ಅನ್ನದ ಬಟ್ಟಲು ಈ ತದ್ರೂಪಿ ಕಾಡು :ದೊಡ್ಡಮಗ್ಗೆಯ ಸಹ್ಯಾದ್ರಿ
ಹಾಸನ : ಮಳೆಯ ಕಾಡುಗಳು ಕಣ್ಮರೆಯಾಗುತ್ತಿವೆ. ಮೋಡಗಳನ್ನು ತಡೆದು ಮಳೆ ಸುರಿಸಬೇಕಿದ್ದ ಮರಗಳನ್ನು ಕಡಿದು ಬಯಲುಮಾಡಿದ ಪರಿಣಾಮ ಮತ್ತೆ ಮತ್ತೆ ಭೀಕರ ಬರಗಾಲ ಎದುರಾಗಿ ನಿಂತನೆಲವೇ ಬೆಂಕಿಯ ಚೆಂಡಂತಾದ ಅನುಭವ.
ಬಿಸಿ ಪ್ರಳಯದ ಬಗ್ಗೆ ವಿಜ್ಞಾನಿಗಳು ಎಚ್ಚರಿಸುತ್ತಲೆ ಬಂದಿದ್ದಾರೆ. ಅರಣ್ಯಗಳನ್ನು ಹೇರಳವಾಗಿ ಬೆಳೆಸಬೇಕು ಎಂದು ತಜ್ಞರು ಹೇಳುತ್ತಾರೆ. ಆಹಾರದ ಅಭಾವ ಒಂದೆಡೆ. ಅರಣ್ಯಗಳನ್ನು ಬೆಳೆಸಲೇಬೇಕಾದ ಅನಿವಾರ್ಯತೆ ಮತ್ತೊಂದೆಡೆ.ಇಂತಹ ಅಡಕತ್ತರಿಯ ನಡುವೆ ಬದುಕು ಸಿಲುಕಿದೆ. ಇಂತಹ ಸವಾಲನ್ನು ಎದುರಿಸಿ ಬಯಲು ಪ್ರದೇಶದಲ್ಲಿ ಬೃಹತ್ ಕಾಡು ಬೆಳೆಸಿ ಅನ್ನದ ಬಟ್ಟಲಾಗಿಸಿದ "ಬಂಗಾರದ ಮನುಷ್ಯ" ದೊಡ್ಡಮಗ್ಗೆಯ ಎಂ.ಸಿ.ರಂಗಸ್ವಾಮಿ.
ಹಾಸನ ಜಿಲ್ಲೆ ಅರಕಲಗೂಡು ತಾಲೂಕು ದೊಡ್ಡಮಗ್ಗೆ ಎಂಬ ಬಯಲು ನಾಡಿನಲ್ಲಿ ಅವರು ಸೃಷ್ಠಿಸಿದ ಹಸಿರು ಕಾನನ ನಿತ್ಯಹರಿದ್ವರ್ಣ ಕಾಡನ್ನು ನೆನಪಿಗೆ ತರುತ್ತದೆ. ಮೈಸೂರು ಮಹಾರಾಜ ಕಾಲೇಜಿನಲ್ಲಿ(1978-79) ಬಿಎ ಪದವಿ ವ್ಯಾಸಂಗ ಮಾಡುತ್ತಿರುವಾಗಲೇ ಕೃಷಿಯನ್ನೆ ಮಾಡಬೇಕೆಂಬ ಕನಸುಕಂಡ ರಂಗಸ್ವಾಮಿ ಐದುನೂರು ಎಕರೆ ಪ್ರದೇಶದಲ್ಲಿ ತದ್ರೂಪಿ ಕಾಡು ಬೆಳೆಸುವ ಮೂಲಕ ಕಂಡ ಕನಸನ್ನು ಸಾಕಾರಮಾಡಿಕೊಂಡಿದ್ದಾರೆ.
" ಓದುವಾಗಲೇ ತಾನೊಬ್ಬ ದೊಡ್ಡ ಕೃಷಿಕನಾಗಬೇಕು. ತಮ್ಮಂದಿರ ಉನ್ನತ ವ್ಯಾಸಂಗಕ್ಕೆ ನೆರವಾಗಬೇಕು ಎಂದುಕೊಂಡಿದ್ದೆ.ಅದನ್ನು ಸಾಕಾರಮಾಡಿಕೊಂಡ ತೃಪ್ತಿ ನನ್ನದು" ಎಂದು ಹೇಳುವಾಗ ರಂಗಸ್ವಾಮಿ ಅಂದುಕೊಂಡದ್ದನ್ನು ಸಾಧಿಸುವ ಛಲಗಾರನಂತೆ ಕಾಣುತ್ತಾರೆ.
ಎಂ.ಜೆ.ತಿಮ್ಮೇಗೌಡ ಮತ್ತು ಲಕ್ಷಮ್ಮ ದಂಪತಿಯ ನಾಲ್ವರು ಪುತ್ರರಲ್ಲಿ ರಂಗಸ್ವಾಮಿ ಹಿರಿಯ. ಒಬ್ಬ ಸಹೋದರ ಮೈಸೂರಿನ ಜಿಲ್ಲಾಧಿಕಾರಿಯಾಗಿ ನಿವೃತ್ತರಾಗಿರುವ ಡಾ.ರಾಮೇಗೌಡ. ಮತ್ತಿಬ್ಬರು ಕೃಷ್ಣೇಗೌಡ, ನಾಗರಾಜು ಎಂಬ ಸಹೋದರರು ವ್ಯವಹಾರ ನೋಡಿಕೊಳ್ಳುತ್ತಾರೆ.
ರಂಗಸ್ವಾಮಿ ಪುತ್ರನೊಬ್ಬ ಐಆರ್ಎಸ್ ಮಾಡಿಕೊಂಡು ಕಸ್ಟಮ್ಸ್ನಲ್ಲಿ ಉನ್ನತ ಅಧಿಕಾರಿಯಾಗಿದ್ದಾರೆ, ಮತ್ತೊಬ್ಬ ಲಂಡನ್ನಲ್ಲಿ ಎಂಬಿಎ ಮಾಡಿಕೊಂಡು ತೆಲಂಗಾಣದಲ್ಲಿ ಕಂಪನಿಯೊಂದಕ್ಕೆ ಅಡ್ವೈಸರ್ ಆಗಿ ಕೆಲಸಮಾಡುತ್ತಿದ್ದಾರೆ. ಹೀಗೆ ಮನೆಯವರೆಲ್ಲ ಉನ್ನತ ವ್ಯಾಸಂಗಮಾಡಿ ದೊಡ್ಡ ಹುದ್ದೆಯಲ್ಲಿದ್ದಾರೆ. ಆದರೂ ಅವರ ಹಸಿರು ಪ್ರೀತಿ ಬೆಟ್ಟದಷ್ಟಿದೆ. ನಿರಂತರ ಹೋರಾಟದ ಬದುಕು ನಮ್ಮದು ಎಂಬ ರಂಗಸ್ವಾಮಿ ಅವರಿಗೆ ಸರಳತೆ,ಸಜ್ಜನಿಕೆಯಂತೂ ಹುಟ್ಟಿನಿಂದಲೆ ಬಂದಿದೆ.
ನೈಸಗರ್ಿಕ ಕೃಷಿಗೆ ಹೆಚ್ಚು ಆದ್ಯತೆ ನೀಡಲಾಗಿದ್ದು,ನೂರು ಎಕರೆ ಪ್ರದೇಶದಲ್ಲಿ ಅರವತ್ತು ಸಾವಿರ ಅಡಿಕೆಮರ, 2000 ತೆಂಗು, ಐವತ್ತು ಎಕರೆಯಲ್ಲಿ ತಾಳೆ,ಮೂವತ್ತೈದು ಎಕರೆಯಲ್ಲಿ ಏಲಕ್ಕಿ, ನಲವತ್ತು ಸಾವಿರ ಶ್ರೀಗಂಧ,ಐವತ್ತು ಸಾವಿರ ಹೆಬ್ಬೇವು, ಹತ್ತು ಸಾವಿರಕ್ಕೂ ಹೆಚ್ಚು ತೇಗ, ಮೆಣಸು,ಅಗರ್ ವುಡ್, ಲವಂಗ. ಜಾಯಿಕಾಯಿ, ಮಾವು,ಸಪೋಟ,ಮೂಸಂಬಿ,ನಿಂಬೆ,ಹಲಸು,ನೇರಳೆ,ಚಕ್ಕೆ ಹೀಗೆ ಹತ್ತು ಹಲವು ಬಗೆಯ ಸಾಂಬಾರ ಮತ್ತು ಹಣ್ಣಿನ ಗಿಡಗಳು ಈ ತದ್ರೂಪಿ ಕಾಡಿನಲ್ಲಿ ಬೆಳೆಯಲಾಗಿದೆ.
ಪಶುಪಾಲನೆಯಲ್ಲೂ ಸಾಧನೆ ಮಾಡಿದ್ದು, 180 ಹಸುಗಳು, 50 ಎಮ್ಮೆಗಳು, 200 ಕ್ಕೂ ಹೆಚ್ಚು ಕುರಿಗಳು , ಮೀನು ಸಾಕಾಣಿಕೆ ಎಲ್ಲಾ ಸೇರಿ ಸಮಗ್ರ, ಸುಸ್ಥಿರ ಕಾಡುಕೃಷಿಗೆ ಒಂದಕ್ಕೊಂದು ಪೂರಕವಾಗಿ ಆಥರ್ಿಕ ಸದೃಢತೆಗೆ ಸಹಕಾರಿಯಾಗಿವೆ. ಐದುನೂರು ಎಕರೆಯಲ್ಲಿ ಸುಮಾರು ಹತ್ತು ಎಕರೆ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ಇದೆ, ಗ್ರಾನೈಟ್ ಫ್ಯಾಕ್ಟರಿ ಇದೆ. ಇದೆಲ್ಲಾವನ್ನು ಸರಿದೂಗಿಸಲೆಂಬಂತೆ ಲಕ್ಷಾಂತರ ಗಿಡಮರಗಳನ್ನು ಬೆಳೆಸಲಾಗಿದೆ. ಇದೆಲ್ಲವನ್ನು ನಿಭಾಹಿಸಲು ಆರು ಬೃಹತ್ ಕೆರೆಗಳನ್ನು ನಿಮರ್ಾಣ ಮಾಡಲಾಗಿದೆ. ಅಲ್ಲಲ್ಲಿ ಚೆಕ್ ಡ್ಯಾಂಗಳನ್ನು ಕಟ್ಟಲಾಗಿದೆ.ತೆರೆದ ಬಾವಿಗಳು ಇವೆ. ನಲವತ್ತು ಬೋರ್ವೆಲ್ಗಳಿವೆ. ಐದುನೂರು ಎಕರೆಯಲ್ಲಿ ಎಲ್ಲೂ ಜಮೀನನ್ನು ಖಾಲಿ ಬಿಡದೆ ಎಲ್ಲವನ್ನೂ ಯೋಜಿಸಿ, ಚಿಂತಿಸಿ ನೆಡಲಾಗಿದೆ. ನೂರಕ್ಕೂ ಹೆಚ್ಚು ಎರೆಗೊಬ್ಬರ ಘಟಕಗಳನ್ನು ನಿಮರ್ಾಣಮಾಡಿಕೊಂಡಿದ್ದಾರೆ.
ಗಿಡಮರಗಳಿಗೆ ಹನಿ ನೀರಾವರಿ, ಸ್ಪಿಂಕ್ಲರ್ ವಿಧಾನದಲ್ಲಿ ನೀರು ಕೊಡಲಾಗುತ್ತದೆ.ಅದಕ್ಕಾಗಿ ಅಲ್ಲಲ್ಲಿ ಬೈಹತ್ ಜನರೇಟರ್ ಇವೆ.ವಿದ್ಯುತ್ಗಾಗಿ ಪ್ರತ್ಯೇಕ ಎಂಯು ಸ್ಟೇಷನ್ ಮಾಡಿಕೊಂಡು ಎಕ್ಸ್ಪ್ರೆಸ್ ಲೇನ್ ಮೂಲಕ ಸಫರೇಟ್ ಫೀಡರ್ ವ್ಯವಸ್ಥೆಮಾಡಿಕೊಳ್ಳಲಾಗಿದೆ. ಪ್ರತಿದಿನ ಇನ್ನೂರಕ್ಕೂ ಹೆಚ್ಚು ಕಾಮರ್ಿಕರು ಕೆಲಸಮಾಡುತ್ತಾರೆ. ಹಣವಿದ್ದವರು ಹಸಿರು ಪ್ರೀತಿಗೆ ಒಲಿದರೆ ಎಂತಹ ಬೆಂಗಾಡಿನಲ್ಲೂ ಸಹ್ಯಾದ್ರಿಯನ್ನೇ ಸೃಷ್ಠಿಸಬಹುದು ಎನ್ನುವುದಕ್ಕೆ ರಂಗಸ್ವಾಮಿ ಸಾಕ್ಷಿಯಾಗಿದ್ದಾರೆ.
ಇದಕ್ಕಾಗಿ ಅವರಿಗೆ ಕನರ್ಾಟಕ ಪಶುವೈದ್ಯಕೀಯ,ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾನಿಲಯ 2009ರಲ್ಲಿ ನಡೆದ ಜಾನುವಾರು,ಕುಕ್ಕುಟ,ಮತ್ಸ್ಯಮೇಳದಲ್ಲಿ ಕೃಷಿ ಸಾಧನೆ ಗುರುತಿಸಿ ಅಭಿನಂಧಿಸಿದೆ.2011 ರಲ್ಲಿ ನ್ಯಾಷನಲ್ ಡೈರಿ ಫಾರ್ಮರ್ ಆವಾಡರ್್, ಎರಡು ಬಾರಿ ಕೇಂದ್ರ ತಂಬಾಕು ಮಂಡಳಿ ರಂಗಸ್ವಾಮಿ ಅವರನ್ನು ಗೌರವಿಸಿದೆ. ಬೆಂಗಳೂರಿನ ಫಲದಾ ಆಗ್ಯರ್ಾನಿಕ್ ಸಂಸ್ಥೆಯವರು ಏಲಕ್ಕಿ ತೋಟಕ್ಕೆ ಸಾವಯವ ದೃಢೀಕರಣ ನೀಡಿದ್ದಾರೆ.
ಮಲೆನಾಡು ಪಶ್ಚಿಮ ಘಟ್ಟದವರಿಗೆ ಕಾಡು ಬೆಳೆಸುವುದು ಹೊಸದಲ್ಲ.ಅಲ್ಲಿ ಸಾವಿರಾರು ಎಕರೆಯುಳ್ಳ ಕಾಫಿ ಫ್ಲಾಂಟರ್ ಇರಬಹುದು. ಮರಗಳು ನ್ಯಾಚುರಲ್ ಆಗಿ ಬೆಳೆಯುತ್ತವೆ. ಸಿಲ್ವರ್, ರಬ್ಬರ್, ಅಕೇಶಿಯಾದಂತಹ ಏಕ ಸಸ್ಯ ಜಾತಿಗಳನ್ನು ಬೆಳೆಯಲಾಗುತ್ತದೆ. ಸಮವಸ್ತ್ರಧರಿಸಿ ಕವಾಯತು ಮಾಡುತ್ತಿರುವ ಹಸಿರು ಸೇನೆಯಂತೆ ಕಾಣುತ್ತದೆ. ಆದರೆ ರಂಗಸ್ವಾಮಿ ಅವರು ಬಯಲುನಾಡಿನಲ್ಲಿ ಎಲ್ಲಾ ರೀತಿಯ ಸಸ್ಯವರ್ಗಗಳನ್ನು ಬೆಳೆಯುವ ಮೂಲಕ ಜೀವವೈವಿಧ್ಯತೆಯನ್ನು ಕಾಪಾಡಿಕೊಂಡಿದ್ದಾರೆ. ನವಿಲುಗಳು,ಚಿಟ್ಟೆಗಳು,ಬಣ್ಣ ಬಣ್ಣದ ಹಕ್ಕಿಗಳು, ನೂರಾರು ಬಗೆಯ ಕೀಟಗಳು ಎಲ್ಲವೂ ಇಲ್ಲಿ ಮನೆಮಾಡಿಕೊಂಡಿವೆ.
ಮನುಷ್ಯನ ಹಸ್ತಕ್ಷೇಪವಿಲ್ಲದೆ ನೈಸಗರ್ಿಕ ಕಾಡೊಂದು ಸೃಷ್ಠಿಯಾಗಲು ಕನಿಷ್ಠ 50 ರಿಂದ 100 ವರ್ಷಬೇಕು. ಅನಲಾಗ್ ಫಾರೆಸ್ಟ್ ಎಂದು ಕರೆಯುವ ತದ್ರೂಪಿ ಕಾಡು ಸೃಷ್ಠಿಯಾಲು ಐದಾರು ವರ್ಷಗಳು ಸಾಕು.ಅಂತಹ ಒಂದು ವಿಸ್ಮಯ ಇಲ್ಲಿ ಸಾಕಾರಗೊಂಡಿದೆ.
ಕಾವೇರಿ ನೀರಿಗಾಗಿ ಕದನ ಶುರುವಾಗಿರುವ ಸಂದರ್ಭದಲ್ಲಿ ಸಾಹಿತಿ, ನಾಡಿನ ಸಾಕ್ಷಿ ಪ್ರಜ್ಞೆಯಂತಿರುವ ದೇವನೂರ ಮಹಾದೇವ ಕನ್ನಡ ಪ್ರಭ ಪತ್ರಿಕೆಯಲ್ಲಿ ಲೇಖನ ಬರೆಯುತ್ತಾ "ಹಣ ಇದ್ದವರು ಕಾವೇರಿ ಜಲಾನಯನ ಪ್ರದೇಶದಲ್ಲಿ ಭೂಮಿ ಖರೀದಿಸಿ ಅಲ್ಲಿ ಕಾಡು ಬೆಳೆಸಿದರೆ ಆ ನದಿಗೂ ಒಳ್ಳೆಯದು ಹಾಗೂ ಅವರ ಕೊನೆಗಾಲಕ್ಕೂ ಬರುತ್ತದೆ.ಹಾಗೆಯೇ ಪ್ರಜ್ಞಾವಂತ ಶಿಕ್ಷಕರು ವಿದ್ಯಾಥರ್ಿಗಳಿಂದ ಗಿಡ ಬೆಳೆಸಿ ಮರವಾಗಿಸಿದರೆ ಈ ಕಾರ್ಯ ಸಮೂಹಿಕವಾಗಿ ದೊಡ್ಡದಾಗುತ್ತದೆ" ಎಂದು ಬರೆದಿದ್ದರು. ರಂಗಸ್ವಾಮಿ ಅವರನ್ನು ಕಂಡ ನಮಗೆ ಮಹಾದೇವ ಅವರ ಮಾತುಗಳು ನೆನಪಾಗಿ, ಹಣವಿದ್ದವರೆಲ್ಲಾ ಹೀಗೆ ಮಾಡಿಬಿಟ್ಟರೆ ಅರಣ್ಯ ಇಲಾಖೆಯವರಿಗೆ ಕೆಲಸವೇ ಇರುವುದಿಲ್ಲಾ, ಪರಿಸರ ಸಮತೋಲನ ಸಾಧಿಸುವುದು ಎಷ್ಟೊಂದು ಸುಲಭ ಎನಿಸಿತು.
ತದ್ರೂಪಿ ಕಾಡು : "ಅನಲಾಗ್ ಫಾರೆಸ್ಟ್ ಅಂದರೆ ಕಾಡುತೋಟ. ಶ್ರೀಲಂಕಾ ದೇಶದ ತೋಟಗಾರಿಕೆಯಲ್ಲಿ ಕಳೆದ ಎರಡು ದಶಕಗಳಿಂದ ಸಾಕಾರಗೊಂಡಿರುವ ಹೊಸ ಕಲ್ಪನೆ. ಜಗತ್ತಿನಾದ್ಯಂತ ಹೆಸರು ಮಾಡಿದೆ. ಸುಸ್ಥಿರ ಕೃಷಿಯ ನಿಸರ್ಗ ಸಂಧಾನ.ಕಾಡು ಉಳಿಯಬೇಕು ,ಕೃಷಿಯೂ ಗೆಲ್ಲಬೇಕು ಎನ್ನುವುದು ನಿಸರ್ಗ ಸಂಧಾನ. ಮಣ್ಣಿನ ಜೀವಂತಿಕೆ ಕಾಪಾಡಿಕೊಳ್ಳುವುದರ ಜೊತೆಗೆ ಜೀವ ವೈವಿಧ್ಯಗಳಿಗೂ ಬದುಕಲು ಬಿಡುವುದು. ಬೆಂಗಾಡಿನಲ್ಲಿ ಹಸಿರು ಸಿರಿ ಬೆಳೆಸಬೇಕು. ಶ್ರೀಲಂಕಾದ 22 ಹಳ್ಳಿಯ ರೈತರು 600 ಎಕರೆಯಲ್ಲಿ ಈ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ.ಕಾಡಿನ ಮಾದರಿಯನ್ನು ಅನುಕರಣೆಮಾಡಿ ಕೃಷಿಯಲ್ಲಿ ಸಾಕಷ್ಟು ಸಸ್ಯ ವೈವಿಧ್ಯಬೆಳೆಸಿ, ಆಥರ್ಿಕ ಭದ್ರತೆಯನ್ನು ಸಾಧಿಸಿದ್ದಾರೆ" ಎಂದು ಪರಿಸಿರ ತಜ್ಞ ಶಿವಾನಂದ ಕಳವೆ ಹೇಳುತ್ತಾರೆ.
ಭಾರತ ಸಸ್ಯ ಮತ್ತು ಅರಣ್ಯಗಳ ಜೀವಸಿರಿ. ಆಹಾರ ಮತ್ತು ಅರಣ್ಯ ಎರಡೂ ವಿಷಯಗಳಲ್ಲಿ ಸಮನ್ವಯತೆ ಸಾಧಿಸಿ ರಂಗರಾಜು ಅವರು ಕಟ್ಟಿರುವ ಕಾಡುಕೃಷಿ ತೋಟ ನಮ್ಮ ರೈತರು ಮತ್ತು ಅರಣ್ಯ ಇಲಾಖೆಯ ಕಣ್ಣು ತೆರೆಸಬೇಕು.
ತಂಬಾಕು ಬಿಟ್ಟು ಮರ ಬೆಳೆಸಿದರು : 1995 ರಲ್ಲಿ 150 ಎಕರೆ ಪ್ರದೇಶದಲ್ಲಿ ಎಂಭತ್ತು ಸಾವಿರ ಕೆಜಿ ತಂಬಾಕು ಬೆಳೆದು ಸಾಧನೆ ಮಾಡಿದ್ದರು ರಂಗರಾಜು. ಪರಿಸರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿ ಮರಸುಡುವುದು ಸಾಕು ಎಂದು ತೀಮಾನರ್ಿಸಿ ಸಾವಿರ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟರು.
ಸಸಿನೆಟ್ಟ ಮೂರ್ನಾಲ್ಕು ವರ್ಷ ಅವುಗಳನ್ನು ಕಾಪಾಡಿಕೊಂಡರೆ ನಂತರ ಅವು ಹೆಮ್ಮರಗಳಾಗಿ ಬೆಳೆಯುತ್ತವೆ. ಏನನ್ನೂ ಕೇಳುವುದಿಲ್ಲ.ದೀರ್ಘಕಾಲದಲ್ಲಿ ಅವೆ ಆದಾಯದ ಮೂಲಗಳಾಗುತ್ತವೆ. ನಮ್ಮ ಒಂದೊಂದು ಟೀಕ್ ಮರ ಈಗ 50 ಸಾವಿರ ರೂ.ಬೆಲೆಬಾಳುತ್ತದೆ. ಇದರೊಂದಿಗೆ ಪಶುಸಂಗೋಪನೆ ಮಾಡಿಕೊಂಡರೆ ಒಂದು ಸಣ್ಣ ಕುಟುಂಬ ನೆಮ್ಮದಿಯಾಗಿ ಬದುಕಬಹುದು.ಈಗ ಆಳು ಕಾಳಿನ ಸಮಸ್ಯೆ ಇರುವುದರಿಂದ ಮರ ಬೆಳೆಸುವುದೊಂದೆ ನಮ್ಮಗಿರುವ ಪಯರ್ಾಯ ಮಾರ್ಗ ಎನ್ನುತ್ತಾರೆ ರಂಗಸ್ವಾಮಿ.
ಕಲ್ಲುಗಣಿ ಮಾಡುತ್ತಿರುವ ಪ್ರದೇಶದ ಸುತ್ತಮತ್ತಲಿನ ರೈತರ ಜಮೀನು ಖರೀದಿಸಿರುವ ರಂಗಸ್ವಾಮಿ ಅದನ್ನು ಸಂಪೂರ್ಣ ಗ್ರೀನ್ ಬೆಲ್ಟ್ಆಗಿ ಪರಿವತರ್ಿಸಿದ್ದಾರೆ. ಜಮೀನು ಖರೀದಿಸುವ ರೈತರ ಪುನರ್ವಸತಿಗೂ ವ್ಯವಸ್ಥೆಮಾಡಿ, ಅಂತಹ ರೈತರಿಗೆ ಪಯರ್ಾಯವಾಗಿ ಪ್ರತಿ ಎಕರೆಗೆ ಬದಲಾಗಿ ಬೇರೆ ಕಡೆ ಎರಡು, ಮೂರು ಎಕರೆ ಜಮೀನನ್ನು ಕೊಟ್ಟಿದ್ದಾರೆ. ಕಲ್ಲು ಗಣಿ ಸುತ್ತ ಈಗ ಎರಡೇ ವರ್ಷದಲ್ಲಿ ದೊಡ್ಡ ಕಾಡೊಂದು ತಲೆ ಎತ್ತಿ ನಿಂತಿದೆ.
ತಂಬಾಕು ಬೆಳೆಗೆ ಪಯರ್ಾಯ ಮಾರ್ಗಗಳನ್ನು ಹುಡುಕುತ್ತಿರುವ ಅಧಿಕಾರಿಗಳು ಈಗ ರಂಗಸ್ವಾಮಿ ಅವರ ಕಾಡುಕೃಷಿ ತೋಟಕ್ಕೆ ರೈತರನ್ನು ಕರೆದುಕೊಂಡು ಬಂದು ಅವರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಆಗ್ರೋ ಫಾರೆಸ್ಟ್ ಕಮಿಟಿಯವರು ಬರುತ್ತಿರುತ್ತಾರೆ.
ಅರಣ್ಯ ಇಲಾಖೆಯವರನ್ನ ನಂಬಿ ಸುಮ್ಮನ್ನೆ ನಾವು ಕೂರಬಾರದು.ಯಾವುದೆ ಪ್ರಚಾರವನ್ನೂ ಬಯಸುವುದು ಬೇಡ.ನಮ್ಮಷ್ಟಕ್ಕೆ ನಾವು ಗಿಡಮರಗಳನ್ನು ಬೆಳೆಸುತ್ತಾ ಹೋಗಬೇಕು. ಇದಕ್ಕಾಗಿ ಹಳಬರನ್ನು ನಂಬಿ ಕುಳಿತುಕೊಳ್ಳಬಾರದು, ಹೊಸತಲೆಮಾರಿನ ವಿದ್ಯಾವಂತ ಯುವಕರಿಗೆ ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುವುದನ್ನು ನಾವು ಕಲಿಸಬೇಕು. ಕಾಡು ಬೆಳೆದರೆ ನಾಡು ಬೆಳೆಯುತ್ತದೆ ಎನ್ನುವುದು ರಂಗಸ್ವಾಮಿಯವರ ಅನುಭವದ ಮಾತು.
ಬೆಸ್ಟ್ ಡೈರಿ ಫಾರಂ :180 ಹಸು,50 ಎಮ್ಮೆ ಸಾಕಿರುವ ರಂಗಸ್ವಾಮಿ ಅವರು ಪ್ರತಿದಿನ 400 ಲೀಟರ್ ಹಾಲು ಉತ್ಪಾದಿಸುತ್ತಾರೆ. ತಿರುಮಲ ಡೈರಿ ಎಂಬ ಖಾಸಗಿ ಡೈರಿಯವರು ತೋಟದ ಬಳಿಯೆ ಬಂದು ಪ್ರತಿ ಲೀಟರ್ ಹಾಲಿಗೆ ಮಾರುಕಟ್ಟೆ ದರಕ್ಕಿಂತ 2 ರೂ ಹೆಚ್ಚಿಗೆ ಕೊಟ್ಟು ಖರೀದಿಸುತ್ತಾರೆ. ಪಶುಪಾಲನೆಗೆ 50 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಮೇವಿನ ಹುಲ್ಲು ಮತ್ತು ಮುಸುಕಿನ ಜೋಳ ಬೆಳೆದುಕೊಂಡಿದ್ದಾರೆ. ಪ್ರತಿ ದಿನ ಒಂದು ಲೋಡ್ ಟ್ರ್ಯಾಕ್ಟರ್ ಹುಲ್ಲು ದನಗಳಿಗೆ ಬೇಕಾಗುತ್ತದೆ. ದನಗಳ ತಿರುಗಾಟಕ್ಕೆ ಒಂದೆರಡು ಎಕರೆಯ ಸುತ್ತಾ ಬೇಲಿನಿಮರ್ಾಣ ಮಾಡಿ ವ್ಯವಸ್ಥೆ ಕಲ್ಪಿಸಲಾಗಿದೆ.
ದನಗಳಿಂದ ಬರುವ ಸಗಣಿಯಿಂದ ಜೈವಿಕ ಅನಿಲ ಉತ್ಪಾದನೆ ಘಟಕವನ್ನು ಸ್ಥಾಪಿಸಿಕೊಂಡಿದ್ದು ಅದರಿಂದ ದೊರೆಯುವ ಸ್ಲರಿಯನ್ನು ಗಂಜಲ ಮತ್ತು ಅಡಿಕೆ ಸಿಪ್ಪೆಯ ಜೊತೆ ಮಿಕ್ಸ್ ಮಾಡಿ ಕೊಳೆಸಿ ತೋಟಕ್ಕೆ ಬಳಸುತ್ತಾರೆ. ಅತ್ಯುತ್ತಮ ಡೈರಿ ನಿರ್ವಹಣೆಗಾಗಿ 2011 ರಲ್ಲಿ ರಾಷ್ಟ್ರೀಯ ಡೈರಿ ಆವಾಡರ್್ ರಂಗಸ್ವಾಮಿ ಅವರಿಗೆ ಸಂದಿದೆ.
ಬ್ರೆಜಿಲ್ ಮಾದರಿ ಕಾಫಿ: ತಾಳೆ ಗಿಡಗಳನ್ನು ಹಾಕಿ ಐದಾರು ವರ್ಷಗಳು ಆಗಿದೆ. ಇಳುವರಿ ಕಡಿಮೆಯಾಗಿ ಆದಾಯ ಕಡಿಮೆ ಇದೆ. ಅದಕ್ಕಾಗಿ ಎರಡು ತಾಳೆಗಿಡಗಳ ನಡುವೆ ಕಾಫಿಗಿಡಗಳನ್ನು ಹಾಕಲು ಯೋಚಿಸುತ್ತಿದ್ದೇವೆ.
ಬ್ರೆಜಿಲ್ ಮಾದರಿಯಲ್ಲಿ ರೋಬಸ್ಟಾ ಕಾಫಿ ಗಿಡಗಳನ್ನು ಹಾಕಲು ಸಿದ್ಧತೆಮಾಡಿಕೊಂಡಿದ್ದೇವೆ. ಸಾಲಿನಿಂದ ಸಾಲಿಗೆ 14 ಅಡಿ, ಗಿಡದಿಂದ ಗಿಡಕ್ಕೆ 4 ಅಡಿ ಅಂತರದಲ್ಲಿ ಗಿಡಗಳನ್ನು ಹಾಕಿದರೆ ತೋಟದಲ್ಲಿ ವಾಹನ ಓಡಾಡಲು, ಯಂತ್ರಗಳಿಂದ ಕೆಲಸಮಾಡಲು, ಕೊಯ್ಲುಮಾಡಲು ಅನುಕೂಲವಾಗುತ್ತದೆ ಎಂದು ಹೇಳುವಾಗ ರಂಗಸ್ವಾಮಿಯವರ ಕೃಷಿಯ ಜ್ಞಾನ,ತೋಟದಲ್ಲಿ ಏನೇ ಮಾಡಬೇಕಾದರೂ ಚಿಂತಿಸಿ, ಯೋಜಿಸಿ ಮಾಡುವುದು ಎದ್ದು ಕಾಣುತ್ತಿತ್ತು.
ಮಾರುಕಟ್ಟೆಗೆ ಹೋಗುವುದಿಲ್ಲ : ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಮೆಣಸು, ಏಲಕ್ಕಿ, ಕೋಕೋ,ಅಡಿಕೆ,ತೆಂಗು, ಕಾಫಿ ಮತ್ತಿತರ ಬೆಳೆಗಳನ್ನು ಬೆಳೆಯುವ ರಂಗಸ್ವಾಮಿ ಎಂದೂ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುವುದಿಲ್ಲ.
ಬೆಂಗಳೂರಿನ ನೈಸಗರ್ಿಕ ಫಲದಾ ಸಂಸ್ಥೆಯವರು ಮತ್ತು ಬೇರೆ ವ್ಯಾಪಾರಿಗಳು ತೋಟಕ್ಕೆ ಬಂದು ಮಾಲನ್ನು ಖರೀದಿಸುತ್ತಾರೆ. ಒಳ್ಳೆಯ ಪದಾರ್ಥ ನಮ್ಮ ಬಳಿ ಇದೆ ಅಂತ ಗೊತ್ತಾದರೆ ವ್ಯಾಪಾರಸ್ಥರು ನಮ್ಮ ಬಳಿಯೆ ಬರುತ್ತಾರೆ ಎನ್ನುವುದು ರಂಗಸ್ವಾಮಿ ಅವರು ಕಂಡುಕೊಂಡಿರುವ ಸತ್ಯ.
ಅಡಿಕೆ, ತೆಂಗು,ಮೆಣಸು ಮತ್ತಿತರ ಗಿಡಗಳನ್ನು ತಾವೇ ಸ್ವತಃ ನರ್ಸರಿ ಮಾಡಿಕೊಳ್ಳುವ ಇವರು ಅಪರೂಪದ ಗಿಡಗಳನ್ನು ಮಾತ್ರ ಹೊರಗಿನಿಂದ ತರುತ್ತಾರೆ. ನಾವು ತೋಟಕ್ಕೆ ಹೋಗಿದ್ದಾಗ ಸಾವಿರಾರು ರಕ್ತ ಚಂದನ ಗಿಡಗಳನ್ನು ನೆಡಲು ತಯಾರಿ ನಡೆದಿತ್ತು. ಐದುನೂರು ಎಕರೆ ಪ್ರದೇಶವನ್ನು ಜೀಪಿನಲ್ಲಿ ಸುತ್ತಾಡುತ್ತಾ ಪ್ರತಿ ಗಿಡಮರಗಳ ಬಗ್ಗೆಯೂ ಅಕ್ಕರೆಯಿಂದ ವಿವರಣೆ ನೀಡಿದ ರಂಗಸ್ವಾಮಿ ಅವರ ಕೃಷಿ ಪ್ರೀತಿ ಮತ್ತು ಅವರ ಸರಳತೆ,ಸಜ್ಜನಿಕೆ ತದ್ರೂಪಿ ಕಾಡು ಬಿಟ್ಟು ಹೊರಬಂದರೂ ನಮ್ಮನ್ನು ಬಿಡದೆ ಬಹು ಕಾಲದವರೆಗೂ ಕಾಡುತ್ತಲೆ ಇತ್ತು. ರಸ್ತೆಯನ್ನು ದಾಟಿದ ನಮ್ಮ ಕಾರು ಗ್ರಾಮಗಳನ್ನು ಪ್ರವೇಶಿಸುತ್ತಿದ್ದಂತೆ ಅಲ್ಲಲ್ಲಿ "ಗಿಡ ಮರ ಬೆಳಸಿ ಕಾಡು ಉಳಿಸಿ "ಎಂಬ ಕೃಷಿ ಮತ್ತು ಅರಣ್ಯ ಇಲಾಖೆಯ ಗೋಡೆ ಬರಹಗಳು ಕಣ್ಣಮುಂದೆ ಹಾದುಹೋದವು.ಪರಿಸರವಾದಿಗಳ ಭೀರಕ ಭಾಷಣಗಳು ನೆನಪಾದವು.ಯಾವುದೆ ಪ್ರಚಾರ,ಸನ್ಮಾನ, ಗೌರವಗಳಿಂದ ದೂರವೆ ಉಳಿದು ಲಕ್ಷ ಲಕ್ಷ ಸಂಖ್ಯೆಯಲ್ಲಿ ಗಿಡಮರ ಬೆಳೆಸುತ್ತಿರುವ ರಂಗಸ್ವಾಮಿ ಅಂತವರ ಸಂತತಿ ಹೆಚ್ಚಾಗಲಿ. ನಾಡಿನ ಯುವಕರು ತದ್ರೂಪಿ ಕಾಡು ಬೆಳೆಸಲು ಮುಂದಾಗಲಿ ಎಂದುಕೊಂಡು ಭವ್ಯವಾದ ವನಸಿರಿಯನ್ನು ನೋಡಿದ ತೃಪ್ತಿಯೊಂದಿಗೆ ಹೊರಬಂದೆವು. ಆಸಕ್ತರು ರಂಗಸ್ವಾಮಿ 9980126555 ಸಂಪಕರ್ಿಸಬಹುದು.