vaddagere.bloogspot.com

ಸೋಮವಾರ, ನವೆಂಬರ್ 20, 2017

ಅರಿಶಿನ,ಬಾಳೆಯಲ್ಲಿ ಮಾದರಿಯಾದ ಕೃಷಿಕ ರಮೇಶ್ 
 # ಹೆಜ್ಜೆ ಇಟ್ಟಲೆಲ್ಲಾ ಯಶಸ್ಸು ಪಡೆದ ಬುದ್ದಿವಂತ  # ಕೃಷಿ ಲಾಭದಾಯಕ ಉದ್ಯೋಗವೆಂದ ಉದ್ಯಮಿ ! 

ಎರಡು ಎಕರೆಯಲ್ಲಿ ಆಳೆತ್ತರಕ್ಕೆ ಬೆಳೆದು ನಿಂತ ಅರಿಶಿನ. ಏಳು ಎಕರೆಯಲ್ಲಿ ಸಮೃದ್ಧವಾಗಿ ಬೆಳೆದು ಬಾಗಿದ ಬಾಳೆ. ನೂರು ತೆಂಗು.ಒಂದು ಎಕರೆಯಲ್ಲಿ ಕಲ್ಲಂಗಡಿ.ಮತ್ತೆ ಮೂರು ಎಕರೆಯಲ್ಲಿ ಡಿಸೆಂಬರ್ ವೇಳೆಗೆ ಕಲ್ಲಂಗಡಿ ನಾಟಿ ಮಾಡಲು ಸಿದ್ಧತೆ.ಹೀಗೆ ಒಟ್ಟು ಹನ್ನೆರಡು ಎಕರೆಯಲ್ಲೂ ಸಮೃದ್ಧ ಫಸಲು. ಮಾಡುವ ಪ್ರತಿಯೊಂದು ಕೆಲಸದಲ್ಲೂ ಅಚ್ಚುಕಟ್ಟು. ಹಾಕಿದ ಬಂಡವಾಳಕ್ಕೆ ಯಾವುದೇ ಕಾರಣಕ್ಕೂ ನಷ್ಟವಾಗಬಾರದು ಎಂಬ ಮನೋಭಾವ.
ವೃತ್ತಿಯಲ್ಲಿ ರಾಜಕಾರಣಿ, ಪ್ರವೃತ್ತಿಯಲ್ಲಿ ರೈತ, ಇದಲ್ಲೆಕ್ಕಿಂತ ಮೊದಲು ಅಬಕಾರಿ ಉದ್ಯಮಿ. ಹೀಗೆ ಕೈಹಿಡಿದ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಕಂಡ ಗುಂಡ್ಲುಪೇಟೆ ಪುರಸಭೆಯ ಮಾಜಿ ಅಧ್ಯಕ್ಷ ರಮೇಶ್ ಈಗ ತಾಲೂಕಿನ ಪ್ರಯೋಗಶೀಲ ರೈತ. ಕಳೆದ ಎರಡು ದಶಕಗಳಿಂದಲ್ಲೂ ಪ್ರತಿವರ್ಷ ಬರಪೂರ ಫಸಲು ತೆಗೆಯುತ್ತಾ ಕೃಷಿಯಲ್ಲೂ ಸಾಕಷ್ಟು ಆದಾಯಗಳಿಸುತ್ತಿದ್ದಾರೆ.
ಕೃಷಿ ನಷ್ಟ ಎನ್ನುವವರು ರಮೇಶ್ ಅವರನ್ನು ಒಮ್ಮೆ ಭೇಟಿಯಾಗಬೇಕು. ಕೃಷಿಯನ್ನು ಲಾಭದಾಯಕ ಮಾಡಿಕೊಳ್ಳುವುದು ಹೇಗೆ ಎನ್ನುವ ಬಗ್ಗೆ ಪಕ್ಕ ಪ್ರಾಕ್ಟಿಕಲ್ ಆಗಿ ಪಾಠ ಹೇಳಿಕೊಡುತ್ತಾರೆ. ಬಿ.ಕಾಂ.ಪದವಿ ವ್ಯಾಸಂಗ ಮಾಡಿರುವ ರಮೇಶ್ "ಇಂದಿಗೂ ತನಗೆ ಅತ್ಯಂತ ಖುಷಿಕೊಟ್ಟಿದ್ದು ಕೃಷಿಕ್ಷೇತ್ರ. ರಾಜಕಾರಣದಲ್ಲಿ ತೊಡಗಿಸಿಕೊಳ್ಳುವುದನ್ನು ಕ್ರಮೇಣ ಕಡಿಮೆಮಾಡಿ ಕೃಷಿ,ವ್ಯಾಪಾರದ ಕಡೆಗೆ ಹೆಚ್ಚು ಗಮನ ಕೊಡುವುದು ಒಳ್ಳೆಯದು ಎನ್ನುವುದು ಈಗ ಅರ್ಥವಾಗಿದೆ." ಎನ್ನುತ್ತಾರೆ.
