ರಸಸಾರ ಕೃಷಿ ಸಾಧಕ ಸುಂದರರಾಮನ್
ಮೊದಲು ನಾವು ನಂತರ ಮಾರುಕಟ್ಟೆ ಎಂದ ಕೃಷಿಋಷಿ
ಸತ್ಯಮಂಗಲ : ಯಾವುದೇ ಕೃಷಿಯ ಯಶಸ್ಸು ಆ ಮಣ್ಣಿನ ಗುಣಲಕ್ಷಣಗಳ ಮೇಲೆ ಅವಲಂಭಿಸಿರುತ್ತದೆ. ಮಣ್ಣು ಜೀವಂತವಾಗಿದ್ದರೆ ಅದರಲ್ಲಿ ಬೆಳೆಯುವ ಬೆಳೆಯೂ ಜೀವಂತವಾಗಿರುತ್ತದೆ. ಆದರೆ ರೈತರು ಜೀವ ಇಲ್ಲದ ರಸಗೊಬ್ಬರಗಳನ್ನು ಮಣ್ಣಿಗೆ ಆಹಾರವಾಗಿ ನೀಡುತ್ತಾ ಭೂಮಿಯನ್ನು ಬರಡುಮಾಡುತ್ತಿದ್ದಾರೆ.ಇದರಿಂದಾಗಿ ಮನುಷ್ಯ ವಿಷಪೂರಿತ ಆಹಾರ ಸೇವಿಸಿ, ನಾನಾ ರೋಗಗಳ ಗೂಡಾಗುತ್ತಿದ್ದಾನೆ. ಪರಿಣಾಮ ನಮ್ಮ ಮುಂದಿನ ಪೀಳಿಗೆಯ ಮಕ್ಕಳು ತಮ್ಮ ನಲವತ್ತನೇ ವಯಸ್ಸಿಗೆ ವೃದ್ಧಾಪ್ಯ ಬಂದು,ನಾನಾ ಕಾಯಿಲೆಗಳಿಂದ ನರಳಬೇಕಾಗಿದೆ.ರೈತರು ಮಣ್ಣು, ಗಿಡ ಮತ್ತು ಸೂರ್ಯನ ಸಂಬಂಧವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಆಗ ನಮ್ಮ ಕೃಷಿಯು ಬದುಕುತ್ತದೆ ನಾವೂ ನೂರಾರು ವರ್ಷ ಆರೋಗ್ಯವಾಗಿ ಬದುಕುತ್ತೇವೆ... ಹೀಗೆ ಸುಂದರ ರಾಮನ್ ಹೇಳುತ್ತಾ ಹೋದರು, ಎದುರಿಗೆ ಕುಳಿತ ರೈತರು ಪ್ರತಿ ವಾಕ್ಯವನ್ನು ನೋಟ್ಸ್ ಮಾಡಿಕೊಳ್ಳುತ್ತಿದ್ದರು.
ಚಾಮರಾಜನಗರದ ಗಡಿ ಭಾಗದಲ್ಲಿರುವ ಹೆಸರಾಂತ ಸಾವಯವ ಕೃಷಿಕ, ರಸಸಾರ (ದ್ರಾವಣ) ಕೃಷಿಯನ್ನು ಜನಪ್ರಿಯಗೊಳಿಸಿದವರು ಎಸ್.ಆರ್.ಸುಂದರರಾಮನ್. ಸತತ 25 ವರ್ಷಗಳಿಂದ ನಿರಂತರವಾಗಿ ಕೃಷಿಯಲ್ಲಿ ಪ್ರಯೋಗಮಾಡುತ್ತಾ ಅವರು ಕಂಡುಕೊಂಡ ವಿಧಾನಗಳನ್ನು "ಸುಂದರರಾಮನ್ ಎಫೆಕ್ಟ್" ಎಂದು ಕರೆಯಲಾಗುತ್ತದೆ.
