vaddagere.bloogspot.com

ಭಾನುವಾರ, ಮಾರ್ಚ್ 25, 2018

ಆರ್ಥಿಕ ಸಧೃಡತೆ, ಮಣ್ಣಿನ ಆರೋಗ್ಯ ಸುಧಾರಣೆಗೆ ಆದ್ಯತೆ
# ಮಿಶ್ರ ಬೇಸಾಯದಿಂದ ಯಶಸ್ಸು  # ಇದು ಲೆಕ್ಕಾಚಾರದ ಬೇಸಾಯ !
"ಪರಿಸರ ಸಂರಕ್ಷಣೆಯ ಪ್ರಶ್ನೆ ಬಂದಾಗ ನಾವು ನಮ್ಮ ಸುತ್ತಲಿನ ನೀರಿನ ಬಗ್ಗೆ,ಸಮುದ್ರಗಳ ಬಗ್ಗೆ ಮಾತಾಡುತ್ತೆವೆ.ನಮ್ಮ ಮೇಲಿನ ಆಕಾಶದ ಬಗ್ಗೆ,ಅದರಾಚಿನ ಓಜೋನ್ ರಂಧ್ರದ ಬಗ್ಗೆ ಮಾತಾಡುತ್ತೇವೆ.ದೂರದ ಗಣಿಗಳ ಬಗ್ಗೆ,ದಟ್ಟ ಕಾಡಿನ ಸಂರಕ್ಷಣೆಯ ಬಗ್ಗೆ ಒಟ್ಟಾರೆ ಭೂಮಿಯ ಬಗ್ಗೆ ಮಾತಾಡುತ್ತೇವೆ.ಮೈಯನ್ನು ಬಿಸಿಮಾಡುವ ಬಿಸಿಲಿನ ಬಗ್ಗೆ,ಅದನ್ನು ತಂಪುಗೊಳಿಸುವ ಗಾಳಿಯ ಬಗ್ಗೆ,ಮೋಡದ ಬಗ್ಗೆ ಮಾತಾಡುತ್ತೇವೆ.ಆದರೆ ನಮ್ಮ ಕಾಲಡಿಗಿನ ಮಣ್ಣಿನ ಆರೋಗ್ಯದ ಬಗ್ಗೆ,ಅದರ ಅವನತಿಯ ಬಗ್ಗೆ ಮಾತಾಡುವುದಿಲ್ಲ.ಅದು ಭೂಮಿಯ ಒಂದು ಬಹುಮುಖ್ಯ ಭಾಗ,ನಮಗೆ ಆಹಾರ ನೀಡುವ ಭಾಗ,ನಮಗೆ ಆಶ್ರಯ ನೀಡಿದ ಭಾಗ,ನಮ್ಮ ಬದುಕಿಗೆ ಮೂಲ ಆಧಾರ ನೀಡಿದ ಭಾಗ ಎಂಬೂದನ್ನು ನಾವು ಮರೆಯುತ್ತೇವೆ" - ನಾಗೇಶ ಹೆಗಡೆ
====================================================
ಅದು ಹನ್ನೆರಡು ಎಕರೆ ಪ್ರದೇಶದ ಬಾಳೆ ಬೆಳೆಯ ತಾಕು.ಅಲ್ಲೀಗ 17000 ಏಲಕ್ಕಿ ಬಾಳೆ,ನಡುವೆ ಬುಲೆಟ್ ಮೆಣಸಿನಕಾಯಿ ಮತ್ತು ಸಾಂಬಾರ್ ಸೌತೆ ಗಿಡಗಳಿವೆ. ಬಾಳೆಯನ್ನು ಹನ್ನೆರಡು ಅಡಿ ಅಂತರದಲ್ಲಿ ಗಿಡದಿಂದ ಗಿಡಕ್ಕೆ ನಾಲ್ಕು ಅಡಿಗಳಂತೆ ಎಕರೆಗೆ 1800 ಗಿಡ ಹಾಕಲಾಗಿದೆ. ಇದಕ್ಕೆ ಮೊದಲು ಇಲ್ಲಿ ಬಾಳೆ ಜೊತೆ ಟೊಮಟೊ ಬೆಳೆಯಲಾಗಿತ್ತು.ಅದರಿಂದ ಆದಾಯವೂ ಬಂತು.
