ಜೇನುಕುರುಬ ಸೋಮಣ್ಣನ ಅಲೆಮಾರಿ ಕೃಷಿ ಅನುಭವ ಕಥನ
# ಆದಿವಾಸಿ ಹೋರಾಟಗಾರನ ವಿಶಿಷ್ಟ ಕಥಾನಕ # ಜೀವನ ಪ್ರೀತಿ ಕಳೆದುಕೊಳ್ಳದ ಕಾಡಿನ ಜನ
ಭೂ ಒಡೆತನ ಇದ್ದರೂ ಬೇಸಾಯದ ಬಗ್ಗೆ ಪ್ರೀತಿ ಬೆಳಸಿಕೊಳ್ಳದೆ ಬೀದಿಪಾಲಾದವರು ಅನೇಕ ಮಂದಿ. ಹತ್ತಾರು ಎಕರೆ ಜಮೀನು ಇದ್ದರೂ ಅನ್ನದಾತರ ಮಕ್ಕಳು ಬೇಸಾಯ ಮಾಡಲಾಗದೆ ನಗರದಲ್ಲಿ ಕೂಲಿಗಳಾಗಿ ದುಡಿಯುತ್ತಾ ಬದುಕು ಸಾಗಿಸುತ್ತಿದ್ದಾರೆ. ತುಂಡು ಭೂಮಿಗಾಗಿ ಹಂಬಲಿಸಿ ಅದನ್ನು ಪಡೆಯಲಾಗದೆ ಜೀವ ಬಿಟ್ಟ ಚೋಮನಂತಹವರೂ ಇದ್ದ ಸಮಾಜ ನಮ್ಮದು. ಆಧುನಿಕ ಶಿಕ್ಷಣ ಹೊಸ ಅರಿವು ಆಲೋಚನೆ ಮೂಡಿಸುವ ಮೂಲಕ ಬದಲಾವಣೆಗೆ ನಾಂದಿಯಾಡಿದೆ. ಪಿತ್ರಾಜರ್ಿತವಾಗಿ ತುಂಡು ಭೂಮಿಯೂ ಇಲ್ಲದವರೂ ಇಂದು ಭೂ ಒಡೆಯರಾಗಿದ್ದಾರೆ. ಅದಕ್ಕಿಂತಲ್ಲೂ ಭಿನ್ನವಾದ ಕಥಾನಕವೊಂದರ ಬಗ್ಗೆ ನಿಮಗೆ ಹೇಳಬೇಕು.
ಹೋರಾಟದ ಮೂಲಕ ಸಮುದಾಯದ ಬದುಕು ಕಟ್ಟಿ ತಾನೂ ತುಂಡುಭೂಮಿಗೆ ಒಡೆಯನಾಗಿ ಸಮಾಜಕ್ಕೆ ಮಾದರಿಯಾದ ಆದಿವಾಸಿ ಹೋರಾಟಗಾರ, ಜೇನುಕುರುಬರ ಹಿತಚಿಂತಕ, `ಜನ ಮೆಚ್ಚಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ' ಜೇನುಕುರುಬರ ಸೋಮಣ್ಣ ತನಗೆ ದಕ್ಕಿದ 31 ಗುಂಟೆ ಜಮೀನಿನಲ್ಲಿ ಮಕ್ಕಳುಮರಿ, ಸಹೋದರರು,ಸಹೋದರಿ ಸೇರಿದಂತೆ ಬಹುದೊಡ್ಡ ಅವಿಭಕ್ತ ಕುಟುಂಬದಲ್ಲಿ ದ್ದುಕೊಂಡು ಐದು ಸಂಸಾರ ಸಾಕಿ ಸೈ ಎನಿಸಿಕೊಂಡಿರುವುದೇ ದೊಡ್ಡ ಸೋಜಿಗದ ಸಂಗತಿ.
ಕೋಟೆ ತಾಲೂಕಿನ ಕಬಿನಿ ಹಿನ್ನಿರಿನಲ್ಲಿ ಬರುವ ಮೊತ್ತ ಎಂಬ ಹಾಡಿಯೊಂದರ ಸಮೀಪ ಈಗಲೂ ಸೋಮಣ್ಣ 31 ಗುಂಟೆ ಜಮೀನಿನಲ್ಲಿ ಬೇಸಾಯ ಮಾಡುತ್ತಾ,ಜೇನುಕುರುಬರ,ಆದಿವಾಸಿಗಳ ಕಷ್ಟಸುಖಗಳಲ್ಲಿ ಭಾಗಿಯಾಗುತ್ತಾ,ಕಾಡಿನ ಜನರ ಸಂಘಟನೆಗೆ ಬಲ ತುಂಬುತ್ತಿದ್ದಾರೆ.
ಅದು ಎಪ್ಪತರ ದಶಕ. ಎಚ್.ಡಿ.ಕೋಟೆ ತಾಲೂಕಿನಲ್ಲಿ ಕಬಿನಿ,ತಾರಕ,ನುಗು ಜಲಾಶಯಗಳು ತಲೆಎತ್ತಲೂ ಆರಂಭಿಸಿದ್ದವು. ಈ ಸಂದರ್ಭದಲ್ಲಿ ಸಾವಿರಾರು ಎಕರೆ ಕಾಡಿನ ಭೂಮಿ ಮುಳುಗಡೆ ಯಾಯಿತು.ಕಾಡಿನಲ್ಲಿ ವಾಸವಾಗಿದ್ದ ಆದಿವಾಸಿಗಳು,ಜೇನುಕುರುಬರನ್ನು ಒಕ್ಕಲೆಬ್ಬಿಸಲಾಯಿತು. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಕಾಲ ಆದು. ಭೂ ಸುಧಾರಣೆ ಕಾಯಿದೆ ಜಾರಿಗೆ ಬಂದಿತ್ತು.ಆದರೆ ಬಲಾಢ್ಯರ ಸ್ವಾರ್ಥದಿಂದ ಭೂ ಸುಧಾರಣೆ ಕಾಯಿದೆಯನ್ನೇ ದಿಕ್ಕುತಪ್ಪಿಸುವ ಹುನ್ನಾರಗಳು ಆಗ ನಡೆದವು. ಅದೇ ಸಂದರ್ಭದಲ್ಲಿ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ವಿ.ಪಿ.ಬಳಿಗಾರ್ ಅವರ ಹಿತಾಸಕ್ತಿಯಿಂದ ಕಾಡಿನಿಂದ ಹೊರ ದೂಡಲ್ಪಟ್ಟ ಆದಿವಾಸಿಗಳಿಗೆ,ಜೇನುಕುರುಬರಿಗೆ ಅಲ್ಪಸ್ವಲ್ಪ ಭೂಮಿ ಸಿಕ್ಕಿತ್ತು. ಆರು ಸಾವಿರ ಎಕರೆ ಭೂಮಿಯನ್ನು ಆದಿವಾಸಿಗಳಿಗೆ ಹಂಚಲಾಯಿತು. ಇಂತಹ ಐತಿಹಾಸಿಕ ಹೆಜ್ಜೆಗುರುತಿನ ಹಿಂದೆ ಜೇನುಕುರುಬ ಸೋಮಣ್ಣನವರ ಶ್ರಮ ಮತ್ತು ಹೋರಾಟ ಇದೆ ಎನ್ನುವುದನ್ನು ಆದಿವಾಸಿಗಳು ಇಂದಿಗೂ ನೆನಪುಮಾಡಿಕೊಳ್ಳುತ್ತಾರೆ.
ಆದಿವಾಸಿಗಳ ಕೃಷಿಯ ಬಗ್ಗೆ ಕುತೂಹಲಮೂಡಿ, ಕಾಡಿನ ಜನ ಕಾಳು ಮೆಣಸು ಬೆಳೆಯುತ್ತಿರುವ ಬಗ್ಗೆ ಕೇಳಿ ಆಶ್ಚರ್ಯವಾಗಿ ಅಂತಹ ಕೃಷಿಕರನ್ನು ಕಾಣಲು ಹೋಗಿದ್ದ ನಮಗೆ ಕೈದೀವಿಗೆಯಂತೆ ಸಿಕ್ಕವರು ಇದೆ ಸೋಮಣ್ಣ. ಆದಿವಾಸಿಗಳ ಒಡನಾಡಿಯಾಗಿರುವ ಸ್ವಾಭಿಮಾನಿ ಸೋಮಣ್ಣನ ಬಗ್ಗೆಯೂ ನಾವು ವಿಚಾರಿಸುತ್ತಾ ಹೋದಂತೆ ನಮ್ಮ ಮುಂದೆ ಇನ್ನೊಂದು ಹೋರಾಟದ ಬದುಕು ಅನಾವರಣಗೊಂಡಿತು.
ಜೇನುಕುರುಬರ ಕುನ್ನಯ್ಯ ಮತ್ತು ಬಸಮ್ಮ ದಂಪತಿಯ ಮಗನಾದ ಸೋಮಣ್ಣ ಓದಿದ್ದು ಕೇವಲ ನಾಲ್ಕನೇ ತರಗತಿ ಮಾತ್ರ. ಸಂಸಾರದ ತಾಪತ್ರಯದಿಂದಾಗಿ ಮನೆಯವರು ಮಾಡಿದ ಸಾಲ ತೀರಿಸಲೆಂದೇ ಬಾಲ್ಯದಲ್ಲೇ ಜೀತಗಾರನಾದ ಸೋಮಣ್ಣ ದುಡಿದು ಸಾಲತೀರಿಸಿ ತುಂಡು ಭೂಮಿಗೆ ಒಡೆಯನಾಗಿ ಹೋರಾಟಗಾರನಾಗಿ ರೂಪುಗೊಂಡದ್ದು ಒಂದು ಪವಾಡದಂತೆ ಕಾಣುತ್ತದೆ.
ಆದಿವಾಸಿಗಳ ನೋವಿಗೆ ದನಿಯಾಗಿ,ಮೇಧಾ ಪಾಟ್ಕರ್ ಅವರ ನರ್ಮದಾ ಬಚವೋ ಆಂದೋಲನದಲ್ಲಿ ಭಾಗಿಯಾಗಿ,ಪಶ್ಚಿಮ ಘಟ್ಟ ಉಳಿಸಿ ಪಾದಯಾತ್ರೆಯಲ್ಲಿ ಪಾಲ್ಗೊಂಡು,ಗೋವಾದಲ್ಲಿ ನಡೆದ ಮೀನುಗಾರರ ಪರ ಹೋರಾಟದಲ್ಲೂ ಭಾಗವಹಿಸಿರುವ ಸೋಮಣ್ಣ ವಿದೇಶಗಳಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಆದಿವಾಸಿಗಳ ಹಾಡುಪಾಡನ್ನು ಹೇಳಿ ಹೋರಾಟ ಮತ್ತು ಹಕ್ಕಿನ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಇಂತಹ ವಿಶಿಷ್ಟ ವ್ಯಕ್ತಿತ್ವದ ಸೋಮಣ್ಣ ಅವರನ್ನು ಬಾಲ್ಯ, ಕೃಷಿ ಮತ್ತು ಆದಿವಾಸಿ ಹೋರಾಟದ ಬಗ್ಗೆ ಕೇಳಿದರೆ ತಮ್ಮ ಬಾಲ್ಯವನ್ನು ನೆನಪಿಸಿಕೊಂಡು ಭಾವುಕರಾಗುತ್ತಾರೆ.
70ರ ದಶಕದ ಪಾಡು : "ಕೊಟ್ಟವರಿಗೆ ಯಾವತ್ತೂ ಮೋಸ ಮಾಡಬಾರದು.ಧರ್ಮದ ಮಾರ್ಗದಲ್ಲಿ ನಡೆಯಬೇಕು.ದುಡಿದು ತಿನ್ನಬೇಕು. ಇದು ನಮ್ಮ ತಾಯಿಯಿಂದ ನಮಗೆ ಬಂದ ಆಸ್ತಿ ಮತ್ತು ಬಳುವಳಿ. ಬಾಲ್ಯದಲ್ಲಿ ಗೌಡರ ಮನೆಗೆ ಜೀತಕ್ಕೆ ಸೇರಿಕೊಂಡಾಗ ನನಗೆ ಒಂಭತ್ತು ವರ್ಷ. ವಾಷರ್ಿಕ ಮೂರು ಹೊತ್ತು ಊಟ ಜೊತೆಗೆ ಹದಿನಾರುವರೆ ರೂಪಾಯಿ ಕೂಲಿ.ಆಗ ಜನರಲ್ಲಿ ನಂಬಿಕೆ,ಪ್ರಾಮಾಣಿಕತೆ ಇತ್ತು.ಗೌಡರು ಹಣ ಕೊಡಬೇಕಾದರೆ ಮರದ ಬಳಿ ನಿಂತು. ನಿನಗೆ ನಾನು ಕೊಡುತ್ತಿರುವ ಹಣಕ್ಕೆ ಈ ಮರವೇ ಸಾಕ್ಷಿ. ಕೊಟ್ಟ ಹಣಕ್ಕೆ ನಿಯತ್ತಿನಿಂದ ದುಡಿದು ಸಾಲ ತೀರಿಸಿ ಎಂದು ಹಣ ಕೊಡುತ್ತಿದ್ದರು. ನಾವು ನಿಯತ್ತಿನಿಂದ ದುಡಿದು ಸಾಲ ತೀರಿಸುತ್ತಿದ್ದೆವು" ಎಂದು ತಮ್ಮ ಬಾಲ್ಯದ ನೆನಪುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು ಸೋಮಣ್ಣ.
ಗೌಡರ ಸಾಲ ತೀರಿದ ಮೇಲೆ ತಾಯಿ ಬಸಮ್ಮ ಮಗನಿಗೆ ಹಾಡಿಯ ಸಂಪರ್ಕ ಕಡಿದು ಹೋಗುತ್ತದೆ ಅಂತ ಸೋಮಣ್ಣನನ್ನು ಮತ್ತೆ ಹಾಡಿಗೆ ಕಡೆದುಕೊಂಡು ಹೋಗಿಬಿಡುತ್ತಾರೆ.ಅಲ್ಲಿ ಕುಮರಿ ಬೇಸಾಯ ಮಾಡಿಕೊಂಡು, ಕಾಡಿನ ಸೊಪ್ಪು,ಗೆಣಸು,ಜೇನು ತಿಂದುಕೊಂಡು ಹಸಿವು ನೀಗಿಸಿಕೊಂಡು ಕಾಡುಪ್ರಾಣಿಗಳ ಜೊತೆಗೆ ಬದುಕಿದ ದಿನಗಳನ್ನು ಸುವರ್ಣಯುಗ ಎನ್ನುತ್ತಾರೆ.
ಮೂಲತಃ ಹುಣಸೂರು ತಾಲೂಕಿನ ಕಚ್ಚೇನಹಳ್ಳಿಗೆ ಸೇರಿದ ಕಾಡಿನಲ್ಲಿದ್ದ ಸೋಮಣ್ಣನ ಪೂವರ್ಿಕರು ಅಣ್ಣೂರು ಹೊಸಹಳ್ಳಿ ಹಾಡಿಗೆ ಬಂದು ಗೌಡರ ದನ ಮೇಯಿಸುತ್ತಾ,ಕಾಡು ಕಡಿದು ಎಂಟು ಎಕರೆ ಜಮೀನು ಮಾಡಿ ಬದುಕು ಕಟ್ಟಿಕೊಂಡಿದ್ದರು.
"ಕಟ್ಟಮನ್ನಹಳ್ಳಿ,ಆಲತ್ತೂರು ಹುಂಡಿ ಸುತ್ತಮುತ್ತ ಕಾಲರ ಪ್ಲೇಗು ಬಂದು ಜನರೆಲ್ಲಾ ಸಾವನ್ನಪ್ಪುತ್ತಿದ್ದಾಗ ತಮ್ಮ ತಂದೆ ಕುನ್ನಯ್ಯನ ಮೇಲೆ ಬಲಿಮಾರಿ ದೇವತೆ ಬಂದು ಊರಿನ ಜನರನ್ನು ಉಳಿಸಿದ್ದಕ್ಕಾಗಿ ಆಗ ದೇವರ ಕೊಡಗೆ ಅಂತ ಐದು ಎಕರೆ ಜಮೀನು ಕೊಟ್ಟಿದ್ದರು. ಅದರಲ್ಲೂ ದುಡಿದು ಜೀವನ ಸಾಗಿತು.ಆಗ ನಮಗೆ ಹಣ ಬೇಕಿರಲಿಲ್ಲ.ಪ್ರತಿ ತಿಂಗಳು ಒಂದಲ್ಲ ಒಂದು ಆಹಾರ ಕಾಡಿನಿಂದ ಸಿಗುತ್ತಿತ್ತು.ಮುತ್ತಿಗೆ ಎಲೆಯನ್ನು ಸುತ್ತಿ ಅದರಲ್ಲಿ ಕಾಡಿನ ಸೊಪ್ಪುಗಳನ್ನು ಕೊಯ್ದು,ಮೆಣಸಿನಕಾಯಿ ಚಿವುಟಿ ಬುತ್ತಿಕಟ್ಟಿ ಬೆಂಕಿಯಲ್ಲಿ ಬೇಯಿಸಿ ತಿಂದರೆ ಅದೆ ನಮ್ಮ ಆಹಾರವಾಗುತ್ತಿತ್ತು" ಎಂದು ಬೇಸಾಯದ ತಮ್ಮ ಅಲೆಮಾರಿ ಜೀವನದ ಸೊಬಗನ್ನು ಸೋಮಣ್ಣ ಹೇಳುತ್ತಾ ಹೋಗುತ್ತಾರೆ.ಇಂತಹ ಸಾವಿರಾರು ಕಾಡಿನ ನೆನಪುಗಳು ಅವರಿಗಿವೆ.
ಇಂತಹ ಅಲೆಮಾರಿ ಬದುಕಿನ ಸೋಮಣ್ಣ ಅವರಿಗೆ ಒಂದು ಕಡೆ ನೆಲೆನಿಂತು ತಾನೂ ಕೃಷಿಕನಾಗಬೇಕೆಂಬ ಹಂಬಲ ಹೆಚ್ಚಾಗುತ್ತದೆ. ತನ್ನ ಜನಾಂಗವಾದ ಜೇನುಕುರುಬರ ಜೊತೆ ಸೇರಿಕೊಂಡು ಬೂದನೂರು ಬಳಿ ಎಂಟು ಎಕರೆ ಪ್ರದೇಶದಲ್ಲಿ ಕಾಡುಕಡಿದು ಕೃಷಿಭೂಮಿಮಾಡಿ ರಾಗಿ,ಕಡಲೆ,ಜೋಳ ಸೇರಿದಂತೆ ಎಲ್ಲ ರೀತಿಯ ಆಹಾರ ಧಾನ್ಯಗಳನ್ನು ಬೆಳೆಯುತ್ತಾರೆ. ಅದೇ ಮುಂದೆ ಬುದನೂರು ಹಾಡಿಯಾಗಿ ರೂಪುಗೊಳ್ಳುತ್ತದೆ. ಆ ಹಾಡಿ ರೂಪುಗೊಂಡದ್ದರ ಹಿಂದೆ ತನ್ನ ಶ್ರಮ ಇದೆ ಎಂದು ಸೋಮಣ್ಣ ನೆನಪುಮಾಡಿಕೊಂಡರು.
ಹೀಗೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಕಾಡು ಕಡಿದು ಕೃಷಿಮಾಡುತ್ತಲೇ ಅಲೆಮಾರಿಗಳಾಗಿದ್ದ ಜೇನುಕುರುಬರು ಮತ್ತು ಆದಿವಾಸಿಗಳಿಗೆ ಕನರ್ಾಟಕ ಭೂ ಸುಧಾರಣೆ ಕಾಯಿದೆ ಜಾರಿಯಾಗಿ ಸಾಗುವಳಿ ಚೀಟಿ ಕೊಟ್ಟ ನಂತರ ಒಂದು ಕಡೆನಿಂತು ಬೇಸಾಯ ಮಾಡಲು ಸಾಧ್ಯವಾಯಿತು. 70 ದಶಕದಲ್ಲಿ ಸಕ್ರೀಯವಾಗಿದ್ದ ದಲಿತ ಸಂಘಟನೆಗಳು ಕೋಟೆತಾಲೂಕಿನಲ್ಲಿ ಹತ್ತು ಹಲವು ಹೋರಾಟಗಳನ್ನು ರೂಪಿಸಿ ಹಕ್ಕುಗಳನ್ನು ಪಡೆಯುವಲ್ಲಿ ಸಫಲವಾಗಿದ್ದವು. ಇದೇ ಸಂದರ್ಭದಲ್ಲಿ ದಲಿತ ಸಂಘಟನೆಗಳ ಸಂಪರ್ಕಕ್ಕೆ ಬಂದ ಸೋಮಣ್ಣ ಆದಿವಾಸಿಗಳನ್ನು ಜೋಡಿಸಿಕೊಂಡು ಹೋರಾಟಕ್ಕೆ ಬಲ ತಂದುಕೊಂಡರು. ತಮ್ಮ ಮೂವತ್ತು ವರ್ಷಗಳ ಸುದೀರ್ಘ ಆಯಸ್ಸನ್ನು ಆದಿವಾಸಿಗಳ ಹಕ್ಕಿಗಾಗಿ ಹೋರಾಡಲು,ಕಷ್ಟಗಳಿಗೆ ನೆರವಾಗಲು ಸವೆಸಿರುವ ಸೋಮಣ್ಣನಿಗೆ ಈಗಲೂ ಬೇಸಾಯವೆಂದರೆ ಪ್ರಾಣ. ಮೊತ್ತದಲ್ಲಿ ತನ್ನ ಮಾವ ತನ್ನ ಪಾಲಿಗೆ ಬಂದ 31 ಗುಂಟೆ ಜಮೀನನ್ನು ಅಳಿಯನಿಗೆ ಕೊಡಿ ಎಂದು ಕೊಡಿಸಿದ್ದರ ಫಲವಾಗಿ ಸೋಮಣ್ಣ ಇಂದು ತುಂಡುಭೂಮಿಯ ಒಡೆಯನಾಗಿ ಅಲ್ಲಿ ತರಕಾರಿ,ರಾಗಿ,ಜೋಳ ಬೆಳೆಯುತ್ತಾ ಹೋರಾಟದ ಜೊತೆಜೊತೆಗೆ ಕೃಷಿಯನ್ನೂ ಮಾಡುತ್ತಾ ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದಾರೆ.
2016 ರಲ್ಲಿ ಇಂತಹ ಜೇನುಕುರುಬ ಸೋಮಣ್ಣ ಅವರಿಗೆ ಸರಕಾರ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿ ನಂತರ ಹಿಂಪಡೆದು ಅಪಮಾನ ಮಾಡಿತ್ತು.ಆಗ ಸಂಘಟನೆಗಳೆ ಮುಂದೆನಿಂತು ಹಾಡಿಯಲ್ಲಿ ಸಮಾರಂಭಮಾಡಿ ಸೋಮಣ್ಣ ಅವರಿಗೆ `ಜನ ಮೆಚ್ಚಿದ ರಾಜ್ಯೋತ್ಸವ ಪ್ರಶಸ್ತಿ' ನೀಡಿ ಗೌರವಿದ್ದವು. ಸಾಹಿತಿ ದೇವನೂರ ಮಹಾದೇವ ಅವರೇ ಪ್ರಶಸ್ತಿ ಪ್ರಧಾನಮಾಡಿದ್ದರು.
ಬಡತನ,ಜೀತ, ದಾರಿದ್ರ್ಯದ ನಡುವೆಯೂ ತನ್ನ ಜನಾಂಗದ ಹಕ್ಕಿಗಾಗಿ ಮೂರು ದಶಕಗಳಿಗೂ ಹೆಚ್ಚುಕಾಲ ಸುದೀರ್ಘವಾದ ಹೋರಾಟ ಮಾಡಿ ಕೃಷಿಯನ್ನು ಕೈ ಬಿಡದೆ ಸ್ವಾಭಿಮಾನಿಯಾಗಿ ಬದುಕುತ್ತಿರುವ ಸೋಮಣ್ಣ ಅವರಿಗೆ ರಾಜಕೀಯ ಸ್ಥಾನಮಾನಗಳು ಸಿಗಬೇಕಿತ್ತು. ರಾಜಕೀಯ ಅಧಿಕಾರ ಸಿಕ್ಕಿದ್ದರೆ ಆದಿವಾಸಿಗಳಿಗೆ ಮತ್ತಷ್ಟು ಬಲ ಬಂದಂತಾಗುತ್ತಿತ್ತು ಎಂದು ಅವರೊಂದಿಗೆ ಎಲ್ಲಾ ಹೋರಾಟಗಳಲ್ಲಿ ಭಾಗಿಯಾಗಿರುವ ಲೇಖಕ ಕ್ಷೀರಸಾಗರ ಹೇಳುತ್ತಾರೆ.
ಕೋಟೆ,ಬಿಳಿಗಿರಿರಂಗನಬೆಟ್ಟ,ಬೇರಂಬಾಡಿ,ಹಂಗಳ,ದೊಡ್ಡಬರಗಿ ಸುತ್ತಮುತ್ತೆಲ್ಲಾ ಆದಿವಾಸಿಗಳು ಕೃಷಿ ಮಾಡುತ್ತಿರುವ ಪ್ರತಿಯೊಂದು ವಿವರಗಳ ಬಗ್ಗೆಯೂ ಮಾಹಿತಿ ಇರುವ ಸೋಮಣ್ಣ ಆದಿವಾಸಿ ಜನಾಂಗದ ನಿಜವಾದ ಆಸ್ತಿಯಾಗಿದ್ದಾರೆ. ಹೆಚ್ಚಿನ ಮಾಹಿತಿಗೆ ಸೋಮಣ್ಣ 9901820972 ಸಂಪಕರ್ಿಸಿ.