vaddagere.bloogspot.com

ಮಂಗಳವಾರ, ಏಪ್ರಿಲ್ 4, 2017

ಹತಾಶ ರೈತರ ಪಾಲಿನ ಸಂಜೀವಿನಿ ಶೂನ್ಯ       ಬಂಡವಾಳದ  ನೈಸರ್ಗಿಕ ಕೃಷಿ : ಶಂಕರಣ್ಣ ದೊಡ್ಡಣನವರ
ಮೈಸೂರು : ಒಂದೆಡೆ ಕಡಿಮೆಯಾಗುತ್ತಿರುವ ಮಳೆಯ ಪ್ರಮಾಣ. ಪುನರಾವರ್ತನೆಯಾಗುತ್ತಿರುವ ಬರ. ಹೆಚ್ಚುತ್ತಿರುವ ಭೂಮಿಯ ತಾಪಮಾನ.ಅಂತರ್ಜಲ ಕುಸಿತ. ಇವೆಲ್ಲಾ ರೈತರನ್ನು ಹತಾಶ ಸ್ಥಿತಿಗೆ ನೂಕುತ್ತಿವೆ.
ಇಂತಹ ವಿಷಮ ಪರಿಸ್ಥಿಯಲ್ಲಿ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿಯ ಬಗ್ಗೆ ರೈತರು ಆಶಾಭಾವನೆಯಿಂದ ಕಣ್ಣರಳಿಸಿ ನೋಡುತ್ತಿದ್ದಾರೆ. ಮಹಾರಾಷ್ಟ್ರದ ಅಮರಾವತಿಯ ಸುಭಾಷ್ ಪಾಳೇಕರ್ ಅವರ ಈ ಶೂನ್ಯ ಬಂಡವಾಳದ ನೈಸಗರ್ಿಕ ಕೃಷಿಯನ್ನು ಪರಿಣಾಮಕಾರಿಯಾಗಿ ಶ್ರದ್ಧೆಯಿಂದ ಅನುಸರಿಸಿದ್ದೇ ಆದಲ್ಲಿ "ಆತ್ಮಹತ್ಯೆಯೂ ಇಲ್ಲ, ಸಾಲದ ಶೂಲವೂ ಇಲ್ಲ" ಎಂಬ ಸಾಹಿತಿ ದೇವನೂರ ಮಹಾದೇವ ಅವರ ಮಾತು ನೈಜ ನೈಸರ್ಗಿಕ ಕೃಷಿಕರನ್ನು ಅವರ ತೋಟದಲ್ಲಿ ಕಂಡು ಮಾತನಾಡಿಸಿದಾಗ ಸತ್ಯ ಎನಿಸುತ್ತದೆ. ಆದರೂ ಇಂತಹ ಸರಳ ಸತ್ಯಗಳು ನಮ್ಮ ರೈತರ ಕಣ್ಣಿಗೆ ಯಾಕೆ ಕಾಣುತ್ತಿಲ್ಲ ಎಂಬ ಬೇಸರವೂ ಆಗುತ್ತದೆ.
ಪಾಳೇಕರ್ ಅವರ ಈ ಚಮತ್ಕಾರಕ ನೈಸರ್ಗಿಕ ಕೃಷಿಯ ಬಗ್ಗೆ ರೈತರಲ್ಲಿ ಅರಿವು ಮೂಡಿಸುತ್ತಾ, ಅವರ ಮನಮುಟ್ಟುವಂತೆ ಅಥರ್ೈಸಬಲ್ಲ ಬೆರಳೆಣಿಕೆಯಷ್ಟು ಮಂದಿ ಮಾತ್ರ  ಇದ್ದಾರೆ. ಅವರಲ್ಲಿ ಶಂಕರಣ್ಣ ದೊಡ್ಡಣ್ಣನವರ ಕೂಡ ಪ್ರಮುಖರು. ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಮಾವಕೊಪ್ಪ ಗ್ರಾಮದ ಶಂಕರಣ್ಣ ದೊಡ್ಡಣ್ಣನವರ ಅವರೊಂದಿಗೆ ಮಾತನಾಡುತ್ತಿದ್ದರೆ, ನೈಸಗರ್ಿಕ ಕೃಷಿಯ ಅನಿವಾರ್ಯತೆ ಮತ್ತು ಅಗತ್ಯತೆ ಸರಳವಾಗಿ ಮನಸ್ಸಿನಾಳಕ್ಕೆ ಇಳಿಯುತ್ತಾ ಹೋಗುತ್ತದೆ. ನಮ್ಮಲ್ಲಿರುವ ಹತ್ತು ಹಲವು ಕೃಷಿ ಪದ್ಧತಿಗಳ ಗೊಂದಲಗಳಿಗೆ ಉತ್ತರ ಸಿಗುತ್ತಾ ಹೋಗುತ್ತದೆ.
ಮಾವಕೊಪ್ಪ ಎಂಬ ಗ್ರಾಮದಲ್ಲಿ "ಹೊಂಗನಸು" ಎಂಬ ನೈಸಗರ್ಿಕ ಕೃಷಿ ತರಬೇತಿ ಕೇಂದ್ರ ನಡೆಸುತ್ತಿರುವ ಶಂಕರಣ್ಣ ಇತ್ತೀಚೆಗೆ ಮೈಸೂರಿಗೆ ಬಂದಿದ್ದರು. ಮೈಸೂರು ಆಕಾಶವಾಣಿಯಲ್ಲಿ ಅವರ ಮಾತುಗಳನ್ನು ಕೇಳಿ ಪ್ರಭಾವಿತನಾಗಿದ್ದ ನನಗೆ ಅವರನ್ನು ಕಂಡು ಮಾತನಾಡಿಸುವ ಅವಕಾಶವೊಂದು ಸಿಕ್ಕಿತ್ತು.
ತರಬೇತಿ ಕೇಂದ್ರದಲ್ಲಿ ರೈತರೊಂದಿಗೆ ಸಂವಾದ, ಪಾಠ ಪ್ರವಚನ,ಪುಸ್ತಕ ಪ್ರದರ್ಶನ,ಕ್ಷೇತ್ರ ವೀಕ್ಷಣೆ,ರೇಡಿಯೋ ಕಾರ್ಯಕ್ರಮ ಮರುಆಲಿಕೆ ಹೀಗೆ ರೈತರಲ್ಲಿ ಅರಿವು ಮೂಡಿಸುತ್ತಾ ಹೊಸ ಕನಸು ಕಟ್ಟುತ್ತಿರುವ "ಹೊಂಗನಸು" ವಿನ ರುವಾರಿ ಶಂಕರಣ್ಣ ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ. ಅವರೇ ನಮ್ಮ ಈ ವಾರದ ಬಂಗಾರದ ಮನುಷ್ಯ.
ದೇಶದ ಜಲಕ್ಷಾಮಕ್ಕೆ,ಜಾಗತಿಕ ತಾಪಮಾನ ಏರಿಕೆ ತಡೆಯಲು ಏಕಮೇವ ಪರಿಣಾಮಕಾರಿ ಪರಿಹಾರ ನೈಸಗರ್ಿಕ ಕೃಷಿ ಎನ್ನುವ ಶಂಕರಣ್ಣ ಇದನ್ನು ರೈತ ಸಮುದಾಯಕ್ಕೆ ರೂಪಿಸಿಕೊಟ್ಟ ಸುಭಾಷ್ ಪಾಳೇಕರ್ ಅವರನ್ನು ಹತಾಶ ರೈತರ ಪಾಲಿನ ದೇವತಾ ಮನುಷ್ಯ ಎಂದು ಕರೆಯುತ್ತಾರೆ.
ಖುಷ್ಕಿ ಬೇಸಾಯದಲ್ಲಿ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಮಾಡಿ ದೊಡ್ಡ ಸಾಧಕರಾಗಿರುವ ರಾಜಶೇಖರ ನಿಂಬರಗಿ( ಮೊ.9972612756, 8762482005) ಅವರ ತೋಟ ನೈಸಗರ್ಿಕ ಕೃಷಿಯ ವಿಶ್ವ ವಿದ್ಯಾನಿಲವೇ ಆಗಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬೆನಕನಹಳ್ಳಿಯಲ್ಲಿರುವ ಅವರ ತೋಟಕ್ಕೆ ಒಮ್ಮೆ ಹೋಗಿ ನೋಡಿಬಂದರೆ ಯಾವ ರೈತನೂ ಆತ್ಮಹತ್ಯೆ ಬಗ್ಗೆ ಚಿಂತಿಸುವುದಿಲ್ಲ ಎನ್ನುತ್ತಾರೆ.
ನೈಸಗರ್ಿಕ ಕೃಷಿಯನ್ನು ಪರಿಣಾಮಕಾರಿಯಾಗಿ ಮಾಡಿದರೆ ಕೇವಲ ಮೂರೇ ತಿಂಗಳಲ್ಲಿ ಅದರ ಫಲಿತಾಂಶವನ್ನು ಕಾಣಬಹುದು.ಜೀವಾಮೃತವನ್ನು ಭೂಮಿಗೆ ನೀಡಿದ ನಾಲ್ಕು ದಿನದಲ್ಲಿ ಭೂ ಆಳದಲ್ಲಿ ಸುಪ್ತಾವಸ್ಥೆಯಲ್ಲಿರುವ ಎರೆಹುಳುಗಳು ಕ್ರೀಯಾಶೀಲವಾಗಿ ಮೇಲೆ ಬಂದು ಕೆಲಸ ಆರಂಭಿಸುತ್ತವೆ ಎನ್ನುತ್ತಾರೆ. ತಮ್ಮ ಮಾತಿನ ನಡುವೆ ನೂರಾರು ಜೀವಂತ ಉದಾಹರಣೆಗಳನ್ನು ನೀಡುತ್ತಾ ಹೋಗುತ್ತಾರೆ.
ರಾಸಾಯನಿಕ ಕೃಷಿಯನ್ನು ಬಿಟ್ಟ ಮೇಲೂ ನಮ್ಮ ರೈತರಿಗೆ ತಾವು ಯಾವ ಕೃಷಿ ಮಾಡಬೇಕು ಎನ್ನುವ ಗೊಂದಲಗಳೇ ಎದುರಾಗುತ್ತವೆ. ಇಷ್ಟೆಲ್ಲಾ ಗೊಂದಲಗಳಿಂದ ಮತ್ತೆ ರೈತರನ್ನು ಹಾದಿ ತಪ್ಪಿಸಿದಂತೆ ಆಗುವುದಿಲ್ಲವೆ ಎಂಬ ನೇರ ಪ್ರಶ್ನೆಯೊಂದಿಗೆ ನಾನು ಶಂಕರಣ್ಣ ಅವರೊಂದಿಗೆ ಮುಖಾಮುಖಿಯಾದೆ. ಅವರು ಹೇಳುತ್ತಾ ಹೋದರು...
ರಾಸಾಯನಿಕ ಕೃಷಿಗೆ ಪರ್ಯಾಯವಾಗಿ ಆರೇಳು ಕೃಷಿ ಪದ್ಧತಿಗಳಿವೆ.ಅವೆಲ್ಲಕ್ಕಿಂತ ನೈಸರ್ಗಿಕ ಕೃಷಿ ಭಿನ್ನವಾದದ್ದು. ಇದು ಸಾವಯವ ಕೃಷಿ ಅಲ್ಲ,ಸಹಜ ಕೃಷಿ ಅಲ್ಲ,ಜೀವ ಚೈತನ್ಯ ಕೃಷಿ ಅಲ್ಲ,ಕಾಡು ಕೃಷಿ ಅಲ್ಲ,ಮಂತ್ರ ಪಠಣ ಅಥವಾ ಯೋಗಿಕ್ ಕೃಷಿ ಅಲ್ಲ.ಶಿವಯೋಗ ಕೃಷಿಯೂ ಅಲ್ಲ. ಇವೆಲ್ಲಕ್ಕಿಂತ ಭಿನ್ನವಾದ ನನ್ನ ತಿಳುವಳಿಕೆಯಲ್ಲಿ ಸರಳವಾದದ್ದು ನೈಸಗರ್ಿಕ ಕೃಷಿ. ಇಲ್ಲಿ ಏನನ್ನು ಮಾಡುವ ಆಗಿಲ್ಲ. ಆದರೆ ಏನು ಮಾಡಬೇಕು ಎನ್ನುವುದು ಮಾತ್ರ ತುಂಬಾ ಮುಖ್ಯ. ಏನು ಮಾಡಬೇಕು ಅಂತ ಹೇಳುತ್ತೇವೆಯೋ ಅದನ್ನು ಮಾಡಲೇ ಬೇಕು.
ಮೊದಲಿಗೆ ಏನನ್ನು ಮಾಡಬಾರದು ಎನ್ನುವುದನ್ನು ನೋಡುವುದಾದರೆ. 1.ಪೇಟೆಯಿಂದ ಹಣಕೊಟ್ಟು ಬೀಜ ಗೊಬ್ಬರ ಏನನ್ನು ತರುವ ಆಗಿಲ್ಲ. 2. ಎರೆಹುಳ ಗೊಬ್ಬರ ಮಾಡಬೇಕಿಲ್ಲ. 3.ಕಾಂಪೂಸ್ಟ್ ಗೊಬ್ಬರ ತಯಾರಿಸುವಂತಿಲ್ಲ 4.ಜಮೀನು ಮಟ್ಟ ಮಾಡುವಂತಿಲ್ಲ. ತಗ್ಗು ದಿಣ್ಣೆ ಏನೇ ಇದ್ದರು ಅದು ಹಾಗೇ ಇರಲು ಬಿಡಬೇಕು. 5. ನೀರು ಕೊಯ್ಲು ಮಾಡಲು ಟ್ರಂಚು,ಬಡು ಕಟ್ಟಲು ಶ್ರಮ ತೆಗೆದುಕೊಳ್ಳಬೇಕಾಗಿಲ್ಲ.
ಇದರ ಉದ್ದೇಶ ಡೂ ನಥಿಂಗ್. ಏನೂ ಮಾಡಬೇಡಿ, ಏನೂ ಮಾಡಬೇಡಿ, ಏನೂ ಮಾಡಬೇಡಿ. ಯಾಕೆಂದರೆ ಇದು ಶೂನ್ಯ ಬಂಡವಾಳ ಕೃಷಿ.ಇಲ್ಲಿ ವೆಚ್ಚ ಕೂಡದು. ನೆಲಕಚ್ಚಿ ಬಿದ್ದ ರೈತನ ಕೃಷಿ ಇದು. ಹಣ ಇಲ್ಲದ ರೈತ ಮಾಡಬಹುದಾದ ಕೃಷಿ ಇದು.
ಕಡು ಬಡವರು, ಬಂಡವಾಳ ಇಲ್ಲದ ರೈತರು ಮಾಡಬಹುದಾದ ಸರಳ ಕೃಷಿ ಶೂನ್ಯ ಬಂಡವಾಳದ ನೈಸಗರ್ಿಕ ಕೃಷಿ ಎನ್ನುವುದು ನೆನಪಿರಬೇಕು. ರೈತ ಪೇಟೆಗೆ ಹೋದರೆ ತನ್ನ ಉತ್ಪನ್ನಗಳನ್ನು ಮಾರಾಟಮಾಡಲು ಮಾತ್ರ ಹೋಗಬೇಕೆ ವಿನಃ ಖರೀದಿದಾರನಾಗಿ, ಗ್ರಾಹಕನಾಗಿ ಹೋಗಬಾರದು. ಇದರ ಮುಖ್ಯ ಉದ್ದೇಶ ಶ್ರೇಷ್ಠ ಗುಣಮಟ್ಟದ ಅನ್ನ ಮತ್ತು ನೀರು ಉಚಿತವಾಗಿ ಸಿಕ್ಕಬೇಕು. ಹೇರಳ ಪ್ರಮಾಣದ ಅನ್ನ ನೀರು ಉಚಿತವಾಗಿ ಸಿಗುವ ತಾಂತ್ರಿಕತೆ ನೈಸರ್ಗಿಕ ಕೃಷಿ.
ಇದಕ್ಕೆ ಬೇಕಾದದ್ದು ಒಂದು ದೇಸಿ ಹಸು. ತಲೆಯಲ್ಲಿ ಮಿದುಳು, ಒಂದಷ್ಟು ಆಲೋಚನೆ ಮಾಡುವ ಬುದ್ದಿ ಇರುವಂತಿರಬೇಕು. ಪುಸ್ತಕ ಓದುವ, ನೈಸಗರ್ಿಕ ಕೃಷಿ ತೋಟ ಹೋಗಿ ನೋಡುವ ಕುತೂಹಲ ಇರಬೇಕು. ಕನಿಷ್ಠ ಕುತೂಹಲ ಮತ್ತು ಬೆರಗು ಇರಬೇಕು. ಹಾಗಿದ್ದರೆ ಅದ್ಭುತ ಸಾಧನೆ ಮಾಡಬಹುದು.
ಮುಖ್ಯ ಬೆಳೆಗಳ ಜೊತೆಗೆ ಕೆಲವು ಅಂತರ ಬೇಸಾಯದ ಬೆಳೆಗಳನ್ನು ಬೆಳೆಯಲು ಹೇಳಲಾಗುತ್ತದೆ, ಕಡಿಮೆ ಅವಧಿಯ ಈ ಅಂತರ ಬೆಳೆಗಳಿಂದ ಮುಖ್ಯ ಬೆಳೆಯ ಖರ್ಚು ವೆಚ್ಚವನ್ನು ಸರಿದೂಗಿಸಿಕೊಳ್ಳಲಾಗುವುದು. ಅದಕ್ಕೆ ಇದನ್ನು ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಅಂತ ಕರೆಯಲಾಗುತ್ತದೆ.
ಇಲ್ಲಿ ಒಂದು ತತ್ವ ಇದೆ. ಕೊಡುವುದು ಮತ್ತು ಪಡೆಯುವುದು. ಪಡೆದದ್ದನ್ನು ಮತ್ತೆ ಪ್ರಕೃತಿಗೆ ಹಿಂದಿರುಗಿಸುವುದು. ಭೂಮಿಯಿಂದ ಬರೀ ಪಡೆಯುವುದಲ್ಲ ಮರಳಿ ಕೊಡುವುದು ಇಲ್ಲಿ ಅಷ್ಟೇ ಮುಖ್ಯ. ಜಲಚಕ್ರದ ಹಾಗೇ ನಿಸರ್ಗದಲ್ಲೂ ಪೋಷಕಾಂಶಗಳ ಚಕ್ರ ಇದೆ.ರಾಸಾಯನಿಕ ಕೃಷಿಯ ಅದ್ವಾನದಿಂದ ಪೋಷಕಾಂಶಗಳ ಚಕ್ರವನ್ನು ನಾವು ತುಂಡರಿಸಿಬಿಟ್ಟಿದ್ದೇವೆ. ಮತ್ತೆ ಇದನ್ನು ನಾವು ಸ್ಥಾಪನೆ ಮಾಡಬೇಕಿದೆ.ಅದು ನೈಸಗರ್ಿಕ ಕೃಷಿಯಿಂದ ಮಾತ್ರ ಸಾಧ್ಯ.
ಸಗಣಿ ಅಂದರೆ ಗೊಬ್ಬರ ಅಲ್ಲ : ಸಾಮಾನ್ಯವಾಗಿ ನಾವೆಲ್ಲ ಸಗಣಿ ಅಂದರೆ ಗೊಬ್ಬರ ಅಂತ ಹೇಳುತ್ತೇವೆ. ಖಂಡಿತ ಅಲ್ಲ. ಸಗಣಿ ಅಂದರೆ ಗೊಬ್ಬರ ಅಲ್ಲ. ಇದನ್ನು ಅರ್ಥಮಾಡಿಕೊಳ್ಳದಿದ್ದರೆ ನೈಸರ್ಗಿಕ ಕೃಷಿ ಅರ್ಥವಾಗುವುದಿಲ್ಲ. ಸಾವಯವ ಕೃಷಿಯಲ್ಲಿ ಎಕರೆಗೆ 20 ರಿಂದ 30 ಟನ್ ಗೊಬ್ಬರ ಹಾಕಲು ಹೇಳುತ್ತಾರೆ. ಇದು ಸಾಧ್ಯವೇ?. ನಮಗೆ ಕುಡಿಯಲು ನೀರಿಲ್ಲ ಅಷ್ಟೊಂದು ದನಕರುಗಳನ್ನು ಹೇಗೆ ಸಾಕುವುದು. ಅದಕ್ಕೆ ಹೇಳುವುದು ಸಗಣಿ ಅಂದರೆ ಗೊಬ್ಬರ ಅಲ್ಲ.ಅದು ಜೀವಾಣುಗಳ ಸಮುಚ್ಚಯ.  ಹೇಗೆ ಹಾಲಿಗೆ ಮೊಸರು ಹೆಪ್ಪಾಗಿ ಕೆಲಸಮಾಡುತ್ತದೊ ಹಾಗೇ ಭೂಮಿಗೆ ಸಗಣಿ ಹೆಪ್ಪಂತೆ ಕೆಲಸಮಾಡುತ್ತದೆ. ಹಾಗಾಗಿ ಒಂದು ಎಕರೆಗೆ 21 ಬುಟ್ಟಿ ಸಗಣಿ ನಮಗೆ ಸಾಕು. ಈ ಪರಿಕಲ್ಪನೆ ಮಾದಲು ಗೊತ್ತಿರಬೇಕು. ಮಾಡಬಾರದನ್ನು ಮಾಡಿ ಮಾಡಿ ರೈತರು ಅಪಾಯಕಾರಿ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ. ನೈಸರ್ಗಿಕ ಕೃಷಿಯಲ್ಲಿ ಶೇಕಡ 90 ರಷ್ಟು ವಿದ್ಯುತ್, ಶೇಕಡ 90 ರಷ್ಟು ನೀರು ಮತ್ತು ಶೇಕಡ 90 ರಷ್ಟು ಮಾನವ ಗಂಟೆಗಳನ್ನು ಉಳಿಸುತ್ತೇವೆ.
