vaddagere.bloogspot.com

ಭಾನುವಾರ, ಏಪ್ರಿಲ್ 9, 2017

ಕ್ಯಾತನಹಳ್ಳಿ ಯುವಕರ ಸಹಕಾರಿ ಕೃಷಿ
 ಇದು "ರಿಯಲ್ ಆರ್ಗ್ಯಾನಿಕ್" 
ಮಂಡ್ಯ : "ವಿಷಮುಕ್ತ ಆಹಾರ, ರೋಗಮುಕ್ತ ಜೀವನ" ಕ್ಕಾಗಿ ಸ್ವಾವಲಂಬನೆಯ ಬದುಕು ಎಂದುಕೊಂಡು ನೆಮ್ಮದಿ ಮತ್ತು ಆರೋಗ್ಯಪೂರ್ಣ ಬದುಕಿಗೆ ಮುನ್ನುಡಿ ಬರೆದ  "ರಿಯಲ್ ಆರ್ಗ್ಯಾನಿಕ್"  ಎಂಬ ಹಳ್ಳಿಯ ಯುವಕರು ಕಟ್ಟಿದ ಕ್ರಾಂತಿಕಾರಿ ಕೃಷಿ ಮಾದರಿಯೊಂದರ ಯಶೋಗಾಥೆ ಇದು.
ರೈತರಷ್ಟೇ ಅಲ್ಲ ಮನಸ್ಸಿದ್ದರೆ ಸರಕಾರಿ ನೌಕರರು,ಉದ್ಯಮಿಗಳು ಕೃಷಿಯಲ್ಲಿ ಪಾಲ್ಗೊಳ್ಳಬಹುದು ಎನ್ನುವುದನ್ನು ಸಾಧಿಸಿತೋರಿಸುವ ಮೂಲಕ ಗೆಳೆಯರಬಳಗವೊಂದು ಪ್ರಯೋಗಶೀಲ ಸಹಕಾರಿ ಕೃಷಿಯಲ್ಲಿ ಯಶಸ್ಸುಸಾಧಿಸಿದೆ. ಆ ಮೂಲಕ ಬದಲಾವಣೆ ಎನ್ನುವುದು ಮೊದಲು ನಮ್ಮ ಮನೆಯಿಂದಲೇ ಆರಂಭವಾಗಬೇಕು ಎಂಬ ಸಂದೇಶ ಸಾರಿದೆ.
ಸಮಾನ ಮನಸ್ಕ ಗೆಳೆಯರು ಅರಳಿಕಟ್ಟೆಯಲ್ಲಿ ಕುಳಿತು ರಾಸಾಯನಿಕ ಕೃಷಿ ಬೀರುತ್ತಿರುವ ದುಷ್ಪರಿಣಾಮಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಕುಡಿಯುವ ನೀರು, ಉಣ್ಣುವ ಆಹಾರ ವಿಷಮುಕ್ತವಾಗುತ್ತಿರುವ ಬಗ್ಗೆ ಆತಂಕಿತರಾಗುತ್ತಾರೆ. ಆದರೆ ಇದು ಚರ್ಚೆ ,ವಾಗ್ವಾದದಲ್ಲಿ ಮುಗಿದುಹೋಗಬಾರದು,ಅದಕ್ಕಾಗಿ ನಾವು ಏನಾದರೂ ರಚನಾತ್ಮಕವಾದ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂಬ ತೀರ್ಮಾನಕ್ಕೆ ಬರುತ್ತಾರೆ.
ನಾವು ಮತ್ತು ನಮ್ಮ ಮನೆಯವರಾದರೂ ವಿಷಮುಕ್ತವಾದ ಹಣ್ಣು, ತರಕಾರಿ, ಆಹಾರ ಸೇವಿಸಬೇಕು. ಇದಕ್ಕಾಗಿ ಬೇರೆಯವರನ್ನು ನಂಬಿ ಕುಳಿತರೆ ಪ್ರಯೋಜನವಿಲ್ಲ. ರಾಸಾಯನಿಕ ಕೃಷಿಗೆ ವಿದಾಯ ಹೇಳಿ ನೈಸರ್ಗಿಕ ಕೃಷಿ ಆರಂಭಿಸೋಣ ಅಂತ ತೀರ್ಮಾನಿಸಿ ಕಳೆದ ಐದು ವರ್ಷಗಳಿಂದ ವಿಷಮುಕ್ತ ಆಹಾರ ಸೇವಿಸುತ್ತಾ ಹೊಸ ಸಹಕಾರಿ ಕೃಷಿಗೆ ನಾಂದಿ ಆಡಿದ್ದಾರೆ. 
