ರವಿವಾರದ ರೈತ ಸಾವಯವ ಸಂತ
ತುಮಕೂರು : ಅವರು ಜಪಾನಿನ ನೈಸರ್ಗಿಕ ಕೃಷಿಕ ಮಸನೊಬ್ಬ ಫುಕವೋಕ ಅವರಿಂದ ಪ್ರೇರಣೆಪಡೆದು "ರವಿವಾರದ ರೈತ" ರಾಗಿ ಕೃಷಿ ಆರಂಭಿಸಿದವರು. "ಸಾವಯವ ಸಂತ"ನಾಗಿ ಇಂದು ನಾಡಿನ ಸಾವಿರಾರು ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ನಾಲ್ಕು ದಶಕಗಳ ತಮ್ಮ ಕೃಷಿ ಅನುಭವದ ಮೂಲಕ ಬೆಳಕಿನ ಬೇಸಾಯದಲ್ಲಿ ಭರವಸೆಮೂಡಿಸಿದ್ದಾರೆ.
ಇಪ್ಪತ್ತು ಎಕರೆಯಲ್ಲಿ ಕಟ್ಟಿದ ಅವರ ತೋಟಕ್ಕೆ ಉಳುಮೆ ಇಲ್ಲ.ಹೊರಗೆ ತಯಾರಿಸಿದ ಯಾವುದೇ ಸಾವಯವ ಗೊಬ್ಬರ ಇಲ್ಲ.ಕಳೆಗಳ ನಾಶ ಇಲ್ಲ.ವಿಷಕಾರಕ ರಾಸಾಯನಿಕಗಳ ಬಳಕೆ ಇಲ್ಲವೇ ಇಲ್ಲ.ಇದು ಸಹಜ ಕೃಷಿ, ಸೋಮಾರಿ ಬೇಸಾಯ ಎಂದರೂ ತಪ್ಪಿಲ್ಲ.
ಸೋಮಾರಿ ಬೇಸಾಯ ಅಂದ ತಕ್ಷಣ ಆದಾಯ ಕಡಿಮೆ ಎಂದುಕೊಂಡರೆ ನಿಮ್ಮ ಊಹೆ ತಪ್ಪು. "ಒಂದು ಹೆಕ್ಟರ್ ಅಂದರೆ ಎರಡೂವರೆ ಎಕರೆ ಪ್ರದೇಶದಲ್ಲಿ ತೆಗೆಯುತ್ತಿರುವ ಆದಾಯ ವಾರ್ಷಿಕ ಎಂಟು ಲಕ್ಷ ರೂಪಾಯಿ. ತೋಟದಲ್ಲಿರುವ ಎಲ್ಲಾ ಮರಗಿಡಗಳು ಫಲ ನೀಡಲು ಆರಂಭಿಸಿದರೆ ಅದು ಹದಿನೈದು ಲಕ್ಷಕ್ಕೆ ತಲುಪುತ್ತದೆ. ಸಣ್ಣ ಹಿಡುವಳಿದಾರ ರೈತ ನೆಮ್ಮದಿಯ ಜೀವನ ನಡೆಸಲು ಇದಕ್ಕಿಂತ ಇನ್ನೇನೂ ಬೇಕು ಹೇಳಿ".ಹಾಗಂತ ತಾವೇ ಕಟ್ಟಿದ ಹಸಿರು ತೋಟದ ನಡುವೆ ನಿಂತು ಕೇಳಿದರು ಸಾವಯವ ಕೃಷಿಕ ಜಿ.ಶಿವನಂಜಯ್ಯ ಬಾಳೆಕಾಯಿ.
ಸಾವಯವ ಕೃಷಿಯ ಮಾತು ಬಂದಾಗೆಲ್ಲ ನಮ್ಮ ನಡುವೆ ಪದೇ ಪದೇ ಪ್ರಸ್ತಾಪವಾಗುತ್ತಿದ್ದ ಹೆಸರು ಶಿವನಂಜಯ್ಯ ಬಾಳೆಕಾಯಿ. "ಸಾವಯವ ಕೃಷಿ ಮೂರು ದಶಕಗಳ ಒಂದು ಅನುಭವ ಕಥನ" ಎಂಬ ಅವರ ಪುಸ್ತಕ ಓದಿದ್ದ ನಾನು ಅವರ ಕೃಷಿ ವಿಧಾನದಿಂದ ಪ್ರಭಾವಿತನಾಗಿದ್ದೆ.
ಕಡಿಮೆ ನೀರು, ಉಳುಮೆ ಇಲ್ಲ,ಆಳುಕಾಳುಗಳನ್ನು ಹೆಚ್ಚು ಬೇಡದ,ನಿಶ್ಚಿತ ಆದಾಯ ತರಬಲ್ಲ ಸಹಜ ಕೃಷಿಗೆ ಮಾರುಹೋಗಿದ್ದೆ.ಇದರಿಂದ ಪ್ರಭಾವಿತನಾಗಿದ್ದೆ. ಹೀಗಿರುವಾಗ ಸಾಹಿತಿ,ಚಿಂತಕ ಹಸಿರು ಪ್ರೇಮಿ ಪ್ರೊ.ಕಾಳೇಗೌಡ ನಾಗವಾರ ಅವರೊಂದಿಗೆ ನಮ್ಮ ಕೃಷಿ ತಂಡ ಹೋಗಿ ನಿಂತದ್ದು ಶಿವನಂಜಯ್ಯ ಅವರ ಕರ್ಮಭೂಮಿಗೆ. ಪ್ರಕೃತಿಯಲ್ಲಿ ನಡೆದಿರುವ ಅಚ್ಚರಿಗಳನ್ನು ಕಂಡು ಬೆರಗಾದೆವು. ಅಂತಹ ಒಂದು ಅಪರೂಪದ ಸಹಜ ಕೃಷಿಯ ಕಥಾನಕ ಇದು.
ಜೆಸಿ ಪುರ (ಜಯಚಾಮರಾಜೇಂದ್ರ ಪುರ) ಎನ್ನುವುದು ಒಂದು ಹಳ್ಳಿ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು. ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕಿಬ್ಬನಹಳ್ಳಿ ಕ್ರಾಸಿನಿಂದ ಚಿಕ್ಕನಾಯಕನ ಹಳ್ಳಿ ಕಡೆಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಬದಿಯಲ್ಲೇ ಇದೆ ಶಿವನಂಜಯ್ಯ ಅವರ ಸಹಜ ಕೃಷಿಯ ತೋಟ.
ಇದು ಬರವನ್ನೇ ಹೊದ್ದು ಮಲಗಿದ ತಾಲೂಕು.ಅಂತರ್ಜಲ ಪಾತಾಳ ತಲುಪಿದೆ. ಸಾವಿರ ಅಡಿ ಕೊರೆದರು ನೀರು ಕಣ್ಣೀರು.ಇಂತಹ ಪರಿಸ್ಥಿತಿಯಲ್ಲಿಯೂ ಶಿವನಂಜಯ್ಯ ಅವತ ತೋಟ ಅಚ್ಚ ಹಸಿರಿನಿಂದ ನಳನಳಿಸುತ್ತಿವೆ.ಇದಕ್ಕೆ ಕಾರಣ ಅವರು ಅನುಸರಿಸುತ್ತಿರುವ ಸಹಜ,ಸಾವಯವ, ನೈಸಗರ್ಿಕ ಕೃಷಿ ವಿಧಾನ.
ಅಡಿಕೆ,ತೆಂಗು,ಬಾಳೆ,ಮೆಣಸು,ಏಲಕ್ಕಿ, ಸೀಬೆ,ಸಪೋಟ, ತೇಗ,ಹೊನ್ನೆ,ಬೀಟೆ, ಅಲಸು,ನುಗ್ಗೆ, ಹೂ ಹಣ್ಣು ತರಕಾರಿ, ಸೊಪ್ಪು ಹೀಗೆ ಎಲ್ಲವೂ ಇಲ್ಲಿ ಜಾಗ ಪಡೆದುಕೊಂಡಿವೆ. ಒಂದಲ್ಲ ಒಂದು ರೀತಿಯಲ್ಲಿ ಆದಾಯ ತಂದುಕೊಡುತ್ತಿವೆ. ಪರಿಶುದ್ಧ ಗಾಳಿ, ಕಣ್ಣಿಗೆ ತಂಪು ನೀಡುವ ಹಸಿರು, ಒತ್ತಡರಹಿತ ಜೀವನ ಎಪ್ಪತ್ತರ ಇಳಿವಯಸ್ಸಿನಲ್ಲೂ ಬಾಳೆಕಾಯಿ ಅವರನ್ನು ಜೀವಂತವಾಗಿಟ್ಟಿದೆ.ಯುವಕರು ನಾಚುವಂತೆ ತೋಟದ ತುಂಬಾ ಸುತ್ತಾಡುತ್ತಾರೆ. ತೋಟ ನೋಡಲು ಬರುವ ಆಸಕ್ತರಿಗೆ ಸಹಜ ಕೃಷಿಯ ಪಾಠ ಮಾಡುತ್ತಾರೆ.
