ಕಡು ಬಡತನದ ನಡುವೆ ಅರಳಿದ ಭೀಮನಹಳ್ಳಿಯ `ಭೀಮ'
# ಸ್ವಾಭಿಮಾನಿ ಹೋರಾಟಗಾರನ ಕಥಾನಕ # ಆಸರೆಯಾಯಿತು `ಪುಣ್ಯಭೂಮಿ'
ಅದು ಎಪ್ಪತ್ತರ ದಶಕ. ತಂದೆ ತಾಯಿಗೆ 12 ಮಂದಿ ಮಕ್ಕಳು.ದೊಡ್ಡ ಕುಟುಂಬ.ಹದಿನೈದು ಎಕರೆ ಜಮೀನು ಇದ್ದರೂ ಕಿತ್ತು ತಿನ್ನುವ ಬಡತನ. ಆದರೂ ಯುವಕನಿಗೆ ಓದಿ ವಿದ್ಯಾವಂತನಾಗಬೇಕೆಂಬ ಹಂಬಲ. ಕಡು ಬಡತನದ ನಡುವೆಯೂ ಕಾಲೇಜು ಮೆಟ್ಟಿಲು ಹತ್ತಿದ ಈ ಯುವಕ ಬಿ.ಕಾಂ.ಪದವಿಧರನಾದ. ಒಂದೆರಡು ವರ್ಷ ಕಾನೂನು ಪದವಿಗೂ ಮಣ್ಣುಹೊತ್ತು ಬಡತನದ ಕಾರಣಕ್ಕೆ ಕಾಲೇಜು ತೊರೆದ. ದಲಿತ ಸಂಘರ್ಷ ಸಮಿತಿಯ ಸಕ್ರೀಯಾ ಕಾರ್ಯಕರ್ತನಾಗಿ,ಭೂ ಮಾಲೀಕತ್ವದ ಹೋರಾಟದಲ್ಲಿ ಭಾಗಿಯಾಗಿ ಬಂಧನಕ್ಕೆ ಒಳಗಾದ.ನಂತರ ಗ್ರಾಮ ಪಂಚಾಯಿತಿ ಅಧ್ಯಕ್ಷನೂ ಆಗಿ ಈಗ ಸುಭಾಷ್ ಪಾಳೇಕರ್ ಅವರ ನೈಸಗರ್ಿಕ ಕೃಷಿಯಲ್ಲಿ ತೊಡಗಿಸಿಕೊಂಡು ನೆಮ್ಮದಿಯ ಬದುಕು ಕಟ್ಟಿಕೊಂಡಿರುವ ಸ್ವಾಭಿಮಾನಿಯೊಬ್ಬರ ಯಶೋಗಾಥೆ ಇದು.
ಈ ಸ್ವಾಭಿಮಾನಿ ರೈತನ ಹೆಸರು ಭೀಮನಹಳ್ಳಿ ಮಹದೇವ್.ಎಚ್.ಡಿ.ಕೋಟೆ ತಾಲೂಕಿನ ಭೀಮನಹಳ್ಳಿಯವರು. ತಮ್ಮ ಬಾಲ್ಯದ ದಿನಗಳಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ಅಪ್ಪ ತನ್ನ ಮಕ್ಕಳನ್ನು ಜೀತಕ್ಕೆ ಸೇರಿಸಲಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮಾಹದೇವ್ ವ್ಯವಸಾಯ ಮಾಡಿ ತಮ್ಮಂದರಿಗೆ ಒಳ್ಳೆಯ ಬದುಕು ಕಟ್ಟಿಕೊಟ್ಟಿದ್ದಾರೆ. ಮಗಳನ್ನು ಮದುವೆಮಾಡಿ, ಮಗನನ್ನು ಸಾಫ್ಟ್ವೇರ್ ಇಂಜಿನಿಯರ್ ಮಾಡಿದ್ದಾರೆ. ಇನ್ಫ್ಫೋಸಿಸ್ನಲ್ಲಿ ಉದ್ಯೋಗದಲ್ಲಿರುವ ಅವರ ಮಗ ಈಗ ನೆದರ್ಲ್ಯಾಂಡ್ನಲ್ಲಿ ಕೆಲಸಮಾಡುತ್ತಿದ್ದಾನೆ.
ಪತ್ನಿಯೊಂದಿಗೆ ಭೀಮನಹಳ್ಳಿಯಲ್ಲಿರುವ ಮಹದೇವ್ ಮೂರು ಎಕರೆ ಪ್ರದೇಶದಲ್ಲಿ 150 ತೆಂಗು,2500 ಏಲಕ್ಕಿ ಬಾಳೆ,2000 ಸಿಲ್ವರ್,ತೇಗ,ಬೀಟೆ,ಹೊನ್ನೆ,ಸಪೋಟ,ಕಾಫಿ ಎಲ್ಲವನ್ನೂ ಸುಭಾಷ್ ಪಾಳೇಕರ್ ಅವರ ನೈಸಗರ್ಿಕ ಕೃಷಿ ಪದ್ಧತಿಯಲ್ಲಿ ಬೆಳೆಯುತ್ತಿದ್ದು ಕಳೆದ ಇಪ್ಪತ್ತು ವರ್ಷದಿಂದ ತಮ್ಮ ಭೂಮಿಗೆ ಯಾವುದೆ ರಸಾಯನಿಕಗೊಬ್ಬರವನ್ನೂ ಹಾಕಿಲ್ಲ. ಹೋರಾಟದ ದಿನಗಳಲ್ಲಿ ಸಂಗಾತಿಗಳಾಗಿದ್ದ ಗೆಳೆಯರು ತೋಟಕ್ಕೆ ಬಂದರೆ ಅವರ ನೆನಪಿನಲ್ಲಿ ತೋಟದಲ್ಲೊಂದು ಗಿಡನೆಡುತ್ತಾರೆ.ಅಷ್ಟರಮಟ್ಟಿಗೆ ಅವರು ಪರಿಸರ ಪ್ರೇಮಿ. ನಾವು ಅವರ ತೋಟಕ್ಕೆ ಹೋದ ನೆನಪಿಗೆ ಬುದ್ಧನ ನೆಪದಲ್ಲಿ ಅರಳಿ ಸಸಿಯೊಂದನ್ನು ನೆಟ್ಟು ನೀರೆರೆದು ಬುದ್ಧನ ಕರುಣೆ,ಮಾನವೀಯತೆ,ಅತಃಕರಣ ಎಲ್ಲರಲ್ಲೂ ಮೂಡಲಿ ಎಂದು ಹಾರೈಸಿದರು.
ಎಚ್.ಡಿ.ಕೋಟೆ ತಾಲೂಕಿನಲ್ಲಿ ಆದಿವಾಸಿಗಳು ಕಾಳು ಮೆಣಸು ಬೆಳೆಯುತ್ತಿರುವ ಬಗ್ಗೆ ಕೇಳಿದ್ದ ನಾನು,ಕುತೂಹಲಗೊಂಡು ಲೇಖಕರು ಕೃಷಿಕರೂ ಆಗಿರುವ ಕ್ಷೀರಸಾಗರ ಮತ್ತು ಆದಿವಾಸಿ ಬುಡಕಟ್ಟು ಹೋರಾಟಗಾರ ಸೋಮಣ್ಣ,ನಿಸರ್ಗ ಸಿದ್ದರಾಜು ಅವರ ಜೊತೆಗೆ ವಿವಿಧ ಹಾಡಿಗಳಿಗೆ ಭೇಟಿ ನೀಡಿ ಮಾರ್ಗಮಧ್ಯದಲ್ಲೇ ಇದ್ದ ಬೀಮನಹಳ್ಳಿ ಮಹದೇವ್ ಅವರ ತೋಟಕ್ಕೂ ಭೇಟಿ ನೀಡಿದ್ದೆ.
ಗಿಡಮರಗಳಿಂದ ತುಂಬಿ ಹಸಿರಿನಿಂದ ಕಂಗೊಳಿಸುತ್ತಿದ್ದ ತೋಟ,ನಡುವೆ ಮಳೆನೀರು ಕೊಯ್ಲು ಹಾಗೂ ಕಾಲುವೆ ನೀರು ತುಂಬಿಸಿಕೊಳ್ಳಲು ಮಾಡಿದ್ದ ದೊಡ್ಡ ಕೃಷಿಹೊಂಡ. ಕೃಷಿಹೊಂಡದ ಮೇಲೆ ಕುಳಿತು ಮಾತನಾಡಲು ಮಟ್ಟಸವಾದ ಜಾಗ. ಸುತ್ತ ಹಸಿರು, ಅದೊಂದು ರಮ್ಯತಾಣ. ಅಲ್ಲಿ ಮಾತಿಗೆ ಕುಳಿತ ಭೀಮನಹಳ್ಳಿ ಮಹದೇವ್ ತಮ್ಮ ಹೋರಾಟದ ಬದುಕು,ಚಳವಳಿ, ಕೃಷಿ ಚಟುವಟಿಕೆಗಳ ಬಗ್ಗೆ ಹೇಳುತ್ತಾ ಹೋದರು...
ಆಸರೆಯಾದ ಪುಣ್ಯಭೂಮಿ : " ಕಡುಬಡತನದ ಕುಟುಂಬ ನಮ್ಮದು.ನಮ್ಮ ತಂದೆತಾಯಿಗೆ ನಾವು ಹನ್ನೆರಡು ಜನ ಮಕ್ಕಳು.ಏಳು ಮಂದಿ ಗಂಡು.ಐವರು ಹೆಣ್ಣು. ಎಲ್ಲಾ ಸೇರಿ ಹದಿನೈದು ಜನರಿದ್ದ ದೊಡ್ಡ ಸಂಸಾರ. ನಾನೇ ಮನೆಗೆ ಹಿರಿಕ. ಊಟಕ್ಕೆ ತೊಂದರೆ. ಹಸಿದು ಮಲಗಿದ ದಿನಗಳೂ ಇವೆ. ಭೀಮನಹಳ್ಳಿಯಲ್ಲೆ ಪ್ರೌಢಶಾಲಾ ಶಿಕ್ಷಣ ಮುಗಿಸಿ ಹುಣಸೂರಿಗೆ ಕಾಲೇಜು ವಿದ್ಯಭ್ಯಾಸಕ್ಕೆ ಸೇರಿಕೊಂಡೆ. ಅಲ್ಲಿ ಶೋಷಿತವರ್ಗದವರಿಗಾಗಿ `ಪುಣ್ಯಭೂಮಿ' ಟ್ರಸ್ಟ್ನವರು ಉಚಿತ ವಿದ್ಯಾಥರ್ಿನಿಲಯವೊಂದನ್ನು ನಡೆಸುತ್ತಿದ್ದರು. ಆ ಹಾಸ್ಟೆಲ್ನಲ್ಲಿ ಇದ್ದುಕೊಂಡು 1976 ರಲ್ಲಿ ನಾನು ಬಿಕಾಂ ಪದವಿ ಪಡೆದುಕೊಂಡೆ.ನಂತರ ಮೈಸೂರಿನ ಜೆಎಸ್ಎಸ್ ಕಾಲೇಜಿಗೆ ಕಾನೂನು ಪದವಿ ಓದಲು ಸೇರಿಕೊಂಡೆ. ಅಲ್ಲಿ ನಮಗೆ ಹಾಸ್ಟೆಲ್ ಸೌಲಭ್ಯ ಇಲ್ಲದ ಕಾರಣ. ಹುಣಸೂರಿನಿಂದ ಬಂದು ಹೋಗುತ್ತಿದೆ.ಎರಡು ವರ್ಷದ ನಂತರ ಊಟಕ್ಕೆ ತೊಂದರೆಯಾಯಿತು.ಕಾಲೇಜು ಬಿಟ್ಟು ವ್ಯವಸಾಯದಲ್ಲಿ ತೊಡಗಿಸಿಕೊಂಡೆ" ಎಂದು ಕಾಲೇಜಿನಿಂದ ಕೃಷಿಗೆ ಬಂದು ನಿಂತ ಜೀವನ ಪಯಣವನ್ನು ಹೇಳಿ ಒಮ್ಮೆ ಆಕಾಶದ ಕಡೆಗೆ ದಿಟ್ಟಿಸಿ ಮೌನ ವಾದರು.
ಇದೆ ಸಮಯದಲ್ಲಿ ಮೈಸೂರಿನಲ್ಲಿ ಹೊಸ ಬದಲಾವಣೆಗೆ ನಾಂದಿಯಾಡಿದ್ದ `ಮಾಕ್ಸರ್ಿಸ್ಟ್ ಸ್ಟಡಿ ಸರ್ಕಲ್' ಎಂಬ ಗೆಳೆಯರ ಗುಂಪು ಸಮಾಜದ ಅಸಮಾನತೆಯ ವಿರುದ್ಧ ಜಾಗೃತಿ ಮೂಡಿಸಲು ಮುಂದಾಗಿರುತ್ತದೆ. ಈ ಗುಂಪಿನಲ್ಲಿ ಲೇಖಕ ತುಕಾರಾಮ್,ಕ್ಷೀರಸಾಗರ,ಹೊರೆಯಾಲ ದೊರೆಸ್ವಾಮಿ,ರಾಮು ಎಲ್ಲರೂ ಇರುತ್ತಾರೆ. ಈ ತಂಡ ಹುಣಸೂರಿನ ಪುಣ್ಯಭೂಮಿ ಹಾಸ್ಟೆಲ್ಗೆ ಬಂದು ವಿದ್ಯಾಥರ್ಿಗಳಲ್ಲಿ ಜಾಗೃತಿ ಮೂಡಿಸಲು ಮುಂದಾಗುತ್ತದೆ.ಹೊರೆಯಾಲ ದೊರೆಸ್ವಾಮಿ ಅವರು ಬರೆದ ಕೋಲಾಟದ ಹಿನ್ನೆಲೆ ಇದ್ದ ಬೀದಿನಾಟಕವನ್ನು ಅಭಿನಯಿಸಿ ಗಮನಸೆಳೆಯುತ್ತದೆ. ಈ ತಂಡದ ಸಂಪರ್ಕಕ್ಕೆ ಬರುವ ಮಹದೇವ್ 1978 ರಲ್ಲಿ ಆರಂಭವಾದ ದಲಿತ ಸಂಘರ್ಷ ಸಮಿತಿಯ ಸಂಪರ್ಕಕ್ಕೆ ಬಂದು ಆ ಭಾಗದಲ್ಲಿ ಹೋರಾಟಗಾರರಾಗಿ ರೂಪುಗೊಳ್ಳುತ್ತಾರೆ.
ಸಾಹಿತಿ ದೇವನೂರ ಮಹದೇವ ಅವರು ತಮ್ಮ ಹೆಸರಿನ ಜೊತೆಗೆ ಹುಟ್ಟೂರನ್ನು ಸೇರಿಸಿಕೊಂಡಿದ್ದನ್ನು ನೋಡಿ ಇವರು ಕೂಡ ಭೀಮನಹಳ್ಳಿ ಮಹದೇವ್ (ಭೀಮ) ಆಗುತ್ತಾರೆ. ಪುಣ್ಯಭೂಮಿ ಹಾಸ್ಟೆಲ್ ಹೋರಾಟದ ನೆಲೆಯಾಗಿ,ಕ್ರಾಂತಿಕಾರಿಗಳ ವಿಶ್ವ ವಿದ್ಯಾನಿಲಯವಾಗಿ ಕೆಲಸಮಾಡುತ್ತಿತ್ತು ಎಂದು ಕ್ಷೀರಸಾಗರ ನೆನಪು ಮಾಡಿಕೊಂಡರು.
ಕಾನೂನು ಪದವಿ ಓದುತ್ತಿದ್ದಾಗ ಎರಡನೇ ವರ್ಷಕ್ಕೆ ಯಾಕೆ ಕಾಲೇಜು ಬಿಟ್ಟಿದ್ದು ಎಂದು ಭೀಮ ಅವರನ್ನು ಕೇಳಿದಾಗ... " ಮೈಸೂರಿನಲ್ಲಿ ಆಗ ರಾಮಸ್ವಾಮಿ ನಾಯ್ಕರ್ ಎಂಬ ಹೋರಾಟಗಾರರೊಬ್ಬರು ಇದ್ದರು.ಅವರು ಪ್ರತಿ ತಿಂಗಳು ನನಗೆ ಊಟಕ್ಕೆ ರೇಷನ್ ಕೊಡಿಸುತ್ತಿದ್ದರು. ಅವರಿಗಿದ್ದ ಒಬ್ಬನೇ ಮಗ ಅಪಘಾತದಲ್ಲಿ ತೀರಿಕೊಂಡಾಗ ಅವರು ಕಣ್ಮರೆಯಾದರು. ಎಲ್ಲಿಗೆ ಹೋದರು?, ಏನಾದರೂ? ಎನ್ನುವುದು ಇಂದಿಗೂ ನಮಗ್ಯಾರಿಗೂ ಗೊತ್ತಾಗಿಲ್ಲ. ಹಾಗಾಗಿ ಊಟಕ್ಕೆ ತೊಂದರೆಯಾಗಿ ಕಾಲೇಜು ಬಿಟ್ಟು ಕೃಷಿಗೆ ಬಂದೆ" ಎಂದು ನಿಟ್ಟುಸಿರು ಬಿಟ್ಟರು.
ದರಿದ್ರ ನಿವಾರಣೆ : "ದಲಿತ ಸಂಘರ್ಷ ಸಮಿತಿಯ ಸಂಘಟನೆಯಲ್ಲಿ ತೊಡಗಿಸಿಕೊಂಡು ಜೊತೆಗೆ ಕೃಷಿಯಲ್ಲೂ ತೊಡಗಿಸಿಕೊಂಡೆ. ದಸಂಸದಲ್ಲಿ ಇದ್ದ ಕಾರಣ ಗೆಳೆಯರ ಗುಂಪು ದೊಡ್ಡದಾಯಿತು.ಕೆಲವರು ಕಷ್ಟಕ್ಕೂ ನೆರವಾದರೂ. ಆಗ ಬೆಟ್ಟಯ್ಯ ಕೋಟೆ ಐದನೇ ನಂಬರಿನ ಜೋಳ ಮತ್ತು ರಾಗಿಯನ್ನು ಬೆಳೆದು ಗುಳಿಗೆ ತುಂಬುತ್ತಿದ್ದರು.ಅವರಿಂದ ನಾನು ರಾಗಿ ಜೋಳ ತಂದು ದೊಡ್ಡ ಸಂಸಾರದ ಹಸಿವು ನೀಗಿಸಿದೆ. ಕ್ಷೀರಸಾಗರ ಅವರು ಕೃಷಿ ಕೆಲಸಕ್ಕೆ ಹಣಕಾಸಿನ ಸಹಾಯ ಮಾಡುತ್ತಿದ್ದರು. ಇದೆ ವೇಳೆ 1982 ರಲ್ಲಿ ಮಂಚಯ್ಯನವರು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾದರು.ಜಮೀನಿನಲ್ಲಿ ಬಾವಿ ತೆಗೆಸಲು 15 ಸಾವಿರ ರೂಪಾಯಿ ಸಾಲಕೊಟ್ಟರು.ತಂದೆ ಮಕ್ಕಳು ಎಲ್ಲಾ ಸೇರಿಕೊಂಡು ತೆರೆದ ಬಾವಿ ತೊಡಿದೆವು. ನೀರು ಸಿಕ್ಕಿತು. ಅದೇ ವರ್ಷ ನಾನು ಆರು ಎಕರೆ ಜಮೀನಿನಲ್ಲಿ ಐದನೇ ನಂಬರಿನ ಜೋಳ ಬೆಳೆದೆ. ಭರ್ಜರಿ ಫಸಲು ಬಂದು ಮೊದಲ ಬಾರಿಗೆ ನಮ್ಮ ದಾರಿದ್ರ್ಯವೆಲ್ಲ ನೀಗಿತು. ಹಸಿವಿನ ಸಮಸ್ಯೆ ನಿವಾರಣೆಯಾಯಿತು.ನಂತರ ಆರು ಪಂಪ್ಸೆಟ್ ಮಾಡಿಸಿ ವಾಣೀಜ್ಯ ಬೆಳೆಯಾದ ಹೊಗೆಸೊಪ್ಪು ಬೆಳೆದು ಆಥರ್ಿಕವಾಗಿ ಸಬಲರಾದೆವು. ಅಣ್ಣತಮ್ಮಂದಿರೆಲ್ಲಾ ಭಾಗವಾಗಿ ನನ್ನ ಭಾಗಕ್ಕೆ ಮೂರು ಎಕರೆ ತೋಟ ಬಂತು. ಇದೆ ನಾವು ಕುಳಿತಿರುವ ಆ ತೋಟ" ಎಂದು ನಕ್ಕರು.
ಪತ್ರಿಕೆಯಲ್ಲಿ ಬರುತ್ತಿದ್ದ ಕೃಷಿ ಸುದ್ದಿಗಳು ಮತ್ತು ನಮ್ಮ ಭಾಗದಲ್ಲಿ ಆಗತಾನೇ ಬಂದಿದ್ದ ತಮಿಳಿಗರು ಮಾಡುತ್ತಿದ್ದ ಕೃಷಿಯನ್ನು ನೋಡಿ ಸ್ಫೂತರ್ಿ ಮತ್ತು ಪ್ರೇರಣೆ ಪಡೆದು ಕೃಷಿಯಲ್ಲಿ ಹೊಸ ಪ್ರಯೋಗಗಳಿಗೆ ಮುಂದಾದ ಮಹದೇವ್ ಶ್ರಮವಹಿಸಿ ದುಡಿದರೆ ಕೃಷಿ ಎಂದಿಗೂ ನಂಬಿದವರನ್ನು ಕೈ ಬಿಡುವುದಿಲ್ಲ.ಇದಕ್ಕೆ ನನಗಿಂತ ಬೇರೆ ಸಾಕ್ಷಿ ಬೇಕಿಲ್ಲ ಎನ್ನುತ್ತಾರೆ. ಈ ಭಾಗದಲ್ಲಿ ಆನೆ ಮತ್ತು ಕಾಡುಪ್ರಾಣಿಗಳ ಹಾವಳಿ. ಇಪ್ಪತ್ತೈದು ವರ್ಷದ ಹಿಂದೆ 200 ತೆಂಗಿನ ಸಸಿ ನೆಟ್ಟಿದ್ದರು. ಅದರಲ್ಲಿ 80 ಉಳಿದು ದೊಡ್ಡ ಮರವಾಗಿ ಫಸಲು ನೀಡುತ್ತಿವೆ.
ಪಾಳೇಕರ್ ಹಾದಿಯಲ್ಲಿ : 2005 ನೇ ಇಸವಿಯಲ್ಲಿ ಮೈಸೂರಿನ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಸುಭಾಷ್ ಪಾಳೇಕರ್ ನೈಸಗರ್ಿಕ ಕೃಷಿ ತರಬೇತಿ ಕಾಯರ್ಾಗಾರದಲ್ಲಿ ಭಾಗವಹಿಸಿದ್ದ ಮಹದೇವ್ ಅಂದಿನಿಂದ ತಾವೂ ನೈಸಗರ್ಿಕ ಕೃಷಿಕರಾಗಿ ಬದಲಾಗಿದ್ದಾರೆ. ಆಗ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಇವರು ಎಲ್ಲಾ ಸದಸ್ಯರನ್ನು ಶಿಬಿರಕ್ಕೆ ಕರೆದುಕೊಂಡು ಹೋಗಿದ್ದನ್ನು ನೆನಪುಮಾಡಿಕೊಂಡರು. ಸ್ವಾಮಿ ಆನಂದ್ ಅವರನ್ನು ಬಿಟ್ಟರೆ ನಾನೇ ತಾಲೂಕಿನಲ್ಲಿ ನೈಸಗರ್ಿಕ ಕೃಷಿ ಆರಂಭಿಸಿದ ಎರಡನೇಯವನ್ನು ಎಂದು ಹೇಳುವ ಮಹದೇವ್ ಈ ಪದ್ಧತಿ ಆರಂಭದಲ್ಲಿ ಕಷ್ಟ ಎನಿಸಿದರು ಮೂರ್ನಾಲ್ಕು ವರ್ಷದ ನಂತರ ಸುಲಭ ಮತ್ತು ಆರಾಮದಾಯಕ ಎನ್ನುತ್ತಾರೆ.
ತಮ್ಮ ಮೂರು ಎಕರೆ ಜಮೀನಿಗೆ ಆರಂಬದಲ್ಲಿ ಉಳುಮೆ ಮಾಡಿಸಿ ಏಕದಳ,ದ್ವಿದಳ ಧಾನ್ಯಗಳನ್ನು ಭಿತ್ತಿ ಹೂ ಬಿಡುವ ಕಾಲಕ್ಕೆ ಮಣ್ಣಿಗೆ ಸೆರಿಸಿದ್ದು ಬಿಟ್ಟರೆ ಇಪ್ಪತ್ತೈದು ವರ್ಷಗಳಿಂದ ತಮ್ಮ ಭೂಮಿ ಉಳುಮೆ ಕಂಡಿಲ್ಲ. ಈಗ 10 ಮತ್ತು 10 ಅಡಿ ಅಂತರದಲ್ಲಿ ಬಾಳೆಯ ನಡುವೆ ಸಿಲ್ವರ್ ಸಸಿಗಳನ್ನು ನೆಟ್ಟಿದ್ದು ಕಾಳು ಮೆಣಸು ಹಾಕಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ದಸಂಸ ಸಂಘಟನೆಯ ಸಮಯದಲ್ಲಿ ಒಂದು ಬ್ಯಾಗಿಗೆ ಮೈಯುಜ್ಜುವ ಕಲ್ಲು ಮತ್ತು ಒಂದು ಜೊತೆ ಬಟ್ಟೆ ಹಾಕಿಕೊಂಡು ಮನೆ ಬಿಟ್ಟರೆ ವಾರವಾದರೂ ಮನೆಗೆ ಬರುತ್ತಿರಲಿಲ್ಲ.ಆಗ ನಾವು ಸರಕಾರಿ ಕಚೇರಿಗೆ ಹೋದರೆ ವಿಜಿಲೆನ್ಸ್ ಸ್ವ್ಕಾಡ್ ಬಂದಂತೆ ಅಧಿಕಾರಿಗಳು ಹೆದರುತ್ತಿದ್ದರು. ಈಗ ಭ್ರಷ್ಟತೆ, ಸ್ವಜನ ಪಕ್ಷಪಾತ ಹೆಚ್ಚಾಗಿದ್ದು ಯಾರು ಯಾರಿಗೂ ಗೌರವ ಕೊಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸುತ್ತಾರೆ.
"ಕಳೆದ ಮೂರು ವರ್ಷದಿಂದ ನಾನೂ ಹೋರಾಟವನ್ನು ಕಡಿಮೆ ಮಾಡಿ ನೆಲದ ಸಂಪರ್ಕಕ್ಕೆ ಬಂದಿದ್ದೇನೆ. ದುಡಿದು ತೋಟಕಟ್ಟುವ ಮೂಲಕ ನಾವು ಕೂಡ ಸಮಾಜಕ್ಕೆ ಮಾದರಿಯಾಗಬೇಕು.ಬರೀ ಹೋರಾಟ ಚಳವಳಿ ಅಂತ ನಿಂತುಕೊಂಡರೆ ಬೋಳೆತನ ಬರುವ ಅಪಾಯವಿರುತ್ತದೆ. ಕ್ಷೀರಸಾಗರ ಅವರಂತಹವರ ತೋಟವನ್ನು ನೋಡಿದಾಗ ನಾವು ಕೂಡ ಯಾವಾಗ ಅಂತಹ ತೋಟ ಮಾಡುವುದು ಅಂತ ಚಡಪಡಿಕೆ ಶುರುವಾಗುತ್ತದೆ. ಅದಕ್ಕಾಗಿ ಈಗ ನೆಲದ ಸಂಪರ್ಕಕ್ಕೆ ಹೆಚ್ಚು ಬಂದಿದ್ದು ಗಿಡಮರಗಳನ್ನು ಬೆಳೆಸುತ್ತಿದ್ದೇನೆ. ಉತ್ತಮ ಗಾಳಿ,ಸ್ವಚ್ಛ ಪರಿಸರದ ನಡುವೆ ಆರೋಗ್ಯವಾಗಿ ನೆಮ್ಮದಿಯಾಗಿದ್ದೇನೆ" ಎಂದು ಹೇಳುತ್ತಾರೆ. ಹೆಚ್ಚಿನ ಮಾಹಿತಿಗೆ ಭೀಮನಹಳ್ಳಿ ಮಹದೇವ್ 9008884692 ಸಂಪಕರ್ಿಸಬಹುದು.