ಹಳ್ಳಿಗಳಿಗೆ ಜೀವ ತುಂಬುವ ಪ್ರಯೋಗಶೀಲ ರೈತ
# "ಫಲಶ್ರೇಷ್ಠ" ಪ್ರಶಸ್ತಿ ಪುರಸ್ಕೃತ ಚೌಡಳ್ಳಿಯ ಸದಾಶಿವಮೂರ್ತಿ # ತರಕಾರಿ ಬೆಳೆಯುವುದರಲ್ಲಿ ಎಂದಿಗೂ ಮುಂದು
===============================================
"ಮರಳಿ ಹಳ್ಳಿಗೆ" ಎನ್ನುವುದು ರೈತಸಂಘದ ಗೆಳಯರ ಹೊಸ ಘೋಷಣೆ. ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ಯುವಕರು ಆಧುನಿಕ ಸೌಲಭ್ಯ ಮತ್ತು ಸವಲತ್ತುಗಳಿಗೆ ಆಸೆಪಟ್ಟು ಹಳ್ಳಿಬಿಟ್ಟು ನಗರದತ್ತ ವಲಸೆ ಹೋಗುತ್ತಿದ್ದಾರೆ ಎನ್ನುವುದು ಹಳೆಯ ಮಾತು. ಮೊದಮೊದಲು ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಎಂದು ಹಳ್ಳಿಗಳನ್ನು ಬಿಟ್ಟು ನಗರಕ್ಕೆ ವಲಸೆ ಹೋಗುವ ಮಂದಿ ನಂತರ ತಮ್ಮ ಮಕ್ಕಳ ವಿಧ್ಯಾಭ್ಯಾಸ ಮುಗಿದು ಅವರು ನೌಕರಿ ಸೇರಿದ ಮೇಲೆ ಅವರೊಂದಿಗೆ ನಗರವಾಸಿಗಳಾಗಿಬಿಡುವುದು ಸರ್ವೇ ಸಾಮಾನ್ಯವಾದ ಸಂಗತಿ.
ಪ್ರಗತಿಪರ ಕೃಷಿಕರನ್ನು ಹುಡುಕಿಕೊಂಡು ಅಲೆಯುವ ನನಗೆ ಇತ್ತೀಚಿಗೆ ಒಂದೇ ಗ್ರಾಮದಲ್ಲಿ ಹತ್ತಾರು ದೊಡ್ಡ ದೊಡ್ಡ ಮನೆಗಳಿಗೆ ಬೀಗ ಬಿದ್ದಿರುವುದನ್ನು ಕಂಡು ಆಶ್ಚರ್ಯವಾಯಿತು. ನೂರಾರು ಎಕರೆ ಜಮೀನುಗಳನ್ನು,ತೋಟಗಳನ್ನು ಪಾಳುಬಿಟ್ಟು,ಸುಸಜ್ಜಿತ ಮನೆಗಳಿಗೂ ಬೀಗಜಡಿದು ಹಳ್ಳಿಗಳನ್ನು ತೊರೆದು ನಗರವಾಸಿಗಳಾದವರು ತಮ್ಮ ಮೂಲಬೇರುಗಳನ್ನೇ ಕಳೆದುಕೊಂಡು ತಮ್ಮ ಹಳೆಯ ನೆನಪುಗಳಿಗೆ ವಿದಾಯ ಹೇಳುತ್ತಿರುವಂತೆ ಭಾಸವಾಯಿತು. ಎರಡು ತಲೆಮಾರುಗಳು ಆಗುವಷ್ಟರಲ್ಲಿ ಹಳ್ಳಿಯ ನೆನಪುಗಳಿಂದಲೇ ದೂರವಾಗಿಬಿಡುವ ಮುಂದಿನ ಪೀಳಿಗೆಯ ದುರಂತ ಬದುಕು ಕಣ್ಣಮುಂದೆ ಮೆರವಣಿಗೆ ಹೊರಟಿತು.
