ಬೇಸಾಯದ ಮಿನುಗುತಾರೆಗಳ ಹುಡುಕುತ್ತಾ ಭರವಸೆಗಳೊಂದಿಗೆ ಪಯಣ# ಕೃಷಿಯಿಂದಲೇ ಬದುಕು ಕಟ್ಟಿಕೊಂಡವರ ಯಶೋಗಾಥೆ ಹೊಸ ವರ್ಷ ಮುನ್ನುಡಿ
ಕೃಷಿಯ ಯಶೋಗಾಥೆಗಳ ಜೊತೆಗೆ ಬೇಸಾಯದ ಬವಣೆಗಳನ್ನು ತಿಳಿಸಬೇಕು.ಕೃಷಿಯಿಂದ ನಷ್ಟ ಅನುಭವಿಸಿ ಮಣ್ಣಿನಿಂದ ವಿಮುಖರಾದವರ ಬಗ್ಗೆಯೂ ಬರೆಯಬೇಕು ಎಂದು ಹಲವರು ಹೇಳುತ್ತಾರೆ. ಹೌದು.ಯಾವುದೇ ಗೆಲುವು,ಯಶಸ್ಸು ಸುಲಭವಾಗಿ ಸಿಗುವುದಿಲ್ಲ.ಅದಕ್ಕಾಗಿ ಸಾಕಷ್ಟು ಬೆವರು ಹರಿಸಬೇಕಾಗುತ್ತದೆ.ಹಗಲು ರಾತ್ರಿಗಳೆನ್ನದೆ ಕುಳಿತಲ್ಲಿ ನಿಂತಲ್ಲಿ ಧ್ಯಾನಿಸಬೇಕಾಗುತ್ತದೆ.ಕೃಷಿಯೂ ಕೂಡ ಹಾಗೇನೆ. ಇಲ್ಲಿ ಶ್ರದ್ಧೆ,ಪ್ರಮಾಣಿಕವಾಗಿ ಬೆವರ ಬಸಿದು ದುಡಿದವರು ಬಂಗಾರದ ಮನುಷ್ಯರಾಗಿದ್ದಾರೆ.ನಾಡಿಗೆ ಮಾದರಿಯಾಗಿದ್ದಾರೆ.ಇಂತಹವರನ್ನು ಮಲೆನಾಡಿನಿಂದ ಹಿಡಿದು ಬಿಸಿಲ ಬೇಗೆಯ ಉತ್ತರ ಕನರ್ಾಟಕ ದವರೆಗೂ ಕಾಣಬಹುದು.
ಸಿಕ್ಕಷ್ಟು ಪ್ರಾಕೃತಿಕ ಸಂಪನ್ಮೂಲಗಳನ್ನು ಬಳಸಿಕೊಂಡು,ಮಳೆಯ ನೀರನ್ನೇ ಆವಲಂಭಿಸಿ,ಇರುವುದರಲ್ಲೇ ಸಾಧನೆಮಾಡಿದ ಬಂಗಾರದ ಮನುಷ್ಯರ ಬಗ್ಗೆ ಇದೆ ಅಂಕಣದಲ್ಲಿ ಬರೆದಿದ್ದೇನೆ.ಕೋಲಾರ ಜಿಲ್ಲೆಯ ನೆನಮನಹಳ್ಳಿಯ ಚಂದ್ರಶೇಖರ್,ಬಿಜಾಪುರದ ನಿಂಬರಗಿ ಅವರಂತಹ ಸಾವಿರಾರು ರೈತರು ಹನಿ ನೀರಿನಲ್ಲಿ ಮಳೆಯಾಶ್ರಯದಲ್ಲಿ ತೋಟಕಟ್ಟಿರುವ ಮಾದರಿಗಳು ನಮ್ಮ ಕಣ್ಣೆದುರಿಗಿವೆ. ಮತ್ತೊದು ಕಡೆ ರೈತರ ಆತ್ಮಹತ್ಯೆಯ ಪ್ರಕರಣಗಳೂ ಇವೆ.
ರೈತ ಸಂಕಷ್ಟದಲ್ಲಿದ್ದಾನೆ.ನಿಜ.ಹಾಗಂತ ಬದುಕಲು ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿಯಂತೂ ನಿಮರ್ಾಣವಾಗಿಲ್ಲ ಎನ್ನುವುದೂ ಸತ್ಯ. ಕೃಷಿಯ ಬಗ್ಗೆ ಸರಿಯಾದ ತಿಳಿವಳಿಕೆ,ಪೂರ್ವ ಸಿದ್ಧತೆ, ದೂರಾಲೋಚನೆ, ನೆಲದ ಮೇಲಿನ ನಂಬಿಕೆ ಮತ್ತು ದುಡಿಮೆಯಿಂದ ಬೆವರ ಬಸಿದವರು ಮಾತ್ರ ಯಶಸ್ವಿ ರೈತರಾಗಿದ್ದಾರೆ.ಅಂತಹವರು ಕಡಿಮೆ ಸಂಖ್ಯೆಯಲ್ಲಿರಬಹುದು ಆದರೆ ಅವರೇ ನಮಗೆ ಮಾದರಿ ಮತ್ತು ಅಂತಹ ಯಶೋಗಾಥೆಗಳೆ ರೈತರಿಗೆ ಪ್ರೇರಣೆ ಮತ್ತು ಸ್ಫೂತರ್ಿ. ಅದಕ್ಕಾಗಿಯೇ ನಾವು ಗೆಲುವಿನ ಮಾದರಿಗಳನ್ನೆ ಹುಡುಕಿಕೊಂಡು ಹೋಗಬೇಕು.
ಕೃಷಿಯ ಬಗ್ಗೆ ನಿರಾಸೆಯಿಂದ ಮಾತನಾಡುವವರ ನಡುವೆಯೂ ಕೃಷಿಯಿಂದ ಖುಷಿ,ನೆಮ್ಮದಿ ಕಂಡ ನಕ್ಷತ್ರಗಳು ಇವೆ. ಅಂತಹ ಮಿನುಗುತಾರೆಗಳನ್ನು ಕಾಣುವ ಕಣ್ಣು ನಮ್ಮದಾಗಿರಬೇಕು. 2018 ರ ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಮೊದಲ ಸೂರ್ಯನ ಕಿರಣಗಳನ್ನು ಸ್ಪಶರ್ಿಸುತ್ತಿರುವ ಕನಸುಗಾರರಿಗೆ ಇಂತಹ ಸ್ಫೂತರ್ಿದಾಯಕ ನಕ್ಷತ್ರಗಳ ಬಗ್ಗೆ ಒಂದಷ್ಟು ಮಾಹಿತಿ.
ಮೈಸೂರಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಓದಿ ಹಲವು ವರ್ಷ ಥೈಲ್ಯಾಂಡ್,ಮಲೇಶಿಯಾ,ಬ್ಯಾಂಕಾಕ್ನಲ್ಲಿ ಉದ್ಯೋಗ ಮಾಡಿ ತಮಗೆ ಬೋನಸ್ ಕೊಡಲಿಲ್ಲ ಎಂಬ ಕಾರಣಕ್ಕೆ ಉದ್ಯೋಗವನ್ನೆ ತೊರೆದು ಸ್ವಂತ ಊರಾದ ಕೊಪ್ಪಳ ಜಿಲ್ಲೆಯ ಬಿಕನಹಳ್ಳಿಯಲ್ಲಿ ಬೇಸಾಯ ಮಾಡುತ್ತಿರುವ ಜಯಂತ್ ಅಪರೂಪದ ಕೃಷಿಕ. ಗಾಂಧಿ ವಿಚಾರಧಾರೆಯಿಂದ ಪ್ರೇರಣೆ ಪಡೆದಿರುವ ಜಯಂತ ಜಪಾನಿನ ನೈಸಗರ್ಿಕ ಕೃಷಿಕ ಮಸನೊಬು ಪುಕೊವಕ ಅವರಿಂದ ಸ್ಫೂತರ್ಿಪಡೆದು ಪತ್ನಿ ಜಾನಿಕಿ ಅವರೊಂದಿಗೆ ಕೃಷಿಯಿಂದಲೇ ನೆಮ್ಮದಿಯಾಗಿ,ಆರೋಗ್ಯವಂತರಾಗಿ ಬದುಕು ಕಟ್ಟಿಕೊಂಡಿದ್ದಾರೆ.
ಬೆಂಗಳೂರಿನಲ್ಲೆ ಬೆಳೆದು ಓದಿ ಕನಕಪುರದ ಹಾರೋಹಳ್ಳಿ ಬಳಿ ಹೊಸಗಬ್ಬಾಡಿ ಹಳ್ಳಿಯ ಹೊರವಲಯದಲ್ಲಿ ಹನ್ನೊಂದು ಎಕರೆ ಜಮೀನಿನ ಒಡತಿಯಾಗಿರುವ ಪ್ರತಿಭಾ ನಾಗವಾರ ನಾಡಿನ ಹೆಮ್ಮೆಯ ಕೃಷಿಕ ಮಹಿಳೆ. ಹತ್ತಾರು ವರ್ಷ ಅಮೇರಿಕಾದ ಸಾಫ್ಟವೇರ್ ಕಂಪನಿಯಲ್ಲಿ ದುಡಿದು ಅನುಭವಿದ್ದ ಪ್ರತಿಭಾ ನಾಗವಾರ ಹಳ್ಳಿಗೆ ಮರಳಿ ಸ್ವತಃ ನೇಗಿಲು ಹಿಡಿದದ್ದು ದೊಡ್ಡ ಸಂಗತಿ.ಹೀಗೆ ನಾಡಿನ ತುಂಬಾ ಕೃಷಿಯನ್ನು ಹೊಸ ದೃಷ್ಠಿಕೋನದಿಂದ ನೋಡುವ, ಬೇಸಾಯದಿಂದಲೇ ಬದುಕು ಕಟ್ಟಿಕೊಂಡ ಸಾವಿರಾರು ತರುಣ-ತರುಣಿಯರು ಇದ್ದಾರೆ.
ಕೃಷಿಯಿಂದ ನಷ್ಟ ಅನುಭವಿಸಿ ಆಥರ್ಿಕವಾಗಿ, ದೈಹಿಕವಾಗಿ ಕುಗ್ಗಿಹೋಗಿ ಅನೇಕ ಕಾಯಿಲೆಗಳಿಂದ ಬಳಲುತ್ತಾ ಸಾವಿನ ನಿರೀಕ್ಷೆಮಾಡುತ್ತಾ ಹಾಸಿಗೆ ಹಿಡಿದಿದ್ದ ವ್ಯಕ್ತಿ ಸಣ್ಣ ಪ್ರೇರಣೆಯಿಂದ ದೇಶವಿದೇಶಗಳೆ ಮೆಚ್ಚುವ ಮಾದರಿ ರೈತನಾಗಿ ಬೆಳೆದ ಡಾ.ದೇವಂಗಿ ಪ್ರಫುಲ್ಲಚಂದ್ರ ಅವರೆ ನಮಗೆ ಸ್ಫೂತರ್ಿ ಮತ್ತು ಆದರ್ಶ. ಡಾ.ಪ್ರಫುಲ್ಲ ಚಂದ್ರ ಅವರ ಜೀವನಗಾಥೆಯ ಕೆಲವು ಮರೆಯಲಾರದ ಘಟನೆಗಳು ಮತ್ತು ರೈತರಿಗೆ ಅವರು ನೀಡಿದ ಒಂದಷ್ಟು ಸಲಹೆಗಳು ಈ ವಾರದ ಅಂಕಣದ ಹೂರಣ.
ಮರೆಯಲಾರದ ಘಟನೆಗಳು : ಅದು 1962. ಕೃಷಿಯಿಂದ ಸಾಕಷ್ಟು ನಷ್ಟ ಅನುಭವಿಸಿ ಕುಗ್ಗಿಹೋಗಿ ಮಾನಸಿಕ ಕಾಯಿಲೆಯಿಂದ ಬಳಲುತಿದ್ದ ಡಾ.ದೇವಂಗಿ ಪ್ರಫುಲ್ಲಚಂದ್ರ ಅವರು ತಮಿಳುನಾಡಿನಲ್ಲಿರುವ ಪ್ರಸಿದ್ಧ ವೆಲ್ಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗುತ್ತಾರೆ. ತಮ್ಮ ಪಕ್ಕೆ ಹಾಸಿಗೆಯಿಂದ ಒಬ್ಬೊಬ್ಬರೇ ಮೃತ್ಯುವಿನ ದವಡೆಗೆ ಸಿಲುಕಿ ಹಾಸಿಗೆ ಖಾಲಿ ಮಾಡುತ್ತಿರುವಾಗ ಸಾವಿನ ಅಂಚಿನಲ್ಲಿರುವ ತಾವೂ ಗಡ್ಡ ಬೋಳಿಸುವುದು ಯಾಕೆ ಅಂತ ಗಡ್ಡ ಬಿಟ್ಟಿರುತ್ತಾರೆ.
ಹಾಗತಾನೇ ಇಂಗ್ಲೇಡ್ನಿಂದ ವ್ಯದ್ಯಕೀಯ ಪದವಿ ಪಡೆದು ಆಸ್ಪತ್ರೆಗೆ ಬಂದಿದ್ದ ಡಾ.ಸುಕುಮಾರ ಅವರು ಡಾ.ಪ್ರಫುಲ್ಲಚಂದ್ರ ಅವರನ್ನು ನೋಡಿ "ಮೊದಲು ಗಡ್ಡ ಬೋಳಿಸಿಕೊಂಡು ಲಕ್ಷಣವಾಗಿರುವುದನ್ನು ಕಲಿಯಿರಿ...ನಿಮಗೇನಾಗಿದೆ" ಎಂದು ಹೇಳುತ್ತಾರೆ. ಗಡ್ಡಬೋಳಿಸಿದ ನಂತರ ಮುಖ ಲವಲವಿಕೆಯಿಂದ ಇರುವುದು ಕಂಡಿತು.ತಾನೂ ಹಂತ ಹಂತವಾಗಿ ಮೃತ್ಯುಮುಖದಿಂದ ಹಿಂದೆಬಂದೆ ಬದುಕುವ ಛಲ ಹುಟ್ಟಿತು ಎಂದು ಒಂದೆಡೆ ಬರೆದುಕೊಂಡಿದ್ದಾರೆ.
ಗೆಳೆಯರು ಕಲಿಸಿದ ಜೀವನ ಪಾಠ,ಸುತ್ತಮುತ್ತ ನಡೆಯುತ್ತಿರುವ ಎಷ್ಟೋ ಘಟನೆಗಳು ಡಾ.ಪ್ರಫುಲ್ಲಚಂದ್ರ ಅವರ ಮೇಲೆ ಪ್ರಭಾವ ಬೀರಿವೆ. ಅದರಿಂದ ಕಲಿತ ಪಾಠಗಳನ್ನು ಅವರು ತಮ್ಮ ಕೃಷಿಯಲ್ಲಿ ಅಳವಡಿಸಿಕೊಂಡಿದ್ದಾರೆ.ತಮ್ಮ ಜಮೀನನ್ನು ಆಸಕ್ತ ರೈತರ ಕಲಿಕಾ ಕೇಂದ್ರವಾಗಿ ರೂಪಿಸಿದ್ದಾರೆ.
ಎರಡು ದಶಕಗಳಿಗೂ ಹೆಚ್ಚು ಕಾಲ ಕಬ್ಬಿನ ಬೇಸಾಯದಲ್ಲಿ ಕೂಳೆ ಬೆಳೆ ತೆಗೆಯುವ ಮೂಲಕ ಅಂತರಾಷ್ಟ್ರೀಯ ಮನ್ನಣೆಗೆ ಭಾಜನರಾದ ಡಾ.ದೇವಂಗಿ ಪ್ರಫುಲ್ಲಚಂದ್ರ ಅವರು ಬತ್ತ,ತೆಂಗು,ಅಡಿಕೆ,ಸ್ಲರಿ ಬೀಡಿಂಗ್, ಟ್ರ್ಯಾಕ್ಟರ್ನಲ್ಲಿ ಹತ್ತಾರು ಕೆಲಸ ಮಾಡಿ ಕೃಷಿಯ ಹೊಸ ಹೊಸ ಸಾಧ್ಯತೆಗಳನ್ನು ತೆರೆದು ತೋರಿಸಿದರು.
ನಾನು ಮಾಡಿದ ತಪ್ಪುಗಳನ್ನು ನೀವು ಮಾಡದಿರಿ ಎನ್ನುವ ಡಾ.ಪ್ರಫುಲ್ಲಚಂದ್ರ ನಮ್ಮ ಉದ್ಧಾರ ನಮ್ಮಿಂದಲೇ ಮಾತ್ರ ಸಾಧ್ಯ.ಆಲಸ್ಯ,ನಮ್ಮ ತಪ್ಪು ಹೆಜ್ಜೆಗಳು,ನಮ್ಮಲಿಯ ಒಡಕು ಮತ್ತು ನಮ್ಮ ಅಶಿಸ್ತು ನಮ್ಮನ್ನು ಕೆಳಗೆ ತಳುತ್ತಿದೆ, ಬಡತನಕ್ಕೆ ನೂಕುತ್ತಿದೆ.ಮುಂದಿನ ಇಪ್ಪತ್ತು ಮೂವತ್ತು ವರ್ಷಗಳ ಯೋಜನೆ,ದೂರದಶರ್ಿತ್ವ ಇದ್ದರೆ ನಿಮ್ಮ ಜಮೀನನ್ನು ನೀವೇ ಬಂಗಾರವಾಗಿಸಬಹುದು ಎನ್ನುತ್ತಾರೆ.
ಬೆಳೆದ ಬೆಳೆಗಳನ್ನು ದನಕರುಗಳಿಂದ ರಕ್ಷಿಸಲು ಮೊದಲು ಕಟ್ಟಿ ಸಾಕುವದನ್ನು ಕಲಿಯಬೇಕು.ನೀವು ಒಂದು ಸಣ್ಣ ಗಿಡ ನೆಟ್ಟು ಕಾಪಾಡಿದರೆ ಅದು ಆನೆ ಕಟ್ಟುವ ಮರವಾಗುತ್ತದೆ.ಅಪ್ಪ ಅಮ್ಮ ತಿಳಿಯದೆ ಸಸಿ ತರಬೇಡಿ.ಕೃಷಿಯಲ್ಲಿ ದಿನನಿತ್ಯ ಸಣ್ಣತಪ್ಪುಗಳನ್ನು ಮಾಡುತ್ತಿದ್ದರೆ ನಮ್ಮ ಏಳಿಗೆ ಹಾಳು ಮಾಡುವುದರ ಜೊತೆಯಲ್ಲಿ ಮುಂದಿನ ಪೀಳಿಗೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತವೆ.ಒಳ್ಳೆಯ ಚಟಗಳಿಗೆ ಗಂಟು ಬಿದ್ದರೆ ಕೆಟ್ಟ ಚಟಗಳು ದೂರವಾಗುತ್ತವೆ.ಪ್ರಕೃತಿಗೆ ಹೊಂದಿಕೊಂಡು ಜೀವನ ನಡೆಸಿದರೆ ಅನಾಹುತಗಳನ್ನು ತಪ್ಪಿಸಲು ಸಾಧ್ಯ.ಜಮೀನಿನ ಪ್ರತಿ ಜಾಗವನ್ನು ಗಮನಿಸಿ ಬೆಲೆಕೊಡಿ.ಮಳೆಯು ಬಂದಾಗ ನೀರು ಹರಿಯುವುದನ್ನು,ನಿಂತಿರುವುದನ್ನು ಗಮನಿಸಿದರೆ ನಮ್ಮ ಕೃಷಿಗೆ ನೀರು ಕಟ್ಟುವ ವಿಧಾನ ಅಲ್ಲೆ ಕಾಣುತ್ತದೆ. ಬೇಲಿಗೆ ಬೆಲೆ ಕೊಟ್ಟರೆ ದೊಡ್ಡ ಆಸ್ತಿ ರೈತನ ಕೈಯಲ್ಲಿರುತ್ತದೆ.ದೀರ್ಘ ಕಾಲದ ಮರಗಿಡಗಳು ಮುಂದಿನ ಪೀಳಿಗೆಗೆ ದೊಡ್ಡ ಆಸ್ತಿ. ರೈತನಾದವನು ಜಮೀನಿನಲ್ಲೆ ಮನೆ ಮಾಡಿದರೆ ಅಪಾರ ಲಾಭ,ಶ್ರಮ,ಸಮಯದ ಉಳಿತಾಯ.
ಹೀಗೆ ನೂರಾರು ಉಪಯುಕ್ತ ಮಾಹಿತಿಗಳನ್ನು ನೀಡುವ ಡಾ.ದೇವಂಗಿ ಪ್ರಫುಲ್ಲಚಂದ್ರ ರೈತ ಹೇಗೆ ಚಿಂತಿಸಬೇಕು,ಚಿಂತಿಸಿದ್ದನ್ನು ಅನುಷ್ಠಾನ ಮಾಡಬೇಕು ಎನ್ನುವುದನ್ನು ಹೇಳುತ್ತಾ ಹೋಗುತ್ತಾರೆ. ಭಗವಾನ್ ಎಸ್.ದತ್ತಾತ್ರಿ ಅವರು ಬರೆದಿರುವ ಡಾ.ಡಿ.ಆರ್.ಪ್ರಫುಲ್ಲ ಚಂದ್ರರ "ಸಮಗ್ರ ಸಾಧನೆ" ಎಂಬ ಪುಸ್ತಕವನ್ನು ಓದುತ್ತಿದ್ದಾಗ ನನ್ನಲ್ಲಿ ಮೂಡಿದ ಚಿಂತನೆಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಕೃಷಿಯಲ್ಲಿ ಹಣ,ಶ್ರಮ,ಸಮಯ ಎಲ್ಲವನ್ನೂ ಕನಿಷ್ಠವಾಗಿ ಬಳಸಿಕೊಂಡು ಹೇಗೆ ಬೇಸಾಯ ಮಾಡಬಹುದು ಎನ್ನುವುದಕ್ಕೆ ಡಾ.ದೇವಂಗಿ ಪ್ರಫುಲ್ಲಚಂದ್ರ ಅವರ "ಕೃಷಿ ಸಂಪದ" ಮಾದರಿಯಾಗಿದೆ. ತಮ್ಮ ಇಬ್ಬರೂ ಮಕ್ಕಳನ್ನು ಕೃಷಿ ಪದವಿಧರರಾಗಿಸಿ ಕೃಷಿಕರಾಗಿಯೆ ಮಾಡಿದ್ದಾರೆ. ಇಂತಹವರ ಬದುಕು ನಮಗೆ ಸ್ಪೂತರ್ಿ ಮತ್ತು ಪ್ರೇರಣೆ.
ಕೃಷಿಕರಿಗೆ ಯುಗಾದಿ ಮತ್ತು ಮುಂಗಾರು ಆರಂಭವೇ ಹೊಸ ವರ್ಷ.ಆದರೂ 2018 ರ ಹೊಸ್ತಿಲಲ್ಲಿ ನಿಂತಿರುವ ಇಂದು ನಾವು ಒಂದಷ್ಟು ನಿಧರ್ಾರಗಳನ್ನು ಮಾಡೋಣ. ಹೆಚ್ಚು ಸಮಯವನ್ನು ಕೃಷಿಗೆ ನೀಡುವುದು. ತಿಂಗಳಿಗೆ ಒಂದಾದರೂ ಸಾಧಕ ರೈತನ ತೋಟಗಳಿಗೆ ಭೇಟಿ ನೀಡಿ ಅನುಭವಗಳನ್ನು ಕೇಳಿಸಿಕೊಳ್ಳುವುದು.ಪ್ರತಿ ವರ್ಷ ಜಮೀನಿನಲ್ಲಿ ಹಣ್ಣಿನ ಮರಗಿಡಗಳನ್ನು ನೆಟ್ಟು ಪೋಷಣೆ ಮಾಡುವುದು.ಮಳೆ ನೀರು ಕೊಯ್ಲು.ಇಂತಹವೇ ಸಣ್ಣಪುಟ್ಟ ನಿಧರ್ಾರಗಳು ನಿಮ್ಮನ್ನು ಬಂಗಾರದ ಮನುಷ್ಯರಾಗಿಸಲಿ.ನಿಮ್ಮೆಲ್ಲರಿಗೂ ಹೊಸ ವರ್ಷದ ಮೊದಲ ದಿನದ ಶುಭಕಾಮನೆಗಳು.