ಗುಂಡ್ಲುಪೇಟೆ ಪಟ್ಟಣಕ್ಕೆ ಹೊಂದಿಕೊಂಡಂತಿರುವ ತೋಟದ ಸುತ್ತಮತ್ತಲಿನ ತೆಂಗಿನ ತೋಟಗಳೆಲ್ಲವೂ ಒಣಗಿ ಗೂಟಗಳಾಗಿದ್ದರೆ ರಮೇಶ್ ಅವರ ತೆಂಗಿನ ಮರಗಳು ಮಾತ್ರ ಮರದ ತುಂಬಾ ಕಾಯಿಬಿಟ್ಟು ಹಸಿರಾಗಿವೆ.ಇದಕ್ಕೆ ಇವರು ಅನುಸರಿಸುತ್ತಿರುವ ಕೃಷಿ ಪದ್ಧತಿ ಮತ್ತು ಜಾಣ್ಮೆಯೆ ಕಾರಣವಾಗಿದೆ.
ಮೂಲತಹ ಕೃಷಿ ಕುಟುಂಬದಿಂದಲೇ ಬಂದರೂ ತಂದೆಯ ಕಾಲಕ್ಕೆ ಕೃಷಿನಿಂತು ಹೋಗಿತ್ತು.ಸಮಾಜದಲ್ಲಿ ಗೌರವವಾಗಿ ಗುರುತಿಸಿಕೊಳ್ಳಬೇಕು,ನಾಲ್ಕಾರು ಜನರ ನಡುವೆ ನಾನೂ ಒಬ್ಬ ರೈತ ಎಂದು ಹೆಮ್ಮೆಯಿಂದ ಗುರುತಿಸಿಕೊಳ್ಳಬೇಕು ಎನ್ನುವ ಭಾವನೆಯಿಂದ 1994 ರಲ್ಲಿ ಒಂಬತ್ತು ಎಕರೆ ಜಮೀನು ಖರೀದಿಸಿ 1996 ರಿಂದ ಕೃಷಿ ಆರಂಭಿಸಿದ ರಮೇಶ್ ಕೃಷಿಯಲ್ಲಿ ಅಲ್ಲಿಂದ ಇಲ್ಲಿಯವರೆಗೆ ಹಿಂತಿರುಗಿನೋಡಿಲ್ಲ. ಅರಿಶಿನ ಮತ್ತು ಬಾಳೆ ಬೆಳೆಯುವುದರಲ್ಲಿ ಇಂದಿಗೂ ಇವರು ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆಯೇ ಇದ್ದಾರೆ.
ಬೆಳೆ ಮೊದಲು ದರ ನಂತರ : ಕೃಷಿಕರು ಮೊದಲು ಗುನಮಟ್ಟದ ಬೆಳೆಗಳನ್ನು ಬೆಳೆಯಲು ಆದ್ಯತೆ ನೀಡಬೇಕು. ಮಾರುಕಟ್ಟೆಯ ಬಗ್ಗೆ ಮೊದಲೇ ಯೋಚಿಸುವುದಕ್ಕಿಂತ ಒಳ್ಳೆಯ ಬೆಳೆ ಬೆಳೆಯಬೇಕು ಎನ್ನುವುದು ರೈತರ ಗುರಿ ಮತ್ತು ಉದ್ದೇಶವಾಗಿರಬೇಕು. ನಮ್ಮಲ್ಲಿ ತಮಿಳುನಾಡಿನ ರೈತರನ್ನು ಶ್ರಮಜೀವಿಗಳು,ಒಳ್ಳೆಯ ಕೃಷಿಕರು ಅಂತ ಎಲ್ಲರೂ ಹೊಗಳುತ್ತಾರೆ. ಅವರಿಗಿಂತ ನಮಗೇನು ಕಡಿಮೆಯಾಗಿದೆ. ನಾವೂ ಕೂಡ ಒಳ್ಳೆಯ ಕೃಷಿಕರು. ನಾವೂ ಕೃಷಿ ಮಾಡಬಹುದು ಎನ್ನುವುದನ್ನು ನಮ್ಮ ರೈತರಿಗೆ ತೋರಿಸಿಕೊಡಬೇಕು ಎನ್ನುವುದೇ ನನ್ನ ಉದ್ದೇಶವಾಗಿತ್ತು.ಅದರಲ್ಲಿ ಯಶಸ್ವಿಯೂ ಆದೆ. ತುಂಬಾ ಜನ ರೈತರು ನಮ್ಮ ತೋಟಕ್ಕೆ ಬಂದು ಕೃಷಿ ಪದ್ಧತಿಯನ್ನು ನೋಡಿಕೊಂಡು ಹೋಗುತ್ತಾರೆ.ಅವರೊಂದಿಗೆ ನನಗೆ ಗೊತ್ತಿರುವ ಮಾಹಿತಿಯನ್ನು ಪ್ರಮಾಣಿಕವಾಗಿ ಹಂಚಿಕೊಳ್ಳುತ್ತೇನೆ ಎನ್ನುತ್ತಾರೆ ರಮೇಶ್.
ಗುಂಡ್ಲುಪೇಟೆಯಲ್ಲಿ ಬಾಲು ಮತ್ತು ಕುಟುಂಬದವರು ಒಳ್ಳೆಯ ಕೃಷಿಕರು.ಆದರೆ ಒಂದುಸಲ ಅವರು ಬೆಳೆದ ಈರುಳ್ಳಿಗೆ ಯಾವುದೊ ರೋಗಬಂದು ಸೊರಗಿತ್ತು.ಆಗ ನನ್ನ ಬಳಿ ಬಂದರು.ನಾನು ಅವರಿಗೆ ಸೊರಗು ರೋಗಕ್ಕೆ ಸರಿಯಾದ ಔಷದಿ ಸಿಗುವ ಅಂಗಡಿಯ ಮಾಹಿತಿಕೊಟ್ಟೆ. ಅವರು ಈರುಳ್ಳಿಯನ್ನು ಉಳಿಸಿಕೊಂಡು ನಷ್ಟದಿಂದ ಪಾರಾದರು ಎನ್ನುತ್ತಾರೆ.
ಹೆಚ್ಚಾಗಿ ತಮಿಳುನಾಡಿನಿಂದ ರಸಾವರಿ ಗೊಬ್ಬರ ಮತ್ತು ಜೈವಿಕ ಗೊಬ್ಬರಗಳನ್ನು ಇವರು ಖರೀದಿಸಿ ತರುತ್ತಾರೆ.ಇದರಿಂದ ಫಲಿತಾಂಶವೂ ಚೆನ್ನಾಗಿದೆ. ತಮಿಳುನಾಡಿನಲ್ಲಿ ರೈತರು ಅತ್ಯಂತ ಜಾಗೃತರಾಗಿ ರುವುದರಿಂದ ಅಲ್ಲಿ ನಕಲಿ ಗೊಬ್ಬರ, ಔಷದಿಗಳನ್ನು ತಯಾರಿಸುವುದಿಲ್ಲ.ಹಾಗಾಗಿ ಅಲ್ಲಿ ನಮಗೆ ಗುಣಮಟ್ಟದ ಗೊಬ್ಬರ ಔಷದಿ ಸಿಗುತ್ತದೆ ಎನ್ನುತ್ತಾರೆ.
