ರೈತರಿಗೆ ಸ್ವಾಭಿಮಾನ ಕಲಿಸಿದ `ಹಸಿರು ಸೇನಾನಿ'ಯಸ್ಮರಣೆ
# ಜನತಾ ವಿಶ್ವವಿದ್ಯಾನಿಲಯದ ಮಹಾಗುರು # ರಾಜಕೀಯ,ಸಾಂಸ್ಕೃತಿಕ ಪ್ರಜ್ಞೆ ರೂಪಿಸಿದ ಪ್ರೊಫೆಸರ್
2014 ಫೆಬ್ರವರಿ 3. ರೈತ ಚೇತನಾ, ಹಸಿರು ಸೇನಾನಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಕಣ್ಮರೆಯಾದ ದಿನ.ಅವರು ನಮ್ಮನಗಲಿ ಹದಿನಾಲ್ಕು ವರ್ಷಗಳಾದವು.ಪ್ರೊಫೆಸರ್ ಅವರಂತಹ ಪ್ರಖರ ರೈತಪರ ಚಿಂತಕ,ಹೋರಾಟಗಾರ ಮತ್ತೊಬ್ಬ ಬರಲಿಲ್ಲ. ಆದರೆ ಅವರ ರೈತಪರ ಚಿಂತನೆಗಳು,ಅವರು ಹಾಕಿಕೊಟ್ಟ ಹೋರಾಟದ ಮಾರ್ಗ,ರೈತ ಸಮುದಾಯಕ್ಕೆ ಕಲಿಸಿದ ಸ್ವಾಭಿಮಾನದ ಪಾಠ,ಜಾಗತೀಕರಣ ಮತ್ತು ಕುಲಾಂತರಿ ತಳಿಗಳಿಂದ ಭವಿಷ್ಯದಲ್ಲಿ ಕೃಷಿಗೆ ಎದುರಾಗಬಹುದಾದ ಆತಂಕಗಳ ಬಗ್ಗೆ ಅವರಿಗಿದ್ದ ದಾರ್ಶನಿಕ ಮುನ್ನೋಟ ಅವರನ್ನು ಸದಾ ಜೀವಂತವಾಗಿಟ್ಟಿವೆ.
ರೈತ ಎಂದರೆ ಭಾರತ : ಭಾರತ ಎಂದರೆ ರೈತ. ರೈತರು ಸಾಲಗಾರರಲ್ಲ ಸರಕಾರವೇ ಬಾಕಿದಾರ. ರೈತರಿಗೆ ಸಾಲಬೇಡ : ಬೆಳೆಗಳಿಗೆ ನ್ಯಾಯವಾದ ಬೆಲೆ ಬೇಕು.ನಗರದ ಆಡಂಬರದ ಜೀವನ ನಿಲ್ಲಬೇಕು: ಹಳ್ಳಿಗಳ ಅಭಿವೃದ್ಧಿ ಬೇಕು.ದೊಡ್ಡ ಕೈಗಾರಿಕೆ ಸಾಕು : ಗ್ರಾಮ ಕೈಗಾರಿಕೆ ಬೇಕು.ದೊಡ್ಡ ನೀರಾವರಿ ಸಾಕು: ಸಣ್ಣ ನೀರಾವರಿ ಬೇಕು. ಹೀಗೆ ನೂರಾರು ರೈತಪರವಾದ ಘೋಷಣೆಗಳೊಂದಿಗೆ ರೈತರಲ್ಲಿ ಚೈತನ್ಯ ತುಂಬಿ,ಆತ್ಮವಿಶ್ವಾಸ ಮೂಡಿಸಿ,ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುವುದನ್ನು ಕಲಿಸಿದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಮತ್ತು ಸಂಗಾತಿಗಳು ಹೋರಾಟದ ಹಾದಿಯಲ್ಲಿ ಚೆದುರಿಹೋದದ್ದು ಕನ್ನಡನಾಡಿನ ರೈತರ ದರ್ೌಭಾಗ್ಯ.
ಈಗಲಾದರೂ ಪ್ರೊ.ಎಂಡಿಎನ್ ಚಿಂತನೆಗಳಿಂದ ರೂಪಗೊಂಡು ರೈತನಾಯಕರಾದವರು ಹೊಸ ಆಲೋಚನೆಗಳೊಂದಿಗೆ, ರೈತಚಳವಳಿಯನ್ನು ರಚನಾತ್ಮಕವಾಗಿ ಮರಳಿಕಟ್ಟುವ,ತಿದ್ದುವ ಕೆಲಸಕ್ಕೆ ಮುಂದಾಗಬೇಕು.
