"ಪಂಚವಟಿ"ಯ ಆದರ್ಶದ ಬದುಕು : ಕೃಷಿಯಲ್ಲೆ ಖುಷಿ
ಸಾವಯವ ಕೃಷಿಗೆ ಜೈ, ನೌಕರಿಗೆ ಬೈ ಎಂದ ಸಾಫ್ಟ್ವೇರ್ ಉದ್ಯೋಗಿ ಮಧು
ಎಚ್.ಡಿ.ಕೋಟೆ : ಸಾಫ್ಟ್ವೇರ್ ಕಂಪನಿಗಳಲ್ಲಿ ಕೆಲಸಮಾಡುತ್ತಿದ್ದಾಗ ಉಂಟಾಗುತ್ತಿದ್ದ ಆಥರ್ಿಕ ಕುಸಿತ ಆಗಾಗ ನಿದ್ದೆಗೆಡಿಸುತ್ತಿತ್ತು. ಏನಾದರೂ ಪರ್ಮನೆಂಟ್ ಕೆಲಸ ಇರುವ ಉದ್ಯೋಗ ಮಾಡಬೇಕು ಅಂತ ಆಲೋಚಿಸುತ್ತಿದ್ದೆ. ಆರೋಗ್ಯ, ನೆಮ್ಮದಿ, ವಿರಾಮ ಸಿಗುವಂತಹ ಕೆಲಸ ಅಂತ ಇದ್ರೆ ಅದು ಕೃಷಿ ಅನಿಸಿತು. ಹಾಗಾಗಿ ಇಷ್ಟಪಟ್ಟು, ತುಂಬಾ ಪ್ರೀತಿಯಿಂದ ಕೃಷಿ ಮಾಡುತ್ತಾ ಖುಷಿಯಾಗಿ ಹಸಿರಿನ ನಡುವೆ ನೆಮ್ಮದಿಯಾಗಿದ್ದೇನೆ ಎಂದರು ಸಾಫ್ಟ್ವೇರ್ ಕಂಪನಿಯ ಮಾಜಿ ಉದ್ಯೋಗಿ, ಹಾಲಿ ಪುಲ್ ಟೈಂ ಕೃಷಿಕ ಎಸ್.ಮಧು ಅಯ್ಯಂಗಾರ್.
ಸಂತೆಸರಗೂರಿನ ಶ್ರೀನಿವಾಸ ಅಯ್ಯಂಗಾರ್ ಮತ್ತು ಸರೋಜ ಅವರ ಮಗನಾದ ಮಧು ಹದಿನೈದು ವರ್ಷಗಳ ಕಾಲ ವಿಪ್ರೋ,ಮೈಂಡ್ ಟ್ರೀ,ಎಚ್ಸಿಎಲ್ ಕಂಪೆನಿಗಳಲ್ಲಿ ಲಂಡನ್, ಅಮೇರಿಕಾ,ಆಸ್ಟ್ರೇಲಿಯಾ ಸೇರಿದಂತೆ ವಿವಿಧ ಕಡೆ ಕೆಲಸ ಮಾಡಿದ್ದಾರೆ. ಎಲ್ಲವನ್ನೂ ಸುತ್ತಿ ಕೊನೆಗೆ ಅವರು ಕಂಡುಕೊಂಡದ್ದು ಮಣ್ಣಿನಲ್ಲಿ ಸುಖವಿದೆ ಎಂಬ ಸರಳ ಸತ್ಯ. ಹಾಗಾಗಿಯೆ ಅವರು ಪ್ರತಿ ತಿಂಗಳು ಲಕ್ಷ ಲಕ್ಷ ರೂಪಾಯಿ ಸಂಬಳ ತಂದುಕೊಡುತಿದ್ದ ಉದ್ಯೋಗವನ್ನು ಬಿಟ್ಟು ಎಚ್.ಡಿ.ಕೋಟೆ ತಾಲೂಕಿನ ಚಿಕ್ಕ ಕೆರೆಯೂರು ಎಂಬ ಹಳ್ಳಿಯಲ್ಲಿರುವ "ಪಂಚವಟಿ" ಎಂಬ ಸಸ್ಯಕಾಶಿಯ ನಡುವೆ ಮೆಚ್ಚಿನ ಮಡದಿ ಶ್ರೀ ವಿದ್ಯಾ,ಮುದ್ದಿನ ಮಗಳು ವೈಷ್ಣವಿ ಜೊತೆ ನೈಸಗರ್ಿಕ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.