ಒತ್ತಡದ ಬದುಕಿಗೆ ವಿದಾಯ ಹೇಳಿದ ಶಿವನಾಗಪ್ಪ
ಮೈಸೂರು : ಕೃಷಿ ಕೆಲವರಿಗೆ ಅನಿವಾರ್ಯ. ಹಲವರಿಗೆ ಅದೊಂದು ಹುಚ್ಚುಪ್ರೀತಿ. ಲಕ್ಷ ಲಕ್ಷ ರೂಪಾಯಿ ಸಂಬಳಕ್ಕೆ ವಿದಾಯ ಹೇಳಿ ಕೃಷಿಕರಾದವರೂ, ಕೋಟಿ ರೂಪಾಯಿಗಳ ಕೆಲಸ ಬಿಟ್ಟು ಹಸಿರಿನ ನಡುವೆ ನೆಮ್ಮದಿ ಹರಸುವವರು, ಫ್ಯಾಶನ್ಗಾಗಿ ಕೃಷಿಕರಾದವರು, ಸಹಜವಾಗಿ ಸರಳತೆಯಿಂದ ಬದುಕುವ ಹಂಬಲದಿಂದಾಗಿ ರೈತರಾದವರೂ ಇದ್ದಾರೆ. ಇಂತಹವರ ಸಾಲಿಗೆ ಸೇರುವ ಅಪರೂಪದ ವ್ಯಕ್ತಿಯೊಬ್ಬರ ಕೃಷಿ ಪಯಣದ ಬಗ್ಗೆ ನಿಮಗೆ ಹೇಳಬೇಕು.
ದಶಕದ ಹಿಂದೆ ಎರಡು ಸಂಚಾರಿ ಚಿತ್ರಮಂದಿರದ ಮಾಲೀಕ.ಕೋಟಿ ರೂಪಾಯಿಗಳಲ್ಲಿ ಗುತ್ತಿಗೆ ಕೆಲಸಮಾಡುತ್ತಿದ್ದ ಪ್ರಥಮ ದಜರ್ೆಗುತ್ತಿಗೆದಾರ. ಈಗ ಅದೆಲ್ಲವನ್ನೂ ಬಿಟ್ಟು ನಗರ ಸಹವಾಸದಿಂದ ತುಸು ಅಂತರ ಕಾಯ್ದುಕೊಂಡು ಪರಿಶುದ್ಧ ಪರಿಸರದ ನಡುವೆ ನೆಮ್ಮದಿಯಾಗಿ ಜೀವನ ಕಟ್ಟಿಕೊಂಡಿರುವ ನೈಸಗರ್ಿಕ ಕೃಷಿಕ ಸರಗೂರಿನ ಎಸ್.ಶಿವನಾಗಪ್ಪ ಈ ವಾರದ ಬಂಗಾರದ ಮನುಷ್ಯ.
"ಇಳಿಸಂಜೆ ಹೊತ್ತು. ಎಂದಿನಂತೆ ತನ್ನ ಕೆಲಸಮುಗಿಸಿ ಸೂರ್ಯ ಬೆಳಕಿಗೆ ವಿದಾಯ ಹೇಳಿ ಮೂಡಣದಲ್ಲಿ ಮುಳುಗುತ್ತಿದ್ದ. ನಾನು ಕುಳಿತು ಯೋಚಿಸಿದೆ. ಎಷ್ಟು ದಿನಾ ಅಂತ ಹಣದ ಹಿಂದೆ ಓಡುವುದು. ಇದೇ ರೀತಿ ಒತ್ತಡದಲ್ಲಿ ಕೆಲಸಮಾಡಿ ಹಣ ಸಂಪಾದನೆ ಮಾಡುತ್ತಾ ಹೂಗುವುದು.ಇದೆ ರೀತಿ ಒತ್ತಡದಲ್ಲಿ ಕೆಲಸಮಾಡಿದರೆ ಕೊನೆಗೊಂದು ದಿನ ನಾನು ಸಂಪಾದಿಸಿದ ಹಣವನ್ನೆಲ್ಲಾ ಆಸ್ಪತ್ರೆಗೆ ಸುರಿಯಬೇಕಾಗುತ್ತದೆ. ಆಗಾಗಿ ಇನ್ನು ಮುಂದೆ ಆರೋಗ್ಯಕ್ಕೆ ಆದ್ಯತೆ ನೀಡೋಣ.ಇರುವಷ್ಟು ದಿನ ಹಸಿರಿನ ನಡುವೆ ವಿಷಮುಕ್ತ ಪರಿಸರದಲ್ಲಿ ಬಾಳೋಣ ಎಂಬ ದೃಢ ನಿಧರ್ಾರ ಮಾಡಿದೆ". ಆ ನಿಧರ್ಾರವೇ ಸಹಜಕೃಷಿ ಪಯಣದ ಕಡೆಗೆ ಹೆಜ್ಜೆಹಿಡಲು ಪ್ರೇರಣೆ ನೀಡಿತು ಎಂದರು ಎಸ್.ಶಿವನಾಗಪ್ಪ.
