vaddagere.bloogspot.com

ಭಾನುವಾರ, ಏಪ್ರಿಲ್ 23, 2017

ಎಲ್ಲ ದೇವರ ಕೃಷಿಯಲೆ ಕಂಡ ಮಣ್ಣಿನ ಮಕ್ಕಳ ಯಶೋಗಾಥೆ
ಹಕ್ಕಿಗಳಿಗೆ ಆಸರೆಯಾದ ಕಡಕೊಳ ಜಯಪ್ಪನವರ ಸಸ್ಯಕಾಶಿ 
ಮೈಸೂರು :ಇದು ತುಂಬಾ ಅಪರೂಪ ಎನ್ನಬಹುದಾದ ಸಸ್ಯಕಾಶಿ. ತೆಂಗು,ಅಡಿಕೆ,ಬಾಳೆ,ಮಾವು,ಸಪೋಟ,ಸೀಬೆಹಣ್ಣು ಹೂವು ತರಕಾರಿ ಎಲ್ಲವೂ ಸಮೃದ್ಧವಾಗಿ ಬೆಳೆದು ನಿಂತ ಅಚ್ಚ ಹಸಿರು ತೋಟ.ಅಲ್ಲಿ ನೀರಿಗೆ ಬರವಿಲ್ಲ. ತುಂಬು ಕುಟುಂಬದ ಪ್ರೀತಿಗೆ ಕೊರತೆ ಇಲ್ಲ. ನಾಲ್ಕು ತಲೆಮಾರುಗಳ ಹೆಜ್ಜೆ ಗುರುತುಗಳನ್ನು ತೋಟದ ತುಂಬೆಲ್ಲಾ ಕಾಣಬಹುದು.
ಎಲ್ಲ ದೇವರ ತನ್ನ ಕೃಷಿಯಲಿ ಕಂಡು
ಕೃಷಿ ಪಂಡಿತನು ಆಗಿ ಮಲಗಿಹನು ಇಲ್ಲಿ
ಸ್ಮರಿಸು ಈತನ ನಡೆಯ "ಶಾಂತಿ ಬಾಳಲಿ"- ಸೇತುರಾಂ
ತೋಟದ ಮಾಲೀಕ ಕೆ.ಎಸ್.ಜಯಪ್ಪ ಅವರ ಸಮಾಧಿಯ ಮೇಲೆ ಬರೆದ ಸಾಲುಗಳು ಇವು. ಎಲ್ಲ ದೇವರನು ಕೃಷಿಯಲಿ ಕಂಡು,ತಮ್ಮ ನಾಲ್ವರು ಮಕ್ಕಳಿಗೂ ಕಾಣಿಸಿ ಅವರು ಕಣ್ಮರೆಯಾಗಿದ್ದಾರೆ. ಆದರೆ ಇಡಿ ತೋಟವನ್ನೊಮ್ಮೆ ಸುತ್ತಿಬಂದರೆ, ತೋಟದಲ್ಲಿ ನಡೆದಿರುವ ವಿಸ್ಮಯಗಳನ್ನು ನೋಡಿದರೆ ಜಯಪ್ಪನವರ ಆತ್ಮ ಅಲ್ಲೇ ಎಲ್ಲೋ ತೋಟದಲ್ಲೇ ಸುಳಿದಾಡುತ್ತಿರುವಂತೆ ಭಾಸವಾಗುತ್ತದೆ.
ಮೈಸೂರಿನಿಂದ ತುಸು ದೂರದಲ್ಲಿ ಹದಿನೈದು ಕಿ.ಮೀ. ಅಂತರದಲ್ಲಿರುವ ಕಡಕೊಳ ಗ್ರಾಮದ ರಸ್ತೆಯ ಬದಿಯಲ್ಲಿರುವ ದೇವಸ್ಥಾನದ ಬಳಿ ನಿಂತ ಯಾರನ್ನೇ ಕೂಗಿ ಕರೆದು ಜಯಪ್ಪನವರ ತೋಟ ಎಲ್ಲಿ? ಎಂದು ಕೇಳಿದರೆ ದಾರಿ ತೋರಿಸುತ್ತಾರೆ. ಅಷ್ಟರ ಮಟ್ಟಿಗೆ ಊರಿನ ಜನರಿಗೆ ಜಯಪ್ಪ ಅಂದರೆ ಪರಿಚಿತರು.
ಜಯಪ್ಪನವರು ಕಾಲವಾದ ನಂತರ ಅವರ ಪತ್ನಿ ಲಲಿತಮ್ಮ (78), ಮಕ್ಕಳಾದ ಬಾಹುಬಲಿ,ಪುರೋಷತ್ತಮ್,ರಮೇಶ್ ಮತ್ತು ಹರೀಶ್ ಅವರುಗಳು ಹೆಂಡತಿ ಮಕ್ಕಳೊಂದಿಗೆ ಸೇರಿಕೊಂಡು ಕೃಷಿಯನ್ನು ವ್ರತದಂತೆ ಧ್ಯಾನಿಸುತ್ತಾ ಬೇಸಾಯವನ್ನೇ ಬದುಕಾಗಿಸಿಕೊಂಡಿದ್ದಾರೆ.
