vaddagere.bloogspot.com

ಸೋಮವಾರ, ಡಿಸೆಂಬರ್ 4, 2017

 ಸ್ವಾವಲಂಭಿ"ನೂರ್ಶತ ಸಾವಯವ ಕೃಷಿಕ"ನ ಯಶೋಗಾಥೆ
ಸಾಲಶೂಲಕ್ಕೆ ಸಿಲುಕಿದರೂ ಧೃತಿಗೆಡದ ಸಾಹಸಿ,ಮಳೆಯಾಶ್ರಯದ ಭರಪೂರ ಬೆಳೆ
ಪರಿಸ್ಥಿತಿಯ ಅನಿವಾರ್ಯತೆಯಿಂದ ಬಹುಬಗೆಯ ಸಂಕಷ್ಟಗಳಿಗೆ ಸಿಲುಕಿದರೂ ಎದೆಗುಂದದೆ ಕೃಷಿಯನ್ನೇ ಅಪ್ಪಿಕೊಂಡ ಸ್ವಾಭಿಮಾನಿ, ಸ್ವಾವಲಂಭಿ ರೈತ ಮಹಾದೇವಸ್ವಾಮಿ. ಚಾಮರಾಜನಗರದಿಂದ ನಾಲ್ಕು ಕಿ.ಮೀ. ಅಂತರದಲ್ಲಿರುವ ದೊಡ್ಡರಾಯಪೇಟೆಯ ಹೆಮ್ಮಯ ಸಾವಯವ ಕೃಷಿಕ. "ನೂರ್ಶತ ಸಾವಯವ ಕೃಷಿಕ" (ನೂರಕ್ಕೆ ನೂರು) ಎಂದು ತಮ್ಮನ್ನು ತಾವೇ ಕರೆದುಕೊಳ್ಳುವ ಮಹಾದೇವಸ್ವಾಮಿ ಹಾಗಂತ ವಿಸಿಟಿಂಗ್ ಕಾರ್ಡ್ ಕೂಡ ಮಾಡಿಸಿಕೊಂಡಿದ್ದಾರೆ.ಈಗ ಅವರಿಗೆ 53 ವರ್ಷ.ಕೃಷಿ ಮತ್ತು ಅವಿಭಕ್ತಕುಟುಂಬ ನಿರ್ವಹಣೆಯಲ್ಲಿ ಮುಳುಗಿಹೋಗಿರುವ ಅವಿವಾಹಿತ ಪದವಿಧರ ರೈತ.
ಇವರು ಸಾವಯವ ಪದ್ಧತಿಯಲ್ಲಿ ಬೆಳೆದ ಬೆಲ್ಲ, ಅರಿಶಿನ ಪುಡಿ,ದನಿಯಾ ಪುಡಿ,ತರಕಾರಿ,ಬೇಳೆಕಾಳುಗಳಿಗೆ ಸದಾ ಬೇಡಿಕೆ.ಕಳೆದ ನಾಲ್ಕು ವರ್ಷಗಳಿಂದ ಸಾವಯವ ಕೃಷಿಕರಾಗಿರುವ ಮಹಾದೇವಸ್ವಾಮಿ ಅದಕ್ಕೂ ಮುಂಚೆ ರಾಸಾಯನಿಕ ಪದ್ಧತಿಯಲ್ಲೆ ಕೃಷಿ ಮಾಡುತ್ತಿದರು. ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ ಖರೀದಿಯಿಂದ ಅತಿಯಾದ ಉತ್ಪಾದನಾ ವೆಚ್ಚ,ನೀರಿನ ಕೊರತೆ, ದರ ಕುಸಿತ,ಕೊಳವೆ ಬಾವಿಯ ವಿಫಲತೆ,ಪ್ರಕೃತಿಯ ವೈಪರಿತ್ಯ ಎಲ್ಲಾ ಸೇರಿ ಇವರನ್ನು ಸಾಲದ ಸುಳಿಗೆ ನೂಕಿದವು.ಸಾಲದ ಕುಣಿಕೆ ಉರುಳಾಗಿ ಬಿಗಿದರೂ ಮಹಾದೇವಸ್ವಾಮಿ ಧೈರ್ಯಗೆಡಲಿಲ್ಲ. ತಮಗಿರುವ ಹನ್ನೆರಡು ಎಕರೆ ಜಮೀನಿನಲ್ಲಿ ಅರ್ಧ ಎಕರೆ ಜಮೀನು ಮಾರಾಟ ಮಾಡಿ ಸಾಲದ ಸುಳಿಯಿಂದ ಹೊರಬಂದು ಈಗ ಸುಸ್ಥಿರ,ಸ್ವಾವಲಂಭಿ ಕೃಷಿಯ ಬಗ್ಗೆ ಪಾಠ ಹೇಳುತ್ತಾರೆ.
ತಮ್ಮ ಮೂರು ದಶಕದ ಕೃಷಿ ಅನುಭವದಿಂದ ಕಲಿತ ತಪ್ಪುಗಳನ್ನು ಸರಿಮಾಡಿಕೊಂಡು ಸಾವಯವ ಹಾದಿಯಲ್ಲಿ ದೃಢವಾದ ಹೆಜ್ಜೆಹಿಡುತ್ತಿದ್ದಾರೆ.ಮಳೆಯಾಶ್ರಯದ ಪಾರಂಪರಿಕ ಬೇಸಾಯ ಪದ್ಧತಿಗೆ ಮರಳಿರುವ ಮಹಾದೇವಸ್ವಾಮಿ ಅವರ ಜಮೀನಿನಲ್ಲಿ ಈಗ ಸಿರಿ ಧಾನನ್ಯಗಳು,ರಾಗಿ,ಹುಚ್ಚೆಳ್ಳು,ತೊಗರಿ,ಉದ್ದು,ಹೆಸರು ಸಮೃದ್ಧವಾಗಿ ಬೆಳೆದು ಕೊಯ್ಲಿಗೆ ಬಂದಿವೆ. ಒಂದೂವರೆ ಎಕರೆಯಲ್ಲಿ ರಾಸಾಯನಿಕ ಮುಕ್ತ ಕಬ್ಬು ಬೆಳೆದಿದ್ದು ಡಿಸೆಂಬರ್ ವೇಳೆಗೆ ಅವರದೆ ಆಲೆಮನೆಯಲ್ಲಿ ಸಾವಯವ ಬೆಲ್ಲ ಕೂಡ ದೊರೆಯುತ್ತದೆ.
ಖಾಸಗಿ ಸುದ್ದಿವಾಹಿನಿಯೊಂದು ಚಾಮರಾಜನಗರದಲ್ಲಿ ರೈತರನ್ನು ಸ್ಥಳದಲ್ಲೇ ಸಾಲಮುಕ್ತರಾಗಿಸುವ ಕಾರ್ಯಕ್ರಮಮಾಡಿದಾಗ ತಾವೇ ಸ್ವತಃ ಸಾಲಗಾರರಾಗಿದ್ದರೂ ಸಂಕಷ್ಟದಲ್ಲಿರುವ ಮತ್ತೊಬ್ಬ ರೈತನಿಗೆ ನೆರವಾಗಲು ಹತ್ತು ಸಾವಿರ ರೂಪಾಯಿ ಸಾಲಮಾಡಿ ಸುದ್ದಿವಾಹಿನಿಯ ಮೂಲಕ ನೀಡಿದ ಕರುಣಾಮಯಿ.ನೀವ್ಯಾಕೆ ಹೀಗೆ ಮಾಡಿದಿರಿ ಎಂದು ಕೇಳಿದರೆ ನನ್ನಂತಹ ಬಡ ರೈತ ಸಂಕಷ್ಟದಲ್ಲಿರುವ ಇನ್ನೊಬ್ಬ ರೈತನಿಗೆ ನೆರವಾಗುತ್ತಿರುವುದನ್ನು ನೋಡಿಯಾದರೂ ಹಣವುಳ್ಳವರು ಮತ್ತಷ್ಟು ನೆರವು ನೀಡಬಹುದು ಎಂದುಕೊಂಡೆ.ಆದರೆ ಹಾಗಾಗಲಿಲ್ಲ.ಇದು ನಮ್ಮ ಸಮಾಜ ಸಾಗುತ್ತಿರುವ ಹಾದಿ ಎಂದು ವಿಷಾದ ವ್ಯಕ್ತಪಡಿಸುತ್ತಾರೆ.
