ಮೊಲ ಸಾಕಾಣಿಕೆ :ಸ್ವಾವಲಂಬನೆಯ
ಹಾದಿಹಿಡಿದ ಸ್ವಾಭಿಮಾನಿ ಯುವಕ
ನಂಜನಗೂಡು : ಕುಡಿಯುವ ನೀರಿಗೆ ಹಾಹಾಕಾರ. ಎತ್ತನೋಡಿದರೂ ಬಟಾಬಯಲು. ಬತ್ತಿದ ಕೆರೆಕಟ್ಟೆಗಳು.ಕುಸಿದ ಅಂತರ್ಜಲ. ಏರುತ್ತಿರುವ ತಾಪಾಮಾನ.ಒಣಗಿನಿಂತ ಮರಗಿಡಬಳ್ಳಿಗಳು. ಮಳೆಯ ನಿರೀಕ್ಷೆಯಲ್ಲಿರುವ ರೈತರು. ಇದು ಈಗ ನಮಗೆ ಎಲ್ಲೆಡೆ ಕಾಣುತ್ತಿರುವ ಸಧ್ಯದ ಸ್ಥಿತಿಗತಿ.
ಇಂತಹ ಸಂಕಷ್ಟದ ಸಮಯದಲ್ಲೂ ಅಲ್ಲಲ್ಲಿ ಸಹಜಕೃಷಿಯಲ್ಲಿ ಬೇಸಾಯ ಮಾಡುತ್ತಿರುವ ರೈತರ ತೋಟಗಳು ಮಾತ್ರ ಹಸಿರಾಗಿರುವುದನ್ನು ನೀವು ಗಮನಿಸಿರಬಹುದು.ಕೃಷಿಯ ಜೊತೆ ಉಪಕಸುಬುಗಳನ್ನು ಜೋಡಿಸಿಕೊಂಡಿರುವ ರೈತರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುತ್ತಿದ್ದಾರೆ. ಹೊಸದಾಗಿ ಕೃಷಿಕರಾಗುವ ಆಸೆಯಿಂದ ಬೇಸಾಯಮಾಡಲು ಬಂದ ಅನೇಕರು ಬರದಿಂದ ಪರಿತಪಿಸುವಂತಾಗಿದೆ. ಕೆಲವರು ಮಾತ್ರ ತಮ್ಮ ಜಾಣ್ಮೆ ಮತ್ತು ಪರಿಶ್ರಮದಿಂದ ಕೃಷಿಯಲ್ಲೂ ಖುಶಿಕಾಣುತ್ತಿದ್ದಾರೆ.
ಅಂತಹವರ ಪೈಕಿ ಕೃಷಿ ಸಮಸ್ಯೆಗಳನ್ನೇ ಸವಾಲಾಗಿ ಸ್ವೀಕರಿಸಿ ಗೆದ್ದವರಲ್ಲಿ ಶ್ರವಣಕುಮಾರ ಕೂಡ ಒಬ್ಬರು. ಅನಿವಾರ್ಯತೆ ಮತ್ತು ಅವಶ್ಯಕತೆ ಎಲ್ಲಾ ಸಂಶೋಧನೆಗಳಿಗೂ ಮೂಲ ಎಂಬ ಮಾತನ್ನು ನೀವು ಕೇಳಿರಬಹುದು. ಸರಕಾರಿ ನೌಕರಿ ಮಾಡಿಕೊಂಡು ಆರಾಮವಾಗಿರಬಹುದಾಗಿದ್ದ ಯುವಕ ಕೃಷಿಕನಾಗುವ ಆಸೆಯಿಂದ ಕೆಲಸಕ್ಕೆ ರಾಜೀನಾಮೆ ನೀಡಿ ಮೊಲ ಸಾಕಾಣಿಕೆ ಮಾಡಿ ಸ್ವಾವಲಂಬನೆಯ ಹಾದಿ ಹಿಡಿದ ಯಶೋಗಾಥೆ ಇದು.
ಅತಿವೃಷ್ಠಿ, ಅನಾವೃಷ್ಠಿ ಯಾವುದೂ ಬಾಧಿಸದ ಸರಕಾರಿ ನೌಕರಿಬಿಟ್ಟು ಸದಾ ಅನಿಶ್ಚಿತತೆಯ ನಡುವೆಯೇ ಬದುಕು ಕಟ್ಟಿಕೊಳ್ಳಬೇಕಾದ ಕೃಷಿನಂಬಿ ಸರಕಾರಿ ಕೆಲಸಬಿಟ್ಟ ಹುಡುಗನ ದಿಟ್ಟತನ ನೋಡಿ ಒಂದು ಕ್ಷಣ ನಾನು ಬೆರಗಾದೆ.
ನಂಜನಗೂಡಿನಿಂದ ದೊಡ್ಡಕವಲಂದೆ ರೈಲ್ವೈ ಗೇಟ್ ಬಳಿ ಬಲಕ್ಕೆ ತಿರುಗಿದರೆ ಸಿಗುವ ಚುಂಚನಹಳ್ಳಿಯ ಎಸ್ ವೈ ರ್ಯಾಬಿಟ್ ಫಾರಂ ಈಗ ಎಲ್ಲರ ಗಮನಸೆಳೆದಿದೆ. ವಿತರಣೆ ಮತ್ತು ಮಾರಾಟ ಜಾಲವನ್ನು ಗಟ್ಟಿಗೊಳಿಸುತ್ತಾ ಮೊಲ ಸಾಕಾಣಿಕೆಯಲ್ಲಿ ಆಸಕ್ತಿಮೂಡಿಸುತ್ತಿದ್ದಾರೆ ಯುವಕರು. ಕೃಷಿಯ ಜೊತೆಗೆ ಉಪಕಸುಬಾಗಿ ಆದಾಯದ ಮೂಲವಾಗಿಸಿದ ಸಹಾಸಿಗಳು ಶ್ರವಣಕುಮಾರ ಮತ್ತು ಸತೀಶ್.
ತನ್ನಂತೆ ಸಾವಿರಾರು ಯುವಕರು ಸ್ವಾವಲಂಭಿಗಳಾಗಿ ಬದುಕು ಕಟ್ಟಿಕೊಳ್ಳಲು ದಾರಿ ತೋರುತ್ತಿದ್ದಾರೆ. ನಂಜನಗೂಡು ತಾಲೂಕು ಗಟ್ಟವಾಡಿಯ ಪರಶಿವಪ್ಪ ಮತ್ತು ರೇಖಾ ದಂಪತಿಯ ಪುತ್ರ ಶ್ರವಣಕುಮಾರ. ತಂದೆ ತೆರಕಣಾಂಬಿಯಲ್ಲಿ ಹೆಡ್ ಕನಸ್ಟೇಬಲ್, ಅಕ್ಕ ಪೋಲಿಸ್ ಇಲಾಖೆಯಲ್ಲಿ ಕೆಲಸಮಾಡಿದವರು. ಮತ್ತೊಬ್ಬ ಸೋದರ ಸಂಬಂಧಿ ಕೂಡ ಪೇದೆ. ಹಾಗಾಗಿ ಶ್ರವಣಕುಮಾರ ಕೂಡ ವಿಧ್ಯಾಭ್ಯಾಸ ಮುಗಿಸಿ ಪೋಲಿಸ್ ಇಲಾಖೆಗೆ ನೌಕರಿಗೆ ಸೇರಿದ್ದ. ಮನೆಮಂದಿಯೆಲ್ಲ ಯಾಕೇ ಪೋಲಿಸ್ ಇಲಾಖೆಗೆ ಸೇರಿಕೊಂಡಿರಿ ಎಂದು ಕೇಳಿದರೆ ಒಂಥರಾ ನಮ್ಮದು "ಪೋಲಿಸ್ ಫ್ಯಾಮಿಲಿ" ಸಾರ್ ಎಂದು ನಗುತ್ತಾರೆ ಶ್ರವಣಕುಮಾರ.
ಕೆಲಸಕ್ಕೆ ರಾಜೀನಾಮೆ : "ಎಲ್ಲರೂ ಒಂದೇ ಇಲಾಖೆಯಲ್ಲಿ ಕೆಲಸಮಾಡುವುದು ನನಗೆ ಇಷ್ಟವಾಗಲಿಲ್ಲ. ಮೊದಲಿನಿಂದಲ್ಲೂ ನನಗೆ ಕೃಷಿ ಬಗ್ಗೆ ವಿಶೇಷ ಆಸಕ್ತಿ. ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ. ಆರು ತಿಂಗಳು ಪೋಲಿಸ್ ಇಲಾಖೆಯಲ್ಲಿ ಕೆಲಸ ಮಾಡಿ,ಸ್ವತ ಉದ್ಯೋಗ ಮಾಡಬೇಕೆಂಬ ಆಸೆಯಿಂದ ನೌಕರಿಗೆ ರಾಜೀನಾಮೆ ನೀಡಿದೆ.
ಕೆಲಸ ಬಿಟ್ಟ ನಂತರ ಮೊದಲಿಗೆ ನಂಜನಗೂಡು ತಾಲೂಕು ಚಿಂಚನಹಳ್ಳಿಯಲ್ಲಿ ಆರೂವರೆ ಲಕ್ಷ ರೂಪಾಯಿ ಬಂಡವಾಳ ತೊಡಗಿಸಿ ಕೋಳಿಫಾರಂ ಮಾಡಿದೆ. ನಾಲ್ಕು ಸಾವಿರ ಕೋಳಿ ಸಾಕಾಣಿಕೆ ಮಾಡುತ್ತಿದ್ದೆ. ಮೂರು ವರ್ಷ ಕೋಳಿ ಸಾಕಾಣಿಕೆಮಾಡಿದೆ.ಆದರೆ ಅದು ನನಗೆ ಅಷ್ಟೇನೂ ಲಾಭದಾಯಕ ಅಂತ ಅನಿಸಲಿಲ್ಲ.
ಕಂಪನಿಯವರು ಕೋಳಿಮರಿ, ಫೀಡ್ ಎಲ್ಲಾ ಅವರೇ ಕೊಡುತ್ತಾರೆ. ಜಮೀನು, ನೀರು, ಕೋಳಿ ಸಾಕಾಣಿಕೆ ಶೆಡ್ ಮಾತ್ರ ನಮ್ಮದು. ಉಳಿದ ಬಂಡವಾಳ ಕಂಪನಿಯವರೇ ತೊಡಗಿಸುತ್ತಾರೆ. ಬಂದ ಲಾಭದಲ್ಲಿ ಶೇ 90 ರಷ್ಟು ಲಾಭ ಕಂಪನಿ ಪಾಲಾಗುತ್ತದೆ. ಉಳಿದ ಕೇವಲ ಶೇಕಡ 10 ರಷ್ಟು ಮಾತ್ರ ನಮ್ಮ ಕೈಸೇರುತ್ತದೆ. ಇದು ನನಗೆ ಇಷ್ಟವಾಗಲಿಲ್ಲ. ಚಾಮರಾಜನಗರ, ಮೈಸೂರು ಜಿಲ್ಲೆಯಲ್ಲಿ ಗುಣಮಟ್ಟದ ಕೋಳಿ ಸಾಕಾಣಿಕೆಯಲ್ಲಿ ಹೆಸರುಮಾಡಿದ್ದೆ. ಈಗಲೂ ಕಂಪನಿಯವರು ಕೋಳಿ ಸಾಕಾಣಿಕೆಗೆ ನನ್ನ ಮೇಲೆ ಒತ್ತಡ ಹಾಕುತ್ತಾರೆ. ಆದರೆ ಯಾರದೋ ಹಂಗಿನಲ್ಲಿ ಕೆಲಸ ಮಾಡುವುದಕ್ಕಿಂತ ಸ್ವಂತ ಉದ್ಯೋಗ ಮಾಡಬೇಕೆಂಬ ಆಸೆ ನನ್ನದು" ಎನ್ನುತ್ತಾರೆ ಶ್ರವಣಕುಮಾರ.
ಹಾದಿ ತೋರಿದ ಸುದ್ದಿ : "ಇದೇ ಸಂದರ್ಭದಲ್ಲಿ ದಿನ ಪತ್ರಿಕೆಯೊಂದರಲ್ಲಿ ಮೊಲ ಸಾಕಾಣಿಕೆ ಬಗ್ಗೆ ಬಂದ ಸುದ್ದಿಯೊಂದು ಗಮನಸೆಳೆಯಿತು. ಸುದ್ದಿಯ ಬೆನ್ನೆತ್ತಿಹೋದೆ ಹೆಚ್ಚಿನ ಮಾಹಿತಿ ಸಿಗಲಿಲ್ಲ. ನಂತರ ಇಂಟರ್ ನೆಟ್, ಸಾಮಾಜಿಕ ಜಾಲತಾಣಗಳಲ್ಲಿ ಮೊಲ ಸಾಕಾಣಿಕೆ ಬಗ್ಗೆ ತಿಳಿದುಕೊಂಡೆ. ಪೂನಾದಲ್ಲಿ ಚಂದ್ರಶೇಖರ್ ಎನ್ನುವವರು ಮೊಲ ಸಾಕಾಣಿಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಅವರ ಫಾರಂಗೆ ಹೋಗಿ ಹೆಚ್ಚಿನ ಮಾಹಿತಿ ಕಲೆಹಾಕಿದೆ. ಅಲ್ಲಿ 3000 ಮೊಲದ ಮರಿಗಳಿದ್ದವು.
ಅದನ್ನು ನೋಡಿ ಬಂದು 2011 ರಲ್ಲಿ ನಾವು 15 ಲಕ್ಷ ಬಂಡವಾಳದಿಂದ 1300 ಮೊಲದ ಮರಿಗಳ ಸಾಕಾಣಿಕೆ ಶುರುಮಾಡಿದೆವು. ಅಲ್ಲಿಂದ ನಾವು ಮೊದಲ ಬಾರಿಗೆ ನಮ್ಮ ಭಾಗದಲ್ಲಿ ಮೊಲ ಸಾಕಾಣಿಕೆ ಮತ್ತು ಮಾರಾಟವನ್ನು ಒಂದು ಉದ್ಯಮವಾಗಿ ರೂಪಿಸಿದೆವು" ಎನ್ನುತ್ತಾರೆ.
ಮೊಲ ಸಾಕಾಣಿಕೆ ಅತ್ಯಂತ ಆರಾಮದಾಯಕ ಕಸುಬು.ಕಡಿಮೆ ಬಂಡವಾಳ, ಹೆಂಗಸರು, ಮಕ್ಕಳು ಮಾಡಬಹುದಾದ ಉದ್ಯೋಗ, ಹೆಚ್ಚಿನ ಜಾಗ,ದುಬಾರಿ ಆಹಾರ ಬೇಕಿಲ್ಲ.ಒಂದು ಬಾರಿ ತಾಯಿ ಮೊಲ ಖರೀದಿಸಿದರೆ ಸಾಕು.ನಿರಂತರವಾಗಿ ಹತ್ತು ವರ್ಷ ಆದಾಯ ಕಾಣುತ್ತಾಹೋಗಬಹುದು.
ಗೌಜು ಗದ್ದಲದಿಂದ ದೂರ ಇದ್ದು, ಸ್ವಚ್ಛಪರಿಸರದಲ್ಲಿ, ಮರಗಿಡಗಳ ನಡುವೆ ಗಾಳಿ ಬೆಳಕು ಚೆನ್ನಾಗಿ ಸಿಗುವಂತಿದ್ದರೆ ತಂಟೆತಕರಾರುಮಾಡದೆ ಬೆಳವಜೀವಿಗಳು ಮುದ್ದು ಮೊಲಗಳು. ಮೊಲದ ಮಾಂಸಕ್ಕೆ ತುಂಬಾ ಬೇಡಿಕೆ ಇದೆ. ಇದರಲ್ಲಿ ಕೊಲೇಸ್ಟ್ರಾಲ್ ಇಲ್ಲವೇ ಇಲ್ಲ. ಶೇ 0.03 ಮಾತ್ರ ಕೊಬ್ಬಿನಾಂಶ ಇರುವ ಮೊಲದ ಮಾಂಸಕ್ಕೆ ಗೋವಾ, ಬೆಂಗಳೂರಿನ ಪ್ರತಿಷ್ಠತ ಪಂಚತಾರಾ ಹೋಟೆಲ್ ಮತ್ತು ವಿದೇಶಗಳಲ್ಲಿ ಬಾರಿ ಬೇಡಿಕೆ ಇದೆ. ಅದರ ಚರ್ಮಕ್ಕೂ ಒಳ್ಳೆಯ ಬೇಡಿಕೆ ಇದೆ.
ಮೊಲದಲ್ಲಿ ಎರಡು ವಿಧ. ಒಂದು ಉಣ್ಣೆ ತಳಿ. ಮತ್ತೊಂದು ಮಾಂಸದ ತಳಿ. ನಮ್ಮ ವಾತಾವರಣದಲ್ಲಿ ಮಾಂಸದ ತಳಿಗಳು ಹೊಂದಿಕೊಂಡು ಬೆಳೆಯುತ್ತವೆ. ನ್ಯೂಜಿಲ್ಯಾಂಡ್ ವೈಟ್, ವೈಟ್ ಜೈಂಟ್ಸ್, ರಷ್ಯನ್ ಗ್ರೇ ಜೈಂಟ್ಸ್, ಸೊವಿಯತ್ ಚಿಂಚಿಲ್ಲಾ, ಕ್ಯಾಲಿಪೋನರ್ಿಯಾ ವೈಟ್, ಜೈಂಟ್ ಪ್ಲೇಮೆಶ್ ಎಂಬ ವಿವಿಧ ತಳಿಗಳು ಇವೆ.
ಸಾಕಾಣಿಕೆ ಮತ್ತು ಮಾರಾಟ : ರಾಜ್ಯದ ನಾನಾಕಡೆ ಈಗ ವಾಣಿಜ್ಯ ಉದ್ದೇಶದಿಂದ ಮೊಲ ಸಾಕಾಣಿಕೆ ಮಾಡುವವರು ಇದ್ದಾರೆ. ಯುನಿಟ್ ಲೆಕ್ಕದಲ್ಲಿ ಮೊಲ ಸಾಕಾಣಿಕೆ ಮಾಡುತ್ತಾರೆ. ಒಂದು ಯುನಿಟ್ ಅಂದರೆ 10 ಅಡಿ ಉದ್ದ 4 ಅಡಿ ಅಗಲ 2 ಅಡಿ ಎತ್ತರದ ಒಂದು ಗೂಡು.ಇದರಲ್ಲಿ ಏಳು ಹೆಣ್ಣು ಮತ್ತು ಮೂರು ಗಂಡು ( ಅಥವಾ 8+2) ಸೇರಿ ಇಟ್ಟು 10 ಮೊಲದ ಮರಿಗಳನ್ನು ಸಾಕಾಣಿಕೆ ಮಾಡಬಹುದು.
ಮೊಲದ ಸಾಕಾಣಿಕೆ ಬೇಕಾದ ಗೂಡು. ಆಹಾರ, ಪರಿಕರ, ಔಷಧಿ ಎಲ್ಲವನ್ನೂ ನಾವೇ ಕೊಡುತ್ತೇವೆ. ಇದರೊಂದಿಗೆ ಒಂದು ದಿನದ ಮೊಲಸಾಕಾಣಿಕೆ ತರಬೇತಿಯನ್ನು ಪಶುವೈದ್ಯ ಡಾ.ಪರಮೇಶ್ ನಾಯಕ್ ಅವರಿಂದ ಕೊಡಿಸುತ್ತೇವೆ. ಒಂದು ಯುನಿಟ್ಗೆ ಹದಿನೇಳು ಸಾವಿರ ರೂಪಾಯಿ ನಿಗಧಿಮಾಡಿದ್ದೇವೆ ಎನ್ನುತ್ತಾರೆ ಶ್ರವಣಕುಮಾರ.
ಒಬ್ಬ ರೈತ ತನ್ನಲ್ಲಿರುವ ಬಂಡವಾಳದ ಆಧಾರದ ಮೇಲೆ ಎಷ್ಟು ಯುನಿಟ್ ಮರಿಗಳನ್ನಾದರೂ ಸಾಕಬಹುದು. ಅವುಗಳನ್ನು ವಾಪಸ್ ನಾವೇ ತೆಗೆದುಕೊಳ್ಳುವ ಒಪ್ಪಂದ ಮೇಲೆ ಮರಿಗಳನ್ನು ಕೊಡುತ್ತೇವೆ.ಮರಿಕೊಡುವಾಗಲೇ ಬೈ ಬ್ಯಾಕ್ ಒಪ್ಪಂದಕ್ಕೆ ಒಪ್ಪಿ ಅಗ್ರಿಮೆಂಟ್ ಮಾಡಿಕೊಡಲಾಗುತ್ತದೆ.
100 ಮರಿ ಸಾಕಾಣಿಕೆ ಮಾಡಲು ಒಂದು ಲಕ್ಷದ ಎಪ್ಪತ್ತು ಸಾವಿರ ರೂಪಾಯಿ ಬಂಡವಾಳ ಹೊಂದಿರಬೇಕು. ಅದರ ಬಗ್ಗೆ ಸಂಪೂರ್ಣ ಮಾಹಿತಿ ಗೊತ್ತಿರಬೇಕು. ಉಣ್ಣೆತಳಿ ನಮ್ಮ ಪ್ರದೇಶಗಳಿಗೆ ಹೊಂದಿಕೊಳ್ಳುವುದಿಲ್ಲ.ಜಮ್ಮುಕಾಶ್ಮೀರ, ಊಟಿಯಂತಹ ಶೀತ ಪ್ರದೇಶಗಳಿಗೆ ಈ ತಳಿ ಸೂಕ್ತ. ನಮ್ಮಲ್ಲಿ ಮಾಂಸದ ತಳಿಗಳು ಹೊಂದಿಕೊಂಡು ಬೆಳೆಯುತ್ತವೆ.
ಆರಂಭದಲ್ಲಿ ಮೊಲದ ಮರಿಗಳು ಒಂದು ತಿಂಗಳು ವಾತಾವರಣಕ್ಕೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತವೆ. ನಂತರ ಎರಡನೇ ತಿಂಗಳಿನಲ್ಲಿ ಕ್ರಾಸಿಂಗ್ ಮಾಡಿಸಬಹುದು. ಮೂರನೇ ತಿಂಗಳು ಮರಿ ಹಾಕುತ್ತವೆ. ನಾಲ್ಕು ಅಥವಾ ಐದನೇ ತಿಂಗಳಿಗೆ ಮಾರಾಟಕ್ಕೆ ಮರಿಗಳು ಲಭ್ಯ. ತಾಯಿ ಮೊಲ 10 ವರ್ಷದವರೆಗೂ ಮರಿ ಹಾಕುತ್ತದೆ.ನಂತರ ಪ್ರತಿ ಎರಡು ತಿಂಗಳಿಗೊಮ್ಮೆ ಮರಿಗಳನ್ನು ಮಾರಾಟಮಾಡಬಹುದು.
ಕುದುರೆಮೆಂತೆ ಹುಲ್ಲು, ಸೊಪ್ಪು, ಹಸಿತರಕಾರಿ,ಮೆಕ್ಕೆ ಜೋಳ, ಗೋದಿ ನುಚ್ಚು ಇದ್ದರೆ ಮೊಲ ಸಾಕಾಣಿಕೆಯಲ್ಲಿ ಖಚರ್ು ಕಡಿಮೆ .ಹುಲ್ಲು ಸೊಪ್ಪು ಇಲ್ಲದಿದ್ದರು ನಾವು ಕೊಡುವ ಆಹಾರವನ್ನು ಕೊಟ್ಟು ಸಾಕಾಣಿಕೆ ಮಾಡಬಹುದು. ಒಂದು ತಾಯಿ ಮೊಲ ಕನಿಷ್ಟ 6 ರಿಂದ 12 ಮರಿಗಳನ್ನು ಹಾಕುತ್ತದೆ. ಕನಿಷ್ಠ ಆರು ಮರಿ ತೆಗೆದುಕೊಂಡರೂ ಒಂದು ಯುನಿಟ್ನ ಏಳು ಮೊಲಗಳಿಂದ 42 ಮರಿಗಳು ಸಿಗುತ್ತವೆ. 2 ಕೆಜಿ ಲೆಕ್ಕಹಾಕಿದರು 82 ಕೆಜಿ ಆಯಿತು. ಮಾರುಕಟ್ಟೆ ದರ 250 ರಿಂದ 300 ರೂ ಇದೆ. ಒಂದು ಯುನಿಟ್ ನಿಂದ ಕನಿಷ್ಠ 25,000 ಸಾವಿರ ಬಂದರೂ, ಐದುಸಾವಿರ ಖಚರ್ು ತೆಗೆದು 20 ಸಾವಿರ ಆದಾಯ ಗ್ಯಾರಂಟಿ.ಒಂದು ಮೊಲ ವರ್ಷಕ್ಕೆ 8 ಬಾರಿ ಮರಿ ಹಾಕುತ್ತದೆ ಎನ್ನುತ್ತಾರೆ ಶ್ರವಣಕುಮಾರ.
ಕುರಿ, ಕೋಳಿ, ದನಕರುಗಳಿಗೆ ಹೋಲಿಸಿದೆ ಮೊಲಗಳಿಗೆ ರೋಗಬಾಧೆ ಕಡಿಮೆ.ನಿರ್ವಹಣೆಯೂ ಸುಲಭ. ಕಡಿಮೆ ನೀರು, ಸಾಕಾಣಿಕೆಗೆ ಸ್ವಲ್ಪ ಜಾಗ ಇದ್ದರೆ ಸಾಕು. ನಾವು ಕೊಡುವ ಪಶು ಆಹಾರವನ್ನೇ ಬಳಸಿ ಉತ್ತಮ ಆದಾಯಗಳಿಸಬಹುದು. ಮಾರಾಟ ಜಾಲದ ಬಗ್ಗೆ ಅರಿವು ಇಲ್ಲದಿರುವುದು.ಮೊಲದ ಮಾಂಸದ ಬಗ್ಗೆ ಹೆಚ್ಚಿನ ತಿಳಿವಳಿಕೆ ಇಲ್ಲದಿರುವುದು ಮತ್ತು ಮೊಲ ಮುದ್ದಾದ ಪ್ರಾಣಿಯಾಗಿರುವುದರಿಂದ ನಮ್ಮಲ್ಲಿ ಮೊಲ ಸಾಕಾಣಿಕೆ ಬಗ್ಗೆ ಆಸಕ್ತಿ ಕಡಿಮೆ. ಆದರೂ ಅಲ್ಲಲ್ಲಿ ಈಗ ಮೊಲ ಸಾಕಾಣಿಕೆಯನ್ನು ಉದ್ಯಮಮಾಡಿಕೊಂಡು ಬದುಕು ಕಟ್ಟಿಕೊಂಡವರು ನಮಗೆ ಸಿಗುತ್ತಾರೆ. 50 ಮೊಲ ಸಾಕಾಣಿಕೆ ಮಾಡುವುದರಿಂದ ವಾಷರ್ಿಕ ಒಂದು ಟ್ಯಾಕ್ಟರ್ ಲೋಡ್ ಉತ್ಕೃಷ್ಟವಾದ ಗೊಬ್ಬರ ಕೂಡ ದೊರೆಯುತ್ತದೆ.
ರಾಯಚೂರು, ಬಳ್ಳಾರಿ ಸೇರಿದಂತೆ ದೂರದ ಜಿಲ್ಲೆಗಳಿಗೂ ಮೊಲ ಸಾಕಾಣಿಕೆಗೆ ಮರಿಗಳನ್ನು ಸರಬರಾಜು ಮಾಡಿದ್ದಾರೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಕುಂದಕರೆ, ಹಿರೇಬೇಗೂರು ಮುಂತಾದ ಕಡೆ ಇನ್ನೂರಕ್ಕೂ ಹೆಚ್ಚು ಯುವಕರು ಇವರ ಮಾರ್ಗದರ್ಶನದಲ್ಲಿ ಮೊಲ ಸಾಕಾಣಿಕೆ ಮಾಡುತ್ತಿದ್ದಾರೆ. 20 ಯುನಿಟ್ ಖರೀದಿಸಿದರೆ ಚಾಮರಾಜನಗರದಿಂದ ಬೀದರ್ವರೆಗೂ ನಾವೇ ಉಚಿತವಾಗಿ ಟ್ರಾನ್ಸ್ಪೋರ್ಟ್ ನೀಡುತ್ತೇವೆ. ಮೊಲದ ಮರಿಗಳನ್ನು ಸಾಕಾಣಿಕೆಮಾಡಲು ಕೊಡುವುದರ ಜೊತೆಗೆ ಅದರ ನಿರ್ವಹಣೆ ಮತ್ತು ಖರೀದಿಯ ಜವಾಬ್ದಾರಿಯನ್ನು ನಾವೇ ವಹಿಸಿಕೊಳ್ಳುತ್ತೇವೆ ಎನ್ನುತ್ತಾರೆ ಶ್ರವಣಕುಮಾರ.
ಅರ್ಧ ಎಕರೆ ಶೆಡ್ಡು. ಬಂಜರು ಭೂಮಿ ಇದ್ದರೂ ಎಂತಹ ಬರದಲ್ಲೂ ಮೊಲ ಸಾಕಾಣಿಕೆ ಮಾಡಬಹುದು. ಮೊದಲು ಒಂದು ಯುನಿಟ್ ಬೇಕಾದವರು 13000 ಸಾವಿರ ರೂಪಾಯಿ ಮುಂಗಡಹಣ ಕಟ್ಟಬೇಕು. ತರಬೇತಿ ನೀಡಿದ ನಂತರ ಉಳಿದ 4000 ಸಾವಿರ ಕೊಟ್ಟರೆ ಮರಿಕೊಡುತ್ತೇವೆ .
ಬರಗಾಲದಲ್ಲೂ ಮರಿಗಳಿಗೆ ಹುಲ್ಲುಸೊಪ್ಪು ಬೇಕಿಲ್ಲ. ನಾವು ಕೊಡುವ ಫೀಡ್ನಿಂದಲೇ ನಿರ್ವಹಣೆ ಮಾಡಬಹುದು. ಮೊಲದ ಮಾಂಸಕ್ಕೆ ತುಂಬಾ ಬೇಡಿಕೆ ಇದೆ. ಭಾರತೀಯ ಸೇನೆ ಸೇರಿದಂತೆ ಚೀನಾ, ಅಮೇರಿಕಾದಲ್ಲಿ ಬೇಡಿಕೆ ಇದೆ. ಮರಿಹಾಕಿದ 60 ರಿಂದ 65 ದಿನದಲ್ಲಿ ಖರೀದಿಮಾಡುತ್ತೇವೆ . ರೈತರಿಗೆ ಎಸ್ವೈ ರ್ಯಾಬಿಟ್ ಫಾರಂನಲ್ಲಿ ಉಚಿತವಾಗಿ ಮಾಹಿತಿ ನೀಡಲಾಗುವುದು. ಆಸಕ್ತರು ಶ್ರವಣಕುಮಾರ 9986843955 ಸಂಪಕರ್ಿಸಿ