vaddagere.bloogspot.com

ಭಾನುವಾರ, ಸೆಪ್ಟೆಂಬರ್ 24, 2017

`ದೇಸಿಕೃಷಿ' ಜ್ಞಾನ ಪರಂಪರೆ : ಕೃಷಿ ಸಂಸ್ಕೃತಿ ಕಥನ
ಪ್ರಸ್ತುತ ಕೃಷಿ ನಷ್ಟವಾಗಿ ಪರಿಣಮಿಸಿರುವುದರಿಂದ ಈಗ ವ್ಯವಸಾಯದ ಆಸಕ್ತಿಯೇ ಕರಗಿಹೋಗಿದೆ. 50ರ ವಯೋಮಾನದ ಆಸುಪಾಸಿನ ಕೃಷಿ ಜ್ಞಾನಿಗಳು ನಶಿಸಿಹೋದರೆ ದೇಸಿ ಕೃಷಿ ಜ್ಞಾನ ಬಲ್ಲವರ ಸಂತತಿಯೇ ಇಲ್ಲವಾಗುತ್ತದೆ. ಆಗ ಅಂತಹ ಕೃಷಿಯನ್ನು ಹೊಸದಾಗಿಯೇ ಕಲಿಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ದೇಸಿ ಕೃಷಿ ಜ್ಞಾನದ ಅಧ್ಯಯನ ಮತ್ತು ಅದರ ದಾಖಲಾತಿ ಅನಿವಾರ್ಯವಾಗಿದೆ. ಬಹುತೇಕ ಹಳ್ಳಿಗರು ಅನಕ್ಷರಸ್ಥರಾಗಿದ್ದರೆ ಹೊರತು ಅಜ್ಞಾನಿಗಳಾಗಿರಲಿಲ್ಲ.ಅರಿವುಗೇಡಿಗಳಾಗಿರಲಿಲ್ಲ. ಈ ದೇಶದ ಮುಖ್ಯವಾಹಿನಿ ಕೃಷಿ ದೇಸಿ ಕೃಷಿ ಮಾತ್ರ. ಈ ನಿಟ್ಟಿನಲ್ಲಿ ಭಾರತಕ್ಕೆ ಪ್ರವಾಸಕ್ಕೆ, ಅಧ್ಯಯನಕ್ಕೆ ಬಂದ ವಿದೇಶಿ ಪ್ರವಾಸಿಗರು,ಸಂಶೋಧಕರು ಬರೆದಿರುವ ಜ್ಞಾನವನ್ನೆಲ್ಲ ಪರಿಶೀಲಿಸುವ ಬೆಳಕಿಗೆ ತರುವ ಮಹತ್ವದ ಕೆಲಸಗಳು ಆಗಬೇಕಾಗಿದೆ. - ಡಾ.ಆರ್.ಸ್ವಾಮಿ ಆನಂದ್
ರೈತ ಸಮುದಾಯದ್ದು "ಮೌನ" ಸಂಸ್ಕೃತಿ.ಬಹುತೇಕ ಅನಕ್ಷರಸ್ಥರರೆ ಆಗಿದ್ದ ರೈತರು ಬರೆಯುವುದಕ್ಕಿಂತ ಹೆಚ್ಚಾಗಿ "ಬದುಕು"ವುದೆ ದೊಡ್ಡದು ಎಂದು ಅರಿತು ಬಾಳಿದವರು.ಮೌಖಿಕ ಪರಂಪರೆಯ ಕೃಷಿ ಸಂಸ್ಕೃತಿಯ ಕುರಿತು ನಮ್ಮಲ್ಲಿ ಅಷ್ಟಾಗಿ ಚಾರಿತ್ರಿಕ ದಾಖಲೆಗಳು ಸಿಗುವುದಿಲ್ಲ.
ಸಾವಿರಾರು ವರ್ಷಗಳ ಇತಿಹಾಸವಿರುವ ಕೃಷಿಯ ಬಗ್ಗೆ ಸರಿಯಾದ ವಿವರಗಳಿಲ್ಲ.ಅತಿವೃಷ್ಠಿ,ಅನಾವೃಷ್ಠಿಯಂತಹ ಪ್ರಕೃತಿ ವೈಪರಿತ್ಯಗಳನ್ನು ಎದುರಿಸಿ,ಪ್ರಾಣಿ,ಕೀಟಗಳ ಹಾವಳಿಯಿಂದ ಪಾರಾಗಿ ಬೆಳೆ ಬೆಳೆದು "ಆಹಾರ ಭದ್ರತೆ" ಯನ್ನು ಒದಗಿಸಿಕೊಟ್ಟಿರುವ ಶ್ರಮಿಕ ಸಂಸ್ಕೃತಿಯ ಬಗ್ಗೆ ಚಾರಿತ್ರಿಕ ದಾಖಲೆ ಇಲ್ಲದಿರುವುದು ದುರಂತವೆ ಸರಿ.