ಮನೆಯ ಮುಂದೆ ಅಡಿಗೆ ಮನೆಗೆ ಬೇಕಾದ ಸೊಪ್ಪು ತರಕಾರಿ ಹಣ್ಣು ಸಂಬಾರ ಪದಾರ್ಥ ಎಲ್ಲವನ್ನು ಅವರ ಪತ್ನಿ ಕೈತೋಟದಲ್ಲಿ ಬೆಳೆದು ಕೊಳ್ಳುತ್ತಾರೆ. ಪುಟ್ಟದಾದ ಹೂವಿನ ತೋಟವೂ ಇದೆ. ಗುಳ್ಳೆ ಬದನೆ, ಮುಸುಕು ಬದನೆ, ಏಲಕ್ಕಿಯಂತಹ ಅಪರೂಪದ ತಳಿಗಳು ಅಲ್ಲಿವೆ. ಅವರ ಮಗ ಶ್ರೇಯಾಂಕ್ ಎಂಜಿನಿಯರ್ ಪದವಿಧರ, ಸೊಸೆ ಕೃಷಿ ಪದವಿಧರೆ. ಮನಸ್ಸು ಮಾಡಿದ್ದರೆ ನಗರದಲ್ಲಿ ನೌಕರಿ ಮಾಡಬಹುದಿತ್ತು. ಆದರೆ ಯಾರ ಹಂಗು ಇರದ,ಒತ್ತಡವೂ ಇಲ್ಲದ ಕೃಷಿಯನ್ನೆ ಉದ್ಯೋಗವಾಗಿಸಿಕೊಂಡಿದ್ದಾರೆ.
ದೀಪದ ಕೆಳಗೆ ಕತ್ತಲು: ತೋಟ ಸಮೀಪಿಸುತ್ತಿದ್ದಂತೆ ಇಲ್ಲಿ ಯಾವುದು ನಿಮ್ಮ ತೋಟ ಸಾರ್ ಎಂದೆ. "ಅದನ್ನು ಕೇಳಬೇಕೆ ನೋಡಿದರೆ ಗೊತ್ತಾಗಲ್ವೆ" ಎಂದರು ಶಿವನಂಜಯ್ಯ. ಸುತ್ತಮುತ್ತ ಹತ್ತಾರು ಅಡಿಕೆ,ತೆಂಗಿನ ತೋಟಗಳು ಒಣಗಿ ನಿಂತಿದ್ದವು.ಬಾಳೆಕಾಯಿ ಅವರ ತೋಟ ಮಾತ್ರ ಹಸಿರಿನಿಂದ ಕೂಡಿತ್ತು.ಇದಕ್ಕೆ ಕಾರಣ ಅವರು ಅನುಸರಿಸುತ್ತಾ ಬಂದ ಸಹಸಕೃಷಿ.
" ಪ್ರತಿ ತಿಂಗಳು ಮೂರನೇ ಭಾನುವಾರ ಸಿರಿ ಸಮೃದ್ಧಿ ಎಂಬ ಸಾವಯವ ಬಳಗ ಕಟ್ಟಿಕೊಂಡು ಸಭೆ ಮಾಡಿದ್ದೇವೆ. ರಾಜ್ಯಾದ್ಯಾಂತ ರೈತರಲ್ಲಿ ಜಾಗೃತಿ ಮೂಡಿಸಲು ಲೆಕ್ಕವಿಲ್ಲದಷ್ಟು ಉಪನ್ಯಾಸ ಕೊಟ್ಟಿದ್ದೇವೆ. ಬದಲಾದವರು ಮುನ್ನೂರು ಜನ. ನಮ್ಮೂರಲ್ಲೇ ಒಂದಿಬ್ಬರನ್ನು ಬೆಟ್ಟರೆ ಯಾರು ಬದಲಾಗಲ್ಲೇ ಇಲ್ಲ. ಅದಕ್ಕೆ ಹೇಳುವುದು ದೀಪದ ಕೆಳಗೆ ಕತ್ತಲು" ಅಂತ.. ಉತ್ತರ ಕನ್ನಡ, ದಕ್ಷಣ ಕನ್ನಡದಲ್ಲಿ ಪುಸ್ತಕ ನೋಡಿ ಕೃಷಿಯಲ್ಲಿ ಬದಲಾವಣೆ ಮಾಡಿಕೊಂಡು ಯಶಸ್ವಿಯಾದವರು ಸಿಗುತ್ತಾರೆ. ನಮ್ಮಲ್ಲಿ ಆ ರೀತಿ ಆಗಲಿಲ್ಲ ಅಂತ ಬೇಸರದಿಂದ ನುಡಿದರು.
ಮೈಸೂರಿನ ಗೋಲ್ಡ್ ಫಾರಂನ ಮೂತರ್ಿ, ಚಂದ್ರಶೇಖರ್ ಬೆಳಗೆರೆಯಂತಹ ಸಾವಯವ ಕೃಷಿ ಗೆಳೆಯರನ್ನು ಕಟ್ಟಿಕೊಡು ಎಲ್ಲಾ ಕಡೆ ಹುಚ್ಚರಂತೆ ತಿರುಗುತ್ತಿದ್ದ ದಿನಗಳನ್ನು ನೆನಪುಮಾಡಿಕೊಂಡರು. ತೋಟಕಟ್ಟುವ ಮೊದಲು ಶಿವನಂಜಯ್ಯ ನೋಡಿರುವ ತೋಟಗಳಿಗೆ ಲೆಕ್ಕವಿಲ್ಲ.ಭಾಗವಹಿಸಿದ ಸಭೆಗಳು ಅಸಂಖ್ಯಾತ.
ಒಂದು ಹೆಕ್ಟರ್ನಲ್ಲಿ ನೆಮ್ಮದಿ ಬದುಕು : "ಇದು ಎರಡೂವರೆ ಎಕರೆ ಪ್ರದೇಶದಲ್ಲಿ ಕಟ್ಟಿರುವ ತೋಟ. ಇಲ್ಲಿರುವ ಯಾವ ಗಿಡಮರಗಳಿಗೂ ಉಳುಮೆ ಎಂದರೆ ಏನೂ ಎನ್ನುವುದೇ ಗೊತ್ತಿಲ್ಲ.36 ವರ್ಷದ ತೋಟ ಇದು. ಮೊದಲು ಇದು ರಾಗಿ ಹೊಲ. ನನ್ನ ಪ್ರಯೋಗ ಶುರುವಾದ ಮೇಲೆ ಇಲ್ಲಿ 1200 ಅಡಿಕೆ ಮರಗಳಿವೆ ಅದರಲ್ಲಿ 600 ಫಲ ಫಲ ಬಿಡುತ್ತವೆ. 110 ತೆಂಗಿನ ಮರಗಳಿವೆ. 20 ಸೀಬೆ ಗಿಡ ಇದೆ. ಬಾಳೆ ಇದೆ. ವೆನ್ನಿಲ್ಲಾ ಇದೆ. ಏಲಕ್ಕಿ, ಫಣಿಯೂರ್ ಮೆಣಸು ಇದೆ.500 ತೇಗದ ಮರಗಳಿವೆ. ಗೆಣಸು ಜೀವಂತ ಹೊದಿಕೆಯಾಗಿ ಕೆಲಸಮಾಡುತ್ತದೆ. ಅಡಿಕೆ, ಮೆಣಸು,ತೆಂಗು ಆರ್ವೇಸ್ಟ್
ಮಾಡುವಾಗ ಮಾತ್ರ ಗೆಣಸು ಕೀಳುತ್ತೇವೆ. ಅದು ಆದಾಯವೇ. ವಾರ್ಷಿಕ 60 ರಿಂದ 70 ಕಾರ್ಮಿಕರು ಮಾತ್ರ ಈ ತೋಟ ಬೇಡುತ್ತದೆ.ವಾಷರ್ಿಕ 8 ಲಕ್ಷ ಆದಾಯ ಇದೆ. ಎಲ್ಲಾ ಅಡಿಕೆಗಳು ಫಲ ನೀಡಲು ಶುರುವಾದರೆ ಅದು 12 ರಿಂದ 15 ಲಕ್ಷ ರೂಪಾಯಿವರೆಗೂ ತಲುಪುತ್ತದೆ.
ಈ ಬಾರಿ 600 ಅಡಿಕೆಗಿಡದಿಂದ 15 ಕ್ವಿಂಟಾಲ್ ಅಡಿಕೆ ಬಂತು.ಕಾಯಿ ಅಡಿಕೆಯನ್ನೆ ಕ್ವಿಂಟಾಲ್ಗೆ 15,000 ಸಾವಿರ ರೂ,ಗೆ ಮಾರಾಟ ಮಾಡಿದೆ. 25 ಕ್ವಿಂಟಾಲ್ ಕೊಬ್ಬರಿ ಬರುತ್ತೆ. 7 ಲಕ್ಷ ಆದಾಯ ಆಯಿತು. 1600 ಗಿಡದಿಂದ ಇನ್ನೂ ಅಡಿಕೆ ಬರಬೇಕು. ಇಂಟರ್ ಕ್ರಾಫ್ ಇದೆ. ಗ್ಲಿರಿಸೀಡಿಯಾ ನೀರನ್ನು ಆಳಕ್ಕೆ ಹಿಂಗಿಸುತ್ತದೆ. ಎರಡು ಅಡಿ ಆಳದಲ್ಲಿರುವ ಪೋಷಾಕಾಂಶಗಳನ್ನು ಆಲುವಾಣ, ಗ್ಲಿರೀಸಿಡಿಯಾ, ಅಗಸೆ ಮೇಲಕ್ಕೆ ಎತ್ತಿ ಗಿಡಗಳಿಗೆ ಕೊಡುತ್ತವೆ.ಇವೆಲ್ಲ ತೋಟದ ತುಂಬಾ ಇವೆ.
ಬೇಸಿಗೆಕಾಲ ಆದ್ದರಿಂದ ಗಿಡಗಳ ಬುಡಕ್ಕೆ ಬಿಟ್ಟರೆ ಬೇರೆಲ್ಲಿಗೂ ನೀರು ಕೊಡುವುದಿಲ್ಲ. ಮಣ್ಣು ನೋಡಿ ಎಷ್ಟು ಮೃದುವಾಗಿದೆ ಎಂದು ಬಾಚಿ ಹಿಡಿದರು.ಮಣ್ಣು ಕಂಪು ಬೀರಿತು. ತೋಟದ ಒಂದು ಭಾಗದಲ್ಲಿ 600 ಅಡಿಕೆ ಮರಗಳಿವೆ.ಉಳಿದ ಭಾಗದಲ್ಲಿ ಅಡಿಕೆ ತೆಂಗು ಮಿಶ್ರ ಬೆಳೆಯಾಗಿವೆ. ತೋಟದ ಸುತ್ತಾ ಜೀವಂತ ಬೇಲಿಯಾಗಿ ಮರ ಗಿಡಗಳಿವೆ.
ಕೀಟಬಾಧೆಗೆ 10 ಕೆಜಿ ಸಗಣಿ, 100 ಗ್ರಾಂ ಶುದ್ಧ ಅರಿಶಿನ ಪುಡಿ,2 ಕೆಜಿ ಬೆಲ್ಲ ಇದನ್ನು 50 ಲೀಟರ್ ನೀರಿನಲ್ಲಿ 24 ಗಂಟೆ ನೆನೆಹಾಕಿ 1: 10 ಪ್ರಮಾಣದಲ್ಲಿ ಸಿಂಪರಣೆ ಮಾಡುತ್ತೇವೆ ಅಥವಾ ಗಿಡದ ಬುಡಕ್ಕೆ ಹಾಕುತ್ತೇವೆ. ಯಾವ ರೋಗಗಳು ಹತ್ತಿರ ಸುಳಿಯುವುದಿಲ್ಲ.ಮಳೆಗಾಲದಲ್ಲಿ ವರ್ಷಕ್ಕೊಮ್ಮೆ ಗಿಡಗಳಿಗೆ ಕೋಳಿ ಗೊಬ್ಬರ, ಕಾಂಪೋಸ್ಟ್ ಗೊಬ್ಬರವನ್ನು ಒಂದೊಂದು ಬುಟ್ಟಿ ಕೊಡುತ್ತೇವೆ. ಬೇರೆನನ್ನೂ ಮಾಡುವುದಿಲ್ಲ. 15 ದಿನಕ್ಕೊಮ್ಮೆ ತೋಟಕ್ಕೆ ನಾಲ್ಕು ಗಂಟೆಗಳ ಕಾಲ ಹನಿನೀರಾವರಿ ಪದ್ಧತಿಯಲ್ಲಿ ನೀರುಣಿಸುತ್ತೇವೆ ಎನ್ನುತ್ತಾರೆ.
ಪುಟ್ಟ ಕಾಡು : ಎರಡು ಕುಂಟೆ ಪ್ರದೇಶದಲ್ಲಿ ಪುಟ್ಟ ಕಾಡೊಂದನ್ನು ಬೆಳೆಸಿದ್ದಾರೆ. ಅಲ್ಲಿ ತೇಗ, ಬೀಟೆ, ರೋಸ್ ಹುಡ್, ಮಾವು, ಬಿದಿರು, ನೆಲ್ಲಿ ಹೀಗೆ ಹತ್ತು ಹದಿನೈದು ಜಾತಿಯ ಮರಗಳಿವೆ.
ಪ್ರತಿಯೊಬ್ಬ ರೈತನು ತನ್ನ ಜಮೀನಿನಲ್ಲಿ ಕಾಡು ಮಾಡಿಕೊಳ್ಳಬೇಕು. ಇದರಿಂದ ತುಂಬಾ ಉಪಯೋಗಗಳಿವೆ. ಮಳೆ ಕರೆಯಲು ಕಾಡು ಬೇಕೆ ಬೇಕು. ಮಳೆ ಬಂದಾಗ ನೀರು ಸಂಗ್ರಹಣೆಗೆ ಪುಟ್ಟ ಅಣೆಕಟ್ಟು ಅಥವಾ ಹಿಂಗುಗುಂಡಿ ಮಾಡಿಕೊಳ್ಳಬೇಕು.ಆಗ ಬೋರ್ವೆಲ್ಗಳಲ್ಲಿ ಜೀವ ಇರುತ್ತದೆ.ಸುತ್ತಮುತ್ತಲಿನ ಕೊಳವೆ ಬಾವಿಗಳು ಬತ್ತಿಹೋದರು. ನಮ್ಮದು ಮಾತ್ರ 25 ವರ್ಷದಿಂದಲ್ಲೂ ಎರಡು ಇಂಚು ನೀರು ಕೊಡುತ್ತಲೇ ಇದೆ.
ಮತ್ತೂ ಬೇಕಾದರೆ ಇಲ್ಲಿ ಎರಡು ಹಸು ,10 ಕುರಿ, 300 ನಾಟಿ ಕೋಳಿ ಸಾಕಬಹುದು. ಅವುಗಳಿಗೆ ಬೇಕಾದ ಮೇವು ಇಲ್ಲೇ ಇದೆ. ಹಾಲು, ಗೊಬ್ಬರವೂ ಸಿಕ್ಕಂತಾಗುತ್ತದೆ. ಹಣ, ಆರೋಗ್ಯ,ಹಸಿರು, ಹಣ್ಣು ಎಲ್ಲಾ ಎರಡೂವರೆ ಎಕರೆಯಲ್ಲೇ ಇದೆ. ಇದಕ್ಕಿಂತ ಯಾವ ಮಾದರಿಗಳು ನಮ್ಮ ರೈತರಿಗೆ ಬೇಕು ಎನ್ನುತ್ತಾರೆ ಶಿವನಂಜಯ್ಯ.
ಒಂದು ಹುಲ್ಲಿನ ಕ್ರಾಂತಿ : ಪಿ.ಲಂಕೇಶ್ ಮುಕ್ತ ವಿಶ್ವ ವಿದ್ಯಾನಿಲಯದ ವಿದ್ಯಾಥರ್ಿಯಾದ ಶಿವನಂಜಯ್ಯ ಪತ್ರಿಕೆಯಲ್ಲಿ ಬಂದ ಫುಕವೋಕ ಅವರ "ಒಂದು ಹುಲ್ಲಿನ ಕ್ರಾಂತಿ" ಪುಸ್ತಕದ ಬಗೆ ಓದಿದರು.ಸೀದಾ ಪುಸ್ತಕ ಮಳೆಗೆಗೆ ಹೋಗಿ ಪುಸ್ತಕ ಖರೀದಿಸಿ ಒಂದೇ ಸಮನೆ ಓದಿ ಮುಗಿಸಿದರು.
"ನನಗೆ ಎಷ್ಟು ಆನಂದವಾಯಿತು ಎಂದರೆ ಇಡೀ ರಾತ್ರಿ ನಿದ್ದೆ ಬರಲಿಲ್ಲ.ಮಾರನೇ ದಿನ ಸಹಜಕೃಷಿಯ ಕನಸು ಕಾಣುತ್ತಾ ಜಮೀನಿನಲ್ಲಿ ಸುತ್ತಾಡಿದೆ.ಸಹಜಕೃಷಿಯ ಗುರು ಫುಕೋವಕ ತಮ್ಮ ಕೃಷಿಯ ಮೂಲಕ ಬುದ್ಧನ ದರ್ಶನ ಮಾಡಿಸಿದ್ದರು" ಎನ್ನುತ್ತಾರೆ ಶಿವನಂಜಯ್ಯ.
ಬೆಂಗಳೂರಿನಲ್ಲಿ ತತ್ವಶಾಸ್ತ್ರದ ಪ್ರಧ್ಯಾಪಕರಾಗಿದ್ದ ಇವರು ರವಿವಾರದ ರೈತರಾಗಿ ಕೃಷಿ ಆರಂಭಿಸಿದವರು, ಪ್ರಾಂಶುಪಾಲರಾಗಿ ನಿವೃತ್ತರಾಗಿ ಈಗ ಜೀವನವನ್ನು ಪೂರ್ಣಕಾಲೀಕ ರೈತರಾಗಿ ಹಸಿರಿನ ನಡುವೆ ಕಳೆಯುತ್ತಿದ್ದಾರೆ. ಹಳ್ಳದಿಂದ ಬೋರ್ಗೆ ನೀರು ಮರುಪುರಾಣ ಮಾಡಿದ್ದು, ಸಿಎಸ್ಐನ ರೈನ್ ವಾಟರ್ ಆರ್ವೆಸ್ಟಿಂಗ್ ಇನ್ ರೂರಲ್ ಏರಿಯಾ ಎಂಬ ವೆಬ್ ಸೈಟ್ ನಲ್ಲಿ ಅದರ ವಿವರ ನೋಡಬಹುದು.
ಇವರಲ್ಲಿ 25 ವರ್ಷದ ಬಾಳೆ ಇಂದಿಗೂ ಇದೆ. 10 ರಿಂದ 12 ಕೆಜಿ ಇಳುವರಿ ಬರುತ್ತಿದೆ. ಬಹು ಮಾಡಿ ಪದ್ಧತಿಯಲ್ಲಿ ಬೇಸಾಯ ಮಾಡುವ ಇವರು ಹೆಚ್ಚು ಬೆಳಕು ಬಳಸಿಕೊಳ್ಳುವ ತೆಂಗು ನಂತರ ಅಡಿಕೆ ಅದರ ಕೆಳಗೆ ಬಾಳೆ . ಮರದ ಮೇಲೆ ಬಳ್ಳಿ ಹಬ್ಬಿಸೋದು ಮಾಡುತ್ತಾರೆ.ಇದು ಗಿಡದ ಮೇಲೆ ಬೀಳುವ ಬಿಸಿಲನ್ನು ಬಳಸಿಕೊಳ್ಳುವ ವಿಧಾನ. ಬಿಸಿಲನ್ನು ಕಾಳಾಗಿ ಪರಿವತರ್ಿಸಿ ಗಿಡಗಳಿಗೆ ಕೊಡುವುದೆ ಸಾವಯವ ಬೇಸಾಯ ಎನ್ನುತ್ತಾರೆ.
ರೈತರಿಗೆ ಮಣ್ಣು, ಗಿಡಮರ, ಮಳೆ ನೀರು ಸಂಬಂಧಗಳ ಬಗ್ಗೆ ವೈಜ್ಞಾನಿಕ ತಿಳುವಳಿಕೆ ಇಲ್ಲ. ಶಾಲೆಗಳಲ್ಲಿ ಹೈಸ್ಕೂಲ್ ವರೆಗೆ ಪರೀಕ್ಷೆ ಇಲ್ಲದ ಕೃಷಿ ಸಂಬಂಧಿತ ಪಠ್ಯ ಇರಬೇಕು.ಇದರಿಂದ ಮಧ್ಯಂತರದಲ್ಲಿ ಶಾಲೆಬಿಟ್ಟವರಿಗೆ ಅನುಕೂಲ ಆಗುತ್ತದೆ.ಕೃಷಿಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದಂತೆಯೂ ಆಗುತ್ತದೆ ಎಂದು ಹೇಳುತ್ತಾರೆ. ಶಾಲೆಗಳಲ್ಲಿ "ಫಾರ್ಮರ್ ಕ್ಲಬ್" ಮಾಡುವ ಬಗ್ಗೆ ಶಿಕ್ಷಕರು ಚಿಂತಿಸುವುದು ಒಳಿತು.
ಚೇರು ಹತ್ತಿ ನಿಂತರು ನಾಗೇಶ್ ಹೆಗಡೆ : ಪ್ರಜಾವಾಣಿಯಲ್ಲಿ ಕೃಷಿ ದರ್ಶನ ನೋಡಿಕೊಳ್ಳುತ್ತಿದ್ದ ನಾಗೇಶ್ ಹೆಗಡೆ ಇವರ ಬಗ್ಗೆ "ರವಿವಾರ ರೈತನ ಸಹಜ ಕೃಷಿ" ಲೇಖನ ಪ್ರಕಟಿಸುವಾಗ,ಇವರನ್ನು ಕರೆದು " ಅಲ್ಲಾರೀ ಶಿವನಂಜಯ್ಯ ಈ ದೇಶದ ರೈತರು ತೆಂಗಿನ ಕಾಯಿಯನ್ನು ಉದ್ದುದ್ದ ನೆಟ್ಟು ಸಸಿ ಮಾಡ್ತಾರೆ. ನೀವೇನ್ ರ್ರೀ ಅದನ್ನ ಅಡ್ಡ ಮಲಗಿಸಿ ಸಸಿಮಾಡಿ ಅಂತೀರಾ" ಅಂತ ಕೇಳಿದ್ದಾರೆ. ಅದಕ್ಕೆ ಇವರು "ಅಲ್ಲಾ ಸಾರ್ ತೆಂಗಿನ ಮರದಿಂದ ಕಾಯಿ ಕೆಳಗೆ ಬಿದ್ದಾಗ ಅಡ್ಡ ತಾನೆ ಬೀಳೋದು.ಕಾಯಿಯಿಂದ ಗಿಡ ಮಾಡೋದು ನಮಗಿಂತ ಮರಕ್ಕೆ ಚೆನ್ನಾಗಿ ಗೊತ್ತಿರುತ್ತೆ ಅಲ್ವಾ" ಎಂದರು.
"ಇದು ಕಂಡ್ರಿ ಉತ್ತರ" ಅಂತ ಅಂದ ನಾಗೇಶ್ ಹೆಗಡೆ ಕುಳಿತಿದ್ದ ಚೇರಿನ ಮೇಲೆ ಹತ್ತಿ ನಿಂತು ತಮಗಾದ ಸಂತೋಷವನ್ನು ವ್ಯಕ್ತಪಡಿಸಿಬಿಟ್ಟರು. ಇದರಿಂದ ನಾನೇ ಕಕ್ಕಾಬಿಕ್ಕಿ ಆದೆ.ಅದನ್ನು ಎಂದಿಗೂ ಮರೆಯಲಾರೆ ಎನ್ನುತ್ತಾರೆ ಶಿವನಂಜಯ್ಯ.
ಆಧುನಿಕ ಕೃಷಿ ರೈತರನ್ನು ಸುಲಿಗೆ ಮಾಡಿ ಬೆತ್ತಲು ಮಾಡಿದೆ. ಬೆಳೆಗಳಿಗೆ ವೈಜ್ಞಾನಿಕ ದರ ಕನಸಿನ ಮಾತು.ಅದಕ್ಕೆ ರೈತರು ಉತ್ಪಾದನಾ ವೆಚ್ಚ ಕಡಿಮೆ ಮಾಡಿಕೊಳ್ಳುವುದೊಂದೇ ಇರುವ ಏಕೈಕ ಮಾರ್ಗ.ಬೆಳೆಗೆ ಗೊಬ್ಬರ ಒದಗಿಸುವುದಷ್ಟೇ ಕೃಷಿಯಲ್ಲ. ಕೃಷಿ ಎಂದರೆ ಬೀಜ,ನೀರಾವರಿ,ಬೆಳೆ ನೆಡುವ ವಿಧಾನ,ಬೆಳೆಯ ಕಾಲ, ಮಿಶ್ರ ಬೆಳೆ ಹೀಗೆ ಎಲ್ಲಾ ಮಗ್ಗಲಿನಿಂದಲ್ಲೂ ನೋಡಬೇಕು ಎನ್ನುತ್ತಾರೆ. ಹೆಚ್ಚಿನ ಮಾಹಿತಿಗೆ ಆಸಕ್ತರು 9964451421 ಸಂಪರ್ಕಿಸಿ