ಕಲ್ಲಂಗಡಿ ಬೆಳೆದ ರೈತನಿಗೆ `ಕಹಿ',ಮಧ್ಯವರ್ತಿಗೆ `ಸಿಹಿ' !
# ಅಧಿಕ ಆದಾಯದ ಆಸೆಗೆ ಕೈಸುಟ್ಟುಕೊಂಡ ರೈತರು
.ರಾಜ್ಯದ ಬಹುತೇಕ ಎಲ್ಲ ಪ್ರದೇಶಗಳಲ್ಲೂ ಕಲ್ಲಂಗಡಿ ಬೆಳೆಯುತ್ತಾರೆ.ಈ ಬಾರಿ ಆಂಧ್ರ,ತೆಲಂಗಾಣ ಸೇರಿದಂತೆ ನಮ್ಮಲ್ಲೂ ಹೆಚ್ಚಾಗಿ ಕಲ್ಲಂಗಡಿ ಬೆಳೆದ ಪರಿಣಾಮ ಪೂರೈಕೆ ಹೆಚ್ಚಾಗಿ ಬೇಡಿಕೆ ಕುಸಿಯಿತು. ಬೇಸಿಗೆ ಮತ್ತು ರಂಜಾನ್ ಕಾಲದಲ್ಲಿ ಸಾಮಾನ್ಯವಾಗಿ ಕಲ್ಲಂಗಡಿಗೆ ಕೆಜಿಗೆ ಕನಿಷ್ಠ ಏಳು ರೂಪಾಯಿಯಾದರೂ ಗ್ಯಾರಂಟಿ ಎಂಬ ರೈತರ ನಿರೀಕ್ಷೆ ಸುಳ್ಳಾಯಿತು.ಬಹುತೇಕ ರೈತರು ಬಾಳೆಯೊಂದಿಗೆ ಮಿಶ್ರ ಬೆಳೆಯಾಗಿ ಕಲ್ಲಂಗಡಿ ಹಾಕಿದರೆ,ಕೆಲವರು ಏಕ ಬೆಳೆಯಾಗಿಯೂ ಬೆಳೆಯುತ್ತಾರೆ. ಒಂದು ಎಕರೆಗೆ ನಾಲ್ಕು ಸಾವಿರ ಸಸಿಗಳು ಬೇಕಾಗುತ್ತದೆ.ಪ್ರತಿಯೊಂದು ಗಿಡದಿಂದ ಎರಡು ಹಣ್ಣುಗಳು ಬಿಟ್ಟು ಆರು ಕೆಜಿ ಇಳುವರಿ ಬಂದರೆ ಎಕರೆಗೆ ಇಪ್ಪತ್ತನಾಲ್ಕು ಟನ್ ಇಳುವರಿ ಬರಬೇಕು.ಬೇಸಾಯ ಕ್ರಮದಲ್ಲಿ ವ್ಯತ್ಯಾಸವಾದರೆ, ನರ್ಸರಿಯಿಂದ ತರುವ ಗಿಡದ ಆಯ್ಕೆಯಲ್ಲಿ ಎಡವಿದರೆ ಇಳುವರಿ ಕಡಿಮೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ದರ ಕುಸಿದರೆ ರೈತರು ಹೆಚ್ಚು ನಷ್ಟ ಅನುಭವಿಸುತ್ತಾರೆ.ಈ ಬಾರಿ ಆದದ್ದು ಅದೆ.ಹಾಕಿದ ಬಂಡವಾಳಕ್ಕೆ ಮೋಸವಾಗದಂತೆ ಸ್ವಲ್ಪ ಆದಾಯವೂ ಬರುವಂತೆ ಕಲ್ಲಂಗಡಿ ಬೇಸಾಯಮಾಡಿದ ಕೃಷಿಕ /ಅಂಕಣಕಾರನ ಸ್ವ ಅನುಭವ ಇಲ್ಲಿದೆ.
