vaddagere.bloogspot.com

ಬುಧವಾರ, ಮೇ 31, 2017

ಭರಮಗೌಡ್ರ ಎಂಬ ಸಾವಯವ
 ಕೃಷಿಕನ ಪಯಣದ ಹಾದಿಯಲ್ಲಿ
ಮೈಸೂರು : "ರಾಸಾಯನಿಕ ಕೃಷಿಯ ಪ್ರಾರಂಭದಲ್ಲಿ ನನ್ನಷ್ಟು ಬೆಳೆದವರು ಯಾರೂ ಇಲ್ಲ.ಎಲ್ಲಾ ಬೆಳೆಯಲ್ಲೂ ಬಂಪರ್ ಬೆಳೆ.ಪ್ರತಿ ಬೆಳೆಯ ಕ್ಷೇತ್ರೋತ್ಸವ ನನ್ನ ಹೊಲದಲ್ಲೇ.ಒಟ್ಟಿನಲ್ಲಿ ನಾನು   ಹೀರೋ ಅನ್ನುವಂತೆ ಆಗಿಬಿಟ್ಟೆ.ಆದರೆ ಈ ಅಧಿಕ ಇಳುವರಿಯೆಲ್ಲಾ ಕೇವಲ ಕೆಲವೇ ವರ್ಷಗಳು ಮಾತ್ರ.
ನಂತರ ಎಷ್ಟೇ ಗೊಬ್ಬರ ಹಾಕಿದರೂ ಮೊದಲಿನಂತೆ ಇಳುವರಿ ಇಲ್ಲ.ಕೀಟ ರೋಗ ಬಾಧೆಯಂತೂ ಸಹಿಸಲಸಾಧ್ಯ.ಮೆಣಸಿ ಗಿಡ,ಅಣ್ಣೀಗೇರಿ ಕಡಲೆಗಂತೂ ಅದೆಷ್ಟು ವಿಷಹೊಡೆಯುತ್ತಿದ್ದೆವೋ.ಬೆಳೆದುದ್ದರಲ್ಲಿ ಎಲ್ಲರ ಪಾಲನ್ನೂ ಕೊಟ್ಟು,ಎರಡು-ಮೂರು ವರ್ಷಕ್ಕಾಗುವಷ್ಟು ದವಸ ಧಾನ್ಯಗಳನ್ನು ಸಂಮೃದ್ಧವಾಗಿ ತುಂಬಿಟ್ಟುಕೊಳ್ಳುತ್ತಿದ್ದ ನಾವು ಕೆಲವೇ ವರ್ಷಗಳಲ್ಲಿ ಏನೂ ಇಲ್ಲ ಅನ್ನುವ ಸ್ಥಿತಿಗೆ ಬಂದುಬಿಟ್ಟಿದ್ದೆವು"
ಹೀಗೆ ರಾಸಾಯನಿಕ ಕೃಷಿಯ ದುಷ್ಪರಿಣಾಮಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತಲೆ ಹಸಿರುಕ್ರಾಂತಿ ತಂದಿಟ್ಟಿ ಆಪತ್ತುಗಳನ್ನು ವಿವರಿಸುತ್ತಾರೆ ನಾಡಿನ ಹೆಮ್ಮೆಯ ಸಾವಯವ ಕೃಷಿಕ ಡಿ.ಡಿ.ಭರಮಗೌಡ್ರ.ಈಗ ಅವರು ನಮ್ಮ ನಡುವೆ ಇಲ್ಲ ಆದರೆ ಅವರ ಕೃಷಿ ವಿಚಾರಧಾರೆಗಳಿಗೆ ಎಂದಿಗೂ ಸಾವಿಲ್ಲ.
