vaddagere.bloogspot.com

ಭಾನುವಾರ, ನವೆಂಬರ್ 5, 2017

ಶ್ರೀರಾಮಪುರ ಮನೆಯಂಗಳವಲ್ಲ, `ಸಂತೃಪ್ತಿ'  ಸಸ್ಯಕಾಶಿ !

# ವಿನಾಶದ ಅಂಚಿನಲ್ಲಿರುವ ಸಸ್ಯ ಸಂರಕ್ಷಣೆ # ಕಸಿಬ್ರಹ್ಮ ವೈದ್ಯರ ಹಸಿರು ಪ್ರೀತಿ

ಅವರು ವೃತ್ತಿಯಲ್ಲಿ ವೈದ್ಯ.ಪ್ರವೃತ್ತಿಯಲ್ಲಿ ಕಸಿತಜ್ಞ. ದೇಶವಿದೇಶಗಳ ಅಪರೂಪದ ಹಣ್ಣು ಮತ್ತು ಹೂವಿನ ಗಿಡಗಳನ್ನು ಮನೆಯಂಗಳದಲ್ಲಿ ಬೆಳೆದು ಪೋಷಣೆಮಾಡುತ್ತಿರುವ ಸಸ್ಯಪ್ರೇಮಿ. ಒಂದೇ ಗಿಡಕ್ಕೆ ಹತ್ತಾರು ತಳಿಯ ಸಯಾನ್ಗಳನ್ನು ಕಸಿಕಟ್ಟಿ ಫಲಪಡೆದ ಸಸ್ಯವಿಜ್ಞಾನಿ. ಗಿಡಗಳ ಮೇಲೆ ಹಲವು ಪ್ರಯೋಗಗಳನ್ನು ಮಾಡಿ ಗೆದ್ದ ಅಪರೂಪದ ವೈದ್ಯ ಡಾ.ಸಿ.ಎನ್.ಮೃತ್ಯುಂಜಯಪ್ಪ.
ಹವ್ಯಾಸವಾಗಿ ಆರಂಭವಾದ ಕೆಲಸಕ್ಕೆ ಡಾ.ಮೃತ್ಯುಂಜಯಪ್ಪ ಅವರು ಭಾರತ ಸರಕಾರ ಕೊಡಮಾಡುವ `ಸಸ್ಯ ತಳಿ ಸಂರಕ್ಷಕ' (ಪ್ಲಾಂಟೋಮ್ ಸೇವಿಯರ್ ಕಮ್ಯೂನಿಟಿ ನ್ಯಾಷನಲ್ ಆವಾಡರ್್)ಪ್ರಶಸ್ತಿಗೂ ಭಾಜನರಾಗಿದ್ದಾರೆ. ಈ ಪ್ರಶಸ್ತಿಯಿಂದ ಬಂದ ಒಂದೂವರೆ ಲಕ್ಷ ರೂಪಾಯಿಗಳನ್ನು ಮತ್ತೊಬ್ಬ ತಳಿ ಸಂರಕ್ಷಕ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಸನಿಹದ ಗಿಡಗೆಳೆತನದಿಂದ ಕೃಷಿಪ್ರೀತಿ ಬೆಳೆಸುವ ಕೃಷಿಕ ಎಡ್ವಡರ್್ ರೆಬೆಲ್ಲೋ ಅವರಿಗೆ ದಾನವಾಗಿ ನೀಡುವಮೂಲಕ ಆದರ್ಶಕ್ಕೆ ಮಾದರಿಯಾಗಿದ್ದಾರೆ.
ಸರಗೂರಿನ `ವನಸಿರಿ'ಯಿಂದ ಆರಂಭವಾದ ಅವರ ಸಸ್ಯಪ್ರೇಮ ಮೈಸೂರಿನ ಶ್ರೀರಾಮಪುರದಲ್ಲಿರುವ `ಸಂತೃಪ್ತಿ'ಯಲ್ಲಿ ಬಳ್ಳಿಯಾಗಿ ಹಬ್ಬಿದೆ.ನಾಲ್ಕು ದಶಕಗಳಿಗೂ ಹೆಚ್ಚುಕಾಲ ವೈದ್ಯವೃತ್ತಿಯನ್ನು ದೀನದಲಿತರ ಸೇವೆಗೆ ಮುಡಿಪಾಗಿಟ್ಟಿದ್ದ ಧನ್ವಂತರಿ ಡಾ.ಮೃತ್ಯುಂಜಯಪ್ಪ ಜನರ ಆರೋಗ್ಯದ ಬಗ್ಗೆ ವಹಿಸಿದಷ್ಟೆ ಕಾಳಜಿಯನ್ನು ಇಳಿಗಾಲದಲ್ಲಿ ಗಿಡಮರಗಳ ಹಾರೈಕೆಗೂ ಮೀಸಲಿಟ್ಟಿದ್ದಾರೆ.