==============================================
ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ ತರುವುದೆಂಬ ಆಸೆಯಿಂದ ಕಲ್ಲಂಗಡಿ ಬೆಳೆದ ರೈತ ಈ ಬಾರಿ ನಷ್ಟ ಅನುಭವಿಸಿದ್ದಾನೆ. ಕೇವಲ ಅರವತ್ತು ದಿನದಲ್ಲಿ ಹೊಲದಿಂದ ನೇರ ಮಾರುಕಟ್ಟೆಗೆ ಬರುವ ಹಣ್ಣುಗಳನ್ನು ಕೇಳುವವರಿಲ್ಲದೆ ಮಧ್ಯವತರ್ಿಗಳು ಮತ್ತು ಗ್ರಾಹಕರಿಗೆ ಕಲ್ಲಂಗಡಿ ಸಿಹಿಯಾದರೆ ಬೆಳೆದ ರೈತನಿಗೆ ಕಹಿಯಾಗಿದೆ.
ಕಲ್ಲಂಗಡಿ ಬೆಳೆಯಲು ಹಾಕಿದ ಬಂಡವಾಳವೂ ಕೈಸೇರದೆ ರೈತರು ಅಪಾರ ನಷ್ಟ ಅನುಭವಿಸಿದ್ದಾರೆ. ಭೂಮಿ,ನೀರು ಮತ್ತು ರೈತನ ಶ್ರಮ ಹೊರತುಪಡಿಸಿದರೂ ಒಂದು ಎಕರೆ ಕಲ್ಲಂಗಡಿ ಬೆಳೆಯಲು ಕನಿಷ್ಠ ಅರವತ್ತು ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಆದರೆ ಈ ಬಾರಿ ಇಳುವರಿಯೂ ಕೈಕೊಟ್ಟು ದರವೂ ಇಲ್ಲದೆ ಕಲ್ಲಗಂಡಿ ಬೆಳೆದ ರೈತ ಕೈ ಸುಟ್ಟುಕೊಂಡಿದ್ದಾನೆ.
ಕೇವಲ 60 ದಿನದಲ್ಲಿ ಕಲ್ಲಂಗಡಿ ಬೆಳೆದು ಲಕ್ಷ ರೂಪಾಯಿ ಸಂಪಾದಿಸಿದ ರೈತ. ಕಡಿಮೆ ಅವಧಿಯಲ್ಲಿ ಅಧಿಕ ಆದಾಯ ಎಂಬ ಸುದ್ದಿಗಳನ್ನು ಓದಿ ಕಲ್ಲಂಗಡಿ ಬೆಳೆದ ರೈತರು ನಷ್ಟ ಅನುಭವಿಸುವಂತಾಗಿದೆ. ಇದೆಲ್ಲ ಸಮಸ್ಯೆ ಮತ್ತು ಸವಾಲುಗಳ ನಡುವೆಯೂ ಒಂದಷ್ಟು ರೈತರು ಉತ್ತಮ ತಳಿಯ ಗಿಡಗಳ ಆಯ್ಕೆ ಮತ್ತು ವೈಜ್ಞಾನಿಕ ನಿರ್ವಹಣೆಮಾಡಿ ಉತ್ತಮ ಇಳುವರಿ ಪಡೆದು ಹಾಕಿದ ಬಂಡವಾಳಕ್ಕೆ ಮೋಸವಾಗದಂತೆ ಸ್ವಲ್ಪ ಆದಾಯಗಳಿಸಿದ್ದಾರೆ.ಅಂತಹವರ ಎರಡು ತಿಂಗಳ ದುಡಿಮೆಗೆ ಕನಿಷ್ಠ ಕೂಲಿ ಸಿಕ್ಕಿದಂತಾಗಿದೆ. ಈ ಗುಂಪಿಗೆ ಸೇರುವ ರೈತರಲ್ಲಿ ನಾನು ಕೂಡ ಒಬ್ಬ ಎನ್ನುವುದು ವಿಶೇಷ. ಈ ವಾರದ ಅಂಕಣದಲ್ಲಿ ಕಲ್ಲಂಗಡಿ ಬೇಸಾಯದ ನನ್ನ ಅನುಭವಗಳನ್ನೇ ಹಂಚಿಕೊಂಡಿದ್ದೇನೆ.