ಯಶಸ್ವಿಯಾಗಿ ಸಾವಯವ ಕೃಷಿ ಮಾಡಿದವರು ಹಲವರಿದ್ದಾರೆ. ಆದರೆ ಮಳೆಯಾಶ್ರಯದಲ್ಲಿ ಸಾವಯವ ಕೃಷಿಮಾಡಿ ಗೆದ್ದವರು ಅಪರೂಪ. ಮಳೆಯಾಶ್ರಿತ,ಜೀವವೈವಿಧ್ಯ ಕೃಷಿಯ ಆಳ-ಅಗಲಗಳನ್ನು ಮಾತಿನಲ್ಲಿ ಹಿಡಿದಿಟ್ಟು ಇಡೀ ದೇಶದಲ್ಲಿ ಅದರ ಬಗ್ಗೆ ಹೊಸ ಅರಿವನ್ನು ಮೂಡಿಸಿದವರು ಭರಮಗೌಡ್ರ. ಮಳೆಯಾಶ್ರಿತ ರೈತರಲ್ಲಿ ಸಾವಯವ ಕೃಷಿ ಮಾಡಲು ಆತ್ಮವಿಶ್ವಾವನ್ನು ತುಂಬಿದರು.
ಇಂತಹ ವ್ಯಕ್ತಿಯನ್ನು ಕುರಿತು ಬಂದಿರುವ ಪುಸ್ತಕವೊಂದರ ಬಗ್ಗೆ ನಿಮಗೆ ಹೇಳಬೇಕು. "ಡಿ ಡಿ ಭರಮಗೌಡ್ರ ಬದುಕು ಬೇಸಾಯ-ಸಾವಯವ ಕೃಷಿಕನ ಮಹಾನ್ ಪಯಣ" ಎಂಬ ಗೌಡ್ರ ಕೃಷಿ ಅನುಭವಗಳನ್ನು ದಾಖಲಿಸಿ ನಿರೂಪಣೆ ಮಾಡಿದ್ದಾರೆ ಸಹಜ ಸಾಗುವಳಿಯ ಸಂಪಾದಕಿ ವಿ.ಗಾಯತ್ರಿ .ಇನ್ಸ್ಟಿಟ್ಯೂಟ್ ಫಾರ್ ಕಲ್ಚರಲ್ ರಿಸಚರ್್ ಅಂಡ್ ಆ್ಯಕ್ಷನ್ (ಇಕ್ರಾ) ಈ ಪುಸ್ತಕವನ್ನು ಪ್ರಕಟಿಸಿದೆ.
ರಾಸಾಯನಿಕ ಕೃಷಿಕರಾಗಿ,ಇಲಾಖೆಯ ಕಣ್ಮಣಿಯಾಗಿ ಹೆಸರು ಮಾಡಿದ್ದ ಭರಮಗೌಡ್ರ ತಾನು ಎಡವಿದ್ದೇನೆ,ದಾರಿ ತಪ್ಪಿದ್ದೇನೆ ಎಂದು ಅರಿತುಕೊಂಡು ಪಯರ್ಾಯದಾರಿ ಹುಡುಕಾಟದಲ್ಲಿ ಸಾವಯವ ಕೃಷಿಗೆ ಬಂದದ್ದು ಇವರನ್ನು ಸಾವಯವ ಹಾದಿಯ ಮಹಾನ್ ಪಯಣಿಗನಾಗಿಸಿತು. ಇಂತಹ ಮಹಾನ್ ಪಯಣದ ಅನುಭವಗಳನ್ನು ಅಕ್ಷರ ರೂಪದಲ್ಲಿ ಜೀವಂತಗೊಳಿಸಿ ಕೊಟ್ಟಿರುವ ಗಾಯತ್ರಿ ಅವರ ಶ್ರಮಕ್ಕೆ ರೈತರು ಋಣಿಗಳು.
ಹುಡುಕಾಟದ ಹಾದಿಯಲ್ಲಿ : 28 ವರ್ಷಗಳ ಹಿಂದೆ ಮುಂಬೈನ ಸಮುದ್ರ ತಟದಲ್ಲಿ ನಡೆಯುತ್ತಿದ್ದ "ಸಹಜ ಕೃಷಿ-ಬದುಕಿನ ಕಾರ್ಯಾಗಾರ"ದ ಬಗ್ಗೆ ಪತ್ರಿಕೆಯ ಮೂಲೆಯಲ್ಲಿ ಪ್ರಕಟವಾಗಿದ್ದ ಸುದ್ದಿಯನ್ನು ನೋಡಿ ಗೆಳೆಯರನ್ನು ಕೂಡಿಕೊಂಡು ಅಲ್ಲಿಗೆ ನಡೆದುಬಿಡುತ್ತಾರೆ ಭರಮಗೌಡ್ರ.ಅಲ್ಲಿ ಅವರು ಸಾವಯವ-ಸಹಜ ಕೃಷಿ ಲೋಕದ ಮಹಾನ್ ಘಟಾನುಘಟಿಗಳನ್ನು ಭೇಟಿಮಾಡುತ್ತಾರೆ.ಅಲ್ಲಿಂದ ರೈಲು, ಬಸ್ಸು ಹಿಡಿದುಕೊಂಡು ಗುಜರಾತಿನ ಭಾಸ್ಕರ್ ಸಾವೆಯಿಂದ ಹಿಡಿದು ಮಧ್ಯಪ್ರದೇಶದ ರಾಜು ಟೈಟಸ್, ಪಾಂಡಿಚೇರಿಯ ಆರೋವಿಲ್ ಕೃಷಿ ಆಶ್ರಮದವರೆಗೆ ಸಾಧ್ಯವಾದ ಎಲ್ಲರ ಸಹಜ ಕೃಷಿ ಕ್ಷೇತ್ರಗಳಿಗೆ ಭೇಟಿನೀಡಿ ಸೂಕ್ಷ್ಮವಾಗಿ ಅವಲೋಕಿಸುತ್ತಾರೆ.
ಅಲ್ಲಿಂದ ಭರಮಗೌಡ್ರ ಜಮೀನಿನಲ್ಲಿ ಸಾವಯವ ಕೃಷಿಯ ಪ್ರಯೋಗ ಆರಂಭವಾಗುತ್ತದೆ. ಕೃಷಿಗೆ ಸಂಬಂಧಪಟ್ಟ ಎಲ್ಲಾ ಪತ್ರಿಕೆಗಳಗೆ ಚಂದಾದಾರರಾಗುತ್ತಾರೆ. ಪಸ್ತಕಗಳನ್ನು ಖರೀದಿಸಿ ಹಗಲುರಾತ್ರಿ ಓದುತ್ತಾರೆ. ಈ ಪ್ರಕ್ರಿಯೆಯಲ್ಲಿ ಬುದ್ದಿವಂತ ರೈತನ ಅರಿವು ರೂಪುಗೊಳ್ಳುತ್ತಾ ಪಕ್ವವಾಗುತ್ತಾ ಹೋಗುತ್ತದೆ. ಅವರ ಜಮೀನು ಕೂಡ ತನಗೇನು ಬೇಕು,ಏನು ಬೇಡ ಎಂಬುದನ್ನು ಕಲಿಸುತ್ತಾ ಗಟ್ಟಿ ಸಾವಯವ ಕ್ಷೇತ್ರವಾಗಿ ರೂಪುಗೊಳ್ಳುತ್ತದೆ.
ಗದಗ್ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಯಳವತ್ತಿ ಗ್ರಾಮದ ಭರಮಗೌಡ್ರ ತಾವು ಕಲಿಯುವುದರ ಜೊತೆಗೆ ಇಡೀ ರೈತ ಸಮುದಾಯವನ್ನು ಸರಿದಾರಿಗೆ ನಡೆಸಿದ್ದು ಅನುಕರಣೀಯವಾಗಿದೆ. ಸಮಾನ ಆಸಕ್ತ ಗೆಳೆಯರನ್ನು ಕೂಡಿಕೊಂಡು "ಧರಿತ್ರಿ ಬಳಗ" ಎಂಬ ಹೆಸರಿನಲ್ಲಿ ಸಾವಯವ ಕೃಷಿಕರ ಕೂಟ ಕಟ್ಟಿಕೊಂಡು ಅತ್ಯಂತ ಕ್ರಿಯಾಶೀಲವಾಗಿ ನಡೆಸಿಕೊಂಡು ಬಂದವರು ಇವರು.
ರೈತ ಚಳವಳಿಯಲ್ಲಿ ಮಳೆಯಾಶ್ರಿತ ರೈತರ ದನಿಯೇ ಇಲ್ಲದಿದ್ದ ಸಮಯದಲ್ಲಿ ಮೂಡಿಬಂದ ಈ ಸಂವೇದನಾಶೀಲ ಗಟ್ಟಿ ಧ್ವನಿ ತನ್ನ ಸಾಚಾತನದಿಂದ ಸಾವಿರಾರು ರೈತರ ಆತ್ಮವಿಶ್ವಾಸದ ಸಂಕೇತವಾಯಿತು.ಹತ್ತಾರು ವರ್ಷಗಳಿಂದ ಭರಮಗೌಡ್ರ ಕೃಷಿ ಅನುಭವ,ವಿಚಾರಗಳನ್ನು ಧ್ವನಿರೂಪದಲ್ಲಿ ಮುದ್ರಿಸಿಕೊಂಡು "ಸಹಜ ಸಾಗುವಳಿ' ದ್ವೈಮಾಸಿಕ ಕೃಷಿ ಪತ್ರಿಕೆಯಲ್ಲಿ ಸರಣಿ ಲೇಖನ ರೂಪದಲ್ಲಿ ಬಂದ ವಿಚಾರಗಳು ಈಗ ಪುಸ್ತಕ ರೂಪದಲ್ಲಿ ಒಂದೆಡೆ ಸಿಕ್ಕಿರುವುದು ಸಾವಯವ ಕೃಷಿಕರ ಕೈ ದೀವಿಗೆಯಂತೆ ಕೆಲಸಮಾಡುತ್ತದೆ.
ಬದುಕು, ಬೇಸಾಯ ಮತ್ತು ನೆನಪಿನ ಪುಟಗಳು ಎಂಬ ಮೂರು ಭಾಗಗಳಾಗಿ ಹರಡಿಕೊಂಡಿರುವ ಪುಸ್ತಕದಲ್ಲಿ ಭರಮಗೌಡ್ರ ಬಾಲ್ಯ, ಹಸಿರು ಕ್ರಾಂತಿಯ ಮುಂಚಿನ ದಿನಗಳು, ಹುಡುಕಾಟದ ಹಾದಿ ಮತ್ತು ಮುಂಗಾರಿಗೂ ಮುನ್ನಾ ಮಾಡಬೇಕಾದ ಕೆಲಸಗಳು, ಕೃಷಿಲೋಕದ ವಿಸ್ಮಯ ಬೀಜ, ಹಸಿರು ಗೊಬ್ಬರ ಏಕೆ ಬೇಕು, ಮಣ್ಣಿನಂತೆ ಮಳೆ ಮಳೆಯಂತೆ ಬೆಳೆ ಹೀಗೆ ರೈತರಿಗೆ ಬೇಕಾದ ಪ್ರತಿಯೊಂದು ಸಂಗತಿಗಳನ್ನು ವಿವರವಾಗಿ ತಿಳಿಸಿಕೊಡಲಾಗಿದೆ.
ಕೃಷಿಯ ಪರಂಪರೆಯ ಜೊತೆಗೆ ನಶಿಸಿಹೋದ ಒಂದು ದೊಡ್ಡ ಸಂಸ್ಕೃತಿಯನ್ನು ಕಟ್ಟಿಕೊಡುವ ಈ ಕಥನ ಸಾವಯವ ಕೃಷಿ ಮಾಡಲು ಹಂಬಲಿಸುವ ರೈತರಿಗೆ,ಅದರಲ್ಲೂ ಸಣ್ಣ ಮಳೆಯಾಶ್ರಿತ ರೈತರಿಗೆ ದಾರಿದೀಪವೂ ಮತ್ತು ಈ ನಾಡಿನ ಸಾವಯವ ಕೃಷಿ ಚಳವಳಿಗೆ ಅನನ್ಯ ಕೊಡುಗೆಯೂ ಆಗಬಲ್ಲದು ಎನ್ನುತ್ತಾರೆ ಇಕ್ರಾದ ಪಿ.ಬಾಬು.
ಡಿ.ಆರ್.ಪಾಟೀಲ್,ಬಸವರಾಜು ಹೊರಟ್ಟಿ ಅವರೊಂದಿಗೆ ಬಿಎಸ್ಸಿ ವ್ಯಾಸಂಗಮಾಡಿ ಕೃಷಿಗೆ ಮರಳಿದ ಭರಮಗೌಡ್ರ ಅವರ ಕೃಷಿಯ ಬಗೆಗಿನ ಆಸಕ್ತಿ ಮತ್ತು ತುಡಿತ ಅವರನ್ನು ಯಶಸ್ವಿ ಕೃಷಿಕರನ್ನಾಗಿಸಿದೆ. ದಿನಕ್ಕೆ ಬರೀ 24 ಗಂಟೆಯ ಬದಲು 48 ಗಂಟೆಯಾದರೂ ಇರಬಾರದೇ ಎಂದುಕೊಂಡು ಕೃಷಿಕಾಯಕದಲ್ಲಿ ತೊಡಗಿಸಿಕೊಳ್ಳುತ್ತಿದ್ದ ಇವರು ಕೃಷಿಯಲ್ಲಿ ಪ್ರತಿಯೊಂದಕ್ಕೂ ಲೆಕ್ಕ ಇಟ್ಟು ಕರಾರುವಾಕ್ಕಾಗಿ ಕೃಷಿ ಮಾಡುತ್ತಿದ್ದರು.
"ಯಾವ ಬೆಳೆ ಎಂದು ಬಿತ್ತನೆ ಮಾಡಿದೆವು? ಎಷ್ಟು ಕೆಲಸಗಾರರಿದ್ದರು.ಎಷ್ಟು ಹೆಣ್ಣಾಳು ? ಎಷ್ಟು ಗಂಡಾಳು? ಬೀಜ ಹಾಕಿದವರು ಯಾರು? ಗೊಬ್ಬರ ಹಾಕಿದವರು ಯಾರು? ಯಾವ ಬೆಳೆಗೆ ಎಷ್ಟು ಬಿತ್ತನೆ ಬೀಜ ಹೋಯಿತು. ಎಷ್ಟು ಗೊಬ್ಬರ ಹೋಯಿತು? ಎಷ್ಟು ಔಷಧ ಹೊಡೆದೆವು ಎಲ್ಲಾ ವಿವರಗಳನ್ನು ಪ್ರತಿದಿನ ಲೆಕ್ಕ ಬರೆದು ಇಡುತ್ತಿದ್ದೆ.ನಮ್ಮಲ್ಲಿ ರೈತರಾರು ಲೆಕ್ಕ ಬರೆದು ಇಡುತ್ತಿರಲಿಲ್ಲ.ನಾನು ದಿನರಾತ್ರಿ ಚಾಚೂ ತಪ್ಪದೆ ಲೆಕ್ಕ ಬರೆಯುತ್ತಿದ್ದೆ.ಇದರಲ್ಲಿ ನನಗೆ ಎಷ್ಟು ಖಚರ್ು,ಎಷ್ಟು ಲಾಭ ಎನ್ನುವ ಸರಿಯಾದ ಲೆಕ್ಕ ಸಿಕ್ಕಿಬಿಡುತಿತ್ತು." ಎನ್ನು ಭರಮಗೌಡ್ರ ಯಶಸ್ವಿ ಕೃಷಿಯ ಗುಟ್ಟು ಇರುವುದು ಇಲ್ಲೇ ಎನ್ನುವುದು ಎಂತಹವರಿಗೂ ಗೊತ್ತಾಗಿಬಿಡುತ್ತದೆ.
ಕೃಷಿಯ ಖಚರ್ುವೆಚ್ಚದ ಬಗ್ಗೆ ಲೆಕ್ಕ ಹಿಡದೆ ಸಂಪೂರ್ಣ ಹಾಳಾಗಿರುವ ರೈತರು ಈಗಲಾದರೂ ತಮ್ಮ ಕರ್ಮಭೂಮಿಯಲ್ಲಿ ಕಳೆದ ಗಳಿಸಿದ ಕಾಲ ಹಣದ ಬಗ್ಗೆ ಲೆಕ್ಕ ಇಡದಿದ್ದರೆ ಕೃಷಿಯೂ ಉಳಿಯುವುದಿಲ್ಲ ರೈತರು ಉಳಿಯುವುದಿಲ್ಲ ಎಂಬ ಸತ್ಯವನ್ನು ಅರಿಯಬೇಕು.
ಉತ್ತರ ಕನರ್ಾಟಕದ ಭಾಗದಲ್ಲಿ ಸೂರ್ಯಕಾಂತಿ, ಕುಸುಬಿಯಂತಹ ಎಣ್ಣೆಕಾಳುಗಳನ್ನು ಮೊದಲ ಬಾರಿಗೆ ಪರಿಚಯಿಸಿದ ಕೀತರ್ಿಯೂ ಇವರದೆ. ಆಗ ಸೂರ್ಯಕಾಂತಿಯನ್ನು ಮಾರುಕಟ್ಟೆಗೆ ಹೊಯ್ದರೆ 'ಏನು ಇದು' ಎಂದು ಕೇಳುತ್ತಿದ್ದರಂತೆ.ಮುಂದೆ ಅದರದ್ದೇ ಮಾರುಕಟ್ಟೆ ಹುಟ್ಟಿಕೊಂಡದ್ದು ಈಗ ಇತಿಹಾಸ.
15 ವರ್ಷ ರಾಸಾಯನಿಕ ಕೃಷಿ ಮಾಡಿ ಗೆದ್ದು ಸೋತ ನಂತರ ಪಯರ್ಾಯ ಹುಡುಕಾಡದಲ್ಲಿ ನಿರತರಾದ ಭರಮಗೌಡ್ರ ರಾಸಾಯನಿಕ ಬಿಟ್ಟ ನಂತರ ಏನು ಮಾಡಬೇಕು ಎನ್ನುವ ಮೊದಲು ಜಮೀನಿಗೆ ತಿಪ್ಪೆ ಗೊಬ್ಬರ, ಕುರಿ ಗೊಬ್ಬರ ಹೆಚ್ಚಿಗೆಮಾಡಲು ತೀಮರ್ಾನಿಸುತ್ತಾರೆ.ನಂತರ ಹಸಿರೆಲೆ ಗೊಬ್ಬರ. ಸಮಗ್ರ ಪದ್ಧತಿಯಲ್ಲಿ ಮಿಶ್ರಬೆಳೆ ಮಾಡಬೇಕೆಂದು ನಿರ್ಧರಿಸಿ ಹಳೇ ಪದ್ಧತಿಗೆ ಮರಳುತ್ತಾರೆ.
" ತಾನು ಸಾವಯವ ಕೃಷಿ ಆರಂಭಿಸಿದ 1988-89 ರ ಸಮಯದಲ್ಲಿ ಡಾ.ಎಲ್.ನಾರಾಯಣ ರೆಡ್ಡಿ ಅವರು ಸಾವಯವ ಕೃಷಿ ಪ್ರಚಾರಮಾಡುತ್ತಿದ್ದರು. ಅವರ ಉಪನ್ಯಾಸಗಳು ಎಲ್ಲೇ ಇದ್ದರೂ ಹೋಗುತ್ತಿದ್ದೆ.ರೆಡ್ಡಿ ತಮ್ಮ ಸ್ವಂತ ಅನುಭವಗಳನ್ನೇ ಹೆಚ್ಚಾಗಿ ಹೇಳುತ್ತಿದ್ದರು.ರೈತನಾದವನು ಹೊಲದಿಂದ ದೂರ ಇರಬಾರದು.ಹೊಲದಾಗ ಮನೆಮಾಡಿಕೊಂಡು ಇದ್ದರೇನೆ ಕೃಷಿ ನಡೆಯೋದು ಅಂತ ಹೇಳುತ್ತಿದ್ದರು" ಎಂದು ನೆನಪಿಸಿಕೊಂಡಿದ್ದಾರೆ.
"ಮನುಷ್ಯನಿಗೆ ಯಾವುದರಲ್ಲಿ ಆಸಕ್ತಿ ಇದೆಯೋ,ಏನು ತಿಳಿದುಕೊಳ್ಳಬೇಕು ಎಂದು ಹಂಬಲಿಸುತ್ತಾನೋ ಯಾವುದೊ ಒಂದು ರೀತಿಯಿಂದ ತಿಳಿದುಕೊಂಡೇ ತೀರುತ್ತಾನೆ.ಅದು ಅವನಿಗೆ ಸಿಕ್ಕೇ ಸಿಗುತ್ತದೆ.ಹುಡುಕಾಟ ಮಾತ್ರ ನಿಲ್ಲಿಸಬಾರದು" ಎನ್ನುವ ಭರಮಗೌಡ್ರ ಮಾತು ಸಂತನ ನುಡಿಯಂತೆ ಕೇಳುತ್ತದೆ.
ಭೂಮಿ ಸಿದ್ಧತೆಯಿಂದ ಹಿಡಿದುಕೊಂಡು ಬೀಜಗಳ ಆಯ್ಕೆ, ಮಳೆನೀರು ಸಂಗ್ರಹಣೆ, ಉಳುಮೆ ಎಲ್ಲದ್ದರ ಬಗ್ಗೆ ವಿವರವಾಗಿ ಹೇಳುತ್ತಾ ಹೋಗಿರುವ ಭರಮಗೌಡ್ರರ ಕೃಷಿ ಅನುಭವಗಳು ಕುಳಿತಲ್ಲೇ ಆಗಾಧವಾದ ತಿಳಿವಳಿಕೆ ನೀಡುತ್ತವೆ. ಮಹಾರಾಷ್ಟ್ರದ ಯವತ್ಮಾಲ್ನ ಅಪ್ರತಿಮ ಸಹಜ ಕೃಷಿಕ ಸುಭಾಷ್ ಶರ್ಮರ ಕಂಟೂರ್ ಅಥವಾ ಸಮಪಾತಳಿ ವಿಧಾನದ ಕೃಷಿಯ ಬಗ್ಗೆ ನೋಡಿಬಂದ ಇವರು ಅದರ ಬಗ್ಗೆ ಹೇಳಿರುವುದು ನಮ್ಮ ರೈತರಿಗೆ ದೊಡ್ಡ ಪಾಠವಾಗಬೇಕಿದೆ.
ಸಾವಯವ ಕೃಷಿ ಎಷ್ಟು ವೇಗವಾಗಿ ಹರಡಬೇಕಿತೊ ಅಷ್ಟು ವೇಗವಾಗಿ ಹರಡಲಿಲ್ಲ.ಆದರೆ ಹತ್ತು ವರ್ಷದಿಂದ ಇದ್ದ ಪರಿಸ್ಥಿತಿ ಈಗಿಲ್ಲ.ಪ್ರತಿ ತಾಲೂಕಿನಲ್ಲೂ ಸಾವಯವ ಕೃಷಿಕರು ಇದ್ದಾರೆ. ಅಷ್ಟರ ಮಟ್ಟಿಗೆ ರೈತರು ಬದಲಾಗಿದ್ದಾರೆ ಎನ್ನುವ ಭರಮಗೌಡ್ರ 30 ವರ್ಷದ ಅನುಭವದಲ್ಲಿ ಮಳೆಯಾಶ್ರಿತ ಬೇಸಾಯದಲ್ಲಿಅದ್ಭುತ ಕೃಷಿ ಜ್ಞಾನಪಡೆದ ಅನುಭವಿ ಕೃಷಿಕ. ಇವರು ಸಬ್ಸಿಡಿ ಆಸೆಗಾಗಿ ಕೃಷಿ ಮಾಡಿದವರಲ್ಲ.ನೆಲದ ಪ್ರೀತಿಗಾಗಿ,ಸಮಾಜದ ಪ್ರೀತಿಗಾಗಿ ಕೃಷಿ ಮಾಡಿದವರು.ಇವರದ್ದು ಪಂಚತಾರಾ ಸಾವಯವ ಕೃಷಿಯಲ್ಲ.ಸಣ್ಣ ರೈತರತ್ತ ಮುಖ ಮಾಡಿದ ಸಮಾಜ ರಕ್ಷಣೆ ಮಾಡುವ ಕೃಷಿ.ಇಂತಹ ಮಹಾನ್ ಸಾದಕನ ಪುಸ್ತಕವನ್ನು ಓದುವ ಮೂಲಕ ಯುವ ರೈತರು ಪ್ರೇರಣೆ ಪಡೆದುಕೊಳ್ಳಬೇಕು.
ಕೊನೆಯ ಮಾತು : ಮೊನ್ನೆ ನಮ್ಮೂರು ವಡ್ಡಗೆರೆಯ ಸುತ್ತಮುತ್ತ ಹೊಸದಾಗಿ ಸಾವಯವ ಕೃಷಿಕರ ಬಳಗ ಕಟ್ಟಲು ರೈತರೊಂದಿಗೆ ಮಾತನಾಡುತ್ತಿದ್ದೆ. ಆಗ ರೈತಸಂಘದ ತಾಲೂಕು ಅಧ್ಯಕ್ಷ ನನ್ನ ಹೈಸ್ಕೂಲು ಸಹಪಾಠಿಯಾಗಿದ್ದ ಕುಂದಕೆರೆ ಸಂಪತ್ತು ಮಾತನಾಡಿ " ಸರಿ ನಾವೆಲ್ಲ ಸಾಲಗಾರರು. ಸಾವಯವ ಕೃಷಿ ಮಾಡಿ ಸಾಲತೀರಿಸಲು ಸಾಧ್ಯವೇ? ಅದಕ್ಕೆ ರಾಸಾಯನಿಕ ಕೃಷಿಯಲ್ಲಿ ಸಾಲ ತೀರಿಸಿ ನಂತರ ಸಾವಯವ ಕೃಷಿಗೆ ಮರಳುತ್ತೇವೆ' ಅಂದ. ಇದನ್ನು ಕೇಳಿ ನನಗೆ ಆಶ್ಚರ್ಯ ಎನಿಸಲಿಲ್ಲ. ಇದು ನಿರೀಕ್ಷಿತ ಪ್ರತಿಕ್ರಿಯೆ. ಎಲ್ಲಾ ಕಡೆ ಕಂಡು ಬರುತ್ತಿರುವ ಮನೋಭಾವ.
ಮಣ್ಣು, ಬೀಜ,ನೀರು,ಗೊಬ್ಬರದ ಬಗ್ಗೆ ರೈತರಿಗೆ ಅರಿವು ಮೂಡಿಸದೆ ಅವರ ಮನೋಭಾವವನ್ನು ಬದಲಿಸುವುದು ಕಷ್ಟ. ರಾಸಾಯನಿಕವೆಂಬ ಒಳಸುಳಿಗೆ ಸಿಲುಕಿ ಒದ್ದಾಡುತ್ತಿರುವ ರೈತರು ಅದೇ ತಮ್ಮ ಪಾಲಿನ ಮೊದಲ ಶತ್ರು ಎಂದು ತಿಳಿದುಕೊಳ್ಳುವವರೆಗೆ ಸಾಲದ ಶೂಲ ನೆತ್ತಿಮೇಲೆ ತೂಗುತ್ತಲೇ ಇರುತ್ತದೆ. ಇಂತಹ ಪುಸ್ತಕಗಳು ಮಾತ್ರ ನಮ್ಮ ರೈತರ ಧೋರಣೆ,ಮನೋಭಾವವನ್ನು ಬದಲಿಸಬಲ್ಲ ಮಂತ್ರದಂಡಗಳಾಗಿ ಕೆಲಸಮಾಡಬಲ್ಲವು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