ತಮ್ಮನ್ನು ಭೇಟಿ ಮಾಡಲು ಬರುವ ಸಮಾನ ಮನಸ್ಕ ಗೆಳೆಯರ ಜೊತೆ ಚಚರ್ಿಸುತ್ತಾ, ತಮಾಷೆ ಮಾಡುತ್ತಾ, ಗೇಲಿ ಮಾಡುತ್ತಾ ನೂರಾರು ವೈವಿಧ್ಯಮಯ ಗಿಡಗಳೊಂದಿಗೆ ಮಾತನಾಡುತ್ತಾ ನೆಮ್ಮದಿಯ ಜೀವನ ಕಂಡುಕೊಂಡಿದ್ದಾರೆ. ಪಂಚವಟಿಯಲ್ಲಿರುವ ಅವರ ಮನೆ, ಜೀವನ ಶೈಲಿ ಸರಳತೆಯ ಬಗ್ಗೆ ಮಾತನಾಡುವ ಚಿಂತಕರಿಗಿಂತ ಅವರನ್ನು ಭಿನ್ನವಾಗಿಸಿದೆ. "ಪಂಚವಟಿ" ಎಂಬ ಫೇಸ್ ಬುಕ್ ಪೇಜ್ನಲ್ಲಿಯೂ ಅವರ ತೋಟದ ಮಾಹಿತಿಗಳ ಅಫ್ಡೆಟ್ ನೋಡಬಹುದು.
ನಗರದಿಂದ ಹಳ್ಳಿಗೆ ವಾರಕ್ಕೊಮ್ಮೆ ಹೋಗಿ ವ್ಯವಸಾಯ ಮಾಡಿಸುವವರು ತುಂಬಾ ಜನ ಇದ್ದಾರೆ. ಆದರೆ ಇವರು ಹಳ್ಳಿಯಿಂದ ನಗರಕ್ಕೆ ವಾರಕ್ಕೊಮ್ಮೆ ತಂದೆ ತಾಯಿ ನೋಡಲು ಬಂದು ಹೋಗುತ್ತಾರೆ. ಹಳ್ಳಿಯಲ್ಲೆ ಟಿವಿ ಇದೆ. ಫ್ರಿಜ್ ಇದೆ,ಫೋನ್,ಇಂಟರ್ನೆಟ್ ಇದೆ, ವಿದ್ಯುತ್ ಮೊದಲಿಗಿಂತ ಇಂಪ್ರೋ ಆಗಿದೆ ಮತ್ಯಾಕೆ ನಗರದಿಂದ ಹಳ್ಳಿಗೆ ಅಲೆಯಬೇಕು.ಇಲ್ಲೆ ಇದ್ದರೆ ಆಗದೆ ಎನ್ನುವ ಮೂಲಕ ಪೇಟೆ ರುಚಿ ಹತ್ತಿಸಿಕೊಂಡಿರುವ ನಮ್ಮ ಹಳ್ಳಿ ಹುಡುಗರ ನಡುವೆ ವಿಭಿನ್ನವಾಗಿ ಕಾಣುತ್ತಾರೆ.
"ಪಂಚವಟಿ"ಯಲ್ಲಿ ಬೇಲಿಯ ಹೂವುಗಳಿವೆ, ಕಾಡಿನ ಗಿಡಗಳಿವೆ, ಚರಂಡಿಯಲ್ಲಿ ಬೆಳೆಯುವ ಕಣ್ಮನ ಸೆಳೆಯುವ ಸಸ್ಯಗಳಿವೆ. ಇದನ್ನೆಲ್ಲಾ ಸುಮ್ಮನೆ ನೋಡಲು ಸುಂದರವಾಗಿ ಕಂಡದ್ದಕ್ಕೆ ತಂದು ಹಾಕಿದ್ದೇನೆ ಎಂದು ನಕ್ಕರು ಮಧು, ಆ ನಗುವಿನಲ್ಲೆ ಪರಿಸರದ ನೂರಾರು ಸೂಕ್ಷ್ಮಗಳನ್ನು ಅವರು ನಮಗೆ ವಿವರಿಸುತ್ತಿರುವಂತೆ ಕಂಡಿತು.
ಅವರ ತೋಟದಲ್ಲೀಗ ಮಲ್ಲಿಕಾ ಸೇರಿದಂತೆ ಹದಿನೈದು ವಿವಿಧ ತಳಿಯ ಮಾವು, ಅಪ್ಪೆ ಮಿಡಿ, 18 ವಿವಿಧ ತಳಿಯ 30 ಹಲಸಿನ ಗಿಡಗಳು, ಏಳು ಬಗೆಯ ನಿಂಬೆ ಗಿಡಗಳು, ದಾಳಿಂಬೆ, ಬೆಟ್ಟದ ನೆಲ್ಲಿ, ನೇರಳೆ, ಬಟರ್ ಪ್ರೂಟ್,ಕೋಕೋ,ಕಾಫಿ,ಅಡಿಕೆ, ಪಪ್ಪಾಯ, 70 ತೆಂಗು ಹೀಗೆ ಹತ್ತು ಹಲವು ವಿವಿಧ ತಳಿಯ ಹಣ್ಣಿನ ಮರಗಿಡಗಳು ಹಸಿರು ಹೊದ್ದು, ಹೂ ಕಾಯಿ ಬಿಟ್ಟು ನಗುತ್ತಿವೆ. ಏಕ ಬೆಳೆ ಬೆಳೆಯುವವರ ನಡುವೆ ಸಸ್ಯ ವೈವಿಧ್ಯತೆಗೆ ಆದ್ಯತೆ ಕೊಟ್ಟಿರುವ ಮಧು ಪ್ರಯೋಗಶೀಲ ರೈತನಂತೆ ಕಾಣುತ್ತಾರೆ.
ಅಮೇರಿಕಾ ಟು ಚಿಕ್ಕ ಕೆರೆಯೂರ್ : 2009 ರಲ್ಲಿ ಅಮೇರಿಕಾದಲ್ಲಿ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸಮಾಡುತ್ತಿದ್ದಾಗ ಆಥರ್ಿಕ ಕುಸಿತ (ರಿಸೇಷನ್) ಕಾಣಿಸಿಕೊಂಡಿತು. ಆಗ ಅಮೇರಿಕಾ ಬಿಟ್ಟು ಬೆಂಗಳೂರಿಗೆ ಬಂದೆ. ಫರ್ಮನೆಂಟ್ ಕೆಲಸ ಅಂತ ಏನಾದರೂ ಮಾಡಬೇಕು ಅಂತ ಮನಸ್ಸು ಹೇಳುತ್ತಿತ್ತು. ಏನೂ ಕೆಲಸ ಮಾಡದೆ ಇರಲು ಸಾಧ್ಯವಾಗುತಿರಲಿಲ್ಲ.ಆಗ ಹೊಳೆದದ್ದು ಬೇಸಾಯ ಎಂಬ ನಿತ್ಯ, ನಿರಂತರ, ಪ್ರಯೋಗಶೀಲವಾಗಿ ತೊಡಗಿಸಿಕೊಳ್ಳಬಹುದಾದ ಕೃಷಿ ಕೆಲಸ. ಅಪ್ಪನಿಗೂ ಅದು ಇಷ್ಟದ ಕೆಲಸವಾಗಿತ್ತು ಆಗಾಗಿ 2010 ರಲ್ಲಿ "ಪಂಚವಟಿ" ಎಂಬ ಹೆಸರಿನಿಂದ ಕರೆಯುವ ಈ ನಾಲ್ಕುವರೆ ಎಕರೆ ಭೂಮಿಯನ್ನು ಖರೀದಿಮಾಡಿದೆವು.
ಮರ್ನಾಲ್ಕು ವರ್ಷಗಳ ಕಾಲ ಬೆಂಗಳೂರಿನಿಂದಲೆ ವಾರಕ್ಕೊಮ್ಮೆ ಜಮೀನಿಗೆ ಬಂದು ಕೃಷಿ ಕೆಲಸ ಮಾಡಿ ಹೋಗುತ್ತಿದ್ದೆ. ತದನಂತರ 2013 ರಲ್ಲಿ ಸಾಫ್ಟ್ವೇರ್ ಕಂಪನಿ ಕೆಲಸಕ್ಕೆ ಸಂಪೂರ್ಣ ಗುಡ್ ಬೈ ಹೇಳಿ ಪುಲ್ ಟೈಂ ಕೃಷಿಕನಾಗಿ ಇಲ್ಲೆ ಉಳಿದುಕೊಂಡು ಕೃಷಿ ಮಾಡುತ್ತಿದ್ದೇನೆ ಎನ್ನುತ್ತಾರೆ ಮಧು.
ಕೃಷಿಯಲ್ಲಿ ದಿಢೀರ್ ಹಣ ಕಾಣಬೇಕು ಅಂದ್ರೆ ಸ್ವಲ್ಪ ಕಷ್ಟ. ಅದಕ್ಕಾಗಿ ಕಾಯುವ ತಾಳ್ಮೆ ಇರಬೇಕು. ಕೃಷಿಯಲ್ಲಿ ಡೈರೆಕ್ಟ್ ಬೆನಿಫಿಟ್ಗಳಿಗಿಂತ ಹೆಚ್ಚಾಗಿ ಇಂಡೈರೆಕ್ಟ್ ಬೆನಿಫಿಟ್ಗಳು ಸಾಕಷ್ಟಿವೆ. ಸಾಕಷ್ಟು ಸಮಯ ಸಿಗುತ್ತದೆ. ಒತ್ತಡ ಅಂತೂ ಇಲ್ಲವೆ ಇಲ್ಲ. ಆರೋಗ್ಯದಲ್ಲಿ ಸುಧಾರಣೆ ಇದ್ದೆ ಇದೆ. ಕುಟುಂಬದ ಜೊತೆ ಹೆಚ್ಚು ಹೆಚ್ಚು ಕಾಲಕಳೆಯಬಹುದು. ಪ್ರತಿದಿನದ ಓಡಾಟ, ಧಾವಂತ ಇರುವುದಿಲ್ಲ. ಒಳ್ಳೆಯ ಗಾಳಿ, ನೀರು, ನಿಶ್ಯಬ್ಧ ಎಲ್ಲವೂ ದಾರಾಳವಾಗಿ ಸಿಗುತ್ತವೆ. ಹಿಂದೆಲ್ಲ ಇವು "ಟೇಕನ್ ಫಾರ್ ಗ್ರಾಂಟೆಡ್" ಥರ ಆಗಿತ್ತು. ಈಗ ಹಣ ಕೊಟ್ಟು ಖರೀದಿಸಬೇಕಾದ ಸರಕುಗಳಾಗಿಬಿಟ್ಟಿವೆ ಎಂದು ಕೃಷಿಯಿಂದ ಆಗಬಹುದಾದ ಪ್ರಯೋಜನಗಳ ಬಗ್ಗೆ ಪಟ್ಟಿಕೊಡುತ್ತಾರೆ.
ಪ್ರತಿಯೊಬ್ಬರಿಗೂ ಒತ್ತಡದ ಬದುಕು ಸಾಕಾಗಿರುತ್ತದೆ. ನೆಮ್ಮದಿಯ, ಸರಳ ಜೀವನ ಬೇಕಾಗಿರುತ್ತದೆ.ಬಹುಶಃ ಒತ್ತಡ ರೀಚ್ ಆದ ಮೇಲೆ ಈ ರೀತಿಯ ಕೃಷಿ ಖುಷಿ ಬದುಕಿನ ಬಗ್ಗೆ ಆಲೋಚಿಸಿ ಮರಳಿ ಮಣ್ಣಿನ ಸೆಳೆತಕ್ಕೆ ಒಳಗಾಗಬಹುದು ಎನ್ನುವುದು ಮಧು ಅವರ ನುಡಿ.
ಹಸಿರು ಕಾಡಾದ ಬಯಲು : 2011 ರಲ್ಲಿ ಜಮೀನು ಖರೀದಿಸಿದಾಗ ಇದೊಂದು ಬಯಲು ಪ್ರದೇಶ. ಇಲ್ಲಿ ಯಾವುದೆ ಗಿಡಮರಗಳು ಇರಲಿಲ್ಲ. ಒಂದು ಬೋರ್ವೆಲ್ ಇತ್ತು.ಮೊದಲ ಒಂದು ವರ್ಷ ಸವರ್ೇ, ಬೇಲಿ ಹಾಕಿಸುವುದರಲ್ಲೆ ಕಳೆದು ಹೋಯ್ತು. 2011 ರಲ್ಲಿ 1000 ಅಂಗಾಂಶ ಕೃಷಿಯ ಜಿ9 ತಳಿಯ ಪಚ್ಚಬಾಳೆ ಹಾಕಿದೆ. ಈಗಲೂ ಅದೇ ಪಚ್ಚಬಾಳೆ ಗಿಡಗಳೆ ತೋಟದಲ್ಲಿರುವುದು.ಆರು ವರ್ಷದ ಕೂಳೆ ಬೆಳೆ ಇನ್ನೂ ಗೊನೆ ಬರುತ್ತಿದೆ. 2012 ರಲ್ಲಿ ಮತ್ತೆ 1000 ಏಲಕ್ಕಿ ಬಾಳೆ, ಸ್ವಲ್ಪ ನಂಜನಗೂಡು ರಸಬಾಳೆ ಹಾಕಿದೆ. ಮಧ್ಯೆ ನುಗ್ಗೆ ಹಾಕಿದ್ದೆ. ಮೂರು ವರ್ಷ ಬೆಳೆದೆ. ಒಳ್ಳೆಯ ಆದಾಯವೂ ಬಂತು. ನಂತರ ಏಲಕ್ಕಿ ಮತ್ತು ರಸಬಾಳೆಯನ್ನು ತೆಗೆದುಬಿಟ್ಟೆ. ರಸಬಾಳೆಯನ್ನು ಪ್ರತಿ ಎರಡು ವರ್ಷಕ್ಕೆ ಒಂದು ಸಲ ಜಾಗ ಬದಲಿಸಿ ಹಾಕಬೇಕಂತೆ, ಆಗ ಅದು ನನಗೆ ಗೊತ್ತಿರಲಿಲ್ಲ. ಬಾಳೆ ತೋಟದಲ್ಲಿ ಹಾಕಿದ್ದ ನುಗ್ಗೆಗಿಡಗಳು ಮಾತ್ರ ಮರವಾಗಿ ಈಗಲೂ ಇರುವುದನ್ನು ನೀವು ಕಾಣಬಹುದು.
ಉಳುಮೆ ಇಲ್ಲ : ಬಾಳೆ ಹಾಕಿದ ಸಮಯದಲ್ಲಿ ಗಿಡಗಳಿಗೆ ನೀರು ಕೊಡಲು ಸ್ಪಿಂಕ್ಲರ್ ಅಳವಡಿಸಿಕೊಂಡಿದ್ದೆ.ಸಾವಯವ ಮತ್ತು ನೈಸಗರ್ಿಕ ಕೃಷಿ ಮಾಡುವವರು ಸ್ಪಿಂಕ್ಲರ್ ಅಳವಡಿಸಿಕೊಳ್ಳುವುದೆ ಉತ್ತಮ. ಜೊತೆಗೆ ಬಾಳೆಯ ತೋಟದಲ್ಲಿ 12 ಅಡಿಗೆ ಒಂದು ಟ್ರಂಚ್ ತೆಗೆದಿದ್ದೆವು. ಇಲ್ಲಿನ ಟ್ರಂಚ್ ಕೆಲಸ ನಾನು ಮತ್ತು ತೋಟದಲ್ಲಿ ನನ್ನೊಂದಿಗೆ ಕೆಲಸಮಾಡುವ ಶಿವರಾಜು ಇಬ್ಬರೆ ಸೇರಿ ಮಾಡಿದ್ದು. ಎದುರು ಕಾಣುವ ತೋಟ ಶಿವರಾಜು ಅವರದ್ದೆ, ನಮಗೆ ಅಗತ್ಯ ಬಿದ್ದಾಗ ಅವರು ನಮ್ಮ ತೋಟದಲ್ಲೂ ಬಂದು ಕೆಲಸ ಮಾಡಿಕೊಡುತ್ತಾರೆ. ಕೂಲಿ ಆಳನ್ನಾಗಲಿ, ಯಂತ್ರವನ್ನಾಗಲಿ ನಾವು ಬಳಸಿ ಕೆಲಸಮಾಡಲಿಲ್ಲ ಎಂದು ನಮ್ಮ ಮುಖವನ್ನೊಮ್ಮೆ ಹುಸಿನಗೆಯೊಂದಿಗೆ ನೋಡಿದರು ಮಧು. ಸಣ್ಣಪುಟ್ಟ ತೋಟದ ಕೆಲಸಗಳಿಗೂ ಆಳಿನ ಮೊರೆ ಹೋಗುವ ನಮ್ಮ ರೈತರ ನಡುವೆ ಈ ಮಾಜಿ ಸಾಫ್ಟ್ವೇರ್ ಉದ್ಯೋಗಿಯ ಹುಸಿನಗೆ ಬದುಕಿನ ಸರಳ ಸತ್ಯಗಳನ್ನು ನಮಗೆ ಹೇಳುತ್ತಿರುವಂತೆ ಕಂಡಿತು.
2013 ರಿಂದ ಬಾಳೆಯ ತೋಟದ ನಡುವೆ ಅಲ್ಲಲ್ಲಿ ತೆಂಗು ,ನಿಂಬೆ, ಮಾವು, ನೇರಳೆ, ಹಲಸು ಮತ್ತಿತರ ಹಣ್ಣಿನ ಗಿಡಗಳನ್ನು ಹಾಕಿದೆವು. ಬಾಳೆ ಹಾಕಿದ ನಂತರ ತೋಟವನ್ನು ಉಳುಮೆ ಮಾಡಿಲ್ಲ. ಕಳೆ ಕೀಳುವುದಿಲ್ಲ. ತೋಟದಲ್ಲಿ ಬರುವ ಕಳೆ ಗಿಡಗಳನ್ನು ಕೊಚ್ಚಿ ಭೂಮಿಗೆ ಹೊದಿಕೆಯಾಗಿ ಮಾಡಲಾಗುತ್ತದೆ. ಇದರಿಂದ ಭೂಮಿಯಲ್ಲಿ ತೇವಾಂಶ ಕಾಪಾಡಿಕೊಳ್ಳಲು ನೆರವಾಗುತ್ತದೆ ಎಂದರು.
ಜೀವಾಮೃತ ಎಂಬ ಮ್ಯಾಜಿಕ್ : ತೋಟ ಕಟ್ಟುವ ಮೊದಲು ಮಧು ಕಟ್ಟೆಮಳಲವಾಡಿಯ ಎ.ಪಿ.ಚಂದ್ರಶೇಖರ್ ಅವರ ಇಂದ್ರಪ್ರಸ್ಥ, ಪಿರಿಯಾಪಟ್ಟಣದ ಕುಳ್ಳೇಗೌಡ ಅವರ ನೈಸಗರ್ಿಕ ತೋಟಗಳಿಗೆ ಭೇಟಿ ನೀಡಿ ಅವರಿಂದ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಪಡೆದಿದ್ದಾರೆ. ಆ ತೋಟಗಳಿಂದ ಸ್ಪೂತರ್ಿ ಪಡೆದು ಹೊಸ ಮಾದರಿಯ ತೋಟವನ್ನೆ ಕಟ್ಟಿದ್ದಾರೆ.ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಕೃಷಿಗೆ ಸಂಬಂಧಿಸಿದ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿ ಬಳಸಿಕೊಂಡಿದ್ದಾರೆ.
ಇಲ್ಲಿ ಮಧು ಜಮೀನು ಖರೀದಿಸುವ ಮೊದಲು ರಾಸಾಯನಿಕ ಕೃಷಿಯನ್ನೆ ಮಾಡಲಾಗುತ್ತಿತ್ತು. ಇವರು ಖರೀದಿಸಿದ ನಂತರ ರಾಸಾಯನಿಕ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆರಂಭದ ಮೂರು ವರ್ಷ ಜೀವಾಮೃತವನ್ನು ನೀಡಲಾಗಿದೆ. ಅದಕ್ಕಾಗಿ ತೋಟದ ಅಲ್ಲಲ್ಲಿ 250 ಲೀಟರ್ ಸಾಮಥ್ರ್ಯದ ಪ್ಲಾಸ್ಟಿಕ್ ಡ್ರಮ್ ಇಟ್ಟು ಜೀವಾಮೃತ ತಯಾರಿಸಿಕೊಂಡು ಹದಿನೈದು ದಿನಕ್ಕೆ ಒಮ್ಮೆ ಭೂಮಿಗೆ ಚೆಲ್ಲಿ ನಂತರ ಸ್ಪಿಂಕ್ಲರ್ನಲ್ಲಿ ನೀರು ಕೊಡಲಾಗುತ್ತಿತ್ತು.
ಈಗ ಜೀವಾಮೃತವನ್ನು ನಿಲ್ಲಿಸಲಾಗಿದೆ. ಇಡೀ ತೋಟ ಹಸಿರು ಕಾಡಿನಂತೆ ಕಾಣುತ್ತದೆ,ಯಾವ ಕೃಷಿ ತ್ಯಾಜವನ್ನು ಜಮೀನಿನಿಂದ ಹೊರಗೆ ಹಾಕುವುದಿಲ್ಲ ಅದು ಅಲ್ಲೆ ಗೊಬ್ಬರವಾಗಿ ಕೊಳೆಯುತ್ತದೆ. ಭುಮಿಯಲ್ಲಿ ಎರೆಹುಳುವಿನ ಸಂಖ್ಯೆ ಹೆಚ್ಚಾಗಿದೆ. ಒಟ್ಟಾರೆ ಭೂಮಿ ಹಾಸಿಗೆಯಂತಾಗಿದೆ.ನಾಲ್ಕು ಹಸುಗಳನ್ನು ಸಾಕಿಕೊಂಡಿದ್ದು ಸಗಣಿ, ಗಂಜಲವನ್ನು ಕೃಷಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ.
ಅರ್ಧ ಎಕರೆ ಪ್ರದೇಶವನ್ನು ಮಾತ್ರ ಉಳುಮೆ ಮಾಡಲಾಗುತ್ತದೆ. ಅಲ್ಲಿಂದ ಮನೆಗೆ ಬೇಕಾದ ರಾಗಿ, ಸಜ್ಜೆ, ಅರಿಶಿನ, ತರಕಾರಿ ಥರದ ಬೆಳೆಗಳನ್ನು ಬೆಳೆದುಕೊಳ್ಳುತ್ತಾರೆ.
ಮಾರುಕಟ್ಟೆ ಹೇಗೆ? : ನಾವು ನೈಸಗರ್ಿಕವಾಗಿ ಬೆಳೆದ ಉತ್ಪನ್ನಗಳನ್ನು ಸಾಮಾಜಿಕ ಜಾಲತಾಣ ಬಳಸಿಕೊಂಡು ಗೆಳೆಯರಿಗೆ, ಗೊತ್ತಿರುವ ಮನೆಗಳಿಗೆ ಮಾರಾಟ ಮಾಡುತ್ತೇವೆ. ಅಲ್ಲದೆ ಹೆಚ್ಚಿಗೆ ಬೆಳೆದು ಮಾರುಕಟ್ಟೆ ಸಮಸ್ಯೆ ಸುಳಿಗೆ ಸಿಲುಕಬಾರದು ಎಂಬ ದೃಷ್ಠಿಯಿಂದ ಯಾವುದನ್ನು ದೊಡ್ಡ ಪ್ರಮಾಣದಲ್ಲಿ ನಾವು ಹಾಕಿಕೊಂಡಿಲ್ಲ. ಎಲ್ಲಾ ರೀತಿಯ ಹಣ್ಣಿನ ಗಿಡಗಳನ್ನು ಕಡಿಮೆ ಸಂಖ್ಯೆಯಲ್ಲಿ ಹಾಕಿಕೊಂಡಿದ್ದೇವೆ ಎನ್ನುತ್ತಾರೆ ಮಧು.
ನಾಲ್ಕುವರೆ ಎಕರೆ ಪ್ರದೇಶದ ತೋಟವನ್ನು ನಾಲ್ಕು ವಿಭಾಗಗಳನ್ನಾಗಿ ಮಾಡಿಕೊಂಡಿದ್ದೇವೆ. ಮೊದಲ ಪ್ಲಾಟ್ನಲ್ಲಿ ಮಳೆ ಆಶ್ರಯದಲ್ಲಿ ಬೆಳೆಯುವ, ಹದಿನೈದು ಇಪ್ಪತ್ತು ದಿನಕ್ಕೆ ಒಮ್ಮೆ ಮಾತ್ರ ನೀರು ಬೇಡುವ ಮಾವು, ನೆಲ್ಲಿ,ದಾಳಿಂಬೆ,ಸೀತಾಫಲ,ನೇರಳೆ ಅಂತಹ ಒಣಭೂಮಿ ತೋಟಗಾರಿಕಾ ಬೆಳೆ ಹಾಕಿದ್ದೇವೆ.
ಎರಡನೇ ಪ್ಲಾಟ್ನಲ್ಲಿ ವಾರಕ್ಕೆ ಒಮ್ಮೆ ನೀರು ಕೇಳುವ ನಿಂಬೆ,ಸೀಬೆ, ದಿವಿ ಹಲಸು,ಅಮಟೆ ಕಾಯಿ ಮತ್ತಿತರ ಗಿಡಗಳಿವೆ. ಮೂರನೆ ಪ್ಲಾಟ್ನಲ್ಲಿ ಬಾಳೆಜೊತೆ ಕಿತ್ತಳೆ,ಮೊಸಂಬಿ,ತೆಂಗು,ಈರಳೆ,ಕಾಫಿ,ಕೊಕೊ ಇದೆ. ಇವುಗಳಿಗೆ ಆಗಾಗ ನೀರು ಕೊಡುತ್ತೇವೆ. ಮೊನ್ನೆ ಅರ್ಧಗಂಟೆ ಸಾಧಾರಣ ಮಳೆ ಆಯಿತು ಹದಿನೈದು ದಿನ ಯಾವ ಗಿಡಗಳಿಗೂ ನೀರು ಕೊಡಬೇಕಾಗಿಲ್ಲ ಎನ್ನುತ್ತಾರೆ.
ಮೈಸೂರು ಮಾದಪುರ ರಸ್ತೆಯಲ್ಲಿ ಬಲಕ್ಕೆ ತಿರುಗಿದರೆ ನಾಲ್ಕುವರೆ ಕಿ.ಮೀ ಕ್ರಮಿಸಿದರೆ ಚಿಕ್ಕ ಕೆರೆಯೂರು ಸಿಗುತ್ತದೆ. ಗದ್ದಿಗೆ ಕಡೆಯಿಂದ ಎಚ್.ಡಿ.ಕೋಟೆ ಕಡೆಗೆ ಹೋಗುವ ಮಾರ್ಗದಲ್ಲಿ 5 ಕಿ.ಮೀ.ಕ್ರಮಿಸಿದರೆ "ಪಂಚವಟಿ" ತೋಟ ಸಿಗುತ್ತದೆ, ಆಸಕ್ತರು ಎಸ್.ಮಧು ಅಯ್ಯಂಗಾರ್ ಅವರನ್ನು 9972047284 ಸಂಪಕರ್ಿಸಬಹುದು.
ಇಂಥವರ ಸಂತತಿ ಹೆಚ್ಚಲಿ........!
ಪ್ರತ್ಯುತ್ತರಅಳಿಸಿಇಂಥವರ ಸಂತತಿ ಹೆಚ್ಚಲಿ........!
ಪ್ರತ್ಯುತ್ತರಅಳಿಸಿ