ಸಿಲ್ಕ್ "ಸಿರಿ" ನಾಗಭೂಷಣ: ರೈತರಿಗೆ ಘನತೆ ತಂದ ಕೃಷಿಕ
ಮೈಸೂರು : ಬಡತನ,ಸೋಲು,ಅಪಮಾನಗಳನ್ನೇ ಸವಾಲಾಗಿ ಸ್ವೀಕರಿಸಿ "ಸಿರಿಕಲ್ಚರ್" ನಿಂದ "ಸಿರಿವಂತ"ರಾದ ಯಶಸ್ವಿ ರೈತರೊಬ್ಬರ ಕಥಾನಕ ಇದು.
ಹದಿನೈದು ವರ್ಷಗಳ ಹಿಂದೆ ಹತ್ತು ರೂಪಾಯಿ ದಿನಗೂಲಿ ನೌಕರರಾಗಿದ್ದ ಕೆ.ಬಿ.ನಾಗಭೂಷಣ್ ಅವರನ್ನು ಕೆಲಸದ ಮೇಲಿನ ಶ್ರದ್ಧೆ,ಶಿಸ್ತು ಮತ್ತು ಕೃಷಿ ಅನುಭವ ಮಾದರಿ ರೈತರನ್ನಾಗಿ ರೂಪಿಸಿದೆ.
"ರಾಜಕಾರಣಿಯ ಮಗ ರಾಜಕಾರಣಿಯಾಗುತ್ತಾನೆ. ಅಧಿಕಾರಿಯ ಮಗ ಅಧಿಕಾರಿಯಾಗುತ್ತಾನೆ. ರೈತನ ಮಗ ಯಾಕೆ ರೈತನಾಗಬಾರದು?" ಎಂದು ಕೇಳುವ ನಾಗಭೂಷಣ ತಮ್ಮ ಮಗ ಕಿರಣ್ ಅವರನ್ನು ಮಾದರಿ ರೈತನನ್ನಾಗಿಸಿ ರೈತ ಬದುಕಿಗೆ ಘನತೆ ಗೌರವವನ್ನು ತಂದುಕೊಟ್ಟ ಕೃಷಿಕ.
ಮೈಸೂರಿನಿಂದ ತಿ.ನರಸೀಪುರಕ್ಕೆ ಹೋಗುವ ಹಾದಿಯಲ್ಲಿ ಬರುವ ಚಿಕ್ಕಳ್ಳಿ ಸಮೀಪ ಮೊಸಂಬಾಯನಹಳ್ಳಿ ರಸ್ತೆಯಲ್ಲಿ "ಕಿರಣ್ ಸಿರಿ ಫಾರಂ" ಘಟಕ ಒಂದು. ಮೇಗಳಾಪುರದ ಸಮೀಪ "ಕಿರಣ್ ಸಿರಿ ಫಾರಂ" ಘಟಕ ಎರಡು.ದುದ್ದಗೆರೆ ಬಳಿ ಮತ್ತೊಂದು ತೋಟಗಾರಿಕೆ ಬೇಸಾಯ ಮಾಡಲು "ಕಡ್ಲೆ ಮನೆ ತೋಟ" ಎಂಬ ಘಟಕ ಮೂರು. ಹೀಗೆ ಮೂರು ಮಾದರಿ ತೋಟಗಳನ್ನು ರೂಪಿಸುವ ಮೂಲಕ ರೇಷ್ಮೆ ಕೃಷಿಯಲ್ಲಿ ಹೆಚ್ಚು ಆದಾಯಗಳಿಸಿ "ಸಿಲ್ಕ್" ನಾಗಭೂಷಣ್ ಎಂದೇ ಚಿರಪರಿಚಿತರಾಗಿದ್ದಾರೆ.
ಮಗ ಕಿರಣ್ ಎಂಬಿಎ,ಬಿಬಿಎಂ,ಬಿಇ ಓದಿಕೊಂಡು ರೇಷ್ಮೆ ಕೃಷಿಯನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ.ಇನ್ಫ್ಪೋಸಿಸ್ನಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿದ್ದ ಸೊಸೆ ಮದುವೆ ನಂತರ ಕೆಲಸಕ್ಕೆ ಗುಡ್ ಬೈ ಹೇಳಿ ಪತಿ ಕಿರಣ್ ಅವರ ಕೃಷಿಗೆ ಸಾಥ್ ನೀಡುತ್ತಾರೆ. ರೈತರ ಮಕ್ಕಳಿಗೆ ಮದುವೆಯಾಗಲು ಹೆಣ್ಣುಕೊಡಲು ಯಾರು ಮುಂದೆ ಬರುವುದಿಲ್ಲ ಎಂಬ ಮಾತನ್ನೇ ಕೇಳುತ್ತಿದ್ದ ನಮಗೆ ನಾಗಭೂಷಣ್ ಅವರ ಸಂಸಾರವನ್ನು ನೋಡಿ ಅಚ್ಚರಿ ಮತ್ತು ರೈತ ಬದುಕಿನ ಬಗ್ಗೆ ಹೆಮ್ಮೆ ಅನಿಸಿತು.
ಎಸ್ಸೆಸ್ಸೆಲ್ಸಿ ಫೇಲಾದ ನಾಗಭೂಷಣ್ ಕಾಖರ್ಾನೆಯೊಂದರಲ್ಲಿ ನೌಕರರಾಗಿ, ಟ್ರಾವೆಲ್ ಏಜೆನ್ಸಿ ನಡೆಸಿ, ನಂತರ ಅದರಿಂದ ಬಂದ ಲಾಭದ ಹಣದಲ್ಲಿ ಜಮೀನು ಖರೀದಿಸಿ ರೇಷ್ಮೆ ಕೃಷಿಕರಾಗಿ ಬೆಳೆದು ಬಂದ ಜೀವನ ಪಯಣವೇ ಎಂತಹವರಿಗೂ ಸ್ಪೂತರ್ಿ ನೀಡುವ ಮೂಲಕ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುತ್ತದೆ.
