vaddagere.bloogspot.com

ಭಾನುವಾರ, ಫೆಬ್ರವರಿ 26, 2017

ರವಿವಾರದ ರೈತ ಸಾವಯವ ಸಂತ
ತುಮಕೂರು : ಅವರು ಜಪಾನಿನ ನೈಸರ್ಗಿಕ ಕೃಷಿಕ ಮಸನೊಬ್ಬ ಫುಕವೋಕ ಅವರಿಂದ ಪ್ರೇರಣೆಪಡೆದು "ರವಿವಾರದ ರೈತ" ರಾಗಿ ಕೃಷಿ ಆರಂಭಿಸಿದವರು. "ಸಾವಯವ ಸಂತ"ನಾಗಿ ಇಂದು ನಾಡಿನ ಸಾವಿರಾರು ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ನಾಲ್ಕು ದಶಕಗಳ ತಮ್ಮ ಕೃಷಿ ಅನುಭವದ ಮೂಲಕ ಬೆಳಕಿನ ಬೇಸಾಯದಲ್ಲಿ ಭರವಸೆಮೂಡಿಸಿದ್ದಾರೆ.
ಇಪ್ಪತ್ತು ಎಕರೆಯಲ್ಲಿ ಕಟ್ಟಿದ ಅವರ ತೋಟಕ್ಕೆ ಉಳುಮೆ ಇಲ್ಲ.ಹೊರಗೆ ತಯಾರಿಸಿದ ಯಾವುದೇ ಸಾವಯವ ಗೊಬ್ಬರ ಇಲ್ಲ.ಕಳೆಗಳ ನಾಶ ಇಲ್ಲ.ವಿಷಕಾರಕ ರಾಸಾಯನಿಕಗಳ ಬಳಕೆ ಇಲ್ಲವೇ ಇಲ್ಲ.ಇದು ಸಹಜ ಕೃಷಿ, ಸೋಮಾರಿ ಬೇಸಾಯ ಎಂದರೂ ತಪ್ಪಿಲ್ಲ.
ಸೋಮಾರಿ ಬೇಸಾಯ ಅಂದ ತಕ್ಷಣ ಆದಾಯ ಕಡಿಮೆ ಎಂದುಕೊಂಡರೆ ನಿಮ್ಮ ಊಹೆ ತಪ್ಪು. "ಒಂದು ಹೆಕ್ಟರ್ ಅಂದರೆ ಎರಡೂವರೆ ಎಕರೆ ಪ್ರದೇಶದಲ್ಲಿ ತೆಗೆಯುತ್ತಿರುವ ಆದಾಯ ವಾರ್ಷಿಕ ಎಂಟು ಲಕ್ಷ ರೂಪಾಯಿ. ತೋಟದಲ್ಲಿರುವ ಎಲ್ಲಾ ಮರಗಿಡಗಳು ಫಲ ನೀಡಲು ಆರಂಭಿಸಿದರೆ ಅದು ಹದಿನೈದು ಲಕ್ಷಕ್ಕೆ ತಲುಪುತ್ತದೆ. ಸಣ್ಣ ಹಿಡುವಳಿದಾರ ರೈತ ನೆಮ್ಮದಿಯ ಜೀವನ ನಡೆಸಲು ಇದಕ್ಕಿಂತ ಇನ್ನೇನೂ ಬೇಕು ಹೇಳಿ".ಹಾಗಂತ ತಾವೇ ಕಟ್ಟಿದ ಹಸಿರು ತೋಟದ ನಡುವೆ ನಿಂತು ಕೇಳಿದರು ಸಾವಯವ ಕೃಷಿಕ ಜಿ.ಶಿವನಂಜಯ್ಯ ಬಾಳೆಕಾಯಿ.
ಸಾವಯವ ಕೃಷಿಯ ಮಾತು ಬಂದಾಗೆಲ್ಲ ನಮ್ಮ ನಡುವೆ ಪದೇ ಪದೇ ಪ್ರಸ್ತಾಪವಾಗುತ್ತಿದ್ದ ಹೆಸರು ಶಿವನಂಜಯ್ಯ ಬಾಳೆಕಾಯಿ. "ಸಾವಯವ ಕೃಷಿ ಮೂರು ದಶಕಗಳ ಒಂದು ಅನುಭವ ಕಥನ" ಎಂಬ ಅವರ ಪುಸ್ತಕ ಓದಿದ್ದ ನಾನು ಅವರ ಕೃಷಿ ವಿಧಾನದಿಂದ ಪ್ರಭಾವಿತನಾಗಿದ್ದೆ.
ಕಡಿಮೆ ನೀರು, ಉಳುಮೆ ಇಲ್ಲ,ಆಳುಕಾಳುಗಳನ್ನು ಹೆಚ್ಚು ಬೇಡದ,ನಿಶ್ಚಿತ ಆದಾಯ ತರಬಲ್ಲ ಸಹಜ ಕೃಷಿಗೆ ಮಾರುಹೋಗಿದ್ದೆ.ಇದರಿಂದ ಪ್ರಭಾವಿತನಾಗಿದ್ದೆ. ಹೀಗಿರುವಾಗ ಸಾಹಿತಿ,ಚಿಂತಕ ಹಸಿರು ಪ್ರೇಮಿ ಪ್ರೊ.ಕಾಳೇಗೌಡ ನಾಗವಾರ ಅವರೊಂದಿಗೆ ನಮ್ಮ ಕೃಷಿ ತಂಡ ಹೋಗಿ ನಿಂತದ್ದು ಶಿವನಂಜಯ್ಯ ಅವರ ಕರ್ಮಭೂಮಿಗೆ. ಪ್ರಕೃತಿಯಲ್ಲಿ ನಡೆದಿರುವ ಅಚ್ಚರಿಗಳನ್ನು ಕಂಡು ಬೆರಗಾದೆವು. ಅಂತಹ ಒಂದು ಅಪರೂಪದ ಸಹಜ ಕೃಷಿಯ ಕಥಾನಕ ಇದು.
ಜೆಸಿ ಪುರ (ಜಯಚಾಮರಾಜೇಂದ್ರ ಪುರ) ಎನ್ನುವುದು ಒಂದು ಹಳ್ಳಿ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು. ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕಿಬ್ಬನಹಳ್ಳಿ ಕ್ರಾಸಿನಿಂದ ಚಿಕ್ಕನಾಯಕನ ಹಳ್ಳಿ ಕಡೆಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಬದಿಯಲ್ಲೇ ಇದೆ ಶಿವನಂಜಯ್ಯ ಅವರ ಸಹಜ ಕೃಷಿಯ ತೋಟ.
ಇದು ಬರವನ್ನೇ ಹೊದ್ದು ಮಲಗಿದ ತಾಲೂಕು.ಅಂತರ್ಜಲ ಪಾತಾಳ ತಲುಪಿದೆ. ಸಾವಿರ ಅಡಿ ಕೊರೆದರು ನೀರು ಕಣ್ಣೀರು.ಇಂತಹ ಪರಿಸ್ಥಿತಿಯಲ್ಲಿಯೂ ಶಿವನಂಜಯ್ಯ ಅವತ ತೋಟ ಅಚ್ಚ ಹಸಿರಿನಿಂದ ನಳನಳಿಸುತ್ತಿವೆ.ಇದಕ್ಕೆ ಕಾರಣ ಅವರು ಅನುಸರಿಸುತ್ತಿರುವ ಸಹಜ,ಸಾವಯವ, ನೈಸಗರ್ಿಕ ಕೃಷಿ ವಿಧಾನ.
ಅಡಿಕೆ,ತೆಂಗು,ಬಾಳೆ,ಮೆಣಸು,ಏಲಕ್ಕಿ, ಸೀಬೆ,ಸಪೋಟ, ತೇಗ,ಹೊನ್ನೆ,ಬೀಟೆ, ಅಲಸು,ನುಗ್ಗೆ, ಹೂ ಹಣ್ಣು ತರಕಾರಿ, ಸೊಪ್ಪು ಹೀಗೆ ಎಲ್ಲವೂ ಇಲ್ಲಿ ಜಾಗ ಪಡೆದುಕೊಂಡಿವೆ. ಒಂದಲ್ಲ ಒಂದು ರೀತಿಯಲ್ಲಿ ಆದಾಯ ತಂದುಕೊಡುತ್ತಿವೆ. ಪರಿಶುದ್ಧ ಗಾಳಿ, ಕಣ್ಣಿಗೆ ತಂಪು ನೀಡುವ ಹಸಿರು, ಒತ್ತಡರಹಿತ ಜೀವನ ಎಪ್ಪತ್ತರ ಇಳಿವಯಸ್ಸಿನಲ್ಲೂ ಬಾಳೆಕಾಯಿ ಅವರನ್ನು ಜೀವಂತವಾಗಿಟ್ಟಿದೆ.ಯುವಕರು ನಾಚುವಂತೆ ತೋಟದ ತುಂಬಾ ಸುತ್ತಾಡುತ್ತಾರೆ. ತೋಟ ನೋಡಲು ಬರುವ ಆಸಕ್ತರಿಗೆ ಸಹಜ ಕೃಷಿಯ ಪಾಠ ಮಾಡುತ್ತಾರೆ.
ಮನೆಯ ಮುಂದೆ ಅಡಿಗೆ ಮನೆಗೆ ಬೇಕಾದ ಸೊಪ್ಪು ತರಕಾರಿ ಹಣ್ಣು ಸಂಬಾರ ಪದಾರ್ಥ ಎಲ್ಲವನ್ನು ಅವರ ಪತ್ನಿ ಕೈತೋಟದಲ್ಲಿ ಬೆಳೆದು ಕೊಳ್ಳುತ್ತಾರೆ. ಪುಟ್ಟದಾದ ಹೂವಿನ ತೋಟವೂ ಇದೆ. ಗುಳ್ಳೆ ಬದನೆ, ಮುಸುಕು ಬದನೆ, ಏಲಕ್ಕಿಯಂತಹ ಅಪರೂಪದ ತಳಿಗಳು ಅಲ್ಲಿವೆ. ಅವರ ಮಗ ಶ್ರೇಯಾಂಕ್ ಎಂಜಿನಿಯರ್ ಪದವಿಧರ, ಸೊಸೆ ಕೃಷಿ ಪದವಿಧರೆ. ಮನಸ್ಸು ಮಾಡಿದ್ದರೆ ನಗರದಲ್ಲಿ ನೌಕರಿ ಮಾಡಬಹುದಿತ್ತು. ಆದರೆ ಯಾರ ಹಂಗು ಇರದ,ಒತ್ತಡವೂ ಇಲ್ಲದ ಕೃಷಿಯನ್ನೆ ಉದ್ಯೋಗವಾಗಿಸಿಕೊಂಡಿದ್ದಾರೆ.
ದೀಪದ ಕೆಳಗೆ ಕತ್ತಲು: ತೋಟ ಸಮೀಪಿಸುತ್ತಿದ್ದಂತೆ ಇಲ್ಲಿ ಯಾವುದು ನಿಮ್ಮ ತೋಟ ಸಾರ್ ಎಂದೆ. "ಅದನ್ನು ಕೇಳಬೇಕೆ ನೋಡಿದರೆ ಗೊತ್ತಾಗಲ್ವೆ" ಎಂದರು ಶಿವನಂಜಯ್ಯ. ಸುತ್ತಮುತ್ತ ಹತ್ತಾರು ಅಡಿಕೆ,ತೆಂಗಿನ ತೋಟಗಳು ಒಣಗಿ ನಿಂತಿದ್ದವು.ಬಾಳೆಕಾಯಿ ಅವರ ತೋಟ ಮಾತ್ರ ಹಸಿರಿನಿಂದ ಕೂಡಿತ್ತು.ಇದಕ್ಕೆ ಕಾರಣ ಅವರು ಅನುಸರಿಸುತ್ತಾ ಬಂದ ಸಹಸಕೃಷಿ.
" ಪ್ರತಿ ತಿಂಗಳು ಮೂರನೇ  ಭಾನುವಾರ  ಸಿರಿ ಸಮೃದ್ಧಿ ಎಂಬ ಸಾವಯವ ಬಳಗ ಕಟ್ಟಿಕೊಂಡು ಸಭೆ ಮಾಡಿದ್ದೇವೆ. ರಾಜ್ಯಾದ್ಯಾಂತ ರೈತರಲ್ಲಿ ಜಾಗೃತಿ ಮೂಡಿಸಲು ಲೆಕ್ಕವಿಲ್ಲದಷ್ಟು ಉಪನ್ಯಾಸ ಕೊಟ್ಟಿದ್ದೇವೆ. ಬದಲಾದವರು ಮುನ್ನೂರು ಜನ. ನಮ್ಮೂರಲ್ಲೇ ಒಂದಿಬ್ಬರನ್ನು ಬೆಟ್ಟರೆ ಯಾರು ಬದಲಾಗಲ್ಲೇ ಇಲ್ಲ. ಅದಕ್ಕೆ ಹೇಳುವುದು ದೀಪದ ಕೆಳಗೆ ಕತ್ತಲು" ಅಂತ.. ಉತ್ತರ ಕನ್ನಡ, ದಕ್ಷಣ ಕನ್ನಡದಲ್ಲಿ ಪುಸ್ತಕ ನೋಡಿ ಕೃಷಿಯಲ್ಲಿ ಬದಲಾವಣೆ ಮಾಡಿಕೊಂಡು ಯಶಸ್ವಿಯಾದವರು ಸಿಗುತ್ತಾರೆ. ನಮ್ಮಲ್ಲಿ ಆ ರೀತಿ ಆಗಲಿಲ್ಲ ಅಂತ ಬೇಸರದಿಂದ ನುಡಿದರು.
ಮೈಸೂರಿನ ಗೋಲ್ಡ್ ಫಾರಂನ ಮೂತರ್ಿ, ಚಂದ್ರಶೇಖರ್ ಬೆಳಗೆರೆಯಂತಹ ಸಾವಯವ ಕೃಷಿ ಗೆಳೆಯರನ್ನು ಕಟ್ಟಿಕೊಡು ಎಲ್ಲಾ ಕಡೆ ಹುಚ್ಚರಂತೆ ತಿರುಗುತ್ತಿದ್ದ ದಿನಗಳನ್ನು ನೆನಪುಮಾಡಿಕೊಂಡರು. ತೋಟಕಟ್ಟುವ ಮೊದಲು ಶಿವನಂಜಯ್ಯ ನೋಡಿರುವ ತೋಟಗಳಿಗೆ ಲೆಕ್ಕವಿಲ್ಲ.ಭಾಗವಹಿಸಿದ ಸಭೆಗಳು ಅಸಂಖ್ಯಾತ.
ಒಂದು ಹೆಕ್ಟರ್ನಲ್ಲಿ ನೆಮ್ಮದಿ ಬದುಕು : "ಇದು ಎರಡೂವರೆ ಎಕರೆ ಪ್ರದೇಶದಲ್ಲಿ ಕಟ್ಟಿರುವ ತೋಟ. ಇಲ್ಲಿರುವ ಯಾವ ಗಿಡಮರಗಳಿಗೂ ಉಳುಮೆ ಎಂದರೆ ಏನೂ ಎನ್ನುವುದೇ ಗೊತ್ತಿಲ್ಲ.36 ವರ್ಷದ ತೋಟ ಇದು. ಮೊದಲು ಇದು ರಾಗಿ ಹೊಲ. ನನ್ನ ಪ್ರಯೋಗ ಶುರುವಾದ ಮೇಲೆ ಇಲ್ಲಿ 1200 ಅಡಿಕೆ ಮರಗಳಿವೆ ಅದರಲ್ಲಿ 600 ಫಲ ಫಲ ಬಿಡುತ್ತವೆ. 110 ತೆಂಗಿನ ಮರಗಳಿವೆ. 20 ಸೀಬೆ ಗಿಡ ಇದೆ. ಬಾಳೆ ಇದೆ. ವೆನ್ನಿಲ್ಲಾ ಇದೆ. ಏಲಕ್ಕಿ, ಫಣಿಯೂರ್ ಮೆಣಸು ಇದೆ.500 ತೇಗದ ಮರಗಳಿವೆ. ಗೆಣಸು ಜೀವಂತ ಹೊದಿಕೆಯಾಗಿ ಕೆಲಸಮಾಡುತ್ತದೆ. ಅಡಿಕೆ, ಮೆಣಸು,ತೆಂಗು ಆರ್ವೇಸ್ಟ್
ಮಾಡುವಾಗ ಮಾತ್ರ ಗೆಣಸು ಕೀಳುತ್ತೇವೆ. ಅದು ಆದಾಯವೇ. ವಾರ್ಷಿಕ 60 ರಿಂದ 70 ಕಾರ್ಮಿಕರು ಮಾತ್ರ ಈ ತೋಟ ಬೇಡುತ್ತದೆ.ವಾಷರ್ಿಕ 8 ಲಕ್ಷ ಆದಾಯ ಇದೆ. ಎಲ್ಲಾ ಅಡಿಕೆಗಳು ಫಲ ನೀಡಲು ಶುರುವಾದರೆ ಅದು 12 ರಿಂದ 15 ಲಕ್ಷ ರೂಪಾಯಿವರೆಗೂ ತಲುಪುತ್ತದೆ.
ಈ ಬಾರಿ 600 ಅಡಿಕೆಗಿಡದಿಂದ 15 ಕ್ವಿಂಟಾಲ್ ಅಡಿಕೆ ಬಂತು.ಕಾಯಿ ಅಡಿಕೆಯನ್ನೆ ಕ್ವಿಂಟಾಲ್ಗೆ 15,000 ಸಾವಿರ ರೂ,ಗೆ ಮಾರಾಟ ಮಾಡಿದೆ. 25 ಕ್ವಿಂಟಾಲ್ ಕೊಬ್ಬರಿ ಬರುತ್ತೆ. 7 ಲಕ್ಷ ಆದಾಯ ಆಯಿತು. 1600 ಗಿಡದಿಂದ ಇನ್ನೂ ಅಡಿಕೆ ಬರಬೇಕು. ಇಂಟರ್ ಕ್ರಾಫ್ ಇದೆ. ಗ್ಲಿರಿಸೀಡಿಯಾ ನೀರನ್ನು ಆಳಕ್ಕೆ ಹಿಂಗಿಸುತ್ತದೆ. ಎರಡು ಅಡಿ ಆಳದಲ್ಲಿರುವ ಪೋಷಾಕಾಂಶಗಳನ್ನು ಆಲುವಾಣ, ಗ್ಲಿರೀಸಿಡಿಯಾ, ಅಗಸೆ ಮೇಲಕ್ಕೆ ಎತ್ತಿ ಗಿಡಗಳಿಗೆ ಕೊಡುತ್ತವೆ.ಇವೆಲ್ಲ ತೋಟದ ತುಂಬಾ ಇವೆ.
ಬೇಸಿಗೆಕಾಲ ಆದ್ದರಿಂದ ಗಿಡಗಳ ಬುಡಕ್ಕೆ ಬಿಟ್ಟರೆ ಬೇರೆಲ್ಲಿಗೂ ನೀರು ಕೊಡುವುದಿಲ್ಲ. ಮಣ್ಣು ನೋಡಿ ಎಷ್ಟು ಮೃದುವಾಗಿದೆ ಎಂದು ಬಾಚಿ ಹಿಡಿದರು.ಮಣ್ಣು ಕಂಪು ಬೀರಿತು. ತೋಟದ ಒಂದು ಭಾಗದಲ್ಲಿ 600 ಅಡಿಕೆ ಮರಗಳಿವೆ.ಉಳಿದ ಭಾಗದಲ್ಲಿ ಅಡಿಕೆ ತೆಂಗು ಮಿಶ್ರ ಬೆಳೆಯಾಗಿವೆ. ತೋಟದ ಸುತ್ತಾ ಜೀವಂತ ಬೇಲಿಯಾಗಿ ಮರ ಗಿಡಗಳಿವೆ.
ಕೀಟಬಾಧೆಗೆ 10 ಕೆಜಿ ಸಗಣಿ, 100 ಗ್ರಾಂ ಶುದ್ಧ ಅರಿಶಿನ ಪುಡಿ,2 ಕೆಜಿ ಬೆಲ್ಲ ಇದನ್ನು 50 ಲೀಟರ್ ನೀರಿನಲ್ಲಿ 24 ಗಂಟೆ ನೆನೆಹಾಕಿ 1: 10 ಪ್ರಮಾಣದಲ್ಲಿ ಸಿಂಪರಣೆ ಮಾಡುತ್ತೇವೆ ಅಥವಾ ಗಿಡದ ಬುಡಕ್ಕೆ ಹಾಕುತ್ತೇವೆ. ಯಾವ ರೋಗಗಳು ಹತ್ತಿರ ಸುಳಿಯುವುದಿಲ್ಲ.ಮಳೆಗಾಲದಲ್ಲಿ ವರ್ಷಕ್ಕೊಮ್ಮೆ ಗಿಡಗಳಿಗೆ ಕೋಳಿ ಗೊಬ್ಬರ, ಕಾಂಪೋಸ್ಟ್ ಗೊಬ್ಬರವನ್ನು ಒಂದೊಂದು ಬುಟ್ಟಿ ಕೊಡುತ್ತೇವೆ. ಬೇರೆನನ್ನೂ ಮಾಡುವುದಿಲ್ಲ. 15 ದಿನಕ್ಕೊಮ್ಮೆ ತೋಟಕ್ಕೆ ನಾಲ್ಕು ಗಂಟೆಗಳ ಕಾಲ ಹನಿನೀರಾವರಿ ಪದ್ಧತಿಯಲ್ಲಿ ನೀರುಣಿಸುತ್ತೇವೆ ಎನ್ನುತ್ತಾರೆ.
ಪುಟ್ಟ ಕಾಡು : ಎರಡು ಕುಂಟೆ ಪ್ರದೇಶದಲ್ಲಿ ಪುಟ್ಟ ಕಾಡೊಂದನ್ನು ಬೆಳೆಸಿದ್ದಾರೆ. ಅಲ್ಲಿ ತೇಗ, ಬೀಟೆ, ರೋಸ್ ಹುಡ್, ಮಾವು, ಬಿದಿರು, ನೆಲ್ಲಿ ಹೀಗೆ ಹತ್ತು ಹದಿನೈದು ಜಾತಿಯ ಮರಗಳಿವೆ.
ಪ್ರತಿಯೊಬ್ಬ ರೈತನು ತನ್ನ ಜಮೀನಿನಲ್ಲಿ ಕಾಡು ಮಾಡಿಕೊಳ್ಳಬೇಕು. ಇದರಿಂದ ತುಂಬಾ ಉಪಯೋಗಗಳಿವೆ. ಮಳೆ ಕರೆಯಲು ಕಾಡು ಬೇಕೆ ಬೇಕು. ಮಳೆ ಬಂದಾಗ ನೀರು ಸಂಗ್ರಹಣೆಗೆ ಪುಟ್ಟ ಅಣೆಕಟ್ಟು ಅಥವಾ ಹಿಂಗುಗುಂಡಿ  ಮಾಡಿಕೊಳ್ಳಬೇಕು.ಆಗ ಬೋರ್ವೆಲ್ಗಳಲ್ಲಿ ಜೀವ ಇರುತ್ತದೆ.ಸುತ್ತಮುತ್ತಲಿನ ಕೊಳವೆ ಬಾವಿಗಳು ಬತ್ತಿಹೋದರು. ನಮ್ಮದು ಮಾತ್ರ 25 ವರ್ಷದಿಂದಲ್ಲೂ ಎರಡು ಇಂಚು ನೀರು ಕೊಡುತ್ತಲೇ ಇದೆ.
ಮತ್ತೂ ಬೇಕಾದರೆ ಇಲ್ಲಿ ಎರಡು ಹಸು ,10 ಕುರಿ, 300 ನಾಟಿ ಕೋಳಿ ಸಾಕಬಹುದು. ಅವುಗಳಿಗೆ ಬೇಕಾದ ಮೇವು ಇಲ್ಲೇ ಇದೆ. ಹಾಲು, ಗೊಬ್ಬರವೂ ಸಿಕ್ಕಂತಾಗುತ್ತದೆ. ಹಣ, ಆರೋಗ್ಯ,ಹಸಿರು, ಹಣ್ಣು ಎಲ್ಲಾ ಎರಡೂವರೆ ಎಕರೆಯಲ್ಲೇ ಇದೆ. ಇದಕ್ಕಿಂತ ಯಾವ ಮಾದರಿಗಳು ನಮ್ಮ ರೈತರಿಗೆ ಬೇಕು ಎನ್ನುತ್ತಾರೆ ಶಿವನಂಜಯ್ಯ. 
ಒಂದು ಹುಲ್ಲಿನ ಕ್ರಾಂತಿ : ಪಿ.ಲಂಕೇಶ್ ಮುಕ್ತ ವಿಶ್ವ ವಿದ್ಯಾನಿಲಯದ ವಿದ್ಯಾಥರ್ಿಯಾದ ಶಿವನಂಜಯ್ಯ ಪತ್ರಿಕೆಯಲ್ಲಿ ಬಂದ ಫುಕವೋಕ ಅವರ "ಒಂದು ಹುಲ್ಲಿನ ಕ್ರಾಂತಿ" ಪುಸ್ತಕದ ಬಗೆ ಓದಿದರು.ಸೀದಾ ಪುಸ್ತಕ ಮಳೆಗೆಗೆ ಹೋಗಿ ಪುಸ್ತಕ ಖರೀದಿಸಿ ಒಂದೇ ಸಮನೆ ಓದಿ ಮುಗಿಸಿದರು.
"ನನಗೆ ಎಷ್ಟು ಆನಂದವಾಯಿತು ಎಂದರೆ ಇಡೀ ರಾತ್ರಿ ನಿದ್ದೆ ಬರಲಿಲ್ಲ.ಮಾರನೇ ದಿನ ಸಹಜಕೃಷಿಯ ಕನಸು ಕಾಣುತ್ತಾ ಜಮೀನಿನಲ್ಲಿ ಸುತ್ತಾಡಿದೆ.ಸಹಜಕೃಷಿಯ ಗುರು ಫುಕೋವಕ ತಮ್ಮ ಕೃಷಿಯ ಮೂಲಕ ಬುದ್ಧನ ದರ್ಶನ ಮಾಡಿಸಿದ್ದರು" ಎನ್ನುತ್ತಾರೆ ಶಿವನಂಜಯ್ಯ.
ಬೆಂಗಳೂರಿನಲ್ಲಿ ತತ್ವಶಾಸ್ತ್ರದ ಪ್ರಧ್ಯಾಪಕರಾಗಿದ್ದ ಇವರು ರವಿವಾರದ ರೈತರಾಗಿ ಕೃಷಿ ಆರಂಭಿಸಿದವರು, ಪ್ರಾಂಶುಪಾಲರಾಗಿ ನಿವೃತ್ತರಾಗಿ ಈಗ ಜೀವನವನ್ನು ಪೂರ್ಣಕಾಲೀಕ ರೈತರಾಗಿ ಹಸಿರಿನ ನಡುವೆ ಕಳೆಯುತ್ತಿದ್ದಾರೆ. ಹಳ್ಳದಿಂದ ಬೋರ್ಗೆ ನೀರು ಮರುಪುರಾಣ ಮಾಡಿದ್ದು, ಸಿಎಸ್ಐನ ರೈನ್ ವಾಟರ್ ಆರ್ವೆಸ್ಟಿಂಗ್ ಇನ್ ರೂರಲ್ ಏರಿಯಾ ಎಂಬ ವೆಬ್ ಸೈಟ್ ನಲ್ಲಿ ಅದರ ವಿವರ ನೋಡಬಹುದು. 
ಇವರಲ್ಲಿ 25 ವರ್ಷದ ಬಾಳೆ ಇಂದಿಗೂ ಇದೆ. 10 ರಿಂದ 12 ಕೆಜಿ ಇಳುವರಿ ಬರುತ್ತಿದೆ. ಬಹು ಮಾಡಿ ಪದ್ಧತಿಯಲ್ಲಿ ಬೇಸಾಯ ಮಾಡುವ ಇವರು ಹೆಚ್ಚು ಬೆಳಕು ಬಳಸಿಕೊಳ್ಳುವ ತೆಂಗು ನಂತರ ಅಡಿಕೆ ಅದರ ಕೆಳಗೆ ಬಾಳೆ . ಮರದ ಮೇಲೆ ಬಳ್ಳಿ ಹಬ್ಬಿಸೋದು ಮಾಡುತ್ತಾರೆ.ಇದು ಗಿಡದ ಮೇಲೆ ಬೀಳುವ ಬಿಸಿಲನ್ನು ಬಳಸಿಕೊಳ್ಳುವ ವಿಧಾನ. ಬಿಸಿಲನ್ನು ಕಾಳಾಗಿ ಪರಿವತರ್ಿಸಿ ಗಿಡಗಳಿಗೆ ಕೊಡುವುದೆ ಸಾವಯವ ಬೇಸಾಯ ಎನ್ನುತ್ತಾರೆ.
ರೈತರಿಗೆ ಮಣ್ಣು, ಗಿಡಮರ, ಮಳೆ ನೀರು ಸಂಬಂಧಗಳ ಬಗ್ಗೆ ವೈಜ್ಞಾನಿಕ ತಿಳುವಳಿಕೆ ಇಲ್ಲ. ಶಾಲೆಗಳಲ್ಲಿ ಹೈಸ್ಕೂಲ್ ವರೆಗೆ ಪರೀಕ್ಷೆ ಇಲ್ಲದ ಕೃಷಿ ಸಂಬಂಧಿತ ಪಠ್ಯ ಇರಬೇಕು.ಇದರಿಂದ ಮಧ್ಯಂತರದಲ್ಲಿ ಶಾಲೆಬಿಟ್ಟವರಿಗೆ ಅನುಕೂಲ ಆಗುತ್ತದೆ.ಕೃಷಿಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದಂತೆಯೂ ಆಗುತ್ತದೆ ಎಂದು ಹೇಳುತ್ತಾರೆ. ಶಾಲೆಗಳಲ್ಲಿ "ಫಾರ್ಮರ್ ಕ್ಲಬ್" ಮಾಡುವ ಬಗ್ಗೆ ಶಿಕ್ಷಕರು ಚಿಂತಿಸುವುದು ಒಳಿತು.
ಚೇರು ಹತ್ತಿ ನಿಂತರು ನಾಗೇಶ್ ಹೆಗಡೆ : ಪ್ರಜಾವಾಣಿಯಲ್ಲಿ ಕೃಷಿ ದರ್ಶನ ನೋಡಿಕೊಳ್ಳುತ್ತಿದ್ದ ನಾಗೇಶ್ ಹೆಗಡೆ ಇವರ ಬಗ್ಗೆ "ರವಿವಾರ ರೈತನ ಸಹಜ ಕೃಷಿ" ಲೇಖನ ಪ್ರಕಟಿಸುವಾಗ,ಇವರನ್ನು ಕರೆದು " ಅಲ್ಲಾರೀ ಶಿವನಂಜಯ್ಯ ಈ ದೇಶದ ರೈತರು ತೆಂಗಿನ ಕಾಯಿಯನ್ನು ಉದ್ದುದ್ದ ನೆಟ್ಟು ಸಸಿ ಮಾಡ್ತಾರೆ. ನೀವೇನ್ ರ್ರೀ ಅದನ್ನ ಅಡ್ಡ ಮಲಗಿಸಿ ಸಸಿಮಾಡಿ ಅಂತೀರಾ" ಅಂತ ಕೇಳಿದ್ದಾರೆ. ಅದಕ್ಕೆ ಇವರು "ಅಲ್ಲಾ ಸಾರ್ ತೆಂಗಿನ ಮರದಿಂದ ಕಾಯಿ ಕೆಳಗೆ ಬಿದ್ದಾಗ ಅಡ್ಡ ತಾನೆ ಬೀಳೋದು.ಕಾಯಿಯಿಂದ ಗಿಡ ಮಾಡೋದು ನಮಗಿಂತ ಮರಕ್ಕೆ ಚೆನ್ನಾಗಿ ಗೊತ್ತಿರುತ್ತೆ ಅಲ್ವಾ" ಎಂದರು.
"ಇದು ಕಂಡ್ರಿ ಉತ್ತರ" ಅಂತ ಅಂದ ನಾಗೇಶ್ ಹೆಗಡೆ ಕುಳಿತಿದ್ದ ಚೇರಿನ ಮೇಲೆ ಹತ್ತಿ ನಿಂತು ತಮಗಾದ ಸಂತೋಷವನ್ನು ವ್ಯಕ್ತಪಡಿಸಿಬಿಟ್ಟರು. ಇದರಿಂದ ನಾನೇ ಕಕ್ಕಾಬಿಕ್ಕಿ ಆದೆ.ಅದನ್ನು ಎಂದಿಗೂ ಮರೆಯಲಾರೆ ಎನ್ನುತ್ತಾರೆ ಶಿವನಂಜಯ್ಯ.
ಆಧುನಿಕ ಕೃಷಿ ರೈತರನ್ನು ಸುಲಿಗೆ ಮಾಡಿ ಬೆತ್ತಲು ಮಾಡಿದೆ. ಬೆಳೆಗಳಿಗೆ ವೈಜ್ಞಾನಿಕ ದರ ಕನಸಿನ ಮಾತು.ಅದಕ್ಕೆ ರೈತರು ಉತ್ಪಾದನಾ ವೆಚ್ಚ ಕಡಿಮೆ ಮಾಡಿಕೊಳ್ಳುವುದೊಂದೇ ಇರುವ ಏಕೈಕ ಮಾರ್ಗ.ಬೆಳೆಗೆ ಗೊಬ್ಬರ ಒದಗಿಸುವುದಷ್ಟೇ ಕೃಷಿಯಲ್ಲ. ಕೃಷಿ ಎಂದರೆ ಬೀಜ,ನೀರಾವರಿ,ಬೆಳೆ ನೆಡುವ ವಿಧಾನ,ಬೆಳೆಯ ಕಾಲ, ಮಿಶ್ರ ಬೆಳೆ ಹೀಗೆ ಎಲ್ಲಾ ಮಗ್ಗಲಿನಿಂದಲ್ಲೂ ನೋಡಬೇಕು ಎನ್ನುತ್ತಾರೆ. ಹೆಚ್ಚಿನ ಮಾಹಿತಿಗೆ ಆಸಕ್ತರು 9964451421 ಸಂಪರ್ಕಿಸಿ 





ಭಾನುವಾರ, ಫೆಬ್ರವರಿ 19, 2017



ಸಂಸ್ಕೃತಿ ಸಂಪನ್ನನ ಸಹಜಕೃಷಿ ದಿಬ್ಬೇಮನೆ ತೋಟ
==================================
ಸಂಗೀತ,ನಾಟಕ, ಹಾರ್ಮೋನಿಯಂ,ತಬಲ, ಕನ್ನಡಪರ ಕೆಲಸ ಇದರ ನಡುವೆ ಕೃಷಿಯನ್ನೂ ಅಷ್ಟೇ ಪ್ರೀತಿ ಮತ್ತು ಕಾಳಜಿಯಿಂದ ಮಾಡುತ್ತಿರುವ ಪ್ರೊ.ಬಿ.ಸೋಮಶೇಖರಪ್ಪ ಸಪ್ತಸ್ವರ ಬಳಗದ ಮೂಲಕ ಮೈಸೂರಿನಲ್ಲಿ ಹಿಂದೂಸ್ತಾನಿ ಸಂಗೀತ ಪರಂಪರೆಯನ್ನು ಜೀವಂತವಾಗಿಟ್ಟಿದ್ದಾರೆ. ಸದಾ ಲವಲವಿಕೆಯಿಂದ ಇರಬಯಸುವ ಮೇಷ್ಟ್ರು ಕೃಷಿಯಲಿ ಖುಷಿಯಲಿ ನಿವೃತ್ತ ಜೀವನದ ಸಾರ್ಥಕತೆ ಕಂಡುಕೊಂಡಿದ್ದಾರೆ. 
ಹತ್ತು ವರ್ಷದಲ್ಲಿ ಅವರು ಕಟ್ಟಿದ ಐದು ಎಕರೆ "ದಿಬ್ಬೇಮನೆ" ತೋಟ ಈಗ ಅನ್ನದ ಬಟ್ಟಲು, ಪ್ರಶಾಂತ ವನ. ನಾಡಿನ ಪ್ರಸಿದ್ಧ ಸಂಗೀತಗಾರರಿಗೆ ಅತಿಥ್ಯ ನೀಡುವ ತೊಟ್ಟಿಲು. ಇಲ್ಲಿನ ಮರಗಿಡ ಬಳ್ಳಿಗಳು ಸಂಗೀತ ದಿಗ್ಗಜರ ಗಾಯನ ಮೋಡಿಗೆ ತಲೆದೂಗಿವೆ. ಈ ನೆಲ ಸುಭಾಷ್ ಪಾಳೇಕರ್, ಪುಟ್ಟಣ್ಣಯ್ಯ, ಕನ್ನಡ ಚಳುವಳಿಗಾರರು, ರಂಗಭೂಮಿ ಕಲಾವಿದರ ಪಾದ ಸ್ಪರ್ಶದಿಂದ ಪುಳಕಗೊಂಡಿದೆ.
==================================================
ಮೈಸೂರು : ಇವರು ಕಾಲೇಜಿನಲ್ಲಿ ನನ್ನಂತ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಕಲಿಸಿದ ಗುರು. ಸಂಗೀತಾಸಕ್ತರಿಗೆ ಹಿಂದೂಸ್ತಾನಿ ಶಾಸ್ತ್ರೀಯಸಂಗೀತ ಹೇಳಿಕೊಟ್ಟ ವಿದ್ವಾನ್. ನಾಟಕಕಾರ, ಕನ್ನಡ ಶಾಲೆಯ ಕಾವಲುಗಾರ. ಸಂಘಟನಾ ಚತುರ. ಮೈಸೂರು ವಿಶ್ವ ವಿದ್ಯಾನಿಲಯ ಸೆನೆಟ್ ಮಾಜಿ ಸದಸ್ಯ. ಖಾಸಗಿ ಕಾಲೇಜು ಶಿಕ್ಷಕರ ಸಂಘದ ಕಾರ್ಯದಶರ್ಿ. ಉಪನ್ಯಾಸಕ ವೃತ್ತಿಯಿಂದ ನಿವೃತ್ತರಾದ ನಂತರ ಸುಭಾಷ್ ಪಾಳೇಕರ್ ಅವರ ಕೃಷಿ ಪದ್ಧತಿಗೆ ಮಾರುಹೋಗಿ ಸಹಜ ಕೃಷಿಕರಾದ "ದಿಬ್ಬೇಮನೆ ತೋಟ"ದ ಮಾಲೀಕ ಸಂಸ್ಕೃತಿ ಸಂಪನ್ನ. ಅವರೇ ನಮ್ಮ ಈ ವಾರದ ಬಂಗಾರದ ಮನುಷ್ಯ ಪ್ರೊ.ಬಿ.ಸೋಮಶೇಖರಪ್ಪ.
ಹತ್ತು ವರ್ಷದಲ್ಲಿ ಅವರು ಕಟ್ಟಿದ ಐದು ಎಕರೆ ತೋಟ ಈಗ ಸಮೃದ್ಧ ಅನ್ನದ ಬಟ್ಟಲು, ಪ್ರಶಾಂತ ವನ. ನಾಡಿನ ಪ್ರಸಿದ್ಧ ಸಂಗೀತಗಾರರಿಗೆ ಅತಿಥ್ಯ ನೀಡುವ ತೊಟ್ಟಿಲು. ಇಲ್ಲಿನ ಮರಗಿಡ ಬಳ್ಳಿಗಳು ಸಂಗೀತ ದಿಗ್ಗಜರಾದ ನಿರೋಡಿ, ಸೋಮನಾಥ ಮರಡೂರು, ವಿನಾಯಕ ತೊರವಿ, ಗಣಪತಿ ಭಟ್, ವೆಂಕಟೇಶ್ ಕುಮಾರ್, ಪರಮೇಶ್ವರ ಹೆಗ್ಗಡೆ, ಪಯಾಜ್ ಖಾನ್ ಅವರ ಗಾಯನ ಕೇಳಿ ತಲೆದೂಗಿವೆ.
ಮಗ ವಿವೇಕ್ ತಬಲ ನುಡಿಸುತ್ತಾರೆ, ಸೊಸೆ ಮಾಲಾ ಭರತನಾಟ್ಯ ಕಲಾವಿದೆ. ಮಗಳೂ ರೂಪ ಕೂಡ ಉತ್ತಮ ಗಾಯಕಿ. ಮನೆ ಮಂದಿಯೆಲ್ಲ ಸಂಗೀತ ಸಂಸ್ಕೃತಿ ಪ್ರೀಯರು. ಮೊಮ್ಮಕ್ಕಳಿಗೂ ಈ ಪರಂಪರೆ ರಕ್ತಗತವಾಗಿ ಬಂದಿದೆ. ಎಲ್ಲರೂ ಅಮೇರಿಕಾದಲ್ಲಿ ನೆಲಸಿದ್ದು ವರುಷಕ್ಕೊಮ್ಮೆ ಹಸಿರು ತೋಟಕ್ಕೆ ಬಂದು ಹೋಗುತ್ತಾರೆ.
ಈ ನೆಲ ಸುಭಾಷ್ ಪಾಳೇಕರ್, ಪುಟ್ಟಣ್ಣಯ್ಯ, ಕನ್ನಡ ಚಳುವಳಿಗಾರರು, ರಂಗಭೂಮಿ ಕಲಾವಿದರ ಪಾದ ಸ್ಪರ್ಶದಿಂದ ಪುಳಕಗೊಂಡಿದೆ. ಇದೆಲ್ಲವನ್ನು ಮುಗ್ಧ ಮಗುವಿನಂತೆ ತೋಟದ ನಡುವೆ ಕುಳಿತು ಹೇಳುತ್ತಾ ಹೋದರು ನನ್ನ ಪ್ರೀತಿಯ ಮೇಷ್ಟ್ರು ಸೋಮಶೇಖರಪ್ಪ.
ತೋಟ ಸುತ್ತಾಟದ ನಂತರ ಅವರು ಹಾರ್ಮೋನಿಯಂ ಬಾರಿಸುತ್ತಾ ರಾಗ ಹಾಕಿದರೆ ಅವರ ಪತ್ನಿ ದಾಕ್ಷಯಿಣಿ ಅಮ್ಮ ಸುಶ್ರಾವ್ಯವಾಗಿ ಹಾಡಿದರು. ನಾವು ತಲೆದೂಗಿದೆವು. ಅವರ ಹಾಡಿನ ಮೋಡಿಯಲ್ಲಿ ತೇಲಿಹೋದೆವು. ತುಂಬು ಜೀವನ ಪ್ರೀತಿಯ ಸಂಸ್ಕೃತಿ ಸಂಪನ್ನನೊಬ್ಬ ಮನಸ್ಸು ಮಾಡಿದರೆ ಬದುಕಿಗೆ ಎಂತ ಚೆಲುವು ತಂದುಕೊಳ್ಳಬಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ದಂಪತಿ ನಮ್ಮೆದರು ಕುಳಿತಿದ್ದರು. ಅವರ ಹಸಿರು ಪ್ರೀತಿಗೆ ನಾವು ಮರುಳಾದೆವು.
ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣ ಸಮೀಪದ ಕುನ್ನಾಳು ಎಂಬ ಕುಗ್ರಾಮವೊಂದರಿಂದ ಬಂದ ಸೋಮಶೇಖರಪ್ಪ ಮೂವತ್ತೈದು ವರ್ಷಗಳ ಕಾಲ ಜೆಎಸ್ಎಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ನಿವೃತ್ತರಾದ ನಂತರ ಕೃಷಿಯಲಿ ಖುಷಿಕಾಣುತ್ತಾ ಆನಂದವಾಗಿದ್ದಾರೆ.
ಮೈಸೂರಿನಿಂದ ವರುಣಾ ಕೆರೆ ದಾಟಿ ವರಕೋಡು ಮಾರ್ಗದಲ್ಲಿ ಪಿಲ್ಲಹಳ್ಳಿ ಬಳಿ ಎಡಕ್ಕೆ ತಿರುಗಿದರೆ ಐದು ಎಕರೆಯಲ್ಲಿ ಅರಳಿನಿಂತ ಪ್ರಶಾಂತವಾದ ಹಸಿರುವನ "ದಿಬ್ಬೆಮನೆ ತೋಟ" ಸಿಗುತ್ತದೆ. ಉಳುಮೆ ಇಲ್ಲದ, ಕಳೆ ತೆಗೆಯದ, ವಿಷಮುಕ್ತವಾದ, ಜೀವಂತ ಹೊದಿಕೆಯ ಅಡಿಕೆ, ತೆಂಗು, ಬಾಳೆ, ಸೀಬೆ, ಸಪೋಟ, ಬತ್ತ, ರಾಗಿ ಹೀಗೆ ಹತ್ತಾರು ಬೆಳೆಗಳ ಸಮಗ್ರ ಪದ್ಧತಿಯ ತೋಟ ಕಣ್ಮನ ಸೆಳೆಯುತ್ತದೆ.
ಅಪ್ಪಯ್ಯನಿಗೆ ಇಷ್ಟ ಇರಲಿಲ್ಲ : "ನಮ್ಮದು ಮೂಲತಹ ಕೃಷಿ ಕುಟುಂಬವೇ. ನಾನು ಬಾಲುದಲ್ಲಿ ದನ ಮೇಯಿಸುತ್ತಾ, ಸಗಣಿ ಬಾಚುತ್ತಾ ಮಣ್ಣಿನೊಂದಿಗೆ ಆಡಿಕೊಂಡು ಬೆಳೆದವನೆ. ನೌಕರಿಗೆ ಸೇರಿದ ಮೇಲೆ ನಿವೃತ್ತಿ ಅಂಚಿನಲ್ಲಿ ಬೇಸಾಯ ಮಾಡುವ ಮನಸ್ಸಾಯಿತು. ಅಪ್ಪನಿಗೆ ಹೇಳಿದೆ. ಅವರಿಗೆ ಇಷ್ಟವಾಗಲಿಲ್ಲ. ಜಮೀನು ಖರೀದಿ ಮಾಡಲು ಅವರನ್ನು ಕರೆದುಕೊಂಡು ಹೋದರೆ, ಬೇಕೆಂತಲೇ ಅವರು ವ್ಯಾಪಾರವನ್ನು ಮುರಿಯುತ್ತಿದ್ದರು. ಮಗ ಕೃಷಿ ಮಾಡಲು ಹೋಗಿ ಮನೆಮಂದಿಯನ್ನೆಲ್ಲ ಉಪವಾಸ ಕೆಡವಿಬಿಟ್ಟಾನು ಎಂಬ ಭಯ ಅವರಿಗೆ. ಅವರಿಗೆ ಗೊತ್ತಿಲ್ಲದಂತೆ ನಿವೃತ್ತಿಯಾಗುವ ಮೂರು ವರ್ಷದ ಮುಂಚೆ 2001 ರಲ್ಲಿ ಎಲ್ಐಸಿ ಮತ್ತು ಉಳಿಸಿದ ಹಣ ಕೂಡಿಸಿ ಎಂಟು ಲಕ್ಷ ರೂಪಾಯಿ ಕೊಟ್ಟು ಈ ಭೂಮಿ ಖರೀದಿಸಿದೆ.2003 ರಲ್ಲಿ ನಿವೃತ್ತನಾದ ನಂತರ ಸಂಪೂರ್ಣ ಸಹಜ ಕೃಷಿಕನಾದೆ ಎಂದರು ಸೋಮಶೇಖರ್.
"ಇದ್ದಕ್ಕಿದಂತೆ ತೋಟ ನೋಡಲು ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋದೆ. ಎಲ್ಲಿಗೆ ಎಂದರು. ಎಲ್ಲೂ ಇಲ್ಲ ಬನ್ನಿ ಎಂದೆ. ತೋಟದ ಗೇಟ್ನಲ್ಲಿ " ದಿಬ್ಬೇಮನೆ ತೋಟ" ಎಂಬ ಫಲಕನೋಡಿ ಅವರಿಗೆ ಆಶ್ಚರ್ಯವಾಯಿತು. ಆಗ ಅವರು ಹೇಳಿದ್ದು ಏನೂ ಗೊತ್ತೆ. ಇನ್ನೂ ಹತ್ತು ವರ್ಷ ಇದರಿಂದ ಆದಾಯ ನಿರೀಕ್ಷೆ ಮಾಡಬೇಡ. ಹೆಂಡತಿಮಕ್ಕಳನ್ನು ಉಪವಾಸ ಕೆಡವಬೇಡ ಅಂತ. ಅದೂ ನಿಜವೇ" ಎಂದು ನಕ್ಕರು.
ಬನುಮಯ್ಯ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಸಿದ್ದಲಿಂಗಯ್ಯ ಎಚ್.ಡಿ.ಕೋಟೆ ಬಳಿ ಜಮೀನು ಖರೀದಿಸಿ ಇರೋ ಹಣವನ್ನೆಲ್ಲ ಸುರಿದರು ನಯಾ ಪೈಸೆ ಬರಲಿಲ್ಲ. ಮೊನ್ನೆ ತೀರಿಕೊಂಡರು. ಅದಕ್ಕೆ ವ್ಯವಸಾಯವನ್ನು ಬಲು ಎಚ್ಚರಿಕೆಯಿಂದ ಮಾಡಬೇಕು.ನೀರು ಸಾಕಷ್ಟು ಸಿಗುವಂತಿರಬೇಕು. ಮಣ್ಣು ಫಲವತ್ತಾಗಿರಬೇಕು. ಆಗ ಕೃಷಿಯಲ್ಲಿ ಯಾವ ಪ್ರಯೋಗವನ್ನಾದರೂ ಧೈರ್ಯವಾಗಿ ಮಾಡಿ ಗೆಲ್ಲಬಹುದು.
ಮೊದಲ ಮೂರು ವರ್ಷ ಕಳೆ ತೆಗುಯುವುದು,ರಾಸಾಯನಿಕ ಹಾಕಿ ಬೆಳೆಯುವುದು ಮಾಡಿದೆ.ಆದಾಯ ಬರಲಿಲ್ಲ. ನಂತರ 2005 ರಲ್ಲಿ ಸುಭಾಷ್ ಪಾಳೇಕರ್ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಶಿಬಿರದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಅಲ್ಲಿಂದ ನೈಸರ್ಗಿಕ ಕೃಷಿಕನಾಗಿ ಬದಲಾದೆ. ಕಬ್ಬು, ಜೋಳ, ರಾಗಿ, ತರಕಾರಿ ಸೊಪ್ಪು ಎಲ್ಲವನ್ನೂ ಬೆಳೆದು ಗೆದ್ದೆವು.
ಆರಂಭದ ಹತ್ತು ವರ್ಷ ನನಗೂ ತೋಟದಿಂದ ಏನೂ ಆದಾಯ ಬರಲಿಲ್ಲ. ಧಾಂಧೂಂ ಖಚರ್ು ಮಾಡದೆ ಎಚ್ಚರಿಕೆಯಿಂದ ಬಂಡವಾಳತೊಡಗಿಸಿ ಕೆರೆಯ ನೀರನು ಕೆರೆಗೆ ಚೆಲ್ಲಿ ನಿಧಾನವಾಗಿ ವರ ಪಡೆದಿದ್ದಾಯಿತು. ಈಗ ತೋಟದ ವಾರ್ಷಿಕ ಆದಾಯ ಆರು ಲಕ್ಷ ರೂಪಾಯಿ ಇದೆ. ಖಚರ್ು ಕಡಿಮೆ. ತೋಟ ನೋಡಿಕೊಳ್ಳಲು ನಮ್ಮ ಸಂಬಂಧಿಕರ ಸಂಸಾರವೊಂದಿದೆ ಅವರಿಗೆ ವಾಷರ್ಿಕ ಒಂದು ಲಕ್ಷ ರೂಪಾಯಿ ಕೊಡುತ್ತೇನೆ. ಸಹಜ ಕೃಷಿಯಲ್ಲಿ ನನಗೂ ಐದು ಲಕ್ಷ ಸಿಗುತ್ತಿದೆ ಎಂದು ಲೆಕ್ಕ ನೀಡುತ್ತಾರೆ ಸಾಹಿತ್ಯದ ಮೇಷ್ಟ್ರು.
ಸಮಗ್ರ ತೋಟ : ತೋಟ ಖರೀದಿಸಿದಾಗ 140 ತೆಂಗು ಮತ್ತು ಪುಟ್ಟ ಗುಡಿಸಲು ಮಾತ್ರ ಇತ್ತು. ಈಗ ಇಲ್ಲಿ ಹತ್ತು ವರ್ಷದ 1500 ಅಡಿಕೆಮರ ಇದೆ. ಬಾಳೆ ಇದೆ. ಒಂದು ಎಕರೆಯನ್ನು ಬತ್ತ, ರಾಗಿ, ಜೋಳ ಬೆಳೆಯಲು ಬಿಟ್ಟುಕೊಂಡಿದ್ದಾರೆ.
"ಈ ತೋಟಕ್ಕೆ ಒಂದು ಚಮಚ ರಾಸಾಯನಿಕ ಗೊಬ್ಬರವನ್ನು ಹಾಕಿಲ್ಲ. ಒಂದು ಹನಿ ಕ್ರಿಮಿನಾಶಕವನ್ನು ಸೋಂಕಿಸಿಲ್ಲ. ನಮ್ಮದು ಸಂಪೂರ್ಣ ಶೂನ್ಯ ಬಂಡವಾಳದ ನೈಸಗರ್ಿಕ ತೋಟ. ಹನ್ನೆರಡು ವರ್ಷದಿಂದ ತೋಟಕ್ಕೆ ಉಳುಮೆ ಮಾಡಿಲ್ಲ.ಸುಭಾಷ್ ಪಾಳೇಕರ್ ಪದ್ಧತಿಯಲ್ಲಿ ಬೀಜಾಮೃತ, ಜೀವಾಮೃತ, ಬ್ರಹ್ಮಾಸ್ತ್ರ, ಹೊದಿಕೆ, ಮತ್ತು ಮರಗಿಡ ಸಂಯೋಜನೆ ಮಾಡಿ ಕಟ್ಟಿದ ತೋಟ. ಇಲ್ಲಿ ನೀರಿಗೆ ತೊಂದರೆ ಇಲ್ಲ. ಆದರೂ ನಾವು ಧಾಂಧೂಂ ಅಂತ ಹೆಚ್ಚು ನೀರನ್ನು ಬಳಸುವುದಿಲ್ಲ. ತಿಂಗಳಿಗೆ ಒಮ್ಮೆ ಗಿಡಗಳಿಗೆ ನೀರು ಕೊಡುತ್ತೇವೆ. ಮರದಿಂದ ಬಿದ್ದ ಸೋಗು, ಕಳೆ ಎಲ್ಲವನ್ನು ಹೊದಿಕೆಯಾಗಿ ಮಾಡಿ ಭೂಮಿಯ ತೇವಾಂಶ ಉಳಿಸಿಕೊಂಡಿದ್ದೇವೆ. ಇದೆಲ್ಲ ಚೆನ್ನಾಗಿ ಕಳಿತು ಅದೇ ಗೊಬ್ಬರವಾಗುತ್ತದೆ ನೋಡಿ" ಅಂತ ಮಣ್ಣನ್ನು ಕೈಯಲ್ಲಿ ಬಗೆದು ತೋರಿಸಿದರು ಮೇಷ್ಟ್ರು. ಸ್ಪಾಂಜಿನಂತೆ ಮೃದುವಾಗಿದ್ದ ಮಣ್ಣು ಹಿತವಾದ ಕಂಪು ಬೀರಿತು.
ಪರವಾಲಂಭಿಯಾದ ರೈತ : ಹಸಿರು ಕ್ರಾಂತಿ ರೈತರನ್ನು ಪರವಾಲಂಭಿಯಾಗಿ ಮಾಡಿತು. ಬೀಜ, ಗೊಬ್ಬರ, ಕೃಷಿ ಉಪಕರಣ ಎಲ್ಲದ್ದಕ್ಕೂ ಕಾಖರ್ಾನೆಗಳನ್ನೇ ಅವಲಂಭಿಸುವಂತಾಯಿತು. ಪಾರಂಪರಿಕ ಕೃಷಿ ಮರೆತೆಹೋಯಿತು. ಎತ್ತು, ನೇಗಿಲು,ಕುಂಟೆ, ಕೂರಿಗೆಗಳು ಮಾಯವಾಗಿ ಟ್ರ್ಯಾಕ್ಟರ್, ಟಿಲ್ಲರ್ ಬಂದವು. ಗಟ್ಟಿಯಾದ ದೇಸಿ ಬೀಜಗಳು ಮಾಯವಾಗಿ ಸಂಸ್ಕರಿಸಿದ ಬಿತ್ತನೆ ಕಾಳುಗಳು ಬಂದವು. ಅಲ್ಲಿಂದ ರೈತನ ಬಾಳು ಗೋಳಾಯಿತು.
ಜಪಾನಿನ ಕೃಷಿ ವಿಜ್ಞಾನಿ ಕುರೋಸೇವಾ ಹೈಬ್ರೀಡ್ ಬೀಜಗಳನ್ನು ಕಂಡು ಹಿಡಿದರೆ. ಅವನ ಶಿಷ್ಯ ಮಸನೊಬ ಫುಕೋವಕಾ ಗುರುವಿನ ವಿರುದ್ಧ ದಿಕ್ಕಿನಲ್ಲಿ ನಡೆದು ಜಗತ್ತಿಗೆ ಬೆಳಕಾದ. ನಮ್ಮ ಕೃಷಿಗೂ ಹತ್ತು ಸಾವಿರ ವಷಘ್ಳ ಇತಿಹಾಸವಿದೆ. ಇದನ್ನು ಅರಿತು ಬೇಸಾಯ ಮಾಡದಿದ್ದರೆ ಮುಂದಿನ ಜನಾಂಗ ಸಂಕಷ್ಟದ ಸುಳಿಯಲ್ಲಿ ಸಿಲುಕಿ, ನಾನಾ ರೋಗಗಳ ಗೂಡಾಗಿ ಜೀವಿಸಬೇಕಾಗುತ್ತದೆ ಎಂದು ಸೋಮಶೇಖರ್ ಆತಂಕ ವ್ಯಕ್ತಪಡಿಸುತ್ತಾರೆ.
ಸಾವಯವಕ್ಕೆ ಬೇಡಿಕೆ : ನಾವು ಬೆಳೆದ ಉತ್ಪನ್ನಗಳನ್ನು ಮೈಸೂರಿನ ಭೂಮಿ, ನಿಸರ್ಗ ಮಾರಾಟ ಕೇಂದ್ರಗಳಿಗೆ ಕೊಡುತ್ತೇವೆ. ಮನೆಗೆ ಬೇಕಾದ ಸೊಪ್ಪು ತರಕಾರಿ ಹಣ್ಣುಗಳನ್ನು ವಿಷಮುಕ್ತವಾಗಿ ಬೆಳೆದುಕೊಳ್ಳುತ್ತೇವೆ. ಎಲ್ಲಕ್ಕಿಂತ ಹೆಚ್ಚಾಗಿ ತೋಟಕ್ಕೆ ಬಂದರೆ ಸಿಗುವ ಮನಶಾಂತಿಗೆ ಬೆಲೆ ಕಟ್ಟಲಾಗದು.
ವಿದೇಶಗಳಲ್ಲೂ ತಾಜಾ ಸಾವಯವ ತರಕಾರಿಗಳಿಗೆ ಈಗ ಬೇಡಿಕೆ ಇದೆ.ಗ್ರಾಹಕರು ಅದಕ್ಕೆ ಹೆಚ್ಚು ಬೆಲೆಕೊಟ್ಟು ಖರೀದಿಸುತ್ತಾರೆ. ನಮ್ಮಲ್ಲಿ ಶೃಂಗಾರ ಸಾಧನಗಳಿಗೆ,ಐಶಾರಾಮಿ ವಸ್ತುಗಳಿಗೆ ಕೇಳಿದಷ್ಟು ಹಣ ಕೊಟ್ಟು ಕೊಂಡುಕೊಳ್ಳುವ ಜನ ತರಕಾರಿ ಬೆಲೆ ತುಸು ಹೆಚ್ಚಾದರೆ ಬೊಬ್ಬೆ ಹೊಡೆಯುತ್ತಾರೆ.
ಜಗತ್ತಿನ ಯಾವ ಮೂಲೆಗೆ ಹೋದರು ರೈತನ ಸ್ಥಿತಿ ಇದೆ. ಕೈಗಾರಿಕೋದ್ಯಮಿಗೆ ಇರುವಷ್ಟು ಸ್ವಾತಂತ್ರ್ಯ ರೈತನಿಗೆ ಇಲ್ಲ. ಅದಕ್ಕೆ ರೈತ ಉತ್ಪಾದನಾ ವೆಚ್ಚವನ್ನು ತಗ್ಗಿಸಿಕೊಂಡು, ವೆಚ್ಚ ಕಡಿಮೆಮಾಡಿ ಗುಣಮಟ್ಟದ ಉತ್ಪನ್ನ ತೆಗೆಯಬೇಕು. ಇದು ನೈಸಗರ್ಿಕ ಕೃಷಿಯಿಂದ ಮಾತ್ರ ಸಾಧ್ಯ. ಹೆಚ್ಚು ಹಣ ಬೇಡದ, ಕೆಲಸ ಬೇಡದ, ಗೊಬ್ಬರ ಕೇಳದ ಸಹಜ ಕೃಷಿಯ ಬಗ್ಗೆ ಮಾಧ್ಯಮಗಳು ಹೆಚ್ಚು ಹೆಚ್ಚು ಅರಿವು ಮೂಡಿಸಬೇಕು ಎನ್ನುತ್ತಾರೆ ಸೋಮಶೇಖರಪ್ಪ.
ಮಂಗ ಓಡಿಸಲು ಹುಲಿ : ತೋಟದಲ್ಲಿ ಮಂಗಗಳ ಕಾಟ. ಅದಕ್ಕೆ ಹುಲಿಯ ಬೊಂಬೆಯನ್ನು ತಂದು ಇಟ್ಟಿದ್ದೇವೆ. ಪ್ರತಿ ದಿನ ಜಾಗ ಬದಲಿಸಿ ಹಿಡುವುದರಿಂದ ಮಂಗಗಳ ಕಾಟ ಕಡಿಮೆಯಾಗಿದೆ. ರಾತ್ರಿ ಬೊಂಬೆ ಹುಲಿಯನ್ನು ಎತ್ತಿ ಮನೆಯಲ್ಲಿಡುತ್ತೇವೆ. ಮತ್ತೆ ಬೆಳಗಾಗುತ್ತಿದ್ದಂತೆ ಈ ಹುಲಿ ನಮ್ಮ ಮಂಗಗಳ ಕಾವಲುಗಾರ ಎಂದು ಹುಲಿಯ ಬೆನ್ನು ಸವರಿದರು ಪ್ರೋಫೆಸರ್.
ಸಂಗೀತ,ನಾಟಕ, ಹಾರ್ಮೋನಿಯಂ,ತಬಲ, ಕನ್ನಡಪರ ಕೆಲಸ ಇದರ ನಡುವೆ ಕೃಷಿಯನ್ನೂ ಅಷ್ಟೇ ಪ್ರೀತಿ ಮತ್ತು ಕಾಳಜಿಯಿಂದ ಮಾಡುತ್ತಿರುವ ಪ್ರೊ.ಬಿ.ಸೋಮಶೇಖರಪ್ಪ ಸಪ್ತಸ್ವರ ಬಳಗದ ಮೂಲಕ ಮೈಸೂರಿನಲ್ಲಿ ಹಿಂದೂಸ್ತಾನಿ ಸಂಗೀತ ಪರಂಪರೆಯನ್ನು ಜೀವಂತವಾಗಿಟ್ಟಿದ್ದಾರೆ. ವಚನ ಚಳುವಳಿಯಿಂದ ಪ್ರಭಾವಿತರಾಗಿ ಮಗನಿಗೆ ವಚನ ಮಾಂಗಲ್ಯ ಮಾಡಿ ಆದರ್ಶ ಮೆರೆದಿದ್ದರು. ಇಂದಿಗೂ ಅವರ ಮಕ್ಕಳು ಹೇಳುತಿರುತ್ತಾರಂತೆ " ನಮಗೆ ನಮ್ಮ ಅಪ್ಪ ಒಳ್ಳೆಯ ಸಂಗೀತ ಕಲಿಸಿದರು. ಸಂಸ್ಕೃತಿ ಹೇಳಿಕೊಟ್ಟರು, ಶಿಕ್ಷಣ ಕೊಡಿಸಿದರು. ಸಂಪಾದನೆಗೆ ದುಡಿಮೆ ಇದೆ. ಆನಂದಕ್ಕೆ ಸಂಗೀತ ಇದೆ. ಬೇಸರವಾದರೆ ಹಸಿರಿದೆ" ಎಂದು. ಇದಕ್ಕಿಂತ ಒಬ್ಬ ಅಪ್ಪನಿಗೆ ಮತ್ತೇನು ಪ್ರಶಸ್ತಿ, ಗೌರವ ಬೇಕು. ಜವಾಬ್ದಾರಿಯುತ ಅಪ್ಪ, ಸಾಹಿತ್ಯ, ಸಂಗೀತದ ಗುರು, ಸದಾ ಲವಲವಿಕೆಯಿಂದ ಇರಬಯಸುವ, ಕೃಷಿಯಲಿ ಖುಷಿಯಲಿ ನಿವೃತ್ತ ಜೀವನದ ಸಾರ್ಥಕತೆ ಕಂಡುಕೊಳ್ಳುತ್ತಿರುವ ಮೇಷ್ಟ್ರರಿಗೆ ಶಿಷ್ಯಕೋಟಿಯ ಪರವಾಗಿ ಅನಂತ ಪ್ರಣಾಮಗಳು. ಆಸಕ್ತರು ಹೆಚ್ಚಿನ ಮಾಹಿತಿಗೆ ಪ್ರೊ.ಬಿ.ಸೋಮಶೇಖರಪ್ಪ 9845404667 ಸಂಪರ್ಕಿಸಿ.
========
ಶೀರ್ಷಿಕೆ ಸೇರಿಸಿ






ಭಾನುವಾರ, ಫೆಬ್ರವರಿ 12, 2017

ಸಾವಯವ ಕೃಷಿಗೆ ಆಧ್ಯಾತ್ಮದ 
ಸ್ಪರ್ಶ ನೀಡಿದ ಹರೀಶ್ ಆಚಾರ್ಯ
ಮೈಸೂರು : "ರೈತ ಜಮೀನಿಂದ ಮನೆಗೆ ಹೋಗುವಾಗ ಖಾಲಿ ಕೈಯಲ್ಲಿ ಹೋಗಬಾರದು.ಒಂದು ಕಂತೆ ಸೊಪ್ಪನ್ನಾದರೂ ತೆಗೆದುಕೊಂಡು ಹೋಗುವಂತಿರಬೇಕು. ಮನೇಲಿ ಸ್ಟಾಕ್ನಲ್ಲಿದ್ದರೂ ಪರ್ವಾಗಿಲ್ಲ. ನಮ್ಮಲ್ಲಿ ತೆಂಗಿನ ಎಣ್ಣೆ, ಅರಿಶಿನ ಪುಡಿ ಸದಾ ಸ್ಟಾಕ್ನಲ್ಲಿ ಇರುತ್ತದೆ.ಮಾರಾಟಕ್ಕೆ ಸದಾ ಲಭ್ಯ. ಇದು ಬದುಕಿನ ದಾರಿ" ಎಂದರು ಸಾವಯವ ಕೃಷಿಕ ಹರೀಶ್ ಆಚಾರ್ಯ.
ಮೈಸೂರಿನಿಂದ ಕಡಕೊಳಕ್ಕೆ ಹೋಗುವ ಮಾರ್ಗದಲ್ಲಿ ಎಡಕ್ಕೆ ತಿರುಗಿದರೆ ಬೀರೆಗೌಡನಹುಂಡಿ (ಕೂಡನಹಳ್ಳಿ ತೋಟ) ಸಿಗುತ್ತದೆ. ಅಲ್ಲಿ ತೋಟಮಾಡಿರುವ ಹರೀಶ್ ವಿಶೇಷವಾಗಿ ಪಂಚಗವ್ಯ ಮತ್ತು ನಾಟಿ ಹಸುವಿನ ಸಗಣಿ ಬಳಸಿಕೊಂಡು ಕೃಷಿ ಮಾಡುತ್ತಿದ್ದಾರೆ.
ಲಕ್ಷ ರೂಪಾಯಿಗಳಲ್ಲಿ ಆದಾಯ ತರುತಿದ್ದ ಕೆಲಸ,ಬ್ಯುಸಿನೆಸ್, ನಗರದ ಒತ್ತಡ ಎಲ್ಲದರಿಂದ ಮುಕ್ತರಾಗಿದ್ದಾರೆ. ಇಷ್ಟಪಟ್ಟು ಕೃಷಿಗೆ ಬಂದು ಸುಂದರ ಹಸಿರು ಕಾಡಿನಂತಹ ತೋಟ ಕಟ್ಟಿದ್ದಾರೆ. ಇದಕ್ಕೆ ಕುಟುಂಬವರ್ಗದ ಸಂಪೂರ್ಣ ಸಹಕಾರವೂ ಇದೆ.
ಮಕ್ಕಳು ವಿದ್ಯಾವಂತರಾಗಿ ಎಂಜಿನೀಯರ್, ವೈದ್ಯ ಅಥವಾ ಯಾವುದಾದರೂ ನೌಕರಿಗೆ ಸೇರಿದರೆ ಸಾಕು ಎಂಬ ಕಾಲ ಇದು.ಆಚಾರ್ಯರ ಕುಟುಂಬ ಇದಕ್ಕೆ ಹೊರತಾಗಿದ್ದು ಮನೆಮಂದಿಯೆಲ್ಲ ಕೃಷಿ ಪ್ರೀತಿ ಬೆಳೆಸಿಕೊಂಡು ವಿಭಿನ್ನವಾಗಿ ನಿಲ್ಲುತ್ತಾರೆ.
ಹರೀಶ್ ಆಚಾರ್ಯರ ತೋಟದಲ್ಲಿ ಆಗಾಗ ಶಾಲೆಯ ಮಕ್ಕಳು ಬಂದು ಪರಿಸರ ಪಾಠ ಕಲಿಯುತ್ತಾರೆ. ವೀಕ್ ಎಂಡ್ ಕಳೆಯುವ ನಿಸರ್ಗ ಪ್ರೀಯರಿಗೆ ಶುಚಿರುಚಿಯಾದ ಸಾವಯವ ಆಹಾರ ದೊರೆಯುತ್ತದೆ. ಆಹ್ಲಾದಕರ ಪರಿಸರದಲ್ಲಿ ಹಕ್ಕಿಗಳ ಚಿಲಿಪಿಲಿ ನಿನಾದ ಕೇಳುತ್ತದೆ. ತೋಟದಲ್ಲಿ ಪಾಸಿಟಿವ್ ಎನಜರ್ಿ ಇದೆ.ಆಧ್ಯಾತ್ಮಿಕ ಅನುಭೂತಿ ಇದೆ.ಇಲ್ಲಿ ನಿಸರ್ಗ ವಿರೋಧಿ ಚಟುವಟಿಕೆಗಳಿಗೆ ಅವಕಾಶವಿಲ್ಲ.ಕುವೆಂಪು ಕವನದಂತೆ "ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವಿದು ಕಲೆಯ ಬಲೆಯೂ" ಎನ್ನುವಂತೆ ತೋಟಕ್ಕೊಂದು ಪಾವಿತ್ರ್ಯತೆ ತಂದುಕೊಂಡಿದ್ದಾರೆ ಹರೀಶ್ ಆಚಾರ್ಯ.

270 ತೆಂಗು, 450 ಅಡಿಕೆ ಸೇರಿದಂತೆ ಹುಣಸೆ ಹಣ್ಣಿನಿಂದ ಹಿಡಿದು ಕಿತ್ತಳೆ, ಮೂಸಂಬಿ, ನುಗ್ಗೆ, ಅಗಸೆ, ಪುನರ್ ಪುಳಿ, ಹನುಮ ಫಲ, ರಾಮ ಫಲ, ಸೀತಾಫಲ, ಕಾಶಿ ಬಿಲ್ವ, ಕಾಡು ನಲ್ಲಿ, ಬನರಾಸ್ ನಲ್ಲಿ ಹೀಗೆ ಹತ್ತಾರು ಔಷಧೀಯ ಗಿಡಗಳು ಅಲ್ಲಿವೆ. ರೈತರು ಕುಳಿತು ಸಂವಾದ ನಡೆಸಲು ಜಗಲಿ ಕಟ್ಟೆ ಇದೆ. ಮಕ್ಕಳು ಆಟವಾಡಲು ನೀರಿನಕೊಳ ಇದೆ. ಮೇಲೆ ಹತ್ತಿ ಹಸಿರು ನೋಡಲು ಅಟ್ಟ ಇದೆ. ಕೃಷಿಕನಿಗೆ ಸದಭಿರುಚಿ,ಒಳ್ಳೆಯ ಹವ್ಯಾಸಗಳಿದ್ದರೆ ತೋಟ ಎಷ್ಟೊಂದು ಸುಂದರವಾಗಿರುತ್ತದೆ ಎನ್ನುವುದು ತೋಟವನ್ನು ನೋಡಿದರೆ ತಿಳಿಯುತ್ತದೆ. 
ಕೃಷಿ ಎಂದರೆ ಮೂಗು ಮುರಿಯುವವರು, ನಷ್ಟದ ಬಾಬ್ತು ಎನ್ನುವವರು ಆಚಾರ್ಯರ ತೋಟ ನೋಡಿದರೆ ತಮ್ಮ ಅಭಿಪ್ರಾಯ ಬದಲಿಸಿಕೊಳ್ಳದೆ ಇರಲಾರರು. ಕೃಷಿ, ಶಿಕ್ಷಣ.ಒತ್ತಡ ರಹಿತ ಬದುಕು, ಬದುಕಿನ ಚೆಲುವು, ಸಂಸಾರ ಹೀಗೆ ಆಚಾರ್ಯರು ಹೇಳುತ್ತಾ ಹೋದರು.ನಾವು ಕಿವಿಯಾದೆವು. ಅವರು ಕವಿಯಾದರು.ಅವರು ಕಟ್ಟಿದ ತೋಟ ಕಣ್ಣೆದುರಿಗಿತ್ತು. ಹಾಗಾಗಿ ಅಲ್ಲಿ ಪ್ರಶ್ನೆಗಳ ಹಂಗು ಇರಲಿಲ್ಲ.ಅನುಮಾನಗಳ ಗುಂಗೂ ಕಾಡಲಿಲ್ಲ. 

ನಾವೂ ಕೃಷಿಕರೆ : " ಮೂಲತಃ ನಾವು ಕೃಷಿಕರೇ. ನಮ್ಮ ತಂದೆಯವರದ್ದು ಉಡುಪಿಯಲ್ಲಿ ಜಮೀನಿತ್ತು. ಆರು ಎಕರೆ ತೋಟ. ಮೈಸೂರು ಚೆನ್ನಾಗಿದೆ ಇಲ್ಲಿ ಬನ್ನಿ ಅಂತ ನಮ್ಮ ಭಾವ ಹೇಳಿದರು. ಅಲ್ಲಿಯ ಜಮೀನನ್ನು ಮಾರಾಟಮಾಡಿ ಇಲ್ಲಿ ಬಂದು ಜಮೀನು ಖರೀದಿಸಿದೆವು.
ಆವಾಗ ನಾನು ಡಿಪ್ಲೋಮ ಕಂಪ್ಲಿಟ್ ಮಾಡಿ ಬೆಂಗಳೂರಲ್ಲಿ ಕೆಲಸ ಮಾಡ್ತಾ ಇದ್ದೆ.ಶ್ರೀಧರ ಇಂಟರ್ ನ್ಯಾಷನಲ್ ಕಂಪನಿಯಲ್ಲಿ ಒಂದು ವರ್ಷ ಕೆಲಸಮಾಡಿದೆ.ಆಮೇಲೆ 1995 ರಲ್ಲಿ ಸ್ವಂತ ಫ್ಯಾಕ್ಟರಿ ಮಾಡಿದೆ.ಮೈಕ್ರೋ ಚಿಪ್ ಬೇಸಡ್ ಕಂಪನಿ ಅದು. ವಾಟರ್ ಕಂಟ್ರೋಲರ್, ಡಿಸೈನ್. ಮ್ಯಾಗ್ನಟಿಕ್ ಇಂಡಕ್ಷನ್ ಎಲ್ಲಾ ತಯಾರುಮಾಡುತ್ತಿದ್ದೆವು. ಜೆಎಸ್ಎಸ್ ಸಂಸ್ಥೆಯ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ನಗರದ ಬಹುತೇಕ ಮನೆಗಳಿಗೆ ವಾಟರ್ ಕಂಟ್ರೋಲರ್ ಹಾಕಿದ್ದು ನಾವೇ. 1995 ರಲ್ಲಿ ಇಲ್ಲಿ 4 ಎಕರೆ 27 ಗುಂಟೆ ಜಮೀನು ತೆಗೆದುಕೊಂಡೆವು.
ಅಣ್ಣ ಬೆಂಗಳೂರಿನಲ್ಲಿ ಕೆಲಸಮಾಡುತ್ತಿದ್ದ.ಆಗ ನಮ್ಮ ತಂದೆಯವರು ಇಲ್ಲಿ ಬಂದು ನೀನು ಕೃಷಿ ಮಾಡಿದರೆ ಜಮೀನು ಉಳಿಸಿಕೊಳ್ಳುವಾ. ಇಲ್ಲ ಮಾರಾಟ ಮಾಡಿಬಿಡುವಾ ಅಂತ ಹೇಳಿದರು.ಬೆಂಗಳೂರಿನ ಪ್ಯಾಕ್ಟರಿಯನ್ನು ನನ್ನ ಅಣ್ಣನಿಗೆ ವಹಿಸಿ ಕೃಷಿ ಕೆಲಸಕ್ಕೆ ಬಂದುಬಿಟ್ಟೆ" ಎಂದರು ಆಚಾರ್ಯ.
ನಂತರ ಅವರ ಜೀವನದಲ್ಲಿ ದುರಂತವೊಂದು ನಡೆದೆಹೋಯಿತು. ಆಚಾರ್ಯ ಅವರ ಅಣ್ಣ ಅಪಘಾತದಲ್ಲಿ ತೀರಿಹೋದರು. ಆಗ ಲಕ್ಷಾಂತರ ರೂಪಾಯಿ ಆದಾಯ ತರುತಿದ್ದ ಕಂಪನಿ ಮತ್ತು ವ್ಯವಹಾರ ಎಲ್ಲವನ್ನೂ ಬಂದ್ ಮಾಡಿ ಸಂಪೂರ್ಣ ಕೃಷಿ ಚಟುವಟಿಕೆಗಳಲ್ಲಿ ಹರೀಶ್ ತೊಡಗಿಸಿಕೊಂಡರು.
ಫ್ಯೂಚರ್ ಫಾಮರ್ಾರ್ ಕ್ಲಬ್ : "ಉಡುಪಿಯಲ್ಲಿ ಓದುತ್ತಿದ್ದಾಗ ಶಾಲೆಯಲ್ಲಿ "ಫ್ಯೂಚರ್ ಫಾರ್ಮರ್ ಕ್ಲಬ್" ಅಂತ ಮಾಡಿಕೊಂಡಿದ್ದೆವು. ಅದರ ಸಂಚಾಲಕ ನಾನೆ. ಈಗಲೂ ಅಲ್ಲಿನ ಶಾಲೆಗಳಲ್ಲಿ ಅಂತಹ ಕ್ಲಬ್ಗಳಿವೆ.ಮಕ್ಕಳಿಗೆ ಪರಿಸರ ಸ್ನೇಹಿ ಕೃಷಿಯ ಬಗ್ಗೆ ಅರಿವು ಮೂಡಿಸುವುದು ಅದರ ಉದ್ದೇಶ.ಬಾಲ್ಯದಲ್ಲೇ ನನಗೆ ಕೃಷಿಯ ಬಗ್ಗೆ ಆಸಕ್ತಿ ಇತ್ತು.ಹಾಗಾಗಿ ನಾನು ಕೃಷಿಯನ್ನೇ ನನ್ನ ಉದ್ಯೋಗವಾಗಿ ಆಯ್ಕೆ ಮಾಡಿಕೊಂಡೆ".
ಮಕ್ಕಳಿಗೆ ಶಾಲೆಯಲ್ಲಿ ಕೃಷಿ ಕ್ಲಬ್ಗಳನ್ನು ಮಾಡಿಕೊಳ್ಳಲು ಪ್ರೋತ್ಸಾಹ ನೀಡಬೇಕು.ಇದೊಂದು ಪಠ್ಯವನ್ನಾಗಿ ಕಲಿಸಿದರೆ ತಪ್ಪಿಲ್ಲ. ಈಗಾದಾಗ ಮಾತ್ರ ಹಾದಿ ತಪ್ಪಿರುವ ನಮ್ಮ ಪಾರಂಪರಿಕ ಕೃಷಿಯನ್ನು ಸರಿದಾರಿಗೆ ತರಬಹುದು ಎಂದು ಆಚಾರ್ಯ ಅಭಿಪ್ರಾಯ ಪಡುತ್ತಾರೆ.
ಐಟಿಬಿಟಿ ಮೋಹ ಇಲ್ಲ :" ನೋಡಿ ಸಾಫ್ಟವೇರ್ ಕಂಪನಿಯಲ್ಲಿ ದುಡಿದರೆ ತಿಂಗಳಿಗೆ ಲಕ್ಷ ರೂಪಾಯಿ ಸಿಗುತ್ತದೆ. ನಿಜ. ಲಕ್ಷಕ್ಕೆ ಶೇ 30 ರಷ್ಟು ತೆರಿಗೆ ಕಟ್ಟಬೇಕು. ಒತ್ತಡ.ನಿದ್ದೆ ಇಲ್ಲದ ರಾತ್ರಿಗಳು. ಅಲ್ಲಿನ ಲೈಫ್ ಸ್ಟೈಲೇ ಬೇರೆ .ದುಬಾರಿ ಉಡುಗೆತೊಡುಗೆ. ನೈಕಿ ಶೋವೆ ಬೇಕು, ಜಾಕಿ ಅಂಡರ್ವೇರೇ ಬೇಕು. ಇಲ್ಲಿ ಯಾವುದು ಬೇಡ. ನಾವು ನಾರ್ಮಲ್ ಆಗಿರುವ. ಇಲ್ಲಿ ಸಿಕ್ಕುವ ಸಂತೋಷ ಕೋಟಿ ರೂಪಾಯಿ ಕೊಟ್ಟರು ಸಿಗುವುದಿಲ್ಲ". 
ಬಟರ್ ಫ್ರೂಟ್ ಬೀಜ ಹಾಕಿ, ಗಿಡ ಬೆಳಸಿ ಆ ಗಿಡ ಬಿಟ್ಟ ಹಣ್ಣು ತಿನ್ನುವಾಗ ಮನಸ್ಸಿಗೆ ಆಗುವ ಸಂತೋಷವೇ ಬೇರೆ. ಆ ಸುಖ ಎಲ್ಲೂ ಸಿಗೋಲ್ಲ. ಗಿಡಗಳನ್ನು ಬೆಳೆಸುವುದು ಎಂದರೆ ನಮ್ಮ ಮಕ್ಕಳನ್ನು ಬೆಳೆಸಿದ ಹಾಗೆ. ಮಕ್ಕಳು ನಮ್ಮಿಂದ ದೂರವಾಗಬಹುದು. ಗಿಡಮರಗಳು ದೂರವಾಗುವುದಿಲ್ಲ.ಅವು ನಮ್ಮ ಕಣ್ಣೆದುರೆ ಮತ್ತಷ್ಟು ಸಮೃದ್ಧವಾಗಿ ಬೆಳೆದು ಫಲನೀಡಿ ಸುಖ ಸಂತೋಷ ಹಿಮ್ಮಡಿಗೊಳಿಸುತ್ತವೆ" ಎನುತ್ತಾರೆ ಹರೀಶ್.
ಕೃಷಿ ಕುಟುಂಬ: "ತಂದೆ ಶ್ರೀಪತಿ ಆಚಾರ್ಯ.ಅವರಿಗೆ 86 ವರ್ಷ. ಈಗಲೂ ವಾಕ್ ಮಾಡುತ್ತಾರೆ. ಕಾರು ಚಾಲನೆ ಮಾಡುತ್ತಾರೆ.ಇದೆಲ್ಲ ವಿಷಮುಕ್ತ ಆಹಾರ ಬಳಕೆ ಪರಿಣಾಮ. ತಾಯಿ ಸರಸ್ವತಿ ಆಚಾರ್ಯ. ಆಗ್ಯರ್ಾನಿಕ್ ಮೇಳಗಳಲ್ಲಿ ನಡೆಯುವ ಅಡುಗೆ ಸ್ಪಧರ್ೆಗಳಲ್ಲಿ ಭಾಗವಹಿಸುತ್ತಾರೆ. ಪತ್ರೋಡೆ, ಗೋಲಿ ಬಜೆ ಮಾಡೋದರಲ್ಲಿ ಫೇಮಸ್ಸು.
ಪತ್ನಿ ರಶ್ಮಿ ಹರೀಶ್.ಅವರಿಗೂ ಕೃಷಿ ಪ್ರೀತಿ. ಎಂ.ಎ. ಎಲ್ಎಲ್ಬಿ. ಎಂಎಸ್ ಕೌನ್ಸಿಲಿಂಗ್ ಅಂಡ್ ಸೈಕೋ ಥೆರಫಿ ಮಾಡಿದ್ದಾರೆ. ಪಿಎಚ್ಡಿ ಮಾಡ್ತಾ ಇದ್ದಾರೆ. ಕಡಕೊಳದಲ್ಲಿ ನಮ್ಮದೆ ಸ್ಕೂಲ್ ಇತ್ತು ಆಚಾರ್ಯ ಗುರು ಕುಲ ಅಂತ. ಈಗ ಅದನ್ನು ಬೇರೆಯವರಿಗೆ ಕೊಟ್ಟು, ತಂದೆ ತಾಯಿ ಆರೋಗ್ಯದ ದೃಷ್ಟಿಯಿಂದ ನಗರದಲ್ಲಿದ್ದೇವೆ.ಮುಂದೆ ತೋಟದಲ್ಲೆ ಮನೆಮಾಡಿಕೊಂಡಿರಲು ನಿರ್ಧರಿಸಿದ್ದೇವೆ" ಎನ್ನುತ್ತಾರೆ ಆಚಾರ್ಯ.

ಮಕ್ಕಳನ್ನು ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲೆ ಓದಿಸುವ ಪೋಷಕರ ನಡುವೆಯೂ ಇವರು ವಿಭಿನ್ನವಾಗಿ ನಿಲ್ಲುತ್ತಾರೆ. ವಿಜಯ ವಿಠಲ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳನ್ನು ಶಾಲೆ ಬಿಡಿಸಿ ಅರಿವು ಶಾಲೆಗೆ ಸೇರಿಸಿದ್ದಾರೆ. ಮಗ ಪ್ರದ್ಯುಮ್ನ 8 ನೇ ತರಗತಿ, ಮಗಳು ಪ್ರಣತಿ 4 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಮಕ್ಕಳಿಬ್ಬರಿಗೂ ಕೃಷಿ ಎಂದರೆ ಪ್ರೀತಿ. ಸಾಮಾನ್ಯವಾಗಿ ಪ್ರತಿಷ್ಠಿತ ಶಾಲೆಗಳು ಯಂತ್ರಗಳನ್ನು ತಯಾರು ಮಾಡುವ ಕಾಖರ್ಾನೆಗಳಂತಾಗಿಬಿಟ್ಟಿವೆ ಎನ್ನು ಹರೀಶ್ ನಮಗ್ಯಾಕೋ ಅದು ಬೇಡ ಅನಿಸಿತು. ಮಕ್ಕಳು ಅರಿವು ಅಂತಹ ಶಾಲೆಗಳಲ್ಲಿ ಓದಿದರೆ ಜೀವನ ಪಾಠ ಕಲಿಯುತ್ತಾರೆ. ಮಕ್ಕಳು ಮಕ್ಕಳ ಹಾಗೆ ಬೆಳೆಯುತ್ತಾರೆ.ಅವರ ಬಾಲ್ಯ ಸಮೃದ್ಧವಾಗಿರುತ್ತದೆ ಎನ್ನುವ ಮೂಲಕ ನಮ್ಮ ಶಿಕ್ಷಣದ ಮತ್ತೊಂದು ಮುಖವನ್ನು ಅನಾವರಣಮಾಡಿಟ್ಟರು. ತೋಟದಲ್ಲಿ ಕಳೆದ 12 ವರ್ಷದಿಂದ ಸಂಸಾರ ಒಂದು ದುಡಿಯುತ್ತಿದೆ. ಅವರನ್ನು ಎಂದೂ ಕೆಲಸದವರಂತೆ ನೋಡಿಲ್ಲ. ಪ್ರೀತಿಯಿಂದ ನೋಡಿಕೊಂಡಿದ್ದೇವೆ.ನಮ್ಮ ಅವರ ಬಾಂಧವ್ಯ ರಕ್ತ ಸಂಬಂಧವನ್ನು ಮೀರಿದ್ದು ಎನ್ನುವ ಮೂಲಕ ಕೃಷಿ ಕಾಮರ್ಿಕರ ಬಗೆಗಿರುವ ಕಾಳಜಿಯನ್ನು ತೆರೆದಿಟ್ಟರು.
ಪಂಚಗವ್ಯ ಮಹಾತ್ಮೆ : ನಮ್ಮಲ್ಲಿ ಎರಡು ಗೀರ್, ಒಂದು ಹಳ್ಳಿಕಾರ್, ಒಂದು ಮಲೆನಾಡು ಗಿಡ್ಡ ತಳಿಯ ನಾಲ್ಕು ಹಸುಗಳಿವೆ.ಇವುಗಳ ಸಗಣಿ ಬಳಸಿಕೊಳ್ಳುತ್ತೇವೆ. ತೋಟಕ್ಕೆ ಪಂಚಗವ್ಯ ಬಿಟ್ಟರೆ ಬೇರೆ ಏನನ್ನು ಸಿಂಪರಣೆಮಾಡಿಲ್ಲ. ರೋಗಕ್ಕೆ, ಗಿಡಗಳ ಪೋಷಕಾಂಶಕ್ಕೆ ಇದೆ ಸಾಕು. ಎಲ್ಲಾ ರೀತಿಯ ಬೆಳೆಗೂ ಸಿಂಪರಣೆ ಮಾಡಬಹುದು.ಗಿಡದ ಬುಡಕ್ಕೂ ಹಾಕಬಹುದು.
105 ರೀತಿಯ ಪದಾರ್ಥಗಳನ್ನು ಹಾಕಿ ಪಂಚಗವ್ಯ ತಯಾರುಮಾಡುತ್ತೇವೆ. ಗೀರ್ ಹಸುವಿನ ಹಾಲು, ತುಪ್ಪ, ಮೊಸರು, ಸಗಣಿ,ಗಂಜಲ ಎಲ್ಲವನ್ನು ಸೇರಿಸುತ್ತೇವೆ. ಒಳ್ಳೆಯ ಪರಿಣಾಮ ಇದೆ. ಒಂದು ಲೀಟರ್ ಪಂಚಗವ್ಯಕ್ಕೆ 40 ಲೀಟರ್ ನೀರು ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು. ತೋಟಕ್ಕೆ ಬಳಸಿಕೊಂಡು ಉಳಿದ ಪಂಚಗವ್ಯವನ್ನು ಲೀಟರ್ಗೆ 200 ರೂಪಾಯಿಯಂತೆ ಮಾರಾಟಮಾಡುತ್ತೇವೆ.
ಪಂಚಗವ್ಯ ಬಳಸುವುದರಿಂದ ದೇಸಿಬೀಜಗಳ ಮೊಳಕೆ ಚೆನ್ನಾಗಿ ಬರುತ್ತದೆ.ಈಗ ವಿಶೇಷವಾದ ದೇಸಿ ತಳಿಯ ಕೆಂಪು ಬಣ್ಣದ ಹತ್ತಿಬೀಜ ಸಿಕ್ಕಿದೆ. ಅದನ್ನು ಪಂಚಗವ್ಯದಲ್ಲಿ ಮುರು ಬಾರಿ ನೆನೆಹಾಕಿದ್ದೇನೆ, ನಂತರ ನಾಟಿ ಮಾಡಬೇಕು. ಇಲ್ಲಿ ಹೂ ಕೋಸನ್ನು ಬೆಳೆದಿದ್ದೇನೆ.ಪಂಚಗವ್ಯ ಬಿಟ್ಟರೆ ಬೇರೆ ಏನನ್ನು ಸಿಂಪರಣೆ ಮಾಡಿಲ್ಲ. ಚೆನ್ನಾಗಿ ಬಂದಿದೆ. ನಮ್ಮ ತೋಟದಲ್ಲಿರುವ ಹೈಬ್ರಿಡ್ತಳಿ ಇದೊಂದೆ. ಉಳಿದದ್ದೆಲ್ಲವೂ ದೇಸಿ ಬೀಜಗಳೆ ಎನ್ನುತ್ತಾರೆ ಹರೀಶ್ ಆಚಾರ್ಯ.
ಶೈಕ್ಷಣಿಕ ಕೃಷಿ ಪ್ರವಾಸಿ ಜಾಗ : ಹರೀಶ್ ಅವರ ತೋಟ ಶಾಲೆಯ ಮಕ್ಕಳಿಗೆ ಪ್ರವಾಸಿ ಸ್ಥಳವಾಗಿಯೂ ಬದಲಾಗುತ್ತಿರುತ್ತದೆ. ಔಷದೀಯ ಗಿಡಗಳ ಬಗ್ಗೆ ಅರಿವು.ಸಾವಯವ ಕೃಷಿಯ ಬಗ್ಗೆ ತಿಳಿವಳಿಕೆ ಮೂಡಿಸಲು ಆಗಾಗ ಶಾಲೆಯ ಮಕ್ಕಳನ್ನು ಇಲ್ಲಿಗೆ ಕರೆದುತರಲಾಗುತ್ತದೆ. 

ತೋಟಕ್ಕೆ ಬೇಕಾದ ಗಿಡ ಬೆಳೆದುಕೊಳ್ಳಲು ಪುಟ್ಟ ನರ್ಸರಿ ಮಾಡಿಕೊಂಡಿದ್ದಾರೆ. ಕರಿತುಂಬಿ, ರಣಕಳ್ಳಿ, ಕಾಡುಗಿಡದ ವಿಶೇಷ ತಳಿಗಳನ್ನು ಬೆಳೆದಿದ್ದಾರೆ. ಔಷದಿಗಿಡಗಳ ವನ ಇದೆ. ಆಯರ್ುವೇದದಲ್ಲಿ ಬಳಸುವ ಗಿಡಗಳಾದ ನೀಲಿ ಆಡುಸೋಗೆ, ಸ್ವರ್ಣ ಚಂಪಕ, ಲೆಮನ್ ಗ್ರಾಸ್ ಬೆಳೆಯಲಾಗಿದೆ. ಶಾಲಾ ಮಕ್ಕಳಿಗೆ ತೋಟದಲ್ಲಿ ಕ್ಯಾಂಪ್ ಮಾಡುತ್ತಾರೆ. ಅವರಿಗೆ ಗಿಡಗಳ ಮಹತ್ವವನ್ನು ತಿಳಿಸುತ್ತಾರೆ.ಮಕ್ಕಳು ನೋಡೆ ಇರದ ಗಿಡಗಳು.ಅವುಗಳ ಉಪಯೋಗ, ಬಳುಸುವ ಬಗೆಯನ್ನು ತಿಳಿಸಿಕೊಡಲಾಗುತ್ತದೆ. 
ಸಮಗ್ರ ಪದ್ಧತಿಯಲ್ಲಿ ಚಿಕ್ಕ ತಾಕ್ಕೊಂದನ್ನು ಮಾಡಿದ್ದಾರೆ. ನುಗ್ಗೆ, ಪಪ್ಪಾಯ, ಮೆಣಸಿಕಾಯಿ, ಕೋಸು, ಸೋಪ್ಪು, ತರಕಾರಿಯನ್ನು ಬೆಳೆಯಲಾಗಿದೆ. ಮನೆಯ ಮುಂದೆ ಇರುವ ಖಾಲಿ ಜಾಗವನ್ನು ಹೇಗೆ ಸದುಪಯೋಗ ಮಾಡಿಕೊಂಡು, ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತೋರಿಸಿಕೊಡಲು ಈ ತಾಕನ್ನು ರೂಪಿಸಲಾಗಿದೆ ಎನ್ನುತ್ತಾರೆ ಹರೀಶ್.
ಕೊಯಮತ್ತೂರಿನಲ್ಲಿ ನಡೆದ ಕೃಷಿ ವಸ್ತು ಪ್ರದರ್ಶನದಲ್ಲಿ ವಿಶೇಷವಾದ ಬದನೆ ತಳಿ ಸಿಕ್ಕಿತು. ಬಿಳಿ ಬದನೆ. ಅಪ್ಪಟ್ಟ ಬಿಳಿ. ತುಂಬಾ ವಿಶೇಷವಾದದ್ದು. ಜೊತೆಗೆ ಹಸಿರು ಬದನೆಯೂ ಇದೆ. ನಮ್ಮಲ್ಲಿ ಗುಳ್ಳೆ ಬದನೆ,ಮಟ್ಟಿಗುಳ್ಳ ಅಂತ ಇದನ್ನು ಕರೆಯುತ್ತಿದ್ದರು. ಅದರ ರುಚಿ ಸವಿದವರಿಗಷ್ಟೇ ಗೊತ್ತು.ಇಂತಹ ಅಪರೂಪದ ತಳಿಗಳು ನಮ್ಮ ತೋಟದಲ್ಲಿ ಜಾಗ ಪಡೆದಿವೆ ಎನ್ನುತ್ತಾರೆ. 
ನಮ್ಮ ತೋಟದಲ್ಲಿ ವರ್ಷವಿಡಿ ಆದಾಯ ಇದೆ. ತೆಂಗು, ಬಾಳೆ, ಅರಿಶಿನ ತರಕಾರಿ ಸೊಪ್ಪು ಸೀಬೆ, ಕಿತ್ತಳೆ ಮೊಸಂಬಿ ಹೀಗೆ. ನಾನು ಎಂಜಿನಿಯರಿಂಗ್ ಕೆಲಸ ಮಾಡಿದವ ಅಲ್ಲಿ ಒಂದು ಲಕ್ಷ ರೂಪಾಯಿ ಆದಾಯ ಬರ್ತಾ ಇತ್ತು. ಕೃಷಿಯಲ್ಲಿ 30 ರಿಂದ 40 ಸಾವಿರ ಆದಾಯ ಸಿಕ್ತಾ ಇದೆ ಅದೇ ಸಾಕು. ವಾಷರ್ಿಕ 45000 ತೆಂಗಿನಕಾಯಿ ಸಿಗುತ್ತದೆ.ಅರಿಶಿನ ಕೊಯ್ಲು ಮುಗಿಯಿತು. ಅಲ್ಲಿಗೆ ಈಗ ಕೊತ್ತಂಬರಿ ಹಾಕುತ್ತೇವೆ". ಕೃಷಿಯಲ್ಲಿರುವ ನೆಮ್ಮದಿ, ಆರೋಗ್ಯ ಸುಖ ಸಂತೋಷ ಅನುಭವಿಸಿದವರಿಗಷ್ಟೇ ಗೊತ್ತು ಎನ್ನುತ್ತಾರೆ. 
ತಮ್ಮ 22 ವರ್ಷದ ಕೃಷಿ ಜೀವನದಲ್ಲಿ ಎಂದೂ ಅರಿಶಿನ ಮಾರಾಟ ಮಾಡಿಲ್ಲ. ಸ್ವಲ್ಪ ಭಿತ್ತನೆಗೆ ಕೊಡುತ್ತೇನೆ.ಉಳಿದದ್ದು ಮೌಲ್ಯವರ್ಧನೆ ಮಾಡುತ್ತೇನೆ. ನಾನು ಕೊಯಂತ್ತೂರು ಅರಿಶಿನ ಮಾರುಕಟ್ಟೆ ನೋಡೆ ಇಲ್ಲ. ಬೇಯಿಸಿ, ಒಣಗಿಸಿ ಪುಡಿ ಮಾಡಿ ಸಗಟು ರೂಪದಲ್ಲಿ ಮಾರಾಟಮಾಡುತ್ತೇನೆ. ಬೆಂಗಳೂರಿನ ಬಹುತೇಕ ಹೋಟೆಲ್ನವರು ನಮ್ಮ ಅರಿಶಿನಪುಡಿ ಖರೀದಿಸುತ್ತಾರೆ.ಕುಂಕುಮ ಮಾಡುತ್ತೇವೆ. 
ಸದಾ ನನ್ನ ಹತ್ತಿರ ಅರಿಶಿನ ಪುಡಿ, ಕೊಬ್ಬರಿ ಎಣ್ಣೆ ಸ್ಟಾಕ್ ಇರುತ್ತದೆ. ಗ್ರಾಹಕರಿಗೆ ನೇರ ಮಾರಾಟ ಮಾಡುತ್ತೇನೆ. ಮೈಸೂರಿನ ಎಲ್ಲಾ ಸಾವಯವ ಉತ್ಪನ್ನ ಮಾರಾಟ ಮಳಿಗೆಗಳಿಗಳಿಗೂ ಕೊಡುತ್ತೇವೆ. 
"ಇತ್ತೀಚಿಗೆ ಸಂಡೇ ಫಾರ್ಮರ್ಗಳದ್ದು ದೊಡ್ಡ ಸಮಸ್ಯೆಯಾಗಿದೆ. ಟೊಮಟೊ ಬೆಳಿತ್ತಾರೆ. ಮಾರಾಟ ಮಾಡುವುದು ಗೊತ್ತಾಗಲ್ಲ. ನಾವು ಸಾವಯದಲ್ಲಿ ಬೆಳೆದೋ ಆದರೆ ಮಾರಾಟ ಆಗ್ತಾ ಇಲ್ಲ ಅಂತ ದೂರುತ್ತಾರೆ. ಆರಂಭದಲ್ಲಿ ನಾನು ರಮೇಶ್ ಕಿಕ್ಕೇರಿ ಗಾಡಿಯಲ್ಲಿ ತರಕಾರಿ ಇಟ್ಟುಕೊಂಡು ಮಾರಾಟ ಮಾಡಿದ್ದೇವೆ.ಬೆಳೆಯುವುದರ ಜೊತೆಗೆ ಮಾರಾಟ ಮಾಡುವ ಬಗೆಯೂ ರೈತರಿಗೆ ಗೊತ್ತಿರಬೇಕು. ವಾರಕ್ಕೊಮ್ಮೆ ತೋಟಕ್ಕೆ ಬರುವವರು ಕೃಷಿ ಮಾಡುವುದು ಸಾದುವೂ ಅಲ್ಲ ಸಾಧ್ಯವೂ ಇಲ್ಲ" ಇದು ನನ್ನ ಅನುಭವ ಎನ್ನುತ್ತಾರೆ ಹರೀಶ್ ಆಚಾರ್ಯ. ಹೆಚ್ಚಿನ ಮಾಹಿತಿಗೆ 9886420907 ಸಂಪಕರ್ಿಸಿ 





ಬುಧವಾರ, ಫೆಬ್ರವರಿ 8, 2017

ರಾಷ್ಟ್ರಪತಿ ಭವನದಲ್ಲಿ ತಲಕಾಡು ತರಕಾರಿ: 
"ಮೇಕ್ ಇನ್ ಇಂಡಿಯಾ" ದಲ್ಲಿ ಯಶೋಗಾಥೆ
ರೈತ,ನೇಗಿಲಯೋಗಿ ಎಂತಹ ಸುಂದರವಾದ ಪದ. ರೈತನೆಂದರೆ ಕಲೆಗಾರ, ವಿಜ್ಞಾನಿ, ಎಂಜಿನೀಯರ್, ವೈದ್ಯ, ಪೋಷಕ, ಕೇರ್ ಟೇಕರ್ ಆಫ್ ಆಲ್. ಇದೆಲ್ಲವನ್ನು ಒಂದು ಕಡೆ ತಂದು ಬದುಕಿ ತೋರಿಸುವವನು ರೈತ. ನಮ್ಮ ದೇಶ, ನಮ್ಮ ಆರೋಗ್ಯ, ನಮ್ಮ ಮಣ್ಣು, ನೀರು ಇದೆಲ್ಲದ್ದರ ಬಗ್ಗೆ ಅಭಿಮಾನ ಇರುವವನು ರೈತ. ವಿಷಮುಕ್ತ ಆಹಾರ, ವಿಷಮುಕ್ತ ನೆಲ, ಜಲ ಕಾಪಾಡುವುದು ರೈತನ ಕರ್ತವ್ಯ. ಆದರೆ ನಮ್ಮ ರೈತರು ಸೋಮಾರಿಗಳು. ಪ್ರಾಮಾಣಿಕ ಪ್ರಯತ್ನ ಮಾಡಲ್ಲ. ರೈತರು ಮೂರ್ಖರಲ್ಲ. ಅತಿ ಬುದ್ಧಿವಂತರು. ಆದರೆ ಎಲ್ಲಿ, ಯಾವಾಗ ತಮ್ಮ ಬುದ್ಧಿಯನ್ನು ಬಳಸಬೇಕು ಎನ್ನುವುದು ಅವರಿಗೆ ಗೊತ್ತಿಲ್ಲಾ" ಎನ್ನುತ್ತಾರೆ ಮಾಜಿ ಫೈಲಟ್,ಹಾಲಿ ಕೃಷಿಕ ನಮೀತ್.
----------------------------------------------

ಮೈಸೂರು : ತಿ.ನರಸೀಪುರ ತಾಲೂಕಿನ ತಲಕಾಡು ಸಾವಯವ ಕೃಷಿಯಲ್ಲಿ ಅದ್ಭುತ ಸಾಧನೆಮಾಡುವ ಮೂಲಕ ದೇಶದ ಗಮನಸೆಳೆದಿದೆ. ಉತ್ತರ್ಖಾಂಡ್ನಿಂದ ಬಂದ ಉತ್ಸಾಹಿ ಯುವಕರ ತಂಡ     ಸಂಪೂರ್ಣ ವಿಷಮುಕ್ತವಾಗಿ 40 ಕ್ಕೂ ಹೆಚ್ಚು ಬಗೆಯ ಸೊಪ್ಪು ಮತ್ತು ತರಕಾರಿಗಳನ್ನು ಜಾಗತಿಕ ಗುಣಮಟ್ಟದಲ್ಲಿ ಬೆಳೆಯುತ್ತಿದ್ದಾರೆ.ಇದನ್ನು ಕಂಡ ಭಾರತ ಸಕರ್ಾರದ ಪ್ರತಿಷ್ಠಿತ "ಮೇಕ್ ಇನ್ ಇಂಡಿಯಾ" ಪತ್ರಿಕೆಯಲ್ಲಿ ಸಾವಯವ ಪಯಣದ ಸಂಪೂರ್ಣ ಕಥಾನಕ ಪ್ರಕಟವಾಗಿದೆ.
ಮೈಸೂರು ಜಿಲ್ಲೆಯ ತಲಕಾಡಿನ ಪುಟ್ಟ ಹಳ್ಳಿ ಟಿ.ಬೆಟ್ಟಹಳ್ಳಿ. ಮಾಜಿ ಸೈನಿಕರು ಮತ್ತು ಉತ್ಸಾಹಿ ಯುವಕರ ಸಾವಯವ ಕೃಷಿ ಪ್ರೀತಿ ಮತ್ತು ಕಾಳಜಿಯಿಂದಾಗಿ ಈ ಹಳ್ಳಿ 144 ದೇಶಗಳಲ್ಲಿ ಸುದ್ದಿ ಮಾಡುತ್ತಿದೆ. ಫಲವತ್ತಾದ ಮಣ್ಣು, ನೀರು ಎಲ್ಲಾ ಇದ್ದು ನಾವು ಮಾಡಲಾಗದ್ದನ್ನು ದೂರದ ಉತ್ತರ ಖಾಂಡ್ನಿಂದ ಬಂದ ನಿವೃತ್ತ ಸೈನಿಕರು ಸಾಧಿಸಿ ತೋರಿಸಿದ್ದಾರೆ.ಸಾವಯವ ಕೃಷಿಯನ್ನು ಗೆಲ್ಲಿಸಿದ್ದಾರೆ. ಕಾಪರ್ೋರೇಟ್ ಕಂಪನಿಗಳಿಗಿಂತಲ್ಲೂ ಎತ್ತರದ ಮಟ್ಟಕ್ಕೆ ಕೃಷಿ ವಲಯವನ್ನು ಎತ್ತರಕ್ಕೆ ನಿಲ್ಲಿಸಿದ್ದಾರೆ.
ಇಂತಹ ಸಾಧನೆ ಮಾಡಿದ ಮಹಾನ್ ಸಾಧಕರು ಸಹೋದರರಾದ ನವೀನ್ ಎಂ.ವಿ.,ನಮೀತ್ ಮೊಡಕುತರ್ಿ ಮತ್ತು ಕೆ.ಎನ್.ಪ್ರಸಾದ್ .ಇವರೊಂದಿಗೆ ಜೈ ಕಿಸಾನ್ ಎಂದು ಕೃಷಿಗೆ ಸಾಥ್ ನೀಡುತ್ತಿರುವವರು ನಿವೃತ್ತ ಸೈನಿಕರಾದ ಮನೀಂದರ್ ಸಿಂಗ್, ರಾಜೇಂದ್ರ ಪಾಟೀಲ್. ಕೃಷಿ ವಿಜ್ಞಾನಿಗಳಾದ ಕೀಟಶಾಸ್ತ್ರಜ್ಞ ದೇವರಾಜ್, ಜನಾರ್ಧನ ರೆಡ್ಡಿ. ಫಸ್ಟ್ ಆಗ್ರೋ ಟೆಕ್ ಪ್ರೊಡ್ಯುಸ್ ಪ್ರೈ.ಲಿ. ಎಂಬ ಕಂಪನಿಯಡಿ ಕೃಷಿಯನ್ನು ಕಾಖರ್ಾನೆಯಂತೆ ಕಟ್ಟಿ ಬೆಳೆಸುತ್ತಿರುವ ಇವರ ಶ್ರಮ ಮತ್ತು ಬುದ್ದಿವಂತಿಕೆ ಉತ್ಸಾಹಿ ಯುವಕರಿಗೆ ಮಾದರಿಯಂತಿದೆ.
ತಲಕಾಡಿನಲ್ಲಿ ಬೆಳೆದ ತರಕಾರಿ ಮತ್ತು ಸೊಪ್ಪು ಸಂಪೂರ್ಣ ವಿಷಮುಕ್ತವಾಗಿದ್ದು ಜಾಗತಿಕ ಗುಣಮಟ್ಟದಲ್ಲಿವೆ.ಜಾಗತಿಕ ಮಟ್ಟದ (ಡಬ್ಲ್ಯೂಎಚ್ಒ) ಇಂಟರ್ ಟೆಕ್ ಸಂಸ್ಥೆ ಇಲ್ಲಿ ಬೆಳೆದ ತರಕಾರಿಗಳಿಗೆ ಸಾವಯವ ಧೃಡೀಕರಣ ನೀಡಿ "ಜೀರೋ" ಪ್ರೆಸ್ಟಿಸೈಡ್ ತರಕಾರಿ ಎಂದು ಖಾತರಿ ಪ್ರಮಾಣ ಪತ್ರ ನೀಡುತ್ತದೆ.
ತಲಕಾಡು ಈಗ ಐಒಟಿ ( ಇಂಟರ್ ನೆಟ್ ಆಫ್ ಥಿಂಗ್ಸ್) ಬಥರ್್ ಪ್ಲೇಸ್ ಆಫ್ ಅಗ್ರಿಕಲ್ಚರ್ ಎಂಬ ಕೀತರ್ಿಗೆ ಭಾಜನವಾಗಿದೆ. ಕೃಷಿ ಕ್ಷೇತ್ರದಲ್ಲಿ ಇಂಟರ್ ನೆಟ್,ರೋಬೊಟ್,ಡ್ರೋಣ್ನಂತಹ ತಾಂತ್ರಿಕತೆಗಳ ಬಳಕೆ ಮೊಟ್ಟ ಮೊದಲ ಬಾರಿಗೆ ಪುಟ್ಟ ಹಳ್ಳಿಯಲ್ಲಿ ನಡೆಯುತ್ತಿದೆ.
ರೈತನೆಂದರೆ ಅಭಿಮಾನ : ಎಂಜಿನಿಯರ್,ಪೈಲಟ್,ಡಾಕ್ಟರ್,ಸಾಫ್ಟವೇರ್ ಎಂಜಿನಿಯರ್ ಎಂದು ಹೇಳಿಕೊಂಡು ಬೀಗುತ್ತಿದ್ದ ಯುವಕರು ಈಗ ಧೈರ್ಯದಿಂದ ತಾನೊಬ್ಬ ಕೃಷಿಕ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ರೈತ ಎಂಬ ಪದಕ್ಕೆ ಈಗೊಂದು ಆಕರ್ಷಣೆ ಬಂದಿದೆ. ಜೈ ಜವಾನ್ ಜೈ ಕಿಸಾನ್ ಎಂಬ ಮಾತು ಇಲ್ಲಿ ಸಾರ್ಥಕ್ಯ ಪಡೆದುಕೊಂಡಿದೆ. ಜಾಗತಿಕ ಗುಣಮಟ್ಟದಲ್ಲಿ ಸೊಪ್ಪು ಮತ್ತು ತರಕಾರಿಯನ್ನು ಉತ್ಪಾದನೆ ಮಾಡುತ್ತಿರುವ ತಂಡದ ಯಶೋಗಾಥೆ ಇದು.
ಇವರು ಬೆಳೆದ ಸೊಪ್ಪು,ತರಕಾರಿ ದೇಶದ ಪಂಚತಾರಾ ಹೋಟೆಲ್ ಮತ್ತು ಬೆಂಗಳೂರಿನ ಪ್ರತಿಷ್ಠಿತ ರಿಟೇಲ್ ಶಾಫ್ಗಳಲ್ಲಿ ಮಾರಾಟವಾಗುತ್ತಿದೆ. ವಿಷಮುಕ್ತ ಆಹಾರಕ್ಕೆ ಭಾರಿ ಬೇಡಿಕೆ ಇದೆ. ಒಬ್ಬ ಮನುಷ್ಯ ದಿನಕ್ಕೆ ಕನಿಷ್ಠ 200 ಗ್ರಾಂ ತರಕಾರಿ ತಿನ್ನುತ್ತಾನೆ. ಅವನಿಗೆ ವಿಷಮುಕ್ತ ಆಹಾರ ಕೊಡುವುದು ನಮ್ಮ ಗುರಿ ಎನ್ನುತ್ತಾರೆ ಸಾಧಕ ಮಾಜಿ ಫೈಲಟ್, ಹಾಲಿ ಕೃಷಿಕ ನಮೀತ್. 
2011 ರಲ್ಲಿ ಸಂಪೂರ್ಣ ವಿಷಮುಕ್ತ ಆಹಾರ ಉತ್ಪಾದಿಸುವ ಗುರಿಯೊಂದಿಗೆ ತಲಕಾಡಿಗೆ ಬಂದ ಇವರು 45 ಎಕರೆ ಪ್ರದೇಶದಲ್ಲಿ ಸಾವಯವ ಕೃಷಿ ಆರಂಭಿಸಿದರು. ಇಂದು ದೇಶದ ನಾನಾ ಭಾಗಗಳಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ವಿಷಮುಕ್ತ ಆಹಾರ ಉತ್ಪಾದಿಸಿ ಗ್ರಾಹಕರಿಗೆ ತಲುಪಿಸುತ್ತಿದ್ದಾರೆ. ತಲಕಾಡಿನ ತೋಟದಲ್ಲಿ ಮೊದಲ ಬಾರಿಗೆ ಈ ಸೀಸನ್ನಲ್ಲಿ ಆರೂವರೆ ಟನ್ ಅನ್ ಪ್ಯಾಶ್ಚರೈಸಡ್,ಅನ್ ಫಿಲ್ಟರ್ಡ್ ಹನಿ ಉತ್ಪಾದಿಸಿದ್ದಾರೆ.
ಹಳೆಯ ನೆನಪಿಗೆ ಜಾರಿದ ನಮೀತ್ : "2011. ನಿಮಗೆಲ್ಲ ನೆನಪಿರಬೇಕು. ಇದೊಂದು ಸಂಪೂರ್ಣ ಕಲ್ಲುಬಂಡೆಗಳಿದ್ದ ಭೂಮಿ. ಅಲ್ಲಿಗೆ ನಮ್ಮ ತಂಡ ಕೃಷಿ ಮಾಡಲು ಬಂತು. ಬಂಡೆಯನ್ನು ಕಿತ್ತು,   ಭೂಮಿಯನ್ನು ಬಗೆದು ಸಮತಟ್ಟು ಮಾಡಿ ಕೃಷಿ ಆರಂಭಿಸಿದೆವು. ಎಲ್ಲರು ನಕ್ಕು ಬಿಟ್ಟರು. ಇಲ್ಲಿ ಸಾವಯವ ಕೃಷಿ ಮಾಡಲು ಆಗಲ್ಲ. ಇದನ್ನು ಮಾರಾಟ ಮಾಡಿ ಇಲ್ಲಿಂದ ಹೊರಡಿ. ಇಲ್ಲಿ ನಾವು ಬತ್ತನೋ, ಕಬ್ಬೋ ಬೆಳೆದುಕೊಳ್ಳುತ್ತೇವೆ ಅಂತ ಹೇಳಿದರು".ಆದರೆ ನಾವು ನಂಬಿದ ಕಾಯಕ ಬಿಡಲಿಲ್ಲ ಎಂದರು ನಮೀತ್ .
ಹಲವಾರು ಭಾರಿ ಸೋತರು ಇಂದು ನಾವು ಗೆದ್ದಿದ್ದೇವೆ. ಭಾರತ ಸಕರ್ಾರದ "ಮೇಕ್ ಇನ್ ಇಂಡಿಯಾ" ಪತ್ರಿಕೆಯಲ್ಲಿ ನಮ್ಮ ಯಶೋಗಾಥೆ ಪ್ರಕಟವಾಗಿದೆ. ತಿ.ನರಸೀಪುರ ತಾಲೂಕು, ತಲಕಾಡು ಹೋಬಳಿಯ ಈ ಸವರ್ೇ ನಂಬರ್ನಲ್ಲಿ ನಾವು ಮಾಡಿದ ಸಾಧನೆಯನ್ನು ಭಾರತ ಸಕರ್ಾರ ಗುರುತಿಸಿದೆ. ಜಗತ್ತಿನ 144 ದೇಶಗಳು ಈ ಹಳ್ಳಿಯ ಕಡೆಗೆ ತಿರುಗಿ ನೋಡುತ್ತಿವೆ.
ಇಲ್ಲಿ ಬೆಳೆದ ಸೊಪ್ಪು, ತರಕಾರಿಗಳು ರಾಷ್ಟ್ರಪತಿ ಭವನ ತಲುಪಿವೆ. ದೇಶದ ಪ್ರತಿಷ್ಠಿತ ಹೋಟೆಲ್, ರೆಸ್ಟೋರೆಂಟ್ಗಳು ಇಲ್ಲಿ ಬೆಳೆದ ತರಕಾರಿ, ಹಣ್ಣುಗಳನ್ನು ಉಪಯೋಗಿಸುತ್ತಿದ್ದಾರೆ.
ನೋ ಪ್ರೆಸ್ಟೀಸೈಡ್, ನೋ ಅರ್ಮೀಸೈಡ್,ನೋ ಕೆಮಿಕಲ್. ಇದು "ಜಿರೋ ಪ್ರೆಸ್ಟೀಸೈಡ್" ಅಗ್ರಿಕಲ್ಚರ್. ಸಾವಯವ, ವಿಷಮುಕ್ತ ಆಹಾರ ಪದಾರ್ಥಗಳನ್ನು ಜಾಗತಿಕ ಗುಣಮಟ್ಟದಲ್ಲಿ ಉತ್ಪಾದಿಸುವ ಮೂಲಕ ದೇಶಕ್ಕೆ ಹೆಮ್ಮೆ ತರುವ ಕೆಲಸಮಾಡಿದ್ದೇವೆ ಎಂದರು.
"ಎಲ್ಲಾ ರೇಸ್ಗಳಲ್ಲೂ ನಾವೇ ಮುಂದೆ ಬರಬೇಕು ಅಂತ ಇಲ್ಲ. ಹಲವಾರು ಬಾರಿ ಸೋತಿದ್ದೇವೆ. ಆದರೂ ಪಂದ್ಯದಲ್ಲಿ ಭಾಗವಹಿಸುವುದು ಮುಖ್ಯ. ಗೆಲುವು, ಸೋಲಲ್ಲ. ಇದನ್ನು ಇಂಡಿಯನ್ ಆರ್ಮಿ ನಮಗೆ ಹೇಳಿಕೊಟ್ಟಿದೆ"
ಇದನ್ನು ಯಾಕೆ ಹೇಳುತ್ತಿದ್ದೇನೆ ಗೊತ್ತಾ?. ಮೊದಲು ರೈತರು ರಾಸಾಯನಿಕ ಬಳಕೆ, ಕ್ರಿಮಿನಾಶಕ ಸಿಂಪರಣೆಯನ್ನು ನಿಲ್ಲಿಸುತ್ತೇವೆ ಅಂತ ಪ್ರತಿಜ್ಞೆ ಮಾಡಬೇಕು.ಅಲ್ಲಿಂದ ಕೃಷಿಯಲ್ಲಿ ನಿಜವಾದ ಗೇಮ್ ಪ್ಲಾನ್ ಆರಂಭವಾಗುತ್ತದೆ. ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡು ಕೃಷಿ ಮಾಡಿದರೆ ಖಂಡಿತಾ ಗೆಲ್ಲಬಹುದು. ಇದಕ್ಕೆ ನಮ್ಮ ತಂಡದ ಸಾಧನೆಯೇ ಸಾಕ್ಷಿ ಎನ್ನುತ್ತಾರೆ.
ನೀರು, ಮಣ್ಣು ರೈತನ ಎರಡು ಕಣ್ಣು : ಸಾವಯವ ಕೃಷಿಗೆ ಮುಖ್ಯವಾಗಿ ಬೇಕಾಗಿರುವುದು ಆರೋಗ್ಯಕರ, ವಿಷಮುಕ್ತವಾದ ಮಣ್ಣು ಮತ್ತು ನೀರು. ಭೂಮಿಯಲ್ಲಿ ಸೂಕ್ಷ್ಮಾಣುಜೀವಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಎರೆ ಗೊಬ್ಬರ, ಕಾಂಪೋಸ್ಟ್ ಗೊಬ್ಬರ. ಸುಭಾಷ್ ಪಾಳೇಕರ್ ಪದ್ಧತಿಯಲ್ಲಿ ಜೀವಾಮೃತ, ಬೀಜಾಮೃತ. ಏನೇ ಮಾಡಿ ರಾಸಾಯನಿಕ ಗೊಬ್ಬರದ ಬಳಕೆ ಮಾತ್ರ ಬೇಡ. ಬೀಸುವ ಗಾಳಿಯಲ್ಲೇ ಶೇಕಡ 76 ರಷ್ಟು ಯೂರಿಯಾ ಇದೆ. ಎನ್ಪಿಕೆ ಸುರಿದು ಭೂಮಿಯನ್ನು ಬರಡು ಮಾಡುವುದನ್ನು ನಿಲ್ಲಿಸಿ ಎಂದು ನಮೀತ್ ಮನವಿ ಮಾಡುತ್ತಾರೆ.
ಒಂದೇ ದಿನದಲ್ಲಿ ಕಾಂಪೋಸ್ಟ್ ಗೊಬ್ಬರವನ್ನು ಬಳಕೆಗೆ ಬರುವಂತೆ ಜೀವಾಣುಗಳನ್ನು ವಿಜ್ಞಾನ ಕಂಡುಹಿಡಿದಿದೆ.ತಾಂತ್ರಿಕತೆಯನ್ನು ಬಳಸಿಕೊಂಡು ಸುಲಭವಾಗಿ ಕೃಷಿ ಮಾಡಬಹುದು.
ಪರಿಸರದಲ್ಲಿ ಮಿತ್ರ ಕೀಟಗಳು ,ಶತ್ರು ಕೀಟಗಳು ಇವೆ. ಕ್ರಿಮಿನಾಶಕ ಸಿಂಪರಣೆಮಾಡಿ ಎರಡನ್ನೂ ಕೊಲ್ಲಬಾರದು. ಊಜಿ ಟ್ರ್ಯಾಪ್, ಗೋಮೂತ್ರ ಸಿಂಪರಣೆ, ಪಂಚಗವ್ಯ, ಬೇವಿನ ಎಣ್ಣೆ, ಬೆಳ್ಳುಳ್ಳಿ ಮತ್ತು ಹಸಿ ಮೆಣಸಿನಕಾಯಿ ಪೇಸ್ಟ್ಮಾಡಿ ಬಳಸಬೇಕು.ಪರಿಸರ ಸ್ನೇಹಿ ನಿಯಂತ್ರಣ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು.
ಮಣ್ಣಿನಲ್ಲಿ ಹೆಚ್ಚು ಹ್ಯೂಮಸ್ ನಿಮರ್ಾಣ ಮಾಡುವ ಮೂಲಕ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಗುಣ ಹೆಚ್ಚಿಸಬೇಕು. ತೋಟದ ಇಳುವರಿ ಹೆಚ್ಚಾಗುವಂತೆ ಮಾಡಲು ಸರಾಗ ಪರಾಗಸ್ಪರ್ಶ ನಡೆಯಲು ಜೇನುನೊಣಗಳನ್ನು ಸಾಕಾಣಿಕೆ ಮಾಡಬೇಕು. ಇದೆಲ್ಲದ್ದರ ಒಟ್ಟು ನೀತಿಪಾಠ ಏನು ಗೊತ್ತಾ ?. ಗೇಮ್ ಪ್ಲಾನ್ ಹೇಗಿರಬೇಕು. ಏನು ಬೆಳೆದರೆ ಹೇಗೆ ಕೃಷಿ ಮಾಡಬೇಕು ಎನ್ನುವುದು ಮೊದಲು ರೈತನಿಗೆ ಗೊತ್ತಿರಬೇಕು ಎನ್ನುವುದೆ ಆಗಿದೆ ಎಂದು ವಿವರಿಸುತ್ತಾರೆ.
ದೇಸಿ ಬೀಜಗಳಿಗೆ ಆದ್ಯತೆ : ದೇಸಿಬೀಜಗಳನ್ನು ಉಳಿಸಿ ಬೆಳೆಸುವುದು ರೈತನ ಆದ್ಯತೆಯಾಗಿಬೇಕು. ತಾತ ಮುತ್ತಾತನ ಕಾಲದಲ್ಲಿ ಮನ್ಸಾಂಟೋ,ಡೂಪ್ಲಾಂಟ್, ಬಾಯರ್, ಹೈಬ್ರಿಡ್ ಬೀಜ ಇರಲಿಲ್ಲ. ಆದರೂ ಮನೆ ತುಂಬ ದವಸಧಾನ್ಯ ಇತ್ತು. ಈಗ ಯಾಕೆ ಅದು ಆಗಲ್ಲ ಎಂದು ನಮೀತ್ ಪ್ರಶ್ನೆ ಮಾಡುತ್ತಾರೆ.
ರೈತ ಸೈನಿಕನಂತೆ ಕೆಲಸ ಮಾಡಬೇಕು. ಹೋರಾಟ, ಚಳವಳಿ, ಹರತಾಳ ಅಂತ ಮಾಡಿಕೊಂಡು ನಿಂತರೆ ಭೂಮಿಯನ್ನು ಯಾರು ನೋಡ್ತಾರೆ. ರೈತ ಅಂದರೆ ಯಾರು ?. ಜಮೀನಿನಲ್ಲಿ ಕೂಲಿ ಕೆಲಸ ಮಾಡುವವನಾ, ತರಕಾರಿ, ಬತ್ತ ಬೆಳೆಯುವವನಾ, ಹಗಲು ರಾತ್ರಿಗಳೆನ್ನದೆ ಜಮೀನಿನಲ್ಲಿ ಕತ್ತೆ ಥರ ದುಡಿಯುವವನಾ.? ಅಲ್ಲಾ. ಜಪಾನಿನ ಫಾರ್ಮರ್ ಒಬ್ಬ ನನಗೆ ರೈತ ಎಂಬ ಪದಕ್ಕೆ ಅರ್ಥ ಹೇಳಿಕೊಟ್ಟ. ಎಂತಹ ಸುಂದರವಾದ ಅರ್ಥ ಅದು. ರೈತನೆಂದರೆ ಕಲೆಗಾರ, ವಿಜ್ಞಾನಿ,ಎಂಜಿನೀಯರ್,ವೈದ್ಯ, ಪೋಷಕ, ಕೇರ್ ಟೇಕರ್ ಆಫ್ ಆಲ್. ಇದೆಲ್ಲವನ್ನು ಒಂದು ಕಡೆ ತಂದು ಬದುಕಿ ತೋರಿಸುವವನು ರೈತ. ನಮ್ಮ ದೇಶ, ನಮ್ಮ ಆರೋಗ್ಯ, ನಮ್ಮ ಮಣ್ಣು, ನೀರು ಇದೆಲ್ಲದ್ದರ ಬಗ್ಗೆ ಅಭಿಮಾನ ಇರುವವನು ರೈತ. ವಿಷಮುಕ್ತ ಆಹಾರ, ವಿಷಮುಕ್ತ ನೆಲ, ಜಲ ಕಾಪಾಡುವುದು ರೈತನ ಕರ್ತವ್ಯ. ಆದರೆ ನಮ್ಮ ರೈತರು ಸೋಮಾರಿಗಳು. ಪ್ರಾಮಾಣಿಕ ಪ್ರಯತ್ನ ಮಾಡಲ್ಲ. ರೈತರು ಮೂರ್ಖರಲ್ಲ. ಅತಿ ಬುದ್ಧಿವಂತರು. ಆದರೆ ಎಲ್ಲಿ, ಯಾವಾಗ ತಮ್ಮ ಬುದ್ಧಿಯನ್ನು ಬಳಸಬೇಕು ಎನ್ನುವುದು ಅವರಿಗೆ ಗೊತ್ತಿಲ್ಲಾ" ಎಂದು ಹೇಳುವ ಮೂಲಕ ನಮೀತ್ ರೈತರನ್ನು ತರಾಟೆಗೆ ತೆಗೆದುಕೊಂಡರು.
ನಮಗೆ ಭೂಮಿ ಇದೆ.ಸಂಸಾರ ಇದೆ. ಸಣ್ಣಪುಟ್ಟ ಆಸೆಗಳೂ ಇದೆ. ನಮ್ಮ ಸ್ವರ್ಗ ನಮ್ಮಕೈಲಿದೆ. ನರಕವೂ ನಮ್ಮ ಕೈಯಲ್ಲೇ ಇದೆ. ಆಯ್ಕೆ ನಮ್ಮದು. ಪ್ರತಿದಿನ ರಸ್ತೆ ತಡೆ. ಪ್ರತಿಭಟನೆ, ಸಕರ್ಾರದ ವಿರುದ್ಧ, ಕೆಇಬಿ ವಿರುದ್ಧ ಪ್ರತಿಭಟನೆ ಯಾಕೆ ಬೇಕು ?. ಯಾರಾದರೂ ಬಂದು ನಮಗೆ ಇಂತದ್ದೇ ಬೆಳೆ ಬೆಳಿರೀ, ಅದನ್ನ ಬೆಳಿಬೇಡಿ ಅಂತ ಹೇಳಿದ್ದಾರಾ. ಇಲ್ಲಾ.
ನಾನೊಬ್ಬ ಪೈಲಟ್. ಎರೋಪ್ಲೈನ್ ಡ್ರೈವರ್. ಕೃಷಿ ಬಗ್ಗೆ ಏನೂ ಗೊತ್ತಿಲ್ಲ. ಆದರೂ ರೈತರನ್ನು ನೋಡಿ, ಇಂಟರ್ ನೆಟ್ ನೋಡಿ ಇಷ್ಟೆಲ್ಲಾ ಸಾಧನೆ ಮಾಡಿದ್ದೇನೆ. ನಾನು ಇದನೆಲ್ಲಾ ಮಾಡಿ ತೋರಿಸಲು ಈ ಹಳ್ಳಿಗೆ ದೂರದ ಉತ್ತರ್ಖಾಂಡ್ ನಿಂದ ಬರಬೇಕಾ ?. ಇಲ್ಲಿನ ರೈತರೇ ಮಾಡಲಿ. ಇಂಟರ್ನೆಟ್ ಇದೆ. ಮಾಹಿತಿ ಸಿಗುತ್ತದೆ ಎಂದು ಹೇಳುವಾಗ ಸೋಮಾರಿ ರೈತರ ಮೇಲೆ ಅವರಿಗಿರುವ ಸಿಟ್ಟು ಸ್ಫೋಟವಾದಂತೆ ಕಾಣುತ್ತಿತ್ತು.
ಕೃಷಿಕ ಸುಬೇದಾರ್ ಪಾಟೀಲ್ ಹೇಳ್ತಾ ಇದ್ರು "ಸಾಬ್ ದೇಶಸೇವಾ ಅಲ್ಲಿ ಮುಗಿತು. ಇಲ್ಲಿ ಆರಂಭವಾಗಿದೆ" ಅಂತ. ಕುಂಬಾರನಿಗೆ ಮಡಿಕೆ ಮಾಡಲು ಏನು ಬೇಕು?. ಹದವಾದ ತೇವಾ ಇರುವ ಮಣ್ಣು ಬೇಕು. ಹಾಗೆ ಕೃಷಿ ಮಾಡಲು ಆಸಕ್ತಿ ಬೇಕು. ನಿಮ್ಮಲ್ಲಿ ತೇವನ್ನೂ ಇಲ್ಲ, ಹದವೂ ಇಲ್ಲ. ರೈತರಿಗೆ ಕೃಷಿ ಮಾಡಿ ಅಂತ ಹೇಳಿದರೆ ಪ್ರಯೋಜನವೂ ಇಲ್ಲ ಎಂದು ರೈತರನ್ನು ತರಾಟೆಗೆ ತೆಗೆದುಕೊಂಡರು.
ನಮ್ಮ ದೇಶಕ್ಕೆ ಬೇಕಾದ ತೊಗರಿ ಬೇಳೆ ಕೆನಡಾದಿಂದ ಬರುತ್ತದೆ.ಕೊತ್ತಂಬರಿ ರಷ್ಯಾದಿಂದ ಬರುತ್ತದೆ. ಸೇಬು ಅಮೇರಿಕಾದಿಂದ ಬರುತ್ತೆ.ಇದನೆಲ್ಲಾ ಬೆಳೆಯೋಕೆ ನಮ್ಮಲ್ಲಿ ಭೂಮಿ ಇಲ್ವಾ. ಧಮ್ ಇಲ್ವಾ.
ವಿದೇಶದ ಜನ ಉದ್ಧಾರ ಆಗ್ತಾರೆ, ನಾವ್ಯಾಕೆ ಆಗಲ್ಲ.ನಮ್ಮ ಸಕರ್ಾರಗಳಿಗೆ ನಾವು ಕೃಷಿಯಿಂದ ದೂರವಾಗೋದೆ ಬೇಕು. ಅದು ಅವರ ಗೇಮ್ ಫ್ಲಾನ್.ನಮ್ಮದು ಒಂದು ಗೇಮ್ ಫ್ಲಾನ್ ಇರಬೇಕಲ್ವಾ.
ಸಿಕ್ಕಿಂ ಇಂದು ಭಾರತ ದೇಶದ ಮೊದಲ (ಆಗ್ಯರ್ಾನಿಕ್ ಸ್ಟೇಟ್) ಸಾವಯವ ರಾಜ್ಯ ಆಗಿದೆ. ನಮಗೆ ಹೆಮ್ಮ ಅನಿಸುತ್ತದೆ. ತಮಿಳುನಾಡಿನಾದ್ಯಂತ ಉಪ್ಪಿನಕಾಯಿ ತಯಾರಿಸುವ, ಆಂಧ್ರ ಪ್ರದೇಶದಲ್ಲಿ ಹಪ್ಪಳ ತಯಾರುಮಾಡುವ ಗುಡಿ ಕೈಗಾರಿಕೆಗಳಿವೆ. ರಾಜಸ್ಥಾನದಲ್ಲಿ ಅಸಂಖ್ಯಾತ "ನಾರಿ ಸೇವಾ ಕೇಂದ್ರ"ಗಳಿವೆ. ನಮಲ್ಲಿ ಯಾಕೆ ಇಲ್ಲ ಎಂದು ಮೌನಕ್ಕೆ ಜಾರುತ್ತಾರೆ.
ನಮ್ಮ ರೈತರು ಸಂಪೂರ್ಣ ಸಾವಯವದಲ್ಲಿ ಟೊಮಟೊ ಬೆಳೆದು ಫ್ಯಾಕ್ಟರಿಮಾಡಿ ಕ್ಯಾಚಫ್ ತಯಾರಿಸಲಿ. ಕಿಸಾನ್ ಕಂಪನಿಯವರು ವಿಷಮುಕ್ತ ಪದಾರ್ಥ ಖರೀದಿಸಲು ನಾಳೆ ಬೆಳಗ್ಗೆ ರೈತರ ಫ್ಯಾಕ್ಟರಿ ಮುಂದೆ ನಿಂತಿರುತ್ತಾರೆ. ರೈತರು ಆಗ್ಯರ್ಾನಿಕ್ ಫಾರ್ಮರ್ ಪ್ರೊಡ್ಯುಸರ್ ಕಂಪನಿ ಮಾಡಿಕೊಂಡು ಸಾವಯವ ಆಹಾರ ಬೆಳೆಯಬೇಕು. ಜಗತ್ತೆ ಇಂದು ಮಾರುಕಟ್ಟೆಯಾಗಿ ರೂಪುಗೊಂಡಿದೆ. ಬೇಡಿಕೆಯೂ ಇದೆ ಎನ್ನುತ್ತಾರೆ.
ವೈವಿದ್ಯತೆ ಇದ್ದರೆ ಮಾರುಕಟ್ಟೆ : ನಿವೃತ್ತ ಸೈನಿಕರು ಬಂದು ಇಲ್ಲಿ ವಿಷಮುಕ್ತ ತರಕಾರಿ ಬೆಳಿತಾರೆ. ರೈತರಿಂದ ಯಾಕೆ ಆಗ್ತಾ ಇಲ್ಲಾ. ಟೋಮಟೋ ಬೆಳೆದು ಒಬ್ಬ ಒಂದು ಲಕ್ಷ ಸಂಪಾದನೆ ಮಾಡಿದರೆ ಎಲ್ಲರೂ ಟೊಮಟೊ ಹಾಕ್ತಾರೆ. ರೇಟ್ ಬಿದ್ದ್ ಹೋಗುತ್ತೆ. ಬೀದಿಗೆ ಸುರಿತಾರೆ. ಇದು ಬೇಕಾ. ಒಬ್ಬರು ಟೊಮಟೊ ಬೆಳೆದರೆ, ಇನ್ನೊಬ್ಬರು ಕೊತಂಬರಿ, ಮತ್ತೊಬ್ಬ ಸೌತೆಕಾಯಿ, ಇನ್ನೊಬ್ಬ ಕ್ಯಾರೆಟ್, ಮೂಲಂಗಿ ಎಲ್ಲಾ ಒಂದು ಕಡೆ ಸಿಗುತ್ತೆ ಅಂದರೆ ಗ್ರಾಹಕರು ಹುಡುಕಿಕೊಂಡು ಬರುತ್ತಾರೆ. 50 ಜನ 50 ಬೇರೆ ಬೇರೆ ರೀತಿ ತರಕಾರಿ ಸೊಪ್ಪು ಬೆಳಸಲಿ. ಮಾರುಕಟ್ಟೆ ಮತ್ತು ಬೇಡಿಕೆ ತಾನಾಗೆ ಸೃಷ್ಠಿಯಾಗುತ್ತೆ.
ನಮ್ಮಲ್ಲಿ 40 ತಳಿ ಟಟೊಮಟೊ ಇದೆ. ನಾವು ಚೆರ್ರಿ ಟೊಮಟೊ ಬೆಳೆದಾಗ ಇಲ್ಲಿನ ಜನ ತಿಪ್ಪೆ ಟೊಮಟೊ ಅಂತ ನಕ್ಕರು. ನಾವು ಅದನ್ನ ಕೆಜಿಗೆ 60 ರೂಪಾಯಿಗೆ ಮಾರಾಟ ಮಾಡಿದ್ವಿ ಎಂದರು.
ಒಂದು ಟೊಮಟೊ 50 ಗ್ರಾಂ ನಿಂದ ಶುರುವಾಗಿ 120 ಗ್ರಾಂ, 200 ಗ್ರಾಂ,350 ಗ್ರಾಂ, 850 ಗ್ರಾಂ ಅಲ್ಲದೆ ಒಂದು ಜಂಬೋ ಟೊಮಟೊ 1.9 ಗ್ರಾಂ ವರೆಗೆ ಇಲ್ಲಿ ಬೆಳಿದ್ದಿದ್ದಾರೆ.
ಒಂದು ಕುಂಬಳಕಾಯಿಯನ್ನು 300 ಕೆಜಿ ವರೆಗೆ ಬೆಳೆದು ಲಿಮ್ಕಾ, ಗಿನ್ನಿಸ್ ಬುಕ್ ರೆಕಾಡರ್್ಗೆ ಕಳುಹಿಸಿದ್ದಾರೆ.
ಜಮೀನಿನಲ್ಲಿ ತಾಂತ್ರಿಕತೆ ಬಳಸುವಾಗ ಅತ್ಯಂತ ಕಡಿಮೆ ಖಚರ್ಿನಲ್ಲಿ, ಹೆಚ್ಚು ಆದಾಯ ಬರುವಂತೆ ಮಾಡಿಕೊಳ್ಳಬೇಕು. ಅದಕ್ಕೆ  ರೈತ ಎಂಜಿಯರ್ ಆಗಬೇಕು. ತಾಲ್ ಮಹಲ್, ಎಲಿಪೆಂಟಾ ಗುಹೆ, ಅರಮನೆಗಳನ್ನು ಕಟ್ಟಿದ ದೇಶ ನಮ್ಮದು. ಅಂತಹ ಸಾಮಥ್ರ್ಯ ಇರುವ ನಾಡಿನಲ್ಲಿ ಹುಟ್ಟಿ ಸುಲಭ ಸರಳ ತಾಂತ್ರಿಕತೆ ಅಳವಡಿಸಿಕೊಳ್ಳುವುದನ್ನು ರೈತರು ಕಲಿಯದಿದ್ದರೆ ಅವರನ್ನು ಯಾರೂ ಉದ್ಧಾರ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ನಮೀತ್.
ದೇಶದ ನಾನಾ ಭಾಗಗಳಲ್ಲಿ ಸಿಗುವ ದೇಸಿಬೀಜ ಸಂರಕ್ಷಣೆಯನ್ನು ಮಾಡುತ್ತಿರುವ ನಮೀತ್ ಮತ್ತು ತಂಡ ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದನ್ನು ಸಾಬೀತು ಮಾಡಿದೆ. ಇಂಟರ್ ನೆಟ್ನಲ್ಲಿ ಫಸ್ಟ್ ಆಗ್ರೋ ಅಂತ ಟೈಪ್ ಮಾಡಿದರೆ ಕಂಪನಿಯ ಮತ್ತಷ್ಟು ಯಶೋಗಾಥೆಗಳನ್ನು ನೀವು ನೋಡಬಹುದು. ಮುಡುಕುತೊರೆಯ ಮಲ್ಲಿಕಾಜರ್ುನಸ್ವಾಮಿ ಬೆಟ್ಟದ ಎಡ ಭಾಗಕ್ಕೆ ತಿರುಗಿದರೆ "ಕಾವೇರಿ ಕ್ಲಸ್ಟರ್" ಎಂಬ ಜಾಗತಿಕ ಗುಣಮಟ್ಟದಲ್ಲಿ ಸಂಪೂರ್ಣ ವಿಷಮುಕ್ತ ಸೊಪ್ಪು ತರಕಾರಿ ಉತ್ಪಾದನೆ ಮಾಡುತ್ತಿರುವ ತೋಟ ಸಿಗುತ್ತದೆ. ಆಸಕ್ತರು ಹೋಗಿ ನೋಡಬಹುದು.ಹೆಚ್ಚಿನ ಮಾಹಿತಿಗೆ ಫಸ್ಟ್ ಆಗ್ರೋ ಎಂಬ ವೆಬ್ ಸೈಟ್ ನೋಡಿ. ಫೇಸ್ ಬುಕ್ನಲ್ಲೂ ಪಸ್ಟ್ ಆಗ್ರೋ ಪೇಜ್ ಲಭ್ಯವಿದೆ.