ಮೈಸೂರಿನಿಂದ ಸುಮಾರು 180 ಕಿ.ಮೀ.ದೂರದ ಸತ್ಯಮಂಗಲ ಸಮೀಪ ಇರುವ ಸುಂದರರಾಮನ್ ಅವರ ತೋಟ ಕೃಷಿಕರ ಪಾಲಿನ ಪಾಠ ಶಾಲೆ. ಅಲ್ಲಿ ಅವರು ಸಾವಯವ ಸಸ್ಯ ಸಂರಕ್ಷಣೆಗೆ ಕಂಡು ಕೊಂಡಿರುವ ಸರಳ ಸೂತ್ರಗಳು ಜಾರಿಯಾಗಿದ್ದು 10 ಎಕರೆಯ ಸುಂದರ ತೋಟ ಹಸಿರಿನಿಂದ ಕಂಗೊಳಿಸುತ್ತಿದೆ. ಅಲ್ಲಿ ತೆಂಗು, ಕಬ್ಬು,ಅರಿಶಿನ,ತರಕಾರಿ ಬೆಳೆಗಳನ್ನು ಬೆಳೆಯಲಾಗಿದೆ. ಕಳೆದ ಹದಿನೈದು ವರ್ಷಗಳಿಂದ ಸುಂದರರಾಮನ್ ದೇಶದ ನಾನಾ ಭಾಗಗಳಲ್ಲಿ ಸರಳ ಕೃಷಿಯ ವಿಧಾನಗಳ ಬಗ್ಗೆ ಉಪನ್ಯಾಸ ನೀಡಿದ್ದಾರೆ.
ಇಂತಹ ಕೃಷಿ ಋಷಿಯ ಅನುಭವವನ್ನು ತಮ್ಮದಾಗಿಸಿಕೊಳ್ಳುವ ಮಹದಾಸೆಯಿಂದ ಚಾಮರಾಜನಗರ ಮತ್ತು ಮೈಸೂರು ಜಿಲ್ಲಾ ರೈತರನ್ನೊಳಗೊಂಡ ನಮ್ಮ ತಂಡ ಸುಂದರರಾಮನ್ ಅವರ ತೋಟಕ್ಕೆ ಭೇಟಿ ನೀಡಿತ್ತು. ಅವರು ತಮ್ಮ 73 ವರ್ಷದ ಇಳಿಗಾಲದಲ್ಲೂ ದಣಿವರಿಯದೆ ನಮ್ಮ ಜತೆ ಸತತವಾಗಿ ಬೆಳಗಿನಿಂದ ಸಂಜೆಯವರೆಗೂ ಮಾತನಾಡಿದರು. ಸುಸ್ಥಿರ ಬೇಸಾಯ ಕ್ರಮ , ವಿಷಮುಕ್ತ ಮಣ್ಣಿನ ನಿಮರ್ಾಣ, ಆರೋಗ್ಯಕರ ಮತ್ತು ನೆಮ್ಮದಿಯ ಬದುಕಿಗೆ ರೈತರು ಮಾಡಬೇಕಾದ ಸರಳ ವಿಧಾನಗಳನ್ನು ಐದು ಗಂಟೆಗಳಿಗೂ ಹೆಚ್ಚು ಕಾಲ ಬೋಧಿಸಿದರು.
ಆರೋಗ್ಯಕರ ಮಣ್ಣಿನ ನಿಮರ್ಾಣ: ಯಾವುದೇ ಮಣ್ಣು ಫಲವತ್ತಾಗಿರಬೇಕಾದರೆ ಅಲ್ಲಿ ಸೂಕ್ಷ್ಮ ಜೀವಿಗಳ ಸಂಖ್ಯೆ ಹೆಚ್ಚಾಗಿರಬೇಕು. ರಸಾಯನಿಕ ಗೊಬ್ಬರವನ್ನು ನಾವು ಹೆಚ್ಚು ಹೆಚ್ಚು ಬಳುಸುತ್ತಿರುವ ಪರಿಣಾಮ ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳು ಸಾವನ್ನಪ್ಪಿ ಮಣ್ಣು ಬರಡಾಗುತ್ತಿದೆ. ಭೂಮಿಯ ಮೇಲೆ ಇರುವ ಆರರಿಂದ ಒಂಭತ್ತು ಇಂಚು ಮಣ್ಣು ಮಾತ್ರ ಜೀವಂತವಾಗಿದ್ದು ಸಸ್ಯಗಳಿಗೆ ಬೇಕಾದ ಸಮಗ್ರ ಪೋಷಕಾಂಶಗಳನ್ನು ಅದು ಒದಗಿಸಿಕೊಡುತ್ತದೆ.
