vaddagere.bloogspot.com

ಸೋಮವಾರ, ಸೆಪ್ಟೆಂಬರ್ 4, 2017

ಅರಿಶಿಣ ಬೇಸಾಯದಲ್ಲಿ ವರದಾನವಾದ ಪ್ರೋಟ್ರೇ ಪದ್ಧತಿ
 ರೈತರ ಮನೆ ಬಾಗಿಲಿಗೆ ತೋಟಗಾರಿಕಾ ಮಹಾವಿದ್ಯಾಲಯ
ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಅರಿಶಿಣ ಒಂದು ಪ್ರಮುಖ ವಾಣಿಜ್ಯ ಬೆಳೆ.ಇದು ಕನರ್ಾಟಕದ ಪ್ರಮುಖ ಸಾಂಬಾರ ಬೆಳೆಯಾಗಿದ್ದು 16 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಇದನ್ನು ಬೆಳೆಯಲಾಗುತ್ತಿದೆ.ಇತ್ತೀಚೆಗೆ ಅರಿಶಿಣ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದ್ದು,ಅದನ್ನು ಕೊಯ್ಲುಮಾಡಿ,ಬೇಯಿಸಿ,ಒಣಗಿಸಿ ಸಂಸ್ಕರಣೆ ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವವರೆಗೆ ರೈತ ಹಲವಾರು ಸಂಕಷ್ಟಗಳನ್ನು ಎದುರಿಸಬೇಕಾಗಿದೆ.
ಸುಧಾರಿತ ಉತ್ಪಾದನಾ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದ ಕಾರಣ ಹೆಕ್ಟರ್ವಾರು ಉತ್ಪಾದಕತೆ ಕಡಿಮೆಯಾಗಿದೆ.ಇದರಿಂದಾಗಿ ಉತ್ಪಾದನಾ ವೆಚ್ಚ ಶೇಕಡ 50 ರಷ್ಟಾಗುತ್ತಿದೆ. ಸಂಪ್ರಾದಾಯಿಕ ವಿಧಾನದಲ್ಲಿ ಅರಿಶಿನ ಬೆಳೆಯುವುದನ್ನು ಬಿಟ್ಟು ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಾಗ ಮಾತ್ರ ಅರಿಶಿನ ಕೃಷಿ ಲಾಭದಾಯಕವಾಗುತ್ತದೆ. ಈ ನಿಟ್ಟಿನಲ್ಲಿ ಮೈಸೂರು ತೋಟಗಾರಿಕಾ ಮಹಾವಿದ್ಯಾಲಯದ ತೋಟಗಾರಿಕೆ ವಿಸ್ತರಣಾ ಘಟಕವು ರೈತರಿಗೆ ಸುಧಾರಿತ ತಂತ್ರಜ್ಞಾನ ಬಳಸಿ ಅರಿಶಿನ ಬೆಳೆಯುವುದನ್ನು ಕಲಿಸಿಕೊಡುತ್ತಿದೆ. ಅದೇ `ಪ್ರೋಟ್ರೇ' ಎಂಬ ಹೊಸ ವಿಧಾನ.
`ಪ್ರೋಟ್ರೇ ವಿಧಾನದಲ್ಲಿ ಗುಣಮಟ್ಟದ ಸಸಿ ಉತ್ಪಾದನೆ' ಮೂಲತಃ ತಮಿಳುನಾಡಿನ ಕೃಷಿಕರೊಬ್ಬರು ಅಭಿವೃದ್ಧಿಪಡಿಸಿದ ತಂತ್ರಜ್ಞಾನವಾಗಿದೆ.ಈ ವಿಧಾನವನ್ನು ಈಗ ಕ್ಯಾಲಿಕಟ್ನ ಭಾರತೀಯ ಮಸಾಲೆ ಬೆಳೆಗಳ ಸಂಶೋಧನಾ ಸಂಸ್ಥೆ ಹಾಗೂ ಮೈಸೂರಿನ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯ ವಿಸ್ತರಣಾ ಘಟಕದ ವಿದ್ಯಾಥರ್ಿಗಳು ಸುಧಾರಿಸಿ ಕೃಷಿಕರ ಅಳವಡಿಕೆಗೆ ದಾರಿಮಾಡಿಕೊಟ್ಟಿದ್ದಾರೆ. ಈಗಾಗಲೇ ಈ ವಿಧಾನದಲ್ಲಿ ನೂರಾರು ರೈತರು ಅರಿಶಿಣ ಬೆಳೆಯುತ್ತಿದ್ದಾರೆ.
ಭಾರತ ವಿಶ್ವದಲ್ಲೇ ಅತಿಹೆಚ್ಚು ಅರಿಶಿಣ ಉತ್ಪಾದಿಸುತ್ತಿರುವ ದೇಶ. 2014-15 ರ ಅಂಕಿಸಂಖ್ಯೆಗಳ ಪ್ರಕಾರ ನಮ್ಮ ದೇಶದಲ್ಲಿ 1,89,140 ಹೆಕ್ಟರ್ ಪ್ರದೇಶದಲ್ಲಿ ಅರಿಶಿಣ ಬೆಳೆಯಲಾಗುತ್ತಿದೆ.ಹೆಕ್ಟರ್ವಾರು ಉತ್ಪಾದನೆ 4.5 ಟನ್ ಇದೆ. ಸುಧಾರಿತ ತಂತ್ರಜ್ಞಾನ ಬಳಸುವುದರಿಂದ ಇದನ್ನು ಹೆಚ್ಚಿಸಬಹುದು.
ಸಾಂಪ್ರದಾಯಿಕ ಪದ್ಧತಿಯಲ್ಲಿ ಅರಿಶಿಣ ನಾಟಿಮಾಡಿದರೆ ಎಕರೆಗೆ ಸಾಮಾಣ್ಯವಾಗಿ 8 ರಿಂದ 10 ಕ್ವಿಂಟಾಲ್ ಬೇಕಾಗುತ್ತದೆ. ಆದರೆ ಪ್ರೋಟ್ರೇ ವಿಧಾನದಲ್ಲಿ ಸಸಿ ಮಾಡಿಕೊಂಡರೆ ಬರಿ 150 ಕೆಜಿ ಮಾತ್ರ ಸಾಕು ಎನ್ನುತ್ತಾರೆ ತೋಟಗಾರಿಕಾ ಮಹಾವಿದ್ಯಾನಿಲಯದ ವಿಸ್ತರಣಾ ಘಟಕದ ಮುಂದಾಳು ಬಿ.ಎಸ್.ಹರೀಶ್.
ನಮ್ಮಲ್ಲಿ ಈಗ ಹಲವಾರು ತಳಿಗಳನ್ನು ಬಿಡುಗಡೆಮಾಡಲಾಗಿದೆ.ಅದರಲ್ಲಿ ಪ್ರಮುಖವಾಗಿ `ಪ್ರತಿಭ,ಐಐಎಸ್ಆರ್ ಅಲ್ಲೆಪಿ ಸುಪ್ರೀಂ ಮತ್ತು ಪ್ರಗತಿ'  ಎಂಬ ಹೆಸರಿನ ಈ ಮೂರು ತಳಿಗಳಿಗೆ ಹೆಚ್ಚು ಬೇಡಿಕೆ ಇದೆ.ಅರಿಶಿಣ ನಿಲರ್ಿಂಗ ಸಸ್ಯಾಭಿವೃದ್ಧಿ ಅಂದರೆ ಗಡ್ಡೆಗಳನ್ನು ಬಳಸಿ ಬೆಳೆಯುವುದರಿಂದ ತಳಿಯ ಜೈವಿಕ ಶುದ್ಧತೆಯನ್ನು ಕಾಪಾಡುವುದು ಸುಲಭ.ಗುಣ ಮಟ್ಟದ ಬಿತ್ತನೆ ಗಡ್ಡೆಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಪ್ರೋಟ್ರೇ ಪದ್ಧತಿಯಲ್ಲಿ ಸಸಿಗಳನ್ನು ಮಾಡಿ ಮಾರಾಟ ಮಾಡುವುದರಿಂದಲ್ಲೂ ರೈತರು ಆದಾಯಗಳಿಸಬಹುದು.
ನೂತನ ನಾಟಿ ವಿಧಾನದ ಅನುಕೂಲಗಳು : ಈ ವಿಧಾನದಲ್ಲಿ ಅರಿಶಿಣ ನಾಟಿ ಮಾಡುವುದರಿಂದ ಬಿತ್ತನೆಯಲ್ಲಿ ಶೇಕಡ 60 ರಿಂದ 70 ರಷ್ಟು ಉಳಿತಾಯವಾಗುತ್ತದೆ. ಬಿತ್ತನೆಗೆ ಬೇಕಾದ ಅರಿಶಿಣದ ಬೆರಳುಗಳ ಸಂಖ್ಯೆಯೂ ಕಡಿಮೆಯಾಗುವುದರಿಂದ ಉತ್ಪಾದನಾ ವೆಚ್ಚ ತಗ್ಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಭೂಮಿ ಸಿದ್ಧತೆಗೆ ಸಾಕಷ್ಟು ಸಮಯ ಸಿಗುತ್ತದೆ. ಪ್ರೋಟ್ರೇಗಳಲ್ಲಿ ಸಸಿ ಬೆಳೆಯಲು ಎರಡು ತಿಂಗಳು ತೆಗೆದುಕೊಳ್ಳುವುದರಿಂದ ಭೂಮಿಯಲ್ಲಿ ಹಸಿರೆಲೆ ಗೊಬ್ಬರಬೆಳೆದು ಮಣ್ಣಿಗೆ ಸೇರಿಸುವುದರಿಂದ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ.
ಎರಡು ತಿಂಗಳು ಬೆಳೆಗೆ ಬೇಕಾದ ನೀರು,ಮಾನವ ಶ್ರಮ,ಗೊಬ್ಬರ ಎಲ್ಲವೂ ಉಳಿದಂತಾಗುತ್ತದೆ. ಮಳೆ ತಡವಾದರೂ ನಾಟಿ ಸಾಧ್ಯ. ಸಸಿಗಳೆಲ್ಲವೂ ಒಂದೆ ಸಮನಾಗಿ ಬರುವುದರಿಂದ ನಿರೀಕ್ಷಿತ ಇಳುವರಿ ತೆಗೆಯಬಹುದು. ಸಸಿಗಳು ಬೇಗನೆ ಬೆಳೆಯುವುದರಿಂದ ಕಳೆ ಕಡಿಮೆ. ಇದರಿಂದ ಕಳೆ ನಿರ್ವಹಣೆ ವೆಚ್ಚವೂ ತಗ್ಗುತ್ತದೆ.
ಸಾಂಪ್ರದಾಯಿಕ ಬೆಳೆಯಲ್ಲಿ ಗಡ್ಡೆಯ ಬೆಳವಣಿಗೆ ಬಿತ್ತನೆಯಾದ 5 ತಿಂಗಳಿಗೆ ಪ್ರಾರಂಭವಾದರೆ ಸಸಿ ನಾಟಿಮಾಡಿದಾಗ ಮೂರು ತಿಂಗಳಿನಿಂದಲೇ ಆರಂಭವಾಗುತ್ತದೆ ಎನ್ನುತ್ತಾರೆ ಹರೀಶ್.
ಅನುಭವಧಾರಿತ ಕಲಿಕೆ : ನಮ್ಮ ಶಿಕ್ಷಣ ವ್ಯವಸ್ಥೆ ಹೇಗಿದೆ ಎಂದರೆ ನಾವು ಓದುವುದಕ್ಕೂ ಜೀವನ ನಡೆಸುತ್ತಿರುವುದಕ್ಕೂ ಸಂಬಂಧವೇ ಇರುವುದಿಲ್ಲ ಅನ್ನುವ ಹಾಗೆ ಶಿಕ್ಷಣ ಪದ್ಧತಿ ಇರುತ್ತದೆ.ಸಾಹಿತ್ಯ ಓದಿದವನು ಆಡಳಿತ ನಡೆಸುವ ಜಾಗದಲ್ಲಿ ಕುಳಿತರೆ,ವೈದ್ಯಕೀಯ ವಿಜ್ಞಾನ ಕಲಿತವರು ಪೊಲೀಸ್ ಇಲಾಖೆಯಲ್ಲಿ ಲಾಠಿ ಹಿಡಿದು ನಿಂತಿರುತ್ತಾರೆ. ಆದರೆ ಕೃಷಿ ವಿಶ್ವ ವಿದ್ಯಾನಿಲಯಗಳಲ್ಲಿ ಕಲಿತದ್ದು ಬದುಕಿಗೆ ಅನ್ವಯವಾಗುವಂತಹ ವಿಧಾನವೊಂದನ್ನು ಜಾರಿಗೆ ತರಲಾಗಿದೆ.ಅದೇ `ಅನುಭವಧಾರಿತ ಕಲಿಕಾ' ಯೋಜನೆ. 
ರಾಜ್ಯದಲ್ಲಿ ಈಗ ಆರು ಕೃಷಿ ಸಂಬಂಧಿ ವಿಶ್ವವಿದ್ಯಾನಿಲಯಗಳಿಗೆ.ಕಳೆದ ನಾಲ್ಕು ವರ್ಷಗಳಿಂದ ಎಲ್ಲಾ ಕೃಷಿ ವಿವಿಗಳಲ್ಲೂ ಅನುಭವಧಾರಿತ ಕಲಿಕಾ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ. ವಾಣಿಜ್ಯ ತೋಟಗಾರಿಕೆ,ಜೈವಿಕ ಪೀಡೆನಾಶಕ ಉತ್ಪಾದನೆ.ಸಂರಕ್ಷತ ಕೃಷಿ,ಮೌಲ್ಯವರ್ಧನೆ ಮತ್ತು ಸಂಸ್ಕರಣೆ ಎಂಬ ಐದು ವಿಭಾಗಗಳಲ್ಲಿ ವಿದ್ಯಾಥರ್ಿಗಳು ತಮಗೆ ಆಸಕ್ತಿ ಇರುವ ಕ್ಷೇತ್ರವನ್ನು ಆಯ್ಕೆಮಾಡಿಕೊಂಡು ಕೆಲಸಮಾಡಬಹುದು.
ಸಧ್ಯ ಮೈಸೂರು ತೋಟಗಾರಿಕಾ ಮಹಾವಿದ್ಯಾಲಯದಲ್ಲಿ 53 ವಿದ್ಯಾಥರ್ಿಗಳು ಈ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ . ಈ ವಿದ್ಯಾಥರ್ಿಗಳು ಸೇರಿ ಈ ಬಾರಿ ಪ್ರೋಟ್ರೇ ಪದ್ಧತಿಯಲ್ಲಿ ಅರಿಶಿಣ ಸಸಿಗಳನ್ನು ಬೆಳೆಸಿದ್ದರು.ಇದನ್ನು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ರೈತರು ಖರೀದಿಸಿ ತಮ್ಮ ಜಮೀನಿನಲ್ಲಿ ನಾಟಿ ಮಾಡಿದ್ದಾರೆ. ಆ ಮೂಲಕ ಗುಣಮಟ್ಟದ ಸಸಿಗಳ ಜೊತೆಗೆ ಸಮಯ,ನೀರು,ಗೊಬ್ಬರ ಎಲ್ಲವನ್ನೂ ಉಳಿದಂತಾಗಿದೆ ಎನ್ನುತ್ತಾರೆ ಪ್ರೋಟ್ರೇ ಪದ್ಧತಿಯಲ್ಲಿ ಬೆಳೆದ ಅರಿಶಿಣ ಸಸಿಗಳನ್ನು ಖರೀದಿಸಿ ತಮ್ಮ ಜಮೀನಿನಲ್ಲಿ ನಾಟಿ ಮಾಡಿರುವ ಗುಂಡ್ಲುಪೇಟೆ ತಾಲೂಕಿನ ಚೌಡಳ್ಳಿ ಗ್ರಾಮದ ರೈತರಾದ ಸದಾಶಿವಮೂತರ್ಿ ಮತ್ತು ರಾಜೇಂದ್ರ.
ವಿಜ್ಞಾನಿಗಳು ಮತ್ತು ರೈತರ ಸಹಭಾಗಿತ್ವದಲ್ಲಿ ಅರಿಶಿಣ ಬಿತ್ತನೆ ಗಡ್ಡೆ ಉತ್ಪಾದನೆ ಯೋಜನೆಯನ್ನು ಕೃಷಿ ಮಹಾವಿದ್ಯಾಲಯ ಜಾರಿಗೆ ತಂದಿದೆ. ಆಸಕ್ತ ರೈತರು ಈರುಳ್ಳಿ,ಅರಿಶಿಣ ಬೀಜೋತ್ಪಾದನೆಯನ್ನು ಒಪ್ಪಂದದಲ್ಲಿ ಬೆಳೆದುಕೊಡಬಹುದು. ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ಮುಂದಾಳು ಬಿ.ಎಸ್.ಹರೀಶ್ 8310070998 ಸಂಪಕರ್ಿಸಿ.
============================================================
ಪ್ರೋಟ್ರೇಯಲ್ಲಿ ಅರಿಶಿಣ ಬೆಳೆದ ಪ್ರಸಾದ್...
ಪ್ರೋಟ್ರೇ ವಿಧಾನದಲ್ಲಿ ಅರಿಶಿಣ ಬೆಳೆದು ಯಶಸ್ಸು ಕಂಡ ಪ್ರಯೋಗಶೀಲ ರೈತ ನಂಜನಗೂಡು ತಾಲೂಕಿನ ಹಂಚೀಪುರದ ಪ್ರಸಾದ್ ಹೇಳುವಂತೆ ಈ ಪದ್ಧತಿಯಲ್ಲಿ ಅರಿಶಿಣ ಬೆಳೆದರೆ ಹಣ,ನೀರು,ಸಮಯ,ಗೊಬ್ಬರ ಎಲ್ಲವನ್ನು ಕಡಿಮೆ ಪ್ರಮಾಣದಲ್ಲಿ ಬಳಸಬಹುದು. ಸಸಿಗಳು ಒಂದೇ ಸಮನಾಗಿ ಬರುವುದರಿಂದ ಹೆಚ್ಚಿನ ಇಳುವರಿಯೂ ಬರುತ್ತದೆ.
ಚಾಮರಾಜನಗರ ಸಮೀಪ ಇರುವ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದವರು ಕಳೆದ ಸಾಲಿನಲ್ಲಿ 150 ಕೆಜಿ `ಪ್ರತಿಭಾ' ತಳಿಯ ಅರಿಶಿಣ ಭಿತ್ತನೆ ಕೊಂಬುಗಳನ್ನು ಕೊಟ್ಟಿದ್ದರು. ಸಾಂಪ್ರದಾಯಿಕ ಪದ್ಧತಿಯಲ್ಲಿ ನಾಟಿ ಮಾಡಿದರೆ ಒಂದು ಎಕರೆಗೆ ಸಾಮಾನ್ಯವಾಗಿ 8 ರಿಂದ 10 ಕ್ವಿಂಟಾಲ್ ಅರಿಶಿನ ಬೇಕಾಗುತ್ತದೆ. ಅಷ್ಟೊಂದು ಪ್ರಮಾಣದಲ್ಲಿ `ಪ್ರತಿಭಾ'ತಳಿಯ ಭಿತ್ತನೆ ಅರಿಶಿನ ಸಿಗದ ಕಾರಣ 150 ಕೆಜಿಯನ್ನೇ ಪ್ರೋಟ್ರೇ ವಿಧಾನದಲ್ಲಿ ಸಸಿಗಳನ್ನು ನರ್ಸರಿಯಲ್ಲಿ ಬೆಳೆಸಿಕೊಂಡೆ.
50 ಗುಣಿಗಳಿರುವ ಪ್ರೋಟ್ರೇ ಒಂದಕ್ಕೆ ಹದಿಮೂರು ರೂಪಾಯಿಯಂತೆ ಒಟ್ಟು 600 ಟ್ರೇಗಳನ್ನು ಖರೀದಿಸಿದೆ. 600 ಕೆಜಿ ಎರೆಗೊಬ್ಬರ,600 ಕೆಜಿ ಕೋಕೋಪೀಟ್ ಜೊತೆಗೆ ತಲಾ ಎರಡು ಕೆಜಿ ಟ್ರೈಕೋಡಮರ್ಾ,ಸುಡೋಮನಸ್ ಮಿಶ್ರಣಮಾಡಿ ಅದರಲ್ಲಿ ತುಂಬಿದೆ. ಒಟ್ಟು 30 ಸಾವಿರ ಗುಣಿಗಳಲ್ಲಿ ಗಡ್ಡೆಗಳನ್ನು ಬಿತ್ತನೆಮಾಡಿಕೊಂಡೆ.ಅದರಲ್ಲಿ ಶೇಕಡ 70 ರಷ್ಟು ಸಸಿಗಳು ಚೆನ್ನಾಗಿ ಮೊಳಕೆ ಬಂದು ನಾಟಿಗೆ ದೊರೆತವು.ಒಂದು ಎಕರೆಯಲ್ಲಿ ಒಟ್ಟು 18 ಸಾವಿರ ಸಸಿಗಳನ್ನು ನಾಟಿಮಾಡಿದೆ.ಇದರಿಂದ ಪೈರುಗಳೆಲ್ಲ ಒಂದೆ ಸಮನಾಗಿ ಬಂದವು.112 ಕ್ವಿಂಟಾಲ್ ಅರಿಶಿನ ಇಳುವರಿ ಬಂತು. ಅದನ್ನು ಪ್ರತಿ ಕ್ವಿಂಟಾಲ್ಗೆ ಮೂರು ಸಾವಿರ ರೂಪಾಯಿಯಂತೆ ಬಿತ್ತನೆಗೆ ಮಾರಾಟ ಮಾಡಿದೆ.ಇದರಿಂದ 3,33,000 ರೂಪಾಯಿ ಬಂತು ಎನ್ನುತ್ತಾರೆ ಪ್ರಸಾದ್.
ಅಂತರ್ಜಲ ಕುಸಿತ. ಕೃಷಿ ಕಾಮರ್ಿಕರ ತೊಂದರೆ,ಅಕಾಲಿಕ ಮಳೆಯಿಂದ ಬೇಸತ್ತು ಈಗ ತಮ್ಮ ಕೃಷಿ ಪದ್ಧತಿಯನ್ನೇ ಬದಲಿಸಿಕೊಳ್ಳಲು ಮುಂದಾಗಿರುವ ಪ್ರಸಾದ್ ವಾಣಿಜ್ಯ ಬೆಳೆಗಳನ್ನು ಕಡಿಮೆ ಮಾಡಿ ಸಾವಯವ ವಿಧಾನದಲ್ಲಿ ಅರಣ್ಯಧಾರಿತ ತೋಟಗಾರಿಕೆ ಮಾಡಲು ಮುಂದಾಗಿದ್ದಾರೆ. ಹೆಚ್ಚು ಬೋರ್ವೆಲ್ ನೀರನ್ನು ಅವಲಂಭಿಸದೆ,ಮಳೆಯಾಶ್ರಯದಲ್ಲೆ ಬೇಸಾಯ ಮಾಡುವುದನ್ನು ರೂಢಿಸಿಕೊಳ್ಳದಿದ್ದರೆ ಕೃಷಿ ನಷ್ಟದ ಕಸುಬಾಗಿ ರೈತರು ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ. ರಾಸಾಯನಿಕ,ಕ್ರಿಮಿನಾಶಕ ಬಳಸಿ ಈಗಾಗಲೇ ನೆಲ ಜಲ ಎಲ್ಲವನ್ನೂ ಕೆಡಿಸಿದ್ದೇವೆ.ಈಗಲಾದರೂ ಎಚ್ಚೆತ್ತುಕೊಂಡು ಕೃಷಿಯಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನು ಹಾಕಬೇಕು ಎನ್ನುವ ಪ್ರಸಾದ್ ಈಗ 200 ಸೀಬೆ,100 ಹಲಸು,250 ಸೀತಾಫಲ,100 ಬಾಲಾಜಿ ನಿಂಬೆ,80 ಜಂಬುನೇರಳೆ ಜೊತೆಗೆ ಒಂದು ಸಾವಿರ ನುಗ್ಗೆ ಗಿಡಗಳನ್ನು ತಂದು ಜಮೀನಿನಲ್ಲಿ ನಾಟಿ ಮಾಡುತ್ತಿದ್ದಾರೆ. ಹೆಚ್ಚಿನ ಮಾಹಿತಿಗೆ ಪ್ರಸಾದ್ 9449732255 ಸಂಪಕರ್ಿಸಿ.





ಸೋಮವಾರ, ಆಗಸ್ಟ್ 28, 2017

 ಜಲಸಾಕ್ಷರತೆಗೆ ಮುನ್ನುಡಿ ಬರೆದ `ಭಗೀರಥ' ಮಸಗಿ # ನೀರಿನ ಸಮಸ್ಯೆ ವಿರುದ್ಧ ಸಮರ ಸಾರಿದ `ನೀರು ಡಾಕ್ಟರ್'  # ಹತಾಶ ರೈತರ ಆಶಾಕಿರಣ
ನದಿ ಜೋಡಣೆ,ಪಾತಾಳ ಗಂಗೆ,ಬೃಹತ್ ಅಣೆಕಟ್ಟು ನಿರ್ಮಾಣದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ.ಬಿದ್ದ ಮಳೆಯ ನೀರನ್ನು ಯಾರೂ ನೋಡುತ್ತಿಲ್ಲ.ದೊಡ್ಡ ದೊಡ್ಡ ಅಣೆಕಟ್ಟುಗಳು,ನದಿ ಜೋಡಣೆ,ಮೋಡ ಭಿತ್ತನೆಯಂತವು ಆಡಳಿತಶಾಯಿ ಮತ್ತು ಗುತ್ತಿಗೆದಾರಸ್ನೇಹಿ ಯೋಜನೆಗಳು. ನಾವು ನದಿ ಜೋಡಣೆಗಿಂತ ಜನರನ್ನು ಆಕಾಶಕ್ಕೆ ಜೋಡಿಸಬೇಕಿದೆ.ನಮ್ಮಲ್ಲಿ ಶೇಕಡ 2-3 ರಷ್ಟು ಮಳೆಯ ನೀರನ್ನು ಹಿಡಿದಿಡಲಾಗುತ್ತಿದೆ. ಉಳಿದ ಎಲ್ಲಾ ನೀರು ಸಮುದ್ರ ಸೇರಿ ವ್ಯರ್ಥವಾಗುತ್ತಿದೆ. ಶೇ.30 ರಿಂದ 40 ರಷ್ಟು ನೀರನ್ನು ಮಣ್ಣಿಗೆ ಸೇರಿಸಿಬಿಟ್ಟರೆ ನೀರಿನ ಸಮಸ್ಯೆಯೇ ತೀರಿಹೋಗುತ್ತದೆ ಎನ್ನುತ್ತಾರೆ ನೀರಿನ ಡಾಕ್ಟರ್ ಎಂದೇ ಪ್ರಸಿದ್ಧರಾದ ಜಲತಜ್ಞ ಅಯ್ಯಪ್ಪ ಮಸಗಿ.
ಸಾವಿರಾರು ಕೆರೆಗಳ ನಿರ್ಮಾಣಮಾಡಿ ,ಒಂದು ಲಕ್ಷಕ್ಕೂ ಹೆಚ್ಚು ಬತ್ತಿದ ಬಾವಿಗಳಿಗೆ ಜಲ ಮರುಪೂರಣಮಾಡಿ `ಯುನಿಕ್ ವರ್ಲ್ಡ್' ಪುಸ್ತಕದಲ್ಲಿ ದಾಖಲಾಗಿ `ನೀರಿನ ಗಾಂಧಿ' ಎಂದು ಕರೆಸಿಕೊಂಡಿರುವ ಜಲತಜ್ಞ ಮಸಗಿ ಅವರ ಪದ್ಧತಿಗಳನ್ನು ಅಳವಡಿಸಿಕೊಂಡರೆ ನೀರಿನ ಬರ ನೀಗಲು ಯಾವ ಮೋಡ ಭಿತ್ತನೆಯೂ ,ನದಿ ಜೋಡಣೆಯೂ ಬೇಕಾಗಿಲ್ಲ.
ಎಲ್ಲಾಕಡೆ ನೀರಿಗಾಗಿ ಬೊಬ್ಬೆ ಹಾಕುತ್ತಿದ್ದರೆ ಬರದಿಂದ ತತ್ತರಿಸಿ ಹೋಗಿದ್ದ ಕುಗ್ರಾಮದಿಂದ ಬೆಳೆದುಬಂದ ಇಂಜಿನಿಯರ್ ಅಯ್ಯಪ್ಪ ಮಸಗಿ `ಮಳೆನೀರು ನಿಲ್ಲಿಸಿದರೆ ನಿತ್ಯೋತ್ಸವ, ಹರಿಯ ಬಿಟ್ಟರೆ ಬರಡೋತ್ಸವ' ಎನ್ನುತ್ತಾ, ಬಿದ್ದ ಮಳೆಯ ನೀರನ್ನು ಭೂಮಿಗೆ ಹಿಂಗಿಸಿಬಿಟ್ಟರೆ 2050 ರವೇಳೆಗೆ ದೇಶದಲ್ಲಿ `ಜಲಕ್ರಾಂತಿ'ಯೇ ನಡೆಯುತ್ತದೆ ಎನ್ನುತ್ತಾರೆ.
ಗದಗ ಜಿಲ್ಲೆ ರೋಣ ತಾಲ್ಲೂಕಿನ ನಾಗರಾಳ ಗ್ರಾಮದ ಮಸಗಿ ಜಲ ಸಂರಕ್ಷಣೆಗಾಗಿಯೇ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದಾರೆ. ಜಲ ಜಾಗೃತಿಗಾಗಿ ಸ್ಥಾಪನೆಯಾಗಿರುವ `ವಾಟರ್ ಲಿಟರಸಿ ಫೌಡೇಷನ್' ನ ವ್ಯವಸ್ಥಾಪಕ ಟ್ರಸ್ಟಿಯೂ ಆಗಿರುವ ಅಯ್ಯಪ್ಪ ಮಸಗಿ ಗ್ರಾಮೀಣಾಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅನಿಷ್ಠಾನಗೊಳಿಸಿದ ಸಾಧನೆಗಾಗಿ 2009 ನೇ ಸಾಲಿನಲ್ಲಿ ಪ್ರತಿಷ್ಠಿತ `ಜಮ್ನಾಲಾಲ್ ಬಜಾಜ್ ರಾಷ್ಟ್ರೀಯ ಪ್ರಶಸ್ತಿ'  ಹಾಗೂ `ರಾಜ್ಯೋತ್ಸವ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ.
ಮಸಗಿಯವರು ಅಂತರ್ಜಲ ನಿರ್ವಹಣೆ ಮತ್ತು ಸಾವಯವ ಕೃಷಿಯ ಮಹತ್ವ ಕುರಿತು `ನೆಲ-ಜಲ-ಜನ' ಹಾಗೂ `ಭಗೀರಥ-ನೀರಿನ ಸಮಸ್ಯೆಯ ವಿರುದ್ಧ ಸಮರ' ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ನೀರಿನ ಮಹತ್ವವವನ್ನು ಸಾರುವ `ಭಗೀರಥ' ಎಂಬ ಕಿರುಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ನೀರಿನ ವಿಷಯದಲ್ಲಿ ಪರಿಣತರಾಗಿರುವ ಮಸಗಿ ಅವರು ಹೇಳುವುದು ಯಾಕೆ ಮುಖ್ಯ ಎಂದರೆ `ರಾಜೇಂದ್ರ ಸಿಂಗ್,ಅಣ್ಣಾ ಹಜಾರೆ,ಇಸ್ರೇಲ್ ವಿಜ್ಞಾನಿ ಎರಾ ಡೆನ್ಸನ್ ಅವರ ಜೀವನದಿಂದ ಪ್ರೇರಣೆ ಪಡೆದು ನೀರಿನ ಹುಚ್ಚು ಹಿಡಿಸಿಕೊಂಡರು. ತಮ್ಮ ಬಿಡುವಿನ ವೇಳೆಯನ್ನು ಜಲಸಂರಕ್ಷಣೆ ಕುರಿತು ಅಧ್ಯಯನಕ್ಕೆ ಮೀಸಲಿಟ್ಟರು'. ಇದು ಇಷ್ಟೇ ಆಗಿದ್ದರೆ ಇವರೂ ಹತ್ತರಲ್ಲಿ ಒಬ್ಬರಾಗುತ್ತಿದ್ದರು ಮಾತಿನಲ್ಲೇ ಕಳೆದುಹೋಗುತ್ತಿದ್ದರು.
ತಾವು ಪ್ರೇರಣೆ ಪಡೆದು ಕಲಿತ ಜ್ಞಾನವನ್ನು ಸ್ವತಃ ತಾವೇ ಪ್ರಯೋಗಿಸಿ ಯಶಸ್ಸುಪಡೆದು,ಸ್ವಾನುಭವನ್ನು ಹೇಳುತ್ತಾ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾದರು.ಈ ಕಾರಣಕ್ಕಾಗಿ ಮಸಗಿ ಅವರು ನಮಗೆ ತುಂಬಾ ಮುಖ್ಯ ಅನಿಸುತ್ತಾರೆ. 1994ರಲ್ಲಿ ಗದಗ ಜಿಲ್ಲೆಯ ಗಜೇಂದ್ರಗಡದ ಬಳಿ ಆರು ಎಕರೆ ಭೂಮಿ ಖರೀದಿಸಿ ಮಳೆ ನೀರುಕೊಯ್ಲು ಪ್ರಯೋಗ ನಡೆಸಿದರು. ಬರದನಾಡಿನಲ್ಲಿ ಅಡಿಕೆ,ತೆಂಗು,ಕಾಫಿ,ಬಾಳೆಯಂತಹ ಮಲೆನಾಡ ಬೆಳೆಗಳನ್ನು ಬೆಳೆದುತೋರಿಸಿದರು. ಪ್ರತಿಷ್ಠಿತ ಎಲ್ ಅಂಡ್ ಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಮಸಗಿ 2002 ರಲ್ಲಿ ನೌಕರಿಗೆ ವಿದಾಯ ಹೇಳಿ ಜಲಸಾಕ್ಷರತೆ ಮೂಡಿಸುವ ಕಾಯಕನಿರತರಾಗಲು ಸಂಕಲ್ಪ ಮಾಡಿದರು. ಊರೂರು ಅಲೆದರು.ಮಸಗಿಯವರ ಆಸಕ್ತಿಯನ್ನು ಗಮನಿಸಿದ ಅಶೋಕ ಫೌಂಡೇಷನ್ ಜಲಸಂರಕ್ಷಣೆ ಜಾಗೃತಿ ಮುಂದುವರಿಸಲು `ಅಶೋಕಾ ಫೆಲೋಶಿಪ್' ನೀಡಿದರು. ನಂತರ ಮಸಗಿ 2005 ರಲ್ಲಿ `ವಾಟರ್ ಲಿಟರಸಿ ಫೌಂಡೇಶನ್' ಸ್ಥಾಪಿಸಿ ಕನರ್ಾಟಕ,ತಮಿಳುನಾಡು,ಗೋವಾ ಸೇರಿದಂತೆ ಹತ್ತಾರು ರಾಜ್ಯಗಳಲ್ಲಿ ಸುತ್ತಾಡಿ ಜಲ ಸಾಕ್ಷರತೆಯ ಅರಿವು ಮೂಡಿಸುತ್ತಿದ್ದಾರೆ. ಪ್ರತ್ಯಾಕ್ಷಿಕೆಗಳನ್ನು ನಿಮರ್ಾಣಮಾಡಿದ್ದಾರೆ.ಇಂಗ್ಲೆಂಡ್ನ ಗಾಡರ್ಿಯನ್ ಪತ್ರಿಕೆ ಮಸಗಿಯವರನ್ನು ನೀರಿನ ಡಾಕ್ಟರ್ ಎಂದು ಕರೆದರೆ,ಜಿಎಸ್ಐಎಮ್ ಸಂಸ್ಥೆಯ ದೀನ ದಯಾಳನ್ನರು `ನೀರಿನ ಗಾಂಧಿ' ಎಂದು ಕರೆದಿದೆ.ಇಂತಹ ಜಲತಜ್ಞ ಇತ್ತೀಚಿಗೆ ಮೈಸೂರಿಗೂ ಬಂದಿದ್ದ ಅಯ್ಯಪ್ಪ ಮಸಗಿ ಎರಡು ಉಪನ್ಯಾಸಗಳನ್ನು ನೀಡಿ ನಗರದ ಜನರಲ್ಲಿಯೂ ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸಿ ಹೋದರು.
ಇದುವರೆಗೆ ಮಸಗಿಯವರು ಸುಮಾರು 300 ಕ್ಕೂ ಹೆಚ್ಚು ಅಪಾಟರ್್ಮೆಂಟ್ಗಳಿಗೆ, ಹತ್ತು ಆರುಸಾವಿರಕ್ಕೂ ಹೆಚ್ಚು ಮನೆಗಳಿಗೆ ಮಳೆನೀರು ಸಂಗ್ರಹದ ಮಾದರಿಗಳನ್ನು ಅನುಷ್ಠಾನಗೊಳಿಸಿದ್ದಾರೆ.ಒಂದು ಲಕ್ಷಕ್ಕೂ ಹೆಚ್ಚು ಕೊಳವೆ ಬಾವಿಗಳಿಗೆ ಜಲಮರುಪೂರಣ ಮಾಡಿದ್ದಾರೆ.ನೀರಾವರಿ ರಹಿತ ಕೃಷಿ ಭೂಮಿಯಲ್ಲಿ ಮಳೆನೀರು ಹಿಂಗಿಸುವ ಸ್ಯಾಂಡ್ಫಿಟ್,ಪಟ್ಟಾ ಬಡ್ಡಿಂಗ್ನಂತಹ ಮಾದರಿಗಳನ್ನು ಅನುಶೋಧಿಸಿ ಹತ್ತಾರು ಸಾವಿರ ಹೆಕ್ಟರ್ ಪ್ರದೇಶದಲ್ಲಿ ಅಳವಡಿಸಿದ್ದಾರೆ. ಉತ್ತರ ಕನರ್ಾಟಕದ ಒಂಭತ್ತು ಜಿಲ್ಲೆಗಳ ಮೂರು ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಇಂತಹ ಮಾದರಿಗಳನ್ನು ಅಳವಡಿಸಿರುವುದನ್ನು ಕಾಣಬಹುದು.
ಎಲ್ಲಾ ಹಳ್ಳಿಗಳಲ್ಲಿ `ಹಳ್ಳದ ಜಲ ಮರುಪೂರಣ'ಮಾಡಿದರೆ ಅಂತರ್ಜಲ ಹೆಚ್ಚುತ್ತದೆ. ಒಂದು ಎಕರೆ ಪ್ರದೇಶದಲ್ಲಿ ಒಂದು ಇಂಚು ಮಳೆ ಆದರೆ 10044 ಲೀಟರ್ ವ್ಯರ್ಥವಾಗಿ ಹರಿದುಹೋಗುತ್ತದೆ. ವರ್ಷಕ್ಕೆ ಸುಮಾರು 18-20 ಲಕ್ಷ ಲೀಟರ್ ನೀರು ಹರಿದು ಹೋಗುತ್ತದೆ.ಮೊದಲ ಮಳೆಯ 150 ಮಿ.ಮೀ.ಮಳೆನೀರನ್ನು ಕೆಂಪು ಮಣ್ಣು ಹೀರಿಕೊಳ್ಳುತ್ತದೆ.ಕಪ್ಪು ಮಣ್ಣು ಮೊದಲ ಮಳೆಯ 300 ಮಿ.ಮೀ. ಮಳೆನೀರನ್ನು ಹೀರಿಕೊಳ್ಳುತ್ತದೆ.ನಂತರ ಬರುವ ಮಳೆಯ ನೀರು ಹರಿದು ಪೋಲಾಗುತ್ತದೆ.ಜೊತೆಗೆ ಒಂದು ಹೆಕ್ಟರ್ನಿಂದ 3-4 ಟನ್ ಫಲವತ್ತಾದ ಮಣ್ಣು ಸಮದ್ರ ಸೇರುತ್ತದೆ.
ಇವತ್ತು ರಾಸಾಯನಿಕ ಬಳಸಿದ ಭೂಮಿಗೆ ನೀರು ಹಿಡಿದಿಡಲು ಆಗುತ್ತಿಲ್ಲ.ಅಕ್ಕಡಿ ಬೆಳೆಗಳು ಇಲ್ಲ.ಹಿಂದೆ ರೈತರಿಗೆ ಯಾವರೀತಿ ಕೃಷಿ ಮಾಡಬೇಕೆನ್ನುವುದುಗೊತ್ತಿತ್ತು. ಉರುಳಿ,ಅಲಸಂದೆ,ಉಚ್ಚೆಳ್ಳು,ಎಳ್ಳು, ತೊಗರಿ,ಉದ್ದು ಎಲ್ಲಾ ಅಕ್ಕಡಿ ಹಾಕುತ್ತಿದ್ದರು. ಅವುಗಳ ಎಲೆಬಿದ್ದು ಭೂಮಿಗೆ ಹಾಸಿಗೆಯಂತಾಗುತ್ತಿತ್ತು.ಬಿದ್ದ ನೀರನ್ನು ಮಣ್ಣು ಹೀರಿಕೊಳ್ಳುತ್ತಿತ್ತು. ಆದರೆ ಈಗ ಹಸಿರು ಕ್ರಾಂತಿಯ ದುಷ್ಪರಿಣಾಮ ದಶಕಗಟ್ಟಲೆ ರಾಸಾಯನಿಕ ಹಾಕಿದ ಮಣ್ಣಿನಲ್ಲಿ ಬಿದ್ದ ನೀರು ಹಿಂಗುವುದು ಕಷ್ಟವಾಗಿದೆ. ಭೂಮಿಯಲ್ಲಿ ನೀರು ಹಿಂಗಬೇಕಾದರೆ ಸಾವಯವ ಪದಾರ್ಥ ಇರಲೇಬೇಕು. ಆದ್ದರಿಂದ ಮಳೆನೀರಿನ ಕೊಯ್ಲು ಜೊತೆಗೆ ಸಾವಯವ ಸಮಗ್ರ ಬೇಸಾಯ ಪದ್ಧತಿಯ ಕಡೆಗೆ ರೈತರು ಮರಳಿ ಬರಬೇಕು ಎನ್ನುತ್ತಾರೆ ಅಯ್ಯಪ್ಪ ಮಸಗಿ.
ಜಲಾನಯನ ಇಲಾಖೆಯವರು ಹೆಚ್ಚಾಗಿ ಟ್ರಂಚ್ಕಂಬಂಡ್ ಮಾಡುತ್ತಾರೆ.ಅದಕ್ಕಿಂತ ಕಂಪಾಟರ್್ಮೆಂಟ್ ಬಂಡಿಂಗ್ ಉತ್ತಮ ಎನ್ನುವ ಮಸಗಿ `ಒಂದು ಮೀಟರ್ ಆಳ,ಒಂದು ಮೀಟರ್ ಅಗಲ,ಹತ್ತು ಮೀಟರ್ ಉದ್ದದ ಟ್ರಂಚ್ಗಳನ್ನು ತೆಗೆದು ನಡುವೆ ಒಂದು ಚದರ ಮೀಟರ್ ಜಾಗ ಬಿಡಬೇಕು. ಹೀಗೆ ಮಾಡಿದರೆ ಒಂದು ಟ್ರಂಚ್ನಲ್ಲಿ 10 ಸಾವಿರ ಲೀಟರ್ ನೀರು ಹಿಂಗುತ್ತದೆ. ಅಕಾಲಿಕ ಮಳೆಗೆ ಹೊಲಗಳಲ್ಲಿ ಹಿಂಗು ಗುಂಡಿಗಳನ್ನು ಮಾಡಿಕೊಳ್ಳುವುದು ಒಳ್ಳೆಯ ಬರ ಪರಹಾರ ಎನ್ನುತ್ತಾರೆ.
`ಯಾರದೇ ಹೊಲಕ್ಕೆ ಹೋದರೂ ನಾನು ನೋಡುವುದು ಬದುವನ್ನು.ಎಲ್ಲಾ ಸಿರಿ ಸಂಪತ್ತು ಇರುವುದೆ ಬದುವಿನಲ್ಲಿ.ಶ್ರೀಗಂಧ,ಹೆಬ್ಬೇವು,ಸಿಲ್ವರ್ ಓಕ್, ನಿಂಬೆ,ತೆಂಗು ಎಲ್ಲವನ್ನು ಬದುವಿನಲ್ಲಿ ಹಾಕಿದರೆ ಕೃಷಿಗೆ ಪೂರಕವಾದ ವಾತಾವರಣ ನಿಮರ್ಾಣವಾಗುತ್ತದೆ. ರೈತರು 12 ತಿಂಗಳು ಕೆಲಸ ಇರುವಂತ ಕೃಷಿಮಾಡಬೇಕು.ಕಾಡು ಇರಬೇಕು,ಸಂಪತ್ತು ಕೊಡುವಂತಹ ಹಣ್ಣಿನ ಮರಗಿಡಗಳೂ ಇರಬೇಕು' ಎನ್ನುವುದು ಮಸಗಿಯವರ ಅನುಭವದ ಮಾತು.
ನಾವು ಯಾವುದನ್ನೇ ಮಾಡಿದರು ಅದರ ಫಲಿತಾಂಶ ಉತ್ತಮವಾಗಿರಬೇಕು ಎನ್ನುವ ಮಸಗಿ `ಜಲ ಮರುಪೂರಣ ಎನ್ನುವುದು ಜನರದ್ದೇ ಯೋಜನೆಯಾಗಬೇಕು.ಅದು ಪ್ರತಿ ಕ್ಷಣವೂ ಅವರ ಮನದಲ್ಲಿ ನಿಲ್ಲಬೇಕು.ತಮ್ಮ ಜಮೀನಿನಲ್ಲಿ ನೀರು ಹಿಂಗಿಸುವ ಕೆಲಸಮಾಡಲು ಸರಕಾರಿ ಯೋಜನೆಗಳಿಗಾಗಿ ಕಾಯುತ್ತಾ ಕುಳಿತಿರಬಾರದು.ಜೀವನೋಪಯೋಗಕ್ಕಾಗಿ ನೀರು ಬೇಕೆಬೇಕು ಎಂದು ಅರಿತುಕೊಂಡು ಹೊಟ್ಟೆ ಬಟ್ಟೆ ಕಟ್ಟಿ ಇದಕ್ಕೆ ದುಡ್ಡು ಹಾಕಬೇಕು' ಎನ್ನುತ್ತಾರೆ.
2020ರ ವೇಳೆಗೆ ಭಾರತ ಮತ್ತೆ ಆಹಾರ ಮತ್ತು ನೀರಿನ ಕೊರತೆ ಎದುರಿಸುವ ಸಾಧ್ಯತೆ ಇದೆ.ಕಾರಣ ಭೂಮಿಯ ಮೇಲಿನ ನೀರು, ನೆಲದ ನೀರು, ಅಂತರ್ಜಲ ಈ ಮೂರನ್ನು ಬೇಕಾಬಿಟ್ಟಿ ಬಳಸುತ್ತಿರುವುದು. ಈಗ ಇದರಿಂದ ತಪ್ಪಿಸಿಕೊಳ್ಳುವ ಮಾರ್ಗ ಎಂದರೆ ಮಳೆ ನೀರಿನ ಸಂಗ್ರಹಣೆ. ಮಳೆ ನೀರಿನ ಉಳಿಕೆ,ಗಳಿಕೆ,ಬಳಕೆಯಲ್ಲಿ ಎಚ್ಚರವಹಿಸಬೇಕಿದೆ.ಪ್ರತಿ ಒಂದು ಹೆಕ್ಟರ್ ಪ್ರದೇಶದಲ್ಲಿ ಕನಿಷ್ಠ ಒಂದು ಗುಂಟೆಯಾದರೂ ಕೆರೆ ಇರಲೇ ಬೇಕು. ಭೂಮಿ ಹೆಚ್ಚು ಇಳಿಜಾರಗಿದ್ದರೆ 30 ಅಡಿಗೆ,ಸಾಧಾರಣ ಇಳಿಜಾರಗಿದ್ದರೆ 40 ಅಡಿಗೆ,ಸಮತಟ್ಟಾಗಿದ್ದರೆ 60 ಅಡಿಗೆ ಒಂದರಂತೆ ಪಟ್ಟ ಬಡ್ಡಿಂಗ್ ಮಾಡಿಕೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡುತ್ತಾರೆ.
ಮಳೆ ಬೀಳುವ ದಿನಗಳಲ್ಲಿ ಹೆಚ್ಚು ಕಡಿಮೆಯಾಗಿದೆ. ಅದು ನಾವೇ ಮಾಡಿಕೊಂಡಿರುವ ಪ್ರಮಾದ.ಆದರೆ ಮಳೆಯ ಪ್ರಮಾಣದಲ್ಲಿ ಅಂತಹ ವ್ಯತ್ಯಾಸವಾಗಿಲ್ಲ. ಅಕಾಲಿಕವಾಗಿ ಬೀಳುವ ಮಳೆಯ ನೀರನ್ನು ಹಿಡಿದಿಟ್ಟುಕೊಂಡು,ಹಸಿರು ಕಾಡು ಬೆಳೆಸಿ ಮತ್ತೆ ಕಾಲ ಕಾಲಕ್ಕೆ ಮಳೆ ಬೀಳುವಂತೆ ಮಾಡಬೇಕಿದೆ.ಅದಕ್ಕಾಗಿ ನಮ್ಮ ಯುವಕರು ಯಾರಿಗೂ ಯಾವುದಕ್ಕೂ ಕಾಯದೇ ಜಲಯೋಧರಂತೆ ಕೆಲಸಮಾಡಬೇಕಿದೆ.ಅದಕ್ಕಾಗಿ ಓಡುವ ನೀರನು ಹರಿಯುವಂತೆ ಮಾಡಬೇಕು.ಹರಿಯುವ ನೀರನ್ನು ನಿಲ್ಲುವಂತೆ ಮಾಡಬೇಕು.ನಿಲ್ಲುವ ನೀರನ್ನು ಹಿಂಗುವಂತೆ ಮಾಡಬೇಕು.
ರೈತರು ಕೃಷಿ ಲೇಖನಗಳು,ಪುಸ್ತಕಗಳು,ಅಂಕಣ ಬರೆಹಗಳನ್ನು ಓದಿದರೆ ಅರ್ಧಲಾಭ, ತೋಟಗಳನ್ನು ಸುತ್ತಿದರೆ ಇನ್ನರ್ಧಲಾಭ. ಎರಡನ್ನೂ ಮಾಡಿದರೆ ಪೂರ್ತಿಲಾಭ ಎನ್ನುತ್ತಾರೆ ಬಲ್ಲವರು. ಮಳೆ ನೀರು ಕೊಯ್ಲು ಮಾಡುವುದರ ಜೊತೆಗೆ ಸಾವಯವ ಕೃಷಿಯತ್ತ ಯುವಕರು ಒಲವು ಬೆಳೆಸಿಕೊಳ್ಳಬೇಕು.ಸಾವಯವ ಕೃಷಿ ಸಾಯುವ ಕೃಷಿಯಲ್ಲ.ಬದಲಾಗಿ ಸಾಹುಕಾರನಾಗುವ ಕೃಷಿ ಎನ್ನುತ್ತಾರೆ ಅಯ್ಯಪ್ಪ ಮಸಗಿ.
ಅವರು ಪುಸ್ತಕಗಳು ಹಾಗೂ `ಭಗೀರಥ' ಕಿರುಚಿತ್ರದ ಸಿಡಿ ಬೇಕಾದವರು, ಅಂತರ್ಜಲ ಮರುಪೂರಣದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದವರು `ಜಲ-ಸಿರಿ-ಜಲ-ವೃದ್ಧಿ' ನಂ.374,ಪಾರ್ವತಿ ನಿಲಯ,ಕಲ್ಲಪ್ಪ ಬಡಾವಣೆ,ಅಮೃತಹಳ್ಳಿ,ಸಹಕಾರನಗರ ಅಂಚೆ,ಬಳ್ಳಾರಿ ರಸ್ತೆ,ಬೆಂಗಳೂರು-560092. ದೂರವಾಣಿ 080-23339497/ 9448379497 ಸಂಪರ್ಕಿಸಿ. 



ಭಾನುವಾರ, ಆಗಸ್ಟ್ 20, 2017

ಗ್ರಾಮೀಣ ಆರ್ಥಿಕತೆಗೆ ಕುಲಾಂತರಿ ಹೊಡೆತ : ಪಯಾರ್ಯದತ್ತ  ರೈತರ ಚಿತ್ತ
# ಬೆಳೆ ಪದ್ಧತಿ ಬದಲಿಸಿಕೊಂಡ ಪ್ರಯೋಗಶೀಲ # ಕಾಡಂಚಿನ  ಕರುಣಾಜನಕ ಕತೆ 
ರೈತರ ಆದಾಯವನ್ನು ದ್ವಿಗುಣಗೊಳಿಸುವ ಘೋಷಣೆಯೊಂದಿಗೆ ಜಮೀನಿಗೆ ಬಂದ ಕುಲಾಂತರಿ ತಳಿಗಳು ಗ್ರಾಮೀಣ ಆರ್ಥಿಕತೆಯನ್ನು ಕೆಡಿಸಿ ಗುಂಡಾಂತರಮಾಡಿ ರೈತರನ್ನು ಸಾಲದ ಶೂಲಕ್ಕೆ ಸಿಲುಕಿಸಿದ ಕರುಣಾಜನಕ ಕತೆ ಇದು.
ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ಮತ್ತು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಹುತೇಕ ರೈತರು ಬಿಟಿ ಹತ್ತಿ ಬೆಳೆದ ಪರಿಣಾಮ ಅಕ್ಷರ ಸಹ ಬೀದಿಗೆ ಬಿದ್ದಿದ್ದಾರೆ.ಬಿಟಿ ಹತ್ತಿ ಎಂಬ ಕುಲಾಂತರಿ ತಳಿ ರೈತರ ಪಾಲಿನ ಮರಣಶಾಸನವಾಗಿದೆ.
ಈ ಭಾಗದ ರೈತರು ಬೆಳೆ ಪದ್ಧತಿಯನ್ನು ಬದಲಾವಣೆ ಮಾಡಿಕೊಳ್ಳದದಿದ್ದರೆ ಮುಂದೆ ಭಾರೀ ಅಪಾಯ ಕಾದಿದೆ ಎನ್ನುತ್ತಾರೆ ನಂಜನಗೂಡು ತಾಲೂಕು ಹಂಚೀಪುರದ ಪ್ರಯೋಗಶೀಲ ಕೃಷಿಕ ಪ್ರಸಾದ್. ಈಗಾಗಲೇ ಪ್ರೋಟ್ರೆ ಪದ್ಧತಿಯಲ್ಲಿ ಅರಿಶಿನ ಬೆಳೆದು ದಾಖಲೆ ಇಳುವರಿ ಪಡೆದಿರುವ ಪ್ರಸಾದ್ ಅವರನ್ನು ಕಂಡು ಮಾತನಾಡಿಸಿಕೊಂಡು ಬರಲು ಹೋಗಿದ್ದೆ. 
ಪ್ರಗತಿಪರ ರೈತನನ್ನು ಹುಡುಕಿಕೊಂಡು ಹೊರಟವನಿಗೆ ಮೊದಲ ಬಾರಿಗೆ ಹಳ್ಳಿಗಳ ಕರಾಳಮುಖ ಕಂಡು ಬೆಚ್ಚಿಬೀಳುವಂತಾಯಿತು. ಹೆಡಿಯಾಲ ಮತ್ತು ಓಂಕಾರ ಅರಣ್ಯ ಪ್ರದೇಶ ವ್ಯಾಪ್ತಿಯ ಕಾಡಂಚಿನ ಪ್ರದೇಶದಲ್ಲಿ ಬರುವ ಗ್ರಾಮೀಣ ಪ್ರದೇಶಗಳ ಆಥರ್ಿಕ ಕುಸಿತದ ಹೆಜ್ಜೆಗುರುತುಗಳನ್ನು ಇಲ್ಲಿ ದಾಖಲಿಸಿದ್ದೇನೆ.
ಹಂಚೀಪುರ ನಂಜನಗೂಡು ತಾಲೂಕಿಗೆ ಸೇರಿದ ಗ್ರಾಮ. ಮೈಸೂರು ಅರಮನೆಗೂ ಹಂಚೀಪುರಕ್ಕೂ ಮರೆಯಲಾಗದ ಬಾಂಧವ್ಯ ಇದೆ. ಮೈಸೂರು ಅರಸರು ಇಲ್ಲಿನ ಕಾಡಿಗೆ ಬೇಟೆ ಆಡಲು ಬರುತ್ತಿದ್ದಾಗ ಗ್ರಾಮದ ಹಿರಿಯರ ಜೊತೆಗೆ ಉತ್ತಮ ಸಂಬಂಧವಿರಿಸಿಕೊಂಡಿದ್ದರು ಎಂದು ಈಗಲೂ ಊರಿನ ಹಿರಿಯರು ನೆನಪುಮಾಡಿಕೊಳ್ಳುತ್ತಾರೆ. ಈ ನೆನಪಿಗೆ ಸಾಕ್ಷಿಯಾಗಿ ರೈತರಿಗೆ ಸಾವಿರಾರು ಎಕರೆ ಕಾವಲ್ ಜಮೀನುಗಳನ್ನು ರಾಜರು ದಾನವಾಗಿಕೊಟ್ಟಿದ್ದಾರೆ.
"ಎಪ್ಪತ್ತರ ದಶಕದಲ್ಲಿ ಇಡೀ ಗ್ರಾಮದ ಆರ್ಥಿಕತೆಗೆ ಚೆನ್ನಾಗಿತ್ತು.ಮಳೆಯಾಶ್ರಯದಲ್ಲಿ ಇಲ್ಲಿನ ರೈತರು ರಾಗಿ,ಜೋಳ, ಉರುಳಿ,ಎಳ್ಳು,ಸೆಣಬು,ಉಚ್ಚೆಳ್ಳು,ಮೆಣಸಿನಕಾಯಿ,ದೇಸಿ ಹತ್ತಿ ಬೆಳೆದುಕೊಂಡು ಆರ್ಥಿಕವಾಗಿ ಸದೃಢರಾಗಿದ್ದರು. ಈಗ ಗ್ರಾಮದಲ್ಲಿರುವ ಎಲ್ಲಾ ಮನೆಗಳು ಎಳ್ಳು,ಜೋಳ,ಉರುಳಿ ಬೆಳೆದು ಕಟ್ಟಿರುವ ದೊಡ್ಡ ಮನೆಗಳು. ಬಿಟಿ ಹತ್ತಿ ಮತ್ತು ಹೊಗೆಸೊಪ್ಪಿನ ಪರಿಣಾಮ ಊರಿನ ಆಥರ್ಿಕತೆಗೆ ದೊಡ್ಡ ಹೊಡೆತ ಬಿತ್ತು.ಕಳೆದ ಇಪ್ಪತ್ತೈದು ವರ್ಷದಿಂದ ಈಚೆಗೆ ಊರಿನಲ್ಲಿ ಒಂದು ಇಟ್ಟಿಗೆಯನ್ನು ಇಟ್ಟು ಗೋಡೆಕಟ್ಟಿಲ್ಲ. ಈಗಿರುವ ಎಲ್ಲಾ ದೊಡ್ಡ ದೊಡ್ಡ ಮನೆಗಳು ಮೂವತ್ತು ವರ್ಷದ ಹಿಂದೆ ಕಟ್ಟಿರುವ ಹಳೆಯ ಮನೆಗಳು.ಹೊಸಮನೆಗಳ ಸುದ್ದಿಯೇ ಇಲ್ಲ. ಪ್ರತಿಯೊಬ್ಬ ರೈತರಿಗೂ ಬ್ಯಾಂಕಿನಲ್ಲಿ ಸಾಲ ಇದೆ.ಆದರೂ ಬಿಟಿ ಹತ್ತಿ ಮತ್ತು ಹೊಗೆಸೊಪ್ಪಿಗೆ ಪಯರ್ಾಯವಾಗಿ ಬೆಳೆ ಪದ್ಧತಿ ಬದಲಾವಣೆ ಮಾಡಿಕೊಳ್ಳಲು ರೈತರು ಮುಂದಾಗುತ್ತಿಲ್ಲ" ಎನ್ನುತ್ತಾರೆ ಪ್ರಸಾದ್.
ಬಿಟಿ ಹತ್ತಿ!.ಹಾಗೆಂದರೇನು ?:ಜೈವಿಕ ತಂತ್ರಜ್ಞಾನ ಶಾಖೆಗಳಲ್ಲಿ ಒಂದಾಗಿರುವ ಸಸ್ಯ `ಅಂಗಾಂಶ"ಕೃಷಿಯ ತತ್ವವನ್ನು ಉಪಯೋಗಿಸಿ ಬೆಳೆಸಿದ ಟ್ರಾನ್ಸ್ ಜೆನಿಕ್ ಸಸ್ಯಗಳು ಕೃಷಿ ಕ್ಷೇತ್ರದಲ್ಲಿ ಸದ್ದು ಮಾಡತೊಡಗಿವೆ. ಕುಲಾಂತರಿ ಸಾಸಿವೆಯೂ ರೈತನ ಮನೆಯ ಬಾಗಿಲು ಬಡಿಯುತ್ತಿದೆ. ಜೈವಿಕ ತಂತ್ರಜ್ಞಾನದ ಛತ್ರಛಾಯೆಯ ಅಡಿಯಲ್ಲಿಅನುವಂಶಿಕೀ ಅಭಿಯಂತಿಕೆಯನ್ನು ಬಳಸಿ ತಯಾರಿಸಿದ ಸಿದ್ಧ ವಸ್ತುವೇ (ಬಯೋ ತಂತ್ರಜ್ಞಾನ) ಬೀ.ಟಿ.ಹತ್ತಿ. ಹೆಚ್ಚು ಲಾಭ, ಕಾಯಿಕೊರಕ ಕೀಟಗಳಿಂದ ಮುಕ್ತಿ, ಕೀಟನಾಶಕ ಉಪಯೋಗದಲ್ಲಿ ಉಳಿತಾಯ,ಅಧಿಕ ಇಳುವರಿ ಎಂಬ ಘೋಷಣೆಯೊಂದಿಗೆ ಮಾರುಕಟ್ಟೆಗೆ ಬಂದ ಈ ಕುಲಾಂತರಿ ತಳಿ ಈಗ ರೈತರನೇ ಬಲಿ ಕೇಳುತ್ತಿರುವುದು ವಿಪರ್ಯಾಸ.
2002 ರಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಬಿಟಿ ಹತ್ತಿ ಕೃಷಿ ವಾಣಿಜ್ಯ ಕಂಪನಿ ಮೊನ್ಸಾಂಟೋ ಅಭಿವೃದ್ಧಿಪಡಿಸಿದ ಕುಲಾಂತರಿ ತಳಿ. ಹತ್ತಿ ಬೆಳೆಗಾರರು ಈಗ ಕುಲಾಂತರಿ ತಳಿಗಳನ್ನು ಕೈ ಬಿಡಬೇಕಾದ ಸಮಯ ಬಂದಿದೆ. ಬಿಟಿ ಹತ್ತಿ ತಳಿ ಪೀಡೆ ಕೀಟಗಳನ್ನು ಎದುರಿಸುವಲ್ಲಿ ಸೋತಿದೆ. ಗುಲಾಬಿ ಕಾಯಿಕೊರಕ ಕೀಟದ ಭಾದೆಗೆ ತುತ್ತಾಗಿರುವ ಈ ಕುಲಾಂತರಿ ತಳಿ ಗ್ರಾಮೀಣ ಆಥರ್ಿಕತೆಗೆ ದೊಡ್ಡ ಒಡೆತ ನೀಡಿದೆ.
ಬಿಟಿ ಹತ್ತಿ ಬೆನ್ನತ್ತಿ : ಪ್ರಸಾದ್ ಬಿಟಿ ಹತ್ತಿಯ ಕರಾಳಮುಖದ ಸ್ವಾನುಭವವನ್ನು ಹೇಳುತ್ತಾಹೋದರು... "ದಶಕದ ಹಿಂದೆ ಬಿಟಿ ಹತ್ತಿ ಬೆಳೆದಾಗ ಎಕರೆಗೆ ಹನ್ನೊಂದು ಕ್ವಿಂಟಾಲ್ ಹತ್ತಿ ಬಂತು. ಯಾವುದೇ ರಸಾವರಿ ಗೊಬ್ಬರ,ಔಷದಿ ಕೊಡದೆ ಇದ್ದರೂ ಉತ್ತಮ ಇಳುವರಿ ಬಂತು. ಎರಡನೇ ವರ್ಷ ಎಂಟು ಕ್ವಿಂಟಾಲ್ ಬಂತು. ಮೂರನೇ ವರ್ಷ ಆರು, ನಂತರ ಕ್ರಮೇಣ ಇಳುವರಿ ಕುಸಿಯುತ್ತಾ ಹೋಗಿ ಈಗ ಎರಡು ಕ್ವಿಂಟಾಲ್ ಹತ್ತಿ ಸಿಗುವುದು ದುರ್ಲಭವಾಗಿದೆ". ಈಗಾದರೆ ರೈತನಿಗೆ ಭಿತ್ತನೆ ಬೀಜ,ಗೊಬ್ಬರಕ್ಕೆ ಮಾಡಿದ ಖಚರ್ು ಬರುವುದಿಲ್ಲ.ರೈತರು ಸಾಲಗಾರರಾಗದೆ ಮತ್ತೇನು ಮಾಡಲು ಸಾಧ್ಯ ಹೇಳಿ ಸಾರ್" ಎನ್ನುತ್ತಾರೆ. 
ಪ್ರತಿಯೊಬ್ಬ ರೈತರ ಪರಿಸ್ಥಿತಿಯು ಇದಕ್ಕಿಂತ ಭಿನ್ನವಾಗಿಲ್ಲ ಎನ್ನುವುದು ಅವರು ಕಂಡುಕೊಂಡಿರುವ ಸತ್ಯ. ಕಣ್ಣಿಗೆ ಕಾಣುವಷ್ಟು ದೂರಕ್ಕೂ ಬೆಳೆದು ನಿಂತ ಬಿಟಿ ಹತ್ತಿ ಹೊಲಗಳು ಹೂಕಚ್ಚಿ,ಕಾಯಾಗದೆ ಸೊಪ್ಪನ್ನು ಹೊದ್ದುನಿಂತ ಕಡ್ಡಿಯಂತೆ ಕಾಣುತ್ತವೆ.
ಒಂದು ಎಕರೆ ಹತ್ತಿ ಬೆಳೆಯಲು ಬೀಜ,ಗೊಬ್ಬರ ಸೇರಿದಂತೆ ಕನಿಷ್ಠ ಹತ್ತು ಸಾವಿರ ರೂಪಾಯಿ ವೆಚ್ಚವಾಗುತ್ತದೆ.ಪ್ರತಿ ಕ್ವಿಂಟಾಲ್ ಹತ್ತಿಗೆ ಮಾರುಕಟ್ಟೆಯಲ್ಲಿ ಐದೂವರೆ ಸಾವಿರ ರೂಪಾಯಿ ಇದೆ.ಒಂದು ಕ್ವಿಂಟಾಲ್ ಹತ್ತಿ ಬಿಡಿಸಲು ಸಾವಿರ ರೂಪಾಯಿ ವೆಚ್ಚವಾಗುತ್ತದೆ.ಎಕರೆಗೆ ಎರಡು ಕ್ವಿಂಟಾಲ್ ಹತ್ತಿ ಬಂದರೆ ರೈತ ಬದುಕುವುದಾದರೂ ಹೇಗೆ? ಎನ್ನುವುದು ಅವರ ಪ್ರಶ್ನೆ.
ಭಿತ್ತಿದ ನಾಲ್ಕನೇ ತಿಂಗಳಿನಿಂದ ಹತ್ತಿ ಕೊಯ್ಲಿಗೆ ಬರುತ್ತದೆ. ಎರಡು ತಿಂಗಳು ಕಟಾವಾದ ನಂತರ ಆರು ತಿಂಗಳಿನಲ್ಲಿ ಹತ್ತಿ ಬೇಸಾಯ ಮುಗಿದುಹೋಗುತ್ತದೆ. ಈಗಲೂ ಎಕರೆಗೆ ಏಳೆಂಟು ಕ್ವಿಂಟಾಲ್ ಹತ್ತಿ ಇಳುವರಿ ತೆಗೆಯುವವರು ಇದ್ದಾರೆ.ಆದರೆ ಅವರೆಲ್ಲ ಹೆಚ್ಚು ರಸಾವರಿ ಗೊಬ್ಬರ ಬಳಸಿ,ಕ್ರಿಮಿನಾಶಕ ಸಿಂಪಡಿಸಿ,ಹನಿ ನೀರಾವರಿಯಲ್ಲಿ ಬೆಳೆಯುತ್ತಿರುವ ರೈತರು. ಅಂತಹ ರೈತರೂ ಕೂಡ ಉತ್ಪಾದನಾ ವೆಚ್ಚ ಹೆಚ್ಚಾದ ಪರಿಣಾಮ ಸಾಲದ ಸುಳಿಗೆ ಸಿಲುಕಿ ನರಳುತ್ತಿದ್ದಾರೆ.
ಡಿಸಿಎಚ್,ವಿಜಯಲಕ್ಷ್ಮಿ,ವರಹಾ,ಸುವಿಧಾ,ಜಯಧರದಂತಹ ಸ್ಥಳೀಯ ಹತ್ತಿ ಬೀಜಗಳನ್ನು ಒದಗಿಸುವ ಮೂಲಕ ದೇಸಿ ಮತ್ತು ಸಂಸ್ಕರಣ ತಳಿಗಳಿಗೆ ಸರಕಾರ ಆದ್ಯತೆ ನೀಡಬೇಕು. ಬಿಟಿ ಕುಲಾಂತರಿ ತಳಿಯನ್ನು ಸಂಪೂರ್ಣ ನಿಷೇಧಮಾಡಬೇಕು ಎಂದು ಪ್ರಸಾದ್ ಹೇಳುತ್ತಾರೆ.
ಗುಂಡ್ಲುಪೇಟೆ ತಾಲೂಕಿನ ವೀರನಪುರ ಸುತ್ತಮುತ್ತಲಿನಲ್ಲಿ ಬಿಟಿ ಹತ್ತಿ ಬೆಳೆದ ರೈತರ ಸ್ಥಿತಿ ಇದಕ್ಕಿಂತ ಭಿನ್ನವೇನಿಲ್ಲ.ಅಲ್ಲಿಯೂ ಕೂಡ "ಎಕರೆಗೆ ಒಂದು ಕ್ವಿಂಟಾಲ್ ಹತ್ತಿ ಸಿಗುವುದು ಕಷ್ಟವಾಗಿದೆ.ಭಿತ್ತನೆ ಬೀಜಕ್ಕೆ ತೆತ್ತ ಹಣ ಮತ್ತು ಕೂಲಿಯೂ ಬಾರದೆ ರೈತ ಬೀದಿಗೆ ಬಿದ್ದಿದ್ದಾನೆ.ಯಾವತಳಿ ಎಂದು ಅರಿವೇ ಇಲ್ಲದೆ ಮಾರುಕಟ್ಟೆಯಲ್ಲಿ ಸಿಕ್ಕ ಬಿಟಿ ಹತ್ತಿಯನ್ನು ತಂದು ಬೆಳೆಸಿದ ರೈತ,ಕಾಯಿ ಕಚ್ಚದೆ ಕಡ್ಡಿಯಂತೆ ನಿಂತಿರುವ ಹತ್ತಿ ಗಿಡಗಳನ್ನು ಕಂಡು ಆಕಾಶದತ್ತ ಮುಖಮಾಡಿ ಕಣ್ಣಿರು ಸುರಿಸುತ್ತಿದ್ದಾನೆ" ಎನ್ನುತ್ತಾರೆ ಸಾವಯವ ಕೃಷಿಕ,ತಾಲೂಕು ಕಸಾಪ ಅಧ್ಯಕ್ಷ ಚಿದಾನಂದ.
"ಹೊಗೆ"ಸೊಪ್ಪಿನ ಧಗೆ : ಹತ್ತಿಯನ್ನು ಬಿಟ್ಟರೆ ಈ ಪ್ರದೇಶದಲ್ಲಿ ಹೆಚ್ಚು ವ್ಯಾಪಿಸಿಕೊಂಡಿರುವ ಬೆಳೆ ಹೊಗೆಸೊಪ್ಪು. ಈ ಬೆಳೆ ಬಂದ ಪರಿಣಾಮ ಈ ಭಾಗದಲ್ಲಿ ಕಾಡುನಾಶವಾಗಿದೆ. ಜಮೀನುಗಳಲ್ಲಿದ್ದ ಮರಗಳು ಹೊಗೆಸೊಪ್ಪು ಬೇಯಿಸಲು ಬೆಂಕಿಗೆ ಆಹುತಿಯಾಗಿವೆ. ಮರಗಳು ಕಣ್ಮರೆಯಾದ ಪರಿಣಾಮ ಮಳೆಯೂ ಕಡಿಮೆಯಾಗಿದೆ. ಈ ಹಿಂದೆ 200 ರಿಂದ 300 ಅಡಿಯಲ್ಲಿ ಅಂತರ್ಜಲ ಸಿಗುತ್ತಿತ್ತು.ಈಗ 600 ಅಡಿ ಭೂಮಿಕೊರೆದರೂ ಹನಿ ನೀರಿಲ್ಲ. ಇದಕ್ಕೆಲ್ಲ ಈಗಿರುವ ಕೃಷಿ ಪದ್ಧತಿಗಳೇ ಕಾರಣ ಎನ್ನುವುದು ಪ್ರಸಾದ್ ಅವರ ವಾದ.ಐದಾರು ಎಕರೆ ಪ್ರದೆಶದಲ್ಲಿ ಹೊಗೆಸೊಪ್ಪು ಬೆಳೆಯಲು ಕನಿಷ್ಠ ಮೂರು ಲಕ್ಷ ಉತ್ಪಾದನಾ ವೆಚ್ಚ ಬರುತ್ತಿದೆ. ತಂಬಾಕು ಮಂಡಳಿಯವರೇ ಎಕರೆಗೆ 60 ಸಾವಿರ ರೂಪಾಯಿ ಮೌಲ್ಯದ ರಸಗೊಬ್ಬರ ಕೊಡುತ್ತಾರೆ. ಎಲೆ ಮುರಿದು ಬ್ಯಾರನ್ಗೆ ಕಟ್ಟಲು,ಬೇಯಿಸಲು ಸೌದೆತರಲು,ಬ್ಯಾರನ್ನಿಂದ ಇಳಿಸಿ ಬೇಲ್ ಕಟ್ಟುವುದು ಎಲ್ಲಾ ಸೇರಿ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಪರಿಣಾಮ ಎಕರೆಗೆ ಲಕ್ಷ ರೂಪಾಯಿ ವೆಚ್ಚಮಾಡಿ ತಂಬಾಕು ಬೆಳೆದು ಮಾರಾಟ ಮಾಡಿದರೆ 80 ಸಾವಿರ ಹಣ ಸಿಗುತ್ತದೆ. ಕೈಯಿಂದಲೇ 20 ಸಾವಿರ ನಷ್ಟ ಅನುಭವಿಸಬೇಕಾದ ದಾರುಣ ಸ್ಥಿತಿ ರೈತರದು.
ಇದನ್ನು ಅರಿತ ಶೇಕಡ 50 ರಷ್ಟು ರೈತರು ಈಗ ತಂಬಾಕು ಬೆಳೆಯುವುದಕ್ಕೆ ವಿದಾಯ ಹೇಳಿ ಟೊಮಟೊ,ಅರಿಶಿನ ಮತ್ತಿತರ ತರಕಾರಿ ಬೆಳೆ ಬೆಳೆಯುವುದ ಕಡೆಗೆ ಮುಖಮಾಡಿದ್ದಾರೆ.ಆದರೂ ಬ್ಯಾಂಕುಗಳು ತಂಬಾಕು ಬೆಳೆಯುವ ರೈತರಿಗೆ ಸುಲಭವಾಗಿ ಸಾಲ ನೀಡಿದ ಪರಿಣಾಮ,ಐದಾರು ಎಕರೆ ಜಮೀನು ಇರುವ ರೈತರಿಗೆ ಎಂಟರಿಂದ ಹತ್ತು ಲಕ್ಷ, 30 ಎಕರೆ ಹೊಂದಿರುವ ರೈತರಿಗೆ 50 ರಿಂದ 60 ಲಕ್ಷ ರೂಪಾಯಿ ಸಾಲವಿದೆ ಎನ್ನುತ್ತಾರೆ ಗ್ರಾಮದ ಹಿರಿಯರು.
ಈ ಭಾಗದಲ್ಲಿ ತಂಬಾಕು,ಬಿಟಿ ಹತ್ತಿ,ಅರಿಶಿನ,ಟೊಮಟೊ,ಎಳ್ಳು ಈ ಐದೇ ಬೆಳೆಗಳು ಹೊಲಗಳನ್ನು ಆಕ್ರಮಿಸಿಕೊಂಡಿವೆ. ರೈತರು ಬೆಳೆ ವೈವಿಧ್ಯತೆ ಕಾಪಾಡಿಕೊಂಡು ಸಮಗ್ರ ಪದ್ಧತಿಯಲ್ಲಿ ಬೇಸಾಯ ಮಾಡಲು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅರಿವು ಮೂಡಿಸಬೇಕು.
ಇದು ಕಾಡಂಚಿನ ಪ್ರದೇಶವಾದ ಕಾರಣ ಇಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚು.ಆನೆ, ಚಿರತೆ,ಹಂದಿ,ನವಿಲು,ಜಿಂಕೆ,ಕಡವೆಗಳು ಭಿತ್ತಿದ ಬೆಳೆಯನ್ನು ಉಳಿಸುವುದಿಲ್ಲ.ಆಗಾಗಿ ಸಾಂಪ್ರದಾಯಿಕ ಸ್ಥಳೀಯ ಬೆಳೆ ಬೆಳೆಯುತ್ತಿದ್ದ ರೈತರು ಮೂರು ದಶಕದಹಿಂದೆ ರೈತರು ಬಿಟಿ ಹತ್ತಿ ಮತ್ತು ಹೊಗೆಸೊಪ್ಪಿನ ಬೇಸಾಯಕ್ಕೆ ಶಿಫ್ಟ್ ಆದರು.ಈಗ ಆ ಕೃಷಿಯೇ ರೈತರ ಪಾಲಿನ ಮರಣಶಾಸನವಾಗಿರುವುದು ದುರಂತವಾಗಿದೆ. ತಮಾಷೆ ಎಂದರೆ ಮೊದಲು ಆನೆಗಳು ಹತ್ತಿ ಗಿಡಗಳನ್ನು ತಿನ್ನುತ್ತಿರಲಿಲ್ಲ.ಈಗ ಆನೆಗಳು ಹತ್ತಿಗಿಡಗಳನ್ನು ತಿನ್ನತೊಡಗಿವೆ.ಹಂದಿಗಳು ಹತ್ತಿ ಕಾಯನ್ನು ತಿಂದು ಮುಗಿಸುತ್ತಿವೆ.ದಾರಿ ಕಾಣದೆ ರೈತರು ಕಂಗಾಲಾಗಿದ್ದಾರೆ. ಹೆಡಿಯಾಲ,ಓಂಕಾರ್ ಅರಣ್ಯವಲಯದಲ್ಲಿ ರೈಲ್ವೆ ಕಂಬಿಗಳನ್ನು ತಡೆಗೋಡೆಯಾಗಿ ಹಾಕಿರುವುದರಿಂದ ಈಗ ಬಹುತೇಕ ಆನೆ ಹಾವಳಿ ನಿಯಂತ್ರಣಕ್ಕೆ ಬಂದಿದೆ. 
"ಈಗಲಾದರೂ ರೈತರು ಸಾಮೂಹಿಕವಾಗಿ ಒಟ್ಟಾಗಿ ಸರದಿ ಮೇಲೆ ಹಂದಿ,ಜಿಂಕೆಗಳಿಗೆ ಕಾವಲು ಇದ್ದು ಮೊದಲಿನಂತೆ ರಾಗಿ,ಜೋಳ,ಎಳ್ಳು,ಉರುಳಿಯಂತಹ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆದುಕೊಳ್ಳಬೇಕು. ಗೇರು,ಹುಣಸೆ,ಹಲಸು,ನಿಂಬೆ,ಜಂಬುನೇರಳೆಯಂತಹ ಒಣ ಭೂಮಿ ಬೇಸಾಯದ ಕಡೆಗೆ ಗಮನಹರಿಸಬೇಕು" ಎನ್ನುತ್ತಾರೆ ಪ್ರಸಾದ್. 
ಈ ನಿಟ್ಟಿನಲ್ಲಿ ಪ್ರಯೋಗಶೀಲರಾಗಿರುವ ಪ್ರಸಾದ್ ಒಣಭೂಮಿ ತೋಟಗಾರಿಕೆ ಮಾಡಲು ಮುಂದಾಗಿದ್ದಾರೆ. "ಆಂದೋಲನ ಪತ್ರಿಕೆಯಲ್ಲಿ ಬರುತ್ತಿರುವ `ಬಂಗಾರದ ಮನುಷ್ಯರು" ಅಂಕಣದಿಂದ ಪ್ರಭಾವಿತರಾಗಿ ಹತ್ತಾರು ತೋಟಗಳನ್ನು ಸುತ್ತಿಬಂದು, ಬಿಟಿ ಹತ್ತಿ ಮತ್ತು ಹೊಗೆಸೊಪ್ಪಿಗೆ ವಿದಾಯ ಹೇಳಿದ್ದು ಸಾವಯವ ಕೃಷಿ ಮಾಡಲು ನಿರ್ಧರಿಸಿ ಮುಂದುವರಿಯುತ್ತಿದ್ದೇನೆ" ಎನ್ನುತ್ತಾರೆ.
"ಕುಸಿದ ಅಂತರ್ಜಲ,ಕಡಿಮೆಯಾದ ಮಳೆಯ ಪ್ರಮಾಣ, ಹಸಿರುಕ್ರಾಂತಿ ಹೆಸರಿನಲ್ಲಿ ನಡೆದ ವಂಚನೆ,ರಾಸಾಯನಿಕ ಕೃಷಿಯ ದುಷ್ಪಾರಿಣಾಮಗಳನ್ನು ಅರಿತು ರೈತ ಮುನ್ನಡೆಯದಿದ್ದರೆ ಮುಂದೆ ಎದುರಾಗುವ ಘೋರ ದುರಂತವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಆದ್ದರಿಂದ ನಮ್ಮ ಭಾಗದಲ್ಲಿ ಕೃಷಿ ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸುವ ಮೂಲಕ ಬೆಳೆ ಪದ್ಧತಿಯನ್ನು ಬದಲುಮಾಡಿಕೊಳ್ಳಲು ಮನವೊಲಿಸಬೇಕು" ಎಂದು ಪ್ರಸಾದ್ ಹೇಳುತ್ತಾರೆ. ಹೆಚ್ಚಿನ ಮಾಹಿತಿಗೆ ಪ್ರಸಾದ್ ಹಂಚೀಪುರ 9449732255 ಸಂಪರ್ಕಿಸಿ




ಭಾನುವಾರ, ಆಗಸ್ಟ್ 13, 2017

ಮರೆಯಲಾಗದ ಮಹಾನ್ ಸಾಧಕ ತೋಟಗಾರಿಕೆ   ಪಿತಾಮಹ ಡಾ.ಎಂ.ಎಚ್.ಮರೀಗೌಡ
 ಒಣಭೂಮಿಯಲ್ಲೂ ತೋಟಗಾರಿಕೆ ಕ್ರಾಂತಿಮಾಡಿದ ಹರಿಕಾರ
ಕೋಲಾರ ಜಿಲ್ಲೆಯಲ್ಲಿ ಮಾವು.ಮೈಸೂರಿನ ಸುತ್ತಮುತ್ತ ಬಾಳೆ. ಹಾಸನ ಜಿಲ್ಲೆಯಲ್ಲಿ ಆಲುಗಡ್ಡೆ.ಬೆಳಗಾವಿ,ವಿಜಯಪುರ,ಕಲಬುಗರ್ಿಯಲ್ಲಿ ದ್ರಾಕ್ಷಿ .ದಕ್ಷಿಣ ಕನ್ನಡದಲ್ಲಿ ಕೋಕೋ, ಬೆಂಗಳೂರು ಗ್ರಾಮಾಂತರ ಮತ್ತು ಬೆಳಗಾವಿಯಲ್ಲಿ ತರಕಾರಿ ಹೀಗೆ ಆಯಾಯ ಪ್ರದೇಶದ ಹವಾಗುಣಕ್ಕೆ ಹೊಂದಿಕೊಳ್ಳುವಂತಹ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹನೀಡಿ ವಿವಿಧ ಹಣ್ಣಿನ ಬೆಳೆಗಳನ್ನು ಬೆಳೆಯುವ ವಿಶೇಷ ವಲಯಗಳನ್ನು ರೂಪಿಸಿದ ಮಹಾನ್ ಸಾಧಕ, ತೋಟಗಾರಿಕೆಯ ಪಿತಾಮಹ ಡಾ.ಎಂ.ಎಚ್.ಮರೀಗೌಡರು.
ಭಾರತ ದೇಶದ ತೋಟಗಾರಿಕೆ ಅಭಿವೃದ್ಧಿಗೆ ವಿವಿಧ ಮಾದರಿಗಳನ್ನು ರೂಪಿಸಿಕೊಟ್ಟು, ಕನರ್ಾಟಕ ರತ್ನ ಪ್ರಶಸ್ತಿಗೆ ಭಾಜನರಾದ ಡಾ.ಎಂ.ಎಚ್.ಮರೀಗೌಡರು ಕನರ್ಾಟಕದವರು,ಅದರಲ್ಲೂ ಮೈಸೂರು ಜಿಲ್ಲೆಯವರು ಎನ್ನುವುದೇ ಹಮ್ಮೆಯ ವಿಷಯ.
ಇಂತಹ ಮಹಾನ್ ಸಾಧಕನ ನೂರೊಂದನ್ನೆ (101) ಜನ್ಮ ದಿನಾಚರಣೆ ಅಗಸ್ಟ್ 8 ರಂದು ಸದ್ದಿಲ್ಲದೆ ನಡೆದುಹೋಯಿತು. ಮೈಸೂರು ತೋಟಗಾರಿಕಾ ವಿಶ್ವ ವಿದ್ಯಾನಿಲಯದಲ್ಲಿ ಮರೀಗೌಡರ ಜನ್ಮ ದಿನಾಚರಣೆ ಪ್ರಯುಕ್ತ ಅರಿಶಿನ ಕೃಷಿಯ ಸುಧಾರಿತ ತಂತ್ರಜ್ಞಾನಗಳನ್ನು ಕುರಿತ ತರಬೇತಿ ಕಾರ್ಯಕ್ರಮ ನಡೆದಿರುವುದನ್ನು ಬಿಟ್ಟರೆ ಅಂತಹ ಯಾವ ಮಹತ್ವದ ಕಾರ್ಯಕ್ರಮಗಳು ನಮ್ಮಲ್ಲಿ ನಡೆದಂತೆ ಕಾಣಲಿಲ್ಲ.  ಅಗಸ್ಟ್ 8 ರಿಂದ 15ರ ವರೆಗೂ ಮರೀಗೌಡರ ನೆನಪಿನಲ್ಲಿ ಸರಕಾರ ತೋಟಗಾರಿಕಾ ಸಪ್ತಾಹ ಆಚರಿಸಲಾಗುತ್ತಿದೆ. ರಾಜಕೀಯ ಹಿನ್ನೆಲೆಯ ಸಾಧಕರನ್ನು ತಲೆಯ ಮೇಲೆ ಹೊತ್ತು ಮೆರೆಸುವ ಇಂದಿನ ಪೀಳಿಗೆ ಮರೀಗೌಡರನ್ನು ಮರೆತಂತೆ ಕಾಣುತ್ತಿದೆ.
ತೋಟಗಾರಿಕೆ,ಒಣಭೂಮಿ ಬೇಸಾಯ, ಹವಾಮಾನ ಆಧಾರಿತ ಸಮಗ್ರ ಬೆಳೆ ಪದ್ಧತಿಗಳ ಬಗ್ಗೆ 70 ವರ್ಷಗಳ ಹಿಂದೆಯೇ ರೈತರಲ್ಲಿ ಅರಿವು ಮೂಡಿಸಿದ ಮಹಾನ್ ಸಾಧಕನನ್ನು ನೆನಪು ಮಾಡಿಕೊಳ್ಳುವುದು ಈ ಅಂಕಣ ಬರೆಹದ ಉದ್ದೇಶ.
ಎಪ್ಪತ್ತು ವರ್ಷಗಳ ಹಿಂದೆ ರಾಜ್ಯದ ಪ್ರಮುಖ ನಗರಗಳಲ್ಲಿ ಮಾತ್ರ ಸಿಗುತ್ತಿದ್ದ ಹಣ್ಣುಗಳೆಂದರೆ ಬಾಳೆ ಮತ್ತು ಮಾವಿನ ಹಣ್ಣುಗಳು ಮಾತ್ರ. ಅವು ಕೂಡ ಕಡಿಮೆ ಪ್ರಮಾಣದಲ್ಲಿದ್ದು ಜನ ಸಾಮಾನ್ಯರ ಕೈಗೆಟುಕುತ್ತಿರಲಿಲ್ಲ.ಸಾಂಬಾರ ಬೆಳೆ,ತೋಟಗಾರಿಕೆ,ಪುಷ್ಪ ಕೃಷಿ ಮಾಡುವವರು ಶ್ರೀಮಂತರು ಮಾತ್ರ. ಬಡ ರೈತನಿಂದ ಅದು ಸಾಧ್ಯವಾಗದ ಮಾತು ಎಂಬ ಪರಿಸ್ಥಿತಿ ಇದ್ದ ಕಾಲ ಅದು .ಅಂತಹ ಸಮಯದಲ್ಲಿ ಅಮೇರಿಕಾದ ಪ್ರಸಿದ್ಧ ಹಾರ್ವಡರ್್ ವಿಶ್ವ ವಿದ್ಯಾನಿಲಯದಿಂದ ತೋಟಗಾರಿಕೆಯಲ್ಲಿ ಡಾಕ್ಟರೇಟ್ ಪದವಿ ಪಡೆದು ದೇಶಕ್ಕೆ ಮರಳಿ ಕನರ್ಾಟಕದಲ್ಲಿ ಅರ್ಧ ಎಕರೆ ಜಮೀನು ಇರುವ ಬಡ ರೈತ ಕೂಡ ತೋಟಗಾರಿಕೆ ಮಾಡಬಹುದು ಎಂದು ತೋರಿಸಿಕೊಟ್ಟವರು ಡಾ.ಎಂ.ಎಚ್.ಮರೀಗೌಡರು ಎಂದು ನೆನಪಿಸಿಕೊಳ್ಳುತ್ತಾರೆ ಅವರೊಂದಿಗೆ ಕೆಲಸಮಾಡಿ ನಿವೃತ್ತರಾಗಿರುವ ಮತ್ತೊಬ್ಬ ತೋಟಗಾರಿಕಾ ತಜ್ಞ ಡಾ.ಎಸ್.ವಿ.ಹಿತ್ತಲಮನಿ.
ಕೋಲಾರ,ಚಿಕ್ಕಬಳ್ಳಾಪುರ ಸುತ್ತಮುತ್ತ 1950 ಕ್ಕೆ ಮುಂಚೆ ಮಾವು,ಹಲಸು,ಜಂಬು ನೇರಳೆ ಬೆಳೆಗಳು ಇರಲಿಲ್ಲ. ಇಂತಹ ಒಣ ಪ್ರದೇಶಕ್ಕೆ ಅಂತಹ ಬೆಳೆಗಳನ್ನು ತಂದು ಪರಿಚಯಿಸಿದವರು ಮರೀಗೌಡರು.ಅಲ್ಲಿನ ಮಾವು,ಹಲಸು ಗಿಡಗಳಿಗೆ ಹೆಚ್ಚೆಂದರೆ 50 ರಿಂದ 65 ವರ್ಷಗಳಷ್ಟು ವಯಸ್ಸಾಗಿದೆ ಅಷ್ಟೇ. ಈಗ ಚಾಮರಾಜನಗರ ಜಿಲ್ಲೆ ಕೋಲಾರಕ್ಕಿಂತಲ್ಲೂ ಭೀಕರವಾದ ಬರವನ್ನು ಎದುರಿಸುತ್ತಿದೆ. ಆ ಕಾರಣಕ್ಕಾಗಿ ಒಣಭೂಮಿ ತೋಟಗಾರಿಕೆಯ ಕಡೆ ಗಮನಕೊಟ್ಟು ಗೋಡಂಬಿ,ಮಾವು,ಅಲಸು,ನೇರಳೆ,ಹುಣಸೆ,ಸೀಬೆ,ಸಪೋಟ, ರಾಮಫಲ,ಸೀತಾಫಲ, ಬೇಲದಂತಹ ಹಣ್ಣಿನ ಗಿಡಗಳನ್ನು ಬೆಳೆಯಲು ರೈತರು ಮುಂದಾಗದಿದ್ದರೆ ಮುಂದೆ ಅಪಾಯ ತಪ್ಪಿದ್ದಲ್ಲ ಎಂದು ಹಿತ್ತಲಮನಿ ಎಚ್ಚರಿಕೆ ನೀಡುತ್ತಾರೆ.
ಇಂತಹ ಹತ್ತು ಹಲವು ಸಾಧ್ಯತೆಗಳನ್ನು ಮಾಡಿ ತೋರಿಸಿದ ಡಾ.ಎಂ.ಎಚ್.ಮರೀಗೌಡರು ಹುಟ್ಟಿದ್ದು ತಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ಮಾರನಗೌಡನಹಳ್ಳಿಯಲ್ಲಿ. ಬನ್ನೂರು,ಮೈಸೂರು,ಬೆಂಗಳೂರಿನಲ್ಲಿ ಶಿಕ್ಷಣ ಪೂರೈಸಿ ಲಕ್ನೋದಲ್ಲಿ ಸ್ನಾತಕೋತ್ತರ ಪದವಿ ಪಡೆದು 1942 ರಲ್ಲಿ ತೋಟಗಾರಿಕೆ ಇಲಾಖೆಗೆ ಸೇರಿದರು.ಲಂಡನ್ನಿನ ಕ್ಯೂಗಾರ್ಡನ್ ಅವರೊಂದಿಗೆ ಸಸ್ಯ ಬೀಜ ವಿನಿಮಯ ಆರಂಭಿಸಿದರು. ಅಮೇರಿಕಾದ ಹಾರ್ವಡರ್್ ವಿವಿಯಲ್ಲಿ ಡಾಕ್ಟರೇಟ್ ಪದವಿ ಪಡೆದು 1951 ರಲ್ಲಿ ಭಾರತಕ್ಕೆ ಮರಳಿ ರಾಜ್ಯದ ತೋಟಗಾರಿಕೆ ಇಲಾಖೆ ಅದ್ಯಕ್ಷ ಸ್ಥಾನಕ್ಕೆ ನೇಮಕವಾದರು.
1965 ರಲ್ಲಿ ಕೃಷಿ ಇಲಾಖೆಯಿಂದ ತೋಟಗಾರಿಕೆ ಇಲಾಖೆಯನ್ನು ಬೇರ್ಪಡಿಸಿ ಪುನರ್ರಚನೆ ಮಾಡಿದಾಗ ಅದರ ಪ್ರಥಮ ನಿದರ್ೇಶಕರಾದ ಮರಿಗೌಡರು ಜಿಲ್ಲೆ,ತಾಲೂಕು,ಹೋಬಳಿ ಮಟ್ಟದಲ್ಲಿ ತೋಟಗಾರಿಕೆ ಇಲಾಖೆಯನ್ನು ಅಸ್ತಿತ್ವಕ್ಕೆ ತರುವ ಮೂಲಕ ಜನಸಾಮನ್ಯರ ಮನೆಯ ಬಾಗಿಲಿಗೆ ಹಣ್ಣಿನ ಗಿಡಗಳು ತಲುಪುವಂತೆ ಮಾಡಿದರು.
ಮರೀಗೌಡರು ನಿದೇರ್ಶಕರಾಗಿದ್ದಾಗ "ಹಣ್ಣಿನ ಗಿಡಗಳನ್ನು ರೈತರ ಕಣ್ಣಿಗೆ ಬೀಳುವಂತೆ ರಸ್ತೆಯ ಬದಿಯಲ್ಲಿ ಇಟ್ಟು ಹೋಗುವಂತೆ ತಮ್ಮ ಇಲಾಖೆಯವರಿಗೆ ಹೇಳುತ್ತಿದ್ದರಂತೆ. ಆ ಗಿಡಗಳನ್ನು ಇಲಾಖೆಗೆ ಬರಲು ಆಗದ ರೈತರು ತೆಗೆದುಕೊಂಡು ಹೋಗಿ ತಮ್ಮ ಜಮೀನುಗಳಲ್ಲಿ ಹಾಕಿಕೊಳ್ಳಲ್ಲಿ ಎನ್ನುವುದು ಅವರ ಉದ್ದೇಶ" ಇದು ಈಗಲೂ ಅವರ ಬಗ್ಗೆ ಇರುವ ದಂತಕತೆ.
ಪೋರ್ ಲಿಂಬ್ಸ್ ಕಾನ್ಸೆಪ್ಟ್ :  1. ತೋಟಗಾರಿಕೆ ವಿಸ್ತರಣೆ ಮತ್ತು ಅಭಿವೃದ್ಧಿ 2.ಉದ್ಯಾನ ಕಲಾ ಸಂಘದ ಮೂಲಕ ತೋಟಗಾರಿಕಾ ಪ್ರದರ್ಶನ 3. ಮಾರುಕಟ್ಟೆ ನಿಮರ್ಾಣ ಮತ್ತು 4. ನರ್ಸರಿ ಮೆನ್ಸ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಎಂದು ತೋಟಗಾರಿಕೆಯನ್ನು ನಾಲ್ಕು ವಿಭಾಗಗಳಾಗಿ ವಿಗಂಡಿಸಿ ಅವುಗಳ ಅಭಿವೃದ್ಧಿಗೆ ಆಧ್ಯತೆ ನೀಡಿದರು.
ರೈತರು ಮತ್ತು ಗ್ರಾಹಕರ ನಡುವೆ ಮಧ್ಯವತರ್ಿಗಳ ಹಾವಳಿಯನ್ನು ತಪ್ಪಿಸಲು ಮರೀಗೌಡರು 1959 ರಲ್ಲಿ ಆರಂಭಿಸಿದ ಹಾಫ್ಕಾಮ್ಸ್ ಮಳಿಗೆಗಳು ಈಗಲೂ ದಕ್ಷತೆಯಿಂದ ಕೆಲಸಮಾಡುತ್ತಿರುವುದನ್ನು ಎಲ್ಲಾಕಡೆ ಕಾಣಬಹುದಾಗಿದೆ. ಹಾಫ್ಕಾಮ್ಸ್ ಮಳಿಗೆಗಳು ಮರೀಗೌಡರ ಕನಸಿನ ಫಲ ಎನ್ನುವುದನ್ನು ಯಾರೂ ಮರೆಯಲಾಗದು.
ಬೆಂಗಳೂರಿನ ಲಾಲ್ಬಾಗ್ ಸೇರಿದಂತೆ 19 ಜಿಲ್ಲೆಗಳಲ್ಲಿ ತೋಟಗಾರಿಕೆ ವಿಸ್ತರಣಾ ಚಟುವಟಿಕೆಗಳನ್ನು ಆರಂಭಿಸಿದ ಮರೀಗೌಡರು ರಾಜ್ಯಾದ್ಯಂತ 357 ನರ್ಸರಿ ತೋಟಗಾರಿಕೆಯನ್ನು ಅರಂಭಿಸಿದರು. ಮೈಸೂರಿನಿಂದ ಬೆಂಗಳೂರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಮಂಡ್ಯ ಮತ್ತು ಚೆನ್ನಪಟ್ಟಣದ ಬಳಿ ಇರುವ ತೋಟಗಾರಿಕೆ ನರ್ಸರಿಗಳನ್ನು ನೀವು ಗಮನಿಸಿರಬಹುದು.ಇವೆಲ್ಲಾ ಮರೀಗೌಡರ ಕೊಡುಗೆ.
ಮೈಸೂರಿನ ಕೃಷ್ಣರಾಜ ಜಲಾಶಯ(ಕೆಆರ್ಎಸ್)ದಲ್ಲಿರುವ ಹಣ್ಣಿನ ತೋಟ ಮರೀಗೌಡರ ಕಲ್ಪನೆಯಲ್ಲಿ ಅರಳಿದ್ದು.
ರಾಷ್ಟ್ರಕವಿ ಕುವೆಂಪು ಮತ್ತು ಮರೀಗೌಡರಿಗೂ ಅವಿನಾಭಾವ ಸಂಬಂಧ ಇತ್ತು ಎಂದು ನೆನಪಿಸಿಕೊಂಡಿರುವ ಕುವೆಂಪು ಮಗಳು ತಾರಿಣಿ ಚಿದಾನಂದ್ ಅವರು "ಪುಷ್ಪಪ್ರೇಮಿ ಕುವೆಂಪು ಅವರು ಒಮ್ಮೆ ಮರೀಗೌಡರ ಬಳಿ `ಮ್ಯಾನ್ನೋಲಿಯಾ ಪ್ಲಾಂಟ್' ಬೇಕು ಎಂದು ಕೇಳಿಕೊಂಡಿದ್ದರು. ಮರೀಗೌಡರು ಅದನ್ನು ತಂದುಕೊಟ್ಟಾಗ ಅದನ್ನು ಏಳು ವರ್ಷಗಳ ಕಾಲ ಜತನದಿಂದ ಸಾಕಿ ಹೂ ಬಿಟ್ಟಾಗ ಸಂತಸಪಟ್ಟಿದ್ದರು" ಎಂದು ನೆನಪಿಸಿಕೊಂಡಿದ್ದಾರೆ.
ರಾಜ್ಯದ ಎಲ್ಲೆಡೆ ತೋಟಗಾರಿಕೆ ತರಬೇತಿ ಕೇಂದ್ರಗಳನ್ನು ಆರಂಭಿಸಿ ಮಣ್ಣು,ನೀರು,ಬೀಜ ಪರೀಕ್ಷೆ ಲ್ಯಾಬ್ಗಳನ್ನು ಆರಂಭಿಸುವ ಮೂಲಕ ಆಯಾಯ ಹವಾಮಾನಕ್ಕೆ ತಕ್ಕಂತಹ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹ ನೀಡಿದರು. 1958 ಇಂತಹ ಪ್ರಥಮ ತರಬೇತಿ ಕೇಂದ್ರವನ್ನು ಲಾಲ್ಬಾಗ್ನಲ್ಲಿ ತೆರೆದರು.ಹಣ್ಣು ಮತ್ತು ತರಕಾರಿ ಬೆಳೆಗಳನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವ ತಂತ್ರಜ್ಞಾನಗಳನ್ನು ಪರಿಚಯಿಸಿದರು.
ತೋಟಗಾರಿಕೆ ಇಲಾಖೆಯ ಅಭಿವೃದ್ಧಿಯನ್ನು ಮುಖ್ಯ ಧ್ಯೇಯವಾಗಿರಿಸಿಕೊಂಡಿದ್ದ ಮರೀಗೌಡರು ಯಾರೇ ಇಲಾಖೆಗೆ ಹೋದರು ಗಿಡ ಹಾಕ್ತೀರಾ ಎಂದು ಕೇಳುತಿದ್ದರಂತೆ ! ಅಲ್ಲದೆ ಉಚಿತವಾಗಿ ಹಣ್ಣಿನ ಗಿಡಗಳನ್ನು ಕೊಡುತ್ತಿದ್ದರಂತೆ.
ಅತ್ಯಂತ ಸರಳ ಮತ್ತು ನೇರ ನಡೆನುಡಿಯ ವ್ಯಕ್ತಿತ್ವವನ್ನು ಹೋಂದಿದ್ದ ಗೌಡರು ಶಿರಾ ತಾಲೂಕಿನ ಬಳ್ಳಾರ ಎಂಬಲ್ಲಿ 1525 ಎಕರೆ ಪೈಕಿ 400 ಎಕರೆಯಲ್ಲಿ ತೆಂಗಿನ ಗಿಡಗಳನ್ನು ಹಾಕಿಸಿ 1525 ಎಕರೆಯಲ್ಲೂ ತೆಂಗು ಬೆಳೆಯಬಹುದು ಎನ್ನುವುದನ್ನು ಸಾಧಿಸಿ ತೋರಿಸಿಕೊಟ್ಟರು.
ವಿಶೇಷವಾಗಿ ಖುಷ್ಕಿ ಮತ್ತು ಒಣಭೂಮಿ ತೋಟಗಾರಿಕೆಗೆ ಪ್ರೋತ್ಸಾಹ ನೀಡುತ್ತಿದ್ದ ಮರೀಗೌಡರ ನಿಷ್ಠೆ,ತ್ಯಾಗ,ಪರಿಶ್ರಮ ಮತ್ತು ಚಿಂತನೆಗಳಿಂದ ತೋಟಗಾರಿಕೆ ಇಲಾಖೆ ಒಂದು ಸ್ಪಷ್ಟ ರೂಪಪಡೆದುಕೊಂಡಿತು. ಹಲವಾರು ಪ್ರಯೋಗಶೀಲ ರೈತರಿಗೆ ಸ್ಫೂತರ್ಿಯಾದರು. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ತೋಟಗಾರಿಕೆ ಇಲಾಖೆಗಳು ಬರಲು ಕಾರಣಕರ್ತರಾದರು.
 1974 ರಲ್ಲಿ ಮರೀಗೌಡರು ಸೇವೆಯಿಂದ ನಿವೃತ್ತರಾದ ಮೇಲೂ "ಡಾ.ಮರೀಗೌಡ ಮಿಷನ್ ಆಫ್ ಹಾರ್ಟಿಕಲ್ಚರ್ ಡೆವಲಫ್ಮೆಂಟ್" ಬೋಡರ್್ ಕ್ರೀಯಾಶೀಲವಾಗಿ ಕೆಲಸಮಾಡುತ್ತಿದೆ. 1993 ರಲ್ಲಿ ಭೌತಿಕವಾಗಿ ನಮ್ಮಿಂದ ಮರೀಗೌಡರು ದೂರವಾದರು ಅವರು ಹಾಕಿಕೊಟ್ಟ ಮಾರ್ಗ, ಕಲಿಸಿದ ಪಾಠಗಳಿಂದ ಲಕ್ಷಾಂತರ ರೈತರು, ಸಾವಿರಾರು ವಿಜ್ಞಾನಿಗಳು ಈಗಲೂ ತೋಟಗಾರಿಕೆಯಲ್ಲಿ ಸ್ಫೂತರ್ಿಯಿಂದ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ತೋಟಗಾರಿಕೆಯಲ್ಲಿ ಹೊಸ ಮೈಲಿಗಲ್ಲನ್ನೇ ಸೃಷ್ಠಿಸಿದ ಮರೀಗೌಡರಂತಹ ಮಹಾನ್ ಚೇತನವನ್ನು ರೈತರು ಮರೆಯಬಾರದಲ್ಲವೇ.ಒಣಭೂಮಿಯಲ್ಲೂ ಹಸಿರು ಚಿಮ್ಮಸಿ ಅವರ ನೆನಪನ್ನು ಹಸಿರಾಗಿಸೋಣ.ಸಧ್ಯದ ಪರಿಸ್ಥಿತಿಯಲ್ಲಿ ಇದು ಅನಿವಾರ್ಯ ಕೂಡ .

