ಕಾಡಂಚಿನಿಂದ ನೀರುತಂದ "ದನ ಕಾಯುವವರು"
* ಅಭಿವೃದ್ಧಿಗೆ ಮಾದರಿಯಾದ ಕುಂದಕೆರೆ ಗ್ರಾಮಸ್ಥರು * ಬರದಲ್ಲೂ ಬದುಕಿ ತೋರಿದ ಧೀರರು
ಗುಂಡ್ಲುಪೇಟೆ : ಇದೊಂದು ಅಪರೂಪದ ಕಥಾನಕ. ಸರಕಾರ ಜಿಲ್ಲಾಡಳಿತ ಯಾರಿಗೂ ಕಾಯದೆ ದನಕಾಯುವ ಜನ ಎರಡು ಮೂಕ್ಕಾಲು ಕಿ.ಮೀ ದೂರದಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರು ತಂದ ಸ್ಪೂತರ್ಿದಾಯಕ ಯಶೋಗಾಥೆ.
ಅದು ಕುಂದಕೆರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿಗೆ ಸೇರಿದ ಕಾಡಂಚಿನ ಗ್ರಾಮ. ಐದುನೂರು ಕುಟುಂಬಗಳಿರುವ ಸುಮಾರು 2300 ಜನಸಂಖ್ಯೆ ಇರುವ ಊರು. ಊರಿನ ಸುತ್ತಾ ಹತ್ತಾರು ಕೆರೆ ಕಟ್ಟೆಗಳಿವೆ. ಅದಕ್ಕೆ ಗ್ರಾಮಕ್ಕೆ ಕುಂದಕೆರೆ ಎಂಬ ಹೆಸರು ಬಂದಿರಬಹುದು. ಎದುರು ನಿಂತು ನೋಡಿದರೆ ಬಲಗಡೆಗೆ ಬಂಡೀಪುರ,ಗೋಪಾಲಸ್ವಾಮಿ ಬೆಟ್ಟದ ಕಡೆಗೆ ಹಬ್ಬಿರುವ ಮಲೆ, ಎಡಕ್ಕೆ ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದ ಕಡೆಗೆ ಹಬ್ಬಿರುವ ಬೆಟ್ಟಸಾಲು. ಬೆಟ್ಟಕ್ಕೆ ಚುಂಬಿಸುವಂತೆ ಕಾಣುವ ಕರಿಬಿಳಿ ಮೋಡಗಳ ಸಾಲು, ಸ್ವರ್ಗ ಧರೆಗಿಳಿದಂತೆ ಇಡೀ ಪ್ರದೇಶ ಕಾಣುತ್ತದೆ.
ಮೊನ್ನೆ ಬಿದ್ದ ಮಳೆಗೆ ರೈತರು ಎಳ್ಳು,ಸೂರ್ಯಕಾಂತಿ,ಹತ್ತಿ,ಹಲಸಂದೆ, ಅವರೆ, ಹರಳು,ಜೋಳ ಮುಂತಾದ ಎಲ್ಲಾ ಬಗೆಯ ಬೆಳೆಗಳನ್ನು ಹಾಕಿದ್ದು ಅಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಕಾಡುಪ್ರಾಣಿಗಳ ಹಾವಳಿಯ ನಡುವೆ ಕೃಷಿ ಮಾಡುತ್ತಿದ್ದು ಬೆಳೆಯಲ್ಲಿ ಇನ್ನೂ ವೈವಿಧ್ಯತೆ ಉಳಿಸಿಕೊಂಡಿರುವ ಇಲ್ಲಿನ ರೈತರು ಶ್ರಮಜೀವಿಗಳು. ನೀರೊಂದಿದ್ದರೆ ಧರೆಯನ್ನೆ ಸ್ವರ್ಗಮಾಡಬಲ್ಲ ಧೀರರು.