"ವಿಧ್ಯಾಭ್ಯಾಸ ಕಡಿಮೆ.ಆದರೆ ಸೆಂಟ್ರಲ್ ಸಿಲ್ಕ್ ಬೋರ್ಡನವರು ನನ್ನನ್ನು ಡಾ.ನಾಗಭೂಷಣ್ ಎಂದು ಕರೆಯುತ್ತಾರೆ" ಎನ್ನುವ ಇವರನ್ನು ರೇಷ್ಮೆಕೃಷಿಯಲ್ಲಿನ ಅನುಭವ ಕೃಷಿವಿಜ್ಞಾನಿಯನ್ನಾಗಿ ರೂಪಿಸಿದೆ.
ಅವರದೇ ಮಾತುಗಳಲ್ಲಿ ಅವರ ಜೀವನಾನುಭವಗಳನ್ನು ಕೇಳಿ...
ವಲಸೆ ಬಂದವರು : " ನಾವು ಮೂಲತಃ ಕೊಡಗಿನ ಸೋಮವಾರಪೇಟೆ ನಿವಾಸಿಗಳು. ನಮ್ಮ ತಾತ ಮುತ್ತಾತಂದಿರು ಸಂತೆ ಸಂತೆಗೆ ಹೋಗಿ ಕಡ್ಲೆ ವ್ಯಾಪಾರ ಮಾಡಿಕೊಂಡು ಬೆಳೆದವರು. ಸ್ವಾತಂತ್ರ ಬಂದ ಕಾಲದಲ್ಲಿ ತಾತ 150 ಎಕರೆ ಕಾಫಿ ತೋಟದ ಮಾಲೀಕರಾಗಿದ್ದರು. ನಮ್ಮ ತಂದೆ ನಮ್ಮ ತಾತನಿಗೆ ಒಬ್ಬನೆ ಮಗ. ನಮ್ಮ ತಂದೆಗೆ ಇದ್ದ ದುರಭ್ಯಾಸದ ಫಲವಾಗಿ ಆಸ್ತಿಯನ್ನೆಲ್ಲ ಕಳೆದುಕೊಂಡರು.ಆಗ ನಾವು ಅಕ್ಷರ ಸಹ ಬೀದಿಗೆ ಬಿದ್ದೆವು. ನಂತರ ಹೊಟ್ಟೆ ಪಾಡಿಗಾಗಿ 1971 ರಲ್ಲಿ ಮೈಸೂರಿಗೆ ಬಂದು ನೆಲೆ ನಿಂತೆವು" ಜೀವನದಲ್ಲಿ ಹಲವಾರು ಕಷ್ಟ ನಷ್ಟ ಅನುಭವಿಸಿ ಮೇಲೆ ಬಂದವರು ನಾವು. ನಮ್ಮ ತಂದೆಗೆ ಏಳೆಂಟು ಜನ ಮಕ್ಕಳು. ನಾನು ನಾಲ್ಕನೇ ಕ್ಲಾಸ್ ಓದುವಾಗಲೇ ನಮ್ಮ ತಂದೆ ಸತ್ತುಹೋದರು. ನಂತರ ನಮ್ಮ ಅಣ್ಣ ನಮ್ಮೆಲ್ಲರನ್ನು ಸಾಕಿ ಸಲುಹಿದರು.
ವಿಧ್ಯಾಭ್ಯಾಸ ಎಸ್ಸ್ಸ್ಸೆಲ್ಸಿ ಅಷ್ಟೆ. ಮುಂದೆ ಓದಲಿಲ್ಲ. ಆದರೆ ಯಾವುದೆ ಸಿರಿಕಲ್ಚರ್ನಲ್ಲಿ ಪದವಿ ಪಡೆದವರಿಗಿಂತ ಹೆಚ್ಚು ತಿಳುವಳಿಕೆ ಇದೆ. ಎಲ್ಲವೂ ಪ್ರಾಕ್ಟಿಕಲ್ ಆಗಿ ಬಂದ ಜ್ಞಾನ. 1971 ರಲ್ಲಿ ಮೈಸೂರಿಗೆ ಬಂದು ಶಾಲೆಗೆ ಸೇರಿದೆ. ಎಸ್ಸೆಎಸ್ಸೆಲ್ಸಿಯಲ್ಲಿ ಎರಡು ಸಬ್ಜೆಕ್ಟ್ ಫೇಲ್ ಆದೆ. ಆವಾಗ ನಮ್ಮಣ್ಣ ನನ್ನನ್ನು ಹೊಡೆದು ಮೂರು ದಿನ ಊಟಕೊಡ್ದೆ ಮನೆಯಿಂದ ಆಚೆ ಇಟ್ಟಿದ್ದರು.ಕೊನೆಗೆ ಬೇರೆ ದಾರಿ ಕಾಣದೆ ಯಾರ್ಯಾರನೋ ಕೈಕಾಲು ಹಿಡಿದು ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ. 150 ರೂಪಾಯಿ ತಿಂಗಳ ಸಂಬಳದಲ್ಲಿ ಮೂರು ವರ್ಷ ಕೆಲಸ ಮಾಡಿದೆ.