ರೈತರು ಸೋಮಾರಿಗಳಾಗಬಾರದು : ರೈತ ಅಂದಮೇಲೆ ಕನಿಷ್ಠ ದಿನಕ್ಕೆ ನಾಲ್ಕುಗಂಟೆಯಾದರೂ ತನ್ನ ಜಮೀನಿನಲ್ಲಿ ಇರಬೇಕು. ಅಲ್ಲಿನ ಆಗುಹೋಗುಗಳನ್ನು ಗಮನಿಸಿ ಸ್ಪಂದಿಸಬೇಕು. ತನ್ನ ಸುತ್ತಮುತ್ತ ಆಗುತ್ತಿರುವ ಬದಲಾವಣೆಗಳನ್ನು ನೋಡುವ  ಸಣ್ಣ ಕುತೂಹಲವಿರಬೇಕು.ಜೊತೆಗೆ ತಾನೂ ಯಾಕೆ ಅವರಂತೆ ಬೆಳೆ ಬೆಳೆಯಬಾರದು ಎಂಬ ಮನೋಭಾವ ಅವರಲ್ಲಿ ಬರಬೇಕು. ಸಾವಿರ ಅಡಿ ಬೋರ್ವೆಲ್ ಕೊರೆದು ಬೇಸಾಯ ಮಾಡುವವರು ನಮ್ಮಲ್ಲಿದ್ದಾರೆ.ತಮಿಳುನಾಡಿನಿಂದ ಬರಿಗೈಯಲ್ಲಿ ಬಂದು ಕೃಷಿಯಲ್ಲಿ ಕೋಟ್ಯಾಂತರ ರೂಪಾಯಿ ಸಂಪಾದನೆಮಾಡಿದವರೂ ಇದ್ದಾರೆ. ನಮ್ಮ ಸುತ್ತಮತ್ತಲಿನ ರೈತರು ಫಲವತ್ತಾದ ಭೂಮಿಯನ್ನು ಎಕರೆಗೆ ವಾಷರ್ಿಕ 15-20 ಸಾವಿರ ರೂಪಾಯಿಗಳಿಗೆ ಗುತ್ತಿಗೆಗೆ ನೀಡಿ ಅವರ ಬಳಿಯೇ ಕೆಲಸಕ್ಕೆ ಹೋಗುತ್ತಿದ್ದಾರೆ. ಇಂತಹ ಕೆಟ್ಟ ಪ್ರವೃತ್ತಿಯನ್ನು ರೈತರು ಬಿಡಬೇಕು.ಸರಕಾರ ಇವತ್ತೂ ರೈತರಿಗೆ ಸಾಕಷ್ಟು ಸವಲತ್ತುಗಳನ್ನು ನೀಡುತ್ತಿದೆ. ಒಬ್ಬ ರೈತನಿಗೆ ಎರಡು ಎಕರೆ ಇರಲಿ ಹತ್ತು ಎಕರೆ ಜಮೀನು ಇರಲಿ ಶ್ರಮವಹಿಸಿ ದುಡಿಯಬೇಕು. ಆಗ ಸ್ವಾವಲಂಭಿಯಾಗಿ ಬದುಕಬಹುದು.
ರೈತರು ಸಾಧ್ಯವಾದಷ್ಟು ಸಾವಯವ ಕೃಷಿಯನ್ನು ಮಾಡಬೇಕು. ನಾವೂ ಕೂಡ ಈಗ ರಾಸಾಯನಿಕ ಗೊಬ್ಬರ ಬಳಕೆಯನ್ನು ಕ್ರಮೇಣ ಕಡಿಮೆ ಮಾಡುತ್ತಿದ್ದೇವೆ. ಜೈವಿಕ ಗೊಬ್ಬರಗಳನ್ನು ಹೆಚ್ಚಾಗಿ ಬಳಸುತ್ತೇವೆ. ಗಿಡಗಳ ಆರೋಗ್ಯವನ್ನು ನೋಡಿಕೊಂಡು ಅವುಗಳಿಗೆ ಬೇಕಾದ ಲಘುಪೋಷಕಾಂಶಗಳನ್ನು ಒದಗಿಸುವ ಜೈವಿಕ ಗೊಬ್ಬರಗಳನ್ನು ಬಳಸುವುದರಿಂದ ರೋಗಗಳನ್ನು ತಡೆಗಟ್ಟಬಹುದು ಹಾಗೂ ಹೆಚ್ಚಿನ ಇಳುವರಿಯೂ ಬರುತ್ತದೆ ಎನ್ನುವುದು ಗೊತ್ತಾಗಿದೆ ಎಂದು ರಮೇಶ್ ಹೇಳುವಾಗ ಅವರ ಎರಡು ದಶಕದ ಕೃಷಿ ಅನುಭವ ಅವರಿಗೆ ಸಾಕಷ್ಟು ಪಾಠ ಕಲಿಸಿದೆ ಎನ್ನುವುದು ಗೊತ್ತಾಗುತ್ತದೆ.
2000 ಇಸವಿವರೆಗೂ ಕಬ್ಬು ಬೆಳೆಯುತ್ತಿದ್ದರೂ.ಅಂತರ್ಜಲ ಕಡಿಮೆಯಾಗಿ ನೀರಿನ ಕೊರತೆಯಾದ ಕಾರಣ ಬಾಳೆ,ಅರಿಶಿನದ ಕಡೆ ಬೆಳೆಬದಲಿಸಿಕೊಂಡರು. ಆಗಲೂ ಎಕರೆಗೆ 90 ಟನ್ ಕಬ್ಬು ಬೆಳೆದು ದಾಖಲೆ ಮಾಡಿದ್ದರು. ಎರಡು ಬೋರ್ವೆಲ್ ಇದ್ದು ಎರಡೂವರೆ ಇಂಚು ನೀರು ಬರುತ್ತದೆ. ಜಮೀನು ನೋಡಿಕೊಳ್ಳಲು ಒಬ್ಬ ಕೆಲಸಗಾರ ಇದ್ದಾನೆ.ಉಳಿದಂತೆ ದಿನಗೂಲಿ ನೌಕರರು ಬರುತ್ತಾರೆ. ಟ್ರಿಲರ್ ಬಳಸಿ ಬಾಳೆಯಲ್ಲಿ ಕಳೆ ತೆಗೆಯುವುದರಿಂದ ವೆಚ್ಚ ಮತ್ತು ಕೆಲಸಗಾರರ ಅವಲಂಬನೆ ಕಡಿಮೆಯಾಗಿದೆ.
ಬೆಳೆ ಪದ್ಧತಿ : ಅರಿಶಿನ ಮತ್ತು ಬಾಳೆ ಪ್ರಮುಖ ಬೆಳೆಗಳು. ಆರಂಭದ ಮೂರ್ನಾಲ್ಕು ತಿಂಗಳಲ್ಲಿ ಅರಿಶಿನದ ಜೊತೆ ಈರುಳ್ಳಿ ಹಾಗೂ ಬಾಳೆ ಜೊತೆ ಕಲ್ಲಂಗಡಿ ಅಥವಾ ಬೀಟ್ರೋಟ್ ರೀತಿಯ ತರಕಾರಿ ಬೆಳೆಗಳನ್ನು ಅಂತರ ಬೆಳೆಯಾಗಿ ಬೆಳೆದುಕೊಳ್ಳುತ್ತಾರೆ.ಅದರಿಂದ ಪ್ರಧಾನ ಬೆಳೆಗೆ ಮಾಡುವ ವೆಚ್ಚ ಬಂದುಹೋಗುತ್ತದೆ. ಕೆಲವೂ ಬಾರಿ ಅದನ್ನು ಮೀರಿ ಲಾಭವೂ ಆಗಿದೆ.
ಪ್ರಸ್ತುತ ಎರಡು ಎಕರೆಯಲ್ಲಿ ಅರಿಶಿನ ಇದೆ. ಮೊದಲು ಏಳು ಎಕರೆಯಲ್ಲಿ ಅರಿಶಿನ ಬೆಳೆದಿದ್ದರು. ಅರಿಶಿನ ಬೆಳೆಯುವ ಮೊದಲು ಜಮೀನನ್ನು ಹದವಾಗಿ ಟ್ಯ್ರಾಕ್ಟರ್ನಲ್ಲಿ ಉಳುಮೆ ಮಾಡಿಕೊಳ್ಳುತ್ತಾರೆ. ನಂತರ ಒಂದು ಎಕರೆಗೆ ಕನಿಷ್ಠ ನಾಲ್ಕು ಟ್ರ್ಯಾಕ್ಟರ್ ಕೊಟ್ಟಿಗೆ ಗೊಬ್ಬರ ಹಾಕುತ್ತಾರೆ. ಅದರ ಜೊತೆಗೆ ನೂರು ಕೆಜಿ ಡಿಎಪಿ ಮಿಶ್ರಣಮಾಡಿ ಭೂಮಿಗೆ ಸೇರಿಸಲಾಗುತ್ತದೆ. ಅರಿಶಿನದ ಜೊತೆ ಸಾಂಬಾರ ಈರುಳ್ಳಿಯನ್ನು ಅಂತರ ಬೆಳೆಯಾಗಿ ಹಾಕುವುದರಿಂದ ಇದು ಅನಿವಾರ್ಯ ಎನ್ನುತ್ತಾರೆ. ನಂತರ ಸಾಲುಮಾಡಿ ಹನಿ ನೀರಾವರಿಯ ಪೈಪ್ಗಳನ್ನು ಎಳೆದು ಈರುಳ್ಳಿ ಹಾಕಿ ನೀರುಬಿಟ್ಟು ಅದೇ ಸಾಲಿಗೆ ಅರಿಶಿನ ಹಾಕುತ್ತಾರೆ. ಇದಲ್ಲದೆ ಹನಿನೀರಾವರಿಯಲ್ಲಿ ಜೈವಿಕ ಗೊಬ್ಬರಗಳನ್ನು ಕೊಡುತ್ತಾರೆ.