ಭಾನುವಾರ, ಆಗಸ್ಟ್ 6, 2017

ಕೃಷಿಲೋಕದಲ್ಲೊಂದು ಅಪೂರ್ವ ಕ್ರಾಂತಿ ! 
ಇದು ನೈಸಗ ಕೃಷಿಕರ ಕೈಪಿಡಿ

# ಕೃಷಿ ಸಾಹಿತ್ಯದಲ್ಲಿ ಸಂಚಲನ ಮೂಡಿಸಿದ ಪುಸ್ತಕ  # ನಿಸರ್ಗದೊಂದಿಗೆ ಅನುಸಂಧಾನ


ಸುಭಾಷ್ ಪಾಳೇಕರ್ ಸರಳರಲ್ಲಿ ಸರಳ.ಹಾಗೆಯೇ ಅವರ ನೈಸರ್ಗಿಕ ಕೃಷಿಯೂ ಕೂಡ.ಭೂಮಿಗೆ ವ್ಯವಸಾಯಕ್ಕೆ ಯಾವುದೆಲ್ಲ ಬೇಡ ಅನ್ನುವುದರ ಕುರಿತು ಅವರಲ್ಲಿ ಅಪಾರವಾದ ತಿಳಿವಳಿಕೆ ಇದೆ.ಹಾಗೆಯೇ ಭೂಮಿಗೆ ಏನು ಬೇಕು ಅನ್ನುವುದರ ಕುರಿತಾಗಿಯೂ ಕೂಡ.ಇದುವೇ ಪಾಳೇಕರರ ಕೃಷಿಯ ಬೆರಗು ಮತ್ತು ಬೆಡಗು.ಸಗಣಿ ಬಳಸಿ ಬೇಸಾಯ ಮಾಡುವ ಸಂಸ್ಕೃತಿ ಶುರುವಾಗಿ 3.5 ಸಾವಿರ ವರ್ಷಗಳಾಗಿವೆ.ಆದರೆ ಬೇಸಾಯ ಮಾಡಲು ಇಂತಿಷ್ಟೇ ಸಗಣಿ,ಇಂತಿಷ್ಟೇ ಗಂಜಲ ಸಾಕು,ಬೇರೇನೂ ಬೇಕಾಗಿಲ್ಲ ಎಂದು ಈವರೆಗೆ ಯಾರೂ ಹೇಳಿರಲಿಲ್ಲ. ಹತ್ತು ಸಾವಿರ ವರ್ಷಗಳ ನಂತರವಾದರೂ ಸೃಷ್ಟಿ ತನ್ನ ಕಣ್ಣುತೆರೆದು ಪಾಳೇಕರರನ್ನು ಸೃಷ್ಟಿಸಿದೆ ಎನ್ನುತ್ತಾರೆ ಲೇಖಕ,ಪತ್ರಕರ್ತ ಆರ್.ಸ್ವಾಮಿ ಆನಂದ್. 
ವರನಟ ಡಾ.ರಾಜಕುಮಾರ್ ಅವರ ಬಂಗಾರದ ಮುನುಷ್ಯ ಸಿನಿಮಾ ತೆರೆಕಂಡಾಗ ಸಿನಿಮಾ ನೋಡಿ ಯಶಸ್ವಿ ರೈತರಾಗಿ ಬಂಗಾರದ ಮನುಷ್ಯರಾದವರ ಯಶೋಗಾಥೆಗಳನ್ನು ನೀವು ಕೇಳಿದ್ದೀರಿ. ನೋಡಿದ ಒಂದು ಸಿನಿಮಾ, ಕೇಳಿದ ಒಂದು ಒಳ್ಳೆಯ ಉಪನ್ಯಾಸ ಅಥವಾ ಓದಿದ ಒಂದು ಪುಸ್ತಕ ವ್ಯಕ್ತಿಯ ಮೇಲೆ ಪ್ರಭಾವ ಬೀರಿ ಮಹತ್ವದ ಬದಲಾವಣೆಗಳನ್ನೆ ತಂದಿದೆ. ಅಂತಹ ಪುಸ್ತಕವೊಂದರ ಬಗ್ಗೆ ನಿಮಗೆ ಹೇಳಬೇಕು. ಕನ್ನಡ ಕೃಷಿ ಸಾಹಿತ್ಯದಲ್ಲಿ ಹೀಗೆ ಸಂಚಲನವನ್ನು ಉಂಟುಮಾಡಿ ಆತ್ಮಹತ್ಯೆಯ ಕಡೆಗೆ ಮುಖ ಮಾಡಿದ್ದ ರೈತರನ್ನು ಜೀವಾಮೃತದ ಕಡೆಗೆ ಕರೆದುಕೊಂಡು ಹೋದ ಆ ಪುಸ್ತಕದ ಹೆಸರು "ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ". 
ಮಣ್ಣಿನ ಬಗ್ಗೆ ಕಣ್ಣುಕೊಟ್ಟ ಜೀವಾಮೃತದ ಜನಕ ಮಹಾರಾಷ್ಟ್ರದ ಸುಭಾಷ್ ಪಾಳೇಕರ್ ಅವರ ಕೃಷಿ ವಿಧಾನಗಳನ್ನು ಕನ್ನಡಿಗರಿಗೆ ಪರಿಚಯಿಸುವ ಪತ್ರಕರ್ತ ಸ್ವಾಮಿ ಆನಂದ್ ಅವರ ಈ ಪುಸ್ತಕವನ್ನು ಓದಿ ಸ್ಫೂರ್ತಿ ಪಡೆದು ನೈಸಗರ್ಿಕ ಕೃಷಿಕರಾದ ನೂರಾರು ಜನರನ್ನು ನಾನು ಭೇಟಿಯಾಗಿದ್ದೇನೆ. ಕೃಷಿಯ ಬಗ್ಗೆ ಏನೂ ಗೊತ್ತೇ ಇರದ ವಿದ್ಯಾವಂತ ಯುವಕರು ಇದೊಂದು ಪುಸ್ತಕವನ್ನು ಇಟ್ಟುಕೊಂಡು ಕೃಷಿಯಲ್ಲಿ ಯಶಸ್ಸು ಪಡೆದಿರುವುದನ್ನು ಕಂಡಿದ್ದೇನೆ. ಇದುವರೆವಿಗೂ ಹದಿನೇಳು ಮುದ್ರಣಗಳನ್ನು ಕಂಡಿರುವ "ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ" ಎಂಬ ಪುಸ್ತಕ ಲಕ್ಷಾಂತರ ರೈತ ಮಿತ್ರರಿಗೆ ಬೆಳಕಿನ ಬೇಸಾಯದ ರೀತಿ ರಿವಾಜುಗಳನ್ನು ಕಲಿಸಿಕೊಟ್ಟಿದೆ.
ಹದಿನೈದು ವರ್ಷಗಳ ಹಿಂದೆ ಅಗ್ನಿ ವಾರಪತ್ರಿಕೆಯಲ್ಲಿ "ಕೃಷಿ ಲೋಕದಲ್ಲೊಂದು ಅಪೂರ್ವ ಕ್ರಾಂತಿ" ಎಂಬ ಹೆಸರಿನಲ್ಲಿ ಸರಣಿ ಲೇಖನಗಳನ್ನು ಬರೆಯುವ ಮೂಲಕ ಕೃಷಿ ಸಾಹಿತ್ಯದಲ್ಲಿ ವಿಶಿಷ್ಟ ಮಾದರಿಯೊಂದನ್ನು ಸ್ವಾಮಿ ಆನಂದ್ ರೂಪಿಸಿದರು.ಅದರ ಮುಂದುವರಿದ ಭಾಗವಾಗಿ ಈಗ ದೇಸಿ ಕೃಷಿಯ ಬಗ್ಗೆ ಕಳೆದ ಏಳೆಂಟು ವರ್ಷಗಳಿಂದ ಅಧ್ಯಯನ ಮಾಡಿ ಡಾಕ್ಟರೇಟ್ ಪದವಿಗಾಗಿ ಹಂಪಿ ವಿಶ್ವವಿದ್ಯಾನಿಲಯಕ್ಕೆ ಮಹಾ ಪ್ರಬಂಧವನ್ನು ಸಲ್ಲಿಸಿದ್ದಾರೆ.
"ನನ್ನ ಜ್ಞಾನದಾಹವನ್ನು ಧ್ಯಾನಸ್ಥ ಸ್ಥಿತಿಗೆ ಕೊಡೊಯ್ದ ಈ ಕೃತಿ ಮುಂದಿನ ಮುದ್ರಣದ ಹೊತ್ತಿಗೆ ಸಮಗ್ರ ನೈಸರ್ಗಿಕ ಕೃಷಿಯ ಕೈಪಿಡಿಯಾಗಿ ರುಪುಗೊಳ್ಳಲಿದೆ" ಎನ್ನುವ ಸ್ವಾಮಿಆನಂದ್ ಕೃಷಿಯ ಬಗ್ಗೆ ಬರೆಯುವವರಿಗೆ ನಿಸರ್ಗ ಕೃಷಿಯ "ನಿಜ" ಗ್ರಹಿಸುವ ಶಕ್ತಿ ಇರಬೇಕು. ಈಗ ಇರುವ ನೂರಾರು ಕೃಷಿ ಪದ್ಧತಿಗಳಲ್ಲಿ "ಇದೂ ಕೂಡ" ಒಂದಲ್ಲ! ಬದಲಿಗೆ ಇದುವೇ ನಿಜವಾದ ಕೃಷಿ, ಪ್ರಧಾನ ಕೃಷಿ. ಮುಖ್ಯವಾಹಿನಿಯಲ್ಲಿ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುವಷ್ಟು ಸಾಮಥ್ರ್ಯ ಈ ಕೃಷಿಗಿದೆ ಎನ್ನುವ ಅರಿವು ಇರಬೇಕು ಎನ್ನುತ್ತಾರೆ.
ಪಾಳೇಕರರ ಕೃಷಿ ವಿಧಾನಗಳನ್ನು ಕುರಿತು ಕನ್ನಡದಲ್ಲಿ ಹಲವಾರು ಪುಸ್ತಕಗಳು ಬಂದಿವೆ. ಆದರೆ ನಮ್ಮ ಭಾಗದಲ್ಲಿ ಸ್ವಾಮಿ ಆನಂದ್ ಅವರ ಪುಸ್ತಕ ಮಾಡಿದಷ್ಟು ಪರಿಣಾಮವನ್ನು ಅವು ಮಾಡಿದಂತಿಲ್ಲ.
"ವಿಷಮುಕ್ತ ಮಣ್ಣು,ವಿಷಮುಕ್ತ ಆಹಾರ,ವಿಷಮುಕ್ತ ಪರಿಸರ,ವಿಷಮುಕ್ತ ಸಮಾಜ, ಸುಭಾಷ್ ಪಾಳೇಕರರ ಜ್ಞಾನ ಹಂಚುವ ದಾಹ.ಅವರ ಉದಾತ್ತ ಧ್ಯೇಯ,ತಿಳಿಗೊಳದಂಥ ಮನಸ್ಸು ಮತ್ತು ಅವರ ಕೃಷಿಯ ತಳಹದಿಗಿದ್ದ ವಿಜ್ಞಾನದ ಸಮರ್ಥನೆ-ಇವು ನನ್ನನ್ನು ಈ ನಿಮರ್ಿತಿಯ ಸೊಬಗು ಅರಿಯಲು ಪ್ರೇರೆಪಿಸಿದವು" ಎನ್ನುವ ಆನಂದ್ ರೈತರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಬೆಳಕಾಗಬಲ್ಲ ಪುಸ್ತಕವನ್ನು ಕೊಟ್ಟಿದ್ದಾರೆ. 2005 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಈ ಕೃತಿ,ಈವರೆಗೆ 74 ಸಾವಿರ ಪ್ರತಿಗಳು ಮಾರಾಟವಾಗಿವೆ.
ಕಳೆದ ವಾರ ಇದೆ ಅಂಕಣದಲ್ಲಿ ಬರೆದ ನಿವೃತ್ತ ಜೀವನವನ್ನು ಸಾರ್ಥಕ ಪಡಿಸಿಕೊಂಡ ನೈಸರ್ಗಿಕ ಕೃಷಿಕ ರಾಮಶೆಟ್ಟಿ ಎಂಬ ಅಂಕಣವನ್ನು ಓದಿದ ಹಲವು ಮಂದಿ ರಾಮಶೆಟ್ಟರ ತೋಟಕ್ಕೆ ಭೇಟಿ ನೀಡಿದ್ದರು.ಇಂಟರೆಸ್ಟಿಂಗ್ ಅಂದರೆ ನಿವೃತ್ತರೇ ಹೆಚ್ಚು ಭೇಟಿಯಾಗಿದ್ದರಂತೆ. ಕೃಷಿಯ ಬಗ್ಗೆ ತಿಳಿವಳಿಕೆಯೇ ಇರದ ರಾಮಶೆಟ್ಟರು ಸ್ವಾಮಿ ಆನಂದ್ ಅವರ ಈ ಪುಸ್ತಕವನ್ನು ಓದಿ ಪ್ರಭಾವಿತರಾಗಿ ಸುಭಾಷ್ ಪಾಳೇಕರ್ ಅವರ ಕೃಷಿ ತರಬೇತಿ ಶಿಬಿರದಲ್ಲಿ ಭಾಗವಹಿಸಿ ತಾವು ಕೃಷಿಕರಾದದ್ದನ್ನು ಹೇಳಿಕೊಂಡಿದ್ದರು. ಚಾಮರಾಜನಗರ ಶ್ರೀನಿಧಿ ಎಂಬ ಎಂಜಿನಿಯರ್ ಪದವಿಧರ ಇದೇ ಪುಸ್ತಕವನ್ನು ಓದಿಕೊಂಡು ನೈಸರ್ಗಿಕ ಕೃಷಿಕನಾದ ಯಶೋಗಾಥೆಯನ್ನು ಇದೆ ಅಂಕಣದಲ್ಲಿ ಬರೆದಿದ್ದೆ. ಹೀಗೆ ನನ್ನ ಕೃಷಿ ಸುತ್ತಾಟದಲ್ಲಿ ಹಲವಾರು ಮಂದಿ ಯಶಸ್ವಿ ರೈತರು ಆನಂದ್ ಅವರ "ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ" ಪುಸ್ತಕ ಓದಿ ಪ್ರಭಾವಿತರಾಗಿ ಯಶಸ್ವಿ ಕೃಷಿಕರಾಗಿರುವುದನ್ನು ಹೇಳಿಕೊಂಡಿದ್ದಾರೆ. ಬನ್ನೂರು ಕೃಷ್ಣಪ್ಪ, ಪ್ರೊ.ಸೋಮಶೇಖರಪ್ಪ, ಕಣಗಾಲು ಕೃಷ್ಣಮೂತರ್ಿ,ಕುಳ್ಳೇಗೌಡರು,ಸರಗೂರಿನ ಶಿವನಾಗಪ್ಪ,ಬೆಳವಾಡಿಯ ನವೀನ್ ಕುಮಾರ್,ಬೇಡರಪುರದ ರವಿ,ಹೊಸಕೋಟೆ ಸಿದ್ದಪ್ಪ,ತಾಂಡವಪುರದ ವಿದ್ಯಾಧರ ಹೀಗೆ ಸಂಪೂರ್ಣ ಸುಭಾಷ್ ಪಾಳೇಕರ್ ಪದ್ಧತಿಯಲ್ಲಿ ಈಗಲೂ ಕೃಷಿ ಮಾಡುತ್ತಾ ನೆಮ್ಮದಿಯ ಆರೋಗ್ಯಪೂರ್ಣ ಬದುಕು ಕಟ್ಟಿಕೊಂಡಿರುವ ರೈತರ ಪಡೆಯೆ ನಮ್ಮ ಸುತ್ತಮುತ್ತ ಇದೆ. ಪಾಳೇಕರ್ ಕೃಷಿಮಾಡಿ ಸೋತವರು ಇದ್ದಾರೆ.ಅವರ ಸೋಲಿಗೆ ಈ ವಿಧಾನವನ್ನು ಸರಿಯಾದ ಕ್ರಮದಲ್ಲಿ ಅನುಸರಣೆ ಮಾಡದೆ ಇರುವುದೆ ಆಗಿದೆ.
ಆಧುನಿಕ ಕೃಷಿ ಪದ್ಧತಿಯ ಅನಾಹುತಗಳು ಈಗ ಎಲ್ಲರಿಗೂ ಗೊತ್ತಿದೆ.ಬಹುರಾಷ್ಟೀಯ ಕಂಪನಿಗಳ ಕಪಿಮುಷ್ಠಿಯಲ್ಲಿರುವ ಆಧುನಿಕ ಕೃಷಿಯಿಂದಾಗಿ ರೈತ ಬೀಜ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದಾನೆ.ಪರಿಣಾಮ ಕ್ರಿಮಿನಾಶಕ,ರಾಸಾಯನಿಕ ಗೊಬ್ಬರ, ಬೃಹತ್ ಯಂತ್ರೋಪಕರಣ ತಯಾರುಮಾಡುವ ಉದ್ಯಮಿಗಳ ಕೈಗೊಂಬೆಯಾಗಿ ಆತ್ಮಹತ್ಯೆಯ ಹಾದಿ ಹಿಡಿದಿದ್ದಾನೆ. ಇಂತಹ ಹುನ್ನಾರಗಳಿಂದ ರೈತರನ್ನು ಬಿಡುಗಡೆಗೊಳಿಸುವಲ್ಲಿ ಈ ಕೃತಿ ದಾರಿತೋರಿಸುತ್ತದೆ.
"ಬೇಸಾಯ ಅಂದ್ರೆ ನಾಸಾಯ,ನೀಸಾಯ,ಮನೆಮಂದಿಯೆಲ್ಲ ಸಾಯ ಅಂತ ಗಾದೆ ಇದೆ. ಈ ಗಾದೇನ ಈ ನೈಸಗರ್ಿಕ ಕೃಷಿ ಸುಳ್ಳು ಮಾಡುತ್ತೆ ಅನ್ನೋ ನಂಬಿಕೆ ನನಗಿದೆ.ನಾವಿದನ್ನು ವ್ಯಾಪಕಗೊಳಿಸಿದ್ರೆ ಸಾಯುವವನು ಅಥವಾ ಆತ್ಮಹತ್ಯೆ ಮಾಡಿಕೊಳ್ಳುವವನು ರೈತ ಅಲ್ಲ.ಬದಲಿಗೆ ಇಲ್ಲಿ ರಸಗೊಬ್ಬರ ಆತ್ಮಹತ್ಯೆ ಮಾಡಿಕೊಳ್ಳುತ್ತೆ.ಕ್ರಿಮಿನಾಶಕಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ.ಸಾವಯವ ಗೊಬ್ಬರಗಳು,ಹೈಬ್ರಿಡ್ ಬೀಜಗಳು,ಸಾಲಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ" ಎನ್ನುವ ಸಾಹಿತಿ ದೇವನೂರ ಮಹಾದೇವ ಕೃತಿಗೆ ಅರ್ಥಪೂರ್ಣ ಮುನ್ನುಡಿ ಬರೆಯುವ ಮೂಲಕ ರೈತರಲ್ಲಿ ಆತ್ಮವಿಶ್ವಾಸ ಮೂಡಿಸಿದ್ದಾರೆ.
ಜಗತ್ತಿನ ಎಲ್ಲಾ ಫೆಸ್ಟಿಸೈಡ್ಸು,ಕೆಮಿಕಲ್ಸ್,ಫಟರ್ಿಲೈಜರ್ಸ್,ಸೀಡ್ಸ್ ಕಂಪನಿಗಳು ಮತ್ತು ಅವುಗಳ ಅಂಗಡಿಗಳನ್ನು ಶಾಶ್ವತವಾಗಿ ಮುಚ್ಚಿಸಿಬಿಡುತ್ತಿದ್ದ ಈ ಬಗೆಯ ಕೃಷಿ ವಿಧಾನದತ್ತ ನಮ್ಮ ಮಾಧ್ಯಮಗಳು,ಸರಕಾರಗಳು ಗಮನಹರಿಸದಿರುವುದು ಸೋಜಿಗವೂ,ದುರಂತವೂ ಆಗಿದೆ ಎನ್ನುವ ಸ್ವಾಮಿಆನಂದ್ ಈಗಲೂ ಕಾಳ ಮಿಂಚಿಲ್ಲ ರೈತ ಸಮುದಾಯ ಇಂತಹ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು ಎನ್ನುತ್ತಾರೆ.
ಭೂಮಿ ಸಿದ್ಧತೆಯಿಂದ ಆರಂಭಿಸಿ,ಬೆಳೆಗಳ ಸಂಯೋಜನೆ,ಋತುಮಾನಗಳು,ಮಳೆ ನಕ್ಷತ್ರಗಳು,ಬೀಜದ ಆಯ್ಕೆ, ಬೀಜಾಮೃತ,ಜೀವಾಮೃತ ತಯಾರಿಕೆ, ಯಾವಯಾವ ಪ್ರದೇಶದಲ್ಲಿ ಎಂತಹ ಬೆಳೆಗಳನ್ನು ಬೆಳೆಯಬೇಕು.ಯಾವ ಅಂತರದಲ್ಲಿ ಯಾವ ಗಿಡಮರಗಳನ್ನು ಹಾಕಬೇಕು ಎನ್ನುವ ವಿವರಗಳೊಂದಿಗೆ ಪಾಳೇಕರ್ ಕೃಷಿಯ ಎಲ್ಲಾ ಹಂತಗಳನ್ನು ರೇಖಾಚಿತ್ರದ ಮೂಲಕ ಪರಿಚಯಿಸಿಕೊಟ್ಟಿರುವುದು ಕೃತಿಯ ವಿಶೇಷ.
"ಕೊಡುವುದು-ಪಡೆಯುವುದು ಮತ್ತು ಪಡೆದುದನ್ನು ಪಡೆದಲ್ಲಿಗೆ ಹಿಂತಿರುಗಿಸುವುದು" ಎನ್ನುವ ಜಪಾನಿನ ನೈಸಗರ್ಿಕ ಕೃಷಿಕ ಮಸನೊಬ್ಬ ಪೊಕೊವಕ ಅವರ ಬೇಸಾಯ ತತ್ವವನ್ನೇ ವೈಜ್ಞಾನಿಕವಾಗಿ ಹೇಳುವ ಸುಭಾಷ್ ಪಾಳೇಕರ್ ಅವರ ಕೃಷಿ ಪದ್ಧತಿಯನ್ನು ಸ್ವಾಮಿ ಆನಂದ್ ಸರಳವಾಗಿ ಅರ್ಥಮಾಡಿಸಿದ್ದಾರೆ.
ಒಂದು ನಾಡ ಹಸುವಿನ ಸಗಣಿ ಗಂಜಲದಿಂದಲೇ 30 ಎಕರೆ ಪ್ರದೇಶದಲ್ಲಿ ಕೃಷಿ ಮಾಡಬಹುದು ಎನ್ನುವುದನ್ನು ಅಂಕಿಸಂಖ್ಯೆಗಳೊಂದಿಗೆ ನೈಸಗರ್ಿಕ ಕೃಷಿ ಸಾಧಕರ ತೋಟದಲ್ಲಿ ಆಗಿರುವ ಬೆಳವಣಿಗೆಗಳೊಂದಿಗೆ ನಿರೂಪಿಸುತ್ತಾ ಹೋಗುತ್ತಾರೆ. ಕೃತಿಯ ಕೊನೆಯಲ್ಲಿ ಇಂತಹ ನೈಸರ್ಗಿಕ ಕೃಷಿಕರ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಕೊಟ್ಟಿರುವುದರಿಂದ ತೋಟಗಳಿಗೆ ಭೇಟಿ ನೀಡುವ ಆಸಕ್ತರಿಗೆ ಅನುಕೂಲವಾಗಿದೆ.
ಬತ್ತ,ಕಬ್ಬು, ಬಾಳೆ,ತರಕಾರಿ,ತೋಟಗಾರಿಕೆ ಬೇಸಾಯದಲ್ಲಿ ಕೈ ಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು.ನೈಸಗರ್ಿಕ ಕೀಟನಾಶಕಗಳಾದ ಶಿಲೀಂದ್ರನಾಶಕ, ನೀಮ್ ಬಾಣ,ಅಗ್ನಿ ಅಸ್ತ್ರ, ಬ್ರಹ್ಮಾಸ್ತ್ರಗಳಂತಹ ಪರಿಣಾಮಕಾರಿ ದೇಸಿ ಔಷಧಗಳನ್ನು ಮಾಡಿಕೊಳ್ಳುವ ಬಗ್ಗೆ ವಿವರಿಸಿದ್ದಾರೆ.
ನಮ್ಮ ಬೇಸಾಯ ಕ್ರಮಗಳನ್ನು ನಿಸರ್ಗ ನಿಯಮಗಳಿಗೆ ಪೂರಕವಾಗಿ ರೂಪಿಸಿಕೊಳ್ಳಬೇಕು.ಬಂಜರು ಭೂಮಿಯಲ್ಲೂ ನಾವು ಖಚರ್ುಗಳಿಲ್ಲದೆ ಫಸಲು ತೆಗೆಯಬಹುದು. ಆದರೆ ಆ ಪರಿಸ್ಥಿತಿಗೆ,ಜಾಗಕ್ಕೆ ಒಗ್ಗುವ ಫಸಲುಗಳನ್ನು ಮಾತ್ರ ಹಾಕಬೇಕು. ಮಹಾರಾಷ್ಟ್ರ ಸರಕಾರ ಈ ಪ್ರಯೋಗಮಾಡಿ ಯಶಸ್ವಿಯಾಗಿದೆ ಎಂಬ ಪಾಳೇಕರ್ ಮಾತುಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ ನೈಸಗರ್ಿಕ ಕೃಷಿ ಸರಳ,ಸುಲಭ ಮತ್ತು ಲಾಭದಾಯಕವಾಗುತ್ತದೆ. ಇಲ್ಲದಿದ್ದರೆ ರೈತ ಮತ್ತೆ ಹಾದಿ ತಪ್ಪುವುದು ನಿಶ್ಚಿತ.
ರೈತರು ಗೊಂದಲವಾಗುವಷ್ಟು ಕೃಷಿ ಪದ್ಧತಿಗಳು ಈಗ ಜಾರಿಯಲ್ಲಿವೆ. ಪಾರಂಪರಿಕ ಕೃಷಿ,ಸಾವಯವ ಕೃಷಿ,ಸಹಜ ಕೃಷಿ, ಆಧುನಿಕ ಕೃಷಿ ಜೊತೆಗೆ ನೈಸಗರ್ಿಕ ಕೃಷಿ ಎಂಬ ಹಲವಾರು ಪದ್ಧತಿಗಳ ನಡುವೆ ನಿಂತ ರೈತ ತಾನೂ ಯಾವುದನ್ನು ಅನುಸರಿಸಬೇಕು ಎನ್ನುವ ಗೊಂದಲದ ಗೂಡಾಗಿರುವುದು ಸತ್ಯ. ಸಧ್ಯಕ್ಕೆ ರೈತರಿಗೆ ಬೇಕಾಗಿರುವುದು ಕಡಿಮೆ ವೆಚ್ಚ, ಕಡಿಮೆ ಮಾನವ ಹಸ್ತಕ್ಷೇಪ,ಕಡಿಮೆ ನೀರು ಬಳಕೆ ಹೆಚ್ಚಿನ ಇಳುವರಿ ಸಿಗುವ ಸರಳ ಸುಲಭ ಪರಿಸರ ಸ್ನೇಹಿ ವಿಧಾನ. ಹೊರಗಿನಿಂದ ಏನನ್ನೂ ಹಣಕೊಟ್ಟು ತಾರದೆ ತನ್ನಲ್ಲೇ ಸಿಗುವ ಸಂಪನ್ಮೂಲಗಳನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಕೃಷಿ ಮಾಡುವುದನ್ನು ರೈತ ಕಲಿಯಬೇಕಿದೆ.ಅಂತಹ ಚಿಂತನೆಗಳಿಗೆ ಪ್ರೇರಪಣೆ ನೀಡುವ ಈ ಕೃತಿ ಎಲ್ಲಕ್ಕಿಂತ ಸರಳ,ಸುಲಭ ವಿಧಾನಗಳನ್ನು ತಿಳಿಸಿಕೊಡುತ್ತದೆ. ಇಂತಹ ಕೃತಿಗಳಿಗೆ ಸಹಜ, ಸರಳ ಕೃಷಿಯ ಸಾಧ್ಯತೆಗಳನ್ನು ಮತ್ತಷ್ಟು ವಿಸ್ತರಿಸುವ ಶಕ್ತಿ ಇದೆ.
ನಾವು ಬೆಳೆದ ಯಾವುದೇ ಬೆಳೆ ಇರಬಹುದು ಅದು ಶೇಕಡ 98.5 ರಷ್ಟನ್ನು ವಾತಾವರಣದಿಂದಲೇ ಪಡೆಯುತ್ತದೆ.ಉಳಿದ ಶೇಕಡ 1.5 ರಷ್ಟನ್ನು ಭೂಮಿಯಿಂದ ಪಡೆಯುತ್ತದೆ. ಆ ಶೇಕಡ 1.5 ರ ವ್ಯವಸ್ಥೆಗಾಗಿ ನಮ್ಮಲ್ಲಿ ಎಷ್ಟೆಲ್ಲಾ ಮೋಸದ ಜಾಲ ಹುಟ್ಟಿಕೊಂಡಿದೆ ಎನ್ನುವ ಪಾಳೇಕರ್ ಮಣ್ಣು,ನೀರು, ಬೀಜ,ಬಿಸಿಲು ಕೊಯ್ಲಿನ ಬಗ್ಗೆ ವೈಜ್ಞಾನಿಕವಾಗಿ ತಿಳಿಸಿದ್ದಾರೆ.
ರೈತರು ಹೇಗೆ ಸ್ವಾಲಂಭಿ ಜೀವನ ನಡೆಸಬಹುದು.ಕ್ರಿಮಿನಾಶಕ,ಗೊಬ್ಬರವನ್ನು ಬಿಟ್ಟು ಒಂದು ನಾಡ ಹಸುವಿನಿಂದ ಭೂಮಿಗೆ ಬೇಕಾದ ಎಲ್ಲಾ ಪೋಷಕಾಂಶಗಳನ್ನು ತಯಾರುಮಾಡಿಕೊಳ್ಳಬಹುದು ಎನ್ನುವುದನ್ನು ಪುಸ್ತಕ ಸರಳವಾಗಿ ತಿಳಿಸಿಕೊಡುತ್ತದೆ.
ಈ ಕೃತಿ "ಪರಿಪೂರ್ಣ" ಅಂತ ಹೇಳಲಾರೆ.ನಿಜಕ್ಕೂ ಕೃಷಿ ಎನ್ನುವುದು ಜೀವನ ಕಲೆ.ಅದರ ಸಾರ್ಥಕತೆ ಅರಿವಾಗುವುದು ಇಡಿಯಾಗಿ ಅಪರ್ಿಸಿಕೊಂಡಾಗಲೆ. ಆ ಇಡಿಯಾಗಿ ಅರ್ಪಿಸಿಕೊಳ್ಳುವ ಅವಕಾಶ ಎಲ್ಲರಪಾಲಿಗೂ ಲಭಿಸಲಿ ಎನ್ನುವ ಸ್ವಾಮಿ ಆನಂದ್ ಸುಭಾಷ್ ಪಾಳೇಕರ್ ಅವರ ಕೃಷಿ ಪದ್ಧತಿಯ ಎಲ್ಲಾ ಮಗ್ಗಲುಗಳನ್ನು ರೈತರಿಗೆ ಮನದಟ್ಟಾಗುವಂತೆ ಕಟ್ಟಿಕೊಟ್ಟಿದ್ದಾರೆ. ಪುಸ್ತಕವನ್ನು ಓದಿದ ನಂತರ ನಮ್ಮೊಳಗೂ ಪಾಳೇಕರ್ ಕೃಷಿ ಆವರಿಸಿಕೊಳ್ಳುವುದಂತು ನಿಶ್ಚಿತ. ಹೆಚ್ಚಿನ ಮಾಹಿತಿಗೆ ಸ್ವಾಮಿ ಆನಂದ್ 9448472748 ಸಂಪರ್ಕಿಸಿ.

ಶನಿವಾರ, ಜುಲೈ 29, 2017

ಕೃಷಿ ಪ್ರಯೋಗಶೀಲತೆಗೆ ಅಡ್ಡಿಯಾಗದ ವಯಸ್ಸು ;   ಸಂಕಷ್ಟದ ನಡುವೆ ಅರಳಿದ ಬದುಕು
ಮೈಸೂರು : ಜೀವನದಲ್ಲಿ ಮರೆಯಲಾಗದ ನೋವುಗಳಿದ್ದರೂ ಜೀವನೋತ್ಸಹಕ್ಕೆ ಕೊರತೆ ಇಲ್ಲ. ವಯಸ್ಸು 73 .ಹೆಸರು ಮೈಸೂರು ವೆಂಕಟಪ್ಪ ರವೀಂದ್ರನಾಥ್.ಓದಿದ್ದು ಎಂಜಿನಿಯರ್ ಪದವಿ. ಕೈ ಹಿಡಿದದ್ದು (ಕೋಳಿ) ಕುಕ್ಕುಟೋದ್ಯಮ. ಎರಡು ದಶಕದ ಹಿಂದೆ ದಿನಕ್ಕೆ ಒಂದೂವರೆ ಲಕ್ಷ ಕೋಳಿಮೊಟ್ಟೆ ಉತ್ಪಾದನೆ ಮಾಡುತ್ತಿದ್ದ ರವೀಂದ್ರನಾಥ್ ಈಗ ಪ್ರತಿದಿನ ಮೂವತ್ತು ಸಾವಿರ ಕೋಳಿಮೊಟ್ಟೆ ಉತ್ಪಾದನೆ ಮಾಡುತ್ತಾರೆ. ನೂರಾರು ಜನ ಕೆಲಸ ಮಾಡುತ್ತಿದ್ದ ಜಾಗದಲ್ಲಿ ಈಗ ಮೂವತ್ತು ಮಂದಿ ನೌಕರರರು ಕೆಲಸಮಾಡುತ್ತಿದ್ದಾರೆ. ವಯಸ್ಸು ಮತ್ತು ಪದೇ ಪದೇ ಎದುರಾದ ಸಂಕಷ್ಟಗಳು ರವೀಂದ್ರನಾಥ್ ಅವರನ್ನು ಹಣ್ಣು ಮಾಡಿಬಿಟ್ಟಿವೆ. ಅವರ ನೆಚ್ಚಿನ "ಮಿಲ್ಲರ್" ಮಾತ್ರ ಈಗ ಅವರ ಪ್ರೀತಿಯ ಗೆಳೆಯ. ಮಿಲ್ಲರ್ಗೂ ವಯಸ್ಸಾಗಿದೆ.
"ಸಾರ್ ನನಗಿಂತ ಮೊದಲು "ಮಿಲ್ಲರ್" ಸತ್ ಬಿಟ್ರೆ ನಾನೂ ನೆಮ್ಮದಿಯಿಂದ ಜೀವ ಬಿಡಬಹುದು.ಇಲ್ಲ ಅಂದ್ರೆ ನಾನೇ ಮೊದಲ್ ಸತ್ತುಹೋದರೆ "ಮಿಲ್ಲರ್" ಅನಾಥನಾಗಿಬಿಡುತ್ತಾನೆ. ಅವನನ್ನು ಯಾರೂ ನೋಡಿಕೊಳ್ಳುವುದಿಲ್ಲ" ಎಂದು ಮರುಗುವಾಗ ಅವರ ಮುಗ್ಧತೆ ಮಿಂಚಿ ಮರೆಯಾದಂತೆ ಅನಿಸುತ್ತದೆ.
ಅಂದ ಹಾಗೆ "ಮಿಲ್ಲರ್" ಅವರ ಅಚ್ಚುಮೆಚ್ಚಿನ ಲ್ಯಾಬ್ರಡಾರ್ ನಾಯಿ. ಈ ನಾಯಿಯ ದೆಸೆಯಿಂದ ಅವರಲ್ಲಿ ಜೀವನಪ್ರೀತಿ ಹೆಚ್ಚಾಗಿದೆ.ಇಳಿಗಾಲದಲ್ಲಿ ಹೊಸದಾಗಿ ಮೂರ್ನಾಲ್ಕು ಮಂದಿ ಆತ್ಮೀಯ ಗೆಳೆಯರು ರವೀಂದ್ರನಾಥ್ ಅವರಿಗೆ ಒದಗಿಬಂದಿದ್ದಾರೆ.ಕುಟುಂಬದಿಂದ ದೂರವಾಗಿ ಏಕಾಂಗಿಯಾಗಿರುವ ಅವರಿಗೆ ಸಾಂತ್ವನ ಹೇಳಿದ್ದಾರೆ.
ಇಷ್ಟೇ ಹಾಗಿದ್ದರೆ ಅವರ ಬಗ್ಗೆ ನನಗೆ ಕುತೂಹಲ ಇರುತ್ತಿರಲಿಲ್ಲ. 73 ನೇ ವಯಸ್ಸಿನಲ್ಲಿ ರವೀಂದ್ರನಾಥ್ ಹತ್ತಾರು ಎಕರೆಯಲ್ಲಿ ರೇಷ್ಮೆ ಕೃಷಿ ಮಾಡಲು ಹೊರಟಿದ್ದಾರೆ.ಮುಂದಿನ ಮೂರು ವರ್ಷದಲ್ಲಿ ರೇಷ್ಮೆ ಕೃಷಿಯಲ್ಲಿ ಸಾಧನೆಮಾಡಿ ಮಾದರಿಯಾಗಲು ಹೊರಟಿದ್ದಾರೆ. ರೇಷ್ಮೆ ಕೃಷಿಯ ಆಳ ಅಗಲ ಎಲ್ಲವನ್ನು ತಿಳಿದುಕೊಂಡಿರುವ ಇವರು ರೇಷ್ಮೆಕೃಷಿ ಮಾಡಿದರೆ ಲಾಭ ನಿಶ್ಚಿತ ಎಂಬ ತೀಮರ್ಾನಕ್ಕೆ ಬಂದಿದ್ದಾರೆ.
ಅದಕ್ಕಾಗಿ ಈಗ ಅವರ ಫಾರಂನಲ್ಲಿ ಸುಮಾರು ಐದು ಎಕರೆ ಪ್ರದೇಶದಲ್ಲಿ ರೇಷ್ಮೆಕಡ್ಡಿ ಬೆಳೆದು ನಿಂತಿದೆ.ಮತ್ತೆ ಐದು ಎಕರೆಯಲ್ಲಿ ನಾಟಿ ಮಾಡಿರುವ ಕಡ್ಡಿ ಚಿಗುರೊಡೆಯುತ್ತಿದೆ. ಸುಮಾರು ಸಾವಿರ ಮೊಟ್ಟೆ ಸಾಕಾಣಿಕೆ ಮಾಡಬಹುದಾದ ವಿಸ್ತೀರ್ಣದ ರೇಷ್ಮೆ ಸಾಕಾಣಿಕೆ ಮನೆ ಸಿದ್ಧವಾಗುತ್ತಿದೆ. ಕೋಳಿಗಳ ಮೊಟ್ಟೆಗಳ ಜೊತೆಗೆ ರೇಷ್ಮೆಗೂಡುಗಳು ರವೀಂದ್ರನಾಥ್ ಅವರ ತಲೆಯಲ್ಲಿ ತುಂಬಿಕೊಂಡು ಅವರಲ್ಲಿ ಮತ್ತಷ್ಟು ಉತ್ಸಾಹ ಮತ್ತು ಲವಲವಿಕೆಗೆ ಕಾರಣವಾಗಿವೆ. ರೇಷ್ಮೆ ಮತ್ತು ಕೋಳಿ ಸಾಕಾಣಿಕೆಯ ಬಗ್ಗೆ  ಜೀಫ್ನಲ್ಲಿ ಕುಳಿತು ಫಾರಂನಲ್ಲಿ ನಮ್ಮನ್ನು ಸುತ್ತಾಡಿಸಿ ಚಿಕ್ಕ ಹುಡುಗನಂತೆ ಎಲ್ಲವನ್ನೂ ತೋರಿಸುತ್ತಾ ವಿವರಿಸುತ್ತಿದ್ದರೆ ಇವರಿಗಿರುವ ಉತ್ಸಾಹ ಯುವಕರಿಗೆ ಇದ್ದರೆ ಕೃಷಿಕರ್ಯಾರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರುವುದಿಲ್ಲ ಎಂದು ನನಗನಿಸಿತು. ಹನಿ ನೀರಾವರಿಯಲ್ಲಿ ಹೊಸ ಪ್ರಯೋಗ ಮಾಡಿದ್ದಾರೆ. ಕೃಷಿಹೊಂಡವನ್ನು ಜನಜಾನುವಾರುಗಳಿಗೆ ಹಾನಿಯಾಗದಂತೆ ವೈಜ್ಞಾನಿಕವಾಗಿ ನಿಮರ್ಾಣಮಾಡಿದ್ದಾರೆ.
ಹೈಸ್ಕೂಲ್ನಲ್ಲಿ ನನಗೆ ಗಣಿತ ಮತ್ತು ವಿಜ್ಞಾನ ಕಲಿಸುತ್ತಿದ್ದ ಪ್ರೀತಿಯ ಮೇಷ್ಟು ನಂಜುಂಡಶೆಟ್ಟರು (ಡಿಎನ್ಎಸ್) ಒಂದು ದಿನ ದೂರವಾಣಿ ಕರೆಮಾಡಿ ಮೈಸೂರು ಸಮೀಪ 73 ವರ್ಷದ ವ್ಯಕ್ತಿಯೊಬ್ಬರು ಕೃಷಿ ಮಾಡುತ್ತಿದ್ದಾರೆ.ಇಪ್ಪತ್ತು ಎಕರೆಯಲ್ಲಿ ಕಾಡು ಬೆಳೆಸಿದ್ದಾರೆ.ಇಳಿ ವಯಸ್ಸಿನಲ್ಲೂ ರೇಷ್ಮೆ ಬೆಳೆಯಲು ಹೊರಟಿದ್ದಾರೆ. ಅವರನ್ನು ನೀವು ಒಮ್ಮೆ ಬೇಟಿ ಆಗಬೇಕು ಎಂದರು.
ನಂಜುಂಡಶೆಟ್ಟರು ನಿವೃತ್ತರಾದ ಮೇಲೆ ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದಲ್ಲಿ ರೇಷ್ಮೆ ಕೃಷಿ ಮಾಡಲು ಮುಂದಾಗಿರುವುದನ್ನು ಕೇಳಿದ್ದೆ.ಹಾಗಾಗಿ ರೇಷ್ಮೆ ಕೃಷಿ ಮಾಡುವವರನ್ನು ಕಂಡರೆ ಅವರಿಗೆ ಪ್ರೀತಿ.ಅವರಿಂದ ತಾವೂ ಹೊಸದಾಗಿ ಏನಾದರೂ ಕಲಿಯಬಹುದೆಂಬ ಹಂಬಲ.ಇಂತಹ ರೇಷ್ಮೆ ನೂಲಿನಂತಹ ನವಿರಾದ ಪ್ರೀತಿ ರವೀಂದ್ರನಾಥ್ ಮತ್ತು ಡಿಎನ್ಎಸ್ ಅವರನ್ನು ಹತ್ತಿರ ತಂದಿತ್ತು. ಅದಕ್ಕೆ "ಮಿಲ್ಲರ್"ಕೂಡ ಕಾರಣವಾಗಿತ್ತು.
ಮೈಸೂರಿನಿಂದ ಕೂಗಳತೆ ದೂರದಲ್ಲಿರುವ ಕಳಲವಾಡಿಗೇಟ್ ಬಳಿ ಎಡಕ್ಕೆ ತಿರುಗಿದರೆ ರವೀಂದ್ರನಾಥ್ ಅವರ "ಕಮಲ ಫಾರಂ" ಎಂಬ ಐವತ್ತಾರು ಎಕರೆ ಪ್ರದೇಶ ವ್ಯಾಪ್ತಿಯ ಈ ಕುಕ್ಕುಟ ಉದ್ಯಮ ಮತ್ತು ರೇಷ್ಮೆ ಕೃಷಿಯ ಪ್ರಯೋಗಶಾಲೆ ಸಿಗುತ್ತದೆ. ಇದಲ್ಲದೆ ವತರ್ುಲ ರಸ್ತೆಗೆ ಸನಿಹದಲ್ಲಿ ಮತ್ತೂ ಐದು ಎಕರೆ ತೋಟ ಇದೆ. ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಈ ಭೂಮಿಗಳಿಗೆ ಚಿನ್ನದ ಬೆಲೆ ಇದೆ.ಆದರೂ ರವೀಂದ್ರನಾಥ್ ಒಂದು ಕ್ಷಣವೂ ಇಂತಹ ಚಿನ್ನದ ಬೆಲೆಯ ಭೂಮಿಯನ್ನು ವ್ಯವಸಾಯ ವಲಯದಿಂದ ವಸತಿ ವಲಯಕ್ಕೆ ಬದಲಿಸುವ ಯೋಚನೆ ಮಾಡಿಲ್ಲ. ಸಾಧ್ಯವಾದಷ್ಟು ಮರಗಿಡಗಳನ್ನು ಬೆಳೆಯಬೇಕು.ಕೃಷಿ ಮಾಡಬೇಕು ಎನ್ನುವುದೇ ಅವರ ಕನಸು.
"ಭೂಮಿ ಮಾರಾಟಮಾಡಿ ಹಣ ತೆಗೆದುಕೊಂಡು ಏನ್ ಮಾಡೋದು ಸಾರ್. ಸತ್ತಾಗ ಹಣ ತೆಗೆದುಕೊಂಡು ಹೋಗೋದಕ್ಕೆ ಆಗುತ್ತಾ.ಅದಕ್ಕೆ ಇರೋವರಗೆ ಮರಗಿಡ ಬೆಳೆಸೋದು.ನಾಲ್ಕಾರು ಜನಕ್ಕೆ ಜೀವನ ಕಟ್ಟಿಕೊಳ್ಳುವಂತೆ ಮಾಡೋದು.ಪ್ರಕೃತಿ ನಡುವೆ ಬದಕೋದು.ಸತ್ತ್ ಮೆಲೆ ಮೂರಡಿ ಆರಡಿ ಜಾಗತಾನೇ ಗ್ಯಾರಂಟಿ." ಅಷ್ಟೇ ಸಾರ್ ಬದುಕು ಎಂದು ವೇದಾಂತಿಯಂತೆ ಮಾತನಾಡುತ್ತಾರೆ. ಇದಕ್ಕೆಲ್ಲ ರವೀಂದ್ರನಾಥ್ ಅವರ ವೈಯಕ್ತಿಕ ಬದುಕು ಛಿದ್ರವಾಗಿರುವುದೇ ಕಾರಣವಿರಬಹುದೆ ಎಂದೂ ಅನಿಸುತ್ತದೆ.
1957 ರಿಂದಲೇ ಕೋಳಿ ಉದ್ಯಮ ಆರಂಭಿಸಿದ ರವೀಂದ್ರನಾಥ್ ಅವರ ಫಾರಂನಲ್ಲಿ ಕೆಲಸಮಾಡಿದ ನೂರಾರು ಮಂದಿ ಇಂದು ದೊಡ್ಡ ದೊಡ್ಡ ಕಟ್ಟಡ ಗುತ್ತಿಗೆದಾರರಾಗಿದ್ದಾರೆ. ಮಾಡುವ ಕೆಲಸದಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತೆ ಇದ್ದರೆ ಜೀವನದಲ್ಲಿ ಮೇಲೆ ಬರಲು ಬಡತನ ಅಡ್ಡಿಯಾಗದು ಎಂದು ತಾನೂ ಕಂಡುಕೊಂಡ ಸತ್ಯ ಎನ್ನುವುದು ಅವರ ನಂಬಿಕೆ.
ರವೀಂದ್ರನಾಥ್ ಅವರಿಗೆ ಮೂವರು ಮಕ್ಕಳು. ಡಾ. ಎಂ.ಆರ್.ಶ್ರೀನಿವಾಸ್, ಹೃದಯತಜ್ಞ. ಈಗ ದುಬೈನಲ್ಲಿದ್ದಾರೆ. ಮತ್ತೊಬ್ಬ ಅಮರನಾಥ್. ಶ್ರೀಶ್ರೀ ರವಿಶಂಕರ್ ಅವರ ಪ್ರಭಾವಕ್ಕೆ ಒಳಗಾಗಿ ಆಧ್ಯಾತ್ಮದಲ್ಲಿ ಒಲವು ಬೆಳೆಸಿಕೊಂಡು ಲೌಕಿಕ ಜೀವನದಿಂದ ವಿಮುಖರಾಗಿದ್ದಾರೆ. ಮಗಳು ಎಂ.ಆರ್.ರಶ್ಮಿ ಬಿಎಸ್ಸಿ ವ್ಯಾಸಂಗಮಾಡಿ ಬಿಇ ಓದಿರುವ ಪತಿಯೊಂದಿಗೆ ಕುಕ್ಕುಟ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಪತ್ನಿ. ಮಗ ಅಮರನಾಥ್,ಸೊಸೆ ಮೈಸೂರಿನಲ್ಲಿದ್ದಾರೆ. ರವೀಂದ್ರನಾಥ್ ಅವರೆಲ್ಲರಿಂದ ದೂರವಾಗಿ 73 ರ ಇಳಿಗಾಲದಲ್ಲಿ  ತಮ್ಮ ಪ್ರೀತಿಯ ನಾಯಿ "ಮಿಲ್ಲರ್"ಜೊತೆಗೆ ತೋಟದಲ್ಲಿ ಪ್ರಕೃತಿಯ ನಡುವೆ ಮರಗಿಡ ಬಳ್ಳಿ, ರೇಷ್ಮೆ ಅಂತ ತಲೆಯ ತುಂಬಾ ಹಸಿರು ತುಂಬಿಕೊಂಡು ಏಕಾಂಗಿಯಾಗಿ ಮಕ್ಕಳಂತೆ ಓಡಾಡಿಕೊಂಡು ಇದ್ದಾರೆ.
ಇಷ್ಟೆಲ್ಲಾ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿವಂತರಾಗಿದ್ದರೂ ಅದ್ಯಾವುದರ ಪರಿವೆಯೆ ಇಲ್ಲದಂತೆ ಸರಳವಾಗಿ ಬದುಕುತ್ತಾ "ಅವರ ಜೀವನ ಅವರಿಗೆ ನನ್ನ ಜೀವನ ನನಗೆ" ಎನ್ನುತ್ತಾ ಈಗಲೂ ಪ್ರಯೋಗಶೀಲರಾಗಿದ್ದಾರೆ.
ಇಂತಹ ವಿಶಿಷ್ಟ ವ್ಯಕ್ತಿತ್ವದ ರವೀಂದ್ರನಾಥ್ ಅವರನ್ನು ನಮ್ಮ ಮೇಷ್ಟ್ರು ಡಿಎನ್ಎಸ್ ಜೊತೆ ಕಮಲ ಫಾರಂನಲ್ಲಿ ಭೇಟಿಯಾದಾಗ ಅವರು ಹೇಳಿದ್ದು ಹೀಗೆ...
ಕೋಳಿಗಳ ಕಲರ್ಗೆ ಮನಸೋತೆ : " ಮೈಸೂರಿನ ನಂಜುಮಳಿಗೆ ಸಮೀಪ ಗಾಡಿಚೌಕ ಶಾಲೆಯಲ್ಲಿ ಪ್ರಾಥಮಿಕ ವಿಧ್ಯಾಭ್ಯಾಸ. ಶಾರದ ವಿಲಾಸ ಶಿಕ್ಷಣ ಸಂಸ್ಥೆ, ಯುವರಾಜು ಕಾಲೇಜಿನಲ್ಲಿ ಪದವಿ ವ್ಯಾಸಂಗ.ನಂತರ ಸೂರತ್ಕಲ್ ಎಂಜಿನಿಯರ್ ಕಾಲೇಜಿನಲ್ಲಿ ಬಿಇ ಪದವಿ. ಆ ಭಗವಂತ ನನಗೆ ನೌಕರಿ ಸಿಗುವಂತೆ ಮಾಡಲಿಲ್ಲ. ಓದು ಮುಗಿದ ನಂತರ ನೇರವಾಗಿ ಕೋಳಿ ಸಾಕಾಣಿಕೆ ಉದ್ಯಮ ಶುರುಮಾಡಿದೆ" ಅದು ಒಳ್ಳೆಯದೆ ಆಯಿತು ಎಂದರು ರವೀಂದ್ರನಾಥ್.
ಕೋಳಿ ಉದ್ಯಮವನ್ನೇ ಯಾಕೆ ಶುರುಮಾಡಿದಿರಿ ಎಂಬ ನಮ್ಮ ಮಾತಿಗೆ ಅವರು ನಕ್ಕರು. "ಬಾಲ್ಯದಲ್ಲಿ ನನಗೆ ಕೋಳಿಗಳ ಮೇಲೆ ವಿಶೇಷ ಪ್ರೀತಿ. ನಮ್ಮ ಮನೆ ಎದುರು ಅಂಜನಪ್ಪ ಅಂತ ಸಾಮಿಲ್ ಡ್ರೈವರ್ ಒಬ್ಬ ಇದ್ದ ಆತ ಕೆಂಪು,ಕಪ್ಪು,ಬಿಳಿ ಕೋಳಿಗಳನ್ನು ಸಾಕುತ್ತಿದ್ದ.ಅದನ್ನು ನೋಡಿದಾಗಲೆಲ್ಲ ನನಗೆ ನಾನೂ ಕೋಳಿ ಸಾಕಬೇಕು ಅನಿಸುತ್ತಿತ್ತು. ಕೆಲವರಿಗೆ ಪಕ್ಷಿಗಳನ್ನು ಕಂಡರೆ ಪ್ರೀತಿ, ಮತ್ತೆ ಕೆಲವರಿಗೆ ನಾಯಿ,ಬೆಕ್ಕು ಕಂಡರೆ ಪ್ರೀತಿ ಅಲ್ವಾ ಸಾರ್. ಅದಕ್ಕೆ ನಾನು ಓದು ಮುಗಿದ ನಂತರ ಮನೆಯ ಎದುರೆ 20 *30 ಜಾಗದಲ್ಲಿ ನಂಜನಗೂಡು,ಕಡಕೊಳ ಸಂತೆಯಿಂದ ನಾಟಿ ಕೋಳಿತಂದು ಸಾಕಾಣಿಕೆ ಆರಂಭಿಸಿದೆ. 1957 ರಲ್ಲಿ ನನ್ನ ಸಹೋದರನೊಬ್ಬ ಹೇಸರಘಟ್ಟಕ್ಕೆ ಹೋಗಿ ಕೋಳಿ ಸಾಕಾಣಿಕೆ ತರಬೇತಿ ಪಡೆದು ಬಂದ ಅಲ್ಲಿಂದ ಇಲ್ಲಿಯವರೆಗೆ ನಾವು ಕೋಳಿ ಉದ್ಯಮದಲ್ಲಿ ಹಿಂತಿರುಗಿ ನೋಡಲಿಲ್ಲ" ಯಶಸ್ಸು ಸಾದಿಸುತ್ತಲೇ ಹೋದೆವು ಎಂದರು.
ಇಷ್ಟೆಲ್ಲಾ ಆಸ್ತಿ ಪಿತ್ರಾಜರ್ಿತನಾ ಎಂಬ ನಮ್ಮ ನೇರ ಪ್ರಶ್ನೆಗೆ " ಇಲ್ಲಾ ಸಾರ್. ಸೊನ್ನೆಯಿಂದ ಮೇಲೆ ಬಂದವನು ನಾನು. ಅನುಭವ ಕಲಿಸಿದ ಪಾಠಗಳಿಂದ ಹಣ, ಆಸ್ತಿ ಎಲ್ಲಾ ಬಂತು. ಬಡತನ,ಹಸಿವು ಮನುಷ್ಯನಿಗೆ ಬದುಕುವುದನ್ನುಕಲಿಸುತ್ತವೆ. ನನ್ನ ಅಕ್ಕ ಒಬ್ಬರು ಅಮೇರಿಕಾದಲ್ಲಿ ನಸರ್್ ಆಗಿದ್ದರು. ಅವರ ಹೆಸರು ಕಮಲ ಅಂತ.ಅವರು ಆಕಸ್ಮಿಕವಾಗಿ ಸಾವನ್ನಪ್ಪಿದರು.ಅವರ ಹೆಸರಿಗೆ ಸ್ವಲ್ಪ ಹಣ ಬಂತು. ಆ ಹಣದಿಂದ ಈ ಆಸ್ತಿ ಖರೀದಿಸಿದೆ.ಅದಕ್ಕೆ ಕಮಲ ಫಾರಂ ಅಂತ ಹೆಸರಿಟ್ಟೆ. ಕೋಳಿ ಉದ್ಯಮದಿಂದ ಕೋಟ್ಯಾಂತರ ರೂಪಾಯಿ ಸಂಪಾದನೆ ಆಯ್ತು" ಎಂದು ಎಲ್ಲವನ್ನು ವಿವರಿಸಿದರು.
 ಕೋಳಿ ಸಾಕಾಣಿಕೆ ಹೀಗೆ : ಕೋಳಿ ಮರಿಗಳನ್ನು ತಂದು 18 ವಾರಗಳ ಕಾಲ ಬೇರೆ ಶೆಡ್ನಲ್ಲಿ ಸಾಕುತ್ತಾರೆ. ಅಲ್ಲೆ ಅವುಗಳಿಗೆ ಔಷಧೋಪಚಾರ ಎಲ್ಲ ಮುಗಿದಿರುತ್ತದೆ. ನಂತರ ಅವುಗಳನ್ನು ಬೇರೊಂದು ಶೆಡ್ಗೆ ತಂದು ಬಿಡುತ್ತಾರೆ. ಅಲ್ಲಿಂದ ಯಾವ ಔಷಧವನ್ನು ಕೊಡುವುದಿಲ್ಲ.ಆಹಾರ ಮತ್ತು ನೀರು ಮಾತ್ರ ಕೊಡಲಾಗುತ್ತದೆ. 72 ವಾರಗಳ ಕಾಲ ಅವು ಮೊಟ್ಟೆ ಕೊಡುತ್ತವೆ.ನಂತರ ಕೋಳಿಗಳನ್ನು ಮಾಂಸಕ್ಕಾಗಿ ಮಾರಾಟಮಾಡಿಬಿರುತ್ತಾರೆ.
ದಶಕದ ಹಿಂದೆ ಪ್ರತಿದಿನ ಒಂದೂವರೆ ಲಕ್ಷ ಕೋಳಿಮೊಟ್ಟೆ ಮಾರಾಟ ಮಾಡುತ್ತಿದ್ದ ರವೀಂದ್ರನಾಥ್ ಈಗ ದಿನಕ್ಕೆ ಮೂವತ್ತು ಸಾವಿರ ಕೋಳಿಮೊಟ್ಟೆ ಮಾರಾಟ ಮಾಡುತ್ತಾರೆ. ಕೋಳಿ ಶೆಡ್ಗಳನ್ನು ವೈಜ್ಞಾನಿಕವಾಗಿ ನಿಮರ್ಾಣಮಾಡಲಾಗಿದ್ದು ಹೆಚ್ಚು ವಾಸನೆ ಬರುವುದಿಲ್ಲ. ಶೇಕಡ 95 ರಷ್ಟು ಫಲಿತಾಂಶ ಇದೆ. ಕೋಳಿಗಳಿಗೆ ಬೇಕಾದ ಗುಣಮಟ್ಟದ ಆಹಾರವನ್ನು ತೋಟದಲ್ಲೇ ತಯಾರಿಸಿಕೊಳ್ಳುತ್ತಾರೆ.
ರೇಷ್ಮಯತ್ತ ಒಲವು : ಆಕಾಶವಾಣಿಯಲ್ಲಿ ಭಿತ್ತರವಾಗುವ "ರೇಷ್ಮೆ ಸಿರಿ" ಕಾರ್ಯಕ್ರಮ ಕೇಳಿ ಪ್ರಭಾವಿತರಾಗಿ ಹತ್ತು ಎಕರೆಯಲ್ಲಿ ರೇಷ್ಮೆ ಕೃಷಿ ಮಾಡಲು ಮುಂದಾಗಿದ್ದಾರೆ.ಇದಕ್ಕಾಗಿ ತಾಂತ್ರಿಕ ನೆರವು ನೀಡಲು ರೇಷ್ಮೆ ಇಲಾಖೆಯ ನಿವೃತ್ತ ಅಧಿಕಾಯೊಬ್ಬರನ್ನು ನೇಮಕಮಾಡಿಕೊಂಡಿದ್ದಾರೆ.
ಮಧ್ಯವತರ್ಿಗಳ ಹಾವಳಿ ಇರದ, ಮಾರಾಟವಾದ ತಕ್ಷಣವೇ ಹಣ ಬ್ಯಾಂಕ್ ಖಾತೆಗೆ ವಗರ್ಾವಣೆಯಾಗುವ, ಇಪ್ಪತ್ತೇಳೆ ದಿನದಲ್ಲಿ ಗೂಡು ಕಟ್ಟಿ ಎಲ್ಲಾ ಕೆಲಸ ಮುಗಿದುಹೋಗುವ ರೇಷ್ಮೆ ನನಗೆ ತುಂಬಾ ಇಷ್ಟವಾಯಿತು.ಅದಕ್ಕಾಗಿ ರೇಷ್ಮೆ ಕೃಷಿ ಮಾಡಲು ಮುಂದಾದೆ ಎನ್ನುತ್ತಾರೆ.
"ಭಗವಂತ ಇನ್ನು ಆಯಸ್ಸು ಕೊಟ್ಟರೆ ತಮ್ಮ ಫಾರಂನಲ್ಲಿ ಆಡು,ಕುರಿ,ಹಂದಿ ಸಾಕಾಣಿಕೆ ಮಾಡಬೇಕು. ಇನ್ನೂ ಸಾವಿರಾರು ಗಿಡಗಳನ್ನು ಬೆಳೆಸಬೇಕು. ಸಮಗ್ರ ಬೇಸಾಯ ಪದ್ಧತಿಮಾಡಿ ಕೃಷಿ ಪ್ರವಾಸಿ ತಾಣವಗಿಸಬೇಕು ಎಂಬ ಆಸೆ ಇದೆ.ನೋಡಬೇಕು ಸಾರ್ ಎಂದು ಮುಗಿಲಿನತ್ತ ಮುಖಮಾಡಿ ನೋಡುತ್ತಾರೆ.
ನೀರಿಗಾಗಿ ಮೂರು ಬೋರ್ವೆಲ್ಗಳಿವೆ. ಸೋಲಾರ್ ಪಂಪ್ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಹನಿ ನೀರಾವರಿ ಮಾಡಿಕೊಂಡಿದ್ದು,ಬೋರ್ವೆಲ್ನಿಂದ ಒಂದು ದೊಡ್ಡ ನೀರು ಶೇಖರಣ ತೋಟ್ಟಿಗೆ ನೀರು ಸಂಗ್ರಹಣೆ ಮಾಡಿಕೊಂಡು ಅಲ್ಲಿಂದ ತೋಟದ ಗಿಡಗಳಿಗೆ ಬಿಡುತ್ತಾರೆ.
15 ಅಡಿ ಅಗಲ 70 ಅಡಿ ಉದ್ದ,10 ಅಡಿ ಆಳದ ನೀರು ಸಂಗ್ರಹಣತೊಟ್ಟಿಯನ್ನು ವೈಜ್ಞಾನಿಕವಾಗಿ ನಿಮರ್ಾಣ ಮಾಡಿಕೊಂಡಿದ್ದು ನೀರು ಆವಿಯಾಗದಂತೆ,ಜನಜಾನುವಾರುಗಳು ಮೇಲೆ ಓಡಾಡಿದರು ಒಳಕ್ಕೆ ಬೀಳದಂತೆ ಮಾಡಲಾಗಿದೆ. ನೀರಿನ ಬಳಕೆ, ಕೋಳಿ ಶೆಡ್ಗಳ ನಿಮರ್ಾಣ,ತೋಟದ ನಿರ್ವಹಣೆ ಎಲ್ಲದರಲ್ಲೂ ತಾಂತ್ರಕತೆಯ ಸದ್ಬಳಕೆ ಮಾಡಿಕೊಂಡಿರುವ ರವೀಂದ್ರನಾಥ್ ಕೃಷಿಯನ್ನು ಹೇಗೆ ಉದ್ಯಮದ ರೀತಿ ಬೆಳೆಸಹುದು ಎನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ. ನಿಮ್ಮ ನಂತರವೂ ಇದೆಲ್ಲಾ ಮುಂದುವರಿಯುವುದೆ ಎಂಬ ನಮ್ಮ ಮಾತಿಗೆ ನಕ್ಕು " ನನ್ನ ಸೊಸೆ ಇಲ್ಲಿಗೆ ಬಂದೆ ಬರುತ್ತಾಳೆ.ಇದನ್ನೆಲ್ಲಾ ಮುಂದುವರಿಸಿಕೊಂಡು ಹೋಗುತ್ತಾಳೆ ಎಂಬ ನಂಬಿಕೆಯೊಂದು ಮಾತ್ರ ನನ್ನಲ್ಲಿದೆ" ಎಂದು ಆಶಾಭಾವನೆ ವ್ಯಕ್ತಪಡಿಸುತ್ತಾರೆ.
ತಮ್ಮ ಇಡೀ ಆಯಸ್ಸನ್ನು ಹೀಗೆ ಭೂಮಿಯ ಒಡನಾಟದಲ್ಲಿ ಕಳೆದುಬಿಟ್ಟ ರವೀಂದ್ರನಾಥ್ ವೈಯಕ್ತಿಕ ಸುಖಸಂತೋಷಗಳ ಕಡೆಗೆ ಗಮನಕೊಡದೆ ಏಕಾಂಗಿಯಾಗಿಬಿಟ್ಟರೆ?. ಇಳಿವಯಸ್ಸಿನಲ್ಲಿ ಏಕಾಂತವಾಸ ಅನುಭವಿಸುವಂತಾಯಿತೆ?.ಎನ್ನುವ ಹತ್ತಾರು ಪ್ರಶ್ನೆಗಳ ನಡುವೆಯೂ ಅವರ ಹಸಿರು ಪ್ರೀತಿ ಮಾತ್ರ ನಮ್ಮಲ್ಲಿ ಅಚ್ಚರಿ ಮೂಡಿಸಿತು. "ಆಕಾಶದ ಕೆಳಗೆ ಯಾವುದು ಹೊಸದಲ್ಲ" ಎಂಬ ಗಾದೆ ನೆನಪಾಯಿತು. ಅವರ ಕನಸುಗಳೆಲ್ಲಾ ಸಾಕಾರವಾಗಲಿ ಎಂದು ಹೇಳಿ  ನಿರ್ಗಮಿಸಿದೆವು. ಹೆಚ್ಚಿನ ಮಾಹಿತಿಗೆ ರವೀಂದ್ರನಾಥ್ 9741168414 ಸಂಪಕರ್ಿಸಿ 






ಭಾನುವಾರ, ಜುಲೈ 23, 2017

ಹಳ್ಳಿಗಳಿಗೆ ಜೀವ ತುಂಬುವ ಪ್ರಯೋಗಶೀಲ ರೈತ
# "ಫಲಶ್ರೇಷ್ಠ" ಪ್ರಶಸ್ತಿ ಪುರಸ್ಕೃತ ಚೌಡಳ್ಳಿಯ ಸದಾಶಿವಮೂರ್ತಿ                  # ತರಕಾರಿ ಬೆಳೆಯುವುದರಲ್ಲಿ ಎಂದಿಗೂ ಮುಂದು
===============================================
"ಮರಳಿ ಹಳ್ಳಿಗೆ" ಎನ್ನುವುದು ರೈತಸಂಘದ ಗೆಳಯರ ಹೊಸ ಘೋಷಣೆ. ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ಯುವಕರು ಆಧುನಿಕ ಸೌಲಭ್ಯ ಮತ್ತು ಸವಲತ್ತುಗಳಿಗೆ ಆಸೆಪಟ್ಟು ಹಳ್ಳಿಬಿಟ್ಟು ನಗರದತ್ತ ವಲಸೆ ಹೋಗುತ್ತಿದ್ದಾರೆ ಎನ್ನುವುದು ಹಳೆಯ ಮಾತು. ಮೊದಮೊದಲು ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಎಂದು ಹಳ್ಳಿಗಳನ್ನು ಬಿಟ್ಟು ನಗರಕ್ಕೆ ವಲಸೆ ಹೋಗುವ ಮಂದಿ ನಂತರ ತಮ್ಮ ಮಕ್ಕಳ ವಿಧ್ಯಾಭ್ಯಾಸ ಮುಗಿದು ಅವರು ನೌಕರಿ ಸೇರಿದ ಮೇಲೆ ಅವರೊಂದಿಗೆ ನಗರವಾಸಿಗಳಾಗಿಬಿಡುವುದು ಸರ್ವೇ ಸಾಮಾನ್ಯವಾದ ಸಂಗತಿ.
ಪ್ರಗತಿಪರ ಕೃಷಿಕರನ್ನು ಹುಡುಕಿಕೊಂಡು ಅಲೆಯುವ ನನಗೆ ಇತ್ತೀಚಿಗೆ ಒಂದೇ ಗ್ರಾಮದಲ್ಲಿ ಹತ್ತಾರು ದೊಡ್ಡ ದೊಡ್ಡ ಮನೆಗಳಿಗೆ ಬೀಗ ಬಿದ್ದಿರುವುದನ್ನು ಕಂಡು ಆಶ್ಚರ್ಯವಾಯಿತು. ನೂರಾರು ಎಕರೆ ಜಮೀನುಗಳನ್ನು,ತೋಟಗಳನ್ನು ಪಾಳುಬಿಟ್ಟು,ಸುಸಜ್ಜಿತ ಮನೆಗಳಿಗೂ ಬೀಗಜಡಿದು ಹಳ್ಳಿಗಳನ್ನು ತೊರೆದು ನಗರವಾಸಿಗಳಾದವರು ತಮ್ಮ ಮೂಲಬೇರುಗಳನ್ನೇ ಕಳೆದುಕೊಂಡು ತಮ್ಮ ಹಳೆಯ ನೆನಪುಗಳಿಗೆ ವಿದಾಯ ಹೇಳುತ್ತಿರುವಂತೆ ಭಾಸವಾಯಿತು. ಎರಡು ತಲೆಮಾರುಗಳು ಆಗುವಷ್ಟರಲ್ಲಿ ಹಳ್ಳಿಯ ನೆನಪುಗಳಿಂದಲೇ ದೂರವಾಗಿಬಿಡುವ ಮುಂದಿನ ಪೀಳಿಗೆಯ ದುರಂತ ಬದುಕು ಕಣ್ಣಮುಂದೆ ಮೆರವಣಿಗೆ ಹೊರಟಿತು.
ಒಂದು ಅಂದಾಜಿನ ಪ್ರಕಾರ ದೇಶದಲ್ಲಿ ಪ್ರತಿದಿನ ಸುಮಾರು ಎರಡು ಸಾವಿರ ಜನ ಹಳ್ಳಿಯಿಂದ ನಗರಗಳ ಕಡೆಗೆ ಕೆಲಸ ಹುಡುಕಿಕೊಂಡು ವಲಸೆ ಹೋಗುತ್ತಿದ್ದಾರೆ ಎಂದು ಸಮೀಕ್ಷೆಯೊಂದು ಹೇಳುತ್ತದೆ. ಸುಸ್ಥಿರ ಕೃಷಿಯ ಬಗ್ಗೆ ಮಾತನಾಡುವುದಕ್ಕಿಂತ ಈಗ ನಮಗೆ ಸಧ್ಯ ಕೃಷಿಯನ್ನು ಉಳಿಸಿಕೊಳ್ಳುವುದೆ ದೊಡ್ಡ ಸವಾಲಾಗಿದೆ. ಹಳ್ಳಿಗಳಲ್ಲಿ ದುಡಿಯುವ ಕೈಗಳು ಕಡಿಮೆಯಾಗುತ್ತಿವೆ. ಕೃಷಿಯನ್ನು ಲಾಭದಾಯಕ,ಗೌರವ ತರುವ ಉದ್ಯೋಗ ಮಾಡುವ ನಿಟ್ಟಿನಲ್ಲಿ ಎಲ್ಲರೂ ಆಲೋಚಿಸಬೇಕಾಗಿದೆ.
ಗುಂಡ್ಲುಪೇಟೆ ತಾಲೂಕಿನ ಹಂಗಳ ಹೋಬಳಿಯ ಚೌಡಳ್ಳಿ 1500 ಜನಸಂಖ್ಯೆ ಇರುವ ಊರು. ಗ್ರಾಮದ ಹತ್ತಕ್ಕೂ ಹೆಚ್ಚು ಮನೆಗಳಿಗೆ ಬೀಗ ಜಡಿಯಲಾಗಿದೆ. ನೂರಾರು ಎಕರೆ ಜಮೀನು ಪಾಳು ಬಿದ್ದಿದ್ದೆ. ಹೀಗೆ ಶಿಕ್ಷಣ ಕೂಡ ನಿರ್ದಯವಾಗಿ ಹಳ್ಳಿಗಳ ನಾಶಕ್ಕೆ ಕಾರಣವಾಗುತ್ತಿರುವುದು ಆಧುನಿಕತೆಯ ವಿಕಾರಕ್ಕೆ ಹಿಡಿದ ಕನ್ನಡಿಯಂತೆ ಕಾಣುತ್ತಿದೆ.
ಒಂದು ಕಡೆ ಕೂಲಿ ಅರಸಿ ನಗರದತ್ತ ವಲಸೆ ಹೋಗುವುದನ್ನು ಕಂಡರೆ ಇಂತಹ ಕಡೆ ಕೃಷಿ ಕೆಲಸಗಳಿದ್ದರೂ ಅದನ್ನು ಬಿಟ್ಟು ಆರಾಮದಾಯಕ ಬದುಕನ್ನು ಅರಸಿ ನಗರ ಸೇರುತ್ತಿರುವುದನ್ನು ಕಾಣುತ್ತೇವೆ. ಹಳ್ಳಿಯ ಜನರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು. ಉಣ್ಣುವ ಆಹಾರಕ್ಕೂ ಆರೋಗ್ಯಕ್ಕೂ ಸಂಬಂಧವಿರುವ ಬಗ್ಗೆ ತಿಳಿಸಿಕೊಡಬೇಕು.ಅನ್ನದ ಬಟ್ಟಲು ವಿಷವಾಗುತ್ತಿರುವ ಬಗ್ಗೆ ತಿಳಿಸಿ ಕೃಷಿಯನ್ನು ಉಳಿಸುವ ಜೊತೆಗೆ ವಿಷಮುಕ್ತಗೊಳಿಸಬೇಕಾದ ಅನಿವಾರ್ಯತೆ ನಿಮರ್ಾಣವಾಗಿದೆ.
ಬಾಗಲಕೋಟ ಮತ್ತು ಮೈಸೂರು ತೋಟಗಾರಿಕಾ ವಿಶ್ವ ವಿದ್ಯಾನಿಲಯದಿಂದ "ಫಲಶ್ರೇಷ್ಠ" ಪ್ರಶಸ್ತಿ ಪಡೆದ ಚೌಡಳ್ಳಿ ಗ್ರಾಮದ ಸಿ.ಎಂ. ಸದಾಶಿವಮೂರ್ತಿ  "ತಮಗೆ ಇಬ್ಬರು ಮಕ್ಕಳು.ಒಬ್ಬ ಸಂದೀಪ್. ಬಿಇ ವ್ಯಾಸಂಗಮಾಡಿ ನಗರದಲ್ಲಿ ನೌಕರಿ ಮಾಡುತ್ತಿದ್ದಾನೆ. ಮತ್ತೊಬ್ಬ ಶ್ರೇಯಸ್.ಐಟಿಐ ವ್ಯಾಸಂಗ ಮಾಡಿ ವ್ಯವಸಾಯ ಮಾಡುತ್ತಿದ್ದಾನೆ" ಎಂದರು.
ನನಗೆ ಮೊದಲು ಆಶ್ಚರ್ಯವಾಯಿತು.ಮಗನನ್ನು ಐಟಿಐ ಓದಿಸಿ ಯಾಕೆ ಕೃಷಿ ಚಟುವಟಿಕೆಗೆ ತೊಡಗಿಸಿದ್ದೀರಿ? ಎಂದೆ. ಅದಕ್ಕೆ ಅವರು ಹೇಳಿದ ಮಾತು "ನೋಡಿ,ಬೇಸಾಯಮಾಡಿ ಹಳ್ಳಿಯಲ್ಲಿ ಒಳ್ಳೆಯ ಮನೆ ಕಟ್ಟಿದ್ದೇವೆ.ತೋಟ ಮಾಡಿದ್ದೇವೆ.ಕೃಷಿಯಿಂದ ಯಾವತ್ತೂ ನಮಗೆ ನಷ್ಟವಾಗಿಲ್ಲ.ಇಬ್ಬರು ಮಕ್ಕಳು ನಗರಕ್ಕೆ ಹೋಗಿ ಬಿಟ್ಟರೆ ಹಳ್ಳಿಯಲ್ಲಿ ವಯಸ್ಸಾದ ಗಂಡಹೆಂಡತಿಯರಿಬ್ಬರೇ ಇರಬೇಕಾಗುತ್ತದೆ. ಮುಂದೆ ನಮ್ಮ ಮನೆಗೂ ಬೀಗ ಬೀಳುವುದು ಗ್ಯಾರಂಟಿ.ತೋಟಗಳು ಪಾಳು ಬೀಳುವುದು ನಿಶ್ಚಿತ.ಆಗಾಗಬಾರದು ಅಂತ ಒಬ್ಬ ಮಗನನ್ನು ನೌಕರಿಗೆ ಕಳುಹಿಸಿ, ಮತ್ತೊಬ್ಬನನ್ನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ" ಎಂದರು.
ಅಲ್ಲದೆ ರಾಸಾಯನಿಕ ಕೃಷಿಯ ದುಷ್ಪಾರಿಣಾಮಗಳ ಅರಿವಾಗಿದ್ದು ಸಾವಯವ ಕೃಷಿ ಮಾಡಲು ಒಂದಷ್ಟು ಗೆಳೆಯರು ಮುಂದಾಗಿದ್ದೇವೆ.ಇದಕ್ಕಾಗಿ ತಾಲೂಕಿನಲ್ಲಿ ಸಮಾನಾಸಕ್ತರ ಕೃಷಿಕರ ಬಳಗದ ಜೊತೆಯಲ್ಲಿ ಗುರುತಿಸಿಕೊಂಡಿದ್ದೇವೆ ಹೇಳಿದರು.
ಗ್ರಾಮದ ಮತ್ತೊಬ್ಬ ಜಲಸಾಕ್ಷರತೆಯ ರೂವಾರಿ,ಪ್ರಗತಿಪರ ರೈತ ಸಿ.ಎಸ್.ರಾಜೇಂದ್ರ ಅವರು ಕೂಡ ತಮ್ಮ ಒಬ್ಬ ಮಗನನ್ನು ನೌಕರಿಗೆ ಕಳುಹಿಸಿ ಮತ್ತೊಬ್ಬನಿಗೆ ಬಿಕಾಂ ಪದವಿ ಕೊಡಿಸಿ ವ್ಯವಸಾಯಕ್ಕೆ ತೊಡಗಿಸಿಕೊಂಡಿರುವುದು ನೆನಪಾಯಿತು.
ಎಸ್ಎಸ್ಎಲ್ಸಿ ಓದಿರುವ 56 ವರ್ಷದ ಸಿ.ಎಂ. ಸದಾಶಿವಮೂರ್ತಿ ಅವರ ಕೃಷಿ ಪ್ರೀತಿಯನ್ನು ಕಂಡು ಖುಶಿಯಾಯಿತು. ದಶಕದ ಹಿಂದೆ ಐದು ಎಕರೆ ಜಮೀನಿನಲ್ಲಿ ಹನಿ ನೀರಾವವರಿಯಲ್ಲಿ 492 ಟನ್ ಕಬ್ಬು ಬೆಳೆದು ಸಾಧನೆ ಮಾಡಿದ್ದ ಸದಾಶಿವ ಮೂತರ್ಿ ಅವರು ಈಗಲೂ ಈರುಳ್ಳಿ,ಅರಿಶಿನ,ಟೊಮಟೊ ಹೀಗೆ ತರಕಾರಿ ಬೆಳೆಯುವುದರಲ್ಲಿ ಮುಂದು.
ಹುಲ್ಲೆಪುರ ಕ್ರಾಸ್ನಲ್ಲಿ ರಸ್ತೆ ಬದಿಗೆ ಇರುವ ಹತ್ತೂವರೆ ಎಕರೆ ಜಮೀನು ಇವರ ಪ್ರಯೋಗಶಾಲೆ. ಅದರಲ್ಲಿ ಒಂದೂವರೆ ಎಕರೆಯಲ್ಲಿ ತೆಂಗಿನ ತೋಟವಿದೆ. ಉಳಿದಂತೆ ಪಾಲಿಹೌಸ್,ಡೈರಿ ಫಾರಂ,ಪ್ಯಾಕ್ಹೌಸ್ ಮಾಡಿಕೊಂಡು ಬರುವ ಕಡಿಮೆ ನೀರಿನಲ್ಲೇ ಅರಿಶಿನ, ಮೆಣಸಿನಕಾಯಿ,ಈರುಳ್ಳಿ ಬೆಳೆಯುತ್ತಾ ಕೃಷಿಯನ್ನು ಲಾಭದಾಯಕ ಕಸುಬನ್ನಾಗಿ ಮಾಡಿಕೊಂಡಿದ್ದಾರೆ. ತಮ್ಮ ತೋಟದಲ್ಲಿ ಅಂತರ್ಜಲ ಕಡಿಮೆಯಾದ ಕಾರಣ ನಂಜನಗೂಡು ತಾಲೂಕಿನ ಮಡುವಿನಹಳ್ಳಿ ಸಮೀಪ ಗುತ್ತಿಗೆಗೆ ಜಮೀನು ಮಾಡಿಕೊಂಡು ವ್ಯವಸಾಯಮಾಡುತ್ತಿದ್ದಾರೆ.
ಪ್ರಯೋಗಶೀಲ ರೈತ : ಸದಾಶಿವಮೂತರ್ಿ ಅವರು ಸದಾ ಪ್ರಯೋಗಶೀಲ ರೈತ. ಈರುಳ್ಳಿ,ಅರಿಶಿನ,ಮೆಣಸಿನಕಾಯಿ ಬೆಳೆಯುವುದರಲ್ಲಿ ನೂತನ ತಾಂತ್ರಿಕತೆ ಅಳವಡಿಸಿಕೊಂಡು ಕೃಷಿ ಮಾಡುತ್ತಾರೆ. ಹನಿ ನೀರಾವರಿ ಮೂಲಕ ನೀರಿನ ಮಿತ ಬಳಕೆ.ಕಾಂಪೋಸ್ಟ್ ಗೊಬ್ಬರದ ಪರಿಣಾಮಕಾರಿ ಬಳಕೆ ಇವರ ಕೃಷಿಯ ಯಶಸ್ಸಿನ ಗುಟ್ಟು. ಸಮಗ್ರ ಪದ್ಧತಿಯಲ್ಲಿ ಮಿಶ್ರ ಬೆಳೆ ಬೇಸಾಯ ಮಾಡುವ ಇವರು ಕೃಷಿಯಿಂದ ಎಂದೂ ನಷ್ಟ ಅನುಭವಿಸಿಲ್ಲ.
ಕಾಲಕ್ಕೆ ಸರಿಯಾಗಿ ಮಳೆಯೊಂದು ನಡೆಸಿಕೊಟ್ಟುಬಿಟ್ಟರೆ ಕೃಷಿಯಲ್ಲೇ ಹೆಚ್ಚು ಆದಾಯಗಳಿಸಿ ಆರಾಮವಾಗಿರಬಹುದು ಎನ್ನುವುದು ಇವರು ಅನುಭವದಿಂದ ಕಂಡುಕೊಂಡಿರುವ ಸತ್ಯ.
ಪಾಲಿಹೌಸ್ ಬೇಕಿಲ್ಲ : "ಈ ಭಾಗದಲ್ಲಿ ಕೃಷಿ ಮಾಡಲು ಪಾಲಿಹೌಸ್ ನಿಮರ್ಾಣ ಬೇಕಿಲ್ಲ. ಈಗಾಗಲೇ ಒಂದು ಎಕರೆ ಪ್ರದೇಶದಲ್ಲಿ ತಾವು ಪಾಲಿಹೌಸ್ ನಿಮರ್ಾಣಮಾಡಿ ಮೂರುವರ್ಷಗಳಿಂದ ದಪ್ಪ ಮೆಣಸಿನಕಾಯಿ ಬೆಳೆಯುತ್ತಿದ್ದೇನೆ. ಹೆಚ್ಚೆಂದರೆ ಇನ್ನೊಂದೆರಡು ವರ್ಷ ಇಲ್ಲಿ ಕೃಷಿ ಮಾಡಬಹುದು.ನಂತರ ಮಣ್ಣಿನ ಗುಣಮಟ್ಟ ಹಾಳಾಗಿ ಏನೇ ಹಾಕಿದರು ಬೇರುಕೊಳೆ ರೋಗವನ್ನು ತಡೆಯುವುದು ಕಷ್ಟ. ಈಗಲೇ ಮೆಣಸಿಗೆ ಬೇರುಕೊಳೆರೋಗ, ಎಲೆಚುಕ್ಕಿರೋಗ ಎಲ್ಲವೂ ಕಾಣಿಸಿಕೊಂಡಿದ್ದು ಕ್ರಿಮಿನಾಶಕ ಸಿಂಪರಣೆ ಮಾಡದಿದ್ದರೆ ಬೆಳೆ ತೆಗೆಯುವುದೇ ಕಷ್ಟ' ಎನ್ನುತ್ತಾರೆ.
ಪಾಲಿಹೌಸ್ ನಿಮರ್ಾಣಕ್ಕೆ ಸರಕಾರದ ಸಬ್ಸಿಡಿ ಹೋಗಿ ಸ್ವತಃ ಕೈಯಿಂದ ಹದಿನೈದು ಲಕ್ಷ ರೂಪಾಯಿ ವೆಚ್ಚಮಾಡಿದ್ದೇನೆ. ಮೂರು ವರ್ಷದಲ್ಲಿ ಹತ್ತು ಲಕ್ಷ ರೂಪಾಯಿ ಮಾತ್ರ ವಾಪಸ್ ಬಂದಿದೆ. ಇಷ್ಟೊಂದು ಹಣ ವೆಚ್ಚಮಾಡಿ ಮಧ್ಯಮವರ್ಗದ ರೈತರು ತರಕಾರಿ ಬೆಳೆಯುವುದು ಲಾಭದಾಯಕ ಅಲ್ಲ.
ಪಾಲಿಹೌಸ್ ನಿಮರ್ಾಣ ಮಾಡುವುದರಿಂದ ಗಿಡಗಳಿಗೆ ರೋಗಬಾಧೆ ಕಡಿಮೆ, ಮಾನವ ಶ್ರಮವೂ ಕಡಿಮೆ, ಹೆಚ್ಚು ರಾಸಾಯನಿಕ ಮತ್ತು ಕ್ರಿಮಿನಾಶಕ ಬಳಕೆ ಬೇಕಾಗಿಲ್ಲ ಎಂದು ನಾವು ತಿಳಿದುಕೊಂಡಿದ್ದೆವು.ಆದರೆ ಅದೆಲ್ಲ ಸುಳ್ಳು. ಮಾಮೂಲಿ ಕೃಷಿಗಿಂತ ಹೆಚ್ಚಿನ ಶ್ರಮ ಇಲ್ಲಿ ಬೇಕಾಗುತ್ತದೆ.ಆದ್ದರಿಂದ ಪಾಲಿಹೌಸ್ ನಿಮಾರ್ಣ ಮಾಡುವವರು ನಾಲ್ಕಾರು ಕಡೆ ವಿಚಾರಿಸಿ ನಂತರ ಮುಂದುವರಿಯುವುದು ಒಳ್ಳೆಯದು ಎಂದು ಸಲಹೆ ನೀಡುತ್ತಾರೆ.
ಬೀಗಬಿದ್ದ ಮನೆಗಳು ಬಣಬಣ : ಚೌಡಳ್ಳಿ ಗ್ರಾಮಕ್ಕೆ ಭೇಟಿ ನೀಡಿದರೆ ದೊಡ್ಡ ದೊಡ್ಡ ಮನೆಗಳಿಗೆ ಬೀಗ ಬಿದ್ದಿರುವುದನ್ನು ಕಾಣಬಹುದು. ಇವರೆಲ್ಲರೂ ಮಕ್ಕಳಿಗೆ ಒಳ್ಳೆಯ ವಿಧ್ಯಾಭ್ಯಾಸ ಕೊಡಿಸಿ ನಂತರ ಅವರೆಲ್ಲ ನೌಕರಿ ಸೇರಿದ ಮೇಲೆ ಹಳ್ಳಿಬಿಟ್ಟು ಅವರೊಂದಿಗೆ ನಗರವಾಸಿಗಳಾದವರು.
"ಅಕಾಲಿಕ ಮಳೆ,ಕುಸಿದ ಅಂತರ್ಜಲವೂ ಕೂಡ ಇವರೆಲ್ಲ ಹಳ್ಳಿ ತೊರೆಯಲು ಕಾರಣವಾಗಿದ್ದರೂ, ಜಿಲ್ಲಾಡಳಿತ ಇಂತಹ ಕಡೆ ಕೃಷಿಯ ಬಗ್ಗೆ ಜನರಲ್ಲಿ ಪ್ರೀತಿ ಬೆಳೆಸುವ ಮೂಲಕ ಆದಾಯ ತರಬಲ್ಲ ಉದ್ಯೋಗವಾಗಿ ಮಾಡದಿದ್ದರೆ ಮುಂದೊಂದು ದಿನ ಹಳ್ಳಿಗಳು ಬಣಗುಡುವ ಖಾಲಿ ಊರುಗಳಾದರೂ ಆಶ್ಚರ್ಯವಿಲ್ಲ" ಎನ್ನುತ್ತಾರೆ ಸದಾಶಿವಮೂರ್ತಿ
ಕೆರೆಗಳಿಗೆ ನೀರು ತುಂಬಿಸುವ ಮೂಲಕ ಅಂತರ್ಜಲವನ್ನು ಹೆಚ್ಚಿಸಿ ಹಳ್ಳಿಗಳನ್ನು ಜೀವಂತವಾಗಿಡುವ ಕೆಲಸ ಆಗಬೇಕು. ಸಿ.ಎಂ.ಗವಿಯಪ್ಪ,ಶಿವಕುಮಾರಸ್ವಾಮಿ,ರಾಜಶೇಖರಮೂರ್ತಿ,ಪರಶಿವಮೂರ್ತಿ,ಸಿ.ಎಂ.ನಾಗರಾಜು,ವಕೀಲ ನಾಗಮಲ್ಲಪ್ಪ ಹೀಗೆ ಇಪ್ಪತ್ತಕ್ಕೂ ಹೆಚ್ಚು ಮಂದಿ ಗ್ರಾಮವನ್ನು ತೊರೆದು ನಗರವಾಸಿಗಳಾಗಿದ್ದಾರೆ.ಇವರು ತಮ್ಮ ಜಮೀನುಗಳನ್ನು ಪಾಳುಬಿಟ್ಟು ಹೋಗಿರುವುದರಿಂದ ಕೃಷಿಗೂ ದೊಡ್ಡ ಒಡೆತ ಬಿದ್ದಂತಾಗಿದೆ.
"ಇದೇ ಕಾರಣಕ್ಕಾಗಿ ತಮ್ಮ ಮಕ್ಕಳಲ್ಲಿ ಒಬ್ಬನನ್ನು ಕೃಷಿಯನ್ನೇ ಪ್ರಧಾನ ಉದ್ಯೋಗಮಾಡಲು ಹಳ್ಳಿಯಲ್ಲೇ ಉಳಿಸಿಕೊಂಡಿದ್ದೇನೆ. ಕೃಷಿ ಕುಟುಂಬದ ಆರೋಗ್ಯ ಕಾಯುವ ಗೌರವಪೂರ್ವಕವಾದ ಉದ್ಯೋಗ,ಆದಾಯ ತರುವ ಕಸುಬು ಎಂದು ನಮ್ಮ ಮಕ್ಕಳಿಗೆ ಕಲಿಸಕೊಡಬೇಕಿದೆ" ಎನ್ನುತ್ತಾರೆ ಸದಾಶಿವಮೂರ್ತಿ.
ಮೈಸೂರು ತೋಟಗಾರಿಕೆ ವಿಶ್ವವಿದ್ಯಾನಿಲಯದ ಪ್ರಧ್ಯಾಪಕ ಬಿ.ಎಸ್.ಹರೀಶ್ ಅವರ ಸಲಹೆ ಮತ್ತು ಮಾರ್ಗದರ್ಶನ ಪಡೆದು ಕೃಷಿಮಾಡುವ ಸದಾಶಿವಮೂತರ್ಿ ಸಧ್ಯ ಟ್ರೇನಲ್ಲಿ ಅರಿಶಿನ ಸಸಿಗಳನ್ನು ಬೆಳೆಸಿಕೊಂಡು ಅರಿಶಿನನಾಟಿ ಮಾಡಿದ್ದಾರೆ.ಇದರಿಂದ ಗಿಡಗಳು ಉತ್ತಮವಾಗಿ ಬೆಳೆದು ಇಳುವರಿಯೂ ಹೆಚ್ಚಾಗುತ್ತದೆ ಎನ್ನುತ್ತಾರೆ.
ಸಹಕಾರವಿದ್ದರೆ ಸುಲಭ : ಕೃಷಿಯಲ್ಲಿ ಪರಸ್ಪರ ಸಹಕಾರ, ನೆರವು ಇದ್ದರೆ ಮುಂದುವರಿಯುವುದು ಸುಲಭ. ಸಣ್ಣಪುಟ್ಟ ಕೆಲಸಗಳಲ್ಲಿ ನೆರವಾಗುತ್ತಾ ಕೃಷಿ ಕೆಲಸಗಳನ್ನು ಸುಲಭಮಾಡಿಕೊಂಡರೆ ರೈತರಿಗೆ ಅನುಕೂಲ. ಗ್ರಾಮದ ರಾಜೇಂದ್ರ, ತಮ್ಮಡಹಳ್ಳಿಯ ಕುಮಾರ್ ಮತ್ತು ಸದಾಶಿವಮೂರ್ತಿ ಮೂವರು ಸೇರಿ ಕೃಷಿ ಚಟುವಟಿಕೆಗಳಲ್ಲಿ ಪರಸ್ಪರ ನೆರವಾಗುತ್ತಾರೆ.
ಗಿಡತರುವುದು, ಟ್ರ್ಯಾಕ್ಟರ್ ಉಳುಮೆ ಅಥವಾ ಬೋರ್ವೆಲ್ ಮೋಟಾರ್ ಕೆಟ್ಟರೆ ಅದನ್ನು ಎಳೆಸಿ ರಿಪೇರಿ ಮಾಡುವುದು ಇಂತಹ ಕೆಲಸಗಳಲ್ಲಿ ಸಹಾಯಕ್ಕೆ ಒಬ್ಬರಲ್ಲ ಒಬ್ಬರು ಒದಗಿ ಬರುತ್ತಾರೆ. ಇದರಿಂದ ಇವರಿಗೆ ಕೃಷಿ ಎಂದಿಗೂ ತಲೆನೋವಿನ ಕೆಲಸವಾಗಿಲ್ಲ.
ಹೀಗೆ ರೈತರು ಗ್ರಾಮಗಳಲ್ಲಿ ಪರಸ್ಪರ ಸಹಕಾರ ತತ್ವದಡಿ ಕೃಷಿ ಮಾಡಿದರೆ ಮಾತ್ರ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೃಷಿಯನ್ನು ಲಾಭದಾಯಕ ಉದ್ಯೋಗವಾಗಿ ಮಾಡಬಹುದು ಎನ್ನುತ್ತಾರೆ ಸಿ.ಎಂ. ಸದಾಶಿವಮೂರ್ತಿ. ಹೆಚ್ಚಿನ ಮಾಹಿತಿಗೆ 9741525617 ಸಂಪರ್ಕಿಸಿ