ಹಾಗಾದರೆ ಏನು ಮಾಡಬೇಕು ಅಂತ ನೀವು ಕೇಳಬಹುದು. ಸುಭಾಷ್ ಪಾಳೇಕರ್ ನೈಸಗರ್ಿಕ ಕೃಷಿಯ ಹರಿಕಾರ. ನೈಸರ್ಗಿಕ ಕೃಷಿಯಲ್ಲಿ ಅವರು ನಾಲ್ಕು ಚಕ್ರಗಳನ್ನು ಹೇಳುತ್ತಾರೆ.ಇದನ್ನು ಒಂದು ರಥಕ್ಕೆ ಹೋಲಿಸುತ್ತೇವೆ. ಯಾಕೆ ಅಂದರೆ ರಥ ಒಂದು ಚಕ್ರ ಇಲ್ಲದಿದ್ದರೆ ಹೇಗೆ ಮುಂದೆ ಹೋಗುವುದಿಲ್ಲವೋ ಹಾಗೇ ನೈಸರ್ಗಿಕ ಕೃಷಿಯೂ ಕೂಡ ಈ ನಾಲ್ಕು ಚಕ್ರಗಳಲ್ಲಿ ಒಂದು ಚಕ್ರ ಮರೆತರು ಯಶಸ್ಸು ನೀಡಲಾರದು.
1.ಬೀಜಾಮೃತ 2. ಜೀವಾಮೃತ 3. ಮುಚ್ಚಿಗೆ ಮತ್ತು 4. ವಾಪಸ್ಸಾ ಇವೇ ಆ ನಾಲ್ಕು ನೈಸರ್ಗಿಕ ಕೃಷಿಯ ಚಕ್ರಗಳು. ಈ ನಾಲ್ಕು ಚಕ್ರಗಳನ್ನ ಎಳೆಯಲು ಬೇಕಾದದ್ದು ಒಂದು ನಾಟಿ ಹಸು ಮತ್ತು ದೇಶಿಯ ಎರೆಹುಳು ಎಂಬ ಎರಡು ಅದ್ಭುತ ಶಕ್ತಿಗಳು.
ನಾಡ ಹಸುವಿನಲ್ಲಿ 23 ಲಕ್ಷಣಗಳಿವೆ.ಇದರಲ್ಲಿ ಒಂದೇ ಒಂದು ಲಕ್ಷಣ ಕೂಡ ವಿದೇಶಿ ಹಸುವಿಗೆ ಇಲ್ಲ. ಹೀಗಾಗಿ ಒಂದು ಕೆಜಿ ಸಗಣಿಯಲ್ಲಿ 300 ರಿಂದ 500 ಕೋಟಿ ಸೂಕ್ಷ್ಮಾಣು ಜೀವಿಗಳು ಇವೆ. ಈ ಸೂಕ್ಷ್ಮಾಣು ಜೀವಿಗಳೇ ರಂಜಕ,ಪೋಟ್ಯಾಷ್,ಮ್ಯಾಗನೀಸಿಯಂ,ಬೋರನ್ ಹೀಗೆ ಬೆಳೆಗೆ ಬೇಕಾದ ಲಘು ಪೋಷಕಾಂಶಗಳನ್ನು ಪೂರೈಸುತ್ತವೆ. ನಾಡ ಹಸುವಿನ ಕರುಳಿನಲ್ಲಿ ಉತ್ಪತ್ತಿಯಾಗುವ ಜೀವಾಣುಗಳನ್ನು ನಾವು ಭೂಮಿಗೆ ಬಿಡಬೇಕಾಗಿದೆ.
ಹಸಿರು ಕ್ರಾಂತಿ ಬರುವ 60 ದಶಕದ ಮುಂಚೆ ಒಂದು ಗ್ರಾಂ ಮಣ್ಣಿನಲ್ಲಿ ನೂರಾರು ಕೋಟಿ ಸೂಕ್ಮ್ಮಾಣು ಜೀವಿಗಳು ಇದ್ದವು. ಈ ರಾಸಾಯನಿಕ ಕೃಷಿ ಬಂದ ಮೇಲೆ ಅದರ ಸಂಖ್ಯೆ ಕಡಿಮೆಯಾಗಿದೆ. ಭೂಮಿ ಸತ್ವ ಕಳೆದುಕೊಂಡಿದೆ. ಬರಡಾಗಿದೆ. ಈಗ ನಾವು ಮಾಡಬೇಕಿರುವ ಮೊದಲ ಕೆಲಸ ಅಂದರೆ ಮತ್ತೆ ಆ ಸೂಕ್ಷ್ಮಾಣು ಜೀವಿಗಳನ್ನು ಭೂಮಿಗೆ ಬಿಡಬೇಕು. ಬಿಟ್ಟ ನಂತರ ಅವು ನಿರಂತರವಾಗಿ ಚಟುವಟಿಕೆಯಿಂದ ಜೀವಂತವಾಗಿ ಇರುವಂತೆ ನೋಡಿಕಂಡರೆ ನಮ್ಮ ಕೆಲಸ ಅಲ್ಲಿಗೆ ಮುಗಿದೇ ಹೋಯಿತು.
ಮನುಷ್ಯ ಬಿಸಿಲ ತಾಪ ತಾಳಲಾರದೆ ನೆರಳನ್ನು ಹುಡುಕಿಕೊಂಡು ಹೋಗುತ್ತಾನೆ. ಅದೇ ರೀತಿ ಸೂಕ್ಷ್ಮಾಣು ಜೀವಿಗಳಿಗೂ ಹಿತಕರವಾದ ವಾತಾವರಣ ಕಲ್ಪಿಸಬೇಕು. ನಂತರ ಏನು ಬೇಕಾದರು ಬಿತ್ತಬಹುದು ಬೆಳೆಯಬಹುದು. ಬೆಳೆಯಲು ಇಲ್ಲಿ ಮಿತಿ ಇಲ್ಲ.
ಬೀಜಾಮೃತ ಎಂಬ ಭೂ ಸೇನಾಪತಿ : ನಿಸರ್ಗದಲ್ಲಿ ಸಹಜವಾಗಿ ಸಾಧ್ಯವಾಗುವ ಬೀಜೋಪಚಾರ ಅಂದರೆ ಪಕ್ಷಿಗಳ ದೇಹದಲ್ಲಿ ಬೀಜಗಳು ಸಂಸ್ಕರಣೆಯಾಗಿ ಹೊರಬರುವುದು.ನಾವು ಬಿತ್ತುವ ಬೀಜಗಳು ಅಧಿಕ ಪ್ರಮಾಣದಲ್ಲಿ ಮೊಳಕೆಯೊಡೆಯಲು,ಬೇರುಗಳು ಸಮೃದ್ಧವಾಗಿ ಬೆಳೆಯಲು, ಬೀಜಗಳಿಗೆ ಯಾವುದೇ ರೋಗಗಳು ತಗುಲದಿರಲು,ಸಸಿಗಳು ಗುಣಮಟ್ಟದಿಂದ ಬೆಳೆಯಲು ನೆರವಾಗುವುದೆ ನೈಸರ್ಗಿಕ ಕೃಷಿಯಲ್ಲಿ ಪ್ರಮುಖವಾದ "ಬೀಜಾಮೃತ" ಎಂಬ ಮೊದಲ ಚಕ್ರದಿಂದ.
ದೇಶಿ ಹಸುವಿನ ಸಗಣಿ ಅತ್ಯತ್ತಮ ಶಿಲೀಂದ್ರನಾಶಕವೂ,ಗಂಜಲ ಬ್ಯಾಕ್ಟೀರಿಯಾ ನಾಶಕವೂ ಆಗಿದೆ.ಬೀಜಾಮೃತದಲ್ಲಿನ ಸುಣ್ಣರಸಸಾರ (ಪಿ.ಎಚ್.ವ್ಯಾಲ್ಯೂ)ವನ್ನು ನಿರ್ವಹಿಸುತ್ತದೆ. ಇದರಿಂದಾಗಿ ಬೀಜಾಮೃತದಿಂದ ಸಂಸ್ಕರಿಸಿದ ಬೀಜ ಹೊರಗಿನ ಎಲ್ಲಾ ಅಪಾಯಗಳಿಂದ ಬೀಜವನ್ನು ಸಂರಕ್ಷಿಸಿ ಕಾಪಾಡುತ್ತದೆ. 100 ಕೆಜಿ ಬೀಜ ಬಿತ್ತನೆಗೆ 20 ಲೀಟರ್ ನೀರು, 5 ಕೆಜಿ ಸಗಣಿ,5 ಲೀಟರ್ ಗಂಜಲ ಹಾಗೂ 50 ಗ್ರಾಂ ಸುಣ್ಣಸಾಕು.
ಜೀವಾಮೃತ ಎಂಬ ಹೆಪ್ಪು :  ಇದು ಎರಡನೇ ಪ್ರಮುಖ ಚಕ್ರ. ಒಂದು ಎಕರೆಗೆ 200 ಲೀಟರ್ ನೀರು, 10 ಕೆಜಿ ಸಗಣಿ, 10 ಲೀಟರ್ ಗಂಜಲ,2 ಕೆಜಿ ಕಪ್ಪು ಬೆಲ್ಲ,2 ಕೆಜಿ ದ್ವಿದಳ ಧಾನ್ಯದ ಹಿಟ್ಟು ಹಾಗೂ ಎರಡು ಹಿಡಿ ಹೊಲದ ಬದುವಿನ ಮಣ್ಣು. ಇಷ್ಟನ್ನು ಒಂದು ಸಿಮೆಂಟ್ ಅಥವಾ ಪ್ಲಾಸ್ಟಿಕ್ ತೊಟ್ಟಿಯಲ್ಲಿ ಕಲಸಿ ನೆರಳಿನಲ್ಲೆ ಇಟ್ಟರೆ ಹಾಮರ್ೋನ್ಗಳ ಉತ್ಪತ್ತಿ ಶುರುವಾಗುತ್ತದೆ. ಜೀವಾಮೃತದ ತೊಟ್ಟಯನ್ನು ಗೋಣಿಚೀಲದಿಂದ ಮುಚ್ಚಿ ದಿನಕ್ಕೆ ಮೂರು ಬಾರಿ ಪ್ರದಕ್ಷಿಣಕಾರವಾಗಿ ಕೋಲಿನಿಂದ ತಿರುಗಿಸಿ ಚೆನ್ನಾಗಿ ಮಿಶ್ರಣಮಾಡಬೇಕು. ಹೀಗೆ ಸಿದ್ಧಗೊಂಡ ಜೀವಾಮೃತವನ್ನು ಐದರಿಂದ ಏಳುದಿನಗಳ ಒಳಗಾಗಿ ಸಂಜೆ ನಾಲ್ಕು ಗಂಟೆಯ ನಂತರ ಒಂದು ಎಕರೆ ಪ್ರದೇಶಕ್ಕೆ ಚೆಲ್ಲಲು ಸಿದ್ಧವಾಗುತ್ತದೆ.
ಜೀವಾಮೃತ ಭೂಮಿಗೆ ಬಿದ್ದ ನಾಲ್ಕೇ ದಿನಗಳಲ್ಲಿ ಆಳದಲ್ಲಿ ಸಮಾಧಿ ಸ್ಥತಿಯಲ್ಲಿದ್ದ ದೇಶಿ ಎರೆಹುಳು ಹಾಗೂ ಜೀವಜಂತುಗಳು ಜಾಗೃತಗೊಂಡು ಮೇಲೆಬಂದು ಅವಿಶ್ರಾಂತವಾಗಿ ದುಡಿಯಲು ಆರಂಭಿಸುತ್ತವೆ. ಜೀವಾಮೃತ ಸಸ್ಯ ಸಂಕುಲಕ್ಕೆ ಬೇಕಾದ ಆಹಾರವನ್ನು ಖಚರ್ಿಲ್ಲದೆ ಒದಗಿಸುವ ಅಮೃತವಾಗಿದೆ. ಖುಷ್ಕಿ ಬೇಸಾಯದವರು ಘನ ಜೀವಾಮೃತವನ್ನು ಮಾಡಿ ಕೂಡ ಬಳಸಬಹುದು.
ಮುಚ್ಚಿಗೆ ಎಂಬ ಅಮ್ಮನ ಸೆರಗು : ಇದು ನೈಸರ್ಗಿಕ ಕೃಷಿಯಲ್ಲಿ ಬಹಳ ಮುಖ್ಯವಾದ ಕೆಲಸ.ರೈತ ತನ್ನ ಕ್ಷಮತೆಗಾಗಿ ದೇಶಿ ಎರೆಹುಳು ಮತ್ತು ಸೂಕ್ಷ್ಮಾಣುಜೀವಿಗಳ ಸಂರಕ್ಷಣೆಗಾಗಿ ಮುಚ್ಚಿಗೆ ಮಾಡಲೇ ಬೇಕಾಗುತ್ತದೆ.ಭೂಮಿಯ ಮೇಲೆ ಶೇಕಡ 25 ರಿಂದ 32 ಡಿಗ್ರಿ ಉಷ್ಣಾಂಶವಿದ್ದು, ಶೇ. 72 ರಷ್ಟು ತೇವಾಂಶ ಇರುತ್ತದೆ.ಭೂಮಿಯ ಆಂತರ್ಯ ಕತ್ತಲಿನಿಂದ ಇರಬೇಕು. ಇದಕ್ಕೆ ಸೂಕ್ಷ್ಮಪರ್ಯಾವರಣವನ್ನು ಕಲ್ಪಿಸುವುದೆ ಮುಚ್ಚಿಗೆಯ ಮುಖ್ಯ ಉದ್ದೇಶ.ಮುಚ್ಚಿಗೆ ಪರಿಣಾಮಕಾರಿಯಾಗಿದ್ದರೆ ಮಣ್ಣಿನ ಜೀವದ್ರವ್ಯ (ಹ್ಯೂಮಸ್) ಸಮೃದ್ಧಗೊಳ್ಳುತ್ತದೆ.
ಮುಚ್ಚಿಗೆ ಪಕ್ವಗೊಂಡ ಸಸ್ಯ ಅಥವಾ ಗಿಡದ ಅವಶೇಷವಾಗಿರಬೇಕು.ಏಕದಳ ದ್ವಿದಳ ಬೆಳೆಗಳ ಸಮಿಶ್ರ ಮುಚ್ಚಿಗೆಯಾಗಿರಬೇಕು. ಅಂತರ ಬೆಳೆ,ಮಿಶ್ರಬೆಳೆ ಜೀವಂತ ಮುಚ್ಚಿಗೆ ಕೂಡ ಮಾಡಬಹುದು. ಫಲಪ್ರದವಾದ ಮುಚ್ಚಿಗೆ ಇಲ್ಲವಾದರೆ ಸಸ್ಯಗಳು ಕೇಶಾಕರ್ಷಣ ಶಕ್ತಿಯ ಪ್ರಯೋಜನ ಪಡೆಯುವಲ್ಲಿ ವಿಫಲವಾಗುತ್ತವೆ. ಕೇಶಾಕರ್ಷಣ ಶಕ್ತಿಯಿಂದ ಭೂ ಮೇಲ್ಪದರಕ್ಕೆ ಬರುವ ತೇವಾಂಶ ಮುಚ್ಚಿಗೆಯಂತಹ ಸುರಕ್ಷಿತ ತಡೆಗೋಡೆ ಇಲ್ಲದಿರುವುದರಿಂದ ವಾತಾವರಣದಲ್ಲಿ ಲೀನವಾಗಿ ಅದರ ಲಾಭದಿಂದ ಬೆಳೆ ವಂಚಿತವಾಗುತ್ತದೆ.
ಹೊರಗಿನಿಂದ ಗೊಬ್ಬರ ತಂದು ಸುರಿಯುವುದರಿಂದ ಆಹಾರ ಪ್ರಮಾಣವನ್ನು ಹೆಚ್ಚಿಸಲು ಸಾಧ್ಯವಿಲ್ಲ.ವಾತಾವರಣ, ಸೂರ್ಯರಶ್ಮಿ,ನೀರು ಮತ್ತು ಭೂಮಿಯಿಂದ ತನ್ನ ಅಗತ್ಯಗಳನ್ನು ಪೂರೈಸಿಕೊಂಡು ಸಸ್ಯ ಪಡೆದುಕೊಳ್ಳುತ್ತದೆ. ತನ್ನ ಅಗತ್ಯಗಳ ಪೈಕಿ ಶೇ.98.5 ರಷ್ಟನ್ನು ವಾತಾವರಣದಿಂದ ಮತ್ತು ಕೇವಲ ಶೇ.1.5 ರಷ್ಟನ್ನು ಭೂಮಿಯಿಂದ ಪೂರೈಸಿಕೊಳ್ಳುವ ಬೆಳೆಯ ಬೆಳವಣಿಗೆಗೆ ಹೆಚ್ಚುವರಿ ಇಳುವರಿ ಪಡೆಯಲು ನಾವು ಹರಸಹಾಸ ಪಡಬೇಕಾಗಿಲ್ಲ.
ವಾಪಸಾ :ಇದು ಕೊನೆಯ ಚಕ್ರ. ಭೂಮಿಯಲ್ಲಿ ಶೇ.50 ರಷ್ಟು ನೀರು ಶೇ 50 ರಷ್ಟು ಗಾಳಿ ಇರುವಂತೆ ನೋಡಿಕೊಳ್ಳಬೇಕು. ನೀರಿನ ಹಿತಮಿತ ಬಳಕೆಯಿಂದ ಭೂಮಿಯಲ್ಲಿ ವಾಪಸಾ ನಿರ್ಮಾಣವಾಗುತ್ತದೆ.
ಮಜ್ಜಿಗೆ ಅತ್ಯಂತ ಗುಣಮಟ್ಟದ ಶಿಲೀಂದ್ರನಾಶಕ. ಮಜ್ಜೆಗೆ ಹಳತಾದಷ್ಟು ಒಳ್ಳೆಯದು. 1: 10 ಪ್ರಮಾಣದಲ್ಲಿ ಪ್ರತಿ ತಿಂಗಳು ಸಸ್ಯಗಳಿಗೆ ಸಿಂಪರಣೆ ಮಾಡುವುದರಿಂದ ಗಿಡಗಳಿಗೆ ಬರುವ ರೋಗಗಳನ್ನು ತಡೆಗಟ್ಟಬಹುದು.
ನಮ್ಮ ದೇಶದ ಕೃಷಿಯ ಎರಡು ದೊಡ್ಡ ಶತ್ರುಗಳೆಂದರೆ ಒಂದು ಏಕ ಬೆಳೆ ಪದ್ಧತಿ ಮತ್ತು ಸ್ವಚ್ಚ ಬೇಸಾಯ. ಕಳೆಕಿತ್ತು ಹೊರಗೆ ಎಸೆಯುವ ಮೂಲಕ ಭೂಮಿಯ ಫಲವತ್ತತೆಯನ್ನು ನಾಶಮಾಡುತ್ತಿದ್ದೇವೆ.ಬೆಳೆ ಬೆಳೆದ ನಂತರ ಅದರ ಬೀಜಗಳನ್ನು ತೆಗೆದುಕೊಂಡು ಉಳಿದ ಕಾಷ್ಠ ಪದಾರ್ಥಗಳನ್ನು ಭೂಮಿಯಲ್ಲೇ ಬಿಡುವುದರಿಂದ ಫಲವತ್ತತೆ ಹೆಚ್ಚಾಗುತ್ತದೆ.
ನೈಸಗರ್ಿಕ ಕೃಷಿಯನ್ನು ಕರಾರುವಕ್ಕಾಗಿ ಮಾಡಿಬಿಟ್ಟರೆ ರೈತ ಸಮೃದ್ಧಿಯಾಗಿ ಜೀವನ ನಡೆಸಬಹುದು. ನೈಸಗರ್ಿಕ ಕೃಷಿಯ ಸರಿಯಾದ ವಿಧಾನಗಳನ್ನು ಅನುಸರಿಸದೆ ಇರುವುದರಿಂದ ರೈತ ಸೋತಿದ್ದಾನೆ. ಅದನ್ನು ಅರಿತು ಸರಿಯಾದ ರೀತಿಯಲ್ಲಿ ಮಾಡಿದರೆ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿಯಲ್ಲಿ ಸೋಲು ಎನ್ನುವುದೆ ಇರುವುದಿಲ್ಲ. ಆತ್ಮಹತ್ಯೆ, ಸಾಲ ಇಲ್ಲದ ನೆಮ್ಮದಿಯ ಕೃಷಿ ಇದು. ಇದನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸಬೇಕು ಎನ್ನುವುದು ಶಂರಕಣ್ಣ ದೊಡ್ಡಣನವರ ಆಶಯ. ಹೆಚ್ಚಿನ ಮಾಹಿತಿಗೆ 9448916370 ಸಂಪಕರ್ಿಸಬಹುದು.
-----------------------------------------------------------



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