vaddagere.bloogspot.com

ಭಾನುವಾರ, ಆಗಸ್ಟ್ 6, 2017

ಕೃಷಿಲೋಕದಲ್ಲೊಂದು ಅಪೂರ್ವ ಕ್ರಾಂತಿ ! 
ಇದು ನೈಸಗ ಕೃಷಿಕರ ಕೈಪಿಡಿ

# ಕೃಷಿ ಸಾಹಿತ್ಯದಲ್ಲಿ ಸಂಚಲನ ಮೂಡಿಸಿದ ಪುಸ್ತಕ  # ನಿಸರ್ಗದೊಂದಿಗೆ ಅನುಸಂಧಾನ


ಸುಭಾಷ್ ಪಾಳೇಕರ್ ಸರಳರಲ್ಲಿ ಸರಳ.ಹಾಗೆಯೇ ಅವರ ನೈಸರ್ಗಿಕ ಕೃಷಿಯೂ ಕೂಡ.ಭೂಮಿಗೆ ವ್ಯವಸಾಯಕ್ಕೆ ಯಾವುದೆಲ್ಲ ಬೇಡ ಅನ್ನುವುದರ ಕುರಿತು ಅವರಲ್ಲಿ ಅಪಾರವಾದ ತಿಳಿವಳಿಕೆ ಇದೆ.ಹಾಗೆಯೇ ಭೂಮಿಗೆ ಏನು ಬೇಕು ಅನ್ನುವುದರ ಕುರಿತಾಗಿಯೂ ಕೂಡ.ಇದುವೇ ಪಾಳೇಕರರ ಕೃಷಿಯ ಬೆರಗು ಮತ್ತು ಬೆಡಗು.ಸಗಣಿ ಬಳಸಿ ಬೇಸಾಯ ಮಾಡುವ ಸಂಸ್ಕೃತಿ ಶುರುವಾಗಿ 3.5 ಸಾವಿರ ವರ್ಷಗಳಾಗಿವೆ.ಆದರೆ ಬೇಸಾಯ ಮಾಡಲು ಇಂತಿಷ್ಟೇ ಸಗಣಿ,ಇಂತಿಷ್ಟೇ ಗಂಜಲ ಸಾಕು,ಬೇರೇನೂ ಬೇಕಾಗಿಲ್ಲ ಎಂದು ಈವರೆಗೆ ಯಾರೂ ಹೇಳಿರಲಿಲ್ಲ. ಹತ್ತು ಸಾವಿರ ವರ್ಷಗಳ ನಂತರವಾದರೂ ಸೃಷ್ಟಿ ತನ್ನ ಕಣ್ಣುತೆರೆದು ಪಾಳೇಕರರನ್ನು ಸೃಷ್ಟಿಸಿದೆ ಎನ್ನುತ್ತಾರೆ ಲೇಖಕ,ಪತ್ರಕರ್ತ ಆರ್.ಸ್ವಾಮಿ ಆನಂದ್. 
ವರನಟ ಡಾ.ರಾಜಕುಮಾರ್ ಅವರ ಬಂಗಾರದ ಮುನುಷ್ಯ ಸಿನಿಮಾ ತೆರೆಕಂಡಾಗ ಸಿನಿಮಾ ನೋಡಿ ಯಶಸ್ವಿ ರೈತರಾಗಿ ಬಂಗಾರದ ಮನುಷ್ಯರಾದವರ ಯಶೋಗಾಥೆಗಳನ್ನು ನೀವು ಕೇಳಿದ್ದೀರಿ. ನೋಡಿದ ಒಂದು ಸಿನಿಮಾ, ಕೇಳಿದ ಒಂದು ಒಳ್ಳೆಯ ಉಪನ್ಯಾಸ ಅಥವಾ ಓದಿದ ಒಂದು ಪುಸ್ತಕ ವ್ಯಕ್ತಿಯ ಮೇಲೆ ಪ್ರಭಾವ ಬೀರಿ ಮಹತ್ವದ ಬದಲಾವಣೆಗಳನ್ನೆ ತಂದಿದೆ. ಅಂತಹ ಪುಸ್ತಕವೊಂದರ ಬಗ್ಗೆ ನಿಮಗೆ ಹೇಳಬೇಕು. ಕನ್ನಡ ಕೃಷಿ ಸಾಹಿತ್ಯದಲ್ಲಿ ಹೀಗೆ ಸಂಚಲನವನ್ನು ಉಂಟುಮಾಡಿ ಆತ್ಮಹತ್ಯೆಯ ಕಡೆಗೆ ಮುಖ ಮಾಡಿದ್ದ ರೈತರನ್ನು ಜೀವಾಮೃತದ ಕಡೆಗೆ ಕರೆದುಕೊಂಡು ಹೋದ ಆ ಪುಸ್ತಕದ ಹೆಸರು "ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ". 