ಮನೆಯಂಗಳದಲ್ಲಿ ಕೈ ತೋಟಮಾಡಲು ಆಸಕ್ತಿಇರುವವರು, ತೋಟಗಳಲ್ಲಿ ಸಸ್ಯ ವೈವಿಧ್ಯತೆಗೆ ಆದ್ಯತೆ ನೀಡುವ ಪ್ರಯೋಗಶೀಲ ಕೃಷಿಕರು,ದೇಶವಿದೇಶಗಳಲ್ಲಿ ಬೆಳೆಯುವ ಅಪರೂಪದ ಹಣ್ಣು ತರಕಾರಿಗಳನ್ನು ನೋಡುವ ಹಂಬಲವಿದ್ದವರೂ ಒಮ್ಮೆ ಶ್ರೀರಾಮಪುರದಲ್ಲಿರುವ `ಸಂತೃಪ್ತಿ' ಎಂಬ ಸಸ್ಯಕಾಶಿಯನ್ನು ನೋಡಬೇಕು.
ಒಂದೇ ಮಾವಿನ ಮರದಲ್ಲಿ ನೂರು ವಿವಿಧ ತಳಿಯ ಸಯಾನ್ಗಳನ್ನು ಕಸಿಮಾಡಿ ಫಲಪಡೆದು ಯಶಸ್ವಿಯಾಗಿದ್ದಾರೆ. ಅಷ್ಟೇ ಬಿಳಿಯ ಬಣ್ಣದ ಒಂದು ದೇವಕಣಗಿಲೆಗೆ ಹತ್ತಾರು ಬಣ್ಣದ ದೇವಕಣಗಿಲೆಗಳನ್ನು ಕಸಿಕಟ್ಟಿದ್ದಾರೆ. ಈರಳೆ ಗಿಡಕ್ಕೆ ನಿಂಬೆ,ಚಕ್ಕೋತ,ಮೂಸಿಂಬೆ ರೆಂಬೆಗಳನ್ನು ಕಸಿಕಟ್ಟಿದ್ದಾರೆ. ಒಂದೇ ಸಪೋಟ ಗಿಡದಲ್ಲಿ ಐದಾರು ತಳಿಯ ಹಣ್ಣುಗಳು ಬಿಡುತ್ತವೆ. ಒಂದೇ ದಾಸವಾಳದ ಗಿಡದಲ್ಲಿ ಇಪ್ಪತ್ತು ಬಗೆಯ ಬಣ್ಣಬಣ್ಣದ ಹೂಗಳಿವೆ.ಇದೆಲ್ಲಾ ಕಸಿಬ್ರಹ್ಮ ಡಾ.ಮೃತ್ಯುಂಜಯಪ್ಪ ಅವರ ಕೈಚಳಕದಿಂದ ಆದ ವಿಸ್ಮಯಗಳು. 
ಮನೆಯ ಆವರಣವನ್ನು ಪ್ರವೇಶಿಸುತ್ತಿದ್ದಂತೆ ಮಣ್ಣಿನ ಆಸರೆಯೇ ಇಲ್ಲದೆ ಮರದ ಮೇಲೆ ಬೇರುಬಿಟ್ಟು ಹಬ್ಬಿರುವ ಪರಾವಲಂಭಿ (ಪ್ಯಾರಸೈಟ್)ಆಕರ್ಿಡ್ ಚಪ್ಪರದ ತುಂಬಾ ಹೂಬಿಟ್ಟು ಸ್ವಾಗತ ಕೋರುತ್ತದೆ. ಗಿಡದ ತುಂಬಾ ತಿಳಿನೀಲಿ ಹೂಬಿಟ್ಟ ಆರ್ನಮೆಂಟಲ್ ಡ್ಯುರಂಟ್(ದುರಂತ ಗಿಡ) ಎಂಬ ಸುಂದರಿ ಮನಸೆಳೆಯುತ್ತಾಳೆ. ಮನೆಯ ಒಡೆಯ,ಗಿಡಗಳ ಪ್ರೀತಿಯ ಯಜಮಾನ ಡಾ.ಮೃತ್ಯುಂಜಯಪ್ಪ ಒಂದೊಂದೆ ಹೆಜ್ಜೆಹಾಕುತ್ತಾ ಮನೆಯಂಗಳದ ಕೈತೋಟಕ್ಕೆ ಕರೆದುಕೊಂಡುಹೋಗುತ್ತಾರೆ. 120 ಅಡಿ ಉದ್ದ ಹಾಗೂ 90 ಅಡಿ ಅಗಲದಲ್ಲಿ ಮನೆಯೂ ಸೇರಿದಂತೆ 200ಕ್ಕೂ ಹೆಚ್ಚು ವಿಶೇಷ ಅಪರೂಪದ ಹಣ್ಣಿನ ಗಿಡಗಳು,200ಕ್ಕೂ ಹೆಚ್ಚು ಹೂವಿನ ಗಿಡಗಳು ಜಾಗಪಡೆದಿರುವ ಸಸ್ಯಕಾಶಿಯ ಇತಿಹಾಸ ಬಿಚ್ಚಿಕೊಳ್ಳುತ್ತದೆ. ಪ್ರತಿಗಿಡದ ಹಿಂದೆಯೂ ಒಂದೊಂದು ಸ್ವಾರಸ್ಯಕರವಾದ ಕತೆ ಇದೆ. ಹವಾಯಿ ದ್ವೀಪದಿಂದ ಚೀನಾ ದೇಶಕ್ಕೆ ಬಂದು ಅಲ್ಲಿಂದ ಬಾಂಗ್ಲದೇಶ ತಲುಪಿ ಕಲ್ಕತ್ತಾ ಮೂಲಕ ಕೇರಳ ತಲುಪಿ ಅಲ್ಲಿಂದ `ಸಂತೃಪ್ತಿ' ಎಂಬ ಸಸ್ಯಕಾಶಿಗೆ ಬಂದ `ಕೆಫೆಲ್' ಎಂಬ ಸುವಾಸನಾಭರಿತ ಹಣ್ಣಿನ ಗಿಡದಿಂದ ಹಿಡಿದು ಸಿಂಗಪುರದ ಸುಂದರಿ ಮೆಡಿಲಿಯಾ ಫ್ಲವರ್, ಅಮೇರಿಕಾದ ಹಾಗ್ ಫ್ಲಮ್,ಆಸ್ಟೇಲಿಯಾದ ಅಂಜೂರ,ಥೈಲ್ಯಾಂಡ್ ದೇಶದ ಮಾವು ಮತ್ತು ಸೀಬೆ,ಈಜಿಫ್ಟ್ನ ಕಜರ್ೂರ,ಫ್ರಾನ್ಸ್ನಿಂದ ಬಂದ ಗ್ರೀನ್ ಆಫಲ್,ಆಫಘಾನಿಸ್ತಾನ್ನಿಂದ ಬಂದ ಕಾಬೂಲ್ ದಾಳಿಂಬೆ,ಹಿಮಾಚಲಪ್ರದೇಶದಿಂದ ಬಂದ ಸಕ್ಕರೆ ಬಾದಾಮಿ ಗಿಡ,ಲಾಲ್ಬಾಗ್ನಿಂದ ಬಂದ ಮಧುರ ಹಲಸು ಹೀಗೆ ನೂರಾರು ವಿನಾಶದ ಅಂಚಿನಲ್ಲಿರುವ ಹಣ್ಣಿನ ಮರಗಿಡಗಳು ಇಲ್ಲಿ ವೈದ್ಯರ ಹಾರೈಕೆಯಲ್ಲಿ ಬೆಳೆಯುತ್ತಿವೆ.
ಅಷ್ಟೇ ಅಲ್ಲಾ ಈ ಅಪರೂಪದ ಗಿಡಗಳು ಇಲ್ಲಿ ಬೆಳೆದು ಮರವಾದ ಮೇಲೆ ಮತ್ತೆ ಕಸಿಯಾಗಿ ಗೆಳೆಯರ ತೋಟ,ಮನೆಯಂಗಳವನ್ನು ಸೇರಿವೆ.ಅದಕ್ಕಾಗಿಯೇ ಡಾ.ಮೃತ್ಯುಂಜಯಪ್ಪ ಅವರಿಗೆ ಭಾರತ ಸರಕಾರ 2015ರ ಸಾಲಿನ ಸಸ್ಯತಳಿ ಸಂರಕ್ಷಕ ಪ್ರಶಸ್ತಿ ನೀಡಿ ಗೌರವಿಸಿದ್ದು ಎನ್ನುವುದು ವಿಶೇಷ. ವೈದ್ಯವೃತಿಯ ಜೊತೆಗೆ ಫೋಟೊಗ್ರಫಿ,ನಾಣ್ಯಗಳ ಸಂಗ್ರಹ,ವಿದೇಶ ಪ್ರವಾಸ ಮತ್ತು ತೋಟಗಾರಿಕೆಯನ್ನು ಹವ್ಯಾಸವಾಗಿ ತೆಗೆದುಕೊಂಡ ವೈದ್ಯರು ಇಷ್ಟಪಟ್ಟು ಮಾಡಿದ ಪ್ರತಿಯೊಂದು ಕೆಲಸದಲ್ಲೂ ನೈಪುಣ್ಯವನ್ನು ಸಾಧಿಸಿದ್ದಾರೆ. ಯಶಸ್ವಿ ಪುರುಷನ ಹಿಂದೆ ಸ್ತ್ರೀಯೊಬ್ಬಳು ಇರುತ್ತಾಳೆ ಎಂಬ ನಾಣ್ಣುಡಿಯಂತೆ ಇದಕ್ಕೆ ಪೂರಕವಾಗಿ ಅವರ ಪತ್ನಿ ಸುಧಾ ಮೃತ್ಯುಂಜಯಪ್ಪ ಸದಾ ಹೆಗಲಾಗಿನಿಂತು ದುಡಿದಿದ್ದಾರೆ.
ಅಪರೂಪದ ಗಿಡಗಳು : ಕಲ್ಕತ್ತಾದ ವೆರಿಗೇಟೆಡ್ ಮೂಸಂಬಿ,ಹಾಲೆಂಡ್ ದೇಶದ ನಿಂಬೆ, ಲಕ್ವಾಟ್ ಜಪಾನ್ ಫ್ಲಮ್, ಸಿಹಿ ಈರಳೆ, ಕ್ಯಾಕ್ಟಸ್ ಗಾರ್ಡನ್, ಹೂವಿನ ರುದ್ರಾಕ್ಷಿ, ವಿಂಕರೋಜಿಕಾ, ಅಮೇರಿಕನ್ ಚಸ್ಟ್ನಟ್, ಪಾನ್ಕಾಪತ್ತಾ ,ಥೈಲ್ಯಾಂಡ್ ಸಪೋಟ, ಫೆಪಿನೋ, ಆಲ್ ಸೀಜನ್ ಮ್ಯಾಂಗೋ. ಹಳದಿ ಸೇಬು,ಸಿಟ್ರಸ್ನ ಮೂಲ ತಳಿಯಾದ ಮಾದಳ ಫಲ,ಮೆಕಡೋಮಿಯಾ ನೆಟ್,ರೆಡ್ ಆಫಲ್, ಚೆರ್ರಿ ಟೊಮಾಟೊ, ಡ್ರ್ಯಾಗನ್ ಫ್ಲಾವರ್,ಬ್ಲೂ ಬೆರ್ರಿ, ಹನುಮನ ಫಲ (ಸವಾರ್ಸೋಪ್). ಫ್ರಾನ್ಸ್ನಿಂದ ಬಂದ ಗ್ರೀನ್ ಆಫಲ್,ಅವಕಾಡೊ (ಬೆಣ್ಣೆ ಹಣ್ಣು),ಏಪ್ರಿಕಾಟ್,ಪೀಚು, ಸರ್ವಸಾಂಬಾರ್, ಸುಹಾಸಿನಿ ಕರಿಬೇವು.ಮಂಡ್ಯಜಿಲ್ಲೆಯ ಶೆಟ್ಟಹಳ್ಳಿ ಮತ್ತು ತೆಲಂಗಾಣದ ಅರಣ್ಯದಲ್ಲಿ ಮಾತ್ರ ಕಂಡು ಬರುವ ಬ್ಲ್ಯಾಕ್ ಸ್ಯಾಂಡಲ್,ಥೈಲ್ಯಾಂಡ್ ಸೀಬೆ. ಅಬ್ಲಾಂಗ್ ಸಫೋಟ,ಬ್ಲ್ಯಾಕ್ ಮ್ಯಾಂಗೊ, ಆಫ್ರಿಕನ್ ಫ್ಲವರ್,ಅಮೇರಿಕಾದ ನಂದ ಬಟ್ಟಲು, ಸಿಹಿಯಾದ ಕರಂಬೋಲಾ (ನಕ್ಷತ್ರ ಹಣ್ಣು),ಸುರಗಿ,ಬೀಜರಹಿತ ಹಲಸು, ವಾಟರ್ ಆಫಲ್,ರಾತ್ರಿರಾಣಿ,ಮಲೆಯನ್ ಆಫಲ್, ಡ್ರ್ಯಾಗನ್ ಫ್ರೂಟ್, ಏಕಮುಖ ರುದ್ರಾಕ್ಷಿ, ಪಂಚಮುಖಿ, ಥೈಲ್ಯಾಂಡ್ ದೇಶದ ಬೀಜರಹಿತ ಸಿಹಿ ಬಿಳಿ ಚಕೋತ,ಮೈಸೂರು ಚಿಗುರೆಲೆ, ಜಿಂಜರ್ ಲಿಲ್ಲಿ,ಬ್ಲ್ಯಾಕ್ ಸೀಬೆ, ಆರ್ನಮೆಂಟಲ್ ಮೆಣಸಿಹಣ್ಣು, ಸೀತಾಫಲ,ರಾಮಫಲ,ಹನುಮಫಲ ಎಲ್ಲವೂ ಒಂದೇ ಗಿಡದಲ್ಲಿ ಕಸಿಕಟ್ಟಿ ಬೆಳೆಸಲಾಗಿದೆ. ಸಾಗುವಾನಿ (ಟೀಕ್) ಮರಕ್ಕೆ ಡ್ರ್ಯಾಗನ್ ಫ್ರೂಟ್ ಗಿಡ ಹಬ್ಬಿಸಲಾಗಿದೆ. ಬೇಲ, ಲೂಸ್ ಜಾಕೆಟ್ ಕಿತ್ತಳೆ. ಅಮೇರಿಕಾದ ಹೂವಿನ ಗಿಡ. ವಿಮಾನ ನಿಲ್ದಾಣದಲ್ಲಿ ನೋಡಿ ಮನಸೋತು ಮೂಲಹುಡುಕಿ ಹೋಗಿ ತಿರುವಣ್ಣ ಮಲೈ ರಮಣ ಮಹಷರ್ಿಗಳ ಆಶ್ರಮದದಿಂದ ತಂದ ವಿಶೇಷವಾದ ಹೂವಿನ ಗಿಡ.ಕೊಡಗಿನ ಕರಿಮುಂಜಿ (ಕ್ಯಾರಿಸಾ ಕರಂಡಾ ಲಿನ್), ಆಫಲ್ ಜಾಮ್, ಫೀನೆಟ್ ಬಟರ್ ,ವೈಟ್ ಜಾಮ್, ಸೀಡ್ ಲೆಸ್ ಸೀತಾಫಲ,ಯುರೋಪ್ ದೇಶದ ಎಲ್ಲಾ ಬಗೆಯ ಬೇರಿ ಕಾಯಿಗಳ ಗಿಡಗಳನ್ನು ಒಂದೇ ಗಿಡಕ್ಕೆ ಕಸಿ ಮಾಡಲಾಗಿದೆ.ರುದ್ರಾಕ್ಷಿ ಹಲಸು, ಗಮ್ಲೆಸ್ ಹಲಸು. ಸ್ವಿಟ್ಜರ್ಲ್ಯಾಂಡ್ ಲೈಮ್ ಮೇಲೆ ಹಳದಿ ಒಳಗೆ ಕೆಂಪು,ಬುದ್ಧಸ್ ಹ್ಯಾಂಡ್ನಂತೆ ಹಣ್ಣು ಬಿಡುವ ಗಿಡ ಡಾ.ಮೃತ್ಯುಂಜಯಪ್ಪನವರ ಸಸ್ಯಕಾಶಿ ಎಂದರೆ ಹೀಗೆ ಇಲ್ಲಿ ಎಲ್ಲಾವೂ ವಿಶೇಷ.
ಹಿಂತಿರುಗಿ ನೋಡಿದಾಗ : ಮಂಡ್ಯ ಜಿಲ್ಲೆಯ ದೊಡ್ಡೇಬಾಗಿಲು ಮೂಲದ ಡಾ.ಮೃತ್ಯುಂಜಯಪ್ಪ ಸರಗೂರನ್ನು ತಮ್ಮ ಕರ್ಮಭೂಮಿಯಾಗಿಸಿಕೊಂಡರು. 70-90 ರ ದಶಕದಲ್ಲಿ ಸರಗೂರಿನಲ್ಲಿ ಜನಪ್ರೀಯ ವೈದ್ಯರಾಗಿದ್ದ ಡಾ.ಮೃತ್ಯುಂಜಯಪ್ಪ ತಮ್ಮ ಕ್ರಾಂತಿಕಾರಿ ಮತ್ತು ಜಾತ್ಯಾತೀತ ನಿಲುವಿನಿಂದಲೆ ಪರಿಚಿತರಾಗಿದ್ದರು. `ವನಸಿರಿ'ಯಲ್ಲಿ ಬೆಳೆಸಿದ ಸಂಪಿಗೆಮರವೊಂದು ವಿಶ್ವದಾಖಲೆಯ ಪಟ್ಟಿ ಸೇರಿತ್ತು. ಸರಗೂರಿನ ರಸ್ತೆಬದಿಗಳಲ್ಲಿ ಗಿಡನೆಟ್ಟು ಮರಬೆಳೆಸಿ,ಶಾಲಾ ಆವರಣದಲ್ಲಿ ನೆಡುತೋಪು ನಿರ್ಮಾಣ ಮಾಡಿದ ದಂಪತಿಯ ಸಮಾಜಸೇವೆಯನ್ನು ಅಲ್ಲಿನ ಜನ ಇಂದಿಗೂ ಸ್ಮರಿಸುತ್ತಾರೆ.
ಮೈಸೂರಿನ ಯುವರಾಜ ಕಾಲೇಜಿನಲ್ಲಿ  ಬಿಎಸ್ಸಿ ಬಾಟನಿ (ಸಸ್ಯಶಾಸ್ತ್ರ) ,ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಒಂದು ವರ್ಷ ಎಂಎಸ್ಸಿ ಅಭ್ಯಾಸ. ಅದೇ ಸಮಯದಲ್ಲಿ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣಪಡೆದು 1973 ರಲ್ಲಿ ಅತ್ಯಂತ ಹಿಂದುಳಿದ ಹೆಗ್ಗಡದೇವನಕೋಟೆ ತಾಲೂಕಿನ ಸರಗೂರಿನಲ್ಲಿ ವೃತ್ತಿ ಆರಂಭಿಸಿದ ಡಾ.ಮೃತ್ಯುಂಜಯಪ್ಪ ಹಿಂತಿರುಗಿನೋಡಲಿಲ್ಲ.ನಾಲ್ಕು ದಶಕಗಳಕಾಲ ಶ್ರೀಸಾಮಾನ್ಯನ ಧನ್ವಂತರಿಯಾಗಿ ದುಡಿದರು.  `ನನಗೆ ನಾನೇ ಶಿಲ್ಪಿ'ಎಂಬ ಆತ್ಮಕತೆ ಬರೆಯುವ ಮೂಲಕ ಆ ಎಲ್ಲ ಸುಖದುಃಖಗಳನ್ನು ದಾಖಲಿಸಿದ್ದಾರೆ.`ನಮ್ಮ ಬದುಕು'ಎಂಬ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಚಿಕ್ಕಪ್ಪ ಮಾದಳ್ಳಿ ಮಠದ ಜಡೆ ಮಹಂತಸ್ವಾಮಿ ಮತ್ತು ಸುತ್ತೂರು ಮಠದ ಶ್ರೀ ರಾಜೇಂದ್ರ ಸ್ವಾಮಿಗಳ ಸಲಹೆ,ಸಹಕಾರವನ್ನು ನೆನೆದು ಭಾವುಕರಾಗುತ್ತಾರೆ.
1971 ರಲ್ಲಿ ಇಂಡೋ ಪಾಕಿಸ್ತಾನ ಯುದ್ಧ ನಡೆದಾಗ ಹದಿನಾಲ್ಕು ಜನರ ತಂಡದೊಂದಿಗೆ ಪೂರ್ವ ಪಾಕಿಸ್ತಾನದಲ್ಲಿ ಗಡಿಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆನೀಡಿ ದೇಶಸೇವೆ ಮಾಡಿದರು. ಯುದ್ಧ ಮುಗಿದು ಬಾಂಗ್ಲ ವಿಭಜನೆ ನಂತರ ಗುಲ್ಬರ್ಗದಲ್ಲಿ ಮೊದಲ ವೃತ್ತಿ ಆರಂಭಿಸಿದ ಡಾ.ಮೃತ್ಯುಂಜಯಪ್ಪ  ಆಗ ಅಲ್ಲಿ ಕಂಡ 72-73 ರ ತೀವ್ರ ಬರಗಾಲ ನೋಡಿ ಮರುಕಪಡುತ್ತಾರೆ. "ದೇಶದ ಗಡಿಯಲ್ಲಿ ನೋಡಿದ್ದ ಯುದ್ಧದ ಸಾವು ನೋವು ಮತ್ತು ಗುಲ್ಬರ್ಗದಲ್ಲಿ ಕಂಡ ತೀವ್ರ ಬರಗಾಲದ ಛಾಯೆ ನನ್ನಲ್ಲಿ ತೀವ್ರ ನೋವು ಮೂಡಿಸಿದವು.ಇದರಿಂದ ಮನಪರಿವರ್ತನೆಯಾಗಿ ಎಲ್ಲದರೂ ಹೋಗಿ ಸಮಾಜಸೇವೆ ಮಾಡಬೇಕೆಂದು ತೀರ್ಮಾನಿಸಿದೆ.. ಸರಕಾರಿ ಕೆಲಸ ಬೇಡ ಅಂತ ನಿರ್ಧರಿಸಿ ಸಮಾಜದ ಸೇವೆಮಾಡಲು ಸರಗೂರಿಗೆ ಬಂದು ನೆಲೆನಿಂತೆ" ಎಂದು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.
ತಮ್ಮ ಪತ್ನಿ ಸುಧಾ ಅವರು ಬೆಂಗಳೂರಿನ ಪೋಲೀಸ್ ಆಫೀಸರ್ ಮಗಳು.1973 ಮೇ 7 ರಂದು ಮದುವೆಯಾಯಿತು.ನಗರದ ಸಕಲಸವಲತ್ತುಗಳನ್ನು ಬಿಟ್ಟು ಅದೇ ತಿಂಗಳು 30 ನೇ ತಾರೀಖು ನಮಗೆ ಬಂದಿದ್ದ ಉಡುಗೊರೆಗಳನ್ನು ಗೋಣಿಚೀಲದಲ್ಲಿ ತುಂಬಿಕೊಂಡು ನೇರ ಸರಗೂರಿಗೆ ನಡೆದುಬಿಟ್ಟೆವು. ಜನರ ಪರಿಚಯ ಇರಲಿಲ್ಲ. 50 ರೂಪಾಯಿ ಬಾಡಿಗೆಯ ಸಣ್ಣಮನೆಯಲ್ಲಿ ವೃತ್ತಿ ಆರಂಭವಾಯಿತು.
ಕಡುಬಡತನದ ಹಳ್ಳಿ ಸರಗೂರು. ಗಂಡಸರು ಶೇಕಡ 17 ಹೆಂಗಸರು ಶೇಕಡ 7 ರಷ್ಟು ಸಾಕ್ಷರರಾಗಿದ್ದರು. 1973 ರಲ್ಲಿ ಶಾಲೆಗಳಿಗೆ ಸರಿಯಾಗಿ ಕೊಠಡಿಗಳೆ ಇರಲಿಲ್ಲ. ಅದನ್ನೆಲ್ಲ ನೋಡಿ 74 ರಲ್ಲಿ ಆರು ಶಾಲಾ ಕೊಠಡಿಗಳನ್ನು ಕಟ್ಟಿಸಿದೆ,ಸತೀಶ್ ಕುಮಾರ್ ಮತ್ತು ಆಗ ಜಿಲ್ಲಾಧಿಕಾರಿಯಾಗಿದ್ದ ಆರ್ಯಮಿತ್ರ ಸಂಪೂರ್ಣ ಸಹಕಾರ ನೀಡಿದರು. ಆರೋಗ್ಯ ಸಚಿವರಾಗಿದ್ದ ಸಿದ್ದವೀರಪ್ಪ,ಸುತ್ತೂರು ಶ್ರೀ ರಾಜೇಂದ್ರ ಸ್ವಾಮೀಜಿಯವರು ಶಾಲಾ ಕೊಠಡಿ ಉದ್ಘಾಟಿಸಿದರು. ಅವರೇ ನನ್ನ ಸಮಾಜಸೇವೆಗೆ ಪ್ರೇರಣೆ ಎನ್ನುತ್ತಾರೆ.
ದಲಿತರು,ಆದಿವಾಸಿಗಳು,ಕಾಡಿನ ಜನರು ಎಲ್ಲರಿಗೂ ನೆರವಾಗಿ,ಸಂಪ್ರದಾಯ,ಜಾತಿಪದ್ಧತಿ ಎಲ್ಲವನ್ನೂ ಮೀರಿ ವೈದ್ಯವೃತ್ತಿಯ ಜೊತೆಗೆ ಸಮಾಜಸೇವೆಯನ್ನೂ ಮಾಡಿದ ಡಾ.ಮೃತ್ಯುಂಜಯಪ್ಪ 25 ವರ್ಷ ಮೈಸೂರಿಗೆ ಬರಲೇ ಇಲ್ಲ. ಬಂಧುಬಳಗ ಮರೆತು ಸೇವೆಮಾಡಿದ್ದಾರೆ. ನಮ್ಮ ಮೂವರು ಪುತ್ರರೇ ನಮಗೆ ಆಸ್ತಿ.ಅವರನ್ನು ಸಂಸ್ಕೃತಿವಂತರಾಗಿ ಬೆಳೆಸಿದೆವು.ಬೆಂಗಳೂರಿನಲ್ಲಿ  ಎಲ್ಲರೂ ಸಾಫ್ಟ್ವೇರ್ ಉದ್ಯೋಗಿಗಳಾಗಿದ್ದಾರೆ ಎಂದು ಕುಟುಂಬದ ವಿವರ ನೀಡಿದರು.
"ಇಥಿಯೋಪಿಯಾ,ಸೋಮಾಲಿಯ,ಕಿನ್ಯಾದಂತಹ ಕಡುಬಡ ದೇಶಗಳಿಂದ ಹಿಡಿದು ಅಮೇರಿಕಾ,ಇಂಗ್ಲೇಂಡ್,ಜರ್ಮನಿ ಸೇರಿದಂತೆ 25ಕ್ಕೂ ಹೆಚ್ಚು ದೇಶ ಸುತ್ತಿಬಂದರೂ ಕೊನೆಗೆ ಅನಿಸಿದ್ದು ಭಾರತದಂತಹ ಸುಂದರ,ಸುರಕ್ಷಿತವಾದ ದೇಶ ಇನ್ನೊಂದಿಲ್ಲ. ಅದರಲ್ಲೂ ನಿವೃತ್ತರ ಸ್ವರ್ಗ ಮೈಸೂರು.ಇದರಂತಹ ಸುರಕ್ಷಿತ ನಗರ ಮತ್ತೊಂದಿಲ್ಲ" ಎನ್ನುತ್ತಾರೆ.
ವಿದೇಶಗಳಿಗೆ ಹೋದಾಗ ದೇಶ ವಿದೇಶದ ಒಳ್ಳೊಳ್ಳೆ ಹಣ್ಣಿನ ಗಿಡಗಳು ನೋಡಲು ನಮ್ಮವರಿಗೂ ನೋಡಲು ಸಿಗಲಿ ಎನ್ನುವ ಕಾರಣದಿಂದ ಕಷ್ಟಪಟ್ಟು ಸಾಯನ್ಗಳನ್ನು ತಂದು ಕಸಿಕಟ್ಟಿ ಬೆಳೆಸಿದ್ದೇವೆ.ನಾಳಿನ ಜನಾಂಗ ಇಂತಹ ಗಿಡಮರಗಳನ್ನು ನೋಡಲು ಸಾಧ್ಯವಿಲ್ಲ.ಅಂತಹ ಹಣ್ಣಿನ ಗಿಡಮರಗಳು ಇಲ್ಲಿವೆ.ವಿನಾಶದ ಅಂಚಿನಲ್ಲಿರುವ ಅಪರೂಪದ ಗಿಡಗಳು ಇಲ್ಲಿವೆ. ರೈತರ ಈ ಸಸ್ಯಕಾಶಿಗೆ ಕಲಿಯಲು,ನೋಡಲು ಬರುತ್ತಾರೆ. ಶ್ರೀರಾಮಪುರದ ಸಸ್ಯಕಾಶಿಯಲ್ಲಿ ಪತ್ನಿ ಸುಧಾ ಮೃತ್ಯುಂಜಯಪ್ಪ ಅವರೊಂದಿಗೆ ಗಿಡಮರಗಳೊಂದಿಗೆ `ಸಂತೃಪ್ತಿ' ಜೀವನ ನಡೆಸುತ್ತಿದ್ದಾರೆ.ಹೆಚ್ಚಿನ ಮಾಹಿತಿಗೆ 94489 58809 ಸಂಪರ್ಕಿಸಿ.




1 ಕಾಮೆಂಟ್‌: