ನೇಗಿಲಯೋಗಿ ನಲ್ಲೂರಿನ ಮಾದರಿ ರೈತ ರಾಮಯ್ಯ
ಇನ್ನೂರ ಎಕರೆಯಲ್ಲಿ ವಾಣಿಜ್ಯ ಬೆಳೆ ಬೆಳೆದು ಗೆದ್ದ ಮಣ್ಣಿನಮಗ
ಚಾಮರಾಜನಗರ : "ಆಗದು ಎಂದೂ ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ.ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕೆಂದೆಂದೂ' ಬಂಗಾರದ ಮನುಷ್ಯ ಸಿನಿಮಾದ ಈ ಹಾಡು ನೆನಪಾಗುತ್ತಿದೆ.ಕಲ್ಲು ಗುಡ್ಡಗಳನು ಕಡಿದು ತೋಟ ಕಟ್ಟಿರುವ ಇವರ ಶ್ರಮ,ತಾಳ್ಮೆ,ಜಾಣ್ಮೆ ನೋಡಿದರೆ ಎಂತವರಿಗೂ ಅಚ್ಚರಿಯಾಗುತ್ತದೆ.
ಎರಡು ನೂರು ಎಕರೆ ಜಮೀನು. ಬೆಳೆದು ಬಾಗಿ ನಿಂತ ವಿವಿಧ ತಳಿಯ ಬಾಳೆ, ಸಮೃದ್ಧವಾಗಿ ಬೆಳೆದು ನಿಂತ ಅರಿಶಿನ. ನಡುವೆ ಮೆಣಸಿಕಾಯಿ,ಕಲ್ಲಂಗಡಿ ಎಲ್ಲವೂ ವಾಣಿಜ್ಯ ಬೆಳೆಗಳೆ.ಜೊತೆಗೆ ಅಡಿಕೆ, ತೆಂಗು ಉಂಟು. ಇಷ್ಟಾದರೂ ಕೃಷಿಯಲ್ಲಿ ತೃಪ್ತಿ ಇಲ್ಲ. ಮತ್ತೂ ಮೂನ್ನೂರು ಎಕರೆಯಲ್ಲಿ ಬೇಸಾಯ ಮಾಡುವ ಹಂಬಲ. ಐದು ನೂರು ಎಕರೆಯಲ್ಲಿ ಕೃಷಿ ಮಾಡಬೇಕೆಂಬ ಮಹದಾಸೆ.
ಎಪ್ಪತ್ತೈದರ ಇಳಿವಯಸ್ಸಿನಲ್ಲೂ ಪಾದರಸದಂತೆ ತೋಟದ ತುಂಬಾ ತಿರುಗಾಡುತ್ತಾ, ಹತ್ತಾರು ದೂರವಾಣಿ ಕರೆಗಳಿಗೆ ಉತ್ತರಿಸುತ್ತಾ ತಮ್ಮ ಕೃಷಿ ಅನುಭವದ ಬಗ್ಗೆ ಅತ್ಯುತ್ಸಾಹದಿಂದ ಮಾತನಾಡುತ್ತಿದ್ದರು ರೈತ ಎ.ರಾಮಸ್ವಾಮಿ.
ಗಡಿ ಜಿಲ್ಲೆ ಚಾಮರಾಜನಗರ ಸಮೀಪ ವ್ಯಕ್ತಿಯೊಬ್ಬ 200 ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ಬಗ್ಗೆ ಮೊದಲು ಕೇಳಿದಾಗ ಆಶ್ಚರ್ಯವಾಗಿತ್ತು.ಅವರನ್ನು ಕಾಣಬೇಕೆಂಬ ಕುತೂಹಲವೂ ಉಂಟಾಯಿತು. ಕಳೆದ ನಾಲ್ಕು ವರ್ಷಗಳಿಂದ ಮಳೆ ಇಲ್ಲ. ಶಾಶ್ವತ ನೀರಾವರಿ ಮೂಲಗಳೂ ಇಲ್ಲ.ಆಳುಕಾಳಿನ ಸಮಸ್ಯೆ ಬೇರೆ.ಇಂತಹ ಸಂಕಷ್ಟಗಳ ನಡುವೆ ವ್ಯಕ್ತಿಯೊಬ್ಬರು ಇನ್ನೂರು ಎಕರೆಯಲ್ಲಿ ಕೃಷಿ ಮಾಡಲು ಸಾಧ್ಯವೇ?.