ಈ ಹಿನ್ನೆಲೆಯಲ್ಲಿ ಪತ್ರಕರ್ತ,ಕೃಷಿಕ ಆರ್.ಸ್ವಾಮಿ ಆನಂದ್ "ಕನರ್ಾಟಕ ದೇಸಿ ಕೃಷಿ ಜ್ಞಾನ ಪರಂಪರೆಗಳು" ಎಂಬ ಸಂಶೋಧನ ಮಹಾ ಪ್ರಬಂಧ ರಚಿಸಿ "ದೇಸಿ" ಕೃಷಿ ಪರಂಪರೆಯನ್ನು ದಾಖಲಿಸಿ ಸಾವಯವ ಕೃಷಿ, ಸಹಜ ಕೃಷಿ, ರಾಸಾಯನಿಕ ಕೃಷಿಗಳ ವೈಜ್ಞಾನಿಕ ವಿಶ್ಲೇಷಣೆ ಮಾಡಿದ್ದಾರೆ. ಡಾ.ಮೊಗಳ್ಳಿ ಗಣೇಶ್ ಅವರ ಮಾರ್ಗದರ್ಶನವಿರುವ ಈ ಕೃತಿಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಕೃಷಿ ಚರಿತ್ರೆಯಲ್ಲಿ ಶುದ್ಧ ಬೇಸಾಯಕ್ಕೆ ಸಂಬಂಧಿಸಿದಂತೆ ಸುಮಾರು 150 ವರ್ಷಗಳ ಹಿಂದಿನವರೆಗೆ ಸಿಗುವ ಕೃತಿಗಳಲ್ಲಿ "ವೃಕ್ಷಾಯುವರ್ೇದ" ಮುಖ್ಯವಾದದ್ದು. ಸಂಸ್ಕೃತದ ಈ ಕೃತಿಯನ್ನು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಆರ್.ಪಿ.ಹೆಗಡೆ ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಹತ್ತನೇ ಶತಮಾನದ ಅಜುಬಾಜುವಿನಲ್ಲಿದ್ದ ಸುರಪಾಲ ಮುನಿಯ ವೃಕ್ಷಾಯುವರ್ೇದ ಹೆಚ್ಚಾಗಿ ಅರಣ್ಯಧಾರಿತ ಕೃಷಿಯ ಬಗ್ಗೆ ಮಾತನಾಡುತ್ತದೆ. ನೂರಾರು ಬಗೆಯ ಮರಗಳ ವಿವರ ಇಲ್ಲಿದೆ.ಯಾವ ಮರವನ್ನು ಎಲ್ಲಿ,ಹೇಗೆ ನೆಡಬೇಕು. ಇಂತಿಂತಹ ಮರಗಳನ್ನು ನೆಟ್ಟರೆ ಯಾವ ಫಲ ಸಿಗುತ್ತದೆ.ಅದರಿಂದ ಪರಿಸರದ ಮೇಲೆ ಬೀರುವ ಪರಿಣಾಮ ಎಂತದ್ದು. ಮರಗಳ ಪುನರ್ ಉತ್ಪತ್ತಿ ಹೇಗೆ ಆಗುತ್ತದೆ ಇದೆಲ್ಲವನ್ನು ಸುರಾಪಲ ಮುನಿ ವಿವರಿಸಿದ್ದಾನೆ. ಅಲ್ಲದೆ ರೈತ ಭಿತ್ತನೆಗೆ ಮುಂಚೆ ಕೈಗೊಳ್ಳಬೇಕಾದ ಕ್ರಮಗಳು,ಬೀಜೋಪಚಾರ,ಒಡೆಯನ ಕರ್ತವ್ಯಗಳು,ಸಸಿ ನೆಡುವ ವಿಧಾನ,ಪಾಲನೆ ಎಲ್ಲವನ್ನು ಹೇಳಲಾಗಿದೆ. ಇದೆಲ್ಲವನ್ನು ಸ್ವಾಮಿ ಆನಂದ್ ಇಲ್ಲಿ ವಿಶ್ಲೇಷಣೆಗೆ ಒಳಪಡಿಸಿದ್ದಾರೆ.