ಕಲ್ಲಂಗಡಿ ಮೂಲತಃ ಆಫ್ರೀಕಾ ದೇಶದ ಬಳ್ಳಿ ಗಿಡ. ಇದನ್ನು ಬಚ್ಚಲಗಾಯಿ,ವಾಟರ್ ಮೆಲನ್ ಎಂದೂ ಕರೆಯುತ್ತಾರೆ. ಹೆಚ್ಚು ಉಷ್ಣತೆಇರುವ ಪ್ರದೇಶದಲ್ಲಿ ಬೆಳೆದ ಹಣ್ಣುಗಳು ಸಿಹಿಯಾಗಿರುತ್ತವೆ.ಹಾಗಾಗಿ ನಮ್ಮಲ್ಲಿ ಆಂಧ್ರಪ್ರದೇಶ,ಚಿತ್ರದುರ್ಗದ ಕಡೆ ಬೆಳೆದ ಹಣ್ಣುಗಳಿಗೆ ಹೆಚ್ಚು ಬೇಡಿಕೆ ಇದೆ.ತಂಪಾದ ವಾತಾವರಣದಲ್ಲಿ ಬೆಳೆದರೆ ಇಳುವರಿ ಕಡಿಮೆ. ರುಚಿಯೂ ಇರುವುದಿಲ್ಲ.ರಾಜ್ಯದ ಬಹುತೇಕ ಎಲ್ಲ ಪ್ರದೇಶಗಳಲ್ಲೂ ಕಲ್ಲಂಗಡಿ ಬೆಳೆಯುತ್ತಾರೆ.ಈ ಬಾರಿ ಆಂಧ್ರ,ತೆಲಂಗಾಣ ಸೇರಿದಂತೆ ನಮ್ಮಲ್ಲೂ ಹೆಚ್ಚಾಗಿ ಕಲ್ಲಂಗಡಿ ಬೆಳೆದ ಪರಿಣಾಮ ಪೂರೈಕೆ ಹೆಚ್ಚಾಗಿ ಬೇಡಿಕೆ ಕುಸಿಯಿತು. ಬೇಸಿಗೆ ಮತ್ತು ರಂಜಾನ್ ಕಾಲದಲ್ಲಿ ಸಾಮಾನ್ಯವಾಗಿ ಕಲ್ಲಂಗಡಿಗೆ ಕೆಜಿಗೆ ಕನಿಷ್ಠ ಏಳು ರೂಪಾಯಿಯಾದರೂ ಗ್ಯಾರಂಟಿ ಎಂಬ ರೈತರ ನಿರೀಕ್ಷೆ ಈ ಬಾರಿ ಸುಳ್ಳಾಗಿದೆ.
ಕಲ್ಲಂಗಡಿಯಲ್ಲಿ ಹಲವು ತಳಿಗಳಿದ್ದು ನಮ್ಮಲ್ಲಿ ಸಾಮಾನ್ಯವಾಗಿ ಐಸ್ ಬಾಕ್ಸ್ ಎಂಬ ಕಡು ಹಸಿರು ಬಣ್ಣದ ಹಣ್ಣನ್ನು ಹೆಚ್ಚಾಗಿ ಬೆಳೆಯುತ್ತಾರೆ.ಕೋಲಾರ, ಬೆಂಗಳೂರು ಗ್ರಾಮಾಂತರ ಸುತ್ತಮುತ್ತ ದುಂಡಗಿರುವ ದೊಡ್ಡಗಾತ್ರದ ಪಟ್ಟೆ ಪಟ್ಟೆಯ ನಾಮಧಾರಿ ತಳಿಯ ಹಣ್ಣುಗಳನ್ನು ಬೆಳೆಯಲಾಗುತ್ತದೆ.