ಅವರ ಕೃಷಿ ಪ್ರೀತಿಗೆ ಹಕ್ಕಿಪಕ್ಷಿಗಳು ಸಾಥ್ ನೀಡಿವೆ. ಚಿರತೆ,ಕಾಡುಹಂದಿ,ಹಾವು,ನವಿಲು,ಪುನುಗು ಬೆಕ್ಕು,ನೀರುನಾಯಿ ಸೇರಿದಂತೆ ಹಲವಾರು ಪ್ರಾಣಿಗಳು ಆಗಾಗ ಕಾಣಿಸಿಕೊಂಡು ಕಣ್ಮರೆಯಾಗುತ್ತವೆ. ಯಾವ ಪ್ರಾಣಿ ಪಕ್ಷಿಗಳಿಗೂ ತೊಂದರೆ ನೀಡದ ಇವರ ಪರಿಸರ ಪ್ರೀತಿಗೆ ಭೂಮಿತಾಯಿ ಹವವಾರು ಅಚ್ಚರಿಗಳನ್ನು ಕರುಣಿಸಿದ್ದಾಳೆ.
ತೋಟದಲ್ಲಿರುವ ಬಹುತೇಕ ಹಣ್ಣಿನ ಗಿಡಗಳು ಪ್ರಕೃತಿದತ್ತವಾಗಿ ಬೆಳೆದು ಬಾಗುತ್ತಿವೆ. ಬಾವಲಿ,ಹಕ್ಕಿಪಕ್ಷಿಗಳು ತಿಂದು ಹಿಕ್ಕೆಹಾಕಿದಾಗ ಆದ ಬೀಜ ಪ್ರಸರಣದಿಂದ ಸೀಬೆ,ಹಲಸು,ಜಂಬು ನೇರಳೆ,ಮಾವು,ಪರಂಗಿ ಹೀಗೆ ನೂರಾರು ಹಣ್ಣಿನ ಬೀಜಗಳು ಮೊಳಕೆ ಒಡೆದು ಮರಗಳಾಗಿವೆ. ಅವು ಬಿಡುವ ಹಣ್ಣುಗಳ ಗಾತ್ರ, ರುಚಿ,ಸ್ವಾದ ಅನುಭವಿಸಿದವರಿಗಷ್ಟೇ ಗೊತ್ತು. ಒಂದೊಂದು ಮರದ ಹಣ್ಣಿಗೂ ಒಂದೊಂದು ರುಚಿ,ಸ್ವಾದ ಇದೆ.
ಒಟ್ಟು ಇಪ್ಪತ್ತಾರು ಎಕರೆ ಪ್ರದೇಶದ ವ್ಯಾಪ್ತಿಯಲ್ಲಿರುವ ತೋಟದಲ್ಲಿ 900 ಕ್ಕೂ ಹೆಚ್ಚು ತೆಂಗು,3000 ಕ್ಕೂ ಹೆಚ್ಚು ಅಡಿಕೆ ಮರಗಳಿವೆ. ಐವತ್ತು ವರ್ಷ ಮೀರಿದ ಸಪೋಟ ಗಿಡಗಳಿವೆ. ಉಳಿದಂತೆ ಹಕ್ಕಿಪಕ್ಷಿಗಳ ಬೀಜ ಪ್ರಸರಣದಿಂದ ಆದ ನೂರಾರು ಸೀಬೆ,ಅಲಸು,ಮಾವು,ಜಂಬು ನೇರಳೆ,ಚಕೋತ ಹೀಗೆ ಹತ್ತಾರು ತಳಿಯ ಹಣ್ಣಿನ ಗಿಡಮರಗಳಿವೆ.
ವರ್ಷಕ್ಕೆ ಒಂದೆರಡು ಬಾರಿ ಉಳುಮೆ, ಕಳೆಗಿಡಗಳನ್ನು ಕತ್ತಿಯಲ್ಲಿ ಸವರಿ ಮುಚ್ಚಿಗೆ ಇದೆ ಜಮೀನಿಗೆ ಗೊಬ್ಬರ. ಅರಿಶಿನ ಬಾಳೆಗೆ ಸ್ವಲ್ಪ ರಾಸಾಯನಿಕ ಗೊಬ್ಬರ ಹಾಕಲಾಗುತ್ತಿತ್ತು ಈಗ ಅದನ್ನು ನಿಲ್ಲಿಸಿ ಸಾವಯವ ಗೊಬ್ಬರ ಕೊಡಲಾಗುತ್ತಿದೆ.