ಆನೆ,ಚಿರತೆ,ಕಾಡುಹಂದಿಯಂತಹ ಪ್ರಾಣಿಗಳು ಊರಿಗೆ ಬರದಂತೆ ಕಾಡಂಚಿನಲ್ಲಿ ಆನೆಕಂದಕ ನಿಮರ್ಾಣಮಾಡಲಾಗಿದೆ. ಆದರೂ ಅದನ್ನು ದಾಟಿ ಆಗಾಗ ಕಾಡುಪ್ರಾಣಿಗಳು ಕುಂದಕೆರೆ ಗ್ರಾಮವನ್ನು ದಾಟಿ ವಡ್ಡಗೆರೆಯ ಜಮೀನುಗಳಿಗೂ ದಾಳಿಮಾಡಿ ರೈತರ ಫಸಲನ್ನು ನಾಶಮಾಡಿ ಹೋಗುತ್ತವೆ.
ಭೀಕರ ಬರ : ಕಳೆದ ಹತ್ತು ವರ್ಷಗಳಿಂದ ಸತತವಾಗಿ ಬೆನ್ನಟ್ಟಿ ಬಂದಬರ. ಜನಜಾನುವಾರುಗಳಿಗೆ ಕುಡಿಯುವ ನೀರಿಗೂ ತೊಂದರೆ.ತೆಂಗಿನ ಮರಗಳೆಲ್ಲ ಒಣಗಿ ಸುಳಿಬಿದ್ದು ಕಲ್ಲುಕಂಬಗಳಂತೆ ನಿಂತಿವೆ. ಹಳ್ಳಿಯ ಜನರಿಗೆ ಬದುಕಲು ಏನು ಮಾಡಬೇಕೆಂದು ತೋಚದ ದಿಕ್ಕೆಟ್ಟ ಸ್ಥಿತಿ. ಇಂತಹ ಪರಿಸ್ಥಿತಿಯನ್ನು ಹತ್ತು ವರ್ಷಗಳಿಂದ ನಾವೂ ನೋಡೆ ಇಲ್ಲ ಅಂತ ಗ್ರಾಮದ ಹಿರಿಯರು ಹೇಳುತ್ತಾರೆ. ಹದಿನೈದು ವರ್ಷಗಳ ನಂತರ ಮೊನ್ನೆ ಬಿದ್ದ ಒಂದು ಮಳೆ ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ. ಮುಂದೆ ಏನಾಗಬಹುದು?. ಯಾರಿಗೂ ಗೊತ್ತಿಲ್ಲ.ಆತಂಕ ಇದ್ದೆ ಇದೆ.
ಇಂತಹ ಭೀಕರ ಪರಿಸ್ಥಿತಿಯ ನಡುವೆಯೂ ಜನಪ್ರತಿನಿಧಿಗಳು ರೈತರ ಬದುಕಿನೊಂದೆಗೆ ಚೆಲ್ಲಾಟ ಆಡುತ್ತಿದ್ದಾರೆ. ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ವಿಳಂಬ ಮಾಡುತ್ತಲೇ ಹೋಗುತ್ತಿದ್ದಾರೆ. ಕೆರೆ ಕಾಮಗಾರಿ ವಿಷಯದಲ್ಲಿ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸದಲ್ಲಿ ನಿರತರಾಗಿದ್ದಾರೆ. ಜನಪ್ರತಿನಿಧಿಗಳು ಕೊಟ್ಟದ್ದೆ ಪ್ರಸಾದ ಎಂದು ಸ್ವೀಕರಿಸುವ ಈ ಭಾಗದ ಜನ ತಮ್ಮಹಕ್ಕಿಗಾಗಿ ಪ್ರತಿಭಟಿಸುವುದನ್ನೆ ಮರೆತಿದ್ದಾರೆ.
ವಡ್ಡಗೆರೆ, ಕುಂದಕೆರೆ ಗ್ರಾಮದ ಜನ ಕುಡಿಯುವ ನೀರಿಗೆ,ದನಕರುಗಳಿಗೆ ದೂರದಿಂದ ಟ್ಯಾಂಕರ್ಗಳಲ್ಲಿ ನೀರು ತರುತ್ತಿದ್ದಾರೆ. ಒಬ್ಬೊಬ್ಬ ರೈತ ಇಂತಹ ಬರದಲ್ಲೂ 50-60 ಸಾವಿರ ರೂಪಾಯಿ ಕೊಟ್ಟು ದನಗಳ ಮೇವು ಖರೀದಿಸಿದ್ದಾರೆ. ಇಂತಹ ಪರಿಸ್ಥಿತಿಯನ್ನು ನಾವೂ ಎಂದೂ ನೋಡೆ ಇರಲಿಲ್ಲ ಎಂದು ಗ್ರಾಮದ ಹಿರಿಯರು ಮರುಗುತ್ತಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಊರಿನ ಜನ ಗುಳೆ ಹೋಗುವುದು ಗ್ಯಾರಂಟಿ ಎಂದು ಆತಂಕ ವ್ಯಕ್ತಪಡಿಸುತ್ತಾರೆ.