ಒಂದು ಅಂದಾಜಿನ ಪ್ರಕಾರ ದೇಶದಲ್ಲಿ ಪ್ರತಿದಿನ ಸುಮಾರು ಎರಡು ಸಾವಿರ ಜನ ಹಳ್ಳಿಯಿಂದ ನಗರಗಳ ಕಡೆಗೆ ಕೆಲಸ ಹುಡುಕಿಕೊಂಡು ವಲಸೆ ಹೋಗುತ್ತಿದ್ದಾರೆ ಎಂದು ಸಮೀಕ್ಷೆಯೊಂದು ಹೇಳುತ್ತದೆ. ಸುಸ್ಥಿರ ಕೃಷಿಯ ಬಗ್ಗೆ ಮಾತನಾಡುವುದಕ್ಕಿಂತ ಈಗ ನಮಗೆ ಸಧ್ಯ ಕೃಷಿಯನ್ನು ಉಳಿಸಿಕೊಳ್ಳುವುದೆ ದೊಡ್ಡ ಸವಾಲಾಗಿದೆ. ಹಳ್ಳಿಗಳಲ್ಲಿ ದುಡಿಯುವ ಕೈಗಳು ಕಡಿಮೆಯಾಗುತ್ತಿವೆ. ಕೃಷಿಯನ್ನು ಲಾಭದಾಯಕ,ಗೌರವ ತರುವ ಉದ್ಯೋಗ ಮಾಡುವ ನಿಟ್ಟಿನಲ್ಲಿ ಎಲ್ಲರೂ ಆಲೋಚಿಸಬೇಕಾಗಿದೆ.
ಗುಂಡ್ಲುಪೇಟೆ ತಾಲೂಕಿನ ಹಂಗಳ ಹೋಬಳಿಯ ಚೌಡಳ್ಳಿ 1500 ಜನಸಂಖ್ಯೆ ಇರುವ ಊರು. ಗ್ರಾಮದ ಹತ್ತಕ್ಕೂ ಹೆಚ್ಚು ಮನೆಗಳಿಗೆ ಬೀಗ ಜಡಿಯಲಾಗಿದೆ. ನೂರಾರು ಎಕರೆ ಜಮೀನು ಪಾಳು ಬಿದ್ದಿದ್ದೆ. ಹೀಗೆ ಶಿಕ್ಷಣ ಕೂಡ ನಿರ್ದಯವಾಗಿ ಹಳ್ಳಿಗಳ ನಾಶಕ್ಕೆ ಕಾರಣವಾಗುತ್ತಿರುವುದು ಆಧುನಿಕತೆಯ ವಿಕಾರಕ್ಕೆ ಹಿಡಿದ ಕನ್ನಡಿಯಂತೆ ಕಾಣುತ್ತಿದೆ.
ಒಂದು ಕಡೆ ಕೂಲಿ ಅರಸಿ ನಗರದತ್ತ ವಲಸೆ ಹೋಗುವುದನ್ನು ಕಂಡರೆ ಇಂತಹ ಕಡೆ ಕೃಷಿ ಕೆಲಸಗಳಿದ್ದರೂ ಅದನ್ನು ಬಿಟ್ಟು ಆರಾಮದಾಯಕ ಬದುಕನ್ನು ಅರಸಿ ನಗರ ಸೇರುತ್ತಿರುವುದನ್ನು ಕಾಣುತ್ತೇವೆ. ಹಳ್ಳಿಯ ಜನರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು. ಉಣ್ಣುವ ಆಹಾರಕ್ಕೂ ಆರೋಗ್ಯಕ್ಕೂ ಸಂಬಂಧವಿರುವ ಬಗ್ಗೆ ತಿಳಿಸಿಕೊಡಬೇಕು.ಅನ್ನದ ಬಟ್ಟಲು ವಿಷವಾಗುತ್ತಿರುವ ಬಗ್ಗೆ ತಿಳಿಸಿ ಕೃಷಿಯನ್ನು ಉಳಿಸುವ ಜೊತೆಗೆ ವಿಷಮುಕ್ತಗೊಳಿಸಬೇಕಾದ ಅನಿವಾರ್ಯತೆ ನಿಮರ್ಾಣವಾಗಿದೆ.
ಬಾಗಲಕೋಟ ಮತ್ತು ಮೈಸೂರು ತೋಟಗಾರಿಕಾ ವಿಶ್ವ ವಿದ್ಯಾನಿಲಯದಿಂದ "ಫಲಶ್ರೇಷ್ಠ" ಪ್ರಶಸ್ತಿ ಪಡೆದ ಚೌಡಳ್ಳಿ ಗ್ರಾಮದ ಸಿ.ಎಂ. ಸದಾಶಿವಮೂರ್ತಿ "ತಮಗೆ ಇಬ್ಬರು ಮಕ್ಕಳು.ಒಬ್ಬ ಸಂದೀಪ್. ಬಿಇ ವ್ಯಾಸಂಗಮಾಡಿ ನಗರದಲ್ಲಿ ನೌಕರಿ ಮಾಡುತ್ತಿದ್ದಾನೆ. ಮತ್ತೊಬ್ಬ ಶ್ರೇಯಸ್.ಐಟಿಐ ವ್ಯಾಸಂಗ ಮಾಡಿ ವ್ಯವಸಾಯ ಮಾಡುತ್ತಿದ್ದಾನೆ" ಎಂದರು.
ನನಗೆ ಮೊದಲು ಆಶ್ಚರ್ಯವಾಯಿತು.ಮಗನನ್ನು ಐಟಿಐ ಓದಿಸಿ ಯಾಕೆ ಕೃಷಿ ಚಟುವಟಿಕೆಗೆ ತೊಡಗಿಸಿದ್ದೀರಿ? ಎಂದೆ. ಅದಕ್ಕೆ ಅವರು ಹೇಳಿದ ಮಾತು "ನೋಡಿ,ಬೇಸಾಯಮಾಡಿ ಹಳ್ಳಿಯಲ್ಲಿ ಒಳ್ಳೆಯ ಮನೆ ಕಟ್ಟಿದ್ದೇವೆ.ತೋಟ ಮಾಡಿದ್ದೇವೆ.ಕೃಷಿಯಿಂದ ಯಾವತ್ತೂ ನಮಗೆ ನಷ್ಟವಾಗಿಲ್ಲ.ಇಬ್ಬರು ಮಕ್ಕಳು ನಗರಕ್ಕೆ ಹೋಗಿ ಬಿಟ್ಟರೆ ಹಳ್ಳಿಯಲ್ಲಿ ವಯಸ್ಸಾದ ಗಂಡಹೆಂಡತಿಯರಿಬ್ಬರೇ ಇರಬೇಕಾಗುತ್ತದೆ. ಮುಂದೆ ನಮ್ಮ ಮನೆಗೂ ಬೀಗ ಬೀಳುವುದು ಗ್ಯಾರಂಟಿ.ತೋಟಗಳು ಪಾಳು ಬೀಳುವುದು ನಿಶ್ಚಿತ.ಆಗಾಗಬಾರದು ಅಂತ ಒಬ್ಬ ಮಗನನ್ನು ನೌಕರಿಗೆ ಕಳುಹಿಸಿ, ಮತ್ತೊಬ್ಬನನ್ನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ" ಎಂದರು.
ಅಲ್ಲದೆ ರಾಸಾಯನಿಕ ಕೃಷಿಯ ದುಷ್ಪಾರಿಣಾಮಗಳ ಅರಿವಾಗಿದ್ದು ಸಾವಯವ ಕೃಷಿ ಮಾಡಲು ಒಂದಷ್ಟು ಗೆಳೆಯರು ಮುಂದಾಗಿದ್ದೇವೆ.ಇದಕ್ಕಾಗಿ ತಾಲೂಕಿನಲ್ಲಿ ಸಮಾನಾಸಕ್ತರ ಕೃಷಿಕರ ಬಳಗದ ಜೊತೆಯಲ್ಲಿ ಗುರುತಿಸಿಕೊಂಡಿದ್ದೇವೆ ಹೇಳಿದರು.
ಗ್ರಾಮದ ಮತ್ತೊಬ್ಬ ಜಲಸಾಕ್ಷರತೆಯ ರೂವಾರಿ,ಪ್ರಗತಿಪರ ರೈತ ಸಿ.ಎಸ್.ರಾಜೇಂದ್ರ ಅವರು ಕೂಡ ತಮ್ಮ ಒಬ್ಬ ಮಗನನ್ನು ನೌಕರಿಗೆ ಕಳುಹಿಸಿ ಮತ್ತೊಬ್ಬನಿಗೆ ಬಿಕಾಂ ಪದವಿ ಕೊಡಿಸಿ ವ್ಯವಸಾಯಕ್ಕೆ ತೊಡಗಿಸಿಕೊಂಡಿರುವುದು ನೆನಪಾಯಿತು.