ಹತ್ತು ತಿಂಗಳಲ್ಲಿ 17 ಸಾವಿರ ಏಲಕ್ಕಿ ಬಾಳೆ ಬೆಳೆಯಲು ಮಾಡಬೇಕಾದ ವೆಚ್ಚ ತ್ತೊಂಬತ್ತು ದಿನಗಳಲ್ಲಿ ಟೊಮಟೊ ಬೆಳೆ ಒಂದರಿಂದಲೇ ಬಂದಿದೆ. ಬಾಳೆ,ಬುಲೆಟ್ ಮೆಣಸಿನಕಾಯಿ ಮತ್ತು ಸಾಂಬಾರ್ ಸೌತೆಯಿಂದ ಬರುವ ಹಣವೆಲ್ಲವೂ ಆದಾಯದ ಲೆಕ್ಕಕ್ಕೇ ಜಮೆಯಾಗಬೇಕು ಎನ್ನುವ ಈ ರೈತನ ಜಾಣ್ಮೆ ಮತ್ತು ಲೆಕ್ಕಚಾರವನ್ನು ಯಾರೇ ಆದರೂ ಮೆಚ್ಚಬೇಕು.
ಒಂದು ಫಸಲಿನಿಂದ ಆದ ನಷ್ಟವನ್ನು ಮತ್ತೊಂದು ಫಸಲಿನಿಂದ ತುಂಬಿಕೊಳ್ಳುವ ಜಾಣ್ಮೆಯಿಂದ ಹೀಗೆ ವ್ಯವಸಾಯ ಮಾಡುತ್ತಿರುವ ರೈತನ ಹೆಸರು ಸೋಮಹಳ್ಳಿ ಲಿಂಗಣ್ಣ ಮಹೇಶ್. ವಿದ್ಯಾಭ್ಯಾಸ ಪಿಯುಸಿ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಗೆ ಸೇರಿದ ಸೋಮಹಳ್ಳಿಯಲ್ಲಿ ಮಹೇಶ್ ಎಂದು ಕರೆದರೆ ಊರಿನ ಬಹುತೇಕ ಜನರಿಗೆ ಗೊತ್ತಾಗುವುದಿಲ್ಲ. "ಎಸ್ಎಲ್ ಮಹೇಶ್" ಎಂದರೆ ಎಲ್ಲರಿಗೂ ಪರಿಚಿತ.ಯಾಕೆಂದರೆ ಇವರು ಎಸ್ಎಲ್ ನರ್ಸರಿ ಆರಂಭಿಸಿ ಅದರಲ್ಲೂ ಯಶಸ್ಸು ಪಡೆದ ಪ್ರಯೋಗಶೀಲ ಕೃಷಿಕ. ತಂದೆ ದಿ.ಎಸ್.ಪಿ.ಲಿಂಗಣ್ಣ, ತಾಯಿ ಮಹದೇವಮ್ಮ. ಕೃಷಿಯಲ್ಲಿ ಇವರ ಯಶಸ್ಸು ಮತ್ತು ಪ್ರಯೋಗಶೀಲತೆಯನ್ನು ಕಂಡು ಅವರ ಸಹೋದರ ಎಸ್.ಎಲ್.ಮಹದೇವಸ್ವಾಮಿ ಎಂಎ ಬಿಇಡಿ ಉನ್ನತ ವ್ಯಾಸಂಗ ಮಾಡಿದ್ದರೂ ಅಣ್ಣನಿಗೆ ಕೃಷಿ ಕೆಲಸಗಳಲ್ಲಿ ಬೆಂಬಲವಾಗಿ ನಿಂತಿದ್ದಾರೆ.
ಒಟ್ಟು ಹನ್ನೆರಡು ಎಕರೆಯಲ್ಲಿ ಹೀಗೆ ಮಿಶ್ರ ಬೆಳೆಪದ್ಧತಿಯಲ್ಲಿ ಕೊಳವೆ ಬಾವಿ ಬಳಸಿಕೊಂಡು ಹನಿ ನೀರಾವರಿಯಲ್ಲಿ ಬೇಸಾಯ ಮಾಡುತ್ತಿದ್ದು ಹದಿನೇಳು ಸಾವಿರ ಬಾಳೆ ಬೆಳೆದಿದ್ದಾರೆ. ಎಕರೆಗೆ ಸುಮಾರು 1800 ಗಿಡಗಳನ್ನು ಹಾಕಿದ್ದಾರೆ. ತಮಿಳುನಾಡಿನಿಂದ ಪ್ರತಿ ಗಿಡದ ಗೆಡ್ಡೆಗೆ ಒಂಬತ್ತು ರೂಪಾಯಿಕೊಟ್ಟು ಖರೀದಿಸದರೆ ಅವರೇ ಬಂದು ಜಮೀನಲ್ಲಿ ನಾಟಿ ಮಾಡಿಕೊಡುತ್ತಾರೆ. ಗಿಡಗಳನ್ನು ತಂದರೆ ಪ್ರತಿಗಿಡಕ್ಕೆ 24 ರೂಪಾಯಿ ಕೊಡಬೇಕಾಗುತ್ತದೆ.
"ಯಾವುದೋ ಸಂಸ್ಥೆಯಲ್ಲಿ ಹೋಗಿ ಕನಿಷ್ಠ ವೇತನಕ್ಕೆ ದುಡಿಯುವುದಕ್ಕಿಂತ,ಯಾರ ಹಂಗೂ ಇಲ್ಲದೆ ನಮ್ಮದೆ ಜಮೀನಿನಲ್ಲಿ ಸಾಕಷ್ಟು ಹಣ ಸಂಪಾದಿಸುತ್ತಿದ್ದೇವೆ. ಸ್ವಾಂತಂತ್ರದ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಕೃಷಿಗಿಂತ ಬೇರೆ ಉದ್ಯೋಗ ಯಾಕೆ" ಎನ್ನುವ ಮಹದೇವಸ್ವಾಮಿ ಕೃಷಿಯಿಂದ ತಮ್ಮ ಕುಟುಂಬ ಸುಖಸಂತೋಷದಿಂದ ಇರುವುದಾಗಿ ಹೇಳುತ್ತಾರೆ.
ಹತ್ತು ವರ್ಷಗಳಿಗೂ ಹೆಚ್ಚು ಕಾಲ ಬರಿ ತರಕಾರಿ ಬೆಳೆಗಳನ್ನು ಬೆಳೆದ ಮಹೇಶ್ ಅವರಿಗೆ ಈಗ ಅದರಿಂದ ತಮ್ಮ ಜಮೀನಿನ ಮಣ್ಣು ಹಾಳಾಗಿರುವುದು ಗೊತ್ತಾಗಿದೆ. ಅಧಿಕ ಇಳುವರಿ ಪಡೆಯಲು ಹೆಚ್ಚು ಹೆಚ್ಚು ರಾಸಾಯನಿಕ ಗೊಬ್ಬರ ಬಳಕೆ ಮಾಡಿ ತರಕಾರಿ ಬೆಳೆದು ತಪ್ಪು ಮಾಡಿದೆವು ಎಂಬ ಅಪರಾಧಿ ಪ್ರಜ್ಞೆ ಈಗ ಅವರನ್ನು ಕಾಡುತ್ತಿದೆ. ಹಣಗಳಿಸುವ ಜಿದ್ದಿಗೆ ಬಿದ್ದು ಅಧಿಕ ಇಳುವರಿ ತೆಗೆಯುವ ಹುಚ್ಚು ಹಿಡಿಸಿಕೊಂಡು ಮಣ್ಣಿನ ಫಲವತ್ತತೆ ಕಳೆದುಕೊಂಡಿರುವುದು ಈಗ ಅವರ ಅನುಭವಕ್ಕೆ ಬರುತ್ತಿದೆ.
ಮೂರ್ನಾಲ್ಕು ವರ್ಷದಿಂದ ಮಹೇಶ್ ಅವರ ಮೂರು ಎಕರೆಯ ಒಂದು ಜಮೀನಿನ ಮಣ್ಣು ಜೀವ ಕಳೆದುಕೊಂಡು ಎಷ್ಟೇ ರಾಸಾಯನಿಕ ಗೊಬ್ಬರ ತಂದು ಸುರಿದರು ಇಳುವರಿ ಬರುತ್ತಿಲ್ಲ.ಅದಕ್ಕಾಗಿ ಕ್ರಮೇಣ ರಾಸಾಯನಿಕ ಗೊಬ್ಬರ ಬಳಕೆಯನ್ನು ಕಡಿಮೆ ಮಾಡಬೇಕು. ಜೈವಿಕ ಗೊಬ್ಬರಗಳನ್ನು ಬಳಸಬೇಕು.ಮಳೆಯ ನೀರನ್ನು ಕೊಯ್ಲು ಮಾಡಬೇಕು ಎನ್ನುವುದು ಈಗ ಮಹೇಶ್ ಗಮನಕ್ಕೆ ಬಂದಿದೆ. ಅದಕ್ಕಾಗಿ ಅವರು ತಮ್ಮ ಕೃಷಿ ಫ್ಲಾನಿಂಗ್ನಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಬರಿ ತರಕಾರಿ ಬೆಳೆಯುತ್ತಿದ್ದವರು ಮಣ್ಣಿನ ಸಂರಕ್ಷಣೆಗೂ ಆಧ್ಯತೆ ನೀಡಿ ಮಿಶ್ರ ಬೇಸಾಯದ ಕಡೆಗೆ ಒಲವು ಬೆಳಿಸಿಕೊಂಡಿದ್ದಾರೆ. ಅದಕ್ಕಾಗಿ ಈ ವರ್ಷ ತಮ್ಮ ಹನ್ನೆರಡು ಎಕರೆ ಪ್ರದೇಶದಲ್ಲೂ ಬಾಳೆ ಜೊತೆಗೆ ಮೂರು ಮಿಶ್ರ ಬೆಳೆ ಬೆಳೆದು ಸಾವಯವ ಹಾದಿಗೆ ಮರಳುವ ಸಿದ್ಧತೆ ಮಾಡಿಕೊಂಡಿದ್ದಾರೆ.
"ಅಧಿಕ ಇಳುವರಿ ಆಸೆಗೆ ಮಣ್ಣಿಗೆ ರಾಸಾಯನಿಕವೆಂಬ ವಿಷಸುರಿದು ತಪ್ಪುಮಾಡಿದೆವು. ಈಗ ಎಷ್ಟೇ ಗೊಬ್ಬರ ಸುರಿದರೂ ಮಣ್ಣು ಸತ್ವ ಕಳೆದುಕೊಂಡು ಫಸಲು ನೀಡಲು ಸೋಲುತ್ತಿದೆ. ಭೂಮಿಗೆ ಬಿದ್ದ ಮಳೆಯ ನೀರು ಹಿಂಗುವುದೆ ಇಲ್ಲಾ.ಇದನ್ನು ಹೀಗೆ ಮುಂದುವರಿಸಿದೆ ಭೂಮಿ ಬರಡಾಗುವುದು ನಿಶ್ಚಿತ ಎನ್ನುವುದು ನಮ್ಮಗೀಗ ಗೊತ್ತಾಗಿದೆ" ಎನ್ನುತ್ತಾರೆ.
ಅನುಭವದ ಆಧಾರದ ಮೇಲೆ ನಡೆಯುತ್ತಿರುವ ಇಂತಹ ಕೃಷಿ ಪ್ರಯೋಗಗಳನ್ನು ನೋಡಿದಾಗ ಪರಿಸರ ಲೇಖಕ,ಪತ್ರಕರ್ತ ನಾಗೇಶ ಹೆಗಡೆಯವರು ಯಾವಾಗಲೂ ಹೇಳುವ ಮಾತೊಂದು ನೆನಪಾಗುತ್ತದೆ.
"ನೋಡಿ ! ಪರಿಸರ ಸಂರಕ್ಷಣೆಯ ಪ್ರಶ್ನೆ ಬಂದಾಗ ನಾವು ನಮ್ಮ ಸುತ್ತಲಿನ ನೀರಿನ ಬಗ್ಗೆ,ಸಮುದ್ರಗಳ ಬಗ್ಗೆ ಮಾತಾಡುತ್ತೆವೆ.ನಮ್ಮ ಮೇಲಿನ ಆಕಾಶದ ಬಗ್ಗೆ,ಅದರಾಚಿನ ಓಜೋನ್ ರಂಧ್ರದ ಬಗ್ಗೆ ಮಾತಾಡುತ್ತೇವೆ.ದೂರದ ಗಣಿಗಳ ಬಗ್ಗೆ,ದಟ್ಟ ಕಾಡಿನ ಸಂರಕ್ಷಣೆಯ ಬಗ್ಗೆ ಒಟ್ಟಾರೆ ಭೂಮಿಯ ಬಗ್ಗೆ ಮಾತಾಡುತ್ತೇವೆ.ಮೈಯನ್ನು ಬಿಸಿಮಾಡುವ ಬಿಸಿಲಿನ ಬಗ್ಗೆ,ಅದನ್ನು ತಂಪುಗೊಳಿಸುವ ಗಾಳಿಯ ಬಗ್ಗೆ,ಮೋಡದ ಬಗ್ಗೆ ಮಾತಾಡುತ್ತೇವೆ.ಆದರೆ ನಮ್ಮ ಕಾಲಡಿಗಿನ ಮಣ್ಣಿನ ಆರೋಗ್ಯದ ಬಗ್ಗೆ,ಅದರ ಅವನತಿಯ ಬಗ್ಗೆ ಮಾತಾಡುವುದಿಲ್ಲ.ಅದು ಭೂಮಿಯ ಒಂದು ಬಹುಮುಖ್ಯ ಭಾಗ,ನಮಗೆ ಆಹಾರ ನೀಡುವ ಭಾಗ,ನಮಗೆ ಆಶ್ರಯ ನೀಡಿದ ಭಾಗ,ನಮ್ಮ ಬದುಕಿಗೆ ಮೂಲ ಆಧಾರ ನೀಡಿದ ಭಾಗ ಎಂಬೂದನ್ನು ನಾವು ಮರೆಯುತ್ತೇವೆ" ಎನ್ನುವ ನಾಗೇಶ ಹೆಗಡೆ ಅವರ ಮಾತುಗಳು ಎಲ್ಲರಿಗೂ ಎಚ್ಚರಿಕೆಯ ಸಂದೇಶವಾಗಬೇಕು.
ಒಂದೇ ತಾಣದಲ್ಲಿ ಪದೇ ಪದೇ ಫಸಲು ಬೆಳೆದರೆ ಮಣ್ಣಿನ ಸಾರ ಕಡಿಮೆಯಾಗುತ್ತದೆ ಎನ್ನುವುದು ಎಂತಹ ಅನಕ್ಷರಸ್ಥರಿಗೂ ಗೊತ್ತಿತ್ತು.ಸಾರವನ್ನು ಹೆಚ್ಚಿಸಲೆಂದು ಬೇಸಾಯಗಾರರು ಹಸಿಸೊಪ್ಪು,ತರಗೆಲೆ,ಸಗಣಿ ಗೊಬ್ಬರವನ್ನು ಸೇರಿಸಿ ಕಾಂಪೋಸ್ಟ್ ಮಾಡಿ ಗಿಡಗಳ ಬಳಿ ಹಾಕುತ್ತಿದ್ದರು. ಯಂತ್ರನಾಗರಿಕತೆಯ ತೆಕ್ಕೆಗೆ ಬಿದ್ದ ಆಧುನಿಕ ಮನುಷ್ಯ ಪಶುಪಾಲನೆಯನ್ನು ಮರೆತ.ಕೃಷಿಗಾಗಿ ದೊಡ್ಡ ದೊಡ್ಡ ಯಂತ್ರಗಳ ಮೇಲೆ ಅವಲಂಭಿತನಾದ.ಬೀಜ ಮತ್ತು ಗೊಬ್ಬರದ ಅಂಗಡಿಗಳಿಗೆ ದಾಸನಾದ.ಕ್ರಮೇಣ ಮಣ್ಣು ಸಾರ ಕಳೆದುಕೊಂಡಿತು. ಮಣ್ಣಿಗೆ ಸತತವಾಗಿ ಆಮೋನಿಯಂ ನೈಟ್ರೇಟ್,ಸೂಫರ್ ಫಾಸ್ಫೇಟ್,ಪೊಟ್ಯಾಶ್ನಂಥ ಗೊಬ್ಬರಗಳನ್ನು ಸುರಿಯುತ್ತಾ ಹೋದ ಪರಿಣಾಮ ಭೂಮಿ ಮಳೆ ನೀರು ಕುಡಿಯುವ ಶಕ್ತಿ ಕಳೆದುಕೊಂಡು ನಿಜರ್ೀವವಾಗಿದೆ ಎನ್ನುತ್ತಾರೆ ಕೃಷಿಕ ಮಹೇಶ್.
ಲೆಕ್ಕಾಚಾರದ ಬೇಸಾಯ : "ರೈತ ಒಂದು ಬೆಳೆ ಕೈಕೊಟ್ಟರೆ ತಡೆದುಕೊಳ್ಳಬಹುದು. ಎರಡೆರಡು ಬೆಳೆಗಳು ಸತತವಾಗಿ ಕೈಕಚ್ಚಿದರೆ ತಡೆದುಕೊಳ್ಳುವುದು ತುಂಬಾ ಕಷ್ಟ.ಒಂದೇ ತಾಕಿನಲ್ಲಿ ಮಿಶ್ರ ಬೆಳೆ ಪದ್ಧತಿಯಲ್ಲಿ ಮೂರ್ನಾಲ್ಕು ಬೆಳೆಗಳನ್ನು ಸಂಯೋಜನೆ ಮಾಡಿ ಬೆಳೆದರೆ ಒಂದಲ್ಲ ಒಂದು ಬೆಳೆ ರೈತನ ಆಥರ್ಿಕ ಕುಸಿತವನ್ನು ತಪ್ಪಿಸುತ್ತದೆ.ಅದೃಷ್ಟವಿದ್ದರೆ ಕೇವಲ ತ್ತೊಂಬತ್ತು ದಿನದಲ್ಲಿ ಲಕ್ಷಾಂತರ ರೂಪಾಯಿ ಆದಾಯವನ್ನು ತಂದುಕೊಡುತ್ತದೆ" ಎನ್ನುವ ಮಹೇಶ್ ರೈತರು ಮಾರುಕಟ್ಟೆ,ಹವಾಮಾನ,ಮಣ್ಣು ಎಲ್ಲವನ್ನೂ ನೋಡಿಕೊಂಡು ಬೆಳೆ ಪದ್ಧತಿಯನ್ನು ರೂಢಿಸಿಕೊಳ್ಳಬೇಕು.
ಯಾವುದೇ ಬೆಳೆಯನ್ನು ಹೊಲದಲ್ಲಿ ಹಾಕುವ ಮೊದಲು ಸರಿಯಾದ ಲೆಕ್ಕಾಚಾರ ಮಾಡಿ ಯೋಜಿಸಿ ಬೆಳೆ ಬೆಳೆದರೆ ಎಂದಿಗೂ ರೈತರಿಗೆ ಕೃಷಿಯಲ್ಲಿ ನಷ್ಟವಾಗುವುದೇ ಇಲ್ಲ.ಇದು ನನ್ನ ಸ್ವಂತ ಅನುಭವದ ಮಾತು ಎನ್ನುತ್ತಾರೆ.
ಯಶಸ್ವಿ ಕೃಷಿಕರೆಲ್ಲರು ಕೃಷಿಯ ಜೊತೆಗೆ ನರ್ಸರಿ ಅಥವಾ ಬೇರೆ ಹಣ ಬರುವಂಥ ಉದ್ಯೋಗ ಮಾಡಿಕೊಂಡು ಕೃಷಿ ಮಾಡುತ್ತಾರೆ.ಅಂತಹವರು ಮಾತ್ರ ಕೃಷಿಯಲ್ಲಿ ಲಾಭಗಳಿಸಿ ಯಶಸ್ವಿಯಾಗಿದ್ದಾರೆ ಎನ್ನುವ ಮಾತನ್ನು ಮಹೇಶ್ ಒಪ್ಪುವುದಿಲ್ಲ.ಬೇಗೂರು ಹೋಬಳಿ ಸುತ್ತಮುತ್ತಲಿನ ರೈತರು ಬರಿ ವ್ಯವಸಾಯ ಮಾಡಿಯೇ ಶ್ರೀಮಂತರಾದವರು ಇದ್ದಾರೆ. ಮಂಚಳ್ಳಿ ಪ್ರಕಾಶ್ ಅವರು ಬರೀ ಟೊಮಟೊ ಬೆಳೆದೆ ಆದಾಯಗಳಿಸಿ ಆಥರ್ಿಕವಾಗಿ ಸಧೃಡರಾಗಿದ್ದಾರೆ ಎಂದು ಇಂತಹ ಅನೇಕ ಜೀವಂತ ಸಾಕ್ಷಿಗಳನ್ನು ಉದಾಹರಣೆ ನೀಡುತ್ತಾರೆ.
ನರ್ಸರಿಯಿಂದಲೂ ಲಾಭ : "ಬೇಸಾಯಕ್ಕೆ ಬಂದ ಆರಂಭದಲ್ಲಿ ಎಸ್ಎಲ್ ನರ್ಸರಿ ಮಾಡಿ ಲಾಭಗಳಿಸಿದ್ದು ನಿಜ.ತಮ್ಮ ಕೃಷಿ ಅನುಭವವೇ ನರ್ಸರಿ ಮಾಡಲು ಪ್ರೇರಣೆಯಾಯಿತು.ಮೊದಲು ನಮ್ಮ ಜಮೀನಿಗೆ ನರ್ಸರಿ ಮಾಡಿಕೊಳ್ಳುತ್ತಿದ್ದೆವು.ನಂತರ ಆ ಉದ್ಯಮವೇ ದೊಡ್ಡದಾಗಿ ಬೆಳೆಯಿತು.ಹೋಬಳಿಗೊಂದು ನರ್ಸರಿ ಮಾಡಿದ್ದೆ.ಕಳೆದ ಎರಡು ವರ್ಷದಿಂದ ಎಲ್ಲವನ್ನು ನಿಲ್ಲಿಸಿ ಗುಂಡ್ಲುಪೇಟೆಯಲ್ಲಿ ಮಾತ್ರ ಒಂದು ನರ್ಸರಿ ನಡೆಸುತ್ತಿದ್ದೇನೆ' " ಎನ್ನುತ್ತಾರೆ.
ನರ್ಸರಿ ಆರಂಭಿಸಿದಾಗ ಸ್ಥಳೀಯರೆ ನಮಗೆ ತೊಂದರೆ ಕೊಟ್ಟರು.ಆಥರ್ಿಕವಾಗಿ ಮುಂದೆ ಬಂದು ಬಿಡುತ್ತಾರೆ ಎಂದುಕೊಂಡು ಅಪಪ್ರಚಾರ ಮಾಡಿದರು.ಆದರೂ ಯಾವುದೆ ಅಪಪ್ರಚಾರಕ್ಕೂ ಕಿವಿಗೊಡದೆ ಕೃಷಿಯಿಂದಲೇ ನೆಮ್ಮದಿಯ ಬದುಕು ಕಟ್ಟಿಕೊಂಡಿರುವುದಾಗಿ ಮಹೇಶ್ ಆತ್ಮ ವಿಶ್ವಾಸದಿಂದ ಹೇಳುತ್ತಾರೆ.
"ವಾಷರ್ಿಕವಾಗಿ ಕನಿಷ್ಠ ಐದು ಲಕ್ಷ ರೂಪಾಯಿ ಆದಾಯಗಳಿಸುವ ತಾವು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಕ್ಕಿದಾಗ ಐವತ್ತು ಲಕ್ಷ ರೂಪಾಯಿವರೆಗೂ ಆದಾಯ ಗಳಿಸಿದ್ದೇವೆ.ಯೋಜಿಸಿ,ಯೋಚಿಸಿ ಕೃಷಿ ಮಾಡಿದರೆ ಯಾವುದೇ ಕಾರಣಕ್ಕೂ ಕೃಷಿಯಿಂದ ರೈತರಿಗೆ ನಷ್ಟವಾಗುವುದಿಲ್ಲ" ಎನ್ನುತ್ತಾರೆ. ಹೆಚ್ಚಿನ ಮಾಹಿತಿಗೆ ಎಸ್.ಎಲ್.ಮಹೇಶ್ 9980919433 ಸಂಪಕರ್ಿಸಿ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