ಬಹುತೇಕ ಶೇಕಡ 80 ರಷ್ಟು ರೈತರು ಬಾಳೆಯೊಂದಿಗೆ ಮಿಶ್ರ ಬೆಳೆಯಾಗಿ ಕಲ್ಲಂಗಡಿ ಹಾಕಿದರೆ,ಕೆಲವರು ಕಲ್ಲಂಗಡಿಯನ್ನೇ ಏಕ ಬೆಳೆಯಾಗಿಯೂ ಬೆಳೆಯುತ್ತಾರೆ. ಒಂದು ಎಕರೆಗೆ ನಾಲ್ಕು ಸಾವಿರ ಸಸಿಗಳು ಬೇಕಾಗುತ್ತದೆ.ಪ್ರತಿಯೊಂದು ಗಿಡದಿಂದ ಎರಡು ಹಣ್ಣುಗಳು ಬಿಟ್ಟು ಆರು ಕೆಜಿ ಇಳುವರಿ ಬಂದರೆ ಎಕರೆಗೆ ಇಪ್ಪತ್ತನಾಲ್ಕು ಟನ್ ಇಳುವರಿ ಬರುತ್ತದೆ.ಬೇಸಾಯ ಕ್ರಮದಲ್ಲಿ ವ್ಯತ್ಯಾಸವಾದರೆ, ನರ್ಸರಿಯಿಂದ ತರುವ ಗಿಡದ ಆಯ್ಕೆಯಲ್ಲಿ ಎಡವಿದರೆ ಇಳುವರಿ ಕಡಿಮೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ದರ ಕುಸಿದರೆ ರೈತರು ಹೆಚ್ಚು ನಷ್ಟ ಅನುಭವಿಸಬೇಕಾಗುತ್ತದೆ.ಈ ಬಾರಿ ಆದದ್ದು ಅದೆ.
ಈ ಸಲ ನರ್ಸರಿಯಿಂದ ರೈತರಿಗೆ ಕೊಟ್ಟ ಗಿಡಗಳು ಸರಿಯಾಗಿ ಹೂ ಕಚ್ಚದೆ,ಕಾಯಿಗಳ ಪ್ರಮಾಣ ಕಡಿಮೆಯಾಗಿ ಎಕರೆಗೆ ಏಳರಿಂದ 12 ಟನ್ ಇಳುವರಿ ಬರುವುದೇ ದುರ್ಲಬವಾಯಿತು. ಕಳೆದ ವರ್ಷ ಇದೆ ವೇಳೆಯಲ್ಲಿ ಪ್ರತಿ ಕೆಜಿಗೆ ರೈತರ ಹೊಲದಿಂದ ಆರರಿಂದ ಹನ್ನೆರಡು ರೂಪಾಯಿವರೆಗೂ ಕೊಂಡುಕೊಳ್ಳುತ್ತಿದ್ದ ಮಧ್ಯವತರ್ಿ ವ್ಯಾಪಾರಿಗಳು ಈ ಬಾರಿ ದರ ಕುಸಿದ ಪರಿಣಾಮ ಕಲ್ಲಂಗಡಿ ಬೆಳೆದ ರೈತರ ಹೊಲದತ್ತ ಸುಳಿಯದೆ ಸತಾಯಿಸಿದರು. ಪ್ರತಿ ಕೆಜಿಗೆ ಮೂರು ರೂಪಾಯಿಯಿಂದ ಶುರುವಾದ ಕಲ್ಲಂಗಡಿ ಹಣ್ಣಿನ ದರ ಐದು ರೂಪಾಯಿ ಐವತ್ತು ಪೈಸೆವರೆಗೆ ಏರಿಕೆಯಾಗಿ ಮತ್ತೆ ಕುಸಿಯಿತು. ಇಳುವರಿಯೂ ಬಾರದೆ ಸೂಕ್ತ ದರವೂ ಸಿಗದೆ ಕಲ್ಲಂಗಡಿ ಬೆಳೆದ ರೈತರು ನಷ್ಟ ಅನುಭವಿಸುವಂತಾಯಿತು.