ತಾಲೂಕಿನ ಬಂಡೀಪುರ ಅಂಚಿಗೆ ಇರುವ ಮಂಗಲ,ಜಕ್ಕಳ್ಳಿ,ಮೇಲುಕಾಮನಹಳ್ಳಿಯಲ್ಲಿ ಕುಡಿಯವ ನೀರಿಲ್ಲದೆ, ಮೇವಿಲ್ಲದೆ ಒಂದೇ ದಿನ ಹತ್ತಾರು ದೇಸಿ ಹಸುಗಳು ಸಾವನ್ನಪ್ಪಿದ ವರದಿಗಳೂ ಇವೆ. ದನ ಸಾಯುವುದನ್ನು ನೋಡದೆ ಜನ ಕೇವಲ ಐದುನೂರು ರೂಪಾಯಿಗೆ ತಮ್ಮ ದನಗಳನ್ನು ಸಾಕುವವರಿಗೆ ಇಲ್ಲಾ ಕಟುಕರಿಗೆ ಮಾರಾಟಮಾಡಿದ ನೂರಾರು ಉದಾಹರಣೆಗಳಿವೆ. ಕುಂದಕೆರೆಯಲ್ಲೂ ಇದೇ ಪರಿಸ್ಥಿತಿ ಇದ್ದರೂ ಜನ ಮಾತ್ರ ಇದಕ್ಕೆ ಹೆದರಲಿಲ್ಲ.ಜಾನುವಾರುಗಳನ್ನು ಮಾರಾಟಮಾಡಲಿಲ್ಲ.ಸಾಯಲು ಬಿಡಲಿಲ್ಲ.ತಮ್ಮ ಸ್ವ ಪ್ರಯತ್ನದಿಂದ ಬದುಕಿಸಿಕೊಂಡರು. ಗಂಗೆ ತಂದ ಭಗೀರಥನಂತೆ ಕಾಡಂಚಿನಿಂದ ನೀರು ತಂದು ಜನಜಾನುವಾರುಗಳಿಗೆ ಕುಡಿಯುವ ನೀರುಕೊಟ್ಟು ಮಾದರಿಯಾದರು.
ನಾವು ದನಕಾಯುವವರು : "ಕಾಡಂಚಿಗೆ ದನ ಮೇಯಿಸಲು ಹೋಗುವವರು ನಾವು. ಈ ವರ್ಷ ದನಗಳಿಗೆ ಮೇವು ಇರಲಿಲ್ಲ.ನೀರೂ ಇಲ್ಲ ಎಂಬ ಭೀಕರ ಪರಿಸ್ಥಿತಿ . ಸರಕಾರದವರು ಕುಡಿಯುವ ನೀರುಕೊಡಲು ಆರು ಬೋರ್ವೆಲ್ ಕೊರೆಸಿದರು.ಆದರಲ್ಲಿ ನೀರು ಬರಲಿಲ್ಲ.ಸರಕಾರದ ಹಣ ಪೋಲಾಯಿತು ಅಷ್ಟೇ. ದನ ಮೇಯಿಸಲು ಹೋಗುತ್ತಿದ್ದಾಗ ದನಗಳಿಗೆ ಕುಡಿಯುವ ನೀರಿಗೆ ಆಸರೆಯಾಗಿತ್ತು ಲಕ್ಕಿತಾಳ ಕಟ್ಟೆ ಎಂಬ ಪುಟ್ಟಕೆರೆ. ಅದು ನೀರಿಲ್ಲದೆ ಬತ್ತಿ ಹೋಯಿತು. ಆಗ ನಾವು ಯೋಚಿಸಿದೆವು. ಈ ಸರಕಾರದವರನ್ನ ನಂಬಿ ಕುಳಿತರೆ ನಮ್ಮನ್ನು ಉಪವಾಸ ಬೀಳಿಸುವುದು ಗ್ಯಾರಂಟಿ.ನಮ್ಮ ದನಕರುಗಳು ಸಾಯುವುದು ಗ್ಯಾರಂಟಿ. ಅದಕ್ಕೆ ನಮ್ಮ ಕೆಲಸ ನಾವೇ ಮಾಡಿಕೊಳ್ಳೋಣ ಎಂಬ ತೀಮರ್ಾನಕ್ಕೆ ಬಂದೆವು" ಎನ್ನುತ್ತಾರೆ ಗ್ರಾಮದ ಕರಿಯಪ್ಪನ ನಾಗಪ್ಪ, ನಾಗರಾಜಪ್ಪ ಮತ್ತು ಗೆಳೆಯರು.
