vaddagere.bloogspot.com

ಮಂಗಳವಾರ, ಜೂನ್ 27, 2017


ಭೂಮಿ ನಂಬಿ ಬದುಕುಕಟ್ಟಿಕೊಂಡ ಕ ಕಾಯಕಜೀವಿ "ಶಿವ"ಪ್ಪ
ನಕ್ಕವರ ಎದುರು ತಲೆಎತ್ತಿ ನಿಂತ ಸ್ವಾಭಿಮಾನಿ ರೈತ 
ಗುಂಡ್ಲುಪೇಟೆ : "ನಾವು ನಾಲ್ಕು ಮಂದಿ ಅಣ್ಣತಮ್ಮಂದಿರು.ನಮ್ಮದು ತುಂಬಾ ಕಷ್ಟದ ಬದುಕು. ಮೂರು ಎಕರೆ ಜಮೀನು ನಮಗಿತ್ತು.ದುಡಿದರೆ ಉಂಟು ಇಲ್ಲದಿದ್ದರೆ ಇಲ್ಲ ಎಂಬ ಪರಿಸ್ಥಿತಿ. ಒಂದೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದ ದಿನಗಳು ಅವು.ಮೈ ಮೇಲೆ ಧರಿಸಲು ಹೊಸ ಬಟ್ಟೆಗಳು ಇಲ್ಲದೆ ಎಷ್ಟೋ ವರ್ಷ ಹಳೆಯ ಬಟ್ಟೆಗಳಲ್ಲೆ ಕಾಲ ನೂಕಿದ ದಿನಗಳು ನೆನಪಿವೆ.ಐದು ವರ್ಷ ಸತತವಾಗಿ ಕಷ್ಟಪಟ್ಟು ದುಡಿದು ಈಗ ಈ ಮಟ್ಟಕ್ಕೆ ತಲುಪಿದ್ದೇವೆ" ಎಂದರು ಪ್ರಗತಿಪರ ಕೃಷಿಕ ಎಸ್.ಶಿವಪ್ಪ.
ಈಗ ಅವರು ಎಂಟು ಟ್ರ್ಯಾಕ್ಟರ್ಗಳ ಮಾಲೀಕರು. 15 ಎಕರೆ ಜಮೀನಿನ ಒಡೆಯ. ಸ್ಥಿತಿವಂತ. ಗುಂಡ್ಲುಪೇಟೆಯಲ್ಲಿ ಸ್ವಂತ ಮನೆ ಕಟ್ಟಿದ್ದಾರೆ.ಸಾಕಷ್ಟು ಜಮೀನನ್ನು ಖರೀದಿಸಿದ್ದಾರೆ.ನೆನಪಿರಲಿ ಇದೆಲ್ಲಾ ವ್ಯವಸಾಯದಿಂದ ಬಂದ ಆದಾಯದಿಂದಗಳಿಸಿದ ಆಸ್ತಿ. ವ್ಯವಸಾಯ ಬಿಟ್ಟರೆ ಅವರಿಗೆ ಬೇರೆನೂ ಗೊತ್ತಿಲ್ಲ. ಕೃಷಿಯೊಂದಿಗೆ ಟ್ರ್ಯಾಕ್ಟರ್ ಕೆಲಸವೊಂದನ್ನು ಬಿಟ್ಟು ಬೇರೆ ಉಪಕಸುಬುಗಳನ್ನು ಅವರು ಜೋಡಿಸಿಕೊಂಡಿಲ್ಲ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಾಡಂಚಿನ ಪುಟ್ಟಗ್ರಾಮ ಕುಂದಕೆರೆ. ಗ್ರಾಮದ ಶಿವಪ್ಪ ಮತ್ತು ಸಹೋದರರು ಇಂದು ಕೃಷಿಯಲ್ಲಿ ಮಾಡಿರುವ ಸಾಧನೆ ಕಡಿಮೆ ಏನಲ್ಲಾ. ಪ್ರಮುಖವಾಗಿ ಬಾಳೆ,ಈರುಳ್ಳಿ,ಅರಿಶಿನ ಜೊತೆಗೆ ಕಲ್ಲಂಗಡಿ,ಬೆಳ್ಳುಳ್ಳಿಯಂತಹ ವಾಣಿಜ್ಯ ಬೆಳೆಗಳನ್ನೇ ಕೇಂದ್ರಿಕರಿಸಿಕೊಂಡು ಕೃಷಿ ಮಾಡುವ ಇವರು ಅದರಿಂದ ಸಾಕಷ್ಟು ಆದಾಯಗಳಿಸಿದ್ದಾರೆ. ಸಹೋದರರು ಒಟ್ಟಾಗಿ ದುಡಿದು ಸಂಪಾದಿಸಿ ನಂತರ ಆಸ್ತಿಯಲ್ಲಿ ಸಮಪಾಲು ಮಾಡಿಕೊಂಡು ಕೃಷಿ ಕಾಯಕ ಮುಂದುವರಿಸಿದ್ದಾರೆ.
ಸಿದ್ದಪ್ಪ ಮತ್ತು ಗುರುಮಲ್ಲಮ್ಮ ಅವರ ಮಗನಾದ ಶಿವಪ್ಪ ಪತ್ನಿ ನಾಗರತ್ನ ಮತ್ತು ಮೂವರು ಮಕ್ಕಳೊಂದಿಗೆ ಗುಂಡ್ಲುಪೇಟೆಯಲ್ಲಿ ವಾಸವಾಗಿದ್ದು ಪ್ರತಿದಿನ ಕುಂದಕೆರೆಗೆ ಬೈಕ್ನಲ್ಲಿ ಬಂದು ಕೃಷಿ ಕೆಲಸಮಾಡಿ ವಾಪಸ್ ಹೋಗುತ್ತಾರೆ. ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಇಷ್ಟೆಲ್ಲಾ ರಿಸ್ಕ್ ತೆಗೆದುಕೊಳ್ಳುವುದು ಅನಿವಾರ್ಯ ಎನ್ನುವ ಶಿವಪ್ಪ ಮಗಳು ಶಿಲ್ಪಳನ್ನು ಮೈಸೂರಿನಲ್ಲಿ ಬಿಇ ವ್ಯಾಸಂಗಮಾಡಿಸುತಿದ್ದು, ಮತ್ತೊಬ್ಬಳು ಸಿಂಧು ಪೇಟೆಯಲ್ಲಿ ವಿಜ್ಞಾನ ಪದವಿ ಮತ್ತು ಮಗ ಮಧುಸೂದನ್ನನ್ನು ಪ್ರಾಥಮಿಕಶಾಲೆಯಲ್ಲಿ ಓದಿಸುತ್ತಿದ್ದಾರೆ.
ಮಾತಿಗೆ ಮೊದಲು ತಮ್ಮ ಕಷ್ಟದ ದಿನಗಳನ್ನು ನೆನಪು ಮಾಡಿಕೊಳ್ಳುವ ಶಿವಪ್ಪ ಬಡತನವನ್ನೆ ಸವಾಲಾಗಿ ಸ್ವೀಕರಿಸಿ ಸ್ಥಿತಿವಂತರಾಗಿದ್ದಾರೆ. ಸುಮಾರು ವರ್ಷಗಳವರೆಗೂ ಪುಟ್ಟಮನೆಯಲ್ಲೆ ತುಂಬು ಸಂಸಾರ ಮಾಡಿದ ಇವರು 1996 ರಲ್ಲಿ ವ್ಯವಸಾಯಮಾಡಿ ಬಂದ ಲಾಭದಿಂದ ಹೊಸಮನೆ ನಿಮರ್ಾಣ ಮಾಡಿಕೊಂಡಬಗ್ಗೆ ಹೇಳುವಾಗ ಭಾವುಕರಾಗುತ್ತಾರೆ.
ನಾಲ್ಕು ಜನ ಸಹೋದರರು ದುಡಿದು ಹಂತಹಂತವಾಗಿ ಮೇಲೆಬಂದೆವು. ಇಂದು ನಮ್ಮ ಬಳಿ ಎಂಟು ಟ್ರ್ಯಾಕ್ಟರ್ಗಳಿವೆ ಎಂದು ಹೇಳುವಾಗ ಶೀವಪ್ಪ ಅವರ ಕಣ್ಣಿನಲ್ಲಿ ಹೊಳಪು ಕಾಣಿಸುತ್ತದೆ. ಇದೆಲ್ಲಾ ಸಾಧನೆ ಹೇಗಾಯ್ತು ಎಂದು ಕೇಳಿದರೆ ಶಿವಪ್ಪ ದಶಕದ ಹಿಂದಿನ ನೆನಪಿಗೆ ಜಾರುತ್ತಾರೆ.
ಆಸ್ತಿಯಲ್ಲಿ ಪಾಲು : "ಅದು 2002 ನೇ ಇಸವಿ. ಮನೆಯವರೆಲ್ಲಾ ಕುಳಿತು ಒಂದು ನಿಧರ್ಾರಕ್ಕೆ ಬಂದೆವು.ನಾಲ್ಕು ಜನ ಸಹೋದರರು ಆಸ್ತಿಯನ್ನು ಹಂಚಿಕೊಳ್ಳೋಣ ಎಂದು ತೀಮರ್ಾನಿಸಿದೆವು. ಆಗ ನನ್ನ ಪಾಲಿಗೆ ನಾಲ್ಕು ಎಕರೆ ಜಮೀನು ಬಂತು. ಆ ಜಮೀನಿನಲ್ಲಿ ದುಡಿದು ಬಂದ ಆದಾಯದಿಂದ ಮತ್ತೆ ನಾನು ಒಂದಷ್ಟು ಜಮೀನು ಖರೀದಿಸಿದೆ" ಎಂದರು.
ಶಿವಪ್ಪ ಈಗ ನಾನು ಹದಿನೈದು ಎಕರೆ ಭೂಮಿಯ ಮಾಲೀಕ.ವಾಸಕ್ಕೆ ಗುಂಡ್ಲುಪೇಟೆಯಲ್ಲಿ ಸ್ವಂತ ಮನೆಮಾಡಿದ್ದಾರೆ. ಅದು ವ್ಯವಸಾಯದಿಂದ ಬಂದ ಆದಾಯದಿಂದ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ.
2002 ರಿಂದ ವ್ಯವಸಾಯವನ್ನು ಶ್ರದ್ಧೆಯಿಂದ ಕಾಯಕದಂತೆ ಮಾಡುತ್ತಿರುವ ಶಿವಪ್ಪ ವಾಣಿಜ್ಯ ಬೆಳೆಗಳು ನಮ್ಮನ್ನು ಎಂದು ಕೈ ಬಿಟ್ಟಿಲ್ಲ. ಕಲ್ಲಂಗಡಿ ಮತ್ತು ಈರುಳ್ಳಿ ಬೆಳೆಯುವುದರಲ್ಲಿ ನಾವು ಎಂದಿಗೂ ಮುಂದು ಎನ್ನುತ್ತಾರೆ.
ಬಂಗಾರದ ಮನುಷ್ಯನ ಕತೆ : ನಾವು ನೋಡುತ್ತಿದ್ದ ಏಳುವರೆ ಎಕರೆ ಜಮೀನು ಒಂದು ವರ್ಷದ ಹಿಂದೆ ಕಲ್ಲುಗುಂಡೆಗಳಿಂದ ತುಂಬಿದ್ದ ಜಾಗ. ಅದು ಈಗ ಬಂಗಾರ ಬೆಳೆಯುವ ಭೂಮಿಯಾಗಿ ಬದಲಾಗಿದೆ. ಅದರ ಹಿಂದಿನ ಶ್ರಮ ಬಂಗಾರದ ಮನುಷ್ಯ ಸಿನಿಮಾವನ್ನು ನೆನಪಿಸುತ್ತದೆ. ಸಿನಿಮಾದಲ್ಲಿ ಕಲ್ಲುಗುಡ್ಡ ಕಡಿದು ಕೃಷಿ ಮಾಡಿ ಯಶಸ್ವಿ ರೈತನಾದ ರಾಜೀವಪ್ಪನ ಪಾತ್ರಧಾರಿ ಡಾ.ರಾಜ್ಕುಮಾರ್ ಅವರ ಅಭಿನಯವನ್ನು ನೋಡಿ ಸಾವಿರಾರು ಯುವಕರು ಪ್ರಗತಿಪರ ಕೃಷಿಕರಾದ ಬಗ್ಗೆ ನಿಮಗೆಲ್ಲಾ ಗೊತ್ತಿದೆ. ಅಂತಹ ಸಾಲಿಗೆ ಸೇರುವ ಶಿವಪ್ಪ ನಮ್ಮ ಈ ವಾರದ ಬಂಗಾರದ ಮನುಷ್ಯ.
ಕಲ್ಲುಗುಡ್ಡೆಯಂತಿದ್ದ ಭೂಮಿಯಲ್ಲಿ ಈಗ ಬಂಗಾರದಂತಹ ಬಾಳೆ ಬೆಳೆ ಬಾಗಿನಿಂತಿದೆ. ಮೂರು ಎಕರೆಯಲ್ಲಿ 3400 ನೇಂದ್ರ ಬಾಳೆ, ತಲಾ ಎರಡು ಎಕರೆಯಲ್ಲಿ ಬೆಳ್ಳುಳ್ಳಿ, ಕಲ್ಲಂಗಡಿ ಮತ್ತು ಸ್ವಲ್ಪಭಾಗದಲ್ಲಿ ಟೊಮಟೊ ಬೆಳೆದಿದ್ದು ನೋಡಿದವರು ಅಚ್ಚರಿಪಡುವಂತಿದೆ.
"ಒಂದು ವರ್ಷದಹಿಂದೆ ನಾನು ಈ ಭೂಮಿಯನ್ನು ಖರೀದಿಸಿದಾಗ ಬಸ್ ನಿಲ್ದಾಣದಲ್ಲಿ ಕುಳಿತು ಮಾತನಾಡುವ ಹಿರಿಯರು ನಕ್ಕಿದ್ದರು.ಎಲ್ಲೋ ಈ ಹುಡುಗನಿಗೆ ಹಣ ಜಾಸ್ತಿಯಾಗಿದೆ ಎಂದು ಲೇವಡಿ ಮಾಡಿದ್ದರು. ಈ ಕಲ್ಲುಭೂಮಿಯಲ್ಲಿ ಬೆಳೆ ಬೆಳೆದು ಲಾರಿಯಲ್ಲಿ ಲೋಡು ತುಂಬಿಕೊಂಡು ಬರುವುದನ್ನು ನಾವು ಕಾಣದೆ ಹೋಗುತ್ತೇವೆಯೇ ಎಂದು ಅಪಹಾಸ್ಯ ಮಾಡಿದ್ದರು. ಈ ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆಯುವ ಬಗ್ಗೆ ನನಗೆ ನಂಬಿಕೆ ಇತ್ತು. ನನ್ನ ನಂಬಿಕೆ ಸುಳ್ಳಾಗಲಿಲ್ಲ.ಇದೆ ಕಲ್ಲು ಭುಮಿಯಲ್ಲಿ ಈರುಳ್ಳಿ ಮತ್ತು ಕಲ್ಲಂಗಡಿ ಬೆಳೆದು ಲಾರಿಯಲ್ಲಿ ಲೋಡು ಕಳುಹಿಸಿದೆ. ಆಗ ನಕ್ಕವರು, ಅಪಹಾಸ್ಯ ಮಾಡಿದವರು ಮೌನಕ್ಕೆ ಶರಣಾದರು" ಎಂದು ನೆನಪಿಸಿಕೊಳ್ಳುತ್ತಾರೆ ಶಿವಪ್ಪ.
ಮೂರು ತಿಂಗಳ ಕಾಲ ಸತತವಾಗಿ ಜೆಸಿಬಿಯಲ್ಲಿ ಕಲ್ಲುಗಳು ಕೀಳಿಸಿ, ಮೂರು ಬೋರ್ವೆಲ್ ಹಾಕಿಸಿದೆ. ಮೂರರಲ್ಲೂ ಒಂದೊಂದು ಇಂಚು ನೀರು ಬಂತು.ಅದನ್ನೇ ಬಳಸಿಕೊಂಡು ಕೃಷಿ ಮಾಡುತ್ತಿದ್ದೇನೆ. ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡಿಕೊಳ್ಳಲು ಅರಣ್ಯ ಇಲಾಖೆಯಿಂದ ಸಬ್ಸಿಡಿ ತೆಗೆದುಕೊಂಡು ಸೋಲಾರ್ ಫೆನ್ಸ್ ಹಾಕಿಸಿಕೊಂಡೆ. ಭೂಮಿತಾಯಿ ನಂಬಿದರೆ ಎಂದಿಗೂ ಮೋಸ ಮಾಡುವುದಿಲ್ಲ.ಅದಕ್ಕೆ ನಾನೇ ಜೀವಂತ ಸಾಕ್ಷಿ ಎನ್ನುತ್ತಾರೆ.
ಕೃಷಿಗೂ ಶಿಕ್ಷಣ ಬೇಕು : "ಕೃಷಿ ದಡ್ಡರು ಮಾಡುವ ಕಸುಬಲ್ಲ.ವ್ಯವಸಾಯ ಮಾಡುವವರು ವಿದ್ಯಾವಂತರಾದರೆ ಸಾಕಷ್ಟು ಬದಲಾವಣೆ ತರಬಹುದು. ಬೆಳೆಯ ಸಂಯೋಜನೆಯಿಂದ ಹಿಡಿದು ಕೃಷಿಯಲ್ಲಿ ಆಗುವ ಅನಗತ್ಯ ಖಚರ್ುವೆಚ್ಚಗಳನ್ನು ತಪ್ಪಿಸಬಹುದು. ಪ್ರತಿವರ್ಷ ನಾನು ಶೇಕಡ 90 ರಷ್ಟು ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತೇನೆ. ಎಂದಿಗೂ ನನಗೆ ನಷ್ಟವಾಗಿಲ್ಲ. ಹೆಚ್ಚಿನ ವಿಧ್ಯಾಭ್ಯಾಸಮಾಡಿ ನೌಕರಿಗೆ ಸೇರಿಕೊಂಡರೆ ವ್ಯಯಕ್ತಿಕವಾಗಿ ಲಾಭವಾಗಬಹುದು. ಆದರೆ ಕೃಷಿಕನಾದರೆ ನೂರಾರು ದುಡಿಯುವ ಜನರಿಗೆ ಆಸರೆಯಾಗಬಹುದು" ಎನ್ನುತ್ತಾರೆ.
ಪ್ರತಿದಿನ ಗುಂಡ್ಲುಪೇಟೆಯಿಂದ ಕುಂದಕೆರೆಗೆ 25 ಕಿ.ಮೀ.ಬೈಕ್ನಲ್ಲಿ ಓಡಾಡುವ ಶಿವಪ್ಪ ಇದರಿಂದ ಕೃಷಿಗೆ ತೊಂದರೆಯಾಗಿಲ್ಲ ಎನ್ನುತ್ತಾರೆ. ಸರಕಾರಿ ಕೆಲಸಮಾಡಲು ಪ್ರತಿದಿನ ಜನರು ನೂರಾರು ಕಿ.ಮೀ.ರೈಲು ಬಸ್ಸುಗಳಲ್ಲಿ ಹೋಗಿ ಬರುತ್ತಾರೆ. ಅದು ಕೆಲಸದ ಕಮಿಂಟ್ಮೆಂಟ್. ನಮಗೂ ಹಾಗೇ ತಾನೆ. ನಮ್ಮ ಕೃಷಿ ಕೆಲಸಕ್ಕೆ 25 ಕಿ.ಮೀ.ಹೋಗಿ ಬರುವುದರಿಂದ ನಷ್ಟ ಏನು ಎಂದು ಪ್ರಶ್ನಿಸುತ್ತಾರೆ.
ಮಕ್ಕಳ ವಿಧ್ಯಾಭ್ಯಾಸದ ಹಿತದೃಷ್ಠಿಯಿಂದ ಇಷ್ಟಾದರೂ ರಿಸ್ಕ್ ತೆಗೆದುಕೊಳ್ಳಲು ನಾವು ಸಿದ್ದವಾಗಿರಬೇಕು ಎನ್ನುವ ಶಿವಪ್ಪ ಇದುವರೆಗೂ ರಾಸಾಯನಿಕ ಕೃಷಿಯಲ್ಲಿ ಬೇಸಾಯ ಮಾಡುತ್ತಿದ್ದು ಈಗ ನೈಸಗರ್ಿಕ ಕೃಷಿಯ ಕಡೆಗೆ ಮನಸ್ಸು ಮಾಡಿದ್ದಾರೆ.
ಸಾವಯವ ಸಂತನ ದರ್ಶನ : ಗುಂಡ್ಲುಪೇಟೆ ತಾಲೂಕಿನ 20 ಮಂದಿ ರೈತರ ತಂಡವನ್ನು ಇತ್ತೀಚಿಗೆ ನಾನು ನಾಡೋಜ ಸಾವಯವ ಕೃಷಿಕ ಡಾ.ಎಲ್.ನಾರಾಯಣ ರೆಡ್ಡಿ ಅವರ ತೋಟಕ್ಕೆ  ಬಿದಿರು ಬೇಸಾಯದ ಬಳಗದ ವತಿಯಿಂದ ಕರೆದುಕೊಂಡು ಹೋಗಿದ್ದೆ. ಅಲ್ಲಿ ಎರಡು ದಿನ ನಾರಾಯಣ ರೆಡ್ಡಿ ಅವರಿಂದ ಕೃಷಿ ತರಬೇತಿ ಮತ್ತು ಸಂವಾದ ಇತ್ತು. ಮಣ್ಣು, ಬೀಜ,ಗೊಬ್ಬರ ಮತ್ತು ಕ್ರೀಮಿನಾಶಕಗಳ ಬಗ್ಗೆ ನಾರಾಯಣ ರೆಡ್ಡಿ ವಿವರವಾಗಿ ತಿಳಿಸಿಕೊಟ್ಟರು.
ರೆಡ್ಡಿ ಅವರ ಉಪನ್ಯಾಸದಿಂದ ಪ್ರಭಾವಿತರಾಗಿರುವ ಶಿವಪ್ಪ ತಾವೂ ಕೂಡ ಇನ್ನು ಮುಂದೆ ಹಂತ ಹಂತವಾಗಿ ಸಾವಯವ ಕೃಷಿಯ ಕಡೆಗೆ ಮರಳುವುದಾಗಿ ಹೇಳುತ್ತಾರೆ. ಇದರ ಮೊದಲ ಹಂತವಾಗಿ ಈ ವರ್ಷವೇ ತಮ್ಮ ಜಮೀನಿನಲ್ಲಿ ನೂರಾರು ಹಣ್ಣು ಮತ್ತು ನೆರಳು ನೀಡುವ ಗಿಡಗಳನ್ನು ನೆಟ್ಟು ಬೆಳೆಸಲು ಸಂಕಲ್ಪ ಮಾಡಿರುವುದಾಗಿ ಹೇಳುತ್ತಾರೆ.
ಕುಂದಕೆರೆ ಭಾಗದ ಹತ್ತಕ್ಕೂ ಹೆಚ್ಚು ರೈತರು ಗುಂಪುಮಾಡಿಕೊಂಡು ಸಾವಯವ ಕೃಷಿ ಮಾಡಲು ತೀಮರ್ಾನಿಸಿದ್ದು ಈ ವರ್ಷದಿಂದಲೇ ತಲಾ ಎರಡೆರಡು ಎಕರೆ ಪ್ರದೇಶದಲ್ಲಿ ಮನೆಗೆ ಬೇಕಾದ ಹಣ್ಣು ಮತ್ತು ತರಕಾರಿಗಳನ್ನು ಬೆಳೆದುಕೊಳ್ಳಲ್ಲು ತೀಮರ್ಾನಿಸಿದ್ದೇವೆ. ನಾವು ಕಾಂಡಚಿನ ಗ್ರಾಮಗಳಲ್ಲಿ ಇರುವುದರಿಂದ ಕೃಷಿಯ ಮಹತ್ವದ ಬಗ್ಗೆ ಅರಿವು ಮೂಡಿಸಬೇಕಾದ ಆಧಿಕಾರಿಗಳು ಇಲ್ಲಿಗೆ ಬರುವುದಿಲ್ಲ.ಹಾಗಾಗಿ ಎಲ್ಲರೂ ರಾಸಾಯನಿಕ ಕೃಷಿಯನ್ನೇ ಮಾಡುತ್ತಿದ್ದಾರೆ. ನೈಸಗರ್ಿಕ ಕೃಷಿಯ ಅನಿವಾರ್ಯ ಮತ್ತು ಅಗತ್ಯದ ಬಗ್ಗೆ ಅರಿವು ಮೂಡಿಸಿದರೆ ನಮ್ಮಲ್ಲೂ ನೂರಾರು ಸಂಖ್ಯೆಯಲ್ಲಿ ನೈಸಗರ್ಿಕ ಕೃಷಿಕರು ಸೃಷ್ಠಿಯಾಗುತ್ತಾರೆ. ಎನ್ಜಿಒಗಳು, ಕೃಷಿ ಅಧಿಕಾರಿಗಳು ಕಾಡಂಚಿನ ಗ್ರಾಮಗಳಲ್ಲಿ ಸಾವಯವ ಕೃಷಿಯ ಮಹತ್ವವನ್ನು ತಿಳಿಸಲು ಮುಂದಾಗಬೇಕು ಎನ್ನುವ ಶಿವಪ್ಪ ಮೊದಲು ತಾವು ನೈಸಗರ್ಿಕ ಕೃಷಿಕರಾಗಿ ಬದಲಾಗಲಿ ಎನ್ನುವುದು ನಮ್ಮ ಆಶಯ. ಹೆಚ್ಚಿನ ಮಾಹಿತಿಗೆ ಶಿವಪ್ಪ 9844624290 ಸಂಪಕರ್ಿಸಿ 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