ಒಂದು ಎಕರೆ ಕಲ್ಲಂಗಡಿ ಬೆಳೆಯಲು ಉಳುಮೆ ಮಾಡಿ ಕೊಟ್ಟಿಗೆ ಗೊಬ್ಬರ,ಬೇವಿನಹಿಂಡಿ ಹಾಕಲು,ನರ್ಸರಿಯಿಂದ ಗಿಡತರಲು,ಮಲ್ಚಿಂಗ್ ಶೀಟ್ ಹಾಕಲು ನಂತರ ದ್ರವರೂಪದ ಗೊಬ್ಬರ ಮತ್ತು ಕೀಟನಾಶಕ ಸಿಂಪಡಣೆ ಎಲ್ಲವೂ ಸೇರಿ ಕನಿಷ್ಠ 60 ಸಾವಿರ ವೆಚ್ಚವಾಗುತ್ತದೆ.ಇದರಲ್ಲಿ ಭೂಮಿಯ ಬಾಡಿಗೆ,ನೀರು,ರೈತನ ಶ್ರಮ ಸೇರಿಲ್ಲ.20 ಟನ್ ಇಳುವರಿ ಬಂದರೆ ಅದರಲ್ಲಿ 15 ಟನ್ ಮೊದಲ ದಜರ್ೆ,ಮೂರು ಟನ್ ಎರಡನೆ ದಜರ್ೆ,2 ಟನ್ ಮೂರನೇ ದಜರ್ೆ ಹಣ್ಣುಗಳು ಬರುತ್ತವೆ.ಮೊದಲ ದಜರ್ೆ ಹಣ್ಣುಗಳಿಗೆ ಕೆಜಿಗೆ ಆರು ರೂಪಾಯಿಯಾದರೆ ಎರಡನೆಯದಕ್ಕೆ ಮೂರು ರೂಪಾಯಿ,ಮೂರನೇಯದು ಮೂಟೆ ಲೆಕ್ಕ.
ಆದರೆ ರೈತನ ಹೊಲದಿಂದ ಸಗಟು ದರದಲ್ಲಿ ಕಡಿಮೆ ದರಕ್ಕೆ ಮಾರುಕಟ್ಟೆಗೆ ಬರುವ ಕಲ್ಲಂಗಡಿ ಹಣ್ಣುಗಳು ಚಿಲ್ಲರೆಯಾಗಿ ಪ್ರತಿ ಕೆಜಿಗೆ 15 ರಿಂದ 40 ರೂಪಾಯಿವರೆಗೂ ಮಾರಾಟವಾಗುತ್ತವೆ.60 ದಿನ ಪ್ರತಿ ಹಂತದಲ್ಲೂ ಮುನ್ನೆಚ್ಚರಿಕೆವಹಿಸಿ ಕಲ್ಲಂಗಡಿ ಬೆಳೆದ ರೈತ ದರ ಕುಸಿತದಿಂದ ನಷ್ಟ ಅನುಭವಿಸಿದರೆ ಮಧ್ಯವತರ್ಿ ಮಾತ್ರ ಮೂರೇ ದಿನದಲ್ಲಿ ಲಾಭಮಾಡಿಕೊಳ್ಳುತ್ತಾನೆ.
ಈ ಬಾರಿ ನಾನು 14 ಸಾವಿರ ಕಲ್ಲಂಗಡಿ ಗಿಡಗಳನ್ನು ನಾಟಿಮಾಡಿದ್ದೆ. ಅದರಲ್ಲಿ ಎರಡು ಸಾವಿರಗಿಡಗಳು ಬೇರೆ ಬೇರೆ ಕಾರಣಗಳಿಗಾಗಿ ಹೋದವು. ಉಳಿದ ಹನ್ನೆರಡು ಸಾವಿರ ಗಿಡಗಳಿಂದ 80 ಟನ್ ಇಳುವರಿ ಪಡೆಯುವ ಮೂಲಕ ದರ ಕುಸಿದರೂ ಪ್ರತಿ ಕೆಜಿಗೆ 5.50 ಪೈಸೆಗೆ ಮಾರಾಟಮಾಡಿ ಮಾಡಿದ ವೆಚ್ಚವನ್ನು ಸರಿದೂಗಿಸಿಕೊಂಡು ಸ್ವಲ್ಪ ಆದಾಯವನ್ನುಗಳಿಸಿದೆ.
