ಸಾವಯವ ಕೃಷಿಗೆ ಆಧ್ಯಾತ್ಮದ
ಸ್ಪರ್ಶ ನೀಡಿದ ಹರೀಶ್ ಆಚಾರ್ಯ
ಮೈಸೂರು : "ರೈತ ಜಮೀನಿಂದ ಮನೆಗೆ ಹೋಗುವಾಗ ಖಾಲಿ ಕೈಯಲ್ಲಿ ಹೋಗಬಾರದು.ಒಂದು ಕಂತೆ ಸೊಪ್ಪನ್ನಾದರೂ ತೆಗೆದುಕೊಂಡು ಹೋಗುವಂತಿರಬೇಕು. ಮನೇಲಿ ಸ್ಟಾಕ್ನಲ್ಲಿದ್ದರೂ ಪರ್ವಾಗಿಲ್ಲ. ನಮ್ಮಲ್ಲಿ ತೆಂಗಿನ ಎಣ್ಣೆ, ಅರಿಶಿನ ಪುಡಿ ಸದಾ ಸ್ಟಾಕ್ನಲ್ಲಿ ಇರುತ್ತದೆ.ಮಾರಾಟಕ್ಕೆ ಸದಾ ಲಭ್ಯ. ಇದು ಬದುಕಿನ ದಾರಿ" ಎಂದರು ಸಾವಯವ ಕೃಷಿಕ ಹರೀಶ್ ಆಚಾರ್ಯ.
ಮೈಸೂರಿನಿಂದ ಕಡಕೊಳಕ್ಕೆ ಹೋಗುವ ಮಾರ್ಗದಲ್ಲಿ ಎಡಕ್ಕೆ ತಿರುಗಿದರೆ ಬೀರೆಗೌಡನಹುಂಡಿ (ಕೂಡನಹಳ್ಳಿ ತೋಟ) ಸಿಗುತ್ತದೆ. ಅಲ್ಲಿ ತೋಟಮಾಡಿರುವ ಹರೀಶ್ ವಿಶೇಷವಾಗಿ ಪಂಚಗವ್ಯ ಮತ್ತು ನಾಟಿ ಹಸುವಿನ ಸಗಣಿ ಬಳಸಿಕೊಂಡು ಕೃಷಿ ಮಾಡುತ್ತಿದ್ದಾರೆ.
ಲಕ್ಷ ರೂಪಾಯಿಗಳಲ್ಲಿ ಆದಾಯ ತರುತಿದ್ದ ಕೆಲಸ,ಬ್ಯುಸಿನೆಸ್, ನಗರದ ಒತ್ತಡ ಎಲ್ಲದರಿಂದ ಮುಕ್ತರಾಗಿದ್ದಾರೆ. ಇಷ್ಟಪಟ್ಟು ಕೃಷಿಗೆ ಬಂದು ಸುಂದರ ಹಸಿರು ಕಾಡಿನಂತಹ ತೋಟ ಕಟ್ಟಿದ್ದಾರೆ. ಇದಕ್ಕೆ ಕುಟುಂಬವರ್ಗದ ಸಂಪೂರ್ಣ ಸಹಕಾರವೂ ಇದೆ.
ಮಕ್ಕಳು ವಿದ್ಯಾವಂತರಾಗಿ ಎಂಜಿನೀಯರ್, ವೈದ್ಯ ಅಥವಾ ಯಾವುದಾದರೂ ನೌಕರಿಗೆ ಸೇರಿದರೆ ಸಾಕು ಎಂಬ ಕಾಲ ಇದು.ಆಚಾರ್ಯರ ಕುಟುಂಬ ಇದಕ್ಕೆ ಹೊರತಾಗಿದ್ದು ಮನೆಮಂದಿಯೆಲ್ಲ ಕೃಷಿ ಪ್ರೀತಿ ಬೆಳೆಸಿಕೊಂಡು ವಿಭಿನ್ನವಾಗಿ ನಿಲ್ಲುತ್ತಾರೆ.
ಹರೀಶ್ ಆಚಾರ್ಯರ ತೋಟದಲ್ಲಿ ಆಗಾಗ ಶಾಲೆಯ ಮಕ್ಕಳು ಬಂದು ಪರಿಸರ ಪಾಠ ಕಲಿಯುತ್ತಾರೆ. ವೀಕ್ ಎಂಡ್ ಕಳೆಯುವ ನಿಸರ್ಗ ಪ್ರೀಯರಿಗೆ ಶುಚಿರುಚಿಯಾದ ಸಾವಯವ ಆಹಾರ ದೊರೆಯುತ್ತದೆ. ಆಹ್ಲಾದಕರ ಪರಿಸರದಲ್ಲಿ ಹಕ್ಕಿಗಳ ಚಿಲಿಪಿಲಿ ನಿನಾದ ಕೇಳುತ್ತದೆ. ತೋಟದಲ್ಲಿ ಪಾಸಿಟಿವ್ ಎನಜರ್ಿ ಇದೆ.ಆಧ್ಯಾತ್ಮಿಕ ಅನುಭೂತಿ ಇದೆ.ಇಲ್ಲಿ ನಿಸರ್ಗ ವಿರೋಧಿ ಚಟುವಟಿಕೆಗಳಿಗೆ ಅವಕಾಶವಿಲ್ಲ.ಕುವೆಂಪು ಕವನದಂತೆ "ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವಿದು ಕಲೆಯ ಬಲೆಯೂ" ಎನ್ನುವಂತೆ ತೋಟಕ್ಕೊಂದು ಪಾವಿತ್ರ್ಯತೆ ತಂದುಕೊಂಡಿದ್ದಾರೆ ಹರೀಶ್ ಆಚಾರ್ಯ.
270 ತೆಂಗು, 450 ಅಡಿಕೆ ಸೇರಿದಂತೆ ಹುಣಸೆ ಹಣ್ಣಿನಿಂದ ಹಿಡಿದು ಕಿತ್ತಳೆ, ಮೂಸಂಬಿ, ನುಗ್ಗೆ, ಅಗಸೆ, ಪುನರ್ ಪುಳಿ, ಹನುಮ ಫಲ, ರಾಮ ಫಲ, ಸೀತಾಫಲ, ಕಾಶಿ ಬಿಲ್ವ, ಕಾಡು ನಲ್ಲಿ, ಬನರಾಸ್ ನಲ್ಲಿ ಹೀಗೆ ಹತ್ತಾರು ಔಷಧೀಯ ಗಿಡಗಳು ಅಲ್ಲಿವೆ. ರೈತರು ಕುಳಿತು ಸಂವಾದ ನಡೆಸಲು ಜಗಲಿ ಕಟ್ಟೆ ಇದೆ. ಮಕ್ಕಳು ಆಟವಾಡಲು ನೀರಿನಕೊಳ ಇದೆ. ಮೇಲೆ ಹತ್ತಿ ಹಸಿರು ನೋಡಲು ಅಟ್ಟ ಇದೆ. ಕೃಷಿಕನಿಗೆ ಸದಭಿರುಚಿ,ಒಳ್ಳೆಯ ಹವ್ಯಾಸಗಳಿದ್ದರೆ ತೋಟ ಎಷ್ಟೊಂದು ಸುಂದರವಾಗಿರುತ್ತದೆ ಎನ್ನುವುದು ತೋಟವನ್ನು ನೋಡಿದರೆ ತಿಳಿಯುತ್ತದೆ.
ಕೃಷಿ ಎಂದರೆ ಮೂಗು ಮುರಿಯುವವರು, ನಷ್ಟದ ಬಾಬ್ತು ಎನ್ನುವವರು ಆಚಾರ್ಯರ ತೋಟ ನೋಡಿದರೆ ತಮ್ಮ ಅಭಿಪ್ರಾಯ ಬದಲಿಸಿಕೊಳ್ಳದೆ ಇರಲಾರರು. ಕೃಷಿ, ಶಿಕ್ಷಣ.ಒತ್ತಡ ರಹಿತ ಬದುಕು, ಬದುಕಿನ ಚೆಲುವು, ಸಂಸಾರ ಹೀಗೆ ಆಚಾರ್ಯರು ಹೇಳುತ್ತಾ ಹೋದರು.ನಾವು ಕಿವಿಯಾದೆವು. ಅವರು ಕವಿಯಾದರು.ಅವರು ಕಟ್ಟಿದ ತೋಟ ಕಣ್ಣೆದುರಿಗಿತ್ತು. ಹಾಗಾಗಿ ಅಲ್ಲಿ ಪ್ರಶ್ನೆಗಳ ಹಂಗು ಇರಲಿಲ್ಲ.ಅನುಮಾನಗಳ ಗುಂಗೂ ಕಾಡಲಿಲ್ಲ.
ನಾವೂ ಕೃಷಿಕರೆ : " ಮೂಲತಃ ನಾವು ಕೃಷಿಕರೇ. ನಮ್ಮ ತಂದೆಯವರದ್ದು ಉಡುಪಿಯಲ್ಲಿ ಜಮೀನಿತ್ತು. ಆರು ಎಕರೆ ತೋಟ. ಮೈಸೂರು ಚೆನ್ನಾಗಿದೆ ಇಲ್ಲಿ ಬನ್ನಿ ಅಂತ ನಮ್ಮ ಭಾವ ಹೇಳಿದರು. ಅಲ್ಲಿಯ ಜಮೀನನ್ನು ಮಾರಾಟಮಾಡಿ ಇಲ್ಲಿ ಬಂದು ಜಮೀನು ಖರೀದಿಸಿದೆವು.
ಆವಾಗ ನಾನು ಡಿಪ್ಲೋಮ ಕಂಪ್ಲಿಟ್ ಮಾಡಿ ಬೆಂಗಳೂರಲ್ಲಿ ಕೆಲಸ ಮಾಡ್ತಾ ಇದ್ದೆ.ಶ್ರೀಧರ ಇಂಟರ್ ನ್ಯಾಷನಲ್ ಕಂಪನಿಯಲ್ಲಿ ಒಂದು ವರ್ಷ ಕೆಲಸಮಾಡಿದೆ.ಆಮೇಲೆ 1995 ರಲ್ಲಿ ಸ್ವಂತ ಫ್ಯಾಕ್ಟರಿ ಮಾಡಿದೆ.ಮೈಕ್ರೋ ಚಿಪ್ ಬೇಸಡ್ ಕಂಪನಿ ಅದು. ವಾಟರ್ ಕಂಟ್ರೋಲರ್, ಡಿಸೈನ್. ಮ್ಯಾಗ್ನಟಿಕ್ ಇಂಡಕ್ಷನ್ ಎಲ್ಲಾ ತಯಾರುಮಾಡುತ್ತಿದ್ದೆವು. ಜೆಎಸ್ಎಸ್ ಸಂಸ್ಥೆಯ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ನಗರದ ಬಹುತೇಕ ಮನೆಗಳಿಗೆ ವಾಟರ್ ಕಂಟ್ರೋಲರ್ ಹಾಕಿದ್ದು ನಾವೇ. 1995 ರಲ್ಲಿ ಇಲ್ಲಿ 4 ಎಕರೆ 27 ಗುಂಟೆ ಜಮೀನು ತೆಗೆದುಕೊಂಡೆವು.
ಅಣ್ಣ ಬೆಂಗಳೂರಿನಲ್ಲಿ ಕೆಲಸಮಾಡುತ್ತಿದ್ದ.ಆಗ ನಮ್ಮ ತಂದೆಯವರು ಇಲ್ಲಿ ಬಂದು ನೀನು ಕೃಷಿ ಮಾಡಿದರೆ ಜಮೀನು ಉಳಿಸಿಕೊಳ್ಳುವಾ. ಇಲ್ಲ ಮಾರಾಟ ಮಾಡಿಬಿಡುವಾ ಅಂತ ಹೇಳಿದರು.ಬೆಂಗಳೂರಿನ ಪ್ಯಾಕ್ಟರಿಯನ್ನು ನನ್ನ ಅಣ್ಣನಿಗೆ ವಹಿಸಿ ಕೃಷಿ ಕೆಲಸಕ್ಕೆ ಬಂದುಬಿಟ್ಟೆ" ಎಂದರು ಆಚಾರ್ಯ.
ನಂತರ ಅವರ ಜೀವನದಲ್ಲಿ ದುರಂತವೊಂದು ನಡೆದೆಹೋಯಿತು. ಆಚಾರ್ಯ ಅವರ ಅಣ್ಣ ಅಪಘಾತದಲ್ಲಿ ತೀರಿಹೋದರು. ಆಗ ಲಕ್ಷಾಂತರ ರೂಪಾಯಿ ಆದಾಯ ತರುತಿದ್ದ ಕಂಪನಿ ಮತ್ತು ವ್ಯವಹಾರ ಎಲ್ಲವನ್ನೂ ಬಂದ್ ಮಾಡಿ ಸಂಪೂರ್ಣ ಕೃಷಿ ಚಟುವಟಿಕೆಗಳಲ್ಲಿ ಹರೀಶ್ ತೊಡಗಿಸಿಕೊಂಡರು.
ಫ್ಯೂಚರ್ ಫಾಮರ್ಾರ್ ಕ್ಲಬ್ : "ಉಡುಪಿಯಲ್ಲಿ ಓದುತ್ತಿದ್ದಾಗ ಶಾಲೆಯಲ್ಲಿ "ಫ್ಯೂಚರ್ ಫಾರ್ಮರ್ ಕ್ಲಬ್" ಅಂತ ಮಾಡಿಕೊಂಡಿದ್ದೆವು. ಅದರ ಸಂಚಾಲಕ ನಾನೆ. ಈಗಲೂ ಅಲ್ಲಿನ ಶಾಲೆಗಳಲ್ಲಿ ಅಂತಹ ಕ್ಲಬ್ಗಳಿವೆ.ಮಕ್ಕಳಿಗೆ ಪರಿಸರ ಸ್ನೇಹಿ ಕೃಷಿಯ ಬಗ್ಗೆ ಅರಿವು ಮೂಡಿಸುವುದು ಅದರ ಉದ್ದೇಶ.ಬಾಲ್ಯದಲ್ಲೇ ನನಗೆ ಕೃಷಿಯ ಬಗ್ಗೆ ಆಸಕ್ತಿ ಇತ್ತು.ಹಾಗಾಗಿ ನಾನು ಕೃಷಿಯನ್ನೇ ನನ್ನ ಉದ್ಯೋಗವಾಗಿ ಆಯ್ಕೆ ಮಾಡಿಕೊಂಡೆ".
ಮಕ್ಕಳಿಗೆ ಶಾಲೆಯಲ್ಲಿ ಕೃಷಿ ಕ್ಲಬ್ಗಳನ್ನು ಮಾಡಿಕೊಳ್ಳಲು ಪ್ರೋತ್ಸಾಹ ನೀಡಬೇಕು.ಇದೊಂದು ಪಠ್ಯವನ್ನಾಗಿ ಕಲಿಸಿದರೆ ತಪ್ಪಿಲ್ಲ. ಈಗಾದಾಗ ಮಾತ್ರ ಹಾದಿ ತಪ್ಪಿರುವ ನಮ್ಮ ಪಾರಂಪರಿಕ ಕೃಷಿಯನ್ನು ಸರಿದಾರಿಗೆ ತರಬಹುದು ಎಂದು ಆಚಾರ್ಯ ಅಭಿಪ್ರಾಯ ಪಡುತ್ತಾರೆ.
ಐಟಿಬಿಟಿ ಮೋಹ ಇಲ್ಲ :" ನೋಡಿ ಸಾಫ್ಟವೇರ್ ಕಂಪನಿಯಲ್ಲಿ ದುಡಿದರೆ ತಿಂಗಳಿಗೆ ಲಕ್ಷ ರೂಪಾಯಿ ಸಿಗುತ್ತದೆ. ನಿಜ. ಲಕ್ಷಕ್ಕೆ ಶೇ 30 ರಷ್ಟು ತೆರಿಗೆ ಕಟ್ಟಬೇಕು. ಒತ್ತಡ.ನಿದ್ದೆ ಇಲ್ಲದ ರಾತ್ರಿಗಳು. ಅಲ್ಲಿನ ಲೈಫ್ ಸ್ಟೈಲೇ ಬೇರೆ .ದುಬಾರಿ ಉಡುಗೆತೊಡುಗೆ. ನೈಕಿ ಶೋವೆ ಬೇಕು, ಜಾಕಿ ಅಂಡರ್ವೇರೇ ಬೇಕು. ಇಲ್ಲಿ ಯಾವುದು ಬೇಡ. ನಾವು ನಾರ್ಮಲ್ ಆಗಿರುವ. ಇಲ್ಲಿ ಸಿಕ್ಕುವ ಸಂತೋಷ ಕೋಟಿ ರೂಪಾಯಿ ಕೊಟ್ಟರು ಸಿಗುವುದಿಲ್ಲ".
ಬಟರ್ ಫ್ರೂಟ್ ಬೀಜ ಹಾಕಿ, ಗಿಡ ಬೆಳಸಿ ಆ ಗಿಡ ಬಿಟ್ಟ ಹಣ್ಣು ತಿನ್ನುವಾಗ ಮನಸ್ಸಿಗೆ ಆಗುವ ಸಂತೋಷವೇ ಬೇರೆ. ಆ ಸುಖ ಎಲ್ಲೂ ಸಿಗೋಲ್ಲ. ಗಿಡಗಳನ್ನು ಬೆಳೆಸುವುದು ಎಂದರೆ ನಮ್ಮ ಮಕ್ಕಳನ್ನು ಬೆಳೆಸಿದ ಹಾಗೆ. ಮಕ್ಕಳು ನಮ್ಮಿಂದ ದೂರವಾಗಬಹುದು. ಗಿಡಮರಗಳು ದೂರವಾಗುವುದಿಲ್ಲ.ಅವು ನಮ್ಮ ಕಣ್ಣೆದುರೆ ಮತ್ತಷ್ಟು ಸಮೃದ್ಧವಾಗಿ ಬೆಳೆದು ಫಲನೀಡಿ ಸುಖ ಸಂತೋಷ ಹಿಮ್ಮಡಿಗೊಳಿಸುತ್ತವೆ" ಎನುತ್ತಾರೆ ಹರೀಶ್.
ಕೃಷಿ ಕುಟುಂಬ: "ತಂದೆ ಶ್ರೀಪತಿ ಆಚಾರ್ಯ.ಅವರಿಗೆ 86 ವರ್ಷ. ಈಗಲೂ ವಾಕ್ ಮಾಡುತ್ತಾರೆ. ಕಾರು ಚಾಲನೆ ಮಾಡುತ್ತಾರೆ.ಇದೆಲ್ಲ ವಿಷಮುಕ್ತ ಆಹಾರ ಬಳಕೆ ಪರಿಣಾಮ. ತಾಯಿ ಸರಸ್ವತಿ ಆಚಾರ್ಯ. ಆಗ್ಯರ್ಾನಿಕ್ ಮೇಳಗಳಲ್ಲಿ ನಡೆಯುವ ಅಡುಗೆ ಸ್ಪಧರ್ೆಗಳಲ್ಲಿ ಭಾಗವಹಿಸುತ್ತಾರೆ. ಪತ್ರೋಡೆ, ಗೋಲಿ ಬಜೆ ಮಾಡೋದರಲ್ಲಿ ಫೇಮಸ್ಸು.
ಪತ್ನಿ ರಶ್ಮಿ ಹರೀಶ್.ಅವರಿಗೂ ಕೃಷಿ ಪ್ರೀತಿ. ಎಂ.ಎ. ಎಲ್ಎಲ್ಬಿ. ಎಂಎಸ್ ಕೌನ್ಸಿಲಿಂಗ್ ಅಂಡ್ ಸೈಕೋ ಥೆರಫಿ ಮಾಡಿದ್ದಾರೆ. ಪಿಎಚ್ಡಿ ಮಾಡ್ತಾ ಇದ್ದಾರೆ. ಕಡಕೊಳದಲ್ಲಿ ನಮ್ಮದೆ ಸ್ಕೂಲ್ ಇತ್ತು ಆಚಾರ್ಯ ಗುರು ಕುಲ ಅಂತ. ಈಗ ಅದನ್ನು ಬೇರೆಯವರಿಗೆ ಕೊಟ್ಟು, ತಂದೆ ತಾಯಿ ಆರೋಗ್ಯದ ದೃಷ್ಟಿಯಿಂದ ನಗರದಲ್ಲಿದ್ದೇವೆ.ಮುಂದೆ ತೋಟದಲ್ಲೆ ಮನೆಮಾಡಿಕೊಂಡಿರಲು ನಿರ್ಧರಿಸಿದ್ದೇವೆ" ಎನ್ನುತ್ತಾರೆ ಆಚಾರ್ಯ.
ಮಕ್ಕಳನ್ನು ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲೆ ಓದಿಸುವ ಪೋಷಕರ ನಡುವೆಯೂ ಇವರು ವಿಭಿನ್ನವಾಗಿ ನಿಲ್ಲುತ್ತಾರೆ. ವಿಜಯ ವಿಠಲ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳನ್ನು ಶಾಲೆ ಬಿಡಿಸಿ ಅರಿವು ಶಾಲೆಗೆ ಸೇರಿಸಿದ್ದಾರೆ. ಮಗ ಪ್ರದ್ಯುಮ್ನ 8 ನೇ ತರಗತಿ, ಮಗಳು ಪ್ರಣತಿ 4 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಮಕ್ಕಳಿಬ್ಬರಿಗೂ ಕೃಷಿ ಎಂದರೆ ಪ್ರೀತಿ. ಸಾಮಾನ್ಯವಾಗಿ ಪ್ರತಿಷ್ಠಿತ ಶಾಲೆಗಳು ಯಂತ್ರಗಳನ್ನು ತಯಾರು ಮಾಡುವ ಕಾಖರ್ಾನೆಗಳಂತಾಗಿಬಿಟ್ಟಿವೆ ಎನ್ನು ಹರೀಶ್ ನಮಗ್ಯಾಕೋ ಅದು ಬೇಡ ಅನಿಸಿತು. ಮಕ್ಕಳು ಅರಿವು ಅಂತಹ ಶಾಲೆಗಳಲ್ಲಿ ಓದಿದರೆ ಜೀವನ ಪಾಠ ಕಲಿಯುತ್ತಾರೆ. ಮಕ್ಕಳು ಮಕ್ಕಳ ಹಾಗೆ ಬೆಳೆಯುತ್ತಾರೆ.ಅವರ ಬಾಲ್ಯ ಸಮೃದ್ಧವಾಗಿರುತ್ತದೆ ಎನ್ನುವ ಮೂಲಕ ನಮ್ಮ ಶಿಕ್ಷಣದ ಮತ್ತೊಂದು ಮುಖವನ್ನು ಅನಾವರಣಮಾಡಿಟ್ಟರು. ತೋಟದಲ್ಲಿ ಕಳೆದ 12 ವರ್ಷದಿಂದ ಸಂಸಾರ ಒಂದು ದುಡಿಯುತ್ತಿದೆ. ಅವರನ್ನು ಎಂದೂ ಕೆಲಸದವರಂತೆ ನೋಡಿಲ್ಲ. ಪ್ರೀತಿಯಿಂದ ನೋಡಿಕೊಂಡಿದ್ದೇವೆ.ನಮ್ಮ ಅವರ ಬಾಂಧವ್ಯ ರಕ್ತ ಸಂಬಂಧವನ್ನು ಮೀರಿದ್ದು ಎನ್ನುವ ಮೂಲಕ ಕೃಷಿ ಕಾಮರ್ಿಕರ ಬಗೆಗಿರುವ ಕಾಳಜಿಯನ್ನು ತೆರೆದಿಟ್ಟರು.
ಪಂಚಗವ್ಯ ಮಹಾತ್ಮೆ : ನಮ್ಮಲ್ಲಿ ಎರಡು ಗೀರ್, ಒಂದು ಹಳ್ಳಿಕಾರ್, ಒಂದು ಮಲೆನಾಡು ಗಿಡ್ಡ ತಳಿಯ ನಾಲ್ಕು ಹಸುಗಳಿವೆ.ಇವುಗಳ ಸಗಣಿ ಬಳಸಿಕೊಳ್ಳುತ್ತೇವೆ. ತೋಟಕ್ಕೆ ಪಂಚಗವ್ಯ ಬಿಟ್ಟರೆ ಬೇರೆ ಏನನ್ನು ಸಿಂಪರಣೆಮಾಡಿಲ್ಲ. ರೋಗಕ್ಕೆ, ಗಿಡಗಳ ಪೋಷಕಾಂಶಕ್ಕೆ ಇದೆ ಸಾಕು. ಎಲ್ಲಾ ರೀತಿಯ ಬೆಳೆಗೂ ಸಿಂಪರಣೆ ಮಾಡಬಹುದು.ಗಿಡದ ಬುಡಕ್ಕೂ ಹಾಕಬಹುದು.
105 ರೀತಿಯ ಪದಾರ್ಥಗಳನ್ನು ಹಾಕಿ ಪಂಚಗವ್ಯ ತಯಾರುಮಾಡುತ್ತೇವೆ. ಗೀರ್ ಹಸುವಿನ ಹಾಲು, ತುಪ್ಪ, ಮೊಸರು, ಸಗಣಿ,ಗಂಜಲ ಎಲ್ಲವನ್ನು ಸೇರಿಸುತ್ತೇವೆ. ಒಳ್ಳೆಯ ಪರಿಣಾಮ ಇದೆ. ಒಂದು ಲೀಟರ್ ಪಂಚಗವ್ಯಕ್ಕೆ 40 ಲೀಟರ್ ನೀರು ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು. ತೋಟಕ್ಕೆ ಬಳಸಿಕೊಂಡು ಉಳಿದ ಪಂಚಗವ್ಯವನ್ನು ಲೀಟರ್ಗೆ 200 ರೂಪಾಯಿಯಂತೆ ಮಾರಾಟಮಾಡುತ್ತೇವೆ.
ಪಂಚಗವ್ಯ ಬಳಸುವುದರಿಂದ ದೇಸಿಬೀಜಗಳ ಮೊಳಕೆ ಚೆನ್ನಾಗಿ ಬರುತ್ತದೆ.ಈಗ ವಿಶೇಷವಾದ ದೇಸಿ ತಳಿಯ ಕೆಂಪು ಬಣ್ಣದ ಹತ್ತಿಬೀಜ ಸಿಕ್ಕಿದೆ. ಅದನ್ನು ಪಂಚಗವ್ಯದಲ್ಲಿ ಮುರು ಬಾರಿ ನೆನೆಹಾಕಿದ್ದೇನೆ, ನಂತರ ನಾಟಿ ಮಾಡಬೇಕು. ಇಲ್ಲಿ ಹೂ ಕೋಸನ್ನು ಬೆಳೆದಿದ್ದೇನೆ.ಪಂಚಗವ್ಯ ಬಿಟ್ಟರೆ ಬೇರೆ ಏನನ್ನು ಸಿಂಪರಣೆ ಮಾಡಿಲ್ಲ. ಚೆನ್ನಾಗಿ ಬಂದಿದೆ. ನಮ್ಮ ತೋಟದಲ್ಲಿರುವ ಹೈಬ್ರಿಡ್ತಳಿ ಇದೊಂದೆ. ಉಳಿದದ್ದೆಲ್ಲವೂ ದೇಸಿ ಬೀಜಗಳೆ ಎನ್ನುತ್ತಾರೆ ಹರೀಶ್ ಆಚಾರ್ಯ.
ಶೈಕ್ಷಣಿಕ ಕೃಷಿ ಪ್ರವಾಸಿ ಜಾಗ : ಹರೀಶ್ ಅವರ ತೋಟ ಶಾಲೆಯ ಮಕ್ಕಳಿಗೆ ಪ್ರವಾಸಿ ಸ್ಥಳವಾಗಿಯೂ ಬದಲಾಗುತ್ತಿರುತ್ತದೆ. ಔಷದೀಯ ಗಿಡಗಳ ಬಗ್ಗೆ ಅರಿವು.ಸಾವಯವ ಕೃಷಿಯ ಬಗ್ಗೆ ತಿಳಿವಳಿಕೆ ಮೂಡಿಸಲು ಆಗಾಗ ಶಾಲೆಯ ಮಕ್ಕಳನ್ನು ಇಲ್ಲಿಗೆ ಕರೆದುತರಲಾಗುತ್ತದೆ.
ತೋಟಕ್ಕೆ ಬೇಕಾದ ಗಿಡ ಬೆಳೆದುಕೊಳ್ಳಲು ಪುಟ್ಟ ನರ್ಸರಿ ಮಾಡಿಕೊಂಡಿದ್ದಾರೆ. ಕರಿತುಂಬಿ, ರಣಕಳ್ಳಿ, ಕಾಡುಗಿಡದ ವಿಶೇಷ ತಳಿಗಳನ್ನು ಬೆಳೆದಿದ್ದಾರೆ. ಔಷದಿಗಿಡಗಳ ವನ ಇದೆ. ಆಯರ್ುವೇದದಲ್ಲಿ ಬಳಸುವ ಗಿಡಗಳಾದ ನೀಲಿ ಆಡುಸೋಗೆ, ಸ್ವರ್ಣ ಚಂಪಕ, ಲೆಮನ್ ಗ್ರಾಸ್ ಬೆಳೆಯಲಾಗಿದೆ. ಶಾಲಾ ಮಕ್ಕಳಿಗೆ ತೋಟದಲ್ಲಿ ಕ್ಯಾಂಪ್ ಮಾಡುತ್ತಾರೆ. ಅವರಿಗೆ ಗಿಡಗಳ ಮಹತ್ವವನ್ನು ತಿಳಿಸುತ್ತಾರೆ.ಮಕ್ಕಳು ನೋಡೆ ಇರದ ಗಿಡಗಳು.ಅವುಗಳ ಉಪಯೋಗ, ಬಳುಸುವ ಬಗೆಯನ್ನು ತಿಳಿಸಿಕೊಡಲಾಗುತ್ತದೆ.
ಸಮಗ್ರ ಪದ್ಧತಿಯಲ್ಲಿ ಚಿಕ್ಕ ತಾಕ್ಕೊಂದನ್ನು ಮಾಡಿದ್ದಾರೆ. ನುಗ್ಗೆ, ಪಪ್ಪಾಯ, ಮೆಣಸಿಕಾಯಿ, ಕೋಸು, ಸೋಪ್ಪು, ತರಕಾರಿಯನ್ನು ಬೆಳೆಯಲಾಗಿದೆ. ಮನೆಯ ಮುಂದೆ ಇರುವ ಖಾಲಿ ಜಾಗವನ್ನು ಹೇಗೆ ಸದುಪಯೋಗ ಮಾಡಿಕೊಂಡು, ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತೋರಿಸಿಕೊಡಲು ಈ ತಾಕನ್ನು ರೂಪಿಸಲಾಗಿದೆ ಎನ್ನುತ್ತಾರೆ ಹರೀಶ್.
ಕೊಯಮತ್ತೂರಿನಲ್ಲಿ ನಡೆದ ಕೃಷಿ ವಸ್ತು ಪ್ರದರ್ಶನದಲ್ಲಿ ವಿಶೇಷವಾದ ಬದನೆ ತಳಿ ಸಿಕ್ಕಿತು. ಬಿಳಿ ಬದನೆ. ಅಪ್ಪಟ್ಟ ಬಿಳಿ. ತುಂಬಾ ವಿಶೇಷವಾದದ್ದು. ಜೊತೆಗೆ ಹಸಿರು ಬದನೆಯೂ ಇದೆ. ನಮ್ಮಲ್ಲಿ ಗುಳ್ಳೆ ಬದನೆ,ಮಟ್ಟಿಗುಳ್ಳ ಅಂತ ಇದನ್ನು ಕರೆಯುತ್ತಿದ್ದರು. ಅದರ ರುಚಿ ಸವಿದವರಿಗಷ್ಟೇ ಗೊತ್ತು.ಇಂತಹ ಅಪರೂಪದ ತಳಿಗಳು ನಮ್ಮ ತೋಟದಲ್ಲಿ ಜಾಗ ಪಡೆದಿವೆ ಎನ್ನುತ್ತಾರೆ.
ನಮ್ಮ ತೋಟದಲ್ಲಿ ವರ್ಷವಿಡಿ ಆದಾಯ ಇದೆ. ತೆಂಗು, ಬಾಳೆ, ಅರಿಶಿನ ತರಕಾರಿ ಸೊಪ್ಪು ಸೀಬೆ, ಕಿತ್ತಳೆ ಮೊಸಂಬಿ ಹೀಗೆ. ನಾನು ಎಂಜಿನಿಯರಿಂಗ್ ಕೆಲಸ ಮಾಡಿದವ ಅಲ್ಲಿ ಒಂದು ಲಕ್ಷ ರೂಪಾಯಿ ಆದಾಯ ಬರ್ತಾ ಇತ್ತು. ಕೃಷಿಯಲ್ಲಿ 30 ರಿಂದ 40 ಸಾವಿರ ಆದಾಯ ಸಿಕ್ತಾ ಇದೆ ಅದೇ ಸಾಕು. ವಾಷರ್ಿಕ 45000 ತೆಂಗಿನಕಾಯಿ ಸಿಗುತ್ತದೆ.ಅರಿಶಿನ ಕೊಯ್ಲು ಮುಗಿಯಿತು. ಅಲ್ಲಿಗೆ ಈಗ ಕೊತ್ತಂಬರಿ ಹಾಕುತ್ತೇವೆ". ಕೃಷಿಯಲ್ಲಿರುವ ನೆಮ್ಮದಿ, ಆರೋಗ್ಯ ಸುಖ ಸಂತೋಷ ಅನುಭವಿಸಿದವರಿಗಷ್ಟೇ ಗೊತ್ತು ಎನ್ನುತ್ತಾರೆ.
ತಮ್ಮ 22 ವರ್ಷದ ಕೃಷಿ ಜೀವನದಲ್ಲಿ ಎಂದೂ ಅರಿಶಿನ ಮಾರಾಟ ಮಾಡಿಲ್ಲ. ಸ್ವಲ್ಪ ಭಿತ್ತನೆಗೆ ಕೊಡುತ್ತೇನೆ.ಉಳಿದದ್ದು ಮೌಲ್ಯವರ್ಧನೆ ಮಾಡುತ್ತೇನೆ. ನಾನು ಕೊಯಂತ್ತೂರು ಅರಿಶಿನ ಮಾರುಕಟ್ಟೆ ನೋಡೆ ಇಲ್ಲ. ಬೇಯಿಸಿ, ಒಣಗಿಸಿ ಪುಡಿ ಮಾಡಿ ಸಗಟು ರೂಪದಲ್ಲಿ ಮಾರಾಟಮಾಡುತ್ತೇನೆ. ಬೆಂಗಳೂರಿನ ಬಹುತೇಕ ಹೋಟೆಲ್ನವರು ನಮ್ಮ ಅರಿಶಿನಪುಡಿ ಖರೀದಿಸುತ್ತಾರೆ.ಕುಂಕುಮ ಮಾಡುತ್ತೇವೆ.
ಸದಾ ನನ್ನ ಹತ್ತಿರ ಅರಿಶಿನ ಪುಡಿ, ಕೊಬ್ಬರಿ ಎಣ್ಣೆ ಸ್ಟಾಕ್ ಇರುತ್ತದೆ. ಗ್ರಾಹಕರಿಗೆ ನೇರ ಮಾರಾಟ ಮಾಡುತ್ತೇನೆ. ಮೈಸೂರಿನ ಎಲ್ಲಾ ಸಾವಯವ ಉತ್ಪನ್ನ ಮಾರಾಟ ಮಳಿಗೆಗಳಿಗಳಿಗೂ ಕೊಡುತ್ತೇವೆ.
"ಇತ್ತೀಚಿಗೆ ಸಂಡೇ ಫಾರ್ಮರ್ಗಳದ್ದು ದೊಡ್ಡ ಸಮಸ್ಯೆಯಾಗಿದೆ. ಟೊಮಟೊ ಬೆಳಿತ್ತಾರೆ. ಮಾರಾಟ ಮಾಡುವುದು ಗೊತ್ತಾಗಲ್ಲ. ನಾವು ಸಾವಯದಲ್ಲಿ ಬೆಳೆದೋ ಆದರೆ ಮಾರಾಟ ಆಗ್ತಾ ಇಲ್ಲ ಅಂತ ದೂರುತ್ತಾರೆ. ಆರಂಭದಲ್ಲಿ ನಾನು ರಮೇಶ್ ಕಿಕ್ಕೇರಿ ಗಾಡಿಯಲ್ಲಿ ತರಕಾರಿ ಇಟ್ಟುಕೊಂಡು ಮಾರಾಟ ಮಾಡಿದ್ದೇವೆ.ಬೆಳೆಯುವುದರ ಜೊತೆಗೆ ಮಾರಾಟ ಮಾಡುವ ಬಗೆಯೂ ರೈತರಿಗೆ ಗೊತ್ತಿರಬೇಕು. ವಾರಕ್ಕೊಮ್ಮೆ ತೋಟಕ್ಕೆ ಬರುವವರು ಕೃಷಿ ಮಾಡುವುದು ಸಾದುವೂ ಅಲ್ಲ ಸಾಧ್ಯವೂ ಇಲ್ಲ" ಇದು ನನ್ನ ಅನುಭವ ಎನ್ನುತ್ತಾರೆ ಹರೀಶ್ ಆಚಾರ್ಯ. ಹೆಚ್ಚಿನ ಮಾಹಿತಿಗೆ 9886420907 ಸಂಪಕರ್ಿಸಿ
Outstanding work sir...
ಪ್ರತ್ಯುತ್ತರಅಳಿಸಿOutstanding work sir...
ಪ್ರತ್ಯುತ್ತರಅಳಿಸಿ