"ನಂಜುಂಡಸ್ವಾಮಿ ಅವರ ಜೊತೆಜೊತೆಗೆ ರೈತಸಂಘ ಕಟ್ಟಿದ ಎನ್.ಡಿ.ಸುಂದರೇಶನ್,ಎಚ್.ಎಸ್.ರುದ್ರಪ್ಪ,ಬಾಬಾಗೌಡ ಪಾಟೀಲ,ಬಸವರಾಜ ತಂಬಾಕೆ,ಶೇಷರೆಡ್ಡಿ,ಕೆ.ಎಸ್.ಪುಟ್ಟಣ್ಣಯ್ಯ,ಕೋಡಿಹಳ್ಳಿ ಚಂದ್ರಶೇಖರ್,ಬಸವರಾಜಪ್ಪ,ಕಡಿದಾಳು ಶಾಮಣ್ಣ,ಕೆ.ಟಿ.ಗಂಗಾಧರ್ ಮುಂತಾದ ನೂರಾರು ನಾಯಕರ,ಲಕ್ಷಾಂತರ ಕಾರ್ಯಕರ್ತರ ಶ್ರಮ ವ್ಯರ್ಥವಾಗಲು ಈ ನಾಡು ಬಿಡಬಾರದು.ಇವತ್ತಿಗೂ ಪ್ರಜ್ಞಾವಂತರನ್ನು,ನಾಯಕತ್ವ ವಹಿಸಬಲ್ಲ ಸೂಕ್ಷ್ಮಜ್ಞರಾದ ತರುಣರನ್ನು ಅಧಿಕಾರ ರಾಜಕಾರಣಕ್ಕಿಂತ ಭಿನ್ನವಾದ ನಿಮರ್ಾಣಾತ್ಮಕ ರಾಜಕರಣದ ಕಡೆ ಸೆಳೆಯುವ ಶಕ್ತಿ ರೈತ ಚಳವಳಿಗೆ ಇದೆ. ನಾಯಕತ್ವದ ಕಾತರವುಳ್ಳ ಯುವಕರನ್ನು ರಾಜಕೀಯ ಪಕ್ಷಗಳ ಭ್ರಷ್ಟ ರಾಜಕಾರಣ ಹಾಗೂ ಕ್ರೂರವಾದ ಕೋಮುವಾದಿ ರಾಜಕಾರಣ ಸುಲಭವಾಗಿ ಸೆಳೆದುಕೊಳ್ಳಬಲ್ಲದು.ಅಂಥ ಯುವಕರನ್ನು ರೈತರ ಹಕ್ಕುಗಳ ಹೋರಾಟದ ಪರ್ಯಾಯ ರಾಜಕಾರಣಕ್ಕೆಳೆದ ನಂಜುಂಡಸ್ವಾಮಿಯವರ ಮಾರ್ಗವನ್ನು ಕನ್ನಡ ನಾಡು ಕಳೆದುಕೊಳ್ಳಬಾರದು.ಆ ಕಾರಣದಿಂದಲೇ ನಂಜುಂಡಸ್ವಾಮಿಯವರ ಅಸಂಖ್ಯಾತ ಬರಹಗಳು,ಭಾಷಣಗಳ ಕೈಪಿಡಿಗಳನ್ನು,ಪುಸ್ತಕಗಳನ್ನು ರೂಪಿಸಿ ಎಲ್ಲರಿಗೂ,ಅದರಲ್ಲೂ ಮುಖ್ಯವಾಗಿ ಗ್ರಾಮಗಳ ವಿದ್ಯಾಥರ್ಿಗಳಿಗೆ,ರೈತರ ಮಕ್ಕಳಿಗೆ ತಲುಪಿಸಬೇಕಾಗಿದೆ" ಎನ್ನುವ ಸಂಸ್ಕೃತಿ ಚಿಂತಕ,ಬರಹಗಾರ ನಟರಾಜ್ ಹುಳಿಯಾರ್ " ಹಸಿರು ಸೇನಾನಿ- ಪ್ರೊ.ಎಂ.ಡಿ.ನಂಜುಂಡಸ್ವಾಮಿ : ಹೋರಾಟ ಮತ್ತು ಚಿಂತನೆ" ಎಂಬ ಪುಸ್ತಕವನ್ನು ಸಂಪಾದಿಸಿಕೊಟ್ಟಿದ್ದಾರೆ.