ಹಾಗೇ ಅಂದುಕೊಂಡು ನಾವು ಹೋಗಿ ನಿಂತದ್ದು ಚಂದಕವಾಡಿಯಿಂದ ಮುಂದೆ ಸಿಗುವ ನಲ್ಲೂರು, ಹೆಬ್ಬಸೂರು,ಮುಂಟಿಪಾಳ್ಯದಲ್ಲಿರುವ ಎ.ರಾಮಸ್ವಾಮಿ ಅವರ ಕರ್ಮಭೂಮಿಗೆ. ಬುಲೆಟ್ ರಾಮಯ್ಯ ಎಂದೇ ಚಿರಪರಿಚಿತರಾಗಿರುವ ರಾಮಸ್ವಾಮಿ ರೈತಸಂಘದ ಕಾರ್ಯಕರ್ತ.ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಹಲವಾರು ಹೋರಾಟಗಳಲ್ಲಿ ಭಾಗವಹಿಸಿರುವ ಕೃಷಿಕ. ತಮಿಳುನಾಡಿನಿಂದ ತಮ್ಮ 23 ನೇ ವಯಸ್ಸಿಗೆ ಕನರ್ಾಟಕಕ್ಕೆ ಬೇಸಾಯ ಮಾಡಲೆಂದೆ ಬರಿಗೈಲಿ ಬಂದ ರಾಮಯ್ಯ ಈಗ 95 ಎಕರೆ ಭೂಮಿಯ ಒಡೆಯ. 100 ಎಕರೆಗೂ ಹೆಚ್ಚು ಭೂಮಿಯನ್ನು ಗುತ್ತಿಗೆಗೆ ಪಡೆದು ವ್ಯವಸಾಯ ಮಾಡುತ್ತಿರುವ ಶ್ರಮಿಕ ಈ ಕೃಷಿಕ.
ಕೃಷಿ ಮೇಳಿನ ಪ್ರೀತಿ,ನೆಲದ ಮೇಲಿನ ಮಮತೆ,ದುಡಿಯಬೇಕೆಂಬ ಛಲ ಮತ್ತು ಶ್ರದ್ಧೆ ವ್ಯಕ್ತಿಯೊಬ್ಬನ್ನನ್ನು ಎಷ್ಟು ಎತ್ತರಕ್ಕೆ ನಿಲ್ಲಸಬಲ್ಲದು ಎನ್ನುವುದನ್ನು ನೋಡಬೇಕು ಎನ್ನುವವರು ರಾಮಯ್ಯನವರ ಕೃಷಿಯನ್ನೊಮ್ಮೆ ಹೋಗಿ ನೋಡಿ ಬರಬೇಕು.
ಅಂದು ಕೃಷಿಯಿಂದ ಸಾಲಗಾರನಾಗಿ ಜನರಿಂದ ನಿರ್ಲಕ್ಷ ಮತ್ತು ನಿಂದನೆಗೆ ಗುರಿಯಾಗಿದ್ದ ರಾಮಯ್ಯ ಇಂದು ಅಪರೂಪದ ಕೃಷಿಸಾಧಕ. ಅವರು ಬೆಳೆದುಬಂದ ಹಾದಿ ಹೂವಿನ ಹಾದಿಯಲ್ಲ.ಅದು ಕಲ್ಲು ಮುಳ್ಳಿನ ದಾರಿ. ಭೂಮಿಯನ್ನೆ ನಂಬಿ ಹಠವಾದಿಯಂತೆ ದುಡಿದ ಫಲ ಇಂದು ರಾಮಯ್ಯ "ಬಂಗಾರದ ಮನುಷ್ಯ" ನಂತಾಗಿದ್ದಾರೆ.
ನಲ್ಲೂರಿನಲ್ಲಿ ಕೃಷಿಯನ್ನು ಒಂದು ಉದ್ಯಮದ ರೀತಿಯಲ್ಲಿ ಬೆಳೆಸುತ್ತಿರುವ ರಾಮಯ್ಯ ಮಾದರಿರಾಮಯ್ಯನಾಗಿದ್ದಾರೆ. ಪತ್ನಿ ರಾಯತ್ತ ಅವರೊಂದಿಗೆ ನೆಮ್ಮದಿಯಾಗಿದ್ದಾರೆ.ಮಗಳು ಹಂಸವೇಣಿಯನ್ನು ಎಂ.ಕಾಂ. ಓದಿಸಿ ವಿವಾಹಮಾಡಿ ಆಕೆಗೂ ಇಪ್ಪತ್ತು ಎಕರೆ ಭೂಮಿ ಖರೀದಿಸಿಕೊಟ್ಟಿದ್ದಾರೆ. ಬೇಸಾಯ ಎಂದಿಗೂ ನಿಲ್ಲಬಾರದು ಎನ್ನುವುದು ರಾಮಯ್ಯನವರ ನಂಬಿಕೆ.ಮಗ ವೆಂಕಟೇಶ್ ಎಂ.ಎಸ್ಸಿ. ಓದಿ ಕೃಷಿಯಲ್ಲಿ ಅಪ್ಪನಿಗೆ ನೆರವು ನೀಡುತ್ತಾ ಅಪ್ಪಟ ಕೃಷಿಕನಾಗಿದ್ದಾರೆ. ಅಪ್ಪನ ಹಾದಿಯಲ್ಲೆ ಮುನ್ನಡೆದಿರುವ ಮಗ ವೆಂಕಟೇಶ್ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಮೂಲಕ ಕೃಷಿಯ ಸಾಧ್ಯತೆಗಳನ್ನು ವಿಸ್ತರಿಸಿದ್ದಾರೆ.
ಮಕ್ಕಳನ್ನು ಎಂಜಿನೀಯರೋ, ಡಾಕ್ಟರೋ ಮಾಡಿ ಯಂತ್ರನಾಗರಿಕತೆಗೆ ಧಾರೆ ಎರೆಯುವವರ ನಡುವೆ ರಾಮಯ್ಯ ವಿಭಿನ್ನವಾಗಿ ನಿಲ್ಲುತ್ತಾರೆ.ಬೆಳೆಯುತ್ತಿರುವ ದೇಶದ ಜನತೆಯ ಹಸಿವು ನೀಗಿಸಲು ಎಲ್ಲರೂ ಕೃಷಿಮಾಡಬೇಕೆಂಬ ಅವರ ಮುಗ್ಧ ಮಾತುಗಳು ಅಚ್ಚರಿ ಮೂಡುವಂತೆ ಮಾಡುತ್ತವೆ.
ತಮಿಳುನಾಡಿನಿಂದ ನಲ್ಲೂರಿಗೆ : ಚಾಮರಾಜನಗರ ತಮಿಳುನಾಡಿಗೆ ಹೊಂದಿಕೊಂಡ ಗಡಿಜಿಲ್ಲೆ. 70 ರ ದಶಕದಲ್ಲಿ ತಮಿಳುನಾಡಿನಿಂದ ಜಿಲ್ಲೆಗೆ ಬೇಸಾಯಮಾಡಲು ತಮಿಳಿಗರು ವಲಸೆಬಂದರು.ಕೆಲವರು ಇಲ್ಲೆ ನೆಲೆನಿಂತು ಇಲ್ಲಿನವರೆ ಆದರು.ಅಂತಹವರ ಪೈಕಿ ಎ.ರಾಮಸ್ವಾಮಿಯವರು ಒಬ್ಬರು. ನಮ್ಮವರಿಗೆ ಅರಿಶಿನ,ಬಾಳೆ,ಈರುಳ್ಳಿಯಂತಹ ವಾಣಿಜ್ಯ ಬೆಳೆಗಳನ್ನು ಬೆಳೆಯುವುದನ್ನು ಕಲಿಸಿಕೊಟ್ಟವರೆ ವಲಸೆ ಬಂದ ಇಂತಹ ತಮಿಳಿಗರು.
ರಾಮಯ್ಯ ಬೇಸಾಯ ಮಾಡಲು ಚಾಮರಾಜನಗರಕ್ಕೆ ಬಂದದ್ದು 1966 ರಲ್ಲಿ.ಆಗ ಅವರಿಗೆ 23 ವರ್ಷ. 15 ವರ್ಷ ಬೇಸಾಯಮಾಡಿ ನಷ್ಟವಾದಾಗ ವಾಪಸ್ ತಮಿಳುನಾಡಿಗೆ ಹೋಗಲು ತೀಮರ್ಾನಿಸಿದ್ದರು. ಆದರೆ ಅವರ ಅಣ್ಣ ಇಲ್ಲಿ ಬಂದರೆ ಬೇಸಾಯ ಮಾಡಲು ಭೂಮಿ ಸಿಗುವುದಿಲ್ಲ,ಅಲ್ಲೇ ಏನಾದರು ಮಾಡು ಎಂದರು. ಅಣ್ಣನ ಮಾತುಕೇಳಿ ಇಲ್ಲೆ ನೆಲೆನಿಂತರು ರಾಮಯ್ಯ. 80 ರ ದಶಕದಲ್ಲಿ ಅರಿಶಿನ,ಬಾಳೆ,ಕಬ್ಬಿಗೆ ಒಳ್ಳೆಯ ದರ ಸಿಕ್ಕಿತು ಇದರಿಂದ ನಮಗೆ ಲಾಭವೂ ಆಯಿತು ಎನ್ನುತ್ತಾರೆ ರಾಮಯ್ಯ.
"2012 ರವರೆಗೂ ಕೃಷಿಯಲ್ಲಿ ನಷ್ಟ ಅನುಭವಿಸಿ ತುಂಬಾ ಕಷ್ಟಪಟ್ಟೆ.ಜನರಿಂದ ಬಡ್ಡಿಗೆ ಕೈ ಸಾಲಮಾಡಿದೆ. ಬಡ್ಡಿಗೆ ದುಡ್ಡುಕೊಟ್ಟವರು ನನ್ನ ಬುಲೆಟ್ ಕಿತ್ತುಕೊಂಡು ಅವಮಾನಮಾಡಿದರು. ಕೆಲವರು ದೈಹಿಕ ಹಲ್ಲೆ ಮಾಡಿದರು.ಅವರೆಲ್ಲಾ ಈಗಲೂ ಇದ್ದಾರೆ. ರಾಮಸ್ವಾಮಿ ಬೇಸಾಯ ಮಾಡಿ ಹಾಳಾದ,ಬೀದಿಗೆ ಬಂದುಬಿಟ್ಟ, ಮುಗಿದುಹೋದ ಅಂತ ಮಾತಾಡಿಕೊಂಡರು. ಆದರೆ ನಾನು ಮಾತ್ರ ಈ ಭೂಮಿತಾಯಿಯ ನಂಬಿಬುಟ್ಟೆ.ವ್ಯವಸಾಯ ಮಾಡೋದನ್ನ ಬಿಡಲಿಲ್ಲ. 2012 ರಲ್ಲಿ 12 ಎಕರೆಗೆ ಅರಿಶಿನ ಹಾಕಿದೆ. ಎಕರೆಗೆ 45 ಕ್ವಿಂಟಾಲ್ ಅರಿಶಿನ ಬಂತು. ಕ್ವಿಂಟಾಲ್ಗೆ 17,500 ಸಾವಿರಕ್ಕೆ ಮಾರಿದೆ. ಸುಮಾರು ಒಂದು ಕೋಟಿ ರೂಪಾಯಿ ಸಿಕ್ಕಿತು.ಸಾಲ ಎಲ್ಲಾ ತೀರಿಸಿಬುಟ್ಟು,ಹೋಂಡಾ ಸಿಟಿ ಹೊಸ ಕಾರು ತೆಗೆದುಕೊಂಡೆ, ಈಗ ನೆಮ್ಮದಿಲಿ ವ್ಯವಸಾಯ ಮಾಡ್ತಾ ಇದ್ದೀವಿ" ಎಂದು ತಮಿಳ್ಗನ್ನಡ ಶೈಲಿಯಲ್ಲಿ ಹೇಳಿ ನಕ್ಕರು ರಾಮಯ್ಯ.
ಸೋಲಾರ್ ಪಂಪ್ : ಐದೂವರೆ ಲಕ್ಷ ರೂಪಾಯಿ ವೆಚ್ಚಮಾಡಿ ಆರು ಹೆಚ್ಪಿ ಸೋಲಾರ್ ಪಂಪ್ ಹಾಕಿಕೊಂಡಿರುವ ರಾಮಯ್ಯ ಸರಕಾರ ಕೊಡುವ ಅನಿಯಮಿತ ವಿದ್ಯುತ್ ಮೇಲೆ ಅವಲಂಬಿತರಾಗಿಲ್ಲ. 40 ಕ್ಕೂ ಹೆಚ್ಚು ಕೊಳವೆ ಬಾವಿ ಕೊರೆಸಿದ್ದಾರೆ. ಅದರಲ್ಲಿ ಸಧ್ಯ ಕೆಲವು ಮಾತ್ರ ಸುಸ್ಥಿತಿಯಲ್ಲಿವೆ. ಸೋಲಾರ್ ಪಂಪ್ 450 ಅಡಿಯಿಂದ ಎರಡುವರೆ ಇಂಚು ನೀರು ಮೇಲೆತುತ್ತದೆ. 15 ಎಕರೆಗೆ ಅದನ್ನು ಬಳಸಿಕೊಂಡು ಇಲ್ಲಿಂದ ಮತ್ತೆ ಎರಡು ಕಿ.ಮೀ.ದೂರಕ್ಕೆ ಪಂಪ್ ಮಾಡಿ 50 ಎಕರೆಯಲ್ಲಿ ಬಾಳೆ ಮತ್ತು ಅರಿಶಿನ ಕೃಷಿಗೂ ಇದೇ ನೀರನ್ನೇ ಬಳಸಿಕೊಳ್ಳುತ್ತಾರೆ.
ನೀರು ಸಂಗ್ರಹಕ್ಕೆ ದೊಡ್ಡ ತೊಟ್ಟಿಗಳನ್ನು ನಿಮರ್ಾಣ ಮಾಡಿಕೊಳ್ಳಲಾಗಿದೆ. ಸಣ್ಣ ಕೊಳದಲ್ಲಿ ನೀರು ಸಂಗ್ರಹಿಸಿಕೊಂಡು ಮತ್ತೆ ಅಲ್ಲಿಂದ ಬೆಳೆಗಳಿಗೆ ಹನಿ ನೀರಾವರಿ ಮೂಲಕ ನೀರು ಕೊಡಲಾಗುತ್ತದೆ. ಹನಿ ನೀರಾವರಿಗೆ ನೂತನ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಮೋಟಾರ್ ಆನ್ ಅಂಡ್ ಆಫ್ ಎಲ್ಲಾ ಮಾಹಿತಿಗಳು ಮೊಬೈಲ್ಗೆ ಬರುವಂತೆ ಮಾಡಿಕೊಂಡಿದ್ದಾರೆ.ಯಾವ ಜಮೀನಿನಲ್ಲಿ ಯಾವ ಮೋಟಾರ್ ಆನ್ನಲ್ಲಿ ಇದೆ ಎನ್ನುವುದು ಇದರಿಂದ ಕುಳಿತಲ್ಲೇ ಅವರಿಗೆ ತಿಳಿಯುತ್ತದೆ.
ಸಮಗ್ರ ಬೆಳೆ ಪದ್ಧತಿ : ಏಲಕ್ಕಿ, ಪಚ್ಚ ಬಾಳೆ, ನೇಂದ್ರಬಾಳೆಯ ಮೂರು ತಳಿಗಳು ಸೇರಿ ಒಂದು ಲಕ್ಷ ಬಾಳೆ ಗಿಡಗಳನ್ನು ರಾಮಯ್ಯ ಹಾಕಿದ್ದಾರೆ. ಕೆಲವು ಗೊನೆ ಬಿಡುವ ಹಂತದಲ್ಲಿವೆ.ಕೆಲವು ಆರು ತಿಂಗಳ ಗಿಡಗಳು. ಇನ್ನೂ 50 ಎಕರೆಗೂ ಹೆಚ್ಚು ಭೂಮಿಯಲ್ಲಿ ಅರಿಶಿನ ಹಾಕಿದ್ದಾರೆ.ಕೊಯ್ಲಿನ ಹಂತದಲ್ಲಿದೆ. ಇದರ ಜೊತೆ ಜೊತೆಯಲ್ಲೇ ಸಮಿಶ್ರ ಬೆಳೆಯಾಗಿ ಮೆಣಸಿನಕಾಯಿ, ಕಲ್ಲಂಗಡಿಯನ್ನು ನಾಟಿ ಮಾಡಿದ್ದಾರೆ.
ಕಲ್ಲಂಗಡಿ ಮೂರೆ ತಿಂಗಳಲ್ಲಿ ಹಣ ತರುವ ಬೆಳೆ. ಪ್ರತಿ ಕೆಜಿಗೆ 5 ರೂ ಸಿಕ್ಕರೆ ನಷ್ಟ. 8 ರೂ ಸಿಕ್ಕರೆ ಲಾಭ. 10 ರಿಂದ 12 ರೂ ಸಿಕ್ಕರೆ ಎಕರೆಗೆ ಒಂದುವರೆ ಲಕ್ಷ ರೂಪಾಯಿ ಲಾಭ ಗ್ಯಾರಂಟಿ ಎನ್ನುವ ರಾಮಸ್ವಾಮಿ ಬಾಳೆ ಒಳಗೆ ಮೆಣಸಿಕಾಯಿ ಹಾಕಿ ವಾರಕ್ಕೆ 300 ಮೋಟೆ ಕಾಯಿ ಕೊಯ್ದು ಎರಡು ಲಕ್ಷ ರೂಪಾಯಿ ಸಂಪಾದಿಸಿರುವುದಾಗಿ ಹೇಳುತ್ತಾರೆ.
ತಿಂಗಳಿಗೆ ಎಂಟು ಲಕ್ಷ ರೂ. ಮೆಣಸಿನಕಾಯಿಯಿಂದ ಬರುತ್ತದೆ. ಜಮೀನಿನಲ್ಲಿ ಪ್ರತಿ ದಿನ ನೂರಕ್ಕೂ ಹೆಚ್ಚು ಆಳುಗಳು ಕೆಲಸಮಾಡುತ್ತಿದ್ದು, ಇದು ಅವರ ಕೂಲಿಗೆ ಆಗುತ್ತದೆ.ಅರಿಶಿನ ಬಾಳೆಯಿಂದ ಬಂದ ಹಣ ಉಳಿಯುತ್ತದೆ ಎನ್ನುತ್ತಾರೆ.
ದನದ ಗೊಬ್ಬರಕ್ಕೆ ಆದ್ಯತೆ : ಕಲ್ಲು ಭೂಮಿಯನ್ನೇ ಕೃಷಿಗೆ ಒಗ್ಗಿಸಿಕೊಂಡುರುವ ರಾಮಯ್ಯ ದನದ ಗೊಬ್ಬರ ಮತ್ತು ಗೋಡು ಮಣ್ಣಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಎಕರೆಗೆ 20 ಲೋಡ್ ದನದ ಗೊಬ್ಬರ.ಸಾಕಷ್ಟು ಗೋಡು ಮಣ್ಣು ಹೊಡೆಯುತ್ತೇವೆ. ಹೆಚ್ಚಾಗಿ ರಾಸಾಯನಿಕ ಗೊಬ್ಬರ ಬಳಸಲ್ಲ. ನಮ್ಮ ಬಾಳೆ ಹತ್ತೇ ತಿಂಗಳಿಗೆ ಕಟಾವಿಗೆ ಬರುತ್ತೆ. ತೂಕವು ಚೆನ್ನಾಗಿದ್ದು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ ಎನ್ನುತ್ತಾರೆ ರಾಮಯ್ಯ.
ಚಂದಕವಾಡಿ ಸುತ್ತಮುತ್ತ ಜಮೀನಿಗೆ ಕೆರೆಯಿಂದ ಗೋಡು ಮಣ್ಣು ಹೊಡೆಯುವುದರಲ್ಲಿ ರೈತರು ಪ್ರಸಿದ್ಧಿ ಪಡೆದಿದ್ದಾರೆ. ನೇಂದ್ರಬಾಳೆಯಲ್ಲಿ ಗುಂಟಾಲ್ ಮತ್ತು ಸ್ವರ್ಣಮುಖಿ ಎಂಬ ಎರಡು ತಳಿಗಳು ಇವೆ.ಕೊಟ್ಟಿಗೆ ಗೊಬ್ಬರ, ಗೋಡುಮಣ್ಣು ಚೆನ್ನಾಗಿ ಹಾಕಿ ಎಕರೆಗೆ 800 ಸುವರ್ಣಮುಖಿ ನೇಂದ್ರಬಾಳೆ ಹಾಕಬೇಕು. ಒಂದು ಗೊನೆ 6 ರಿಂದ 8 ಚಿಪ್ಪು ಬಿಟ್ಟು 40 ಕೆಜಿವರೆಗೂ ಬರುತ್ತದೆ.ಪ್ರತಿ ಕೆಜಿ 45 ರೂ.ಗೆ ಹೋಗುತ್ತೆ. ಗೊನೆಗೆ ಕನಿಷ್ಠ ಸಾವಿರ ರೂಪಾಯಿ ಸಿಕ್ಕರು 8 ಲಕ್ಷ ರೂಪಾಯಿ ಆದಾಯ ಬರುತ್ತದೆ. ಅದರಲ್ಲಿ ಒಂದುವರೆ ಲಕ್ಷ ಖಚರ್ು ತೆಗೆದರೆ ಆರುವರೆ ಲಕ್ಷ ಲಾಭ ಇದೆ. ಅದನ್ನೇ ಮೂಲ ಬಂಡವಾಳ ಮಾಡಿಕೊಂಡು ಮುಂದಿನ ವ್ಯವಸಾಯ ಮಾಡಬೇಕು. ಬೇಸಾಯದಲ್ಲಿ ದಿಢೀರ್ ಶ್ರೀಮಂತರಾಗುವ ಹಗಲುಗನಸು ಕಾಣಬಾರದು. ಭೂಮತಾಯಿ ನಂಬಿದರೆ ಕೈ ಬಿಡಲ್ಲ.ತಾಳ್ಮೆಯಿಂದ ವ್ಯವಸಾಯ ಮಾಡಬೇಕು ಎಂದು ರೈತರಿಗೆ ಸಲಹೆ ನೀಡುತ್ತಾರೆ.
ಅರಿಶಿನ ಬೇಸಾಯ ಹೇಗೆ? : "ಮೊದಲು ಭೂಮಿಯನ್ನು ಹದಮಾಡಿಕೊಂಡು ರಾಗಿ ಬಿತ್ತನೆ ಮಾಡಬೇಕು. ರಾಗಿ ತೆನೆಗಳನ್ನು ಕೊಯ್ದುಕೊಂಡು ರಾಗಿಹುಲ್ಲನ್ನು ರೋಟವೇಟರ್ ಹೊಡೆದು ಭೂಮಿಗೆ ಸೇರಿಸಬೇಕು. ನಂತರ ನೀರು ಬಿಟ್ಟು ತಂಪು ಮಾಡಬೇಕು. ಆಮೇಲೆ ಅರಿಶಿನ ಹಾಕಿದರೆ ಯಾವ ತರಗುಮಾರಿ ರೋಗವೂ ಹತ್ತಿರ ಸುಳಿಯುವುದಿಲ್ಲ. ಭೂಮಿಯ ಆಳಕ್ಕೆ ಅರಿಶಿನ ಗಂಟು ಹೋಗಿ ಹೆಚ್ಚು ಇಳುವರಿ ಪಡೆಯಬಹುದು".ಇದು ಅನುಭವದಿಂದ ಕಂಡುಕೊಂಡಿರುವ ಸತ್ಯ ಎನ್ನುತ್ತಾರೆ.
ನಾಲ್ಕು ಟ್ರ್ಯಾಕ್ಟರ್, ಜಿಸಿಬಿ,ರೋಟವೇಟರ್, ಬೆಡ್ ಮಾಡುವ ಯಂತ್ರ ಮತ್ತು ನಾಲ್ಕು ಮುಸುಕಿನ ಜೋಳ ಸುಲಿಯುವ ಯಂತ್ರ ಇಟ್ಟುಕೊಂಡಿರುವ ರಾಮಯ್ಯ, ಐದು ನೂರು ಎಕರೆಯಲ್ಲಿ ಕೃಷಿ ಮಾಡಬೇಕೆಂಬ ಕನಸು ಕಟ್ಟುಕೊಂಡಿದ್ದಾರೆ.
ಕನರ್ಾಟಕದಲ್ಲಿ ಆಳುಕಾಳು ಸಮಸ್ಯೆ ಇಲ್ಲ. ದುಡಿಯುವವರಿಗೆ ಕೆಲಸಕೊಡಬೇಕು. "ನಮ್ಮ ರೈತರು ಸೋಮಾರಿಗಳು.ಜೂಜು ಆಡೋದು.ಹಳ್ಳಿಕಟ್ಟೇಲಿ ಕುಳಿತು ಹರಟೆ ಹೊಡೆಯೋದು.ಸಾಲಕೊಟ್ಟರೆ ತಿರುಗಿ ಕೊಡೋದಿಲ್ಲ. ತಾತ ಮುತ್ತಾತನ ಕಾಲದಲ್ಲಿ ಬೆಳೆದಂತೆ ಜೋಳ ರಾಗಿ ಬೆಳದು ಕೊಂಡು ಸುತ್ತಾಡೋದು" ಮಾಡುತ್ತಾರೆ. ಒಂದು ದಿನ ಸುಮ್ಮನೆ ಕುಳಿತರೆ ಅದು ತಿರುಗಿ ಬರಲ್ಲ. ಇದನ್ನ ಅರ್ಥ ಮಾಡಿಕಂಡು ವ್ಯವಸಾಯಮಾಡಿದರೆ ನಷ್ಟ ಆಗೋದಿಲ್ಲ.ಅದಕ್ಕೆ ನಾನೇ ಜೀವಂತ ಸಾಕ್ಷಿ ಎನ್ನುತ್ತಾರೆ.
ದಾನದಲ್ಲೂ ಮುಂದು : ಜಮೀನು ನೋಡಿಕೊಳ್ಳಲು ನಾಲ್ಕುಜನ ರೈಟರ್ ನೇಮಿಸಿಕೊಂಡಿರುವ ರಾಮಯ್ಯ. ಅವರ ಮಕ್ಕಳ ಮದುವೆ ಮುಂಜಿಗೂ ನೆರವಾಗುತ್ತಾರೆ. ಬಡವರಿಗೆ ತಾಳಿ ಮಾಡಿಸಿಕೊಡುವುದು,ಕಷ್ಟದಲ್ಲಿ ಧನ ಸಹಾಯಮಾಡುವುದನ್ನು ಮರೆಯುವುದಿಲ್ಲ. ನಲ್ಲೂರಿನ ಸಾರ್ವಜನಿಕರ ಕುಡಿಯು ನೀರಿನ ಸಮಸ್ಯೆ ನೀಗಿಸಲು ರಾಮಯ್ಯ ಕೊಳವೆ ಬಾವಿ ಹಾಕಿಸಿಕೊಟ್ಟಿದ್ದಾರೆ. ಆ ಮೂಲಕ ಬದುಕು ಕಟ್ಟಿಕೊಳ್ಳಲು ನೆರವಾದ ಊರಿನ ಋಣ ತೀರಿಸುತ್ತಿದ್ದಾರೆ.
ಬೇವಿನಕಡ್ಡಿ ಹಿಡಿದು ಬೋರ್ವೆಲ್ ಪಾಯಿಂಟ್ ಕೊಡುವ ರಾಮಯ್ಯ ಇದುವರೆಗೂ 2000 ಕ್ಕೂ ಹೆಚ್ಚು ಜಮೀನಿನಲ್ಲಿ ನೀರು ಪರೀಕ್ಷೆ ಮಾಡಿದ್ದಾರೆ.ಹೆಚ್ಚು ಓದಿರದ ರಾಮಯ್ಯನವರಿಗೆ ಅನುಭವವೇ ಜೀವನ ಪಾಠ ಕಲಿಸಿದೆ.ಕೃಷಿ ಮತ್ತು ಆಧ್ಯಾತ್ಮದ ಬಗ್ಗೆ ನಿರಂತರವಾಗಿ ಮಾತನಾಡುವ ರಾಮಯ್ಯ ಅವರೊಂದಿಗೆ ಕುಳಿತುಕೊಂಡರೆ ತಮಾಶೆಯಾಗಿ ಮಾತನಾಡುತ್ತಲೇ ಬದುಕಿನ ಸತ್ಯ ದರ್ಶನಮಾಡಿಸಿಬಿಡುತ್ತಾರೆ. ಯೋಗಿಯಂತೆ ಕಾಣುವ ರಾಮಯ್ಯ ಗ್ರಾಮದಲ್ಲಿ ಆಧ್ಯಾತ್ಮಕೇಂದ್ರ ಕಟ್ಟಿ ಅಲ್ಲಿಗೆ ಬರುವವರಿಗೆ ಉಚಿತವಾಗಿ ಅನ್ನದಾನ ಮಾಡುವ ಕನಸು ಕಟ್ಟಿಕೊಂಡಿದ್ದಾರೆ. ಅವರ ಕೃಷಿ ಮತ್ತು ಬದುಕೆ ಯುವಪೀಳಿಗೆಗೆ ಪಾಠದಂತಿದೆ. ಆಸಕ್ತರು ಹೆಚ್ಚಿನಮಾಹಿತಿಗೆ 7996566535 ಸಂಪಕರ್ಿಸಬಹುದು.