ಬಸ್ ಏಜೆಂಟ್ : ಇದೇ ಸಂದರ್ಭದಲ್ಲಿ ನಮ್ಮಣ್ಣ ಬಸ್ ಏಜೆಂಟ್ ಆಗಿದ್ದರು. ಬಸ್ ಓನರ್ ಹತ್ರ ಹೋಗಿ ನನಗೂ ಬಸ್ ಏಜೆಂಟ್ ಕೆಲಸ ಕೊಡಿ. ಫ್ಯಾಕ್ಟರಿ ಕೆಲಸ ಮಾಡಕ್ಕೆ ಆಗಲ್ಲ ಅಂತ ಕೇಳಕೊಂಡೆ. ಆಗ ಅವರು ಆಯ್ತು ದಿನಕ್ಕೆ ಹತ್ತ್ ರೂಪಾಯಿ ಸಂಬಳ ಕೊಡ್ತಿನಿ ಅಂದ್ರು. ತಿಂಗಳಿಗೆ 300 ರೂಪಾಯಿ ಸಂಬಳಕ್ಕೆ ಬಸ್ ಏಜೆಂಟ್ ಕೆಲಸಕ್ಕೆ ಸೇರಿಕೊಂಡೆ.
ಅಲ್ಲಿಂದ ನನ್ನ ನಿಜವಾದ ಜೀವನದ ಜನರ್ಿ ಆರಂಭವಾಯ್ತು. 1978-79 ರ ಸಮಯ ಅದು. ನನ್ನ ಕೆಲಸ ನೋಡಿದ ಟೋರಿಸ್ಟ್ಗಳು ನನಗೆ ಒಂದು,ಎರಡ್ ರೂಪಾಯಿ ಟಿಫ್ಸ್ ಕೊಡ್ತಾ ಇದ್ರು. ಆ ದುಡ್ಡನ್ನೆಲ್ಲಾ ಕೂಡಿಡುತ್ತಾ ಬಂದೆ. ಬಸ್ ಓನರ್ ನನ್ನ ಶ್ರಮ ನೋಡಿ ಸಂಬಳ ಜಾಸ್ತಿ ಮಾಡ್ತ ಬಂದ್ರು. ನಂತರದ ದಿನಗಳಲ್ಲಿ ನಾನು ಅದೇ ಕಂಪನಿಯಲ್ಲಿ ಮ್ಯಾನೇಜರ್ ಆದೆ. ನಂತರ ಅದೇ ಕಂಪನಿ ಓನರ್ ಕೂಡ ಆದೆ. "ಶೇಖರ್ ಲೈನ್ ಟೂರಿಸ್ಟ್ ಕಂಪನಿ" ಅಂತ ಮೈಸೂರಿನ ಗಾಂಧಿ ಸ್ಕ್ವೈರ್ನಲ್ಲಿ ಈಗಲೂ ಇದೆ. ಹಿಂದೆ ಕೆ.ವಿ.ಮೋಟಾರ್ ಸವರ್ಿಸ್ ಅಂತ ಇತ್ತು. ಮುಂದೆ ನಾನು ಅದೇ ಕೆವಿ ಮೋಟಾರ್ ಸವರ್ಿಸ್ನ ಮಾಲೀಕನೂ ಆದೆ. ಸುಖ ಅನ್ನೋದು ಆಗ ನನಗೆ ಮರೀಚಿಕೆ ಆಗಿತ್ತು.
ನಾನು ಟ್ರಾವೆಲ್ ಏಜೆನ್ಸಿಲಿ ಇದ್ದಾಗ, ನನ್ನ ಫೀಲ್ಡ್ ಸರಿ ಇಲ್ಲ. ನನ್ನ ಮಗ ನನ್ನ ವೃತ್ತಿ ಮಾಡುವುದು ಬೇಡ. ವ್ಯವಸಾಯ ಮಾಡಲಿ ಅಂತ 2000 ನೇ ಇಸವಿಯಲ್ಲಿ ಈ ಜಮೀನು ಖರೀದಿಸಿದೆ. ಇದೇ "ಕಿರಣ್ ಸಿರಿ ಫಾರಂ" ಯುನಿಟ್ ಒನ್. ಆದರೆ ನನ್ನ ಮಗ ಕಿರಣ ಮೊದಲು ನನ್ನ ಹಾಗೆ ಓದಿನಲ್ಲಿ ದಡ್ಡನಾಗಿದ್ದ. ಎಸ್ಸೆಸ್ಸೆಲ್ಸಿ ಫೇಲಾಗ್ತಾನೆ ಅವನಿಗೆ ಕೋಳಿ ಫಾರಂ ಹಾಕಿಕೊಡೋಣ ಅಂತ ಇಲ್ಲಿ ಐದು ಎಕರೆ ಜಮೀನು ಖರೀದಿ ಮಾಡಿದ್ದೆ. ಆದರೆ ಎಸ್ಸೆಸೆಲ್ಸಿ ಪಾಸಾಗಿಬಿಟ್ಟ. ನನಗೆ ಬಹಳಾ ಬೇಜಾರಾಯ್ತು. ಕೋಳಿಫಾರಂ ಮಾಡೋಣ ಅಂತ ಜಮೀನು ಖರೀದಿಸಲು ಬಡ್ಡಿ ಸಾಲ ತೆಗೆದುಕೊಂಡಿದ್ದೆ. ಜಮೀನು ಮಾರಾಟಕ್ಕೆ ಇಟ್ಟೆ ಯಾರು ತಗೆದುಕೊಳ್ಳಲು ಮುಂದೆ ಬರಲಿಲ್ಲ. ನಂತರ ಎರಡು ವರ್ಷ ಜಮೀನನ್ನು ಖಾಲಿ ಬಿಟ್ಟೆ. ನಂತರ ಪಿಯುಸಿ ಫೇಲಾದ. ನನಗೆ ತುಂಬಾ ಸಂತೋಷ ಆಯ್ತು. ತುಂಬು ಹೃದಯದಿಂದ ವೆಲ್ಕಮ್ ಮಾಡ್ದೆ.
ಸಿರಿತನ ತಂದ ಸಿರಿಕಲ್ಚರ್ : ನನಗಿಂತ ಜಾಸ್ತಿ ಓದಿದ್ದೀಯಾ ಬಾ ಅಂತ ನನ್ನ ಮಗ ಕಿರಣ್ನನ್ನು ಪ್ರೀತಿಯಿಂದ ಸ್ವಾಗತಿಸಿದೆ. ಕೋಳಿಫಾರಂ ಮಾಡುವ ಮೊದಲು ನಾಲ್ಕಾರು ತೋಟಗಳಿಗೆ ಹೋಗಿ ರೈತರ ಅನುಭವ ಕೇಳಿದೆ. ಎಲ್ಲರೂ ತಮ್ಮ ಕಷ್ಟಗಳನ್ನೇ ಹೇಳಿಕೊಂಡರು. ಆಗ ನೂರೆಂಟು ರೋಗ ಬಂದು ಕೋಳಿ ಮರಿಗಳೆಲ್ಲಾ ಸಾಯ್ತಾ ಇದ್ವು. ಕೋಳಿಫಾರಂಗಿಂತ ಸಿರಿಕಲ್ಚರ್ ಮಾಡಿ ಅಂತ ಹಲವರು ಸಲಹೆ ನೀಡಿದ್ರು. ತಿಂಗಳಿಗೆ ಎಂಟಂತ್ತು ಸಾವಿರ ರೂಪಾಯಿ ಸಿಗುತ್ತೆ ರೇಷ್ಮೆ ಕೃಷಿ ಮಾಡಿ ಅಂದ್ರು.
ಅದು 2002 ನೇ ಇಸವಿ. ಜಮೀನಿನಲ್ಲಿ ಐದು ತಿಂಗಳು ಶ್ರಮಪಟ್ಟು ಕೆಲಸ ಮಾಡಿ ರೇಷ್ಮೆ ಕಡ್ಡಿ ನಾಟಿ ಮಾಡಿದೆವು. ಪಿಯುಸಿ ಫೇಲಾಗಿದ್ದ ಮಗನಿಗೆ ಜಮೀನಿನ ಕೆಲಸ ಕಷ್ಟ ಅಂತ ಗೊತ್ತಾಗೋಯ್ತು. ನಂತರ ಪಿಯುಸಿ ಪಾಸ್ ಮಾಡಿ ಬಿಬಿಎಂ, ಎಂಬಿಎ,ಬಿಇ ಮಾಡಿದ. ಕೆಲಕಾಲ ನೌಕರಿಗೂ ಹೋಗಿದ್ದ ಅದಕ್ಕಿಂತ ಕೃಷಿನೇ ಮೇಲೂ ಅಂತ ಈಗ ಅವನೇ ರೇಷ್ಮೆ ನೋಡಿಕೊಳ್ಳುತ್ತಿದ್ದಾನೆ.
ಅನುಭವ ಕಲಿಸಿತು ಪಾಠ : ರೇಷ್ಮೆ ಕೃಷಿ ಮಾಡ್ದಾಗ ನಮಗೆ ಏನೇನೂ ಅನುಭವ ಇರಲಿಲ್ಲಾ. ರೇಷ್ಮೆ ಕಡ್ಡಿ ಹಾಕಿ ಐದು ತಿಂಗಳಾದ ಮೇಲೆ ಜಮೀನಿಗೆ ಬಂದ ರೇಷ್ಮೆ ಇಲಾಖೆಯ ಅಸಿಸ್ಟೆಂಟ್ ಡೈರೆಕ್ಟರ್ ವರನಾಗಭೂಷಣ ಅವರು "ಇದು ಕಲ್ಲು ಭೂಮಿ ಇಲ್ಲಿ ರೇಷ್ಮೆ ಬೆಳೆಯೋದು ಕಷ್ಟ ನಿನಗೆ ಬುದ್ದಿ ಇಲ್ಲ" ಅಂತ ಹೇಳಿ ಹೋದರು.ಇದನ್ನೇ ನಾನು ಚಾಲೇಂಜಿಂಗ್ ಆಗಿ ತೆಗೆದುಕೊಂಡೆ. ಕೃಷಿ ಮಾಡುವುದು ನನಗೆ ಅನಿವಾರ್ಯ ಕೂಡ ಆಗಿತ್ತು. ರೇಷ್ಮೆ ಬೆಳೆದು ತೋರಿಸಿದೆ. ಎರಡು ವರ್ಷ 2005-06 ವರೆಗೂ ಹೈಬ್ರಿಡ್ ಬೆಳೆ ಬೆಳೆದೆ.ಮೊದಲ ಸಲ ನನಗೆ ಆರು ಸಾವಿರ ರೂಪಾಯಿ ಆದಾಯ ಬಂದಿತ್ತು. ಅದರಿಂದ ನನಗಾದ ಖುಷಿ ಅಷ್ಟಿಷ್ಟಲ್ಲಾ.
ನಂತರ ಹಿಂತಿರುಗಿ ನೋಡಲೆ ಇಲ್ಲ. ಎರಡು ವರ್ಷ ಹೈಬ್ರಿಡ್ ಮಾಡ್ದೆ. ಶ್ರಮ ಪಟ್ಟು ಮಾಡ್ದೆ. ರೇಷ್ಮೆ ಮಾರುಕಟ್ಟೆಗೆ ನನ್ನ ಗೂಡು ಹೋದರೆ. ಅಲ್ಲಿ ಚೆಕ್ ಮಾಡೋರು. ರ್ಯಾಂಡಿಟಾ ಚೆಕ್ ಅಂತ. ಅಂದ್ರೆ ಒಂದು ಗೂಡಿನಲ್ಲಿ ಎಷ್ಟು ನೂಲು ಇದೆ ಅಂತ. ನನಗೆ ರೆಟಲ್ಲು ಫಸ್ಟ್ ಕೊಡೋರು. ಪ್ರತಿಯೊಂದು ಸಟರ್್ಫಿಕೇಟ್ಗಳನ್ನು ಇಡ್ತಾ ಬಂದೆ. ಎರಡು ವರ್ಷದ ನಂತರ ಕೇಂದ್ರ ರೇಷ್ಮೆ ಮಂಡಳಿಯವರು ನಮ್ಮ ತೋಟಕ್ಕೆ ಭೇಟಿ ನೀಡಿದರು. ಸೀಡ್ ಮಾಡು ಸಹಾಯ ಮಾಡ್ತೀವಿ ಅಂದ್ರು. ಆಗ ನನಗೆ ಸೀಡ್ ಅಂದ್ರೆ ಏನೂ ಅಂತನೂ ಗೊತ್ತಿರಲಿಲ್ಲ. ಆಗ ಸೀಡ್ ಕಕೂನ್ಗೆ ಕೆ.ಜಿ.ಗೆ 350 ರೂಪಾಯಿ ಕೊಡ್ತಾ ಇದ್ರು. ಈಗ 800 ರೂ.ಗೆ ಕೊಡ್ತಾ ಇದ್ದಾರೆ.
ನೈಸಗರ್ಿಕ ಕೃಷಿಯತ್ತ ಒಲವು : ಆರಂಭದಲ್ಲಿ ರೇಷ್ಮೆ ಕೃಷಿ ಶುರು ಮಾಡ್ದಾಗ ರಾಸಾಯನಿಕ ಪದ್ಧತಿಯಲ್ಲೇ ಬೆಳಿತಾ ಇದ್ವಿ. ನೈಸಗರ್ಿಕ ಕೃಷಿ ಆರಂಭಿಸಿ ಆರು ವರ್ಷ ಆಯ್ತು.ನಾನು ಬೇರೆ ಬೇರೆ ರೈತರ ತೋಟಗಳಿಗೂ ಬೇಟಿ ಮಡ್ತಾ ಇದ್ದೆ. ಹಸು ಕಟ್ಟಿ ಕೊಟ್ಟಿಗೆ ತೋಳ್ದ ನೀರನ್ನು ರೇಷ್ಮೆ ತೋಟಕ್ಕೆ ಬಿಡ್ತಾ ಇದ್ದೆ. ಅಲ್ಲಿ ಸೊಪ್ಪು ಬಹಳ ದಟ್ಟವಾಗಿ ಹಸಿರಾಗಿ ಬೆಳಿತಾ ಇತ್ತು. ರಾಸಾಯನಿಕ ಗೊಬ್ಬರ ಹಾಕಿದ ಕಡೆ ಸೊಪ್ಪು ಕಲರ್ರೇ ಇರ್ತಾ ಇರಲಿಲ್ಲಾ. ಅದನ್ನು ಗಮನಿಸಿದಾಗ ನನಗೆ ನೈಸಗರ್ಿಕ ಕೃಷಿಯ ಮಹತ್ವ ಅರ್ಥ ಆಯ್ತು.
ಬಯೋಡೈಜಸ್ಟರ್ : ನಾಲ್ಕಾರು ಕಡೆ ಹೋಗಿ ನೋಡಿ ಬಂದ ಮೇಲೆ ಬೇರೆ ಬೇರೆ ಅನುಭವ ಆಯ್ತು. ನೈಸಗರ್ಿಕ ಕೃಷಿ ಮಾಡಲು ಜೀವಾಮೃತ ಎಷ್ಟು ಮಹತ್ವ ಅಂತ ಗೊತ್ತಾಯ್ತು. ಬಯೋಡೈಜಸ್ಟರ್ ಕಟ್ಟಿಕೊಂಡೆವು. ಇದೊಂದು ತುಂಬಾ ವೈಜ್ಞಾನಿಕವಾದ ಪದ್ಧತಿಯಲ್ಲಿ ಕಟ್ಟಿರುವ ಬಯೋಡೈಸ್ಟರ್ ತೊಟ್ಟಿ. 21 ಅಡಿ ಉದ್ದ, 14 ಅಡಿ ಅಗಲ, 15 ಅಡಿ ಆಳ ಇದು ಡೈಜಸ್ಟರ್ ತೊಟ್ಟಿ. ಇನ್ನೊಂದು ರಸಸಾರ (ಜ್ಯೂಸ್) ಸಂಗ್ರಹಣ ತೊಟ್ಟಿ. ಇದು 18 ಅಡಿ ಆಳ, ಐದು ಅಡಿ ಅಗಲ, 14 ಅಡಿ ಉದ್ದ ಇದೆ. ದೊಡ್ಡ ತೊಟ್ಟಿಗೆ ಪೈಪ್ ಲೈನ್ ಕೊಟ್ಟು ಆ ರಸಸಾರವನ್ನು ಸಣ್ಣ ತೊಟ್ಟಿಗೆ ಬರುವಂತೆ ಮಾಡಿದ್ದೇವೆ. ಇಲ್ಲಿ ಸಂಗ್ರಹವಾದ ರಸಸಾರವನ್ನು ಮೋಟರ್ ಇಟ್ಟು ಡ್ರಿಪ್ ಮೂಲಕ ಗಿಡಗಳಿಗೆ ಕೊಡುತ್ತೇವೆ.