ಪಲ್ಲವ ಪ್ರಕಾಶನ ಪ್ರಕಟಿಸಿರುವ `ಹಸಿರು ಸೇನಾನಿ' ಪುಸ್ತಕದಲ್ಲಿ ಪ್ರೊಫೆಸರ್ ಅವರ ವ್ಯಕ್ತಿತ್ವ ಮತ್ತು ಹೋರಾಟ ಕುರಿತು ಅವರ ಒಡನಾಡಿಗಳು,ಹೋರಾಟದಲ್ಲಿ ನೇರವಾಗಿ ಭಾಗಿಯಾಗಿದ್ದವರು, ಅವರ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಸಾಹಿತಿಗಳು ಎಪ್ಪತ್ತರ ದಶಕದ ಚಳವಳಿ,ಹೋರಾಟದ ಬದುಕನ್ನು ದಾಖಲಿಸಿದ್ದಾರೆ. ಸಂದರ್ಶನಗಳು, ಶ್ರದ್ಧಾಂಜಲಿ ಸಭೆಯ ಭಾಷಣಗಳನ್ನು ಒಳಗೊಂಡಿರುವ ಈ ಪುಸ್ತಕ ರೈತಪರ ಚಿಂತಕರಿಗೆ,ಹೋರಾಟಗಾರರಿಗೆ ಕೈದೀವಿಗೆಯಂತಿದೆ.
ಪ್ರೊ.ಎಂಡಿಎನ್ ಅವರ ಬಾಲ್ಯ,ಶಿಕ್ಷಣ,ಹೋರಾಟದ ಜೊತೆಜೊತೆಗೆ ಭವಿಷ್ಯದಲ್ಲಿ ರೈತರು ಎದುರಿಸಬೇಕಾದ ಬಿಕ್ಕಟ್ಟುಗಳು ಹಾಗೂ ಪರಿಹಾರದ ಮಾರ್ಗಗಳನ್ನು ಹೇಳುವ ಹಸಿರು ಸೇನಾನಿಯ ಪ್ರತಿಪುಟದಲ್ಲಿ ರುವ ಚಿಂತನೆಗಳು, ಖಚಿತ ನಿಲುವುಗಳು ಸಿನಿಕ ಸಮಾಜದ ಬಗ್ಗೆ ಆತ್ಮವಿಶ್ವಾಸ ಕಳೆದುಕೊಂಡವರಲ್ಲಿ ನವಚೈತನ್ಯ ಮೂಡಿಸುತ್ತವೆ.
ಪ್ರೊಫೆಸರ್ ನಂಜುಂಡಸ್ವಾಮಿ ಗ್ರಾಮೀಣ ಸಮುದಾಯದಲ್ಲಿ ಆತ್ಮಸ್ಥೈರ್ಯ,ಎದೆಗಾರಿಕೆ ತುಂಬಿದರು.ರಾಜಕಾರಣಿಗಳನ್ನು,ಅಧಿಕಾರಿಗಳನ್ನು ಕಂಡರೆ ವಿಚಿತ್ರ ತಳಮಳದಿಂದ ಹೆದರುತ್ತಿದ್ದ ರೈತರಿಗೆ ಸ್ವಾಭಿಮಾನದ ಪಾಠ ಹೇಳಿಕೊಟ್ಟರು.ದೇಶಕ್ಕೆ ಅನ್ನ ಹಾಕುವ ಧಣಿಗಳು ತಾವೆಂದು ಎದೆ ಸೆಟಿಸಿ ನಿಲ್ಲಬೇಕೆಂದು ಅವರಿಗೆ ಮನದಟ್ಟಾಗುವಂತೆ ಬೋಧಿಸಿದರು.