ಜಯಪ್ಪನವರ ಕಿರಿಯ ಮಗ ಹರೀಶ್ ಮತ್ತು ರಮೇಶ್ ಅವರೊಂದಿಗೆ ತೋಟ ಸುತ್ತುತ್ತಿದ್ದರೆ ತೋಟ ಕಟ್ಟುವಾಗಿನ ಆರಂಭದ ದಿನಗಳಿಂದ ಇಂದಿನ ಕೃಷಿ ಸಂಕಷ್ಟದ ಬಗ್ಗೆ ಎಳೆಎಳೆಯಾಗಿ ವಿವರಿಸುತ್ತಾ ಪ್ರತಿ ಗಿಡ ಮರದ ಇತಿಹಾಸವನ್ನು ಹೇಳುತ್ತಾ ಹೋಗುತ್ತಾರೆ.
"ನಮ್ಮ ತಾತ ಸಂಜೀವಯ್ಯ ಅಂತ. ಅವರು ರಾಜರ ಕಾಲದಲ್ಲಿ ಡಿಸಿ ಕಚೇರಿಯಲ್ಲಿ ಹೆಡ್ ಕ್ಲಕರ್್ ಆಗಿದ್ದವರು. ಆ ಕಾಲದಿಂದಲೂ ಇಲ್ಲಿ ವ್ಯವಸಾಯ ಮಾಡುತ್ತಾ ಬಂದಿದ್ದೇವೆ. ನಮ್ಮ ತಂದೆ ಜಯಪ್ಪ. ಅವರಿಗೆ ನಾವು ನಾಲ್ವರು ಮಕ್ಕಳು. ಸುತ್ತಮತ್ತಲಿನ ಜನ ಅವರನ್ನು ಲ್ಯಾಂಡ್ ಲಾಡರ್್ ಜಯಪ್ಪ ಅಂತನೇ ಕರೆಯುತ್ತಿದ್ದರು. ಗ್ರಾಮದಲ್ಲಿ ಚಿಲ್ಲರೆ ಅಂಗಡಿ ಇಟ್ಟುಕೊಂಡು ಒಂದಷ್ಟು ಹಣ ಸಂಪಾದಿಸಿ ತಾತ ಕೊಟ್ಟ ಭೂಮಿ ಜೊತೆಗೆ ಮತ್ತಷ್ಟು ಭೂಮಿ ಕೊಂಡುಕೊಂಡರು". ಅಂತ ಹರೀಶ್ ಮಾತಿಗೆ ಆರಂಭಿಸಿದರು.
ಆ ಕಾಲದಲ್ಲಿ ಇದನ್ನು ಭೂತದ ಜಮೀನು ಅಂತ ಜನ ಕರೆಯುತ್ತಿದ್ದರು. ಕಲ್ಲುಗುಡ್ಡ ಇದು. ನಾಲ್ಕು ತಿಂಗಳು ಬುಲ್ಡೋಜರ್ನಲ್ಲಿ ಕಲ್ಲು ಕೀಳಿಸಿ ಸಮತಟ್ಟು ಮಾಡಿ ಬತ್ತ,ಕಬ್ಬು ಬೆಳಿತಾ ಇದ್ರು. ಅಲೆಮನೆ ಇತ್ತು, ಬೆಲ್ಲ ಮಾಡ್ತಾ ಇದ್ರು. ಆಗಲ್ಲೂ ಇಲ್ಲಿ ಹಳ್ಳ ಹರಿಯುತ್ತಿತ್ತು.ನಮಗೆ ಎಂದೂ ನೀರಿಗೆ ಮಾತ್ರ ತೊಂದರೆ ಆಗಿಲ್ಲ.ಇದನ್ನು ಹುಚ್ಚ್ಎಣ್ಣೆ ಹೊಳೆ ಅಂತ ಕರೆಯುತ್ತಿದ್ದರು. ಮಳೆ ಜೋರಾದರೆ ಮಳೆನೀರು,ಮೈಸೂರು ನೀರು,ಕೆಆರ್ಎಸ್ ನೀರು ಎಲ್ಲಾ ಸೇರಿ ಹುಚ್ಚು ಹಚ್ಚಾಗಿ ತುಂಬಿ ಹರಿಯುತ್ತಿತ್ತು. ಅದಕ್ಕೆ ಇದನ್ನು ಹುಚ್ಚ್ಎಣ್ಣೆ ಹೊಳೆ ಅಂತ ಕರೆಯಲಾಗುತ್ತದೆ ಎನ್ನುತ್ತಾ ಹಳ್ಳದಲ್ಲಿ ಹರಿಯುತ್ತಿದ್ದ ನೀರನ್ನು ತೋರಿಸಿ ಹೇಳಿದರು. 
ಒಂದು ತೆಂಗಿನ ಕಾಯಿ ಕೊಡುವ ವಿಚಾರದಲ್ಲಿ ದಾಯಾದಿಗಳೊಂದಿಗೆ ಆದ ಜಗಳ ನಮ್ಮಪ್ಪ ತೆಂಗಿನ ತೋಟಮಾಡಲು ಪ್ರೇರಣೆ ನೀಡಿತು.ಆಗ ಗುಂಡ್ಲುಪೇಟೆಯ ಆಲೂರಿನ ಶ್ರೀಕಂಠಶೆಟ್ಟರ ತೋಟದ ನರ್ಸರಿಯಿಂದ ತಂದು ನೆಟ್ಟ ತೆಂಗಿನ ಗಿಡಗಳು ಇವು. ಆ ಕಾಲದ ಹಿರಿಯ ರಾಜಕಾರಣಿಗಳೊಂದಿಗೂ ನಮ್ಮಪ್ಪನಿಗೆ ಗೆಳತನ ಇತ್ತು ಎಂದು ನೆನಪಿಸಿಕೊಂಡರು ಹರೀಶ್.
ಜೂಜಾಟದಂತಾದ ಕೃಷಿ : ತೋಟದಿಂದ ವಾಷರ್ಿಕ ಎಂಭತ್ತು ಸಾವಿರ ತೆಂಗಿನ ಕಾಯಿಗಳು ಸಿಗುತ್ತವೆ. ಕಳೆದ ಬಾರಿ ಇದೆ ಸಮಯದಲ್ಲಿ ಒಂದು ಕಾಯಿಗೆ ಒಂಭತ್ತು ರೂಪಾಯಿ ಇತ್ತು.ಈ ಬಾರಿ ಅದೆ ಕಾಯಿಗೆ ಹದಿನೆಂಟು ರೂಪಾಯಿ ಇದೆ. ನುಸಿರೋಗ ಬಂದು ಇಳುವರಿ ಕಡಿಮೆಯಾಗಿದೆ.
ಅಡಿಕೆ ಮಾಚರ್್ನಲ್ಲಿ ಕ್ವಿಂಟಾಲ್ಗೆ ಇಪ್ಪತ್ತಾರುವರೆ ಸಾವಿರಕ್ಕೆ ಮಾರಾಟ ಮಾಡಿದೆವು.ನಾವು ಮಾರಾಟ ಮಾಡಿದ ಒಂದೆ ತಿಂಗಳಲ್ಲಿ ಕ್ವಿಂಟಾಲ್ಗೆ ಐವತ್ತೈದು ಸಾವಿರಕ್ಕೆ ಏರಿಕೆಯಾಯಿತು. ಇದನ್ನು ನೋಡಿ ಮತ್ತೆ ಒಂದಷ್ಟು ಉಳಿದ ಅಡಿಕೆಯನ್ನು ಮೊನ್ನೆ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಮತ್ತೆ ಕ್ವಿಂಟಾಲ್ಗ್ ಮೂವತ್ತಾರು ಸಾವಿರ ರೂಪಾಯಿಗೆ ಕುಸಿತ ಕಂಡಿದೆ.
ಇದನ್ನು ರೈತ ಯಾರಿಗೆ ಹೇಳಬೇಕು. ವ್ಯವಸಾಯ ಜೂಜಾಟದಂತೆ ಆಗಿಬಿಟ್ಟಿದೆ.ಶೋಕಿಗಾಗಿ ಕೃಷಿ ಮಾಡುವುದು ಬೇರೆ.ಇಲ್ಲೇ ಇದ್ದು ಇದರಿಂದಲ್ಲೇ ಸಂಪಾದನೆ ಮಾಡಿ ಇಲ್ಲೇ ಸುರಿದು ಕೃಷಿ ಮಾಡುವುದು ಬೇರೆ.ರೈತನ ಕಷ್ಟ ಎನೂ ಅಂತ ಅಪ್ಪಟ ರೈತನಿಗೆ ಮಾತ್ರ ಅರ್ಥವಾಗುತ್ತದೆ ಎಂದರು.
ಸರಕಾರ ಬಡವರಿಗೆ ಅಕ್ಕಿಭಾಗ್ಯ ಕರುಣಿಸಿದ ಮೇಲೆ ಹಳ್ಳಿಗಳಲ್ಲಿ ಸೋಮಾರಿ ಕಟ್ಟೆಗಳು ತುಂಬಿತುಳುಕುತ್ತಿವೆ.ಹೆಂಡದ ಅಂಗಡಿಗಳು ರಶ್ ಆಗಿವೆ.ಜಮೀನಿಗೆ ದುಡಿಯಲು ಬರುವವರು ಶ್ರಮವಹಿಸಿ ಕೆಲಸಮಾಡಲ್ಲ. ಅದಕ್ಕೆ ಆರು ವರ್ಷದಿಂದ ನಾವು ಕೂಲಿಕೆಲಸಕ್ಕೆ ಆಳುಗಳನ್ನೇ ಕಡೆಯುವುದಿಲ್ಲ.ಹೆಂಡತಿ ಮಕ್ಕಳು ಎಲ್ಲಾ ಸೇರಿಕೊಂಡು ಕೆಲಸಮಾಡಿಮುಗಿಸುತ್ತೇವೆ.
ಕೆಇಬಿಯವರು ಮಧ್ಯರಾತ್ರಿ ಕರೆಂಟ್ ಕೊಡುತ್ತಾರೆ.ದಿನಕ್ಕೆ ಮೂರು ಗಂಟೆ ಮಾತ್ರ.ಅದೂ ಬಂದ್ರೆ ಬಂತು.ಇಲ್ಲ ಅಂದ್ರೆ ಇಲ್ಲ.ಚಿರತೆ ಕಾಡುಹಂದಿ ಹಾವಳಿ ತಪ್ಪಿಸಿಕೊಂಡು ಜಮೀನಿಗೆ ನೀರು ಹಾಯಿಸಬೇಕು.ಇದೆಲ್ಲ ಸವಾಲುಗಳನ್ನು ನಾವು ಎದುರಿಸುತ್ತಿದ್ದೇವೆ ಎಂದು ಹರೀಶ್ ತಮ್ಮ ಕೃಷಿ ಅನುಭವಗಳನ್ನು ತೆರೆದಿಟ್ಟರು.
ವ್ಯವಸಾಯದಲ್ಲಿ ಇಷ್ಟೆಲ್ಲಾ ಸಂಕಷ್ಟಗಳಿದ್ದರೂ ನಮ್ಮ ಕೊನೆಯ ಉಸಿರು ನಿಲ್ಲುವವರೆಗೂ ಕೃಷಿಯನ್ನೇ ಮಾಡುತ್ತೇವೆ. ಜೀವನಕ್ಕೆ, ಊಟ ಬಟ್ಟೆಗೆ,ನೆಮ್ಮದಿಗೆ ಭಂಗ ಬಂದಿಲ್ಲ.ಚೆನ್ನಾಗಿಯೇ ಇದ್ದೇವೆ.ಮಕ್ಕಳನ್ನು ಇಂದಿನ ದುಬಾರಿ ಶುಲ್ಕದ ಶಾಲಾಕಾಲೇಜುಗಳಿಗೆ ಸೇರಿಸುವ ಸಲುವಾಗಿ ಸ್ವಲ್ಪ ಸಾಲಸೋಲ ಮಾಡಿಕೊಂಡಿದ್ದೇವೆ. ನಮ್ಮ ಬದುಕೇ ಬೇಸಾಯ ಆಗಿರುವುದರಿಂದ ಇದರಲ್ಲೇ ನೆಮ್ಮದಿ ಕಂಡುಕೊಂಡಿದ್ದೇವೆ. ನಮ್ಮ ಮಕ್ಕಳು ಅಷ್ಟೇ ಎಂಜಿನಿಯರಿಂಗ್ ಓದುತ್ತಿದ್ದರೂ ತೋಟಕ್ಕೆ ಬಂದರೆ ಅಪ್ಪಟ ರೈತನ ಮಕ್ಕಳಂತೆ ಮಣ್ಣಿನಲ್ಲಿ ನಿಂತು ದುಡಿಯುತ್ತಾರೆ ಎಂದಾಗ ಅವರ ರಕ್ತದಲ್ಲೇ ಕೃಷಿ ಪ್ರೀತಿ ಇರುವುದು ಅವರ ಮಾತಿನಲ್ಲಿ ಕಾಣುತ್ತಿತ್ತು.
ಹಕ್ಕಿಪಕ್ಷಿಗಳ ಕೊಡುಗೆ : "ಈ ಸೀಬೆಯ ಹಣ್ಣಿನ ರುಚಿ ನೋಡಿ ಅಂತ ಗಿಡದಿಂದ ಹಣ್ಣೊಂದನ್ನು ಕಿತ್ತುಕೊಟ್ಟರು. ಅದು ಸುಮಾರು ಅರ್ಧ ಕೆಜಿಗೂ ಹೆಚ್ಚು ತೂಕ ಇತ್ತು. ಇದು ಯಾವ ತಳಿ ಎಂದೆ. ಅಯ್ಯೋ ಇದು ಯಾವ ತಳಿಯೂ ಅಲ್ಲ ಪಕ್ಷಿಗಳು ಹಿಕ್ಕೆ ಹಾಕಿದಾಗ ಅದರೊಂದಿಗೆ ಬಿದ್ದ ಬೀಜದಿಂದ ತಾನಾಗಿ ಹುಟ್ಟಿದ ಮರ ಇದು. ಒಂದೊಂದು ಹಣ್ಣು ಅರ್ಧ ಕೆಜಿಗೂ ಹೆಚ್ಚು ತೂಕ ಇರುತ್ತವೆ. ತುಂಬಾ ರುಚಿಯಾಗಿರುತ್ತವೆ ಎಂದು ಹತ್ತಾರು ಮರಗಳಿಂದ ಹಣ್ಣುಗಳನ್ನು ಕಿತ್ತು ತಿನ್ನಲು ಕೊಟ್ಟರು.
ಮಾರುಕಟ್ಟೆಯಲ್ಲಿ ಮಲೇಶಿಯಾದಿಂದ ಬಂದ ಕೆಜಿ ಗೋವಾ ದಪ್ಪ ಸೀಬೆ ನೋಡಿ ಬೆರಗಾಗಿದ್ದ ನಮಗೆ ನಾಟಿ ತಳಿಯ ಹಕ್ಕಿಯ ಹಿಕ್ಕೆಯಲ್ಲಿ ಬಿದ್ದ ಬೀಜದಿಂದ ಪ್ರಕೃತಿಯಲ್ಲಿ ನಡೆದ ವಿಸ್ಮಯವನ್ನು ನೋಡಿ ಅಚ್ಚರಿಯಾಯಿತು.
ಅದೇ ರೀತಿ ದಪ್ಪ ದಪ್ಪ ಜಂಬೂ ನೇರಳೆ, ನಾನಾ ಬಣ್ಣದ, ಗಾತ್ರದ ಅಲಸು ಎಲ್ಲವೂ ಹಕ್ಕಿಗಳ ಬೀಜ ಪ್ರಸರಣದಿಂದ ಬೆಳೆದು ಗಿಡದ ತುಂಬಾ ಹಣ್ಣು ಬಿಟ್ಟು ತೂಗುತ್ತಿದ್ದವು. ಯಾವುದೆ ಕಸಿ ಮಾಡದ,ಪ್ರಕೃತಿಯಲ್ಲಿ ತಾನೇ ತಾನಾಗಿ ಬೆಳೆದು ಗಾತ್ರ ಮತ್ತು ರುಚಿಯಲ್ಲಿ ಗಮನಸೆಳೆಯುತ್ತಿರುವ ಹಣ್ಣಿನ ಗಿಡಗಳ ಬಗ್ಗೆ ತೋಟಗಾರಿಕಾ ವಿಶ್ವ ವಿದ್ಯಾನಿಲಯದ ವಿಜ್ಞಾನಿಗಳು ಅಧ್ಯಯನ ಮಾಡಬೇಕು.
ತೋಟದ ಮತ್ತೊಂದು ವಿಶೇಷವೆಂದರೆ ಬಹುತೇಕ ಗಿಡದ ಹಣ್ಣುಗಳನ್ನು ಇವರು ಕೀಳುವುದೆ ಇಲ್ಲ. ಹಕ್ಕಿ ಪಕ್ಷಿಗಳಿಗೂ ಆಹಾರ ಬೇಡವೇ ತಿನ್ನಲಿ ಬಿಡಿ ಎನ್ನುತ್ತಾರೆ. ಹಣ್ಣುಗಳ ಫಸಲನ್ನು ಹತ್ತು ಹನ್ನೆರಡು ಸಾವಿರಕ್ಕೆ ಕೇಳುತ್ತಾರೆ. ಅದರ ಬದಲು ತೋಟಕ್ಕೆ ಬಂದ ಅತಿಥಿಗಳು, ಪಕ್ಷಿಗಳು, ನಮ್ಮ ಮನೆಮಂದಿಯೆಲ್ಲ ತಿಂದು ಸಂತೋಷಪಡಲಿ ಅಷ್ಟೇ ಸಾಕು ಎನ್ನುತ್ತಾರೆ.
ತೆಂಗಿನ ಮರದಿಂದ ಬಿದ್ದ ಕಾಯಿಗಳು ಅಲ್ಲೇ ಸಸಿಯಾಗಿ ಮರವಾಗಿ ಹೊಂಬಾಳೆ ಹೊಡೆದು ಎಳನೀರು ಕಟ್ಟುತ್ತಿವೆ.ಹಲಸಿನ ಮರದ ಕೆಳಗೆ ನೂರಾರು ಹಲಸಿನ ಸಸಿಗಳು ಹುಟ್ಟಿಕೊಂಡಿವೆ. ಅಲ್ಲಲ್ಲಿ ಮಾವು,ಜಂಬೂ ನೇರಳೆ, ಬೇವಿನ ಸಸಿಗಳು ಹುಟ್ಟಿವೆ. ಇವರು ಯಾವುದನ್ನು ಕೀಳುವುದಿಲ್ಲ. ಇಲ್ಲಿ ಸಹಜವಾಗಿ ಹುಟ್ಟುವ ಸಸಿಗಳು ಸಾವಿರಾರು ಅದರಲ್ಲಿ ಬೆಳೆಯುವ ಗಿಡಗಳು ನೂರಾರು. ಇದನ್ನು ನೋಡಿದರೆ ಪ್ರಕೃತಿಯ ಮುಂದೆ ಮನುಷ್ಯ ಕುಬ್ಜನಾಗಿ ಕಾಣುತ್ತಾನೆ.
ಹಕ್ಕಿಗಳ ಚಿಲಿಮಿಲಿ : ಇಡೀ ತೋಟ ಹಕ್ಕಿಗಳಿಗೆ ಅಪ್ಯಾಯಮಾನವಾಗಿದೆ. ಗಿಳಿ,ಗೊರವಂಕ,ಹಾನರ್್ ಬಿಲ್ ಸೇರಿದಂತೆ ನೂರಾರು ಜಾತಿಯ ಹಕ್ಕಿಗಳು ತೋಟದಲ್ಲಿ ಮನೆಮಾಡಿಕೊಂಡು ಸಂತಾನಾಭಿವೃದ್ಧಿ ಮಾಡಿಕೊಂಡು ಹೋಗುತ್ತವೆ. ಪ್ರತಿ ಬೇಸಿಗೆಯಲ್ಲೂ ಬಣ್ಣ ಬಣ್ಣದ ಹಕ್ಕಿಗಳು ಬಂದು ಹೋಗುವುದನ್ನು ತಾವು ಗಮನಿಸುತ್ತಿರುವುದಾಗಿ ಹರೀಶ್ ಹೇಳುತ್ತಾರೆ.
ಬೋಳು ತೆಂಗಿನ ಮರ ಕಡಿಯದೆ ಬಿಟ್ಟರೆ ಅಲ್ಲಿ ಮೊದಲು ಗಿಳಿ,ನಂತರ ಹಾನರ್್ ಬಿಲ್ ಆ ಮೇಲೆ ಜೇನುನೊಣಗಳು ಒಂದಾದ ನಂತರ ಮತ್ತೊಂದು ಬಂದು ಹೋಗುತ್ತಿರುವುದನ್ನು ಕಂಡಿರುವುದಾಗಿ ಹೇಳುತ್ತಾರೆ.
ಈ ಬಾರಿ ಮಳೆಯಾಗದೆ ಎಲ್ಲಕಡೆ ಕೆರೆಕಟ್ಟೆಗಳು ಬತ್ತಿ ಹೋದ ಪರಿಣಾಮ ತೋಟಕ್ಕೆ ನೀರು ಹಾಯಿಸಲು ಹೆಗಲ ಮೇಲೆ ಎಲಕೊಟ್ಟು ಹಾಕಿಕೊಂಡು ಹೊರಟರೆ ಇನ್ನೂರಕ್ಕೂ ಹೆಚ್ಚು ಬಿಳಿಯ ಬಾತುಕೋಳಿಗಳು ಹಿಂಬಾಲಿಸಿಕೊಂಡು ಬರುತ್ತವೆ. ನವಿಲುಗಳು ಬರುತ್ತವೆ. ಎರಡು ತಿಂಗಳ ಹಿಂದೆ ಜಿಂಕೆಯೊಂದು ಕಾಣಿಸಿಕೊಂಡಿತ್ತು. ಅಲ್ಲಲ್ಲಿ ಜೇನು ಕಟ್ಟಿವೆ.ಹಳ್ಳದಲ್ಲಿ ನೀರುನಾಯಿಗಳಿವೆ.ಹಾವುಗಳಿವೆ ನಾವು ಯಾವುದಕ್ಕೂ ತೊಂದರೆ ಕೊಡುವುದಿಲ್ಲ.ಅದೂ ಅವುಗಳಿಗೆ ಗೊತ್ತಾಗಿದೆ.ಅದಕ್ಕಾಗಿಯೇ ನಮ್ಮ ತೋಟದಲ್ಲಿ ಅವು ನಮ್ಮೆದುರೆ ನಿರ್ಭಯವಾಗಿ ಸುತ್ತುತ್ತಾ, ತಿರುಗಾಡುತ್ತಾ ಇರುತ್ತವೆ ಎನ್ನುತ್ತಾರೆ ಹರೀಶ್.
ದಾಯಾದಿ ಜಗಳ ಇಲ್ಲ : ಹಿಂದೂ ಸಾದರ್ ಎಂಬ ಪಂಗಡದಲ್ಲಿ ಗುರುತಿಸಿಕೊಂಡಿರುವ ಜಯಪ್ಪನವರ ಮಕ್ಕಳು ಈಗ ಎಲ್ಲರೂ ತಮ್ಮ ತಮ್ಮ ಪಾಲಿನ ಜಮೀನನ್ನು ಭಾಗ ಮಾಡಿಕೊಂಡಿದ್ದಾರೆ. ಆದರೆ ಎಂದೂ ಯಾರು ಇಷ್ಟಗಲ ಭೂಮಿಗೆ ಕಿತ್ತಾಟ ಮಾಡಿಕೊಂಡಿಲ್ಲ.ಪರಸ್ಪರ ನೆರವಾಗುತ್ತಾ, ಕೃಷಿ ಕೆಲಸಗಳಲ್ಲಿ ಭಾಗಿಯಾಗುತ್ತಾರೆ.ಪ್ರಸಿದ್ಧ ನಟ ಮುಖ್ಯಮಂತ್ರಿ ಚಂದ್ರು ಅವರ ಹತ್ತಿರದ ಸಂಬಂಧಿಕರಾದ ಇವರು ಹೆಂಗಸು ಮಕ್ಕಳೆನ್ನದೆ ಜಮೀನಿನಲ್ಲಿ ದುಡಿಯುವುದನ್ನು ನೋಡಿದರೆ ಮಣ್ಣಿನ ಮೇಲೆ ಅವರಿಗಿರುವ ಮಮತೆ ಮತ್ತು ಕಾಳಜಿ ದರ್ಶನವಾಗುತ್ತದೆ.
ತಂದೆಯಿಂದ ಬಂದ ಸಂಸ್ಕಾರ ಎಲ್ಲ ಮಕ್ಕಳ ರಕ್ತದಲ್ಲಿ ಹರಿಯುತ್ತಿರುವುದು ಅವರ ಮಾತುಗಳನ್ನು ಆಲಿಸುತ್ತಿದ್ದರೆ ಗೊತ್ತಾಗಿಬಿಡುತ್ತದೆ.ಕಳೆದ ಆರು ವರ್ಷಗಳಿಂದ ಕೂಲಿ ಆಳುಗಳನ್ನು ಕರೆಯದೆ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಂಡು ಕೃಷಿ ಮಾಡುತ್ತಿರುವ ಇವರ ಬದ್ಧತೆ ರೈತರಿಗೆಲ್ಲ ಬಂದು ಬಿಟ್ಟರೆ ಭೂಮಿ ನಂದನವನವಾಗಿಬಿಡುತ್ತದೆ.
ತೆರೆದ ಬಾವಿಗೆ ಅಳವಡಿಸಿರುವ ಕಿಲರ್ೋಸ್ಕರ್ ಪಂಪ್, ಸ್ಟಾರ್ಟರ್, ಕಬ್ಬಿಣದ ಪೈಪುಗಳು, ಹಳೆಯ ಬಾವಿ ಎಲ್ಲವನ್ನೂ ನೋಡುತ್ತಿದ್ದರೆ 60-70 ರ ದಶಕದ ಸಮೃದ್ಧ ಕೃಷಿ ಜೀವನ ನೆನಪಾಗುತ್ತದೆ.ನಾಲ್ಕು ತಲೆಮಾರುಗಳು ಕೃಷಿಯನ್ನೇ ನಂಬಿ ಅದನ್ನೇ ಧ್ಯಾನದಂತೆ ಮಾಡುತ್ತಾ ಬಂದಿದ್ದಾರೆ. ಸಮಾಧಿಯ ಮೇಲೆ ಬರೆದಿರುವಂತೆ ಎಲ್ಲ ದೇವರ ಕೃಷಿಯಲೆ ಕಂಡ ತಂದೆ ಜಯಪ್ಪನವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಿರುವುದು ಕಣ್ಣಿಗೆ ಕಾಣುತ್ತದೆ. ತಂದೆಗೆ ತಕ್ಕ ಮಕ್ಕಳಾಗಿ ಹಸಿರನ್ನೇ ಉಸಿರನ್ನಾಗಿಸಿಕೊಂಡು ಬದುಕುತ್ತಿರುವ ಇವರು ಸರಕಾರ ಕೊಡುವ ಕೃಷಿಪಂಡಿತ, ಪಾಮರ ಎಲ್ಲ ಪ್ರಶಸ್ತಿಗಳನ್ನು ಮೀರಿ ನಿಂತವರಂತೆ ಕಾಣುತ್ತಾರೆ. ಹೆಚ್ಚಿನ ಮಾಹಿತಿಗೆ ಹರೀಶ್ ಕಡಕೊಳ 9845796332, ಪುರುಷೋತ್ತಮ್ 9591245444 ಅವರನ್ನು ಸಂಪಕರ್ಿಸಿ.








ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