vaddagere.bloogspot.com

ಭಾನುವಾರ, ಸೆಪ್ಟೆಂಬರ್ 25, 2016

  ಬರಡು ನೆಲದಲ್ಲಿ ಬಂಗಾರದ ಬೆಳೆತೆಗೆದ ಸಾಧಕ
ಕೃಷಿಯಲ್ಲಿ ಖುಶಿಕಾಣುತ್ತಿರುವ ಉದ್ಯಮಿ ಮೂತರ್ಿ 
ಮೈಸೂರು:ಕೃಷಿ ಈಗ ಎಲ್ಲರ ನಿರ್ಲಕ್ಷ್ಯ ಮತ್ತು ಕಡೆಗಣನೆಗೆ ಒಳಗಾದ ರೋಗಗ್ರಸ್ತ ವಲಯ.ನಾಲ್ಕು ಕಾಸು ಸಂಪಾದನೆ ಮಾಡಿದವರು ಯಾವುದಾದರೂ ಉದ್ಯಮ ಶುರುಮಾಡಿ ನಿಗಧಿತ ಆದಾಯಗಳಿಸಿ ನೆಮ್ಮದಿ ಕಂಡುಕೊಳ್ಳಲು ಕನಸು ಕಾಣುವ ಕಾಲ ಇದು. ಇಂತಹ ಜನರ ನಡುವೆ ಉದ್ಯಮದಲ್ಲಿ ಸಂಪಾದಿಸಿದ ಹಣವನ್ನು ಕೃಷಿಯಲ್ಲಿ ವಿನಿಯೋಗಿಸುತ್ತಾ ಹಸಿರಿನಲ್ಲಿ ಬದುಕು ಕಂಡ ಅಪರೂಪದ ವ್ಯಕ್ತಿ ಹೋಟೆಲ್ ಉದ್ಯಮಿ ಎಚ್.ಆರ್.ಮೂತರ್ಿ ಈ ವಾರದ ಬಂಗಾರದ ಮನುಷ್ಯ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯ ಎಚ್.ಆರ್.ಮೂತರ್ಿ ಒರ್ವ ಯಶಸ್ವಿ ಹೋಟೆಲ್ ಉದ್ಯಮಿ. ಆದರೂ ಮೂಲತಹ ಕೃಷಿ ಕುಟುಂಬದಿಂದ ಬಂದ ಮೂತರ್ಿ ಅವರನ್ನು ಮಣ್ಣಿನ ಸೆಳೆತ ಬಿಟ್ಟಿಲ್ಲ. ಎಚ್.ಡಿ.ಕೋಟೆ ರಸ್ತೆಯಲ್ಲಿ ಬರುವ ಆಲನಹಳ್ಳಿ ಮತ್ತು ಕ್ಯಾತನಹಳ್ಳಿ ಸಮೀಪ ಕಲ್ಲುಗುಡ್ಡಗಳನ್ನು ಕಡಿದು, ಕೋಟ್ಯಾಂತರ ರೂಪಾಯಿ ವೆಚ್ಚಮಾಡಿ ಮೂವತ್ತು ಎಕರೆ ಪ್ರದೇಶದಲ್ಲಿ ಇವರು ಕಟ್ಟಿರುವ " ಗ್ರೀನ್ ಗೋಲ್ಡ್ ಫಾರಂ" ಎಂಬ ನೈಸಗರ್ಿಕ ಕೃಷಿ ತೋಟ ಮೂತರ್ಿ ಅವರ ಹಸಿರು ಪ್ರೀತಿಗೆ ಸಾಕ್ಷಿಯಾಗಿದೆ.
ಇವರ ತೋಟಕ್ಕೆ ನೆದರ್ ಲ್ಯಾಂಡ್ನ ಇಕೋ ಅಗ್ರಿ ರಿಸರ್ಚ್ ಪೌಂಡೇಶನ್ನಿಂದ ಐಎಂಓ ಮತ್ತು ಇಸ್ಕಾನ್ ಅವರಿಂದ ಸಂಪೂರ್ಣ ಸಾವಯವ ಕ್ಷೇತ್ರ ಎಂಬ ಪ್ರಮಾಣ ಪತ್ರ ದೊರೆತಿದೆ.
ಪ್ರತಿಯೊಂದು ಗಿಡಮರಗಳ ಬಗ್ಗೆ ಪ್ರೀತಿಯಿಂದ ಮಾತನಾಡುವ ಇವರು ಮಣ್ಣು,ಪರಿಸರ ಮತ್ತು ಮಣ್ಣಿಗೆ ಬೇಕಾದ ಪೋಷಕಾಂಶಗಳ ಬಗ್ಗೆ ವಿಜ್ಞಾನಿಯಂತೆ ವಿವರಣೆ ನೀಡುತ್ತಾರೆ. ಕೃಷಿಯ ಬಗ್ಗೆ ಅಪಾರ ಪ್ರೀತಿ ಮತ್ತು ಕಾಳಜಿ ಹೊಂದಿರುವ ಮೂತರ್ಿ ಮೈಸೂರಿನ ಕೃಷ್ಣಮೂತರ್ಿ ಪುರಂನಲ್ಲಿರುವ ಸಾವಯವ ಉತ್ಪನ್ನ ಮಾರಾಟ ಮಳಿಗೆ "ನೇಸರ" ಆಗ್ಯರ್ಾನಿಕ್ ಟ್ರಸ್ಟ್ನ ಅಧ್ಯಕ್ಷರೂ ಆಗಿದ್ದಾರೆ.
ಕಲ್ಲರಳಿ ಹೂವಾಗಿ: ಹನ್ನೆರಡು ವರ್ಷಗಳ ಹಿಂದೆ ಅಂದರೆ 2004 ರಲ್ಲಿ ಕಲ್ಲುಗುಡ್ಡೆಗಳೆ ತುಂಬಿಕೊಂಡು ಬರಡು ಭೂಮಿಯಾಗಿದ್ದ (ಬ್ಯಾರನ್ ಲ್ಯಾಂಡ್) ನೆಲ ಇಂದು ಮೂತರ್ಿ ಅವರ ಶ್ರಮ ಮತ್ತು ಕಾಳಜಿಯಿಂದ ಹಸಿರುವಲಯವಾಗಿ ರೂಪಾಂತರಗೊಂಡಿದೆ. ಮೂತರ್ಿ ಅವರಲ್ಲಿರುವ ಬೆಟ್ಟದಷ್ಟು ತಾಳ್ಮೆಯ ಫಲವಾಗಿ ಈಗ ಇಲ್ಲಿ ಎರಡೂವರೆ ಸಾವಿರ ಅಡಿಕೆ, ಎಂಟನೂರು ತೆಂಗು, ಸಾವಿರಕ್ಕೂ ಹೆಚ್ಚು ಸಪೋಟ, ಒಂದೂವರೆ ಸಾವಿರಕ್ಕೂ ಹೆಚ್ಚು ವಿವಿಧ ಅಪರೂಪದ ತಳಿಯ ಮಾವು, ನಿಂಬೆ, ಮೆಣಸು ಸೇರಿದಂತೆ ನೂರಾರು ಬಗೆಯ ಹಣ್ಣು ಮತ್ತು ಸಾಂಬಾರ ಪದಾರ್ಥ ಗಿಡಗಳು ತೋಟಕ್ಕೊಂದು ಸೌಂದರ್ಯವನ್ನು ತಂದುಕೊಟ್ಟಿವೆ.
ತೋಟ ಕಟ್ಟಲು ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿದ್ದರು ಇಲ್ಲಿಂದ ಬರುವ ವಾಷರ್ಿಕ ಆದಾಯ ಸಧ್ಯಕ್ಕೆ ಹದಿನೈದು ಲಕ್ಷ ರೂಪಾಯಿಗಳು. ಇದರಲ್ಲಿ ತೋಟದ ನಿರ್ವಹಣೆಗೆ ಮೂರು ಲಕ್ಷ ತೆಗೆದರೆ ಹದಿಮೂರು ಲಕ್ಷ ಉಳಿತಾಯವಾಗುತ್ತದೆ. ಸಮಯಕ್ಕೆ ಸರಿಯಾಗಿ ಮಳೆ ಆಗಿ, ನೀರು ಸಂಪೂರ್ಣವಾಗಿ ಲಭ್ಯವಾದರೆ ವಾಷರ್ಿಕ ಮೂವತ್ತು ಲಕ್ಷ ರೂಪಾಯಿ ಆದಾಯ ತೆಗೆಯಬಹುದು. ಒಂದು ಎಕರೆಯಲ್ಲಿ ವಾಷರ್ಿಕ ಕನಿಷ್ಟ ಒಂದು ಲಕ್ಷ ಆದಾಯಗಳಿಸುವುದು ರೈತರ ಗುರಿ ಮತ್ತು ಉದ್ದೇಶವಾಗಿರಬೇಕು ಎನ್ನುತ್ತಾರೆ ಮೂತರ್ಿ.
ಆದರೆ ಕಳೆದ ಐದು ವರ್ಷಗಳಿಂದ ಮಳೆ ಕೈ ಕೊಟ್ಟಿದೆ. ಈವರ್ಷವಂತೂ ಮಳೆ ಇಲ್ಲದೆ ಅತಿ ಹೆಚ್ಚು ಉಷ್ಣಾಂಶದಿಂದ ಮರಗಿಡಗಳು ಬೆಂಕಿಯ ದಾಹಕ್ಕೆ ನಲುಗಿಹೋಗಿವೆ. ಅಂತರ್ಜಲ ಸಂಪೂರ್ಣ ಕುಸಿದಿದ್ದು ತೋಟಗಳನ್ನು ಕಾಪಾಡಿಕೊಳ್ಳುವುದೆ ನಮಗೆ ಒಂದು ದೊಡ್ಡ ಸವಾಲಾಗಿದೆ. ಪರಿಸ್ಥಿತಿ ಹೀಗೆಯೆ ಮುಂದುವರಿದರೆ ಈ ಭಾಗದಲ್ಲಿ ಯಾವ ತೋಟಗಳು ಉಳಿಯುವುದಿಲ್ಲ ಎಂದು ಆತಂಕ ವ್ಯಕ್ತಪಡಿಸುತ್ತಾರೆ.
ಇಂತಹ ಭೀಕರ ಪರಿಸ್ಥಿತಿಯ ನಡುವೆಯೂ ಮೂತರ್ಿ ತಮ್ಮ ತೋಟವನ್ನು ಹಸಿರಾಗಿಡಲು ನೀರಿಗಾಗಿ ಹದಿನೆಂಟು ಬೋರ್ವೆಲ್ ಕೊರೆಸಿದ್ದಾರೆ. ಅದರಲ್ಲಿ ಹನ್ನೆರಡು ಬೋರ್ವೆಲ್ ವಿಫಲವಾಗಿದ್ದು ಎಂಟರಲ್ಲಿ ಮಾತ್ರ ಕಡಿಮೆ ಪ್ರಮಾಣದಲ್ಲಿ ನೀರು ಬರುತ್ತಿದೆ.
ತೋಟದ ಎತ್ತರದ ಪ್ರದೇಶದಲ್ಲಿ 120 ಅಡಿ ಉದ್ದ, 100 ಅಡಿ ಅಗಲ ಮತ್ತು 18 ಅಡಿ ಆಳದ ಗುಂಡಿ ತೆಗೆಸಿ ಅದಕ್ಕೆ ಪ್ಲಾಸ್ಟಿಕ್ ಹೊದಿಕೆಯನ್ನು ಹಾಸಿ ಐದು ಲಕ್ಷ ಲೀಟರ್ ಸಾಮಥ್ರ್ಯವಿರುವ ನೀರು ಸಂಗ್ರಹಣ ತೊಟ್ಟಿಯೊಂದನ್ನು ನಿಮರ್ಾಣ ಮಾಡಿಕೊಂಡಿದ್ದಾರೆ. ಎಂಟು ಬೋರ್ವೆಲ್ಗಳಿಂದ ಬರುವ ನೀರನ್ನು ಹೀಗೆ ಒಂದೆ ಕಡೆ ಸಂಗ್ರಹ ಮಾಡಿಕೊಳ್ಳಲಾಗುತ್ತದೆ. ಮತ್ತೆ ಅಲ್ಲಿಂದ ಡಿಸೇಲ್ ಮೋಟಾರ್ ಪಂಪ್ನಿಂದ ನೀರನ್ನು ಶುದ್ಧೀಕರಿಸಿ  ಹನಿ ನೀರಾವರಿ ಮೂಲಕ ಎಲ್ಲಾ ಗಿಡಗಳಿಗೂ ನೀರು ಪೂರೈಕೆಯಾಗುವಂತೆ ವ್ಯವಸ್ಥೆಮಾಡಲಾಗಿದೆ. ಎಲ್ಲಾ ಗಿಡಗಳಿಗೂ ಸಮರ್ಪಕ ರೀತಿಯಲ್ಲಿ ನೀರುಸಿಗಲಿ ಎಂಬ ಕಾರಣಕ್ಕೆ ಈ ತಾಂತ್ರಿಕತೆಯನ್ನು ಅಳವಡಿಸಿಕೊಂಡಿದ್ದೇವೆ ಎನ್ನುತ್ತಾರೆ ಮೂತರ್ಿ.
ಮೊದಲ ಯತ್ನದಲ್ಲೆ ವಿಘ್ನ : ಆರಂಭದಲ್ಲಿ ಹದಿನಾಲ್ಕು ಎಕರೆ ಭೂಮಿ ಖರೀದಿಸಿದ್ದ ಮೂತರ್ಿ ಅವರು, ಕಲ್ಲು ಬಂಡೆಗಳನ್ನೆಲ್ಲ ಕಿತ್ತು ಭೂಮಿಯನ್ನು ಮಟ್ಟಮಾಡಿ ಸಫೇದ್ ಮುಸ್ಲಿ ,ಪಚೋಲಿಯಂತಹ ಔಷದೀಯ ಗಿಡಗಳನ್ನು ಬೆಳೆಯಲು ಮುಂದಾಗಿ ಕೈ ಸುಟ್ಟುಕೊಂಡಿದ್ದಾರೆ. ನಂತರ ಚಿನ್ನದ ಬೆಳೆ ಎಂದೆ ಕರೆಸಿಕೊಂಡಿದ್ದ ವೆನ್ನಿಲ್ಲಾವನ್ನು ಎರಡೂವರೆ ಎಕರೆ ಪ್ರದೇಶದಲ್ಲಿ ಶೇಡ್ ನೆಟ್ ವಿದಾನದಲ್ಲಿ ಬೆಳೆದು ಅಪಾರ ನಷ್ಟ ಅನುಭವಿಸದರು. ತರಕಾರಿ,ಟೊಮಟೊ,ಚಿಲ್ಲಿ ಮೆಣಸಿನ ಕಾಯಿಯನ್ನು ಬೆಳೆದು ಆರಂಭದಲ್ಲೆ ವ್ಯವಸಾಯದಲ್ಲಿ ನಷ್ಟ ಅನುಭವಿಸಿದರು ಧೃತಿಗೆಡದೆ ಮುಂದುವರಿದರು.