ಇದಕ್ಕೆಲ್ಲಾ ಕಾರಣವಾದದ್ದು ಪುಟ್ಟೇಗೌಡನಹುಂಡಿಯ ತರಕಾರಿ ಬೆಳೆಗಳ `ರಾಜ' ಎಂದೆ ಪ್ರಸಿದ್ಧರಾದ ರೈತ ರಾಜಬುದ್ಧಿ ಅವರ ಸಲಹೆ ಮತ್ತು ಮಾರ್ಗದರ್ಶನ.ಆಗಾಗಿ ಕಲ್ಲಂಗಡಿ ಬೇಸಾಯಮಾಡಿದ ನಾನು ನಷ್ಟ ಅನುಭವಿಸಲಿಲ್ಲ ಎನ್ನುವುದೆ ಸಮಾಧಾನದ ವಿಷಯ.
ಕಣ್ಣೆದುರೇ ಕಂಡ ಒಂದೆರಡು ಕಹಿ ಘಟನೆಗಳನ್ನು ನಿಮಗೆ ಹೇಳಬೇಕು.ನಮ್ಮ ಹೊಲದ ಸಮೀಪ ಒಂದು ಎಕರೆಯಲ್ಲಿ ನನಗಿಂತ ಇಪ್ಪತ್ತು ದಿನ ಮುಂಚಿತವಾಗಿ ಅಂದರೆ 2017 ಡಿಸೆಂಬರ್ 5 ರಂದು ನಾಲ್ಕುಸಾವಿರ ಕಲ್ಲಂಗಡಿ ಗಿಡಗಳನ್ನು ನಾಟಿ ಮಾಡಿದ್ದ ವೆಂಕಟೇಶ್ ಎಂಬ ಯುವಕ ಅಪಾರ ನಷ್ಟ ಅನುಭವಿಸಿದ. ತುಂಬಾ ಚೆನ್ನಾಗಿ ಕಲ್ಲಂಗಡಿ ಬೆಳೆದಿದ್ದ ಈ ಯುವಕ ಪ್ರತಿಕೆಜಿಗೆ ಮೂರು ರೂಪಾಯಿಗೆ ಕೊಂಡುಕೊಳ್ಳುವವರೂ ಸಿಗದೆ ಇಡೀ ತೋಟವನ್ನು ಕೇವಲ ಮೂವತ್ತು ಸಾವಿರ ರೂಪಾಯಿಗೆ ಕೊಟ್ಟುಬಿಟ್ಟ. 20 ಟನ್ ಕಲ್ಲಂಗಡಿ ಬೆಳೆಯಲು ಎಪ್ಪತ್ತು ಸಾವಿರ ರೂಪಾಯಿ ವೆಚ್ಚಮಾಡಿದ್ದ.ಅವನಿಗೆ ಕೈಯಿಂದಲೇ 40 ಸಾವಿರ ನಷ್ಟವಾಯಿತು.
ಮತ್ತೊಂದು ಪ್ರಕರಣದಲ್ಲಿ ಕೊಳ್ಳೇಗಾಲ ತಾಲೂಕಿನ ಮುಡಿಗುಂಡ ಎಂಬ ಹಳ್ಳಿಯಲ್ಲಿ ಶಶಿಕಾಂತ್ ಎಂಬ ಯುವರೈತ ನೇಂದ್ರ ಬಾಳೆಯ ನಡುವೆ ಮಿಶ್ರ ಬೆಳೆಯಾಗಿ ಒಂಬತ್ತುಸಾವಿರ ಕಲ್ಲಂಗಡಿ ಗಿಡಗಳನ್ನು ಬೆಳೆಯಲು 143,250 ರೂಪಾಯಿ ವೆಚ್ಚಮಾಡಿ ಬೆಳೆದು ಕಲ್ಲಂಗಡಿ ಮಾರಾಟ ಮಾಡಿದಾಗ ಬಂದ ಆದಾಯ 150,000 ರೂಪಾಯಿ. ಅರವತ್ತು ದಿನ ಕಷ್ಟಪಟ್ಟು ಕಲ್ಲಂಗಡಿ ಬೆಳೆದ ಮಗನಿಗೆ ಆದಾಯಬರದೆ ಇರುವುದನ್ನು ಕೇಳಿದ ತಂದೆಗೆ ಆಘಾತವಾಗಿ ಆಸ್ಪತ್ರೆ ಸೇರುವಂತಾಯಿತು. ಈ ಪ್ರಕರಣದಲ್ಲಿ ಕನಿಷ್ಠ ಕಲ್ಲಂಗಡಿ ಬೆಳೆಯಲು ಮಾಡಿದ ವೆಚ್ಚವಾದರೂ ಕೈ ಸೇರಿತಲ್ಲ ಎನ್ನುವುದೆ ಸಮಾಧಾನದ ಸಂಗತಿ.