ಅದರಂತೆ ದನಕಾಯಲು ಹೋಗುತ್ತಿದ್ದವರೆಲ್ಲ ಸೇರಿ ಗ್ರಾಮಸ್ಥರ ಮುಂದೆ ತಮ್ಮ ಯೋಜನೆ ಮುಂದಿಟ್ಟರು. ಬೋರ್ವೆಲ್ ತೆಗೆಸಲು ಪ್ರತಿ ಮನೆಮನೆಯವರು ತಮ್ಮ ಕೈಲಾದಷ್ಟು ಹಣಕೊಡಿ. ಹಾಗೆ ಸಂಗ್ರಹವಾದ ಹಣದಿಂದ ಕಾಡಂಚಿನಲ್ಲಿ ಬೋರ್ವೆಲ್ ಹಾಕಿಸಿ ನೀರುತಂದು ಲಕ್ಕಿ ತಾಳ ಕಟ್ಟೆಗೆ ತುಂಬೋಣ.ನಮ್ಮ ಜಾನುವಾರುಗಳನ್ನು ಉಳಿಸಿಕೊಳ್ಳೋಣ ಎಂದು ಹೇಳಿದರು. ಇದಕ್ಕೆ ತಕ್ಷಣ ಸ್ಪಂದಿಸಿದ ಗ್ರಾಮದ ಪ್ರತಿಯೊಬ್ಬರು ಹತ್ತು ರೂಪಾಯಿಯಿಂದ ಹಿಡಿದು ಸಾವಿರ ರೂಪಾಯಿವರೆಗೂ ಚಂದಾಕೊಟ್ಟರು. ಅದು ಒಂದು ಲಕ್ಷ ರೂಪಾಯಿ ಆಯಿತು.ಇದು ಒಳ್ಳೆಯ ಕೆಲಸಕ್ಕೆ ನಮ್ಮ ಗ್ರಾಮದ ಜನರು ಒಗ್ಗಟ್ಟಾಗಿ ಸ್ಪಂದಿಸುವ ಪರಿ ಎನ್ನುತ್ತಾರೆ ತಾಲೂಕು ರೈತಸಂಘದ ಅಧ್ಯಕ್ಷ ಸಂಪತ್ ಕುಮಾರ.
ತುಂಬಿದ ಲಕ್ಕಿತಾಳ ಕಟ್ಟೆ : ಗ್ರಾಮಸ್ಥರಿಂದ ಸಂಗ್ರಹವಾದ ಹಣದಿಂದ 2016 ರ ಡಿಸೆಂಬರ್ನಲ್ಲಿ ಸ್ಥಳೀಯವಾಗಿ ಅಂತರ್ಜಲ ಪರಿಶೋಧನೆ ಮಾಡುವವರನ್ನೆ ಕರೆದು ಬೋರ್ವೆಲ್ ಹಾಕಿಸಿದೆವು.ಮುನ್ನೂರು ಅಡಿಗೆ ಒಳ್ಳೆಯ ನೀರು ಬಂತು. ಸರಿ ಒಂದು ಲಕ್ಷ ರೂಪಾಯಿ ಸಂಗ್ರಹವಾಗಿತ್ತಲ್ಲ ಅದಕ್ಕೆ ಉಳಿದ ಹಣದಲ್ಲಿ ಪಕ್ಕದಲ್ಲೇ ಮತ್ತೊಂದು ಬೋರ್ವೆಲ್ ಕೊರೆಸಿದೆವು. ಅದರಲ್ಲೂ ಒಳ್ಳೆಯ ನೀರು ಬಂತು. ಸರಕಾರದವರು ಕೊರೆಸಿದ ಆರು ಬೋರ್ವೆಲ್ ನೀರುಬರದೆ ಹಣ ಪೋಲಾಯಿತು. ಆದರೆ ನಾವು ಕೊರೆಸಿದ ಎರಡೂ ಬೋರ್ವೆಲ್ನಲ್ಲಿ ನೀರುಬಂತು. ಇದು ಸರಕಾರದ ಕೆಲಸಕ್ಕೂ ನಮ್ಮ ಕೆಲಸಕ್ಕೂ ಇರುವ ವ್ಯತ್ಯಾಸ ಎನ್ನುತ್ತಾರೆ ಗ್ರಾಮಸ್ಥರು.
ಈ ಬೋರ್ವೆಲ್ನಿಂದ ದನಗಳಿಗೆ ನೀರು ಪೂರೈಸಲು ಲಕ್ಕಿತಾಳಕಟ್ಟೆಗೆ ನೀರು ತುಂಬಿತು.ದನಗಳಿಗೆ ನೀರಾಗಿ ರೈತರು ನಿಟ್ಟುಸಿರು ಬಿಟ್ಟರು.ನಂತರ ಗ್ರಾಮದ ಜನರಿಗೂ ಕುಡಿಯುವ ನೀರಿಗೆ ತೊಂದರೆ ಉಂಟಾಯಿತು. ಅದೇ ನೀರನ್ನು ಎರಡು ಮುಕ್ಕಾಲು ಕಿ.ಮೀ.ದೂರದಿಂದ ಪೈಪ್ಲೈನ್ ಮಾಡಿ ಊರಿಗೂ ತಂದು ಕೊಟ್ಟೆವು.
ಕುಡಿಯವ ನೀರಿಗಾಗಿ ಪೈಪ್ಲೈನ್ ಮಾಡುವಾಗ ಬೊಮ್ಮನಹಳ್ಳಿ ಗ್ರಾಮ ಪಂಚಾತಿಯಿ ಅಧ್ಯಕ್ಷರು ತೊಂದರೆ ಕೊಟ್ಟರು. ನಮ್ಮ ಗ್ರಾಮ ನಮ್ಮ ರಸ್ತೆ ಕಾಮಗಾರಿ ಮಾಡುವಾಗ ಪೈಪ್ ಒಡೆದು ಹಾಕಿ ಕಿರುಕುಳ ಕೊಟ್ಟರು. ಒಳಚರಂಡಿ ಒಳಗಿನಿಂದ ಪೈಪ್ತಂದು ಗ್ರಾಮದ ಜನರಿಗೆ ಕುಡಿಯುವ ನೀರು ಕೊಟ್ಟೆವು ಎಂದು ಸಂಪತ್ ನೆನಪಿಸಿಕೊಳ್ಳುತ್ತಾರೆ.
