳು ಹತ್ತಿ ಗಿಡಗಳನ್ನು ತಿನ್ನುತ್ತಿರಲಿಲ್ಲ.ಈಗ ಆನೆಗಳು ಹತ್ತಿಗಿಡಗಳನ್ನು ತಿನ್ನತೊಡಗಿವೆ.ಹಂದಿಗಳು ಹತ್ತಿ ಕಾಯನ್ನು ತಿಂದು ಮುಗಿಸುತ್ತಿವೆ.ದಾರಿ ಕಾಣದೆ ರೈತರು ಕಂಗಾಲಾಗಿದ್ದಾರೆ. ಹೆಡಿಯಾಲ,ಓಂಕಾರ್ ಅರಣ್ಯವಲಯದಲ್ಲಿ ರೈಲ್ವೆ ಕಂಬಿಗಳನ್ನು ತಡೆಗೋಡೆಯಾಗಿ ಹಾಕಿರುವುದರಿಂದ ಈಗ ಬಹುತೇಕ ಆನೆ ಹಾವಳಿ ನಿಯಂತ್ರಣಕ್ಕೆ ಬಂದಿದೆ.
"ಈಗಲಾದರೂ ರೈತರು ಸಾಮೂಹಿಕವಾಗಿ ಒಟ್ಟಾಗಿ ಸರದಿ ಮೇಲೆ ಹಂದಿ,ಜಿಂಕೆಗಳಿಗೆ ಕಾವಲು ಇದ್ದು ಮೊದಲಿನಂತೆ ರಾಗಿ,ಜೋಳ,ಎಳ್ಳು,ಉರುಳಿಯಂತಹ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆದುಕೊಳ್ಳಬೇಕು. ಗೇರು,ಹುಣಸೆ,ಹಲಸು,ನಿಂಬೆ,ಜಂಬುನೇರಳೆಯಂತಹ ಒಣ ಭೂಮಿ ಬೇಸಾಯದ ಕಡೆಗೆ ಗಮನಹರಿಸಬೇಕು" ಎನ್ನುತ್ತಾರೆ ಪ್ರಸಾದ್.
ಈ ನಿಟ್ಟಿನಲ್ಲಿ ಪ್ರಯೋಗಶೀಲರಾಗಿರುವ ಪ್ರಸಾದ್ ಒಣಭೂಮಿ ತೋಟಗಾರಿಕೆ ಮಾಡಲು ಮುಂದಾಗಿದ್ದಾರೆ. "ಆಂದೋಲನ ಪತ್ರಿಕೆಯಲ್ಲಿ ಬರುತ್ತಿರುವ `ಬಂಗಾರದ ಮನುಷ್ಯರು" ಅಂಕಣದಿಂದ ಪ್ರಭಾವಿತರಾಗಿ ಹತ್ತಾರು ತೋಟಗಳನ್ನು ಸುತ್ತಿಬಂದು, ಬಿಟಿ ಹತ್ತಿ ಮತ್ತು ಹೊಗೆಸೊಪ್ಪಿಗೆ ವಿದಾಯ ಹೇಳಿದ್ದು ಸಾವಯವ ಕೃಷಿ ಮಾಡಲು ನಿರ್ಧರಿಸಿ ಮುಂದುವರಿಯುತ್ತಿದ್ದೇನೆ" ಎನ್ನುತ್ತಾರೆ.
"ಕುಸಿದ ಅಂತರ್ಜಲ,ಕಡಿಮೆಯಾದ ಮಳೆಯ ಪ್ರಮಾಣ, ಹಸಿರುಕ್ರಾಂತಿ ಹೆಸರಿನಲ್ಲಿ ನಡೆದ ವಂಚನೆ,ರಾಸಾಯನಿಕ ಕೃಷಿಯ ದುಷ್ಪಾರಿಣಾಮಗಳನ್ನು ಅರಿತು ರೈತ ಮುನ್ನಡೆಯದಿದ್ದರೆ ಮುಂದೆ ಎದುರಾಗುವ ಘೋರ ದುರಂತವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಆದ್ದರಿಂದ ನಮ್ಮ ಭಾಗದಲ್ಲಿ ಕೃಷಿ ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸುವ ಮೂಲಕ ಬೆಳೆ ಪದ್ಧತಿಯನ್ನು ಬದಲುಮಾಡಿಕೊಳ್ಳಲು ಮನವೊಲಿಸಬೇಕು" ಎಂದು ಪ್ರಸಾದ್ ಹೇಳುತ್ತಾರೆ. ಹೆಚ್ಚಿನ ಮಾಹಿತಿಗೆ ಪ್ರಸಾದ್ ಹಂಚೀಪುರ 9449732255 ಸಂಪರ್ಕಿಸಿ