ನಮ್ಮಲ್ಲಿ ಕಲ್ಲಂಗಡಿ ಬೆಳೆಗೆ ಸೂಕ್ತ ಮಾರುಕಟ್ಟೆ ಇಲ್ಲ.ಮಧ್ಯವತರ್ಿಗಳದ್ದೇ ದಬರ್ಾರು.ಹೊಲದಲ್ಲಿ ಬೆಳೆದ ಹಣ್ಣನ್ನು ಸರಿಯಾದ ಕಾಲಕ್ಕೆ ಕಟಾವು ಮಾಡದೆ ಎರಡು ದಿನ ಬಿಟ್ಟರೂ ಬಿಸಿಲು ಕಾಯಿ ಎಂದು ಖರೀದಿ ಮಾಡುವುದೇ ಇಲ್ಲ.ಇದೊಂದು ತುಂಬಾ ಸೂಕ್ಷ್ಮವಾದ ಬೆಳೆಯಾಗಿದ್ದು ಪ್ರತಿ ದಿನ ಬೆಳಗ್ಗೆ ಸಂಜೆ ಗಿಡಗಳ ಬೆಳವಣಿಗೆಯನ್ನು ಗಮನಿಸುತ್ತಲೇ ಇರಬೇಕು.ರೋಗ ಮತ್ತು ಕೀಟಬಾಧೆ ಹೆಚ್ಚು.ಯಾವುದಾದರೂ ಒಂದು ಗಿಡ ಒಣಗಿದಂತೆ ಕಂಡುಬಂದರೆ ಇಪ್ಪತ್ತನಾಲ್ಕು ಗಂಟೆಯೊಳಗೆ ಇಡೀ ತೋಟಕ್ಕೆ ರೋಗ ಹಬ್ಬುತ್ತದೆ. ಅಲ್ಲಿಗೆ ಕಲ್ಲಂಗಡಿ ಕತೆ ಮುಗಿದಂತೆ.ಇದನ್ನು ವಿಲ್ಟ್ ಎನ್ನುತ್ತಾರೆ. ಇಂದಿಗೂ ಈ ವಿಲ್ಟ್ ರೋಗ ನಿವಾರಣೆಗೆ ವಿಜ್ಞಾನಿಗಳು ಔಷಧ ಕಂಡು ಹಿಡಿದೇ ಇಲ್ಲ.ರೋಗ ಬರದಂತೆ ಮುನ್ನೆಚ್ಚರಿಕೆ ಕ್ರಮವಹಿಸುವುದೇ ಇದಕ್ಕಿರುವ ಮಾರ್ಗ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಗಿಡದಲ್ಲಿ ಹೂ ಬಿಟ್ಟ ಕಾಲದಿಂದ ಕಟಾವಿನ ಹಂತದವರೆಗೆ ಕೇವಲ ಮೂವತ್ತೇ ದಿನದಲ್ಲಿ ತಿನ್ನಲು ಸಿಗುವ ಹಣ್ಣು ಕಲ್ಲಂಗಡಿ ಎನ್ನುವುದೇ ಇದರ ವಿಶೇಷ.ಹೂ ಬಿಟ್ಟ ಮೂರನೇ ದಿನಕ್ಕೆ ಹೀಚುಗಾಯಿ ಯಾಗುವ ಕಲ್ಲಂಗಡಿ ಪ್ರತಿದಿನ 10 ರಿಂದ 20 ಗ್ರಾಂ ತೂಕ ಹೆಚ್ಚಿಸಿಕೊಳ್ಳುತ್ತಾ ಮೂವತ್ತು ದಿನಕ್ಕೆ ಮೂರರಿಂದ ಆರು ಕೆಜಿವರೆಗೂ ಬೆಳೆವಣಿಗೆಯಾಗುತ್ತದೆ.