ಎಸ್ಎಸ್ಎಲ್ಸಿ ಓದಿರುವ 56 ವರ್ಷದ ಸಿ.ಎಂ. ಸದಾಶಿವಮೂರ್ತಿ ಅವರ ಕೃಷಿ ಪ್ರೀತಿಯನ್ನು ಕಂಡು ಖುಶಿಯಾಯಿತು. ದಶಕದ ಹಿಂದೆ ಐದು ಎಕರೆ ಜಮೀನಿನಲ್ಲಿ ಹನಿ ನೀರಾವವರಿಯಲ್ಲಿ 492 ಟನ್ ಕಬ್ಬು ಬೆಳೆದು ಸಾಧನೆ ಮಾಡಿದ್ದ ಸದಾಶಿವ ಮೂತರ್ಿ ಅವರು ಈಗಲೂ ಈರುಳ್ಳಿ,ಅರಿಶಿನ,ಟೊಮಟೊ ಹೀಗೆ ತರಕಾರಿ ಬೆಳೆಯುವುದರಲ್ಲಿ ಮುಂದು.
ಹುಲ್ಲೆಪುರ ಕ್ರಾಸ್ನಲ್ಲಿ ರಸ್ತೆ ಬದಿಗೆ ಇರುವ ಹತ್ತೂವರೆ ಎಕರೆ ಜಮೀನು ಇವರ ಪ್ರಯೋಗಶಾಲೆ. ಅದರಲ್ಲಿ ಒಂದೂವರೆ ಎಕರೆಯಲ್ಲಿ ತೆಂಗಿನ ತೋಟವಿದೆ. ಉಳಿದಂತೆ ಪಾಲಿಹೌಸ್,ಡೈರಿ ಫಾರಂ,ಪ್ಯಾಕ್ಹೌಸ್ ಮಾಡಿಕೊಂಡು ಬರುವ ಕಡಿಮೆ ನೀರಿನಲ್ಲೇ ಅರಿಶಿನ, ಮೆಣಸಿನಕಾಯಿ,ಈರುಳ್ಳಿ ಬೆಳೆಯುತ್ತಾ ಕೃಷಿಯನ್ನು ಲಾಭದಾಯಕ ಕಸುಬನ್ನಾಗಿ ಮಾಡಿಕೊಂಡಿದ್ದಾರೆ. ತಮ್ಮ ತೋಟದಲ್ಲಿ ಅಂತರ್ಜಲ ಕಡಿಮೆಯಾದ ಕಾರಣ ನಂಜನಗೂಡು ತಾಲೂಕಿನ ಮಡುವಿನಹಳ್ಳಿ ಸಮೀಪ ಗುತ್ತಿಗೆಗೆ ಜಮೀನು ಮಾಡಿಕೊಂಡು ವ್ಯವಸಾಯಮಾಡುತ್ತಿದ್ದಾರೆ.
ಪ್ರಯೋಗಶೀಲ ರೈತ : ಸದಾಶಿವಮೂತರ್ಿ ಅವರು ಸದಾ ಪ್ರಯೋಗಶೀಲ ರೈತ. ಈರುಳ್ಳಿ,ಅರಿಶಿನ,ಮೆಣಸಿನಕಾಯಿ ಬೆಳೆಯುವುದರಲ್ಲಿ ನೂತನ ತಾಂತ್ರಿಕತೆ ಅಳವಡಿಸಿಕೊಂಡು ಕೃಷಿ ಮಾಡುತ್ತಾರೆ. ಹನಿ ನೀರಾವರಿ ಮೂಲಕ ನೀರಿನ ಮಿತ ಬಳಕೆ.ಕಾಂಪೋಸ್ಟ್ ಗೊಬ್ಬರದ ಪರಿಣಾಮಕಾರಿ ಬಳಕೆ ಇವರ ಕೃಷಿಯ ಯಶಸ್ಸಿನ ಗುಟ್ಟು. ಸಮಗ್ರ ಪದ್ಧತಿಯಲ್ಲಿ ಮಿಶ್ರ ಬೆಳೆ ಬೇಸಾಯ ಮಾಡುವ ಇವರು ಕೃಷಿಯಿಂದ ಎಂದೂ ನಷ್ಟ ಅನುಭವಿಸಿಲ್ಲ.
ಕಾಲಕ್ಕೆ ಸರಿಯಾಗಿ ಮಳೆಯೊಂದು ನಡೆಸಿಕೊಟ್ಟುಬಿಟ್ಟರೆ ಕೃಷಿಯಲ್ಲೇ ಹೆಚ್ಚು ಆದಾಯಗಳಿಸಿ ಆರಾಮವಾಗಿರಬಹುದು ಎನ್ನುವುದು ಇವರು ಅನುಭವದಿಂದ ಕಂಡುಕೊಂಡಿರುವ ಸತ್ಯ.
ಪಾಲಿಹೌಸ್ ಬೇಕಿಲ್ಲ : "ಈ ಭಾಗದಲ್ಲಿ ಕೃಷಿ ಮಾಡಲು ಪಾಲಿಹೌಸ್ ನಿಮರ್ಾಣ ಬೇಕಿಲ್ಲ. ಈಗಾಗಲೇ ಒಂದು ಎಕರೆ ಪ್ರದೇಶದಲ್ಲಿ ತಾವು ಪಾಲಿಹೌಸ್ ನಿಮರ್ಾಣಮಾಡಿ ಮೂರುವರ್ಷಗಳಿಂದ ದಪ್ಪ ಮೆಣಸಿನಕಾಯಿ ಬೆಳೆಯುತ್ತಿದ್ದೇನೆ. ಹೆಚ್ಚೆಂದರೆ ಇನ್ನೊಂದೆರಡು ವರ್ಷ ಇಲ್ಲಿ ಕೃಷಿ ಮಾಡಬಹುದು.ನಂತರ ಮಣ್ಣಿನ ಗುಣಮಟ್ಟ ಹಾಳಾಗಿ ಏನೇ ಹಾಕಿದರು ಬೇರುಕೊಳೆ ರೋಗವನ್ನು ತಡೆಯುವುದು ಕಷ್ಟ. ಈಗಲೇ ಮೆಣಸಿಗೆ ಬೇರುಕೊಳೆರೋಗ, ಎಲೆಚುಕ್ಕಿರೋಗ ಎಲ್ಲವೂ ಕಾಣಿಸಿಕೊಂಡಿದ್ದು ಕ್ರಿಮಿನಾಶಕ ಸಿಂಪರಣೆ ಮಾಡದಿದ್ದರೆ ಬೆಳೆ ತೆಗೆಯುವುದೇ ಕಷ್ಟ' ಎನ್ನುತ್ತಾರೆ.
ಪಾಲಿಹೌಸ್ ನಿಮರ್ಾಣಕ್ಕೆ ಸರಕಾರದ ಸಬ್ಸಿಡಿ ಹೋಗಿ ಸ್ವತಃ ಕೈಯಿಂದ ಹದಿನೈದು ಲಕ್ಷ ರೂಪಾಯಿ ವೆಚ್ಚಮಾಡಿದ್ದೇನೆ. ಮೂರು ವರ್ಷದಲ್ಲಿ ಹತ್ತು ಲಕ್ಷ ರೂಪಾಯಿ ಮಾತ್ರ ವಾಪಸ್ ಬಂದಿದೆ. ಇಷ್ಟೊಂದು ಹಣ ವೆಚ್ಚಮಾಡಿ ಮಧ್ಯಮವರ್ಗದ ರೈತರು ತರಕಾರಿ ಬೆಳೆಯುವುದು ಲಾಭದಾಯಕ ಅಲ್ಲ.
ಪಾಲಿಹೌಸ್ ನಿಮರ್ಾಣ ಮಾಡುವುದರಿಂದ ಗಿಡಗಳಿಗೆ ರೋಗಬಾಧೆ ಕಡಿಮೆ, ಮಾನವ ಶ್ರಮವೂ ಕಡಿಮೆ, ಹೆಚ್ಚು ರಾಸಾಯನಿಕ ಮತ್ತು ಕ್ರಿಮಿನಾಶಕ ಬಳಕೆ ಬೇಕಾಗಿಲ್ಲ ಎಂದು ನಾವು ತಿಳಿದುಕೊಂಡಿದ್ದೆವು.ಆದರೆ ಅದೆಲ್ಲ ಸುಳ್ಳು. ಮಾಮೂಲಿ ಕೃಷಿಗಿಂತ ಹೆಚ್ಚಿನ ಶ್ರಮ ಇಲ್ಲಿ ಬೇಕಾಗುತ್ತದೆ.ಆದ್ದರಿಂದ ಪಾಲಿಹೌಸ್ ನಿಮಾರ್ಣ ಮಾಡುವವರು ನಾಲ್ಕಾರು ಕಡೆ ವಿಚಾರಿಸಿ ನಂತರ ಮುಂದುವರಿಯುವುದು ಒಳ್ಳೆಯದು ಎಂದು ಸಲಹೆ ನೀಡುತ್ತಾರೆ.
