vaddagere.bloogspot.com

ಶುಕ್ರವಾರ, ಮಾರ್ಚ್ 31, 2017

ಯಶೋಧವನದ ಪ್ರಯೋಗಶೀಲ ಕೃಷಿಕ "ಶ್ರೀನಿವಾಸ"
ಮೈಸೂರು : ನಗರದಲ್ಲಿ ಹಣ ಇದೆ.ಆರೋಗ್ಯ ಇಲ್ಲ.ಪ್ರತಿಯೊಬ್ಬರ ಜೇಬಿನಲ್ಲೂ ಸಾಕಷ್ಟು ನೋಟಿದೆ ಆದರೆ ಗುಣ ಮಟ್ಟದ ಆಹಾರ ಉತ್ಪನ್ನಗಳು ಸಿಗುತ್ತಿಲ್ಲ. ಹಾಗಾಗಿ ನಗರದ ಜನತೆಗೆ ನೈಸಗರ್ಿಕವಾಗಿ ಬೆಳೆದ ಪೌಷ್ಠಿಕ ಆಹಾರ ಕೊಡಬೇಕು, ಆ ಮೂಲಕ ಪ್ರಕೃತಿಯನ್ನೂ ಉಳಿಸಬೇಕು ಎಂಬ ಹಂಬಲದಿಂದ ಕೃಷಿ ಚಟುವಟಿಕೆಯ ಕಡೆಗೆ ಒಲವು ಮೂಡಿತು ಎಂದರು "ಯಶೋಧವನ" ಮಾಲೀಕ, ಸಹಜ ಕೃಷಿಕ ಶ್ರೀನಿವಾಸ.
ಕೃಷಿಯ ಬಗ್ಗೆ ಗೊತ್ತೇ ಇರದ, ಋತುಮಾನಗಳ ಅರಿವೂ ಇರದ, ಸಂಪೂರ್ಣ ನಗರ ಪ್ರಜ್ಞೆಯ ಯುವಕನೊಬ್ಬ ತನ್ನ ಐದಾರು ವರ್ಷದ ಕೃಷಿ ಪಯಣದಲ್ಲಿ ಪ್ರಕೃತಿಯಲ್ಲಿ ನಡೆಯುವ ವಿದ್ಯಾಮಾನಗಳನ್ನು ಬೆರಗು ಗಣ್ಣಿನಿಂದ ಗಮನಿಸುತ್ತಾ ಕೃಷಿಕನಾಗಿ ರೂಪುಗೊಂಡ ವಿಸ್ಮಯ ಅಚ್ಚರಿ ಮೂಡಿಸುವಂತಿದೆ.
ಮೂಲತಃ ಉಡುಪಿ ಕಡೆಯ ಶ್ರೀನಿವಾಸ ಮೈಸೂರಿನಲ್ಲಿ ಕೋಳಿ ಉದ್ಯಮದಲ್ಲಿ ಹೆಸರು ಮತ್ತು ಹಣ ಎರಡೂ ಮಾಡಿದ್ದವರು. ಕೋಳಿ ಉದ್ಯಮದ ಇತಿಮಿತಿಗಳನ್ನು ಅರಿತು ಪರಿಸರ ಸ್ನೇಹಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಆಸೆಯಿಂದ 50 ಎಕರೆ ಜಮೀನು ಖರೀದಿಸಿದರು.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಯಡೆಹಳ್ಳಿ ಸಮೀಪ ಇರುವ "ಯಶೋಧವನ ಮೇಕೆ ಫಾರಂ" ಈಗ ಎಲ್ಲರ ಗಮನಸೆಳೆದಿದೆ. ಬೆಂಗಳೂರು, ಮೈಸೂರಿನ ಜನ ಮೇಕೆ ಹಾಲಿನ ರುಚಿಗೆ ಮಾರುಹೋಗಿದ್ದಾರೆ. ಸಾವಯವ ಕೃಷಿಯಲ್ಲಿ ಮೇವು ಬೆಳೆಸಿ ಸಾವಿರಕ್ಕೂ ಹೆಚ್ಚು ಆಡುಗಳು, ಐವತ್ತಕ್ಕೂ ಹೆಚ್ಚು ಬಂಡೂರು ತಳಿಯ ಕುರಿಗಳನ್ನು ಇಲ್ಲಿ ಸಾಕಾಣಿಕೆ ಮಾಡಲಾಗುತ್ತಿದೆ.
ಪಶು ಆಹಾರ ಘಟಕ, ಪಾಶ್ಚೀಕರಿಸುವ ಹಾಲಿನ ಘಟಕ,ಸುಸಜ್ಜಿತ ಹಾಲಿನ ವಾಹನ, ವಯಸ್ಸು ಮತ್ತು ಗಾತ್ರಕ್ಕೆ ಅನುಗುಣವಾಗಿ ಆಡುಕುರಿ ಶೆಡ್ ನಿಮರ್ಾಣ, ಹೋತಗಳಿಗೆ ಪ್ರತ್ಯೇಕ ಶೆಡ್ ಎಲ್ಲವೂ ಇಲ್ಲಿವೆ.
"ಮೈ ಗೋಟ್" ಎಂಬ ತಮ್ಮದೇ ಬ್ರಾಂಡಿನಲ್ಲಿ ವಾರದಲ್ಲಿ ಮೂರುದಿನ ಐದನೂರು ಲೀಟರ್ಗಳಿಗೂ ಹೆಚ್ಚು ಮೇಕೆ ಹಾಲನ್ನು ಬೆಂಗಳೂರು ಮತ್ತು ಮೈಸೂರಿನ ಗ್ರಾಹಕರಿಗೆ ಪೂರೈಸುತ್ತಿದ್ದಾರೆ. ಜೊತೆಗೆ ಇವರಲ್ಲಿ ಆಡಿನ ಗೊಬ್ಬರವೂ ಮಾರಾಟಕ್ಕೆ ಲಭ್ಯವಿದೆ.
ಮಹಾತ್ಮ ಗಾಂಧಿಗೂ ಆಡಿಗೂ ಬಿಡಿಸಲಾರದ ನಂಟು .ಗಾಂಧಿ ದೇಹ ಸ್ಥಿತಿ ಹದಗೆಟ್ಟಿದ ಸಮಯದಲ್ಲಿ ಅವರನ್ನು ಕಾಪಾಡಿದ ಸಂಜೀವಿನಿ ಆಡಿನ ಹಾಲು. ಗಾಂಧಿ ಅವರ ಸತ್ಯಾಗ್ರಹ ಸಮಯದಲ್ಲಿ ಜೈಲಿನಲ್ಲಿ ಮೇಕೆಗಳನ್ನು ನೋಡಿಕೊಳ್ಳುವುದೇ ಕಸ್ತೂರ ಬಾ ಅವರಿಗೆ ದೊಡ್ಡ ಕೆಲಸವಾಗಿತ್ತು. ಹಾಲಿನ ಕಾರಣಕ್ಕಾಗಿ ಗಾಂಧಿಯೊಂದಿಗೆ ಲಂಡನ್ಗೂ ಪ್ರವಾಸ ಬೆಳೆಸಿತ್ತು ಮೇಕೆ. ಪಯರ್ಾಉ ಸುಸ್ಥಿರ ಮಾದರಿಗಳನ್ನು ಆಡಿನೊಂದಿಗೆ ಗಾಂಧಿ ನೋಡಿದ್ದರು.ಇದನ್ನೆಲ್ಲ ಆಡಿನ ಮೇಲ್ವಿಚಾರಕಿಯಾಗಿ ಪರಿವರ್ತನೆಗೊಂಡ ಮೀರಾಬೆನ್ ತಮ್ಮ ನೆನಪಿನ ಪುಸ್ತಕ " ದಿ ಸ್ಪಿರಿಟ್ ಪಿಲ್ಗ್ರಿಮೇಜ್" ನಲ್ಲಿ ವಿವರಿಸಿದ್ದಾರೆ.
ನಿಮಗೆ ಆಶ್ಚರ್ಯವಾಗಬಹುದು ವಿಶ್ವದ ಹಾಲು ಬಳಕೆದಾರರಲ್ಲಿ ಶೇಕಡ 65 ಮಂದಿ ಆಡಿನ ಹಾಲು ಕುಡಿಯುತ್ತಾರೆಂಬುದು ಸೋಜಿಗದ ಸಂಗತಿಯಾಗಿದೆ.ಆಡಿನ ಹಾಲು ತುಸು ಒಗರುವಾಸನೆ ಇದ್ದರೂ ಆಡು ಎಲ್ಲಾ ಸೊಪ್ಪುಗಳನ್ನು ತಿನ್ನುವುದರಿಂದ ವನೌಷಧ ಎಂದು ಕರೆಯಲಾಗುತ್ತದೆ. ಲೀಟರ್ ಹಾಲಿಗೆ 250 ರೂಪಾಯಿ ದರ ಇರುವುದರಿಂದ ಜನಸಾಮಾನ್ಯರು ಬಳಸಲು ಹಿಂಜರಿಯುತ್ತಾರೆ.
ಡಾ.ರಾಜಕುಮಾರ್ ಅಭಿನಯದ "ಬಂಗಾರದ ಪಂಜರ" ಎಂಬ ಸಿನಿಮಾ ನೆನಪಿಸಿಕೊಳ್ಳಿ. ಶ್ರೀಮಂತನೊಬ್ಬ ತನ್ನ ಮಗನಿಗೆ ಆಧುನಿಕ ಚಿಕಿತ್ಸೆಕೊಡಿಸಿ ವಿಫಲನಾಗಿ ಕೊನೆಗೆ ತಮ್ಮ ಮಗನನ್ನು ಕಾಡಿನಲ್ಲಿರುವ ಕುರಿಗಾಯಿಯ ರೊಪ್ಪಕ್ಕೆ ತಂದು ಬಿಟ್ಟುಹೋಗುವ ದೃಶ್ಯವನ್ನು ಯಾರೂ ಮರೆತಿರಲಾರರು.