ಕಾಪರ್ೊರೇಟ್ ಕಂಪನಿಗಳ ತಾಳಕ್ಕೆ ಕುಣಿಯುವ ಕೃಷಿ ವಿಜ್ಞಾನಿಗಳ ಹಸಿರು ಕ್ರಾಂತಿಯ ಸುಳ್ಳು ಸಾಧನೆಯನ್ನು ಬಯಲು ಮಾಡುವ ಪ್ರೊಫೆಸರ್ ಅವರ ಖಚಿತವಾದ ಅಭಿಪ್ರಾಯಗಳನ್ನು ನಾವೆಲ್ಲರೂ ಇಂದು ಅರ್ಥಮಾಡಿಕೊಳ್ಳಬೇಕಿದೆ. 50-60 ರದಶಕದಲ್ಲಿ ದೇಶದಲ್ಲಿ ಆಹಾರದ ಕೊರತೆ ಉಂಟಾದಾಗ ಹಸಿರು ಕ್ರಾಂತಿ ದೇಶಕ್ಕೆ ವರವಾಗಿ ಬಂತಲ್ಲವೆ ಎಂಬ ಪ್ರಶ್ನೆಗೆ ಪ್ರೋಫೆಸರ್ ನೀಡುವ ಉತ್ತರವನ್ನು ಯಾವ ಕೃಷಿ ವಿಜ್ಞಾನಿಯೂ ನೀಡಲಾರ.
"1965 ರಲ್ಲಿ ಹಸಿರು ಕ್ರಾಂತಿಯನ್ನು ಪರಿಚಯಿಸಿದಾಗ ಈ ದೇಶದಲ್ಲಿ ವ್ಯವಸಾಯ ನಡೆಯುತ್ತಿದ್ದ ಭೂಮಿ ಶೇಕಡ 10 ಭಾಗಕ್ಕೆ ಕೂಡ ನೀರಾವರಿ ವ್ಯವಸ್ಥೆ ಇರಲಿಲ್ಲ.ಮಳೆ ನೀರಿನಿಂದ ಬೆಳೆತೆಗೆದ ಶೇ.90 ರಷ್ಟು ರೈತರೇ ಆಹಾರ ಸ್ವಾವಲಂಬನೆ ಸಾಧಿಸಲು ನೆರವಾದವರು.ಅದು ಇವತ್ತಿಗೂ ಸತ್ಯ.ಆದರೆ ನದಿ ಪ್ರದೇಶಗಳ ಅಂಕಿ ಅಂಶಗಳನ್ನು ಬಳಸಿ ಇವನ್ನು ಹಸಿರು ಕ್ರಾಂತಿ ಪ್ರದೇಶಗಳೆಂದು ಪ್ರಚಾರ ಮಾಡಲಾಗುತ್ತಿದೆ.ಸಾಂಪ್ರದಾಯಿಕ ಕೃಷಿ ಪದ್ಧತಿ ಮತ್ತು ದೇಸಿ ಬೀಜಗಳ ಬಳಕೆಮಾಡುತ್ತಾ ಪರ್ಯಾಯ ಹುಡುಕಬೇಕೆ ಹೊರತು ಏಕರೂಪಿ ಸಂಸ್ಕೃತಿಯನ್ನು ಪುನಾರವತರ್ಿಸುವ ಹಾಗೂ ರಾಸಾಯನಿಕ ತೀವ್ರವಾಗಿರುವ ತಂತ್ರಜ್ಞಾನವನ್ನಲ್ಲ" ಎಂಬ ಅವರ ಮಾತುಗಳನ್ನು ಎಂದೆಂದಿಗೂ ರೈತರು ಗಂಭೀರವಾಗಿ ಪರಿಗಣಿಸಬೇಕಾಗಿದೆ.
60-70 ರ ದಶಕದಲ್ಲಿ ಸಮಾಜವಾದಿಗಳ ಪುಟ್ಟ ಗುಂಪಿನ ಮಹಾಗುರುವಾಗಿದ್ದ ಪ್ರೊ.ಎಂಡಿಎನ್ ಕಾನೂನು,ಸಮಾಜ,ಸಂಸ್ಕೃತಿ,ಸಾಹಿತ್ಯ,ಕೃಷಿ,ಆಥರ್ಿಕತೆ ಚಳುವಳಿ ಈ ಎಲ್ಲದ್ದರ ಬಗ್ಗೆ ಖಚಿತ ಅಭಿಪ್ರಾಯಗಳನ್ನು ಹೊಂದಿದ್ದರು. ಎಂಡಿಎನ್ ಅವರ ಜೊತೆಗೆ ಪೂರ್ಣಚಂದ್ರ ತೇಜಸ್ವಿ,ಲಂಕೇಶ್,ಅನಂತಮೂತರ್ಿ ಅವರಂತಹ ಲೇಖಕರಿದ್ದರು.ಅಗ್ರಹಾರ ಕೃಷ್ಣಮೂತರ್ಿ,ಡಿ.ಆರ್.ನಾಗರಾಜ್,ಶೂದ್ರ ಶ್ರೀನಿವಾಸ್ ರವಿವರ್ಮ ಕುಮಾರ್ ಅವರಂತಹ ಮುಂದಿನ ತಲೆಮಾರಿನ ಚಿಂತಕರಿದ್ದರು. ಕೆ.ರಾಮದಾಸ್,ಪ.ಮಲ್ಲೇಶ್,ಬಿ.ಎಂ.ನಾಗರಾಜ್ ಅವರಂತಹ ಕ್ರೀಯಾಶೀಲ ಹೋರಾಟಗಾರರಿದ್ದರು. ತಮ್ಮ ಚಿಂತನೆ,ಮಾತುಕತೆ,ಬೋಧನೆ,ಚಳವಳಿಗಳ ಮೂಲಕ ಪ್ರೊಫೆಸರ್ ಆ ಕಾಲದ ಕೆಲವು ಶ್ರೇಷ್ಠ ವ್ಯಕ್ತಿತ್ವಗಳನ್ನು ರೂಪಿಸಿದ್ದರು.
1965 ರಲ್ಲಿ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯ ಲೆವಿ ಧಾನ್ಯ ಕೊಡಲು ನಿರಾಕರಿಸುವ ಮೂಲಕ ಏಕವ್ಯಕ್ತಿ ಚಳುವಳಿಯಾಗಿ ಆರಂಭವಾದ ಹೋರಾಟ ಮುಂದೆ ವ್ಯಾಪಕ ಸ್ವರೂಪ ಪಡೆದುಕೊಂಡದ್ದು ಈಗ ಇತಿಹಾಸ. "ದಿನನಿತ್ಯದ ಶೋಷಣೆ,ಅನ್ಯಾಯಗಳ ಹಿಂದಿರುವ ಮಾರುಕಟ್ಟೆಯ ಕೈವಾಡವನ್ನು ಅವರು ರೈತರಿಗೆ ಸರಳವಾಗಿ ಹೇಳುತ್ತಿದ್ದರು.ತಮ್ಮ ಚಿಂತನೆಗಳನ್ನು ಎಲ್ಲರಿಗೂ ತಲುಪಿಸುವ ತವಕ,ಚಿಂತನೆಯ ಸ್ಪಷ್ಟತೆಯಿಂದ ಹುಟ್ಟಿದ ಮಾತು,ತಮ್ಮ ಆಲೋಚನೆ ಬಗ್ಗೆ ಅನಗತ್ಯ ಅನುಮಾನವಿಲ್ಲದ ಆತ್ಮವಿಶ್ವಾಸ,ಆಲೋಚನೆಗಳನ್ನು ಸಂಘಟನೆಯೊಳಗೆ ಹಬ್ಬಿಸಿ ಕ್ರೀಯೆಯಾಗಿಸುವ ಬದ್ಧತೆ ಹಾಗೂ ವ್ಯವಧಾನ,ಸಮಾಜದ ಬಗೆಗಿನ ಜವಾಬ್ದಾರಿ ಎಲ್ಲವೂ ಸೇರಿ ಪ್ರೊ.ಎಂಡಿಎನ್ ಮಾರ್ಗ ರೂಪಗೊಂಡಿದೆ" ಎಂಬ ಹಸಿರು ಸೇನಾನಿ ಸಂಪಾದಕ ನಟರಾಜ್ ಹುಳಿಯಾರ್ ಅವರ ಮಾತುಗಳು ಪ್ರೊಫೆಸರ್ ವ್ಯಕ್ತಿತ್ವವನ್ನು ಕೆಲವೇ ಪದಗಳಲ್ಲಿ ಕಟ್ಟಿಕೊಡುತ್ತವೆ.
ಬಿಟಿ ಹತ್ತಿಯ ದುಷ್ಪರಿಣಾಮಗಳ ಬಗ್ಗೆ ಅವರು ಮಾಡಿದ ಹೋರಾಟ,ನೀಲಗಿರಿ ಬೆಳೆಯುವುದರಿಂದ ಆಗುವ ಅಪಾಯಗಳ ಬಗ್ಗೆ ನೀಡಿದ್ದ ಎಚ್ಚರಿಕೆ,ಜಾಗತೀಕರಣದ ದುಷ್ಪರಿಣಾಮ,ಬೀಜಸ್ವಾತಂತ್ರ್ಯಹರಣ,ನಗರ ಮತ್ತು ಗ್ರಾಮ ಭಾರತದ ಬಗ್ಗೆ ಸರಕಾರಗಳ ತಾರತಮ್ಯ ಇವೆಲ್ಲಾ ದಾರ್ಶನಿಕನೊಬ್ಬ ಮಾತ್ರ ತನ್ನ ಮುಂದಿನ ಜನಾಂಗವನ್ನು ಎಚ್ಚರಿಸಬಲ್ಲ ಮುಂಗಾಣ್ಕೆಯಂತೆ ಕಾಣುತ್ತವೆ.
ಪ್ರೊಫೆಸರ್ ಎಂಡಿಎನ್ 1936 ಫೆಬ್ರವರಿ 13 ರಂದು ಮೈಸೂರಿನಲ್ಲಿ ಹುಟ್ಟಿದರು.ತಂದೆ ಮಹಂತದೇವರು ಆಗಿನ ವಿಧಾನಸಭೆ ಮತ್ತು ಪರಿಷತ್ತಿನ ಸದಸ್ಯರಾಗಿದ್ದರು.ತಾಯಿ ರಾಜಮ್ಮಣ್ಣಿ. ಮೈಸೂರಿನ ಹಾಡರ್್ವೀಕ್ ಶಾಲೆಯಲ್ಲಿ ಪ್ರಾಥಮಿಕ ವಿಧ್ಯಾಭ್ಯಾಸ.ಯುವರಾಜ ಕಾಲೇಜಿನಲ್ಲಿ ಇಂಟರ್ ಮೀಡಿಯಟ್.1954 ರಲ್ಲಿ ಮೈಸೂರು ವಿವಿಯಿಂದ ಬಿಎಸ್ಸಿ ಪದವಿ.1956 ರಲ್ಲಿ ಕಾನೂನು ಪದವಿ.1961 ರಲ್ಲಿ ಕಾನೂನು ವಿವಿಯಿಂದ ಪ್ರಥಮ ದಜರ್ೆಯಲ್ಲಿ ಎಲ್.ಎಲ್.ಎಂ ಪದವಿ.
1961-62 ರಲ್ಲಿ ನೆದರ್ ಲ್ಯಾಂಡಿನ `ಹೇಗ್ ಅಕಾಡೆಮಿ ಆಫ್ ಇಂಟರ್ ನ್ಯಾಷನಲ್ ಲಾ' ಸಂಸ್ಥೆಯಲ್ಲಿ ಫೋಡರ್್ ಫೌಂಡೇಷನ್ ಸ್ಕಾಲರ್ಶಿಫ್ ಪಡೆದು ಪೋಸ್ಟ್ ಮಾಸ್ಟರ್ ಸಂಶೋಧನೆ ಮುಗಿಸಿದರು.ಪಿಎಚ್ಡಿ ಮುಗಿಯುವ ಹಂತದಲ್ಲಿ ಮಾರ್ಗದರ್ಶಕರೊಂದಿಗೆ ಉಂಟಾದ ತಾತ್ವಿಕ ಭಿನ್ನಾಭಿಪ್ರಾಯಗಳಿಂದಾಗಿ ಅಧ್ಯಯನ ಕೈಬಿಟ್ಟು 1965 ರಲ್ಲಿ ಭಾರತಕ್ಕೆ ವಾಪಸ್ ಬಂದರು.
ಭಾರತಕ್ಕೆ ವಾಪಸ್ ಆಗುತ್ತಿದ್ದಂತೆಯೇ ತಮ್ಮ ತಾತ ಪಟೇಲ್ ನಂಜಪ್ಪನವರು ಕೊಟ್ಟಿದ್ದ ಜಮೀನಿನಲ್ಲಿ ಎಂಡಿಎನ್ ವ್ಯವಸಾಯ ಮಾಡಲು ಶುರು ಮಾಡಿದರು.ಅಷ್ಟೊತ್ತಿಗಾಗಲೇ ಗೆಳೆಯ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಹಾಗೂ ಅವರ ಹತ್ತಿರದ ಸಂಬಂಧಿ ಎನ್.ಡಿ.ಸುಂದರೇಶ್ ವ್ಯವಸಾಯ ಶುರುಮಾಡಿದ್ದರು.
ಮೈಸೂರಿನಲ್ಲಿ ಲೆವಿ ಪದ್ಧತಿ ವಿರುದ್ಧ ಎಂಡಿಎನ್ ಹೋರಾಟ ಮಾಡುವ ಮೂಲಕ `ಏಕ ವ್ಯಕ್ತಿ ರೈತ ಚಳುವಳಿ' ಶುರುವಾಯಿತು.ಲೆವಿ ಸಮಸ್ಯೆ ವಿರುದ್ಧ ಚಿಕ್ಕಮಗಳೂರಿನಲ್ಲಿ ತೇಜಸ್ವಿ,ಶಿವಮೊಗ್ಗದಲ್ಲಿ ಸುಂದರೇಶ್ ದನಿ ಎತ್ತಿದರು. ಹೀಗೆ ಒಬ್ಬ ಮನುಷ್ಯನ ರೈತ ಚಳುವಳಿ ಮೂರು ಮನುಷ್ಯರ ರೈತ ಚಳುವಳಿಯಾಗಿ ಮಾಪರ್ಾಡಾಯಿತು.ಇದು ರೈತ ಚಳುವಳಿಯ ಆರಂಭ.
1965 ರಿಂದ 1978 ರವರೆಗೆ ಕಾನೂನು ಪ್ರಾಧ್ಯಾಪಕರಾಗಿದ್ದರು.ಈ ಸಂದರ್ಭದಲ್ಲಿ ನಂಜುಂಡಸ್ವಾಮಿಯವರು ಭಾಗವಹಿಸಲಿದ್ದ ಸಭೆಯ ಕರಪತ್ರದಲ್ಲಿ ಅವರ ಶಿಷ್ಯರಾದ ಲಕ್ಷ್ಮಿಪತಿ ಬಾಬು ಮತ್ತು ರಾ.ನ.ವೆಂಕಟಸ್ವಾಮಿ `ಪ್ರೊ.ನಂಜುಂಡಸ್ವಾಮಿ' ಎಂದು ಮುದ್ರಿಸಿದರು. ಅಂದಿನಿಂದ `ಪ್ರೊಫೆಸರ್' ಎನ್ನುವುದು ನಂಜುಂಡಸ್ವಾಮಿ ಅವರ ಹೆಸರಿನ ಭಾಗವೇ ಆಗಿಬಿಟ್ಟಿತು.
ಸಮಾಜವಾದಿ ಯುವಜನಾ ಸಭಾ,ಕನರ್ಾಟಕ ವಿಚಾರವಾದಿ ಒಕ್ಕೂಟ,ನವ ನಿಮರ್ಾಣ ಕ್ರಾಂತಿ ಚಳುವಳಿ,ಪೆರಿಯಾರ್ ಒಡಗೂಡಿ ಜಾತಿವಿನಾಶ ಚಳುವಳಿ, ಡಾ.ಕವೋರ್ ಜೊತೆಸೇರಿ ಮೂಢನಂಬಿಕೆ ವಿರುದ್ಧ, 1987 ರಲ್ಲಿ ನೆಡದಿರಿ ನೀಲಗಿರಿ ಆಂದೋಲನ ಹಾಗೂ ಅಸಮಾನತೆ, ಅನ್ಯಾಯದ ವಿರುದ್ಧ ದಲಿತರು,ಶೋಷಿತರ ಪರ ಜೀವಿತಾವಧಿಯ ಕೊನೆಯವರೆಗೂ ಹೋರಾಟ ಮಾಡುತ್ತಲೇ ಬಂದವರು ರೈತ ನಾಯಕ ಪ್ರೊ. ನಂಜುಂಡಸ್ವಾಮಿ.
1989 ರಲ್ಲಿ ರೈತಸಂಘದಿಂದ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ನಡೆದ ಉಪಚುನಾವಣೆಯಲ್ಲಿ ಆರಿಸಿಬಂದು ವಿಧಾನ ಸಭೆಯಲ್ಲಿ ಅವರು ಮಾಡಿದ ಭಾಷಣಗಳು ಇಂದಿಗೂ ಮೌಲಿಕವಾಗಿವೆ. ಮೂಢಾತ್ಮವಾಗಿದ್ದ ಹಳ್ಳಿಗಳಿಗೆ ಮಾತು ಕೊಟ್ಟ ಧೀಮಂತ. ಅಧಿಕಾರಿ,ರಾಜಕಾರಣಿಯ ಎದುರು ಬೆನ್ನುಬಾಗಿಸಿ ನಿಲ್ಲುತಿದ್ದ ರೈತನಿಗೆ ನೆಟ್ಟಗೆ ನಿಲ್ಲಿಸಿ ಆತ್ಮ ವಿಶ್ವಾಸ ತುಂಬಿದ ದಾರ್ಶನಿಕ.ಜನತಾ ವಿಶ್ವ ವಿದ್ಯಾನಿಲಯದ ಮಹಾಗುರು ಪ್ರೊ.ಎಂ.ಡಿ.ನಂಜುಂಡಸ್ವಾಮಿ ಭೌತಿಕವಾಗಿ ಕಣ್ಮರೆಯಾಗಿರಬಹುದು. ಆದರೆ ಅವರ ಚಿಂತನೆ, ಆಲೋಚನೆಗಳಿಗೆ ಎಂದಿಗೂ ಸಾವಿಲ್ಲ. ಇಂದಿಗೂ ಪ್ರೊಫೆಸರ್ ನೀಡಿದ ಹಸಿರು ಟವಾಲಿನ ಧೀಕ್ಷೆಯೇ ರೈತರನ್ನು ಕಾಯುತ್ತಿರುವ ಶಕ್ತಿ. ನಾಡಿನ ರೈತರು "ಹಸಿರು ಸೇನಾನಿ"ಯನ್ನು ಅಭ್ಯಾಸಮಾಡುವ ಮೂಲಕ ಹೋರಾಟ, ಚಳವಳಿಯ ಹಾದಿಯನ್ನು ಮತ್ತಷ್ಟು ಸ್ಪಷ್ಟಪಡಿಸಿಕೊಂಡರೆ ಪ್ರೊ.ಎಂಡಿಎನ್ ಅವರ ಸ್ಮರಣೆ ಅರ್ಥಪೂರ್ಣವಾಗುತ್ತದೆ.
ಕೊನೆಯ ಮಾತು: ಹಸಿರು ಸೇನಾನಿ ಪುಸ್ತಕದ ಲೇಖನವೊಂದರಲ್ಲಿ ಟಿ.ಎನ್.ಸೀತಾರಾಮ್ ಬರೆಯುತ್ತಾರೆ " ಡಿ.ಆರ್.ನಾಗರಾಜ್,ಲಂಕೇಶ್,ನಂಜುಂಡಸ್ವಾಮಿ ಹೋಗಿಬಿಟ್ಟ ಮೇಲೆ ಒಂದು ರೆಫರೆನ್ಸ್ ಪಾಯಿಂಟೇ ಇಲ್ಲ.ಯಾರು ಈ ಮೂರು ಜನರ ಸ್ಥಾನವನ್ನು ತುಂಬುವವರು?.ಅದರಲ್ಲೂ ನಾವು ಮಡುತ್ತಿರುವುದು ಸರೀನಾ ತಪ್ಪಾ ಅಂತ ತಿಳಿದುಕೊಳ್ಳಬೇಕಾದರೆ ನಂಜುಂಡಸ್ವಾಮಿಯಂತವರು ನಮಗೆ ಹೇಳಿದರೇನೆ ಅದು ಸರಿ ಅಥವಾ ತಪ್ಪು ಅನಿಸೋದು. ಅತಂಹ ರೆಫರೆನ್ಸ್ ಪಾಯಿಂಟು ಇವತ್ತು ನಮಗೆ ಯಾರೂ ಕಾಣಿಸುತ್ತಿಲ್ಲಾ."
ಇಂತಹ ವಿಷಮ ಸನ್ನಿವೇಶದಲ್ಲಿ `ಹಸಿರು ಸೇನಾನಿ'ಯಂತಹ ಪುಸ್ತಕಗಳು ಮಾತ್ರ ಸ್ಥಗಿತಗೊಂಡಿರುವ ಹೋರಾಟ,ಚಳವಳಿ ಮತ್ತು ಜಡವಾಗಿರುವ ನಮ್ಮ ಆಲೋಚನೆಗಳನ್ನು ಬಡಿದೆಬ್ಬಿಸಬಲ್ಲವು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