ಮಾಹಿತಿ ಕೊರತೆ : "ನಮ್ಮ ನೀರನ್ನು ನಮಗೆ ಕೊಡಲು ಆರು ತಿಂಗಳು ಬೇಕಾಯಿತು. ಕಳೆದ ಡಿಸೆಂಬರ್ನಲ್ಲಿ ಜಾನುವಾರುಗಳಿಗೆ ನೀರು ಕೊಡಲು ನಾವು ಹಾಕಿಸಿದ ಬೋರ್ವೆಲ್ನಿಂದ ಗ್ರಾಮಕ್ಕೆ ನೀರು ಕೊಡಲು 2017 ಜೂನ್ವರೆಗೂ ನಾವು ಕಾಯಬೇಕಾಯಿತು. ಕಾಡಂಚಿನ ಗ್ರಾಮಗಳ ಬಗ್ಗೆ ಜಿಲ್ಲಾಡಳಿತ ಹೆಚ್ಚು ಗಮನಹರಿಸಬೇಕು. ಇಡೀ ಬಂಡೀಪುರ ವ್ಯಾಪ್ತಿಯಲ್ಲಿ ಉಪಕಾರ್ ಕಾಲೋನಿ ರೇಂಜ್ ವ್ಯಾಪ್ತಿಯ ಕಾಡಿನಲ್ಲಿ ಒಮ್ಮೆಯೂ ಕಾಡಿಗೆ ಬೆಂಕಿ ಬೀಳದಂತೆ ನೋಡಿಕೊಂಡಿದ್ದೇವೆ. ಕಾಡಿನ ಮರಗಳು ಲೂಟಿ ಆಗದಂತೆ ನೋಡಿಕೊಂಡಿದ್ದೇವೆ. ಅರಣ್ಯ ಇಲಾಖೆಯವರು ನಮ್ಮೊಂದಿಗೆ ಸೌಹಾರ್ದ ಸಂಬಂಧ ಇರಿಸಿಕೊಂಡಿರುವುದರಿಂದ ಇದು ಸಾಧ್ಯವಾಗಿದೆ" ಎನ್ನುತ್ತಾರೆ ತಾಲೂಕು ರೈತ ಸಂಘದ ಅಧ್ಯಕ್ಷ ಸಂಪತ್ ಕುಮಾರ.
ಜನ ಸಂಪರ್ಕ ಸಭೆ : ಇಷ್ಟಲ್ಲಾ ನಡೆದರೂ ತಾಲೂಕು ಆಡಳಿತಕ್ಕಾಗಲಿ, ಜಿಲ್ಲಾ ಆಡಳಿತಕ್ಕಾಗಲಿ ಇದೊಂದು ದೊಡ್ಡ ಕೆಲಸ ಅನಿಸದಿರುವುದು ದೊಡ್ಡ ದುರಂತ. ಮೂರ್ನಾಲ್ಕು ತಿಂಗಳ ನಂತರ ತೆರಕಣಾಂಬಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಈ ವಿಚಾರ ಜಿಲ್ಲಾಧಿಕಾರಿ ರಾಮು ಅವರ ಗಮನಕ್ಕೆ ಬಂದಿದೆ. ಗ್ರಾಮದ ಜನರೆಲ್ಲಾ ಸೇರಿ ಮಾಡಿದ ಕೆಲಸದ ಬಗ್ಗೆ ಮೆಚ್ಚುಗೆ ಸೂಚಿಸುವುದರ ಜೊತೆಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ತಕ್ಷಣ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿ ರಾಮು ಅವರು ಕುಡಿಯುವ ನೀರು ಸರಬರಾಜು ಮತ್ತು ಕಿರು ನೀರು ಸರಬರಾಜು ಯೋಜನೆ ಪುನಃಶ್ಚೇತನ ಯೋಜನೆಯಡಿ (ಎನ್ಆರ್ಡಿಡಬ್ಲ್ಯೂಪಿ) ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು ಆದೇಶ ನೀಡಿದ್ದಾರೆ.
ಇದರಿಂದ ಈಗ ವಾರದಲ್ಲಿ ಇಂದು ದಿನ ಕುಂದಕೆರೆಯ ಪ್ರತಿ ಮನೆಮನೆಯ ನಲ್ಲಿಗಳಲ್ಲಿ ನೀರು ಬರುತ್ತಿದೆ.ದಕಕಾಯುವ ಜನ ಮಾಡಿದ ಒಂದು ಸಣ್ಣ ಕೆಲಸದಿಂದ ಊರಿನ ಜನರ ಬಾಯಾರಿಕೆ ನೀಗಿದೆ. ಊರಿನ ಜನ ಸಣ್ಣಪುಟ್ಟ ರಾಜಕೀಯ ಮರೆತು ಒಂದಾದರೆ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸರಕಾರದ ನೆರವಿಗೆ ಕಾಯುತ್ತಾ ಕುಳಿತುಕೊಳ್ಳಬೇಕಿಲ್ಲ ಎನ್ನುವುದನ್ನು ಸಾಧಿಸಿತೋರಿಸಿದ ಕುಂದಕೆರೆ ಗ್ರಾಮದ ಜನ ಅಭಿನಂದನಾರ್ಹರು