ಬೀಗಬಿದ್ದ ಮನೆಗಳು ಬಣಬಣ : ಚೌಡಳ್ಳಿ ಗ್ರಾಮಕ್ಕೆ ಭೇಟಿ ನೀಡಿದರೆ ದೊಡ್ಡ ದೊಡ್ಡ ಮನೆಗಳಿಗೆ ಬೀಗ ಬಿದ್ದಿರುವುದನ್ನು ಕಾಣಬಹುದು. ಇವರೆಲ್ಲರೂ ಮಕ್ಕಳಿಗೆ ಒಳ್ಳೆಯ ವಿಧ್ಯಾಭ್ಯಾಸ ಕೊಡಿಸಿ ನಂತರ ಅವರೆಲ್ಲ ನೌಕರಿ ಸೇರಿದ ಮೇಲೆ ಹಳ್ಳಿಬಿಟ್ಟು ಅವರೊಂದಿಗೆ ನಗರವಾಸಿಗಳಾದವರು.
"ಅಕಾಲಿಕ ಮಳೆ,ಕುಸಿದ ಅಂತರ್ಜಲವೂ ಕೂಡ ಇವರೆಲ್ಲ ಹಳ್ಳಿ ತೊರೆಯಲು ಕಾರಣವಾಗಿದ್ದರೂ, ಜಿಲ್ಲಾಡಳಿತ ಇಂತಹ ಕಡೆ ಕೃಷಿಯ ಬಗ್ಗೆ ಜನರಲ್ಲಿ ಪ್ರೀತಿ ಬೆಳೆಸುವ ಮೂಲಕ ಆದಾಯ ತರಬಲ್ಲ ಉದ್ಯೋಗವಾಗಿ ಮಾಡದಿದ್ದರೆ ಮುಂದೊಂದು ದಿನ ಹಳ್ಳಿಗಳು ಬಣಗುಡುವ ಖಾಲಿ ಊರುಗಳಾದರೂ ಆಶ್ಚರ್ಯವಿಲ್ಲ" ಎನ್ನುತ್ತಾರೆ ಸದಾಶಿವಮೂರ್ತಿ
ಕೆರೆಗಳಿಗೆ ನೀರು ತುಂಬಿಸುವ ಮೂಲಕ ಅಂತರ್ಜಲವನ್ನು ಹೆಚ್ಚಿಸಿ ಹಳ್ಳಿಗಳನ್ನು ಜೀವಂತವಾಗಿಡುವ ಕೆಲಸ ಆಗಬೇಕು. ಸಿ.ಎಂ.ಗವಿಯಪ್ಪ,ಶಿವಕುಮಾರಸ್ವಾಮಿ,ರಾಜಶೇಖರಮೂರ್ತಿ,ಪರಶಿವಮೂರ್ತಿ,ಸಿ.ಎಂ.ನಾಗರಾಜು,ವಕೀಲ ನಾಗಮಲ್ಲಪ್ಪ ಹೀಗೆ ಇಪ್ಪತ್ತಕ್ಕೂ ಹೆಚ್ಚು ಮಂದಿ ಗ್ರಾಮವನ್ನು ತೊರೆದು ನಗರವಾಸಿಗಳಾಗಿದ್ದಾರೆ.ಇವರು ತಮ್ಮ ಜಮೀನುಗಳನ್ನು ಪಾಳುಬಿಟ್ಟು ಹೋಗಿರುವುದರಿಂದ ಕೃಷಿಗೂ ದೊಡ್ಡ ಒಡೆತ ಬಿದ್ದಂತಾಗಿದೆ.
"ಇದೇ ಕಾರಣಕ್ಕಾಗಿ ತಮ್ಮ ಮಕ್ಕಳಲ್ಲಿ ಒಬ್ಬನನ್ನು ಕೃಷಿಯನ್ನೇ ಪ್ರಧಾನ ಉದ್ಯೋಗಮಾಡಲು ಹಳ್ಳಿಯಲ್ಲೇ ಉಳಿಸಿಕೊಂಡಿದ್ದೇನೆ. ಕೃಷಿ ಕುಟುಂಬದ ಆರೋಗ್ಯ ಕಾಯುವ ಗೌರವಪೂರ್ವಕವಾದ ಉದ್ಯೋಗ,ಆದಾಯ ತರುವ ಕಸುಬು ಎಂದು ನಮ್ಮ ಮಕ್ಕಳಿಗೆ ಕಲಿಸಕೊಡಬೇಕಿದೆ" ಎನ್ನುತ್ತಾರೆ ಸದಾಶಿವಮೂರ್ತಿ.
ಮೈಸೂರು ತೋಟಗಾರಿಕೆ ವಿಶ್ವವಿದ್ಯಾನಿಲಯದ ಪ್ರಧ್ಯಾಪಕ ಬಿ.ಎಸ್.ಹರೀಶ್ ಅವರ ಸಲಹೆ ಮತ್ತು ಮಾರ್ಗದರ್ಶನ ಪಡೆದು ಕೃಷಿಮಾಡುವ ಸದಾಶಿವಮೂತರ್ಿ ಸಧ್ಯ ಟ್ರೇನಲ್ಲಿ ಅರಿಶಿನ ಸಸಿಗಳನ್ನು ಬೆಳೆಸಿಕೊಂಡು ಅರಿಶಿನನಾಟಿ ಮಾಡಿದ್ದಾರೆ.ಇದರಿಂದ ಗಿಡಗಳು ಉತ್ತಮವಾಗಿ ಬೆಳೆದು ಇಳುವರಿಯೂ ಹೆಚ್ಚಾಗುತ್ತದೆ ಎನ್ನುತ್ತಾರೆ.
ಸಹಕಾರವಿದ್ದರೆ ಸುಲಭ : ಕೃಷಿಯಲ್ಲಿ ಪರಸ್ಪರ ಸಹಕಾರ, ನೆರವು ಇದ್ದರೆ ಮುಂದುವರಿಯುವುದು ಸುಲಭ. ಸಣ್ಣಪುಟ್ಟ ಕೆಲಸಗಳಲ್ಲಿ ನೆರವಾಗುತ್ತಾ ಕೃಷಿ ಕೆಲಸಗಳನ್ನು ಸುಲಭಮಾಡಿಕೊಂಡರೆ ರೈತರಿಗೆ ಅನುಕೂಲ. ಗ್ರಾಮದ ರಾಜೇಂದ್ರ, ತಮ್ಮಡಹಳ್ಳಿಯ ಕುಮಾರ್ ಮತ್ತು ಸದಾಶಿವಮೂರ್ತಿ ಮೂವರು ಸೇರಿ ಕೃಷಿ ಚಟುವಟಿಕೆಗಳಲ್ಲಿ ಪರಸ್ಪರ ನೆರವಾಗುತ್ತಾರೆ.
ಗಿಡತರುವುದು, ಟ್ರ್ಯಾಕ್ಟರ್ ಉಳುಮೆ ಅಥವಾ ಬೋರ್ವೆಲ್ ಮೋಟಾರ್ ಕೆಟ್ಟರೆ ಅದನ್ನು ಎಳೆಸಿ ರಿಪೇರಿ ಮಾಡುವುದು ಇಂತಹ ಕೆಲಸಗಳಲ್ಲಿ ಸಹಾಯಕ್ಕೆ ಒಬ್ಬರಲ್ಲ ಒಬ್ಬರು ಒದಗಿ ಬರುತ್ತಾರೆ. ಇದರಿಂದ ಇವರಿಗೆ ಕೃಷಿ ಎಂದಿಗೂ ತಲೆನೋವಿನ ಕೆಲಸವಾಗಿಲ್ಲ.
ಹೀಗೆ ರೈತರು ಗ್ರಾಮಗಳಲ್ಲಿ ಪರಸ್ಪರ ಸಹಕಾರ ತತ್ವದಡಿ ಕೃಷಿ ಮಾಡಿದರೆ ಮಾತ್ರ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೃಷಿಯನ್ನು ಲಾಭದಾಯಕ ಉದ್ಯೋಗವಾಗಿ ಮಾಡಬಹುದು ಎನ್ನುತ್ತಾರೆ ಸಿ.ಎಂ. ಸದಾಶಿವಮೂರ್ತಿ. ಹೆಚ್ಚಿನ ಮಾಹಿತಿಗೆ 9741525617 ಸಂಪರ್ಕಿಸಿ