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯ "ರಿಯಲ್ ಆರ್ಗ್ಯಾನಿಕ್" ಎಂಬ ಸಂಸ್ಥೆಯ ಯುವಕರ ಈ ಮಾದರಿ ಕುಸಿಯುತ್ತಿರುವ ಕೃಷಿಯ ಬಗ್ಗೆ ನಿರಾಶೆಯಿಂದ ಮಾತನಾಡುವವರಿಗೆ ಭರವಸೆ ಮೂಡಿಸುವಂತಿದೆ.
ಆರ್ಗ್ಯಾನಿಕ್" ಎಂದರೆ ಮೂಗುಮುರಿಯುವ,ಸಾವಯವ ಉತ್ಪನ್ನಗಳ ಬೆಲೆ ತುಸು ಜಾಸ್ತಿ ಆಯ್ತು, ಮಾರುಕಟ್ಟೆಯದ್ದೇ ದೊಡ್ಡ ಸಮಸ್ಯೆ ಎಂದು ಗೊಣಗುವ ಮಂದಿಯ ನಡುವೆ ಈ ಯುವಕರು ತಮ್ಮ ಗುಂಪಿನ ಐವತ್ತು ಕುಟುಂಬಗಳಿಗೆ ತಾವೇ ಬೆಳೆದ ನೈಸರ್ಗಿಕ ಆಹಾರ ಉತ್ಪನ್ನಗಳನ್ನು ತಲುಪಿಸುವ ಮೂಲಕ "ವಿಷಮುಕ್ತ ಆಹಾರ ರೋಗಮುಕ್ತ ಜೀವನ" ಎಂಬ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ.
ಆರತಿ ಉಕ್ಕಡ ಮತ್ತು ಹರವು ಗ್ರಾಮದ ಮಾರ್ಗ ಮಧ್ಯ ಸಿಗುವ ಕ್ಯಾತನಹಳ್ಳಿ ಹೊರವಲಯದಲ್ಲಿ ಒಂದು ಎಕರೆ ಹದಿನಾರುಗುಂಟೆ ಪ್ರದೇಶದಲ್ಲಿ ಇಂತಹ ಒಂದು ವಿಶಿಷ್ಟವಾದ ಪ್ರಯೋಗ ನಡೆದಿದೆ. ಕೇವಲ 1.16 ಗುಂಟೆ ಪ್ರದೇಶದಲ್ಲಿ ನೂರು ತೆಂಗು ಇದ್ದು ಅದರಲ್ಲಿ 35 ಫಸಲು ನೀಡುತ್ತಿವೆ. ಮದರಂಗ, ಬೂದುಬಾಳೆ,ಏಲಕ್ಕಿಬಾಳೆ,ಚಂದ್ರಬಾಳೆ,ಪಚ್ಚಬಾಳೆ ಜೊತೆಗೆ ನಂಜನಗೂಡು ರಸಬಾಳೆಯ ಗಿಡಗಳಿವೆ. ಮಾವು,ಸಪೋಟ,ನಿಂಬೆ ಮತ್ತಿತರ ಹಣ್ಣಿನ ಗಿಡಗಳು ಇವೆ. ಇಷ್ಟೇ ಅಲ್ಲದೆ ಹೀರೆಕಾಯಿ,ಹಾಗಲಕಾಯಿ,ಈರನಗೆರೆ ಬದನೆ, ಗೆಡ್ಡೆಕೋಸು,ನವಿಲು ಕೋಸು, ಕ್ಯಾರೇಟು, ಸೌತೆಕಾಯಿ, ಸೊಪ್ಪು ಹೀಗೆ ಹತ್ತು ಹಲವು ಬಗೆಯ ಸೊಪ್ಪು,ತರಕಾರಿಗಳನ್ನು ಜೀವಾಮೃತ ಮತ್ತು ಕೊಟ್ಟಿಗೆ ಗೊಬ್ಬರ ಬಳಸಿ ನೈಸರ್ಗಿಕವಾಗಿ ಬೆಳೆಯುತ್ತಿದ್ದಾರೆ.
ರಿಯಲ್ ಆರ್ಗ್ಯಾನಿಕ್" ಎಂಬ ಈ ಸಹಜ ಕೃಷಿಕರ ಒಕ್ಕೂಟದ ಜವಾಬ್ದಾರಿ ತೆಗೆದುಕೊಂಡು ಐವತ್ತು ಕುಟುಂಬಗಳಿಗೆ ವಿಷಮುಕ್ತ ಸೊಪ್ಪು ತರಕಾರಿ ಬೆಳೆದುಕೊಡುತ್ತಿರುವವರು ಕುಮಾರ್ ಎಂಬ ಚೆಲುವರಸನ ಕೊಪ್ಪಲು ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎನ್ನುವುದು ಮತ್ತೊಂದು ವಿಶೇಷ.
ಶಾಲಾ ಸಮಯ ಹೊರತುಪಡಿಸಿ ತಮ್ಮ ಬಿಡುವಿನ ವೇಳೆಯನ್ನು ಸಂಪೂರ್ಣವಾಗಿ ಮಣ್ಣಿನ ಒಡನಾಟದಲ್ಲಿ ಕಳೆಯುವ ಕುಮಾರ್ ತೋಟಕ್ಕೆ ಬಂದು ಹಸಿರಿನ ನಡುವೆ ಇರುವಾಗ ಸಿಗುವ ಆನಂದಕ್ಕೆ ಬೆಲೆಕಟ್ಟಲಾಗದು ಎನ್ನುತ್ತಾರೆ.
ಇದೆಲ್ಲಾ ಹೇಗೆ ನಿಮಗೆ ಹೊಳೆಯಿತು ಎಂದು ಕೇಳಿದರೆ, "ನಮ್ಮದು ಒಂದು ಸಮಾನ ಮನಸ್ಕರ ಗುಂಪು.ಅದರಲ್ಲಿ ಸಕರ್ಾರಿ ಅಧಿಕಾರಿಗಳು,ವ್ಯಾಪಾರಸ್ಥರು,ರೈತರು ಹೀಗೆ ಎಲ್ಲರು ಇದ್ದೇವೆ.ಬಿಡುವಿನ ವೇಳೆಯಲ್ಲಿ ಒಂದೆಡೆ ಸೇರುತ್ತೇವೆ. 
ಹೀಗೆ ಸೇರಿದ್ದಾಗ ಒಂದು ದಿನ ಸಾವಯವ ಆಹಾರ ಉತ್ಪನ್ನಗಳ ಬಗ್ಗೆ ಚರ್ಚೆ ಆರಂಭವಾಯಿತು. ರೈತರನ್ನು ನಂಬುವುದು ಹೇಗೆ. ಸಾವಯವ ಉತ್ಪನ್ನಗಳಿಗೆ ಬೆಲೆ ಹೆಚ್ಚು ಎಂಬೆಲ್ಲಾ ವಾದ ಚರ್ಚೆ ನಡೆಯಿತು. ನಮಗೆ ಯಾರ ಮೇಲೂ  ನಂಬಿಕೆ ಇಲ್ಲ ಅಂದರೆ ನಾವೇ ಏನಾದರೂ ಮಾಡೋಣ. ನಮ್ಮ ಆಹಾರ ನಾವೇ ಬೆಳೆದುಕೊಳ್ಳೋಣ" ಎಂಬ ತೀರ್ಮಾನಕ್ಕೆ ಬಂದೆವು.
ಆಗ ಹುಟ್ಟಿಕೊಂಡದ್ದೆ " ರಿಯಲ್ ಆರ್ಗ್ಯಾನಿಕ್" ಒಕ್ಕೂಟ. ನನ್ನ ಸೋದರ ಸಂಬಂಧಿ ಎಲೆಕ್ಟ್ರೀಷಿಯನ್ ಕೆಲಸಮಾಡುತ್ತಿದ್ದ ಧರಣಿ ಜೊತೆ ಸೇರಿ ಐವತ್ತು ಕುಟುಂಬಗಳಿಗೆ ನಿಗಧಿತ ದರದಲ್ಲಿ ಸೊಪ್ಪು ತರಕಾರಿ ಬೆಳೆದುಕೊಡುವ ಒಪ್ಪಂದದೊಂದಿಗೆ ನೈಸಗರ್ಿಕ ಕೃಷಿಯ ನಮ್ಮ ಪಯಣ 2011 ರಲ್ಲಿ ಆರಂಭವಾಯಿತು ಎಂದು ಹಳೆಯ ನೆನಪುಗಳಿಗೆ ಜಾರಿದರು ಕುಮಾರ್.