2005 ರ ನಂತರ ಒಮ್ಮೆ ಮೂತರ್ಿ ಅವರ ತಂದೆ ತೋಟಕ್ಕೆ ಬಂದಿದ್ದಾಗ ಅಡಿಕೆ ಇಲ್ಲದ ತೋಟ ಅದ್ಯಾವ ಸೀಮೆ ತೋಟ. ಒಂದಷ್ಟು ಅಡಿಕೆ ಗಿಡ ಬೆಳೆ ಎಂದು ಮಗನಿಗೆ ಸಲಹೆ ನೀಡಿದ್ದಾರೆ. ಅದರಂತೆ ಬಾಳೆ ಮತ್ತು ಅಡಿಕೆ ಹಾಕಿದರು. ಮತ್ತೆ ನೀರಿನ ತೊಂದರೆಯಾಗಿ ಐದು ವರ್ಷದ ಫಸಲು ಬರುವಂತಹ ಹತ್ತು ಎಕರೆ ಪ್ರದೇಶದಲ್ಲಿದ್ದ ಅಡಿಕೆ ಗಿಡಗಳನ್ನು ಸಂಪೂರ್ಣವಾಗಿ ತೆಗೆಸಿ ಹಾಕಿದರು. ನೀರಿನ ವ್ಯವಸ್ಥೆಗಾಗಿ ಹದಿನಾಲ್ಕು ಎಕರೆ ಇದ್ದ ತೋಟವನ್ನು 30 ಎಕರೆಗೆ ವಿಸ್ತರಿಸಿಕೊಳ್ಳಬೇಕಾದ ಅನಿವಾರ್ಯತೆ ಬಂತು . ಒಂದು ಕಿ.ಮೀ.ದೂರದಲ್ಲಿ ನೀರಿಗಾಗಿಯೇ ಒಂದು ಎಕರೆ ಜಮೀನು ಖರೀದಿ ಮಾಡಿದ್ದನ್ನು ನೆನಪಿಸಿಕೊಳ್ಳುತ್ತಾರೆ.
ಅಪರೂಪದ ಹಣ್ಣುಗಳು: ಮೂತರ್ಿ ಅವರ ತೋಟದಲ್ಲಿ ಹಿಂಗು ಗಿಡ, ಲಿಚ್ಚಿ ಹಣ್ಣು ,ದಿವಿ ಹಲಸು,ವಾಟರ್ ಆಫಲ್, ವೈಟ್ ಸಪೋಟ,ದಾಲ್ಚಿನಿಯಂತಹ ವಿಶೇಷವಾದ ಅಪರೂಪದ ಹಣ್ಣಿನ ಗಿಡಗಳು ನೋಡಲು ಸಿಗುತ್ತವೆ.  ಪಣಿಯೂರು ತಳಿಯ ಮೆಣಸು,ಎಗ್ ಪ್ರೂಟ್,ಜಮ್ಮು ನೇರಳೆ, ರಾಮಫಲ, ಸೀತಾಫಲ,ಹನುಮಫಲ,ಬಟರ್ ಪ್ರೂಟ್ ಹೀಗೆ ಎಲ್ಲಾ ಬಗೆಯ ಹಣ್ಣಿನ ಗಿಡಗಳು. ತಿನ್ನಲೆಂದೆ ಹಾಕಿರುವ ಐದು ವಿಶೇಷ ತಳಿಯ ರೇಷ್ಮೆ ಹಣ್ಣಿನ ಗಿಡ. ಲವಂಗದ ಪರಿಮಳವಿರುವ ವೀಳ್ಯದೆಲೆ ಗಿಡ ಕೂಡ ತೋಟದ ವಿಶೇಷ ಆಕರ್ಷಣೆ.
ತಂಬಾಕು ಹೊಗೆ ತಂದ ಧಗೆ : ಹುಣಸೂರು, ಕೋಟೆ ಭಾಗಗಳಲ್ಲಿ ವ್ಯಾಪಕವಾಗಿ ತಂಬಾಕು ಕೃಷಿ ಮಾಡುತ್ತಿರುವುದೆ ಮಳೆ ಪ್ರಮಾಣ ಗಣನೀಯವಾಗಿ ಕಡಿಮೆ ಆಗಲು ಕಾರಣ ಎನ್ನುವ ಮೂತರ್ಿ ಅವರು ಜನ ಈ ಬಗ್ಗೆ ಎಚ್ಚತ್ತುಕೊಳ್ಳದಿದ್ದರೆ ಮುಂದೊಂದು ದಿನ ಕುಡಿಯುವ ನೀರಿಗೂ ಪರದಾಡಬೇಕಾಗುತ್ತದೆ ಎಂದು ಎಚ್ಚರಿಸುತ್ತಾರೆ.ತಂಬಾಕು ಸುಡಲು ಕಾಡು ನಾಶ ಮಾಡಿದರು,ಜೊತೆಯಲ್ಲಿ ಜಮೀನಿನಲ್ಲಿ ಇದ್ದ ಮರಗಳನೆಲ್ಲ ಕಡಿದರು.ಇದರಿಂದ ಮೋಡಗಳನ್ನು ಆಕರ್ಷಣೆ ಮಾಡಿ ಮಳೆ ತರಿಸಬೇಕಿದ್ದ ಮರಗಳೆ ನಾಶವಾದ ಮೇಲೆ ಮಳೆ ಎಲ್ಲಿಂದ ಬರುತ್ತದೆ.
ಆಫ್ರಿಕನ್ ದೇಶಗಳಲ್ಲಿ ಒಂದು ಎಕರೆ ತಂಬಾಕು ಹಾಕಬೇಕಾದರೆ ಇಂತಿಷ್ಟು ಪ್ರಮಾಣದಲ್ಲಿ ಗಿಡಗಳನ್ನು ಬೆಳೆಸಬೇಕು ಎಂಬ ಕಾನೂನು ಜಾರಿ ಮಾಡಲಾಗಿದೆ. ನಮ್ಮಲ್ಲಿ ಇಂತಹ ಯಾವ ನಿಯಮವೂ ಇಲ್ಲ. ನಷ್ಟ ಅನುಭವಿಸುತ್ತಿರುವ ರೈತರೆಲ್ಲ ಸೇರಿಕೊಂಡು ತಂಬಾಕು ಮಂಡಳಿ ಮೇಲೆ ಕೇಸ್ ಹಾಕಿದರೆ ಅವರು ನಮಗೆ ಬೇಸಾಯದಿಂದ ಆದ ನಷ್ಟವನ್ನು ಭರಿಸಬೇಕಾಗುತ್ತದೆ ಎಂದು ತಂಬಾಕು ಮಂಡಳಿಯವರ ಮೇಲೆ ಸಿಟ್ಟಾಗುತ್ತಾರೆ. ಅರಣ್ಯ ಇಲಾಖೆ ಅಧಿಕಾರಿಗಳಿಗೂ ಪರಿಸರ ಜ್ಞಾನ ಇಲ್ಲ. ಏಕರೂಪದ ಕಾಡನ್ನು ಬೆಳೆಸಲು ಹೊರಟ ಪರಿಣಾಮ ಹಣ್ಣು ಮತ್ತು ಮೇವಿನ ಗಿಡಗಳು ಇಲ್ಲದೆ ಕಾಡು ಪ್ರಾಣಿಗಳು ನಾಡಿಗೆ ಬರುವಂತಾಗಿದೆ.ಹಲಸು, ಬಿದಿರು ಕಾಡಿನಿಂದ ಕಣ್ಮರೆಯಾದವು ಆನೆಗಳು ನಾಡಿನತ್ತ ಮುಖಮಾಡಿದವು ಎನ್ನುತ್ತಾರೆ.
ನೀರು ಮತ್ತು ಹೊದಿಕೆ ಮುಖ್ಯ : ಯಾವುದೆ ಬೆಳೆ ಬೆಳೆಯಲು ನೀರು ಮತ್ತು ಮಣ್ಣಿನಲ್ಲಿ ಆದ್ರ್ರತೆ ಕಾಪಾಡಿಕೊಳ್ಳಲು ಹೊದಿಕೆ(ಮಲ್ಚಿಂಗ್)ಮುಖ್ಯ ಎನ್ನುವ ಮೂತರ್ಿ ಅವರು ತಮ್ಮ ತೋಟವನ್ನು ಹೆಚ್ಚು ಉಳುಮೆ ಮಾಡುವುದಿಲ್ಲ. ಮಳೆಗಾಲದಲ್ಲಿ ಒಮ್ಮೆ ಮಾತ್ರ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿಸಿ ಅಪ್ಪ ಸೆಣಬು,ಉರುಳಿ, ತಡಣಿ ಮತ್ತಿತರ ನವಧಾನ್ಯಗಳನ್ನು ಭಿತ್ತನೆ ಮಾಡುತ್ತಾರೆ. ಇದರಿಂದ ಭೂಮಿಯಲ್ಲಿ ಕಳೆ ಬರುವುದು ಕಡಿಮೆಯಾಗುತ್ತದೆ, ಜೊತೆಗೆ ಜೀವಂತ ಹಸಿರು ಹೊದಿಕೆಯಾಗಿ ಕೆಲಸಮಾಡುತ್ತದೆ. ಈ ಧಾನ್ಯಗಳು ಹೂ ಬಿಡುವ ಹಂತದಲ್ಲಿ ಹೆಣ್ಣಾಳುಗಳನ್ನು ಕರೆದು. ಬುಡ ಸಮೇತ ಕತ್ತರಿಸಿ ಮತ್ತೆ ಅದನ್ನು ಮಣ್ಣಿಗೆ ಹೊದಿಕೆಯಾಗಿಸುತ್ತಾರೆ.
ಆರಂಭದಲ್ಲಿ ಗಿಡಗಳನ್ನು ಹಾಕಿದ್ದಾಗ ಮೂರ್ನಾಲ್ಕು ವರ್ಷ ಜೀವಾಮೃತ ಮತ್ತು ಕಾಂಪೋಸ್ಟ್ ಗೊಬ್ಬರವನ್ನು ಕೊಡುತ್ತಿದ್ದೆ. ಈಗ ಅದೆಲ್ಲವನ್ನು ನಿಲ್ಲಿಸಿದ್ದೇನೆ. ಮಣ್ಣಿಗೆ ಹಸಿರು ಹೊದಿಕೆ ಮತ್ತು ನೀರು ಇಷ್ಷನ್ನು ಬಿಟ್ಟರೆ ಬೇರೆನೂ ಕೊಡುತ್ತಿಲ್ಲ ಎನ್ನುತ್ತಾರೆ.
ಹತ್ತು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಈಗ ಮಲ್ಲಿಕಾ, ರತ್ನ,ಕೇಸರ್,ಬೇನಿಶಾ,ಹಿಮಾಮ್ ಪಸಂದ್, ಬಾದಾಮಿ,ರಸಪುರಿ ಮಲಗೋವಾ ಸೇರಿದಂತೆ ವಿವಿಧ ತಳಿಯ ಮಾವು ಗಿಡಗಳನ್ನು ಹಾಕಿದ್ದಾರೆ. ಅಲ್ಲದೆ ಆಂಧ್ರ ಪ್ರದೇಶದ ವಿಜಯವಾಡದಿಂದ ತಂದಿರುವ ವಿಶೇಷವಾದ ಅಪರೂಪದ ತಳಿಯ ತೈವಾನ್ ರೆಡ್ ಎಂಬ 1500 ಸೀಬೆ ಗಿಡಗಳನ್ನು ಹಾಕಿದ್ದಾರೆ. ಇಂತಹ ಅಪರೂಪದ ತಳಿಗಳು ನಮ್ಮ ರೈತರಿಗೆ ಹತ್ತಿರದಲ್ಲಿ ಸಿಗುವುದಿಲ್ಲ. ದೂರದಿಂದ ತರಲು ಅಪಾರ ಹಣ ಮತ್ತು ಶ್ರಮ ವ್ಯರ್ಥವಾಗುತ್ತದೆ ಆದ್ದರಿಂದ ಮುಂದೆ ತಾವೆ ಇಲ್ಲಿ ನರ್ಸರಿ ಮಾಡಿ ಇಂತಹ ಅಪರೂಪದ ತಳಿಗಳನ್ನು ಕಸಿ ತಂತ್ರಜ್ಞಾನದಲ್ಲಿ ಬೆಳೆಸಿ ಮಾರಾಟ ಮಾಡುವ ಯೋಜನೆ ಹೊಂದಿರುವುದಾಗಿ ಮೂತರ್ಿ ಹೇಳಿದರು.
ಪ್ರಕೃತಿಗೆ ವಿರುದ್ಧವಾಗಿ ತಮ್ಮ ತೋಟದಲ್ಲಿ ಏನನ್ನೂ ಮಾಡುವುದಿಲ್ಲ. ರಸಾಯನಿಕ ಬಳಕೆಯಾಗಲಿ, ಯಾವುದೆ ಕ್ರಿಮಿನಾಶಕವನ್ನಾಗಲಿ ಇದುವರೆವಿಗೂ ನಾವು ಬಳಸಿಲ್ಲ. ನಮ್ಮದು ಸಂಪೂರ್ಣ ನೈಸಗರ್ಿಕ ತೋಟ ಎನ್ನುವ ಮೂತರ್ಿ, ತಮ್ಮ ತೋಟದಲ್ಲಿ ಬೆಳೆಯುವ ಹಣ್ಣು ಹಂಪಲುಗಳನ್ನು ನೇಸರದಲ್ಲೂ ಮಾರಾಟಕ್ಕೆ ಕೊಡುತ್ತೇವೆ. ಉಳಿದಂತೆ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರಿಗಳೆ ತೋಟಕ್ಕೆ ಬದು ಖರೀದಿ ಮಾಡಿಕೊಂಡು ಹೋಗುತ್ತಾರೆ, ನಮಗೆ ನಮ್ಮ ಉತ್ಪನ್ನಗಳ ಮಾರಾಟ ಎಂದಿಗೂ ಸಮಸ್ಯೆಯಾಗಿಲ್ಲ ಎನ್ನುತ್ತಾರೆ.
ದನಕರು, ಆಡು ಕುರಿಗಳಿಲ್ಲದೆ ವ್ಯವಸಾಯ ಮಾಡಬಾರದು ಎನ್ನುವ ಮೂತರ್ಿ ಅವರು, ಆರಂಭದ ಐದಾರು ವರ್ಷ ಕೃಷಿಯಿಂದ ಹೆಚ್ಚಿನ ಆದಾಯ ನಿರೀಕ್ಷೆ ಮಾಡಬಾರದು. ತೋಟ ಕಟ್ಟಲು ಸ್ವಲ್ಪ ಹೆಚ್ಚು ಹಣ ವೆಚ್ಚವಾಗುತ್ತದೆ. ನಂತರ ಅದು ದೀಘರ್ಾವಧಿಯಲ್ಲಿ ನಿರಂತರವಾಗಿ ಆದಾಯ ತರುವ ಮೂಲವಾಗಿ ಪರಿವರ್ತನೆಯಾಗುತ್ತದೆ. ಅದಕ್ಕಾಗಿ ಕೃಷಿಕನಿಗೆ ತಾಳ್ಮೆ ಮತ್ತು ಸಹನೆ ಇರಬೇಕು ಎನ್ನುತ್ತಾರೆ. ಆಸಕ್ತರು 9448050593 ಸಂಪಕರ್ಿಸಬಹುದು.

ಶುಕ್ರವಾರ, ಸೆಪ್ಟೆಂಬರ್ 23, 2016




ಮಂಡ್ಯದ ಮಣ್ಣಲ್ಲೂ ಕಂಪು ಬೀರಿತು ಕಾಫಿ
ಅಪಮಾನ,ಅಸಾಹಯಕತೆಗಳ ಮೆಟ್ಟಿನಿಂತ ಸಾಧಕ ಶ್ರೀನಿವಾಸ
ಶ್ರೀರಂಗಪಟ್ಟಣ : ಸಕರ್ಾರದಿಂದ ಸಿಗುವ ಸಕಲ ಸೌಲಭ್ಯಗಳೆಲ್ಲವನ್ನೂ ಬಳಸಿಕೊಂಡಿದ್ದೇವೆ. ಸಾಲವೊಂದನ್ನು ಹೊರತುಪಡಿಸಿ. ಸಹಕಾರ ಸಂಘಗಳಿಂದಾಗಲಿ,ಯಾವುದೇ ರಾಷ್ಟ್ರೀಕೃತ ಬ್ಯಾಂಕ್ಗಳಿಂದಾಗಲಿ ನಾವು ನಯಾ ಪೈಸೆ ಸಾಲಮಾಡಿಲ್ಲ. ಅಷ್ಟರಮಟ್ಟಿಗೆ ನಮ್ಮದು ಸ್ವಾವಲಂಭಿ, ಸುಸ್ಥಿರ ಕೃಷಿ. ನಾವೂ ನೆಮ್ಮದಿಯಿಂದ ಬದುಕಿ ನಮ್ಮೊಂದಿಗೆ ನಾಲ್ಕು ಸಂಸಾರಗಳು ನೆಮ್ಮದಿಯ ಜೀವನ ಸಾಗಿಸುವಂತೆ ನೋಡಿಕೊಂಡಿದ್ದೇವೆ. ಇದಕ್ಕಿಂತ ಆತ್ಮ ಸಂತೃಪಿ ಇನ್ನೆಲ್ಲಿದೆ, ನಮಗಿನ್ನೇನು ಬೇಕು ಎಂದರು ಯುವ ಸಾವಯವ ಕೃಷಿಕ ಅನಿಲ್ಕುಮಾರ್.
ಸದಾ ಕಬ್ಬು, ಬತ್ತ ಬೆಳೆಯುವ ಸಕ್ಕರೆ ನಾಡು ಎಂದೆ ಖ್ಯಾತಿ ಪಡೆದ ಮಂಡ್ಯದಲ್ಲಿ ಸದ್ದಿಲ್ಲದೆ ತಣ್ಣಗೆ ನಡೆಯುತ್ತಿರುವ ಕಾಫಿ ಕೃಷಿಯ ಬಗ್ಗೆ ನಾವು ಮೊದಲು ಕೇಳಿದಾಗ ಅಚ್ಚರಿಪಟ್ಟೆವು.ಆದರೆ ಅಲ್ಲಿಗೆ ಹೋಗಿ ನೋಡಿದಾಗ ಅಪ್ಪ ಮಕ್ಕಳಿಬ್ಬರು ಸೇರಿ ರೂಪಿಸಿರುವ ನಾಲ್ಕು ಎಕರೆ ಪ್ರದೇಶದಲ್ಲಿ ಅರಳಿನಿಂತ ಕಾಫಿ ತೋಟದಲ್ಲಿ ಗಿಡಗಳ ತುಂಬಾ ಹಣ್ಣುಗಳು, ನಡುವೆ ಹಲವಾರು ಬಗೆಯ ಸಾಂಬಾರ, ವಾಣಿಜ್ಯ, ಆಯರ್ುವೇದ,ಆಹಾರ,ಹಣ್ಣು ಹೀಗೆ ನಾನಾ ಬಗೆಯ ಗಿಡಗಳು ನಮ್ಮನ್ನು ಬೆರಗಾಗುವಂತೆ ಮಾಡಿದವು.
ಸಾಂಪ್ರದಾಯಿಕ ಪದ್ಧತಿಯನ್ನು ಬಿಟ್ಟು ಹೊಸ ಬಗೆಯ ಆಲೋಚನೆಗಳನ್ನು ರೂಢಿಸಿಕೊಂಡು, ತೋಟಗಾರಿಕೆ, ಕೃಷಿ,ಹೈನುಗಾರಿಕೆ  ಹೀಗೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡ ರೈತ ಕಟ್ಟಿದ ತೋಟ ಅದು.
ಪಾಲಹಳ್ಳಿಯಲ್ಲಿ ಸಾವಯವ ಕ್ರಾಂತಿ:
ಅಚ್ಚ ಹಸಿರಿನಿಂದ ಕಂಗೊಳಿಸುವ ತೋಟದಲ್ಲಿ ನಿಂತು ನೋಡಿದರೆ ಪೂರ್ವಕ್ಕೆ ಶ್ರೀರಂಗಪಟ್ಟಣ,ಪಶ್ಚಿಮಕ್ಕೆ ಕೃಷ್ಣರಾಜ ಸಾಗರ, ಉತ್ತರಕ್ಕೆ ರಂಗನತಿಟ್ಟು ದಕ್ಷಿಣಕ್ಕೆ ಮೈಸೂರು ನಡುವೆ ಇರುವುದೆ ಪಾಲಹಳ್ಳಿ.ಇಂತಹ ಪುಟ್ಟ ಗ್ರಾಮ ಪಾಲಹಳ್ಳಿಯ ಶ್ರೀನಿವಾಸ್ ಮತ್ತು ಅವರ ಮಗ ಅನಿಲ್ಕುಮಾರ್ ಸೇರಿ ರೂಪಿಸಿರುವ ನೈಸಗರ್ಿಕ ಸಮಿಶ್ರ ಬೆಳೆಯ ತೋಟ ಯುವ ಕೃಷಿಕರಿಗೆ ಮಾದರಿಯಾಗಿದೆ.
ಸಮಗ್ರ ಕೃಷಿ ಕ್ಷೇತ್ರದಲ್ಲಿ ಹತ್ತು ಹಲವು ಬೆಳೆಗಳನ್ನು ಮಿಶ್ರ ಬೇಸಾಯ ಪದ್ಧತಿಯಲ್ಲಿ ಬೆಳೆಯಲಾಗಿದ್ದು,ಅವು ಈಗ ನಿರಂತರ ಆದಾಯ ತಂದುಕೊಡುವ ಮೂಲಗಳಾಗಿ ಪರಿವರ್ತನೆಗೊಂಡಿವೆ.
ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗಮನಿಸಿ ರಾಜ್ಯ ಸರಕಾರ ಶ್ರೀನಿವಾಸ್ ಅವರಿಗೆ 2010-11 ನೇ ಸಾಲಿನಲ್ಲಿ ಕೃಷಿ ಪಂಡಿತ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಇದೆಲ್ಲದ್ದರ ಹಿಂದೆ ಅಪಾರ ಶ್ರಮ, ನೋವು, ಅಪಮಾನಗಳ ಸರಮಾಲೆಯೆ ಇದೆ. ಜೀವನದಲ್ಲಿ ಎದುರಾದ ಸಂಕಷ್ಟಗಳಿಗೆ ತಲೆಬಾಗದೆ ಇವರು ಮಾಡಿದ ಸಾಧನೆ ಸೋಮರಿಗಳನ್ನು ನಾಚಿಸುವಂತಿದೆ. ಕೃಷಿ ಎಂದರೆ ನಷ್ಟ ಎನ್ನುವವರಿಗೆ.ಖಂಡಿತಾ ಇಲ್ಲ ಲಾಭದಾಯಕ,ಇಲ್ಲಿದೆ ನೋಡಿ ಉತ್ತರ ಎಂಬತಿದೆ.
ಬಯೋ ಡೈಜಸ್ಟರ್, ಜೀವಾಮೃತ ಘಟಕ,ಬೀಜಾಮೃತ ಘಟಕ ಹಾಗೂ ಜೈವಿಕ ವಿಷ ಘಟಕಗಳನ್ನು ತುಂಬಾ ವ್ಯವಸ್ಥಿತವಾಗಿ ನಿಮರ್ಾಣಮಾಡಿಕೊಂಡು, ಕೊಟ್ಟಿಗೆ ಗೊಬ್ಬರ, ಮಾನವನ ಮಲದಿಂದಾದ ಕಾಂಪೋಸ್ಟ್ ಗೊಬ್ಬರವನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಂಡು ಇವರು ಮಾಡಿರುವ ಸಾವಯವ ಕೃಷಿ ಐದಾರು ಕುಟುಂಬಗಳು ನೆಮ್ಮದಿಯ ಜೀವನ ಕಂಡುಕೊಳ್ಳಲು ಸಹಕಾರಿಯಾಗಿದೆ. ನಾಲ್ಕು ಎಕರೆ ಪ್ರದೇಶದ ಸುತ್ತಲೂ ಸಿಲ್ವರ್, ಹೆಬ್ಬೇವು, ಗ್ಲಿರಿಸೀಡಿಯಾ ಮತ್ತಿತರ ಕಾಡು ಜಾತಿಯ ಮರಗಳನ್ನು ಬೆಳೆಯಲಾಗಿದೆ.ಇವು ತಡೆಗೋಡೆಗಳಾಗಿ ಕೆಲಸ ಮಾಡುವುದರ ಜತೆಗೆ ಹಸಿರೆ ಗೊಬ್ಬರವಾಗಿಯೂ ಉಪಯೋಗಕ್ಕೆ ಬರುತ್ತಿವೆ. 90 ತೆಂಗಿನ ಮರಗಳಿದ್ದು ವಾಷರ್ಿಕ 10 ರಿಂದ 12 ಸಾವಿರ ಕಾಯಿಗಳು ಸಿಗುತ್ತವೆ. ಸಾವಿರ ಅಡಿಕೆ ಮರಗಳಿದ್ದು ನಡುವೆ ಮೂರು ಸಾವಿರ ರೋಬಸ್ಟಾ ಮತ್ತು ಅರೇಬಿಕಾ ತಳಿಯ ಕಾಫಿ ಗಿಡಗಳಿವೆ. ಅಲ್ಲಲ್ಲಿ ನೂರಾರು ಜಾತಿಯ ಆಯರ್ುವೇದ, ಹಣ್ಣು,ಸಾಂಬಾರ ತಳಿಯ ವಿವಿಧ ತಳಿಯ ನೂರಾರು ಗಿಡಮರಗಳಿವೆ.ಒಟ್ಟಾರೆ ಇಡಿ ತೋಟ ಕಾಡು ಕೃಷಿ ಮಾದರಿಯಲ್ಲಿ ಅಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಎಲ್ಲೆ ಮಣ್ಣು ಹಿಡಿದು ನೋಡಿದರು ಎರೆಹುಳುಗಳು ಸದಾ ತೋಟದಲ್ಲಿ ಕೆಲಸಮಾಡುತ್ತಿರುವ ಸೈನಿಕರಂತೆ ಕಾಣುತ್ತವೆ.
ಕಷ್ಟ,ಅಪಮಾನಗಳಿಗೆ ಅಂಜಲಿಲ್ಲ:
ಪಾಲಹಳ್ಳಿಯ ಶ್ರೀನಿವಾಸ್ ಅವರದು ತುಂಬಾ ಕಷ್ಟದ, ನೋವಿನ.ಅಪಮಾನಗಳೆ ತುಂಬಿದ ಬದುಕು. ಅಂದು ಅವರು ಬಂದ ಕಷ್ಟಗಳಿಗೆ ಹೆದರಿ ಹೇಡಿಯಂತೆ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ.ಊರು ಬಿಟ್ಟು ಓಡಿ ಹೋಗಲಿಲ್ಲ.ಭೂಮಿತಾಯಿಯನ್ನು ನಂಬಿದರು. "ಪದ ಕುಸಿಯೆ ನೆವಿಹುದು ಮಂಕುತಿಮ್ಮ" ಎಂಬ ಡಿವಿಜಿಯವರ ಕಗ್ಗದ ಸಾಲಿನಂತೆ ನಂಬಿದ ನೆಲ ಅವರನ್ನು ಕೈ ಬಿಡಲಿಲ್ಲ. ಇಂದು ಸರಿಕರ ಎದುರು ತಲೆ ಎತ್ತಿ ನಡೆಯುವಂತೆ ಮಾಡಿತು.ಸಾವಿರಾರು ಜನರಿಗೆ ಮಾದರಿಯಾಗುವಂತೆ ಮಾಡಿತು.
ಬಾಲ್ಯದಲ್ಲೆ ತಂದೆಯನ್ನು ಕಳೆದುಕೊಂಡ ಶ್ರೀನಿವಾಸ್ ತಾಯಿಯ ಸಹೋದರಿಯ ಊರಾದ ಬಲ್ಲೇನಹಳ್ಳಿಯಲ್ಲಿ ಕೃಷಿ ಕಾಯಕ ಮಾಡುತ್ತಾ ಪಾಂಡವಪುರ ಸಕ್ಕರೆ ಕಾರ್ಖನೆಗೆ ಎತ್ತಿನ ಗಾಡಿಯಲ್ಲಿ ಕಬ್ಬು ಸಾಗಿಸುತ್ತಾ, ಕೋಳಿ ಫಾರಂ ನೋಡಿಕೊಳ್ಳುತ್ತಾ ಅನುಭವ ಪಡೆದುಕೊಂಡರು.
ಅಂದು ಚಿಕ್ಕಮ್ಮನ ಮನೆಯಲ್ಲಿ ನಡೆದ ಒಂದು ಸಣ್ಣ ಘಟನೆಯಿಂದ ಬೇಸರಮಾಡಿಕೊಂಡು ಮರಳಿ ಪಾಲಹಳ್ಳಿಗೆ ಬಂದರು.ನಂತರ ಸೋದರ ಮಾವನ ಆಶ್ರಯದಲ್ಲಿ ಮೈಸೂರಿನ ಕೆಆರ್ ಮಿಲ್ನಲ್ಲಿ ನೌಕರಿಗೆ ಸೇರಿಕೊಂಡರು. ಕಾಖರ್ಾನೆ ಬಾಗಿಲು ಮುಚ್ಚಿದಾಗ ಬಂದ ಮೂರು ಸಾವಿರ ರೂಪಾಯಿ ಪಿಎಫ್ ಹಣದಿಂದ ಕೋಳಿಫಾರಂ ಆರಂಭಿಸಿ, ಅದರಲ್ಲಿಯೂ ನಷ್ಟ ಅನುಭವಿಸಿದರು.ನಂತರ ದಿನಸಿ ಅಂಗಡಿ ತೆರೆದು ಸ್ವಲ್ಪ ಆದಾಯಗಳಿಸಿದರು. ಮತ್ತೆ ಬೇಸಾಯದ ಪ್ರೀತಿ ಅವರನ್ನು ದೂರದ ಎಚ್.ಡಿ.ಕೋಟೆವರೆಗೂ ಕರೆದುಕೊಂಡು ಹೋಯಿತು.
