vaddagere.bloogspot.com

ಭಾನುವಾರ, ಅಕ್ಟೋಬರ್ 30, 2016

ಗುಡ್ಡದ ತಪ್ಪಲಿನ "ಬಿಲ್ವ ಫಾರಂ' ತೋಟಕಟ್ಟಿದ ಕನಸುಗಾರ
ಚಾಮರಾಜನಗರ ಜಿಲ್ಲೆಯಲ್ಲಿ ದಾಳಿಂಬೆ ಬೆಳೆದ ಉತ್ಸಾಹಿ ಯುವಕರು
ಚಾಮರಾಜನಗರ : ಪ್ರಯೋಗಶೀಲ ಮನಸ್ಸು ಮತ್ತು ಕೃಷಿ ಕಾಳಜಿ ಇರುವ ಯುವಕರ ತಂಡವೊಂದು ಮನಸ್ಸು ಮಾಡಿದರೆ ಬರದಲ್ಲೂ ಬದುಕಬಹುದು ಎನ್ನುವುದನ್ನು ಸಾಧಿಸಿ ತೋರಿಸಿದೆ. ಚಾಮರಾಜನಗರ ತಾಲೂಕಿನಲ್ಲಿ ದಾಳಿಂಬೆ ಬೆಳೆದು ಯಶಸ್ವಿಯಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಿಂದ ಮಳೆ ಇಲ್ಲ. ಜನಜಾನುವಾರುಗಳಿಗೆ ಕುಡಿಯುವ ನೀರಿಗೂ ತೊಂದರೆ. ಮಳೆಯನ್ನೆ ನಂಬಿ ಬೇಸಾಯ ಮಾಡುವ ಜಿಲ್ಲೆಯ ರೈತರು ಕೃಷಿಯಿಂದ ವಿಮುಖರಾಗಿ ವಲಸೆ ಹೋಗಬೇಕಾದ ಪರಿಸ್ಥಿತಿ ಇದೆ. ಇಂತಹ ದಿಕ್ಕೆಟ್ಟ ಪರಿಸ್ಥಿತಿಯ ನಡುವೆಯೂ ಬೋರ್ವೆಲ್ನಲ್ಲಿ ಬರುತ್ತಿರುವ ಅಲ್ಪಸ್ವಲ್ಪ ನೀರನ್ನು ಬಳಸಿಕೊಂಡು ಹೊಸ ಪ್ರಯೋಗಕ್ಕೆ ಮುಂದಾದ ಯುವ ರೈತ ಮಿತ್ರರು ಬಿಸಿಲ ನಾಡಿನಲ್ಲಿ ದಾಳಿಂಬೆ ಬೆಳೆದು ಸೈ ಎನಿಸಿಕೊಂಡಿದ್ದಾರೆ.
ಬಿಲ್ವಮಹೇಶ್, ಯರಗನಹಳ್ಳಿಯ ಮಲ್ಲೇಶ್, ಅರಕಲವಾಡಿಯ ಮಹೇಶ್, ವಡಗಲ್ಪುರದ ಹುಂಡಿಯ ಶಿವಕುಮಾರ್ ಮತ್ತು ವೃಷಬೇಂದ್ರ ಎಂಬ ಉತ್ಸಾಹಿ ಯುವಕರು ದಾಳಿಂಬೆ ಕೃಷಿಯಲ್ಲಿ ಪ್ರಯೋಗಶೀಲತೆ ಮೆರೆದು ಜಿಲ್ಲೆಗೆ ಮಾದರಿಯಾಗಿದ್ದಾರೆ.
ಜಿಲ್ಲೆಯಲ್ಲಿ ಸಾಮಾನ್ಯವಾಗಿ ಹುರುಳಿ,ಶೇಂಗಾ,ರಾಗಿ, ಜೋಳ ಮತ್ತಿತರ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿತ್ತು. ಇಲ್ಲಿನ ರೈತರು ತಮಿಳುನಾಡು ರೈತರರಿಂದ ಪ್ರಭಾವಿತರಾಗಿ ವಾಣಿಜ್ಯ ಬೆಳೆಗಳಾದ ಬಾಳೆ,ಅರಿಶಿನ,ಸಾಂಬಾರ್ ಈರುಳ್ಳಿ ಬೆಳೆಯ ತೊಡಗಿದರು. ಸಂಪ್ರಾದಾಯಿಕ ಬೆಳೆಗಳಿಗೆ ವಿದಾಯ ಹೇಳಿ ವಾಣಿಜ್ಯ ಬೆಳೆಗಳನ್ನು ಅಪ್ಪಿಕೊಂಡರು. ಬೆಲೆಯ ಏರಿಳಿತ, ಮಳೆಯ ಕೊರತೆಯ ಪರಿಣಾಮ ನಷ್ಟ ಅನುಭವಿಸಿದರು. ಈ ನಡುವೆ ಟೊಮೊಟೊ,ದಪ್ಪ ಮೆಣಸಿನಕಾಯಿ,ಕಲ್ಲಂಗಡಿಯಂತಹ ಅಲ್ಪಾವಧಿ ತರಕಾರಿ ಮತ್ತು ಹಣ್ಣಿನ ಬೆಳೆಗಳು ರೈತರ ಕೈ ಹಿಡಿದವಾದರೂ ಅವು ಕೈಕೊಟ್ಟವು. ಮಾರುಕಟ್ಟೆಯ ಹಾವು ಏಣಿ ಆಟದಲ್ಲಿ ಆಥರ್ಿಕವಾಗಿ ಮೇಲಕ್ಕೇರಿದ ರೈತರು ಸರ್ರನೇ ಕೆಳಗಿಳಿದು ಸಂಕಷ್ಟದಲ್ಲಿ ಸಿಲುಕಿಕೊಳ್ಳುವಂತಾಯಿತು.
ಕೃಷಿಯಿಂದ ಸಾಕಾಷ್ಟು ನಷ್ಟ ಅನುಭವಿಸಿರುವ ಬಹುತೇಕ ರೈತರು ಜಮೀನು ಮಾರಾಟ ಮಾಡುವ ಇಲ್ಲಾ ಪಾಳು ಬಿಡುವ ಹಂತ ತಲುಪಿದರು. ಇಂತಹ ಸಂಕಷ್ಟದ ಸ್ಥಿಯಲ್ಲಿ ತಾಲೂಕಿನ ಯುವಕರ ತಂಡ ಮತ್ತೊಂದು ಬಿಸಲನಾಡು ಚಿತ್ರದುರ್ಗ ಜಿಲ್ಲೆಯ ಕಡೆಗೆ ಕೃಷಿ ಅಧ್ಯಯನ ಪ್ರವಾಸ ಹೊರಟಿತು. ಅಲ್ಲಿನ ರೈತರು ದಾಳಿಂಬೆ ಬೆಳೆದು ಯಶಸ್ವಿಯಾದ ಯಶೋಗಾಥೆಗಳನ್ನು ನೋಡಿ,ಅಲ್ಲಿನ ತೋಟದ ಮಾಲೀಕರನ್ನು ಕಂಡು ಮಾತನಾಡಿಸಿ,ಅವರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಚಾಮರಾಜನಗರ ತಾಲೂಕಿನಲ್ಲೂ ದಾಳಿಂಬೆ ಬೆಳೆದು ಯಶಸ್ವಿಯಾಗಿದೆ. ಈ ತಂಡದಲ್ಲಿ ಒಬ್ಬರಾದ ಯುವ ಉತ್ಸಾಹಿ ಕೃಷಿಕ ಬಿಲ್ವಮಹೇಶ್ ಈ ವಾರದ ಬಂಗಾರದ ಮನುಷ್ಯ. ಅವರು ಕಟ್ಟಿದ "ಬಿಲ್ವ ಫಾರಂ" ಎಂಬ ಹಸಿರು ತೋಟದ ಬಗ್ಗೆ ನಿಮಗೆ ಹೇಳಬೇಕು.
ಶಿವಶಂಕರ್ ಮತ್ತು ಸುರೇಶ್ ಎಂಬ ಗೆಳೆಯರೊಡಗೂಡಿ ಚಿತ್ರದುರ್ಗ ಜಿಲ್ಲೆಯಲ್ಲಿ ಕೃಷಿ ಪ್ರವಾಸಮಾಡಿದ ಮಹೇಶ್ ಧೈರ್ಯಮಾಡಿ ದಾಳಿಂಬೆ ಬೆಳೆಯಲು ಮುಂದಾದರು. ಇವರನ್ನು ನೋಡಿದ ಗೆಳೆಯರು ದಾಳಿಂಬೆ ಬೆಳೆಯಲು ಆರಂಭಿಸಿದರು.
ಈಗ ದಾಳಿಂಬೆ ಫಸಲು ಬರಲು ಶುರುವಾಗಿದೆ. ಮೊದಲ ಕೊಯ್ಲಿನಲ್ಲೆ ದಾಳಿಂಬೆ ನಾಟಿ ಮತ್ತು ಬೇಸಾಯಕ್ಕೆ ಮಾಡಿದ ಖಚರ್ು ಬಹುತೇಕ ಬಂದಿದೆ ಎನ್ನುತ್ತಾರೆ ಮಹೇಶ್. ಈ ವರ್ಷ ವೃಷಬೇಂದ್ರ 23 ಟನ್, ಶಿವಕುಮಾರ್ 13 ಟನ್, ಮಹೇಶ್ 6 ಟನ್, ಮಲ್ಲೇಶ್ 12 ಟನ್ ಹಾಗೂ ಬಿಲ್ವ ಮಹೇಶ್ 5 ಟನ್ ದಾಳಿಂಬೆ ಇಳುವರಿ ಪಡೆದಿದ್ದಾರೆ. ಮೊದಲ ಕ್ವಾಲಿಟಿ ಹಣ್ಣುಗಳನ್ನು ಕೆಜಿಗೆ 60 ರೂ., ಎರಡನೇ ಕ್ವಾಲಿಟಿ ಹಣ್ಣುಗಳನ್ನು ಕೆಜಿಗೆ 30 ರೂಪಾಯಿಯಂತೆ ಮಾರಾಟವಾಗಿದೆ.
ಜಿಲ್ಲೆಯ ವಾತಾವರಣ ದಾಳಿಂಬೆ ಬೆಳೆಯಲು ಸೂಕ್ತವಾಗಿದ್ದು, ತಮ್ಮ ಅನುಭವದ ಪ್ರಕಾರ ರೈತರು ಹನಿ ನೀರಾವರಿ ಮೂಲಕ ಕಡಿಮೆ ನೀರಿನಲ್ಲಿ ವೈಜ್ಞಾನಿಕ ರೀತಿಯಲ್ಲಿ ದಾಳಿಂಬೆ ಕೃಷಿ ಮಾಡಿದರೆ ಉತ್ತಮ ಆದಾಯ ನಿಶ್ಚಿತವಾಗಿ ಬರುತ್ತದೆ ಎಂದು ಮಹೇಶ್ ಹೇಳುತ್ತಾರೆ. ರಾಸಾಯನಿಕ ಕೃಷಿ ಮಾಡಿದರೆ ಖಚರ್ು ಹೆಚ್ಚು. ಆದಾಯ ಇದ್ದರೂ ಆರಂಭದ ಖರ್ಚನ್ನು ಸಣ್ಣ ರೈತರು ತಡೆದುಕೊಳ್ಳುವುದು ಕಷ್ಟ. ಆದ್ದರಿಂದ ನೈಸಗರ್ಿಕ ರೀತಿಯಲ್ಲಿ ದಾಳಿಂಬೆ ಬೆಳೆಯಲು ರೈತರು ಮುಂದಾಗಬೇಕು. ಆಗ ಖಚರ್ು ಕಡಿಮೆ ಆದಾಯವೂ ಗ್ಯಾರಂಟಿ ಎಂದು ಸಲಹೆ ನೀಡುತ್ತಾರೆ.
ಕಲ್ಲರಳಿ ಹೂವಾದ ಪರಿ : ಅದೊಂದು ಕಲ್ಲುಗುಡ್ಡ ಕುರುಚಲು ಗಿಡಗಳೆ ತುಂಬಿರುವ ಬೆಟ್ಟ. ಅದರ ಹೆಸರು ಎಡಬೆಟ್ಟ. ಸಮೀಪದಲ್ಲೆ ಸಕರ್ಾರಿ ವೈದ್ಯಕೀಯ ಕಾಲೇಜು ಇದೆ. ಗುಡ್ಡದಲ್ಲಿ ಆಗಾಗ ಚಿರತೆ, ಕರಡಿ, ಕಾಡುಹಂದಿಗಳಂತಹ ವನ್ಯಪ್ರಾಣಿಳು ಕಾಣಿಸಿಕೊಳ್ಳುತ್ತವೆ. ಇಂತಹ ಗುಡ್ಡದ ತಪ್ಪಲಿನಲ್ಲಿ ಹಳ್ಳ ಕೊರಕಲನ್ನೆಲ್ಲ ಮುಚ್ಚಿ, ಸಾಧ್ಯವಾದಷ್ಟು ಸಮತಟ್ಟಾಗಿ ಮಾಡಿಕೊಂಡು ಕಳೆದ ಒಂಭತ್ತು ವರ್ಷಗಳಿಂದ ಕೃಷಿಮಾಡುತ್ತಾ ಗುಡ್ಡವನ್ನು ಹಸಿರೀಕರಣ ಮಾಡಿರುವ ಮಹೇಶನ ಸಾಹಸ ಎಂತಹವರಲ್ಲೂ ಅಚ್ಚರಿ ಮೂಡಿಸುತ್ತದೆ.
ಎಡಬೆಟ್ಟದ ಬುಡದಲ್ಲಿ ಕಾಶ್ಮಿರದ ಸೇಬು ಬೆಳೆಯುವ ಈ ಹುಡುಗನ ಆಸಕ್ತಿ ಕೃಷಿ ಮೇಲಿನ ಪ್ರೀತಿ ಮತ್ತು ಬದ್ಧತೆಗೆ ಸಾಕ್ಷಿಯಂತಿದೆ. ಕಾಡು ಗಿಡಗಳು ಬೆಳೆಯಲು ಕಷ್ಟಸಾಧ್ಯವಾಗಿರುವ ಭೂಮಿಯಲ್ಲೀಗ ಮಂಡ್ಯದ ಲೋಕಸರದಲ್ಲಿರುವ ತೆಂಗು ಅಭಿವೃದ್ಧಿ ಮಂಡಳಿಯಿಂದ ತಂದು ಹಾಕಿರುವ 400 ಎಳನೀರು ತೆಂಗು, ತಿಪಟೂರು ಟಾಲ್ ತಳಿಯ 200 ತೆಂಗು , ಜೈನ್ ಇರಿಗೇಷನ್ ಕಂಪನಿಯವರು ಕೊಯಮತ್ತೂರು ಸಮೀಪ ಮಾಡಿರುವ ಅಂಗಾಂಶ ಕೃಷಿ ನರ್ಸರಿಯಿಂದ ತಂದು ಹಾಕಿರುವ 900 ದಾಳಿಂಬೆ, ಅಂಜೂರ,ದ್ರಾಕ್ಷಿ, ಬೆಟ್ಟದನೆಲ್ಲಿ,ಕಾಶ್ಮಿರದ ಸೇಬು, ನೇರಳೆ,ವಾಟರ್ ಆಫಲ್,ಗಜನಿಂಬೆ,ಹಲಸು,ಬಿದಿರು, ಅಮಟೆಕಾಯಿ, ಮೂಸಂಬಿ,ಕಿತ್ತಳೆ, ಸಂಪಿಗೆ, ಫ್ಯಾಶನ್ ಜ್ಯೂಸ್ ಪ್ರೂಟ್, ನುಗ್ಗೆ, ಪಪ್ಪಾಯ ಇಂತಹ ನೂರಾರು ಹಣ್ಣಿನ ಗಿಡಗಳಿವೆ. ಆರು ಮತ್ತು ಎಂಟು ಅಡಿ ಅಂತರದಲ್ಲಿ 100 ಬಾದಾಮಿ ಮಾವಿನ ಗಿಡಗಳನ್ನು ಹಾಕಿದ್ದು ಕಡಿಮೆ ಜಾಗದಲ್ಲಿ ಹೆಚ್ಚು ಗಿಡಗಳನ್ನು ನೆಡಲಾಗಿದೆ.
ಕೃಷಿ ಅಂದ್ರೆ ಇಷ್ಟ : ಕಮರವಾಡಿಯ ನಿವೃತ್ತ ಶಿಕ್ಷಕ ಎಂ.ಗುರುಮಲ್ಲಪ್ಪ ಮತ್ತು ಮುನಿಂದ್ರಮ್ಮ ಅವರ ಮಗನಾದ ಮಹೇಶ್ ಓದಿದ್ದು ಡಿ.ಫಾಮರ್ಾ. ದೂರ ಶಿಕ್ಷಣದಲ್ಲಿ ಎಂ.ಎ.ಸಮಾಜ ಶಾಸ್ತ್ರಪದವಿ. ಸ್ವಲ್ಪಕಾಲ ಗಣಿ ಉದ್ಯಮದಲ್ಲೂ ತೊಡಗಿಸಿಕೊಂಡು ಕರಿಕಲ್ಲು ವ್ಯಾಪಾರ ಮಾಡಿದರು. ನಂತರ ಸಕರ್ಾರದ ಪಾಲಿಸಿಗಳಿಂದ ಜಿಲ್ಲೆಯಲ್ಲಿ ಗಣಿ ಉದ್ಯಮಕ್ಕೆ ತೊಂದರೆಯಾಯಿತು. ಇದರಿಂದಾಗಿ ಅದನ್ನು ಬಿಟ್ಟು ಸಣ್ಣಪುಟ್ಟ ವ್ಯಾಪಾರಗಳಲ್ಲಿ ತೊಡಗಿಸಿಕೊಂಡು ಪ್ರಧಾನವಾಗಿ ಕೃಷಿ ಮಾಡಲು ಮುಂದಾದೆ ಎನ್ನುತ್ತಾರೆ.
 ನಮ್ಮದು ಮೂಲತಃ ಕೃಷಿಕರ ಕುಟುಂಬ. ಕಮರವಾಡಿಯಲ್ಲಿ ನಮಗೆ ಪಿತ್ರಾಜರ್ಿತವಾಗಿ ಬಂದ ಸ್ವಲ್ಪ ಜಮೀನು ಇತ್ತು. ಆದರೆ ಅಲ್ಲಿ ಕೃಷಿ ಮಾಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಚಾಮರಾಜನಗರ ಸಮೀಪ ಉತ್ತುವಳ್ಳಿಯ ಎಡಬೆಟ್ಟದ ಬುಡದಲ್ಲಿ 2007 ರಲ್ಲಿ 9.5 ಎಕರೆ ಕಲ್ಲುಮಂಟಿ ಭೂಮಿ ಖರೀದಿಸಿ ತೋಟಕಟ್ಟಲು ಮುಂದಾದೆ. ಇದಲ್ಲದೆ ಮೈಸೂರು ತಾಲೂಕು ಆಯರಹಳ್ಳಿಯಲ್ಲೂ ಅಡಿಕೆ ತೋಟ ಮಾಡುತ್ತಿದ್ದೇನೆ. ಯಳಳಮದೂರು ತಾಲೂಕು ಕೆಸ್ತೂರಿನಲ್ಲೂ ಜಮೀನು ಇದೆ. ಎಂತದ್ದೆ ಚಿಂತೆ ಇದ್ದರೂ ಎಡಬೆಟ್ಟದ ತೋಟಕ್ಕೆ ಬಂದರೆ ಎಲ್ಲವೂ ದೂರಾಗಿ ನೆಮ್ಮದಿಯಿಂದ ಆಯಾಗಿ ಇದ್ದು ಬಿಡುತ್ತೇನೆ. ಕೃಷಿಯನ್ನು ಒಂದು ಉದ್ಯಮ ಎಂಬಂತೆ ನಾನು ನೋಡುತ್ತೇನೆ, ಹಾಗಾಗಿ ಕೃಷಿಯಿಂದ ನಷ್ಟ ಅನುಭವಿಸಿಲ್ಲ.ಬೇಸಾಯಕ್ಕೆ ಹಣ ಹಾಕಿ ಹಣ ಮಾಡಿದ್ದೇನೆ.ಕೃಷಿಯನ್ನೆ ನಂಬಿ ಶ್ರದ್ಧೆ ಮತ್ತು ವೈಜ್ಞಾನಿಕ ರೀತಿಯಲ್ಲಿ ಬೇಸಾಯಮಾಡಿದರೆ ಖಂಡಿತಾ ನಷ್ಟವಾಗುವುದಿಲ್ಲ ಎನ್ನುವ ಮಹೇಶ್ ತಮ್ಮ ಹಲವಾರು ಕೆಲಸಗಳ ನಡುವೆಯೂ ಬೇಸಾಯ ಮಾಡಿಸುತ್ತಾರೆ. ಕೃಷಿಯನ್ನೆ ನಂಬಿ ತೋಟದಲ್ಲೆ ಇದ್ದು ಬೇಸಾಯ ಮಾಡುತ್ತಾ ಕೃಷಿ ಕಷ್ಟ ಎನ್ನುವವರ ನಡುವೆ ಮಹೇಶ್ ಭಿನ್ನವಾಗಿ ಕಾಣುತ್ತಾರೆ.
ತರಕಾರಿ ಬೆಳೆದು ಗೆದ್ದೆ : ಭೂಮಿ ತೆಗೆದುಕೊಂಡ ಆರಂಭದಲ್ಲಿ ಎಡರು ಬೋರ್ವೆಲ್ ತೆಗಿಸಿದೆ. ಎರಡಿಂಚು ನೀರು ಬಂತು. ಹನಿ ನೀರಾವರಿ ಅಳವಡಿಸಿಕೊಂಡು ಮೊದಲ ಬಾರಿಗೆ ಗುಡ್ಡದ ಭೂಮಿಯಲ್ಲಿ ಭಜ್ಜಿ ಮೆಣಸಿನಕಾಯಿ, ಟೊಮಟೋ, ಕಲ್ಲಂಗಡಿ, ಪಪ್ಪಾಯದಂತಹ ವಾಣಿಜ್ಯ ಬೆಳಡಗಳನ್ನು ಮಾಡಿ ಆದಾಯಗಳಿಸಿದ್ದಾರೆ.
ಟೊಮಟೋ ಆಗ ಕೇವಲ ಕೆಜಿಗೆ 3 ರೂ ನಂತೆ ಹೋದರು ನನಗೆ ನಷ್ಟವಾಗಲಿಲ್ಲ. ಪ್ರತಿ ದಿನ ಕೊಯಮತ್ತೂರಿಗೆ ನಮ್ಮ ತೋಟದಿಂದ ಒಂದು ಲೋಡ್ ಅಂದ್ರೆ 350 ಕ್ರೇಟ್ ಟೊಮಟೋ ಕಳುಹಿಸುತ್ತಿದ್ದೆ. ಅದರಿಂದ ಆರು ಲಕ್ಷ ಆದಾಯ ಬಂದಿತ್ತು ಎಂದು ನೆನಪುಮಾಡಿಕೊಳ್ಳುತ್ತಾರೆ. ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿದರ್ೇಶಕ ಮಹಾದೇವಸ್ವಾಮಿ ಅವರ ಸಲಹೆ ಮತ್ತು ಮಾರ್ಗದರ್ಶನಗಳು ತೋಟ ಕಟ್ಟಲು ನೆರವಿಗೆ ಬಂತು ಎಂದು ನೆನಪು ಮಾಡಿಕೊಳ್ಳತ್ತಾರೆ.
ದಾಳಿಂಬೆಯಲ್ಲಿ ಪ್ರಯೋಗ : ಚಿತ್ರದುರ್ಗದಲ್ಲಿ ಪ್ರವಾಸ ಮಾಡುತ್ತಿದ್ದಾಗ ಚಳ್ಳಕೆರೆಯ ನಿವೃತ್ತ ಶಿಕ್ಷಕ ಚೆನ್ನಮಲ್ಲರೆಡ್ಡಿ ಎಂಬುವವರು ನಾಲ್ಕು ಎಕರೆ ದಾಳಿಂಬೆ ಬೆಳೆದು ಕೋಟಿ ರೂಪಾಯಿ ಸಂಪಾದನೆ ಮಾಡಿದ್ದರು. ಒಂದು ವರ್ಷ 10 ಕೆಜಿಯ 16 ಸಾವಿರ ಬಾಕ್ಸ್ ದಾಳಿಂಬೆ ಹಣ್ಣನ್ನು ಪ್ರತಿ ಬಾಕ್ಸ್ಗೆ 1100 ರೂ,ನಂತೆ ಕೊಟ್ಟಿದ್ದರು. ಒಂದು ಸಾರಿ ದಾಳಿಂಬೆ ಗಿಡ ನೆಟ್ಟರೆ ಹತ್ತು ಹದಿನೈದು ವರ್ಷದವರೆಗೂ ಫಸಲು ಬರುತ್ತದೆ. ಬೇಡ ಎಂದರೂ ಐದು ವರ್ಷ ದಾಳಿಂಬೆ ಬೇಸಾಯಮಾಡಿದರೂ ಸಾಕು.ಉತ್ತಮ ಆದಾಯಗಳಿಸಬಹುದು ಎನ್ನುತ್ತಾರೆ.
ಈಗ ಹಲವಾರು ನೈಸಗರ್ಿಕ ಕೃಷಿಯ ತೋಟಗಳನ್ನು ನೋಡಿ ಬಂದಿದ್ದು ಶೂನ್ಯ ಬಂಡವಾಳದ ನೈಸಗರ್ಿಕ ಕೃಷಿ ಮಾಡಲು ಯೋಜನೆ ಹಾಕಿಕೊಂಡಿರುವುದಾಗಿ ಹೇಳುತ್ತಾರೆ. ರಾಸಾಯನಿಕದಲ್ಲಿ ದಾಳಿಂಬೆ ಬೆಳೆಯುವುದು ಸಣ್ಣಪುಟ್ಟ ರೈತರಿಗೆ ಕಷ್ಟ. ಹೆಚ್ಚು ಹಣ ತೊಡಗಿಸಬೇಕು ಹೆಚ್ಚು ಲಾಭ ಪಡೆಯಬೇಕು ವ್ಯತ್ಯಾಸವಾದರೆ ನಷ್ಟ ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ.ಹಾಗಾಗಿ ಕಡಿಮೆ ಬಂಡವಾಳ ಇರುವವರು ದಾಳಿಂಬೆ ಕೃಷಿ ಮಾಡುವುದು ಕಷ್ಟ ಎನ್ನುತ್ತಾರೆ.
ಸಾಮಾಜಿಕ ಜಾಲ ತಾಣದ ನೆರವು : ಕೃಷಿ ಪ್ರಯೋಗಗಳಿಗಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವ ಮಹೇಶ್ ಫೇಸ್ಬುಕ್, ವಾಟ್ಸ್ಆಫ್ ನಂತಹ ಜಾಲತಾಣಗಳಿಂದ ಹಲವಾರು ಪ್ರಗತಿಪರ ಕೃಷಿಕರು ಪರಿಚಯವಾಗಿರುವುದಾಗಿ ಹೇಳುತ್ತಾರೆ. ತಾನು ಕಾಶ್ಮಿರದ ಸೇಬು ಬೆಳೆಯಲು ಇದೆ ಕಾರಣ. ಒಮ್ಮೆ ತುಮಕೂರಿನ ಬಳಿ ಸೇಬು ಬೆಳೆದಿರುವ ಬಗ್ಗೆ ಮಾಹಿತಿ ನೋಡಿದೆ.ನಂತರ ಸಾಮಾಜಿಕ ಜಾಲತಾಣದಲ್ಲಿ ಪರಿಚಿತರಾದ ಮಂಗಳೂರಿನ ಕೃಷ್ಣಶೆಟ್ಟಿ ಎಂಬುವವರು ಸೇಬು ಕೃಷಿ ಮಾಡುತ್ತಿರುವುದನ್ನು ತಿಳಿದುಕೊಂಡೆ. ಅವರ ಮೂಲಕ ಹಿಮಾಚಲ ಪ್ರದೇಶದಿಂದ ಒಂದು ಗಿಡಕ್ಕೆ 110 ರೂ.ನಂತೆ ನೂರು ಸೇಬು ಗಿಡ ತರಿಸಿಹಾಕಿದೆ ಎನ್ನುತ್ತಾರೆ. ಗಿಡಗಳು ಚೆನ್ನಾಗಿದ್ದು ಒಮ್ಮೆ ಹೂ ಕೂಡ ಬಿಟ್ಟಿದ್ದವು. ಸೇಬಿಗೆ ಶೀತ ವಾತಾವರಣ ಅಗತ್ಯ. ನಮಗಿಂತ ಕೊಡಗಿನಲ್ಲಿ ಬೆಳೆಯಬಹುದು ಎನ್ನುವುದು ಅವರ ಅಭಿಪ್ರಾಯ.
ತೋಟದ ಸಂಪೂರ್ಣ ಹೊಣೆ ಮಾದೇವ ಅವರದು. ಮಾದೇವ ಇಲ್ಲೆ ಇದ್ದು ನೋಡಿಕೊಳ್ಳುತ್ತಾರೆ.ನಾನೂ ಕೂಡ ಪ್ರತಿ ದಿನ ತೋಟಕ್ಕೆ ಬಂದು ಹೋಗುತ್ತೇನೆ. ತೋಟದಲ್ಲಿ ಒಂದು ಮುದೊಳು ಮತ್ತು ಒಂದು ಡಾಬರ್ಮನ್ ನಾಯಿ ಸಾಕಿಕೊಂಡಿದ್ದೆವು. ಚಿರತೆ ಬಂದು ಎರಡೂ ನಾಯಿಗಳನ್ನು ಎತ್ತುಕೊಂಡು ಹೋಯಿತು. ಹಾಗಾಗಿ ಈಗ ನಾಯಿ ಸಾಕುತ್ತಿಲ್ಲ ಎನ್ನುತ್ತಾರೆ.
ಚಾಮರಾಜನಗದಿಂದ ತೆರಕಣಾಂಬಿಗೆ ಹೋಗುವ ರಸ್ತೆಯಲ್ಲಿ 3.5 ಕಿ.ಮೀ ಕ್ರಮಿಸಿದರೆ ಉತ್ತುವಳ್ಳಿ ಸಮೀಪ ಎಡಬೆಟ್ಟ ಇದೆ. ಅಲ್ಲಿ ಬಿಟ್ಟದ ತಪ್ಪಲಿಗೆ "ಬಿಲ್ವ ಫಾರಂ" ಎಂಬ ಸಸ್ಯಕಾಶಿ ಇದೆ. ಹೆಚ್ಚಿನ ಮಾಹಿತಿಗೆ ಆಸಕ್ತರು ಮಹೇಶ್ 9448052478 ಸಂಪಕರ್ಿಸಬಹುದು.






ಶನಿವಾರ, ಅಕ್ಟೋಬರ್ 22, 2016

ಕೋಟೆಯಲ್ಲಿ ರೈತರ ಕೈ ಹಿಡಿದ ರೇಷ್ಮೆ : ಯಶೋಗಾಥೆ
ಸಂಘಟನೆ,ಚಳವಳಿಗಳಿಗೆ ಪೂರಕವಾಗಿ ಕೃಷಿ ಸಾಧಕರಾದ ಜೆಪಿ ಗೆಳೆಯರು
ಎಚ್.ಡಿ.ಕೋಟೆ : ಒಂದು ಎಕರೆ ಜಮೀನು.ಎರಡು ಹಸು. ಜಮೀನಿನಲ್ಲಿ ಮೈ ಮುರಿದು ದುಡಿಯುವ ಸಂಸಾರ ಇದ್ದು ರೇಷ್ಮೆ ಕೃಷಿ ಮಾಡಿಕೊಂಡರೆ ಅತ್ಯತ್ತಮವಾಗಿ ಜೀವನ ರೂಪಿಸಿಕೊಳ್ಳಬಹುದು ಎನ್ನುವುದು ಜಕ್ಕಳ್ಳಿ ಪುಟ್ಟಸ್ವಾಮಪ್ಪ ನಾಗರಾಜ್ ಕಂಡುಕೊಂಡಿರುವ ಸತ್ಯ. ಗೆಳೆಯರ ವಲಯದಲ್ಲಿ ಜೆಪಿ ಎಂದೆ ಪರಿಚಿತರಾಗಿರುವ ನಾಗರಾಜ್ ತಮ್ಮ ಹದಿನೈದು ವರ್ಷಗಳ ರೇಷ್ಮೆ ಕೃಷಿ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳುವ ಮೂಲಕ ಸುಸ್ಥಿರ ಕೃಷಿಯ ಸಾಧ್ಯತೆಗಳನ್ನು ವಿಸ್ತರಿಸುತ್ತಿರುವಂತೆ ಕಾಣತೊಡಗಿದರು.
ಅವರ ರೇಷ್ಮೆ ತೋಟಕ್ಕೆ ನಾವು ಹೋದಾಗ ಆಗ ತಾನೆ ಗೂಡು ಕಟ್ಟಿದ ರೇಷ್ಮೆ ಮರ್ನಾಲ್ಕು ದಿನಗಳಲ್ಲಿ ಮಾರುಕಟ್ಟೆಗೆ ಹೋಗಲು ಸಿದ್ಧವಾಗುತ್ತಿತ್ತು. ಚಾಮರಾಜನಗರ ಜಿಲ್ಲೆಯಲ್ಲಿ ರೇಷ್ಮೆ ಬೆಳೆಗೆ ಸೂಕ್ತವಾದ ವಾತವರಣವಿದ್ದು, ನಮ್ಮದೆ ತೋಟದಲ್ಲಿ ನಾನು ರೇಷ್ಮೆ ಬೆಳೆಯಲು ಆರಂಭಿಸಿದಾಗ, ತುಂಬಾ ಜನ ಕೋಟೆಯ ಜೆಪಿ ಅವರ ರೇಷ್ಮೆ ಕೃಷಿಯನ್ನು ನೋಡಿ ಬರಲು ಹೇಳುತ್ತಿದ್ದರು. ಕ್ಷೀರಸಾಗರ ಅವರೊಂದಿಗೆ ಈ ಬಗ್ಗೆ ಮಾತನಾಡುತ್ತಿದ್ದಾಗ, ಅವರ ಪ್ರೀತಿಯ ಒತ್ತಾಯಕ್ಕೆ ತಪ್ಪಿಸಿಕೊಳ್ಳಲು ಆಗಲೇ ಇಲ್ಲ.
ಹನ್ನೆರಡು ವರ್ಷಗಳಿಗೂ ಹೆಚ್ಚುಕಾಲ ರೈತ ಸಂಘಟನೆ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ನಾಯಕರೊಂದಿಗೆ ಒಡನಾಟ ಇರಿಸಿಕೊಂಡಿರುವ ಜೆಪಿ ರೈತಸಂಘದ ಜಿಲ್ಲಾ ಸಂಚಾಲಕರಾಗಿಯೂ ಕೆಲಸಮಾಡಿದ್ದಾರೆ. ತಾಲೂಕು ಮಟ್ಟದ ಅತ್ಯತ್ತಮ ರೇಷ್ಮೆ ಬೆಳೆಗಾರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಚಳವಳಿ ಮತ್ತು ಹೋರಾಟಗಳಲ್ಲಿ ತೊಡಗಿಸಿಕೊಂಡು ಕೃಷಿಯಿಂದಲೇ ಬದುಕು ಕಟ್ಟಿಕೊಂಡಿರುವ ಸಂಗಾತಿಗಳನ್ನು ಕಾಣುವ ಕುತೂಹಲ ನಮಗೂ ಇತ್ತು.
ಎಚ್.ಡಿ.ಕೋಟೆಯ ಹ್ಯಾಂಡ್ಪೋಸ್ಟ್ನಿಂದ ಸರಗೂರಿಗೆ ಹೋಗುವ ಮಾರ್ಗದಲ್ಲಿ ಎರಡು ಕಿ.ಮೀ.ಕ್ರಮಿಸಿದರೆ ಬಲಗಡೆಗೆ ಜೆಪಿ ಅವರ ಮೂರುವರೆ ಎಕರೆ ರೇಷ್ಮೆ ತೋಟ ಸಿಗುತ್ತದೆ. ಕಬಿನಿ ಡ್ಯಾಂಗೆ ಹೋಗುವ ಹಾದಿಯಲ್ಲಿ ಸ್ವಲ್ಪ ದೂರ ಕ್ರಮಿಸಿ ಎಡಕ್ಕೆ ತಿರುಗಿದರೆ ತೆಂಗು, ಅಡಿಕೆ, ತರಕಾರಿ, ಅರಿಶಿನ,ಬಾಳೆ ಮತ್ತಿತರ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿರುವ ಒಂಭತ್ತು ಎಕರೆಯ ಮತ್ತೊಂದು ತೋಟವಿದೆ.
ಪ್ರತಿ ತಿಂಗಳು 200 ನಂತರ 150 ರೇಷ್ಮೆ ಮೊಟ್ಟೆ. ಹೀಗೆ ಎರಡು ಬ್ಯಾಚ್ನಲ್ಲಿ ಹುಳ ಸಾಕಾಣಿಕೆ ಮಾಡುವ ಜೆಪಿ ಕನಿಷ್ಟ 70 ಕೆಜಿಯಿಂದ 100 ಕೆಜಿ ವರೆಗೂ ಗೂಡು ತೆಗೆಯುತ್ತಾರೆ. ವರ್ಷಕ್ಕೆ ಒಂದೆರಡು ಬೆಳೆ ಕೈಕೊಟ್ಟರು 10 ಬೆಳೆಯಂತೂ ಗ್ಯಾಂರಟಿ.
ತಮ್ಮ ಮೂರುವರೆ ಎಕರೆ ಪ್ರದೇಶದಲ್ಲಿ ಎರಡು ಎಕರೆಯಲ್ಲಿ ವಿ ಒನ್ ತಳಿಯ ರೇಷ್ಮೆ ಕಡ್ಡಿ ಹಾಕಿದ್ದಾರೆ. ಸುತ್ತಾ 500 ಕ್ಕೂ ಹೆಚ್ಚು ಸಾಗುವಾನಿ ಮತ್ತು ಸಿಲ್ವರ್ ಮರಗಳಿವೆ. ಆರು ಅಡಿ ಅಂತರದಲ್ಲಿ ರೇಷ್ಮೆ ಸಾಲುಗಳಿದ್ದು ಒಂದೊಂದು ಎಕರೆಯನ್ನು ಎರಡು ವಿಭಾಗ ಮಾಡಿ ಪ್ರತಿಯೊಂದು ವಿಭಾಗದಲ್ಲಿ ಒಂದೊಂದು ತಿಂಗಳಿಗೆ ಬೇಕಾದ ಗುಣ ಮಟ್ಟದ ಸೊಪ್ಪನ್ನು ಬೆಳೆದುಕೊಳ್ಳಲಾಗುತ್ತದೆ. 480 ಅಡಿ ಬೋರ್ವೆಲ್ನಿಂದ ಹನ್ನೆರಡು ಸ್ಟೇಜ್ನ 5 ಎಚ್ಪಿ ಮೋಟಾರ್ನಿಂದ ನೀರನ್ನು ತೆಗೆದು ಒಂದೂವರೆ ಕಿ.ಮೀ.ದೂರದಿಂದ ಪೈಪ್ ಲೈನ್ ಅಳವಡಿಸಿಕೊಂಡು ಈ ರೇಷ್ಮೆ ತೋಟಕ್ಕೆ ಹನಿ ನೀರಾವರಿ ಅಳವಡಿಸಿಕೊಳ್ಳಲಾಗಿದೆ.
ರೇಷ್ಮೆ ಬೆಸ್ಟ್ : ಹದಿನೈದು ವರ್ಷಗಳ ಕೃಷಿ ಅನುಭವದಲ್ಲಿ ಇತರ ಎಲ್ಲಾ ಬೆಳೆಗಳಿಗಿಂತ ರೇಷ್ಮೆ ಬೆಸ್ಟ್. ಕಬ್ಬು, ಅರಿಶಿನ, ಬಾಳೆ ಸೇರಿದಂತೆ ಎಲ್ಲಾ ರೀತಿಯ ವಾಣಿಜ್ಯ ಬೆಳೆಗಳನ್ನು ಬೆಳೆದಿದ್ದೇನೆ. ಹೀಗೆ ವಾಷರ್ಿಕ, ಅರ್ಧ ವಾಷರ್ಿಕ ಬೆಳೆಗಳನ್ನು ಬೆಳೆದು ಕೈ ಸುಟ್ಟುಕೊಂಡಿದ್ದೇನೆ. ಆದರೆ ರೇಷ್ಮೆ ನನ್ನ ಕೈ ಬಿಡಲಿಲ್ಲ. ಮೂವತ್ತು ದಿನಗಳಲ್ಲಿ ಕನಿಷ್ಠವಾದರೂ ಹಣ ನೋಡಬಹುದು. ರಾಜ್ಯದಲ್ಲಿ ರೇಷ್ಮೆ ಮಾರುಕಟ್ಟೆ ಚೆನ್ನಾಗಿದೆ. 22 ರಿಂದ 30 ಡಿಗ್ರಿ ನಾರ್ಮಲ್ ಟೆಂಪರೇಚರ್ ಇದ್ದರೆ ರೇಷ್ಮೆ ಬೆಳೆಯಬಹುದು.
ತೋಟವನ್ನು ಚೆನ್ನಾಗಿ ನೋಡಿಕೊಂಡು, ನೈಸಗರ್ಿಕ ಪದ್ಧತಿಯಲ್ಲಿ ಎಲೆಗಳನ್ನು ಬೆಳೆದುಕೊಂಡರೆ ರೇಷ್ಮೆ ಬೆಳೆ ಕೈ ಕೊಡುವ ಮಾತೆ ಇಲ್ಲ. 100 ಮೊಟ್ಟೆ ಚಾಕಿ ಕಟ್ಟಿದರೆ 98 ಕೆಜಿ ವರೆಗೂ ರೀಲಿಂಗ್ ಗೂಡು ತೆಗೆಯಬಹುದು. ಸೊಪ್ಪಿನ ಗುಣಮಟ್ಟ ಚೆನ್ನಾಗಿದ್ದರೆ ಗೂಡಿನ ಗುಣಮಟ್ಟವೂ ಚೆನ್ನಾಗಿರುತ್ತದೆ. ಪ್ರತಿ ಕೆಜಿ ಗೂಡಿಗೆ ಕನಿಷ್ಠ 300 ರೂ.ನಿಂದ 500 420 ರೂ.ವರೆಗೂ ಸಿಗುತ್ತದೆ. ಗಂಡ,ಹೆಂಡತಿ ಇಬ್ಬರೂ ತೋಟದಲ್ಲಿ ಶ್ರಮವಹಿಸಿ ದುಡಿದರೆ ರೇಷ್ಮೆ ಜೊತೆಗೆ ಎರಡು ಹಸು ಸಾಕಿಕೊಂಡರೆ ಉತ್ತಮ ಜೀವನ ಮಾಡಬಹುದು.ನೈಸಗರ್ಿಕ ಪದ್ಧತಿಯಲ್ಲಿ ರೇಷ್ಮೆ ಕೃಷಿ ಮಾಡಿದರೆ ರೋಗಬಾಧೆ ಕೂಡ ಇರುವುದಿಲ್ಲ ಎನ್ನುವುದು ಜೆಪಿ ಕಂಡುಕೊಂಡಿರುವ ಸತ್ಯ.
ಆರಂಭದಲ್ಲಿ ಸ್ವಲ್ಪ ದುಬಾರಿ : ರೇಷ್ಮೆ ಕೃಷಿ ಮಾಡುವುದಕ್ಕೆ ಇರುವ ತೊಂದರೆ ಎಂದರೆ ರೇಷ್ಮೆ ಹುಳ ಸಾಕಾಣಿಕೆ ಮನೆ ನಿಮರ್ಾಣ ಮತ್ತು ಮೇಜು ನಿಮರ್ಾಣ ಮಾಡಿಕೊಳ್ಳಲು ಸ್ವಲ್ಪ ಹಣ ಬೇಕಾಗುತ್ತದೆ. ಆರಂಭದಲ್ಲಿ ಕನಿಷ್ಠ ಬಂಡಾವಳ ಹಾಕಿ ಲೋ ಕಾಸ್ಟ್ ತಂತ್ರಜ್ಞಾನದಲ್ಲಿ ಮನೆ ನಿಮರ್ಾಣ ಮಾಡಿಕೊಳ್ಳಬಹುದು. ಆದರೂ 100 ಮೊಟ್ಟೆ ಸಾಕಾಣಿಕೆ ಮಾಡುವ ಮನೆ ನಿಮರ್ಾಣಕ್ಕೆ ಕನಿಷ್ಠ ಒಂದು ಲಕ್ಷ ರೂಪಾಯಿವರೆಗೆ ಬೇಕು. ಆರಂಭದಲ್ಲಿ ಈ ಸಿದ್ಧತೆ ಮಾಡಿಕೊಂಡರೆ ರೇಷ್ಮೆ ಕೃಷಿ ರೈತರಿಗೆ ವರದಾನವಾಗುವುದರಲ್ಲಿ ಯಾವುದೆ ಅನುಮಾನ ಇಲ್ಲ ಎನ್ನುತ್ತಾರೆ ಜೆಪಿ.
ಭೂಮಿಯಲ್ಲೆ ದುಡಿದು ಭೂಮಿಗೆ ಹಾಕಿದೆ : ಸುದೀರ್ಘ ಕೃಷಿ ಪಯಣದಲ್ಲಿ ವ್ಯವಸಾಯದಿಂದ ಸಾಕಷ್ಟು ಆದಾಯಗಳಿಸಿದ್ದೇನೆ. ಕೃಷಿಯಲ್ಲಿ ಒಂದೂವರೆ ದಶಕದಲ್ಲಿ 80 ಲಕ್ಷಕ್ಕೂ ಹೆಚ್ಚು ಹಣ ನೋಡಿದ್ದೇನೆ. ಆದರೆ ಅದೆಲ್ಲವನ್ನು ಮತ್ತೆ ಕೃಷಿ ಅಭಿವೃದ್ಧಿಗಾಗಿಯೆ ತೊಡಗಿಸಿದ್ದೇನೆ. 20 ಮತ್ತು 80 ಅಳತೆಯ ಒಂದು ರೇಷ್ಮೆ ಉಳುಸಾಕಾಣಿಕೆ ಮನೆ, 80 ಮತ್ತು 20 ಅಳತೆಯ ವಾಸದ ಮನೆ, ಅದರಲ್ಲೆ 20 ಮತ್ತು 30 ಅಳತೆಯಲ್ಲಿ ರೇಷ್ಮೆ ಸಾಕಾಣಿಕೆ ಮನೆ ಹಾಗೂ ಎಚ್.ಡಿ.ಕೋಟೆಯಲ್ಲೂ ಒಂದು ವಾಸದ ಮನೆ ಕಟ್ಟಿಕೊಂಡಿದ್ದೇನೆ. ಇಬ್ಬರು ಹೆಣ್ಣು ಮಕ್ಕಳನ್ನು ಪದವಿಧರರನ್ನಾಗಿ ಮಾಡಿದ್ದೇನೆ. ಇದೆಲ್ಲಾ ವ್ಯವಸಾಯದಿಂದಲೆ ಆದದ್ದು. ಜೊತೆಗೆ ಜೆಪಿ ಅಡಿಕೆ ಮತ್ತು ತೆಂಗನ್ನು ನರ್ಸರಿ ಮಾಡಿ ಗೆಳೆಯರಿಗೆ ಮಾರಾಟ ಮಾಡುತ್ತಾರೆ.
ಆದರೆ ಕಳೆದ ಮೂರ್ನಾಲ್ಕು ವರ್ಷದಿಂದ ಸಕಾಲಿಕವಾಗಿ ಮಳೆಯಾಗದ ಪರಿಣಾಮ ಬ್ಯಾಂಕಿನ ಸಾಲವೂ ಬಡ್ಡಿ,ಸುಸ್ತಿ ಬಡ್ಡಿ ಅಂತ ಏರತ್ತಲಿದೆ ಎನ್ನುವುದು ಜೆಪಿ ಅವರ ನೋವಿನ ಮನದಾಳದ ನುಡಿ. ನಾವು ಅವರ ತೋಟಕ್ಕೆ ಹೋದಾಗ ಬ್ಯಾಂಕ್ನವರು ಕೊಟ್ಟಿದ್ದ ಸಾಲದ ನೋಟಿಸ್ಗೆ ಉತ್ತರ ಬರೆಯುತ್ತಿದ್ದ ಅವರು ಕಳೆದ ಮೂರ್ನಾಲ್ಕು ವರ್ಷದ ಮಳೆಬೆಳೆ ಸ್ಥಿತಿ, ಸಾಲ ತೀರಿಸಲಾಗದಂತಹ ಪರಿಸ್ಥಿತಿ ನಿಮರ್ಾಣವಾಗಿರುವ ಸಂಕಷ್ಟದ ಬಗ್ಗೆ ವಿವರಿಸಿ ಬರೆದ ಪತ್ರವನ್ನು ನಮಗೂ ತೋರಿಸಿದರು. ಬ್ಯಾಂಕಿನವರು ಬೇಕಾದರೆ ತಮ್ಮ ಸಾಲಕ್ಕೆ ತಮ್ಮ ಒಂದು ಎಕರೆ ಜಮೀನನ್ನು ಬ್ಯಾಂಕಿನ ಹೆಸರಿಗೆ ರಿಜಿಸ್ಟರ್ ಮಾಡಿಕೊಂಡು ಋಣಮುಕ್ತನನ್ನಾಗಿ ಮಾಡಬೇಕೆಂದು ಪತ್ರವನ್ನು ಮುಗಿಸಿದ್ದರು. ಅವರ ಪತ್ರ ಎಲ್ಲಾ ರೈತರ ಬದುಕಿಗೆ ಹಿಡಿದ ಕನ್ನಡಿಯಂತೆ ಇತ್ತು.
ಇದೆಲ್ಲವನ್ನು ನೋಡಿದ ಮಕ್ಕಳು ಭೂಮಿ ಮಾರಿಬಿಡೋಣ ಎನ್ನುತ್ತಾರೆ. ಭೂಮಿ ನಮ್ಮ ಬದುಕು ಮಾರುವುದಾದರೂ ಹೇಗೆ. ಇದು ಇಂದಿನ ಜನಾಂಗಕ್ಕೆ ಅರ್ಥವಾಗುವುದಿಲ್ಲ ಎಂದು ಅವರು ಹೇಳಿದಾಗ ಜನರೇಷನ್ ಗ್ಯಾಂಪ್ನ ಆಲೋಚನೆಗಳು ಹೇಗೆ ಬದಲಾಗುತ್ತವಲ್ಲ ಅಂತ ಅನಿಸಿತು.
ಚಿಕಾಗೋದಿಂದ ಜಕ್ಕಳ್ಳಿಗೆ : ನಾಲ್ಕು ವರ್ಷದ ಹಿಂದೆ ವಿದೇಶದಿಂದ ಬಂದ ವಿದ್ಯಾಥರ್ಿಗಳು ಒಂದು ತಿಂಗಳು ತೋಟದಲ್ಲೆ ಇದ್ದು ರೇಷ್ಮೆ ಕೃಷಿಯ ತರಬೇತಿ ಪಡೆದು ಹೋಗಿದ್ದಾರೆ. ಅಮೇರಿಕಾದ ಚಿಕಾಗೋ ವಿಶ್ವ ವಿದ್ಯಾನಿಲಯದಿಂದ ಇಬ್ಬರು ವಿದ್ಯಾಥರ್ಿಗಳು ಜೆಪಿ ಅವರ ರೇಷ್ಮೆ ತೋಟಕ್ಕೆ ಬಂದು ಚಾಕಿಯಿಂದ ಉಳು ಹಣ್ಣಾಗಿ ಗೂಡುಕಟ್ಟುವವರೆಗೂ ಇದ್ದು ಪ್ರತಿಯೊಂದು ಹಂತವನ್ನು ನೋಡಿ ಕಲಿತು ಹೋದರು ಎಂದು ಅವರು ನೆನಪಿಸಿಕೊಂಡರು.
ಕೋಟೆಯಲ್ಲಿ ರೇಷ್ಮೆ ಕ್ರಾಂತಿ : ಗೆಳೆಯರೆಲ್ಲಾ ಕೂಡಿಕೊಂಡು ರೇಷ್ಮೆ ಕೃಷಿಯಲ್ಲಿ ಪ್ರತಿ ತಿಂಗಳು ಅಲ್ಪಸ್ವಲ್ಪ ಹಣ ಕಾಣುತ್ತಿದ್ದಾರೆ. ಕೋಟೆಯಲ್ಲಿ ರೇಷ್ಮೆ ಕೃಷಿ ಉಳಿದುಕೊಳ್ಳುವಲ್ಲಿ ಸಂಘಟನೆ ಮತ್ತು ಹೋರಾಟದಲ್ಲಿ ಜೊತೆಯಾದ ಈ ಗೆಳೆಯರ ಶ್ರಮವೂ ಕಾರಣವಾಗಿದೆ.
ಜೆ.ಪಿ.ನಾಗರಾಜು ಸೇರಿದಂತೆ ಬೆಟ್ಟಯ್ಯ ಕೋಟೆ, ಬೆಳಗನಹಳ್ಳಿ ಸೋಮಶೇಖರ್,ಹಾರೋಪುರದ ಮಂಜುನಾಥ್,ಹುಲ್ಲೆಮಾಳದ ಶೇಖರ್, ಸರಗೂರಿನ ಶೇಖರ್ ಅವರುಗಳು ಬೈ ಬ್ಯಾಕ್ ಪದ್ಧತಿಯಲ್ಲಿ ಮಳವಳ್ಳಿಯ ಕೇಂದ್ರಿಯ ರೇಷ್ಮೆ ಬೀಜೋತ್ಪಾದನಾ ಕೇಂದ್ರ (ಎಸ್ಎಸ್ಪಿಸಿ) ಕ್ಕೆ ರೇಷ್ಮೆ ಗೂಡು ಬೆಳೆದುಕೊಡುತ್ತಾರೆ.
ಕೇಂದ್ರದಲ್ಲಿ ಕೈ ಬಾಯಿ ಶುದ್ಧವಿರುವ ವಿ.ಕೆ.ಅರಳಪುರ್ ಎಂಬ ಅಧಿಕಾರಿ ಇರುವುದರಿಂದ ನಮ್ಮಂತ ರೈತರಿಗೆ ಇದು ಸಾಧ್ಯವಾಗಿದೆ. 100 ಮೊಟ್ಟೆಗೆ 70 ಕೆಜಿ ಗೂಡಿನವರೆಗೂ ಇಳುವರಿ ಬರುತ್ತದೆ.ಪ್ರತಿ ಕೆಜಿ ಗೂಡಿಗೆ ಅವರು ನಮಗೆ 750 ರೂ,ಕೊಡುತ್ತಾರೆ. ಎಫ್ಸಿ 1 ಎಂಬ ಹೆಣ್ಣು ಮತ್ತು ಎಫ್ಸಿ 2 ಎಂಬ ಗಂಡು ಮೊಟ್ಟೆಗಳನ್ನು ನಮಗೆ ಕೊಡುತ್ತಾರೆ. ಅದರಲ್ಲಿ ಎಫ್ಸಿ 1 ಎಂಬ ಹೆಣ್ಣು ತಳಿ ಸೂಕ್ಷ್ಮವಾಗಿದ್ದು ರೋಗ ನಿರೋಧಕ ಶಕ್ತಿ ಕಡಿಮೆ. ಇದರಲ್ಲಿ ಬದಲಾವಣೆಮಾಡಿ ಉತ್ತಮ ತಳಿ ಕೊಟ್ಟರೆ ಗೂಡಿನ ಇಳುವರಿಯನ್ನು ಹೆಚ್ಚು ಮಾಡಬಹುದು ಎನ್ನುವುದು ಅವರ ಅಭಿಪ್ರಾಯ.
 ಎಲ್ಲಾ ಚಳವಳಿಗಳ ಕೇಂದ್ರ ಕೋಟೆ : ರೈತ ಸಂಘಟನೆ. ದಲಿತ ಸಂಘರ್ಷ ಸಮಿತಿ,ಸಾಕ್ಷರತಾ ಆಂದೋಲನದಂತಹ ಪ್ರಗತಿಪರ ಚಳವಳಿಗಳ ಕೇಂದ್ರ ಎಚ್.ಡಿ.ಕೋಟೆ ಅಂತ ಜೆಪಿ ನಾಗರಾಜ್ ಮತ್ತು ಕ್ಷೀರಸಾಗರ ನೆನಪಿಸಿಕೊಂಡರು.
ಹತ್ತು ಹನ್ನೆರಡು ಜನರಿಂದ ನಮ್ಮ ಗೆಳೆಯರ ಗುಂಪು 80 ದಶಕದಲ್ಲಿ ಜೆಪಿ ಅವರ ತೋಟದಲ್ಲಿ ಸೇರಿಕೊಂಡು ಸಾಹಿತ್ಯ, ಸಂಘಟನೆ,ಹೋರಾಟಗಳ ಬಗ್ಗೆ ಚಚರ್ೆ ನಡೆಸುತ್ತಿತ್ತು. ಆರ್.ಸ್ವಾಮಿ ಆನಂದ್ ಮತ್ತು ಅವರ ಸಹೋದರ ಗುರು, ವಕೀಲರಾದ ಸರಸ್ವತಿ,ಶೋಭಾ, ಕ್ಷೀರಸಾಗರ,ಕೊಳಗಾಲದ ಮಹದೇವ್,ಸುಂದರ್ ಹೀಗೆ ಸಮಾನಮನಸ್ಕ ಗೆಳೆಯರೆಲ್ಲ ಒಂದೆಡೆ ಸೇರಿ ಚಚರ್ೆ, ಚಿಂತನೆ ಮಾಡುತ್ತಿದ್ದೆವು.
ಇದೆ ಸಮಯದಲ್ಲಿ ನಮಗೆ ಜಪಾನಿನ ನೈಸಗರ್ಿಕ ಕೃಷಿಕ ಪುಕೋವಕೊ ಬರೆದ "ಒನ್  ಸ್ಟ್ರಾ ರೆವಲುಷನ್" ಎಂಬ ಕೃತಿ ಸಿಕ್ಕಿತು.ಜೊತೆಗೆ ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯ ನಮ್ಮ ಮೇಲೆ ಪ್ರಭಾವ ಬೀರಿತು. ಹಾಗಾಗಿ ಆಗಲೇ ನಾವು ಈ ಸಹಜ ಕೃಷಿಯ ಬಗ್ಗೆ ತಿಳಿದುಕೊಂಡು ನಮ್ಮ ಜಮೀನುಗಳಲ್ಲಿ ಅದನ್ನು ಜಾರಿ ಮಾಡಲು ಪ್ರಯತ್ನಿಸಿದ್ದೆವು ಎಂದು ಅವರು ನೆನಪು ಮಾಡಿಕೊಂಡರು.
ವ್ಯವಸಾಯ ಮಾಡುವುದರ ಜೊತೆಗೆ ನಮ್ಮ ತಂಡ ಇಡೀ ಕೋಟೆ ತಾಲೂಕಿನಲ್ಲಿ ಸುತ್ತಡುತ್ತಾ ಎಲ್ಲೆ ಅನ್ಯಾಯ, ಭ್ರಷ್ಟಚಾರ ನಡೆದರು ಪ್ರತಿಭಟನೆ ನಡೆಸುತ್ತಿತ್ತು. ಈಗ ಗೆಳೆಯರೆಲ್ಲ ಚದುರಿ ಹೋದರು. ಚಳವಳಿಗಳು ಹಾದಿ ತಪ್ಪಿದವು ಎಂದು ಜೆಪಿ ನೋವಿನಿಂದ ಹೇಳಿದರು. ಪ್ರತಿ ತಾಲೂಕಿನಲ್ಲೂ ಮತ್ತೆ ಇಂತಹ ಗೆಳೆಯರ ಗುಂಪು ಒಂದೆಡೆ ಸೇರಲಿ.ಸಾಹಿತ್ಯ, ಹೋರಾಟ,ಕೃಷಿಯ ಬಗ್ಗೆ ಜನರಲ್ಲಿ ಆಸಕ್ತಿ ಮೂಡಿಸಲಿ ಎಂಬ ಆಶಯದೊಂದಿಗೆ ನಾವು ಅವರ ತೋಟದಿಂದ ಹೊರಬಂದಾಗ 80 ರ ದಶಕದ ಗುಂಗು ನಮ್ಮ ತಲೆಯ ತುಂಬ ತುಂಬಿಕೊಂಡಿತ್ತು. ಆಸಕ್ತರು ಜೆಪಿ ನಾಗರಾಜ್ 9141587697 ಸಂಪಕರ್ಿಸಬಹುದು.





ಭಾನುವಾರ, ಅಕ್ಟೋಬರ್ 16, 2016

  ಗುಡ್ಡಗಾಡಿನಲ್ಲಿ ಪಪ್ಪಾಯಿ ಕೃಷಿಮಾಡಿ ಗೆದ್ದ ರೈತ ಮಹಿಳೆ
ಆಯರಹಳ್ಳಿಯಲ್ಲಿ ಅರಳಿದ ಕುಸುಮ ಇಂದಿರಮ್ಮ
ಮೈಸೂರು : ಇದೊಂದು ಗುಡ್ಡಗಾಡು ಪ್ರದೇಶ. ಕಲ್ಲುಮುಂಟಿ ಅಥವಾ ಕಾಡುಭೂಮಿ ಎಂಬ ಹೆಸರಿನಿಂದ ಊರಿನವರು ಈ ಭೂಮಿಯನ್ನು ಕರೆಯುತ್ತಾರೆ. ಇಪ್ಪತ್ತು ವರ್ಷಗಳ ಹಿಂದೆ ನಾವು ಈ ಕಲ್ಲುಮುಂಟಿ ಜಮೀನನ್ನು ಖರೀದಿಸಿದಾಗ ಜನ ನಕ್ಕಿದ್ದರು. ಹಾಗೆ ನಕ್ಕ ಮಂದಿ ನಾಚುವಂತೆ ಹಸಿರು ತೋಟವನ್ನು ಕಟ್ಟಿದ್ದೇವೆ.
ಸುತ್ತಮುತ್ತಲಿನ ಜಮೀನುಗಳ ಮಾಲೀಕರು ಪ್ರತಿದಿನ ಹಳ್ಳಿಯಿಂದ ನಗರಕ್ಕೆ ಕೂಲಿ ಹರಸಿ ಗಾರೆ ಕೆಲಸ,ಫಾಕರ್್ ಕೆಲಸ,ಪ್ಲಂಬರ್ ಕೆಲಸಕ್ಕೆಂದು ಹೊರಟರೆ ನಾವು ಮೈಸೂರಿನಿಂದ ಇಲ್ಲಿಗೆ ತೋಟದ ಕೆಲಸಕ್ಕೆಂದು ಬರುತ್ತೇವೆ.ಈ ವೈರುಧ್ಯಕ್ಕೆ ಏನೆನ್ನಬೇಕು. ತೋಟಕ್ಕೆ ಮಾಲೀಕರಾಗಬೇಕಿದ್ದವರು ಕೂಲಿಗಳಾಗಿ ಕೆಲಸ ಹರಸಿ ಹೋಗುವುದನ್ನು ನೋಡಿದರೆ ಕರುಳು ಚುರುಕ್ ಎನ್ನುತ್ತದೆ. ವ್ಯವಸ್ಥೆಯ ಬಗ್ಗೆ ಬೇಸರವಾಗುತ್ತದೆ. ರೈತರ ಬದುಕು ಕಂಡು ಜೀವ ಹಿಂಡಿದಂತಾಗುತ್ತದೆ ಎಂದು ವಿಷಾದಿಂದ ನುಡಿದರು ಸ್ವಾವಲಂಬಿ ರೈತ ಮಹಿಳೆ ಎಂ.ಇಂದಿರಾ.
ಮೈಸೂರಿನ ವತರ್ುಲ ರಸ್ತೆಯಿಂದ 12 ಕಿ,ಮೀ,ದೂರದಲ್ಲಿದೆ ಆಯರಹಳ್ಳಿ. ಹಳ್ಳಿಯ ಮಾರಿಗುಡಿಯ ಬಳಿ ಎಡಕ್ಕೆ ತಿರುಗಿ ಒಂದೆರಡು ಕಿ.ಮೀ ದೂರಕ್ಕೆ ಹೋದರೆ ಗುಡ್ಡಗಾಡು ಸಿಗುತ್ತದೆ.ಸುತ್ತಮುತ್ತೆಲ್ಲಾ ಕಲ್ಲುಮುಂಟಿಯಿಂದ ಕೂಡಿದ ಭೂಮಿ.ಇಂತಹ ಬರಡು ನೆಲದಲ್ಲಿ ಸ್ವಾಭಿಮಾನಿ ಮಹಿಳೆಯೊಬ್ಬರು ಶ್ರದ್ಧೆ ಮತ್ತು ಕಾಳಜಿಯಿಂದ ಕಟ್ಟಿದ ಹಸಿರು ತೋಟವಿದೆ.ತೋಟದ ಸುತ್ತೆಲ್ಲಾ ಚಿರತೆ,ನವಿಲು,ಕಾಡಂದಿ,ಮುಳ್ಳಂದಿಗಳ ಹಾವಳಿ. ಇಂತಹ ಗುಡ್ಡಗಾಡನ್ನು ಹಸನು ಮಾಡಿ ತೋಟ ಕಟ್ಟಿರುವ ಇಂದಿರಾ ಅವರ ಪರಿಶ್ರಮ ಮತ್ತು ಜಾಣ್ಮೆ ಹತಾಶ ರೈತರನ್ನು ಕೈಹಿಡಿದು ನಡೆಸಬೇಕು. ಗಿಡಮರಗಳ ಪೋಷಣೆ ಮತ್ತು ಆ ತಾಯಿಯ ಹಸಿರು ಪಾಲನೆಯ ಗುಣ ಕೃಷಿ ಎಂದರೆ ಕಷ್ಟ ಎನ್ನುವವರಿಗೆ, ಕೃಷಿ ಎಂದರೆ ಕಷ್ಟವೂ ಅಲ್ಲ, ನಷ್ಟವೂ ಅಲ್ಲಾ ಅದೊಂದು ಸ್ವಾಭಿಮಾನದಿಂದ ಬದುಕಲು ಇರುವ ಲಾಭದಾಯಕ ಉದ್ಯೋಗ ಎಂದು ಸಾರುವಂತಿದೆ ಆ ತೋಟ.
ಮೈಸೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಸಹಾಯಕ ಅಭಿವೃದ್ಧಿ ಯೋಜನಾಧಿಕಾರಿಯಾಗಿ ನಿವೃತ್ತರಾಗಿರುವ ಅರವತ್ತೈದು ವರ್ಷದ ಇಂದಿರಾ ಅವರ ಜೀವನ ಪ್ರೀತಿ,ರೈತರ ಬಗೆ ಅವರಿಗಿರುವ ಕಾಳಜಿ, ಅವರು ಮಾಡುತ್ತಿರುವ ಪ್ರಯೋಗಗಳು ಕೃಷಿಯ ಬಗ್ಗೆ ನಿರ್ಲಕ್ಷ್ಯದಿಂದ ಮಾತನಾಡುವವರ ಕಣ್ಣು ತೆರೆಸುವಂತಿವೆ. ನೀರಾವರಿ ಇಲಾಖೆಯಲ್ಲಿ ಮೆನೇಜರ್ ಆಗಿ ನಿವೃತ್ತರಾಗಿರುವ ಇಂದಿರಾ ಅವರ ಪತಿ ಬಿ.ಜಯರಾಂ ಕೃಷಿ ಕೆಲಸಕ್ಕೆ ಸಾಥ್ ನೀಡುತ್ತಾ ಪತ್ನಿಯ ಸಾಧನೆಗೆ ನೆರವಾಗಿದ್ದಾರೆ.
ಖಾಸಗಿ ಕಂಪನಿಯೊಂದರಲ್ಲಿ ಸ್ಟ್ರಕ್ಚರಲ್ ಇಂಜಿನಿಯರ್ ಆಗಿರುವ ಮಗ ಜೆ.ವಿಶ್ವಾಸ್ ನೌಕರಿ ಬಿಟ್ಟು ಬೇಸಾಯದಲ್ಲಿ ತೊಡಗಿಸಿಕೊಳ್ಳುವ ಆಲೋಚನೆಯಲ್ಲಿದ್ದಾರೆ. ತೋಟದಲ್ಲಿ ಹೊಸದಾಗಿ ಬುಶ್ ತಳಿಯ ಮೆಣಸು ಕೃಷಿ ಮಾಡಲು ಯೋಜನೆ ಹಾಕಿಕೊಂಡಿದ್ದಾನೆ ಎನ್ನುತ್ತಾರೆ ಇಂದಿರಾ.
ಐದು ಎಕರೆ ಪ್ರದೇಶದಲ್ಲಿ ರೆಡ್ ಲೇಡಿ ಪಪ್ಪಾಯಿ ಮತ್ತು ಬಾಳೆ ಬೆಳೆಯನ್ನು ಮುಖ್ಯ ಆದಾಯ ಬೆಳೆಯಾಗಿ ಬೆಳೆಯುತ್ತಿರುವ ಇಂದಿರಮ್ಮ ಅಂತರ ಬೆಳೆಯಾಗಿ ಚೆಂಡು ಹೂ,ಕಲ್ಲಂಗಡಿ, ಡಿಸ್ಕೋ ತಳಿಯ ಕುಂಬಳಕಾಯಿ ಬೆಳೆಯುತ್ತಾರೆ. ತೋಟದ ಸುತ್ತ 125 ಟೀಕ್ , 250 ಸಿಲ್ವರ್, ಹತ್ತು ಹೆಬ್ಬೇವು, 150 ತಿಪಟೂರ್ ಟಾಲ್ ತಳಿಯ ತೆಂಗು, ಹತ್ತು ಎಳನೀರು ತಳಿಯ ತೆಂಗಿನ ಮರಗಳಿವೆ. ವಿಶೇಷವೆಂದರೆ ವರ್ಷದ ಎಲ್ಲಾ ಕಾಲದಲ್ಲೂ ಇವರ ತೋಟದಲ್ಲಿ ಪಪ್ಪಾಯಿ ಗಿಡ ಇರುವಂತೆ ನೋಡಿಕೊಳ್ಳಲಾಗುತ್ತದೆ. ಇದೆ ಇವರ ಯಶಸ್ವಿ ಕೃಷಿಯ ಗುಟ್ಟು. ಚಾಮರಾಜನಗರದ ಎಡೆಯೂರಿನ ಬಸವರಾಜು ಪ್ರಮಾಣಿಕ ಕಾವಲುಗಾರರಾಗಿ ತೋಟದ ಕೆಲಸ ಮಾಡುತ್ತಿದ್ದು ಅವರನ್ನು ಇಂದಿರಮ್ಮ ಮನೆಯ ಮಗನಂತೆ ನೋಡಿಕೊಳ್ಳುತ್ತಿದ್ದಾರೆ. ತೋಟದಲ್ಲಿ ಎರಡು ಬೋರ್ವೆಲ್ಗಳಿದ್ದು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ.ನೀರಿಗೆ ಕೊರತೆ ಇಲ್ಲ. ಆದರೆ ವಿದ್ಯುತ್ನದ್ದೇ ನಮಗೆ ದೊಡ್ಡ ಸಮಸ್ಯೆ ಎನ್ನುತ್ತಾರೆ ಇಂದಿರಮ್ಮ.
ಹಣದ ಗಿಡ ಪಪ್ಪಾಯಿ : ವರ್ಷದ ಎಲ್ಲಾ ಕಾಲದಲ್ಲೂ ತೋಟದಲ್ಲಿ ಪಪ್ಪಾಯಿ ಇರುತ್ತದೆ. ಇದು ನಮಗೆ ಪ್ರತಿವಾರ ಹಣ ತಂದುಕೊಡುತ್ತದೆ. ವ್ಯಾಪಾರಿಗಳು ತೋಟಕ್ಕೆ ಬಂದು ಪ್ರತಿ ಕೆ.ಜಿ. ಪಪ್ಪಾಯಿ ಹಣ್ಣಿಗೆ 12 ರೂಪಾಯಿ ಕೊಟ್ಟು ಖರೀದಿಸುತ್ತಾರೆ. ಪಪ್ಪಾಯಿ ಹೆಚ್ಚು ಕೊಯ್ಲು ಬಂದರೆ ಮೈಸೂರಿನ ವ್ಯಾಪಾರಿಯೊಬ್ಬರಿಗೆ ಕರೆ ಮಾಡಿದರೆ ಅವರು ತೋಟಕ್ಕೇ ಬಂದು ಹಣ ಕೊಟ್ಟು ತೆಗೆದುಕೊಂಡು ಹೋಗುತ್ತಾರೆ. ಪಪ್ಪಾಯಿ ತೂಕ ಮಾಡಲು ನಾವೆ ತೂಕದ ಯಂತ್ರವೊಂದನ್ನು ಇಟ್ಟುಕೊಂಡಿದ್ದೇವೆ. ಹಾಗಾಗಿ ಮೋಸ ಹೋಗುವ ಮಾತೆ ಇಲ್ಲ. ಕೆಲವು ಸಲ ನೆರವಾಗಿ ಹಾಫ್ ಕಾಮ್ಸ್ಗೆ ಕಳುಹಿಸುತ್ತೇವೆ. ಅಲ್ಲಿ ಹಣ್ಣನ್ನು ತೂಕಮಾಡಿಕೊಂಡು ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುತ್ತಾರೆ ಎನ್ನುತ್ತಾರೆ ಇಂದಿರಮ್ಮ.
ಇಲ್ಲಾ ಕಡೆ ರೈತರನ್ನು ವಂಚಿಸಲು ಮಧ್ಯವತರ್ಿಗಳು ಹೊಂಚುಹಾಕಿ ಕಾಯುತ್ತಿರುತ್ತಾರೆ ಇಂತಹವರ ಬಗ್ಗೆ ರೈತರು ತುಂಬಾ ಎಚ್ಚರಿಕೆಯಿಂದ ಇರುವುದು ಅವಶ್ಯಕ ಎಂದು ಹೇಳುವುದನ್ನು ಅವರು ಮರೆಯುವುದಿಲ್ಲ.ಸ್ವತಃ ಅವರೆ ಮಧ್ಯವತರ್ಿಗಳಿಂದ ಮೋಸಹೋಗಿ ತಮ್ಮ ಹೆಸರಿನಲ್ಲೆ ತರಕಾರಿ ಮಂಡಿ ಲೇಸನ್ಸ್ ಮಾಡಿಸಿಕೊಂಡು, ಬನ್ನಿಮಂಟಪದ ಹತ್ತಿರ ಇರುವ ಬಂಬೂ ಬಜಾರ್ನಲ್ಲಿ ಅಂಗಡಿಯೊಂದನ್ನು ತೆರೆದಿದ್ದಾರೆ.
ನಮ್ಮದೆ ನರ್ಸರಿ : ಒಂದು ಎಕರೆ ಪ್ರದೇಶದಲ್ಲಿ ಪಪ್ಪಾಯಿ ಬೆಳೆಯಲು ಐವತ್ತು ಸಾವಿರ ರೂಪಾಯಿ ವೆಚ್ಚಮಾಡಿದರೆ ಒಂದುವರೆ ವರ್ಷದಲ್ಲಿ ಮೂರು ಲಕ್ಷಕ್ಕೂ ಅಧಿಕ ಆದಾಯ ತರುವುದು ಗ್ಯಾರಂಟಿ ಎಂದು ಅನುಭವದಿಂದ ಕಂಡುಕೊಂಡಿರುವ ಇಂದಿರಮ್ಮ ವೈಜ್ಞಾನಿಕ ರೀತಿಯಲ್ಲಿ ಪಪ್ಪಾಯಿ ಕೃಷಿ ಮಾಡುವುದನ್ನು ಹೇಳಿಕೊಡುತ್ತಾರೆ.
ದೃಢೀಕೃತ ಕಂಪನಿಯಿಂದ ಪಪ್ಪಾಯಿ ಬೀಜ ಖರೀದಿಸುವ ಇವರು ತಾವೆ ಸ್ವತಃ ನರ್ಸರಿಯಲ್ಲಿ ಗಿಡಗಳನ್ನು ಬೆಳೆಸುತ್ತಾರೆ. ನರ್ಸರಿಯ ಬಗ್ಗೆ ರೈತರಿಗೆ ತಿಳಿವಳಿಕೆ ನೀಡುವವರೆ ಇಲ್ಲ ಎನ್ನುವ ಇಂದಿರಮ್ಮ ನರ್ಸರಿ ಮಾಡಿಕೊಳ್ಳುವ ಮುನ್ನ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಾರೆ.
ಸಗಣಿ ಗೊಬ್ಬರ,ಮರಳು,ಕೆಮ್ಮಣ್ಣು,ಕೋಕೋ ಫಿಟ್ ನಾಲ್ಕನ್ನು ಸಮ ಪ್ರಮಾಣದಲ್ಲಿ ನೀರು ಹಾಕಿ ಮಿಶ್ರಣಮಾಡಿ ಪ್ಲಾಸ್ಟಿಕ್ ಕವರ್ಗೆ ತುಂಬಬೇಕು. ಮೇಲ್ಭಾಗದಲ್ಲಿ ಮುಕ್ಕಾಲು ಇಂಚು ಪ್ಲಾಸ್ಟಿಕ್ ಕವರ್ ಖಾಲಿ ಇರುವಂತೆ ನೋಡಿಕೊಳ್ಳಬೇಕು. ಮಣ್ಣು ತುಂಬಿದ ಪ್ಲಾಸ್ಟಿಕ್ ಕವರ್ಗೆ ಒಂದು ಕಡ್ಡಿತೆಗೆದುಕೊಂಡು ಕಾಲು ಇಂಚು ಆಳ ಬರುವಂತೆ ಚುಚ್ಚಬೇಕು. ಅಲ್ಲಿಗೆ ಪಪ್ಪಾಯಿ ಬೀಜವನ್ನು ಹಾಕಿ ಬೆರಳಿನಲ್ಲಿ ಮೃದುವಾಗಿ ಮುಚ್ಚಬೇಕು.ನಂತರ ಮಿಶ್ರಣ ಮಾಡಿದ ಸ್ವಲ್ಪ ಪ್ರಮಾಣದ ಮಣ್ಣನ್ನು ಮೇಲೆ ಹಾಕಬೇಕು. ನಂತರ ಪ್ಲಾಸ್ಟಿಕ್ ಹಾಳೆಯನ್ನು ಹೊದಿಕೆಯಾಗಿ ಮೂರು ದಿನಗಳವರೆಗ ಮುಚ್ಚಿ ನಂತರ ತೆಗೆಯಬೇಕು. ಆರರಿಂದ ಎಂಟು ದಿನಗಳವರೆಗೆ ಬೀಜಗಳು ಮೊಳಕೆ ಬರುತ್ತವೆ.ಹೀಗೆ ಮಾಡುವುದರಿಂದ ಶೇಕಡ 80 ರಷ್ಟು ಬೀಜಗಳು ಮೊಳಕೆ ಬರುತ್ತವೆ. ಒಂದು ತಿಂಗಳವರೆಗೆ ನರ್ಸರಿಯಲ್ಲಿ ಗಿಡಗಳನ್ನು ಪೋಷಣೆಮಾಡಿ ನಂತರ ಜಮೀನಿನಲ್ಲಿ ನಾಟಿ ಮಾಡಲಾಗುತ್ತದೆ.
ಬೇಸಾಯ ಕ್ರಮ : ಗಿಡಗಳನ್ನು ಜಮೀನಿಗೆ ಹಾಕುವ ಮೊದಲು ಕೊಟ್ಟಿಗೆ ಗೊಬ್ಬರವನ್ನು ಮಣ್ಣಿನಲ್ಲಿ ಸೇರಿಸಿ ಮೂರ್ನಾಲ್ಕು ಬಾರಿ ಉಳುಮೆ ಮಾಡಿಕೊಳ್ಳಬೇಕು. ಸಾಲಿನಿಂದ ಸಾಲಿಗೆ ಆರು ಅಡಿ,ಗಿಡದಿಂದ ಗಿಡಕ್ಕೆ ಎಂಟು ಅಡಿ ಬರುವಂತೆ ಗಿಡಗಳನ್ನು ನಾಟಿ ಮಾಡಬೇಕು. ಇದಕ್ಕೂ ಹೆಚ್ಚು ಶ್ರಮ ಪಡುವ ಅಗತ್ಯವಿಲ್ಲ. ಗುದ್ದಲಿಯಲ್ಲಿ ಆಳವಾಗಿ ಗುಂಡಿ ತೆಗೆದು ಗಿಡವನ್ನು ಕೂರಿಸಿ ಮೇಲ್ಮಣ್ಣನ್ನು ಗಿಡದ ಬೇರಿಗೆ ತೊಂದರೆಯಾಗದಂತೆ ಮುಚ್ಚಬೇಕು.ನಂತರ ತಾಯಿನೀರು ಅಂತ ಪ್ರತಿ ಗಿಡಕ್ಕೂ ಒಂದು ಲೀಟರ್ನಷ್ಟು ನೀರು ಕೊಡಬೇಕು.
ವಾರದ ನಂತರ ವಾತಾವರಣಕ್ಕೆ ಹೊಂದಿಕೊಳ್ಳಲು ಔಷದವನ್ನು ಸ್ಪ್ರೈ ಮಾಡುತ್ತೇವೆ. 19 ಆಲ್ ಕೊಡುತ್ತೇವೆ.ನಂತರ ಪ್ರತಿ ತಿಂಗಳು ಶಿಫಾರಸ್ಸು ಮಾಡಿದ ಗೊಬ್ಬರ ಕೊಡಬೇಕು.ಎಂಟು ತಿಂಗಳಿಗೆ ಫಸಲು ಬರಲು ಸಿದ್ಧವಾಗುತ್ತದೆ.ನಮ್ಮದು ಕಲ್ಲುಜಮೀನು ಆದ್ದರಿಂದ ಪ್ರತಿವಾರ ಒಂದು ಟನ್ ಕಾಯಿ ಸಿಗುತ್ತದೆ. ವಾರಕ್ಕೆ ನಾಲ್ಕು ಟನ್ ಪಪ್ಪಾಯಿ ಸಿಗುತ್ತದೆ. ಗಿಡಗಳನ್ನು ಸರಿಯಾಗಿ ಪೋಷಣೆ ಮಾಡಿಕೊಂಡರೆ ಒಂದೂವರೆ ವರ್ಷದ ವರೆಗೂ ಫಸಲು ಸಿಗುತ್ತದೆ ಎನ್ನುತ್ತಾರೆ ಇಂದಿರಮ್ಮ. ಸಧ್ಯ ಒಂದು ಎಕರೆ ಪ್ರದೇಶದಲ್ಲಿರುವ ಪಪ್ಪಾಯಿ ಮುಗಿಯುವ ಹಂತದಲ್ಲಿದ್ದು ಮತ್ತೆ ಎರಡು ಎಕರೆಯಲ್ಲಿ ಹೂ ಬಿಡುವ ಹಂತದಲ್ಲಿ ಪಪ್ಪಾಯಿ ಗಿಡಗಳಿಗೆ. ರೆಡ್ ಲೇಡಿ ಪಪ್ಪಾಯ ಹಣ್ಣಾದ ನಂತರವೂ ಒಂದು ವಾರ ಇಟ್ಟು ಕೊಯ್ದರು ಮೈಸೂರು ಫಾಕ್ನಂತೆ ಇರುತ್ತದೆ.ಮಾರುಕಟ್ಟೆಯಲ್ಲೂ ಇದಕ್ಕೆ ಉತ್ತಮ ಬೇಡಿಕೆಯೂ ಇದೆ.
ಪಪ್ಪಾಯಿಯಲ್ಲಿ ಅಂತರ ಬೆಳೆಯಾಗಿ ಚೆಂಡು ಹೂ ಹಾಕಲಾಗಿದ್ದು ಇದು ರೋಗ ತಡೆಯಾಗಿ ಕೆಲಸಮಾಡುತ್ತದೆ. ಜೊತೆಗೆ ಪಪ್ಪಾಯಿ ಗಿಡ ಹಾಕಲು ಮಾಡಿದ್ದ ಖಚ್ರ್ಚನ್ನು ತಂದುಕೊಟ್ಟಿದೆ. ದಸರಾ ಸಮಯದಲ್ಲಿ ಒಳ್ಳೆಯ ದರಕ್ಕೆ ಚೆಂಡು ಹೂ ಮಾರಾಟವಾಗಿ ಪಪ್ಪಾಯಿಗೆ ಮಾಡಿದ್ದ ಖಚ್ಚರ್ೆಲ್ಲಾ ಚೆಂಡು ಹೂವಿನಿಂದಲೆ ಬಂದಿದೆ ಎನ್ನುತ್ತಾರೆ ಇಂದಿರಮ್ಮ.
ಏಳನೇ ಕೂಳೆ ಬಾಳೆ : ಬೆಂಗಳೂರಿನ ಎಚ್.ಯು.ಗುಗಳೆ ಬಯೋಟೆಕ್ ಪ್ರೈ.ಲಿ.ನವರಿಂದ ಏಳು ವರ್ಷದ ಹಿಂದೆ ಜಿ-9 ಅಂಗಾಂಶ ಕೃಷಿಯ 600 ಬಾಳೆ ತಂದು ಹಾಕಿದ್ದೆವು. ತಾಯಿಬಾಳೆ ಮರಿ ಬಾಳೆ ಎಲ್ಲಾ ಸೇರಿ ಈಗ ನಮ್ಮಲ್ಲಿ 2500 ಬಾಳೆ ಗಿಡಗಳಿವೆ. ಈಗ ಇರುವುದು ಏಳನೇ ಕೂಳೆ ಬೆಳೆ. ಮೊದಲ ಎರಡು ವರ್ಷ ಅದಕ್ಕೆ ಗೊಬ್ಬರ ಕೊಟ್ಟಿದ್ದನ್ನು ಬಿಟ್ಟರೆ ಮತ್ತೆ ಏನನ್ನು ಕೊಡುತ್ತಿಲ್ಲ. ಸಂಪೂರ್ಣ ಸಾವಯವ ಪದ್ಧತಿಯಲ್ಲೆ ಬೆಳೆಯುತ್ತಿದೆ. ನೀರನ್ನು ಬಿಟ್ಟು ಬೇರೆನನ್ನು ಕೊಡುವುದಿಲ್ಲ.ಬಾಳೆ ಸೋಗು, ದಿಂಡು ಹೊದಿಕೆಯಾಗಿ ತೇವಾಂಶವನ್ನು ಕಾಪಾಡಿಕೊಂಡು ಮಣ್ಣನ್ನು ಫಲವತ್ತತೆ ಮಾಡಿದೆ.
ಲೋಕಸರದ ತೆಂಗು : ತೋಟದಲ್ಲಿ ಹಾಕಿರುವ ಎಲ್ಲಾ ತೆಂಗುಗಳು ಮಂಡ್ಯ ಜಿಲ್ಲೆಯ ಲೋಕಸರದಲ್ಲಿರುವ ತೆಂಗು ಮಂಡಳಿಯಿಂದ ತಂದು ಹಾಕಿರುವುದು. ಮಟ್ಟೆ ಸುಲಿದ ಒಂದು ತೆಂಗಿನ ಕಾಯಿ ಸರಾಸರಿ 700 ಗ್ರಾಂ ಬರುತ್ತದೆ. ಬೇರೆ ತೋಟದ ತೆಂಗಿನಕಾಯಿ ಸುಲಿದಾಗ 500 ಗ್ರಾಂ ಮಾತ್ರ ತೂಗುತ್ತದೆ. ಆದ್ದರಿಂದ ರೈತರು ಲೋಕಸರದ ತೆಂಗು ಬೋಡರ್್ನವರಿಂದ ತೆಂಗು ಸಸಿಗಳನ್ನು ತಂದು ಹಾಕುವುದು ಒಳ್ಳೆಯದು ಎಂದು ಇಂದಿರಮ್ಮ ಸಲಹೆ ನೀಡುತ್ತಾರೆ. ರೈತರಿಗೆ ಲೋಕಸರದಲ್ಲಿರು ತೆಂಗು ಮಂಡಳಿಯಲ್ಲಿ ತೆಂಗಿನ ಸಸಿಗಳು ಲಭ್ಯ ಇವೆ. ಆಸಕ್ತರು ಖರೀದಿಸಬಹುದು ಎನ್ನುತ್ತಾರೆ.
ಪಿಂಜರಪೋಲಿನ ಗೊಬ್ಬರ : ತಮ್ಮ ತೋಟಕ್ಕೆ ಬೇಕಾಗ ಕೊಟ್ಟಿಗೆ ಗೊಬ್ಬರವನ್ನು ಮೈಸೂರಿನ ಪಿಂಜರಪೋಲಿನಿಂದ ಖರೀದಿಸುತ್ತೇವೆ. ಒಂದು ಲೋಡ್ ಸಗಣಿ ಗೊಬ್ಬರಕ್ಕೆ 16 ಸಾವಿರ ರೂ,ಕೊಡುತ್ತೇವೆ. ಈ ಗೊಬ್ಬರವನ್ನು ಬಳಸುವುದರಿಂದ ಕಳೆ ಹೆಚ್ಚು ಬರುವುದಿಲ್ಲ. ಸಗಣಿಯ ಗುಣಮಟ್ಟವು ಉತ್ತಮವಾಗಿರುತ್ತದೆ ಎನ್ನುತ್ತಾರೆ.
ತಮ್ಮ ತೋಟದಲ್ಲಿ ಬಹುಪಾಲು ವಿಧವೆಯರೆ ಕೆಲಸಮಾಡಲು ಬರುತ್ತಾರೆ. ಅವರಿಗೂ ನಾವು ಕೆಲಸನೀಡಿ ಗ್ರಾಮೀಣ ಮಹಿಳೆಯದು ಆಥರ್ಿಕ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದ್ದೇವೆ. ತಮ್ಮಲ್ಲಿ ಬೆಳೆದ ತರಕಾರಿ, ಬಾಳೆ, ಪಪ್ಪಾಯಿಯನ್ನು ಚಾಮುಂಡಿ ಬೆಟ್ಟದ ದೇವಸ್ಥಾನ, ಮಹದೇಶ್ವರ ಬೆಟ್ಟ,ಅನಾಥಶ್ರಮಗಳಿಗೂ ಆಗಾಗ ಕಳುಹಿಸಿಕೊಡುವ ಇಂದಿರಮ್ಮ ತೋಟದಿಂದ ಬರುವ ಆದಾಯದ ಸ್ವಲ್ಪಭಾಗವನ್ನು ಸಂಬಂಧಿಕರಿಗೆ ಕೊಟ್ಟುಬಿಡುವ ಮೂಲಕ ಉದಾರತೆ ಮೆರೆಯುತ್ತಾರೆ.ತಾವು ತಂದ ಯಾವುದೆ ಬೀಜಗಳು ಮೊಳಕೆಯೊಡೆಯದಿದ್ದರೆ ಕಾನೂನು ಸಮರಕ್ಕೂ ಮುಂದಾಗುವ ಇವರು ಕೃಷಿಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಸ್ವಾಭಿಮಾನಿ ರೈತ ಮಹಿಳೆಯಾಗಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಇಂದಿರಮ್ಮ 9886140175 ಸಂಪಕರ್ಿಸಬಹುದು


ಮಂಗಳವಾರ, ಅಕ್ಟೋಬರ್ 11, 2016

ಆಮಿಷಕ್ಕೆ ಬಲಿಯಾಗದ,ಕಿರುಕುಳಕ್ಕೆ ಜಗ್ಗದ 
ಕಾಯಕನಿರತ ಸಹೋದರರು
ಮೈಸೂರಿನ ಬಂಡೀಪಾಳ್ಯ ಸಮೀಪ ಸಾವಯವ ಕೃಷಿಯ ಯಶೋಗಾಥೆ
ಮೈಸೂರು : ಹಣದ ಆಮಿಷಕ್ಕೆ ಬಲಿಯಾಗದೆ,ಸುತ್ತಮತ್ತಲಿನವರ ಕಿರುಕುಳಕ್ಕೂ ಜಗ್ಗದೆ, ಎದುರಾದ ನಾನಾ ಸಮಸ್ಯೆಗಳನ್ನೆ ಸವಾಲೆಂಬಂತೆ ಎದುರಿಸಿ ಕೃಷಿಯನ್ನೆ ಕಾಯಕಮಾಡಿಕೊಂಡು ಖುಶಿ ಕಾಣುತ್ತಿರುವ ಅಪರೂಪದ ಸಹೋದರರು ನೀಲಕಂಠ ಮತ್ತು ಸಚ್ಚಿದಾನಂದ.

ಮೈಸೂರಿನಿಂದ ನಂಜನಗೂಡಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂಡೀಪಾಳ್ಯ ಪಕ್ಕ ವರುಣ ಮೇಲ್ಸೇತುವೆ ಹಾದು ಹೋಗುತ್ತದೆ. ಅಲ್ಲೇ ರಸ್ತೆಯ ಬಲಕ್ಕೆ ಕೂಗಳತೆ ದೂರದಲ್ಲೆ ಇದೆ "ಕೃಷ್ಣಮೂತರ್ಿ ಫಾರಂ" ಎಂಬ ಸಂಪೂರ್ಣ ಸಾವಯವ ತೋಟ.ಇದು ಹಿರಿಯ ಗಾಂಧಿವಾದಿ, ಕೃಷಿಕ ಅಗ್ರಹಾರದ ಕೃಷ್ಣಮೂತರ್ಿ ಅವರ ತೋಟ.

ಸಾವಯವ ಕೃಷಿಯ ಬಗ್ಗೆ ಅಷ್ಟೊಂದು ಅರಿವು ಮತ್ತು ಜಾಗೃತಿ ಇಲ್ಲದ 80 ರ ದಶಕದಲ್ಲೆ ತಮ್ಮ ತೋಟವನ್ನು ಸಾವಯವ ಕೃಷಿಗೆ ಒಗ್ಗಿಸಿಕೊಂಡು ಕೃಷಿ ವಿಜ್ಞಾನಿಗಳ ಗಮನ ಸೆಳೆದಿದ್ದರು ಈ ಸಹೋದರರು. ಸಾವಯವ ಕೃಷಿ ಕೂಟ ಸ್ಥಾಪನೆ ಮಾಡಿಕೊಂಡು ತಮ್ಮ ತೋಟದಲ್ಲಿ ಆ ಕಾಲದಲ್ಲೆ ಸಭೆಗಳನ್ನು ನಡೆಸಿದ್ದರು. ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಪರಿಸರ ತಜ್ಞ,ನಿವೃತ್ತ ಅರಣ್ಯಧಿಕಾರಿ ಎಲ್ಲಪ್ಪ ರೆಡ್ಡಿ, ಭತ್ತದ ತಳಿ ವಿಜ್ಞಾನಿ ಡಾ.ಮಹಾದೇವಪ್ಪ ಸೇರಿದಂತೆ ಹಲವು ಗಣ್ಯರು ತೋಟದಲ್ಲಿ ನಡೆದ ಕೃಷಿಕರ ಕೂಟದ ಸಭೆಗಳಲ್ಲಿ ಭಾಗವಹಿಸಿದ್ದನ್ನು ಈಗಲೂ ನೀಲಕಂಠ ನೆನಪಿಸಿಕೊಂಡು ಭಾವುಕರಾಗುತ್ತಾರೆ.
ಈಗಲೂ ಭೂಮಿಯ ಉಳುಮೆ ಮಾಡಲು ಎರಡು ಜೊತೆ ಎತ್ತು ಮತ್ತು ಗಾಡಿ ಇಟ್ಟುಕೊಂಡಿರುವ ಇವರು,ಯಂತ್ರಗಳನ್ನು ಹೆಚ್ಚು ಬಳಸುವುದಿಲ್ಲ. ಭೂಮಿಯನ್ನು ಹೆಚ್ಚು ಉಳುಮೆ ಮಾಡುವುದಿಲ್ಲ. ಬಾಳೆ ಮತ್ತು ಅಡಿಕೆ ತೋಟವನ್ನಂತು ಉಳುಮೆ ಮಾಡುವುದೆ ಇಲ್ಲ.

ಮೈಸೂರು ಆಕಾಶವಾಣಿ ಕೇಂದ್ರದ ಕೇಶವಮೂತರ್ಿ ಅವರು ತೋಟದಲ್ಲಿ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.ಮಂಡ್ಯದ ವಿ.ಸಿ.ಫಾರಂನ ವಿಜ್ಞಾನಿಗಳು, ಹೊಸ ಭತ್ತದ ತಳಿಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಯಲು ಮಾರ್ಗದರ್ಶನ ನೀಡಿದ್ದಾರೆ.
ಭೂತಾಯಿಯ ರಕ್ಷಣೆಗೆ ನಿಂತರು :
ಮೈಸೂರು ನಗರದ ಸುತ್ತಮುತ್ತ ಭೂಮಿಯ ಬೆಲೆ ಗಗನಮುಟ್ಟಿದೆ. ರೈತರು ಹಣದ ಆಮಿಷಕ್ಕೆ ಬಲಿಯಾಗಿ ತಮ್ಮ ತುಂಡು ಭುಮಿಯನ್ನು ಕಳೆದುಕೊಂಡು ನಿರ್ಗತಿಕರಾಗುತ್ತಿದ್ದಾರೆ. ಇಂತಹವರ ನಡುವೆ ಭೂಮಿಯನ್ನೆ ತಾಯಿ ಎಂದು ನಂಬಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಕೃಷಿ ಮಾಡುತ್ತಿರುವ ಕೃಷ್ಣಮೂತರ್ಿ ಅವರ ಮಕ್ಕಳಾದ ನೀಲಕಂಠ ಮತ್ತು ಸಚ್ಚಿದಾನಂದ ಸಹೋದರರನ್ನು ನೋಡಿದರೆ ಹೆಮ್ಮೆ ಮತ್ತು ಗೌರವ ಭಾವನೆ ಮೂಡುತ್ತದೆ.
ನಮ್ಮಗೂ ತುಂಬಾ ಜನ ಹತ್ತು ಹಲವು ಆಮಿಷಗಳನ್ನು ಒಡ್ಡಿದರು.ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು ಮಾರಾಟ ಮಾಡಿ ಬಂದ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟು ನೆಮ್ಮದಿಯಿಂದ ಇದ್ದುಬಿಡಿ ಎಂದು ದುರಾಸೆ ಹುಟ್ಟಿಸಿದರು. ಇದಕ್ಕೆಲ್ಲ ನಾವು ಕಿವಿಗೊಡಲಿಲ್ಲ.ಆಗ 80 ದಶಕದಲ್ಲಿ ನಮ್ಮ ತೋಟದಲ್ಲಿದ್ದ ಶೆಡ್ಗೆ ಬೆಂಕಿ ಇಟ್ಟರು. ಎತ್ತು,ದನಕರುಗಳನ್ನು ಕಳ್ಳತನ ಮಾಡಿದರು.ರಾತ್ರೋರಾತ್ರಿ ಬಾಳೆಯ ಗೊನೆಗಳನ್ನು ಕಡಿದು ಹಾಕಿದರು. ಇದಕ್ಕೆಲ್ಲ ನಾವು ಜಗ್ಗಲಿಲ್ಲ.
ಇದರಿಂದ ನಮ್ಮಲ್ಲಿ ಛಲ ಮತ್ತು ಹಠ ಮತ್ತೂ ಜಾಸ್ತಿ ಆಯಿತೆ ವಿನಃ, ಇಂತಹ ಹೀನ ಕೃತ್ಯಗಳಿಗೆ ಹೆದರಿ ತೋಟವನ್ನು ಮಾರಾಟ ಮಾಡುವ ಭಯ ಉಂಟಾಗಲಿಲ್ಲ. ಭೂಮಿತಾಯಿಯನ್ನು ರಕ್ಷಣೆ ಮಾಡಬೇಕು ಅಂತ ನಮ್ಮ ತಂದೆ ತೀಮರ್ಾನಿಸಿದರು. ಹಗಲು ರಾತ್ರಿ ತೋಟದ ಕಾವಲು ಇದ್ದು ಭೂಮಿಯನ್ನು ಉಳಿಸಿಕೊಂಡೆವು.ಬಂಡೀಪಾಳ್ಯದಲ್ಲಿ ಎಪಿಎಂಸಿ ಮಾರುಕಟ್ಟೆ ಬಂದ ಮೇಲೆ ಕಳ್ಳತನ ಕಡಿಮೆಯಾಗಿದೆ.ನಾವು ಸ್ವಲ್ಪ ನೆಮ್ಮದಿಯಾಗಿ ಬೇಸಾಯ ಮಾಡುತ್ತಿದ್ದೇವೆ ಎನ್ನುತ್ತಾರೆ.
199ರಿಂದ ಈಚೆಗೆ ಆಳುಕಾಳು ಸಮಸ್ಯೆಯಿಂದ ಕೃಷಿಗೆ ತುಂಬಾ ತೊಂದರೆಯಾಗಿದೆ ಆದರೂ ನಾವು ಯಾವುದೆ ರಾಸಾಯನಿಕ ಬಳಸದೆ 25 ವರ್ಷಗಳಿಂದಲೂ ಕೃಷಿಮಾಡುತ್ತಾ ಬಂದಿದ್ದೇವೆ ಎಂಬ ಸಹೋದರರು ಕೃಷಿಯಿಂದ ನಿರೀಕ್ಷಿತ ಆದಾಯ ಬರುತ್ತಿಲ್ಲ.ಸರಕಾರದ ಕೃಷಿನೀತಿಗಳು ರೈತರಿಗೆ ಸಹಕಾರಿಯಾಗಿಲ್ಲ. ಆದರೂ ಕೃಷಿಯಿಂದ ನಮಗೆ ತೃಪ್ತಿ, ಸಂತೋಷ ಮತ್ತು ಆರೋಗ್ಯ ಸಿಕ್ಕಿದೆ ಎಂದು ಹೇಳುವುದನ್ನು ಮರೆಯುವುದಿಲ್ಲ.
ಹತ್ತು ಎಕರೆ ತೋಟದಲ್ಲಿ ತೆಂಗು, ಅಡಿಕೆ,ಭತ್ತ, ಬಾಳೆ,ವೀಳ್ಯದೆಲೆ,ಮಾವು,ಅರಿಶಿನ, ಬಟರ್ ಪ್ರೂಟ್,ಹಲಸು,ಅಮಟೆ ಕಾಯಿ ಹೀಗೆ ಹತ್ತು ಹಲವು ಬೆಳೆಗಳಿವೆ. ಇಪ್ಪತ್ತಕ್ಕೂ ಹೆಚ್ಚು ಹಸುಗಳಿದ್ದು ದಿನಕ್ಕೆ ನಲವತ್ತು ಲೀಟರ್ ಸಾವಯವ ಹಾಲು ಕೊಡುತ್ತಿವೆ. ಅವುಗಳಿಂದ ಬರುವ ಸಗಣಿ,ಗಂಜಲ ಜೊತೆಗೆ ಕೃಷಿ ತ್ಯಾಜ್ಯವನ್ನು ಕಾಂಪೋಸ್ಟ್ ಗೊಬ್ಬರವನ್ನಾಗಿ ಮಾಡಿಕೊಂಡು ಅದನ್ನೆ ಬಳಸಿ ಬೇಸಾಯ ಮಾಡುತ್ತಿದ್ದಾರೆ.
ನಮ್ಮ ತಂದೆ ಹಿರಿಯ ಸ್ವಾತಂತ್ರ ಹೋರಾಟಗಾರರಾದ ಕೃಷ್ಣಮೂತರ್ಿ ಅವರು ನಮ್ಮಲ್ಲಿ ಕೃಷಿ ಪ್ರೀತಿ ಮೂಡಿಸಿದ ಗುರು. ಗದ್ದೆಯಲ್ಲಿ ಭತ್ತದ ಇಳುವರಿ ಹೆಚ್ಚು ಬಂದಾಗ ಅದನ್ನು ಮಾರಾಟ ಮಾಡಲು ಮನಸ್ಸಾಗದೆ, ಬಡವಿದ್ಯಾಥರ್ಿಗಳ ವಿಧ್ಯಾಭ್ಯಾಸಕ್ಕೆ ನೆರವಾಗಲೆಂದು ಅಗ್ರಹಾರದ ಪೂರ್ಣಯ್ಯನವರ ಛತ್ರದಲ್ಲಿ ಹಾಸ್ಟೆಲ್ ಆರಂಭಿಸಿದರು ನಮ್ಮ ತಂದೆ. ಇಲ್ಲಿ ಓದಿದ ವಿದ್ಯಾಥರ್ಿಗಳು ಸರಕಾರ ಉನ್ನತ ಹುದ್ದೆಗೆ ಏರಿದರು.ಕೆಲವರು ವಿದೇಶಗಳಿಗೂ ಹೋಗಿ ಬದುಕು ಕಟ್ಟಿಕೊಂಡರು. ಮೂರು ದಶಕಗಳಿಗೂ ಹೆಚ್ಚು ಕಾಲ ವಿದ್ಯಾಥರ್ಿನಿಲಯ ನಡೆಯಿತು. ಈಗಲೂ ಅಲ್ಲಿ ಓದಿದ ಉನ್ನತ ಹುದ್ದೆ ಅಲಂಕರಿಸಿ ನಿವೃತ್ತರಾದವರು ನಮ್ಮ ತಂದೆಯವರನ್ನು ನೋಡಿ ಹೋಗಲು ಮನೆಗೆ ಬರುತ್ತಾರೆ ಎಂದು ಬಾವುಕರಾಗುತ್ತಾರೆ.ಹಾಸ್ಟೆಲ್ ನಡೆಯುತ್ತಿದ್ದ ಆ ಜಾಗದಲ್ಲಿ ಈಗ ಮಹಾ ನಗರ ಪಾಲಿಕೆಯವರು ಛತ್ರ ನಿಮರ್ಾಣ ಮಾಡಿದ್ದಾರೆ.
ಹಸಿರು ಕ್ರಾಂತಿ ದುಷ್ಪರಿಣಾಮ : 
ದೇಶದಲ್ಲಿ ಹಸಿರು ಕ್ರಾಂತಿ ನಡೆಯುತ್ತಿದ್ದ ಕಾಲದಲ್ಲಿ ಆಹಾರ ಉತ್ಪಾದನೆಯನ್ನು ದ್ವಿಗುಣಗೊಳಿಸಲು ಕೃಷಿ ವಿಜ್ಞಾನಿಗಳು ಮುಂದಾದರು. ಇದರಿಂದ ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾಯಿತು. ಇದರ ಪರಿಣಾಮ ಗೊತ್ತಾಗುವುದು ತಡವಾಯಿತು.ಅಷ್ಟರಲ್ಲಾಗಲೆ ನಮ್ಮ ಭೂಮಿ ರಸಾಯನಿಕ ಬಳಕೆಯಿಂದ ಬರಡಾಗಿತ್ತು. ನಾವು ಏನೇ ಬೆಳೆಯಬೇಕಾದರು ತುಂಬಾ ರಾಸಾಯನಿಕ ಗೊಬ್ಬರ ಬಳಸಬೇಕಾಯಿತು.ಇದರಿಂದ ಬೇಸಾಯದ ಖಚರ್ು ಜಾಸ್ತಿ ಆಗಿ ಆದಾಯ ಕಡಿಮೆ ಆಯಿತು.
ಇಂದಿಗೂ ಗೊಬ್ಬರದ ಅಂಗಡಿಯ ಮುಂದೆ ನಿಂತು ಕ್ರಿಮಿನಾಶಕ ಮತ್ತು ಸಕರ್ಾರಿ ಗೊಬ್ಬರ ಖರೀದಿ ಮಾಡುವ ರೈತರನ್ನು ನೋಡಿದರೆ ನೋವಾಗುತ್ತದೆ.ಗಂಜಲ,ಬೇವಿನ ಎಲೆ,ಭೂ ತಾಳೆ,ಹುಳಿ ಮಜ್ಜಿಗೆ ಹೀಗೆ ತೋಟದಲ್ಲೆ ಸಿಗುವ ಔಷದೀಯ ಗಿಡಗಳನ್ನು ಬಳಸಿಕೊಂಡರೆ ಯಾವ ಕ್ರಿಮಿನಾಶಕಗಳು ಬೇಕಾಗುವುದಿಲ್ಲ. ಖಚರ್ು ಇರುವುದಿಲ್ಲ. ಈ ಬಗ್ಗೆ ಕೃಷಿ ಅಧಿಕಾರಿಗಳು ನಮ್ಮ ರೈತರಲ್ಲಿ ಅರಿವು ಮೂಡಿಸಬೇಕು ಎನ್ನುತ್ತಾರೆ ನೀಲಕಂಠ.
1980 ರವರೆಗೂ ನಾವು ರಾಸಾಯನಿಕ ಗೊಬ್ಬರ ಬಳಸಿ ಕೃಷಿ ಮಾಡುತ್ತಿದ್ದೆವು. ಅದೆ ಸಮಯದಲ್ಲಿ ಸಾಹಿತಿ ಎ.ಎನ್.ಮೂತರ್ಿರಾವ್ ಅವರ ಮಗ ನಾಗರಾಜು ವಿದೇಶದಿಂದ ಕೃಷಿ ಮಾಡಲೆಂದೆ ಮೈಸೂರಿಗೆ ಬಂದರು. ತೋಟಕ್ಕೆ ಬಂದು ನಮ್ಮ ತಂದೆಯವರನ್ನ ಭೇಟಿ ಆದರು. ಆಗ ರಾಸಾಯನಿಕ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಹೇಳಿದರು. ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಂಡಷ್ಟೆ ಜತನವಾಗಿ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಅದಕ್ಕಾಗಿ ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲದಿರಲು ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಬೇಕಾದ ಅನಿವಾರ್ಯತೆ ಬಗ್ಗೆ ತಿಳಿಸಿಕೊಟ್ಟರು. ಅಂದಿನಿಂದ ಇಂದಿನವರೆಗೆ ನಾವು ಮಣ್ಣಿಗೆ ಒಂದು ಹಿಡಿ ರಾಸಾಯನಿಕ ಗೊಬ್ಬರ ಬಳಸಿಲ್ಲ ಎಂದು ಈ ಸಹೋದರರು ಹೆಮ್ಮೆಯಿಂದ ಹೇಳುತ್ತಾರೆ.
ಇಪ್ಪತ್ತು ವರ್ಷಗಳ ಹಿಂದೆ ಬೇಲಿಯಲ್ಲಿ ಬೆಳೆಯುತ್ತಿದ್ದ ಉಗನಿ ಹಂಬು.ಸೊಪ್ಪು,ಭೂತಾಳೆ ಎಲ್ಲ ಕತ್ತರಿಸಿಕೊಂಡು ಬಂದು ಕಾಂಪೋಸ್ಟ್ ಮಾಡಿ ಮಣ್ಣಿಗೆ ಹಸಿರೆಲೆ ಗೊಬ್ಬರ ಸೇರಿಸುತ್ತಿದ್ದೆವು. ಇದಕ್ಕಾಗಿ ಇಬ್ಬರು ಕೂಲಿಯವರನ್ನು ನೇಮಿಸಿಕೊಂಡಿದ್ದೆವು. ಈಗ ಕೂಲಿ ಕಾಮರ್ಿಕರು ಇಲ್ಲ, ಜೀವಂತ ಬೇಲಿಗಳೂ ಇಲ್ಲ ಎನ್ನುತ್ತಾರೆ.
ಮೊದಲು ನಾವು ಭತ್ತದ ಜೊತೆಗೆ ಹೆಚ್ಚು ಹೆಚ್ಚು ತರಕಾರಿಯನ್ನು ಬೆಳೆಯುತ್ತಿದ್ದೆವು.ಆಗ ಸಾವಯವ ಉತ್ಪನ್ನಗಳ ಬಗ್ಗೆ ಜನರಲ್ಲಿ ಅರಿವು ಇರಲಿಲ್ಲ.ನಾವು ಬೆಳೆದ ಹಣ್ಣು ತರಕಾರಿಗಳನ್ನು ಹಾಪ್ಕಾಮ್ಸ್ ಮಳಿಗೆ ಮತ್ತು ಎಪಿಎಂಸಿ ಮಾರುಕಟ್ಟೆಯಲ್ಲೆ ಮಾರಾಟ ಮಾಡುತ್ತಿದ್ದೆವು ಎನ್ನುತ್ತಾರೆ.
ಮೈಸೂರಿನ "ನೇಸರ"ಆಗ್ಯರ್ಾನಿಕ್ ಉತ್ಪನ್ನ ಮಾರಾಟ ಮಳಿಗೆಯ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿರುವ ಈ ಸಹೋದರರು, ಈಗ ತಾವು ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಿರು ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆ ಇದ್ದು ಜೀವಾಮೃತ, ನಿಸರ್ಗ,ನೇಸರ ಸೇರಿದಂತೆ ಹಲವು ಸಾವಯವ ಮಾರಾಟ ಮಳಿಗೆಗಳಿಗೆ ಮಾರಾಟ ಮಾಡುತ್ತಾರೆ.
ಸಹಜ ಅರಿಶಿನ ಕೃಷಿ: ಮೂರು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಸಾವಯವ ಪದ್ಧತಿಯಲ್ಲಿ ಅರಿಶಿನ ಬೆಳೆಯುತ್ತಿರುವ ನೀಲಕಂಠ ಮತ್ತು ಸಚ್ಚಿದಾನಂದ ಸಹೋದರರು ಇದನ್ನು ಬೆಂಗಳೂರಿನ ಫಲದಾ ಆಗ್ಯರ್ಾನಿಕ್ ಸಂಸ್ಥೆಗೆ ಮಾರುಕಟ್ಟೆ ದರಕ್ಕಿಂತ ಸ್ವಲ್ಪ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಾರೆ.
ಫಲದಾ ಆಗ್ಯರ್ಾನಿಕ್ ಸಂಸ್ಥೆಯವರು ವಿದೇಶಿ ರೈತರನ್ನು ಇವರ ತೋಟಕ್ಕೆ ಕರೆದುಕೊಂಡು ಬಂದು ಪ್ರಾತ್ಯಕ್ಷಿಕೆ ನಡೆಸಿ,ಇವರ ಬೇಸಾಯ ಪದ್ಧತಿಯನ್ನು ಮೆಚ್ಚಿದ್ದಾರೆ.
ಇಸ್ಕಾನ್ ಸಂಸ್ಥೆ ಇವರ ತೋಟಕ್ಕೆ ಇಕೋ ಸಾವಯವ ದೃಢೀಕರಣ ಪತ್ರ ನೀಡಿದೆ. ವರ್ಷದಲ್ಲಿ ಒಂದೆರಡು ಸಲ ತೋಟಕ್ಕೆ ದಿಢೀರ್ ಭೇಟಿ ನೀಡುವ ಇಸ್ಕಾನ್ ಸಾವಯವ ತಂಡ ಬೆಳೆ ಬೆಳೆಯಲು ಬಳಸುವ ಗೊಬ್ಬರ, ಔಷದ ಎಲ್ಲವನ್ನು ಪರೀಕ್ಷಿಸುತ್ತದೆ. ಮಣ್ಣು, ಸ್ರೈಯರ್,ಕಾಂಪೋಸ್ಟ್ ಎಲ್ಲವನ್ನೂ ಪರೀಕ್ಷಿಸಿ ರಾಸಾಯನಿಕ ಮಿಶ್ರಣ ಮಾಡದಿರುವುದನ್ನು ಖಚಿತ ಪಡಿಸಿಕೊಳ್ಳುತ್ತಾರೆ. ನಾವು ಏನಾದರೂ ಅಲ್ಪ ಸ್ವಲ್ಪ ರಾಸಾಯನಿಕ ಬಳಸಿದರೆ ನಮ್ಮ ಸಾವಯವ ದೃಢೀಕರಣ ರದ್ದಾಗುತ್ತದೆ ಎನ್ನುವ ಈ ಸಹೋದರರು ಸಾವಯವ ಬೇಸಾಯ ಮಾಡುವುದರಿಂದ ಖಚರ್ು ಕಡಿಮೆ ಆದಾಯವೂ ಹೆಚ್ಚು ಎನ್ನುವುದನ್ನು ತಮ್ಮ ಸುದೀರ್ಘ ಅನುಭವದಿಂದ ಕಂಡುಕೊಂಡಿದ್ದಾರೆ. ಆಸಕ್ತರು ಸಚ್ಚಿದಾನಂದ ಅವರನ್ನು 9964892355 ಸಂಪಕರ್ಿಸಬಹುದು.






ಶನಿವಾರ, ಅಕ್ಟೋಬರ್ 8, 2016

 ಶೂನ್ಯ ಬಂಡವಾಳದ ನೈಸಗರ್ಿಕ ಕೃಷಿಯ ಹಸಿರು ತೋಟ
ಹತಾಶ ರೈತರಲ್ಲಿ ಭರವಸೆ ಮೂಡಿಸುತ್ತಿರುವ ಹೊಸಕೋಟೆ ಸಹೋದರರು 
ಮೈಸೂರು : ಭೂಮಿಗೆ ಸತತವಾಗಿ ಹತ್ತಾರು ವರ್ಷಗಳ ಕಾಲ ರಾಸಾಯನಿಕ ಗೊಬ್ಬರ ಸುರಿದು ಬೇಸಾಯ ಮಾಡಿದರೆ ಭೂಮಿತಾಯಿ ಬಂಜೆಯಾಗುತ್ತಳೆ.ಅದೇ "ಸುಭಾಷ್ ಪಾಳೇಕಾರ್ ಪದ್ಧತಿಯಲ್ಲಿ ಬೀಜಾಮೃತ,ಜೀವಾಮೃತ, ಹೊದಿಕೆ ವಿಧಾನ ಅಳವಡಿಸಿಕೊಂಡರೆ ಐದಾರು ವರ್ಷದಲ್ಲಿ ಮಣ್ಣು ಜೀವಂತವಾಗಿ ಮತ್ತಷ್ಟು ಫಲ ನೀಡಲು ಸಿದ್ಧವಾಗುತ್ತದೆ". ಇದು ನಮ್ಮ ರೈತರಿಗೆ ಎಷ್ಟೇ ಹೇಳಿದರು ಅರ್ಥವಾಗುತ್ತಿಲ್ಲ ಎಂದರು ಸಿದ್ದಪ್ಪ.
"ಐದು ವರ್ಷಗಳ ಹಿಂದೆ ಈ ತೋಟವನ್ನು ನೋಡಿದರೆ ಎಂತಹವರಿಗೂ ಬೇಸರವಾಗುತ್ತಿತ್ತು.ತೆಂಗಿನ ಗರಿಗಳಿಗೆ ಬೆಂಕಿರೋಗ ತಗುಲಿ ತೋಟ ನಾಶವಾಗುವ ಹಂತ ತಲುಪಿತ್ತು. ಲಾಯರ್ರು ಭಾಗತಕ್ಕಂಡು ತೋಟ ಹಾಳು ಮಾಡಬಿಟ್ಟ ಅಂತ ಜನ ಮಾತ್ತಾಡಿಕೊಳ್ಳುತ್ತಿದ್ರು". ಈಗ ನಮ್ಮ ತೋಟ ನೋಡಿದವರು ಅಚ್ಚರಿ ಪಡುವಂತೆ ಹಸಿರಿನಿಂದ ಕಂಗೊಳಿಸುತ್ತಿದೆ. ಪಾಳೇಕಾರ್ ಪದ್ಧತಿ ಅಳವಡಿಸಿಕೊಂಡ ನಂತರ ಮಣ್ಣು ವಿಷವತರ್ುಲದಿಂದ ಹೊರಗೆ ಬಂದು ತೋಟ ಜೀವಂತವಾಗಿ ಮಿಡಿಯುತ್ತಿದೆ,ಕೇವಲ ಐದು ವರ್ಷದಲ್ಲಿ ಇಲ್ಲಿ ಮ್ಯಾಜಿಕ್ ನಡೆದಂತೆ ಕಾಣುತ್ತದೆ.ಆದರೆ ನಾವು ಏನೂ ಮ್ಯಾಜಿಕ್ ಮಾಡಿಲ್ಲ.ನಾಟಿ ಹಸುವಿನ ಗಂಜಲ ಮತ್ತು ಸಗಣಿ ಇಲ್ಲಿ ಮ್ಯಾಜಿಕ್ ಮಾಡಿದೆ ಎಂದರು ಹೊಸಕೋಟೆ ಬಸವರಾಜು.
ಮೈಸೂರಿನಿಂದ ಸುತ್ತೂರಿಗೆ ಹೋಗುವ ದಾರಿಯಲ್ಲಿ 20 ಕಿ.ಮೀ. ದೂರದಲ್ಲಿದೆ ಹೊಸಕೋಟೆ. ಮರಡಿಹುಂಡಿಗೇಟ್ ಬಸ್ ನಿಲ್ದಾಣದಿಂದ ಬಲಕ್ಕೆ ತಿರುಗಿ ಒಂದು ಕಿ.ಮೀ.ಹೋದರೆ ಎರಡೂವರೆ ಎಕರೆ ಪ್ರದೇಶದಲ್ಲಿರುವ ಶೂನ್ಯ ಬಂಡವಾಳದ ನೈಸಗರ್ಿಕ ಕೃಷಿ ತೋಟವೊಂದು ಗಮನಸೆಳೆಯುತ್ತದೆ. ಪಕ್ಕದಲ್ಲೆ ವರುಣಾ ನಾಲೆ ಹಾದು ಹೋಗಿದ್ದರು ನೀರು ಹರಿಯುವುದು ಅಪರೂಪ. ಸುತ್ತಮುತ್ತಲಿನ ನೂರಾರು ಎಕರೆ ಪ್ರದೇಶ ಬಯಲಿನಂತೆ ಕಾಣುತ್ತದೆ.ಅಲ್ಲಲ್ಲಿ ಸಂಪ್ರಾದಾಯಿಕ ವಿಧಾನದಲ್ಲಿ ರೈತರು ಕಬ್ಬು,ತರಕಾರಿ ಬೆಳೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿ ಇರುವ ಪ್ರದೇಶದಲ್ಲಿ ಸಿದ್ದಪ್ಪ ಮತ್ತು ಹೊಸಕೋಟೆ ಬಸವರಾಜು ಸಹೋದರರು ಬೋರ್ವೆಲ್ನಿಂದ ಎರಡು ಇಂಚಿನಷ್ಟು ಬರುವ ನೀರನ್ನು ಬಳಸಿಕೊಂಡು ಮಾಡಿರುವ ಕೃಷಿ ಪ್ರಯೋಗ ಅವರ ದೂರದೃಷ್ಠಿ ಮತ್ತು ಜಾಣ್ಮೆಗೆ ಹಿಡಿದ ಕನ್ನಡಿಯಂತಿದೆ.
ಹೊಸಕೋಟೆಯ ಮೂರ್ತಪ್ಪ ಮತ್ತು ಸರೋಜಮ್ಮರ ಪುತ್ರ ಜಿಲ್ಲಾ ರೈತಸಂಘದ ಪ್ರಧಾನ ಕಾರ್ಯದಶರ್ಿಯೂ ಆಗಿರುವ ಬಸವರಾಜು ಮೈಸೂರಿನ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಮಾಡುತ್ತಾರೆ.ಇವರ ಸಹೋದರ ಸಿದ್ದಪ್ಪನವರಿಗೆ ಶಾಲೆಗೆ ಹೋದ ನೆನಪಿಲ್ಲ. ಕೇಳಿದರೆ ಎರಡನೆ ಕ್ಲಾಸ್ವರೆಗೆ ಹೋಗಿರಬಹುದು ಅಷ್ಟೆ ಸಾರ್ ಎನ್ನುತ್ತಾರೆ. ಆದರೆ ಅವರ ಮಾತಿನಲ್ಲಿ ಮಲ್ಚಿಂಗ್,ನೈಟ್ರೋಜನ್,ಎನ್ಪಿಕೆ ಎಂಬ ಇಂಗ್ಲೀಷ್ ಪದಗಳು ಪುಂಕಾನೂಪುಂಕವಾಗಿ ಬರುತ್ತವೆ.ಪರಿಸರ ಮತ್ತು ಮಾನವ ಸಂಬಂಧದ ಬಗ್ಗೆ ಯಾವ ಕೃಷಿ ವಿಜ್ಞಾನಿಗೂ ಕಡಿಮೆ ಇಲ್ಲದಂತೆ ಮಾತನಾಡುತ್ತಾರೆ.
ಅಣ್ಣ ಬಸವರಾಜು ಮೈಸೂರಿನಲ್ಲಿ ವಾಸವಾಗಿದ್ದು ಬಿಡುವಾದಗೆಲ್ಲಾ ತೋಟಕ್ಕೆ ಹೋಗಿ ಸೂಕ್ತ ಸಲಹೆ,ಮಾರ್ಗದರ್ಶನ ಮಾಡುತ್ತಾರೆ. ಜೊತೆಗೆ ಸಣ್ಣಪುಟ್ಟ ಹಣಕಾಸಿನ ನೆರವನ್ನು ನೀಡುತ್ತಾರೆ. ಅಣ್ಣ ಹೇಳಿದ್ದನ್ನು ಶ್ರದ್ಧೆಯಿಂದ ಕೇಳಿಸಿಕೊಳ್ಳುವ ತಮ್ಮ ಸಿದ್ದಪ್ಪ ಶ್ರಮ ಮತ್ತು ಜಾಣ್ಮೆಯನ್ನು ಬಳಸಿ ಸುಂದರವಾದ ಹಸಿರುತೋಟವನ್ನು ಕಟ್ಟಿದ್ದಾರೆ.
ಎರಡು ಎಕರೆ ಇಪ್ಪತ್ತೆರಡು ಗುಂಟೆ ಪ್ರದೇಶದಲ್ಲಿ 94 ತೆಂಗು. ಒಂದುಸಾವಿರದ ನೂರು ಅಡಿಕೆ. ಎಂಟನೂರು ಬಾಳೆ, ಮೂಸಂಬಿ,ಕಿತ್ತಳೆ,ಕೋಕೋ,ಮಾವು,ಹಲಸು,ಗ್ಲಿರಿಸೀಡಿಯಾ ಅಲ್ಲದೆ ತೋಟದ ಸುತ್ತಲ್ಲೂ ತೇಗದ ಮರಗಳು ಹಸಿರನ್ನೆ ಹೊದ್ದುಕೊಂಡು ನಗುತ್ತಿವೆ. ಇದಲ್ಲದೆ ಗ್ರಾಮದಲ್ಲಿ ಮನೆಯ ಸಮೀಪ ಇರುವ ಒಂದುಕಾಲು ಎಕರೆ ಗದ್ದೆ ಬಯಲಿನಲ್ಲಿ ಸುಭಾಷ್ ಪಾಳೇಕಾರ್ ಶೂನ್ಯ ಬಂಡವಾಳ ಪದ್ಧತಿಯಲ್ಲಿ ಭತ್ತವನ್ನು ಬೆಳೆಯುತ್ತಿದ್ದು ಮಾದರಿ ಕೃಷಿಕರಾಗಿದ್ದಾರೆ.
ಕೃಷಿಯೇ ಬೇಡವಾಗಿದ್ದ ಕಾಲ : ಐದಾರು ವರ್ಷಗಳ ಹಿಂದೆ ತೋಟಕ್ಕೆ ರಾಸಾಯನಿಕ ಗೊಬ್ಬರ ಬಳಸುತ್ತಿದ್ದಾಗ ವೆಚ್ಚ ಮತ್ತು ಆದಾಯ ಎರಡೂ ಒಂದೆ ಆಗಿ ನಮ್ಮಗೇನೂ ಲಾಭ ಸಿಗುತ್ತಿರಲ್ಲಿಲ್ಲ. ಯೂರಿಯಾ,ಪೋಟ್ಯಾಷ್ ಜೊತೆಗೆ ಪವರ್ ಟಿಲ್ಲರ್ನಲ್ಲಿ ಉಳುಮೆ ಅಂತೆಲ್ಲಾ ತುಂಬಾ ಹಣ ಖಚರ್ಾಗಿಬಿಡುತ್ತಿತ್ತು. ಒಂದು ಹಂತದಲ್ಲಿ ವ್ಯವಸಾಯದ ಸವಾಸನೇ ಬೇಡ ಎಂಬ ಪರಿಸ್ಥಿತಿ. ನಾನೂ ಕೂಡ ತೋಟದ ಕಡೆ ಹೆಚ್ಚಿಗೆ ಬರುತ್ತಿರಲಿಲ್ಲ. ರೈತಪರ ಹೋರಾಟ, ವಕೀಲಿ ವೃತ್ತಿ ಅಂತ ತೊಡಗಿಸಿಕೊಂಡಿದ್ದೆ. ಬೇಸಾಯದ ಬಗ್ಗೆ ಬೇಸರವಾಗಿದ್ದ ಇಂತಹ ಸಂಕಷ್ಟದ ದಿನಗಳಲ್ಲೇ ಕತ್ತಲಾಗಿದ್ದ ನಮ್ಮ ಪಾಲಿಗೆ ಬೆಳಕಿನ ಕಿರಣವಾಗಿ ಬಂದವರೆ ಶೂನ್ಯ ಬಂಡವಾಳದ ಕೃಷಿ ಬ್ರಹ್ಮ ಸುಭಾಷ್ ಪಾಳೇಕರ್.ಕೃಷಿಯ ಬಗ್ಗೆ ಅಲ್ಲಿಂದ ನಮ್ಮ ಚಿಂತನೆಗಳೆ ಬದಲಾಗಿ ಕೃಷಿಯಲ್ಲೆ ಹೆಚ್ಚು ಖುಷಿ ಕಾಣುತ್ತಿದ್ದೇವೆ ಎಂದರು ಬಸವರಾಜು.
ಒಣಗಿದ್ದ ತೋಟ ಹಸಿರಾದ ಕತೆ : ಮೈಸೂರಿನ ಕಲಾಮಂದಿರದಲ್ಲಿ ಒಂದುವಾರಗಳ ಕಾಲ ನಡೆದ ಶೂನ್ಯಬಂಡವಾಳ ಕೃಷಿ ಕಾರ್ಯಾಗಾರ ಮತ್ತು ಸುತ್ತೂರಿನಲ್ಲೂ ನಡೆದ ಕಾರ್ಯಾಗಾರದಲ್ಲಿ ಭಾಗವಹಿಸಿದ ಸಿದ್ದಪ್ಪ ನೈಸಗರ್ಿಕ ಕೃಷಿಯ ಮಹತ್ವ ಮತ್ತು ಅನಿವಾರ್ಯತೆಯ ಬಗ್ಗೆ ತಿಳಿದುಕೊಂಡರು. ಅಕ್ಷರ ಬರೆಯಲು ಬಾರದ ಸಿದ್ದಪ್ಪ ಕೃಷಿಗೆ ಸಂಬಂಧಿಸಿದ ಲೇಖನಗಳು ಮತ್ತು ಪುಸ್ತಕಗಳನ್ನು ಓದುತ್ತಾರೆ. ಅದರಿಂದಲ್ಲೂ ಅರಿವು ಮತ್ತು ತಿಳಿವಳಿಕೆ ಮೂಡಿಸಿಕೊಂಡ ಸಿದ್ದಪ್ಪ ಅಣ್ಣನ ಮಾರ್ಗದರ್ಶನದಲ್ಲಿ ಒಣಗಿದ ತೋಟವನ್ನು ಹಸಿರು ವನವಾಗಿಸಿದ್ದೆ ಅಚ್ಚರಿಯ ಸಂಗತಿ. "ಬೋರ್ವೆಲ್ ತೆಗೆಸಲು ಜನ ನೀರು ಬರುತ್ತದೊ ಇಲ್ಲವೋ ಎಂದು ಎದರುತ್ತಿದ್ದ 1994 ರಲ್ಲಿ ನಾನು ಧೈರ್ಯಮಾಡಿ ಕೊಳವೆ ಬಾವಿ ಹಾಕಿಸಿದೆ.ಕೇವಲ ಒಂದೂವರೆ ಇಂಚು ನೀರು ಬಂತು. ಆಗ ಎರಡೂವರೆ ಎಕರೆಗೆ 94 ತೆಂಗಿನ ಗಿಡಗಳನ್ನು 44 ಮತ್ತು 44 ಅಡಿ ಅಂತರದಲ್ಲಿ ನಾಟಿ ಮಾಡಿದೆವು. ಇತ್ತೀಚೆಗೆ ಹನಿ ನೀರಾವರಿ ಅಳವಡಿಸಿಕೊಂಡಿದ್ದೇವೆ".
2000 ದಿಂದ ಈಚೆಗೆ ಪಾಳೇಕರ್ ಪದ್ಧತಿ ಗೊತ್ತಾದ ನಂತರ ತೋಟದಲ್ಲಿ 14 ಟ್ರಂಚ್ ಮಾಡಿಸಲಾಗಿದೆ. ಆರಂಭದಲ್ಲಿ ಟ್ರಂಚ್ಗಳಿಗೆ ಕಬ್ಬಿನ ಸೋಗು ಅದು ಕರಗಿದ ನಂತರ ಬಾಳೆಯ ದಿಂಡನ್ನು ತುಂಬಿಸಲಾಗಿತ್ತು. ಈಗ ಅದು ಕರಗಿ ಹ್ಯೂಮಸ್ ಆಗಿದೆ. ಈಗ ತೋಟದಲ್ಲಿ ಬಿದ್ದ ತೆಂಗು ಮತ್ತು ಅಡಿಕೆಯ ಗರಿಗಳನ್ನು ತುಂಬುತ್ತೇವೆ. ಇದರ ಪರಿಣಾಮ ತೋಟದಲ್ಲಿ ಬಿದ್ದ ಮಳೆಯ ಒಂದೂ ಹನಿ ನೀರು ಆಚೆ ಹೋಗುವುದಿಲ್ಲ. ತೋಟ ಸದಾ ತಂಪಾಗಿದೆ.
ತೆಂಗಿನ ತೋಟದಲ್ಲಿ ಟ್ರಂಚ್ ತೆಗೆಸುತ್ತಿದ್ದಾಗ ಊರ ಹಿರಿಯರು ನಕ್ಕರು.ಇವರು ಹುಚ್ಚರು ಎಂದರು.ಗಾಳಿ ಮಳೆಗೆ ತೆಂಗಿನ ಮರಗಳೆಲ್ಲ ನೆಲ ಕಚ್ಚುತ್ತವೆ ಎಂದು ವ್ಯಂಗ್ಯವಾಡಿದರು.ಈಗ ಅದರ ಪರಿಣಾಮ ನೋಡಿ ತಾವು ಟ್ರಂಚ್ ತೆಗೆಸಲು ಮುಂದಾಗುತ್ತಿದ್ಧಾರೆ. ಟ್ರಂಚ್ ಮಾಡಿದ ನಂತರ ಸ್ಥಳೀಯವಾಗಿ ಸಿಗುವ ಅಡಿಕೆ ನಾಟಿ ಮಾಡಲಾಗಿದೆ. ಆವು ಈಗ ಫಸಲು ನೀಡಲು ಆರಂಭಿಸಿವೆ. ಜೊತೆಗೆ ಮೂಸಂಬಿ, ಕಿತ್ತಳೆ,ಬಾಳೆ,ಕೋಕೋ, ಗ್ಲಿರಿಸೀಡಿಯಾ ಹೀಗೆ ಹೋದಾಣಿಕೆಯಾಗುವ ಹಣ್ಣು ಮತ್ತು ವಾಣಿಜ್ಯ ಬೆಳೆಗಳನ್ನು ಹಾಕಲಾಯಿತು. ಪರಿಣಾಮ ಈಗ ನಮಗೆ ಖಚರ್ೇ ಮಾಡದೆ ಆದಾಯ ನಾಲ್ಕು ಪಟ್ಟು ಹೆಚ್ಚಳವಾಗಿದೆ.ಇದಕ್ಕೆಲ್ಲ ವೈ.ಜಿ.ಶ್ರೀನಿವಾಸ್ ಮತ್ತು ಬನ್ನೂರು ಕೃಷ್ಣಪ್ಪನವರ ಸಲಹೆ ಮತ್ತು ಮಾರ್ಗದರ್ಶನ ಮುಖ್ಯ ಕಾರಣ ಎನ್ನುತ್ತಾರೆ ಬಸವರಾಜು.
ಜೀವಾಮೃತ ಎಂಬ ಮ್ಯಾಜಿಕ್ : ನಾವು ನಾಟಿ ಹಸು ಸಾಕಿಲ್ಲ. ಆದರೂ ಗ್ರಾಮದಲ್ಲಿ ನಾಟಿ ಹಸು ಮತ್ತು ಎಮ್ಮೆ ಸಾಕಿರುವವರ ಮನೆಯಲ್ಲಿ ಬಿಂದಿಗೆ ಇಟ್ಟಿದ್ದೇವೆ. ಅವರು ದೇಸಿ ಹಸುವಿನ ಗಂಜಲವನ್ನು ಹಿಡಿದು ಇಟ್ಟಿರುತ್ತಾರೆ. ಜೊತೆಗೆ ಸಗಣಿಯನ್ನು ಅವರಿಂದಲೆ ಕೊಳ್ಳುತ್ತೇವೆ.ನಮ್ಮಲ್ಲಿ ಆರು ತಿಂಗಳ ಹಿಂದಿನ ಗಂಜಲ ಇದೆ. ಇದರಿಂದ ಜೀವಾಮೃತ ಮಾಡಿಕೊಂಡು ತಿಂಗಳಿಗೆ ಒಮ್ಮೆ ಹನಿ ನೀರಾವರಿ ಮೂಲಕ ತೋಟಕ್ಕೆ ನೀಡಲಾಗುತ್ತದೆ. ಇದರಿಂದ ತೋಟದಲ್ಲಿ ಜೀವವೈವಿಧ್ಯ ಚಟುವಟಿಕೆಗಳು ಹೆಚ್ಚಾಗಿ ನಾನಾ ಬಣ್ಣದ ಚಿಟ್ಟೆ,ಹಕ್ಕಿ ಪಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದೆ ಎನ್ನುತ್ತಾರೆ ಸಿದ್ದಪ್ಪ.
ತಾವು ಅನುಸರಿಸುತ್ತಿರುವ ಕೃಷಿ ಪದ್ಧತಿಗೆ ಹೆಚ್ಚು ಕೂಲಿ ಕಾಮರ್ಿಕರು ಬೇಡ, ನಾವು ಯಾವ ಆಳುಗಳ ಮೇಲೂ ಅವಲಂಭಿತರಗಿಲ್ಲ. ಏಕೆಂದರೆ ತೋಟದಲ್ಲಿ ಹೆಚ್ಚು ಕೆಲಸವೆ ಇಲ್ಲ.ಇರವಷ್ಟನ್ನು ನಾವೆ ಮಾಡಿಕೊಳ್ಳುತ್ತೇನೆ ಎನ್ನುವ ಸಿದ್ದಪ್ಪ, ಜೀವಾಮೃತ ನೀಡಲು ಸರಳ ವಿಧಾನ ಕಂಡುಕೊಂಡಿದ್ದಾರೆ. ಬೋರ್ವೆಲ್ ಬಳಿ ಆರುನೂರು ಲೀಟರ್ ನೀರು ಸಂಗ್ರಹ ಸಾಮಥ್ರ್ಯದ ನಾಲ್ಕು ತೊಟ್ಟಿ ಇಟ್ಟುಕೊಂಡಿದ್ದಾರೆ. ಅದರಲ್ಲಿ ಜೀವಾಮೃತ ಸಿದ್ಧಪಡಿಸಿಕೊಂಡು ವೆಂಚೂರಿ ಮೂಲಕ ಸುಲಭವಾಗಿ ಮೈಕ್ರೋ ಟ್ಯೂಬ್ ಮೂಲಕ ಹನಿ ನೀರಾವರಿಯಲ್ಲಿ ಗಿಡಗಳ ಬುಡಕ್ಕೆ ಕಳಿಸುತ್ತಾರೆ. ಐದಾರು ವರ್ಷಗಳಿಂದ ಉಳುಮೆಯನ್ನು ಕಾಣದ ತೋಟದ ಮಣ್ಣು ವರ್ಷದಿಂದ ವರ್ಷಕ್ಕೆ ತನ್ನ ಜೀವಂತ ಗುಣಲಕ್ಷಣಗಳನ್ನು ಹೆಚ್ಚಿಸಿಕೊಳ್ಳುತ್ತಾ ಹೆಚ್ಚು ಹೆಚ್ಚು ಫಸಲು ನೀಡುತ್ತಿದೆ. ತೆಂಗಿನ ಕಾಯಿ ಗಾತ್ರವು ದೊಡ್ಡದಾಗಿದ್ದು,ಅಡಿಕೆ ಮತ್ತಿತರ ಗಿಡಗಳು ಈಗ ಹೆಚ್ಚು ಫಸಲು ನೀಡುತ್ತಿವೆ. ಆಸಕ್ತರು ಸಿದ್ದಪ್ಪ ಅವರನ್ನು 9980892536 ಸಂಪಕರ್ಿಸಬಹುದು.
 "ಸುತ್ತಲಿನವರ ಕಣ್ಣು ತೆರೆಸಿತು ಭತ್ತದ ಬೇಸಾಯ"
ಮೈಸೂರು : ಒಂದೂಕಾಲು ಎಕರೆಯಲ್ಲಿ ಶೂನ್ಯ ಬಂಡವಾಳ ಕೃಷಿ ವಿಧಾನದಲ್ಲಿ ಭತ್ತ ಬೆಳೆಯುತ್ತಿರುವ ಸಿದ್ದಪ್ಪ ಆ ಮೂಲಕ ತಮ್ಮ ಸುತ್ತ ಮುತ್ತಲಿನ ರೈತರಲ್ಲೂ ನಿಧಾನಕ್ಕೆ ಜಾಗೃತಿ ಮೂಡಿಸುವಲ್ಲಿಯೂ ಸಫಲರಾಗಿದ್ದಾರೆ.
ಎಚ್ಎಂಟಿ, ಜೀರಿಗೆ ಸಣ್ಣ, ಮುಂಡಗ ಮತ್ತಿತರ ಸ್ಥಳೀಯ ನಾಟಿ ಭತ್ತ ಬೆಳೆಯುವ ಸಿದ್ದಪ್ಪ ಈ ಮೊದಲು ಎಕರೆಗೆ 14 ಕೆಜಿ ಭತ್ತ ಒಟ್ಟಲು ಪಾತಿ ಹಾಕಿ ಪೈರುಮಾಡಿಕೊಳ್ಳುತ್ತಿದ್ದರು. ಈಗ 5 ಕೆ.ಜಿ.ಮಾತ್ರ ಸಾಕು ಎನ್ನುತ್ತಾರೆ. 25 ರಿಂದ ಮೂವತ್ತು ದಿನಗಳ ಅಂತರದಲ್ಲಿ ಬೀಜಾಮೃತ ಮಾಡಿಕೊಂಡು ಭತ್ತದ ಪೈರನ್ನು ನಾಟಿ ಮಾಟಿ ಎಕರೆಗೆ 150 ಕೆಜಿ ಘನ ಜೀವಾಮೃತ ನೀಡಲಾಗುತ್ತದೆ.
ಇದರಿಂದಾಗಿ ನಮ್ಮ ಗದ್ದೆಯಲ್ಲಿ ಎರೆಹುಳು ಹೆಚ್ಚಾಗಿವೆ. ಹಕ್ಕಿ ಪಕ್ಷಿಗಳು ಬೇರೆ ಯಾರ ಗದ್ದೆಗೂ ಹೋಗದೆ ನಮ್ಮ ಗದ್ದೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತವೆ ಇದರಿಂದ ಕ್ರಿಮಿಕೀಟಗಳ ಹಾವಳಿ ಕಡಿಮೆಯಾಗಿದೆ.  ಭತ್ತ ನಾಟಿ ನಂತರ ಒಟ್ಟು ನಾಲ್ಕು ಹುಳಿ ಮಜ್ಜಿಗೆ ಸಿಂಪರಣೆ, ಆರು ಭಾರಿ ಜೀವಾಮೃತ ನೀಡುತ್ತೇವೆ. ಮತ್ತೇನನ್ನೂ ನೀಡುವುದಿಲ್ಲ. ಕಳೆ ಬಂದರೆ ಕಳೆ ತೆಗೆಸುತ್ತೇನೆ. ಎಕರೆಗೆ 24 ಕ್ವಿಂಟಾಲ್ ಅಕ್ಕಿ ಬಂದಿತ್ತು. ಮಾರಾಟ ಮಾಡಿ, ಮನೆಮಂದಿಯೆಲ್ಲ ವಿಷಮುಕ್ತ ಆಹಾರ ಸೇವಿಸುವುದರಿಂದ ನಮ್ಮ ಆರೋಗ್ಯವೂ ಸುಧಾರಿಸಿದೆ ಎನ್ನುತ್ತಾರೆ ಸಿದ್ದಪ್ಪ.
ಹೊಸ ತೋಟ : 20 ವರ್ಷದ ಹಳೆಯ ತೋಟದ ನಿರ್ವಹಣೆ ಜೊತೆಗೆ ಪಕ್ಕದಲ್ಲೆ ಹೊಸದಾಗಿ ಪಾಳೇಕರ್ ಪದ್ಧತಿಯಲ್ಲಿ ತೋಟ ಮಾಡಲು ಮುಂದಾಗಿದ್ದಾರೆ. ಸಮೀಪದಲ್ಲೆ ಇರುವ ಮೂರು ಎಕರೆ ಪ್ರದೇಶದಲ್ಲಿ ಹೊಸ ತೋಟ ತಲೆ ಎತ್ತುತ್ತಿದೆ.ಇಲ್ಲಿ ಎಂಟು ಅಡಿ ಅಂತರದಲ್ಲಿ ಒಟ್ಟು 50 ಟ್ರಂಚ್ ಹೊಡೆಸಲಾಗಿದೆ. 44 ಅಡಿ ಅಂತರದಲ್ಲಿ ತೆಂಗಿನ ಗಿಡಗಳನ್ನು ಕೂರಿಸಲಾಗಿದೆ. ಇದರ ನಡುವೆ ಮೂಸಂಬಿ ಮತ್ತು ಕಿತ್ತಳೆ. ಅಲ್ಲದೆ ಬಾಳೆ, ನುಗ್ಗೆ,ಚೆಂಡು ಹೂ ಹಾಕಲಾಗಿದೆ.ಅಲ್ಲದೆ ದ್ವಿದಳ ಧಾನ್ಯ ಭಿತ್ತನೆ ಮಾಡಲಾಗಿದೆ.
ಮೂರು ಎಕರೆಗೆ 80 ಸಾವಿರ ರೂ ವೆಚ್ಚ ಮಾಡಿ ಸ್ಪಿಂಕ್ಲರ್ ಅಳವಡಿಸಲಾಗಿದೆ. ಇದರಿಂದಲೇ ಜೀವಾಮೃತ ನೀಡಲಾಗುತ್ತದೆ. ತೋಟದ ಸುತ್ತಾ ಎರಡು ಸಿಲ್ವರ್,ಒಂದು ಟೀಕ್,ಒಂದು ಬೇವು,ಒಂದು ಹೊಂಗೆ ಗಿಡಗಳನ್ನು ಸಂಯೋಜನೆ ಮಾಡಿ ಹಾಕಲಾಗಿದೆ. ಆರಂಭದಲ್ಲಿ ಟ್ರಂಚ್, ಬೋರ್ವೆಲ್,ಸ್ಪಿಂಕ್ಲರ್ ,ಗಿಡಗಳಿಗೆ ಅಂತ ಹಣ ವಿನಿಯೋಗಿಸುವುದನ್ನು ಬಿಟ್ಟರೆ ಮುಂದೆ ಅಂತಹ ದುಬಾರಿ ಖಚರ್ು ಬರುವುದಿಲ್ಲ ಎನ್ನುತ್ತಾರೆ ಬಸವರಾಜು.
ಪಾಳೇಕರ್ ಕೃಷಿಯನ್ನು ಪ್ರಚಾರಮಾಡಲು ಮುಂದಾಗಿರುವ, ರೈತರ ಬಗ್ಗೆ ನೈಜ ಕಾಳಜಿ ಹೊಂದಿರುವ ರೈತ ಸಂಘಟನೆಯ ವೈ.ಜಿ.ಶ್ರೀನಿವಾಸ್ ಅವರ ಮಾರ್ಗದರ್ಶನ ಮತ್ತು ಸಲಹೆ ಮೂಲಕ  ಹೊಸ ತೋಟ ಮಾಡಲಾಗತ್ತಿದೆ. ನಮ್ಮ ಸುತ್ತಮತ್ತಲಿನ ರೈತರು ಇದನ್ನು ನೋಡಿ ಅರಿವು ಮೂಡಿಸಿಕೊಂಡು ತಾವು ಶೂನ್ಯ ಬಂಡವಾಳದ ಕೃಷಿ ಮಾಡಲು ಮುಂದಾಗಬೇಕು. ನಾವು ಎಷ್ಟೇ ತಿಳಿವಳಿಕೆ ನೀಡಿದರು ರೈತರು ಇಂತಹ ಸರಳ ವಿಧಾನದಲ್ಲಿ ಕೃಷಿ ಮಾಡಲು ಮುಂದಾಗದಿರುವುದೆ ದುರಂತ.
ಮೈಸೂರಿನ ನಮ್ಮ ಮನೆಯ ಪಕ್ಕದ 40 ಮತ್ತು 60 ಅಡಿ ಸೈಟಿನಲ್ಲಿ ಮನೆಗೆ ಬೇಕಾದ ಸೊಪ್ಪು,ತರಕಾರಿ,ಬಾಳೆ,ಪಪ್ಪಾಯಿಯನ್ನು ಪಾಳೇಕರ್ ಪದ್ಧತಿಯಲ್ಲಿ ಬೆಳೆದುಕೊಳ್ಳುತ್ತಿದ್ದೇನೆ. ಮೊದಲು ಊರಿನಿಂದ ನಮಗೆ ತರಕಾರಿ ತಂದುಕೊಡುತ್ತಿದ್ದರು ಈಗ ಊರಿಂದ ಬಂದವರು ನಮ್ಮ ಕೈ ತೋಟದ ಹಣ್ಣು ತರಕಾರಿಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ, ಈಗಾದರೆ ನಮ್ಮ ಹಳ್ಳಿಗಳು ಹೇಗೆ ಆರೋಗ್ಯವಾಗಿರುತ್ತವೆ ಹೇಳಿ ಎಂದು ನೋವಿನಿಂದ ನುಡಿಯುತ್ತಾರೆ. ಆಸಕ್ತರು ಬಸವರಾಜು ಅವರನ್ನು 9880450849 ಸಂಪಕರ್ಿಸಬಹುದು.