ಮನುಷ್ಯ ದುಡ್ಡಂತೂ ತಿನ್ನುವ ಹಾಗಿಲ್ಲ. ಗುತ್ತಿಗೆ ಕೆಲಸ ಮಾಡುತ್ತಿದ್ದಾಗ ಒಂದೊಂದು ಕೆಲಸದಲ್ಲೂ ಎರಡು ಲಕ್ಷ ಉಳಿಯುತ್ತಿತ್ತು.ಸ್ವಲ್ಪ ಹಣವನ್ನೂ ಸಂಪಾದನೆಮಾಡಿದೆ. ಜೀವನದಲ್ಲಿ ಹಣ ಬೇಕು. ಎಷ್ಟು ಬೇಕು ಅನ್ನುವುದು ಗೊತ್ತಿರಬೇಕು. ಈಗಂತೂ ಕಳ್ಳತನದಲ್ಲಿ ಹಣ ಸಂಪಾದನೆ ಮಾಡಬೇಕು. ಗುತ್ತಿಗೆಕೆಲಸ ಮಾಡಿದರೆ ಶೇಕಡ 50 ಕ್ಕಿಂತ ಹೆಚ್ಚು ಹಣವನ್ನು ಅಧಿಕಾರಿಗಳಿಗೆ ಕೊಡಬೇಕು. ಗುಣ ಮಟ್ಟದ ಕೆಲಸ ಮಾಡಲು ಆಗುತ್ತಿಲ್ಲ. ನಾನು ಮಾಡುತ್ತಿರುವ ಕೆಲಸ ತಪ್ಪು ಅಂತ ಗೊತ್ತಾದ ಮೇಲೂ ಅದನ್ನು ಮುಂದುವರಿಸುವುದು ಸರಿಅಲ್ಲಾ. ಮಾಡುವವರು ಮಾಡಲಿ. ನನಗೆ ಸಾಕು ಅಂತ ಹೇಳಿ ಕಂಟ್ರಾಕ್ಟ್ರ್ ಕೆಲಸಕ್ಕೆ ವಿದಾಯ ಹೇಳಿ, ಕೊನೆಗಾಲದಲ್ಲಾದರೂ ತೃಪ್ತಿಕರ ಜೀವನ ನಡೆಸೋಣ. ಭೂಮಿತಾಯಿ ಸೇವೆ ಮಾಡೋಣ ಎಂಬ ಹಂಬಲದಿಂದ ಸಹಜ ಕೃಷಿಯನ್ನು ಜೀವನದ ಮುಖ್ಯ ಧ್ಯೇಯವಾಗಿಸಿಕೊಂಡೆ ಎಂದು ತಣ್ಣಗೆ ಹೇಳಿದರು. ಆ ಮೂಲಕ ಅವರು ಹಲವು ಸತ್ಯಗಳನ್ನು ಹೇಳಿಬಿಟ್ಟಿದ್ದರು.
ಕೇವಲ ಎಸ್ಎಸ್ಎಲ್ಸಿವರೆಗೆ ಓದಿ ಹೋಮಿಯೊಪತಿವೈದ್ಯ ಪದ್ಧತಿಯಲ್ಲಿ ಚಿಕಿತ್ಸೆ ನೀಡುವುದನ್ನು ಕಲಿತುಕೊಂಡಿರುವ ಶಿವನಾಗಪ್ಪ ಅವರು ತಮ್ಮ ಕೃಷಿ ಅನುಭವವನ್ನು ಹೇಳುತ್ತಲೇ ಬದುಕಿನ ಹಲವು ಸತ್ಯಗಳನ್ನು ಅನಾವರಣಮಾಡುತ್ತಾ ಹೋದರು. ಮೂಲತಃ ಬಿಡುಗಲು ಗ್ರಾಮದ ಶಿವನಾಗಪ್ಪ ಕಬಿನಿಯಲ್ಲಿ ಐದು ದಶಕಗಳ ಕಾಲ ವಾಸವಾಗಿದ್ದರು.ತಂದೆ ಸುಬ್ಬಣ್ಣ ಹೋಮಿಯಾಪತಿ ವೈದ್ಯರಾಗಿದ್ದರು. ಕೃಷಿಕರಾದ ಇವರು ತಂದೆಯಂತೆಯೇ ತರಬೇತಿಪಡೆದು ಮನೆಯವರಿಗೆ, ಸ್ನೇಹಿತರಿಗೆ ಈಗಲೂ ಹೋಮಿಯಾಪತಿ ಚಿಕಿತ್ಸೆ ನೀಡುತ್ತಾರೆ.
ಮನುಷ್ಯ ದುರಾಸೆಯನ್ನು ಬಿಟ್ಟರೆ ಕೇವಲ ಒಂದು ಎಕರೆ ಭೂಮಿಯಲ್ಲಿ ಕೇವಲ ಒಂದಿಂಚು ನೀರುಬಂದರೆ ನೆಮ್ಮದಿಯಾಗಿ ಜೀವನಕಟ್ಟಿಕೊಳ್ಳಬಹುದು ಎನ್ನುವುದು ಅವರ ಸ್ವತ ಅನುಭವ. ರಾಸಾಯನಿಕ ಸುರಿದು ಭೂಮಿತಾಯಿಯನ್ನು ಬಂಜೆಮಾಡಬಾರದು.ಮನುಷ್ಯನಿಗೆ ತಾಳ್ಮೆ ಇರಬೇಕು, ಭೂಮಿಯ ಅತಿಯಾದ ಶೋಷಣೆ ಕೂಡದು ಎನ್ನುವ ಮೂಲಕ ತಮಗೆ ಗೊತ್ತಿಲ್ಲದೆ ಅವರು ಬುದ್ಧ ದರ್ಶನ ಮಾಡಿಸಿದರು.
ಹಣ ಇರುವವರು ಹಣ ಇಟ್ಟು ಸಾಯುವುದಕ್ಕಿಂತ ಈ ರೀತಿ ಒಂದು ನೈಸಗರ್ಿಕ ಕೃಷಿಯ ತೋಟ ಮಾಡಿ ಪರಿಸರಕ್ಕೆ ಕೊಡುಗೆ ನೀಡಿದರೆ ಬದುಕು ಸಾರ್ಥಕವಾಗುತ್ತದೆ. ಮೂವರು ಹೆಣ್ಣು ಮಕ್ಕಳಿಗೂ ಮದುವೆ ಮಾಡಿ ನೆಮ್ಮದಿಯಾಗಿದ್ದೇನೆ. ನಗರದ ಬದುಕನ್ನು ಉಪ್ಪಿನಕಾಯಿ ತರಮಾಡಿಕೊಂಡು, ತೋಟದ ಜೀವನವನ್ನು ಊಟದಂತೆ ಕಂಡಿದ್ದೇನೆ. ಪತ್ನಿ ಉಷಾ ಹಾಗೂ ವಯಸ್ಸಾದ ತಾಯಿ ಮೈಸೂರಿನಲ್ಲಿದ್ದರೆ ನಾನು ಎರಡುದಿನ ಮಾತ್ರ ನಗರದಲ್ಲಿದ್ದು ಉಳಿದ ಐದು ದಿನ ಈ ಪರಿಶುದ್ಧವಾದ ವಾತಾವರಣದಲ್ಲಿ ಧ್ಯಾನ,ಯೋಗ,ಕೃಷಿ ಮಾಡಿಕೊಂಡು ಆರಾಮವಾಗಿದ್ದೇನೆ ಎಂದರು.
ಎಚ್.ಡಿ.ಕೋಟೆಯ ಹ್ಯಾಂಡ್ಪೋಸ್ಟ್ನಿಂದ ಬಲಗಡೆಗೆ ಹೋದರೆ ಸಿಗುವ ಸರಗೂರಿನ ಮಠದ ಎದುರು ಎರಡು ಎಕರೆ ಪ್ರದೇಶದಲ್ಲಿ ಕಳೆದ ಐದುವರ್ಷದಿಂದ ಇವರು ಕಟ್ಟಿದ ನೂಸಗರ್ಿಕ ತೋಟದಲ್ಲಿ ಅಪರೂಪವಾಗುತ್ತಿರುವ ನಂಜನಗೂಡು ರಸಬಾಳೆ ತಳಿಯನ್ನು ಉಳಿಸಿಬೆಳೆಸುತ್ತಿದ್ದಾರೆ.