ರೇರಿಂಗ್ ಹೌಸ್ : ಸಿದ್ದಾರ್ಥ ಲೇಔಟ್ನ ಕೆನರಾ ಬ್ಯಾಂಕ್ ಅವರು ಎರಡು ಲಕ್ಷ ರೂ ಸಾಲ ಕೊಟ್ಟಿದ್ದರು. ಆ ಹಣದ ಜೊತೆ ನನ್ನದು ಸ್ವಲ್ಪ ಹಣ ಹಾಕಿ ಮೊದಲ ರೇರಿಂಗ್ ಹೌಸ್ ಕಟ್ಟಿದೆ. 60 ಅಡಿ ಉದ್ದ 21 ಅಡಿ ಅಗಲ. ಆಂಟಿ ಚೇಂಬರ್ 15 ಅಡಿ ಉದ್ದ 21 ಅಡಿ ಅಗಲ. ಮೊದಲ ರೇರಿಂಗ್ ಹೌಸ್ ಉದ್ಘಾಟನೆಗೆ ಸಿಎಸ್ಆರ್ಎನ್ಟಿ ಡೈರೆಕ್ಟರ್ ಶಂಕರ್ ದಂಡಿನ ಬಂದಿದ್ದರು.
ನಂತರ ರೇಷ್ಮೆಯಲ್ಲಿ ಒಳ್ಳೆಯ ಆದಾಯ ಬರಲು ಶುರುವಾಯ್ತು. ಹಣ ಸಂಪಾದನೆ ಮಾಡ್ದೆ. 2010 ರಲ್ಲಿ ಇನ್ನೊಂದು ರೇರಿಂಗ್ ಹೌಸ್ ಕಟ್ಟಿದೆ.ಅದು 70 ಅಡಿ ಉದ್ದ 24 ಅಡಿ ಅಗಲ 18 ಅಡಿ ಎತ್ತರ. ಅದಕ್ಕೆ 10 ಲಕ್ಷ ರೂಪಾಯಿ ವೆಚ್ಚ ಆಗಿತ್ತು. ಅದನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಉದ್ಘಾಟನೆ ಮಾಡಿದ್ರು. ಈ ಥರ ನನ್ನ ಸಿರಿಕಲ್ಚರ್ ಜನರ್ಿ ಆರಂಭವಾಯ್ತು.
ಯುನಿಟ್ ಒಂದರಲ್ಲಿ ನನಗೆ ತಿಂಗಳಿಗೆ ಎರಡರಿಂದ ಮೂರು ಲಕ್ಷ ರೂಪಾಯಿ ಆದಾಯ ಬರಲು ಶುರುವಾಯ್ತು. ಐದು ಎಕರೆ ಜಮೀನಿನಲ್ಲಿ ಮೂರುವರೆ ಎಕರೆ ಮಾತ್ರ ರೇಷ್ಮೆ ಕಡ್ಡಿ ಇದೆ. ಇದೆ ಹಣದಲ್ಲಿ ಮೇಗಳಾಪುರದ ಹತ್ತಿರ ಮತ್ತೆ ಏಳು ಎಕರೆ ಜಮೀನು ಖರೀದಿಸಿದೆ. ಅದನ್ನು ಯುನಿಟ್ 2 ಅಂತ ಕರೆದು ಅಲ್ಲೂ ರೇಷ್ಮೆ ಮಾಡ್ತಾಇದ್ದೀನಿ. ಅದು 100 ಅಡಿ ಉದ್ದ, 24 ಅಡಿ ಅಗಲ ಇದೆ.ಅದನ್ನು ವೈಜ್ಞಾನಿಕ ಪದ್ಧತಿಯಲ್ಲಿ ಕಟ್ಟಲಾಗಿದ್ದು 400 ಮೊಟ್ಟೆ ಮೇಯಿಸಬಹುದು. ಅಲ್ಲಿ ಮೂರುವರೆ ಎಕರೆ ಪ್ರದೇಶದಲ್ಲಿ ಬೇರೆ ಬೇರೆ ಅಂತರದಲ್ಲಿ ಮೂರು ಭಾಗಗಳಾಗಿ ರೇಷ್ಮೆ ಕಡ್ಡಿ ಹಾಕಿದ್ದೇನೆ. ರೇಷ್ಮೆಗೆ ಭವಿಷ್ಯ ಇದೆ : ರೈತರು ಒಂದು ವರ್ಷದ ಹಿಂದೆ ದರ ಕಡಿಮೆ ಆಯ್ತು ಅಂತ ರೇಷ್ಮೆ ಕಡ್ಡಿ ಕಿತ್ತಾಕಿ ಸುದ್ದಿಯಾದರು.ಅದು ಗೂಡಿನ ದರ ಇಳಿತು ಅಂತ ಅಲ್ಲಾ . ರೇಷ್ಮೆ ಗೂಡಿನ ದರ ವರ್ಷದಲ್ಲಿ ಒಂದೆರಡು ಬಾರಿ ಕಡಿಮೆ ಆಗುತ್ತೆ ನಿಜ. 10 ಬೆಳೆಯಲ್ಲಿ ಒಂದೆರಡು ಸಲ ಗೂಡಿನ ದರ ಕಡಿಮೆ ಆದರೆ ತೊಂದರೆ ಆಗಲ್ಲ.
ರೇಷ್ಮೆ ಕಡ್ಡಿ ಕಿತ್ತು ಹಾಕಿದರೆ ಮತ್ತೆ ಅದನ್ನು ಬೆಳೆಸಲು ಆರು ತಿಂಗಳು ಬೇಕು. ಎರಡು ವರ್ಷದಲ್ಲಿ ಒಂದೇ ಸಾರಿ ರೇಟ್ ಕಡಿಮೆ ಆಗಿದ್ದು. ರೇಷ್ಮೆ ಗೂಡನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದ ತಕ್ಷಣ ಹರಜಾಗುತ್ತೆ. ಐದು-ಹತ್ತು ರೂಪಾಯಿ ದರ ಕಡಿಮೆ ಆಗಬಹುದು. ಆದರೆ ತಕ್ಷಣ ಕೈಗೆ ಹಣ ಬರುತ್ತೆ. ಅದೆ ಕಬ್ಬು ಬೆಳೆದರೆ, 15 ತಿಂಗಳು ಕಾಯಬೇಕು. ಕಬ್ಬು ಬೆಳೆದ ರೈತ ಅದರ ತೂಕವನ್ನು ನೋಡಂಗಿಲ್ಲ. ಅವರು ಹಾಕಿದ್ದೆ ತೂಕ. ಮೂರು ತಿಂಗಳು ಬಿಟ್ಟು ಹಣ ಕೊಡ್ತಾರೆ. ತೋಟಗಾರಿಕೆ , ತರಕಾರಿ ಬೆಳೆಯಲ್ಲಿ ಮೂರು ತಿಂಗಳಿಗೆ, ಆರು ತಿಂಗಳಿಗೆ ಒಂದು ಸಾರಿ ಹಣ ಬರುತ್ತೆ. ಅದಕ್ಕಿಂತ ಇದು ಬೆಟರ್ ಅನ್ನುವುದು ನನ್ನ ಅನುಭವ. ಪ್ರತಿ ತಿಂಗಳು ಹಣ. ನಮ್ಮ ಕಣ್ಣಮುಂದೆ ತೂಕ. ತಕ್ಷಣ ಹಣ. ಅಲ್ಲೆ ಡ್ರಾ ಅಲ್ಲೆ ಬಹುಮಾನ.
ಮುಂದಿನ ವರ್ಷಗಳಲ್ಲಿ ರೇಷ್ಮೆಕೃಷಿಗೆ ಉತ್ತಮ ಭವಿಷ್ಯ ಇದೆ. ಅಂದು ರೇಷ್ಮೆ ವ್ಯವಸಾಯ ಕಷ್ಟ ಇತ್ತು.ಹಣಕ್ಕೂ ಕೊರತೆ ಇತ್ತು ಆದರೂ ರೇಷ್ಮೆ ಬೆಳಿತಾ ಇದ್ರು. ಸೀರೆ, ಬಟ್ಟೆಗಷ್ಟೇ ರೇಷ್ಮೆ ಉಪಯೋಗಿಸ್ತಾ ಇದ್ರು. ಇಂದು ಅದೇ ರೇಷ್ಮೆ ನಾವು ಓಡಿಸುವ ವಾಹನದ ಪ್ರತಿ ಚಕ್ರದಲ್ಲೂ ಇದೆ. ವಾಹನದ ಚಕ್ರಗಳಲ್ಲಿ ರಬ್ಬರ್ ಜೊತೆ ತಂತಿ ಬಳಸುವ ಬದಲು ಸಿಲಿಕಾನ್ ದಾರ ಬಳಸಲಾಗುತ್ತಿದೆ. ಆಸ್ಪತ್ರೆಯಲ್ಲಿ ಒಲಿಗೆ ಹಾಕಲು ಸಿಲಿಕಾನ್ ಥ್ರೆಡ್. ಮೊಬೈಲ್, ಟಿವಿ, ಕೇಬಲ್ ಎಲ್ಲಾದರಲ್ಲೂ ಸಿಲಿಕಾನ್ ಥ್ರೆಡ್ ಬಳಕೆಯಾಗುತ್ತಿದೆ. ಹಾಗಾಗಿ ರೇಷ್ಮೆ ಬೆಳೆಯಲು ಯಾರು ಹೆದರಬೇಕಾಗಿಲ್ಲಾ. ಮುಂದೆಯೂ ತಂತ್ರಜ್ಞಾನಗಳ ಬಳಕೆಯಲ್ಲಿ ರೇಷ್ಮೆಯ ಉಪಯೋಗ ಹೆಚ್ಚಾಗಲಿದೆ.
ಊಜಿ ನೊಣ ನಿಯಂತ್ರಣ : ರೇಷ್ಮೆ ಕೃಷಿಯಲ್ಲಿ ಊಜಿ ನೊಣ ನಿಯಂತ್ರಣ ಮುಖ್ಯ. ಇದಕ್ಕಾಗಿ ಇಲಾಖೆಯವರು ಊಜಿ ಟ್ರ್ಯಾಪ್, ಊಜಿ ಟ್ಯಾಬ್ಲೆಟ್ ಅಂತ ಮಾಡಿದ್ದಾರೆ. ಆದರೆ ನಾವು ಸ್ಥಳೀಯವಾಗಿ ನಮ್ಮದೆ ತಂತ್ರಜ್ಞಾನ ಬಳಸಿ ಊಜಿ ನಿಯಂತ್ರಣ ಮಾಡಿಕೊಂಡಿದ್ದೇವೆ. ಇದಕ್ಕಾಗಿ ಒಂದು ಹಳೆ ಬಕೆಟ್ ಸಾಕು. ಒಂದು ಲೀಟರ್ ಮೊಸರು, 4 ಅಚ್ಚು ಬೆಲ್ಲ, ಸ್ವಲ್ಪ ನೀರು, ಕೊಳೆತ ಬಾಳೆ, ಕಿತ್ತಳೆ, ಸೇಬು, ಪಪ್ಪಾಯ ಹಾಕಿ ಕಡ್ಡಿಯಲ್ಲಿ ತಿರುಗಿಸಿದರೆ ಮೂರು ನಾಲ್ಕು ದಿನದಲ್ಲಿ ಡೀಕಾಂಪೋಸ್ ಆಗಿ ವಾಸನೆ ಬರುತ್ತೆ. ಅದು ಗಾಳಿಯಲ್ಲಿ ಬೆರೆತು ಊಜಿ ನೊಣ ಆ ವಾಸನೆಗೆ ತಿನ್ನಲು ಬಂದು ಈ ಬಕೆಟ್ನಲ್ಲಿ ಬಿದ್ದು ಸಾಯುತ್ತವೆ.
"ಪ್ರತಿ ಬೆಳೆ ಆದಗಲೂ ರೇರಿಂಗ್ ಹೌಸ್ಅನ್ನು ತುಂಬಾ ಸ್ವಚ್ಚತೆಯಾಗಿ ಇಡಬೇಕು. ತಕ್ಷಣ ಬೆಡ್ ಕ್ಲೀನ್ ಮಾಡಬೇಕು. ಯಾಕೆಂದರೆ ಹುಳು ಸತ್ತು ಹೋಗಿರುತ್ತೆ, ಊಜಿ ನೊಣ ಒಡೆದು ರೋಗ ಹರಡುತ್ತೆ ಪಿಕ್ಕೆಯಲ್ಲಿರುವ ಬ್ಯಾಕ್ಟೇರಿಯಾ ಸಂದಿಗೆಲ್ಲಾ ಸೇರಿಕೊಂಡು ಕೊಟ್ಯಾಂತರ ಸಂಖ್ಯೆಯಲ್ಲಿ ರೋಗಾಣುಗಳು ಹೆಚ್ಚಳವಾಗಿ ಬಿಡುತ್ತವೆ. ಅದಕ್ಕಾಗಿ ತಕ್ಷಣ ಕಸವನ್ನೆಲ್ಲಾ ತೆಗೆದು ಬಿಸಿಲಿಗೆ ಹಾಕಬೇಕು. ಇಲ್ಲ ಗುಂಡಿ ತೆಗೆದು ಮಣ್ಣಿನಲ್ಲಿ ಮುಚ್ಚಬೇಕು. ಬ್ಲೀಚಿಂಗ್ ಪೌಡರ್, ಸುಣ್ಣ ,ಸ್ಯಾನಿಟೆಕ್ ಕೆಮಿಕಲ್ನಲ್ಲಿ ಹುಳು ಸಾಕಾಣಿಕೆ ಮನೆಯನ್ನು ತೊಳೆಯಬೇಕು. ಇದನ್ನೆಲ್ಲ ವಿಜ್ಞಾನಿಗಳನ್ನು ಕೇಳಿಕೊಂಡೆ ಮಾಡಬೇಕು. ಮನೆಯ ಅಳತೆಗೆ ಎಷ್ಟು ಕೆಜಿ ಔಷದ ಹಾಕಬೇಕು ಅಂತ. ಒಂದು ರ್ಯಾಕ್ನಿಂದ ಇನ್ನೊಂದು ರ್ಯಾಕ್ಗೆ ಕನಿಷ್ಟ ಎರಡು ಅಡಿ ಇದ್ದರೆ ಉತ್ತಮ. ಯಂತ್ರೋಪಕರಣ ಇಲ್ಲದೆ ರೇಷ್ಮೆ ಕೃಷಿ ಬೇಡ. ಆಳುಗಳ ಮೇಲೆ ಅವಲಂಭಿತರಾಗಬಾರದು. ಎಕರೆಗೆ 1500 ಕಡ್ಡಿ ಹಾಕಿದರೆ ಸಾಕು. 200 ಮೊಟ್ಟೆ ಸಾಕಾಣಿಕೆ ಮಾಡಬಹುದು.
ಪ್ರತಿ ತಿಂಗಳು ಯಾವ ಸಾಫ್ಟ್ವೇರ್ ಉದ್ಯೋಗಿಯೂ ಪಡೆಯದ ಸಂಬಳವನ್ನು ಸಂಪಾದನೆ ಮಾಡಬಹುದು. ಯುವಕರು ರೇಷ್ಮೆ ಕೃಷಿಗೆ ಬರುತ್ತಿದ್ದಾರೆ. ನಮ್ಮ ತೋಟ ನೋಡಲು ಪ್ರತಿ ತಿಂಗಳು ಮೂರ್ನಾಲ್ಕು ತಂಡಗಳಲ್ಲಿ ಬರುತ್ತಾರೆ. ರಾಜ್ಯ ಮತ್ತು ಕೇಂದ್ರ ರೇಷ್ಮೆ ಇಲಾಖೆಯವರು ಕರೆದುಕೊಂಡು ಬಂದು ನಮ್ಮ ರೇಷ್ಮೆಕೃಷಿ ವಿಧಾನವನ್ನು ತೋರಿಸುತ್ತಾರೆ. ರೇಷ್ಮೆಕೃಷಿ ಸಮಾಜದಲ್ಲಿ ನನ್ನನ್ನು ಒಬ್ಬ ಗಣ್ಯವ್ಯಕ್ತಿಯನ್ನಾಗಿ ಮಾಡಿದೆ" ಎಂದು ನಾಗಭೂಷಣ್ ತಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡರು. ಹೆಚ್ಚಿನ ಮಾಹಿತಿಗೆ 7353593007 ಅಥವಾ 9945614007 ಸಂಪಕರ್ಿಸಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