"ನಮ್ಮದು ಬಡ ಮಧ್ಯಮವರ್ಗದ ಕುಟುಂಬ.ನಮಗೆ ಜಮೀನಿಲ್ಲ.ತಾತನ ಮನೆಯಲ್ಲಿ ಕೃಷಿ ಕೆಲಸಮಾಡುತ್ತಾ,ಕೂಲಿ ಕೆಲಸ ಮಾಡಿ ಓದಿ ಬದುಕು ಕಟ್ಟಿಕೊಂಡವರು ನಾವು. ಈಗ ವ್ಯವಸಾಯ ಮಾಡುತ್ತಿರುವ ಜಮೀನು ಕೂಡ ನಮ್ಮದಲ್ಲ. ನಮ್ಮ ಗುಂಪಿನ ಸದಸ್ಯ, ಗೆಳೆಯ ಮಹೇಶ್ ಅವರದು. ಮಹೇಶ್ ಕೂಡ ನಮ್ಮೊಂದಿಗೆ ಶಾಲೆಯಲ್ಲಿ ಶಿಕ್ಷಕರಾಗಿ ಎರಡು ವರ್ಷ ಕೆಲಸಮಾಡಿ ನಂತರ ಕೆಲಸಕ್ಕೆ ರಾಜೀನಾಮೆ ನೀಡಿದರು. ಈಗ ಬೆಂಗಳೂರಿನಲ್ಲಿ ಸ್ವಂತ ಟಾರ್ಫಲ್ ಕಾಖರ್ಾನೆ ಮಾಡಿಕೊಂಡು ಉದ್ಯಮಿಯಾಗಿದ್ದಾರೆ. ಅವರ  ಒಟ್ಟು ಐದು ಎಕರೆ ಭೂಮಿಯನ್ನು ನಮ್ಮ ಪ್ರಯೋಗಕ್ಕೆ ಯಾವುದೇ ಹಣ ಪಡೆಯದೆ ಕೊಟ್ಟಿದ್ದಾರೆ. ಅಲ್ಲಿ ನಮ್ಮ ಸಹಜ ಕೃಷಿಯ ಪ್ರಯೋಗಗಳು ನಡೆಯುತ್ತಿವೆ. ಅವರಿಗೆ ನಾವು ಬೆಳೆದ ತರಕಾರಿ, ಬತ್ತ,ಬೆಲ್ಲ ಬಿಟ್ಟರೆ ಬೇರೆನೂ ಕೊಡುವುದಿಲ್ಲ. ಕೃಷಿಗೆ ಬಂಡವಾಳ ಬೇಕಾದಾಗ ಮತ್ತೊಬ್ಬ ಗೆಳೆಯ ಸರಕಾರಿ ಅಧಿಕಾರಿ ಬಸವರಾಜು ಕೊಡುತ್ತಾರೆ. ಮತ್ತೆ ಅವರಿಗೆ ಹಣ ಹಿಂತಿರುಗಿಸುತ್ತೇವೆ.ಒಟ್ಟಾರೆ ನಂಬಿಕೆ ಮತ್ತು ವಿಶ್ವಾಸದ ಆಧಾರದ ಮೇಲೆ ನಮ್ಮ "ರಿಯಲ್ ಆರ್ಗ್ಯಾನಿಕ್" ಸಂಸ್ಥೆ ನಡೆಯುತ್ತಿದೆ ಎನ್ನುತ್ತಾರೆ ಕುಮಾರ್.
ಪರಸ್ಪರ ನಂಬಿಕೆ ಇರದ. ವಿಶ್ವಾಸ ದ್ರೋಹವೇ ಬದುಕಾಗಿರುವ ಕಾಲಘಟ್ಟದಲ್ಲಿ ಜೀವಿಸುತ್ತಿದ್ದೇವೆ ಎಂದು ಗೊಣಗುವ,ಭೂಮಿ ಇಲ್ಲದೆ ವ್ಯವಸಾಯ ಸಾಧ್ಯಇಲ್ಲ ಎನ್ನುವ ಮನೋಭಾವದ, ಜಮೀನಿದ್ದು ಪಾಳು ಬಿಟ್ಟಿರುವವರ ನಡುವೆ ಕ್ಯಾತನಹಳ್ಳಿಯ ಗೆಳೆಯರ ಈ ಪ್ರಯೋಗಶೀಲತೆಯನ್ನು ನೋಡಿದಾಗ ಇನ್ನೂ ಭೂಮಿಯ ಮೇಲೆ ಒಳ್ಳೆಯತನ ಇರುವ ವ್ಯಕ್ತಿಗಳು ಇದ್ದಾರೆ ಎಂಬ ನಂಬಿಕೆ ಮೂಡುತ್ತದೆ.
2011 ರಲ್ಲಿ ರಿಯಲ್ ಆರ್ಗ್ಯಾನಿಕ್" ತನ್ನ ನೈಸರ್ಗಿಕ ಕೃಷಿ ಪಯಣ ಆರಂಭಿಸಿದಾಗ ಮಹೇಶ್ ಅವರ ಮೂರು ಎಕರೆ ಭೂಮಿಯಲ್ಲಿ ಎಚ್ಎಂಟಿ, ಜೀರಿಗೆ ಸಣ್ಣ, ಬರ್ಮಾ ಬ್ಲಾಕ್, ಮೀನಾಕ್ಷಿ ತಳಿಯ ಬತ್ತ ಬೆಳೆಯಲಾಯಿತು. ಮೊದಲ ವರ್ಷ ಎಕರೆಗೆ 15 ಕ್ವಿಂಟಾಲ್ ಬತ್ತ ಬಂದಿದೆ.ನಂತರ ಭೂಮಿ ಸುಧಾರಣೆಯಾಗುತ್ತಿದ್ದಂತೆ ಈಗ ಎಕರೆಗೆ 25 ಕ್ವಿಂಟಾಲ್ ಬತ್ತ ಬೆಳೆಯುತ್ತಿದ್ದೇವೆ ಎನ್ನುತ್ತಾರೆ ಕುಮಾರ್.
ಬತ್ತ ಬೆಳೆದೆ ಎರಡು ವರ್ಷದ ನಂತರ 63175 ತಳಿಯ ಕಬ್ಬು ನಾಟಿಮಾಡಿ ನೈಸರ್ಗಿಕ ಕೃಷಿಯಲ್ಲಿ ಎಕರೆಗೆ 75 ಟನ್ ಇಳುವರಿ ತೆಗೆದೆವು. ಕಬ್ಬು ಕಟಾವಿಗೆ ಬಂದ ಸಂದರ್ಭದಲ್ಲಿ ಶಾಲೆಗೆ ಒಂದು ವಾರ ರಜೆಹಾಕಿ ತಾವೇ ನಿಂತು ಗಾಣದಲ್ಲಿ ಸಾವಯವ ಬೆಲ್ಲ ಮಾಡಿಸಿದ್ದನ್ನು ಈಗಲೂ ನೆನಪಿಸಿಕೊಂಡು ಸಂತಸಪಡುತ್ತಾರೆ. ಈಗಲೂ ಜೀವಾಮೃತ ಸಿದ್ದಪಡಿಸಲು ಮತ್ತು ಮನೆಬಳಕೆಗೆ ಅದೇ ಬೆಲ್ಲ ಬಳಸುತ್ತಿರುವುದಾಗಿ ಹೇಳುತ್ತಾರೆ.
ಕಳೆದ ಒಂದು ವರ್ಷದಿಂದ ಸೊಪ್ಪು ತರಕಾರಿ ಬೆಳೆಯಲು ಶುರುಮಾಡಿದ್ದೇವೆ. ತಮ್ಮ ಗೆಳೆಯರ ಬಳಗದ ಐವತ್ತು ಕುಟುಂಬಗಳಿಗೆ ಸಂಪೂರ್ಣ ವಿಷಮುಕ್ತ ಆಹಾರ ಸರಬರಾಜು ಮಾಡುತ್ತಿದ್ದೇವೆ. ವಾರದಲ್ಲಿ ಎರಡು ಬಾರಿ ಪ್ರತಿ ಮನೆಗೆ ಎಲ್ಲ ಬಗೆಯ ತರಕಾರಿಗಳನ್ನು ತಲಾ ಅರ್ಧ ಕೆಜಿಯಂತೆ ಕೊಡುತ್ತೇವೆ. ಇದರಿಂದ ಅವರಿಗೆ ತಾಜಾತನದಿಂದ ಕೂಡಿದ ಉತ್ತಮ ಗುಣಮಟ್ಟದ ತರಕಾರಿ ಮನೆಯ ಬಾಗಿಲಿನಲ್ಲೇ ಸಿಕ್ಕಂತಾಗುತ್ತದೆ. ನಾವು ಕೊಡುವ ತರಕಾರಿಗೆ ವರ್ಷಪೂತರ್ಿ ಒಂದೆ ಬೆಲೆ. ಟೊಮಟೊ ಕೆಜಿಗೆ 30 ರೂಪಾಯಿ. ಉಳಿದ ತರಕಾರಿಗಳು ಎಲ್ಲಾ ಸಮಯದಲ್ಲೂ ಪ್ರತಿ ಕೆಜಿಗೆ 50 ರೂಪಾಯಿ, ಸೊಪ್ಪಿಗೆ ಪ್ರತಿ ಕಂತೆಗೆ 10 ರೂಪಾಯಿ ನಿಗಧಿಮಾಡಿದ್ದೇವೆ. ಬೆಂಗಳೂರು, ಮೈಸೂರು,ಮಂಡ್ಯದಲ್ಲಿ ನಮ್ಮ ಗೆಳೆಯರ ಬಳಗ ಇದೆ. ಅವರಿಗೆ ರಿಯಲ್ ಆಗ್ಯರ್ಾನಿಕ್ನಲ್ಲಿ ಬೆಳೆದ ತಾಜಾ ಆಹಾರ ಉತ್ಪನ್ನಗಳನ್ನು ಪೂರೈಸಲಾಗುತ್ತದೆ ಎನ್ನುತಾರೆ ಕುಮಾರ್. 
ತಾವು ಬೆಳೆಯುತ್ತಿರುವ ಸೊಪ್ಪು ತರಕಾರಿಗಳ ಬೀಜಗಳನ್ನು ಸಹಜ ಸಮೃದ್ಧ ಮತ್ತು ಮೈಸೂರಿನ ಅಂಗಡಿಯೊಂದರಲ್ಲಿ ಖರೀದಿಸುತ್ತೇವೆ.ಸಾಧ್ಯವಾದಷ್ಟು ನಾಟಿ ತಳಿಯ ಬೀಜಗಳನ್ನೇ ಬಳಸುತ್ತೇವೆ.ಇದರಿಂದ ಗುಣಮಟ್ಟದ ಫಸಲು ದೊರೆಯುತ್ತದೆ.
ನಾವು ಪೂರೈಸುತ್ತಿರುವ ಸೊಪ್ಪು ಮತ್ತು ತರಕಾರಿಗೆ ಈಗ ಹೆಚ್ಚು ಬೇಡಿಕೆ ಬರುತ್ತಿದೆ. ಅದರ ಬಣ್ಣ ಮತ್ತು ರುಚಿಗೆ ಮಾರು ಹೋಗಿರುವ ಗೆಳೆಯರ ಬಳಗದ ಕುಟುಂಬದವರು ಹೆಚ್ಚು ಹೆಚ್ಚು ಬೇಡಿಕೆ  ಸಲ್ಲಿಸುತ್ತಿದ್ದಾರೆ. ನಮಗಿರುವ ಕಡಿಮೆ ಪ್ರದೇಶದಲ್ಲಿ ಅವರ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ.ಅದಕ್ಕಾಗಿ ಮತ್ತೆ ಮೂರ್ನಾಲ್ಕು ಎಕರೆ ನೀರಾವರಿ ಭೂಮಿಯನ್ನು ಗುತ್ತಿಗೆಆಧಾರದಲ್ಲಿ ಕೃಷಿ ಮಾಡಲು ಹುಡುಕುತ್ತಿದ್ದೇವೆ. ನಾವು ಬಳಸಿ ಉಳಿದದ್ದನ್ನು ಬೇರೆ ಗ್ರಾಹಕರಿಗೂ ತಲುಪಿಸುವ ಗುರಿ ನಮ್ಮದು ಎಂದರು.