ಆದ್ದರಿಂದ ನಾವು ಈ ಒಂಭತ್ತು ಇಂಚು ಮಣ್ಣನ್ನು ಸದಾ ಜೀವಂತವಾಗಿಟ್ಟುಕೊಳ್ಳವ ನಿಟ್ಟಿನಲ್ಲಿ ನಮ್ಮ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಈಗಾದಾಗ ಭೂಮಿಯ 25 ಅಡಿ ಆಳದ ಲ್ಲಿರುವ ಎರೆಹುಳುಗಳು ತಮ್ಮ ಕೆಲಸವನ್ನು ಸಲೀಸಾಗಿ ನಿರ್ವಹಿಸಿ ಗಾಳಿಯಾಡುವಂತೆ ಮಾಡಿ ಜೀವಂತ ಮಣ್ಣು ನಿಮರ್ಾಣಮಾಡುತ್ತವೆ.
ಯಾವುದೇ ಬೆಳೆಗಳು ಸಾವಯವ ಮತ್ತು ರಾಸಾಯನಿಕ ಗೊಬ್ಬರವನ್ನು ಸಮಾನವಾಗಿ ಸ್ವೀಕರಿಸುತ್ತವೆ. ಸಾವಯವದಲ್ಲಿ ಬೆಳೆದ ಬೆಳೆ ಶೇ 10 ರಷ್ಟು ಸೂರ್ಯನ ಶಕ್ತಿಯನ್ನು ಬಳಸಿಕೊಂಡರೆ, ರಸಾಯನಿಕದಲ್ಲಿ ಬೆಳೆದ ಸಸ್ಯಗಳು ಶೇ 3 ರಷ್ಟು ಸೂರ್ಯನ ಶಕ್ತಿಯನ್ನು ಬಳಸಿಕೊಳ್ಳುತ್ತವೆ. ಅವಕ್ಕೆ ಸಿದ್ಧ ಆಹಾರ ಸಿಗುವುದರಿಂದ ಅವು ಸೋಮಾರಿಗಳಾಗಿಬಿಡುತ್ತವೆ. ಕಳೆದ 50-60 ವರ್ಷಗಳಿಂದ ನಾವು ಹೀಗೆ ಮಾಡುತ್ತಾ ಬಂದಿದ್ದು ಮಣ್ಣಿನಲ್ಲಿ ಸೂಕ್ಷ್ಮಜೀವಿಗಳ ಚಟುವಟಿಕೆ ಬಹುತೇಕ ಸ್ಥಗಿತಗೊಂಡಿದೆ. ಪರಿಣಾಮ ಸಸ್ಯಗಳು ಬಿಸಿಲನ್ನು ಬಳಸಿಕೊಳ್ಳುವ ಶಕ್ತಿ ಕಡಿಮೆಯಾಗಿದೆ. ಅದಕ್ಕಾಗಿ ನಾವು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಕೆಲಸವನ್ನು ಮೊದಲು ಮಾಡಬೇಕು. ರಾಸಾಯನಿಕ ಗೊಬ್ಬರ ಬಳಕೆಯನ್ನು ತಕ್ಷಣ ನಿಲ್ಲಿಸಿ, ಸಾವಯವ ಕೃಷಿಗೆ ಮರಳಬೇಕು.
ಕಳೆದು ಹೋಗಿರುವ ಮಣ್ಣಿನ ಫಲವತ್ತತೆಯನ್ನು ಮರಳಿ ತರಲು ದ್ರವ ರೂಪದ (ಜೀವಾಮೃತ ಅಥವಾ ರಸಸಾರ) ಗೊಬ್ಬರಗಳು ಚಮತ್ಕಾರಿಕ ಕೆಲಸಗಳನ್ನು ಮಾಡುತ್ತವೆ. ನಾನು ಮತ್ತು ನನ್ನಂತಹ ಹಲವಾರು ರೈತರ ಅನುಭವದಿಂದ ಕಳೆದ 25 ವರ್ಷಗಳಿಂದ ವಿವಿಧ ಬೆಳೆಗಳ ಮೇಲೆ ಪ್ರಯೋಗಮಾಡುತ್ತಾ, ಸುಧಾರಣೆ ಮಾಡುತ್ತಾ ಅಭಿವೃದ್ಧಿಪಡಿಸಿದ ದ್ರವಣಗಳು ಇವು. ಇವುಗಳಿಗೆ ಆರ್ಕೆ ದ್ರಾವಣ, ಅಮುದಂ ದ್ರಾವಣ, ಪಂಚಗವ್ಯ, ಮೊಟ್ಟೆ ನಿಂಬೆ ರಸದ ಪಾನಕ,ಮಜ್ಜಿಗೆ ದ್ರಾವಣ, ಎಲೆಗಳ ಕಷಾಯ, ಮೀನು ಬೆಲ್ಲದ ಶರಬತ್ತು ಎಂಬ ಹೆಸರಿನಿಂದ ಕರೆಯಲಾಗುತ್ತದೆ. ನಮ್ಮ 25 ವರ್ಷದ ಅನುಭವ ತಕ್ಷಣ ನಿಮಗೆ ಸಿಗುವುದರಿಂದ ನೀವು ನಮಗಿಂತ 25 ವರ್ಷ ಮುಂದೆ ಇದ್ದೀರಿ. ನಮ್ಮ ಅನುಭವದ ಆಧಾರದ ಮೇಲೆ ನೀವು ಕೃಷಿ ಚಟುವಟಿಕೆ ಕೈಗೊಳ್ಳುವ ಮೂಲಕ ಆರೋಗ್ಯಕರ ಜೀವನ ಶೈಲಿಯನ್ನು ನಿಮದಾಗಿಸಿಕೊಳ್ಳಬಹುದು ಎಂದರು ಸುಂದರ ರಾಮನ್.
ರಸಾಯನಿಕ ತಂದ ಆಪತ್ತು: ಮನುಷ್ಯನ ಸರಾಸರಿ ಆಯಸ್ಸು ಈಗ 60 ರಿಂದ 65 ವರ್ಷಕ್ಕೆ ಬಂದು ನಿಂತಿದೆ. ಇದೇ ರೀತಿ ನಾವು ವಿಷಯುಕ್ತ ಆಹಾರ ಸೇವನೆ ಮಾಡುತ್ತಾ ಹೋದರೆ ಮುಂದೆ 40 ರಿಂದ 45 ವರ್ಷಗಳಿಗೆ ಬಂದು ನಿಲ್ಲುವುದರಲ್ಲಿ ಅನುಮಾನ ಇಲ್ಲ. ಮನುಷ್ಯನನ್ನು 50 ವರ್ಷಕ್ಕೆ ಕೊಲ್ಲಲ್ಲು ನಾವು ಇಂತಹ ವಿಷ ಪದಾರ್ಥಗಳನ್ನು ಬಳಸಿ ವ್ಯವಸಾಯ ಮಾಡಬೇಕೆ ?. ನಮಗ್ಯಾಕೆ ಬೇಕು ಇಂತಹ ಬೇಸಾಯ. ಮುಂದಿನ ಜನಾಂಗದ ಭವಿಷ್ಯ ನೆನೆದರೆ ಭಯವಾಗುತ್ತದೆ. ನಾವು ಕಳೆದ 20 ವರ್ಷಗಳಿಂದ ಏನನ್ನು ಹೊರಗಿನಿಂದ ತಂದು ತಿಂದಿಲ್ಲ.ನಮಗೆ ಬೇಕಾದ ಆಹಾರ ಪದಾರ್ಥಗಳನ್ನು ನಾವೇ ಬೆಳೆದುಕೊಳ್ಳುತ್ತಿದ್ದೇವೆ. ನಮ್ಮ ಮನೆಯಲ್ಲಿ ಯಾರು ಇಂದಿಗೂ ಆಸ್ಪತ್ರೆಯ ಮೆಟ್ಟಿಲನ್ನು ತುಳಿದಿಲ್ಲ. ಇದಕ್ಕೆಲ್ಲ ಕಾರಣ ನಾವು ಅನುಸರಿಸುತ್ತಿರುವ ರಸಸಾರ ಸಾವಯವ ಕೃಷಿ.
ಅಮೇರಿಕಾ, ಚೀನಾ ದೇಶದಲ್ಲಿ ಮನುಷ್ಯ 135 ವರ್ಷ ಬದುಕಿದ ಜೀವಂತ ಉದಾಹರಣೆಗಳು ನಮ್ಮ ಮುಂದಿವೆ.ಹಾಗಾಗಿ ಯಾರೇ ಕೃಷಿ ಮಾಡಿದರು "ಮೊದಲು ನಾವು ನಂತರ ಮಾರುಕಟ್ಟೆ" ಎಂಬ ತತ್ವವನ್ನು ಧ್ಯೇಯವನ್ನಾಗಿಸಿಕೊಳ್ಳಬೇಕು.
ಅಮೇರಿಕಾದ ರೂಡಲೇ ಸಂಸ್ಥೆಯವರು 80 ವರ್ಷ ರಾಸಾಯನಿಕ ಮತ್ತು ಜೈವಿಕ ಕೃಷಿಯಲ್ಲಿ ಪ್ರಯೋಗಮಾಡಿ (ಆಸಕ್ತರು ಆರ್ಯುಡಿಎಎಲ್ಇ ಇನ್ಸ್ಟಿಟ್ಯೂಟ್ ಎಂಬ ಜಾಲ ತಾಣವನ್ನು ನೋಡಬಹುದು) ಜೈವಿಕ ಕೃಷಿಯಲ್ಲಿ ಮಾತ್ರ ಅಧಿಕ ಇಳುವರಿ ಮತ್ತು ಸತ್ವ ಇದೆ ಎಂಬ ಸಾರ್ವಕಾಲೀಕ ಸತ್ಯವನ್ನು ಕಂಡುಕೊಂಡಿದ್ದಾರೆ. ರಾಸಾಯನಿಕ ಬಳಕೆಯಿಂದ ಮಣ್ಣು ಸತ್ವ ಕಳೆದುಕೊಂಡರೆ, ಜೈವಿಕ ಬಳಕೆಯಿಂದ ವರ್ಷದಿಂದ ವರ್ಷಕ್ಕೆ ಸತ್ವವನ್ನು ಹೆಚ್ಚಿಸಿಕೊಳ್ಳುತ್ತಾ ಅಧಿಕ ಇಳುವರಿ ನೀಡುತ್ತಾ ಹೋದ ಸತ್ಯವನ್ನು ಅವರು ವಿವರಿಸಿದ್ದಾರೆ. ರಾಸಾಯನಿಕ ಬಳಕೆ ಮಾಡುವುದರಿಂದ ಭೂಮಿ ಗಟ್ಟಿಯಾಗಿ ನೀರು ಕುಡಿಯುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಭೂಮಿಗೆ ಬಿದ್ದ ಮಳೆಯ ನೀರು ಹರಿದು ವ್ಯರ್ಥವಾಗಿ ಸಮುದ್ರವನ್ನು ಸೇರುವುದರಿಂದ ಅಂತರ್ಜಲ ಮಟ್ಟವೂ ಕುಸಿತಕಂಡು ಅಪಾಯ ತಂದುಕೊಳ್ಳುತ್ತಿದ್ದೇವೆ.
ಫಲ ಭಿತ್ತನೆ : ಯಾವುದೇ ಬೆಳೆ ಬೆಳೆಯುವ ಮುನ್ನಾ ಜಮೀನಿಗೆ ಫಲ ಧಾನ್ಯಗಳನ್ನು ಭಿತ್ತನೆ ಮಾಡಬೇಕು. ಇದರಿಂದಾಗಿ ಅಗಾಧ ಪರಿಣಾಮ ಉಂಟಾಗುತ್ತದೆ. ಯೂರಿಯಾ ಡಿಎಪಿ ಎನ್ಪಿಕೆ ಹೀಗೆ ಯಾವುದೇ ರಾಸಾಯನಿಕ ಗೊಬ್ಬರವನ್ನು ನಾವು ಭೂಮಿಗೆ ನೀಡಿದರು ಯಾವುದೇ ಸಸ್ಯ ಮೂರನೇ ಒಂದು ಭಾಗವನ್ನು ಮಾತ್ರ ಉಪಯೋಗಿಸಿಕೊಳ್ಳುತ್ತದೆ. ಉಳಿದದ್ದು ಭೂಮಿಯಲ್ಲೇ ಕರಗಿ ಭೂಮಿಯ ಫಲವತ್ತತೆಯನ್ನು ನಾಶಮಾಡುತ್ತದೆ.
ಏಕದಳ ಮತ್ತು ದ್ವಿದಳ ರೀತಿಯ ನವ ಧಾನ್ಯಗಳನ್ನು ಮಿಶ್ರಣಮಾಡಿಕೊಂಡು ಮುಖ್ಯ ಫಸಲು ಮಾಡುವ 60 ರಿಂದ 70 ದಿನ ಮೊದಲು ಜಮೀನಿಗೆ ಫಲ ಧಾನ್ಯಗಳನ್ನು ಭಿತ್ತಬೇಕು. ಇದರಿಂದಾಗಿ ಮಣ್ಣು ಫಲವತ್ತಾಗಿ, ಆರೋಗ್ಯಕರವಾಗುತ್ತದೆ. ಮಣ್ಣನ್ನು ಫಲವತ್ತು ಮಾಡಿದರೆ ಭೂಮಿಯಲ್ಲಿ ಶೇ 3 ರ ಪ್ರಮಾಣದಲ್ಲಿದ್ದ ಸೂಕ್ಷ್ಮಾಣು ಜೀವಿಗಳು ಶೇ 10 ರಷ್ಟಾಗುತ್ತವೆ. ಮಣ್ಣಿನ ಫಲವತ್ತು ಮಾಡುವುದು ಮತ್ತು ಆರೋಗ್ಯಕರಮಾಡುವುದಷ್ಟೇ ನಮ್ಮ ಕೆಲಸ. ಉಳಿದದ್ದನ್ನು ಪ್ರಕೃತಿ ನೋಡಿಕೊಳ್ಳುತ್ತದೆ.ಇದು ಶಿವನಿಲ್ಲದೆ ಶಕ್ತಿ ಇಲ್ಲ ಶಕ್ತಿ ಇಲ್ಲದೆ ಶಿವನಿಲ್ಲ (ಶಿವನಿಲ್ಲಾಮೆ ಶಕ್ತಿ ಇಲ್ಲೈ ,ಶಕ್ತಿ ಇಲ್ಲಾಮೆ ಶಿವನಿಲ್ಲೈ) ಎನ್ನುವಂತೆ. ಫಲ ಧಾನ್ಯ ಭಿತ್ತನೆ ಮಾಡಿದ 60 ದಿನದ ನಂತರ ಅದನ್ನು ರೋಟವೇಟರ್ ಸಹಾಯದಿಂದ ಮಣ್ಣಿಗೆ ಸೇರಿಸಬೇಕು. ಇದರಿಂದ 10 ಟನ್ಗೂ ಮಿಗಿಲಾಗಿ ಹಸಿರೆಲೆ ಗೊಬ್ಬರವನ್ನು ಭೂಮಿಗೆ ಸೇರಿಸಿದಂತಾಗುತ್ತದೆ. ಹೀಗೆ ಮಾಡುವುದರಿಂದ ಯಾವುದೇ ಬರಡು ಮಣ್ಣನ್ನು ಆರು ತಿಂಗಳಿನಿಂದ ಒಂದು ವರ್ಷದ ಅವಧಿಯಲ್ಲಿ ಫಲವತ್ತು ಮಾಡಬಹುದು.ಮೊದಲು ಭೂಮಿಯನ್ನು ಆಳವಾಗಿ ಉಳುಮೆ ಮಾಡುವುದನ್ನು ನಾವು ನಿಲ್ಲಿಸಬೇಕು. ಸಾಧ್ಯವಾದಷ್ಟು ಮಾನವನ ಹಸ್ತಕ್ಷೇಪವನ್ನು ಕಡಿಮೆ ಮಾಡಿಕೊಂಡರೆ ಸಾವಯವ ಕೃಷಿಯಲ್ಲಿ ಉತ್ತಮ ಪಲಿತಾಂಶ ಕಾಣಬಹುದು.
ದ್ರಾವಣ ಅಥವಾ ರಸ ಸಾರ :10 ಎಕರೆ ಜಮೀನು ನಿರ್ವಹಿಸಲು ಎರಡು ಜಾನುವಾರು ಸಾಕು. ಇದರಿಂದ ಸಿಗುವ ಗೋಮೂತ್ರ ಮತ್ತು ಸಗಣಿಯನ್ನು ಬಳಸಿ ದ್ರವಣ ಮಾಡಿಕೊಂಡು ಭೂಮಿಗೆ ಕೊಡುತ್ತಾ ಹೋದರೆ ಸೂಕ್ಷ್ಮಾಣು ಜೀವಿಗಳು ಕೋಟ್ಯಾನು ಕೋಟಿಯಾಗಿ ಭೂಮಿ ಫಲವತ್ತಾಗುತ್ತದೆ.
ಇದಕ್ಕಾಗಿ ನಾವು ಹೊರಗಿನಿಂದ ಏನನ್ನು ಹಣ ಕೊಟ್ಟು ತರಬೇಕಾಗಿಲ್ಲ. ಜಮೀನಿನಲ್ಲೇ ಸಿಗುವ ಔಷದೀಯ ಗಿಡಗಳನ್ನು ಸಗಣಿ ಮತ್ತು ಗೋಮೂತ್ರದ ಜತೆ ಬಳಸಿಕೊಂಡು ಎಲ್ಲಾ ರೀತಿಯ ಕೀಟ ಬಾಧೆಗಳಿಗೆ ಕ್ರಿಮಿನಾಶಕ ತಯಾರುಮಾಡಿಕೊಳ್ಳಬಹುದು.
ಎಲ್ಲಾಕ್ಕಿಂತ ಮುಖ್ಯವಾಗಿ ಭೂಮಿಯಲ್ಲಿ ಸೂಕ್ಷ್ಮಾಣು ಜೀವಿಗಳನ್ನು ಹೆಚ್ಚು ಮಾಡುವುದರಿಂದ ಅವು ಬಲಿಷ್ಠ ಸೈನಿಕರಂತೆ ಕೆಲಸ ನಿರ್ಮಹಿಸಿ ಗಿಡಗಳಿಗೆ ಬಾಧೆ ತರುವ ಕೀಟಗಳನ್ನು ನಿಯಂತ್ರಿಸುತ್ತವೆ.ರಾಸಾಯನಿಕದಲ್ಲಿ ಕೀಟಗಳನ್ನು ಕೊಲ್ಲುವುದೇ ಮುಖ್ಯವಾದರೆ ನಮ್ಮ ಕೃಷಿ ವಿಧಾನದಲ್ಲಿ ಒಳ್ಳೆಯ ಸೂಕ್ಷ್ಮಾಣು ಜೀವಿಗಳನ್ನು ಬಲಿಷ್ಠಮಾಡುವುದು ಮುಖ್ಯ. ನಮ್ಮಲ್ಲಿ ಕೊಲ್ಲುವ ಮಾತೇ ಇಲ್ಲ. ರಸಾಯನಿಕ ಮತ್ತು ಸಾವಯವ ಕೃಷಿಗೆ ಇರುವ ವ್ಯತ್ಯಾಸ ಇಷ್ಟೆ.
ಹೀಗೆ ಬಾಳೆ, ಅರಿಶಿನ, ಕಬ್ಬು, ತೆಂಗು, ವಿವಿಧ ತರಕಾರಿ ಬೆಳೆಗಳನ್ನು ಕೇವಲ ರಸ ಸಾರವನ್ನು ಬಳಸಿಕೊಂಡು ಬೆಳೆಯುವ ಸರಳ ವಿಧಾನಗಳನ್ನು ಸುಂದರ ರಾಮನ್ ಹೇಳುತ್ತಾ ಹೋದರು. ನಾವು ಮಂತ್ರಮುಗ್ಧರಾಗಿ ವಿಧೇಯ ವಿದ್ಯಾಥರ್ಿಗಳಂತೆ ಕೇಳಿಸಿಕೊಳ್ಳುತ್ತಾ ಹೋದೆವು. ನಿಜಕ್ಕೂ ನಮ್ಮ ಕೃಷಿ ಇಷ್ಟೊಂದು ಸರಳ ಮತ್ತು ಕಡಿಮೆ ಖಚರ್ಿನದ್ದಾಗಿದ್ದು ನಾವ್ಯಾಕೆ ರಾಸಾಯನಿಕ ಗೊಬ್ಬರಕ್ಕಾಗಿ ಲಕ್ಷಾಂತರ ಹಣ ಸುರಿದು ಆರೋಗ್ಯ, ಹಣ ಎರಡನ್ನೂ ಕಳೆದುಕೊಂಡು ಸಾಲದ ಸುಳಿಯಲ್ಲಿ ಸಿಲುಕಿ ಅಬಾಲ ವೃದ್ಧರಾಗುತ್ತಿದ್ದೇವೆ ಎಂಬ ಭಾವನೆ ನಮ್ಮಲ್ಲಿ ಮೂಡಿತು. ಸುಂದರರಾಮನ್ ಅವರ ಮಾತು ಕೇಳಿಸಿಕೊಂಡ ಯಾರೇ ಆದರೂ ತಕ್ಷಣದಿಂದಲೇ ರಾಸಾಯನಿಕ ಗೊಬ್ಬರಕ್ಕೆ ವಿದಾಯ ಹೇಳಿ ಪ್ರಕೃತಿಗೆ ಸನಿಹವಾದ ಸಾವಯವ ಕೃಷಿಯತ್ತ ಮುಖ ಮಾಡಿನಿಲ್ಲುವುದು ನಿಶ್ಚಿತ ಅನಿಸಿತು.
ತಮಿಳುನಾಡು, ಕನರ್ಾಟಕ ಸೇರಿದಂತೆ ಹಲವಾರು ಕಡೆ ಸುಂದರರಾಮನ್ ರೂಪಿಸಿದ ಸಾವಯವ ಸಸ್ಯ ಸಂರಕ್ಷಣೆಗೆ ಸರಳ ಸೂತ್ರಗಳನ್ನು ರೈತರು ತಮ್ಮ ಜಮೀನುಗಳಲ್ಲಿ ಜಾರಿಮಾಡಿಕೊಂಡು ಲಾಭದಾಯಕ ಕೃಷಿ ಮಾಡುತ್ತಿದ್ದಾರೆ. ತಾಳವಾಡಿಗೆ ಸಮೀಪ ಇರುವ ಕಲ್ಲುಬಂಡಿಪುರದಲ್ಲಿರುವ ಶಕ್ತಿವೇಲು ತಮ್ಮ ಹದಿಮೂರು ಎಕರೆ ಪ್ರದೇಶದಲ್ಲಿ ರಸ ಸಾರ ಬಳಸಿ ಸರಳ ರೀತಿಯಲ್ಲಿ ಕೃಷಿ ಮಾಡುತ್ತಿದ್ದರೆ, ಗುಂಡ್ಲುಪೇಟೆಯ ಕೂಗಳತೆ ದೂರದಲ್ಲಿರುವ ವೀರನಪುರದಲ್ಲಿ ರಾಜು ಎನ್ನುವವರು ಸುಂದರರಾಮನ್ ರೂಪಿಸಿದ ದ್ರವಣಗಳನ್ನು ಬಳಸಿಕೊಂಡು ಯಶಸ್ವಿಯಾಗಿ ಬಾಳೆ ಮತ್ತು ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಸುಂದರರಾಮನ್ ಅವರ ಶಿಷ್ಯ ಚಾಮರಾಜನಗರ ಜಿಲ್ಲೆಯಲ್ಲಿ ಜೈವಿಕ ಕೃಷಿಯನ್ನು ಮುನ್ನಲೆಗೆ ತರುವ ಕೆಲಸಮಾಡುತ್ತಿರುವ ರಾಜು ಅವರನ್ನು ಮೊ.9448954851 ಸಂಪಕರ್ಿಸಬಹುದು. - ಚಿನ್ನಸ್ವಾಮಿ ವಡ್ಡಗೆರೆ
xlent sir
ಪ್ರತ್ಯುತ್ತರಅಳಿಸಿ