ದಿನಸಿ ಅಂಗಡಿಯಿಂದ ಬಂದ 60 ಸಾವಿರ ಆದಾಯದ ಜತೆ 70 ಸಾವಿರ ರೂಪಾಯಿ ಕೈಸಾಲ ಮಾಡಿ ಎಚ್.ಡಿ. ಕೋಟೆಯ ಬೆಳಗನಹಳ್ಳಿ ಕಾವಲ್ ಸಮೀಪ ಆರು ಎಕರೆ ಜಮೀನು ಖರೀದಿಮಾಡಿದರು. ಅಲ್ಲಿ ನಿರಂತರವಾಗಿ ಎಂಟು ವರ್ಷ ಬತ್ತ, ಕಬ್ಬು, ರಾಗಿ, ತರಕಾರಿ ಬೆಳೆಗಳನ್ನು ಬೆಳೆದರು.ಅದ್ಯಾವುದು ಕೈ ಹತ್ತಲಿಲ್ಲ. ಕಾಡು ಪ್ರಾಣಿಗಳ ಹಾವಳಿ, ಬೆಲೆ ಕುಸಿತದಿಂದ ಕಂಗಾಲಾಗಿ ಅಲ್ಲಿಯೂ ಜಮೀನು ಮಾರಿ ಮರಳಿ ಪಾಲಹಳ್ಳಿಗೆ ಬಂದುಬಿಟ್ಟರು. ತಾನು ಏನಾದರೂ ಸಾಧಿಸಬೇಕು ಎಂಬ ಹಠ ಅವರಲ್ಲಿತ್ತು. ಆದರೆ ನಂಬಿದ ಭೂಮಿ ಸದಾ ಕೈ ಕೊಡುತಿದೆಯಲ್ಲ ಎಂಬ ಕೊರಗು ಅವರಿಗಿತ್ತು. ಇಂತಹ ಸಂಕಷ್ಟದ ಘಳಿಗೆಯಲ್ಲಿ ನೆರವಿಗೆ ಬಂದದ್ದೆ ರೈತ ಸಂಪರ್ಕ ಕೇಂದ್ರ.
ಸಂಜೀವಿನಿಯಾದ ರೈತ ಸಂಪರ್ಕ ಕೇಂದ್ರ:
ಬೆಳಗೊಳದ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿಯನ್ನು ಭೇಟಿಮಾಡಿದ ಶ್ರೀನಿವಾಸ್ ಪಾಲಹಳ್ಳಿಯಲ್ಲಿ ತಮಗೆ ನಾಲ್ಕು ಎಕರೆ ಜಮೀನು ಇದ್ದು, ತಮಗೆ ಸೂಕ್ತ ಸಲಹೆ ಮತ್ತು ಮಾರ್ಗ ದರ್ಶನಮಾಡುವಂತೆ ಕೇಳಿಕೊಂಡರು. ಅಂದು ಅವರು ಹೇಳಿದ ನೀತಿ ಪಾಠ ಶ್ರೀನಿವಾಸ್ ಅವರ ಕಣ್ಣು ತೆರೆಸಿತು.
"ನಿಮಗೆ ಭೂಮಿ ಇದೆ, ಬುದ್ಧಿ ಇದೆ. ನೀವು ಓದದಿದ್ದರೆ ನಷ್ಟವೇನೂ ಆಗಿಲ್ಲ. ನೀವ್ಯಾಕೆ ಬೇರೆ ಕಡೆ ಕೂಲಿಗೆ ಹೋಗಬೇಕು. ಭೂಮಿಯೇ ಪಾಠ ಶಾಲೆ.ನೇಗಿಲು,ಗುದ್ದಲಿ.ಪಿಕಾಸಿಯೇ ಲೇಖನಿ.ಬೆವರೆ ಶಾಯಿ. ನನ್ನ ತಿಳುವಳಿಕೆ ಮತ್ತು ನಿಮ್ಮ ಶ್ರಮ ಎರಡೂ ಸೇರಿದರೆ ಹತ್ತಾರು ಮಂದಿ ಗುರುತಿಸುವ ಗಣ್ಯ ವ್ಯಕ್ತಿ ನೀವಾಗುತ್ತೀರಿ" ಎಂದು ಕೃಷಿ ಅಧಿಕಾರಿ ಹೇಳಿದರು.
ಹಾಗಾದರೆ ಒಂದು ಕೈ ನೋಡಿಯೇ ಬಿಡುವ ಎಂದು ನಿರ್ಧರಿಸಿದರು. ಕೃಷಿ, ತೋಟಗಾರಿಕೆ, ಹೈನುಗಾರಿಕೆ ಇಲಾಖೆ ಜೊತೆಗೆ ನಿಕಟ ಸಂಪರ್ಕ ಇಟ್ಟುಕೊಂಡು ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡರು.ಎರೆಹುಳು ರೈತನ ಮಿತ್ರನಾದರೆ, ಎತ್ತುಗಳು ತೋಟದ ಸೈನಿಕ ಎನ್ನುವುದನ್ನು ಅನುಭವದಿಂದ ಕಂಡುಕೊಂಡರು.
ಆಡು,ಕುರಿ. ಮುರ್ರಾ ತಳಿಯ ಎಮ್ಮೆಗಳನ್ನು ಸಾಕಿದೆ.ಹೊಲಕ್ಕೆ ಗೊಬ್ಬರವು ಆಯ್ತು ಜೀವನ ನಿರ್ವಹಣೆಗೆ ದಾರಿಯೂ ಆಯ್ತು ಅಲ್ಲಿಂದ ಮತ್ತೆ ನಾನು ತಿರುಗಿ ನೋಡಲೇ ಇಲ್ಲ.ಮಗ ಬಿಕಾಂ ಪದವಿ ಪಡೆದು ಆದರ್ಶ ಕೃಷಿಕನಾಗಿದ್ದಾನೆ. ಮಗಳು ಅರುಣ್ಕುಮಾರಿ ಮಾನಸ ಗಂಗೋತ್ರಿಯಲ್ಲಿ ಆಂಗ್ಲಭಾಷೆಯಲ್ಲಿ ಎಂ.ಎ.ಮುಗಿಸಿ ಮೈಸೂರಿನ ಕಾಲೇಜಿನಲ್ಲಿ ಆಂಗ್ಲ ಉಪನ್ಯಾಸಕಿಯಾಗಿದ್ದಾಳೆ ಎಂದು ತಮ್ಮ ಯಶಸ್ಸಿನ ಕತೆಯನ್ನು ಶ್ರೀನಿವಾಸ್ ಬಿಚ್ಚಿಟ್ಟರು. ತೋಟದ ಸುತ್ತಾ ಕೇವಲ ಮೂರು ಸಾವಿರ ರೂಪಾಯಿ ವೆಚ್ಚಮಾಡಿ ಹಾಕಿದ್ದ ಸಿಲ್ವರ್ ಸಸಿಗಳು 15 ವರ್ಷದ ನಂತರ ನಾಲ್ಕುವರೆ ಲಕ್ಷ ರೂಪಾಯಿ ಆದಾಯ ತಂದುಕೊಟ್ಟಿವೆ.ಯಾವ ಕಂಪನಿಯ ವಿಮೆ ಮಾಡಿಸಿದರೆ ತಾನೆ ಇಷ್ಟೊಂದು ಆದಾಯ ಬರುತ್ತೆ ಹೇಳಿ ಎಂದು ಅವರು ನಕ್ಕರು.ಬೇಸಾಯ ನೀ ಸಾಯ ನಿಮ್ಮಪ್ಪ ಸಾಯ ಎನ್ನುವ ಈ ದಿನಗಳಲ್ಲಿ ಅವರ ನಗು ನಮ್ಮನ್ನು ಒಂದು ಕ್ಷಣ ಯೋಚಿಸುವಂತೆ ಮಾಡಿತು. ಹೆಚ್ಚಿನ ಮಾಹಿತಿಗೆ ಶ್ರೀನಿವಾಸ್ 9945419236 ಸಂಪಕರ್ಿಸಿ.
ಬೇಸಾಯದಿಂದ ನೆಮ್ಮದಿ...
ಹಣ ಗಳಿಸಬೇಕು ಎನ್ನುವವರು ರಿಯಲ್ ಎಸ್ಟೇಟ್ ಮಾಡಲಿ,ವ್ಯಾಪಾರ ಮಾಡಲಿ.ನೆಮ್ಮದಿ, ಆರೋಗ್ಯ ಬೇಕು ಎನ್ನುವವರು ಕೃಷಿ ಕ್ಷೇತ್ರಕ್ಕೆ ಬರಲಿ ಎಂದವರು ಪಾಲಹಳ್ಳಿಯ ಶ್ರೀನಿವಾಸ್ ಅವರ ಮಗ ಅನಿಲ್ಕುಮಾರ್.
ಇವರು ಮೈಸೂರಿನ ಡಿ.ಬನುಮಯ್ಯ ಸಂಜೆ ಕಾಲೇಜಿನಲ್ಲಿ 2006ರಲ್ಲಿ ಬಿ.ಕಾಂ.ಪದವಿ ಮುಗಿಸಿ ,ಪಾಲ್ಕನ್ ಟೈರ್ ಕಾಖರ್ಾನೆಯಲ್ಲಿ ಬದಲಿ ನೌಕರನಾಗಿ,ಪ್ರತಿಷ್ಠಿತ ಇನ್ಫೋಸಿಸ್ ಕಂಪನಿಯಲ್ಲಿ ನೌಕರಿ ಮಾಡಿದ್ದಾರೆ.ಕೊನೆಗೆ ಕೆಲಸದ ಒತ್ತಡ ಮತ್ತು ನಗರ ಬದುಕು ಬೇಡವೆನಿಸಿ ಮರಳಿ ಪಾಲಹಳ್ಳಿಯಲ್ಲಿ ತಂದೆಯ ಜೊತೆ ಕೃಷಿ ಮಾಡುತ್ತಿದ್ದಾರೆ.
ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದರಿಂದ ಲಾಭ ಇದೆ. ಇವು ಆರಂಭದಲ್ಲಿ ತುಸು ಹೆಚ್ಚಿನ ಬಂಡವಾಳ ಬೇಡುತ್ತವೆ.ಗಿಡದ ಬೇರುಗಳು ಆಳದವರೆಗೆ ಹೋಗುವುದರಿಂದ ಇವುಗಳ ಆಯಸ್ಸು ಹೆಚ್ಚು, ಆದಾಯವು ಹೆಚ್ಚು. ಆದ್ದರಿಂದ ನಮ್ಮ ರೈತರು ತೋಟಗಾರಿಕಾ ಬೆಳೆಗಳಿಗೆ ಪ್ರಧಾನ್ಯತೆ ನೀಡಿದರೆ ಒಳ್ಳೆಯದು. ಗಂಗಾಮಾತೆ ಎಲ್ಲರಿಗೂ ಸಿಗುವುದಿಲ್ಲ ನಮಗೆ ಸಿಕ್ಕಿದ್ದಾಳೆ. ಹಾಗಂತ ನಾವು ನೀರನ್ನು ದುರ್ಬಳಕ್ಕೆ ಮಾಡಿಲ್ಲ ಹನಿ ನೀರಾವರಿ ಮತ್ತು ಸ್ಪಿಂಕ್ಲರ್ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ನೀರಿನಲ್ಲೂ ಮಿತವ್ಯಯ ಕಾಪಾಡಿಕೊಂಡಿದ್ದೇವೆ.
ತರಕಾರಿ ಬೆಳೆಗಳು.ಜೂಜು ಇದ್ದಂತೆ. ಒಮ್ಮೆ ನಾವು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಕ್ಕಿದರೆ ಮತ್ತೊಮ್ಮ ಬೆಲೆ ಕುಸಿಯಿತ್ತದೆ. ಅಂತಹ ಸಂದರ್ಭದಲ್ಲಿ ರೈತರು ಅಪಾಯಕ್ಕೆ ಸಿಲುಕಿಕೊಳ್ಳುತ್ತಾರೆ.ಜೊತೆಗೆ ಔಷದಿ, ಕಳೆ ತೆಗೆಯುವುದು, ಗೊಬ್ಬರ ಎಲ್ಲ ಖಚರ್ು ಸೇರಿ ತರಕಾರಿ ದುಬಾರಿ ಖಚರ್ು ಬೇಡುತ್ತದೆ. ಇದು ನಾನು ಕಂಡುಕೊಂಡ ಅನುಭವ ಎನ್ನುತ್ತಾರೆ ಅನಿಲ್.
ನಾವು ದುಂದು ವೆಚ್ಚ ಮಾಡದೆ ಬೇಸಾಯ ಮಾಡುತ್ತಿದ್ದೇವೆ.ಮೈಸೂರು ತೋಟಗಾರಿಕೆ ವಿಶ್ವ ವಿದ್ಯಾನಿಲಯ ಪ್ರಾಧ್ಯಾಪಕರಾದ ಡಾ.ಬಿ.ಎಸ್.ಹರೀಶ್ ಅವರ ಸಲಹೆ ಮತ್ತು ಮಾರ್ಗದರ್ಶನ ನಮ್ಮ ಸಾಧನೆಗೆ ಸಹಕಾರಿಯಾಗಿದೆ. ಅವರ ಸಲಹೆಯಂತೆ ನಾನು ಕೆಲವು ಹಣ್ಣಿನ ಗಿಡಗಳ ನರ್ಸರಿಯನ್ನು ಆರಂಭಿಸಿದ್ದು ತೆಂಗು, ಬೆಣ್ಣೆ ಹಣ್ಣು (ಬಟರ್ ಪ್ರೂಟ್) ಮತ್ತಿತರ ಗಿಡಗಳು ನಮ್ಮಲ್ಲಿ ಮಾರಾಟಕ್ಕೆ ಲಭ್ಯ ಇವೆ. ಹೊಸ ಮಾದರಿಯಲ್ಲಿ ಏಲಕ್ಕಿ ಬಾಳೆ ಬೆಳೆದಿದ್ದೇನೆ. ನಾನಾ ತಳಿಯ ಬಾಳೆಯ ಗಿಡಗಳು ನಮ್ಮ ತೋಟದಲ್ಲಿ ಜಾಗ ಪಡೆದಿವೆ. ನಮ್ಮ ತೋಟಕ್ಕೆ ಮುಖ್ಯವಾಗಿ ಬಯೋಡೈಜಸ್ಟರ್ನಿಂದ ಬಂದ ದ್ರವ ರೂಪದ ರಸಸಾರ ಮತ್ತು ಕೊಟ್ಟಿಗೆ ಗೊಬ್ಬರವನ್ನು ಉಪಯೋಗಿಸುತ್ತೇವೆ.ಟ್ರೈಕೋಡಮರ್ಾ ಮತ್ತು ಶೀಲಿಂದ್ರನಾಶಕ ಜೈವಿಕ ಗೊಬ್ಬರಗಳು ನಮ್ಮಲ್ಲಿ ಸದಾ ಇರುತ್ತವೆ. ಹಾಲಿಗೆ ಹೆಪ್ಪು ಹಾಕಿದಂತೆ ತೋಟಕ್ಕೆ ಜೀವಾಮೃತವನ್ನು ಬಳಸುತ್ತೇವೆ. ಒಟ್ಟಾರೆ ಕೃಷಿ ನಮಗೆ ಖುಷಿ ತಂದಿದೆ ಎನ್ನುತ್ತಾರೆ. ತೋಟದಲ್ಲಿ ಬೆಳೆಯಲಾಗಿರುವ ವಾಣಿಜ್ಯ, ಆಹಾರ, ದ್ವಿದಳ, ಏಕದಳ, ಸಾಂಬಾರ, ತೋಟಗಾರಿಕೆ ಬೆಳೆಗಳ ಬಗ್ಗೆ ಸಮಗ್ರ ಮಾಹಿತಿ ಇರುವ ದೊಡ್ಡ ಬೋಡರ್್ ಒಂದು ತೋಟಕ್ಕೆ ಹೋದವರ ಗಮನಸೆಳೆಯುತ್ತದೆ. ಆಸಕ್ತರು 8095777255 ಸಂಪಕರ್ಿಸಬಹುದು.


ಗುರುವಾರ, ಸೆಪ್ಟೆಂಬರ್ 15, 2016


 ರೈತ ಸಂಘಟನೆ ಜತೆ ಕೃಷಿಯಲ್ಲೂ 
ಯಶಸ್ಸು ಕಂಡ ಹೋರಾಟಗಾರ

ಬಸವಣ್ಣನ ಕಾಯಕ, ಪ್ರೋಫೆಸರ್ ಹೋರಾಟ ಆದರ್ಶ ಎಂದ ವಿದ್ಯಾ ಸಾಗರ

ಮೈಸೂರು : ರೈತ ಸಂಘಟನೆ, ಚಳವಳಿ ಮತ್ತು ಕೃಷಿಯನ್ನು ಸಮನಾಗಿ ಸ್ವೀಕರಿಸಿ ರೈತಪರ ಹೋರಾಟಗಳಲ್ಲಿ ಭಾಗಿಯಾಗುತ್ತಲೆ ಬೇಸಾಯವನ್ನು ಮಾಡಿ ಯಶಸ್ವಿ ನೈಸಗರ್ಿಕ ಕೃಷಿಕರಾದ ಯುವ ರೈತ ನಾಯಕನ ಯಶೋಗಾಥೆ ಇದು. ತಾಂಡವಪುರದ ದಿ.ತಾ.ರಾಮೇಗೌಡ ಮತ್ತು ಸಾವಿತ್ರಮ್ಮ ದಂಪತಿಯ ಪುತ್ರ ಪದವಿಧರ ನಂಜನಗೂಡು ತಾಲೂಕು ರೈತ ಸಂಘದ ಅಧ್ಯಕ್ಷ ವಿದ್ಯಾ ಸಾಗರ ಅವರೆ ಈ ವಾರದ ಬಂಗಾರದ ಮನುಷ್ಯ.
ಐದು ಎಕರೆ ನೀರಾವರಿ ಜಮೀನು. ಐವತ್ತು ಕುರಿ. ಒಂದು ನಾಟಿ ಹಸು. ಯಂತ್ರಗಳ ಬಳಕೆ ಇಲ್ಲ. ಬೆಳಗಿನ ಏಳು ಗಂಟೆಯಿಂದ ಹನ್ನೆರಡು ಗಂಟೆವರೆಗೆ ಜಮೀನಿನಲ್ಲಿ ಕಾಯಕ.ರಸಾಯನಿಕ,   ಕ್ರಿಮಿನಾಶಕ ಬಳಕೆ ಇಲ್ಲ. ಅಡಿಕೆ, ತೆಂಗು,ಕೋ ಕೋ,ಸೊಪ್ಪು ತರಕಾರಿ ಸೇರಿದಂತೆ ಹತ್ತಕ್ಕೂ ಹೆಚ್ಚು ಬೆಳಗಳ ಸಂಯೋಜನೆ. ಸುಭಾಷ್ ಪಾಳೇಕಾರ್ ಪದ್ಧತಿಯಲ್ಲಿ ಕಟ್ಟಿದ ನೈಸಗರ್ಿಕ ತೋಟದಲ್ಲಿ ವಾಷರ್ಿಕ ಕನಿಷ್ಟ ನಾಲ್ಕು ಲಕ್ಷ ರೂಪಾಯಿಗೂ ಹೆಚ್ಚು ಆದಾಯ ನಿಶ್ಚಿತ. ಇದು ಮೈಸೂರು ತಾಲೂಕು ತಾಂಡವಪುರದ ರೈತ ಯುವ ನಾಯಕ ವಿದ್ಯಾ ಸಾಗರ ಅವರ ಅನುಭವದ ನುಡಿ.
ಮೈಸೂರಿನಿಂದ ನಂಜನಗೂಡಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ತಾಂಡವಪುರದದ ಬಸ್ ನಿಲ್ದಾಣದಿಂದ ಬಲಕ್ಕೆ ತಿರುಗಿಕೊಂಡರೆ ಸಿಗುವ ಎಚಗಳ್ಳಿ ಮತ್ತು ಹಳ್ಳಿದಿಡ್ಡಿ ಗ್ರಾಮಗಳ ನಡುವೆ ವಿದ್ಯಾ ಸಾಗರ ರೂಪಿಸಿರುವ ನೈಸಗರ್ಿಕ ತೋಟ ಸುಸ್ಥಿರ, ಸಮಗ್ರ ಬೇಸಾಯದ ಮಾದರಿ ಕ್ಷೇತ್ರ.
ನಾಲ್ಕು ಎಕರೆ ಪ್ರದೇಶದಲ್ಲಿ 1600 ಅಡಿಕೆ ಗಿಡಗಳಿದ್ದು ಪ್ರಸ್ತುತ 500 ಗಿಡಗಳು ಫಸಲು ನೀಡುತ್ತಿವೆ. ಒಂದು ನೂರು ತೆಂಗಿನ ಗಿಡಗಳಿದ್ದು 30 ಮರಗಳು ಕಾಯಿ ಕೊಡುತ್ತಿವೆ. ಅದರ ನಡುವೆ ಬಾಳೆ, ಶುಂಠಿ,ಏಲಕ್ಕಿ, ನುಗ್ಗೆ, ಮೈಸೂರು ವೀಳ್ಯದೆಲೆ, ದಾಳಿಂಬೆ, ಸಪೋಟ,ಕರಿಬೇವು, ಬೆಟ್ಟದ ನೆಲ್ಲಿ, ಚೆಂಬೆ, ಗ್ಲಿರಿಸೀಡಿಯಾ, ಶುಂಠಿ, ನಿಂಬೆ, ಮೂಲಂಗಿ, ತೊಗರಿ,ಸೊಪ್ಪು, ತರಕಾರಿ ಅಷ್ಟೆ ಅಲ್ಲ ದನ ಕುರಿಗಳಿಗೆ ಬೇಕಾದ ಮೇವು... ಹೀಗೆ ಹತ್ತು ಹಲವು ಸಸ್ಯ ಪ್ರಬೇಧಗಳು ಸಂಪೂರ್ಣ ನೈಸಗರ್ಿಕ ಪದ್ಧತಿಯಲ್ಲಿ ಬೆಳೆದು ಅಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ.
ಅಡಿಕೆ ಮತ್ತು ತೆಂಗು ಮುಖ್ಯ ವಾಷರ್ಿಕ ಬೆಳೆಗಳಾದರೆ ಉಳಿದವು ಭೂಮಿಯ ಫಲವತ್ತತೆ ಹೆಚ್ಚಿಸಿ, ಮಣ್ಣಿನಲ್ಲಿ ಹ್ಯೂಮಸ್ ನಿಮರ್ಾಣ ಮಾಡುವುದರ ಜತೆಗೆ ಹಸಿರು ಹೊದಿಕೆಯಾಗಿ ಕೆಲಸಮಾಡುತ್ತವೆ. ನಿರಂತರ ಆದಾಯದ ಮೂಲಗಳು ಆಗಿವೆ. ಉಳಿದ ಒಂದು ಎಕರೆ ಪ್ರದೇಶದಲ್ಲಿ ಕುರಿ ಶೆಡ್ ನಿಮರ್ಾಣ ಮಾಡಿದ್ದು ಅಲ್ಲಿ ಸಿರಿಧಾನ್ಯಗಳನ್ನು ಬೆಳೆಯುವ ಸಿದ್ಧತೆಯಲ್ಲಿದ್ದಾರೆ.
ಬಸವಣ್ಣನವರ ಕಾಯಕ ತತ್ವ ಮತ್ತು ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿಯವರು ಹಾಕಿಕೊಟ್ಟ ಹೋರಾಟದ ಮಾರ್ಗ ನಮಗೆ ದಾರಿ ದೀಪ ಎನ್ನುವ ವಿದ್ಯಾ ಸಾಗರ ಸಂಘಟನೆ, ಹೋರಾಟ ಮತ್ತು ಕೃಷಿಯನ್ನು ಸರಿದೂಗಿಸಿಕೊಂಡು ಹೋಗುತ್ತಿರುವ ರೀತಿ ಮೆಚ್ಚುವಂತದ್ದು. ಚಳುವಳಿ, ಹೋರಾಟಗಳಲ್ಲೆ ಕಳೆದು ಹೋಗಿ ವೈಯಕ್ತಿಕ ಬದುಕನ್ನು ಸ್ವಚ್ಛವಾಗಿರಿಸಿಕೊಂಡು ಕೃಷಿಯಲ್ಲೂ ಯಶಸ್ಸು ಸಾಧಿಸಿ ಗ್ರಾಮೀಣ ಯುವಕರಿಗೆ ಮಾದರಿಯಾಗಿದ್ದಾರೆ.
ಬದುಕು ಬದಲಿಸಿದ ಪುಸ್ತಕ : ಕಾಲೇಜಿನಲ್ಲಿ ಪದವಿ ವ್ಯಾಸಂಗಮಾಡುತ್ತಿದ್ದಾಗ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಮಸನೊಬ್ಬ ಪುಕೊವಕ ಬಗ್ಗೆ ಬರೆದ ಸಹಜ ಕೃಷಿ ಪುಸ್ತಕ ಓದಿ ಪ್ರಭಾವಿತರಾದ ಇವರು ತಾವೂ ಅದೆ ಹಾದಿಯಲ್ಲಿ ಸಾಗಬೇಕೆಂದು ನಿರ್ಧರಿಸಿದರು.ಮರಳಿ ಹಳ್ಳಿಗೆ ಬಂದು ನಿರಂತರವಾಗಿ ಹತ್ತು ವರ್ಷಗಳ ಕಾಲ ಸಹಜ ಕೃಷಿಯಲ್ಲಿ ಕಬ್ಬು ಬೆಳೆದರು.
ಕಬ್ಬಿನ ದರ ಕುಸಿತ ಮತ್ತು ಕಾಖರ್ಾನೆಯವರ ರೈತ ವಿರೋಧಿ ಧೋರಣೆಯಿಂದ ಬೇಸತ್ತು ಇತ್ತೀಚಿಗೆ ಕಬ್ಬು ಬೆಳೆಯುವುದನ್ನು ನಿಲ್ಲಿಸಿದ್ದಾರೆ. ರಾಜ್ಯದಲ್ಲಿ ಆಗ ತಾನೆ ಸುಭಾಷ್ ಪಾಳೇಕರ್ ಅವರ ಶೂನ್ಯ ಬಂಡವಾಳ ಕೃಷಿ ಪ್ರವರ್ಧನಮಾನಕ್ಕೆ ಬರುತ್ತಿತ್ತು. 2004 ರಲ್ಲಿ ಸುತ್ತೂರಿನಲ್ಲಿ ಐದು ದಿನಗಳ ಕಾಲ ನಡೆದ ಪಾಳೇಕಾರ್ ಅವರ ಕೃಷಿ ಕಾರ್ಯಗಾರದಲ್ಲಿ ಭಾಗವಹಿಸಿ ಮತ್ತಷ್ಟು ಅನುಭವ ಪಡೆದುಕೊಂಡು, ನೈಸಗರ್ಿಕ ಕೃಷಿಕ ಬನ್ನೂರು ಕೃಷ್ಣಪ್ಪ ಅವರ ಮಾರ್ಗದರ್ಶನದಲ್ಲಿ ಬೇಸಾಯ ಮಾಡುತ್ತಿದ್ದಾರೆ. 2004 ರಿಂದ ಆರಂಭವಾದ ಕೃಷಿ ಕಾಯಕ ನಿಂತಿಲ್ಲ.ಕೃಷಿಯಲ್ಲಿ ನಷ್ಟವನ್ನು ಅನುಭವಿಸಿಲ್ಲ ಎನ್ನುತ್ತಾರೆ ವಿದ್ಯಾ ಸಾಗರ.
ಯಂತ್ರಗಳ ಬಳಕೆ ಇಲ್ಲ : ಉಳುಮೆ ಮತ್ತು ಯಂತ್ರಗಳ ಬಳಕೆಯನ್ನು ಸಂಪೂರ್ಣ ನಿಷಿದ್ಧ. ನೈಸಗರ್ಿಕ ಕೃಷಿಗೆ ತೋಟವನ್ನು ವಿಶಿಷ್ಟ ಮಾದರಿಯಲ್ಲಿ ಸಿದ್ಧಪಡಿಸಿಕೊಂಡಿದ್ದಾರೆ.ತಮ್ಮ ತೋಟದಲ್ಲಿ ದಕ್ಷಿಣೋತ್ತರವಾಗಿ ಹದಿನೇಳು ಅಡಿ ಅಂತರದ ಸಾಲು ಮಾಡಿ  ಎರಡು ಅಡಿ ಅಗಲ ಮತ್ತು ಎರಡು ಅಡಿ ಆಳದಲ್ಲಿ ಟ್ರಂಚ್ ತೆಗೆಸಿದ್ದಾರೆ. ಟ್ರಂಚ್ನಿಂದ ಹೊರತೆಗೆದ ಮಣ್ಣನ್ನು ಎರಡು ಟ್ರಂಚ್ಗಳ ಮಧ್ಯ ಸಮನಾಗಿ ಹರಡಿ, ಗಿಡದಿಂದ ಗಿಡಕ್ಕೆ ಎಂಟುವರೆ ಅಡಿ ಅಂತರ ಬರುವಂತೆ ಅಡಿಕೆ ಸಸಿ ನಾಟಿಮಾಡಿದ್ದಾರೆ. ಮಧ್ಯ ನಾಲ್ಕು ಅಡಿ ಅಂತರದಲ್ಲಿ ತೊಗರಿ ಮತ್ತು ಬೆಂಡೆಕಾಯಿ ಬೀಜ. ಇವುಗಳಿಗೆ ತೊಂದರೆಯಾಗದಂತೆ ನಡುವೆ ಏಲಕ್ಕಿ ಬಾಳೆಯನ್ನು ಸಂಯೋಜನೆ ಮಾಡಲಾಗಿದೆ.
ನಂತರ ತೋಟದ ತುಂಬೆಲ್ಲಾ ಚೆಂಬೆ ಚೆಲ್ಲಿ ಹಸಿರು ಹೊದಿಕೆ ನಿಮರ್ಾಣ ಮಾಡಿ, ಚಂಬೆಯೊಂದಿಗೆ ಮೂಲಂಗಿ ಬೀಜವನ್ನು ಭಿತ್ತನೆ ಮಾಡಲಾಗಿದೆ.ಇದಲ್ಲದೆ ಗ್ಲಿರಿಸೀಡಿಯಾ, ನುಗ್ಗೆ, ಬಿನೀಸ್, ಶುಂಠಿ ಹೀಗೆ ಮನೆಗೆ ಬೇಕಾದ ಎಲ್ಲಾ ಬಗೆಯ ತರಕಾರಿ ಬೆಳೆಗಳನ್ನೆಲ್ಲ ಅದೆ ಜಾಗದಲ್ಲಿ ಅಲ್ಲಲ್ಲಿ ಬೆಳೆದು ಕಾಡು ಕೃಷಿ ಮಾದರಿಯನ್ನು ನಿಮರ್ಾಣಮಾಡಿ ಉಳಿದ ಕೆಲಸವನ್ನು ನಿಸರ್ಗಕ್ಕೆ ಒಪ್ಪಿಸಿದ್ದಾರೆ. ಪ್ರತಿಯೊಂದು ಬೆಳೆಯೂ ತೋಟದಲ್ಲಿರುವ ಫಿಕ್ಸಿಡ್ ಡಿಪಾಜಿಟ್ನಂತಿದ್ದು ಪ್ರತಿ ತಿಂಗಳು ಆದಾಯ ತಂದುಕೊಡುತ್ತವೆ. ನಮ್ಮ ತೋಟದ ಹತ್ತು ಕೆಜಿ ಕೊಬ್ಬರಿಯಿಂದ 8 ಲೀಟರ್ ಕೊಬ್ಬರಿ ಎಣ್ಣೆ ದೊರೆಯುತ್ತದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.
ನೀರಿನ ಮಿತ ಬಳಕೆ :  ಸಮಗ್ರ ಪದ್ಧತಿಯಲ್ಲಿ ಬೆಳೆದ ಬೆಳೆಗಳು ಮಳೆಗಾಲದಲ್ಲಿ ನೀರು ಕೇಳುವುದಿಲ್ಲ.ಬೇಸಿಗೆಯಲ್ಲೂ ಹೆಚ್ಚು ನೀರು ಕೊಡಬೇಕಾಗಿಲ್ಲ.ತೋಟದಲ್ಲಿ ಬರುವ ತ್ಯಾಜ್ಯ ಮತ್ತು ಕಳೆ ಗಿಡಗಳನ್ನು ಕಿತ್ತು ಟ್ರಂಚ್ಗೆ ತುಂಬಲಾಗುತ್ತದೆ. ಹದಿನೈದು ಅಥವಾ ತಿಂಗಳಿಗೆ ಒಂದು ಬಾರಿ ಮಾತ್ರ ಟ್ರಂಚ್ಗೆ ನೀರು ಕೊಡುತ್ತಾರೆ. ಇದಕ್ಕಾಗಿ ಹನಿ ನೀರಾವರಿಯನ್ನಾಗಲಿ, ಸ್ಪಿಂಕ್ಲರ್ ಪದ್ಧತಿಯನ್ನಾಗಲಿ ಅನುಸರಿಸಿಲ್ಲ. ಈಗ ಮಳೆ ಬಂತು ಮೂರ್ನಾಲ್ಕು ತಿಂಗಳು ಕಳೆದಿದೆ. ತೋಟಕ್ಕೆ ನೀರು ಕೊಟ್ಟು ತಿಂಗಳಾಗಿದೆ.ಆದರೂ ತೋಟ ಹಸಿರಾಗಿದೆ.
ಇದಕ್ಕೆಲ್ಲ ಕಾರಣ ಭೂಮಿಗೆ ನಾವು ಮಾಡಿರುವ ಹಸಿರು ಹೊದಿಕೆ. ಟ್ರಂಚ್ ಮೂಲಕ ಮಣ್ಣಿನಲ್ಲಿ ಹ್ಯೂಮಸ್ ನಿಮರ್ಾಣ ಮಾಡಿ ಗಿಡಗಳಿಗೆ ಪೌಷ್ಠಿಕ ಆಹಾರ ಸಿಗುವಂತೆ ಮಾಡಿರುವುದು ಎಂದು ಟ್ರಂಚ್ನಿಂದ ಮಣ್ಣನ್ನು ಬಗೆದು ತೋರಿಸುತ್ತಾರೆ. ಎರೆಗೊಬ್ಬರದಂತೆ ಮೃದುವಾಗಿ, ಸ್ಪಂಜಿನಂತೆ ಇದ್ದ ಮಣ್ಣು ತೋಟದಲ್ಲಿದ್ದ ಅಪಾರ ಸಸ್ಯ ವೈವಿಧ್ಯಗಳನ್ನು ಕಾಪಾಡುವ ವಿಸ್ಮಯದಂತಿದೆ.
ಅಲಲ್ಲಿ ತೇಗದ ಗಿಡಗಳನ್ನು ಹಾಕಿದ್ದು ನಾಲ್ಕೆ ತಿಂಗಳಲ್ಲಿ ಅವು ಆಳೆತ್ತೆರ ಬೆಳೆದು ದೀರ್ಘಕಾಲದಲ್ಲಿ ಆದಾಯ ತರುತ್ತವೆ. ಈ ನಡುವೆ ಬನ್ನೂರು ಕೃಷ್ಣಪ್ಪನವರ ಸಲಹೆಯಂತೆ ಹಾಕಿದ ಕೋ ಕೋ ಗಿಡಗಳು ಮೂರೆ ವರ್ಷದಲ್ಲಿ ಫಸಲು ಬಿಟ್ಟು ಅಚ್ಚರಿ ಮೂಡಿಸಿವೆ. ಬೇರೆಯವರ ತೋಟದಲ್ಲಿ ಹಾಕಿರುವ ಕೋ ಕೋ ಗಿಡಗಳಲ್ಲಿ ಇನ್ನೂ ಫಸಲು ಬಂದಿಲ್ಲ ಆದರೆ ನನ್ನ ತೋಟದ ಗಿಡಗಳು ಕಾಯಿಬಿಟ್ಟಿವೆ.ಇದೆಲ್ಲ ಮಣ್ಣಿನ ಮಹಿಮೆ ಎನ್ನುತ್ತಾರೆ.
ಜೀವಾಮೃತವಾದ ಗೋ ಮೂತ್ರ : ಹತ್ತು ದಿನಗಳಿಗೆ ಒಂದು ಬಾರಿ ಅಂದರೆ ತಿಂಗಳಿಗೆ ಮೂರು ಸಲ ಸುಬಾಷ್ ಪಾಳೇಕರ್ ಮಾದರಿಯಲ್ಲಿ ಜೀವಾಮೃತ ಸಿದ್ಧ ಪಡಿಸಿಕೊಂಡು ಭೂಮಿಗೆ ಚೆಲ್ಲುತ್ತೇವೆ. ರೋಗ ಬಾಧೆ ಕಂಡು ಬಂದರೆ ನಾಟಿ ಹಸುವಿನ ಗಂಜಲ, ಹುಳಿ ಮಜ್ಜಿಗೆ, ನೀರು ಬೆರಸಿ ಸಿಂಪರಣೆ ಮಾಡಿ ರೋಗ ನಿಯಂತ್ರಣ ಮಾಡುತ್ತೆವೆ. ಇದರ ಜೊತೆಗೆ ಮುಖ್ಯವಾಗಿ 50 ಕುರಿಗಳಿಂದ ಬರುವ ಗೊಬ್ಬರವನ್ನು ಇಡಿ ತೋಟದ ಒಂದೊಂದು ಭಾಗಕ್ಕೂ ಪ್ರತಿದಿನ ಚೆಲ್ಲುತ್ತೇವೆ. ತೋಟಕ್ಕೆಲ್ಲ ಕುರಿಗೊಬ್ಬರ ಚೆಲ್ಲಿ ಮುಗಿದ ನಂತರ ಮತ್ತೆ ಮೊದಲಿನಿಂದ ಪರಿವರ್ತನೆ ಮಾಡಿಕೊಂಡು ಚೆಲ್ಲುತ್ತಾ ಹೋಗುತ್ತೇವೆ. ಇದು ಭೂಮಿ ಫಲವತ್ತಾಗಲೂ ಮುಖ್ಯ ಕಾರಣ.ನಾಟಿ ಹಸುವಿನ ಗಂಜಲಕ್ಕೆ ಇರುವ ಶಕ್ತಿ ಯಾವ ಔಷದಿಗೂ ಇಲ್ಲ. ಗಂಜಲ ಭೂಮಿಯಲ್ಲಿ ಅಮೃತದಂತೆ ಕೆಲಸ ಮಾಡುತ್ತದೆ ಎನ್ನುತ್ತಾರೆ.
ಕುರಿ ಸಾಕಾಣೆ : ಸಾಂಪ್ರದಾಯಿಕ ಪದ್ಧತಿಯಲ್ಲಿ ಕುರಿ ಸಾಕಾಣಿಕೆ ಮಾಡುವ ಇವರು ಕುರಿಗಳ ಸಂಖ್ಯೆಯನ್ನು 50 ಕ್ಕಿಂತ ಹೆಚ್ಚು ಮಾಡಿಕೊಳ್ಳುವುದಿಲ್ಲ. ಮರಿಗಳನ್ನು ಮಾರಾಟ ಮಾಡಿ ಅದರಿಂದಲ್ಲೂ ಆದಾಯಗಳಿಸುತ್ತೇವೆ. ಜಮೀನು ಕೆಲಸಕ್ಕೆಂದು ಒರ್ವ ಕಾಮರ್ಿಕ ಮಾತ್ರ ಇದ್ದು, ನನ್ನ ಜೊತೆ ಬೆಳಗ್ಗೆ 7 ರಿಂದ 11 ಗಂಟೆವರೆಗೆ ಕೆಲಸ ಮಾಡಿ ನಂತರ ಕುರಿಗಳನ್ನು ಮೇಯಿಸುತ್ತಾರೆ. ನಾವು ಅನುಸರಿಸುತ್ತಿರುವ ಬೇಸಾಯ ಪದ್ಧತಿಯಲ್ಲಿ ಮಾನವ ಹಸ್ತಕ್ಷೇಪ ಕಡಿಮೆ. ಭೂಮಿಯಲ್ಲಿ ಹ್ಯೂಮಸ್ ನಿಮರ್ಾಣವಾದ ನಂತರ ಮತ್ತೂ ಕೆಲಸ ಕಡಿಮೆ. ಆಗ ಪ್ರಕೃತಿಗೆ ಸಹಕಾರಿಯಾಗುವಂತೆ ಏಕದಳ, ದ್ವಿದಳ ಸಸ್ಯಗಳ ಜೊತೆ ತೋಟಗಾರಿಕೆ ಗಿಡಗಳನ್ನು ಸಂಯೋಜನೆ ಮಾಡುತ್ತಾ ಹೋಗುವುದನ್ನು ಬಿಟ್ಟರೆ ಬೇರೆನೂ ಕೆಲಸ ಇಲ್ಲ.
ಆರಂಭದಲ್ಲಿ ರಸಾಯನಿಕ ಬಳಸದೆ ಬೇಸಾಯ ಮಾಡಲು ಶುರುಮಾಡಿದಾಗ ಸುತ್ತಮತ್ತಲಿನ ಜನ ನನ್ನನ್ನು ಹುಚ್ಚ ಎಂದರು. ಕ್ರಮೇಣ ನನ್ನ ಬೇಸಾಯ ಪದ್ಧತಿನೋಡಿ ಹುಚ್ಚ ಅಂದವರೆ ಈಗ ಅಭಿನಂದಿಸುತ್ತಿದ್ದಾರೆ. ಹಿಂದೆ ನಮ್ಮಲ್ಲಿಯು ಕಬ್ಬು ಕಟಾವು ನಂತರ ತರಗಿಗೆ ಬೆಂಕಿ ಹಚ್ಚುತ್ತಿದ್ದರು. ಈಗ ಅದನ್ನು ಬಿಟ್ಟು ಮಣ್ಣಿಗೆ ಹೊದಿಕೆ ಮಾಡಲು ಶುರು ಮಾಡಿದ್ದಾರೆ. ಅಷ್ಟರ ಮಟ್ಟಿಗೆ ಸುತ್ತಲಿನ ಜನ ಬದಲಾಗಿದ್ದಾರೆ. ಸಿಂಧುವಳ್ಳಿಯ ರೈತಸಂಘದ ಕಾರ್ಯಕರ್ತ ಸತೀಶ್ ರಾವ್ ಸೇರಿದಂತೆ ಹಲವಾರು ರೈತಸಂಘದ ಕಾರ್ಯಕರ್ತರು ಸುಭಾಷ್ ಪಾಳೇಕರ್ ಪದ್ಧತಿಯಲ್ಲಿ ಬೇಸಾಯ ಮಾಡಲು ಮುಂದಾಗಿದ್ದಾರೆ. ರೈತರು ನಿಧಾನವಾಗಿಯಾದರೂ ಸಾವಯವ ಆಹಾರ ಬೆಳೆಯುವ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ.
ಜೀವಾಮೃತದ ಜೊತೆ  ಸ್ಥಳೀಯವಾಗಿ ಸಿಗುವ ತ್ಯಾಜ್ಯಗಳನ್ನು ಬಳಸಿಕೊಳ್ಳಬೇಕು. ತಿಪ್ಪೆ ಗೊಬ್ಬರ, ಕಾಂಪೋಸ್ಟ್ ಬಳಸಿಕೊಂಡರೆ ಅನುಕೂಲ. ತೋಟದಲ್ಲಿ ತಿರುಗಾಡುವಾಗ ಕೈಯಲ್ಲಿ ಕತ್ತಿ ಜೇಬಿನಲ್ಲಿ ಬೀಜ ಇದ್ದರೆ ಕೆಲಸ ಮುಗಿದಂತೆಯೆ ಎನ್ನುತ್ತಾರೆ ವಿದ್ಯಾ ಸಾಗರ. ತೋಟದ ಮಣ್ಣು ಮೃದುವಾಗಿ,ನೀರನ್ನು ಹಿಡಿದಿಟ್ಟುಕೊಳ್ಳುವ ಗುಣ ಹೊಂದಿದೆ. ಹಾಗಾಗಿ ಇವರು ತೋಟಕ್ಕೆ ಹದಿನೈದು ಅಥವಾ ತಿಂಗಳಿಗೆ ಒಮ್ಮೆ ನೀರು ಕೊಟ್ಟರೆ ಸಾಕು. ಎಂತಹ ಬೇಸಿಗೆಗೂ ಜಗ್ಗದ ಒಂದು ಕೊಳವೆ ಬಾವಿ ಸದಾ ಮೂರು ಇಂಚು ನೀರು ಕೊಡುತ್ತಿದೆ.ನೀರಿನ ಬಳಕೆಯಲ್ಲೂ ಮಿತ ಬಳಕೆ ಸಾಧಿಸಿರುವ ವಿದ್ಯಾ ಸಾಗರಪ್ರಕೃತಿಗೆ ನೀಡುತ್ತಿರುವ ಕೊಡುಗೆಗೆ ಬೆಲೆಕಟ್ಟಲಾಗದು. ಹೆಚ್ಚಿನ ಮಾಹಿತಿಗೆ ಅವರನ್ನು ಮೊ. 8792103855 ರಲ್ಲಿ ಸಂಪಕರ್ಿಸಬಹುದು.
ರೈತ ಹೋರಾಟದಲ್ಲಿ"ಆಂದೋಲನ'
ಮೈಸೂರು : ರೈತ ನಾಯಕ ಪ್ರೊಫೆಸರ್ ಎಂ.ಡಿ. ನಂಜುಂಡಸ್ವಾಮಿಯವರು ರಾಜ್ಯದಲ್ಲಿ ರೈತಸಂಘ ಸ್ಥಾಪಿಸುವ ಮೊದಲೆ ಮೈಸೂರು ಜಿಲ್ಲೆಯ ತಾಂಡವಪುರದಲ್ಲಿ ರೈತ ಸಂಘಟನೆಯೊಂದು ಆರಂಭವಾಗಿ ರೈತರ ಹಕ್ಕುಗಳಿಗಾಗಿ ಹೋರಾಟ ಆರಂಭಿಸಿಯಾಗಿತ್ತು. ಇದರ ರೂವಾರಿ ತಾ.ರಾಮೇಗೌಡರು. ರಘುಪತಿ ನಾಯಕರ ನೃತೃತ್ವದಲ್ಲಿ ತಾಂಡವೇಶ್ವರ ರೈತ ಸಂಘ ಎಂಬ ಹೆಸರಿನಲ್ಲಿ ಸಂಘಟನೆಯನ್ನು ಕಟ್ಟಿಕೊಂಡು ತಾಲೂಕಿನ ರೈತರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿದ್ದರು.
ಸಹಕಾರ ಬ್ಯಾಂಕಿನವರು ರೈತರಿಗೆ ನೀಡುತ್ತಿದ್ದ ಕಿರುಕುಳ, ಚಕ್ರ ಬಡ್ಡಿ, ಹರಾಜು, ತಾಂಡವಪುರ ಗೇಟ್ ಬಳಿ ಹಾಕಲಾಗಿದ್ದ ಲೇವಿ ಸಂಗ್ರಹಣೆ ಗೇಟ್ ವಿರುದ್ಧ ಹೋರಾಟಮಾಡಿ ಹಲವಾರು ಬಾರಿ ಜೈಲಿಗೂ ಹೋಗಿ ಬಂದಿದ್ದರು. ನಂತರ ಸಂಘಟನೆಯನ್ನು ರಾಜ್ಯರೈತ ಸಂಘದಲ್ಲಿ ವಿಲೀನ ಮಾಡಿ, 80 ರ ದಶಕದಲ್ಲಿ ನಂಜನಗೂಡು ತಾಲೂಕಿನ ಅರತಲೆಯಲ್ಲಿ ತೋಟ ಮಾಡಿದ್ದ ಪ್ರೊಫೆಸರ್ ನಂಜುಂಡಸ್ವಾಮಿಯವರ ಜತೆಗೂಡಿ ಸುತ್ತಮತ್ತಲಿನ ನೂರಾರು ಹಳ್ಳಿಗಳನ್ನು ಸುತ್ತಾಡಿ ರೈತರನ್ನು ಸಂಘಟಿಸಿದ್ದರು. ನಂಜನಗೂಡು ತಾಲೂಕಿನಾದ್ಯಂತ ಸೈಕಲ್ಗೆ ಮೈಕ್ ಕಟ್ಟಿಕೊಂಡು ರೈತಸಂಘದ ನೀತಿ, ಉದ್ದೇಶ, ಸಂಘಟನೆಯ ಬಗ್ಗೆ ಜಾಗೃತಿ ಮೂಡಿಸಲು ಜಾಥಾ ಮಾಡಿದ್ದರು.
ಆಂದೋಲನ ಪತ್ರಿಕೆಯ ಸಂಪಾದಕರಾದ ರಾಜಶೇಖರ ಕೋಟಿಯವರು ಆಗ ನಮ್ಮ ಮನೆಗೆ ಬರುತ್ತಿದ್ದರು.ಮೊದಲಿನಿಂದಲೂ ರೈತಪರ ಚಳವಳಿಗಳನ್ನು ಬೆಂಬಲಿಸುತ್ತಾ ಬಂದಿರುವ ಕೋಟಿಯವರು ಆಂದೋಲನ ಪತ್ರಿಕೆಯ ಮೂಲಕ ರೈತರಲ್ಲಿ ಆತ್ಮ ವಿಶ್ವಾಸ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪತ್ರಿಕೆಗೆ ಐವತ್ತು ಪೈಸೆ ಇದ್ದಾಗ ತಾಂಡವಪುರದಲ್ಲಿ ನಮ್ಮ ತಂದೆ ತಾ.ರಾಮೇಗೌಡರು ಪತ್ರಿಕೆಯ ಏಜೆಂಟರಾಗಿದ್ದರು ಎಂದು ವಿದ್ಯಾ ಸಾಗರ ನೆನಪು ಮಾಡಿಕೊಂಡರು.
ಪ್ರತಿ ಸೋಮವಾರ ನಂಜನಗೂಡಿನಲ್ಲಿ "ರೈತ ಸಮಸ್ಯೆ ಸ್ಪಂದನಾ ದಿನ" ವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿರುವ ಇವರು ರೈತ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ನೂರಾರು ರೈತರು ಪ್ರತಿ ಸೋಮವಾರ ತಮ್ಮ ಹಲವಾರು ಸಮಸ್ಯೆಗಳೊಂದಿಗೆ ಬಂದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ.

ಶನಿವಾರ, ಸೆಪ್ಟೆಂಬರ್ 10, 2016

 ಆರಂಭ ಅರಾಮಾಗಿರಬೇಕು ಅಂದ್ರು ಶಂಕರೇಗೌಡ್ರು

ತನ್ನ ಉತ್ಪನ್ನಗಳಿಗೆ ತಾನೆ ಮಾರುಕಟ್ಟೆ ಸೃಷ್ಟಿಸಿಕೊಂಡ ಸಾವಯವ ಸಾಧಕ

ಮೈಸೂರು : ಹತ್ತು ವರ್ಷಗಳಿಂದ ಸಾವಯವ ಕೃಷಿ ಮಾಡುತ್ತಿದ್ದೇನೆ. ಎಂದೂ ಮಾರುಕಟ್ಟೆಯ ಸಮಸ್ಯೆ ಬಾಧಿಸಿಲ್ಲ. ಬೆಳೆದ ಉತ್ಪನ್ನಗಳನ್ನು ನಾನೆ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತೇನೆ.ಆಗಾಗಿ ಬೇಸಾಯ ಯಾವತ್ತೂ ನನಗೆ ತ್ರಾಸದಾಯಕ ಎನಿಸಿಲ್ಲ.ನಮ್ಮದು ಸಂಪೂರ್ಣ ಸಮಗ್ರ, ಸುಸ್ಥಿರ ಬೇಸಾಯ ಪದ್ಧತಿ. ಆರಂಭವನ್ನು ಯಾವತ್ತೂ ಅರಾಮಾಗಿ ಮಾಡಬೇಕು ಭಾರ ಮಾಡಿಕೊಳ್ಳಬಾರದು ಎಂದು ನಕ್ಕರು ಸಾವಯವ ಕೃಷಿಕ ಜಿ.ಎನ್.ಶಂಕರೇಗೌಡರು.
ಕೃಷಿ ಲಾಭದಾಯಕವಲ್ಲ.ಅದರಲ್ಲೂ ಸಾವಯವ ಪದ್ಧತಿಯಲ್ಲಿ ಸೊಪ್ಪು,ತರಕಾರಿ ಬೆಳೆದು ಬದುಕುವುದು ಕಷ್ಟಕರ, ಮಧ್ಯವತರ್ಿಗಳ ಹಾವಳಿ ಕೃಷಿಕನನ್ನು ಹೈರಾಣಾಗಿಸಿದೆ ಎಂಬ ಮಾತುಗಳನ್ನು ಸಾಮಾನ್ಯವಾಗಿ ನಾವು ಎಲ್ಲೆಡೆ ಕೇಳುತ್ತಿರುತೇವೆ.
ಆದರೆ ಶಂಕರೇಗೌಡರ ಅನುಭವದ ಪ್ರಕಾರ ಇಂತಹ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇದೆ. ಸ್ವಲ್ಪ ಶ್ರಮ ಮತ್ತು ತುಸು ಜಾಣ್ಮೆ ಇದ್ದರೆ ಬೇಸಾಯ ಕಷ್ಟಕರವಲ್ಲ, ಲಾಭದಾಯಕ. ಅದಕ್ಕೆ ಅವರ ದಶಕದ ಅನುಭವವೆ ಸಾಕ್ಷಿ.
ಮೈಸೂರಿನಿಂದ ಕೇವಲ ಕೂಗಳತೆ ದೂರದಲ್ಲಿರುವ ದೇವಗಳ್ಳಿ ಶಂಕರೇಗೌಡರ ಸಾಧನೆಯಿಂದ ಪ್ರಸಿದ್ಧಿಯಾಗಿದೆ. ಹೆಚ್.ಡಿ.ಕೋಟೆಗೆ ಹೋಗುವ ರಸ್ತೆಯಲ್ಲಿ ಮೈಸೂರಿನಿಂದ ಕೇವಲ ಹದಿಮೂರು ಕಿ.ಮೀ.ದೂರ ಸಾಗಿದರೆ ಮೈಸೂರು ತಾಲೂಕು ಮುಳ್ಳೂರು ಹೋಬಳಿಗೆ ಸೇರಿದ ದೇವಗಳ್ಳಿ ಸಿಗುತ್ತದೆ. ಅಲ್ಲಿ ನಾಗರಾಜೇಗೌಡ ಮತ್ತು ಸಣ್ಣಮ್ಮ ದಂಪತಿಯ ಮೂವರು ಪುತ್ರರು ಸಾವಯವ ಬೇಸಾಯ ಮಾಡುವ ಮೂಲಕ ನೆಮ್ಮದಿಯ ಬದುಕು ಕಟ್ಟಿಕೊಂಡು ಮಾದರಿಯಾಗಿದ್ದಾರೆ.
ಶಂಕರೇಗೌಡರ ಸಮಗ್ರ ತೋಟಗಾರಿಕೆ ಕೃಷಿ ಪದ್ಧತಿಯನ್ನು ಮೆಚ್ಚಿ ಬಾಗಲಕೋಟದ ತೋಟಗಾರಿಕೆ ವಿಜ್ಞಾನ ವಿಶ್ವ ವಿದ್ಯಾಲಯ 2014 ರಲ್ಲಿ ಶ್ರೇಷ್ಠ ತೋಟಗಾರಿಕೆ ರೈತ ಪ್ರಶಸ್ತಿ ನೀಡಿ ಗೌರವಿಸಿದೆ. ನಾಗನಹಳ್ಳಿಯ ಕೃಷಿ ಕೇಂದ್ರ, ಫಲಪುಷ್ಪ ಪ್ರದರ್ಶನಗಳಲ್ಲಿ ಇವರ ಸಾಧನೆ ಗಮನಿಸಿ ಸನ್ಮಾನಿಸಲಾಗಿದೆ.
ನಾಲ್ಕು ಎಕರೆ ಜಮೀನಿನಲ್ಲಿ ಸಮಗ್ರ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುತ್ತಿರುವ ಗೌಡರು ಬಾಳೆ, ಮೂಸಂಬಿ, ಮೆಣಸು ,ತೆಂಗು,ನುಗ್ಗೆ, ಹಲಸು, ಮಾವು, ಸೀಬೆ, ಹುಣಸೆ, ಸಪೋಟ ಸೇರಿದಂತೆ ನಾನಾ ರೀತಿಯ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ಅಲ್ಲದೆ ಎಲ್ಲಾ ಬಗೆಯ ಸೊಪ್ಪು ,ತರಕಾರಿ, ನವಣೆಯಂತಹ ಸಿರಿಧಾನ್ಯಗಳಿಗೂ ತಮ್ಮ ತೋಟದಲ್ಲಿ ಜಾಗ ಕೊಟ್ಟಿದ್ದಾರೆ. ಗಜನಿಂಬೆ, ನಿಂಬೆಯನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆಮಾಡುವ ಮೂಲಕ ಕಸಿಮಾಡಿ ನೇರವಾಗಿ ರೈತರಿಗೆ ಮಾರಾಟ ಮಾಡುತ್ತಾರೆ. ಬೆಳೆ ಪರಿವರ್ತನ ಪದ್ಧತಿಯನ್ನು ಜಾರಿ ಮಾಡಿರುವ ಗೌಡರು ಕೀಟಬಾಧೆಗಳಿಂದ ಬೆಳೆಗಳನ್ನು ಕಾಪಾಡಿಕೊಳ್ಳಲು ಬೇವಿನ ಕಷಾಯ, ಹುಳಿ ಮಜ್ಜಿಗೆ, ಹಸಿ ಮೆಣಸಿನಕಾಯಿ ರಸ ಸಿಂಪರಣೆ ಮಾಡುತ್ತಾರೆ.
ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿಮರ್ಾಣ ಮಾಡಿಕೊಂಡಿರುವ ಗೌಡರು, ಎರೆಗೊಬ್ಬರ, ಜೀವಾಮೃತ ಮತ್ತು ಕುರಿ ಗೊಬ್ಬರವನ್ನು ಬಳಸಿಕೊಂಡು ಬೇಸಾಯಮಾಡುತ್ತಾರೆ. ತಮ್ಮ ಅನುಭವವನ್ನು ಬಳಸಿಕೊಂಡು ಹೊಸ ಹೊಸ ತಂತ್ರಜ್ಞಾನಗಳನ್ನು ಆವಿಷ್ಕಾರ ಮಾಡಿ ಸ್ವತಃ ಅಳವಡಿಸಿಕೊಳ್ಳುವ ಮೂಲಕ ತಮ್ಮ ತೋಟಕ್ಕೆ ತಾವೆ ಕೃಷಿ ವಿಜ್ಞಾನಿಯಾಗಿದ್ದಾರೆ.
ರಾಸಾಯನಿಕ ಕೃಷಿ ಮಾಡುತ್ತಿದ್ದ ಕಾಲಕ್ಕೆ ತಾವು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲಾಗದೆ ಕೈ ಸುಟ್ಟುಕೊಂಡಿದ್ದಾರೆ. ಮಧ್ಯವತರ್ಿಗಳ ಬಲೆಗೆ ಸಿಲುಕಿ ನರಳಿದ್ದು ಇದೆ. ದರ ಕುಸಿತದಿಂದ ಕಂಗಾಲಾದದ್ದು . ಆದರೆ ಕಳೆದ ದಶಕದಿಂದ ಇಂತಹ ಸಮಸ್ಯೆಗಳು ಇಲ್ಲ ಎನ್ನುತ್ತಾರೆ.
ವಾರದ ಸಂತೆ : ಮೈಸೂರಿನ ವಿವೇಕಾನಂದ ವೃತ್ತದ ಬಳಿ ವಿಶ್ವ ಜ್ಯೋತಿ ರಸ್ತೆಯಲ್ಲಿರುವ ಪ್ರಣತಿ ಆಯುವರ್ೇದ ಕ್ಲಿನಿಕ್ ಎದುರು ಪ್ರತಿ ಭಾನುವಾರ ಶಂಕರೇಗೌಡರ ಸಂತೆ ನಡೆಯುತ್ತದೆ. ಎಲ್ಲಾ ಬಗೆಯ ಸೊಪ್ಪು, ತರಕಾರಿ, ಬಾಳೆ, ತೆಂಗಿನಕಾಯಿ,ನಿಂಬೆ ಸೇರಿದಂತೆ ತಮ್ಮ ತೋಟದಲ್ಲಿ ಬೆಳೆಯುವ ಎಲ್ಲಾ ಸಾವಯವ ಉತ್ಪನ್ನಗಳನ್ನು ಗ್ರಾಹಕರಿಗೆ ತಾವೆ ನೇರವಾಗಿ ಮಾರಾಟ ಮಾಡುತ್ತಾರೆ.
ಬೆಳಿಗ್ಗೆ ಆರು ಗಂಟೆಗೆ ಶುರುವಾಗುವ ಸಂತೆ ಎಂಟು ಗಂಟೆಗೆ ಮುಗಿದು ಬಿಡುತ್ತದೆ. ರುಚಿ, ಶುಚಿ ಮತ್ತು ವಿಷಮುಕ್ತವಾದ ಇವರ ಆಹಾರ ಉತ್ಪನ್ನಗಳಿಗೆ ತುಂಬಾ ಬೇಡಿಕೆ ಇದ್ದು ಗ್ರಾಹಕರು ಮುಗಿ ಬಿದ್ದು ಖರೀದಿಸುತ್ತಾರೆ. ಮಧ್ಯವತರ್ಿಗಳಗೊಡವೆ ಇರದ ಕಾರಣ ಇವರ ಆಹಾರ ಉತ್ಪನ್ನಗಳು ಗ್ರಾಹಕರಿಗೆ ಕೈಗೆಟುಕುವ ದರದಲ್ಲಿಯೂ ದೊರೆಯುತ್ತವೆ.
ಪ್ರತಿ ವಾರದ ಸಂತೆಯಲ್ಲಿ ಕನಿಷ್ಟ ಆರು ಸಾವಿರ ರೂಪಾಯಿ ಮೌಲ್ಯದ ಉತ್ಪನ್ನಗಳು ಮಾರಾಟವಾಗುತ್ತವೆ. ಇದರಿಂದ ತಿಂಗಳಿಗೆ ಇಪ್ಪತ್ತೈದು ಸಾವಿರ ರೂಪಾಯಿ ಆದಾಯ ಬರುತ್ತದೆ. ಇದಲ್ಲದೆ ಇವರ ಉತ್ಪನ್ನಗಳು ನಿಸರ್ಗ, ನೇಸರ, ಧಾತು ಮತ್ತಿತರ ಸಾವಯವ ಮಾರಾಟ ಮಳಿಗೆಯಲ್ಲೂ ದೊರೆಯುತ್ತವೆ.
ನಾವು ತೋಟಕ್ಕೆ ಭೇಟಿ ನೀಡಿದಾಗ ಸಿಎಫ್ಟಿಆರ್ಐ ನವರಿಗೆ ಪ್ರತ್ಯೇಕವಾಗಿ ಕೊತ್ತಂಬರಿ ಭಿತ್ತನೆ ಮಾಡಿದ್ದ ಗೌಡರು ವಿಷಮುಕ್ತವಾಗಿ ಬೆಳೆಯುವ ಅರಿಶಿನ ಮತ್ತು ಶುಂಠಿಗೆ ತುಂಬಾ ಬೇಡಿಕೆ ಇದ್ದು, ತಾವು ಅರಿಶಿನವನ್ನು ಪುಡಿ ಮಾಡುವ ಮೂಲಕ ಮೌಲ್ಯ ವರ್ಧನೆಮಾಡಿ ಮಾರಾಟ ಮಾಡುವುದಾಗಿ ಹೇಳುತ್ತಾರೆ.
ಇಂಚಿಂಚು ಭೂಮಿಯೂ ಬಳಕೆ : ಕೃಷಿ ಹೊಂಡ ಮಾಡುವಾಗ ಮಳೆ ನೀರು ಹರಿದು ಬರಲು ಬದುಗಳಲ್ಲಿ ಟ್ರಂಚ್ ಮತ್ತು ಬಂಡುಗಳನ್ನು ನಿಮರ್ಾಣ ಮಾಡಲಾಗುತ್ತದೆ. ಸಾಮಾನ್ಯವಾಗಿ ರೈತರು ಇದನ್ನು ಬಳಸಿಕೊಳ್ಳದೆ ಖಾಲಿ ಬಿಟ್ಟಿರುತ್ತಾರೆ. ಆದರೆ ಶಂಕರೇಗೌಡರು ಇಲ್ಲೂ ಜಾಣ್ಮೆ ಮೆರೆದಿದ್ದು ಟ್ರಂಚ್ಗಳಲ್ಲಿ ನಂಜನಗೂಡು ರಸಬಾಳೆ ಹಾಕಿದ್ದು, ಬದುಗಳಲ್ಲಿ ಉದ್ದಕ್ಕೂ ಪಪ್ಪಾಯ ಗಿಡಳನ್ನು ನಾಟಿ ಮಾಡುವ ಮೂಲಕ ಅಲ್ಲೂ ಆದಾಯ ಬರುವಂತೆ ಮಾಡಿಕೊಂಡಿದ್ದಾರೆ.
ನೇರವಾಗಿ ಪಪ್ಪಾಯ ಬೀಜಗಳನ್ನೆ ಭೂಮಿಗೆ ಸೇರಿಸುವ ಗೌಡರು ಅದರಿಂದ ಗಿಡ ನಮ್ಮ ವಾತವರಣಕ್ಕೆ ಹೊಂದಿಕೊಂಡು ಬೆಳೆಯುವ ಮೂಲಕ ಉತ್ತಮ ಫಸಲು ನೀಡುತ್ತದೆ ಎನ್ನುತ್ತಾರೆ. ನಾಟಿ ತಳಿಯ ಬೆಂಡೆ ಕಾಯಿ ಗಿಡಗಳು ಆಳೆತ್ತರ ಬೆಳೆದು ಉತ್ತಮ ಆದಾಯ ತಂದುಕೊಟ್ಟಿವೆ. ವರ್ಷದ ಎಲ್ಲಾ ಕಾಲದಲ್ಲೂ ಸೊಪ್ಪು ಬರುವಂತೆ ಮೊದಲೆ ಯೋಜನೆ ಮಾಡಿಕೊಂಡು ಬೆಳೆಯುತ್ತಾರೆ.
ಬಾಳೆ ಬಂಗಾರ : ತೋಟದಲ್ಲಿ ವಿವಿಧ ತಳಿಯ ಬಾಳೆ ಬೆಳೆದಿರುವ ಗೌಡರು, ಬಾಳೆಯನ್ನು ಎಲ್ಲರಂತೆ ಪ್ರತ್ಯೇಕವಾಗಿ ಒಂದು ತಾಕಿನಲ್ಲಿ ಬೆಳೆದಿಲ್ಲ. ಅಲ್ಲಲ್ಲಿ ಬಾಳೆ ಹಾಕಲಾಗಿದ್ದು 250 ಕ್ಕೂ ಹೆಚ್ಚು ಬಾಳೆ ಗಿಡಗಳಿವೆ. ಒಂದು ಗುಂಪಿನಲ್ಲಿ ನಾಲ್ಕರಿಂದ ಐದು ಬಾಳೆ ಗಿಡಗಳು ಇರುವಂತೆ ನೋಡಿಕೊಳ್ಳಲಾಗುತ್ತದೆ. ಪ್ರತಿ ತಿಂಗಳು 30 ರಿ ದ ನಲವತ್ತು ಗೊನೆ ಸಿಗುವಂತೆ ಸಂಯೋಜನೆ ಮಾಡಿಕೊಳ್ಳಲಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ದರ ಏರುಪೇರಾದರು ಇವರಿಗಂತೂ ನಷ್ಟವಾಗುವುದಿಲ್ಲ.
ಇರಳೆ , ನಿಂಬೆ ಕಸಿ : ಇರಳೆ ಮತ್ತು ನಿಂಬೆ ಗಿಡಗಳನ್ನು  ವೈಜ್ಞಾನಿಕ ರೀತಿಯಲ್ಲಿ ಕಸಿ ಮಾಡಿ ಬೆಳೆಸುತ್ತಾರೆ. ಇವರು ಬೆಳೆಸಿದ ಇಂತಹ ಗಿಡಗಳಿಗೆ ತುಂಬಾ ಬೇಡಿಕೆ ಇದೆ. ಒಂದು ಕಸಿ ಗಿಡವನ್ನು 400 ರೂಪಾಯಿಗೆ ಮಾರಾಟ ಮಾಡುತ್ತಾರೆ. ಆರೋಗ್ಯಕರವಾದ ಗಿಡದಲ್ಲಿ ರೆಂಬೆಯೊಂದನ್ನು ಮೊದಲು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ನಂತರ ಅದಕ್ಕೆ ಹುತ್ತದ ಮಣ್ಣು ಸೇರಿದಂತೆ ಬೇರೆ ಬೇರೆ ಬಗೆಯ ಮಣ್ಣು ಮತ್ತು ಎರೆಗೊಬ್ಬರವನ್ನು ಹದವಾಗಿ ಮಿಶ್ರಣ ಮಾಡಿಕೊಂಡು ಜೀವಾಮೃತದಲ್ಲಿ ಕಲಸಿ, ಪ್ಲಾಸ್ಟಿಕ್ ಚೀಲವೊಂದಕ್ಕೆ ತುಂಬಿ ಆಯ್ಕೆಮಾಡಿಕೊಂಡ ಗಿಡದ ರೆಂಬೆಗೆ ಕಟ್ಟಲಾಗುತ್ತದೆ. ಒಂದೆರಡು ತಿಂಗಳ ನಂತರ ರೆಂಬೆಯನ್ನು ಕತ್ತರಿಸಿಕೊಂಡು ನರ್ಸರಿಯಲ್ಲಿ ಸಿದ್ಧ ಮಾಡಿಕೊಂಡಿದ್ದ ಬ್ಯಾಗ್ನಲ್ಲಿ ಮತ್ತೆ ಬೆಳೆಸಲಾಗುತ್ತದೆ. ಇಂತಹ ಗಿಡಗಳು ಒಂದುವರೆ ವರ್ಷದಲ್ಲೆ ಫಲ ನೀಡುತ್ತವೆ.
ಯಾವುದೆ ತೋಟಗಾರಿಕೆ ಗಿಡಗಳನ್ನು ಇವರು ಹೆಚ್ಚಿನ ಸಂಖ್ಯೆಯಲ್ಲಿ ತರುವುದಿಲ್ಲ. ಒಂದೆರಡು ಗಿಡಗಳನ್ನಷ್ಟೆ ತಂದು ಹಾಕಿಕೊಳ್ಳುತ್ತಾರೆ. ನಂತರ ಸ್ವತಃ ತಾವೆ ಕಸಿ ಮಾಡಿಕೊಳ್ಳುತ್ತಾರೆ. ಹಣ್ಣಿನ ಗಿಡದ ಬೀಜಗಳನ್ನು ಸಾಧ್ಯವಾದಷ್ಟು ನೇರವಾಗಿ ಭೂಮಿಯಲ್ಲಿ ಹಾಕುವ ಮೂಲಕ ಸ್ಥಳೀಯ ವಾತಾವರಣದಲ್ಲಿ ಬೆಳೆದ ಗಿಡಗಳು ದೀರ್ಘಕಾಲ ಬಾಳಿಕೆ ಬರುವಂತೆ ನೋಡಿಕೊಳ್ಳುತ್ತಾರೆ.  ಮೈಸೂರು ತೋಟಗಾರಿಕೆ ವಿಶ್ವ ವಿದ್ಯಾಲಯದ ಪ್ರಧ್ಯಾಪಕ ಹರೀಶ್ ಅವರ ಮಾರ್ಗದರ್ಶನ ಮತ್ತು ಸಲಹೆ, ಬೇರೆ ಬೇರೆ ಪ್ರಗತಿಪರ ರೈತರ ತೋಟಗಳ ಭೇಟಿ ಮತ್ತು ಕೃಷಿ ಸಂಬಂಧಿ ವಸ್ತು ಪ್ರದರ್ಶನಗಳಿಂದ ತಾವು ಸಾಕಷ್ಟು ಕಲಿತು ಉತ್ತಮವಾದದನ್ನು ತಮ್ಮ ಬೇಸಾಯದಲ್ಲಿ ಅಳವಡಿಸಿಕೊಂಡಿರುವುದಾಗಿ ಹೇಳುತ್ತಾರೆ.
ಇವರ ತೋಟಕ್ಕೆ ದೂರದ ಗದಗ ಜಿಲ್ಲೆ, ಹೆಚ್.ಡಿ.ಕೋಟೆ, ತಿ.ನರಸೀಪುರ, ಚಾಮರಾಜನಗರ ಹೀಗೆ ನಾನಾ ಜಿಲ್ಲೆಯ ರೈತರು ಭೇಟಿ ನೀಡಿ ಅವರ ಕೃಷಿ ಪದ್ಧತಿಯನ್ನು ನೋಡಿ ಅವರಿಂದ ಪಾಠ ಕೇಳಿ ಹೋಗಿದ್ದಾರೆ. ಆಸಕ್ತರು ಶಂಕರೇಗೌಡ ಅವರನ್ನು 9480909359 ಸಂಪಕರ್ಿಸಬಹುದು.
ಬಹುಪಯೋಗಿ ಕಲ್ಟಿವೇಟರ್
ಮೈಸೂರು : ಕೃಷಿಯನ್ನು ಲಾಭದಾಯಕವಾಗಿಸಲು ಬಂದ ಟ್ಟ್ಯಾಕ್ಟರ್, ಪವರ್ ಟಿಲ್ಲರ್ನಂತಹ ದೊಡ್ಡ ದೊಡ್ಡ ಯಂತ್ರಗಳು ಈವತ್ತು ರೈತರು ಸಾಲದ ಸುಳಿಗೆ ಸಿಲುಕುವಂತೆ ಮಾಡಿ ಸಂಕಷ್ಟ ತಂದೊಡ್ಡಿವೆ.
ಸಣ್ಣ ಹಿಡುವಳಿದಾರರು ಇಂತಹ ಯಂತ್ರಗಳನ್ನು ಖರೀದಿಸಿದರೂ ಸಂಬಾಳಿಸಲಾಗದೆ ಸಾಲಗಾರರಾಗಿದ್ದಾರೆ. ಈವತ್ತು ನಮ್ಮ ಕೃಷಿಗೆ ಬೇಕಾಗಿರುವುದು ರೈತರೆ ಆವಿಷ್ಕಾರ ಮಾಡಿಕೊಂಡಿರುವಂತಹ ಸಣ್ಣ ಪ್ರಮಾಣದ ಯಂತ್ರಗಳು. ಇದರಿಂದ ಭೂಮಿಗೂ ಅತಿ ಭಾರವಾಗದೆ, ಮಣ್ಣಿನಲ್ಲರುವ ಸೂಕ್ಷ್ಮಾಣು ಜೀವಿಗಳು ಬದುಕಿ ಉಳಿಯುವುದರ ಜೊತೆಗೆ ರೈತನನ್ನು ಬದುಕಿಸುತ್ತವೆ. ಅಂತಹ ಯಂತ್ರವೊಂದನ್ನು ನೆಲಮಂಗಲ ತಾಲೂಕಿನ ನೆಲಮಂಗಲ ಕೋಡಿಕೆರೆಯ ರೈತ ವಿಜ್ಞಾನಿಯೊಬ್ಬರು ಬಹುಪಯೋಗಿ ಕಲ್ಟಿವೇಟರ್ ( ಪವರ್ ವೀಡರ್ )ಆವಿಷ್ಕಾರ ಮಾಡಿದ್ದು, ಸಣ್ಣ ಹಿಡುವಳಿದಾರರಿಗೆ ಅನುಕೂಲವಾಗಿದೆ.
ವಸ್ತು ಪ್ರದರ್ಶನವೊಂದಕ್ಕೆ ಹೋಗಿದ್ದಾಗ ಶಂಕರೇಗೌಡರ ಕಣ್ಣಿಗೆ ಬಿದ್ದ ಯಂತ್ರ ಈಗ ಅವರ ತೋಟದ ಕೇಂದ್ರ ಬಿಂದುವಾಗಿದೆ. ಎಂಭತ್ತೊಂದು ಸಾವಿರ ಮೌಲ್ಯದ ಈ ಸಣ್ಣ ಯಂತ್ರದಿಂದ ಉಳುಮೆ, ಭಿತ್ತನೆ, ಕಳೆ ತೆಗೆಯುವುದು, ಗಿಡದ ಪಾತಿ ಮಾಡುವುದು ಈ ಎಲ್ಲಾ ಕೆಲಸವನ್ನು ಸರಾಗವಾಗಿ ಮಾಡಬಹುದು.ಒಂದು ಲೀಟರ್ ಡಿಸೇಲ್ ತುಂಬಿಸಿದರೆ ಎರಡು ಗಂಟೆ ಕೆಲಸ ಮಾಡಬಹುದು.
ಈ ಯಂತ್ರವೊಂದು ಇದ್ದರೆ ಮನೆಯಲ್ಲಿ ಎರಡು ಜೊತೆ ಎತ್ತುಗಳು ಇದ್ದಂತೆ ಎನ್ನುವ ಶಂಕರೇಗೌಡರು, ಒಣ, ಮಳೆಯಾಧಾರಿತ ಬೇಸಾಯ ಮಾಡುವವರಿಗೆ,ಸಾವಯವ ಕೃಷಿ ಮಾಡುವವರಿಗೆ ಈ ಯಂತ್ರ ತುಂಬಾ ಉಪಯೋಗಕಾರಿ ಮತ್ತು ನಿರ್ವಹಣೆಯು ಅತಿ ಸುಲಭ ಎನ್ನುತ್ತಾರೆ. ಸಕರ್ಾರ ದೊಡ್ಡ ಯಂತ್ರಗಳಿಗೆ ಸಬ್ಸಿಡಿ ಕೊಡುವ ಬದಲು ಇಂತಹ ಸಣ್ಣ ಯಂತ್ರಗಳಿಗೆ ಸಬ್ಸಿಡಿ ನೀಡಿದರೆ ರೈತರಿಗೆ ಅನುಕೂಲಕರ ಎನ್ನುತ್ತಾರೆ. ಆಸಕ್ತರು ನೆಲಮಂಗಲ ಕೋಡಿಕೆರೆಯಲ್ಲಿರುವ ಮಾರುತಿ ಕೃಷಿ ಉದ್ಯೋಗ್ ಕಾಖರ್ಾನೆಗೆ ಭೇಟಿ ನೀಡಬಹುದು.ದೂರವಾಣಿ 9880154463 ಅಥವಾ 7795277763 ಸಂಪಕರ್ಿಸಬಹುದು.


ಶನಿವಾರ, ಸೆಪ್ಟೆಂಬರ್ 3, 2016

ಕನ್ನಡಬ್ಲಾಗ್ ಲಿಸ್ಟ್ KannadaBlogList: ವರುಷದ ಹರುಷ

ಕನ್ನಡಬ್ಲಾಗ್ ಲಿಸ್ಟ್ KannadaBlogList: ವರುಷದ ಹರುಷ: ಕನ್ನಡಬ್ಲಾಗ್ ಲಿಸ್ಟ್ ಗೆ ವರುಷ ತುಂಬಿದ ಸಂಭ್ರಮ. ನಮಗೆ email ಹಾಗೂ ಕಾಮೆಂಟ್ಗಳನ್ನು ಬರೆದು, ಕನ್ನಡಬ್ಲಾಗ್ ಪಟ್ಟಿಯನ್ನು ತಯಾರಿಸಲು ಪರೋಕ್ಷವಾಗಿ ಬೆಂಬಲಿಸಿದ ನಿಮಗೇಲ್...