ಮಣ್ಣಿನ ಬಗ್ಗೆ ಕಣ್ಣುಕೊಟ್ಟ ಜೀವಾಮೃತದ ಜನಕ ಮಹಾರಾಷ್ಟ್ರದ ಸುಭಾಷ್ ಪಾಳೇಕರ್ ಅವರ ಕೃಷಿ ವಿಧಾನಗಳನ್ನು ಕನ್ನಡಿಗರಿಗೆ ಪರಿಚಯಿಸುವ ಪತ್ರಕರ್ತ ಸ್ವಾಮಿ ಆನಂದ್ ಅವರ ಈ ಪುಸ್ತಕವನ್ನು ಓದಿ ಸ್ಫೂರ್ತಿ ಪಡೆದು ನೈಸಗರ್ಿಕ ಕೃಷಿಕರಾದ ನೂರಾರು ಜನರನ್ನು ನಾನು ಭೇಟಿಯಾಗಿದ್ದೇನೆ. ಕೃಷಿಯ ಬಗ್ಗೆ ಏನೂ ಗೊತ್ತೇ ಇರದ ವಿದ್ಯಾವಂತ ಯುವಕರು ಇದೊಂದು ಪುಸ್ತಕವನ್ನು ಇಟ್ಟುಕೊಂಡು ಕೃಷಿಯಲ್ಲಿ ಯಶಸ್ಸು ಪಡೆದಿರುವುದನ್ನು ಕಂಡಿದ್ದೇನೆ. ಇದುವರೆವಿಗೂ ಹದಿನೇಳು ಮುದ್ರಣಗಳನ್ನು ಕಂಡಿರುವ "ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ" ಎಂಬ ಪುಸ್ತಕ ಲಕ್ಷಾಂತರ ರೈತ ಮಿತ್ರರಿಗೆ ಬೆಳಕಿನ ಬೇಸಾಯದ ರೀತಿ ರಿವಾಜುಗಳನ್ನು ಕಲಿಸಿಕೊಟ್ಟಿದೆ.
ಹದಿನೈದು ವರ್ಷಗಳ ಹಿಂದೆ ಅಗ್ನಿ ವಾರಪತ್ರಿಕೆಯಲ್ಲಿ "ಕೃಷಿ ಲೋಕದಲ್ಲೊಂದು ಅಪೂರ್ವ ಕ್ರಾಂತಿ" ಎಂಬ ಹೆಸರಿನಲ್ಲಿ ಸರಣಿ ಲೇಖನಗಳನ್ನು ಬರೆಯುವ ಮೂಲಕ ಕೃಷಿ ಸಾಹಿತ್ಯದಲ್ಲಿ ವಿಶಿಷ್ಟ ಮಾದರಿಯೊಂದನ್ನು ಸ್ವಾಮಿ ಆನಂದ್ ರೂಪಿಸಿದರು.ಅದರ ಮುಂದುವರಿದ ಭಾಗವಾಗಿ ಈಗ ದೇಸಿ ಕೃಷಿಯ ಬಗ್ಗೆ ಕಳೆದ ಏಳೆಂಟು ವರ್ಷಗಳಿಂದ ಅಧ್ಯಯನ ಮಾಡಿ ಡಾಕ್ಟರೇಟ್ ಪದವಿಗಾಗಿ ಹಂಪಿ ವಿಶ್ವವಿದ್ಯಾನಿಲಯಕ್ಕೆ ಮಹಾ ಪ್ರಬಂಧವನ್ನು ಸಲ್ಲಿಸಿದ್ದಾರೆ.
"ನನ್ನ ಜ್ಞಾನದಾಹವನ್ನು ಧ್ಯಾನಸ್ಥ ಸ್ಥಿತಿಗೆ ಕೊಡೊಯ್ದ ಈ ಕೃತಿ ಮುಂದಿನ ಮುದ್ರಣದ ಹೊತ್ತಿಗೆ ಸಮಗ್ರ ನೈಸರ್ಗಿಕ ಕೃಷಿಯ ಕೈಪಿಡಿಯಾಗಿ ರುಪುಗೊಳ್ಳಲಿದೆ" ಎನ್ನುವ ಸ್ವಾಮಿಆನಂದ್ ಕೃಷಿಯ ಬಗ್ಗೆ ಬರೆಯುವವರಿಗೆ ನಿಸರ್ಗ ಕೃಷಿಯ "ನಿಜ" ಗ್ರಹಿಸುವ ಶಕ್ತಿ ಇರಬೇಕು. ಈಗ ಇರುವ ನೂರಾರು ಕೃಷಿ ಪದ್ಧತಿಗಳಲ್ಲಿ "ಇದೂ ಕೂಡ" ಒಂದಲ್ಲ! ಬದಲಿಗೆ ಇದುವೇ ನಿಜವಾದ ಕೃಷಿ, ಪ್ರಧಾನ ಕೃಷಿ. ಮುಖ್ಯವಾಹಿನಿಯಲ್ಲಿ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುವಷ್ಟು ಸಾಮಥ್ರ್ಯ ಈ ಕೃಷಿಗಿದೆ ಎನ್ನುವ ಅರಿವು ಇರಬೇಕು ಎನ್ನುತ್ತಾರೆ.
ಪಾಳೇಕರರ ಕೃಷಿ ವಿಧಾನಗಳನ್ನು ಕುರಿತು ಕನ್ನಡದಲ್ಲಿ ಹಲವಾರು ಪುಸ್ತಕಗಳು ಬಂದಿವೆ. ಆದರೆ ನಮ್ಮ ಭಾಗದಲ್ಲಿ ಸ್ವಾಮಿ ಆನಂದ್ ಅವರ ಪುಸ್ತಕ ಮಾಡಿದಷ್ಟು ಪರಿಣಾಮವನ್ನು ಅವು ಮಾಡಿದಂತಿಲ್ಲ.
"ವಿಷಮುಕ್ತ ಮಣ್ಣು,ವಿಷಮುಕ್ತ ಆಹಾರ,ವಿಷಮುಕ್ತ ಪರಿಸರ,ವಿಷಮುಕ್ತ ಸಮಾಜ, ಸುಭಾಷ್ ಪಾಳೇಕರರ ಜ್ಞಾನ ಹಂಚುವ ದಾಹ.ಅವರ ಉದಾತ್ತ ಧ್ಯೇಯ,ತಿಳಿಗೊಳದಂಥ ಮನಸ್ಸು ಮತ್ತು ಅವರ ಕೃಷಿಯ ತಳಹದಿಗಿದ್ದ ವಿಜ್ಞಾನದ ಸಮರ್ಥನೆ-ಇವು ನನ್ನನ್ನು ಈ ನಿಮರ್ಿತಿಯ ಸೊಬಗು ಅರಿಯಲು ಪ್ರೇರೆಪಿಸಿದವು" ಎನ್ನುವ ಆನಂದ್ ರೈತರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಬೆಳಕಾಗಬಲ್ಲ ಪುಸ್ತಕವನ್ನು ಕೊಟ್ಟಿದ್ದಾರೆ. 2005 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಈ ಕೃತಿ,ಈವರೆಗೆ 74 ಸಾವಿರ ಪ್ರತಿಗಳು ಮಾರಾಟವಾಗಿವೆ.
ಕಳೆದ ವಾರ ಇದೆ ಅಂಕಣದಲ್ಲಿ ಬರೆದ ನಿವೃತ್ತ ಜೀವನವನ್ನು ಸಾರ್ಥಕ ಪಡಿಸಿಕೊಂಡ ನೈಸರ್ಗಿಕ ಕೃಷಿಕ ರಾಮಶೆಟ್ಟಿ ಎಂಬ ಅಂಕಣವನ್ನು ಓದಿದ ಹಲವು ಮಂದಿ ರಾಮಶೆಟ್ಟರ ತೋಟಕ್ಕೆ ಭೇಟಿ ನೀಡಿದ್ದರು.ಇಂಟರೆಸ್ಟಿಂಗ್ ಅಂದರೆ ನಿವೃತ್ತರೇ ಹೆಚ್ಚು ಭೇಟಿಯಾಗಿದ್ದರಂತೆ. ಕೃಷಿಯ ಬಗ್ಗೆ ತಿಳಿವಳಿಕೆಯೇ ಇರದ ರಾಮಶೆಟ್ಟರು ಸ್ವಾಮಿ ಆನಂದ್ ಅವರ ಈ ಪುಸ್ತಕವನ್ನು ಓದಿ ಪ್ರಭಾವಿತರಾಗಿ ಸುಭಾಷ್ ಪಾಳೇಕರ್ ಅವರ ಕೃಷಿ ತರಬೇತಿ ಶಿಬಿರದಲ್ಲಿ ಭಾಗವಹಿಸಿ ತಾವು ಕೃಷಿಕರಾದದ್ದನ್ನು ಹೇಳಿಕೊಂಡಿದ್ದರು. ಚಾಮರಾಜನಗರ ಶ್ರೀನಿಧಿ ಎಂಬ ಎಂಜಿನಿಯರ್ ಪದವಿಧರ ಇದೇ ಪುಸ್ತಕವನ್ನು ಓದಿಕೊಂಡು ನೈಸರ್ಗಿಕ ಕೃಷಿಕನಾದ ಯಶೋಗಾಥೆಯನ್ನು ಇದೆ ಅಂಕಣದಲ್ಲಿ ಬರೆದಿದ್ದೆ. ಹೀಗೆ ನನ್ನ ಕೃಷಿ ಸುತ್ತಾಟದಲ್ಲಿ ಹಲವಾರು ಮಂದಿ ಯಶಸ್ವಿ ರೈತರು ಆನಂದ್ ಅವರ "ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ" ಪುಸ್ತಕ ಓದಿ ಪ್ರಭಾವಿತರಾಗಿ ಯಶಸ್ವಿ ಕೃಷಿಕರಾಗಿರುವುದನ್ನು ಹೇಳಿಕೊಂಡಿದ್ದಾರೆ. ಬನ್ನೂರು ಕೃಷ್ಣಪ್ಪ, ಪ್ರೊ.ಸೋಮಶೇಖರಪ್ಪ, ಕಣಗಾಲು ಕೃಷ್ಣಮೂತರ್ಿ,ಕುಳ್ಳೇಗೌಡರು,ಸರಗೂರಿನ ಶಿವನಾಗಪ್ಪ,ಬೆಳವಾಡಿಯ ನವೀನ್ ಕುಮಾರ್,ಬೇಡರಪುರದ ರವಿ,ಹೊಸಕೋಟೆ ಸಿದ್ದಪ್ಪ,ತಾಂಡವಪುರದ ವಿದ್ಯಾಧರ ಹೀಗೆ ಸಂಪೂರ್ಣ ಸುಭಾಷ್ ಪಾಳೇಕರ್ ಪದ್ಧತಿಯಲ್ಲಿ ಈಗಲೂ ಕೃಷಿ ಮಾಡುತ್ತಾ ನೆಮ್ಮದಿಯ ಆರೋಗ್ಯಪೂರ್ಣ ಬದುಕು ಕಟ್ಟಿಕೊಂಡಿರುವ ರೈತರ ಪಡೆಯೆ ನಮ್ಮ ಸುತ್ತಮುತ್ತ ಇದೆ. ಪಾಳೇಕರ್ ಕೃಷಿಮಾಡಿ ಸೋತವರು ಇದ್ದಾರೆ.ಅವರ ಸೋಲಿಗೆ ಈ ವಿಧಾನವನ್ನು ಸರಿಯಾದ ಕ್ರಮದಲ್ಲಿ ಅನುಸರಣೆ ಮಾಡದೆ ಇರುವುದೆ ಆಗಿದೆ.
ಆಧುನಿಕ ಕೃಷಿ ಪದ್ಧತಿಯ ಅನಾಹುತಗಳು ಈಗ ಎಲ್ಲರಿಗೂ ಗೊತ್ತಿದೆ.ಬಹುರಾಷ್ಟೀಯ ಕಂಪನಿಗಳ ಕಪಿಮುಷ್ಠಿಯಲ್ಲಿರುವ ಆಧುನಿಕ ಕೃಷಿಯಿಂದಾಗಿ ರೈತ ಬೀಜ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದಾನೆ.ಪರಿಣಾಮ ಕ್ರಿಮಿನಾಶಕ,ರಾಸಾಯನಿಕ ಗೊಬ್ಬರ, ಬೃಹತ್ ಯಂತ್ರೋಪಕರಣ ತಯಾರುಮಾಡುವ ಉದ್ಯಮಿಗಳ ಕೈಗೊಂಬೆಯಾಗಿ ಆತ್ಮಹತ್ಯೆಯ ಹಾದಿ ಹಿಡಿದಿದ್ದಾನೆ. ಇಂತಹ ಹುನ್ನಾರಗಳಿಂದ ರೈತರನ್ನು ಬಿಡುಗಡೆಗೊಳಿಸುವಲ್ಲಿ ಈ ಕೃತಿ ದಾರಿತೋರಿಸುತ್ತದೆ.
"ಬೇಸಾಯ ಅಂದ್ರೆ ನಾಸಾಯ,ನೀಸಾಯ,ಮನೆಮಂದಿಯೆಲ್ಲ ಸಾಯ ಅಂತ ಗಾದೆ ಇದೆ. ಈ ಗಾದೇನ ಈ ನೈಸಗರ್ಿಕ ಕೃಷಿ ಸುಳ್ಳು ಮಾಡುತ್ತೆ ಅನ್ನೋ ನಂಬಿಕೆ ನನಗಿದೆ.ನಾವಿದನ್ನು ವ್ಯಾಪಕಗೊಳಿಸಿದ್ರೆ ಸಾಯುವವನು ಅಥವಾ ಆತ್ಮಹತ್ಯೆ ಮಾಡಿಕೊಳ್ಳುವವನು ರೈತ ಅಲ್ಲ.ಬದಲಿಗೆ ಇಲ್ಲಿ ರಸಗೊಬ್ಬರ ಆತ್ಮಹತ್ಯೆ ಮಾಡಿಕೊಳ್ಳುತ್ತೆ.ಕ್ರಿಮಿನಾಶಕಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ.ಸಾವಯವ ಗೊಬ್ಬರಗಳು,ಹೈಬ್ರಿಡ್ ಬೀಜಗಳು,ಸಾಲಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ" ಎನ್ನುವ ಸಾಹಿತಿ ದೇವನೂರ ಮಹಾದೇವ ಕೃತಿಗೆ ಅರ್ಥಪೂರ್ಣ ಮುನ್ನುಡಿ ಬರೆಯುವ ಮೂಲಕ ರೈತರಲ್ಲಿ ಆತ್ಮವಿಶ್ವಾಸ ಮೂಡಿಸಿದ್ದಾರೆ.
ಜಗತ್ತಿನ ಎಲ್ಲಾ ಫೆಸ್ಟಿಸೈಡ್ಸು,ಕೆಮಿಕಲ್ಸ್,ಫಟರ್ಿಲೈಜರ್ಸ್,ಸೀಡ್ಸ್ ಕಂಪನಿಗಳು ಮತ್ತು ಅವುಗಳ ಅಂಗಡಿಗಳನ್ನು ಶಾಶ್ವತವಾಗಿ ಮುಚ್ಚಿಸಿಬಿಡುತ್ತಿದ್ದ ಈ ಬಗೆಯ ಕೃಷಿ ವಿಧಾನದತ್ತ ನಮ್ಮ ಮಾಧ್ಯಮಗಳು,ಸರಕಾರಗಳು ಗಮನಹರಿಸದಿರುವುದು ಸೋಜಿಗವೂ,ದುರಂತವೂ ಆಗಿದೆ ಎನ್ನುವ ಸ್ವಾಮಿಆನಂದ್ ಈಗಲೂ ಕಾಳ ಮಿಂಚಿಲ್ಲ ರೈತ ಸಮುದಾಯ ಇಂತಹ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು ಎನ್ನುತ್ತಾರೆ.
ಭೂಮಿ ಸಿದ್ಧತೆಯಿಂದ ಆರಂಭಿಸಿ,ಬೆಳೆಗಳ ಸಂಯೋಜನೆ,ಋತುಮಾನಗಳು,ಮಳೆ ನಕ್ಷತ್ರಗಳು,ಬೀಜದ ಆಯ್ಕೆ, ಬೀಜಾಮೃತ,ಜೀವಾಮೃತ ತಯಾರಿಕೆ, ಯಾವಯಾವ ಪ್ರದೇಶದಲ್ಲಿ ಎಂತಹ ಬೆಳೆಗಳನ್ನು ಬೆಳೆಯಬೇಕು.ಯಾವ ಅಂತರದಲ್ಲಿ ಯಾವ ಗಿಡಮರಗಳನ್ನು ಹಾಕಬೇಕು ಎನ್ನುವ ವಿವರಗಳೊಂದಿಗೆ ಪಾಳೇಕರ್ ಕೃಷಿಯ ಎಲ್ಲಾ ಹಂತಗಳನ್ನು ರೇಖಾಚಿತ್ರದ ಮೂಲಕ ಪರಿಚಯಿಸಿಕೊಟ್ಟಿರುವುದು ಕೃತಿಯ ವಿಶೇಷ.
"ಕೊಡುವುದು-ಪಡೆಯುವುದು ಮತ್ತು ಪಡೆದುದನ್ನು ಪಡೆದಲ್ಲಿಗೆ ಹಿಂತಿರುಗಿಸುವುದು" ಎನ್ನುವ ಜಪಾನಿನ ನೈಸಗರ್ಿಕ ಕೃಷಿಕ ಮಸನೊಬ್ಬ ಪೊಕೊವಕ ಅವರ ಬೇಸಾಯ ತತ್ವವನ್ನೇ ವೈಜ್ಞಾನಿಕವಾಗಿ ಹೇಳುವ ಸುಭಾಷ್ ಪಾಳೇಕರ್ ಅವರ ಕೃಷಿ ಪದ್ಧತಿಯನ್ನು ಸ್ವಾಮಿ ಆನಂದ್ ಸರಳವಾಗಿ ಅರ್ಥಮಾಡಿಸಿದ್ದಾರೆ.
ಒಂದು ನಾಡ ಹಸುವಿನ ಸಗಣಿ ಗಂಜಲದಿಂದಲೇ 30 ಎಕರೆ ಪ್ರದೇಶದಲ್ಲಿ ಕೃಷಿ ಮಾಡಬಹುದು ಎನ್ನುವುದನ್ನು ಅಂಕಿಸಂಖ್ಯೆಗಳೊಂದಿಗೆ ನೈಸಗರ್ಿಕ ಕೃಷಿ ಸಾಧಕರ ತೋಟದಲ್ಲಿ ಆಗಿರುವ ಬೆಳವಣಿಗೆಗಳೊಂದಿಗೆ ನಿರೂಪಿಸುತ್ತಾ ಹೋಗುತ್ತಾರೆ. ಕೃತಿಯ ಕೊನೆಯಲ್ಲಿ ಇಂತಹ ನೈಸರ್ಗಿಕ ಕೃಷಿಕರ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಕೊಟ್ಟಿರುವುದರಿಂದ ತೋಟಗಳಿಗೆ ಭೇಟಿ ನೀಡುವ ಆಸಕ್ತರಿಗೆ ಅನುಕೂಲವಾಗಿದೆ.
ಬತ್ತ,ಕಬ್ಬು, ಬಾಳೆ,ತರಕಾರಿ,ತೋಟಗಾರಿಕೆ ಬೇಸಾಯದಲ್ಲಿ ಕೈ ಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು.ನೈಸಗರ್ಿಕ ಕೀಟನಾಶಕಗಳಾದ ಶಿಲೀಂದ್ರನಾಶಕ, ನೀಮ್ ಬಾಣ,ಅಗ್ನಿ ಅಸ್ತ್ರ, ಬ್ರಹ್ಮಾಸ್ತ್ರಗಳಂತಹ ಪರಿಣಾಮಕಾರಿ ದೇಸಿ ಔಷಧಗಳನ್ನು ಮಾಡಿಕೊಳ್ಳುವ ಬಗ್ಗೆ ವಿವರಿಸಿದ್ದಾರೆ.
ನಮ್ಮ ಬೇಸಾಯ ಕ್ರಮಗಳನ್ನು ನಿಸರ್ಗ ನಿಯಮಗಳಿಗೆ ಪೂರಕವಾಗಿ ರೂಪಿಸಿಕೊಳ್ಳಬೇಕು.ಬಂಜರು ಭೂಮಿಯಲ್ಲೂ ನಾವು ಖಚರ್ುಗಳಿಲ್ಲದೆ ಫಸಲು ತೆಗೆಯಬಹುದು. ಆದರೆ ಆ ಪರಿಸ್ಥಿತಿಗೆ,ಜಾಗಕ್ಕೆ ಒಗ್ಗುವ ಫಸಲುಗಳನ್ನು ಮಾತ್ರ ಹಾಕಬೇಕು. ಮಹಾರಾಷ್ಟ್ರ ಸರಕಾರ ಈ ಪ್ರಯೋಗಮಾಡಿ ಯಶಸ್ವಿಯಾಗಿದೆ ಎಂಬ ಪಾಳೇಕರ್ ಮಾತುಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ ನೈಸಗರ್ಿಕ ಕೃಷಿ ಸರಳ,ಸುಲಭ ಮತ್ತು ಲಾಭದಾಯಕವಾಗುತ್ತದೆ. ಇಲ್ಲದಿದ್ದರೆ ರೈತ ಮತ್ತೆ ಹಾದಿ ತಪ್ಪುವುದು ನಿಶ್ಚಿತ.
ರೈತರು ಗೊಂದಲವಾಗುವಷ್ಟು ಕೃಷಿ ಪದ್ಧತಿಗಳು ಈಗ ಜಾರಿಯಲ್ಲಿವೆ. ಪಾರಂಪರಿಕ ಕೃಷಿ,ಸಾವಯವ ಕೃಷಿ,ಸಹಜ ಕೃಷಿ, ಆಧುನಿಕ ಕೃಷಿ ಜೊತೆಗೆ ನೈಸಗರ್ಿಕ ಕೃಷಿ ಎಂಬ ಹಲವಾರು ಪದ್ಧತಿಗಳ ನಡುವೆ ನಿಂತ ರೈತ ತಾನೂ ಯಾವುದನ್ನು ಅನುಸರಿಸಬೇಕು ಎನ್ನುವ ಗೊಂದಲದ ಗೂಡಾಗಿರುವುದು ಸತ್ಯ. ಸಧ್ಯಕ್ಕೆ ರೈತರಿಗೆ ಬೇಕಾಗಿರುವುದು ಕಡಿಮೆ ವೆಚ್ಚ, ಕಡಿಮೆ ಮಾನವ ಹಸ್ತಕ್ಷೇಪ,ಕಡಿಮೆ ನೀರು ಬಳಕೆ ಹೆಚ್ಚಿನ ಇಳುವರಿ ಸಿಗುವ ಸರಳ ಸುಲಭ ಪರಿಸರ ಸ್ನೇಹಿ ವಿಧಾನ. ಹೊರಗಿನಿಂದ ಏನನ್ನೂ ಹಣಕೊಟ್ಟು ತಾರದೆ ತನ್ನಲ್ಲೇ ಸಿಗುವ ಸಂಪನ್ಮೂಲಗಳನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಕೃಷಿ ಮಾಡುವುದನ್ನು ರೈತ ಕಲಿಯಬೇಕಿದೆ.ಅಂತಹ ಚಿಂತನೆಗಳಿಗೆ ಪ್ರೇರಪಣೆ ನೀಡುವ ಈ ಕೃತಿ ಎಲ್ಲಕ್ಕಿಂತ ಸರಳ,ಸುಲಭ ವಿಧಾನಗಳನ್ನು ತಿಳಿಸಿಕೊಡುತ್ತದೆ. ಇಂತಹ ಕೃತಿಗಳಿಗೆ ಸಹಜ, ಸರಳ ಕೃಷಿಯ ಸಾಧ್ಯತೆಗಳನ್ನು ಮತ್ತಷ್ಟು ವಿಸ್ತರಿಸುವ ಶಕ್ತಿ ಇದೆ.
ನಾವು ಬೆಳೆದ ಯಾವುದೇ ಬೆಳೆ ಇರಬಹುದು ಅದು ಶೇಕಡ 98.5 ರಷ್ಟನ್ನು ವಾತಾವರಣದಿಂದಲೇ ಪಡೆಯುತ್ತದೆ.ಉಳಿದ ಶೇಕಡ 1.5 ರಷ್ಟನ್ನು ಭೂಮಿಯಿಂದ ಪಡೆಯುತ್ತದೆ. ಆ ಶೇಕಡ 1.5 ರ ವ್ಯವಸ್ಥೆಗಾಗಿ ನಮ್ಮಲ್ಲಿ ಎಷ್ಟೆಲ್ಲಾ ಮೋಸದ ಜಾಲ ಹುಟ್ಟಿಕೊಂಡಿದೆ ಎನ್ನುವ ಪಾಳೇಕರ್ ಮಣ್ಣು,ನೀರು, ಬೀಜ,ಬಿಸಿಲು ಕೊಯ್ಲಿನ ಬಗ್ಗೆ ವೈಜ್ಞಾನಿಕವಾಗಿ ತಿಳಿಸಿದ್ದಾರೆ.
ರೈತರು ಹೇಗೆ ಸ್ವಾಲಂಭಿ ಜೀವನ ನಡೆಸಬಹುದು.ಕ್ರಿಮಿನಾಶಕ,ಗೊಬ್ಬರವನ್ನು ಬಿಟ್ಟು ಒಂದು ನಾಡ ಹಸುವಿನಿಂದ ಭೂಮಿಗೆ ಬೇಕಾದ ಎಲ್ಲಾ ಪೋಷಕಾಂಶಗಳನ್ನು ತಯಾರುಮಾಡಿಕೊಳ್ಳಬಹುದು ಎನ್ನುವುದನ್ನು ಪುಸ್ತಕ ಸರಳವಾಗಿ ತಿಳಿಸಿಕೊಡುತ್ತದೆ.
ಈ ಕೃತಿ "ಪರಿಪೂರ್ಣ" ಅಂತ ಹೇಳಲಾರೆ.ನಿಜಕ್ಕೂ ಕೃಷಿ ಎನ್ನುವುದು ಜೀವನ ಕಲೆ.ಅದರ ಸಾರ್ಥಕತೆ ಅರಿವಾಗುವುದು ಇಡಿಯಾಗಿ ಅಪರ್ಿಸಿಕೊಂಡಾಗಲೆ. ಆ ಇಡಿಯಾಗಿ ಅರ್ಪಿಸಿಕೊಳ್ಳುವ ಅವಕಾಶ ಎಲ್ಲರಪಾಲಿಗೂ ಲಭಿಸಲಿ ಎನ್ನುವ ಸ್ವಾಮಿ ಆನಂದ್ ಸುಭಾಷ್ ಪಾಳೇಕರ್ ಅವರ ಕೃಷಿ ಪದ್ಧತಿಯ ಎಲ್ಲಾ ಮಗ್ಗಲುಗಳನ್ನು ರೈತರಿಗೆ ಮನದಟ್ಟಾಗುವಂತೆ ಕಟ್ಟಿಕೊಟ್ಟಿದ್ದಾರೆ. ಪುಸ್ತಕವನ್ನು ಓದಿದ ನಂತರ ನಮ್ಮೊಳಗೂ ಪಾಳೇಕರ್ ಕೃಷಿ ಆವರಿಸಿಕೊಳ್ಳುವುದಂತು ನಿಶ್ಚಿತ. ಹೆಚ್ಚಿನ ಮಾಹಿತಿಗೆ ಸ್ವಾಮಿ ಆನಂದ್ 9448472748 ಸಂಪರ್ಕಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