vaddagere.bloogspot.com

ಭಾನುವಾರ, ಜುಲೈ 16, 2017

ನಿವೃತ್ತ ಜೀವನ ಸಾರ್ಥಕ ಪಡಿಸಿಕೊಂಡ ನೈಸರ್ಗಿಕ ಕೃಷಿಕ
# ತುಂಡು ಭೂಮಿಯಲ್ಲಿ ಆರಾಮದಾಯಕ ಬದುಕು               # ಸಮಗ್ರ ಪದ್ಧತಿಯ ಹಸಿರು ತೋಟ 
ಮೈಸೂರು : ಸರ್ಕಾರಿ ಅಥವಾ ಖಾಸಗಿ ಕೆಲಸ,ಕೈತುಂಬ ಸಂಬಳ ಬರುತ್ತಿದ್ದು ನಿವೃತ್ತಿ ಅಂಚಿನಲ್ಲಿರುವವರ ಗೊಣಗಾಟವನ್ನು ನೀವು ನೋಡಿರಬಹುದು.ಕಚೇರಿಯ ಚಟುವಟಿಕೆಗಳಿಂದ ತಮ್ಮ ವ್ಯಕ್ತಿತ್ವ ನಿರ್ಧರಿಸಿಕೊಂಡ ಜನ ನಿವೃತ್ತರಾದ ನಂತರ ಕಳೆದ ವರ್ಷಗಳ ಭಾರದ ಅಡಿಯಲ್ಲಿ ವಿಕಾರವಾಗಿ ನರಳಾಡುವುದನ್ನೂ ಕಂಡಿರಬಹುದು.
ಆದರೆ ಇಲ್ಲೊಬ್ಬರು ನಿವೃತ್ತರಾದ ನಂತರ ಸಹಜ ಕೃಷಿಕರಾಗಿ ಹೇಗೆ ಆರೋಗ್ಯಕರ,ಸುಂದರ, ಆರಾಮದಾಯಕ ಬದುಕು ಕಟ್ಟಿಕೊಳ್ಳಬಹುದು ಎನ್ನುವುದಕ್ಕೆ "ರೂಪಕ"ದಂತೆ ಬದುಕುತ್ತಿದ್ದಾರೆ. ಅವರೇ ನಿವೃತ್ತ ಅಧಿಕಾರಿ ಟಿ.ರಾಮಶೆಟ್ಟಿ.
ಎರಡು ಎಕರೆ ಬರಡು ಭುಮಿಯನ್ನು ಧರೆಯ ಮೇಲಿನ ಅಚ್ಚ ಹಸಿರಿನ ತಾಣವಾಗಿ ರೂಪಿಸಿರುವ ರಾಮಶೆಟ್ಟಿ, ಬಯಸಿದ್ದರೆ ಸುಮ್ಮನೇ ನಗರದಲ್ಲಿ ತಮ್ಮ ಪತ್ನಿ ಸಿ.ಎನ್.ಭಾಗ್ಯ ಅವರೊಂದಿಗೆ ಆರಾಮವಾಗಿ ಇದ್ದುಬಿಡಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ.ತಮ್ಮ ನಿವೃತ್ತ ಜೀವನವನ್ನು ಸಾರ್ಥಕ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಹಸಿರು ಹೆಜ್ಜೆಯ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ.
ಮೂಲತಃ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮಡೇನಹಳ್ಳಿಯ ರಾಮಶೆಟ್ಟಿ ಅವರಿಗೆ ಆರ್,ಕಿರಣ್ ಮತ್ತು ಆರ್.ಪ್ರವೀಣ್ ಎಂಬ ಇಬ್ಬರು ಮಕ್ಕಳು. ಇಬ್ಬರೂ ಸಾಫ್ಟವೇರ್ ಎಂಜಿನೀಯರ್ಗಳು. ಕಿರಣ್ ಕ್ಯಾಲಿಫೋನರ್ಿಯಾದಲ್ಲಿದ್ದರೆ ಪ್ರವೀಣ್ ಬೆಂಗಳೂರಿನಲ್ಲಿದ್ದಾರೆ.ಒಬ್ಬ ಸೊಸೆ ಕ್ಯಾಲಿಫೋನರ್ಿಯಾದಲ್ಲಿ ಎಂಎಸ್ ಮಾಡುತ್ತಿದ್ದರೆ,ಮೊತ್ತಬ್ಬರೂ ಸಾಫ್ಟವೇರ್. ಇಷ್ಟಿದ್ದರೂ ರಾಮಶೆಟ್ಟಿ ಅವರಿಗೆ ಕೃಷಿ ಕಾಯಕದಲ್ಲಿ ಇನ್ನಿಲ್ಲದ ಪ್ರೀತಿ.
ನೈಸಗರ್ಿಕ ಕೃಷಿ ತರಬೇತಿ ಶಿಬಿರಗಳು ಎಲ್ಲೆ ನಡೆದರೂ ಹೋಗುತ್ತಾರೆ. ತಮಗೆ ಇಷ್ಟವಾದ ಹಣ್ಣಿನ ಗಿಡಗಳು ಎಲ್ಲೆ ಸಿಕ್ಕರು ಮಕ್ಕಳಂತೆ ಓಡೋಡಿ ತಂದು ತಮ್ಮ ತೋಟದಲ್ಲಿ ಬೆಳೆಸುತ್ತಾರೆ. ಇವರ ಇಂತಹ ಆಸಕ್ತಿಯ ಫಲವಾಗಿ ತೋಟದಲ್ಲೀಗ ಸೀಬೆ,ಸಪೋಟ,ನೆಲ್ಲಿ,ರಾಂಭೂಟನ್,ಮಾವು,ಸೀತಾಫಲ,ರಾಮಫಲ,ಜಾಯಿಕಾಯಿ, ನಿಂಬೆ,ನುಗ್ಗೆ,ಮೂಸಂಬಿ, ಕಾಫಿ ಹೀಗೆ ಹತ್ತಾರು ಹಣ್ಣಿನ ಗಿಡಗಳು ಫಲ ನೀಡುತ್ತಿವೆ. ತೋಟದ ಸುತ್ತಾ ಹೆಬ್ಬೇವು,ತೇಗ,ಸಿಲ್ವರ್ ಮತ್ತಿತರ ಕಾಡಿನ ಮರಗಳು ಮುಗಿಲಿನತ್ತ ಮುಖಮಾಡಿ ನಿಂತಿವೆ.
ಮೈಸೂರಿನಿಂದ 25 ಕಿ.ಮೀ ದೂರದಲ್ಲಿರುವ ಮಾರ್ಬಳ್ಳಿ ಗ್ರಾಮದಲ್ಲಿರುವ ವರುಣಾನಾಲೆ 86ನೇ ಕೀ.ಮೀ.ಅಕ್ವಿಡೆಟ್ ಬಳಿ ರಾಮಶೆಟ್ಟರ ಸುಭಾಷ್ ಪಾಳೇಕರ್ ಪದ್ಧತಿಯಲ್ಲಿ ಕಟ್ಟಿದ ಈ ತೋಟ ಇದೆ.ಸುತ್ತ ಎಲ್ಲರೂ ರಸಾಯನಿಕ ಕೃಷಿ ಮಾಡುತ್ತಿದ್ದರೆ ಶೆಟ್ಟರು ತಣ್ಣಗೆ ವಿಷಮುಕ್ತ ಆಹಾರ ಬೆಳೆಯುತ್ತಾ, ತೋಟದಲ್ಲಿ ದುಡಿಯುತ್ತಾ ರೋಗಮುಕ್ತ ಜೀವನ ನಡೆಸುತ್ತಿದ್ದಾರೆ.
ಹಿಂತಿರುಗಿ ನೋಡಿದಾಗ : ರಾಮಶೆಟ್ಟರು ಮೂಲತಃ ಕೃಷಿಕರಲ್ಲ.ಬಾಲ್ಯದಲ್ಲಿ ಜಮೀನುಗಳಿಗೆ ಕೂಲಿಗೆ ಹೋಗುತ್ತಿದ್ದಾಗಿನ ಕೃಷಿ ಅನುಭವ ಬಿಟ್ಟರೆ ಅವರಿಗೆ ಕೃಷಿಯ ಬಗ್ಗೆ ಅಷ್ಟೇನೂ ತಿಳಿವಳಿಕೆ ಇರಲಿಲ್ಲ.ಆದರೆ ಈಗ ಅವರೊಳಗೊಬ್ಬ ಕೃಷಿ ವಿಜ್ಞಾನಿ ಇದ್ದಾನೆ. ಅನುಭವದಿಂದ ಕಂಡುಕೊಂಡದ್ದನ್ನು ಪ್ರಯೋಗಮಾಡುತ್ತಾ ನಿವೃತ್ತ ಜೀವನವನ್ನು ಸಾರ್ಥಕ ಪಡಿಸಿಕೊಳ್ಳುತ್ತಿದ್ದಾನೆ.
ವಿಕ್ರಾಂತ್ ಕಾಖರ್ಾನೆಯಲ್ಲಿ ಅಸಿಸ್ಟೆಂಟ್ ಇಂಜಿನೀಯರ್ ಆಗಿ ಸ್ವಯಂ ನಿವೃತ್ತಿ ಪಡೆದು ನಂತರ ಸೌಂತ್ ಇಂಡಿಯನ್ ಪೇಪರ್ ಮಿಲ್ನಲ್ಲಿ ಅಸಿಸ್ಟೆಂಟ್ ಮೆನೇಜರ್ ಆಗಿ ಆರೋಗ್ಯದ ಸಮಸ್ಯೆಯಿಂದ ಎರಡು ವರ್ಷ ಮುಂಚಿತವಾಗಿ ಅಲ್ಲಿಂದಲ್ಲೂ ವಿಆರ್ಎಸ್ ಪಡೆದ ರಾಮಶೆಟ್ಟರು ನಂತರ ಕೃಷಿಕರಾಗಲು ನಿಧರ್ಾರ ಮಾಡಿದರು. ಇವರ ಹೆಸರಿನಲ್ಲಿ ಆರ್ಟಿಸಿ ಇರದ ಕಾರಣ ಪತ್ನಿಯ ಹೆಸರಿನಲ್ಲಿ ಎರಡು ಎಕರೆ ಜಮೀನು ಖರೀದಿಸಿದರು.
"2013 ರಲ್ಲಿ ಮಾರ್ಬಳ್ಳಿಯಲ್ಲಿ ಜಮೀನು ಖರೀದಿಸಿದಾಗ ಇದು ಖಾಲಿ ಭೂಮಿ.ಯಾವ ಗಿಡಮರಗಳು ಇರಲಿಲ್ಲ. ಕೇವಲ ಮೂರೇ ವರ್ಷದಲ್ಲಿ ನೂರಾರು ಗಿಡಮರಗಳನ್ನು ಬೆಳೆಸಿದ್ದೇನೆ.130 ತೆಂಗಿನ ಗಿಡಗಳು ಬಲಿಷ್ಠವಾಗಿ ಬೆಳೆದು ಹೊಂಬಾಳೆ ಬರುತ್ತಿವೆ.ಸೀಬೆ,ಸಪೋಟಗಳಂತೂ ಸಾಕಷ್ಟು ಹಣ್ಣು ಬಿಡುತ್ತಿವೆ" ಎನ್ನುತ್ತಾ ಮರದ ಮೇಲೆ ಹಣ್ಣಾಗಿದ್ದ ಸೀಬೆಯ ಹಣ್ಣೋಂದನ್ನು ತಿನ್ನಲು ಕಿತ್ತುಕೊಟ್ಟರು. ಜೀವಾಮೃತದಿಂದ ಬೆಳೆದ ಸೀಬೆಯ ರುಚಿಗೆ ನಾವು ಮಾರುಹೋದೆವು. ಜೊತೆಗಿದ್ದ ಮತ್ತೊಬ್ಬ ನೈಸಗರ್ಿಕ ಕೃಷಿಕ ಶಿವನಾಗಪ್ಪ ಮೂರೇ ವರ್ಷದಲ್ಲಿ ಇಂತಹ ತೋಟ ಕಟ್ಟಿದ್ದೀರಾ? ಎಂದು ಉದ್ಘಾರ ಎಳೆದರು.
ದಾರಿದೀಪವಾದ ಪುಸ್ತಕ: "ಆರಂಭದಲ್ಲಿ ಜಮೀನು ಖರೀದಿಸಿದಾಗ ಕೃಷಿಯ ಬಗ್ಗೆ ನನಗೇನೂ ಗೊತ್ತಿರಲಿಲ್ಲ.ನನ್ನ ಕಿರಿಯ ಮಗ ಕಿರಣ್ಗೆ ಒಂದು ತೋಟಮಾಡುವ ಕನಸಿತ್ತು.ರಸಾಯನಿಕ ಬಳಸದೆ,ನೈಸಗರ್ಿಕವಾಗಿ ತೋಟದಲ್ಲಿ ಎಲ್ಲಾ ಬಗೆಯ ಹಣ್ಣುಗಳನ್ನು ಬೆಳೆಯಬೇಕು ಎನ್ನುವುದು ನಮ್ಮ ಮಕ್ಕಳ ಕನಸಾಗಿತ್ತು. ಅದಕ್ಕಾಗಿ ನಾನು ನೈಸಗರ್ಿಕ ಕೃಷಿಯನ್ನೇ ಮಾಡಲು ತೀಮರ್ಾನಿಸಿದೆ" ಎನ್ನುತ್ತಾರೆ ರಾಮಶೆಟ್ಟರು.
ಹೀಗಿರಬೇಕಾದರೆ ಆರ್.ಸ್ವಾಮಿ ಆನಂದ್ ಬರೆದ ಸುಭಾಷ್ ಪಾಳೇಕರ್ ಅವರ "ಶೂನ್ಯ ಬಂಡವಾಳದ ನೈಸಗರ್ಿಕ ಕೃಷಿ" ಪುಸ್ತಕ ಕಣ್ಣಿಗೆ ಬಿತ್ತು.ಅದನ್ನು ಗಂಭೀರವಾಗಿ ಓದಿ ಮನನ ಮಾಡಿಕೊಂಡೆ.ನಂತರ ಸುಭಾಷ್ ಪಾಳೇಕರ್ ಅವರ ಕೃಷಿ ತರಬೇತಿ ಶಿಬಿರಗಳಲ್ಲೂ ಭಾಗವಹಿಸಿದೆ. ಅವರು ಹೇಳಿದಂತೆ ಜೀವಾಮೃತ,ಬೀಜಾಮೃತ ಮಾಡಿಕೊಂಡು ಗಿಡಗಳನ್ನು ಸಂಯೋಜನೆ ಮಾಡುತ್ತಾ ಬೆಳೆಸುತ್ತಾ ಬಂದೆ.ಇಲ್ಲಿಯವರೆಗೆ ತಮ್ಮ ಜಮೀನಿಗೆ ಒಂದು ಚಮಚದಷ್ಟೂ ರಸಾಯನಿಕಗೊಬ್ಬರ ಬಳಸಿಲ್ಲ.ಉಳುಮೆಯನ್ನು ಮಾಡಿಲ್ಲ.ಕಾಂಪೋಸ್ಟ್, ಕೊಟ್ಟಿಗೆ ಗೊಬ್ಬರವನ್ನೂ ಬಳಸಿಲ್ಲ.ಆದರೂ ಗಿಡಮರಗಳು ಆರೋಗ್ಯವಾಗಿ ಸದೃಢವಾಗಿ ಬೆಳೆದಿವೆ ಎನ್ನುತ್ತಾ ಜೀವಾಮೃತ ತಯಾರುಮಾಡಿಕೊಳ್ಳುವ ತೊಟ್ಟಿಯನ್ನು ತೋರಿಸಿದರು.
ಬೆಳವಲ ಪೌಂಡೇಶನ್ನವರು ನಡೆಸುವ ಕೃಷಿ ತರಬೇತಿ ಶಿಬಿರ,ಡಾ.ಎಲ್.ನಾರಾಯಣ ರೆಡ್ಡಿ ಅವರ ಕೃಷಿ ತರಬೇತಿ, ಬದಿರು ಬೇಸಾಯ ಬಳಗದವತಿಯಿಂದ ನಾವು ನಡೆಸಿದ ತರಬೇತಿ ಎಲ್ಲಾ ಕಡೆ ಭಾಗವಹಿಸಿ ಈಗಲೂ ಹೊಸ ಹೊಸ ವಿಚಾರಗಳನ್ನು ಕಲಿಯುವ ಹಂಬಲ ಇಟ್ಟುಕೊಂಡಿರುವ ರಾಮಶೆಟ್ಟರು ಪ್ರತಿ ಶಿಬಿರಗಳಿಂದಲ್ಲೂ ಒಂದೊಂದು ಅನುಕೂಲವಾಗಿರುವ ಬಗ್ಗೆ ಹೇಳುತ್ತಾರೆ.
ಮೊನ್ನೆ ಬೆಳವಲ ಫೌಂಡೇಶನ್ನವರು ನಡೆಸುವ ಕೃಷಿ ತರಬೇತಿ ಶಿಬಿರಕ್ಕೆ ಹೋಗಿ ಕಲಿತುಕೊಂಡು ಬಂದನಂತರ ಮಾವು,ಜಂಬೂನೇರಳೆ,ನುಗ್ಗೆ ಪ್ರೋನಿಂಗ್ ಮಾಡಿರುವುದಾಗಿ ತೋರಿಸಿದರು.
ಮನೆಯಲ್ಲಿದ್ದರೆ ನೂರೆಂಟು ರೋಗ: ನಿವೃತ್ತಿಯಾದ ನಂತರ ಮನೆಯಲ್ಲೆ ಇದ್ದರೆ ನನಗೆ ನೂರೆಂಟು ಖಾಯಿಲೆಗಳು.ಬೆನ್ನು ನೋವು,ಮಂಡಿ ನೋವು ಜೊತೆಗೆ ಸಕ್ಕರೆ ಕಾಯಿಲೆ ಬೇರೆ. ಆಶ್ಚರ್ಯ ಎಂದರೆ ಬೆಳಗ್ಗೆ ತೋಟಕ್ಕೆ ಬಂದುಬಿಟ್ಟರೆ ಯಾವ ನೋವುಗಳು ಇರುವುದಿಲ್ಲ. ಉಲ್ಲಾಸದಿಂದ ಕೆಲಸಮಾಡುತ್ತೇನೆ. ನಾ ಮಾಡುವ ಕೃಷಿ ಕೆಲಸವೇ ನನ್ನನ್ನು ಆರೋಗ್ಯವಾಗಿಟ್ಟಿದೆ ಎನ್ನುತ್ತಾರೆ ರಾಮಶೆಟ್ಟರು.
ಬೆಳಗ್ಗೆ 8 ಗಂಟೆ ಆಗುವುದನ್ನೆ ಕಾಯುತ್ತಿರುತ್ತೇನೆ.ವಿಜಯನಗರದ ಮನೆಯಿಂದ ತಿಂಡಿತಿಂದು ಬುತ್ತಿ ಕಟ್ಟಿಸಿಕೊಂಡು ಟಿವಿಎಸ್ ಎಕ್ಸ್ಎಲ್ ಮೋಟಾರ್ನಲ್ಲಿ ಜಮೀನಿಗೆ ಬಂದುಬಿಟ್ಟರೆ ಕತ್ತಲಾಗುವವರೆಗೂ ಅದೂಇದು ಕೆಲಸ ಮಾಡುತ್ತಿರುತ್ತೇನೆ.
ನನ್ನ ಹೆಂಡತಿ ಪುಣ್ಯಕ್ಷೇತ್ರಗಳಿಗೆ ಹೋಗೋಣ ಬನ್ನೆ ಎಂದು ಕರೆಯುತ್ತಾಳೆ. ಆದರೆ ನನಗೆ ಇದೆ ಪುಣ್ಯಕ್ಷೇತ್ರವಾಗಿದೆ.ನಾನು ಎಲ್ಲಿಗೂ ಹೋಗುವುದಿಲ್ಲ.ಪ್ರಕೃತಿಯ ನಡುವೆ ಆಯಾಗಿ ಇರುವುದೆ ನನಗೆ ತುಂಬಾ ಇಷ್ಟ. ತೋಟದಲ್ಲಿ ಇರಲು ಯಾವೊಬ್ಬ ಆಳುಕಾಳು ಇರಿಸಿಕೊಂಡಿಲ್ಲ.ಗಿಡ ನೆಡುವಾಗ ಗುಂಡಿ ತೆಗೆಯಲು ಮಾತ್ರ ಆಳು ಕರೆದುಕೊಂಡಿದ್ದೆ.ಉಳಿದ ಎಲ್ಲಾ ಕೆಲಸಗಳನ್ನು ತಾವೇ ವಮಾಡುವುದಾಗಿ ಹೇಳುತ್ತಾರೆ.
ಪಕ್ಕದಲ್ಲಿ ಇನ್ನೂ ಎರಡು ಎಕರೆ ಜಮೀನು ಖರಿದಿಸಿದ್ದು ಅದನ್ನು ನೈಸಗರ್ಿಕ ತೋಟಮಾಡಲು ಮುಂದಾಗಿರುವುದಾಗಿ ರಾಮಶೆಟ್ಟರು ಹೇಳಿದಾಗ ಇಳಿವಯಸ್ಸಿನಲ್ಲೂ ಬತ್ತದ ಅವರ ಉತ್ಸಾಹಕಂಡು ನಮಗೆ ಅಚ್ಚರಿಯಾಯಿತು. ಮುಂದೆ ಜಾಗತೀಕ ಅರ್ಥವ್ಯವಸ್ಥೆಯಲ್ಲಿ ಬದಲಾವಣೆ ಆಗಿ ಮಕ್ಕಳು ನೌಕರಿ ಕಳೆದುಕೊಂಡರೆ ಬಂದು ಕೃಷಿ ಮಾಡಿಕೊಂಡು ಆರಾಮವಾಗಿ ಇರಲಿ ಎಂಬ ಉದ್ದೇಶದಿಂದ ತೋಟ ಮಾಡುತ್ತಿದ್ದೇನೆ.ಎರಡು ಎಕರೆ ಕೃಷಿ ಮಾಡಿದರೆ ಒಂದು ಸಂಸಾರ ಇಬ್ಬರು ಮಕ್ಕಳು ಆರಾಮವಾಗಿ ಜೀವನ ನಡೆಸಬಹುದು ಎನ್ನುವುದು ಸ್ವಂತ ಅನುಭವದಿಂದ ಕಂಡುಕೊಂಡಿರುವ ಸತ್ಯ ಎನ್ನುತ್ತಾರೆ.
ಬೆಳೆ ವೈವಿಧ್ಯ : ತೋಟದಲ್ಲಿ ದೀರ್ಘಕಾಲದಲ್ಲಿ ಆದಾಯ ತರಬಲ್ಲ ತೆಂಗು,ಅಡಿಕೆ,ಸಪೋಟ,ಸೀಬೆ,ಹೆಬ್ಬೇವು,ತೇಗ,ಸಿಲ್ವರ್ ಮತ್ತಿತರರ ಮರ ಗಿಡಗಳು ಇವೆ. ಇದರ ಜೊತೆಯಲ್ಲಿ ಪ್ರತ್ಯೇಕವಾಗಿ ಎರಡು ಗುಂಟೆಯಲ್ಲಿ ಬತ್ತ,ರಾಗಿ,ಜೋಳ,ನವಣೆ,ಉದ್ದು,ಹಸರು,ತೋಗರಿ ಮತ್ತಿತರ ದವಸಧಾನ್ಯ ಬೆಳೆದುಕೊಳ್ಳುತ್ತೇನೆ. ಅಲ್ಲಲ್ಲಿ ಹಾಗಲ,ಕುಂಬಳ,ಹೀರೆಕಾಯಿ,ಬದನೆ,ಸೊಪ್ಪು ತರಕಾರಿ ಬೆಳೆಯುತ್ತೇನೆ.ಮೂರು ವರ್ಷದಿಂದ ಮನೆಗೆ ಬೇಕಾದ ಅಗತ್ಯ ಆಹಾರ ವಸ್ತುಗಳನ್ನು ದುಡ್ಡುಕೊಟ್ಟು ಕೊಂಡಿಲ್ಲ. ನೈಸಗರ್ಿಕವಾಗಿ ಬೆಳೆದ ಪದಾರ್ಥಗಳನ್ನು ಬಳಸುತ್ತಿದ್ದೇವೆ ಎನ್ನುತ್ತಾರೆ. ಆ ಮಟ್ಟಿಗೆ ರಾಮಶೆಟ್ಟಿ ಕುಟುಂಬ ಆಹಾರ ಸ್ವಾವಲಂಬನೆಯನ್ನು ಸಾಧಿಸಿದೆ.
ಏಲಕ್ಕಿ ಬಾಳೆ,ಪಚ್ಚ ಬಾಳೆಯನ್ನು ಬೆಳೆಯಲಾಗಿದ್ದು, ಮನೆಯ ಸುತ್ತಮತ್ತಲಿನ ಜನರೇ ಹಣ್ಣುಗಳ ರುಚಿಗೆ ಮಾಡುಹೋಗಿ ಖರೀದಿ ಮಾಡುತ್ತಾರೆ ಎಂದು ಅವರು ಹೇಳುವಾಗ ಏನನ್ನೂ ಬೆಳೆಯದೆ ಮಾರುಕಟ್ಟೆಯ ಬಗ್ಗೆ ಕಾಡುಹರಟೆ ಹೊಡೆಯುತ್ತಾ ಕಾಲನೂಕುವ ರೈತರು ನಮಗೆ ನೆನಪಾದರು. ರೈತನೊಬ್ಬ ಬುದ್ಧಿವಂತನಾದರೆ ಹೇಗೆ ಕುಳಿತಲ್ಲೇ ಮಾರುಕಟ್ಟೆ ಸೃಷ್ಠಸಿಕೊಳ್ಳಬಹುದು ಎನ್ನುವುದಕ್ಕೆ ಇವರು ಸಾಕ್ಷಿಯಾಗಿದ್ದಾರೆ.
ಮರೆಯುವ ಮುನ್ನ : ರಾಮಶೆಟ್ಟಿ ಅವರ ಸಂತೃಪ್ತ ನಿವೃತ್ತಿ ಜೀವನ ಕಂಡಾಗ ಪತ್ರಕರ್ತ,ಸಾಹಿತಿ ಪಿ.ಲಂಕೇಶ್ ಅವರ "ನಿವೃತ್ತರು" ಎಂಬ ಕತೆ ನನಗೆ ನೆನಪಾಯಿತು. ಮನುಷ್ಯನ ಸಣ್ಣತನ,ನಿರ್ಲಜ್ಯ ನಡತೆಗಳನ್ನು ಹೇಳುತ್ತಲೇ ಇಬ್ಬರು ನಿವೃತ್ತ ಅಧಿಕಾರಿಗಳ ಸಣ್ಣತನವನ್ನು ಬಯಲಿಗೆಳೆಯುವ ಅಸಾಧಾರಣ ಕತೆ ಅದು. ಸುಮ್ಮನೆ ಕಾಲಹರಣ ಮಾಡುವುದು ಎಂತಹ ಅನಾಹುತಕ್ಕೆ ಎಡೆ ಮಾಡಿಕೊಡುತ್ತದೆ ಎನ್ನುವುದನ್ನು ತೋರಿಸುತ್ತದೆ.
ಒಂದೇ ಕಚೇರಿಯಲ್ಲಿ ಸಹೋದ್ಯೋಗಿಯಾಗಿದ್ದ ಪ್ರಹ್ಲಾದರಾಯ ಮತ್ತು ನರಸಿಂಗರಾಯ ನಿವೃತ್ತರಾದ ನಂತರ ಸ್ನೇಹಿತರಾಗಲು ಯತ್ನಿಸಿ ಸೋಲುತ್ತಾರೆ.ಒಬ್ಬನಲ್ಲಿ ಅಧಿಕಾರವಿಲ್ಲ ಮತ್ತೊಬ್ಬನಲ್ಲಿ ವಿಧೇಯತೆ ಇಲ್ಲ. ಮನುಷ್ಯ ಒಬ್ಬನೇ ಇದ್ದಾಗ ಕಣ್ಣು ತೆರೆದಿರುತ್ತಾನೆ ಎಂಬ ಲಂಕೇಶ್ ಮಾತು ರಾಮಶೆಟ್ಟರ ಬದುಕನ್ನು ಕಂಡಾಗ ಸತ್ಯ ಅನಿಸಿತು.
ತುಂಡು ಭೂಮಿ,ಕಡಿಮೆ ವೆಚ್ಚ,ಮಾನವ ಶ್ರಮವೂ ಕಡಿಮೆ ಒಂದು ನಾಟಿ ಹಸು ಇದ್ದರೆ ನಿವೃತ್ತರಾದ ನಂತರವೂ ಎಷ್ಟೊಂದು ಉಲ್ಲಾಸದಾಯಕವಾಗಿರಬಹುದು ಎನ್ನುವುದಕ್ಕೆ ರಾಮಶೆಟ್ಟರ ಜೀವನ ಶೈಲಿ ಮಾದರಿಯಾಗುವಂತಿದೆ. ಸಣ್ಣತನವಿಲ್ಲದೆ,ಸ್ವಾರ್ಥವಿಲ್ಲದೆ,ಪಕ್ಷಪಾತವಿಲ್ಲದೆ ಹೂ ಹಣ್ಣು ಬಿಡುವ, ನೆರಳು ನೀಡುವ,ಹೂ ಅರಳಿಸುವ ಜೀವನ ನಮ್ಮದೂ ಆದರೆ ಬದುಕು ಎಷ್ಟು ಸುಂದರ ಅಲ್ವಾ. ಹೆಚ್ಚಿನ ಮಾಹಿತಿಗೆ ರಾಮಶೆಟ್ಟಿ 9886742414 ಸಂಪಕರ್ಿಸಿ.






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