ಲಘುಪೋಷಕಾಂಶಗಳೊಂದಿಗೆ ಸಾವಯವ ಗೊಬ್ಬರ ಮತ್ತು ಕಡಿಮೆ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರವನ್ನು ಬಳಸಿಕೊಂಡು ಕೃಷಿಮಾಡುವುದರಿಂದ ಪ್ರತಿ ಎಕರೆಗೆ ಸರಾಸರಿ 45 ಕ್ವಿಂಟಾಲ್ ಇಳುವರಿ  ಅರಿಶಿನ ಬಂದಿದೆ.
ಅರಿಶಿನ ಅಥವಾ ಬಾಳೆ ಬೆಳೆಯನ್ನು ತೆಗೆದುಕೊಂಡ ನಂತರ ಮೂರು ತಿಂಗಳು ಭೂಮಿಯನ್ನು ಉಳುಮೆ ಮಾಡಲಾಗುತ್ತದೆ.ಭೂಮಿ ಹದಮಾಡಿಕೊಂಡ ನಂತರ ಕೃಷಿ ಆರಂಭ.ಅರಿಶಿನ ಮತ್ತು ಬಾಳೆ ಹೀಗೆ ಜಮೀನಿನಲ್ಲಿ ಬದಲಿ ಬೆಳೆಗಳಾಗಿ ಬೆಳೆಯುತ್ತಾರೆ. ಇಳುವರಿಯಲ್ಲಿ ಯಾವ ವ್ಯತ್ಯಾಸವೂ ಆಗಿಲ್ಲ ಎನ್ನುವುದೆ ವಿಶೇಷ. ಇದಕ್ಕೆ ಇವರು ಭೂಮಿಯನ್ನು ಸಿದ್ಧಪಡಿಸಿಕೊಳ್ಳುವ ಬಗ್ಗೆ ಕೂಡ ಕಾರಣವಾಗಿದೆ.
ಏಳು ಎಕರೆ ಪ್ರದೇಶದಲ್ಲಿ ಬಾಳೆ ಇದೆ. ನಾಲ್ಕು ಎಕರೆಯಲ್ಲಿ 4000 ಜಿ-9 ಪಚ್ಚಬಾಳೆ ಹಾಕಿ ಆರು ತಿಂಗಳಾಗಿದೆ.ಮೂರು ಎಕರೆಯಲ್ಲಿ ಮೂರು ಸಾವಿರ ಏಲಕ್ಕಿ ಬಾಳೆ ಬೆಳೆಯಲಾಗಿದೆ. ಎಲ್ಲವೂ ಅಂಗಾಂಶ ಕೃಷಿಯ ಬಾಳೆಗಳು.
ಬಾಳೆಗೆ ಹೆಚ್ಚು ಕೊಟ್ಟಿಗೆ ಗೊಬ್ಬರ ಬಳಸುವುದಿಲ್ಲ.ನಾಟಿ ಮಾಡಿದ ಎರಡು ತಿಂಗಳು ಹನಿ ನೀರಾವರಿಯಲ್ಲೇ ರಸಾವರಿ ಗೊಬ್ಬರ ಕೊಡುತ್ತಾರೆ.ನಂತರ ಮಾಮೂಲಿಯಂತೆ ಗೊಬ್ಬರ ಕೊಡಲಾಗುತ್ತದೆ.ಸಾಯಿಲ್ ಕಂಡೀಷನರ್ ಬಳಸುವುದರಿಂದ ಗಿಡಗಳು ಹಸಿರಾಗಿ ಬಲಿಷ್ಠವಾಗಿ ಬೆಳೆದು ಒಳ್ಳೆಯ ಇಳುವರಿ ಬಂದಿದೆ. ಪಚ್ಚಬಾಳೆ ಬೆಳೆಯಲು ಪ್ರತಿಗೊನೆಗೆ ಆರಂಭದಿಂದ ಕೊನೆಯವರೆಗೆ ನೂರು ರೂಪಾಯಿ ವೆಚ್ಚವಾಗುತ್ತದೆ.ಏಲಕ್ಕಿ ಬಾಳೆ ಬೆಳೆಯಲು ಪ್ರತಿಗೊನೆ ನೂರಮೂವತ್ತು ರೂಪಾಯಿ ವೆಚ್ಚಮಾಡುತ್ತಾರೆ. ಹೊಸದಾಗಿ ಒಂದು ಎಕರೆಯಲ್ಲಿ ಆರು ಸಾವಿರ ಕಲ್ಲಂಗಡಿ ಪೈರುಗಳನ್ನು ನಾಟಿಮಾಡಿ ತಿಂಗಳಾಗಿದ್ದು ಅವು ಆರೋಗ್ಯಕರವಾಗಿವೆ.ಮತ್ತೆ ಮೂರು ಎಕರೆಯಲ್ಲಿ ಡಿಸೆಂಬರ್ನಲ್ಲಿ ಕಲ್ಲಂಗಡಿ ಹಾಕಲು ಸಿದ್ಧತೆ ನಡೆದಿದೆ.
ಕೃಷಿಯಲ್ಲಿ ಆದಾಯ ಎನ್ನುವುದು ಮಾರುಕಟ್ಟೆಯ ದರದ ಮೇಲೆ ನಿಂತಿರುತ್ತದೆ. ಈ ಬಾರಿ ಗುಂಡ್ಲುಪೇಟೆ ತಾಲೂಕಿನಲ್ಲಿ ಈರುಳ್ಳಿ,ಟೊಮಟೊ ಬೆಳೆದ ರೈತರು ಲಕ್ಷಾಂತರ ರೂಪಾಯಿ ಆದಾಯಗಳಿಸಿದರು. ರೈತರ ಮೂಖದಲ್ಲಿ ನಗುಮೂಡಿತು. ಕೆಲವೊಮ್ಮೆ ಬೆಲೆ ಕುಸಿದು ಬೀದಿಗೆ ಬಿದ್ದಿದ್ದೂ ಇದೆ. ಒಂದು ಕ್ವಿಂಟಾಲ್ ಅರಿಶಿನ ಬಳೆಯಲು ರೈತನಿಗೆ ಐದು ಸಾವಿರ ರೂಪಾಯಿ ವೆಚ್ಚವಾಗುತ್ತದೆ.ಕನಿಷ್ಠ ಪಕ್ಷ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಅರಿಶಿನ ಒಂಬತ್ತು ಸಾವಿರ ರೂಪಾಯಿಗೆ ಮಾರಾಟವಾದರೆ ರೈತರಿಗೆ ಲಾಭ.ಹಾಗೆಯೇ ಒಂದು ಕೆಜಿ ಟೊಮಟೊ ಬೆಳೆಯಲು ಕನಿಷ್ಠ ಐದು ರೂಪಾಯಿ ವೆಚ್ಚ ವಾಗುತ್ತದೆ.ಮಾರುಕಟ್ಟೆಯಲ್ಲಿ ಪ್ರತಿಕೆಜಿ ಟೊಮಟೊಗೆ 10 ರೂಪಾಯಿಯಾದರೂ ಸಿಕ್ಕರೆ ರೈತನ ದುಡಿಮೆಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎನ್ನುತ್ತಾರೆ ರಮೇಶ್. ಹೆಚ್ಚಿನ ಮಾಹಿತಿಗೆ ಸಂಪಕರ್ಿಸಿ 94483 43479