vaddagere.bloogspot.com

ಭಾನುವಾರ, ಆಗಸ್ಟ್ 28, 2016

 ಗುಂಡ್ಲುಪೇಟೆ : ದ್ರಾಕ್ಷಿ,ದಾಳಿಂಬೆ ಬೆಳೆದು 
ಸೈ ಎನಿಸಿಕೊಂಡ ಸಾವಯವ ಕೃಷಿಕ

ದೇಶ ವಿದೇಶ ಸುತ್ತಿಬಂದರೂ ನಮ್ಮೂರೆ ನಮಗೆ ಮೇಲು ಎಂದ ಶೇಷಕುಮಾರ್

ಗುಂಡ್ಲುಪೇಟೆ : ಜರ್ಮನಿ, ಇಸ್ರೇಲ್ ಸೇರಿದಂತೆ ಅನೇಕ ದೇಶ ವಿದೇಶಗಳನ್ನು ಸುತ್ತಿಬಂದೆ.ನಮ್ಮ ದೇಶದ ಬಹುತೇಕ ರಾಜ್ಯಗಳನ್ನು ಕಂಡು ಬಂದೆ ಆದರೆ ಕೋಟೆಕೆರೆಯ ಕರ್ಮಭೂಮಿಯಲ್ಲಿ ಸಿಗುತ್ತಿರುವ ನೆಮ್ಮದಿಯನ್ನು ನಾನು ಬೇರೆಲ್ಲೂ ಕಾಣಲಿಲ್ಲ.ಹೀಗೆಂದವರು ಸಾವಯವ ಕೃಷಿಕ ಶೇಷಕುಮಾರ್.
ಗುಂಡ್ಲುಪೇಟೆ ತಾಲೂಕು ಬೇಗೂರಿನಲ್ಲಿರುವ ಜೂನಿಯರ್ ಕಾಲೇಜಿನ ಎದುರು ಸರಗೂರು ಕಡೆಗೆ ಹೋಗುವ ರಸ್ತೆಯಲ್ಲಿ ಸರಿಯಾಗಿ ನಾಲ್ಕು ಕಿ.ಮೀ.ದೂರ ಹೋದರೆ ಬಲಗಡೆ ಕಾಣುವ ದಾಳಿಂಬೆವನದ ಮಧ್ಯ ಇರುವ ಗಾಳಿಯಂತ್ರವೊಂದು (ವಿಂಡ್ ಮಿಲ್) ನೋಡುಗರ ಗಮನಸೆಳೆಯುತ್ತದೆ. ಅದೇ ಕೋಟೆಕೆರೆ ಫಾರಂ. ತೋಟದ ಒಳಗೆ ಹೋಗುತ್ತಿದಂತೆ ಬೆಂಗಳೂರು ಬ್ಲೂ ದ್ರಾಕ್ಷಿ, ಹತ್ತಾರು ತಳಿಯ ಹಣ್ಣಿನ ಗಿಡಗಳು,ನುಗ್ಗೆ,ಗುಲಾಬಿ,ದಾಸವಾಳ,ಅರಿಶಿನ, ಹತ್ತಿ,ಈರುಳ್ಳಿ,ತರಕಾರಿ,ಸೊಪ್ಪು ಹೀಗೆ ವಿವಿದ ಬೆಳೆಗಳು ಎದುರಾಗುತ್ತವೆ. ಸಮಗ್ರ ಸುಸ್ಥಿರ ಬೆಳೆ ಪದ್ಧತಿ ಅಳವಡಿಸಿಕೊಂಡು ಮೂರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತ ಸಾವಯವ ಸಸ್ಯಕಾಶಿ ಅಚ್ಚರಿ ಮೂಡಿಸುತ್ತದೆ.
ಮೂರು ಎಕರೆ ಜಮೀನಿಗೆ ಇರುವುದು ಒಂದೆ ಬೋರು. ಅದರಲ್ಲಿ ಬರುವುದು ಕೇವಲ ಒಂದು ಇಂಚು ನೀರು. ಆ ಕಡಿಮೆ ನೀರನ್ನೆ ಬಳಸಿಕೊಂಡು ಶೇಷಕುಮಾರ್ ಮಾಡಿರುವ ಸಾಧನೆ ಬರದನಾಡಿನ ಯುವಕರಿಗೆ ಮಾದರಿಯಾಗಿದೆ.ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಲು ಹೊರಟಿರುವ ಇವರು ವಿದ್ಯುತ್ ಉತ್ಪಾದಿಸಲು ಜಮೀನಿನಲ್ಲಿ ಸುಮಾರು 7.5 ಕಿ.ಲೋ ವ್ಯಾಟ್ ಜನರೇಟರ್ಗೆ ಬಳಕೆಗೆ ಬರುವ ವಿದ್ಯುತ್ ಉತ್ಪಾದಿಸುವ ಗಾಳಿಯಂತ್ರ (ವಿಂಡ್ಮಿಲ್) ಮತ್ತು ಸೋಲಾರ್ ಎರಡನ್ನು ಸೇರಿಸಿ(ಹೈಬ್ರಿಡ್) ವಿದ್ಯುತ್ ವ್ಯವಸ್ಥೆ ಮಾಡಿಕೊಂಡಿದ್ದಾರೆ.ಇವರ ಮನೆಯಲ್ಲಿ ವರ್ಷದ ಮುನ್ನೂರ ಅರವತ್ತೈದು ದಿನಗಳು ದೀಪ ಬೆಳಗುತ್ತದೆ. ಅಷ್ಟರ ಮಟ್ಟಿಗೆ ಅವರು ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದಾರೆ.
ತಮ್ಮ ತೋಟದ ನಿರ್ವಹಣೆಗೆ ಅತ್ಯಂತ ಸರಳ ಸುಲಭ ಉಪಾಯಗಳನ್ನು ಕಂಡುಕೊಂಡಿರುವ ಇವರು ಗಿಡಗಳಿಗೆ ಜೀವಾಮೃತ ಕೊಡುತ್ತಾರೆ.ಅಲ್ಲದೆ ಕಾಂಪೋಸ್ಟ್ ಗೊಬ್ಬರ ಮತ್ತು ಗಿಡಗಳನ್ನು ಬಾಧಿಸುವ ರೋಗಗಳಿಗೆ ತಾವೇ ಕಂಡುಕೊಂಡ ದ್ರವರೂಪದ ರಸಸಾರಗಳನ್ನು ಸಿಂಪಡಿಸುತ್ತಾರೆ. ಹೊರಗಿನಿಂದ ಯಾವುದು ರಾಸಾಯನಿಕ ಗೊಬ್ಬರ ,ಕ್ರಿಮಿನಾಶಕ ತರುವುದು ಇಲ್ಲಿ ಸಂಪೂರ್ಣ ನಿಷಿದ್ಧ. ಇವರ ತೋಟದ ಹಣ್ಣುಗಳ ರುಚಿ ಮತ್ತು ತರಕಾರಿ,ಸೊಪ್ಪುಗಳ ರುಚಿಗೆ ಮಾರು ಹೋಗಿರುವ ಗ್ರಾಹಕರು ತೋಟದ ಬಳಿಯೆ ಬಂದು ಖರೀದಿಸುತ್ತಾರೆ. ಹೆಚ್ಚಾಗಿ ಕೇರಳದ ಗ್ರಾಹಕರು ಇವರ ಉತ್ಪನ್ನಗಳಿಗೆ ನೇರ ಖರೀದಿದಾರರಾಗಿದ್ದಾರೆ.
ತಾವು ಬೆಳೆದ ತರಕಾರಿ, ಸೊಪ್ಪು,ಹಣ್ಣುಗಳನ್ನು ಮೈಸೂರಿನ ನೇಸರ,ನಿಸರ್ಗ ಸೇರಿದಂತೆ ಬಹುತೇಕ ಎಲ್ಲಾ ಸಾವಯವ ಉತ್ಪನ್ನ ಮಳಿಗೆಗಳಿಗೂ ತಂದುಕೊಡುವ ಶೇಷಕುಮಾರ್ ತಮ್ಮ ಉತ್ಪನ್ನಗಳಿಗೆ ಎಲ್ಲಾ ಕಡೆ ಬಹು ಬೇಡಿಕೆ ಇರುವುದಾಗಿ ಹೆಮ್ಮೆಯಿಂದ ಹೇಳುತ್ತಾರೆ.
ಎರಡು ನಾಟಿ ಹಸುಗಳಿದ್ದರೆ ಹತ್ತು ಎಕರೆ ಪ್ರದೇಶದಲ್ಲಿ ಸಾವಯವ ಕೃಷಿ ಮಾಡಿ ಲಾಭಗಳಿಸಬಹುದು ಎನ್ನುವ ಇವರು ನಮ್ಮ ಜನರಲ್ಲಿರುವ ಸೋಮಾರಿತನ ಮತ್ತು ಹೊಸದನ್ನು ಕಲಿಯಬೇಕೆಂಬ ಹಂಬಲ ಇಲ್ಲದಿರುವುದು, ಪ್ರಯೋಗಶೀಲ ಗುಣ ಇಲ್ಲದಿರುವುದೆ ದೇಶದ ದಾರಿದ್ರ್ಯ ಮತ್ತು ಬಡತನಕ್ಕೆ ಕಾರಣವಾಗಿದೆ ಎನ್ನುತ್ತಾರೆ.
2012 ರಿಂದ ಈಚೆಗೆ ಅಂದರೆ ನಾಲ್ಕೇ ವರ್ಷದಲ್ಲಿ ಕಡಿಮೆ ನೀರನ್ನು ಬಳಸಿಕೊಂಡು ಕಟ್ಟಿದ ತೋಟದಲ್ಲಿ 500 ದಾಳಿಂಬೆ,ಅನುಪಮ ತಳಿಯ 200 ನುಗ್ಗೆ, ಹನುಮಫಲ, ವೈಟ್ ಆಫೆಲ್,ಮೂಸಂಬಿ,ನಿಂಬೆ,ಸೀಬೆ,ದ್ರಾಕ್ಷಿ ಸೇರಿದಂತೆ ಅನೇಕ ಏಕದಳ,ದ್ವಿದಳ ಬೆಳೆಗಳು,ತರಕಾರಿ, ಸೊಪ್ಪು ಸಮೃದ್ಧವಾಗಿ ಬೆಳೆದು ನೋಡುವ ಕಂಗಳಿಗೆ ಆನಂದವನ್ನುಂಟುಮಾಡುತ್ತಿದೆ.
ಹಿತ್ತಲಗಿಡ ಮದ್ದಲ್ಲ :
ತೋಟಗಾರಿಕೆಯಲ್ಲಿ ಮಾನವ ಹಸ್ತಕ್ಷೇಪ ಕಡಿಮೆ ಇದೆ. ಹಣ್ಣಿನ ಗಿಡಗಳನ್ನು ನಾವು ನಾಲ್ಕು ವರ್ಷ ಮಕ್ಕಳು ಸಾಕಿದಂತೆ ನೋಡಿಕೊಂಡರೆ ಮುಂದಿನ ಮೂವತ್ತೈದು ನಲವತ್ತು ವರ್ಷ ಅವು ನಮ್ಮನ್ನು ಸಾಕುತ್ತವೆ. ಗುಂಡ್ಲುಪೇಟೆ ತಾಲೂಕಿನಲ್ಲಿ ಮಳೆ ಕಡಿಮೆ. ಅಂತರ್ಜಲ ಬತ್ತಿ ಹೋಗಿದೆ.ಈಗಿದ್ದರೂ ರಸ್ತೆ ಬದಿಯಲ್ಲೆ ಜನರ ಕಣ್ಣಿಗೆ ಬೀಳುವಂತೆ ನಾನು ಇಂತಹದೊಂದು ತೋಟ ಮಾಡಿದ್ದರು, ಸ್ಥಳೀಯ ಜನನಾಯಕರಾಗಲಿ, ಮುಖಂಡರಾಗಲಿ, ರೈತರಾಗಲಿ ಕುತೂಹಲಕ್ಕಾದರೂ ಬಂದು ಇಲ್ಲಿ ನೋಡುವುದಿಲ್ಲ. ಅದೆ ನನ್ನಲ್ಲಿ ಕೆಲವು ಸಲ ಬೇಸರ ಮೂಡಿಸುತ್ತದೆ. ಉತ್ತರ ಕನರ್ಾಟಕದಿಂದ ಜನ ಬಂದು ಇಲ್ಲಿ ಇಂತಹ ಪ್ರಯೋಗವನ್ನು ನೋಡಿ ಮೆಚ್ಚಿ ಕಲಿತು ಹೋಗುತ್ತಾರೆ.
ಹತ್ತು ಹದಿನೈದು ಎಕರೆ ಜಮೀನು ಇರುವ ವಿದ್ಯಾವಂತ ಯುವಕರು ನಗರದ ಆಕರ್ಷಣೆಗೆ ಮಾರುಹೋಗಿ ಪಟಣ್ಣಸೇರಿ ಕೃಷಿಯನ್ನು ನಿರ್ಲಕ್ಷ್ಯಿಸುತ್ತಿದ್ದಾರೆ.ಮುಂದಿನ ಹತ್ತು ವರ್ಷಗಳಲ್ಲಿ ಇದರ ಭೀಕರ ಪರಿಣಾಮಗಳನ್ನು ಎದುರಿಸುಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡುವುದನ್ನು ಅವರು ಮರೆಯುವುದಿಲ್ಲ.
ಸರಕಾರಗಳು ಈಗ ಸೌರ ವಿದ್ಯುತ್ ಮತ್ತು ಪವನ ಶಕ್ತಿಯ ಬಗ್ಗೆ ಮಾತನಾಡುತ್ತಿವೆ, ನಾನು ನನ್ನ ತೋಟದಲ್ಲಿ ನಾಲ್ಕು ವರ್ಷದ ಹಿಂದೆ ಇಂತಹ ಪ್ರಯೋಗಮಾಡಿ ಯಶಸ್ವಿಯಾಗಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಹಿತ್ತಲ ಗಿಡ ಮದ್ದಲ್ಲ ಎಂಬಂತೆ ನಾವು ಸ್ಥಳೀಯವಾಗಿ ರೂಪಿಸಿದ ತಂತ್ರಜ್ಞಾನಗಳ ಬಗ್ಗೆ ಜನರು ಅರಿವು ಮೂಡಿಸಿಕೊಳ್ಳುವುದಿಲ್ಲ.ಕೃಷಿಯ ಬಗ್ಗೆ ಕಲಿಯಲು ದೇಶ ವಿದೇಶಗಳಿಗೆ ಹೋಗುತ್ತಾರೆ.ಇದರಿಂದ ಯಾವುದೇ ಪ್ರಯೋಜನ ಹೇಳಿ ಎಂದು ಅವರು ಪ್ರಶ್ನಿಸುತ್ತಾರೆ.ನಮ್ಮವರೆ ಬಂದು ನೋಡಿ ಕಲಿತು ನೆಮ್ಮದಿಯ ಜೀವನ ರೂಢಿಸಿಕೊಳ್ಳದಿರುವುದು ನನಗೆ ಕೆಲವು ಸಲ ಬೇಸರ ಮೂಡಿಸುತ್ತದೆ ಎನ್ನುತ್ತಾರೆ ಶೇಷಕುಮಾರ್.
ಅಂದಿನ ದಿನಕ್ಕೆ ನಾನು ಆರುವರೆ ಲಕ್ಷ ರೂಪಾಯಿ ವೆಚ್ಚಮಾಡಿ ಗಾಳಿಯಂತ್ರ ಮತ್ತು ಸೋಲಾರ್ ವಿದ್ಯುತ್ ವ್ಯವಸ್ಥೆ ಮಾಡಿಕೊಂಡು ವಿದ್ಯುತ್ ಉತ್ಪಾದನೆಯಲ್ಲೂ ಸ್ವಾವಲಂಬನೆ ಸಾಧಿಸಿದ್ದೇನೆ.ನಮ್ಮ ರೈತರು ಬಂದರೆ ಎಲ್ಲಾ ರೀತಿಯ ತಿಳುವಳಿಕೆ ಮತ್ತು ಅರಿವು ಮೂಡಿಸಲು ನಾನು ಸದಾ ಸಿದ್ಧ ಎಂದು ಅವರು ಹೇಳುತ್ತಾರೆ.
ಕೀಟಗಳ ಹಾವಳಿ ತಡೆಯಲು ಸೋಲಾರ್ ವ್ಯವಸ್ಥೆಇರುವ ಆಟೋ ಮ್ಯಾಟಿಕ್ ದೀಪಗಳನ್ನು ತೋಟದ ಅಲ್ಲಲ್ಲಿ ಅಳವಡಿಸಿದ್ದಾರೆ.ರಾತ್ರಿ ಆಗುತ್ತಿದಂತೆ ಆ ದೀಪಗಳು ಬೆಳಗುತ್ತವೆ. ದೀಪದ ಕೆಳಗೆ ಇರುವ ನೀರಿನ ತಟ್ಟೆಗಳಿಗೆ ಬಿದ್ದು ಕೀಟಗಳು ಸಾವನ್ನಪ್ಪುತ್ತವೆ.
ಅಮೇರಿಕಾದಿಂದ ತರಿಸಿ ಹಾಕಿರುವ ಎಂಟು ಹಣ್ಣಿನ ಗಿಡಗಳು ವರ್ಷದ ಎಲ್ಲಾ ಕಾಲದಲ್ಲೂ ಹಣ್ಣು ಬಿಡುತ್ತವೆ.ಇವು ಉಪ್ಪಿನ ಕಾಯಿ ಮತ್ತು ಜ್ಯೂಸ್ಗೆ ಬಳಕೆಯಾಗುತ್ತವೆ.
ಸರಳ ಮತ್ತು ಸುಲಭ ವಿಧಾನ:
ನಮ್ಮ ಬೇಸಾಯ ಸರಳ ಮತ್ತು ಸುಲಭ. ಈ ಮೂರು ಎಕರೆ ಸ್ವಂತ ಜಮೀನು ಸೇರಿ ಹತ್ತಿರದಲ್ಲೇ ಐದು ಎಕರೆ ಜಮೀನನ್ನು ವಾಷರ್ಿಕ ಗುತ್ತಿಗೆಗೆ ಮಾಡಿಕೊಂಡಿದ್ದೇನೆ. ಅಲ್ಲೂ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಲಾಗುತ್ತಿದೆ. ನಾಲ್ಕು ಸಾವಿರ ಏಲಕ್ಕಿ ಬಾಳೆ,ಸಾವಿರ ಪಚ್ಚಬಾಳೆ ಹಾಕಿದ್ದೇನೆ. ಈಗ ಅದು ಎರಡನೇ ಕೂಳೆ ಬೆಳೆ. ಕನಿಷ್ಠ ಐದಾರು ವರ್ಷ ಕೂಳೆಯಲ್ಲೇ ಫಸಲು ತೆಗೆಯುವ ಗುರಿ ನಮ್ಮದು.ಪ್ರತಿ ಹತ್ತು ಗುಂಟೆಯಲ್ಲಿ ಸೊಪ್ಪು, ತರಕಾರಿಯನ್ನು ಬೆಳೆದುಕೊಂಡು, ಅದರ ಆದಾಯದಲ್ಲಿ ಆಳುಕಾಳುಗಳಿಗೆ ಕೂಲಿ ನೀಡಲು ಸಾಕಾಗುತ್ತದೆ.ಇದರಿಂದ ನಮ್ಮ ಆರೋಗ್ಯವು ಸುಧಾರಿಸಿ ಜಮೀನಿನಲ್ಲಿ ಕೆಲಸ ಮಾಡುವವರು ಆರೋಗ್ಯದಿಂದ ಜೀವನಮಾಡುವಂತಾಗಿದೆ.
ಈಗೆ ಒಟ್ಟು ಎಂಟು ಎಕರೆ ತೋಟದ ನಿರ್ವಹಣೆಗೆ ಇರುವುದು ಎರಡು ನಾಟಿ ಹಸುಗಳು ಮಾತ್ರ. ಇವುಗಳ ಗೋಮೂತ್ರ ಮತ್ತು ಸಗಣಿಯಿಂದ ತೋಟದ ನಿರ್ವಹಣೆ ಮಾಡಲಾಗುತ್ತದೆ. ಇನ್ನೂರು ಲೀಟರ್ ನೀರು ಹಿಡಿಸುವ  ತಲಾ ಎರಡು ಪ್ಲಾಸ್ಟಿಕ್ ಡ್ರಮ್ ಇದೆ. ಅದರಲ್ಲಿ ಪ್ರತಿ ವಾರ ನಾನೂರು ಲೀಟರ್ ಜೀವಾಮೃತ ಮಾಡಿಕೊಳ್ಳುತ್ತೇವೆ. ವಾರಕ್ಕೆ ಒಂದು ಬಾರಿಯಂತೆ ತಿಂಗಳಿಗೆ ನಾಲ್ಕು ಬಾರಿ ಹನಿ ನೀರಾವರಿ ಮೂಲಕ ಜೀವಾಮೃತವನ್ನು ಗಿಡಗಳಿಗೆ ಕೊಡುತ್ತೇವೆ.
ಜೀವಾಮೃತ ಮಾಡುವ ವಿಧಾನ:
ಐದು ಲೀಟರ್ ಗಂಜಲ.ಎರಡು ಕೆಜಿ ಸಗಣಿ.ಎರಡು ಕೆಜಿ ಕಳಿತ ಬಾಳೆ ಅಥವಾ ಪಪ್ಪಾಯಿ ಹಣ್ಣು.ಎರಡು ಕೆಜಿ ಬೆಲ್ಲ ಜೊತೆಗೆ ಒಂದಿಡಿ ಜೀವಂತ ಮಣ್ಣು. ಇವಿಷ್ಟನ್ನು ಮಿಶ್ರಣ ಮಾಡಿ ಒಂದು ಡ್ರಮ್ನಲ್ಲಿ ಎರಡು ದಿನ ಇಡುತ್ತೇವೆ. ನಂತರ ಅದನ್ನು ಇನ್ನೂರು ಲೀಟರ್ ನೀರು ಇರುವ ಡ್ರಮ್ಗೆ ಸುರಿದು ಮಿಶ್ರಣ ಮಾಡುತ್ತೇವೆ. ಗಿಡಗಳಿಗೆ ಸಿಂಪಡಿಸುವ ದಿವ್ಯ ಔಷದ ಜೀವಾಮೃತ ಮೂರೇ ದಿನಕ್ಕೆ ಸಿದ್ಧ.
ಗಿಡಗಳಿಗೆ ರೋಗ ಬಂದರೆ 50 ಎಂಎಲ್ ಬೇವಿನ ಎಣ್ಣೆಯನ್ನು 10 ಲೀಟರ್ ನೀರಿಗೆ ಸೇರಿಸಿ,ಖಾದಿ ಭಂಡಾರ್ನಲ್ಲಿ ಸಿಗುವ ಮೀನಿನ ಸೋಪು ಪುಡಿ ಮಿಶ್ರಣಮಾಡಿ ಸಿಂಪರಣೆ ಮಾಡುತ್ತೇವೆ. ನಮ್ಮ ಬೆಳೆಗಳಿಗೆ ಯಾವುದೆ ರೋಗಗಳು ಇಲ್ಲಿಯವರೆಗೆ ಭಾದಿಸಿಲ್ಲ ಎನ್ನುತ್ತಾರೆ.
ರಸಸಾರ ಎಂಬ ಮ್ಯಾಜಿಕ್ : ಇದಲ್ಲದೆ ಫಿಶ್ ಅಮ್ಯೂನೊ ಆಸಿಡ್ ಎಂದ ರಸಸಾರವನ್ನು ತಯಾರು ಮಾಡಿಕೊಳ್ಳುತ್ತೇವೆ. ಇದಕ್ಕೆ ಮಾರುಕಟ್ಟೆಯಲ್ಲಿ ಲೀಟರ್ಗೆ ಆರು ಸಾವಿರ ರೂಪಾಯಿ ಇದ್ದು ನಾವು ಅದನ್ನು ನಮ್ಮಲ್ಲಿ ಕೇವಲ ಇನ್ನೂರ ಐವತ್ತು ರೂಪಾಯಿ ವೆಚ್ಚಮಾಡಿ ತಯಾರಿಸಿಕೊಳ್ಳಯತೇವೆ. ಒಂದು ಬಾರಿ ಇದನ್ನು ಸಿದ್ಧ ಮಾಡಿಕೊಂಡರೆ ಆರು ತಿಂಗಳವರೆಗೆ ಇಟ್ಟುಕೊಂಡು ಗಿಡಗಳಿಗೆ ಸಿಂಪಡಿಸಬಹುದು. ಇದೊಂದು ತುಂಬಾ ಪ್ರಯೋಜನಕಾರಿ ರಸಸಾರ. ಇದರಿಂದ ಹಣ್ಣಿನ ಗಿಡಗಳು, ತರಕಾರಿ.ಸೊಪ್ಪು ಸಮೃದ್ಧಿಯಾಗಿ ಬೆಳೆವಣಿಗೆ ಕಾಣುವುದಲ್ಲದೆ. ಒಳ್ಳೆಯ ರುಚಿಯು ಬರುತ್ತದೆ ಎನ್ನುತ್ತಾರೆ.
ಮಾರುಕಟ್ಟೆಯಲ್ಲಿ ಎರಡು ಕೆಜಿ ಮೀನು ಖರೀದಿಸಿ, ಅದನ್ನು ಸಣ್ಣ ಸಣ್ಣ ತುಂಡುಗಳಾಗಿ ಕಟ್ ಮಾಡಿಸಿಕೊಳ್ಳಬೇಕು. ಎರಡು ಕೆಜಿ ಕಪ್ಪು ಬೆಲ ಮತ್ತು ಎರಡು ಲೀಟರ್ ಗೋಮೂತ್ರದ ಜೊತೆ ಒಂದು ಮಡಕೆಯಲ್ಲಿ ಹಾಕಿ ಮಣ್ಣಿನಲ್ಲಿ ಹೂಳಬೇಕು. ಒಂದು ತಿಂಗಳಿಗೆ ಜೇನು ತುಪ್ಪದಂತ ಫಿಶ್ ಅಮ್ಯೂನೊ ಆಸಿಡ್ ರಸಸಾರ ಸಿದ್ಧ. ಇದನ್ನು ಆರು ತಿಂಗಳು ಇಟ್ಟುಕೊಂಡು ಬಳಸಬಹುದು. 20 ಎಂಎಲ್ ಮೀನಿನ ರಸಸಾರಕ್ಕೆ 10 ಲೀಟರ್ ನೀರು ಮಿಶ್ರಣಮಾಡಿ ಬಳಸಿದರೆ ಗಿಡಗಳ ಬೆಳವಣಿಗೆ ಸಮೃದ್ಧಿಯಾಗಿ ಬರುತ್ತದೆ. ತರಕಾರಿ ಮತ್ತು ಸೊಪ್ಪಿನ ಗಿಡಗಳಿಗಂತೂ ಈ ರಸಸಾರ ಪರಿಣಾಮಕಾರಿಯಾಗಿ ಕೆಲಸಮಾಡುತ್ತದೆ.
ಇವರ ತೋಟದಲ್ಲಿ ಬೆಳೆದಿರುವ ಸ್ಥಳೀಯ ನಾಟಿ ತಳಿಯ ಬೆಂಡೆಕಾಯಿ ಮತ್ತು ಗೋರಿಕಾಯಿ ಗಿಡಗಳು ಎಂಟು ಅಡಿಗೂ ಮಿಗಿಲಾಗಿ ಎತ್ತರಕ್ಕೆ ಬೆಳೆದಿದ್ದು ಸ್ವಾದಿಷ್ಟ ಮತ್ತು ರುಚಿಕರವಾಗಿವೆ. ಇವರು ದಾಳಿಂಬೆ ಮತ್ತು ದ್ರಾಕ್ಷಿ ಗಿಡಗಳನ್ನು ನರ್ಸರಿಯಲ್ಲಿ ಬೆಳೆದು ಮಾರಾಟ ಮಾಡುತ್ತಾರೆ.ಆಸಕ್ತರು ಶೇಷಕುಮಾರ್ 9952962114 ಸಂಪಕರ್ಿಸಬಹುದು.
"ಸಬ್ಸಿಡಿ ಸಹಾಯಧನ ಬಿಡಿ,ಶ್ರಮದಿಂದ ದುಡಿ"
ಗುಂಡ್ಲುಪೇಟೆ: ಮೂಲತಃ ಮಂಡ್ಯಜಿಲ್ಲೆ ಪಾಂಡವಪುರ ತಾಲೂಕಿನ ಕೆರೆತೊಣ್ಣುರು ಗ್ರಾಮದ ಶೇಷಕುಮಾರ್ ಸ್ವಗ್ರಾಮದಲ್ಲಿ ಪ್ರೌಢ ಶಿಕ್ಷಣ ಮುಗಿಸಿ ಮಂಡ್ಯದಲ್ಲಿ ಪಿಯುಸಿ ಓದಿ,ಮೈಸೂರಿನಲ್ಲಿ ಪದವಿ ಪಡೆದು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸಮಾಡಿದ್ದಾರೆ.ಕೆಲಸದ ನಿಮಿತ್ತ ರಾಜ್ಯ, ದೇಶವಿದೇಶಗಳನ್ನು ಸುತ್ತಿದ್ದಾರೆ. ಅವರೊಂದಿಗೆ ಮಾತನಾಡುತ್ತಿದ್ದರೆ ಕೃಷಿ ವಿಜ್ಷಾನಿಯೊಬ್ಬರ ಜತೆ ಮಾತನಾಡುತ್ತಿರುವಂತೆ ಅನುಭವವಾಗುತ್ತದೆ.
ತಂತ್ರಜ್ಞಾನ ಮತ್ತು ದೇಸಿ ಮೂಲದ ಜ್ಞಾನವನ್ನು ಬಳಸಿಕೊಂಡು ಸಾವಯವ ಕೃಷಿಯಲ್ಲಿ ಇವರು ಮಾಡಿರುವ ಸಾಧನೆ ಆಸಕ್ತರ ಗಮನಸೆಳೆದಿದೆ.ರಾಜ್ಯದ ನಾನಾ ಭಾಗಗಳಿಂದ ಇವರ ತೋಟಕ್ಕೆ ಬಂದ ಕೃಷಿಕರು ಶೇಷಕುಮಾರ್ ಅವರಿಂದ ಪಾಠ ಕೇಳಿ ಸಾವಯವ ಕೃಷಿಯ ಮಹತ್ವದ ಬಗ್ಗೆ ಕಲಿತು ಹೋಗುತ್ತಿದ್ದಾರೆ.
ಕೆಲಸದ ಒತ್ತಡ.ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಗರ್ಾವಣೆಯ ಕಾರಣದಿಂದ ವ್ಯಯಕ್ತಿಕ ಸಮಸ್ಯೆಗಳು ಬಿಗಡಾಯಿಸತೊಡಗಿದವು.ವಗರ್ಾವಣೆಯ ಕಿರಿಕಿರಿಯಿಂದಾಗಿ ನಮ್ಮ ಮಗಳ ವಿದ್ಯಾಭ್ಯಾಸಕ್ಕೆ ಅನಾನುಕೂಲಗಳಾದವು. ಇದೆಲ್ಲದರಿಂದ ಮುಕ್ತಿಪಡೆಯಲು ನಿರ್ಧರಿಸಿ 1995 ರಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ ಕೃಷಿಕರಾದರು.
ಗೊಮ್ಮಟಗಿರಿಯಲ್ಲಿ ಸ್ವಲ್ಪ ಜಮೀನಿದ್ದು ಅಲ್ಲಿ ಮಾವು ಮತ್ತು ತೆಂಗು ಬೆಳೆಯಲಾಗಿದೆ. ಸುತ್ತಮುತ್ತ ಬಡಾವಣೆಗಳಾದ ನಂತರ ಸಾವಿರದ ಇನ್ನೂರು ಅಡಿ ಬೊರು ಕೊರೆಸಿದರು ಅಲ್ಲಿ ನೀರು ಬರಲಿಲ್ಲ.ಅದಕ್ಕಾಗಿ ಕೋಟೆಕೆರೆಗೆ ಬಂದು ಜಮೀನು ಖರೀದಿಸಿ ಕೃಷಿಯಲ್ಲಿ ಖುಷಿಯಾಗಿರುವುದಾಗಿ ಹೇಳುತ್ತಾರೆ.
ಪತ್ನಿ ಸುಧಾ, ಮಗಳು ರಮ್ಯ, ಅಳಿಯ ಪ್ರಮತಿ ಹಿಲ್ ವ್ಯೂ ಶಾಲೆಯಲ್ಲಿ ಪ್ರಾಂಶುಪಾಲರಾಗಿರುವ ಶರತ್ ಕುಮಾರ್ ಅವರೊಂದಿಗೆ ಮೈಸೂರಿನ ಸರಸ್ವತಿಪುರಂನಲ್ಲಿದ್ದಾರೆ. ವಾರದಲ್ಲಿ ಎರಡು ರಾತ್ರಿ ನಾಲ್ಕು ಹಗಲು ಕೋಟೆಕೆರೆ ಫಾರಂನಲ್ಲಿ ಇದ್ದು ಕಾಮರ್ಿಕರೊಂದಿಗೆ ತಾವೂ ಕೆಲಸಮಾಡುತ್ತಾರೆ. ಮೂನ್ನಾರ ಅರವತ್ತೈದು ದಿನವೂ ತೋಟದಲ್ಲೇ ಇದ್ದು ಬೇಸಾಯ ನಷ್ಟ ಎನ್ನುವ ರೈತರು ಇವರಿಂದ ಕಲಿಯುವುದು ಸಾಕಷ್ಟಿದೆ.
ಸರಕಾರದಿಂದ ಯಾವುದೇ ಸಬ್ಸಿಡಿ, ಸಹಾಯಧನಕ್ಕಾಗಿ ಎಡತಾಕದ ಶೇಷಕುಮಾರ್ ಕೃಷಿ ಇಲಾಖೆಗೆ ಸುತ್ತಿ ಸಮಯ ವ್ಯರ್ಥ ಮಾಡಿಕೊಳ್ಳುವ ಬದಲು ತೋಟದಲ್ಲಿ ದುಡಿದರೆ ಲಾಭ ಹೆಚ್ಚು ಎನ್ನುತ್ತಾರೆ. ಕೃಷಿ ಇಲಾಖೆಯ ಕಡೆ ತಿರುಗಿಯೂ ನೋಡದ ಇವರ ಬೇಸಾಯವನ್ನು ನೋಡಿದ ತೋಟಗರಿಕೆ ಇಲಾಖೆಯವರೆ ತೋಟಕ್ಕೆ ಬಂದು ದಾಳಿಂಬೆ ಗಿಡಗಳಿಗೆ ಸಹಾಯಧನ ನೀಡಿದ್ದನ್ನು  ನೆನಪಿಸಿಕೊಳ್ಳುತ್ತಾರೆ.
ಪ್ರಯೋಗ ಮಾಡಲೆಂದು ಮನೆ ಮುಂದೆ ಹಾಕಿದ ಬೆಂಗಳೂರು ಬ್ಲೂ ದ್ರಾಕ್ಷಿ 11 ತಿಂಗಳ ನಂತರ ವಾಷರ್ಿಕ 200 ಕೆಜಿ ಇಳುವರಿ ಬಂತು. ರುಚಿಯಾದ ದ್ರಾಕ್ಷಿಗೆ ತುಂಬಾ ಬೇಡಿಕೆ ಇದ್ದು ಗ್ರಾಹಕರು ತೋಟದ ಬಳಿಯೆ ಬಂದು ಖರೀದಿಸುತ್ತಾರೆ. ಇಕ್ರಾ ಸಂಸ್ಥೆಯವರೂ ಇವರು ಬೆಳೆದ ತರಕಾರಿಗಳನ್ನು ಖರೀದಿಸುತ್ತಾರೆ




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