ಇದನ್ನು ಬಿಟ್ಟರೆ ಕನ್ನಡದಲ್ಲಿ ಬಂದ ಶ್ರೀ ಘನ ಮಠ ಶಿವಯೋಗಿಗಳ "ಕೃಷಿ ಜ್ಞಾನ ಪ್ರದೀಪಿಕೆ" 150 ವರ್ಷಗಳ ಹಿಂದಿನ ಕೃಷಿಜ್ಞಾನವನ್ನು ತಿಳಿಸಿಕೊಡುವ ಗ್ರಂಥ.ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿರುವ ಶ್ರೀ ಘನಮಠೇಶ್ವರ ಮಠ ಇಂದಿಗೂ ಕೃಷಿಜ್ಞಾನ ದಾಸೋಹ ಮಾಡುವ ವಿಶೇಷ ಮಠ. ಪ್ರತಿವರ್ಷ ಜಾತ್ರೆಯಲ್ಲಿ ಸೇರುವ ಜನರಿಗೆ ಕೃಷಿ ಸಾಧಕರಿಂದ ಪಾಠ ಹೇಳಿಸಿ ಸಾಧಕರನ್ನು ಸನ್ಮಾನಿಸುತ್ತಾ ಬಂದಿದೆ. ಇಂತಹ ಘನಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಘನಮಠ ಶಿವಯೋಗಿಗಳು 1876 ರಲ್ಲಿ ತಮ್ಮ ಸಹಚರರಾಗಿದ್ದ ಕುನ್ನಾಳ್ ಸಿದ್ದರಾಮಪ್ಪ ಅವರಿಂದ "ಕೃಷಿ ಜ್ಞಾನ ಪ್ರದೀಪಿಕೆ"ಯನ್ನು ಹೇಳಿ ಬರೆಸಿದರು. ಇದು 1917 ರಲ್ಲಿ ಪ್ರಕಟಣೆ ಕಂಡಿತು. 312 ಪುಟಗಳ ಈ ಪುಸ್ತಕ ಇದುವೆರೆಗೆ ನಾಲ್ಕು ಮುದ್ರಣಗಳನ್ನು ಕಂಡಿದೆ.
ಆ ಕಾಲದಲ್ಲಿ ಚಾಲ್ತಿಯಲ್ಲಿದ್ದ ಗಾದೆಗಳು,ಸರ್ವಜ್ಞ ಮತ್ತು ತೆಲುಗಿನ ಕೆಲವು ಹಿತೋಕ್ತಿಗಳನ್ನು ಸೇರಿಸಿ ರೂಪುಗೊಂಡಿರುವ ಪುಸ್ತಕದ ಬಗ್ಗೆಯೂ ಪ್ರಬಂಧದಲ್ಲಿ ವಿವರವಾಗಿ ಚಚರ್ಿಸಲಾಗಿದೆ.
ಕೃತಿಯ ಅಧ್ಯಯನ ಮಾಡಿದರೆ ನಾಗರೀಕತೆಯ ಇತಿಹಾಸ ತೆರೆದುಕೊಳ್ಳುತ್ತಾ ಹೋಗುತ್ತದೆ.ಭೂಮಿಯ ಉಗಮ,ಜೀವಿಗಳ ಉಗಮ,ಭೂ ಖಂಡಗಳ ಅಲೆದಾಟ, ಸಿಂಧೂ ನಾಗರೀಕತೆ,ವೇದಗಳ ಕಾಲದ ಜನಜೀವನದ ಮಾಹಿತಿಗಳು ಹೇರಳವಾಗಿ ಸಿಗುತ್ತವೆ.ಮಹಾ ಭಾರತ,ರಾಮಯಣ ಕಾಲದ ಕೃಷಿ, ಬುದ್ಧ, ಮಹಾವೀರನ ಕಾಲದಲ್ಲಿದ್ದ ಕೃಷಿ ವಿಧಾನಗಳನ್ನು ಚಚರ್ಿಸಲಾಗಿದೆ.
ಭಾರತದ ಪೂವರ್ೇತಿಹಾಸವನ್ನು ಅಧ್ಯಯನದ ವ್ಯಾಪ್ತಿಗೆ ಒಳಪಡಿಸಿರುವ ಲೇಖಕರು "ಋಗ್ವೇದಗಳ ಕಾಲ,ಮಹಾ ಜನಪದಗಳ ಕಾಲ,ಮಗಧರು,ಮೌರ್ಯರು,ಮಧ್ಯ ಪ್ರಾಚೀನ ಕಾಲ,ಮೊಘಲರು,ವಿಜಯ ನಗರ ಸಾಮ್ರಾಜ್ಯ, ಬ್ರೀಟಿಷರು ಈ ಎಲ್ಲಾ ಆಳ್ವಿಕೆ ಚರಿತ್ರೆಗಳ ಹಿಂದೆ ದುಡಿಯುವ ರೈತರ ಪರಿಶ್ರಮ ಇದೆ. ಇಷ್ಟು ದೊಡ್ಡ ಮಟ್ಟದ ವ್ಯವಸಾಯ ಪ್ರಧಾನ ದೇಶದಲ್ಲಿ ವ್ಯವಸಾಯಕ್ಕೆ ಸಂಬಂಧಿಸಿದ ಶಾಸ್ತ್ರೀಯ ಗ್ರಂಥ ಇತಿಹಾಸ ರಚನೆ ಆಗದೇ ಹೋಗಿರುವುದು ಕೌತುಕದ ಸಂಗತಿ" ಎನ್ನುತ್ತಲೇ ದೇಶದ ಇತಿಹಾಸ,ಸಂಸ್ಕೃತಿ ಮತ್ತು ಪರಂಪರೆಯನ್ನು ಕೃಷಿ ಹಿನ್ನೆಲೆಯಲ್ಲಿ ಓದುಗರಿಗೆ ಪರಿಚಯಿಸುತ್ತಾ ಹೋಗಿದ್ದಾರೆ.
ಟಿಪ್ಪು ಸುಲ್ತಾನ್ ಮಡಿದ ಮೇಲೆ ಲಾಡರ್್ ವೆಲ್ಲೆಸ್ಲಿಯ ಆದೇಶದ ಮೇರೆಗೆ ಹಮ್ಮಿಲ್ಟನ್ ಫ್ರಾನ್ಸಿಸ್ ಬುಚನಾನ್ ಎನ್ನುವ ಸಂಶೋಧಕ `ಹಿಸ್ಟ್ರಿ ಆಫ್ ಟ್ರಾವೆಲ್' ಕುರಿತು 1807 ರಲ್ಲಿ ಮೂರು ಸಂಪುಟಗಳಲ್ಲಿ ಪ್ರಕಟವಾದ "ಎ ಜನರ್ಿ ಫ್ರಮ್ ಮದ್ರಾಸ್ ಥ್ರೋ ದಿ ಕಂಟ್ರೀಸ್ ಆಫ್ ಮೈಸೂರು,ಕೆನರಾ,ಮಲಬಾರ್ " ಎಂಬ ಕೃತಿ ಆ ಕಾಲದ ಕೃಷಿಯ ವಾಸ್ತವದ ಸ್ಥಿತಿಗತಿಗಳನ್ನು ವಸ್ತುನಿಷ್ಠವಾಗಿ ನೋಡಿರುವ ದಾಖಲೆಯಾಗಿದೆ ಎನ್ನುವ ಲೇಖಕರು ಆ ಭಾಗಗಳನ್ನು ತಮ್ಮ ಸಂಶೋಧನಾ ಪ್ರಬಂಧದಲ್ಲಿ ಬಳಸಿಕೊಂಡಿರುವುದಾಗಿ ಹೇಳಿದ್ದಾರೆ.
12 ನೇ ಶತಮಾನದ ವಚನಗಳನ್ನು ಆಧರಿಸಿ "ಆಧ್ಯಾತ್ಮಿಕ ಕೃಷಿ" ಎಂಬ ಭಾಗದಲ್ಲಿ ಕೃಷಿಯ ಮಹತ್ವ,ಮಠಗಳ ಬೇಸಾಯ ಅವಲಂಬನೆಗಳನ್ನು ಅಲ್ಲಮ ಪ್ರಭು ಮತ್ತಿತರ ಶರಣರ ವಚನಗಳ ಮೂಲಕ ಅರ್ಥಪೂರ್ಣವಾಗಿ ವಿಶ್ಲೇಷಣೆಗೆ ಒಳಪಡಿಸಿದ್ದಾರೆ.
ವೆಬ್ಸ್ಟರ್ ನಿಂಘಟುವಿನ ಪ್ರಕಾರ ಬೇಸಾಯ ಎನ್ನುವುದು ಭೂಮಿಯನ್ನು ಉಳುವ,ಬೆಳೆ ಬೆಳೆವ ವಿಜ್ಞಾನ ಅಥವಾ ಕಲೆ ಜೊತೆಗೆ ಪಶು ಸಂವರ್ಧನೆಯೂ ಆಗಿದೆ. ಬೇಸಾಯ ಸಂಸ್ಕೃತಿ ಎಲ್ಲಾ ಸಂಸ್ಕೃತಿಗಳ ತಾಯಿಬೇರು.ಕೃಷಿಗೆ ಯುನಿವರ್ಸಲ್,ಯುನಿಫಾಮರ್ಿಟಿ ಇಲ್ಲ.ರಾಜ್ಯದ 29340 ಹಳ್ಳಿಗಳು ಒಂದರಂತೆ ಒಂದಿಲ್ಲ. ಅಷ್ಟೇ ಯಾಕೆ ಪ್ರತಿ ಐದು ಕಿ.ಮೀ. ಅಂತರಕ್ಕೆ ಮಣ್ಣು, ನೀರು ಬದಲಾಗುತ್ತಾ ಹೋಗುತ್ತದೆ.ಅಷ್ಟೊಂದು ಜೀವ ವೈವಿಧ್ಯತೆ ಇದೆ.
ದೇಸಿ ಕೃಷಿಕರ ಮಳೆಜ್ಞಾನ,ಮಳೆ ನಕ್ಷತ್ರಗಳು,ನಂಬಿಕೆಗಳು, ದೇಸಿ ಜಾನುವಾರುಗಳ ಬಗ್ಗೆ ವಿವರವಾದ ಮಾಹಿತಿಗಳನ್ನು ನೀಡಿರುವುದು ಕೃಷಿ ಪರಂಪರೆಯನ್ನು ಅರಿತುಕೊಳ್ಳುವ ದೃಷ್ಠಿಯಿಂದ ತುಂಬಾ ಮಹತ್ವದ ಅಧ್ಯಾಯವಾಗಿದೆ.
ಮಳೆ ಬೀಳುವ ಕಾಲ,ತಿಂಗಳು. ಮಳೆ ನಕ್ಷತ್ರ,ಯಾವ ಯಾವ ಮಳೆಗೆ ಎಂತಹ ಬೀಜ ಭಿತ್ತನೆಮಾಡಬೇಕು ಎನ್ನುವ ಪಟ್ಟಿ ನೀಡಿರುವುದು ಕೃಷಿಕರಿಗೆ ಮರೆತ ದೇಸಿಜ್ಞಾನವನ್ನು ಮತ್ತೆ ಜಾರಿಗೆ ತರಲು ಅನುಕೂಲಕರವಾಗಿದೆ.
ಸಾವಿರಾರು ವರ್ಷಗಳಿಂದ ಕೃಷಿಯನ್ನು ಜೀವನ ಧರ್ಮವಾಗಿಸಿಕೊಂಡು ಬಂದಿದ್ದ ನಮ್ಮ ಜನಪದಕ್ಕೆ ಕೃಷಿಯ ನೆಲಮೂಲ ವಿಜ್ಞಾನ ಕಣ್ಮರೆಯಾಗುತ್ತಿದೆ.ಯಂತ್ರ ನಾಗರಿಕತೆ ಕೃಷಿಯನ್ನು ಅರೆದು ನುಂಗಿ ನೀರು ಕುಡಿದಿದೆ.ಇಂಥಹ ದಾರುಣ ಸ್ಥಿತಿಯ ನಡುವೆ ಅಲ್ಲೊಬ್ಬ ಇಲ್ಲೊಬ್ಬ ಹಠಮುನಿಯಂತೆ ನೆಲಮೂಲ ಕೃಷಿಕಾಯಕದಲ್ಲಿ ತೊಡಗಿಸಿಕೊಂಡಿದ್ದಾನೆ. "ಭೂಮಿಯ ಧರ್ಮಕ್ಕೆ ಅಂದರೆ ಪಂಚಭೂತಗಳಿಗೆ ಎಂದೂ ವಂಚನೆಯೆಸಗದಂತೆ ರೂಪಗೊಂಡ ದೇಸಿಜ್ಞಾನ ಪದ್ಧತಿ ಅಳಿದುಹೋಗಬಾರದು" ಎನ್ನುವ ಎಸ್.ಜಿ.ಸಿದ್ದರಾಮಯ್ಯ ಕನ್ನಡ ಪುಸ್ತ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ"ದೇಸಿ ಕೃಷಿಜ್ಞಾನ" ಎನ್ನುವ ಸರಣಿಯಲ್ಲಿ ತಂದ ಮಣ್ಣು,ನೀರು,ಅರಣ್ಯ,ಬೀಜ,ತೋಟಗಾರಿಕೆಗೆ ಸಂಬಂಧಿಸಿದ ಹನ್ನೊಂದು ಸಂಪುಟಗಳನ್ನು ಇಲ್ಲಿ ನೆನಪುಮಾಡಿಕೊಳ್ಳಬಹುದು.
ಹಸಿರು ಕ್ರಾಂತಿಯಿಂದ ಆದ ದುಷ್ಪರಿಣಾಮಗಳನ್ನು ವೈಜ್ಞಾನಿಕವಾಗಿ ಗುರುತಿಸಿರುವ ಲೇಖಕರು " 1920 ರಿಂದ 1940 ರ ನಡುವೆ ಹುಟ್ಟಿದ ರೈತರು ಹಸಿರು ಕ್ರಾಂತಿಯ ಕಾಲಕ್ಕೆ ಕ್ರಮವಾಗಿ 49 ರಿಂದ 29 ರ ವಯೋಮಾನದವರಾಗಿದ್ದರು.ಬಹುತೇಕ ಅವರೆಲ್ಲರೂ 1985 ನೇ ಇಸವಿಯ ಹೊತ್ತಿಗೆ "ಹಸಿರು ಕ್ರಾಂತಿ"ಯ ಆಮಿಷಗಳಿಗೆ ಬಲಿಯಾಗಿದ್ದರು. 1965 ರ ಆಸುಪಾಸಿನಲ್ಲಿ ಹುಟ್ಟಿ ಈಗ 50 ಆಸುಪಾಸಿನಲ್ಲಿರುವ ಭಾರತೀಯ ರೈತರಿಗೆ ತಮ್ಮ ಹಳೆಯ ಕಾಲದ ಜ್ಞಾನವೂ ಹೊಸತರ ಜ್ಞಾನವೂ ಇದ್ದು-ಹಾಲಿ ಸಂದರ್ಭದಲ್ಲಿ ಒಟ್ಟು ಕೃಷಿಯೇ ನಷ್ಟವಾಗಿ ಪರಿಣಮಿಸಿರುವುದರಿಂದ ವ್ಯವಸಾಯದ ಆಸಕ್ತಿಯೇ ಕರಗಿಹೋಗಿದೆ. ನಮ್ಮ ಈ 50ರ ಆಸುಪಾಸಿನ ಕೃಷಿ ಜ್ಞಾನಿಗಳು ನಶಿಸಿಹೋದರೆ ದೇಸಿ ಕೃಷಿ ಜ್ಞಾನವನ್ನು ಬಲ್ಲವರ ಸಂತತಿಯೇ ಇಲ್ಲವಾಗುತ್ತದೆ.ಆಗ ಅಂಥಹ ಕೃಷಿಯನ್ನು ಹೊಸದಾಗಿಯೇ ಕಲಿಯಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ದೇಸಿ ಕೃಷಿ ಜ್ಞಾನದ ಅಧ್ಯಯನ ಮತ್ತು ಅದರ ದಾಖಲಾತಿ ಅತ್ಯಂತ ಅನಿವಾರ್ಯ ಮತ್ತು ಸಮಯೋಚಿತ" ಎಂದು ಪ್ರಬಂಧದ ಆಶಯವನ್ನು ಸ್ಪಷ್ಟಪಡಿಸಿರುವುದು ಸಾರ್ವಕಾಲೀಕ ಸತ್ಯವಾಗಿದೆ.
ಬೆಳೆ ಬೆಳೆವ ಜ್ಞಾನ ಮತ್ತು ಕೃಷಿ ಪದ್ಧತಿಗಳು ಎಂಬ ನಾಲ್ಕನೇ ಭಾಗದಲ್ಲಿ ದೇಸಿ ಕೃಷಿಯ ಮಹತ್ವ ಮತ್ತು ಅನಿವಾರ್ಯದ ಬಗ್ಗೆ ವಿವರಿಸಿದ್ದಾರೆ."ಸುಭಾಷ್ ಪಾಳೇಕರ್ ಕೃಷಿಯ ಮಂಚೂಣಿಯಲ್ಲಿ ನಿಂತ ನನಗೆ ಈ ಎಲ್ಲವುಗಳ ತಿಳಿವಳಿಕೆ ಅಗತ್ಯವಾಗಿತ್ತು.ವೃಕ್ಷಾಯುವರ್ೇದ,ಆಧ್ಯಾತ್ಮಿಕ,ಬಯೋ ಡೈನಾಮಿಕ್ ಕೃಷಿಯ ಪ್ರಾತ್ಯಕ್ಷಿಕೆಗಳನ್ನು ನೋಡಿ ಅವುಗಳಿಗೆ ವೈಜ್ಞಾನಿಕ ಸಮರ್ಥನೆಗಳಿವೆಯೇ? ಇಲ್ಲವೇ?ಎಂದು ಪರಿಶೀಲಿಸಿ ಅಂಕಿ ಅಂಶಗಳನ್ನು ಹೆಚ್ಚಾಗಿ ಬಳಸದೆ ಉದ್ದೇಶದ ಮಹತ್ವವನ್ನು ಹೇಳಿದ್ದೇನೆ" ಎಂದು ಸ್ವಾಮಿ ಆನಂದ್ ಹೇಳಿಕೊಂಡಿದ್ದಾರೆ.
ಸಹಸ್ರ ಸಹಸ್ರ ವರ್ಷಗಳ "ಸರ್ವಸಾರ"ವೇ ನಮ್ಮ ದೇಸಿಕೃಷಿ ಜ್ಞಾನ ಪರಂಪರೆ!.ವಿಷ ಹಾಕದೆ ಬೆಳೆದು ಉಣ್ಣುವ ಅನ್ನ ಅಮೃತ.ವಿಷಹಾಕಿ ಬೆಳೆದ ಅನ್ನ ವಿಷಕನ್ಯೆ. ಈ ಎರಡನೇ ಅನ್ನವೇ ಹಸಿರು ಕ್ರಾಂತಿ. ಬೆಳೆಗಳ ಬಹು ಮುಖ್ಯ ಪೋಷಕಾಂಶಗಳು ಶೇಕಡ 98.5 ವಾತಾವರಣದ ಕೊಡುಗೆ.ಈ ವಿಷಯದಲ್ಲಿ ವಿಜ್ಞಾನಿಗಳು ಯಾವ ಆಟವನ್ನು ಆಡಲಿಲ್ಲ.ಆದರೆ ಶೇಕಡ 1.5 ಭೂಮಿಯ ಕೊಡುಗೆಯ ಮೇಲೆ ಆಟವಾಡಿದ್ದರ ಪರಿಣಾಮ ಏನಾಯ್ತು ನೋಡಿ ಎಂದು ಹೇಳುತ್ತಾ ಕೃಷಿ ತಲುಪಿರುವ ಅಪಾಯಕಾರಿ ಹಂತಗಳನ್ನೂ ವಿಶ್ಲೇಷಣೆ ಮಾಡಿದ್ದಾರೆ.
ನಮ್ಮ ಕೃಷಿ ಪ್ರಾಚೀನ ಕೃಷಿ ವಿಧಾನಗಳನು ದಾಟಿ ತನಗೆ ಬೇಡದ ಎಲ್ಲವನ್ನೂ ಆಯಾಯ ಕಾಲದಲ್ಲೆ ಬಿಟ್ಟು ಬೇಕಾದ್ದನ್ನ ಘನೀಕರಿಸಿಕೊಳ್ಳುತ್ತಾ ಸಾರರೂಪದಲ್ಲಿ ನಿಂತ ಕೃಷಿ ಸಂಸ್ಕೃತಿ ನಮ್ಮದು.
ಜಾಗತಿಕ ಮಟ್ಟದಲ್ಲಿ ಪ್ರಸಿದ್ಧರಾದ ಸಾವಯವ ಕೃಷಿಯ ಪಿತಾಮಹ ಸರ್ ಆಲ್ಬಟರ್್ ಹೋವಡರ್್ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬರೆದ "ಆಗ್ಯರ್ಾನಿಕ್ ಫಾಮರ್ಿಂಗ್ ಮೆಥೆಡ್ ಇನ್ ಇಂಡಿಯಾ" ಅಮೇರಿಕಾ ಸೇರಿದಂತೆ ಬೇರೆ ದೇಶದವರಿಗೆ ಭಾರತದ ಕೃಷಿ ಜ್ಞಾನವನ್ನು ಪರಿಚಯಿಸಿತು. ಝರೋಮ್ ಐ ರೋಡಲ್ 1942 ರಲ್ಲಿ "ಆಗ್ಯರ್ಾನಿಕ್ ಫಾಮರ್ಿಂಗ್ ಅಂಡ್ ಗಾರ್ಡನಿಂಗ್" ಮ್ಯಾಗಜೈನ್ ಮೂಲಕ ತಮ್ಮ ಅನುಭವಗಳನ್ನು ಪ್ರಕಟಿಸುತ್ತಾ ಬಂದರು. ದತ್ತಿ ಸ್ಥಾಪಿಸಿ ಹೆಲ್ತಿ ಸಾಯಿಲ್,ಹೆಲ್ತಿ ಫುಡ್,ಹೆಲ್ತಿ ಫೀಪಲ್ ಎಂಬ ಧ್ಯೇಯವಾಕ್ಯವನ್ನು ಪ್ರಚುರಪಡಿಸಿದರು.1971 ರಲ್ಲಿ ಅವರ ನಿಧನದ ಬಳಿಕ ಅವರ ಮಗ ರೋಡೇಲ್ ಮತ್ತೆ 333 ಎಕರೆ ಜಾಗವನ್ನು ಇದಕ್ಕೆ ಸೇರಿಸಿದರು.
1990 ಹೊತ್ತಿಗೆ ಭಾರತದ ದೇಸಿ ಕೃಷಿ ಪ್ರಪಂಚವನ್ನೆಲ್ಲ ಸಂಚರಿಸಿ ನಮ್ಮ ದೇಶಕ್ಕೆ "ಸಾವಯವ ಕೃಷಿ" ಎಂಬ ಹೆಸರಿನಲ್ಲಿ ಪ್ರವೇಶ ಪಡೆಯಿತು. ಇಷ್ಟೊತ್ತಿಗೆ ಅದು ತನ್ನ ದೇಸಿತನವನ್ನೆಲ್ಲ ಕಳೆದುಕೊಂಡು ಸುಸ್ಥಿರ ಕೃಷಿ,ಸುಸ್ಥಿರ ಮಣ್ಣು,ಸುಸ್ಥಿರ ಆದಾಯ ಎಂಬ ಫಲಕಗಳನ್ನು ನೇತುಹಾಕಿಕೊಂಡಿತು.ಎರೆಹುಳು ಗೊಬ್ಬರ,ಪಂಚಗವ್ಯ,ಬಯೋಕೆಮಿಕಲ್ಸ್,ಬಯೋ ಪಟರ್ಿಲೈಸರ್ಸ್ನಂಥ ದೊಡ್ಡ ದೊಡ್ಡ ಜ್ಞಾನರಾಶಿಯನ್ನೆ ಹೊತ್ತು ತಂದಿತು ಎನ್ನುವುದನ್ನು ಆಧಾರ ಸಹಿತ ನಿರೂಪಿಸಿದ್ದಾರೆ.
ರಾಗಿ ಲಕ್ಷ್ಮಣ್ಣಯ್ಯನವರ ರಾಗಿತಳಿ ಸಂಶೋಧನೆಯ ಬಗ್ಗೆ ಹೇಳುತ್ತಾ ಸಾಮಾಜಿಕ ವ್ಯವಸ್ಥೆ ಹೇಗೆ ನೆಲಮೂಲದ ಜ್ಞಾನವನ್ನು ಮೂಲೆಗುಂಪು ಮಾಡಿತು ಮತ್ತು ಸಾವಯವ ಕೃಷಿ ಮಿಷನ್ ಎಂಬ ನಯವಂಚಕ ಅನಾರ್ಥಕಾರಿ ಯೋಜನೆಯ ಉದ್ದೇಶಗಳನ್ನು ಬಯಲು ಮಾಡಿದ್ದಾರೆ.ಬತ್ತ,ಬಾಳೆ,ಕಬ್ಬು ಬೆಳೆಯ ಬಗ್ಗೆ ವಿವರವಾಗಿ ಮಾಹಿತಿ ಸಮೇತ ವಿಶ್ಲೇಷಣೆ ಇದೆ.
ದೇಸಿ ಅಡುಗೆಗಳ ಬಗ್ಗೆ ವಿವರಣೆ ಇದೆ. ಸುಭಾಷ್ ಪಾಳೇಕರ್ ಕೃಷಿ ಪದ್ಧತಿಯ ಮಹತ್ವದ ಬಗ್ಗೆ ತಿಳಿಸಲಾಗಿದೆ. ಮನ್ಸೂನ್,ಹಿಂಗಾರು,ಮುಂಗಾರು,ಹವಾಗುಣ ಆಧರಿತ ವ್ಯವಸಾಯ ಜ್ಞಾನ ಎಲ್ಲದರ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ಮಾಡಲಾಗಿದೆ.
ದೊಡ್ಡಿಂದವಾಡಿಯ ಸಹಜ ಕೃಷಿಕ ಕೈಲಾಸ ಮೂತರ್ಿ,ಎಚ್.ಡಿ.ಕೋಟೆ ತಾಲೂಕಿನ ಸೋಗಳ್ಳಿಯ ನಿಂಗನಾಯಕ ಅವರ ಕೃಷಿ ಅನುಭವಗಳನ್ನು ದಾಖಲಿಸಿದ್ದಾರೆ. ಬಹುತೇಕ ಹಳ್ಳಿಗರು ಅನಕ್ಷರಸ್ಥರಾಗಿದ್ದರೆ ಹೊರತು ಅಜ್ಞಾನಿಗಳಾಗಿರಲಿಲ್ಲ.ಅರಿವುಗೇಡಿಗಳಾಗಿರಲಿಲ್ಲ. ಈ ದೇಶದ ಮುಖ್ಯವಾಹಿನಿ ಕೃಷಿ ದೇಸಿ ಕೃಷಿ ಮಾತ್ರ. ಈ ನಿಟ್ಟಿನಲ್ಲಿ ಭಾರತಕ್ಕೆ ಪ್ರವಾಸಕ್ಕೆ,ಅಧ್ಯಯನಕ್ಕೆ ಬಂದ ವಿದೇಶಿ ಪ್ರವಾಸಿಗರು,ಸಂಶೋಧಕರು ಬರೆದಿರುವ ಜ್ಞಾನವನ್ನೆಲ್ಲ ಪರಿಶೀಲಿಸುವ ಬೆಳಕಿಗೆ ತರುವ ಮಹತ್ವದ ಕೆಲಸಗಳು ಆಗಬೇಕಾಗಿದೆ ಎಂದು ಆನಂದ್ ಹೇಳುತ್ತಾರೆ.
ನಾವೀಗ ಮೊದಲು ರೋಗದ ಮೂಲ ಪತ್ತೆ ಹಚ್ಚಬೇಕು.ರೋಗದ ಮೂಲವಿರುವುದೇ ನಮ್ಮ ಬೇಸಾಯದ ಕ್ರಮದಲ್ಲಿ!.ಅದನ್ನು ಸರಿಪಡಿಸಿಕೊಂಡರೆ ಈ ಅಸ್ಪತ್ರೆಗಳು,ಔಷದಿಗಳು,ಡಾಕ್ಟರ್ಗಳು ಯಾರಿಗೂ ವಿಳಾಸವೇ ಇರುವುದಿಲ್ಲ ಎನ್ನುತ್ತಾರೆ. ಒಟ್ಟಾರೆ ಸಹಸ್ರಾರು ವರ್ಷಗಳ ಕಾಲದ ಪರೀಕ್ಷೆಯಲ್ಲಿ ಗೆದ್ದು "ಸ್ವಯಂ ಪರಿಪೂರ್ಣ" ಅನಿಸಿಕೊಂಡಿದ್ದ ದೇಸಿ ಕೃಷಿ ಪದ್ಧತಿಯನ್ನು ಮರು ಸ್ಥಾಪಿಸುವುದೆ ಅಧ್ಯಯನದ ಮುಖ್ಯ ಉದ್ದೇಶವಾಗಿದೆ 

3 ಕಾಮೆಂಟ್‌ಗಳು: