vaddagere.bloogspot.com

ಬುಧವಾರ, ಡಿಸೆಂಬರ್ 20, 2017


ನೆಲಮೂಲದ ಕಡೆಗೆ , ಪಣ್ಯದಹುಂಡಿ ಪುಟ್ಟೀರಮ್ಮಪುರಾಣ !

# ಮಿಶ್ರಬೆಳೆ-ಬೆರಕೆ ಸೊಪ್ಪಿನ ವಿಸ್ಮಯ ಲೋಕ # ದೇಸಿ ಕೃಷಿಜ್ಞಾನ ಪರಂಪರೆ 

ಪುಟ್ಟೀರಮ್ಮನವರ ಅನುಭವದ ಮಾತುಗಳು ನಮ್ಮ ಹಳೆ ಕೃಷಿ ಪದ್ಧತಿ ಎಷ್ಟು ಸಂಪದ್ಭರಿತವಾಗಿದೆ,ರೈತರನ್ನು ಹೇಗೆ ಸ್ವಾವಲಂಭಿಗಳಾಗಿಸುವ ವಿಧಾವವಾಗಿದೆಯೆಂದು ಪ್ರತ್ಯಕ್ಷಿಸಿ ತೋರಿಸುತ್ತದೆ.ಈ ನೆಲದ ಅಮೂಲ್ಯ ಕೃಷಿ ಜ್ಞಾನವನ್ನು ಶತಮಾನಗಳಿಂದ ಸಂರಕ್ಷಿಸಿ ಜಾನಪದ ಹಾಡುಗಳಲ್ಲಿ,ಗಾದೆ ಮಾತುಗಳಲ್ಲಿ,ಸಾಂಸ್ಕೃತಿಕ ಪದ್ಧತಿಗಳಲ್ಲಿ ಅಳವಡಿಸಿ,ಯಾವ ಅಕ್ಷರ ಜ್ಞಾನದ ಹಂಗು ಇಲ್ಲದೆ ಮಹಾನ್ ಜ್ಞಾನ ಪರಂಪರೆಯನ್ನು ಮುಂದಿನ ಜನಾಂಗಗಳಿಗೆ ದಾಟಿಸುತ್ತಾ ಬವಂದಿರುವುದು ಅದ್ಭುತ.- ರಮೇಶ್ ಎನ್.ಗಂಗಾವತಿ.
===============================================
ಆಹಾರ ಮತ್ತು ಆರೋಗ್ಯ ಇವೆರಡು ಒಂದೇ ನಾಣ್ಯದ ಎರಡು ಮುಖಗಳು.ತಿನ್ನುವ ಆಹಾರ ಮನುಷ್ಯನ ಆರೋಗ್ಯವನ್ನು ನಿರ್ಧರಿಸುತ್ತದೆ ಎನ್ನುವುದು ಈಗ ಎಲ್ಲರಿಗೂ ಗೊತ್ತಾಗಿದೆ. ಆಹಾರದಲ್ಲಿನ ಪೌಷ್ಠಿಕತೆ, ಆಪೌಷ್ಠಿಕತೆಯ ಬಗ್ಗೆ ಎಲ್ಲರಲ್ಲೂ ತಿಳಿವಳಿಕೆ ಮೂಡಿದೆ.ಯಾವ ಯಾವ ಹಣ್ಣಿನಲ್ಲಿ ಯಾವ ವಿಟಮಿನ್ಗಳಿವೆ,ಯಾವ ಸೊಪ್ಪಿನಲ್ಲಿ ಎಷ್ಟು ಶಕ್ತಿ ಇದೆ ಎಂಬ ಅರಿವು ಮೂಡಿದೆ.ಜನರು ವಿಷಮುಕ್ತ ಆಹಾರವನ್ನೆ ಬಯಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಜನ ಇದ್ಯಾವುದನ್ನು ಚಿಂತಿಸದೆ ಆರೋಗ್ಯವಾಗಿದ್ದರು.ಕಾರಣ ಅವರ ಆಹಾರ ಪದ್ಧತಿ.ಕಾಳುಕಡ್ಡಿ ಜೊತೆಗೆ ಬೆರಕೆ ಸೊಪ್ಪಿನ ಬಳಕೆ ಗ್ರಾಮೀಣ ಜನರನ್ನು ಆಸ್ಪತ್ರೆಯಿಂದ ದೂರವಿರಿಸಿತ್ತು. ಆದರೆ ಕಳೆದ ಎರಡು ದಶಕದಿಂದ ನಮ್ಮ ಹೊಲದ ಉತ್ಪಾದಕತೆ ಕುಗ್ಗಿ ಹೋಗಿದೆ.ನಮ್ಮಲ್ಲಿದ್ದ ವೈವಿಧ್ಯಮಯ ಬೆಳೆ ಪದ್ಧತಿ ನಾಶವಾಗಿ ಏಕ ಬೆಳೆ ಪದ್ಧತಿ ತಲೆ ಎತ್ತಿದ ಪರಿಣಾಮ ಶ್ರೀಮಂತರ ಕಾಯಿಲೆಕಸಾಲೆಗಳು ನಮ್ಮ ಹಳ್ಳಿಗೂ ಬಂದಿವೆ.
ಶುಗರ್ರು,ಬಿಪಿ, ಹೃದಯ ಸಮಸ್ಯೆ ಇವೆಲ್ಲಾ ಈಗ ಗ್ರಾಮೀಣ ಪ್ರದೇಶಗಳಲ್ಲೂ ಸಾಮಾನ್ಯ ಕಾಯಿಲೆಯಂತಾಗಿಬಿಟ್ಟಿವೆ.ಇಂತಹ ಆತಂಕದ ಸಮಯದಲ್ಲಿ ರೈತಾಪಿ ವರ್ಗ ಮತ್ತೆ ಮಿಶ್ರಬೆಳೆ ಪದ್ಧತಿಗೆ ಮರಳಬೇಕಿದೆ. ಹಿಂತಿರುಗಿ ನೋಡಿದರೆ ಸಾಲುಬೆಳೆ,ಪಟ್ಟೆಬೆಳೆ,ಅಂಚಿನ ಬೆಳೆಗಳಲ್ಲದೆ ಬೆಳೆ ಆವರ್ತನೆ ಮುಂತಾದ ವೈವಿಧ್ಯಮಯ ಬೆಳೆ ಪದ್ಧತಿಗಳು ನಮ್ಮ ವ್ಯವಸಾಯದ ಭಾಗವೇ ಆಗಿದ್ದವು.ಒಂದು ನಾಡಿನ ನಿದರ್ಿಷ್ಟ ಸಂಸ್ಕೃತಿ,ಪರಂಪರೆಯೊಂದಿಗೆ ನಿದರ್ಿಷ್ಟ ಕೃಷಿ ಪರಿಸರ ವ್ಯವಸ್ಥೆಗಳಲ್ಲಿ ತಮ್ಮದೇ ವಿವೇಕ ತಂತ್ರಜ್ಞಾನ ಹೊಂದಿ ಅಭಿವೃದ್ಧಿಹೊಂದಿದ ಬೆಳೆ ಪದ್ಧತಿಗಳು ಇವು.
ರಾಜ್ಯದ ಉದ್ದಗಲಕ್ಕೆ ತಿರುಗಾಡಿದರೆ ಇಂತಹ ಜ್ಞಾನದ ಗಣಿಗಳು ಸದ್ದುಗದ್ದಲವಿಲ್ಲದೆ ಕಾಯಕ ನಿರತವಾಗಿರುವುದನ್ನು ಕಾಣಬಹುದು.ಮಣ್ಣಿನ ಫಲವತ್ತತೆಯನ್ನು ಸುಸ್ಥಿರವಾಗಿ ಕಾಪಾಡಿಕೊಂಡು ಹೋಗುವ ಕಾಯಕದಲ್ಲಿ ಇವರು ನಿರತರಾಗಿದ್ದಾರೆ. ಇವರೆಲ್ಲರ ಪ್ರತಿನಿಧಿಯಂತಿರುವ ಚಾಮರಾಜನಗರ ಜಿಲ್ಲೆಯ ಚಾ.ನಗರದ ಸನಿಹದಲ್ಲೆ ಇರುವ ಪಣ್ಯದಹುಂಡಿ ಪುಟ್ಟೀರಮ್ಮ ಅವರ ಬಗ್ಗೆ ನಿಮಗೆ ಹೇಳಬೇಕು.
60 ವರ್ಷ ದಾಟಿರುವ ಪುಟ್ಟೀರಮ್ಮ ಈಗಲೂ ಹೊಲದಲ್ಲಿ ದುಡಿಯುತ್ತಾರೆ.ಹುರುಳಿ ಕೀಳಲು ಹೋಗುತ್ತಾರೆ. ಪುಟ್ಟೀರಮ್ಮ ಅವರ ಅನುಭವದ ಮಾತುಗಳನ್ನು ಕೇಳುತ್ತಿದ್ದರೆ ನಮ್ಮ ಕೃಷಿ ಪದ್ಧತಿ ಎಷ್ಟೊಂದು ಶ್ರೀಮಂತವಾಗಿತ್ತು, ಕೃಷಿ ಎಷ್ಟು ಸ್ವಾಲಂಭಿಯಾಗಿತ್ತು, ಈ ನೆಲದ ಅಮೂಲ್ಯ ಕೃಷಿಜ್ಞಾನ ಎಷ್ಟೊಂದು ಸಂಪತ್ತ್ಭರಿತವಾಗಿತ್ತು ಎನ್ನುವುದು ಗೊತ್ತಾಗುತ್ತದೆ.ಅಕ್ಷರದ ಹಂಗು ಇಲ್ಲದೆ ಗಾದೆ,ಜಾನಪದ ಹಾಡುಗಳ ಮೂಲಕ ದೇಸಿಕೃಷಿ ಜ್ಞಾನವನ್ನು ದಾಟಿಸುವ ಪುಟ್ಟೀರಮ್ಮನಂತಹವರೇ ನಮ್ಮ ನೆಲಮೂಲದ ಪರಂಪರೆಯ ನಿಜವಾದ ವಾರಸುದಾರರು. ಬೆರೆಕೆ ಸೊಪ್ಪಿನ ಬಗ್ಗೆ ಪುಟ್ಟೀರಮ್ಮನವರಿಗೆ ಇರುವ ತಿಳಿವಳಿಕೆ ಜ್ಞಾನ ನಮ್ಮನ್ನು ನೇರವಾಗಿ ಬೇರಿಗೆ ಕರೆದುಕೊಂಡು ಹೋಗುತ್ತದೆ.
ಈ ಬಾರಿ ಉತ್ತಮ ಮಳೆಯಾದ ಪರಿಣಾಮ ಚಾಮರಾಜನಗರ ಜಿಲ್ಲೆಯ ಒಣಭೂಮಿ ಪ್ರದೇಶದಲ್ಲಿ ಐದಾರುವರ್ಷದ ನಂತರ ರೈತರು ರಾಗಿ,ಹುರುಳಿ,ಜೋಳ,ಮುಸುಕಿನ ಜೋಳ,ಸೂರ್ಯಕಾಂತಿ, ಎಳ್ಳು, ಅವರೆ ಯಂತಹ ಮಳೆಯಾಶ್ರಿತ ಬೆಳೆಗಳನ್ನು ಬೆಳೆದುಕೊಂಡರು.ಬಹುತೇಕ ಈ ಎಲ್ಲಾ ಬೆಳೆಗಳನ್ನು ಏಕಬೆಳೆಯಾಗಿಯೇ ಬೆಳೆದುಕೊಂಡದ್ದನ್ನು ನೀವು ಗಮನಿಸಿರಬಹುದು. ಇವೆಲ್ಲಾ ಹಿಂದೆ ಮಿಶ್ರ ಬೆಳೆಯಾಗಿ ರೈತರಿಗೆ ಆದಾಯ ಮತ್ತು ಮನೆಗೆ ಬೇಕಾದ ಕಾಳು,ಸೊಪ್ಪು,ಜಾನುವಾರುಗಳಿಗೆ ಬೇಕಾದ ಮೇವು ಎಲ್ಲವನ್ನು ತಂದುಕೊಡಬಲ್ಲ ಆಹಾರ ಬೆಳೆಗಳಾಗಿದ್ದವು. ದೇಸಿಕೃಷಿ ಜ್ಞಾನ ಪರಂಪರೆಯನ್ನು ಮರೆತು ಏಕಬೆಳೆ ಪದ್ಧತಿಗೆ ಅಂಟಿಕೊಂಡ ಪರಿಣಾಮ ಹಳ್ಳಿಗಳಲ್ಲೂ ಪೌಷ್ಠಿಕ ಆಹಾರದ ಕೊರತೆ ಉಂಟಾಯಿತು.ಇಂತಹ ಆತಂಕಕಾರಿ ಸನ್ನಿವೇಶದಲ್ಲಿ ಪುಟ್ಟೀರಮ್ಮನಂತಹವರ ನೆಲಮೂಲದ ಕೃಷಿಜ್ಞಾನವನ್ನು ಹೊಸ ತಲೆಮಾರಿನ ರೈತರು ಈಗ ಹೊಸದಾಗಿ ಕಲಿಯಬೇಕಾದ ಅನಿವಾರ್ಯತೆ ಇದೆ.
"ಹಿಂದೆಯೆಲ್ಲ ನಾವು ಸಾಮಕ್ಕಿ(ಸಾಮೆ ಅಕ್ಕಿ) ಅನ್ನಾನೇ ತಿಂತಾ ಇದ್ದಿದ್ದು.ಈಗಿನ ಥರ ನೆಲ್ಲಕ್ಕಿ ಅನ್ನ ಅಲ್ಲ.ಕರಿ ಹಿಂಡಗನ ಸಾಮ ಅಂತ ತುಂಬಾ ಗಟ್ಟಿ.ಅದನ್ನ ಬೇಯಿಸ್ಬುಟ್ಟು ಒಣ ಹಾಕುತಿದ್ದೋ.ಅದನ್ನೇ ಊಟ ಮಾಡವು.ಒಂದೊತ್ತು ಮಾತ್ರ ಈ ನೆಲ್ಲಕ್ಕಿ ಅನ್ನ ಮಾಡುತಿದ್ದೋ.ಹಂಗೆ ಮಾಡಿ ಒಂದು ಪಲ್ಲ ಅಕ್ಕಿ ಒಂದು ವರ್ಸ ಬರಸ್ತಿದ್ದೋ.ರಾಗಿ ಹೊಲದಲ್ಲಿ8,10 ಸಾಲಿಗೆ ಎರಡು ಸಾಲು ನವಣೆ ಬಿಟ್ಟು ಅದರ ಮಧ್ಯ ಎರಡು ಸಾಲು ಸಾಮೆ ಬಿಡಾಂವು. ನಡುವೆ ಅವರೆ ಸಾಲು. ಕಾಳು ಬಂದರೆ ಮಗಳಿಗೆ,ಸೊಸೆಗೆ,ಅಪ್ಪನ ಮನೆಗೆ ಅಂತ ಕೊಡ್ತಾ ಇದ್ದೊ.ದಿನ ಮನೆಗೆ ಚಟ್ನಿಗೆ ಹುಚ್ಚೆಳ್ಳಿಲ್ದೆ ಆದ್ದಾ? ತಲೆಗೆ ತಂಪಿಗೆ ಹರಳೆಣ್ಣೆ ಇಲ್ದೆ ಆದ್ದಾ? ಇದೆಲ್ಲ ಕಾರಣಕ್ಕೆ ಈ ಪದ್ಧತಿ ಮಾಡ್ತೀವಿ" ಎಂದು ಹೇಳುವಾಗ ಪುಟ್ಟೀರಮ್ಮನವರ ಸಂಸಾರದ ಆರೋಗ್ಯದ ಗುಟ್ಟು ತೆರೆದುಕೊಳ್ಳುತ್ತಾ ಹೋಗುತ್ತದೆ.
ಮುಖ್ಯವಾಗಿ ಆಹಾರಕ್ಕೆ/ಊಟಕ್ಕೆ.ಅಷ್ಟೇ ಮುಖ್ಯವಾಗಿ ಮಣ್ಣಿಗೆ ಶಕ್ತಿಕೊಡಕ್ಕೆ,ದನಕರುಗಳ ಮೇವಿಗೆ.ಹೆಚ್ಚಿಗೆ ಬೆಳೆದರೆ ಆಪತ್ಕಾಲದಲ್ಲಿ ಸ್ವಲ್ಪ ಮಾರಿಕೊಂಡರೆ ಅಷ್ಟು ಇಷ್ಟು ಆದಾಯ ಸಿಕ್ಕುತ್ತೆ ಎನ್ನುತ್ತಾರೆ.
ಜೋಳದ ಜೊತೆ ತೊಗರಿ, ತಡಗುಣಿ.ಜೋಳ ತೆಗೆದುಕೊಂಡ ನಂತರ ಅಲ್ಲಿಗೆ ಹುರುಳಿ.ಜೋಳ ತೆಗೆದುಕೊಂಡ ನಂತರ ಹುರುಳಿ ಚೆನ್ನಾಗಿ ಬೆಳೆಯಲಿ ಅಂತಾನೇ ತೊಗರಿ ಸಾಲು ಹಾಕೋದು. ಹಿಂಗಾರಲ್ಲಿ ತಡಗುಣಿ ತೀರಿಹೋದ ಮೇಲೆ ತೊಗರಿ ಸಾಲಿನ ಮಧ್ಯ ಅಂತರ ಇರುತ್ತಲ್ಲ ಅದರಲ್ಲಿ ಹುರುಳಿ ಬಿತ್ತಲು ಅನುಕೂಲವಾಗುತ್ತೆ.ಜೋಳ ಕಟಾವಾಗಿ ತೊಗರಿ ಇರುವಂಗೆ ಹುರುಳಿ ಬಿತ್ತದು.ತೊಗರಿ ಬ್ಯಾಸಿಗೆ ವರೆಗೂ ಬರುತ್ತೆ.ಜನವರಿಯಲ್ಲಿ ಹುರುಳಿ ಕೀಳದು. ಹುರುಳಿ ಜೊತೆ ಬೇಕಾದರೆ ಎರಡು ಕಡ ಬಿಳಿ ಅಲಸಂದೆ ಬಿತ್ತಬಹುದು. ಹುರುಳಿ ಸೆಪ್ಟಂಬರ್-ಅಕ್ಟೋಬರ್ನಲ್ಲಿ ಇಬ್ಬನಿಗೆ ಬೆಳೆಯುತ್ತೆ.ಬಡಗಲ ಕಾಡಿನವರಿಗೆ ಹುರುಳಿ.ತೆಂಕಲ ಕಾಡಿನವರಿಗೆ ಕಡಲೆ ಎನ್ನುವಲ್ಲಿ ಅವರ ಅಪಾರವಾದ ಕೃಷಿ ಅನುಭವ ಕೆಲಸಮಾಡಿದೆ.
ಇವರ ಬಳಿ ಈಗ ಹಲವಾರು ದೇಸಿತಳಿಯ ಬೀಜಗಳಿವೆ.ಸಣ್ಣ ತಡಗುಣಿ,ಯಮ ತಡಗುಣಿ,ಕೆಂಪು ಮುದುಗ,ಬಿಳಿ ಮುದುಗನ ಜೋಳ (ಊಟದ ಜೋಳ).ತೊಗರಿಯಲ್ಲಿ ಕೆಂಪು ತೊಗರಿ,ಬಿಳಿ ತೊಗರಿ,ಮಚ್ಚೆ ತೊಗರಿ ಅಂತ ಮೂರು ಥರದ ಬೀಜಗಳಿವೆ. ಪೊದೆ ಅವರೆ,ಬಿಳಿ ಅವರೆ,ಕೆಂಪು ಅವರೆ ಅಂತ ಮೂರು ತಳಿಗಳಿವೆ.ಮಚ್ಚೆ ಹರಳು,ಸಣ್ಣ ಹರಳು,ದೊಡ್ಡ ಹರಳು ಇವೆ.ಹಿತ್ತಲಲ್ಲಿ ಒಂದೆರಡು ದೊಡ್ಡ ಹರಳು ಮರಗಳಿದ್ದರೆ ನಾಕು ಗೊನೆ ಬಂದರೆ ಒಂದು ಸೇರು ಹರಳಾಯ್ತದೆ.ಅದು ತಲೆಗೆ/ನೆತ್ತಿಗೆ ಬಹಳ ಶ್ರೇಷ್ಠ.ದೇವರ ದೀಪಕ್ಕೂ ಈ ಎಣ್ಣೆಯನ್ನೆ ಬಳಸ್ತೀವಿ.ನಾನು ಜೇನು ತುಪ್ಪದಂಗೆ ಎಣ್ಣೆ ತೆಗೀತೀನಿ ಎನ್ನುತ್ತಾರೆ.
"ಬಿಳಿ ಎಳ್ಳು ನಮ್ಮಲ್ಲಿ ಇಲ್ಲ.ಅದು ಬೆಜ್ಜಲು ಜಮೀನಿಗೆ ಆಗಲ್ಲ.ಅದಕ್ಕೆ ಕಪ್ಪು ಮಣ್ಣೇ ಬೇಕು.ಅದಕ್ಕೆ ನಮ್ಮಲ್ಲಿ ಕಪ್ಪು ಎಳ್ಳು ಬೆಳೆತ್ತೀವಿ.ಬರೀ ಎಳ್ಳನ್ನೇ ಬಿತ್ತಿದರೆ ಚೆನ್ನಾಗಿ ಬರಲ್ಲ.ಕಡ್ಡಿ ಸಣ್ಣವಾಗಿ ಇಳುವರಿ ಬರಲ್ಲ.ಅದಕ್ಕೆ ಮಿಶ್ರ ಬೆಳೆಯಾಗಿ ಬಿತ್ತಬೇಕು.ಮುತ್ತಪ್ಪನ ಕಾಲದ ಹುಚ್ಚೆಳ್ಳು ನಮ್ಮಲ್ಲಿದೆ. ಕಂಬು ಜಾಂಡೀಸ್ ಕಾಯಿಲೆಗೆ ಔಷಧಿ ಅದು ನಮ್ಮಲ್ಲಿದೆ" ಎಂದು ಹೇಳುತ್ತಾ ಹೋಗುವ ಪುಟ್ಟೀರಮ್ಮನ ಒಣ ಬೇಸಾಯ ಬೆಳೆಗಳ ಅನುಭವವನ್ನು ಕೇಳುತ್ತಿದ್ದರೆ ಖುಷ್ಕಿ ಬೇಸಾಯದ ಜ್ಞಾನ ಭಂಡಾರದ ಬಳಿ ಕುಳಿತಂತಾಗುತ್ತದೆ.
ಸಮುದಾಯಗಳು ನೂರಾರು ವರ್ಷಗಳ ಅನುಭವದಲ್ಲಿ ಕಂಡುಕೊಂಡ ಮಿಶ್ರಬೆಳೆ ಪದ್ಧತಿಯನ್ನು ಕೃಷಿ ವಿವಿಗಳು ಅಭಿವೃದ್ಧಿಪಡಿಸಿದ ಆಧುನಿಕ ಮಿಶ್ರಬೆಳೆ ಪದ್ಧತಿಯನ್ನೂ ಪ್ರತ್ಯೇಕವಾಗಿಯೇ ನೋಡಬೇಕಾಗುತ್ತದೆ ಎನ್ನುವ ಮಾತು ಸತ್ಯ.
ಬೆರಕೆ ಸೊಪ್ಪಿನ ವಿಸ್ಮಯ ಲೋಕ : ಪುಟ್ಟೀರಮ್ಮನವರಿಗೆ ಇರುವ ಬೆರಕೆ ಸೊಪ್ಪಿನ ಜ್ಞಾನ ನಮ್ಮನ್ನು ನೆಲಮೂಲಕ್ಕೆ ಕರೆದುಕೊಂಡು ಹೋಗಿಬಿಡುತ್ತದೆ.ಬೆರಕೆ ಸೊಪ್ಪಿಗೆ ವಾಣಿಜ್ಯ ಮೌಲ್ಯ ಇಲ್ಲದಿದ್ದರು ಸಾಂಸ್ಕೃತಿಕ ಮೌಲ್ಯ ಅಪಾರವಾಗಿದೆ.ಬೇರೆ ಬೇರೆ ಜಾತಿಯ ಸೊಪ್ಪುಗಳನ್ನು ಒಟ್ಟಿಗೆ ಸೇರಿಸಿದರೆ ಬೆರಕೆ ಸೊಪ್ಪು ಎನ್ನುತ್ತಾರೆ.ಈ ರೀತಿಯ ನಲವತ್ತಕ್ಕೂ ಹೆಚ್ಚು ಜಾತಿಯ ಸೊಪ್ಪುಗಳನ್ನು ಪುಟ್ಟೀರಮ್ಮ ಗುರುತಿಸುತ್ತಾರೆ ಎನ್ನುವುದೆ ವಿಸ್ಮಯ ಸಂಗತಿ.ಈ ರೀತಿ ಬೇರೆ ಬೇರೆ ಸೊಪ್ಪುಗಳನ್ನು ಸೇರಿಸಿ ಅಡುಗೆ ಮಾಡುವುದರಿಂದ ಎಲ್ಲಾ ಬೆರೆಸಿದಾಗ ಯಾವುದೋ ಒಂದು ಸೊಪ್ಪಲ್ಲಿ ರೋಗ ಒಡೆಯೋ ಗುಣ ಇರುತ್ತದೆ.
"ನಾವು ವಾರಕ್ಕೆ ಮೂರು ದಿನವಾದ್ರೂ ಬೆರಕೆ ಸೊಪ್ಪು ಮಾಡ್ತೀವಿ.ಗಭರ್ಿಣಿಯರಿಗೆ ಮಾತ್ರೆಯ ಬದಲು ವಾರಕ್ಕೆ ಎರಡುಮೂರು ಸಲ ಬೆರಕೆ ಸೊಪ್ಪು ಉಪಯೋಗಿಸಿದರೆ ತಾಯಿ ಮಗು ಆರೋಗ್ಯದಿಂದಿರುತ್ತಾರೆ" ಎನ್ನುತ್ತಾರೆ ಪುಟ್ಟೀರಮ್ಮ. ಅವರ ಸೊಸೆ ಪುಷ್ಪ ಅವರಿಗೂ ಸೊಪ್ಪಿನ ಜ್ಞಾನ ಬಳುವಳಿಯಾಗಿ ಬಂದಿದೆ.
ಬೇಸಿಗೆಕಾಲದಲ್ಲಿ ನೀರಾವರಿ ಮಾಡಿದವರ ಜಮೀನಿನಲ್ಲಿ ಬದಗಿರ ಸೊಪ್ಪು,ಕಿಲಕೀರೆ ಸೊಪ್ಪ ಇದೆಲ್ಲ ಸಿಕುತ್ತೆ.ಜನವರಿಯಿಂದ ಮಾಚರ್್ವರೆಗೆ ಯಾವ ಸೊಪ್ಪು ಸಿಕ್ಕಲ್ಲ. ಆಷಾಢ (ಜೂನ್,ಜುಲೈ)ದಲ್ಲಿ ಆಹಾರದ ಕೊರತೆ. ಎಲ್ಲ ಬೆಳೆ ಬಿತ್ತಿ ಯಾವುದು ಬೆಳೆದಿರೋದಿಲ್ಲ.ಈ ಟೈಮಲ್ಲಿ ಯಾವ ದವಸಧಾನ್ಯಗಳು ಇರೋದಿಲ್ಲ.ಇಂಥ ಟೈಮಲ್ಲಿ ಭೂಮಿ ತಾಯಿ ನಮಗೆ ಬೆರಕೆ ಸೊಪ್ಪು ಕೊಟ್ಟು ಸಹಾಯ ಮಾಡ್ತಾಳೆ.ಹಿತ್ತಲಲ್ಲಿ ಕುಂಬಳ,ಪಡುವಲ,ಸೋರೆ,ಹೀರೆ ಗಿಡ ಸಾಮಾನ್ಯವಾಗಿ ಇದ್ದೇ ಇರುತ್ತವೆ ಎನ್ನುತ್ತಾರೆ ಪುಟ್ಟೀರಮ್ಮ.
ಆಲೆ,ಅಗಸೆ,ಒನಗನೆ,ಗಣಿಕೆ,ಒಂದಲಗ,ಕುಂಬಳ,ಜವಣ,ಮುಳ್ಳುಗೀರೆ ಮುಂತಾದ ಈ ಇಲ್ಲ ಸೊಪ್ಪಿನ ಔಷದೀಯ ಗುಣಗಳ ಬಗ್ಗೆ ಪಟಪಟನೇ ಮಾತನಾಡುವ ಪುಟ್ಟೀರಮ್ಮ ಪಾಥರ್ೇನಿಯಂ ಗಿಡ ಬಂದಮೇಲೆ ಸೊಪ್ಪುಗಳು ಕಣ್ಮರೆಯಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸುತ್ತಾರೆ.
ಮಿಶ್ರ ಬೆಳೆಯ ಉಳಿವು ಮಹಿಳೆಯರ ಮೇಲೆಯೆ ನಿಂತಿದೆ.ವಾಣಿಜ್ಯ ಬೆಳೆಗಳ ಬೆನ್ನುಹತ್ತಿದ ಪರುಷರು ಏಕ ಬೆಳೆ ಪದ್ಧತಿಗೆ ಒಲಿದ ಪರಿಣಾಮ ಕೃಷಿಯಲ್ಲಿ ಸಂಕಟಗಳು ಹೆಚ್ಚಾದವು.ಹೀಗಾಗಿ ಪುಟ್ಟೀರಮ್ಮನವರಂತಹವರು ನಮ್ಮಲ್ಲಿ ಅಪರೂಪವಾಗುತ್ತಿದ್ದಾರೆ. ಇಂತಹವರ ಅನುಭವದ ದಾಖಲಾತಿ ನಡೆಯಬೇಕು. ಈ ನಿಟ್ಟಿನಲ್ಲಿ ಬೆಂಗಳೂರಿನ ಇನ್ಸಿಟ್ಯೂಟ್ ಫಾರ್ ಕಲ್ಚರಲ್ ರಿಸಚರ್್ ಅಂಡ್ ಆ್ಯಕ್ಷನ್ (ಇಕ್ರಾ) "ಪುಟ್ಟೀರಮ್ಮನ ಪುರಾಣ" ಮಿಶ್ರಬೆಳೆ-ಬೆರಕೆ ಸೊಪ್ಪಿನ ವಿಸ್ಮಯ ಲೋಕ ಎಂಬ ಪುಸ್ತಕವನ್ನು ಪ್ರಕಟಿಸುವ ಮೂಲಕ ಹೊಸ ತಲೆಮಾರಿಗೆ ದೇಸಿಕೃಷಿ ಜ್ಞಾನ ಪರಂಪರೆಯನ್ನು ತಿಳಿದುಕೊಳ್ಳಲು ನೆರವಾಗಿದೆ.
ಕ್ರೀಯಾಶೀಲ ಅಜ್ಜಿ,ಸೃಜನಶೀಲ ಅಜ್ಜ ಮನೆಯಲ್ಲಿದ್ದರೆ ಎರಡು ತಲೆಮಾರಿನ ದೇಸಿಜ್ಞಾನ ಪರಂಪರೆ ಜೊತೆಯಲ್ಲಿದ್ದಂತೆ.ಮಳೆ,ಬೆಳೆಗಳ ಮಹತ್ವ ಗೊತ್ತಾಗುತ್ತದೆ.
ನಮ್ಮ ಅಜ್ಜನೊಬ್ಬನಿದ್ದ, ಅವನಿಗೆ ತೋಟದಲ್ಲಿರುವ ಪ್ರತಿಯೊಂದು ತೆಂಗಿನ ಮರದಲ್ಲಿರುವ ಕಾಯಿಗಳ ಸಂಖ್ಯೆಯೂ ಗೊತ್ತಿರುತ್ತಿತ್ತು.ನಾವು ಕದ್ದು ಎಳನೀರು ಕುಡಿದರೆ,ಮಾರನೆ ದಿನ ಮನೆಗೆ ಬಂದು ಆ ಮರದಲ್ಲಿ ಯಾರೊ ಎಳನೀರು ಕಿತ್ತಿದ್ದಾರೆ ಎಂದು ಕೇಳುತ್ತಿದ್ದ.ತೋಟದಲ್ಲಿರುವ ಪ್ರತಿಯೊಂದು ಗಿಡಮರಗಳ ಬಗ್ಗೆ ವಿವರವಾದ ಜ್ಞಾನ ಅವರಿಗಿತ್ತು. ಹೊಸ ತಲೆಮಾರಿಗೆ ತಮ್ಮ ಜಮೀನು ಯಾವ ದಿಕ್ಕಿಗೆ ಇದೆ ಎನ್ನುವುದೆ ಮರೆತುಹೋಗುತ್ತಿರುವ ಕಾಲಘಟ್ಟದಲ್ಲಿ ಪುಟ್ಟೀರಮ್ಮನ ಪುರಾಣ ಚಿಂತಿಸುವಂತೆ ಮಾಡುತ್ತದೆ. ಅಷ್ಟೇ ಅಲ್ಲ ನಮ್ಮ ಊಟದಲ್ಲಿ ವೈವಿಧ್ಯತೆಯನ್ನು ತಂದುಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವ ಗುಟ್ಟುಗಳನ್ನು ಹೇಳಿಕೊಡುತ್ತದೆ. ಪಣ್ಯದಹುಂಡಿ ಪುಟ್ಟೀರಮ್ಮನಂತಹ ದೇಸಿಜ್ಞಾನ ದೀವಿಗೆಯನ್ನು ನಾಡಿಗೆ ಪರಿಚಯಿಸಿದ ಇಕ್ರಾ ಸಂಸ್ಥೆ ಅಭಿನಂದನೀಯ ಕೆಲಸಮಾಡಿದೆ.
ಮಿಶ್ರಬೆಳೆಯ ಕಲೆ,ವಿಜ್ಞಾನ,ತಂತ್ರಜ್ಞಾನ,ಅರ್ಥಶಾಸ್ತ್ರ,ಶ್ರಮಶಾಸ್ತ್ರ,ಸಂಸ್ಕೃತಿ ಎಲ್ಲವನ್ನೂ ಪುಟ್ಟೀರಮ್ಮ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸಹಜ ಸಾಗುವಳಿ ಕೃಷಿ ಪತ್ರಿಕೆಯ ಸಂಪಾದಕಿ ವಿ.ಗಾಯತ್ರಿ, ಎನ್.ಶಿವಲಿಂಗೇಗೌಡ ಪುಟ್ಟೀರಮ್ಮನವರ ಅನುಭವದ ನುಡಿಗಳನ್ನು ಅಕ್ಷರ ರೂಪದಲ್ಲಿ ದಾಖಲಿಸಿ ನಾಡಿನ ರೈತರಿಗೆ ಒಳಿತುಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ ಅವರ ಮಗ ಶಿವಲಿಂಗೇಗೌಡ 9663142186 ಅವರನ್ನು ಸಂಪಕರ್ಿಸಿ.
====================





ಸುಸ್ಥಿರ ಬದುಕಿಗೆಬೇಕು ಸಮಗ್ರ ಕೃಷಿ ಪದ್ಧತಿಯ ಅನುಷ್ಠಾನ
.ಬೆಂಗಳೂರಿನ ಹೆಬ್ಬಾಳದಲ್ಲಿರುವ ಜಿಕೆವಿಕೆ (ಗಾಂಧಿ ಕೃಷಿ ವಿಜ್ಞಾನ ಕೇಂದ್ರ) ಯಲ್ಲಿನವೆಂಬರ್ 16 ರಿಂದ 19 ರವರೆಗೆ ನಾಲ್ಕು ದಿನಗಳಕಾಲ ನಡೆದ ಕೃಷಿ ಮೇಳ ನಡೆಯಿತು. ಕೃಷಿ ಮೇಳದಲ್ಲಿ ನಮ್ಮ ಗಮನ ಸೆಳೆದಿದ್ದು ಸಮಗ್ರ ಕೃಷಿ ಪದ್ಧತಿ ಪ್ರಾತ್ಯಕ್ಷಿಕೆಯ ತಾಕುಗಳು. ಸಣ್ಣ ಹಿಡುವಳಿದಾರರು ಒಂದೆರಡು ಎಕರೆ ಜಮೀನು ಇರುವ ಕೃಷಿಕರು ಹೇಗೆ ಸಮಗ್ರ ಕೃಷಿಯನ್ನು ಅನುಷ್ಠಾನ ಮಾಡಿಕೊಳ್ಳಬೇಕು ಎನ್ನುವುದನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟಿದ್ದು ನೋಡಿ ಕಲಿಯುವ ರೈತನಿಗೆ ಸಾಕಷ್ಟು ಮಾಹಿತಿಗಳನ್ನು ನಿಂತಲೆ ಒದಗಿಸುವಂತಿತ್ತು. ಜಮೀನಿನ ಒಂದು ಮೂಲೆಯಲ್ಲಿ ಕೃಷಿ ಹೊಂಡ, ಅದರ ಮೇಲೆಯೇ ಕೋಳಿ ಸಾಕಾಣಿಕೆ ಕೇಜ್ ನಿಮರ್ಾಣ, ಪ್ರತಿ ಹತ್ತು ಇಪ್ಪತ್ತು ಗುಂಟೆಯಲ್ಲಿ ದನಕರುಗಳಿಗೆ ಮೇವು ಒಂದು ಕಡೆ, ಆಹಾರ ಧಾನ್ಯಗಳು,ಕಾಳುಗಳು,ಬತ್ತ,ತರಕಾರಿ,ಅರಣ್ಯಧಾರಿತ ಕೃಷಿ,ಪಶುಸಂಗೋಪನೆ, ಮಳೆಯಾಶ್ರಿತ ಬೆಳೆಗಳು, ಹನಿ ನೀರಾವರಿಯ ಬಗ್ಗೆ ಪ್ರಾತ್ಯಕ್ಷಿಕೆ ಮಾಡುವ ಮೂಲಕ ಕೃಷಿಯನ್ನು ಹೇಗೆ ಲಾಭದಾಯಕ ಮಾಡಿಕೊಳ್ಳ ಬುದು ಎನ್ನುವ ಬಗ್ಗೆ ವಿವರಣೆಯನ್ನು ನೀಡಲಾಗಿತ್ತು. ಜಿಕೆವಿಕೆ ಕೇಂದ್ರಗಳಿಗೆ ರೈತರು ಭೇಟಿ ನೀಡುವ ಮೂಲಕ ತಾಂತ್ರಿಕ ನೆರವು ಮತ್ತು ಮಾರ್ಗದರ್ಶನ ಪಡೆಯುವ ಮೂಲಕ ಸುಸ್ಥಿರ ಬದುಕು ಕಟ್ಟಿಕೊಳ್ಳಬೇಕು.
=========================================

# ಜಿಕೆವಿಕೆ ಕೃಷಿಮೇಳದಲ್ಲಿ ಪ್ರಾತ್ಯಕ್ಷಿಕೆ # ತಾಂತ್ರಿಕತೆ,ಸಂಶೋಧನೆಗಳ ಮಾಹಿತಿ

ರೈತನ ಆದಾಯ ದ್ವಿಗುಣಗೊಳ್ಳಬೇಕು. ರೈತ ಸ್ವಾವಲಂಭಿಯಾಗುವ ಮೂಲಕ ಸುಸ್ಥಿರ ಬದುಕು ಕಟ್ಟಿಕೊಳ್ಳಬೇಕು.ಅದಕ್ಕಾಗಿ ಸಮಗ್ರ ಕೃಷಿ ಪದ್ಧತಿಯನ್ನು ತನ್ನ ಜಮೀನಿನಲ್ಲಿ ಅನುಷ್ಠಾನ ಮಾಡಿಕೊಳ್ಳಬೇಕು. ಹಾಗಂತ ಎಲ್ಲರೂ ಹೇಳುತ್ತಾ ಬಂದಿದ್ದಾರೆ.ಆದರೆ ಅದು ಎಷ್ಟರ ಮಟ್ಟಿಗೆ ಗ್ರಾಮಗಳಲ್ಲಿ ಅನುಷ್ಠಾನವಾಗಿದೆ ಎಂದು ನೋಡಿದರೆ ನಿರಾಸೆಯಾಗುವುದು ನಿಶ್ಚಿತ. ಇಂತಹ ನಿರಾಶವಾದದ ನಡುವೆಯೂ ಅಲ್ಲಲ್ಲಿ ಬೆರಳೆಣಿಕೆಯಷ್ಟು ರೈತರು ಸಮಗ್ರ ಕೃಷಿ ಪದ್ಧತಿಯನ್ನು ಅನುಷ್ಠಾನ ಮಾಡಿಕೊಳ್ಳುವ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಂಡಿರುವ ಉದಾಹರಣೆಗಳು ಇವೆ. ಅಂತಹ ಒಂದೆರಡು ಮಾದರಿಗಳನ್ನು ನಿಮಗೆ ಹೇಳಬೇಕು.
ಚಾಮರಾಜನಗರ ತಾಲೂಕಿನ ಹರದನಹಳ್ಳಿಯ ಎನ್.ಮಂಜುನಾಥ್ ಮತ್ತು ಮೈಸೂರು ತಾಲೂಕು ಲಕ್ಷ್ಮೀಪುರದ ಕೆಂಚೇಗೌಡ ಅವರು ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದ ಆಡಳಿತ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಸಂಸ್ಥೆಯ ಸಲಹೆ ಮತ್ತು ಮಾರ್ಗದರ್ಶನದ ಮೂಲಕ ತಮ್ಮ ಆದಾಯವನ್ನು ದ್ವಿಗುಣ ಗೊಳಿಸಿಕೊಳ್ಳುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯವು ತನ್ನ ಆಡಳಿತ ವ್ಯಾಪ್ತಿಗೆ ಬರುವ 13 ಜಿಲ್ಲೆಗಳಲ್ಲಿ ಸಮಗ್ರ ಕೃಷಿ ಪದ್ಧತಿ ಯೋಜನೆಯಡಿ (2011 ರಿಂದ 2014) 25 ಸಾವಿರ ರೈತರ ತಾಕುಗಳಲ್ಲಿ ಪ್ರಾತ್ಯಕ್ಷಿಕೆ ಗಳನ್ನು ಮಾಡಿ, ಕೃಷಿ ಉತ್ಪಾದನೆ ಮತ್ತು ವರಮಾನವನ್ನು ಹೆಚ್ಚಿಸಲು ನೆರವಾಗಿದೆ.
ಯೋಜನೆಯ ಮೂಲಕ ಅವಶ್ಯಕ ಪರಿಕರಗಳಿಗಾಗಿ ಆಥರ್ಿಕ ನೆರವು ಮತ್ತು ಸೂಕ್ತ ತಾಂತ್ರಿಕ ಮಾರ್ಗದರ್ಶನ ನೀಡಿ ರೈತರನ್ನು ಸ್ವಾವಲಂಭಿಯನ್ನಾಗಿ ಮಾಡಲು ಕೃಷಿ ವಿಜ್ಞಾನ ಕೇಂದ್ರಗಳು ಮುಂದಾಗಿರುವುದು ಸರಿ. ಆದರೆ ಇಂತಹ ಕೃಷಿ ವಿಜ್ಞಾನ ಕೇಂದ್ರಗಳ ನೆರವು, ಸಲಹೆ ಮತ್ತು ಮಾರ್ಗದರ್ಶನವನ್ನು ಎಷ್ಟು ರೈತರು ಪಡೆದುಕೊಳ್ಳುತ್ತಿದ್ದಾರೆ ಎಂದು ನೋಡಲು ಹೋದರೆ ನಿರಾಸೆಯಾಗುತ್ತದೆ. ಜಿಕೆವಿಕೆ ಕೇಂದ್ರಗಳು ರೈತರನ್ನು ತಲುಪಲು ವಿಫಲವಾಗಿವೆಯೊ ಅಥವಾ ರೈತರಿಗೆ ಜಿಕೆವಿಕೆಯಿಂದ ದೊರೆಯುವ ಸೌಲಭ್ಯ, ಮಾಹಿತಿಗಳ ಬಗ್ಗೆ ಅರಿವಿಲ್ಲವೊ ಎನ್ನುವುದು ಗೊತ್ತಾಗುತ್ತಿಲ್ಲ. ರೈತರು ಮತ್ತು ಜಿಕೆವಿಕೆ ನಡುವೆ ಉತ್ತಮ ಸಂಪರ್ಕವನ್ನು ಬೆಸೆದರೆ ಕೃಷಿಕ್ಷೇತ್ರಕ್ಕೆ, ರೈತರಿಗೆ ಲಾಭವಾಗುವುದಂತೂ ನಿಶ್ಚಿತ.ಇಂತಹ ಕೆಲಸಗಳನ್ನು ಹಳ್ಳಿಯಲ್ಲಿ ಕೃಷಿ ಮಾಡುತ್ತಿರುವ ವಿದ್ಯಾವಂತ ಯುವಕರು ಮಾಡಿದರೆ ಕೃಷಿ ವಲಯದ ಪುನಶ್ಚೇತನಕ್ಕೆ ನೆರವಾದಂತಾಗುತ್ತದೆ.
ಮೈಸೂರು ಜಿಲ್ಲೆಯವರು ಸುತ್ತೂರಿನಲ್ಲಿರುವ ಜಿಕೆವಿಕೆ ಕೇಂದ್ರಕ್ಕೂ ,ಚಾಮರಾಜನಗರ ಜಿಲ್ಲೆಯವರು ಹರದನಹಳ್ಳಿಯಲ್ಲಿರುವ ಜಿಕೆವಿಕೆ ಕೇಂದ್ರಕ್ಕೂ ಹೆಚ್ಚು ಹೆಚ್ಚು ಭೇಟಿ ನೀಡುವ ಮೂಲಕ ಪರಸ್ಪರರೂ ಹೆಚ್ಚು ಕ್ರೀಯಾಶೀಲರಾಗಿ ಇರುವಂತೆ ಮಾಡಿದರೆ ಸಮಗ್ರ ಕೃಷಿ ಪ್ರಾತ್ಯಕ್ಷಿಕೆಯ ತಾಕುಗಳು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.ಬೆಂಗಳೂರಿನ ಹೆಬ್ಬಾಳದಲ್ಲಿರುವ ಜಿಕೆವಿಕೆ (ಗಾಂಧಿ ಕೃಷಿ ವಿಜ್ಞಾನ ಕೇಂದ್ರ) ಯಲ್ಲಿನವೆಂಬರ್ 16 ರಿಂದ 19 ರವರೆಗೆ ನಾಲ್ಕು ದಿನಗಳಕಾಲ ನಡೆದ ಕೃಷಿ ಮೇಳಕ್ಕೆ ಹೋಗಿ ಬಂದ ಮೇಲೆ ನನ್ನಲ್ಲಿ ಮೂಡಿದ ಸುಸ್ಥಿರ ಕೃಷಿ ಚಿಂತನೆಗಳನ್ನು ಈ ಬಾರಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಕಳೆದ ನಾಲ್ಕಾರು ವರ್ಷಗಳಿಂದ ನಿರೀಕ್ಷಿತ ಮಳೆ ಇಲ್ಲದೆ ಕಂಗೆಟ್ಟಿದ್ದ ರೈತ ಈ ಬಾರಿಯ ಮುಂಗಾರಿನಲ್ಲಿ ಸುರಿದ ಮಳೆಯಿಂದಾಗಿ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾನೆ. ಭರ್ಜರಿ ಮಳೆಗೆ ಹರ್ಷಗೊಂಡಿರುವ ರೈತನ ಮೊಗದಲ್ಲಿ ಮತ್ತಷ್ಟು ಮಂದಹಾಸ ಮೂಡಿಸುನ ನಿಟ್ಟಿನಲ್ಲಿ ಈ ಬಾರಿ ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ಕೃಷಿ ಮೇಳ ರೈತರಲ್ಲಿ ಭರವಸೆ ಮೂಡಿಸುವಲ್ಲಿ ಸಫಲವಾಗಿದೆ.
ನೂತನ ತಂತ್ರಜ್ಞಾನ, ಸುಧಾರಿತ ತಳಿಗಳ ಕೃಷಿ ಪ್ರಾತ್ಯಕ್ಷಿಕೆ, ನೀರಿನ ಬಗ್ಗೆ ಅರಿವು, ಜಲಾನಯನ ನಿರ್ವಹಣೆ, ಹೊಸ ತಳಿಗಳ ಬಿಡುಗಡೆ ಜೊತೆಗೆ ಉತ್ತಮ ಸಾಧನೆಮಾಡಿದ ರೈತರಿಗೆ ರಾಜ್ಯ ಮಟ್ಟದ ಪ್ರಶಸ್ತಿಯೂ ಸೇರಿದಂತೆ 144 ಸಾಧಕ ರೈತರನ್ನು ಸನ್ಮಾನ. ಲ್ಲಾ ಪ್ರಶಸ್ತಿ ಹಾಗೂ 69 ತಾಲೂಕುಗಳ ಯುವ ರೈತರು ಮತ್ತು ರೈತ ಮಹಿಳೆಯರಿಗೆ ಪ್ರಶಸ್ತಿ ನೀಡುವ ಮೂಲಕ ರೈತರಲ್ಲಿ ಆತ್ಮ ವಿಶ್ವಾಸ ಮೂಡಿಸಿದೆ.
ನೂತನ ತಾಂತ್ರಿಕತೆಗಳನ್ನು ಹುಡುಕಿ ಬಂದವರು, ಹನಿ ನೀರಾವರಿ ಬಗ್ಗೆ ಮಾಹಿತಿ ಪಡೆಯಲು ಬಂದವರು, ಸಣ್ಣ ಸಣ್ಣ ಕೃಷಿ ಯಂತ್ರೋಪಕರಣಗಳ ಬಗ್ಗೆ ತಿಳಿದುಕೊಳ್ಳಲು ಬಂದವರು ಜೊತೆಗೆ ಕೃಷಿ ಸಾಹಿತ್ಯ ಪುಸ್ತಕಗಳನ್ನು ಹರಸಿ ಬಂದವರು ಹೀಗೆ ಎಲ್ಲ ಅಭಿರುಚಿಯ ಜನರು ಮೇಳದ ಲಾಭ ಪಡೆದು ಹೋಗಿದ್ದಾರೆ. ಹತ್ತು ಲಕ್ಷಕ್ಕೂ ಹೆಚ್ಚು ರೈತರು ಸಮ್ಮೇಳನದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಕೃಷಿ ಮೇಳದಲ್ಲಿ ನಮ್ಮ ಗಮನ ಸೆಳೆದಿದ್ದು, ರೈತರಿಗೆ ಅತ್ಯುಪಯುಕ್ತವಾದ ವಿಭಾಗ ಸಮಗ್ರ ಕೃಷಿ ಪದ್ಧತಿ ಪ್ರಾತ್ಯಕ್ಷಿಕೆಯ ತಾಕುಗಳು. ಸಣ್ಣ ಹಿಡುವಳಿದಾರರು ಒಂದೆರಡು ಎಕರೆ ಜಮೀನು ಇರುವ ಕೃಷಿಕರು ಹೇಗೆ ಸಮಗ್ರ ಕೃಷಿಯನ್ನು ಅನುಷ್ಠಾನ ಮಾಡಿಕೊಳ್ಳಬೇಕು ಎನ್ನುವುದನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟಿದ್ದು ನೋಡಿ ಕಲಿಯುವ ರೈತನಿಗೆ ಸಾಕಷ್ಟು ಮಾಹಿತಿಗಳನ್ನು ನಿಂತಲೆ ಒದಗಿಸುವಂತಿತ್ತು.
ಜಮೀನಿನ ಒಂದು ಮೂಲೆಯಲ್ಲಿ ಕೃಷಿ ಹೊಂಡ, ಅದರ ಮೇಲೆಯೇ ಕೋಳಿ ಸಾಕಾಣಿಕೆ ಕೇಜ್ ನಿಮರ್ಾಣ, ಪ್ರತಿ ಹತ್ತು ಇಪ್ಪತ್ತು ಗುಂಟೆಯಲ್ಲಿ ದನಕರುಗಳಿಗೆ ಮೇವು ಒಂದು ಕಡೆ, ಆಹಾರ ಧಾನ್ಯಗಳು,ಕಾಳುಗಳು,ಬತ್ತ,ತರಕಾರಿ,ಅರಣ್ಯಧಾರಿತ ಕೃಷಿ,ಪಶುಸಂಗೋಪನೆ, ಮಳೆಯಾಶ್ರಿತ ಬೆಳೆಗಳು, ಹನಿ ನೀರಾವರಿಯ ಬಗ್ಗೆ ಪ್ರಾತ್ಯಕ್ಷಿಕೆ ಮಾಡುವ ಮೂಲಕ ಕೃಷಿಯನ್ನು ಹೇಗೆ ಲಾಭದಾಯಕ ಮಾಡಿಕೊಳ್ಳ ಬುದು ಎನ್ನುವ ಬಗ್ಗೆ ವಿವರಣೆಯನ್ನು ನೀಡಲಾಗಿತ್ತು.
ಇಂತಹ ಸಮಗ್ರ ಕೃಷಿ ಪದ್ಧತಿಯ ಲಾಭ ಪಡೆದ ಚಾಮರಾಜನಗರ ತಾಲೂಕಿನ ಹರದನಹಳ್ಳಿಯ ಮಂಜುನಾಥ್ ಅವರ ಬಗ್ಗೆ ಅಲ್ಲೇ ಕುಳಿತು ನಾವು ಸಾಕ್ಷ್ಯಚಿತ್ರವೊಂದನ್ನು ನೋಡಿದೆವು. ಈ ಸಮಗ್ರ ಕೃಷಿಯ ಯೋಜನೆಯ ಪ್ರಾತ್ಯಕ್ಷಿಕೆದಾರರಾಗುವ ಮೊದಲು ತಮಗಿರುವ 3 ಎಕರೆ 12 ಗುಂಟೆ ಜಮೀನಿನಲ್ಲಿ ಅವರು ವಾಷರ್ಿಕ 3.57 ಲಕ್ಷ ರೂಪಾಯಿ ನಿವ್ವಳ ವರಮಾನ ಪಡೆಯುತ್ತಿದ್ದರು.ಪ್ರಾತ್ಯಕ್ಷಿಕೆ ಅಳವಡಿಸಿಕೊಂಡ ಮೂರು ವರ್ಷದ ಅವಧಿಯಲ್ಲಿ ಅವರ ವಾಷರ್ಿಕ ವರಮಾನ 5.22 ಲಕ್ಷ ರೂ. ಹೆಚ್ಚಳವಾಗಿದೆ. ಅಂದರೆ 46.2 ರಷ್ಟು ಆದಾಯ ಹೆಚ್ಚಳವಾಗಿದೆ.
ಇದೆಲ್ಲಾ ಹೇಗೆ ಸಾಧ್ಯವಾಯಿತು ಎಂದು ನೀವು ಕೇಳಬಹುದು. ಮೂರು ವರ್ಷಗಳಿಗೂ ಮೊದಲು ಮಂಜುನಾಥ್ ಸಾಂಪ್ರದಾಯಿಕ ರೀತಿಯಲ್ಲಿ ರಾಗಿ,ಬಾಳೆ,ಅರಿಶಿನ ಮತ್ತು ವೀಳ್ಯದೆಲೆ ಬೆಳೆಯುತ್ತಿದ್ದರು. ಎರಡು ಮಿಶ್ರತಳಿಯ ಹಸುಗಳನ್ನು ಸಾಕಿಕೊಂಡಿದ್ದರು. ಸಮಗ್ರ ಕೃಷಿ ಪ್ರಾತ್ಯಕ್ಷಿಕೆ ಆಯ್ಕೆಯಾದ ಮೇಲೆ ಬೆಳೆ ಪದ್ಧತಿಯಲ್ಲಿ ಸುಧಾರಣೆ ಮಾಡಲಾಯಿತು. ಅಧಿಕ ವರಮಾನ ತರುವ ಟೊಮಟೊ,ತಿಂಗಳ ಹುರುಳಿ,ಬದನೆ,ಕೊತ್ತುಂಬರಿ,ಮೆಣಸಿನಕಾಯಿ,ಚೆಂಡು ಹೂವಿನ ಗಿಡಗಳನ್ನು ಬೆಳೆಯಲು ಪ್ರೋತ್ಸಾಹ ನೀಡಲಾಯಿತು. ಏಕ ಬೆಳೆ ಬೆಳೆಯುವ ಬದಲು ಮಿಶ್ರ ಬೆಳೆ ಬೆಳೆಯಲು ಮಾರ್ಗದರ್ಶನ ಮಾಡಲಾಯಿತು. ಒಟ್ಟಾರೆ ಆಹಾರ ಬೆಳೆ,ತೋಟಗಾರಿಕಾ ಬೆಳೆ,ಮೇವಿನ ಬೆಳೆ,ಜಾನುವಾರು ಘಟಕ,ಎರೆಹುಳು ಗೊಬ್ಬರ ಘಟಕಗಳನ್ನು ಪ್ರತ್ಯೇಕ ವಿಭಾಗಗಳಾಗಿ ಸಮಗ್ರವಾಗಿ ಮಾಡಿಸಲಾಯಿತು.
ರಸಗೊಬ್ಬರಕ್ಕಾಗಿ ವಾಷರ್ಿಕ 30 ಸಾವಿರ ವೆಚ್ಚಮಾಡುತ್ತಿದ್ದ ಮಂಜುನಾಥ್ ಎರೆಹುಳು ಗೊಬ್ಬರ ಘಟಕ ನಿಮರ್ಾಣದಿಂದ ವಾಷರ್ಿಕ 18 ಟನ್ ಎರೆಗೊಬ್ಬರ ತೆಗೆದು ಹಣ ಉಳಿಸಿದರು. 2013 ರಲ್ಲಿ ಜಿಲ್ಲಾ ಮಟ್ಟದ ರೈತ ಪ್ರಶಸ್ತಿ ಪಡೆದ ಮಂಜುನಾಥ್ ತಜ್ಞರ ಮಾರ್ಗದರ್ಶನದಲ್ಲಿ ಸಾಧನೆಮಾಡಿ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಮಾದರಿಯಾಗಿದ್ದಾರೆ.
ಅದೇ ರೀತಿ ಲಕ್ಷ್ಮೀಪುರದ ಕೆಂಚೇಗೌಡರು ನಾಲ್ಕು ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಬತ್ತ,ತೆಂಗು,ಅಜೋಲಾ ಮತ್ತು ಬಹು ವಾಷರ್ಿಕ ಮೇವಿನ ಬೆಳೆ,ಕುರಿ,ಕೋಳಿ ಸಾಕಾಣಿಕೆ ಜೊತೆಗೆ ರೇಷ್ಮೆ ಕೃಷಿಯನ್ನು ಕೈಗೊಳ್ಳುವ ಮೂಲಕ ವಾಷರ್ಿಕ 2.81 ಲಕ್ಷ ರೂ. ಆದಾಯಗಳಿಸುತ್ತಿದ್ದವರು ಪ್ರಾತ್ಯಕ್ಷಿಕೆದಾರರಾದ ನಂತರ ವಾಷರ್ಿಕ 3.54 ಲಕ್ಷ ರೂ. ಆದಾಯಗಳಿಸಿದ್ದಾರೆ.
ನಿಜಕ್ಕೂ ಇಂತಹ ಪ್ರತ್ಯಾಕ್ಷಿಕೆಗಳು ಮಾತ್ರ ರೈತರಿಗೆ ಸರಿಯಾದ ತಿಳಿವಳಿಕೆ ಮತ್ತು ಅರಿವು ಮೂಡಿಸಬಲ್ಲವು. ಜಿಕೆವಿಕೆ ಕೇಂದ್ರಗಳು ರೈತರಿಗೆ ಇನ್ನೂ ಹೆಚ್ಚಿನ ಅರಿವು ಮೂಡಿಸುವ ಮೂಲಕ ಕೃಷಿ ವಲಸೆಯನ್ನು ತಡೆಯುವ ನಿಟ್ಟಿನಲ್ಲಿ ಮತ್ತಷ್ಟು ಕ್ರೀಯಾಶೀಲವಾಗಿ ಕೆಲಸಮಾಡಬೇಕು.
ಈ ಬಾರಿ ಕೃಷಿ ಮೇಳದಲ್ಲಿ ಎಂಟು ಹೊಸತಳಿಯ ಬೀಜಗಳನ್ನು ಬಿಡುಗಡೆಮಾಡಲಾಗಿದೆ. ಬರಗಾಲದ ಸಂದಭ್ದಲ್ಲು ಕಡಿಮೆ ನೀರು ಬಳಸಿಕೊಂಡು ಅಧಿಕ ಇಳುವರಿಕೊಡುವ ಹಾಗೂ ರೋಗನಿರೋಧಕ ಶಕ್ತಿ ಹೊಂದಿರುವ ಕಬ್ಬು,ಅಲಸಂದೆ,ಜಂಬೂ ನೇರಳೆ,ಮುಸುಕಿನ ಜೋಳ,ತೊಗರಿ ಸೇರಿದಂತೆ ಹೊಸತಳಿಗಳು ಬಿಡುಗಡೆಯಾಗಿವೆ. ಬರುವ ಮುಂಗಾರಿನ ಹಂಗಾಮಿನಲ್ಲಿ ಈ ಭಾಗದ ರೈತರಿಗೆ ಜಿಉಕೆವಿಕೆ ಕೇಂದ್ರಗಳು ತಲುಪುವಂತೆಮಾಡದಿರೆ ಇಂತಹ ಮೇಳಗಳಿಗೆ ಅರ್ಥಬರುತ್ತದೆ.
ದಕ್ಷಿಣ ಭಾರತದಲ್ಲೆ ಅಗ್ರ ಕೃಷಿ ವಿವಿ ಎಂಬ ಹೆಗ್ಗಳಿಕೆ ಪಡೆದಿರುವ ಇದು ದೇಶದ ಪ್ರತಿಷ್ಠಿತ ಕೃಷಿ ವಿವಿಗಳಲ್ಲಿ ಮೂರನೇ ಸ್ಥಾನ ಪಡೆದಿದೆ. ಅಲ್ಲೇ ಸನಿಹದಲ್ಲಿ ಬಾಗಲ ಕೋಟ ತೋಟಗಾರಿಕ ಕೃಷಿ ವಿಶ್ವ ವಿದ್ಯಾನಿಲಯವೂ ಇದೆ. ಅಲ್ಲಿ ಹುಣಸೆ,ಮಾವು,ಸೀಬೆ,ಸೀತಾಫಲ,ಗೇರು,ಹಲಸು,ಜಂಬೂ ನೇರಳೆ ಸೇರಿದಂತೆ ಹತ್ತಾರು ಮಾದರಿ ತಾಕುಗಳನ್ನು ನಿಮರ್ಾಣ ಮಾಡಲಾಗಿದೆ. ಇದರ ಹಿಂದೆ ಡಾ.ಗುರುಪ್ರಸಾದ್ ಅವರ ಶ್ರಮ ಕೆಲಸಮಾಡಿದೆ. ಭಾರತೀಯ ತೋಟಗಾರಿಕ ಸಂಶೋಧನಾ ಸಂಸ್ಥೆ(ಐಐಹೆಚ್ಆರ್ )  ಮತ್ತು ಕೃಷಿ ವಿಶ್ವ ವಿದ್ಯಾನಿಲಯಗಳಿಗೆ ನಮ್ಮ ರೈತರು ಭೇಟಿ ನೀಡುವ ಮೂಲಕ ಪ್ರಯೋಜನ ಪಡೆದುಕೊಳ್ಳಬಹುದು.
ಪ್ರತಿ ವರ್ಷ ನಡೆಯುವ ಕೃಷಿ ಮೇಳಗಳಿಗೆ ಜಾತ್ರೆಗಳ ರೀತಿಯಲ್ಲಿ ಹೋಗಿಬಂದರೆ ಪ್ರಯೋಜನವಿಲ್ಲ. ಬೆಂಗಳೂರಿನಲ್ಲಿರುವ ಈ ಕೃಷಿ ಸಂಸ್ಥೆಗಳ ಜೊತೆ ನಿರಂತರ ಸಂಪರ್ಕದಲ್ಲಿಟ್ಟು ಕೊಂಡು ನೂತನ ತಾಂತ್ರಿಕತೆ ಮತ್ತು ಸಮಗ್ರ ಕೃಷಿಯ ಜೊತೆಗೆ ಹೊಸದಾಗಿ ಸಂಶೋಧನೆಯಾದ ಮಾವು,ಹಲಸು,ಸೀತಾಫಲ,ಸೀಬೆ ಈ ಎಲ್ಲಾ ಗಿಡಗಳನ್ನು ರಿಯಾಯಿತಿ ದರದಲ್ಲಿ ತಂದು ಜಮೀನುಗಳಲ್ಲಿ ಹಾಕಿ ಬೆಳೆಸಿಕೊಂಡಾಗ ಮಾತ್ರ ರೈತ ಸುಸ್ಥಿರತೆಯ ಕಡೆಗೆ ಹೆಜ್ಜೆ ಹಾಕಬಲ್ಲ. ಕೃಷಿ ಮಾಡುವ ಮುನ್ನಾ ಪೂರ್ವತಯಾರಿ ಮಾಡಿಕೊಂಡು ವಾಷರ್ಿಕ ಬೆಳೆಯೋಜನೆಯೊಂದನ್ನು ಸಿದ್ಧ ಪಡಿಸಿಕೊಂಡು ಕೃಷಿ,ತೋಟಗಾರಿಕೆ ಮತ್ತು ಜಿಕೆವಿಕೆಯ  ವಿಸ್ತರಣಾ ಮುಂದಾಳುಗಳು ಮತ್ತು ತಜ್ಞರೊಡನೆ ಚಚರ್ಿಸಿ ಕೃಷಿ ಮಾಡಿದರೆ ಕೃಷಿ ಸುಸ್ಥಿರವೂ,ಲಾಭದಾಯಕವೂ ಆಗುತ್ತದೆ ಎನ್ನುವುದು ಈ ಬಾರಿಯ ಕೃಷಿ ಮೇಳ ನೋಡಿ ಬಂದಾಗ ಅನಿಸಿತು. ಮತ್ಯಾಕೆ ತಡ ನಿಮ್ಮ ಸಮೀಪದ ಸುತ್ತೂರು, ಹರದನಹಳ್ಳಿಯಲ್ಲಿರುವ ಜಿಕೆವಿಕೆ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಸದುಪಯೋಗಪಡಿಸಿಕೊಳ್ಳಿ.ಗ್ರಾಮಗಳ ಅಭಿವೃದ್ಧಿಗೆ ಒಂದಾಗಿ ಮುಂದಾಗಿ.