ಕ್ಯಾತನಹಳ್ಳಿಯ ನೈಜ ಸಾವಯವ ಕೃಷಿಕ ಒಂಟಿ ಹಸುವಿನಿಂದ ಉಳುಮೆ ಮಾಡುವ ಬಸವರಾಜು ಎಂಬ ರೈತರಿಂದ ಸ್ಪೂತರ್ಿಪಡೆದು ಕೃಷಿ ಮಾಡುತ್ತಿರುವುದಾಗಿ ಹೇಳುವ ಶಿಕ್ಷಕ ಕುಮಾರ್ ತಮ್ಮ ಬಿಡುವಿನ ವೇಳೆಯನ್ನು ಭೂಮಿತಾಯಿ ಸೇವೆ ಮಾಡುವ ಮೂಲಕ ಸಾರ್ಥಕ ಪಡಿಸಿಕೊಳ್ಳುತ್ತಿದ್ದಾರೆ.
ಊರಿನ ಜನರಿಗೆ ತಾವು ಮಾಡುತ್ತಿರುವ ಈ ಪ್ರಯೋಗಶೀಲ ಕೃಷಿಯ ಬಗ್ಗೆ ಮೆಚ್ಚುಗೆ ಇದೆ. ಜಮೀನಿಗೆ ಬಂದು ನೋಡಿಕೊಂಡು ಹೋಗುತ್ತಾರೆ. ಆದರೆ ಯಾರೂ ನೈಸರ್ಗಿಕ ಕೃಷಿ ಮಾಡಲು ಮುಂದೆಬರುವುದಿಲ್ಲ. ರೈತರನ್ನು ಸೋಮಾರಿಯಾಗಿ ಮಾಡುವ, ಭೂಮಿಗೆ ವಿಷ ಉಣಿಸುವ ರಾಸಾಯನಿಕ ಕೃಷಿಯೇ ಅವರಿಗೆ ಇಷ್ಟ. ನಾವು ತೋಟದಲ್ಲಿ ಕಳೆ ಕೀಳಿಸುತ್ತಿದ್ದರೆ, ಯಾಕೆ ಇಷ್ಟೊಂದು ಕೆಲಸ ಮಾಡುತ್ತೀರಿ. ರೌಂಡಾಫ್ ಒಡೆದರೆ ಕಳೆ ಎಲ್ಲಾ ನಾಶವಾಗುತ್ತೆ ಅಂತ ಬುದ್ಧಿ ಹೇಳುತ್ತಾರೆ, ಕಳೆನಾಶಕ ಕ್ಯಾನ್ಸರ್ ತರುವ ಹೆಮ್ಮರಿ ಅಂತ ಹೇಳಿದರೆ ನಂಬುವುದಿಲ್ಲ. ಇಂತಹವರಿಗೆ ಏನು ಹೇಳುವುದು ಎಂದು ತಮ್ಮ ಅಸಾಹಯಕತೆ ತೋಡಿಕೊಳ್ಳುತ್ತಾರೆ ಕುಮಾರ್.
ಮಂಡ್ಯ ಜಿಲ್ಲೆಯ ಕೃಷಿಕರಿಗೆ ಹೆಚ್ಚು ನೀರು ಬಿಟ್ಟಿದ್ದೇ ಶಾಪವಾಗಿದೆ. ಜಮೀನಿನಲ್ಲಿ ನಿಂತು ಯಾರು ದುಡಿಯಲು ಇಷ್ಟಪಡುವುದಿಲ್ಲ.ಬೆಳಗ್ಗೆ ಹೋಗಿ ಗದ್ದೆಗೆ ನೀರು ಕಟ್ಟಿ ಬಂದರೆ ಮತ್ತೆ ಸಂಜೆ ಹೋಗಿ ನೋಡುತ್ತಾರೆ. ಉಳಿದ ಸಮಯವನ್ನು ಊರಿನಲ್ಲಿ ಕಳೆದುಬಿಡುತ್ತಾರೆ. ರೈತರಿಗೆ ಅರಿವು ಮತ್ತು ತಿಳಿವಳಿಕೆ ಕೊರತೆ ಇದೆ. ಇದರಿಂದಾಗಿ ಕೃಷಿಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ತಾವು ಗಮನಿಸಿದ ಸತ್ಯ ಮತ್ತು ಅನುಭವದ ಮಾತು ಎನ್ನುತ್ತಾರೆ ಕುಮಾರ್. ಹೆಚ್ಚಿನ ಮಾಹಿತಿಗೆ ಕುಮಾರ್ 8867005518 ಅಥವಾ ಧರಣಿ 8722239006 ಸಂಪರ್ಕಿಸಿ.