`ಗ್ರಾಮಮುಖಿ' ಹಳ್ಳಿಗಾಡಿನ ಬದುಕಿಗೆ
ಚಿಕಿತ್ಸಾತ್ಮಕ ಬರಹಗಳ ಕಥನ
# ಗ್ರಾಮೀಣ ಅಭಿವೃದ್ಧಿಗೆ ಮಾದರಿ # ಮನೆಮಾತಾಯಿತು `ಸಂಸ್ಕೃತಿ ಹಬ್ಬ'
ಭಾರತ ದೇಶದ ಎಲ್ಲಾ ಹಳ್ಳಿಗಳಂತೆ ಅದು ಒಂದು ಸಾಮಾನ್ಯ ಹಳ್ಳಿ. ಅಲ್ಲೊಂದು ಸರಕಾರಿ ಶಾಲೆ ಇದೆ. ಅಲ್ಲಿನ ಮಕ್ಕಳು ನಾಲ್ಕನೇ ವರ್ಷಕ್ಕೆ ಕಂಪ್ಯೂಟರ್ ಮುಟ್ಟುತ್ತಾರೆ. ಇಲ್ಲಿ ಕಲಿತವರು ಕೆಎಎಸ್ ಪರೀಕ್ಷೆ ಪಾಸು ಮಾಡಿದ್ದಾರೆ.ಪಿಎಚ್ ಡಿ ಪಡೆದವರೂ ಇದ್ದಾರೆ.ಶಾಲೆಯಲ್ಲಿ ಕಿರು ರಂಗಮಂದಿರ ಕೂಡ ಇದೆ.ಕವಿಗಳು,ಕಾದಂಬರಿಕಾರ್ತಿಯರು,ಕೃಷಿ ಬರಹಗಾರರು ಹುಟ್ಟಿಕೊಂಡಿದ್ದಾರೆ.ಇದು ಒಂದು ಜೀವಂತ ಗ್ರಂಥಾಲಯಕ್ಕಿರುವ ಶಕ್ತಿ. ನಾನು ನಿಮಗೆ ಕತೆ ಹೇಳುತ್ತಿಲ್ಲ.ಇದೆಲ್ಲಾ ಕಣ್ಣ ಮುಂದೆ ನಡೆಯುತ್ತಿರುವ ಸತ್ಯಸಂಗತಿಗಳು. ಇಷ್ಟೆಲ್ಲಾ ಬದಲಾವಣೆಗೆ ತೆರೆದುಕೊಂಡಿರುವ ಹಳ್ಳಿ ನಾಗತಿಹಳ್ಳಿ.ಇದೆಲ್ಲದ್ದರ ಹಿಂದಿನ ಶಕ್ತಿ ಮತ್ತು ವ್ಯಕ್ತಿ ನಾಗತಿಹಳ್ಳಿ ಚಂದ್ರಶೇಖರ್.ಸಾಹಿತಿ,ಸಿನಿಮಾ ನಿರ್ದೇಶಕ,ಅಲೆಮಾರಿ ಹೀಗೆ ಬಹುಮುಖಿ ವ್ಯಕ್ತಿತ್ವದ ನಾಗತಿಹಳ್ಳಿ ಚಂದ್ರಶೇಖರ್ ಎಲ್ಲರಿಗೂ ಗೊತ್ತು.ಆದರೆ ಹುಟ್ಟಿದೂರಿನ ಋಣ ತೀರಿಸುತ್ತಾ, ಹಳ್ಳಿಗಾಡಿನ ಜನರಲ್ಲಿ ಆತ್ಮ ವಿಶ್ವಾಸ ಮೂಡಿಸುತ್ತಿರುವ ಚಂದ್ರಶೇಖರ್ ಅನೇಕರಿಗೆ ಗೊತ್ತಿಲ್ಲ.ಅವರ ಇನ್ನೊಂದು ಮುಖದ ಅನಾವರಣ ಇದು.ನನ್ನ ಪ್ರೀತಿಯಾ ಹುಡುಗಿ ಎಂಬ ಕಥಾಸಂಕಲನದ ಮೂಲಕ ಹದಿಹರೆಯದವರ ಮನಸ್ಸು ಕದ್ದ ಚಂದ್ರಶೇಖರ್ ಹಾಲಿನ ಡೈರಿಯಲ್ಲಿ ರಾತ್ರಿಪಾಳಿ ಕೆಲಸಮಾಡಿ ಕನ್ನಡ ಎಂ.ಎ.ನಲ್ಲಿ ಎಂಟು ಪದಕಗಳನ್ನು ಬಾಚಿಕೊಂಡ ಚಿನ್ನದ ಹುಡುಗ ಎಂಬ ಖ್ಯಾತಿಗೆ ಪಾತ್ರವಾಗಿದ್ದವರು. ಬರವಣಿಗೆ,ಸಿನಿಮಾ,ಕಿರುತೆರೆಯಲ್ಲಿ ನಿರಂತರ ಪ್ರಯೋಗದಲ್ಲಿ ತೊಡಗಿರುವ ಇವರು ಕಳೆದ ಹದಿಮೂರು ವರ್ಷಗಳಿಂದ ನಾಗತಿಹಳ್ಳಿಯಲ್ಲಿ `ಸಂಸ್ಕೃತಿ ಹಬ್ಬ' ನಡೆಸಿಕೊಂಡು ಬರುತ್ತಿದ್ದಾರೆ. ಕನ್ನಡ ನಾಡಿನ ಸಾಂಸ್ಕೃತಿಕ ಜಗತ್ತಿನ ಗಮನ ಸೆಳೆದಿದ್ದಾರೆ.
ಅವನು ಹಾಗೆ.ಇವನು ಹೀಗೆ ಎಂದು ಸದಾ ಮಾತನಾಡುವವರು ನಾನು ಹೇಗೆ ? ಎಂದು ಕೇಳಿಕೊಂಡರೆ ಸಾಕು. ಓದಿ ಒಳ್ಳೆಯ ಉದ್ಯೋಗದಲ್ಲಿರುವವರು,ನಗರದಲ್ಲಿ ಒಂದಷ್ಟು ಕಾಸು ಸಂಪಾದಿಸಿ ಶ್ರೀಮಂತರಾದವರು ಹಳ್ಳಿಗಳಿಗೆ ಹೇಗೆ ನೆರವಾಗಬಹುದು ಎನ್ನುವುದಕ್ಕೆ ನಾಗತಿಹಳ್ಳಿಯಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಚಟುವಟಿಕೆಗಳು ಮಾದರಿಯಾಗುತ್ತವೆ.
ನಾಗತಿಹಳ್ಳಿ ಸಂಸ್ಕೃತಿ ಹಬ್ಬದ ಹತ್ತನೇ ವರ್ಷದ ನೆನಪಿಗೆ ಹಳ್ಳಿಗಾಡಿನ ಬದುಕಿಗೆ ಚಿಕಿತ್ಸಾತ್ಮಕ ಚಿಂತನೆಗಳನ್ನು ಒಳಗೊಂಡ `ಗ್ರಾಮಮುಖಿ' ಎಂಬ ಬರಹಗಳ ಪುಸ್ತಕವೊಂದನ್ನು ಪ್ರಕಟಿಸಲಾಗಿದೆ. ಡಾ.ಡಿ.ಕೆ.ಚೌಟ ಅವರ ಗೌರವ ಸಂಪಾದಕತ್ವದಲ್ಲಿ ಶಿವಕುಮಾರ ಕಾರೇಪುರ ಕೃತಿಯನ್ನು ಸಂಪಾದಿಸಿದ್ದಾರೆ. ರೈತಚಳವಳಿ,ಹಳ್ಳಿಗಾಡಿನ ಬದುಕು,ಕೃಷಿಯಲ್ಲಿ ಮಹಿಳೆಯ ಪಾತ್ರ,ಮರೆಯಾಗುತ್ತಿರುವ ಪಾರಂಪರಿಕ ಕಸುಬುಗಳು,ಹಳ್ಳಿಗಳಲ್ಲಿ ವಿದ್ಯಾವಂತರ ಸಾಮಾಜಿಕ ಜವಾಬ್ದಾರಿಗಳು ಹಾಗೂ ಸಂಸ್ಕೃತಿ ಹಬ್ಬ ನಡೆದ ದಾರಿಯ ಬಗ್ಗೆ ನಾಡಿನ ಚಿಂತಕರು,ಸಾಹಿತಿಗಳು,ಕೃಷಿಕರು ಲೇಖನಗಳನ್ನು ಬರೆದಿದ್ದಾರೆ.
ಹಿ.ಶಿ.ರಾಮಚಂದ್ರೇಗೌಡ, ಆಕಾಶವಾಣಿ ಕೃಷಿರಂಗದ ಎನ್.ಕೇಶವಮೂತರ್ಿ,ಶಿವಾನಂದ ಕಳವೆ,ಅನಿತಾ ಪೈಲೂರು ಮತ್ತಿತರರು ಮೌಲಿಕವಾದ ಲೇಖನಗಳನ್ನು ಬರೆದಿದ್ದಾರೆ.
ಪ್ರತಿಯೊಂದು ಲೇಖನವು ಗ್ರಾಮಮುಖಿಯಾಗಿದೆ. ಹಳ್ಳಿಯಲ್ಲಿ ಹುಟ್ಟಿ ನಗರದಲ್ಲಿದ್ದು ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಎಂಬ ಮನಸ್ಥಿತಿಯಲ್ಲಿರುವ ವಿದ್ಯಾವಂತರನ್ನು ಕೃತಿ ಆಲೋಚಿಸುವಂತೆ ಮಾಡುತ್ತದೆ.
ನಾಗತಿಹಳ್ಳಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಪ್ರತಿವರ್ಷ ಮಾರ್ಚ್/ಏಪ್ರಿಲ್ ತಿಂಗಳಲ್ಲಿ ನಾಗತಿಹಳ್ಳಿಯ ರೈತರು,ರೈತ ಮಹಿಳೆಯರು ದೇಶದ ನಾನಾ ಭಾಗಗಳಿಗೆ ಕೃಷಿ ಪ್ರವಾಸ ಹೋಗುತ್ತಾರೆ. ಕೃಷಿಯ ಎಲ್ಲಾ ಸಾಧ್ಯತೆಗಳನ್ನು ಪರಿಚಯಿಸುವ ಮೂಲಕ ಆತ್ಮವಿಶ್ವಾಸ ಮೂಡಿಸುವುದು ಕೃಷಿ ಪ್ರವಾಸದ ಉದ್ದೇಶ. ಇಂತಹ ಗುಣಾತ್ಮಕ ಬದಲಾವಣೆಗಳು ಪ್ರತಿ ಹಳ್ಳಿಯಲ್ಲೂ ಆಗಬೇಕು ಎನ್ನುವುದು ಚಂದ್ರು ಅವರ ಆಶಯ.
ಹಳ್ಳಿಗಳಿಂದ ಬಂದು ನಗರಗಳಲ್ಲಿ ಬದುಕು ಕಟ್ಟಿಕೊಂಡವರು.ಉನ್ನತ ಹುದ್ದೆಯಲ್ಲಿ ಇರುವವರು ತಮ್ಮ ಊರಿಗೆ ಏನನ್ನಾದರೂ ಮಾಡಬಹುದು ಎಂದು ಬಯಸಿದರೆ ನಾಗತಿಹಳ್ಳಿಯಲ್ಲಿ ನಡೆಯುತ್ತಿರುವ ಪ್ರಯೋಗಗಳು ಮಾದರಿಯಾಗುತ್ತವೆ.
"ಹಳ್ಳಿಗಳು ನಮ್ಮೆಲ್ಲರ ಬಾಲ್ಯದ ಕೋಶ.ಆರ್ಥಿಕವಾಗಿ ಅವು ದೊಡ್ಡದ್ದನ್ನು ಕೊಡದಿದ್ದರೂ ಆತ್ಮಚೈತನ್ಯವನ್ನು ನೀಡಿದ ತಾಯಂದಿರು. ಈ ತಾಯಿ ಈಗ ಅನಾಥಳಾಗಿದ್ದಾಳೆ.ಹಳ್ಳಿಗಳಲಿದ್ದ ಜೀವನ ಪ್ರೀತಿ,ದುಡಿಮೆ,ಕಾಯಕ ನಿಷ್ಠೆ,ತೃಪ್ತಿ.ಹಬ್ಬ ಹರಿದಿನಗಳ ಸಂಭ್ರಮ,ಒಟ್ಟಾರೆ ಸಾಮುದಾಯಿಕ ಬದುಕು ನಾಶವಾಗಿದೆ.ಹಳ್ಳಿಗಾಡಿನಿಂದ ಬಂದ ನಮ್ಮಂತವರು ಏನಾದರೂ ಕಾಯಕಲ್ಪ ಮಾಡಬಹುದೆ ಎಂಬ ಯೋಚನೆ ಕಾಡುತ್ತಲೇ ಇತ್ತು.ಅದನ್ನು ಕುರಿತು ಪುಸ್ತಕ ಬರೆಯುತ್ತಾ,ಭಾಷಣ ಮಾಡುತ್ತಾ ಕೂತರೆ ಪ್ರಯೋಜನವಿಲ್ಲ.ನಾವೇ ಮೊದಲು ಕಾರ್ಯರೂಪಕ್ಕಿಳಿಸಬೇಕು ಅನಿಸಿತು. ಅದಕ್ಕಾಗಿ `ಸಂಸ್ಕೃತಿ ಹಬ್ಬ' ಪರಿಕಲ್ಪನೆ ರೂಪುಗೊಂಡಿತು" ಎನ್ನುತ್ತಾರೆ ನಾಗತಿಹಳ್ಳಿ ಚಂದ್ರಶೇಖರ್.
ಎಲ್ಲಾ ಹಳ್ಳಿಗಳಿಗಳಿಗೂ ಇರುವ ಗುಣವಾಗುಣಗಳು ನಾಗತಿಹಳ್ಳಿಗೂ ಇವೆ.ಸರಕಾರ ಮತ್ತು ರಾಜಕಾರಣಿಗಳು ಎಂಜಲು ಬಿಸ್ಕತ್ ಎಸೆದು ಅವರನ್ನು ಆಲಸಿಗಳನ್ನಾಗಿ ಮಾಡಿದ್ದಾರೆ.ಪಕ್ಷ ಪದ್ಧತಿಗಳು ಹಳ್ಳಿಗಳನ್ನು ಒಡೆದು ಚೂರುಮಾಡಿವೆ.ಯಾರೇ ಹೋಗಿ ಪ್ರಗತಿಯ ಮಾತಾಡಿದರೆ,ಶಾಲೆಗೆ ಗಿಡ ನೆಟ್ಟರೆ ಅದನ್ನು ಅನುಮಾನದಿಂದ ನೋಡುತ್ತಾರೆ.ಇವನೇಕೆ ಇಲ್ಲಿಗೆ ಬಂದ?ಇವನ ಅಜೆಂಡಾ ಏನಿರಬಹುದು? ಎಂದು ಶೋಧಿಸಿ ಸ್ವಂತ ಗಾಸಿಪ್ಪು ಹರಡುತ್ತಾರೆ.ನಾಗತಿಹಳ್ಳಿ ಚಂದ್ರು ಅವರಿಗೂ ಇದೆಲ್ಲಾ ಆಗಿದೆ. ಆದರೆ ಹಳ್ಳಿಗಳಲ್ಲಿ ಏನು ಕೆಲಸ ಮಾಡಬೇಕಾದರೂ ಅಪಾರ ತಾಳ್ಮೆಬೇಕು ಎನ್ನುವುದು ಅವರಿಗೆ ಗೊತ್ತಾಗಿದೆ. ಹತ್ತು ವರ್ಷಗಳನ್ನು ದಾಟಿದ ಮೆಲೆ ಜನರ ಪ್ರತಿಕ್ರಿಯೆ ಬಗ್ಗೆ ಅವರಿಗೆ ಆಸಕ್ತಿಯೂ ಹೋಗಿದೆ.
ಜನರ ಟೀಕೆ,ಅನುಮಾನಗಳಿಗೆ ತಲೆಕೆಡಿಸಿಕೊಳ್ಳದೆ ತಮ್ಮಪಾಡಿಗೆ ತಾವು ಕೆಲಸ ಮಾಡುತ್ತಾ ಕ್ರಿಯಾಶೀಲವಾಗಿರುವುದೆ ಅದಕ್ಕೆಲ್ಲಾ ಉತ್ತರ ಎನ್ನುವ ಸತ್ಯವನ್ನು ಅವರು ಕಂಡುಕೊಂಡಿದ್ದಾರೆ. ಪ್ರಯೋಗ ಸಫಲವಾದರೆ ಸಂತೋಷ.ವಿಫಲವಾದರೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದೆನಲ್ಲ ಎಂಬ ನೆಮ್ಮದಿ.ಕೊನೆಗೆ `ನೆಮ್ಮದಿ'ಉಳಿಯುವುದೇನು ಕಡಿಮೆ ಅದೃಷ್ಟವೆ? ಅಷ್ಟಾದರೂ ಸಾಕಲ್ಲವೇ ಎನ್ನುತ್ತಾರೆ ನಾಗತಿಹಳ್ಳಿ ಚಂದ್ರಶೇಖರ್.
ಹಳ್ಳಿಗಳಿಂದ ಬಂದ ಯುವಕರು ವಿಧ್ಯಾಭ್ಯಾಸಮಾಡಿ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ.ಜಗತ್ತಿನ ನಕಾಶೆಯನ್ನೆ ಬದಲಿಸಿದ್ದಾರೆ.ನೂರಾರು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದ್ದಾರೆ.ಕ್ಷಿಪಣಿ ಹಾರಿಸುವಷ್ಟು ವಿಜ್ಞಾನ ಬೆಳೆದರು ನೇಗಿಲು ಮಾತ್ರ ಸುಧಾರಣೆ ಕಾಣಲೇ ಇಲ್ಲ.ರೈತನ ಸಾವಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ.ಇದು ನಮ್ಮ ಮಹಾನ್ ಭಾರತ.
ನಮ್ಮಲ್ಲಿ ಹಳ್ಳಿಗಳಿಗೆ ಮರಳಿದವರು ಇದ್ದಾರೆ.ಬೆರಳೆಣಿಕೆಯಷ್ಟು ಮಾತ್ರ.ಒಬ್ಬ ಪೂರ್ಣಚಂದ್ರ ತೇಜಸ್ವಿ,ಒಬ್ಬ ಕುರಿಯನ್,ಒಂದು ಬೈಫ್,ಅಮುಲ್ ಹಳ್ಳಿಗಳಿಗೆ ಹತ್ತಿರವಾಗಿದ್ದು ಗ್ರಾಮ ಭಾರತದ ಬಗ್ಗೆ ಚಿಂತಿಸಿರಬಹುದು.ಆದರೀಗ ನಮ್ಮ ಅನ್ನ,ಹಾಲು,ಆಹಾರ ಕಕೊಡುವ ರೈತಾಪಿ ವರ್ಗದವರ ಬಗ್ಗೆ ಚಿಂತಿಸುವ,ಹಳ್ಳಿಗಳ ಅಭಿವೃದ್ಧಿಯ ಬಗ್ಗೆಯೂ ಯೋಜನೆ ರೂಪಿಸುವ ಇಂತಹ ಮಾದರಿಗಳ ಬಗ್ಗೆ ನಾವು ಹೆಚ್ಚು ಹೆಚ್ಚು ಮಾತನಾಡಬೇಕಿದೆ.
ಗ್ರಾಮಮುಖಿಗೆ ಚೆಂದದ ಮುನ್ನಡಿ ಬರೆದಿರುವ ಪ್ರೊ.ಎಂ.ಕೃಷ್ಣೇಗೌಡರು ಸಧ್ಯದ ಭಾರತದ ಹಳ್ಳಿಗಳ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದು ತನಗೆ ಹಣ,ಕೀತರ್ಿ,ಬಂಗಲೆ ಎಲ್ಲವನ್ನೂ ಕೊಟ್ಟ ಬೆಂಗಳೂರಿನಲ್ಲಿದ್ದುಕೊಂಡು ಅಪಮಾನ,ಸಾಲದಭಾದೆ,ಬಡತನ,ನೋವು ಎಲ್ಲವನ್ನೂ ಕೊಟ್ಟ ನಾಗತಿಹಳ್ಳಿಯ ಬಗ್ಗೆ ವ್ಯಾಮೋಹ ಬೆಳೆಸಿಕೊಂಡಿರುವ ಚಂದ್ರಶೇಖರ್ ಅವರ ವ್ಯಕ್ತಿತ್ವವನ್ನು ತುಂಬಾ ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ.
"ನಮ್ಮ ಹಳ್ಳಿಗಳು ಈಗ ಹಿಂದಿನಂತಿಲ್ಲ ! ಇರಬೇಕಾಗಿಲ್ಲ ಕೂಡಾ ! ಆದರೆ ಇರಬೇಕಾದಂತೆ ಇಲ್ಲ ಎನ್ನುವುದೇ ನೋವು.ಹಿಂದೆ ಅನಾಗರಿಕತೆ,ಅನಕ್ಷರತೆ,ಅಂಧಶ್ರದ್ಧೆಗಳಿಂದ ನರಳುತ್ತಿದ್ದ ಹಳ್ಳಿಗಳಿಗೆ ನಿಧಾನವಾಗಿ ನಾಗರಿಕತೆ,ಅಕ್ಷರ,ಅರಿವುಗಳೂ ಬಂದವು.ಆದರೆ ಅವುಗಳ ಜೊತೆ ಜೊತೆಗೇ ಭ್ರಷ್ಟತೆ,ಬೂಟಾಟಿಕೆ,ಅಸೂಯೆ,ಅಹಂಕಾರ ಇತ್ಯಾದಿಗಳು ಕಾಲಿಕ್ಕಿದವು.ಹಬ್ಬ,ಹುಣ್ಣಿಮೆ,ಕೋಲಾಟ.ದೊಣ್ಣೆ ವರಸೆ,ರಂಗದ ಕುಣಿತ,ಭಾಗವಂತಿಕೆ ಇಂಥ ಜಾನಪದೀಯ ಚಟುವಟಿಕೆಗಳೆಲ್ಲಾ ಇಷ್ಟಿಷ್ಟೇ ಮರೆಯಾಗಿ ಇಸ್ಪೀಟು,ಕ್ಲಬ್ಬು,ಬಾರು ಮುಂತಾದವು ಶುರುವಾದವು.ರಾಜಕೀಯ ಪಕ್ಷಗಳು ಊರೂರುಗಳನ್ನು,ಮನೆಮನೆಗಳನ್ನು ಉದ್ದುದ್ದ ಅಡ್ಡಡ ಸೀಳಿಬಿಟ್ಟವು.ಈಗ ಹಳ್ಳಿಗಳಲ್ಲಿ ಬಹಳ ಜಬರ್ಿನಿಂದ,ಜಂಬದಿಂದ ನಡೆಯುವ ಚಟುವಟಿಕೆ ಒಂದೇ- ಅದು ಎಲೆಕ್ಷನ್ನು ! ಹಾಗಾಗಿ ಈಗ ಹಳ್ಳಿಗಳಲ್ಲಿ ರೈತಾಪಿ ಜನ,ಕಸುಬುಗಾರರು,ಅನ್ನೋರೆ ಯಾರು ಇಲ್ಲ.ಇರುವವರೆಲ್ಲ ಕಾಂಗ್ರೇಸ್, ಬಿಜೆಪಿ,ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ! ಹಿಂದೆ ತಾವು ಯಾವ ವಂಶದವರು ಅಂತ ಹೇಳಿಕೊಳ್ಳುತ್ತಿದ್ದ ಹಾಗೆ ಈಗ ಜನ ತಾವು ಯಾವ ಪಾಟರ್ಿಯವರು ಅಂತ ಹೇಳಿಕೊಳ್ಳುತ್ತಾರೆ". ಎನ್ನುವ ಪ್ರೊ.ಎಂ.ಕೃಷ್ಣೇಗೌಡರು ಹತ್ತು ವರ್ಷಗಳ ಹಿಂದೆ ನಾಗತಿಹಳ್ಳಿಯಲ್ಲಿ ಚಂದ್ರು `ಸಂಸ್ಕೃತಿ ಹಬ್ಬ' ಶುರುಮಾಡುವಾಗ ವಸ್ತು ಸ್ಥಿತಿ ಹೀಗೆ ಇತ್ತು ಈಗ ಸ್ವಲ್ಪ ಬದಲಾಗಿದೆ ಎನ್ನುತ್ತಾರೆ.
ನಾಗತಿಹಳ್ಳಿಯ ರೈತರು,ರೈತ ಮಹಿಳೆಯರು ಉತ್ತರ ಕರ್ನಾಟಕ,ಕೇರಳ,ಮಹಾರಾಷ್ಟ್ರ,ಹರಿಯಾಣ,ಪಂಜಾಬ್,ದೆಹಲಿಗಳಿಗೆ ಭೇಟಿನೀಡಿ ಆಯಾಯ ಪ್ರದೇಶಗಳ ಬೆಳೆಗಳು ಹಾಗೂ ಕೃಷಿಯಲ್ಲಿನ ಸುಧಾರಿತ ಕ್ರಮಗಳ ಬಗ್ಗೆ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡಿದ್ದಾರೆ. ಅವರಲ್ಲಿ ಆತ್ಮವಿಶ್ವಾಸ ಮೂಡಿದೆ. ಹಳ್ಳಿಗಳೆಲ್ಲ ವೃದ್ಧಾಶ್ರಮಗಳಾಗುತ್ತಿವೆ,ಕೃಷಿಯಿಂದ ಯುವಕರು ವಿಮುಖರಾಗುತ್ತಿದ್ದಾರೆ,ಕೃಷಿ ಲಾಭದಾಯಕ ಉದ್ಯೋಗವಾಗಿಲ್ಲ ಎಂದು ಗೊಣಗುವ ಬದಲು ಇಂತಹ ಸಂಘಟನಾತ್ಮಕ ಕೆಲಸಗಳನ್ನು ಮಾಡುವ ಮೂಲಕ ಹಳ್ಳಿಗಳನ್ನು ಮತ್ತೆ ಹಳಿಗೆ ತರಬೇಕಾದ ಜವಾಬ್ದಾರಿ ನಗರ ಸೇರಿರುವ ವಿದ್ಯಾವಂತ ಯುವಕರ ಮೇಲಿದೆ.
"ಆ ದೃಷ್ಟಿಯಿಂದ ನಾಳೆಗಳ ಬಗ್ಗೆ ಏನಾದರೂ ಭರವಸೆ ಮೂಡಬೇಕಾದರೆ ಹಳ್ಳಿಯಿಂದ ಹೋಗಿ ನಗರ ಸೇರಿ ಬಾಳಿ ಬದುಕುತ್ತಿರುವ ತರುಣರು,ತಿಂಗಳಿಗೊಮ್ಮೆಯಾದರೂ ಹಳ್ಳಿಗಳಿಗೆ ಹೋಗಿಬರಬೇಕು. ಅವರು ಹಳ್ಳಿಗೆ ಹೋಗಿ ನೆಲಸುವುದು ಬೇಡ ಸಂಪರ್ಕ ಇಟ್ಟುಕೊಳ್ಳಬೇಕು.ಅಲ್ಲಿಗೆ ಕಾಯಕಲ್ಪ ಒದಗಿಸಬೇಕು.ಗ್ರಂಥಾಲಯ, ಆಸ್ಪತ್ರೆ,ರಸ್ತೆ,ಕುಡಿಯುವ ನೀರು,ಸಂಘಟನೆ, ಸ್ವುದ್ಯೋಗ ಈ ಬಗೆಯ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು.ಇದಕ್ಕೆ ಹತ್ತು ಜನ ಯುವಕರು ಸಾಕು.ನಮ್ಮ ಹಳ್ಳಿಯಲ್ಲೂ ಮಾಡಬೇಕಾದ ನೂರಾರು ಕೆಲಸಗಳಿವೆ.ನನ್ನ ಹಳ್ಳಿಯಿಂದ ನಗರಕ್ಕೆ ಹೊರಟು ಹೋಗಿರುವ ಅಣ್ಣ ತಮ್ಮಂದಿರಿಗಾಗಿ ನಾನಿನ್ನೂ ಕಾಯುತ್ತಿದ್ದೇನೆ" ಎಂಬ ನಾಗತಿಹಳ್ಳಿ ಚಂದ್ರಶೇಖರ್ ಅವರ ಅವರ ಮಾತಿಗೆ ಕಿವಿಯಾಗೋಣ.
ಹೊಸ ವರ್ಷದಲ್ಲಿ ತೆಗೆದುಕೊಳ್ಳುವ ಹೊಸ ನಿರ್ಣಯಗಳಲ್ಲಿ ಒಂದಾದರೂ ಗ್ರಾಮಮುಖಿಯಾಗಿರಲಿ.ಹಳ್ಳಿಯ ಮಕ್ಕಳ ಶ್ರಮದ ಋಣ ನಮ್ಮೆಲ್ಲರ ಮೇಲಿದೆ. ದೇಶಕ್ಕೆ ಅನ್ನ ನೀಡುವ ಮೂಲಕ ಆಹಾರ ಭದ್ರತೆ ಒದಗಿಸಿರುವ ನೇಗಿಲಯೋಗಿಯ ಯೋಗಕ್ಷೇಮದ ಬಗ್ಗೆಯೂ ಚಿಂತಿಸೋಣ ಅಲ್ಲವೇ.