ಒಟ್ಟು ಎರಡು ಎಕರೆ ಪ್ರದೇಶದಲ್ಲಿ 30/30 ಅಡಿ ಅಂತರದಲ್ಲಿ 98 ತೆಂಗು. ಸುತ್ತಲೂ 150 ಅಡಿಕೆ ಗಿಡ. ಅಲ್ಲಲ್ಲಿ 48 ಶ್ರೀಗಂಧ. 80 ತೇಗ (ಟೀಕ್). ಜೊತೆಗೆ 25 ನಿಂಬೆ. 70 ನುಗ್ಗೆ. 600 ನಂಜನಗೂಡು ರಸಬಾಳೆ. 200 ಏಲಕ್ಕಿ ಬಾಳೆ. 30 ಮೆಣಸು ಬಳ್ಳಿ. ಅಪರೂಪವಾಗುತ್ತಿರುವ ಸುಂಡೇ ಕಾಯಿ 10. ಲವಂಗ, ಜಾಯಿಕಾಯಿ, ದಾಳಿಂಬೆ, ರೆಡ್ ಸೀಬೆ, 40 ಕರಿಬೇವು ಹೀಗೆ ಹತ್ತು ಹಲವು ಗಿಡಮರಗಳು ಸಹಜವಾಗಿ ಬೆಳೆಯುತ್ತಾ ಕಂಪುಸೂಸಿವೆ.
ಒಂದೂವರೆ ವರ್ಷದಿಂದ ಸುಭಾಷ್ ಪಾಳೇಕರ್ ಅವರು ಹೇಳಿದಂತೆ ನೈಸಗರ್ೀಕ ಕೃಷಿ ಮಾಡುತ್ತಿದ್ದಾರೆ. ಅದಕ್ಕೂ ಮೊದಲು ಸಾವಯವ ಕೃಷಿ ಮಾಡುತ್ತಿದ್ದರು. "ಇದರಲ್ಲಿ ಖಚರ್ು ಜಾಸ್ತಿ ಬರುತಿತ್ತು. ಎರೆಗೊಬ್ಬರ ಮಾಡಲು ಸೊಪ್ಪು, ತರಗು ಎಲ್ಲವನ್ನೂ ಹೊರಗಿನ ತರಬೇಕಾಗಿತ್ತು. ಆದರೆ ಸುಭಾಷ್ ಪಾಳೇಕರ್ ಕೃಷಿಯಲ್ಲಿ ಒಂದು ನಾಡ ಹಸು ಇದ್ದರೆ ಏನನ್ನೂ ಹೊರಗಿನಿಂದ ತರಬೇಕಾಗಿಲ್ಲ. ಖಚರ್ು ಕಡಿಮೆ. ಸುಭಾಷ್ ಪಾಳೇಕರ್ ಅವರ ಪಾಠಕ್ಕೆ ಹೋದಮೇಲೆ ಎರೆಹುಳ ಭೂಮಿಯಲ್ಲೇ ಇದೆ ಎನ್ನುವುದು ಗೊತ್ತಾಯಿತು. ಕೃತಕವಾಗಿ ಎರೆಹುಳ ತಂದು ಗೊಬ್ಬರ ಮಾಡಿ ಬಳಸುವುದಕ್ಕಿಂತ ಪ್ರಕೃತಿಯಲ್ಲೇ ಇರುವ ಎರೆಹುಳಗಳನ್ನು ಕಾಪಾಡಿಕೊಂಡರೆ ಸಾಕು ಎಂಬ ಸತ್ಯ ಅರ್ಥವಾಯಿತು. ತೋಟದಲ್ಲಿರುವ ಎಲ್ಲಾ ಮರಗಿಡಗಳಿಗೆ ಐದು ವರ್ಷ ತುಂಬಿ ಆರುವರ್ಷ ಆಗಿದೆ. ಒಂದು ಚಮಚ ರಾಸಾಯನಿಕ ಗುಬ್ಬರವನ್ನಾಗಲಿ, ಕ್ರಿಮಿನಾಶಕವನ್ನಾಗಲಿ ಬಳಸಿಲ್ಲ.ನಮ್ಮದು ಸಂಪೂರ್ಣ ನೈಸಗರ್ಿಕ ಕೃಷಿ" ಎನ್ನುತ್ತಾರೆ.
ಕೆಆರ್ಎಸ್ ತೆಂಗಿನ ನರ್ಸರಿಯಿಂದ ಹೈಬ್ರೀಡ್ ತಳಿಯ ಎಳನೀರು ತೆಂಗು ಹಾಕಿದ್ದಾರೆ. ನಡುವೆ ತಿಪಟೂರು ಟಾಲ್ ತಳಿಯ ತೆಂಗು ಕೂಡ ಇದೆ. ನೀರಿಗಾಗಿ ಎರಡು ಬೋರ್ವೆಲ್ ಇದೆ. 180 ಅಡಿ ಒಂದು ಮತ್ತೊಂದು 120 ಅಡಿ.ಎರಡರಲ್ಲೂ ಸುಮಾರು ಎರಡು ಇಂಚು ನೀರು ಬರುತ್ತಿದೆ. ಈಗ ಎರಡುಮೂರು ವರ್ಷದಿಂದ ನೀರು ಕಡಿಮೆಯಾಗಿದ್ದು ಒಂದೂವರೆ ಇಂಚು ನೀರು ಬರುತ್ತಿದೆ.
ಕೊಳವೆಬಾವಿ ನೀರು ಮರುಪೂರಣಮಾಡಲು 110 ಅಡಿ ಉದ್ದ ,125 ಅಡಿ ಅಗಲ ಹಾಗೂ 10 ಅಡಿ ಆಳ ಇರುವ ಹೊಂಡತೆಗೆಸಿದ್ದಾರೆ. ಮಳೆಯ ನೀರು ಇಲ್ಲಿ ಬಂದು ಶೇಖರಣೆಯಾಗುತ್ತದೆ. ಬೋರ್ವೆಲ್ನಲ್ಲಿ ನೀರಿನ ಇಳುವರಿ ಹೆಚ್ಚಾಗುತ್ತದೆ. ಅಂತರ್ಜಲ ಅಭಿವೃದ್ಧಿಗೆ ಅಂತ ಮಾಡಿದ ಹೊಂಡ ಈಗ ಆದಾಯದ ಮೂಲವಾಗಿಯೂ ಬದಲಾಗಿದೆ.ಇದರಲ್ಲಿ ಮೀನುಮರಿಗಳನ್ನು ಸಾಕಾಣಿಕೆ ಮಾಡಿ ವಾಷರ್ಿಕ 50 ಸಾವಿರ ರೂಪಾಯಿ ಆದಾಯಗಳಿಸುತ್ತಿದ್ದಾರೆ.
ಇದುವರೆಗೆ ತೋಟಕಟ್ಟಲು ಖಚರ್ು ಜಾಸ್ತಿಯಾಗಿದೆ. ಆದಾಯ ಬಂದಿಲ್ಲಾ. ನೈಸಗರ್ಿಕ ಕೃಷಿಯಲ್ಲಿ ದಿಢೀರ್ ಅಂತ ಹಣ ನಿರೀಕ್ಷೆ ಮಾಡುವುದು ತಪ್ಪು. ನಾಲ್ಕೈದು ವರ್ಷ ತೋಟಕಟ್ಟುವುದರ ಕಡೆಗೆ ಗಮನ ಕೊಡಬೇಕು. ಗಿಡಗಳನ್ನು ಆಯ್ಕೆ ಮಾಡುವುದು. ಟ್ರಂಚ್ ಮಾಡಿಸುವುದು. ಸ್ಪಿಂಕ್ಲರ್ ಅಳವಡಿಸಿಕೊಳ್ಳುವುದು ಹೀಗೆ ಆರಂಭಿಕ ಬಂಡವಾಳವನ್ನು ತೊಡಗಿಸಲೇ ಬೇಕು.ಇಷ್ಟನ್ನು ಮಾಡಿಕೊಂಡು ಒಂದು ನಾಡ ಹಸು ಸಾಕಿಕೊಂಡರೆ ಖಚರ್ು ಕಡಿಮೆ.ನಂತರ ನಾಲ್ಕನೇ ವರ್ಷದಿಂದ ನಿಗಧಿತ ಆದಾಯ ನಿರೀಕ್ಷೆ ಮಾಡಬಹುದು.ಈಗ ನಮ್ಮ ತೋಟದಿಂದ ಆದಾಯ ಶುರುವಾಗಿದೆ ಎನ್ನುತ್ತಾರೆ.
ತೋಟದ ಬದುಗಳಲ್ಲಿ ಹಾಕಿರುವ ತೇಗ, ಸಾಗುವನಿ ಮರಗಳು ದೀರ್ಘಕಾಲದಲ್ಲಿ ಆದಾಯ ತಂದುಕೊಡುತ್ತವೆ. ಒಂದೊಂದು ಮರವನ್ನು 50 ಸಾವಿರದಿಂದ 70 ಸಾವಿರದವರೆಗೂ ಮಾರಾಟ ಮಾಡಬಹುದು. ಹಣಕ್ಕಿಂತ ಮುಖ್ಯವಾಗಿ ಹಸಿರು ತೋಟ ಕಟ್ಟುವುದರಿಂದ ಪರಿಸರ ತಂಪಾಗಿರುತ್ತದೆ.
ನನಗೆ ಮಾಡಿದ ಯಾವ ಕೆಲಸದಲ್ಲೂ ಸಂತೃಪ್ತಿ ಸಿಗಲಿಲ್ಲ. ಗುತ್ತಿಗೆದಾರನಾಗಿದ್ದಾಗ ಸಾಕಷ್ಟು ಹಣ ಸಿಗುತ್ತಿತ್ತು.ಆದರೆ ನೆಮ್ಮದಿ ಇರಲಿಲ್ಲ.ತೋಟದ ಸುತ್ತ ಕಾಂಪೌಂಡ್ ಕಟ್ಟಿದ್ದೇನೆ. ಅದಕ್ಕಾಗಿ ಸಾಕಷ್ಟು ಹಣ ವೆಚ್ಚಮಾಡಿದ್ದೇನೆ ನಿಜ. ಆದರೆ ಅದರಿಂದ ತೃಪ್ತಿ ಇದೆ. ಇಂದಲ್ಲಾ ನಾಳೆ ನಾನು ತೊಡಗಿಸಿರು ಹಣ ವಾಪಸ್ ಬಂದೇ ಬರುತ್ತದೆ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ.
ಕಾವೇರಿ ಗಲಾಟೆ ಸಂದರ್ಭದಲ್ಲಿ ಕುರುಬೂರು ಶಾಂತಕುಮಾರ್ ಮತ್ತು ರೈತಸಂಘದಲ್ಲಿದ್ದ ಮಲ್ಲೇಶ್ ಕಬಿನಿ ಡ್ಯಾಂ ಮುತ್ತಿಗೆ ಹಾಕಲು ಬಂದಿದ್ದರು. ಆಗ ನಾನು ಕಬಿನಿಯಲ್ಲೇ ವಾಸವಾಗಿದ್ದೆ. ಆಗ ಕಬಿನಿ ರೈತ ಹಿತರಕ್ಷಣಾ ಸಮಿತಿ ಕಾರ್ಯದಶರ್ಿಯಾಗಿ ಹೋರಾಟಗಳಲ್ಲೂ ಭಾಗವಹಿಸಿದ್ದೆ. 2002 ರಿಂದ ಹೋರಾಟದಲ್ಲಿ ಭಾಗವಹಿಸುತ್ತಿದ್ದೆ. ಆದರೆ ಐದು ವರ್ಷದಿಂದ ಈಚೆಗೆ ಕೃಷಿಯಲ್ಲೇ ಹೆಚ್ಚು ತೊಡಗಿಸಿಕೊಂಡೆ, ಯಾಕೆಂದರೆ ಗಿಡಗಳನ್ನು ಹಾಕುವುದು ಮುಖ್ಯ ಅಲ್ಲ. ಅದರ ನಿರ್ವಹಣೆ ಅತಿ ಮುಖ್ಯ. ಮಾಲೀಕನ ಹೆಜ್ಜೆ ಗುರುತುಗಳು ಹೊಲದಲ್ಲಿ ಕಾಣದಿದ್ದರೆ ಗಿಡಗಳು ಸೊರಗಿಬಿಡುತ್ತವೆ.
ಜೀವಾಮೃತ ನೀಡಲು ಸರಳ ಸುಲಭ ವಿಧಾನ ಕಂಡುಕೊಂಡಿದ್ದಾರೆ. ಸಾವಿರ ಲೀಟರ್ ನೀರು ಸಂಗ್ರಹಣದ ಸಿಮೆಂಟ್ ತೊಟ್ಟಿ ಇದೆ. ಅದರ ಕೆಳಗಡೆ 500 ಲೀಟರ್ ನೀರು ಸಂಗ್ರಹಣದ ಮತ್ತೊಂದು ತೊಟ್ಟಿ ಇದೆ. ಒಂದು ಎಚ್ಪಿ ಮೋಟರ್ ಇಟ್ಟು ಸ್ಪಿಂಕ್ಲರ್ ಮೂಲಕ ಜೀವಾಮೃತ ಕೊಡುತ್ತಾರೆ. ಗಿಡಗಳ ಬೆಳವಣಿಗೆ ಆಗುತ್ತಿದಂತೆ ಪೋಷಕಾಂಶ ಹೆಚ್ಚು ಸಿಗಲಿ ಎಂದು ಪ್ರತಿ ಗಿಡದ ಬುಡಕ್ಕೆ ಅರ್ಧ ಲೀಟರ್ ಜೀವಾಮೃತವನ್ನು ನೇರವಾಗಿ ಕೊಡುತ್ತಾರೆ.
ಜೀವಾಮೃತ ಸಂಪಡಿಸಿ ಬೆಳೆದ ಮೂಲಂಗಿ, ಕೋಸು, ನಿಂಬೆ, ಕೊತಂಬರಿ ಸೊಪ್ಪು ತರಕಾರಿಗಳ ಪರಿಮಳವೇ ಬೇರೆ. ಜನ ಪರಿವರ್ತನೆಯಾಗಬೇಕು. ಹಂತಹಂತವಾಗಿ ನೈಸಗರ್ಿಕ ಕೃಷಿಯತ್ತ ಮುಖಮಾಡಬೇಕು. ಇಲ್ಲದಿದ್ದರೆ ಅಪಾಯ ಗ್ಯಾಂರಟಿ. ಈ ಕೃಷಿ ವಿಶ್ವವಿದ್ಯಾನಿಲಯಗಳು ಬರುವುದಕ್ಕೆ ಮುಂಚೆ ನಮ್ಮ ಕೃಷಿ ಚೆನ್ನಾಗಿರಲಿಲ್ವೇ. ನಮ್ಮ ತಾತನ ಕಾಲದಲ್ಲಿ ಕಾಲಕಾಲಕ್ಕೆ ಮಳೆ ಬರುತಿತ್ತು, ಹಟ್ಟಿ ಗೊಬ್ಬರಹಾಕಿ ಒಳ್ಳೆ ಬೆಳೆ ಬೆಳಿತಾ ಇದ್ದರು. ನಂತರ ಹೊಸದಾಗಿ ಹೈಬ್ರೀಡ್ ತಳಿ ಬಂದ ಮೇಲೆ ಈ ರಾಸಾಯನಿಕ ಬಳಕೆ ಅತಿಯಾಗಿ ಪರಿಸರ ಹಾಳಾಯ್ತು. ದಿಢೀರ್ ಅಂತ ಹಣ ಮಾಡಬೇಕು ಎನ್ನುವುದನ್ನು ಮೊದಲು ರೈತ ಬಿಡಬೇಕು.ಹಂತ ಹಂತವಾಗಿ ಮೇಲೆ ಬರಬೇಕು ಎನ್ನುತ್ತಾರೆ.
ತೆಂಗಿನಗಿಡಗಳಿಗೆ ದುಂಬಿ ಕೊರೆದು ಮರ ಒಣಗಿಹೋಗುವುದನ್ನು ತಡೆಯಲು ಎರಡು ದುಂಬಿ ಟ್ರ್ಯಾಪ್ ಹಾಕಿದ್ದಾರೆ.ನಾಲ್ಕು ಜೇನು ಪೆಟ್ಟಿಗೆ ಇದೆ. ಪರಾಗಸ್ಪರ್ಶ ಆದರೆ ಇಳುವರಿ ಹೆಚ್ಚಾಗುತ್ತದೆ. ಜೇನು ನೊಣ ಇಲ್ಲದಿದ್ದರೆ ತೋಟದ ಬೆಳವಣಿಗೆ ಕುಂಠಿತವಾಗುತ್ತದೆ. ಎಲ್ಲಿ ರಾಸಾಯನಿಕ ವಾಸನೆ ಇದೆ ಅಲ್ಲಿಗೆ ಜೇನು ನೊಣಗಳು ಸುಳಿಯುವುದೇ ಇಲ್ಲ ಎನ್ನುತ್ತಾರೆ. ನೈಸಗರ್ಿಕ ಕೃಷಿಯಲ್ಲಿ ಆಸಕ್ತಿಇರುವವರು ಒಮ್ಮೆ ನೋಡಬಹುದಾದ ತೋಟ ಇದು. ಹೆಚ್ಚಿನಮಾಹಿತಿಗೆ ಎಸ್.ಶಿವನಾಗಪ್ಪ 9448413230 ಸಂಪಕರ್ಿಸಿ.
========================================
ಮೀನುಮರಿ ಸಾಕಾಣಿಕೆಯಿಂದ ಆದಾಯ
ಮೈಸೂರು :ಸರಕಾರ ಈಗ ಎಲ್ಲ ರೈತರ ಜಮೀನುಗಳಲ್ಲಿ ಕೃಷಿಹೊಂಡಮಾಡಿದೆ.ಇಲ್ಲಿ ಮೀನುಮರಿಗಳನ್ನು ಸಾಕಾಣಿಕೆ ಮಾಡುವ ಮೂಲಕ ವಾಷರ್ಿಕ 50 ಸಾವಿರ ರೂಪಾಯಿ ಆದಾಯಗಳಿಸಬಹುದು ಎನ್ನುತ್ತಾರೆ ಶಿವನಾಗಪ್ಪ.
ನುಗು ಅಣೆಕಟ್ಟು,ಕಬಿನಿ ಅಣೆಕಟ್ಟು ಪ್ರದೇಶದಲ್ಲಿ ಮೀನುಮರಿ ಉತ್ಪಾದನಾ ಕೇಂದ್ರ ಇದೆ. ಅಲ್ಲಿ ಮೀನುಮರಿ ಸಾಕಾಣಿಕೆಗೆ ತರಬೇತಿ ಸಲಹೆ ಮಾರ್ಗದರ್ಶನ ಸಿಗುತ್ತದೆ. ಜೊತೆಗೆ ಮೀನು ಮರಿಗಳೂ ಸಿಗುತ್ತವೆ. ಮಳೆಗಾಲದಲ್ಲಿ ಮೂರು ನಾಲ್ಕು ಸಲ ಕಾಟ್ಲಾ ಮೀನು ಸಾಕಾಣಿಕೆ ಮಾಡಬಹುದು.ಅವುಗಳಿಗೆ ತುಂಬಾ ಬೇಡಿಕೆ ಇದೆ. ಒಂದು ತಿಂಗಳು ನೋಡಿಕೊಂಡರೆ, ಒಂದು ಮರಿಯನ್ನು 60 ಪೈಸೆಯಿಂದ ಒಂದು ರೂಪಾಯಿವರೆಗೂ ಮಾರಾಟಮಾಡಬಹುದು.
ಒಂದು ಲಕ್ಷ ಮರಿಗಳನ್ನು ತಂದು ಬಿಟ್ಟರೆ ಹಕ್ಕಿಪಕ್ಷಿಗಳು ತಿಂದು, ಕೆಲವು ಸತ್ತು 25000 ಮೀನಿನ ಮರಿಗಳು ಸಿಗುತ್ತವೆ. ಒಂದು ಸಲಕ್ಕೆ 15 ರಿಂದ 20 ಸಾವಿರ ಆದಾಯ ಸಿಗುತ್ತದೆ. ಈಗ ಸಧ್ಯ ಕಾಮನ್ ಕಾಫರ್್ ಸಾಕುತ್ತಿದ್ದೇನೆ. ಕೇರಳ ರಾಜ್ಯದಲ್ಲಿ ಈ ಮೀನಿನ ಮರಿಗಳಿಗೆ ತುಂಬಾ ಬೇಡಿಕೆ ಇದೆ. ಈ ಬಾರಿ ಮಳೆ ಆಗದೆ ಇರುವುದರಿಂದ ಐದು ವಾರ ಆದರೂ ಮರಿ ಮಾರಾಟ ಆಗಿಲ್ಲ. ಮರಿ ಒಂದುವರೆ ಇಂಚು ಬೆಳೆದರೆ ಎರಡು ರೂಪಾಯಿವರೆಗೂ ಸೇಲ್ ಆಗುತ್ತೆ. ಮೀನುಸಾಕಾಣಿಕೆಗೆ ಹೆಚ್ಚಿನಮಾಹಿತಿ ಬೇಕಾದವರು ಮೀನುಮರಿ ಉತ್ಪಾದನಾ ಕೇಂದ್ರದ ಸಹಾಯಕ ಅಧಿಕಾರಿ ಮಂಜೇಶ್ ಅವರನ್ನು ಭೇಟಿ ಮಾಡಬಹುದು.