ಅವಿಭಕ್ತಕುಟುಂಬಗಳೆಲ್ಲಾ ಒಡೆದು ಚೂರಾಗಿ ದ್ವೀಪಗಳಂತಾಗುತ್ತಿರುವ ಕಾಲದಲ್ಲಿ ಈಗಲೂ ಅಣ್ಣಂದಿರ ಜೊತೆಯಲ್ಲಿ ಸಹಜೀವನ ನಡೆಸುತ್ತಿರುವ ಮಹಾದೇವಸ್ವಾಮಿ ಕೃಷಿಯ ಜೊತೆಗೆ ಭಜನೆ, ಕೃಷಿ ಪತ್ರಿಕೆಗಳ ಓದು,ಆಧ್ಯಾತ್ಮದಲ್ಲೂ ಆಸಕ್ತಿಹೊಂದಿದ್ದಾರೆ, ರೈತಸಂಘದ ಸಕ್ರೀಯ ಕಾರ್ಯಕರ್ತರಾಗಿಯೂ ಹೋರಾಟ,ಸಂಘಟನೆಯಲ್ಲಿ ಪಾಲ್ಗೊಳ್ಳುತ್ತಾರೆ.ತಮ್ಮ ಎಲ್ಲಾ ಚಟುವಟಿಕೆಗಳಿಗೂ ಬೆನ್ನೆಲುಬಾಗಿ ನಿಂತ ತಮ್ಮ ಕುಟುಂಬ ಮತ್ತು ಅಣ್ಣ ಎಂ.ಲಿಂಗಪ್ಪ ತಮ್ಮ ಸಾವಯವ ಕೃಷಿಯ ಯಶಸ್ಸಿಗೆ ಕಾರಣ ಎಂದು ಪದೇ ಪದೇ ನೆನಪಿಸಿಕೊಳ್ಳುತ್ತಾರೆ. ತೆರೆದ ಪುಸ್ತಕದಂತಿರುವ ಅವರ ಸುದೀರ್ಘ ಜೀವನ ಪಯಣವನ್ನು ಅವರು ಬಿಚ್ಚಿಟ್ಟಿದ್ದು ಹೀಗೆ...
" ನಮ್ಮದು ಈಗಲೂ ಅವಿಭಕ್ತ ಕುಟುಂಬ.ತಂದೆ ದಿ.ಮಲ್ಲಪ್ಪ.ತಾಯಿ ಸುಬ್ಬಮ್ಮ.ಮೂವರು ಅಕ್ಕಂದಿರು. ಮೂವರು ಅಣ್ಣಂದಿರು ಮತ್ತು ಅತ್ತಿಗೆಯರು ಮತ್ತವರ ಮಕ್ಕಳು ಜೊತೆಯಲ್ಲಿ ಇದ್ದಾರೆ. ಮನೆಯಲ್ಲಿ ನಾಲ್ಕನೇಯವನಾದ ನಾನೆ ಕಿರಿಯನಾದ ಕಾರಣ ಮನೆ ಮತ್ತು ಕೃಷಿಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ. 96 ವರ್ಷದ ನಮ್ಮ ತಾಯಿ ಈಗಲೂ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವ ಸ್ವಾಭಿಮಾನಿ ಹೆಣ್ಣುಮಗಳು.ಪರರ ಸೊತ್ತಿಗೆ ಆಸೆ ಪಡದೆ ಶ್ರಮವಹಿಸಿ ದುಡಿಯುವುದು ಮತ್ತು ಕಂಡದ್ದನ್ನು ಕಂಡಂತೆ ನುಡಿಯುವುದು ಹಾಗೂ ಸ್ವಾಭಿಮಾನದಿಂದ ಸ್ವಾವಲಂಭಿಯಾಗಿ ಬದುಕುವುದನ್ನು ತಂದೆ ನಮಗೆ ಕಲಿಸಿಕೊಟ್ಟರು" ಎನ್ನುವ ಮಹಾದೇವಸ್ವಾಮಿ ತಾವು ಕೃಷಿಕಾಯಕ ಮಾಡುತ್ತಿರುವುದರಿಂದ ಎಳ್ಳಷ್ಟು ಬೇಸರವಿಲ್ಲ ಎನ್ನುತ್ತಾರೆ.
1986 ರಲ್ಲಿ ಬಿಎ ಪದವಿ ಮುಗಿಸಿರುವ ಇವರು ಕಾಲೇಜು ದಿನಗಳಲ್ಲೂ ಬಿಡುವಿನ ವೇಳೆಯಲ್ಲಿ ಜಮೀನಿನಲ್ಲಿ ಕೃಷಿಕಾಯಕ ಮಾಡಿ ನಂತರ ಕಾಲೇಜಿಗೆ ಮಳೆಗಾಲದಲ್ಲಿ ಛತ್ರಿ ಹಿಡಿದುಕೊಂಡು ನಡೆದೇ ಹೋಗುತ್ತಿದ್ದ ದಿನಗಳನ್ನು ನೆನಪಿಸಿಕೊಂಡು ಬಾವುಕರಾಗುತ್ತಾರೆ.
"ತಂದೆಕಾಲದಲ್ಲಿ ಕೃಷಿಯಲ್ಲಿ ನಡೆಯುತ್ತಿದ್ದ ಸ್ವಯಂಕೃತ ಅಪರಾಧಗಳನ್ನು ತಪ್ಪಿಸಬೇಕು. ದೋಷಗಳನ್ನು ಸರಿಪಡಿಸಬೇಕು.ತಂದೆ ಮತ್ತು ಅಣ್ಣಂದಿರು ಮಾಡುತ್ತಿದ್ದ ಅವೈಜ್ಞಾನಿಕ ಬೇಸಾಯ ಪದ್ಧತಿಯನ್ನು ತಪ್ಪಿಸಿ ಕೃಷಿಯನ್ನು ಲಾಭದಾಯಕ ಉದ್ಯೋಗ ಅಂತ ತೋರಿಸಿಕೊಡುವ ಉದ್ದೇಶದಿಂದ ನಿರಂತರವಾಗಿ ಕೃಷಿಮಾಡಿಕೊಂಡು ಬಂದಿದ್ದೇನೆ.ರೈತಸಂಘದ ಕಾರ್ಯಕರ್ತನಾಗಿ ಕಲಿತದ್ದು,ತರಬೇತಿ ಶಿಬಿರಗಳಲ್ಲಿ ಕಲಿತ ಜ್ಞಾನ ಎಲ್ಲವನ್ನೂ ಸ್ವತಃ ನಮ್ಮ ಜಮೀನಿನಲ್ಲಿ ಅನುಷ್ಠಾನಮಾಡುತ್ತಾ ಬಂದಿದ್ದೇನೆ" ಎನ್ನುತ್ತಾರೆ.
ಎಂಟು ಎಕರೆ ಜಮೀನಿನಲ್ಲಿ ಪ್ರತಿಯೊಬ್ಬರಿಗೂ ತಲಾ ಎರಡು ಎಕರೆ ಜಮೀನನ್ನು ಖಾತೆ ಮಾಡಿಸಿಕೊಂಡು ಜೊತೆಯಲ್ಲೇ ಸಾವಯವ ಕೃಷಿಮಾಡುತ್ತಿದ್ದಾರೆ. ಇದಲ್ಲದೆ ಪಕ್ಕದಲ್ಲಿ ಬೀಳು ಬಿಟ್ಟಿರುವ ಆರು ಎಕರೆ ಜಮೀನನ್ನು ಗುತ್ತಿಗೆಗೆ ಪಡೆದು ಒಟ್ಟು ಹದಿನಾಲ್ಕು ಎಕರೆಯಲ್ಲಿ ಕೃಷಿಮಾಡುತ್ತಿದ್ದಾರೆ.
ಕಡಿಮೆ ಖಚರ್ಿನಲ್ಲಿ ಆದಾಯ ತಂದುಕೊಡುವ ಸಿರಿಧಾನ್ಯ,ರಾಗಿ,ನೆಲಗಡಲೆ,ಅವರೆ,ಉಚ್ಚೆಳ್ಳು,ಮುಸುಕಿನ ಜೋಳ ಬೆಳೆದಿದ್ದಾರೆ. ನಾಲ್ಕು ಎಕರೆ ಪ್ರದೇಶದಲ್ಲಿ ತ್ತೊಂಬತ್ತಾರು ಹಿಂಗು ಗುಂಡಿಗಳನ್ನು ಮಾಡಿಕೊಂಡು ಬಿದ್ದ ಮಳೆಯ ನೀರು ಹೊರಹೋಗದಂತೆ ಬದುಗಳನ್ನು ನಿಮರ್ಾಣಮಾಡಿದ್ದಾರೆ. ಆ ಬದುವಿನ ಮೇಲೆ ಮಧ್ಯ ಹರಳು ಎರಡು ಬದಿಯಲ್ಲಿ ಹಾಗಲಕಾಯಿ,ಹೀರೆಕಾಯಿ ಮತ್ತು ತೊಗರಿಯನ್ನು ಹಾಕಿ ಆದಾಯದ ಮೂಲವನ್ನಾಗಿ ಪರಿವತರ್ಿಸಿದ್ದಾರೆ. ಇವೆಲ್ಲಾ ಸಂಪೂರ್ಣವಾಗಿ ಮಳೆಯಾಶ್ರಯದಲ್ಲೇ ಬೆಳೆದುನಿಂತಿದ್ದು ಕಟಾವಿನ ಹಂತದಲ್ಲಿವೆ. ಮತ್ತೆ ಒಂದೂವರೆ ಎಕರೆಯಲ್ಲಿ ಹನಿ ನೀರಾವರಿ ಬಳಸಿಕೊಂಡು 1800 ಕೆಜಿ ಕಬ್ಬುಹಾಕಿ ಬೆಳೆದಿದ್ದು ಡಿಸೆಂಬರ್ ವೇಳೆಗೆ 40 ಕ್ವಿಂಟಾಲ್ ಸಾವಯವ ಬೆಲ್ಲ ಮತ್ತು ಕಾಕಂಬಿ ತಯಾರಿಸಲು ಸಿದ್ಧತೆ ನಡೆಸಿದ್ದಾರೆ.
ಕಳೆದ ಐದು ವರ್ಷದಿಂದ ಗೊಬ್ಬರದ ಅಂಗಡಿ ಕಡೆಗೆ ಮುಖಮಾಡಿಲ್ಲ ಎನ್ನುವ ಮಹಾದೇವಸ್ವಾಮಿ ಏಕದಳ,ದ್ವಿದಳ ಧಾನ್ಯ ಬೆಳೆದು ಮಣ್ಣಿನ ಫಲವತ್ತನ್ನು ಕಾಪಾಡಿಕೊಂಡಿದ್ದಾರೆ. ಉಳುಮೆಗೆ ಎತ್ತುಗಳನ್ನು ಬಳಸಿ, ನಾಟಿ ಬೀಜವನ್ನು ಬಿತ್ತುತ್ತಾರೆ. ಎಲ್ಲಾ ಬೆಳೆಗಳನ್ನು ಸಾಲಿನಲ್ಲಿ ಬಿತ್ತನೆಮಾಡುವುದರಿಂದ ಕಳೆ ತೆಗೆಯಲು ಕುಂಟೆ,ಹೆಗ್ಗುಂಟೆ,ಕಿರುಗುಂಟೆ ಬಳಸಿಕೊಳ್ಳುವ ಮೂಲಕ ಕೃಷಿಯ ವೆಚ್ಚವನ್ನು ಕಡಿಮೆ ಮಾಡಿಕೊಂಡಿದ್ದಾರೆ.ಅಗತ್ಯಬಿದ್ದಾಗ ಮಾತ್ರ ಟ್ರ್ಯಾಕ್ಟರ್ ಬಳಸಿ ಉಳುಮೆಮಾಡುತ್ತೇನೆ.ಹೆಚ್ಚಾಗಿ ಸಾಂಪ್ರದಾಯಿಕ ಪದ್ಧತಿಯನ್ನೆ ಅನುಸರಿಸುತ್ತಿರುವುದರಿಂದ ಕೃಷಿಗಾಗಿ ಈಗ  ಕೈಸಾಲ ಮಾಡಬೇಕಾದ ಪರಿಸ್ಥಿತಿ ಇಲ್ಲ ಎನ್ನುತ್ತಾರೆ.
ರಾಸಾಯನಿಕ ಕೃಷಿ ಮಾಡುತ್ತಿದ್ದಾಗ ಮಳೆಯಾಶ್ರಿತದಿಂದ ನೀರಾವರಿಗೆ ಹೋಗಲು ನಿರ್ಧರಿಸಿ ತೆರೆದ ಬಾವಿಮಾಡಲು ಹೋಗಿ ಸಾಕಷ್ಟು ಹಣ ಕಳೆದುಕೊಂಡು ಸಾಲಗಾರರಾದರು. ಅಲ್ಲಿ ನೀರು ಸಿಕ್ಕದ ಕಾರಣ ಮತ್ತೆ ಕೊಳವೆ ಬಾವಿಕೊರೆಸಿ ವಿಫಲರಾದರು. ಈ ಎಲ್ಲದರ ಪರಿಣಾಮ ಸಾಲದ ಸುಳಿಗೆ ಸಿಲುಕಿದ ಮಹಾದೇವಸ್ವಾಮಿ ಕೊನೆಗೆ ಸಾಲಶೂಲದಿಂದ ಹೊರಬರಲು ಬೇರೆ ದಾರಿಕಾಣದೆ ಅರ್ಧ ಎಕರೆ ಜಮೀನು ಮಾರಾಟ ಮಾಡಬೇಕಾಯಿತು.ಈಗ ಕೃಷಿಯಲ್ಲಿ ಹಣವನ್ನು ಎಲ್ಲಿ ಕಳೆದುಕೊಳ್ಳುತ್ತೇವೆ ಎನ್ನುವುದು ಅವರಿಗೆ ಗೊತ್ತಾಗಿದೆ.ಅದಕ್ಕಾಗಿ ಅವರು ಮತ್ತೆ ಕೊಳವೆ ಬಾವಿ ತಂಟೆಗೆ ಹೋಗದೆ ಮಳೆಯಾಶ್ರಯದಲ್ಲಿ ಬೆಳೆ ಬೆಳೆಯುತ್ತಿದ್ದಾರೆ.ಜೊತೆಗೆ ಮಳೆನೀರು ಕೊಯ್ಲು ಅಳವಡಿಸಿಕೊಂಡು ಹೊಂಡದಲ್ಲಿ ನಿಂತ ನೀರು ಬಳಸಿಕೊಂಡು ತರಕಾರಿಗಳನ್ನು ಬೆಳೆದುಕೊಳ್ಳುತ್ತಾರೆ.
ಜೂನ್ 2014 ರಲ್ಲಿ ಜಿಲ್ಲಾ ಕೃಷಿ ಇಲಾಖೆ ಮತ್ತು ಮೈಸೂರಿನ ಮಹಾತ್ಮಗಾಂಧಿ ಟ್ರಸ್ಟ್ ವತಿಯಿಂದ ದೊಡ್ಡರಾಯಪೇಟೆ ಗ್ರಾಮವನ್ನು ಸಾವಯವ ಗ್ರಾಮಮಾಡಲು ಆಯ್ಕೆಮಾಡಿದರು. 78 ರೈತರು 200 ಎಕರೆಯಲ್ಲಿ ಸಾವಯವ ಕೃಷಿಮಾಡಲು ಆಯ್ಕೆಯಾಗಿದ್ದರು. ಸಂಘದ ಅಧ್ಯಕ್ಷರಾಗಿ ನೇಮಕವಾದ ಮಹಾದೇವಸ್ವಾಮಿ ಅಂದಿನಿಂದ ಇಂದಿನವರೆಗೂ ಪ್ರಮಾಣಿಕವಾಗಿ ಸಾವಯವ ಕೃಷಿ ಮಾಡುತ್ತಾಬಂದಿದ್ದಾರೆ. ಎಷ್ಟೇ ಸಂಕಷ್ಟ ಬಂದರೂ ಆತ್ಮಸಾಕ್ಷಿಗೆ ಎಂದೂ ವಿರುದ್ಧವಾಗಿ ನಡೆದುಕೊಳ್ಳದ ಇವರು ನುಡಿದಂತೆ ನಡೆಯುವ ನೇಗಿಲಯೋಗಿ.ಅದಕ್ಕಾಗಿ ಅವರು ತಮ್ಮನ್ನು ತಾವೆ ನೂರಕ್ಕೆ ನೂರು ಅಂದರೆ "ನೂರರ್ಶತ ಸಾವಯವ ಕೃಷಿಕ" ಎಂದು ಹೆಮ್ಮಯಿಂದ ಕರೆದುಕೊಳ್ಳುತ್ತಾರೆ.ಸಾವಯವದ ಬಗ್ಗೆ ಅನುಮಾನವಿದ್ದವರು ತಮ್ಮ ಜಮೀನಿಗೆ ಬಂದು ನೋಡಿ ಪರೀಕ್ಷಿಸಿಕೊಳ್ಳಬಹುದು ಎಂದು ಸವಾಲು ಎಸೆಯುತ್ತಾರೆ.
ಸೌತೆಕಾಯಿ ಬೆಳೆದು ಒಮ್ಮೆ ತೆರಕಣಾಂಬಿ ಸಂತೆಗೆ ಹೋಗಿ ಮಾರಾಟ ಮಾಡಿದಾಗ ಬೆಳೆಬೆಳೆದ ಖಚರ್ಿರಲಿ ಅದನ್ನು ತೆಗೆದುಕೊಂಡು ಹೋದ ಸಾಗಾಟದ ಖಚರ್ುಬರಲಿಲ್ಲ.ನನ್ನಿಂದ ಒಂದು ಸೌತೆಕಾಯಿಯನ್ನು ಒಂದು ರೂಪಾಯಿಗೆ ತೆಗೆದುಕೊಂಡು ಅವರು ಗ್ರಾಹಕರಿಗೆ ಏಳು ರೂಪಾಯಿಗೆ ಮಾರಾಟಮಾಡುತ್ತಿರುವುದು ನನ್ನ ಗಮನಕ್ಕೆ ಬಂತು. ಇದರಿಂದ ಎಚ್ಚೆತ್ತುಕೊಂಡು ನಾನೇ ಚಾಮರಾಜನಗರದಲ್ಲಿ ಜನನಿಬಿಡ ಪ್ರದೇಶಕ್ಕೆ ಹೋಗಿ ಒಂದು ಸೌತೆಕಾಯಿಯನ್ನು ಐದು ರೂಪಾಯಿಗೆ ಮಾರಾಟಮಾಡಿದೆ. ಇದರಿಂದ ನನಗೆ ಹೆಚ್ಚುವರಿಯಾಗಿ ಒಂದು ಸೌತೆಕಾಯಿಗೆ ನಾಲ್ಕು ರೂಪಾಯಿ ಹೆಚ್ಚಿಗೆ ಸಿಕ್ಕಂತಾಯಿತು ಅಲ್ಲದ ಗ್ರಾಹಕರಿಗೂ ಎರಡು ರೂಪಾಯಿ ಕಡಿಮೆಗೆ ಸೌತೆಕಾಯಿ ಸಿಕ್ಕಂತಾಯಿತು.ದಲ್ಲಾಳಿಗೆ ಹೋಗುತ್ತಿದ್ದ ಲಾಭವೂ ನಮ್ಮಲ್ಲೆ ಹಂಚಿಕೆಯಾಯಿತು.ಅದಕ್ಕಾಗಿ "ನಾನು ರೈತರಿಂದ ನೇರ ಗ್ರಾಹಕರಿಗೆ" ಎಂಬ ಬ್ಯಾನರ್ ಮಾಡಿಸಿಕೊಂಡು ಮಾರಾಟ ಮಾಡುತ್ತಿದ್ದೇನೆ ಎನ್ನುತ್ತಾರೆ.
ಆರಂಭದಲ್ಲಿ ಗ್ರಾಹಕರಿಗೆ ಅರಿವು ಮೂಡಿಸುವುದು ಕಷ್ಟವಾಯಿತು.ಮೊದಲ ವರ್ಷ ಚಾಮರಾಜನಗರಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದೆ. ಈಗ ಬೆಳೆದ ತರಕಾರಿ,ಬೇಳೆಕಾಳುಗಳು ಜಮೀನಲ್ಲೇ ಮಾರಾಟವಾಗುತ್ತವೆ. ಸಾವಯವದಲ್ಲಿ ಬೆಳೆದ ಉತ್ಪನ್ನಗಳ ರುಚಿ ಮತ್ತು ಸ್ವಾದಕ್ಕೆ ಮನಸೋತಿರುವ ಗ್ರಾಹಕರು ತೋಟಕ್ಕೆ ಬಂದು ವಿಷಮುಕ್ತ ಆಹಾರವನ್ನು ಖರೀದಿಸುತ್ತಿದ್ದಾರೆ.ಮಾರುಕಟ್ಟೆ ನನಗೆ ದೊಡ್ಡ ಸಮಸ್ಯೆಯಾಗಿಲ್ಲ.ನಾವು ವಿಷಮುಕ್ತವಾಗಿ ಬೆಳೆದರೆ ಮಾರುಕಟ್ಟೆಯನ್ನು ಇರುವಲ್ಲೇ ಸೃಷ್ಠಿಮಾಡಿಕೊಳ್ಳಬಹುದು ಎನ್ನುವುದು ತಮ್ಮ ನಾಲ್ಕು ವರ್ಷದ ಅನುಭವ ಎನ್ನುತ್ತಾರೆ.
ಸಾವಯವ ಕೃಷಿಗೆ ಬಂದ ಆರಂಭದ ಮೊದಲ ವರ್ಷದಲ್ಲಿ ಇಳುವರಿ ಕಡಿಮೆಯಾಗಿತ್ತು.ನಂತರ ವರ್ಷದಿಂದ ವರ್ಷಕ್ಕೆ ಇಳುವರಿ ಹೆಚ್ಚಾಗಿದೆ.ಅದಕ್ಕಿಂತ ಮುಖ್ಯವಾಗಿ ನನ್ನ ಭೂಮಿಯ ಆರೋಗ್ಯ ವೃದ್ಧಿಯಾಗಿದೆ ಎನ್ನುತ್ತಾರೆ. ಕೊಳವೆ ಬಾವಿಯಲ್ಲಿ ಸಿಗುವ ಕಡಿಮೆ ನೀರನ್ನು ಬಳಸಿಕೊಂಡು ಒಂದೂವರೆ ಎಕರೆಯಲ್ಲಿ ಬಾಳೆ,ಪಪ್ಪಾಯಿ,ತರಕಾರಿಯನ್ನು ಸುಭಾಷ್ ಪಾಳೇಕರ್ ಪದ್ಧತಿಯಲ್ಲಿ ಜೀವಾಮೃತ ಬಳಸಿ ಬೆಳೆದುಕೊಳ್ಳಲು ಸಿದ್ಧತೆಯಲ್ಲಿ ನಿರತರಾಗಿರುವ ಮಹಾದೇವಸ್ವಾಮಿ ಕೃಷಿಯಲ್ಲಿ ಸದಾ ಪ್ರಯೋಗಶೀಲರಾಗಿದ್ದಾರೆ. ಕಿರಿದಾಗಿ ಮಾಡಿದರು ಹಿರಿದಾಗಿ ಮಾಡು ಎನ್ನುವಂತೆ ಮಾಡುವ ಕೆಲಸವನ್ನು ಶ್ರದ್ಧೆ ಮತ್ತು ಪ್ರೀತಿಯಿಂದ ಮಾಡಿ ಆದಾಯಗಳಿಸುತ್ತಿದ್ದಾರೆ.
" ಗ್ರಾಮದ ನಾಗೇಗೌಡ ಎಂಬ ಹಿರಿಯರು ನನ್ನನ್ನು ನೋಡಿ ತಮ್ಮ ಜಮೀನಿನಲ್ಲಿ ಬೆಳೆದ ಟೊಮಟೊವನ್ನು ತಾವೇ ಸೈಕಲ್ಗಾಡಿ ಮೇಲೆ ಏರಿಕೊಂಡು ಗ್ರಾಮದಲ್ಲೆ ಮಾರಾಟಮಾಡಿದರು. ಮಾರುಕಟ್ಟೆಯಲ್ಲಿ 10 ರೂಪಾಯಿಗೆ ಸಿಗುತ್ತಿದ್ದ ಟೊಮಟೊವನ್ನು ಎಂಟು ರೂಪಾಯಿಗೆ ಗ್ರಾಹಕರಿಗೆ ಕೊಟ್ಟರು.ಅದನ್ನೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿದ್ದರೆ ಅವರಿಗೆ ಪ್ರತಿ ಕೆಜಿಗೆ ಐದು ರೂಪಾಯಿ ಸಿಗುತ್ತಿತ್ತು. ಮತ್ತು ಅದೇ ಟೊಮಟೊ ಹಳ್ಳಿಗೆ ಬಂದು ಹತ್ತು ರೂಪಾಯಿಗೆ ಕೈಸೇರುತ್ತಿತ್ತು. ಅದನ್ನು ತಪ್ಪಿಸಿ ರೈತರೆ ನೇರ ಮಾರಾಟಮಾಡುವುದರಿಂದ ಗ್ರಾಹಕರಿಗೂ ಲಾಭವಾಯಿತು.ರೈತನಿಗೂ ಲಾಭವಾಯಿತು.ಹೀಗೆ ಸಣ್ಣ ಸಣ್ಣ ರೈತರು ಸಾವಯವದಲ್ಲಿ ಬೆಳೆದು ಆದಾಯಗಳಿಸುವುದರ ಜೊತೆಗೆ ಗ್ರಾಮದ ಜನರ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.ಇದನ್ನೇ ಗಾಂಧಿ ಪ್ರಣೀತ ಅರ್ಥಶಾಸ್ತ್ರ ಎನ್ನುವುದು ಎಂದು ವಿಶ್ಲೇಷಣೆಗೆ ಒಳಪಡಿಸುವ ಮೂಲಕ ಗ್ರಾಮದ ಹಣ ಗ್ರಾಮದಲ್ಲೆ ಉಳಿದುಕೊಳ್ಳುವ ಮಾರ್ಗವನ್ನು ಸಾಧಿಸಿತೋರಿಸಿದ್ದಾರೆ.
ರೈತರು ತಮ್ಮಲ್ಲಿರುವ ಭೂಮಿ ಎಷ್ಟು,ನೀರಿನ ಲಭ್ಯತೆ ಹೇಗಿದೆ,ಯಾವ ರೀತಿಯ ಬೆಳೆ ಬೆಳೆಯಬೇಕು ಎನ್ನುವ ಯೋಜನೆ ಇರಬೇಕು.ಇಲ್ಲದಿದ್ದರೆ ಸಾಲದ ಸುಳಿಗೆ ಸಿಲುಕುವುದು ನಿಶ್ಚಿತ.ನಾವೆ ಹಿಂದೆ ಹನ್ನೆರಡು ಎಕರೆಯಲ್ಲಿ ಕಬ್ಬು ಬೆಳೆದು ಎಂಟು ತಿಂಗಳ ನಂತರ ಕೊಳವೆ ಬಾವಿಯಲ್ಲಿ ನೀರು ಬತ್ತಿಹೋಗಿ ಹನ್ನೆರಡು ಎಕರೆ ಕಬ್ಬಿಗೆ ಬೆಂಕಿಹಾಕಿ ಸುಟ್ಟುಬಿಟ್ಟೆವು.ಈ ಕಹಿ ಘಟನೆ ಈಗಲೂ ಸದಾ ಕಾಡುತ್ತಿರುತ್ತದೆ. ಆದ್ದರಿಂದ ರೈತರು ತುಂಬಾ ಯೋಜಿಸಿ,ಯೋಚಿಸಿ ಬೆಳೆ ಬೆಳೆಯಬೇಕು ಎಂದು ಸಲಹೆ ನೀಡುತ್ತಾರೆ.ಹೆಚ್ಚಿನ ಮಾಹಿತಿಗೆ 89716 70774 ಸಂಪರ್ಕಿಸಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