ದಣಿವರಿಯದ ದುಡಿಮೆಗಾರ `ರೈತಸಂಘದ ಪುಟ್ಟಣ್ಣಯ್ಯ'
# ಅಸಂಘಟಿತ ರೈತಸಮುದಾಯದ ದನಿಯ ಕಣ್ಮರೆ
.1950-60 ರ ದಶಕದಲ್ಲಿ ಶೇ 90 ರಷ್ಟು ಜನ ಕೃಷಿಯಿಂದಲೇ ಜೀವನ ಕಟ್ಟಿಕೊಂಡಿದ್ದಾಗ ಅಭಿವೃದ್ಧಿ ಎಂದರೆ ಕೈಗಾರಿಕೆ ಎಂಬ ಭ್ರಮೆಯನ್ನು ಬಿತ್ತಿ ಕೃಷಿ ವಲಯವನ್ನು ನಿರ್ಲಕ್ಷ್ಯಮಾಡಲಾಯಿತು. ಕೈಗಾರಿಕೆಗೆ ಕೃಷಿ ಪೂರಕ ಎಂದು ಪರಿಗಣಿಸಿ ಕಡಿಮೆ ಬೆಲೆಗೆ ಕಚ್ಚಾವಸ್ತು ಪೋರೈಕೆ ಮಾಡುವಂತೆ ಮಾಡಿ, ದೇಶಕ್ಕೆ ಆಹಾರ ಭದ್ರತೆಕೊಟ್ಟ ಅನ್ನದಾತನನ್ನು ಬೀದಿಪಾಲು ಮಾಡಿದ ಪರಿಣಾಮ ಕೃಷಿವಲಯ ನಲುಗಿ ಹೋಯಿತು. ಮನೆಮಂದಿಯೆಲ್ಲ ದುಡಿದರೂ ಹಸಿವು,ದಾರಿದ್ರ್ಯ.ಬಟ್ಟೆ ಇಲ್ಲ,ಸರಿಯಾದ ಶಿಕ್ಷಣ ಇಲ್ಲ,ಆರೋಗ್ಯ ರಕ್ಷಣೆ ಇಲ್ಲ. ಇದಕ್ಕೆಲ್ಲಾ ಉತ್ತರ ಕಂಡುಕೊಳ್ಳಬೇಕೆಂಬ ಉದ್ದೇಶ ರೈತಸಂಘದ ಹುಟ್ಟಿಗೆ ಕಾರಣವಾಯಿತು.ಐತಿಹಾಸಿಕ ಅನಿವಾರ್ಯವಾಗಿ ಹುಟ್ಟಿಬಂದ ಚಳವಳಿಯ ಬಗ್ಗೆ ತಿಳಿಯಲು,ರೈತನಾಯಕರ ಆಶಯಗಳನ್ನು ಅರಿಯಲು ಕೆ.ಎಸ್. ಪುಟ್ಟಣ್ಣಯ್ಯನವರ ಬಗ್ಗೆ ಯುಟ್ಯೂಬ್ನಲ್ಲಿ ಸಿಗುವ ಕೇಸರಿ ಹರವು ರಚಿಸಿ ನಿದರ್ೇಶಿಸಿರುವ " ರೈತಸಂಘದ ಪುಟ್ಟಣ್ಣಯ್ಯ (ಪುಟ್ಟಣ್ಣಯ್ಯ ಆಫ್ ರೈತ ಸಂಘ)" ಎಂಬ ಒಂದು ಗಂಟೆಗಳ ಸಾಕ್ಷ್ಯಚಿತ್ರವನ್ನು ನೋಡಬೇಕು ಮತ್ತು ಮೈಸೂರಿನ ಅಭಿರುಚಿ ಪ್ರಕಾಶನ ಹೊರತಂದಿರುವ "ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ" ಪುಸ್ತಕವನ್ನು ಓದುವ ಮೂಲಕ ರೈತಚಳವಳಿಯ ಆಶಯಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ರೈತ ಚಳವಳಿಗೆ ಜೀವ ತುಂಬುವುದೇ ರೈತನಾಯಕರಿಗೆ ನಾವು ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ.
=================================
ಹಳ್ಳಿಗಾಡಿನ ದುಡಿಯುವ ವರ್ಗದ ದನಿಯಾಗಿ, ರೈತ ಸಮುದಾಯದ ಜ್ವಲಂತ ಸಮಸ್ಯೆಗಳಿಗೆ ಸದನದ ಒಳಹೊರಗೆ ಪರಿಹಾರ ಕಂಡುಕೊಳ್ಳಲು ಹೋರಾಟಮಾಡುತ್ತಿದ್ದ ದಣಿವರಿಯದ ದುಡಿಮೆಕಾರ ಕೆ.ಎಸ್.ಪುಟ್ಟಣ್ಣಯ್ಯ 2018 ಫೆಬ್ರವರಿ 25 ರ ಭಾನುವಾರ ಭೌತಿಕವಾಗಿ ನಮ್ಮಿಂದ ಕಣ್ಮರೆಯಾಗಿದ್ದಾರೆ. ಆದರೆ ಅವರ ರೈತಪರ ಚಿಂತನೆ,ಆಲೋಚನೆಗಳಿಂದ ನಾಡಿನ ಶ್ರಮಜೀವಿಗಳ ಎದೆಯಗೂಡಿನಲ್ಲಿ ಸದಾ ಜೀವಂತವಾಗಿರುತ್ತಾರೆ.
ದುಡಿಯುವ ವರ್ಗದ ಹಿತಾಸಕ್ತಿಯನ್ನು ಗುರಿಯಾಗಿಟ್ಟುಕೊಂಡು ಅನೇಕ ಧೀಮಂತ ರೈತನಾಯಕರ ತ್ಯಾಗ,ಬಲಿದಾನಗಳಿಂದ ರೂಪುಗೊಂಡ ರೈತಚಳವಳಿ ನಿಂತ ನೀರಾಗಬಾರದು. ನಿರಂತರ ಚಲನಶೀಲ ವಾಗಿರಬೇಕು ಎನ್ನುವುದು ಪುಟ್ಟಣ್ಣಯ್ಯನವರ ಆಶಯವಾಗಿತ್ತು.
ಸತತ ಆರುವರ್ಷಗಳ ಕಾಲ ಭೀಕರ ಬರಗಾಲ ಬಂದು ಮಂಡ್ಯಜಿಲ್ಲೆಯ ರೈತರು ತತ್ತರಿಸಿ ಹೋಗಿದ್ದರು. ಅದು 2016,ಏಪ್ರಿಲ್ 21. `ಮಂಡ್ಯ ಜಿಲ್ಲೆ ಉಳಿಸಿ' ಎನ್ನುವ ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಪುಟ್ಟಣ್ಣಯ್ಯ ಮಾತನಾಡುತ್ತಿದ್ದಾರೆ "ದೇಶಕ್ಕೆ ಅನ್ನಕೊಡುವ ರೈತ ದಿನೇ ದಿನೇ ಸರ್ವನಾಶ ಆಗ್ತಾ ಇದಾನೆ. ಪ್ರತಿಭಟನಾ ಸಭೆಗೆ ಬಂದ ರೈತರು ಕಾಂಕ್ರೀಟ್ ಹಾಕ್ದಂಗೆ ಕುಂತ್ಗಬೇಕು. ಆಟ್ಗುಳಿ ಸಭೆಯಲ್ಲಾ ಇದು. ರೈತರು ಕರೆದ ಸಭೆ. ನಾನು ಇರ್ತೀನಿ,ನಾಳೆ ಸಾಯ್ತೀನಿ.ಚಳವಳಿಗೆ ಸಾವಿಲ್ಲ" ಎನ್ನುತ್ತಲೆ ಇಡೀ ಸಭೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ರೈತರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುತ್ತಿದ್ದ ನಾಯಕ ಪುಟ್ಟಣ್ಣಯ್ಯ ಇಲ್ಲ ಎನ್ನುವ ಸಂಕಟವನ್ನು ರೈತ ಸಮುದಾಯ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
"ದೇಶದಲ್ಲಿ ರಾಜಕೀಯ ಕ್ರಾಂತಿಯಾಗಬೇಕು.ಹಳ್ಳಿಯಿಂದ ಯಾರೂ ಹೊರಗೆ ಹೋಗಬಾರದು ಎಂಬ ಆಥರ್ಿಕ ನೀತಿಯನ್ನು ರೂಪಿಸಬೇಕು.ಹಳ್ಳಿಯ ಆದಾಯವನ್ನು ಹೆಚ್ಚಿಸಿ ಸ್ವಾಭಿಮಾನದ,ನೆಮ್ಮದಿ ಬದುಕು ಕಟ್ಟಿಕೊಳ್ಳುವಂತೆ ಮಾಡಬೇಕು.ಮುಂದಿನ ರಾಜ್ಯ ಸಮಿತಿ ಸಭೆ ನಡೆಯುವ ವೇಳೆಗೆ ಇಂತಹ ಆಲೋಚನೆ ಮಾಡುವ ನೂರು ಜನ ಯುವಕರನ್ನು ತಯಾರುಮಾಡಬೇಕು.ಅದು ನಿಮ್ಮಿಂದ ಆಗುತ್ತೆ.ತಯಾರಾಗಿ.ಕನರ್ಾಟಕದಿಂದಲೇ ಈ ದೇಶದ ದುಡಿಯವ ಜನರಿಗೆ ಬೆಳಕು ಬರುವಂತಾಗಲಿ" ಎಂದು ಕರೆ ನೀಡಿದ್ದ ಪುಟ್ಟಣ್ಣಯ್ಯ ಕಂಡ ಕನಸನ್ನು ಅರ್ಧಕ್ಕೆ ಬಿಟ್ಟು ಬಾರದ ಲೋಕಕ್ಕೆ ನಡೆದುಬಿಟ್ಟರು.
ಕಳೆದ ಐದಾರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತಿದ್ದ ಪುಟ್ಟಣ್ಣಯ್ಯ ತಮ್ಮ ಆರೋಗ್ಯವನ್ನು ಮರೆತು ರೈತ ಸಮುದಾಯದ ಅನಾರೋಗ್ಯಕ್ಕೆ ಚಿಕಿತ್ಸೆ ಕೊಡಿಸಲು ದಣಿವರಿಯದೆ ದುಡಿದರು. ಜನ್ಮತಃ ಒಬ್ಬ ರೈತನಾಗಿ,ಹುಟ್ಟೂರಿನಲ್ಲೇ ವಾಸಮಾಡುತ್ತಾ, ಶ್ರಮಸಂಸ್ಕೃತಿಯನ್ನು ಪ್ರೀತಿಸುತ್ತಾ,ದುಡಿಮೆಗೆ ಭೂಮಿತಾಯಿ ಎಂದಿಗೂ ಮೋಸಮಾಡುವುದಿಲ್ಲ ಎಂದು ನಂಬಿದ್ದರು. ಪ್ರೊ.ಎಂ.ಡಿ.ನಂಜುಂಡಸ್ವಾಮಿ ಮತ್ತವರ ಸಮಾನಮನಸ್ಕರು ಹುಟ್ಟುಹಾಕಿದ ಸೈದ್ಧಾಂತಿಕ ನೆಲೆಗಳು ಮತ್ತು ವಿಚಾರಶೀಲತೆಯ ಬೆಳಕಿನಲ್ಲಿ ವ್ಯಕ್ತಿತ್ವವನ್ನು ಕಟ್ಟಿಕೊಂಡು ರೈತನಾಯಕ. ರೈತನಾಯಕರ ಭಿನಾಭಿಪ್ರಾಯದಿಂದ ಬದಲಾದ ಸನ್ನಿವೇಶದಲ್ಲಿ ರೈತಸಂಘದ ಕೇಂದ್ರ ಬಿಂದುವಾಗಿ ರೂಪುಗೊಂಡಿದ್ದ ಪುಟ್ಟಣ್ಣಯ್ಯನವರ ನಿಧನದಿಂದ ಚಳವಳಿಗೆ ಅಪಾರ ನಷ್ಟವಾಗಿದೆ. ರೈತ ಹೋರಾಟಕ್ಕೆ ದೊಡ್ಡ ನಿವರ್ಾತ ಸೃಷ್ಟಿಯಾಗಿದೆ.
ಈಗಲೂ ಸಮಾಜದಲ್ಲಿ ಶೇಕಡ 90 ರಷ್ಟು ಜನ ಒಳ್ಳೆಯವರು ಇದ್ದಾರೆ.ಜಾತಿ ರೋಮಾಂಚನಗೊಳಿಸುವಷ್ಟು ಚಳವಳಿ ನಮ್ಮನ್ನು ರೋಮಾಂಚನಗೊಳಿಸುತ್ತಿಲ್ಲ. ಒಂದು ಕಾಳು ಬಿತ್ತಿದರೆ ಸಾವಿರಕಾಳು ಕೊಡುವ ಭೂಮಿಯಂತೆ ಚಳವಳಿಯೂ ಆಗಬೇಕು.ಶ್ರಮ ಸಂಸ್ಕೃತಿ ಮತ್ತು ಸತ್ಯಕ್ಕೆ ನೇರ ಸಂಬಂಧ ಇದೆ.ಜಾತಿ ಮತ್ತು ದುಡ್ಡು ಸಮಾಜವನ್ನು ಬಲಿತೆಗೆದುಕೊಳ್ಳುತ್ತಿದೆ. ಈಮೇಲು,ಆಮೇಲು ಮೊಬೈಲು,ಕಂಪ್ಯೂಟರ್ರು ಜೊತೆಗೆ ಐಪಿಎಲ್ ಕ್ರೀಕೆಟ್ಟು ನಮ್ಮ ಹುಡುಗರನ್ನು ಹಾಳುಮಾಡುತ್ತಿವೆ. ವಿದ್ಯಾವಂತರ ನಿರ್ಲಕ್ಷ್ಯ, ಅವಿದ್ಯಾವಂತರು ಅಸಂಘಟಿತರಾಗಿರೋದು ಎಲ್ಲಾ ಸಮಸ್ಯಗಳಿಗೆ ಕಾರಣವಾಗಿದೆ.ಇಂತಹ ಯುವಕರನ್ನು ಕಟ್ಟಿಕೊಂಡು ನಾವು ಯಾವ ಚಳವಳಿ ಕಟ್ಟೋಣ,ನಾವೆಲ್ಲ ಹೀಗೆ ಕುಳಿತುಕೊಂಡರೆ ಈ ಸಮಾಜವನ್ನು ರಿಪೇರಿ ಮಾಡುವವರು ಯಾರು ಎಂದು ನೋವಿನಿಂದ ಹೇಳುತ್ತಿದ್ದ ಪುಟ್ಟಣ್ಣಯ್ಯ ದುಡಿಯುವ ವರ್ಗಕ್ಕೆ ಬಲವಾದ ಆಥರ್ಿಕ ನೀತಿಬೇಕು ಎಂದು ಬಯಸಿದ್ದರು.
ಪ್ರಕೃತಿ ವಿಕೋಪ,ಬೆಳೆ ನಷ್ಟದಿಂದ ಪಾರಾಗಿ ಸಮಗ್ರ ಬದುಕು ಕಟ್ಟಿಕೊಳ್ಳುವಂತಹ ಉದ್ಯೋಗವನ್ನು ಸೃಷ್ಟಿಮಾಡುವ ಸಾಲದ ನೀತಿ ಜಾರಿಯಾಗಬೇಕು.ಇಂತಹ ಆಶಯಗಳನ್ನು ಗುರಿಯಾಗಿಸಿಕೊಂಡು ನಾವು ಚಳವಳಿ ಕಟ್ಟಬೇಕು.ಯಾವತ್ತಾದರೂ ಒಂದು ದಿನ ಇದು ಫಲ ನೀಡುತ್ತದೆ.ಇದೆಲ್ಲಾ ನಮ್ಮ ಕಾಲದಲ್ಲೇ ಆಗುತ್ತದೆ ಎಂದು ತಿಳಿದುಕೊಂಡರೆ ಅದು ಅವಿವೇಕ.ಯಾವತ್ತಾದರೂ ಒಂದು ದಿನ ಅದು ಸಾಕಾರ ಆಗೇ ಆಗುತ್ತದೆ ಎಂದು ಚಳವಳಿ,ಹೋರಾಟ ಮಾಡುವವನು ವಿವೇಕಿ ಎಂದು ಪುಟ್ಟಣ್ಣಯ್ಯ ಹೇಳುತ್ತಿದ್ದರು.
ಅಮೇರಿಕಾದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಸತತವಾಗಿ 17 ಬಾರಿ ಚುನಾವಣೆ ಸ್ಪಧರ್ಿಸಿ ಸೋತಿದ್ದರು, ಪದೇ ಪದೇ ಸ್ಪಧರ್ೆಮಾಡುತ್ತಿದ್ದ ಹೃದಯವಂತ. 18ನೇ ಬಾರಿಗೆ ಜಯಗಳಿಸಿದಾಗ ಲಿಂಕನ್ ಹೇಳಿದ್ದು ಕರಿಯರು ಬೆಳಿಯರು ಅಂತ ಯಾಕೆ ಕಚ್ಚಾಡುತ್ತೀರಿ,ಕಲರ್ ರೇಸ್ ಬದಲಾವಣೆಯಿಂದ ಬಣ್ಣ ಬದಲಾಗಿದೆ ಅಷ್ಟೇ ಎಂದ.ಅದನ್ನು ಸಹಿಸದ ಮೂಲಭೂತವಾದಿಗಳು ಸಿನಿಮಾ ನೋಡಲು ಹೋದ ಅಬ್ರಹಾಂ ಲಿಂಕನ್ ಅವರನ್ನು ಗುಂಡಿಕ್ಕಿ ಕೊಂದರು.ಲಿಂಕನ್ ಸತ್ತ ಎಷ್ಟೋ ವರ್ಷಗಳ ನಂತರ ಬರಾಕ್ ಒಬಾಮ ಅಮೇರಿಕಾದ ಅಧ್ಯಕ್ಷನಾಗುವ ಮೂಲಕ ಲಿಂಕನ್ ಕಂಡ ಕನಸು ಸಾಕಾರವಾಯಿತು.ಅದೇ ರೀತಿ ನಾವು ಕಂಡ ಕನಸು ಮುಂದೊಂದು ದಿನ ಸಾಕಾರವಾಗುತ್ತದೆ ಎಂಬ ನಂಬಿಕೆಯ ಮೇಲೆ ಯುವಕರು ಚಳವಳಿಗೆ ಬರಬೇಕು ಎನ್ನುತ್ತಿದ್ದರು.
ಇಂತಹ ಧೀಮಂತ ರೈತನಾಯಕನ ಆಶಯಗಳನ್ನು ಈ ತಲೆಮಾರಿನ ಯುವಕರು ಅರಿಯಲು ಪುಟ್ಟಣ್ಣಯ್ಯನವರ ಬಗ್ಗೆ ಯುಟ್ಯೂಬ್ನಲ್ಲಿ ಸಿಗುವ ಕೇಸರಿಹರವು ರಚಿಸಿ ನಿದರ್ೇಶನಮಾಡಿರುವ " ರೈತಸಂಘದ ಪುಟ್ಟಣ್ಣಯ್ಯ (ಪುಟ್ಟಣ್ಣಯ್ಯ ಆಫ್ ರೈತ ಸಂಘ)" ಎಂಬ ಒಂದು ಗಂಟೆಗಳ ಸಾಕ್ಷ್ಯಚಿತ್ರವನ್ನು ನೋಡಬೇಕು ಮತ್ತು ಮೈಸೂರಿನ ಅಭಿರುಚಿ ಪ್ರಕಾಶನ ಹೊರತಂದಿರುವ "ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ" ಎಂಬ ಸದನದಲ್ಲಿ ಭಾಗವಹಿಸಿ ಮಾಡಿದ ಭಾಷಣಗಳ ಪುಸ್ತಕವನ್ನು ಓದುವ ಮೂಲಕ ರೈತಚಳವಳಿಯ ಆಶಯಗಳನ್ನು ಅರ್ಥಮಾಡಿಕೊಳ್ಳಬೇಕು.
80 ರ ದಶಕದಲ್ಲಿ ರೈತಚಳವಳಿ ಹುಟ್ಟಿಗೆ ಕಾರಣವಾದ ಅಂಶಗಳು. ರೈತಚಳವಳಿಯ ಮೂಲಕ ವೈಚಾರಿಕವಾಗಿ ಆಲೋಚನೆ ಮಾಡುವುದನ್ನು ಕಲಿಸಿದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ನಾಡಿನಲ್ಲಿ ಮೂಡಿಸದ ಸಂಚಲನ.ಕನ್ನಡಪರ ಹೋರಾಟ,ದಲಿತ ಚಳವಳಿಗಳಿಗೆ ಸೈದ್ಧಾಂತಿಕ ರೂಪುಕೊಡುವಲ್ಲಿ ರೈತಚಳವಳಿ ಹೇಗೆ ನೆರವಾಯಿತು. ಅಸಮಾನ ಸಮಾಜ ಯಾಕೆ ನಿರಂತರವಾಗಿ ಚಳವಳಿ, ಹೋರಾಟಗಳನ್ನು ಮಾಡಬೇಕು ಎನ್ನುವ ಪ್ರಶ್ನೆಗಳಿಗೆ ಈ ಸಾಕ್ಷ್ಯಚಿತ್ರ ಖಚಿತವಾದ ಉತ್ತರಗಳನ್ನು ನೀಡುತ್ತದೆ.ಜಡಗೊಂಡ ಯುವತಲೆಮಾರಿಗೆ ಎಚ್ಚರಿಕೆಯ ಸಂದೇಶವನ್ನು ಪರಿಣಾಮಕಾರಿಯಾಗಿ ತಲುಪಿಸಿದೆ.
"1950 ರ ದಶಕದಲ್ಲಿ ಶೇ 90 ರಷ್ಟು ಜನ ಕೃಷಿಯಿಂದಲೇ ಜೀವನ ಕಟ್ಟಿಕೊಂಡಿದ್ದಾಗ ಅಭಿವೃದ್ಧಿ ಎಂದರೆ ಕೈಗಾರಿಕೆ ಎಂಬ ಭ್ರಮೆಯನ್ನು ಬಿತ್ತಿ ಬೆಳೆದು ಕೃಷಿಯನ್ನು ನಿರ್ಲಕ್ಷ್ಯಮಾಡಿ ಕೈಗಾರಿಕೆಗೆ ಕೃಷಿ ಪೂರಕ ಎಂದು ಪರಿಗಣಿಸಿ ಕಡಿಮೆ ಬೆಲೆಗೆ ಕಚ್ಚಾವಸ್ತು ಪೋರೈಕೆ ಮಾಡುವಂತೆ ಮಾಡಲಾಯಿತು. ದೇಶಕ್ಕೆ ಆಹಾರ ಭದ್ರತೆಕೊಟ್ಟ ಅನ್ನದಾತನನ್ನು ಬೀದಿಪಾಲು ಮಾಡಿದ ಪರಿಣಾಮ ಕೃಷಿ ವಲಯ ನಲುಗಿ ಹೋಯಿತು. ಮನೆಮಂದಿಯೆಲ್ಲ ದುಡಿದರು ಹಸಿವು, ದಾರಿದ್ರ್ಯ. ಬಟ್ಟೆ ಇಲ್ಲ,ಸರಿಯಾದ ಶಿಕ್ಷಣ ಇಲ್ಲ,ಆರೋಗ್ಯ ರಕ್ಷಣೆ ಇಲ್ಲ. ಇದಕ್ಕೆಲ್ಲಾ ಉತ್ತರ ಕಂಡುಕೊಳ್ಳಬೇಕೆಂಬ ಉದ್ದೇಶ ರೈತಸಂಘದ ಹುಟ್ಟಿಗೆ ಕಾರಣವಾಯಿತು" ಎನ್ನುವ ಪ್ರೊ.ಕೆ.ಸಿ.ಬಸವರಾಜು ದೇಶದಲ್ಲಿ ಐತಿಹಾಸಿಕ ಅನಿವಾರ್ಯವಾಗಿ ಹುಟ್ಟಿದ ರೈತಸಂಘಕ್ಕೆ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಆತ್ಮ,ಮಿದುಳಾಗಿ ಕೆಲಸಮಾಡಿದರು ಎನ್ನುತ್ತಾರೆ.
ಅಭಿವೃದ್ಧಿ ವ್ಯಾಖ್ಯಾನಕ್ಕೆ ಪ್ರತಿರೋಧವಾಗಿ ಹುಟ್ಟಿದ ಚಳವಳಿ ರೈತನಿಗೆ ಪ್ರಭುತ್ವವನ್ನು ಪ್ರಶ್ನಿಸುವ, ತನ್ನ ಹಕ್ಕಿನ ಬಗ್ಗೆ ಅರಿವು ಮೂಡಿಸಿ ಹೋರಾಟಮಾಡಿ ಸ್ವಾಭಿಮಾನದಿಂದ ಬದುಕುವುದನ್ನು ಕಲಿಸಿತು.
ಶಿವಮೊಗ್ಗದ ತುಂಗಭದ್ರ ಖಾಸಗಿ ಕಬ್ಬು ಕಾಖರ್ಾನೆ ವಿರುದ್ಧ ಎಂ.ಡಿ.ಸುಂದರೇಶ್ ನೇತೃತ್ವದಲ್ಲಿ ಜುಲೈ 21,1980 ರಲ್ಲಿ ಚಳವಳಿ ಆರಂಭವಾಯಿತು.ನೀರಿನ ಕರ ಕೊಡುವುದಿಲ್ಲ ಎಂದು ನರಗುಂದದಲ್ಲಿ ಧರಣಿಕುಳಿತ ರೈತರ ಮೇಲೆ ಗೋಲಿಬಾರ್ ಮಾಡಲಾಯಿತು. ನರಗುಂದ,ನವಲಗುಂದ,ನಿಪ್ಪಾಣಿ,ದುದ್ದ,ನಾಗಸಂದ್ರ,ಗೆಜ್ಜಲಗೆರೆಯಲ್ಲಿ ಧರಣಿ ಕುಳಿತ ರೈತರ ಮೇಲೆ ಗೋಲಿಬಾರ್ ಮಾಡಲಾಯಿತು.136 ಜನ ಅಮಾಯಕ ರೈತರು ಪೋಲಿಸರ ಗುಂಡಿಗೆ ಬಲಿಯಾದರು.
ಸಾಲ,ಕಂದಾಯ ವಸೂಲಿಗೆ ಕಳರಂತೆ ಹಳ್ಳಿಗೆ ನುಗ್ಗಿ ದಾಂಧಲೆ ಮಾಡುತ್ತಿದ್ದ ಅಧಿಕಾರಿಗಳು ನಿಷ್ಕರುಣಿಗಳಾಗಿ ನಡೆದುಕೊಳ್ಳುತ್ತಿದ್ದರು. ಮನೆಯಲ್ಲಿದ್ದ ಪಾತ್ರೆಪಗಡೆ ದವಸ ಧಾನ್ಯ ಜಪ್ತಿಮಾಡುವುದು, ತಮಟೆ ಬಾರಿಸಿ ರೈತನ ಮಾನ ಹರಜಾಕುವುದು,ಗೋಡೆಯ ಮೇಲೆ ಸಾಲಗಾರ ರೈತನ ಹೆಸರು ಬರೆಸಿ ಅಪಮಾನ ಮಾಡುವುದು, ರೈತ ಮಹಿಳೆಯರು ಮೈಮೇಲೆ ಹಾಕಿದ್ದ ಒಡವೆಗಳನ್ನು ಬಿಡದೆ ಕಸಿದುಕೊಳ್ಳುವುದು ಹೀಗೆ ರೈತನ ಮೇಲೆ ದೌರ್ಜನ್ಯ ನಡೆಯುತ್ತಿತ್ತು.
ಇದನ್ನೆಲ್ಲ ಮೆಟ್ಟಿ ನಿಲ್ಲಲ್ಲು,ರೈತರಿಗೆ ಆತ್ಮಸ್ಥೈರ್ಯ ತುಂಬಲು ರೈತಚಳವಳಿ ರೈತರನ್ನು ಸಂಘಟಿಸಿ ಹೋರಾಟ ರೂಪಿಸಿತು. 17 ಜಿಲ್ಲೆಗಳ ಲಕ್ಷಾಂತರ ರೈತರು ಸರಕಾರದ ವಿರುದ್ಧ ದನಿಎತ್ತಲು ಸಾಗರೋಪಾದಿಯಲ್ಲಿ ಬೆಂಗಳೂರಿಗೆ ಹರಿದು ಬಂದರು. 1984 ಸೆಪ್ಟೇಂಬರ್ 24 ರಂದು ಒಂದೇ ದಿನ 37500 ರೈತರನ್ನು ಸರಕಾರ ಬಂಧಿಸಿತು.
ಎಂ.ಡಿ.ಸುಂದರೇಶ್,ಕೆ.ಟಿ.ಗಂಗಾಧರ್,ಕಡಿದಾಳು ಶಾಮಣ್ಣ,ಹನುಮಂತೇಗೌಡ,ಬಾಬಗೌಡ ಪಾಟೀಲ,ಪೂರ್ಣಚಂದ್ರ ತೇಜಸ್ವಿ,ಪ್ರೊ.ಎಂ.ಡಿ.ನಂಜುಂಡಸ್ವಾಮಿ,ಪುಟ್ಟಣ್ಣಯ್ಯ ಮತ್ತಿತರರು ರೈತರ ಸಂಘಟನೆಗೆ ಬೆನ್ನೆಲುಬಾಗಿ ನಿಂತರು.
ನೀರಾವರಿ ಪ್ರದೇಶ,ಮಲೆನಾಡು ಪ್ರದೇಶ,ಬಯಲುಸೀಮೆ ಪ್ರದೇಶ,ಪಶ್ಚಿಮಘಟ್ಟಗಳ ರೈತರು ಎದುರಿಸುತ್ತಿದ್ದ ಸಮಸ್ಯೆಗಳನ್ನು ಪಟ್ಟಿಮಾಡಿ ಹತ್ತೊಂಬತ್ತು ಒತ್ತಾಯಗಳನ್ನು ಸರಕಾರಕ್ಕೆ ಸಲ್ಲಿಸಲಾಯಿತು.
1983 ರಲ್ಲಿ ಚುನಾವಣೆ ಘೋಷಣೆಯಾಯಿತು.ರೈತ ವಿರೋಧಿ ಸರಕಾರ ಧೂಳಿಪಟವಾಯಿತು. ಮುಂದೆ ಬಂದ ಸರಕಾರಗಳು ರೈತರ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಲೇ ಬಂದವು.ಹೊಸ ಕನರ್ಾಟಕ ಕಟ್ಟಲು 89 ರಲ್ಲಿ ಚುನಾವಣ ಚಳವಳಿಯಾಗಿ ತಿರುವು ಪಡೆದುಕೊಂಡ ರೈತಚಳವಳಿ ಅನೇಕ ಏಳುಬೀಳುಗಳನ್ನು ಕಂಡಿತು. ರೈತಚಳವಳಿ ಬೃಹತ್ ಸಂಘಟನೆಯಾಗಿ ಬೆಳೆಯುತ್ತಿದ್ದ ಪರಿಗೆ ಬೆಚ್ಚಿಬಿದ್ದ ಸಮಾಜವಾದಿ ನಾಯಕರೇ ರೈತ ಚಳವಳಿಯನ್ನು ಇಬ್ಭಾಗಮಾಡಿದರು.ಇಂತಹ ಸಂದರ್ಭದಲ್ಲಿ ರೈತ ಚಳವಳಿಯನ್ನು ಸರಿಯಾದ ದಿಕ್ಕಿನಲ್ಲಿ ಸಂಘಟಿಸಿ ರೈತ ಸಮುದಾಯಕ್ಕೆ ಬಲತುಂಬಿದ ಪುಟ್ಟಣ್ಣಯ್ಯ ರಾಜ್ಯದ ಗಡಿಯನ್ನು ದಾಟಿ ದೇಶದ ರೈತನಾಯಕನಾಗಿ ಬೆಳೆದರು.
1975-80 ದಶಕದಲ್ಲಿ ರಾಜಕೀಯವಾಗಿ ದ್ವೇಷ,ಅಸೂಯೆಯಿಂದ ನಲುಗಿಹೋಗಿದ್ದ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಗೆ ಪದವಿವ್ಯಾಸಂಗ ಮುಗಿಸಿ ಹೋದ ಪುಟ್ಟಣ್ಣಯ್ಯ ಶಾಂತಿ ನೆಲೆಸುವಂತೆ ಮಾಡಿದರು.ಹಳ್ಳಿಗಳಲ್ಲಿ ಅವರು ಮಾಡುತ್ತಿದ್ದ ನ್ಯಾಯಪಂಚಾಯಿತಿಗಳು ಜನರ ಮನಸ್ಸನ್ನು ಗೆದ್ದವು. ಪುಟ್ಟಣ್ಣಯ್ಯನವರ ನ್ಯಾಯ ಪರಿಹಾರದ ಬಗ್ಗೆ ದಂತಕತೆಗಳು ಹುಟ್ಟಿಕೊಂಡವು.ಈ ವೇಳೆಯಲ್ಲಿ ಹಾಸನದ ಗೆಳೆಯರ ಒತ್ತಾಯದ ಮೇರೆಗೆ ರೈತ ಸಂಘಟನೆಗೆ ಬಂದ ಪುಟ್ಟಣ್ಣಯ್ಯ ನಂತರ ರೈತನಾಯಕನಾಗಿ ರೂಪುಗೊಂಡದ್ದು ಈಗ ಇತಿಹಾಸ.
ಇಂಗ್ಲೀಷ್ ಹೊರತುಪಡಿಸಿ ಹಿಂದಿ,ತಮಿಳು ಸೇರಿದಂತೆ ಮೂರ್ನಾಲ್ಕು ಭಾಷೆಯಲ್ಲಿ ಸುಲಲಿತವಾಗಿ ಮಾತನಾಡುತ್ತಿದ್ದ ಪುಟ್ಟಣ್ಣಯ್ಯ ಸಂಘಟನೆಗೆ ಸೇರುತ್ತಿದ್ದ ಜನರಿಗೆ ಬೇಸರವಾಗದಂತೆ ಹಾಸ್ಯ,ವ್ಯಂಗ್ಯ ಮಿಶ್ರಿತ ಶೈಲಿಯಲ್ಲಿ ಭಾಷಣ ಮಾಡುತ್ತ ರೈತರು ಎದುರಿಸುತ್ತಿದ್ದ ಸಮಸ್ಯೆಗಳನ್ನು ಅಧಿಕಾರಿಗಳಿಗೆ ಮನಮುಟ್ಟುವಂತೆ ಮನವರಿಕೆ ಮಾಡಿಕೊಡುತ್ತಿದ್ದರು.
ವಿಧಾನ ಸಭೆಯಲ್ಲಿ ಅವರು ಮಂಡಿಸಿದ ವಿಚಾರಗಳು ಕೇವಲ ರೈತ ಸಮುದಾಯಕ್ಕೆ ಸೀಮಿತವಾಗಿರಲಿಲ್ಲ.ಶಿಕ್ಷಣ,ಭಾಷೆ,ಸಂಸ್ಕೃತಿ,ಜಾತಿ,ಧರ್ಮ,ಮೌಡ್ಯ,ಕಂದಾಚಾರಗಳ ಬಗ್ಗೆ ಹೊಸ ಚಚರ್ೆಯನ್ನು ಹುಟ್ಟುಹಾಕಿವೆ.ಇಂತಹ ಧೀಮಂತನ ಆಶಯಗಳನ್ನು ಸಾಕಾರಮಾಡಲು ಯುವಜನಾಂಗ ಕೇಸರಿಹರವು ನಿದರ್ೇಶನದ "ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ" ಎಂಬ ಸಾಕ್ಷ್ಯಚಿತ್ರವನ್ನು ನೋಡಬೇಕು."ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ" ಎಂಬ ಪುಸ್ತಕವನ್ನು ಅಧ್ಯಯನಮಾಡಬೇಕು.ಹೆಚ್ಚು ಹೆಚ್ಚು ಜನರಿಗೆ ತಲುಪುವಂತೆಮಾಡಬೇಕು.ಆಗಾದಾಗ ಮಾತ್ರ ರೈತ ಚಳವಳಿಗೆ ಬಲಿದಾನಮಾಡಿದ ರೈತನಾಯಕರಿಗೆ ಅರ್ಥಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