40 ರಿಂದ 50 ನೇ ದಿನದ ಹಂತ ಅಪಾಯಕಾರಿ ಹಂತ.ಗಿಡಗಳಿಗೆ ಯಾವುದೇ ರೋಗಬಾಧೆ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ.ಇಷ್ಟೆಲ್ಲಾ ಸವಾಲು ಸಮಸ್ಯೆಗಳನ್ನು ಎದುರಿಸಿ ಕಲ್ಲಂಗಡಿ ಬೆಳೆದ ರೈತನಿಗೆ ಪ್ರತಿ ಕೆಜಿಗೆ ಕನಿಷ್ಠ ಏಳು ರೂಪಾಯಿ ಸಿಕ್ಕರೆ ಮಾತ್ರ ಲಾಭ.ಇಲ್ಲದಿದ್ದರೆ ನಷ್ಟ.ಈ ಬಾರಿ ಆದದ್ದು ಅದೇ. ಗಿಡಗಳು ಯಾಕೆ ಸರಿಯಾಗಿ ಹೂ ಕಚ್ಚದೆ ಇಳುವರಿ ಬರಲಿಲ್ಲ ಎಂದು ನರ್ಸರಿಯವರನ್ನು ಕೇಳಿದರೆ ಬೀಜ ಕಂಪನಿಗಳಿಂದ ಬಂದ ಬೀಜದಲ್ಲೇ ದೋಷ ಇತ್ತು ಎನ್ನುತ್ತಾರೆ.
60 ದಿನದಲ್ಲಿ ಅಧಿಕ ಆದಾಯಗಳಿಸಬಹುದೆಂಬ ಆಸೆಯಿಂದ ಕಲ್ಲಂಗಡಿ ಬೆಳೆದ ರೈತ ಕಲ್ಲಂಗಡಿ ಬೇಸಾಯವನ್ನು ಜೂಜಿನಂತೆ ಪರಿಗಣಿಸಬೇಕಾದ ಅನಿವಾರ್ಯತೆಯೂ ಇರುತ್ತದೆ.ಅದಕ್ಕಾಗಿ ಕನಿಷ್ಠ ಪಕ್ಷ ಹಾಕಿದ ಬಂಡವಾಳ ನಷ್ಟವಾಗದಂತೆ ನೋಡಿಕೊಳ್ಳಬೇಕಾದರೆ ಗಿಡಗಳನ್ನು ತರಬೇಕಾದರೆ ಎಚ್ಚರಿಕೆವಹಿಸಬೇಕು. ಉತ್ತಮ ನರ್ಸರಿಯಿಂದ ಗಿಡಗಳನ್ನು ತರಬೇಕು. ಗಿಡಗಳಿಗೆ ರೋಗಬಾಧೆ ಬರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.ಅರವತ್ತು ದಿನ ಪ್ರತಿದಿನ ಬೆಳಗ್ಗೆ ಸಂಜೆ ಗಿಡಗಳನ್ನು ಗಮನಿಸುತ್ತಲೇ ಇರಬೇಕು.ಆಗ ಎಕರೆಗೆ ಕನಿಷ್ಠ 20 ಕೆಜಿ ಇಳುವರಿ ಪಡೆಯಲು ಸಾಧ್ಯ.ಆಗ ಹಾಕಿದ ಬಂಡವಾಳ ಸೇಫ್ ಆದಂತೆ.ದರ ಸಿಕ್ಕರೆ ಲಾಟರಿ ಒಡೆದಂತೆ.ಇದು ಕಲ್ಲಂಗಡಿಯಲ್ಲಿ ನನ್ನ ಸ್ವಅನುಭವ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