ಹಲವಾರು ಕಾಯಿಲೆಗಳಿಗೆ ದಿವ್ಯ ಔಷಧವಾಗಿರುವ ಆಡಿನ ಹಾಲು ಕೆಮ್ಮು, ಅಸ್ತಮಾ,ಉಸಿರಾಟದ ಸಮಸ್ಯೆ, ರಕ್ತಸ್ರಾವ,ಕ್ಷಯ, ಕ್ಯಾನ್ಸರ್, ಜೀರ್ಣಶಕ್ತಿ ಹೆಚ್ಚಳ ಹೀಗೆ ಹಲವಾರು ಸಮಸ್ಯೆಗಳಿಗೆ ರಾಮಬಾಣವಾಗಿದೆ ಎನ್ನುತ್ತಾರೆ ಪಶುವೈದ್ಯ ಡಾ.ಸಿ.ಎಸ್.ರಘುಪತಿ. ಇಷ್ಟೆಲ್ಲಾ ಔಷದೀಯ ಗುಣ ಇರುವ ಮೇಕೆ ಹಾಲನ್ನು ಶ್ರೀನಿವಾಸ್ "ಮೈ ಗೋಟ್"ಮಿಲ್ಕ್ ಎಂಬ ಹೆಸರಿನಡಿ ಮಾರುಕಟ್ಟೆಗೆ ಬಿಟ್ಟು ನಾಡಿನ ಗಮನಸೆಳೆದಿದ್ದಾರೆ.
ಕೋಳಿಗೂ ಮೇಕೆಗೂ ಎತ್ತಣಿಂದೆತ್ತ ಸಂಬಂಧ. ಇದೆಲ್ಲಾ ಹೇಗಾಯ್ತು ಶ್ರೀನಿವಾಸ್ ಅಂತ ಕೇಳಿದರೆ, ಅದೊಂದು ದೊಡ್ಡ ಸ್ಟೋರಿ ಸಾರ್ ಅಂತ ಮಾತಿಗೆ ಶುರುವಿಟ್ಟುಕೊಳ್ಳುತ್ತಾರೆ. ಆರಂಭದಲ್ಲಿ ನೈಸಗರ್ಿಕ ಕೃಷಿಯಲ್ಲಿ ಹಣ್ಣಿನ ಗಿಡಮರಗಳನ್ನು ಬೆಳೆಸಿ ಮೇಕೆ ಸಾಕಾಣಿಕೆ ಮಾಡೋಣ ಅಂತ ಜಮೀನು ಖರೀದಿಸಿದೆ. ನನಗೆ ಆಗ ಯಾವ ಕೃಷಿ ಅನುಭವವೂ ಇರಲಿಲ್ಲ.ಮೆಳೆಗಾಲ,ಬೇಸಿಗೆ, ಚಳಿಗಾಲದಲ್ಲಿ ಪ್ರಕೃತಿಯಲ್ಲಿ ನಡೆಯವ ವಿಸ್ಮಯಗಳೇ ನನಗೆ ಗೊತ್ತಿರಲಿಲ್ಲ. ಇದೆಲ್ಲಾ ಆರಂಭವಾದ ಮೇಲೆ ಋತುಮಾನಗಳ ಮಹತ್ವ ಅರ್ಥವಾಗುತ್ತಾ ಹೋಗುತ್ತಿದೆ. ಪ್ರಕೃತಿಗೆ ವಿರುದ್ಧವಾಗಿ ನಮ್ಮ ಎಲ್ಲಾ ಕೃಷಿ ಚಟುವಟಿಕೆಗಳು ಇವೆ.ಹಾಗಾಗಿ ಸವಾಲುಗಳು ಸಮಸ್ಯೆಗಳು ಹೆಚ್ಚಾಗುತ್ತಿವೆ. ಅವುಗಳನ್ನು ನಿಭಾಹಿಸಲು ತಜ್ಞರು ಹುಟ್ಟಿಕೊಂಡು ಕೃಷಿಕರು ಅವರನ್ನು ಸಾಕುವುದರಲ್ಲೇ ಬಡವಾಗುತ್ತಿದ್ದಾರೆ. ಇದು ಅನುಭವದಿಂದ ಕಂಡುಕೊಂಡಿರುವ ಸತ್ಯ ಅಂತ ಶ್ರೀನಿವಾಸ್ ಖಚಿತವಾಗಿ ಹೇಳುತ್ತಾರೆ.
ಆರಂಭದಲ್ಲಿ ಮಿಶ್ರತಳಿ ಹಸುಗಳನ್ನು ಸಾಕಲು ಯೋಚಿಸಿದ್ದೆ. ಆದರೆ ಅದು ನಿತ್ಯ ನನ್ನನ್ನೂ ಚಟುವಟಿಕೆಯಲ್ಲಿ ಇರಿಸಲಾರದು ಅನಿಸಿತು.ಅಲ್ಲದೆ ಹಸುವಿನ ನಿರ್ವಹಣೆಗೆ ಹೋಲಿಸಿದರೆ ಹಾಲಿನ ದರವೂ ಕಡಿಮೆ.ಶುದ್ಧ ಹಾಲು ಎನ್ನುವುದು ಮರೀಚಿಕೆ.ಹಾಗಾಗಿ ನಮ್ಮ ಹಾಲು ರಫ್ತು ಆಗುತ್ತಿಲ್ಲ. ಪಶುಪಾಲನೆಯಲ್ಲಿ ಬಳಸುವ ಔಷದಿಗಳು ಆರೋಗ್ಯದ ಮೇಲೆ ದುಷ್ಪರಿಣಾಮಬೀರುತ್ತವೆ.ಹೀಗಾಗಿ ಆಡು ಕುರಿ ಸಾಕಾಣಿಕೆ ಕಡೆಗೆ ಒಲವು ಮೂಡಿತು ಎನ್ನುತ್ತಾರೆ.
ಇಳಿಮುಖವಾಗುತ್ತಿರುವ ನಾಟಿ ಹಸುಗಳ ಸಂಖ್ಯೆ, ಕಲುಷಿತ ಮಿಶ್ರತಳಿ ಹಸುಗಳ ಹಾಲು ಉತ್ಪಾದನೆ, ನಗರದಲ್ಲಿ ಹೆಚ್ಚುತ್ತಿರುವ ಮೇಕೆ ಹಾಲಿನ ಬೇಡಿಕೆ ಇವೆಲ್ಲಾ ಆಡುಗಾರಿಕೆಯತ್ತ ಹೆಜ್ಜೆ ಹಿಡಲು ಪ್ರೇರಣೆಯಾದವು.
ಯಶೋಧವನವನ್ನು ದೇಶದಲ್ಲೇ ಹೆಚ್ಚು ಮೇಕೆ ಹಾಲು ಉತ್ಪಾದನಕೇಂದ್ರ ಮಾಡುವ ಗುರಿ ನಮ್ಮದು.ಈಗಾಗಲೇ ದಿನಕ್ಕೆ 300 ಲೀಟರ್ ಹಾಲು ಉತ್ಪಾದಿಸುತ್ತಿದ್ದೇವೆ. 2000 ಮೇಕೆಗಳನ್ನು ಸಾಕುವಷ್ಟು ಮೂಲಸೌಲಭ್ಯ ನಮ್ಮಲ್ಲಿ ಕಲ್ಪಿಸಿಕೊಂಡಿದ್ದೇವೆ. ಈಗಾಗಲೇ ಉತ್ತರ ಭಾರತದ ಎಲ್ಲಾ ಕಡೆ ಸುತ್ತಾಡಿ ಮೇಕೆ ಸಾಕಾಣಿಕೆಯ ಆಳಗಲ ಎಲ್ಲವನ್ನು ಅರಿತುಕೊಂಡಿದ್ದೇನೆ.ಇದನ್ನಿ ದೊಡ್ಡ ಉದ್ಯಮ ಮಾಡುವ ಮಹತ್ವಕಾಂಕ್ಷೆ ಯಾರಲ್ಲೂ ಇಲ್ಲ. ಅದೇ ನನಗೆ ಸ್ಪೂತರ್ಿಆಯಿತು ಎನ್ನುತ್ತಾರೆ.
ಹಾಲು ಹೆಚ್ಚು ಕೊಡುವ ಅತ್ಯುತ್ತಮ ಏಳನೂರು ಬೀಟಲ್ ತಳಿಯ ಮೇಕೆಗಳು ಸೇರಿದಂತೆ ಸಿರೋಹಿ,ಜಲವಾಡಿ,ಬಾರ್ಬರಿ, ಕರೋಲಿ,ಜಮುನಾಪುರಿ,ತಲಶೇರಿ ತಳಿಯ ಸಾವಿರಕ್ಕೂ ಹೆಚ್ಚು ಮೆಕೆಗಳು ನಮ್ಮಲ್ಲಿವೆ. ಬೀಟಲ್ ಅಚ್ಚುಮೆಚ್ಚಿನ ತಳಿ. ಅದಲ್ಲದೇ ನಮ್ಮಲ್ಲಿ ಅಪರೂಪವಾಗುತ್ತಿರುವ ಬಂಡೂರು ಕುರಿಗಳ ತಳಿ ಸಂವರ್ಧನೆಯನ್ನು ಮುಖ್ಯವಾಗಿಟ್ಟುಕೊಂಡು ನೂರಕ್ಕೂ ಹೆಚ್ಚು ಶುದ್ಧ ಬಂಡೂರು ಕುರಿಗಳನ್ನು ಸಾಕಾಣಿಕೆ ಮಾಡುತ್ತಿರುವುದಾಗಿ ಹೇಳುತ್ತಾರೆ.
ಕೃತಕ ಗರ್ಭಧಾರಣೆಯನ್ನು ವಿರೋಧಿಸುವ ಶ್ರೀನಿವಾಸ್ ಹಸುಗಳಿಗೆ ಕೃತಕ ಗರ್ಭಧಾರಣೆಯನ್ನು ತಂದು ಅವುಗಳ ಸಹಜ ಕಾಮನೆಗಳನ್ನೆ ಕಿತ್ತುಕೊಳ್ಳಲಾಗಿದೆ ಎಂದು ಪ್ರಕೃತಿಯ ವಿರುದ್ಧ ನಡೆಯುತ್ತಿರುವ ಮಾನವ ಹಸ್ತಕ್ಷೇಪಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಾರೆ.
ಸಾಕಾಣಿಕೆಗೆ ತರಬೇತಿ : ಹಾಲು ಮಾರಾಟದ ಜೊತೆಗೆ ಯಶೋಧವನ ಫಾರಂನಲ್ಲಿ ಮೇಕೆ ಸಾಕಾಣಿಕೆ ತರಬೇತಿಯನ್ನು ನೀಡಲಾಗುತ್ತದೆ. ತರಬೇತಿಯ ಅವಧಿ ಮೂರು ದಿನ.ಊಟ ವಸತಿ ಲಭ್ಯ.ತಳಿಗಳ ಆಯ್ಕೆಯಿಂದ ಹಿಡಿದು ಮಾರುಕಟ್ಟೆ, ಸಾಕಾಣಿಕೆ, ಆಹಾರ ತಯಾರಿಕೆ ಸೇರಿದಂತೆ ಮೇಕೆ ಸಾಕಾಣಿಕೆಗೆ ಬೇಕಾದ ಹಣಕಾಸಿನ ಲೆಕ್ಕಚಾರದವರೆಗೂ ವಿವರವಾಗಿ ತರಬೇತಿ ಸಮಯದಲ್ಲಿ ತಳಿಸಿಕೊಡಲಾಗುತ್ತದೆ.
ಅಲ್ಲದೆ ಫಾರಂನಿಂದಲೇ ಆಸಕ್ತರಿಗೆ ಉತ್ತಮ ತಳಿಯ ಮೇಕೆಗಳನ್ನು ಕೊಡಲಾಗುತ್ತದೆ.
ಆಡು ಮೇಕೆಗಳು ಪ್ರಕೃತಿಯಲ್ಲಿ ಸ್ವಚ್ಛಂದವಾಗಿ ಮೇಯುವ ಪ್ರಾಣಿಗಳು.ಅವುಗಳನ್ನು ಕೂಡಿಟ್ಟು ಸಾಕಾವುದು ಪ್ರಕೃತಿಗೆ ವಿರುದ್ಧವಾದದ್ದು. ಆದ್ದರಿಂದ ಅದಕ್ಕೆ ವಿಶೇಷವಾದ ಪರಿಣತಿ ಜ್ಞಾನಬೇಕಾಗುತ್ತದೆ. ಆದ್ದರಿಂದ ಯಶೋಧವನ ಸಾಕಾಣಿಕೆ, ಉತ್ಪನ್ನತಯಾರಿಕೆ ಜೊತೆಗೆ ಉದ್ಯಮದ ಸೂಕ್ಷ್ಮಗಳನ್ನು ಜನರಿಗೆ ತಿಳಿಸಿಕೊಡಲು ವಿಶೇಷ ತರಬೇತಿಯನ್ನು ನೀಡುತ್ತದೆ ಎನ್ನುತ್ತಾರೆ ಶ್ರೀನಿವಾಸ್.
ಮುಖ್ಯವಾಗಿ ನಾವು ಮರಿಗಳ ಟ್ರೇಡಿಂಗ್ಗೆ ಆದ್ಯತೆ ನೀಡುವುದಿಲ್ಲ.ಬ್ರೀಡಿಂಗ್ಗೆ ನಮ್ಮ ಮೊದಲ ಆದ್ಯತೆ. ಸಮಾನ್ಯವಾಗಿ ಎಲ್ಲಾ ಕಡೆ ಟ್ರೇಡಿಂಗ್ ಮಾಡ್ತಾ ಇದ್ದಾರೆ. ಯಾರೂ ಬ್ರೀಡಿಂಗ್ ಮಾಡ್ತಾ ಇಲ್ಲ. ನಾಲ್ಕು ವರ್ಷದ ಮುಂಚೆ ನನಗೂ ಈ ಬಗ್ಗೆ ತಿಳಿವಳಿಕೆ ಇರಲಿಲ್ಲ. ಪಶು ವೈದ್ಯಕೀಯ ಆಸ್ಪತ್ರೆ, ಸಣ್ಣ ಪುಟ್ಟ ಮೇಕೆ ಸಾಕಾಣಿಕೆದಾರರು ಎಲ್ಲರನ್ನೂ ಭೇಟಿ ಮಾಡಿದೆ. ಆದರೂ ನನಗೆ ಅವರು ಅನುಸರಿಸುತ್ತಾ ಇರುವ ವಿಧಾನ ಸರಿ ಕಾಣಲಿಲ್ಲ.
ನಮ್ಮ ಗೋಟ್ ಫಾರಂನಲ್ಲೂ ಆರಂಭದಲ್ಲಿ ಪ್ರಸಿದ್ಧ ಪಶುವೈದ್ಯರನ್ನೇ ಮೇಕೆಗಳ ಆರೋಗ್ಯ ನೋಡಿಕೊಳ್ಳಲು ನೇಮಕಮಾಡಿಕೊಂಡಿದ್ದೆ. ದುರಂತ ಅಂದ್ರೆ ಅವರು ನೋಡಿಕೊಳ್ಳುತ್ತಿದ್ದ ಸಮಯದಲ್ಲೇ ಒಂದೇ ಬಾರಿಗೆ 180 ಮೇಕೆಗಳಿಗೆ ಕಾಯಿಲೆ ಬಂದು ಸಾವನ್ನಪ್ಪಿದವು. ನಂತರ ಅವರನ್ನು ಕೆಲಸದಿಂದ ತೆಗೆದುಹಾಕಿದೆವು. ಈಗ ನಮ್ಮ ಮೇಕೆಗಳು ಸದೃಢವಾಗಿ ಆರೋಗ್ಯವಾಗಿ ಇವೆ. ನಾವು ವಿಜ್ಞಾನವನ್ನು ನಂಬಬೇಕೋ ನಮ್ಮ ಅನುಭವವನ್ನು ನಂಬಿ ಮೇಕೆ ಸಾಕಾಣಿಕೆ ಮಾಡಬೇಕೊ ನೀವೆ ಹೇಳಿ ಸಾರ್ ಅಂತ ಕೇಳುತ್ತಾರೆ.
ಪ್ರಕೃತಿಯನ್ನು ನೋಡಿ ಋತುಮಾನಕ್ಕೆ ತಕ್ಕಂತ ಆಹಾರ ನೀಡಿದರೆ ಯಾವ ದೊಡ್ಡ ಖಾಯಿಲೆಗಳು ಬರುವುದಿಲ್ಲ.ಸಣ್ಣಪುಟ್ಟ ನೆಗಡಿ ಕೆಮ್ಮು ಇದನ್ನು ನಿವಾರಣೆಮಾಡುವಷ್ಟು ಕಲಿತುಕೊಂಡಿದ್ದರೆ ಸಾಕು ಎನ್ನುತ್ತಾರೆ.
ಆಡು ಸಾಕುವವರು ಜಮೀನಿನಲ್ಲಿ ಮುಸುಕಿನ ಜೋಳ,ಅಗಸೆ,ಹೆಡ್ಜ್ ಲೂಸನರ್್,ಸುಬಾಬುಲ್,ಹೆಬ್ಬೇವು,ಗ್ಲಿರಿಸೀಡಿಯಾ, ರೇಷ್ಮೆ,ವೆಲ್ವೆಟ್ ಬೀನ್ಸ್, ಹಲಸಂದೆ ಈ ಎಲ್ಲಾ ಬೆಳೆಗಳನ್ನು ಹಾಕಿಕೊಳ್ಳಬೇಕು. ಹೆಡ್ಜ್ ಲೂಸನರ್್ ಉತ್ಕೃಷ್ಟ ಮೇವು ಕೊಡುವ ಮರ. ಬೇಲಿಯ ಸಾಲಿನಲ್ಲಿ ಅಂಚಿಗೆ ಹಾಕಿಕೊಂಡರೆ ಸಾಕು ಸಾಕಷ್ಟು ಸೊಪ್ಪು ಕೊಡುತ್ತದೆ ಎನ್ನುತ್ತಾರೆ.
ಒಂದು ಎಕರೆಯಲ್ಲಿ 30 ಮೇಕೆಗಳನ್ನು ಸಾಕಬಹುದು.30 ಆಡು,30 ದಿನ,30 ಸಾವಿರ ಎನ್ನುವುದು ನನ್ನ ಪ್ರಾಜೆಕ್ಟ್. ಒಂದು ತಿಂಗಳಿಗೆ 30 ಆಡುಗಳಿಂದ 30 ಸಾವಿರ ರೋಪಾಯಿ ಪಡೆಯಬಹುದು. ಇದು ಕನಿಷ್ಠ ನೀರಾವರಿ ಇರುವ ರೈತರಿಗೆ ಅನುಕೂಲಕರವಾದ ನನ್ನ ಕನಸಿನ ಪ್ರಾಜೆಕ್ಟ್ ಎನ್ನುತ್ತಾರೆ.
ಮುಂದಿನ ದಿನಗಳಲ್ಲಿ ಕಾಪರ್ರ್ೋರೆಟ್ ಮಟ್ಟದಲ್ಲಿ ಈ ಉದ್ಯಮವನ್ನು ಬೆಳೆಸುವ ಕನಸು ನನ್ನದು.200 ಎಕರೆ ಪ್ರದೇಶದಲ್ಲಿ ಸುಮಾರು ಪ್ರತಿದಿನ ಸಾವಿರ ಲೀಟರ್ ಹಾಲು ಉತ್ಪಾದಿಸುವ ಗುರಿ ಇದೆ. ಹೀಗೆ ಉತ್ಪಾದಿಸಿದ ಸಾವಯವ ಹಾಲನ್ನು ವಿದೇಶಗಳಿಗೂ ರಫ್ತುಮಾಡುವ ಯೋಜನೆ ಇದೆ ಎಂದು ಹೇಳುವ ಶ್ರೀನಿವಾಸ್ ಜೀವನದಲ್ಲಿ ದೊಡ್ಡ ಕನಸುಗಳನ್ನೇ ಕಟ್ಟಿಕೊಂಡಿರುವ ಮಹತ್ವಕಾಂಕ್ಷಿಯಂತೆ ಕಾಣುತ್ತಾರೆ.
ನಿಮ್ಮ ಯಶಸ್ಸಿನ ಗುಟ್ಟು ಏನು ಅಂತ ಕೇಳಿದರೆ ಸೀಮಾ( ಎಸ್ಐಎಂಎ) ಸೂತ್ರ ಎನ್ನುತ್ತಾರೆ. ಎಸ್ ಎಂದರೆ ಸೆಲೆಕ್ಷನ್ ಆಫ್ ಬ್ರೀಡ್.ಐ ಎಂದರೆ ಇನ್ಫ್ರಾಸ್ಟ್ರಕ್ಚರ್. ಎಂ ಎಂದರೆ ಮ್ಯಾನೇಜ್ಮೆಂಟ್ ಮತ್ತು ಎ ಎಂದರೆ ಅಗ್ರಿಕಲ್ಚರ್. ಇದನ್ನು ಸರಿಯಾಗಿ ಅರಿತುಮಾಡಿದರೆ ಮೇಕೆ ಸಾಕಾಣಿಕೆಯಲ್ಲಿ ಯಶಸ್ಸು ನಿಶ್ಚಿತ ಎನುವುದು ಶ್ರೀನಿವಾಸ ಅವರ ಅನುಭವ ಸೂತ್ರ.
ಮೇಕೆ ಸಾಕಾಣಿಕೆ ಆಕರ್ಷಣೆ : ಮೇಕೆ ಸಾಕಾಣಿಕೆ ಯಾಕೆ ಎಲ್ಲರನ್ನೂ ಆಕರ್ಷಣೆ ಮಾಡುತ್ತೆ ಗೊತ್ತಾ. ಒಬ್ಬ ಕುರಿಗಾಯಿ ಸಾವಿರದಿಂದ ಎರಡು ಸಾವಿರ ಕುರಿಮರಿ ಸಾಕಾಣಿಕೆ ಮಾಡುತ್ತಾನೆ. ನಾವು ಅವರಿಗಿಂತ ಬುದ್ಧಿವಂತರು, ಓದಿರುವವರು, ಬಂಡವಾಳವೂ ಇದೆ ನಾವ್ಯಾಕೆ ಕುರಿಮೇಕೆ ಸಾಕಬಾರದು ಎಂಬ ಲೆಕ್ಕಚಾರದ ಮೇಲೆ ಪ್ರತಿಯೊಬ್ಬರು ಆಕಷರ್ಿತರಾಗಿ ಈ ಕ್ಷೇತ್ರಕ್ಕೆ ಬರುತ್ತಿದ್ದಾರೆ.
ಕುರಿಗಾಯಿಯನ್ನು ಹೋಗಿ ಕೇಳಿನೋಡಿ ಈ ವರ್ಷ ಎಷ್ಟು ಮರಿ ಹುಟ್ಟಿತು ಅಂತ ಕೇಳಿದರೆ ಆತ ಸರಿಯಾದ ಲೆಕ್ಕ ಕೊಡಲ್ಲ. ಸತ್ತದ್ದು ಕಡಿಮೆ ಹುಟ್ಟಿದ್ದು ಜಾಸ್ತಿ ಅಂತ ಹೇಳುತ್ತಾನೆ. ಇದನ್ನು ಕೇಳಿ ನಮ್ಮವರು ಮೇಕೆ ಸಾಕುವುದು ಸುಲಭ ಅಂತ ತಿಳಿದುಕೊಳ್ಳುತ್ತಾರೆ.ಆದರೆ ಇದು ಸವಾಲಿನ ಕೆಲಸ.
ಉತ್ತರ ಭಾರತದಲ್ಲಿ ಒಬ್ಬೊಬ್ಬ ಕುರಿಗಾಯಿ ಎರಡುಸಾವಿರ ಕುರಿಮರಿಗಳನ್ನು ಮೇಯಿಸುತ್ತಾನೆ.ಇದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಮೇಕೆಯ ಬದುಕು ಇರೋದೆ ಬಯಲಿನಲ್ಲಿ. ಅವಕ್ಕೆ ಯಾವ ಪೌಷ್ಠಿಕ ಆಹಾರವೂ ಬೇಕಿಲ್ಲ. ಯಾವ ಕಾಲಕ್ಕೆ ಯಾವ ಸೊಪ್ಪು ತಿನ್ನಬೇಕು ಅಂತ ಅವಗಳಿಗೆ ಗೊತ್ತು.ಹಾಗಾಗಿ ರೋಗನಿರೋಧಕ ಶಕ್ತಿ ಹೆಚ್ಚೆ ಇರುತ್ತದೆ. ಅವುಗಳಿಗೆ ಯಾವ ವೈದ್ಯರು ಬೇಕಾಗಿಲ್ಲ.ರೋಗವು ಕಡಿಮೆ. ಅವುಗಳ ಆರೋಗ್ಯವನ್ನು ಪ್ರಕೃತಿಯೇ ನೋಡಿಕೊಳ್ಳುತ್ತದೆ.
ಸಮಸ್ಯೆ ಬರುವುದೇ ಮೇಕೆಗಳನ್ನು ನಾವು ಒಂದು ಕಡೆ (ಸ್ಟಾಲ್ ಫೀಡಿಂಗ್) ಕೂಡಿ ಸಾಕುವುದರಿಂದ. ತಿರುಗಾಡಿಕೊಂಡು ತಮ್ಮ ಆಹಾರ ಹುಡುಕಿಕೊಳ್ಳುವ ಪ್ರಾಣಿಗಳನ್ನು ಒಂದು ಕಡೆ ನಿಲ್ಲಿಸಿ ಪ್ರಕೃತಿಗೆ ವಿರುದ್ಧವಾಗಿ ಚಟುವಟಿಕೆ ಆರಂಭಿಸಿದ ತಕ್ಷಣ ಸವಾಲುಗಳು ಸಮಸ್ಯೆಗಳು ಶುರುವಾಗುತ್ತವೆ ಎನ್ನುತ್ತಾರೆ ಶ್ರೀನಿವಾಸ್.
ಅನುಭವ ಎಲ್ಲವನ್ನೂ ಕಲಿಸಿದೆ.ನಗರದಲ್ಲಿ ಬದುಕಿರುವಷ್ಟು ದಿನ ಪ್ರಕೃತಿ ವಿಸ್ಮಯಗಳೇ ಕಾಣುತ್ತಿರಲಿಲ್ಲ.ಇಲ್ಲಿಗೆ ಬಂದ ಮೇಲೆ ಪ್ರತಿ ಹನಿ ನೀರಿನ ಮಹತ್ವವೂ ತಿಳಿಯುತ್ತಿದೆ. ಚಳೆ,ಮಳೆ,ಬೇಸಿಗೆ ಕಾಲದ ದೇಹಕ್ಕೆ ತಾಕುತ್ತಿದೆ. ಹಸಿರಿನ ನಡುವೆ ಮಣ್ಣು, ನೀರು ಎರಡನ್ನೂ ವಿಷಯುಕ್ತಮಾಡದೆ ಪ್ರಕೃತಿಯನ್ನು ಉಳಿಸಿಕೊಂಡು ನಾವು ಬದುಕುವುದೆ ಬದುಕಿಗೆ ನಾವು ಕೊಡುವ ಅರ್ಥ ಎನ್ನುತ್ತಾರೆ. 
ಯಶೋಧವನ ಮೇಕೆ ಫಾರಂಗೆ ದೇಶ, ವಿದೇಶಗಳ ಆಸಕ್ತರು ಭೇಟಿ ನೀಡಿದ್ದಾರೆ. ತರಬೇತಿ ನಡೆಯುತ್ತಿರುತ್ತದೆ. ಪಶುಸಂಗೋಪನೆ ಸಚಿವ ಎ.ಮಂಜು ಭೇಟಿ ನೀಡಿ ಶ್ರೀನಿವಾಸ್ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಬೆಂಗಳೂರಿನಲ್ಲಿ ಮೈಗೋಟ್ ಬ್ರಾಂಡಿನ ಮೇಕೆ ಹಾಲು ಬಿಡುಗಡೆಮಾಡಿ ವ್ಯಾಪಕ ಪ್ರಚಾರ ನೀಡಿದ್ದಾರೆ. ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಹಾಲು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಶ್ರೀನಿವಾಸ್ ಅವರಿಗೆ ಇದೆ.
ಯಶೋಧವನ ಫಾರಂ ನೋಡುವ ಆಸಕ್ತರಿಗೆ ಪ್ರವೇಶ ಶುಲ್ಕ ಇರುತ್ತದೆ. ಮೇಕೆ ಸಾಕಾಣಿಕೆ ಬಗ್ಗೆ ಆಸಕ್ತಿ ಇರುವವರು ಯಶೋಧವನ ಗೋಟ್ಫಾರಂ ಡಾಟ್ ಕಾಮ್ ವೆಬ್ಸೈಟ್ ನೋಡಬಹುದು. ಶ್ರೀನಿವಾಸ್ 9845111917 ಇಲ್ಲಿಗೆ ಕರೆಮಾಡಬಹುದು.








3 ಕಾಮೆಂಟ್‌ಗಳು: